ನಲಿವ ಗುಲಾಬಿ ಹೊವೇ..
' ನಲಿವ ಗುಲಾಬಿ ಹೊವೇ..'
ಅವಳು ಮತ್ತು ನಾನು ಇಬ್ಬರೇ ಇದ್ದೆವು.ಅವಳು ತಾರೆ ನನ್ನ ಬಾನಿಗೆ,ನಾನೇ ಚಂದಿರ ಅವಳ ಸೂರಿಗೆ,ದಿನ ದಿನವೂ ಹುಣ್ಣಿಮೆ ನಮ್ಮಿಬ್ಬರ ಆ ಬೀದಿಗೆ.. ಎಂಬಂತೆ ಬದುಕ ಬಯಲಲ್ಲಿ ಸೊಂಪಾದ ಬೆಳದಿಂಗಳಿತ್ತು.
ನಮ್ಮಿಬ್ಬರ ನಡುವೆ ಬೇರಾರೂ ಇರಲಿಲ್ಲ.ಮುಗಿಯದಷ್ಟು ಖುಷಿಯಿತ್ತು,ಮೊಗೆದಷ್ಟು ನಗುವಿತ್ತು,ಎದೆಯ ತೋಟದಲ್ಲಿ ನಾವಾಗಿಯೇ ಅರಳಿಸಿಕೊಂಡ ಕೆಂಗುಲಾಬಿಯದ್ದೇ ಸುಮವಿತ್ತು.ಹಾಗಾಗಿ ಗಾಳಿ ಕೂಡ ಉಸಿರುಗಟ್ಟಿಕೊಂಡೇ ನಮ್ಮ ನಡುವೆ ಮೆಲ್ಲ ಮೆಲ್ಲಗೆ ನುಸುಳಿ ಹಾದು ಹೋಗುತ್ತಿತ್ತು.ಹಾಗೆಂದು ನಾನು ಬಲವಾಗಿ ಅಂದುಕೊಂಡ ಆ ದಿನವೇ ಅವನು ದೂರದಲ್ಲಿ ಬಂದು ಹಾಗೇ ಕೈ ಕಟ್ಟಿಕೊಂಡು ನಿಂತು ಬಿಟ್ಟಿದ್ದ.ದಿಗಿಲು ಎಂದರೆ ಏನೆಂದು ಗೊತ್ತಾಗಿದ್ದೇ ಅವತ್ತು!
ಅವಳೊಂದಿಗೆ ಸೇರಿ ನಾನು ಅದೆಷ್ಟೋ ಹಗಲು ರಾತ್ರಿ ಮನಸ್ಸು ಬಿಚ್ಚಿ ಮನಸೇಚ್ಛ ನಕ್ಕಿದ್ದೆ.ನೆತ್ತಿಯ ಮೇಲೆ ಸುಡುವ ಸೂರ್ಯನಿದ್ದರೂ ದಿನಗಳು ಮಾತ್ರ ಕಲ್ಲಂಗಡಿಯಷ್ಟೇ ಬರೀ ತಂಪು ತಂಪು.ಚಂದ್ರೋದಯದ ನಂತರದ ಕ್ಷಣಗಳು ನಮ್ಮಿಬ್ಬರ ಪಾಲಿಗೆ ಅರುಣೋದಯದವರೆಗೂ ನಿದ್ರೆ ಮರೆತು ಬಿಟ್ಟ ಅಮೃತ ಘಳಿಗೆಗಳಾಗಿದ್ದವು.ಮೇಲಿಂದ ಚುಕ್ಕಿ ತಾರೆಗಳೇ ಕಳಚಿ ಬಿದ್ದು ಮತ್ತೆ ಅವಳ ಮುಡಿ ಏರಿ ನಗಬೇಕು,ಅಂತಹ ಹುಲುಸಾದ ನಗು ನನ್ನದು,ಜೊತೆಯಲ್ಲಿಯೇ ಮಿಡಿದ ಜೀವವೀಣೆಯಂತಹ ಅವಳು.
ಅವನು ಬಂದ ಆ ದಿನದಿಂದ ನನ್ನ ದಿನಗಳು ಸಹಜವಾಗಿ ಅದರಷ್ಟಕ್ಕೆ ಉರುಳಿ ಹೋಗಲಿಲ್ಲ.ನಗು ನನ್ನಿಂದ ಇದ್ದಕ್ಕಿದ್ದಂತೆ ಬಹಳಷ್ಟು ದೂರ ಹೋಗಿ ಕೈಕಟ್ಟಿಕೊಂಡು ನಿಂತುಬಿಟ್ಟಿತು.ನನಗೂ ಆತ್ಮದಂತಿದ್ದ ನನ್ನದೊಂದು ನಗುವಿನ ನೆನಪೇ ಆಗಲಿಲ್ಲ.
ಅವನ ನೆಪ ಶುರುವಾದ ಮೇಲೆ ನನ್ನ ನಗು ನನಗೆ ಬೇಕು ಎಂದು ನನಗೇಕೆ ತೀವ್ರವಾಗಿ ಅನಿಸಲಿಲ್ಲ?? ಒಟ್ಟಿನಲ್ಲಿ ಅದು ಮಾತ್ರ ನನ್ನ ಬಳಿ ಸುಳಿಯಲಿಲ್ಲ!
