ಸೋಲು,ಗೆಲುವು ಮತ್ತು ಕಷ್ಟ..
ಗೆಲುವು ಎನ್ನುವುದು ಗುಲಾಬ್ ಜಾಮೂನಿನಂತೆ ಸಿಹಿ,ಆದರೆ ಸೋಲು ಕಹಿಬೇವಿನಂತೆ ತುಂಬಾನೇ ಕಹಿ.
ನಾವು ಕೆಲವೊಮ್ಮೆ ದೊಡ್ಡದನ್ನು ಸಾದಿಸುತ್ತೇವೆ,
ಗೆದ್ದು ಬೀಗುತ್ತೇವೆ.
ಇನ್ನು ಕೆಲವೊಮ್ಮೆ ಸೋಲುತ್ತೆವೆ..
ಸೋತು ಕುಗ್ಗುತ್ತೇವೆ, ಕಂಗಲಾಗಿ ಬಿಡುತ್ತೇವೆ.
ಸೋಲಾಗಲಿ, ಗೆಲುವಾಗಲಿ ಎರಡರಲ್ಲೂ ನಾವು ತುಂಬಾನೇ ಕಷ್ಟ ಪಟ್ಟಿರುತ್ತೇವೆ,ಎಷ್ಟೋ ಸಲ ಜೀವ, ಜೀವನ ಎರಡನ್ನೂ ಗಂಧದಂತೆ ತೇದಿರುತ್ತೇವೆ.
ಒಂದು ವೇಳೆ ಗೆದ್ದು ಬಿಟ್ಟರೆ, ಸಮಯ ಸಂಧರ್ಭ ಸಿಕ್ಕಾಗಲೆಲ್ಲ ನಾವು ಮರೆಯದೇ ಹೇಳಿ ಕೊಳ್ಳುತ್ತೇವೆ,ಈ ಗೆಲುವಿಗೆ ತುಂಬಾನೇ ಕಷ್ಟ ಪಟ್ಟಿದ್ದೆ,ಕೊನೆಗೂ ಪಟ್ಟ ಶ್ರಮವೆಲ್ಲವೂ ಸಾರ್ಥಕವಾಯಿತು ಎಂದು.ಅದೊಂದು ಸಾರ್ಥಕ್ಯತೆಯ ಭಾವನೆ.
ಸೋತಾಗಲೂ ಹೇಳುತ್ತೇವೆ.. ಶೇ,ನಾನೆಷ್ಟು ದಿನ ರಾತ್ರಿ ಹಗಲು ಎಂದು ಕಷ್ಟ ಪಟ್ಟಿದ್ದೆ, ಆದರೂ ಅಂದುಕೊಂಡದ್ದು ಸಾಧಿಸಲು ಆಗಲೇ ಇಲ್ಲ ಎಂದು ತುಂಬಾನೇ ಬೇಸರದಿಂದ ಹೇಳಿಕೊಳ್ಳುತ್ತೇವೆ. ಅದೊಂದು ಹತಾಶೆ ನಿರಾಸೆಯ ಸ್ಥಿತಿ.
ಪ್ರಮಾಣಿಕವಾಗಿ ಹೇಳಬೇಕೆಂದರೆ,ನಿಜ ನಾವು ಕಷ್ಟ ಪಟ್ಟಿರುತ್ತೇವೆ.. ತುಂಬಾನೇ ಕಷ್ಟಪಟ್ಟಿರುತ್ತೇವೆ.
ಆದರೆ ನಾವು ಒಬ್ಬರೇ ಕಷ್ಟ ಪಟ್ಟಿದ್ದೇವೆಯಾ..?
ಜಸ್ಟ್ ಒಮ್ಮೆ ಹಾಗೇ ಹಿಂದೆ ತಿರುಗಿ ನೋಡಿ.. ಇಲ್ಲ, ಅಲ್ಲಿ ನಾವೊಬ್ಬರೇ ಇಲ್ಲ!
ನಮ್ಮ ಹಿಂದೆ ಸರತಿ ಸಾಲಿನಲ್ಲಿ ಉದ್ದಕ್ಕೆ ಜನ ನಿಂತಿದ್ದಾರೆ,
ನಾವು ಗೆದ್ದರೆ ನಮ್ಮಷ್ಟೇ ಖುಷಿ ಪಡಲು.. ಸೋತಾಗ ನಮಗೊಂದಿಷ್ಟು ಸಾಂತ್ವನ ಹೇಳಲು..ನಮ್ಮ ಬೆನ್ನ ಹಿಂದೆ ಒಂದಷ್ಟು ಜನ ಯಾವಾಗಲೂ ಇರುತ್ತಾರೆ..ಇದ್ದೇ ಇರುತ್ತಾರೆ. ಬರೀ ನಮಗಾಗಿ ಇರುತ್ತಾರೆ.
