ಗಗನದ ಸೂರ್ಯ






ನಿನಗೆ ಹಣೆಗೆ ಬಿಂದಿ ಹಚ್ಚಿಕೊಳ್ಳಲು ಆ ಆಫೀಸಿನಲ್ಲಿ ಅದೆಷ್ಟೋ ಗಾಜಿನ ಗೋಡೆಗಳಿದ್ದವು. ಆದರೂ ನೀನು ನನ್ನೆದುರು ಇದ್ದ ಗಾಜಿನ ಮುಂದೆಯೇ ಪ್ರತೀ ಸಲವೂ ಬಂದು ನಿಲ್ಲುತ್ತಿದ್ದೆ. ಏಕೆ? ಅದೂ ಕೂಡ ನಾನು ಆ ಒಂದು ಗಾಜಿನ ಮತ್ತೊಂದು ಬದಿಯಲ್ಲಿ ಬಂದು ಎಲ್ಲೆಲ್ಲೋ ನೋಡಿಕೊಂಡು ನನ್ನಷ್ಟಕ್ಕೆ ನಿಂತುಕೊಂಡ ಮರುಘಳಿಗೆಯಲ್ಲೇ! 


ಸಂಪೂರ್ಣ ಪಾರದರ್ಶಕ ಗಾಜದು. ಆ ಕೋಣೆಯ ನೀನು, ಈ ಕೋಣೆಯ ನಾನು, ನೀನು ಬಂದು ನಿಂತ ಆ ಕ್ಷಣಕ್ಕೆ ನಾವಿಬ್ಬರು ಅಲ್ಲೇ ಪರಸ್ಪರ ಎದುರುಬದುರು. 


ಸರಿಯಾಗಿ ಬಿಂಬವೇ ಮೂಡದ ಅಂತಹದ್ದೊಂದು ಗಾಜಲ್ಲಿ ಏನನ್ನು ನೋಡಿಕೊಂಡು ಹಣೆಯ ಬಿಂದಿಯನ್ನು ಅಷ್ಟೊಂದು ಸರಿಯಾಗಿ, ಸಲೀಸಾಗಿ ಹಣೆಯ ನಡುವಿಗೆ ಸಿಕ್ಕಿಸಿಕೊಳ್ಳುತ್ತಿದ್ದೆ ನೀನು. ನಿನ್ನ ಈ ವರ್ತನೆಯಿಂದ ವಿಲವಿಲ ಎಂದು ಒದ್ದಾಡಿ ಬಿಟ್ಟ ನನ್ನ ಕಣ್ಣ ಫಳಫಳ ಗಾಜನ್ನು ನೋಡಿಯೇ? 


ಬರೀ ಅಷ್ಟೇ ಆಗಿದ್ದರೆ ನಾನಂದು ಅಷ್ಟೊಂದು ಸೋಲುತ್ತಿರಲಿಲ್ಲ. ಬಿಂದಿ ಅಂಟಿಸುತ್ತಲೇ ಇದೊಂದು ಹಾಡಿನ ಸಾಲನ್ನು ಕೂಡ  ಮೆಲ್ಲಗೆ ಗುನುಗಿ ಬಿಟ್ಟಿದ್ದೆ ನೀನು ...


" ಗಗನದ ಸೂರ್ಯ ಮನೆ ಮೇಲೆ,

  ನೀ ನನ್ನ ಸೂರ್ಯ ಹಣೆ ಮೇಲೆ

  ಚಿಲಿಪಿಲಿ ಹಾಡು ಎಲೆ ಮೇಲೆ

  ನಿನ್ನ ಪ್ರೀತಿ ಹಾಡು ಎದೆ ಮೇಲೆ.... "


ಅಮೃತವರ್ಷಿಣಿಯ ಹಾಡದು. ಆದರೆ ಏಕೆ? ಯಾರಿಗಾಗಿ! 


ನೀನದನ್ನು ನನ್ನೆದುರು ಗುನುಗಬಾರದಿತ್ತು ಪುನರ್ವಸು!! 