ಆದರೆ ದೂರ ದೂರವೇ ಇದ್ದ ಅವನು ಮಾತ್ರ ಒಂದು ದಿನ ದೂರದಿಂದಲೇ ಸುಮ್ಮನೆ ನಕ್ಕು ಬಿಟ್ಟ;ಖಂಡಿತವಾಗಿಯೂ ನನಗಾಗಿ ಅಲ್ಲ.ನನ್ನ ಪಕ್ಕದಲ್ಲಿದ್ದ ಇವಳು ಅವನ ನಗುವಿಗೆ ಹಾಗೇ ಪ್ರತಿ ನಗು ಚೆಲ್ಲಿ ಬಿಟ್ಟಳು.ಯಾವ ಪ್ರೇಮಿಯ ಹೃದಯ ತಾನೇ ಸುಡುವುದಿಲ್ಲ? ನನ್ನದಂತು ಹೊತ್ತಿಯೇ ಉರಿದಿತ್ತು!!
ಅವಳು ಹೇಳಿದಳು.. ಇಲ್ಲ,ನನ್ನ ಅವನ ನಡುವೆ ಏನೂ ಇಲ್ಲ.ನಿನ್ನ ಹೊರತು ಬೇರೆ ಯಾರೂ ನನಗಿಲ್ಲ.
ಇರಬಹುದು,ಆದರೆ ನನಗೆ ಅವನ ನೆರಳು ಕೂಡ ನಮ್ಮಿಬ್ಬರ ಪರಿಧಿಯಲ್ಲೂ ಒಂದೇ ಒಂದು ಕಳ್ಳ ಹೆಜ್ಜೆಯಿಟ್ಟು ಮತ್ತಷ್ಟು ಮುಂದುವರಿಯಬಾರದಿತ್ತು.ಅದನ್ನು ನೇರವಾಗಿ,ಅಷ್ಟೇ ಖಾರವಾಗಿ ಅವನಲ್ಲಿಯೇ ಹೋಗಿ ಹೇಳಿದೆ ನಾನು.
ಹೇಳಿ ನಾನು ತಪ್ಪು ಮಾಡಿದೆನೇ?
ಹೇಳುವ ಮೊದಲು ಅದು ತಪ್ಪು ಎಂದು ನನಗೇನು ಅನಿಸಿರಲಿಲ್ಲ,ಹೇಳಿದ ಮೇಲೂ ತಪ್ಪು ಮಾಡಿದೆ ಎಂಬ ಯಾವ ವಿಷಾದದ ಭಾವವೂ ನನ್ನನ್ನು ತೀವ್ರವಾಗಿ ಕಾಡಲೂ ಇಲ್ಲ.
ಆದರೆ ಅವಳು ಮರುದಿನವೇ ಬಂದು ನೊಂದು ಬೆಂದು ಕಣ್ಣೀರಾಗಿ ಹೇಳಿದ್ದಳು.. " ನೀನು ನನ್ನ ಮೇಲೆ ಸಂಶಯ ಪಡಬಾರದಿತ್ತು..!! "
ಆಗಲೇ ಅನಿಸಿದ್ದು ನಾನು ಅದೆಂತಹ ದೊಡ್ಡ ತಪ್ಪನ್ನೇ ನನ್ನವಳಿಗೆ ಮಾಡಿ ಬಿಟ್ಟಿದ್ದೆ ಎಂದು!
ಆ ಕ್ಷಣದಿಂದ ಆ ದಿನದಿಂದ ನಮ್ಮ ಸಂಬಂಧ ಹಿಂದಿನಂತೆ ಮಧುರವಾಗಿ ಉಳಿಯಲಿಲ್ಲ.ದೂರವಾಗದಿದ್ದರೂ ಆ ಒಂದು ಸನಿಹದಲ್ಲಿ ಮೊದಲಿನ ತಂಪೆನಿಸುವ ಸುಖವಿರಲಿಲ್ಲ.ಒಟ್ಟಿಗೆ ನಾವಿಬ್ಬರು ನಗಲೂ ಇಲ್ಲ,ಮೇಲಿನ ತಾರೆ ನಮ್ಮನ್ನು ನೋಡಿ ಬೆಳ್ಳಿಯಂತೆ ಹೊಳೆಯಲೂ ಇಲ್ಲ.
ಅವನ ಬಗ್ಗೆ ಕೇಳಿದಾಗಲೆಲ್ಲ ಅವಳಿಗೆ ನಾನು ಇನ್ನಿಲ್ಲದಂತೆ ಕಿರಿಕಿರಿಯಾಗುತ್ತಾ ಹೋದೆ.ಆದರೆ ಅವನು ಅವಳಿಗೆ ಹಿತವಾದನೋ,ಸುಖವಾದನೋ ಎನ್ನುವುದು ನನ್ನ ಪಾಲಿನ ಅತೀ ದೊಡ್ಡ ಗಲಿಬಿಲಿಯಾಗಿತ್ತು.ನಾನು ಅಮ್ಮನ ಕೈ ತಪ್ಪಿದ ಜಾತ್ರೆಯ ಮಗುವಿನಂತಾಗಿದ್ದೆ.