ನಮ್ಮ ಸೋಲು ಗೆಲುವು ಎರಡರಲ್ಲೂ ಭುಜಕ್ಕೆ ಭುಜ ಕೊಟ್ಟು ನಿಂತವರ ಸಂಖ್ಯೆ ಯಾವತ್ತೂ ಜಾಸ್ತಿ ಆಗಿಯೇ ಇರುತ್ತದೆ.ಕೆಲವೊಮ್ಮೆ ನಮ್ಮ ಅರಿವಿಗೆ ಅದು ಬಂದಿರುವುದಿಲ್ಲ ಅಷ್ಟೇ.
ಚಪ್ಪಾಳೆ ಯನ್ನು ಹೇಗೆ ಒಂದೇ ಕೈಯಲ್ಲಿ ಹೊಡೆಯಲು ಸಾಧ್ಯವಿಲ್ಲವೋ, ಸಾಧನೆ ಯನ್ನು ಕೂಡ ಸಹಕಾರ ವಿಲ್ಲದೇ ಮಾಡಲು ಸಾಧ್ಯವಿಲ್ಲ.
ನಮ್ಮ ಸುತ್ತಲಿನ ಜನರ ಈ ಸಹಕಾರ, ಪ್ರೋತ್ಸಾಹ, ಬೆಂಬಲ, ಆಶೀರ್ವಾದ ಎಲ್ಲದರಲ್ಲೂ ನಾವು ಗೆಲ್ಲಬೇಕು ಎನ್ನುವ ನಿಷ್ಕಪಟ ಹಾರೈಕೆ ಇರುತ್ತದೆಯೋ ಹೊರತು ಬೇರೆನೂ ಅಲ್ಲ.
ಕೆಲವರಿಗೆ ನಮ್ಮ ಗೆಲುವು ಅವರ ಗೆಲುವು,
ನಮ್ಮ ಸೋಲು ಅವರದ್ದೇ ಸೋಲು ಎಂಬಷ್ಟು ಬೇಜಾರು.
ಒಂದು ನೆನಪು ಇಟ್ಟುಕೊಳ್ಳಿ.. ನಾವು ಎಷ್ಟೇ ಕಷ್ಟಪಟ್ಟರೂ, ಬರೀ ಒಬ್ಬರೇ ಕಷ್ಟ ಪಟ್ಟಿರುವುದಿಲ್ಲ.. ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಯಾರಾದರೊಬ್ಬರು ನಿಸ್ವಾರ್ಥವಾಗಿ ನಮಗಾಗಿ ನಮ್ಮಷ್ಟೇ, ಕೆಲವೊಮ್ಮೆ ನಮಗಿಂತಲೂ ಅಧಿಕವಾದ ಕಷ್ಟ ನಷ್ಟ ಅನುಭವಿಸಿಯೇ ಇರುತ್ತಾರೆ..
ಅಮ್ಮ,ಹೇಗೆ ದಿನ ನಿತ್ಯವೂ ಸ್ಕೂಲ್ ಗೆ ಬುತ್ತಿಯನ್ನು ಕಟ್ಟಿ ಕೊಡುತ್ತಾಳೆಯೋ ಹಾಗೆಯೇ ಕನಸುಗಳನ್ನು ಕೂಡ ನಿರಂತರವಾಗಿ ಕಟ್ಟಿಕೊಡುತ್ತಾಳೆ.ನೀನು ಹಾಗೇ ಆಗಬೇಕು, ಹೀಗೆ ಆಗಬೇಕು ಎಂದು ಅಮ್ಮನಿಗಿಂತ ಚೆನ್ನಾಗಿ ಬೇರೆ ಯಾರೂ ಹೇಳಕೊಡಲು ಸಾಧ್ಯವಿದೆ ಹೇಳಿ. ಬೆಳೆದು ದೊಡ್ಡದು ಆಗಿ ಒಂದು ಒಳ್ಳೆಯ ಕೆಲಸ ಹಿಡಿದು ನಾವು ನಮ್ಮ ಕಾಲ ಮೇಲೆ ನಾವು ನಿಲ್ಲುವವರೆಗೂ ಜಗತ್ತಿನಲ್ಲಿ ನಮಗಾಗಿ ಬೆವರು ಹರಿಸಿ, ರಕ್ತ ಸುರಿಸಿ ನಮಗಾಗಿ ಅತೀ ಹೆಚ್ಚು ಕಷ್ಟ ಪಟ್ಟವರಲ್ಲಿ ಅವಳೇ ಎಲ್ಲರಿಗಿಂತ ಮೊದಲು ಇರುತ್ತಾಳೆ.