ಆಮೇಲೆಯೂ ನಾನು ಗಾಜಿನೆದುರು ಬಂದಾಗಲೆಲ್ಲ ನೀನು ಮತ್ತೊಂದು ಬದಿಯಲ್ಲಿ ನಿಂತು ನಿನ್ನ ಹಣೆಗೆ ಬಿಂದಿ ಇಡುತ್ತಿದ್ದೆ. ನಾನೂ ನಿನ್ನ ಹಣೆಯನ್ನಷ್ಟೇ ನೋಡುತ್ತಾ ಉಳಿಯುತ್ತಿದ್ದೆ. ಗಗನದ ಸೂರ್ಯ... ಹಾಡು ಹಿತವಾಗಿ ಹದವಾಗಿ ಅಲೆಯಲೆಯಾಗಿ ಬಂದು ಎಂದಿನಂತೆ ಕಿವಿ ತಲುಪುತ್ತಿತ್ತು. ಒಳಗೊಳಗೆ ನನ್ನೊಳಗೆ ಹುಟ್ಟಿಕೊಂಡಿದ್ದು ಏನು. ಅದೇ  ಪ್ರೀತಿಯಾ? ಗೊತ್ತಿಲ್ಲ. 


ನನ್ನಲ್ಲಿ ಮಾತುಗಳು ಕಮ್ಮಿ ಹುಟ್ಟುವವು. ನಾನು ನನ್ನೊಂದಿಗೂ  ಸರಿಯಾಗಿ ಮಾತಾಡಲಾರೆ. ಇನ್ನು ನಿನ್ನೊಂದಿಗೆ ಹೇಗೆ?


ಆದರೆ ಬದುಕಿಗೂ ನನ್ನಂತವನ ನೆಮ್ಮದಿ ಹಾಳು ಮಾಡುವುದರಲ್ಲಿ ಅದೇನು ಸುಖವಿದೆಯೋ, ಅದು ನನ್ನೆದುರಿಗೆ ನಿನ್ನ ಹುಟ್ಟುಹಬ್ಬವನ್ನೇ ತಂದಿರಿಸಿತ್ತು. 


ಎಲ್ಲರ ಕಣ್ಣಲ್ಲೂ ಕಣ್ಣು ಬೆರೆಸಿ ಮಾತಾಡಬಲ್ಲ ನನಗೇಕೆ ನಿನ್ನ ಕಣ್ಣುಗಳನ್ನು ಎದುರಿಸಲಾಗುತ್ತಿರಲಿಲ್ಲ. ಗೊತ್ತಿಲ್ಲ. ಹಾಗಾಗಿಯೇ ಆ ದಿನ ನಿನಗಾಗಿ ತಂದ ಉಡುಗೊರೆಯೊಂದನ್ನ ನಿನಗೆ ತಲುಪಿಸಲು ನನಗೆ ಸಾಧ್ಯವಾಗಲಿಲ್ಲ. 


ಆಫೀಸಿನ ಎಲ್ಲರೂ ನಿನಗೆ ಕೈ ಕುಲುಕಿ ಶುಭ ಕೋರಿದರೂ  ನಾನೊಬ್ಬನೇ ಇಡೀ ಆಫೀಸಿನಲ್ಲಿ ಬಾಕಿ. ನಾನು ನಿನ್ನ ಬಳಿ ಸುಳಿಯಲೇ ಇಲ್ಲ. ಆದರೆ ನೀನು ಮಾತ್ರ ತುಂಡರಿಸಿದ ಕೇಕ್ ಪೀಸ್ ಗಳಲ್ಲಿ ಒಂದನ್ನು ಸಪರೇಟು ಆಗಿ ಉಳಿಸಿಕೊಂಡು ನನಗಾಗಿಯೇ ಎತ್ತಿಕೊಂಡು ನನ್ನ ಬಳಿಗೆಯೇ ಹಾಗೇ ನಡೆದು ಬಂದಿದ್ದೆ.


