ಪೆಟ್ಟ್ ಲಡಾಯಿಯ ದಿನಗಳು - 1
.
#ಲಡಾಯಿಯ_ದಿನಗಳು
'' ವಿಧಿಯ ಕೈವಾಡ..
ಆ ದಿನ ಎರಡು ಘಟನೆ ನಡೀತು...
ಆ ಜಾಗನೂ ಹುಟ್ತು.. ಅವನೂ ಹುಟ್ದ ...!! ''
ಬಸ್ ಅಲ್ಲಿ ನಿಂತುಕೊಂಡು ಹೋಗ್ತಾ ಇದ್ದೆ.
ಪುಲ್ಕಿ to ಮೂಡುಬಿದ್ರೆ.
ಅವರು ಯಾರೋ KGF ಮೂವಿಯ ದೊಡ್ಡ ಅಭಿಮಾನಿಯೇ ಇರ್ಬೇಕು.
ನಾನು ನಿಂತುಕೊಂಡಿದ್ದ ಪಕ್ಕದ ಸೀಟಿನಲ್ಲಿ ಕುಳಿತುಕೊಂಡು ತಮ್ಮ ಮೊಬೈಲ್ ನ YouTube ನಲ್ಲಿ ದೊಡ್ಡದಾಗಿ ಇಡೀ ಬಸ್ ಗೆ ಕೇಳುವಂತೆ,ಆ ಪಂಚಿಂಗ್ ಡೈಲಾಗ್ ಗಳನ್ನು ಪ್ಲೇ ಮಾಡ್ತಾ ಇದ್ರು.
ಬಸ್ ಅಲ್ಲಿ ನಿಂತುಕೊಂಡು ಅವರು Play ಮಾಡುವ ವೀಡಿಯೋ ವನ್ನು ಬಗ್ಗಿ ನೋಡ್ತಾ ಎಂಜಾಯ್ ಮಾಡ್ತಾ ಇದ್ದೆ.
ಒಂದರ ಹಿಂದೆ ಒಂದು KGF Top 25 Powerful Dialogues.. .
ನನಗೂ KGF ಪಂಚಿಂಗ್ ಡೈಲಾಗ್ ಗಳು ಬಹಳಾನೇ ಇಷ್ಟ.
ಅವರ ಮೊಬೈಲ್ ನಲ್ಲಿ ನಿರಂತರವಾಗಿ ಡೈಲಾಗ್ ಗಳು ಮುಂದುವರಿದಿತ್ತು.
''ಗಾಯಗೊಂಡಿರುವ ಸಿಂಹದ ಉಸಿರು.. ಘರ್ಜನೆಗಿಂತ ಭಯಂಕರವಾಗಿರುತ್ತದೆ.''
" 17 ಸಾವಿರ ವರ್ಷದ ಯುದ್ಧದ ಇತಿಹಾಸದಲ್ಲಿ ಕದನಗಳೆಷ್ಟೋ ನಡೆದಿದೆ. ಎಷ್ಟೋ ನೆತ್ತರು ಹರಿದಿದೆ. ಆದರೆ, ನಮ್ಮ ನೆನಪಿನಲ್ಲಿ ಉಳಿಯುವವರು ಇಬ್ಬರೇ. ಭಯ ಹುಟ್ಟಿಸಿದವನು,ಭಯ ಸಾಯಿಸಿದವನು.. ಇವನು ಅವೆರಡೂ ಮಾಡಿದ್ದ! ''
ಆಗಲೇ ಮೊಬೈಲ್ ರಿಂಗ್ ಆಗಿದ್ದು.
ಕಿಸೆ(ಜೇಬು)ಯಿಂದ ಮೊಬೈಲ್ ತೆಗೆದು ನೋಡಿದೆ...
" ಪೊಲ್ಲ ಬೈಲು ಮನೆ..." ಅಂತ ಕಾಲ್ ಬರ್ತಾ ಇತ್ತು.
ಪೊಲ್ಲ ಅಂದರೆ ಅದೇ ಪುರಂದರ್.ಅದೇ ನನ್ನ ಹೈಸ್ಕೂಲ್ ಭಗ್ನ ಪ್ರೇಮ ಕಥೆಯ ನಾಯಕಿ,ಬಾಲ್ಯದಲ್ಲಿ ಕೈ ಕೈ ಹಿಡಿದು ಒಟ್ಟಿಗೆ ನಡೆದ ನನ್ನ ಬೆಸ್ಟ್ ಫ್ರೆಂಡ್ ಕಾಂತಪ್ಪಣ್ಣನವರ ಪ್ರಥಮ ಪುತ್ರಿ ರಾಧ(ಅನುರಾಧ)ನ ತಮ್ಮ.
ಕಾಂತಪ್ಪಣ್ಣನ ಮತ್ತೊಬ್ಬಳು ಮಗಳು ರುಕ್ಕು(ರುಕ್ಮಿಣಿ)
ಈ ಪೊಲ್ಲ ಯಾಕೆ ಕಾಲ್ ಮಾಡಿದ ಅಂತ ಗೊತ್ತಾಗ್ಲಿಲ್ಲ...
ಕಾಲ್ ಎತ್ತಿದೆ...
ಪೊಲ್ಲ... ಎಂತದಾ ವಿಷಯ...ಕೇಳಿದೆ.
ನೀಲು ಅಣ್ಣಾ ... ನೀನು ರಪ್ಪ ಈಗ ಮೂಡುಬಿದ್ರೆಗೆ ಬಾ.. ತುಂಬಾ ಅರ್ಜೆಂಟ್ ಮ್ಯಾಟರ್... ಭಯಂಕರ ಟೆನ್ಶನ್ ನಲ್ಲಿ ಹೇಳಿದ.