ಈ ಬಾರಿ ಅಂತು ಅವನು ನನ್ನಂತೆಯೇ ಸೊಗಸಾಗಿ ಹುಲುಸಾಗಿ ನಗಲು ಶುರು ಮಾಡಿಯೇ ಬಿಟ್ಟಿದ್ದ.ಅವನ ನಗುವಿಗೆ ಮೇಲಿನ ತಾರೆಗಳೆನೋ ಹೊಳೆಯಲಿಲ್ಲ.ಆದರೆ ಅವನು ನಕ್ಕಾಗಲೆಲ್ಲ ನನ್ನವಳು ಮಾತ್ರ ಅವನ ಪ್ರತೀ ನಗುವಿಗೂ ಬಿರಿದ ಮಲ್ಲಿಗೆಯಾದಳು,ಅವಳ ಹೆಸರಿನಂತೆಯೇ ಮಿನುಮಿನುಗುವ ಪುನರ್ವಸು ನಕ್ಷತ್ರವಾದಳು.ಈಗ ನಾನು ಹೇಗೆ ತಾನೇ ಸಹಿಸಿಕೊಳ್ಳಲಿ??.
" ಪುನರ್ವಸು.. ನಿಮ್ಮಿಬ್ಬರ ನಡುವೆ ನಿಜವಾಗಿಯೂ ಏನು ನಡೆಯುತ್ತಿದೆ..? "
ಎನ್ನುವುದನ್ನು ನಾನು ಅವಳಲ್ಲಿ ಯಾವತ್ತೂ ಕೇಳಬಾರದು ಎಂದೇ ಅಂದುಕೊಂಡಿದ್ದೆ;ಆದರೂ ತಡೆಯಲಾಗದೇ ಅದೊಂದು ದಿನ ಅದನ್ನೇ ಅವಳಲ್ಲಿ ನಾನು ತೀವ್ರ ಆಕ್ರೋಶದಿಂದ ಕೇಳಿ ಬಿಟ್ಟಿದ್ದೆ!
ಎಷ್ಟಾದರೂ ಅವಳ ಒಂದು ಕಾಲದ ಪ್ರೇಮಿ ನಾನು.ಯಾವ ಪ್ರೇಮಿ ತಾನೇ ಎಲ್ಲವನ್ನು ನೋಡಿಯೂ ನೋಡದಂತೆ ಸುಮ್ಮನಿರಲು ಸಾಧ್ಯ.
" ಏನೂ ಇಲ್ಲ ಪುಷ್ಯರಾಗ.. ನಾವು ಕೇವಲ ಗೆಳೆಯರು ಅಷ್ಟೇ.." ಎಂದು ಬಹಳ ಸರಳವಾಗಿಯೇ ಆ ಒಂದು ಮಾತನ್ನು ಹೇಳಿ ಬಿಟ್ಟಿದ್ದಳು ಅವಳು.
ಮುಖದಲ್ಲಿ ನಗು ಮಾತ್ರವಲ್ಲ,ಆ ಸಡಿಲ ಮಾತಿನಲ್ಲಿ ಇದನ್ನು ನೀನು ನಂಬಬೇಕು ಎನ್ನುವ ಒಂಚೂರು ಒತ್ತಾಯವೂ ಇರಲಿಲ್ಲ.ಮುಖದ ತುಂಬೆಲ್ಲಾ ಹುಡುಕಾಡಿದೆ,ಅವಳ ಕಣ್ಣು ಕೂಡ ನನ್ನನ್ನು ಅರಸುತ್ತಿರಲಿಲ್ಲ.ಅವಳು ಎಲ್ಲೋ ನೋಡಿಕೊಂಡು ಸುಮ್ಮನೆ ಹಲ್ಲು ಕಡಿಯುತ್ತಿದ್ದಳು.ಮನಸ್ಸು ಎದುರಿಗಿದ್ದ ನನ್ನಲ್ಲಿ ಇರಲಿಲ್ಲ.ಅದನ್ನು ಕಂಡು ನಾನು ಮತ್ತಷ್ಟು ಕ್ಷುದ್ರನಾಗಿ ಹೋದೆ!
" ಇಲ್ಲ.. ಇಲ್ಲ..ನೀವು ಬರೀ ಗೆಳೆಯರಲ್ಲ.ಬೇರೆನೋ ಅವಶ್ಯವಾಗಿಯೇ ಇದೆ..ಹೇಳು ಪುನರ್ವಸು..!? "
ಇದನ್ನಂತು ನಾನು ನಿಜಕ್ಕೂ ಕೇಳಲೇಬಾರದಿತ್ತು.ಆದರೆ ನಾನು ಅಸಹಾಯಕ.ಅವಳ ಒಂದು ಸಾಲಿನ ನೀರಸ ಉತ್ತರದಿಂದ ನಾನು ಹತಾಶೆಯ ತುತ್ತ ತುದಿಗೆನೇ ಹೋಗಿ ನಿಂತಿದ್ದೆ.ಹಾಗಾಗಿ ಅವಳು ಉತ್ತರಿಸದಿದ್ದರೂ ನಾನು ಮಾತ್ರ ಇದೊಂದನ್ನೇ ಪದೇ ಪದೇ ಅವಳಲ್ಲಿ ಕೇಳುತ್ತಲೇ ಹೋದೆ,ಹೌದು ಅವಳಿಗೆ ಕಿರಿಕಿರಿಯಾಗುವಷ್ಟು!