" ಪುಷ್ಯರಾಗ.. ತಗೊಳ್ಳಿ ಕೇಕ್ .." ಅಂದವಳ ಮಾತು ಎಲ್ಲೋ ನೋಡಿಕೊಂಡು ಸುಮ್ಮನೆ ತಲೆ ಕೆರೆದುಕೊಳ್ಳುತ್ತಾ ಉಳಿದಿದ್ದ ನನ್ನಲ್ಲಿ ಅಕ್ಷರಶಃ ಮಿಂಚಿನ ಸಂಚಾರವನ್ನೇ ಉಂಟುಮಾಡಿತ್ತು. 


ಅದೆಷ್ಟೋ ಹೊತ್ತು ನನ್ನನ್ನೇ ನೀನು ನೋಡುತ್ತಾ ನಿಂತಿದ್ದರೂ  ನಾನೊಂದು ಥ್ಯಾಂಕ್ಸ್ ಕೂಡ ಬಾಯಿಬಿಟ್ಟು ಹೇಳುವಷ್ಟು ಏಕೆ ಅಸಹಾಯಕನಾಗಿ ಹೋಗಿದ್ದೆ. ಆಗಲೂ ಉಡುಗೊರೆ ಕೊಡಬಹುದಿತ್ತು. ಆದರೆ ನಾನು ಎಷ್ಟಾದರೂ ನಾನು. ಹಾಗಾಗಿ ಅದು ನನ್ನಲ್ಲೇ ಉಳಿಯಿತು!


ಮುಂದೆಯೂ ನೀನು ಹಾಗೇ ಬಂದು ನನ್ನೆದುರಿನ ಗಾಜಿನಲ್ಲಿ ಬಿಂದಿ ಇಡುತ್ತಿದೆ. ಪುಟ್ಟಪುಟ್ಟ ಬಿಂದಿಗಳವು, ದಿನಕ್ಕೊಂದು ಬಣ್ಣ. ಜೊತೆಗೆ ನೀನು ದಿನವೂ ಬಿಡದೇ ಮೆಲ್ಲಗೆ ಗುನುಗುವ ಗಗನದ ಸೂರ್ಯ ಹಾಡು. ಆ ಹಾಡು ನಿಜಕ್ಕೂ ಯಾರಿಗಾಗಿ ಪುನರ್ವಸು?!


ನೀನೂ ಹೇಳಲಿಲ್ಲ... ನಾನೂ ಕೇಳಲಿಲ್ಲ... ನಮ್ಮಿಬ್ಬರ ಮಧ್ಯೆ ಕೊನೆಗೂ ಏನೆಂದರೆ ಏನೂ ಸಂಭವಿಸಲೇ ಇಲ್ಲ!! 


ಒಂದು ದಿನ ನಿನ್ನ ಹಣೆಗೊಬ್ಬ ಸಿಂಧೂರ ಇಟ್ಟ. ನಾನೂ ಇನ್ನೊಬ್ಬಳಿಗೆ ಸಿಂಧೂರ ಇಟ್ಟು ಈ ಬದುಕನ್ನು ಮತ್ತಷ್ಟು ಮುಂದುವರಿಸಿ ಬಿಟ್ಟೆ. ಹಾಗೇ ನಮ್ಮಿಬ್ಬರ ಬದುಕು ಮಗ್ಗಲು ಬದಲಾಯಿಸಿ ಬಿಟ್ಟಿತು. ನೀನು ಮರೆತು ಹೋದೆ, ಬಹುಶಃ ನಿನಗೆ ನಾನು ಕೂಡ.


ಪುನರ್ವಸು ನನ್ನ ಹೆಂಡತಿ ಒಂದು ದಿನ ನನ್ನಲ್ಲಿ ಒಂದು ಪ್ರಶ್ನೆ ಕೇಳಿದ್ದಳು.. " ಪುರು, ಎಂದಾದರೂ ಯಾರನ್ನಾದರೂ ನೀವು  ಪ್ರೀತಿಸಿದ್ದೀರಾ ಎಂದು...?"