ಎಂತದಾ ಅಂತಹ ತಲೆ ಹೋಗುವ ವಿಷಯ..
ತಲೆ ಹೋಗುವ ವಿಷಯ ಅಲ್ಲ..ತಲೆ ತೆಗೆಯುವ ವಿಷಯ..!!
ಅಂದ್ರೆ..?
ಒಬ್ಬನಿಗೆ ಇವತ್ತು ಸರಿಯಾಗಿ ಕೊಡ್ಲಿಕ್ಕೆ ಉಂಟು,ಬೇಗ ಬಾ ನೀನು..!!
ಹೋಡಿಲಿಕ್ಕಾ?! ಯಾರಿಗೆಯಾ.. ಓ ಮಾರಿ..?
ಒಬ್ಬ ಇಲ್ಲಿ ರೋಡ್ ರೋಮಿಯೋ ನನ್ನ ರುಕ್ಕು ಅಕ್ಕನಿಗೆ ಬಹಳ ದಿನದಿಂದ ಕಾಟ ಕೊಡ್ತಾ ಇದ್ದಾನೆ ನೀಲಣ್ಣ ..
ಈಗ ಇಲ್ಲೇ ಎದುರಲ್ಲೇ ಇದ್ದಾನೆ. ಬೇಗ ಬಾ.. ಬಂದು ಅವನನ್ನು ಚಚ್ಚಿ ಹಾಕು...!
ಮತ್ತೆ ನೀನು ಅಲ್ಲಿ ನಿಂತ್ಕೊಂಡು ಏನು ಕತ್ತೆ ಕಾಯ್ತಾ ಇದ್ದೀಯಾ.. ಕೇಳಿದೆ.
ನೀನೇ ಅಲ್ಲ.. ನಾನು ಕೇಳದೇ ಇದ್ರು ಪದೇ ಹೇಳ್ತಾ ಇದ್ದದ್ದು... ಏನೇ ಪೆಟ್ಟ್ ಲಡಾಯಿ ಇದ್ರೂ ನನ್ನನ್ನು ಕರಿ ಪೊಲ್ಲ.ನಿಂಗೆ ಅಂತ ನಾನು ಇದ್ದೀನಿ. ನಾನು ಇರುವಾಗ ನಿನ್ನನ್ನು ಒಂದು ಇರುವೆ ಕೂಡ ಟಚ್ ಮಾಡ್ಲಿಕ್ಕೂ ಬಿಡಲ್ಲ ಅಂತ.ಈಗ ಅಂತಹ ಒಂದು ಸುಸಂದರ್ಭ ಬಂದಿದೆ.ಬಂದು ಅವನನ್ನು ಚಚ್ಚಿ ಬಿಸಾಕು.ನಾನು ಅವನಿಗೆ ಈಗ ವಾರ್ನ್ ಮಾಡಿ ಆಗಿದೆ..ನನ್ನ ಅಣ್ಣ ಈಗ ಬಂದು ನಿನ್ನನ್ನು ಚಿಂದಿ ಚಿತ್ರಾನ್ನ ಬೂಂದಿ ಮೊಸರನ್ನ ಮಾಡ್ತಾನೆ ಎಂದು..
ಬೇಗ ಬಾ ಸ್ವರಾಜ್ಯ ಮೈದಾನದ ಕಡೆಗೆ...ನಾನು, ರುಕ್ಕು ಅಕ್ಕ.. ಹಾಗೂ ನಮ್ಮ ಎದುರೇ ಆ ಕಿಡಿಗೇಡಿ ಕೂಡ ಇಲ್ಲೇ ನಿಂತಿದ್ದಾನೆ....ನಿನಗಾಗಿ! "
ಅಂತ ಹೇಳಿ ಕಾಲ್ ಕಟ್ ಮಾಡಿದ ಪೊಲ್ಲ!
ಈ ಬಡ್ಡಿಮಗ ಕೇವಲ ಅಷ್ಟೇ ಹೇಳಿರ್ಲಿಕ್ಕಿಲ್ಲ.ಖಂಡಿತಾ ಏನೋ Extra ಹೇಳಿರ್ತಾನೆ.. ಅದಕ್ಕೆ ಆ ರೋಡ್ ರೋಮಿಯೋ ಕೂಡ ನನ್ನೊಂದಿಗೆ ಪೆಟ್ ಲಡಾಯಿ ಮಾಡಲು ಕಾಯ್ತಾ ಇದ್ದಾನೆ...
ಶೇ.. ನಾನು ಪೊಲ್ಲನಿಗೆ ಒಟ್ರಾಸಿ ಆಶ್ವಾಸನೆ ಕೊಡ್ಲಿಕ್ಕೆ ಹೋಗ್ಬಾರ್ದಿತ್ತು.ಅವನು ನನ್ನನು ಏನೋ ಒಂದು ದೊಡ್ದ ಪೆಟ್ಟಿಸ್ಟ್ ಅಂತ ತಿಳ್ಕೊಂಡು ಬಿಟ್ಟಿದ್ದಾನೆ ಈಗ..
ಇರ್ಲಿ ಆದ್ರೂ ಸ ನಾನು ಹೋಗ್ಲೇ ಬೇಕು.ಇದು ಒಂದು ಹುಡುಗಿಯ, ಅದರಲ್ಲೂ ನಮ್ಮ ರುಕ್ಕುವಿನ ಮಾನ ಪ್ರಾಣದ ಪ್ರಶ್ನೆ..ಹೋಗುವುದೇ ಅವನನ್ನು ಹಣ್ಣುಗಾಯಿ ನೀರುಗಾಯಿ ಮಾಡುವುದೇ ಅಂತ ದೃಡ ನಿರ್ಧಾರ ಮಾಡಿದೆ.