ಅವಳಿಗೂ ತಡೆದುಕೊಳ್ಳಲು ಆಗಲೇ ಇಲ್ಲ.ಕೊನೆಗೆ ಹೇಳಿಯೇ ಬಿಟ್ಟಳು...
" ಹಾಗಾದರೆ ನನ್ನನ್ನು ನೀನು ಇಲ್ಲಿಯವರೆಗೆ ಅರ್ಥಮಾಡಿಕೊಂಡಿದ್ದು ಬರೀ ಇಷ್ಟೇಯಾ ಪುಷ್ಯರಾಗ...?? "
ಇಂತಹ ಪ್ರಶ್ನೆಗೆ ನನ್ನಂತವನು ಏನು ತಾನೇ ಉತ್ತರ ಕೊಡಲು ಸಾಧ್ಯ.ಉತ್ತರ ಕೊಡಲು ಸಾಧ್ಯವಾಗಬಾರದೆಂದು ತಾನೇ ಇಂತಹದ್ದೊಂದು ಕಠಿಣ ಪ್ರಶ್ನೆಯನ್ನು ಕೊನೆಯಲ್ಲಿ ಬೇಕು ಬೇಕೆಂದೇ ಎಸೆದು ಬಿಡುವುದು!
ನಾನು ಒಳಗೊಳಗೆ ಮತ್ತಷ್ಟು ಸುಡುತ್ತಾ ಹೋದೆ; ಬೂದಿಯಾಗುವವರೆಗೂ.ಬೂದಿಯೊಳಗೂ ಇದ್ದದ್ದು ಪಕ್ಕಕ್ಕೆ ಆರದ ಕೆಂಡವೇ!
ಮುಂದೆ ಅವರಿಬ್ಬರು ಸೇರಿ ಜೊತೆಯಾಗಿ ಮತ್ತಷ್ಟು ನಕ್ಕರು;ಅದೂ ಕೂಡ ನನ್ನೆದುರಿಗೆಯೇ." ಅವರಿಬ್ಬರು ನಿಜವಾಗಿಯೂ ಕೇವಲ ಗೆಳೆಯರು ಅಷ್ಟೇ,ಇದನ್ನು ನೀನು ನಂಬಿ ಬಿಡು ಗೆಳೆಯ.." ಎಂದು ನನಗೆ ನಾನೇ ಯಾವತ್ತಿಗೂ ಸಮಾಧಾನ ಹೇಳಲೂ ಇಲ್ಲ,ಸುಳ್ಳೇ ಸಂತೈಸಲು ಕೂಡ ಹೋಗಲಿಲ್ಲ.ಏಕೆಂದರೆ ನಾನು ಅವಳನ್ನು ನಂಬಬಲ್ಲೆ.ಆದರೆ ಅವನನ್ನು ಎಂದಿಗೂ ಅಲ್ಲ.ಅದರಲ್ಲೂ ಅವರಿಬ್ಬರು ಪರಸ್ಪರ ನಕ್ಕಾಗ ನಾನು ನಿಧಾನಕ್ಕೆ ಬಹಳಷ್ಟು ಸೋಲುತ್ತಿದ್ದೆ,ದಿನದಿಂದ ದಿನಕ್ಕೆ ನನಗೆ ಗೊತ್ತಿಲ್ಲದಷ್ಟು ಸಾಯುತ್ತಲೇ ಇದ್ದೆ.ಉಸಿರು ಇದ್ದ ಕಾರಣ ಹೊರಗಿನ ಜಗತ್ತು ನನ್ನನ್ನು ಸುಡಲು ಮುಂದಾಗಲಿಲ್ಲ!
ನನ್ನ ಏಕಾಂಗಿ ರಾತ್ರಿಗಳಲ್ಲಿ ಹಿತವಾಗುವಂತಹದ್ದು ಏನೂ ಆ ದಿನದಿಂದ ಘಟಿಸಲಿಲ್ಲ.ಸುಡುವ ವಿರಹ ಕೂಡ ಬಹಳಷ್ಟು ಬದುಕಿಸಿ ಬಿಡುತ್ತದೆ.ಆದರೆ ನನ್ನ ಪಾಲಿಗೆ ಈಗ ಅಂತಹದ್ದೊಂದು ಪರಮ ಸುಖದ ವೇದನೆ ಕೂಡ ಉಳಿದು ಹೋಗಿರಲಿಲ್ಲ!
ದ್ವೇಷಿಸುವವನೆಂದೂ ಪ್ರೀತಿಸಲಾರ.ಪ್ರೀತಿಸುವವನೆಂದೂ ದ್ವೇಷಿಸಲಾರ.ಎರಡೂ ಬಹಳ ಚೆನ್ನಾಗಿಯೇ ಗೊತ್ತಿತ್ತು.ಆದರೆ ಈಗ ನಮ್ಮಿಬ್ಬರ ನಡುವೆ ಅವನಿದ್ದ.ಹಾಗಾಗಿ ಅವನನ್ನೇ ದ್ವೇಷ ಮಾಡದೇ ನನಗೆ ಬೇರೆ ಮಾರ್ಗವಿರಲಿಲ್ಲ.
