ಪುಸ್ತಕ ಎಂಬ ಫ್ರೆಂಡು
ನೆಚ್ಚಿನ ಲೇಖಕ ಎಸ್. ಎಲ್ ಬೈರಪ್ಪ, ತೇಜಸ್ವಿ, ಕುವೆಂಪು, ಬೇಂದ್ರೆ ಅಜ್ಜ ಇವರೆಲ್ಲರಿಗಿಂತಲೂ ಮೊದಲು ಓದಿಸಿದ್ದು,ಓದಿಸುವ ಆಸಕ್ತಿಯನ್ನು ಹುಟ್ಟಿಸಿದ್ದು, ಹೊಸ ಪುಸ್ತಕಕ್ಕೆ ವಾರಾಂತ್ಯದವರೆಗೂ ಕೆಲವೊಂದಕ್ಕೆ ತಿಂಗಳ ಕೊನೆಯವರೆಗೂ ಜಾತಕ ಪಕ್ಷಿಯಂತೆ ಕಾದು ಕುಳಿತುಕೊಳ್ಳುವಂತೆ ಮಾಡಿದ್ದು.. ಬಾಲಮಂಗಳ,ಚಿತ್ರಕಥಾ, ಚಂಪಕ, ಬಾಲಮಿತ್ರ,ತುಂಬಾನೇ ಹಳೆಯ ಚಂದಮಾಮ,ಕೊನೆಯಲ್ಲಿ ಬಂದಂತಹ ಗಿಳಿವಿಂಡು ತುಂತುರು ವಿನಂತಹ ಪುಸ್ತಕಗಳೇ 😊🙏
ಹಾರುತ್ತ ಹೋಗಿ ಸಾಧು ಪ್ರಾಣಿಗಳ ರಕ್ಷಣೆ ಮಾಡೋ ಕಾಡಿನ ರಕ್ಷಕ ಡಿಂಗ ನೇ ನನ್ನಂತರವರ ಪಾಲಿನ ಮೊದಲ ಸೂಪರ್ ಹೀರೋ. ಶಕ್ತಿಮದ್ದು ವಿನ powerful ಬಾಲಕ ಲಂಬೋದರ,ಮದ್ದು ಕಡೆಯೋ ಬೋಳು ಮಂಡೆಯ ವೈದ್ಯರು, ತರಲೆ ವೀರಬಾಲಕ ಎಲ್ಲಾ ನಮ್ಮ ನಡುವೆಯೇ ಇರುವವರು ಅಂತ ಅನ್ನಿಸುತ್ತಿತ್ತು. ಮನೆಯಲ್ಲಿ ಇರುತ್ತಿದ್ದ ಹಳೆಯ ಚಂದಮಾಮ ಪುಸ್ತಕದ ವಿಕ್ರಮ ಬೇತಾಳ ಕಥೆಗಳು, ಬಾಲಮಿತ್ರ ದ ರಾಜರುಗಳು ಯುದ್ಧಗಳು ಬೆರಗು ಮೂಡಿಸುತ್ತಿತ್ತು.
ಒಂದು ಬಾಲಮಂಗಳ ಮನೆಗೆ ಬಂದರೆ ಅಕ್ಕ ಪಕ್ಕದ ಎರಡು ಮೂರು ಮನೆಗೆ ಆದರೂ ಹೋಗಿ ಓದಿಸಿಕೊಂಡು ಬರುತ್ತಿತ್ತು.ಸಮಯ ಸಿಕ್ಕಾಲೆಲ್ಲ ಮನೆಯವರೆಲ್ಲರೂ ಅಪ್ಪ ಅಮ್ಮ ಅಕ್ಕ ತಂಗಿ.. ಹೀಗೆ ಎಲ್ಲರೂ ಒಂದು ಕಡೆ ಕುಳಿತು ಓದುತ್ತಿದ್ದರು.
ಚಿತ್ರ ಸಹಿತವಾದ ಕಥೆಗಳು ಮನಸ್ಸಿಗೆ ತುಂಬಾನೇ ಮುದಕೊಡುತ್ತಿತ್ತು.ಮಾತಾಡುವ ಪ್ರಾಣಿಗಳು, ಕಾಡಿನ ರಾಜ ಹುಲಿ,ಕಾಡಿನಲ್ಲೇ ಅವುಗಳ ಒಡ್ಡೋಲಗ ನಮ್ಮನ್ನೆಲ್ಲ ಮಂತ್ರಮುಗ್ಧರನ್ನಾಗಿ ಮಾಡಿಬಿಡುತ್ತಿತ್ತು.