ಆದ್ರೆ ಸ ನಾನೇನು ಅಂತಹ ದೊಡ್ಡ ಪೆಟ್ಟಿಸ್ಟ್ ಅಲ್ಲ ಆಯ್ತಾ... ಸುಮ್ನೆ ನಾನು ಆವಾಗವಾಗ ಆ ಪೊಲ್ಲ ಸಿಕ್ಕಿದಾಗ ಬಿಲ್ಡ್ ಅಪ್ ಗೆ ಅಂತ ಡೈಲಾಗ್ ಬಿಡ್ತಾ ಇದ್ದದ್ದು ಅಷ್ಟೇ...
ಈಗ ಆ ಕಿಡಿಗೇಡಿ ಖಂಡಿತ ನನಗೆ ಹೋಡಿಲಿಕ್ಕೆ ಅಂತ ಅವನ ಗ್ಯಾಂಗ್ ಗೆ ಫೋನ್ ಮಾಡಿ ಕರೆಸಿ ಇರ್ತಾನೆ.ಅವನು ನಿಜವಾಗಿಯೂ ಕೇಡಿ ಆಗಿದ್ರೆ..ಈ ಮಾರಿ ಪೊಲ್ಲನ ಡೈಲಾಗ್ ಕೇಳಿ ಖಂಡಿತ ಒಂದಷ್ಟು ಜನರನ್ನು ಈಗ ಒಟ್ಟು ಸೇರಿಸಿಯೇ ಇರ್ತಾನೆ..!!
ನೆನೆದು ಒಮ್ಮೆ ಭಯ ಆಯ್ತು.
ಸೀಟಿನಲ್ಲಿ ಕೆಳಗೆ ಕುಳಿತವನ ಮೊಬೈಲ್ ನಲ್ಲಿ KGF ಡೈಲಾಗುಗಳು ಮುಂದುವರಿದಿತ್ತು...
"ಒಂದು ಹೊಟೆದಾಟದಲ್ಲಿ ಯಾರು ಮೊದಲು ಹೊಡುದ್ರು ಎನ್ನುವುದು ಲೆಕ್ಕಕ್ಕೆ ಬರಲ್ಲ.ಯಾರ್ ಮೊದಲು ಕೆಳಗೆ ಬಿದ್ರು ಅನ್ನೊದೇ ಲೆಕ್ಕಕ್ಕೆ ಬರೋದು.''
ಡೈಲಾಗ್ ನ ಎರಡನೇ ಸಾಲಿನ ಬಗ್ಗೆ ನನಗೆ ಅಂತಹ ಖಚಿತತೆ ಇರಲಿಲ್ಲ.ಆದ್ರೆ ನಾನೇ ಹೊಡೆತ ತಿನ್ನುವ ಸಾಧ್ಯತೆಯ ಬಗ್ಗೆ ಅರಿವಿತ್ತು.
ಅವರ ಮೊಬೈಲ್ ನಲ್ಲಿ ಇನ್ನೊಂದು ಡೈಲಾಗ್..
" ಹೊರಟ.. ಅವನಿಗೆ ಹೋಗುತ್ತಿದ್ದ ದಾರಿ ಬಗ್ಗೆನೂ ಗೊತ್ತಿರಲಿಲ್ಲ. ತಲುಪುವ ಜಾಗದ ಬಗ್ಗೆಯೂ ಗೊತ್ತಿರಲಿಲ್ಲ.ಅದರ ಅಮಾನುಷ ಚರಿತ್ರೆ ಬಗ್ಗೆನೂ ಗೊತ್ತಿರಲಿಲ್ಲ .''
ದಾರಿ ಸ ಗೊತ್ತಿತ್ತು...ಜಾಗ ಸ ಗೊತ್ತಿತ್ತು.. ಆದ್ರೆ ನಾನು ಈಗ ಪೆಟ್ ಮಾಡ್ಲಿಕ್ಕೆ ಹೋಗುತ್ತಿರುವ ಆ ಕೇಡಿ ಗ್ಯಾಂಗ್ ಗೆ ಅಂತಹ ಅಮಾನುಷ ಚರಿತ್ರೆ ಇರ್ಬಹುದಾ..?!! ನೆನೆದು ಭಯ ಇದ್ದಕ್ಕಿದ್ದಂತೆ ಜಾಸ್ತಿ ಆಯಿತು...
ಕೊನೆಗೂ ಬಸ್ ಸ್ಟ್ಯಾಂಡ್ ತಲುಪಿತು ಬಸ್ಸ್.
ಭಯದಿಂದಲೇ ಮೂಡುಬಿದಿರೆ ಬಸ್ ಸ್ಟ್ಯಾಂಡ್ ನಿಂದ ಸ್ವರಾಜ್ಯ ಮೈದಾನಕ್ಕೆ ಹೋಗಲು ಒಂದು ರಿಕ್ಷಾ ಹಿಡಿದೆ..
ರಿಕ್ಷಾ ವೇಗವಾಗಿ ಸ್ವರಾಜ್ಯ ಮೈದಾನದ ಕಡೆಗೆ ಓಡುತ್ತಿತ್ತು..
ಮನಸ್ಸಿನಲ್ಲಿ ಮಾತ್ರ ಬಸ್ ಅಲ್ಲಿ ಕೇಳಿದ ಈ KGF ಡೈಲಾಗ್ ಓಡ್ತಾ ಇತ್ತು.