ನಿಧಾನಕ್ಕೆ ಯಾರಲ್ಲೂ ಏನನ್ನೂ ಹೇಳಲಾಗದೇ ನಾನು ಅದೆಷ್ಟು ಅಂತರ್ಮುಖಿಯಾಗುತ್ತಾ ಹೋದೆ ಎನ್ನುವುದು ಕೇವಲ ನನ್ನ ನಿಟ್ಟುಸಿರಿಗಷ್ಟೇ ಗೊತ್ತು.ಪ್ರೀತಿ ಸೋತಾಗ ಮೌನದ ಜಗತ್ತು ಕೂಡ ದಿಗ್ಗನೇ ಎದ್ದು ನಿಂತು ಅದರಷ್ಟಕ್ಕೆ ಮಾತಾಡುತ್ತದೆ,ಕಿವಿ ಕೊಡಲೇ ಬಾರದು.ಅದರಲ್ಲೂ ಈ ಮೌನ ಒಂದು ಕಾಲದಲ್ಲಿ ಒಟ್ಟಿಗೆ ಸೇರಿ ನಕ್ಕ ಅಷ್ಟೂ ಪುಷ್ಕಳ ನಗುವನ್ನು ಪದೇ ಪದೇ ಕೇಳಿಸುವ ಸಾಹಸವನ್ನು ಕೂಡ ಮಾಡುತ್ತದೆ.ಅದಕ್ಕೂ ಕರುಣೆಯೇ ಇಲ್ಲ!
ಪ್ರೇಮ ಸತ್ತು ಮಲಗಿದವನ ಮನೆಯಲ್ಲಿ ಎಲ್ಲವೂ ಸುಖವಾಗಿದ್ದರೂ,ಅವನೊಳಗಿನ ಮನೆಯಲ್ಲಿ ಉರಿಯವ ಚಿರಂಜೀವಿ ಚಿತೆಗೆ ಮಾತ್ರ ನಂದುವುದು ಗೊತ್ತೇ ಇಲ್ಲ.ಧಾರಕಾರದ ವರ್ಷ ಋತು ಕೂಡ ಅವನಿಗೆ ಕಡು ಬೇಸಿಗೆಯೇ,ಮೇಘ ಮಲ್ಹಾರ ಸಹ ಸುಖದ ರಾಗವಾಗಿ ಕಿವಿ ತುಂಬುತ್ತಾ ಹೋಗುವುದಿಲ್ಲ.
ನಿಜ ಹೇಳಬೇಕೆಂದರೆ ನನಗೆ ಅವನನ್ನು ಕೊಲ್ಲಬೇಕು ಎಂದೇ ಬಹಳಷ್ಟು ಸಹ ಅನಿಸುತ್ತಿತ್ತು.ಆದರೆ ಏನು ಮಾಡಲಿ,ನಾನು ಅವರಿಬ್ಬರ ನಡುವೆ ಹೋದಷ್ಟು ಅವರಿಬ್ಬರೇ ಮತ್ತಷ್ಟು ಒಂದಾಗುತ್ತಿದ್ದರೇ ವಿನಹ ನಾನೊಬ್ಬ ಮಾತ್ರ ದೂರವಾಗುತ್ತಲೇ ಹೋಗಿ,ಕೊನೆ ಕೊನೆಗೆ ಅವರ ಕತೆಯಲ್ಲಿ ನಾನೇ ತೀರಾ ಹೊರಗಿವನಂತೆ ಕಂಡು ಬಿಟ್ಟೆ!
ಮನಸ್ಸು ಹೇಳಿತು ಈಗ ನೀನೇ ಹೊಸಬ.. ಅವರಿಬ್ಬರ ನಡುವೆ ನೀನು ಹೋಗಿ ಅವರದ್ದೊಂದು ಒಳ್ಳೆಯ ಸಂಬಂಧ ಕೆಡಿಸಬೇಡ!
ನಾನು ಹೊಸಬನೇ?!
ಹೃದಯ ಹಿಂಡಿದಂತಾಗಿತ್ತು!!
ಎಷ್ಟಾದರೂ ಹುಡುಗ ನಾನು.ಹಾಗಾಗಿ ಎಂದಿಗೂ ಅಳಬಾರದು ಎಂದೇ ಬಹಳಷ್ಟು ಸಲ ಅಂದುಕೊಂಡಿದ್ದೆ.ಆದರೆ ಆವತ್ತು ಮಾತ್ರ ನನಗೆ ತಡೆದುಕೊಳ್ಳಲು ಆಗಲೇ ಇಲ್ಲ!
ಕಣ್ಣ ತುಂಬಾ ಯಾವುದೇ ಕ್ಷಣದಲ್ಲಿ ಹೊರ ಚೆಲ್ಲಬಹುದಾದಷ್ಟು ನೀರು ತುಂಬಿಕೊಂಡೇ ನೇರವಾಗಿ ಅವಳ ಮುಂದೆ ಹೋಗಿ ನಿಂತು ಬಿಟ್ಟಿದ್ದೆ.ಆ ನನ್ನ ಕಣ್ಣಿಗೂ,ಮನಸ್ಸಿನಾಳದ ಒಳಗಣ್ಣಿಗೂ ಎದುರೇ ಇದ್ದ ಅವಳೀಗ ಬಹಳಷ್ಟು ಅಸ್ಪಷ್ಟ ಚಿತ್ರ! ಹೌದು ಅದೆಷ್ಟೋ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ಅರಳುವ ತಾರೆಯಂತೆ!!