ಸೈಕಲ್ ಹೊಡೆಯುವಾಗ,ಬಿದ್ದು ಗಾಯಮಾಡಿಕೊಂಡಾಗ.. ಅಪ್ಪ ಎಂಬುವವ ಜೊತೆಗಿರುತ್ತಾನೆ...ನೀನು ಸೈಕಲ್ ಹೊಡಿ ಮಗ, ಏನು ಆಗಲ್ಲ ಎಂದು ಧೈರ್ಯ ತುಂಬುವವನು ಅಪ್ಪ, ಮುಂದೊಂದು ದಿನ ನಾವು ಬುಲ್ಲೆಟ್ ಬೈಕ್ ಖರೀದಿಸಿ ಗುಡು ಗುಡು ಅಂತ ಎದೆಯುಬ್ಬಿಸಿ ರೋಡ್ ಅಲ್ಲಿ ಹೋಗುವಾಗ ನಮಗೆ ಮೊದಲು ನೆನಪಿಗೆ ಬರಬೇಕಾಗಿದ್ದೇ ಅಪ್ಪ ಮತ್ತು ಅವನ ಸೈಕಲು...ರಾತ್ರಿ ಪೂರ ನಾವು ಓದುವಾಗ ನಮ್ಮಷ್ಟೇ ನಿದ್ದೆ ಕಳೆದುಕೊಳ್ಳುವವನು ಕೂಡ ಒಬ್ಬ ಅಪ್ಪನೇ..
ಪರಸ್ಪರ ಹಾವು ಮುಂಗುಸಿ ಸಂಬಂಧ ಇದ್ದರೂ, ಕಾಲೇಜು ಮುಗಿದು ಎಷ್ಟೋ ಸಮಯ ಆದರೂ, ಸರಿಯಾದ ಕೆಲಸ ಸಿಗದೇ ಇದ್ದಾಗ Education Loan ಅನ್ನು ಅಣ್ಣ ಎಂಬುವವನು ನಿರಂತರವಾಗಿ ಕಟ್ಟಿ ಬಿಡುತ್ತಾನೆ,ನೀನು interview ಬಗ್ಗೆ ಆಲೋಚಿಸು, loan ಬಗ್ಗೆ, ಮನೆ ಬಗ್ಗೆ ಚಿಂತಿಸಬೇಡ.. ನಾನಿದ್ದೇನೆ ಎಂದು ಭುಜದ ಮೇಲೆ ಕೈ ಹಾಕಿ ಹೇಳೋ ಅಣ್ಣಾ ಮೊದಲ ಬಾರಿ ಒಳ್ಳೆಯವ ಅಂತ ಅನ್ನಿಸುವುದು ಮಾತ್ರವಲ್ಲ, ಆತನಿಗೆ ಕೂಡ ನಮ್ಮ ಬಗ್ಗೆ ಅದೆಷ್ಟು ಕಾಳಜಿ ಇದೆ ಎಂದು ಗೊತ್ತಾಗಿ ಬಿಡುತ್ತದೆ.
ಮದುವೆ ಆಗಿ ಹೋದ ನಂತರವೂ ನಮ್ಮ ಉನ್ನತಿಗಾಗಿಯೇ ಅನವರತವೂ ಚಿಂತನೆ ಮಾಡುವ,ನಮಗಾಗಿ ಚಿಂತಿಸುವ ನಮ್ಮ ತಂಗಿ.. ಅವಳೊಬ್ಬಳು ತಂಗಿಯೇ? .. ತಂಗಿ ಅಲ್ಲ, ಅವಳು ದೊಡ್ಡ ಅಕ್ಕ..
ಮಡದಿಯೊಬ್ಬಳು ಸುಖ, ಕಷ್ಟ ಎರಡರಲ್ಲೂ ಸಹಭಾಗಿ... ರೀ ದೇವರು ಇದ್ದಾನೆ, ಏನಾಗಲ್ಲ ಧೈರ್ಯದಿಂದ ಮುನ್ನುಗ್ಗಿ ..ನಿಮ್ಮೊಂದಿಗೆ ನಾನಿದ್ದೇನೆ..ಎಂಬ ಸಾಲು ಆನೆಬಲ ತಂದು ಕೊಡುತ್ತದೆ...