"'ನಿನ್ನ ಬೆನ್ನ ಹಿಂದೆ ಸಾವಿರ ಜನ ನಿಂತಿದ್ದಾರೆ ಅನ್ನೋ ಧೈರ್ಯ ನಿನಗೆ ಇದ್ರೆ,ಬರಿ ಒಂದು ಯುದ್ಧ ಗೆಲ್ಬಹುದು.ಅದೇ ನೀನು ಮುಂದೆ ನಿಂತಿದ್ದೀಯಾ ಅಂತ ಹಿಂದೆ ಇರೋ ಸಾವಿರ ಜನಕ್ಕೆ ಧೈರ್ಯ ಬಂದ್ರೆ ಈ ಪ್ರಪಂಚನೇ ಗೆಲ್ಬಹುದು..''.
ಇದು..ಇದು ಡೈಲಾಗ್ ಅಂದ್ರೆ.
ನನ್ನ ಬೆನ್ನ ಹಿಂದೆ ಸಾವಿರ ಜನ ಏನು ಇರ್ಲಿಲ್ಲ. ರುಕ್ಕು ಮತ್ತು ಪೊಲ್ಲ ಇಬ್ಬರು ಮಾತ್ರ ಇದ್ದರು.
ಆದ್ರೂ ಆ ಡೈಲಾಗ್ ನೆನಪಾಗಿ ಒಟ್ರಾಸಿ ಧೈರ್ಯ ಬಂತು ನನಗೆ.
ಸ್ವರಾಜ್ಯ ಮೈದಾನದಲ್ಲಿಯೇ ಇಳಿದೆ.
ರುಕ್ಕು ಮತ್ತು ಪೊಲ್ಲ ಅಲ್ಲೇ ಒಂದು ಕಡೆ ನಿಂತಿದ್ರು.
ಪೊಲ್ಲ ನನ್ನನ್ನು ದೂರದಿಂದ ನೋಡಿದವನೇ.. ನೀಲು ಅಣ್ಣಾ.. ಬಾ ಇಲ್ಲಿ ಇಲ್ಲಿ... ಎಂದು ಜೋಶ್ ನಿಂದ ನನ್ನನೇ ಕರೆದ.
ಅವನ ಜೋಶ್ ನನಗೆ ಭಯ ಹುಟ್ಟಿಸುತ್ತಿತ್ತು.
ನಿಧಾನವಾಗಿ ಸ್ಟೈಲ್ ಆಗಿ ಹೀರೋ ರೇಂಜಿಗೆ ನಡೆದು ಹೋದೆ...
ರುಕ್ಕು ನನ್ನನ್ನು ನೋಡಿ ನಕ್ಕಳು. ನನಗಿಂತ ಎರಡು ವರ್ಷ ಚಿಕ್ಕವಳು ಅಷ್ಟೇ. ಅವಳು ಕೂಡ ನನಗೆ ಒಂಥರಾ ಬಾಲ್ಯದ ಫ್ರೆಂಡೇ..
ಎಲ್ಲಿದ್ದಾನೆ ನಿನ್ನನ್ನು ಛೇಡಿಸಿದ ಆ ಅಧಮ... ಎಂದು ಫಿಲ್ಮಿ ಸ್ಟೈಲ್ ಅಲ್ಲಿ ರುಕ್ಕುವಿನ ಬಳಿಯೇ ಕೇಳಿದೆ..
ಓಹ್ ಅಣ್ಣಾ... ಪೌರಾಣಿಕ ಡೈಲಾಗ್ ಸಾಕು.ನೋಡು ಅಲ್ಲಿದ್ದಾನೆ ಅವನು.. ಎಂದು ನಡುವಲ್ಲಿ ಬಾಯಿ ಹಾಕಿದ ಪೊಲ್ಲ..ಅಲ್ಲೇ ದೂರದಲ್ಲಿ ನಿಂತಿದ್ದ ಕೇಡಿಯನ್ನೇ ಕರೆದು ಪೊಲ್ಲ ಹೇಳಿದ..
ಬಾರೋ.. ನನ್ನ ಅಣ್ಣಾ ಬಂದಿದ್ದಾನೆ..ಧಮ್ ಇಂದ್ರೆ ಇವನನ್ನು ಹೊಡಿಯೋ..!
ಈ ಬಡ್ಡಿಮಗ ಪೊಲ್ಲ ನಾನು ಆ ಕೇಡಿಗೆ ಹೋಡಿಲಿಕ್ಕೆ ಅಂತ ನನ್ನನ್ನು ಕರೆಸಿದ್ದಾ... ಅಥವಾ ನಾನೇ ಅವನ ಕೈಯಲ್ಲಿ ಒದೆ ತಿನ್ಲಿ ಅಂತ ನನ್ನನ್ನು ಕರೆಸಿದ್ದಾ ಅಂತ ನನಗೆನೇ Confuse ಆಯಿತು.
ಆ ಹುಡುಗ ಒಬ್ಬನೇ ಇದ್ದ. ಸರಿಯಾಗಿ ಅವನನ್ನೇ ನೋಡಿದೆ..