" ಹಹ್ಹಾ ಹಹ್ಹಾ.. ನನ್ನನ್ನು ಯಾರು ಪ್ರೀತಿಸುತ್ತಾರೆ.. ಇಲ್ಲ.. ಇಲ್ಲ.. ಅಂತಹದ್ದು ಯಾವುದೂ ನಡೆದೇ ಇಲ್ಲ.." ಎಂದವಳಿಗೆ ನಗುತ್ತಾ  ಹೇಳಿದ್ದೆ ನಾನು. ನಿಜವಾಗಿಯೂ ಯಾರಾದರೂ ಪ್ರೀತಿಸಿದ್ದರೆ ನಾನೇಕೆ ಅವಳಿಗೆ ಹಾಗೇ ಹೇಳುತ್ತಿದ್ದೆ ಅಲ್ಲವೇ...! 


ಆಮೇಲೆ ನಮಗೂ ಮಕ್ಕಳಾದವು. ಒಂದು ಗಂಡು, ಇನ್ನೊಂದು ಹೆಣ್ಣು. ಆಮೇಲೆ ಅಂತು ನಾನು ನಿನ್ನನ್ನು ಸಂಪೂರ್ಣವಾಗಿಯೇ ಮರೆತು ಹೋದೆ. 


ನೀನು ನನಗೆ ಇನ್ನೊಮ್ಮೆ ನೋಡಲು ಸಿಗುವುದೇ ಇಲ್ಲ ಎಂದು ನಾನು ಅಂದುಕೊಂಡು ನಂಬಿಕೊಂಡು ಹೆಚ್ಚು ಕಡಿಮೆ ಹತ್ತು ವರ್ಷಗಳೇ ಆಗಿ ಹೋಗಿದ್ದವು. ಆದರೆ... ಆದರೆ ಅದೊಂದು ಸಂಜೆ ರಥ ಬೀದಿಯಲ್ಲಿ ಪುನರ್ವಸು ನೀನೇಕೆ ನನಗೆ ಮತ್ತೊಮ್ಮೆ ಸಿಕ್ಕಿಬಿಟ್ಟೆ!


ಅದೂ ಆ ರೀತಿಯಾಗಿ!!


ಸಿಗಬಾರದಿತ್ತು ನೀನು..!


ನೀನು ನನ್ನ ಕಣ್ಣಿಗೆ ಬಿದ್ದ ಕೂಡಲೇ ನನ್ನ ಎರಡೂ ಕಣ್ಣುಗಳು ಅರಸಿದ್ದು ನನಗೆ ಬಹಳಷ್ಟು ಪರಿಚಯವಿದ್ದ ನಿನ್ನ ಆ ಅಗಲದ  ಹಣೆಯೊಂದನ್ನಷ್ಟೇ ಪುನರ್ವಸು..


ಇಲ್ಲ..!


ಸಿಂಧೂರವಾಗಲಿ, ಪುಟ್ಟ ಬಿಂದಿಯಾಗಲಿ.. ಉಹೂಂ ಯಾವುದೂ ಇಲ್ಲ!


ಕೊರಳಲ್ಲಿ ಮಂಗಳಸೂತ್ರವೂ ಇಲ್ಲ!!


ನನಗೇನು ಪ್ರಶ್ನೆ ಕೇಳಬೇಕು ಎಂದು ತೋಚಲಿಲ್ಲ. ಹಾಗಾಗಿ ಏನನ್ನೂ ಕೇಳಲಿಲ್ಲ!


ನೀನೂ ಕೂಡ ನೀನಾಗಿ ನನಗೆ ಏನನ್ನೂ ಬಾಯಿ ಬಿಟ್ಟು ಹೇಳಲಿಲ್ಲ! 


ಪರಿಚಯಸ್ಥರು ಎಂಬ ಕಾರಣಕ್ಕೆ ಅದೊಂದು ಪುಟ್ಟ ಹೋಟೆಲಿನಲ್ಲಿ ಒಟ್ಟಿಗೆ ಕಾಫಿ ಕುಡಿದೆವು. ಯಾವ ಸುಖಕ್ಕೋ..