ಅಪ್ಪ ಹೊಸ ಪುಸ್ತಕ ತಂದು ಕೊಟ್ಟಾಗ ಅದನ್ನು ಹಿಡಿದುಕೊಂಡು ಹಾಗೇ ರೂಮಿನೊಳಗೆ ಹೊಕ್ಕು ಪೂರ್ತಿ ಮುಗಿಸುವವರೆಗೂ ಹೊರಬರುತ್ತಿರಲಿಲ್ಲ.ಅಷ್ಟು ಶ್ರದ್ಧೆ ಶಾಲಾ ಪುಸ್ತಕ ಮತ್ತು ಮುಂದೆ ಕಾಲೇಜು ನೋಟ್ ಬುಕ್ ಗಳನ್ನು ಓದುವುದರಲ್ಲೂ ಕೂಡ ಇರಲಿಲ್ಲ. ನಮ್ಮ ಮನೆಗೆ ಪುಸ್ತಕ ತರದೇ ಇದ್ದಾಗ ಪಕ್ಕದ ಮನೆಯಲ್ಲಿ ಬಂದಿದ್ದರೆ ಅಲ್ಲಿಂದ ಕೊಂಡು ಓದುತ್ತಿದ್ದೆವು. ಅವರು ಕೂಡ ಹಾಗೇ, ನಮ್ಮ ಮನೆಗೆ ಮೊದಲು ಪುಸ್ತಕ ಬಂದಿದ್ದರೆ ಅವರು ನಮ್ಮಿಂದ ಪುಸ್ತಕ ತೆಗೆದುಕೊಂಡು ಓದುತ್ತಿದ್ದರು.
ಆಗಿನ ಹೊಸ ಪುಸ್ತಕ ದ ಪರಿಮಳದ ಕಂಪು ಮರೆತು ಹೋಗುವಂತಹದ್ದಲ್ಲ. ಸಂಪೂರ್ಣ ಕಲರ್ ಆಗಿರದೇ ಕೆಂಪು ಕಪ್ಪು ವರ್ಣದಲ್ಲಿ ಬರುತ್ತಿದ್ದ ಹಳೆಯ ಬಾಲಮಂಗಳ, ಚಂದ ಮಾಮ ಪುಸ್ತಕಗಳ ಚಿತ್ರಣ ಇನ್ನೂ ಕಣ್ಣಿಗೆ ಕಟ್ಟಿದ ಹಾಗೇ ಇದೆ. ಚಂದಮಾಮ ಮತ್ತು ಬಾಲಮಿತ್ರ ಗಳು ಈಗಲೂ ಬರುತ್ತಿದೆಯೋ ಇಲ್ಲವೋ ಗೊತ್ತಿಲ್ಲ.ಆದರೆ ಈಗಲೂ ಎಲ್ಲಾದರೂ ಅಂಗಡಿಗೆ ಹೋದಾಗ ಅಲ್ಲೇ ನೇತುಹಾಕಿರುವ ಬಾಲಮಂಗಳ ತುಂತುರು ಗಳು ಕಣ್ಣಿಗೆ ಬಿದ್ದೊಡನೆ ನನ್ನನ್ನು ಬಾಲ್ಯಕ್ಕೆ ಒಯ್ದು ಬಿಡುತ್ತದೆ. ಅಲ್ಲೇ ಹಾಗೇ ಒಮ್ಮೆ ಅವುಗಳ ಮೈದವಡಿ ಬಿಡುವಾಗ ಅದೆನೋ ಪುಳಕ ಅದೆಷ್ಟೋ ಸವಿಸವಿನೆನಪು.
ಓದುವ ಆಸಕ್ತಿ ಹುಟ್ಟಿಸಿದ ಪುಸ್ತಕಗಳು ನನ್ನ ಪಾಲಿಗೆ ಯಾವತ್ತೂ ಇವುಗಳೇ ❤️🙏🏻
ನಮ್ಮೆಲ್ಲರಲ್ಲೂ ಓದು ಇನ್ನಷ್ಟು ಹೆಚ್ಚಾಗಲಿ, ಒಂದೊಳ್ಳೆಯ ಓದು ನಮ್ಮ ಬೆಳವಣಿಗೆಗೆ ಪೂರಕ. ಪುಸ್ತಕವನ್ನು ಫ್ರೆಂಡ್ ಮಾಡಿಕೊಂಡರೆ ನಿಮಗೆ ಬೇರೆ ಯಾವುದೇ ಫ್ರೆಂಡ್ ಬೇಕೆನಿಸುವುದಿಲ್ಲ.
ಜ್ಞಾನಾರ್ಜನೆ ಗೆ ಓದು ಅವಶ್ಯಕ. ಅದಕ್ಕೆ ಹೇಳಿದ್ದು "ದೇಶ ಸುತ್ತಿ ನೋಡು.. ಕೋಶ ಓದಿ ನೋಡು" ಅಂತ.
ಅಂದ ಹಾಗೆ ಎಪ್ರಿಲ್ 23 ಅನ್ನು ವಿಶ್ವ ಪುಸ್ತಕ ದಿನಾಚರಣೆ ಎಂದೂ ಕೂಡ ವಿಶ್ವದಾದ್ಯಂತ ಆಚರಿಸುತ್ತಾರೆ.ದಿನಾ ಪುಸ್ತಕ ಓದುವವರಿಗೆ ದಿನಲೂ ಪುಸ್ತಕ ದಿನವೇ. ಓದು ನಿರಂತರವಾಗಿರಲಿ.. 😊😍🙏
.......................................................................
#ಏನೋ_ಒಂದು
Ab Pacchu
Moodubidire

Comments
Post a Comment