ಯೆಬೆ.. ಇವನೆಂತ ಇಷ್ಟು ಸಣ್ಣ ಇದ್ಧಾನೆ. ವಯಸ್ಸಿನಲ್ಲಿ ಹೆಚ್ಚಂದ್ರೆ ಪೊಲ್ಲನಿಗಿಂತ ಸ್ವಲ್ಪ ದೊಡ್ಡ ಇರ್ಬಹುದು ಅಷ್ಟೇ. ಇವನಿಗೆ ನಾನು ಎರಡು ಕೊಟ್ರೆ ಇವನು ಇಲ್ಲೇ ಖಲಾಸ್ ಆಗ್ಬಹುದು.ಸಿಕ್ಕಿದ್ದೇ ಚಾನ್ಸ್.. ಇವನನ್ನು ಬಿಡ್ಬಾರ್ದು..ನಾನು ಇವನನ್ನು ಈಗಲೇ ಚಚ್ಚಿಬಿಡುವೆ.ಅಂದು ಕೊಂಡು ನೇರವಾಗಿ ಅವನ ಬಳಿ ಹೋಗಿ..
ಏನೋ ನಮ್ಮ ಹುಡುಗಿಗೆನೇ ಕಿರಿಕ್ ಮಾಡ್ತೀಯಾ... ಮನೆಯಲ್ಲಿ ಯಾರೂ ಅಕ್ಕ ತಂಗಿ ಇಲ್ವಾ ಎಂದು ತೆಗೆದು ಎರಡು ಕೆನ್ನೆಗೆ ಸರಿಯಾಗಿ ಬಿಟ್ಟೆ.....
ಅವನ ಮುಗಿನಲ್ಲಿ ರಕ್ತವೇ ಸುರಿಯಿತು....!
ಅದನ್ನು ಕಂಡು ನನಗೆಯೇ ಹೆದರಿಕೆ ಆಯಿತು ಒಮ್ಮೆ .. ಅಷ್ಟು ಜೋಶ್ ನಲ್ಲಿ ನಾನು ಹೊಡಿಬಾರ್ದು ಇತ್ತು ಅಂತ.
ಅವ ತನ್ನ ಕೈ ಯಿಂದ ಮೂಗು ಮುಟ್ಟಿ ನೋಡಿದ.ಕೈ ತುಂಬಾ ರಕ್ತ...ಆ ಹುಡುಗ ನಿಜವಾಗಿಯೂ ಭಯ ಪಟ್ಟ..!!
ಪೊಲ್ಲ ನಿಧಾನವಾಗಿ ಅವನ ಬಳಿ ನಡೆದು ಹೋಗಿ ಸ್ಟೈಲ್ ಅಲ್ಲಿ ಹೇಳಿದ..
"ಬರೀ ಒಂದು ಬೊಗಸೆ ರಕ್ತ ನೋಡಿ ಇಷ್ಟೊಂದು ಹೆದರ್ತಿಯಾ ಅಂದ್ರೆ..ಇನ್ನು ರಕ್ತ ನದಿಯಾಗಿ ಹರಿಯುವುದಕ್ಕೆ ಮುಂಚೆನೇ ಇಲ್ಲಿಂದ ಹೊರಟ್ಬಿಡು..ಅಷ್ಟೇ 😡😡"
ಇಲ್ಲಿ ಸ KGF ಡೈಲಾಗ್..
ನನಗೆ ಯಾಕೋ ಈ ಪೊಲ್ಲ ಕೂಡ KGF ನ ಫ್ಯಾನ್ ಅಂತ ಅನಿಸಿತು.
ತನ್ನ ಮುಖ ಎಲ್ಲಾ ಒರೆಸಿಕೊಂಡ ಮೇಲೆ,ಆ ಹುಡುಗ ಡೈರೆಕ್ಟ್ ಆಗಿ ನನಗೆ ಹೇಳ್ದ..
- ನಿನಗೆ ನನ್ನ ವಿಷಯ ಗೊತ್ತಿಲ್ಲ...
ನಾನು ಯಾರ ಕಡೆಯ ಹುಡುಗ ಅಂತ..
ತಪ್ಪು ಮಾಡಿ ಬಿಟ್ಟೆ...
ನಮ್ಮಣ್ಣನಿಗೇನಾದರೂ ಈ ವಿಷಯ ಗೊತ್ತಾದರೆ,ನಿನ್ನ ಬೋಟಿ.. ಬೋಟಿ ತೆಗೆದು ಬಿಡ್ತಾರೆ. 😡😡
ಯಾರೋ... ಯಾರೋ ನಿನ್ನ ಅಣ್ಣ... ಅವನೇನು ಈ ಊರಿಗೆ ದೊಡ್ಡ ಡಾನ್ a? ಪೊಲ್ಲ ಕೇಳಿದ..!
ಆ ಹುಡುಗ ಹೇಳಿದ..
ಹೆಸರು ಕೇಳಿದ್ರೆ ಊರು ನಡುಗುತ್ತೆ..
ಫೀಲ್ಡ್ ಗೆ ಬಂದ್ರೆ ಭೂಮಿ ಅದುರುತ್ತೇ..!
ಏನು ನಿಮ್ಮ ಅಣ್ಣ ಜೆ.ಸಿ.ಬಿ ಡ್ರೈವರಾ..? ಪೊಲ್ಲ ಕೇಳಿದ..
ಅದನ್ನು ಕೇಳಿ ನನಗೆಯೇ ನಗು ಬಂತು.
ಅದಕ್ಕೆ ಹುಡುಗ ಅಂದ..
- ಬಾಬು.... ಬ್ಲೇಡ್ ಬಾಬು..!!
ಆಗಲೇ ನನಗೆ ನಾನು ಅದೆಂತಹ ಅತಿಮಾನುಷರ ಜನರ ಮೇಲೆ ಕೈ ಮಾಡಿದ್ದೇನೆ ಎಂದು ಗೊತ್ತಾಗಿದ್ದು!