ಜೀವನದಲ್ಲಿ ಇಂತಹದ್ದೊಂದು ಪ್ರಶ್ನೆ ಅವಳಿಗೆ ಕೇಳುತ್ತೇನೆ ಎಂದು ನಾನು ಅವಳನ್ನು ಪ್ರೀತಿಸಿದ ಯಾವ ಕ್ಷಣದಲ್ಲೂ ಅಂದುಕೊಂಡಿರಲೇ ಇಲ್ಲ.ನನ್ನ ಯಾವ ಬತ್ತಳಿಕೆಯಲ್ಲೂ ಕೂಡ ಮುಂದೊಂದು ದಿನ ಉಪಯೋಗಕ್ಕೆ ಬರಲಿ ಎಂದು ಇಂತಹದ್ದೊಂದು ಪ್ರಶ್ನೆಯನ್ನು ನಾನು ಜೋಪಾನವಾಗಿ ಎತ್ತಿಟ್ಟಿದ್ದು ಸಹ ಇಲ್ಲ.ಬಹುಶಃ ಪ್ರಾಣಕ್ಕಿಂತಲೂ ಅಧಿಕ ಪ್ರೀತಿ ಮಾಡುವ ಜಗತ್ತಿನ ಯಾವುದೇ ಪ್ರೇಮಿಗೂ ಕೂಡ ಈ ಒಂದು ಪ್ರಶ್ನೆ ಅವನ ಅಮರ ಪ್ರೇಮದ ಕೊನೆಯ ಅಸಹಾಯಕ ಪ್ರಶ್ನೆಯೇ ಆಗಿರುತ್ತದೆ ಮತ್ತು ಅದನ್ನು ಕೇಳಿದ ಮರು ಕ್ಷಣದಿಂದ ಅವನ ಆ ಒಂದು ಪ್ರೇಮ ಮತ್ತೆಂದಿಗೂ ಹಿಂದಿನಂತೆ ನಳನಳಿಸುವುದೇ ಇಲ್ಲ.ಗೊತ್ತಿದ್ದು ಗೊತ್ತಿದ್ದು ನಾನು ಅದೇ ಕೊನೆಯ ಪ್ರಶ್ನೆಯನ್ನು ಅವಳಲ್ಲಿಯೇ ಕೇಳಿದೆ..
"ಹೇಳು ಪುನರ್ವಸು... ನಿನಗೆ ನಾನು ಬೇಕೋ.. ಅಥವಾ.. ಅಥವಾ ಆ ಅವನು ಬೇಕೋ?! " ಗಂಟಲಿನ ಪಸೆ ಆರಿ ಹೋಗಿತ್ತು. ಕಣ್ಣುಗಳ ನೀರಿಗೆ ಧುಮ್ಮಿಕ್ಕಿ ಹರಿಯಲು ಕೇವಲ ಒಂದು ಕ್ಷಣ ಅಷ್ಟೇ ಸಾಕಾಗಿತ್ತು!
" ಅವನು ಕತೆಯಲ್ಲಿಯೇ ಇರಲಿಲ್ಲ..ನೀನೇ ಅವನ ಬಗ್ಗೆ ನಾನು ಕನಸು ಕಾಣುವಂತೆ ಮಾಡಿಬಿಟ್ಟೆ,ಈಗ ನಾನು ಅಸಹಾಯಕಿ...! ." ಅಂದು ಬಿಟ್ಟಳು ಪುನರ್ವಸು.
ನಾನು ಆ ಕ್ಷಣವೇ ಅಲ್ಲೇ ಸಿಡಿಲು ಬಡಿದು ಹಾಗೇ ಸತ್ತು ಹೋಗಿ ಬಿಡಬೇಕಿತ್ತು!
ಆದರೆ ಈ ಪಾಪಿ ಬದುಕು ಇದೆಯಲ್ಲಾ,ಅದು ಪ್ರೀತಿಸಿದವರನ್ನು ಬಹು ಬೇಗ ಕೊಂದು ಬಿಡುವುದೇ ಇಲ್ಲ!
ಕಣ್ಣಿನಿಂದ ವ್ಯರ್ಥವಾಗಿ ಹರಿಯುತ್ತಿದ್ದ ಅಷ್ಟೂ ಕಣ್ಣೀರನ್ನು ಹಾಗೇ ಬಲಗೈಯಿಂದ ಮೆಲ್ಲಗೆ ಒರೆಸಿಕೊಂಡೆ..!
ಅವಳಲ್ಲಿ ಆಡಲು ಕೊನೆಯದ್ದೊಂದು ಮಾತು ನನ್ನಲ್ಲಿ ಇನ್ನೂ ಬಾಕಿ ಇತ್ತು.ಅದನ್ನೇ ಹೇಳಿ ಬಿಟ್ಟೆ..
" ಆಯಿತು,ಇಬ್ಬರೂ ಸುಖವಾಗಿರಿ.ಆದರೆ ನಿನ್ನಲ್ಲಿ ಒಂದು ಮಾತು ಪುನರ್ವಸು,ಯಾವತ್ತಿಗೂ... ಯಾವತ್ತಿಗೂ ನೀನು ಮಾತ್ರ ನನ್ನ ಕಣ್ಣಿಗೆ ಎಂದಿಗೂ ಬೀಳಲೇ ಬೇಡ...! "ಎಂದು ಹೇಳಿ ಹಾಗೇ ಕಣ್ಣುಜ್ಜುತ್ತಾ ಸೀದಾ ಅವಳ ಬಳಿಯಿಂದ ಎದ್ದು ಬಂದಿದ್ದೆ ನಾನು.