ಅಪ್ಪ ನೀನು ಟೆನ್ಶನ್ ಮಾಡ್ಬೇಡ, ನೀನು ಬೇಗ ಗುಣಮುಖ ಆಗು ಎಂದು ನಾನು ದೇವರಲ್ಲಿ ದಿನಾಲೂ ಪ್ರಾರ್ಥನೆ ಮಾಡ್ತೇನೆ ..ನಾನು ಹೇಳಿದರೆ ನಮ್ಮ ಕೃಷ್ಣಾ ಖಂಡಿತವಾಗಿಯೂ ಕೇಳಿಸಿಕೊಳ್ಳುತ್ತಾನೆ.. ಎಂದು ಮುಗ್ಧವಾಗಿ ಹೇಳೋ ಮಾತೃ ಹೃದಯದ ನಿಮ್ಮ ಪುಟ್ಟ ಮಗಳು..ನಿಮಗಾಗಿ,ನಿಮ್ಮ ಆರೋಗ್ಯಕ್ಕಾಗಿ ದೇವರ ಮುಂದೆ ಪ್ರತೀ ದಿನ ಕೈ ಜೋಡಿಸಲು ಶುರು ಮಾಡುತ್ತಾಳೆ..
ಎಷ್ಟೇ ಸಲ ಸೋತಾಗಲೂ.. ಫ್ರೆಂಡ್ ಅನ್ನಿಸಿಕೊಂಡವನ "ಏನು ಆಗಲ್ಲ bro, ನೆಕ್ಸ್ಟ್ ನಾವು ಗೆದ್ದೇ ಗೆಲ್ತೇವೆ ನೋಡು.." ಎನ್ನುವ ಸಾಂತ್ವನ ದಲ್ಲಿ "ನಾವು" ಎನ್ನುವ ಶಬ್ಧ ವೇ,ಸುಖ ದುಃಖ ದಲ್ಲಿ ಅವನೆಷ್ಟು ಭಾಗಿ ಎನ್ನುವುದನ್ನು ಸೂಚಿಸುತ್ತದೆ..
ಗೆಳತಿ ಎನ್ನುವವಳ ಅಕ್ಕರೆ, ಕೇರ್.. ಮತ್ತಷ್ಟು ಸೋಲುಗಳನ್ನು ಅರಗಿಸಿಕೊಳ್ಳುವಂತೆ ಮಾಡಿ ಬಿಡುತ್ತದೆ...
ಸಂಬಳ ಸಿಗಬಹುದು, ಆದರೆ ಓದಿನಲ್ಲಿ ತೀರಾ ಹಿಂದುಳಿದ ಒಬ್ಬ ವಿದ್ಯಾರ್ಥಿ ಯನ್ನು ಪಾಸ್ ಮಾಡಿಸಲು ಒಬ್ಬ ಗುರು ಕೂಡ ವಿದ್ಯಾರ್ಥಿಯಷ್ಟೇ ಪ್ರಾಮಾಣಿಕ ಪ್ರಯತ್ನ ಹಾಗೂ ಕಷ್ಟ ಪಟ್ಟಿರುತ್ತಾನೆ..
ಮುಂದೊಂದು ದಿನ ಸಿಂಥೆಟಿಕ್ ಟ್ರ್ಯಾಕ್ ನಲ್ಲಿ ರೆಕ್ಕೆ ಕಟ್ಟಿಕೊಂಡವರಂತೆ ಓಡಿ ನೀವು ಬಂಗಾರ, ಬೆಳ್ಳಿ,ಕಂಚುಗಳನ್ನು ಗೆಲ್ಲಬಹುದು.. ಆದರೆ ಮೊದಲಿಗೆ ನಿಮ್ಮ ಕಾಲುಗಳಿಗೆ ವೇಗವನ್ನು ತುಂಬುವಲ್ಲಿ ಪ್ರೈಮರಿ ಶಾಲೆಯ ಒಬ್ಬ ಪಿ.ಟಿ ಮಾಸ್ಟರ್ ಕೂಡ ನಿಮ್ಮಷ್ಟೇ ಕಷ್ಟ ಪಟ್ಟಿರುತ್ತಾರೆ.
ಪಕ್ಕದ ಮನೆಯ ಅಕ್ಕಾ ತನ್ನ ಓದಿನ ನಡುವೆಯೂ ನಿಮಗೆ ಪ್ರೀ ಟ್ಯೂಶನ್ ಕೊಟ್ಟು ನೀವು ಒಂದೊಳ್ಳೆಯ ದರ್ಜೆಯಲ್ಲಿ ಪಾಸ್ ಆಗಲು,ಮುಂದೊಂದು ದಿನ ನೀವು ಒಳ್ಳೆಯ ಸ್ಥಾನಮಾನಕ್ಕೆ ಏರಲು ನಿಮ್ಮಷ್ಟೇ ಕಷ್ಟ ಪಟ್ಟಿರುತ್ತಾಳೆ...