ಈ ಮರ್ಲ(ಹುಚ್ಚ) ಪೊಲ್ಲ ಅವನನ್ನು ಏಕೆ ಇಷ್ಟೊಂದು ಪ್ರಚೋದಿಸುತ್ತಾನೆ ಎಂದು ನನಗೆ ಗೊತ್ತಾಗಲಿಲ್ಲ..
ಹೇಯ್ ಹೋಗಾ.. ಹೋಗಾ,ಬ್ಲೇಡ್ ಬಾಬು ಬರ್ಲಿ,ಬಿಸಿತ್ತಿ ಬಾಬು ಬರ್ಲಿ...ಅವನ ಅಪ್ಪ ಬರ್ಲಿ, ಬೇಕಾದರೆ ನಿಮ್ಮ ದೊಡ್ಡ ರೌಡಿ ಗ್ಯಾಂಗೇ ಬರ್ಲಿ..ನಮ್ಮ ಸೈಡ್ ನೀಲು ಬ್ರೋ ಇದ್ಧಾನೆ.
" 'ಗ್ಯಾಂಗ್ ಕಟ್ಕೊಂಡು ಬರೋನು ಗ್ಯಾಂಗ್ ಸ್ಟರ್..
ಇವನು ಒಬ್ನೇ ಬರೋನು.. ಮೊನ್ ಸ್ಟಾರ್ ''
ನನ್ನ ಕಡೆಗೆ ಕೈ ತೋರಿಸಿ ಇನ್ನೊಂದು KGF ಡೈಲಾಗ್ ಬಿಟ್ಟ ಪೊಲ್ಲ..
ಹೌದಾ.. ನಿಮ್ಮ ಅಣ್ಣಂಗೆ ಅಷ್ಟೊಂದು ತಾಕತ್ ಇದೆಯಾ..ಅವ ಹೇಳಿದ.
ಪೊಲ್ಲ ಮುಂದುವರಿಸಿ ಹೇಳಿದ..
- ಸೇಮ್ ಪ್ಲೇಸ್.. ಸೇಮ್ ಟೈಂ.. ನಮ್ಮ ಅಣ್ಣ ನಾಳೆ ಒಬ್ನೇ ಬರ್ತಾನೆ... ಬಂದು ಒದೆ ತಿನ್ನೋಕೆ ನಿಮ್ಮ ಅಣ್ಣ ರೆಡಿಯಾ?
ಆಯಿತು ಹಾಗಾದರೆ, ನಾಳೆ ಸರಿಯಾಗಿ ಐದು ಗಂಟೆಗೆ.. ಇಲ್ಲೇ ಮತ್ತೆ ಸಿಗುವ,ಯಾರು ಯಾರಿಗೆ ಕೊಡ್ತಾರೆ ಗೊತ್ತಾಗಿಯೇ ಬಿಡ್ಲಿ... ನನ್ನನೇ ಒಮ್ಮೆ ಮೇಲೆ ಕೆಳಗೆ ನೋಡಿ ಆ ಹುಡುಗ ಅಲ್ಲಿಂದ ಹೋದ.
ಅವನು ನೋಡಿದ Reaction ಹೇಗಿತ್ತು ಎಂದರೆ.. ಬಾ ಮಗನೇ.. ನಿನಗೆ ಇದೆ ನಾಳೆ ಹಬ್ಬ.. ಎಂಬಂತಿತ್ತು.
ಪೊಲ್ಲ ಸುಮ್ನಿರ್ಲಿಲ್ಲ.ಅಲ್ಲಿಂದ ಹೋಗುತ್ತಿರುವ ಅವನನ್ನು ಮತ್ತೆ ಕರೆದು ಹೇಳಿದ.ಐದು ಗಂಟೆ ಅಲ್ಲ.ನಾವು ಅರ್ಧ ಗಂಟೆ ಮೊದಲೇ ಇರ್ತೀವಿ.ಮಿಸ್ ಮಾಡ್ಬೇಡ..ನಾಳೆ ನಿಮಗೆಲ್ಲಾ ಇದೆ ಮಾರಿ ಹಬ್ಬ!!
ನನಗೆ ಯಾಕೋ ಈ ಪೊಲ್ಲ ಬಗಲ್ ಮೇ ಬಹುತ್ ಬಡಾ ದುಶ್ಮನ್ ತರಹ ಅನಿಸಿತು..
ಪುನಃ ಬಸ್ ಹಿಡಿದೇ ಮೂವರೂ ಪುಲ್ಕಿಯ ಕಡೆಗೆ ಹೊರೆಟೆವು..
ನಾನು, ರುಕ್ಕು, ಪೊಲ್ಲ ಬಸ್ಸಿನಲ್ಲಿ ಒಂದೇ ಸೀಟಿನಲ್ಲಿ ಒಟ್ಟಿಗೆ ಕುಳಿತುಕೊಂಡೆವು.
ರುಕ್ಕು ಹೇಳಿದಳು..
- " ಎಲ್ಲ ಸಿನಿಮಾಗಳಲ್ಲಿಯೂ ಒಬ್ಬ ಇರ್ತಾನಂತಲ್ಲ ನಿಮ್ಮನ್ನ ನೋಡಿದ್ರೆ ನನಗೆ ಹಾಗೆ ಅನ್ಸುತ್ತೆ... "
ಓಹ್.. ಇವಳು ಕೂಡ Yash ಫ್ಯಾನ್ ಇರ್ಬೇಕು ಅನ್ಕೊಂಡೆ.
ನಾನು ಕೂಡ.. ಅದೇ ಸ್ಟೈಲ್ ಅಲ್ಲಿ ಕೇಳಿದೆ..
ಯಾರು 'ಹೀರೋ ನಾ?'