ಮಾತಿಲ್ಲ, ಕತೆಯಿಲ್ಲ. ಹೇಗೋ ಕಾಫಿ ಅದರಷ್ಟಕ್ಕೆ ಮುಗಿದು ಹೋಗಿತ್ತು. 


ಹೇಗಿದ್ದೀ ಎಂದು ಹೇಗೆ ಕೇಳಲಿ?  ನಾನು ಇಷ್ಟೊಂದು ಸುಖವಾಗಿದ್ದೇನೆ ಎಂದು ಹೇಗೆ ಬಾಯಿ ಬಿಟ್ಟು ಹೇಳಲಿ!! 


ಆ ದಿನದ ನಮ್ಮಿಬ್ಬರ ನಡುವಿನ ಮೌನಕ್ಕೆ ಅದೆಂತಹ ಭಾರ!


ಆದರೂ ಹೋಟೆಲಿನ ಕೈ ತೊಳೆಯುವ ಸಿಂಕ್ ಬಳಿ ಮುಖಕ್ಕೆ ನೀರು ಎರಚುತ್ತಾ ಯಾರಿಗೂ ಗೊತ್ತಾಗದಂತೆ ಕಣ್ಣೀರು ಒರೆಸುತ್ತಾ ನೀನು ಅದೇ ಹಾಡಿನ ಸಾಲನ್ನು ಮತ್ತೇಕೆ ಎತ್ತಿಕೊಂಡು  ಬಿಟ್ಟಿದೆ ಪುನರ್ವಸು..!! 


" ಗಗನದ ಸೂರ್ಯ ಮನೆ ಮೇಲೆ,

  ನೀ ನನ್ನ ಸೂರ್ಯ ಹಣೆ ಮೇಲೆ.."


ಆಮೇಲೆ ನೀನು ನನ್ನ ಎದುರಿಂದ, ನನ್ನ ಕಣ್ಣ ಮಂಜಿಂದ ಎದ್ದು ನಡೆದು ಹೋಗಿದ್ದೆ..! ಬಹುಶಃ ಶಾಶ್ವತವಾಗಿ!! 


ನೀನೇನೋ ಅಂದು ಕಣ್ಣೊರೆಸಿಕೊಂಡು ಎದ್ದು ಹೋಗಿದ್ದೆ  ಪುನರ್ವಸು. ಆದರೆ ನನ್ನೊಳಗಿನ ಪುಷ್ಯರಾಗ ಆ ಕ್ಷಣಕ್ಕೆನೇ ಆ ಹಳೆಯ ಗಾಜಿನ ಕೋಣೆಯಲ್ಲಿ ಮತ್ತೆ ಇನ್ನಿಲ್ಲದಂತೆ ಬಂಧಿ!! 


ನಿನಗೆ ಗೊತ್ತೇ ಪುನರ್ವಸು.. ನಿನ್ನ ಹುಟ್ಟು ಹಬ್ಬಕ್ಕಾಗಿ ನಾನಂದು ಬಹಳ ಆಸೆಪಟ್ಟು ಕೊಂಡುತಂದ ಉಡುಗೊರೆ ಇನ್ನೂ ನನ್ನ ಪರ್ಸಿನಲ್ಲೇ ಇದೆ. ಹೇಳು ಆ ಬಣ್ಣದ ಬಿಂದಿಗಳನ್ನು ನಾನಿನ್ನು ಏನು ಮಾಡಲಿ!!


.....................................................................................


  #ಪುಷ್ಯರಾಗ 🧡


- ಪಚ್ಚು ಕುಟ್ಟಿದಪಲ್ಕೆ

https://phalgunikadeyavanu.blogspot.com

Comments

Popular posts from this blog

VIKINGS - S06E20

ಪಯ್ಯನ ಪರಾಕ್ರಮ