ನಮಗೆ ಒಂದೊಳ್ಳೆಯ ಕಂಪನೆಯಲಿ ಕೆಲಸ ಸಿಗಲಿ ಎಂದು, ಇಲ್ಲವೇ ನಮ್ಮ ಇಷ್ಟದಂತೆ ವಿದೇಶಕ್ಕೆ ಹೋಗಿ ಸೆಟಲ್ ಆಗಲಿ ಎಂದು ನಮ್ಮ ನೆರೆ ಮನೆಯ ಅಂಕಲ್ ನಮಗೆ ಗೊತ್ತಿಲ್ಲದಷ್ಟು ಕಷ್ಟ ಪಟ್ಟಿರುತ್ತಾರೆ...
ಇಲ್ಲ ನಮಗೆ ಹಿಂದೆ ಮುಂದೆ ಯಾರೂ ಇಲ್ಲ ನಾವು ಅನಾಥರು ಅಂದುಕೊಂಡರೂ...ಯಾರೋ ಒಬ್ಬರು ಹೊತ್ತು ಹೊತ್ತಿಗೆ ಒಂದು ತುತ್ತು ಅನ್ನ ಹಾಕಿ, ಮೊಗೆ ಮೊಗೆದು ಪ್ರೀತಿ ಸುರಿಯದೇ, ನಾವು ನಮ್ಮಷ್ಟಕ್ಕೇ ದೊಡ್ಡವರು ಆಗುವುದೇ ಇಲ್ಲ..
ನಾವು ಗೆದ್ದಾಗ ಅದು ನಮ್ಮಷ್ಟೇ ಯಾರೋ ಒಬ್ಬರದ್ದು ಗೆಲುವಾಗಿರುತ್ತದೆ..ಅದೇ ರೀತಿ ನಾವು ಸೋತಾಗ ಕೆಲವೊಮ್ಮೆ ನಮಗಿಂತಲೂ ಅದು ಬೇರೊಬ್ಬರ ಅತಿಯಾದ ದುಃಖ ಆಗಿರುತ್ತದೆ ..
ನಾವು ಗೆಲ್ಲಬೇಕು, ಯಾಕೆಂದರೆ ನಮಗಾಗಿಯೇ ಅದೆಷ್ಟೋ ಮನಸ್ಸು ಗಳು ಅದೊಂದು ದಿನಕ್ಕಾಗಿಯೇ ಕಾದಿರುತ್ತವೆ.ನಾವು ಗೆದ್ದಾಗ ನಾವು ಪಟ್ಟ ಕಷ್ಟದೊಡನೆ, ನಮಗಾಗಿ ಕಷ್ಟ ಪಟ್ಟವರು ಕೂಡ ನಮಗೆ ನೆನಪಾಗಬೇಕು..
ಒಂದು ವೇಳೆ ನೀವು ಸೋತರೆ.. ನೀವು ಒಬ್ಬರೇ ಸೋತಿಲ್ಲ,ನೀವು ಏಕಾಂಗಿಯಾಗಿ ಸೋತಿಲ್ಲ,ನಿಮಗಾಗಿ ನಿಮ್ಮಷ್ಟೇ ಕಷ್ಟ ಪಟ್ಟ ಜನರು ನಿಮ್ಮ ಹಿಂದೆ ಇದ್ದಾರೆ, ಮತ್ತಷ್ಟು ಕಷ್ಟಪಡಿ, ನಿಮ್ಮ ಗೆಲುವಿಗಾಗಿ.. ಅದರ ಮೂಲಕ ಅವರ ಗೆಲುವಿಗಾಗಿ...
ಸೋತು ಸೋತು ಗೆಲ್ಲಬೇಕು.. ಕಷ್ಟ ಪಟ್ಟೇ ಜಯಿಸಬೇಕು..ಆದರೆ ಪ್ರತೀ ಸಲವೂ ಎದ್ದು ಬಿದ್ದು ಗೆದ್ದಾಗ,ಅದಕ್ಕೆ ಪ್ರತ್ಯಕ್ಷ ಇಲ್ಲವೇ ಪರೋಕ್ಷ ಕಾರಣರಾದವರ ನೆನಪು ಯಾವತ್ತೂ ನಮಗೆ ಅತಿಯಾಗಿರಬೇಕು... ☺️🙏🏻
.....................................................................................
#ಏನೋ_ಒಂದು
AB Pacchu
Moodubidire

Comments
Post a Comment