ಹೊರಟು ಏನೋ ಬಂದಿದ್ದೆ.ಆದರೆ ಅವಳನ್ನು ಮರೆತು ಸರಾಗವಾಗಿ ಉಸಿರಾಡುವುದು ಮಾತ್ರ ಅದು ನಾನು ಎಣಿಸಿದಷ್ಟು ಸುಲಭವಾಗಿರಲಿಲ್ಲ.ಅವಳನ್ನು ಮರೆತಾದರೂ ಅದು ಹೇಗೆ ತಾನೇ ನಾನು ಸುಖವಾಗಿರಬಲ್ಲೆ.
ಮರೆತು ಬಿಡಬೇಕು ಎನ್ನುವ ಪ್ರಯತ್ನವೇ ಅತಿಯಾಗಿ ನೆನಪು ಮಾಡಿಕೊಳ್ಳುವ ಮತ್ತೊಂದು ಬಗೆ! ದ್ವೇಷವೂ ಅಷ್ಟೇ!!
ಕತ್ತಲೆ ಹಿಂಸೆಯಾಗತೊಡಗಿತು.ಮೌನದ ಮಾತಿನಲ್ಲಿ ಅವಳ ಆರಂಭದ ಪಿಸು ಮಾತುಗಳೇ ಅಧಿಕವಾಗಿದ್ದವು.ರಾತ್ರಿ ಬಾನಿನಲ್ಲಿ ಇಣುಕಿದ ನಕ್ಷತ್ರಗಳು ನನ್ನನೇ ಕೆಣಕಿ ಕೆಣಕಿ ನೋಡುತ್ತಿದ್ದವು;ಬಹುಶಃ ಅವುಗಳು ಕೂಡ ನನ್ನನ್ನು ಗೇಲಿ ಮಾಡುತ್ತಿದ್ದವು ಎಂದು ಕಾಣುತ್ತದೆ.ಎಷ್ಟಾದರೂ ಈ ತಾರೆಗಳೆಲ್ಲವೂ ಪುನರ್ವಸುವಿನದ್ದೇ ಬಳಗವಲ್ಲವೇ.ದಿನದಿಂದ ದಿನಕ್ಕೆ ನನ್ನ ನೋವು ಹೆಚ್ಚಾಯಿತೇ ಹೊರತು ಕಡಿಮೆಯಾಗುವ ಸೂಚನೆ ಇರಲಿಲ್ಲ.
ಆದರೂ ನಾನು ಸಾಯಲು ಪ್ರಯತ್ನಿಸಲಿಲ್ಲ.ಪ್ರತಿ ದಿನ ,ಪ್ರತಿ ಕ್ಷಣ ಸಾಯುವವರಿಗೆ ಅಂತಹದ್ದೊಂದು ಪ್ರಯತ್ನ ಮಾಡಬೇಕು ಎಂದು ಅನಿಸುವುದು ಕೂಡ ಇಲ್ಲ! ಏಕೆಂದರೆ ನೆನಪಿನಲ್ಲಿಯೇ ಇನ್ನಷ್ಟು ದಿನ ಸಾಯಬೇಕಲ್ಲ!!
ಆ ನಂತರ ಅವರಿಬ್ಬರು ಮದುವೆಯೂ ಆದರು,ಸುಖವಾಗಿಯೂ ಇದ್ದರು.ನಿಧಾನಕ್ಕೆ ನನ್ನ ಕಣ್ಣೆದುರಿನಿಂದ ಕಣ್ಮರೆಯಾಗಿಯೇ ಹೋದರು.
ಆಮೇಲೆ ನಾನು ಸಹ ನಿಧಾನವಾಗಿ ಅವರಿಬ್ಬರನ್ನೂ ಮರೆತು ಬಿಟ್ಟೆ.ಸತ್ಯ ಹೇಳಬೇಕೆಂದರೆ ಈ ಬದುಕೇ ಅವರಿಬ್ಬರನ್ನು ನಾನು ಮರೆಯುವಂತೆ ಮಾಡಿ ಬಿಟ್ಟಿತು.ಜೋರಾಗಿ ಅಲ್ಲದಿದ್ದರೂ ಹಿತವಾಗಿ ಹದವಾಗಿ ಮೆಲ್ಲ ಮೆಲ್ಲಗೆ ನಗಲು ಶುರು ಮಾಡಿದೆ ನಾನು.ನನ್ನಿಂದ ದೂರ ನಿಂತುಕೊಂಡಿದ್ದ ನಗು ಕೊನೆಗೂ ನನ್ನ ತುಟಿ ಏರಿ ಮುಗಳುನಗೆಯನ್ನು ಒಂದಿಷ್ಟು ಬೀರಿತ್ತು.
ಆದರೆ ಈ ಬದುಕಿಗೆ ನನ್ನ ನೆಮ್ಮದಿಯಂತು ನಿಜವಾಗಿಯೂ ಬೇಕಾಗಿಯೇ ಇರಲಿಲ್ಲ.ಅದರ ಆಟ ಅದರದ್ದು.ಅದು ಆಡದೇ ಬಿಡುವುದೇ ಇಲ್ಲ.ಹಾಗಾಗಿ ಒಂದು ದಿನ ನನಗೆ ಪುನರ್ವಸು ಮತ್ತೆ ಸಿಕ್ಕಳು!!