ಅಲ್ಲ 'ವಿಲನ್...' ಅಲ್ಲೇ ಇದ್ದ ಪೊಲ್ಲ ಮಧ್ಯೆ ಬಾಯಿ ಹಾಕಿ ಹೇಳಿದ.
ಇವನು ಯಾರು ಮರ್ರೆ ನನ್ನನ್ನು ಏನು ಅಂತ ತಿಳ್ಕೊಂಡಿದ್ದಾನೆ.. ಸಾವ್.
ಪುನಃ ರುಕ್ಕು ರಾಗವಾಗಿ ಕೇಳಿದಳು..
- ನೀವು ತುಂಬಾ ಚೆನ್ನಾಗಿ ಪೈಟ್ ಮಾಡಿದ್ರಿ..ಥ್ಯಾಂಕ್ಸ್
ಅವಳು ಮುದ್ದು ಮುದ್ದಾಗಿ ಮಾತಾಡಿದರೂ ಸ್ವಲ್ಪ ಪೆದ್ದಿಯೇ ಆಯ್ತಾ.ಬಹುಶಃ ಅದಕ್ಕೆ ಇರ್ಬೇಕು ಆ ರೋಡ್ ರೋಮಿಯೋ ಇವಳ ಹಿಂದೆ ಬಿದ್ದದ್ದು.ನಿಜ ಹೇಳಬೇಕೆಂದರೆ ರುಕ್ಕು ಕೂಡ ತುಂಬಾ ಚಂದವೇ. ಸೇಮ್ ಅವಳ ಅಕ್ಕ ರಾಧ(ಅನುರಾಧ)ಳ ಹಾಗೆ.
ಅದಕ್ಕೆಲ್ಲ ಎಂತಕ್ಕೆ ಥ್ಯಾಂಕ್ಸ್.ಇಂತಹದ್ದೆಲ್ಲ ಪೆಟ್ ಲಡಾಯಿ ನಾವು ಎಷ್ಟು ಮಾಡ್ಲಿಲ್ಲ ಹೇಳು..ಅಂದೆ ನನಗೆ ನಾನೇ ಬಿಲ್ಡಪ್ ಕೊಡುತ್ತಾ..
ಅಲ್ಲೇ ಇದ್ದ ಪೊಲ್ಲ ಹೇಳಿದ..ಅಕ್ಕ ಇದೆಂತ ಪೈಟ್...ಇದಕ್ಕೆ ಯಾರಾದರೂ ಫೈಟ್ ಅಂತಾರ,ಇದೆಲ್ಲಾ ಲಾಟ್ ಪೋಟ್(ಸಣ್ಣ ಪುಟ್ಟ)ಲಡಾಯಿ ಅಷ್ಟೇ,ನಿಜವಾದ Action ಇರೋದು ನಾಳೆ.ಇದೆ..ನಾಳೆ ಇದೆ ಅವರಿಗೆ ಮಾರಿ ಹಬ್ಬ.
ನನಗೆ ಅವನ ಮಿತಿಮೀರಿದ ಉತ್ಸಾಹ ಕಂಡು, ನಗರದ ಅಷ್ಟು ದೊಡ್ಡ ಪ್ರಖ್ಯಾತ ರೌಡಿ ಬ್ಲೇಡ್ ಬಾಬು ನೆನಪಾಗಿ ನಿಜವಾಗಿಯೂ ಮಾರಿ ಹಬ್ಬ ಅವರಿಗೆ ಇರುವುದಾ ಅಥವಾ ನನಗೆ ಇರುವುದಾ ಅಂತ ಇನ್ನೊಮ್ಮೆ ಭಯ ಆಯಿತು.
ಈ ಮಾರಿ ಪೊಲ್ಲನೊಟ್ಟಿಗೆ ನಾನು ಸೇರ್ಬಾರ್ದಿತ್ತು ಅಂತ ನನಗೆ ಮೊದಲ ಬಾರಿಗೆ ಅನಿಸಿತು.ಏಕೆಂದರೆ ಈಗ ನನ್ನ ಪ್ರಾಣವೇ ಸಂಚಕಾರದಲ್ಲಿದೆ.
ಅದು ಬೇರೆ ಆ ಕಡೆಯವರನ್ನು ಸಿಕ್ಕಾಪಟ್ಟೆ ಪ್ರಚೋದಿಸಿ ಬಂದಿದ್ದಾನೆ ಈ ಪೊಲ್ಲ.ಈಗ ಅವರು ನನ್ನನ್ನು ಸುಮ್ಮನೆ ಬಿಡ್ತಾರ.ಹೈಸ್ಕೂಲ್ ಅಲ್ಲಿ, ಕಾಲೇಜ್ ಅಲ್ಲಿ ಸಣ್ಣಪುಟ್ಟ ಕ್ಲಾಸ್ ಪೈಟ್ ಗಳಲ್ಲಿ ನಾನು ಸಕ್ರೀಯವಾಗಿ ಭಾಗವಹಿಸಿದ್ದು ನಿಜ. ಆದರೆ ಈ ತರಹ ಎಲ್ಲಾ ನಾನು ಬೀದಿ ರೌಡಿ ಅಲ್ಲ.ಆದ್ರೆ ಇವನಿಗೆ ಯಾಕೆ ಮರ್ರೆ ಇದು.
ನಂತರ ಪುಲ್ಕಿಯಲ್ಲಿ ಬಸ್ ಇಳಿದು ಅವರಿಬ್ಬರು ಅವರ ಬೈಲು ಮನೆಗೆ ಹೋದರು.ನಾನು ನಮ್ಮ ಮನೆ "ಶ್ಯಾಮ" ನಿಲಯಕ್ಕೆ ಬಂದೆ.
