ನಲಿವ ಗುಲಾಬಿ ಹೊವೇ..

' ನಲಿವ ಗುಲಾಬಿ ಹೊವೇ..' ಅವಳು ಮತ್ತು ನಾನು ಇಬ್ಬರೇ ಇದ್ದೆವು.ಅವಳು ತಾರೆ ನನ್ನ ಬಾನಿಗೆ,ನಾನೇ ಚಂದಿರ ಅವಳ ಸೂರಿಗೆ,ದಿನ ದಿನವೂ ಹುಣ್ಣಿಮೆ ನಮ್ಮಿಬ್ಬರ ಆ ಬೀದಿಗೆ.. ಎಂಬಂತೆ ಬದುಕ ಬಯಲಲ್ಲಿ ಸೊಂಪಾದ ಬೆಳದಿಂಗಳಿತ್ತು. ನಮ್ಮಿಬ್ಬರ ನಡುವೆ ಬೇರಾರೂ ಇರಲಿಲ್ಲ.ಮುಗಿಯದಷ್ಟು ಖುಷಿಯಿತ್ತು,ಮೊಗೆದಷ್ಟು ನಗುವಿತ್ತು,ಎದೆಯ ತೋಟದಲ್ಲಿ ನಾವಾಗಿಯೇ ಅರಳಿಸಿಕೊಂಡ ಕೆಂಗುಲಾಬಿಯದ್ದೇ ಸುಮವಿತ್ತು.ಹಾಗಾಗಿ ಗಾಳಿ ಕೂಡ ಉಸಿರುಗಟ್ಟಿಕೊಂಡೇ ನಮ್ಮ ನಡುವೆ ಮೆಲ್ಲ ಮೆಲ್ಲಗೆ ನುಸುಳಿ ಹಾದು ಹೋಗುತ್ತಿತ್ತು.ಹಾಗೆಂದು ನಾನು ಬಲವಾಗಿ ಅಂದುಕೊಂಡ ಆ ದಿನವೇ ಅವನು ದೂರದಲ್ಲಿ ಬಂದು ಹಾಗೇ ಕೈ ಕಟ್ಟಿಕೊಂಡು ನಿಂತು ಬಿಟ್ಟಿದ್ದ.ದಿಗಿಲು ಎಂದರೆ ಏನೆಂದು ಗೊತ್ತಾಗಿದ್ದೇ ಅವತ್ತು! ಅವಳೊಂದಿಗೆ ಸೇರಿ ನಾನು ಅದೆಷ್ಟೋ ಹಗಲು ರಾತ್ರಿ ಮನಸ್ಸು ಬಿಚ್ಚಿ ಮನಸೇಚ್ಛ ನಕ್ಕಿದ್ದೆ.ನೆತ್ತಿಯ ಮೇಲೆ ಸುಡುವ ಸೂರ್ಯನಿದ್ದರೂ ದಿನಗಳು ಮಾತ್ರ ಕಲ್ಲಂಗಡಿಯಷ್ಟೇ ಬರೀ ತಂಪು ತಂಪು.ಚಂದ್ರೋದಯದ ನಂತರದ ಕ್ಷಣಗಳು ನಮ್ಮಿಬ್ಬರ ಪಾಲಿಗೆ ಅರುಣೋದಯದವರೆಗೂ ನಿದ್ರೆ ಮರೆತು ಬಿಟ್ಟ ಅಮೃತ ಘಳಿಗೆಗಳಾಗಿದ್ದವು.ಮೇಲಿಂದ ಚುಕ್ಕಿ ತಾರೆಗಳೇ ಕಳಚಿ ಬಿದ್ದು ಮತ್ತೆ ಅವಳ ಮುಡಿ ಏರಿ ನಗಬೇಕು,ಅಂತಹ ಹುಲುಸಾದ ನಗು ನನ್ನದು,ಜೊತೆಯಲ್ಲಿಯೇ ಮಿಡಿದ ಜೀವವೀಣೆಯಂತಹ ಅವಳು....