ಅವಳು ನಿಜಕ್ಕೂ ಬಹಳಷ್ಟು ಖುಷಿಯಾಗಿಯೇ ಇದ್ದಳು.ನನ್ನನ್ನು ನೋಡಿಯೂ ನಮ್ಮಿಬ್ಬರ ನಡುವೆ ಏನೂ ಆಗಿಯೇ ಇಲ್ಲ ಎಂಬಂತೆ ವರ್ತಿಸಿದಳು,ತೀರಾ ಸಹಜವಾಗಿಯೇ ನನ್ನನ್ನು ನೋಡಿ ನಕ್ಕಳು.ಯಾರೋ ಬೀದಿ ಬದಿಯ ಅಪರಿಚಿತ ಭಿಕ್ಷುಕನಗೆ ಒಂದೆರಡು ನಾಣ್ಯಗಳನ್ನು ಮದದಿಂದ ಎಸೆದು ಹಾಗೇ ದುಬಾರಿ ನಗು ಚೆಲ್ಲುತ್ತಾ ಸಾಗುವ ದೊಡ್ಡ ಹಸನ್ಮುಖಿಯಂತೆಯೇ ಕಂಡಳು ನನ್ನ ಒಂದು ಕಾಲದ ಜೀವದ ಗೆಳತಿ ಪುನರ್ವಸು.ಆಮೇಲೆ ಅವಳು ಅದೆಲ್ಲಿಗೋ ನಗು ನಗುತ್ತಲೇ ಅಲ್ಲಿಂದ ಹೊರಟು ಹೋದಳು.ಅವಳ ಮುಡಿಯ ಮೇಲೇರಿ ಅರಳಿದ್ದ ಕೆಂಗುಲಾಬಿ ಅದರಷ್ಟಕ್ಕೆ ನಗುತ್ತಿತ್ತು;ಆದರೆ ಅದು ನನಗಾಗಿ ಅಲ್ಲ!
ನಡೆದು ಹೋಗುವಾಗ ಅಪ್ಪಿ ತಪ್ಪಿಯೂ ಅವಳು ಹಿಂದೆ ತಿರುಗಿ ಪದೇ ಪದೇ ನನ್ನನ್ನು ನೋಡಲೂ ಕೂಡ ಇಲ್ಲ.ಅದೆಲ್ಲವನ್ನು ನಾನು ಅವಳಿಂದ ನಿರೀಕ್ಷಿಸದೇ ಇದ್ದರೂ,ನಾನು ಮಾತ್ರ ಅವಳು ನನ್ನ ಕಣ್ಣಿನಿಂದ ಮರೆಯಾಗಿ ಹೋಗುವವರೆಗೂ ಅವಳನ್ನಷ್ಟೇ ನೋಡಿ ಕಣ್ತುಂಬಿಸಿಕೊಳ್ಳುತ್ತಿದ್ದೆ!!
ಹೌದು..ಅವಳು ಮತ್ತೆ ನನ್ನ ಕಣ್ಣಿಗೆ ಬೀಳಬಾರದಿತ್ತು!
ಬಿದ್ದರೂ ಏನೂ ಆಗಿಲ್ಲ ಎಂಬಂತೆ ಅಷ್ಟೊಂದು ಸಹಜವಾಗಿ ಉಹೂಂ..ನಿಜಕ್ಕೂ ನಗಬಾರದಿತ್ತು!!
ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೆ ಸರಿಯಾಗಿ ಗಾಯ ಆಗಿದ್ದೇ ಅವಳ ಈ ಹೊಸದಾದ ನಗುವಿನಿಂದ!!
ಆಮೇಲೆ ನಾನು ಚೇತರಿಸಿಕೊಳ್ಳಲೇ ಇಲ್ಲ.ಈ ಗಾಯ ಅಂತು ಈ ಜನ್ಮದಲ್ಲಿ ಮಾಸುವುದು ಕೂಡ ಇಲ್ಲ..!
ಅಂದ ಹಾಗೆ ಈಗ ನಾನು ಕನಸಿನಲ್ಲಿಯೂ ಕೂಡ ನಗುವುದಿಲ್ಲ!!
ನಾನು ಜೀವನದಲ್ಲಿ ಒಂದೇ ಒಂದು ತಪ್ಪು ಮಾಡಿದ್ದೆ...
ಅದೇನೆಂದರೆ ನಾನು ಅವಳನ್ನು ಅಷ್ಟೊಂದು ಗಾಢವಾಗಿ ಪ್ರೀತಿಸಿದ್ದೆ ಎನ್ನುವುದಂತು ಖಂಡಿತವಾಗಿಯೂ ಅಲ್ಲವೇ ಅಲ್ಲ.
ನಾನು ಯಾವತ್ತೂ ನನ್ನನ್ನು ನಾನು ಒಂದಿಷ್ಟು ಪ್ರೀತಿಸಲೇ ಇಲ್ಲ!!!
.....................................................................................
#ಪುಷ್ಯರಾಗ
ಪಚ್ಚು ಕುಟ್ಟಿದಪಲ್ಕೆ
ಚಿತ್ರ ಕೃಪೆ - ಅಂತರ್ಜಾಲ
Comments
Post a Comment