ಹೋಗುವಾಗಲೂ ಪೊಲ್ಲ ತಿರುಗಿ ಕೂಗಿ ಹೇಳಿದ. ಅಣ್ಣಾ...ನಾಳೆ ಐದು ಗಂಟೆಗೆ..ಸ್ವರಾಜ್ಯ ಮೈದಾನ.. ಮರಿಬೇಡ..ನಾನು ನೈಟ್ ಇನ್ನೊಮ್ಮೆ ಕಾಲ್ ಮಾಡ್ತೇನೆ..Plan ಮಾಡುವ... Discussion ಮಾಡುವ.
ಆಯಿತು ಮರ್ರೆ ಈಗ ಹೋಗು ಅಂದೆ. ಮನಸ್ಸಿನಲ್ಲಿ ಮಾತ್ರ ಅವನ ಮೇಲೆ ಒಟ್ರಾಸಿ ಸಿಟ್ಟು ಇತ್ತು.
ಅವತ್ತು ರಾತ್ರಿ ನನಗೆ ನಿದ್ದೆಯೇ ಬರಲಿಲ್ಲ.
ನಾನು ಬೇರೆ ಅಪ್ಪನಿಗೆ ಒಬ್ಬನೇ ಮಗ.
ಇಲ್ಲ ಇಲ್ಲ ಏನಾದರೂ ಮಾಡ್ಲೇಬೇಕು..
Google Search ಮಾಡಿದೆ..
" ಮಾರಾಕ ಆಯುಧಗಳಿಂದ ನಮ್ಮನ್ನು ನಾವು Protect ಮಾಡಿಕೊಳ್ಳುವುದು ಹೇಗೆ.."
" ಎದುರಾಳಿಯ ದೌರ್ಬಲ್ಯವನ್ನು On the Spot ತಿಳಿಯುವುದು ಹೇಗೆ.."
"ಕೊನೆಯ ಕ್ಷಣದಲ್ಲಿ ಹೇಗೆ ವೈರಿಯನ್ನು ಮಣ್ಣು ಮುಕ್ಕಿಸ ಬಹುದು.."
ಬೇಡ ಬೇಡ.. ಇದು ನನ್ನ ರೇಂಜಿಗೆ ಸ್ವಲ್ಪ ಓವರ್ ಆಯಿತು..
ಪುನಃ ಟೈಪ್ ಮಾಡಿದೆ..
"ಕೊನೆಯ ಕ್ಷಣದಲ್ಲಿ ನಮ್ಮ ಪ್ರಾಣ ಉಳಿಸಿಕೊಂಡು ಓಡುವುದು ಹೇಗೆ.. "
ಆಗಲೇ ಬಂತು ಮಾರಿ ಪೊಲ್ಲನ ಕಾಲ್.
ಅಣ್ಣಾ... ನಾಳೆಗೆ ಫುಲ್ ರೆಡಿಯಾ..ಕೇಳಿದ.
Google Search ಮಾಡುವುದನ್ನು, ನಿಲ್ಲಿಸಿ ಅವನಿಗೆ ಹೇಳಿದೆ..
-ಹಾನ್.. ನಾವು ಗೊತ್ತಲ್ಲ.ಆಗದಿಂದ ಅದರ ಬಗ್ಗೆಯೇ ಯೋಚಿಸ್ತಾ ಇದ್ದದ್ದಾ ಪೊಲ್ಲ.ಏನಾದರೂ ಮಾಡುವ.ನೀವು ಎಲ್ಲಾ ಏನು ಟೆನ್ಶನ್ ಮಾಡ್ಬೇಡಿ.ನಮ್ಮ ರುಕ್ಕು ಅಲ್ಲಾ.. ಬಿಡ್ಲಿಕ್ಕೆ ಆಗ್ತದಾ.... ಇನ್ನು ಹೆದರಿಕೆಯಿಂದ ದುಡುಕಿ ಮನೆಯಲ್ಲಿ ಎಲ್ಲಾ ಹೇಳ್ಲಿಕ್ಕೆ ಹೋಗ್ಬೇಡಿ. ಮತ್ತೆ ಪುನಃ ಅವರಿಗೆ ಟೆನ್ಶನ್.
" ದುಡುಕಿ ಇತಿಹಾಸನ ಸೃಷ್ಟಿಸೋಕೆ ಆಗಲ್ಲ.. ಹಾಗಂತ ಇತಿಹಾಸನ ಪ್ಲಾನ್ ಮಾಡಿ blue print ಹಾಕ್ಕೋಕು ಆಗಲ್ಲ.." ನಾನೊಂದು KGF ಡೈಲಾಗ್ ಬಿಟ್ಟೆ.
ಅದನ್ನು ಕೇಳಿ ಪೊಲ್ಲ ಹೇಳಿದ.. ಹೌದು ಅಣ್ಣ. ಇಲ್ಲಿ ತನಕ ಆ ಬ್ಲೇಡ್ ಬಾಬುವನ್ನು ಯಾರೂ ಕೂಡ ಟಚ್ ಮಾಡಿಲ್ಲ ಅಂತ ಬಲ್ಲ ಮೂಲಗಳಿಂದ ವರದಿ ಬಂದಿದೆ.ಆದರೆ ನಾವು ನಾಳೆ ಇತಿಹಾಸ ಸೃಷ್ಟಿ ಮಾಡೋಣ.ಒಂದೇ ಏಟಿಗೆ ನಗರದ ಖ್ಯಾತ ರೌಡಿಯನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಡೋಣ.
ಅಲ್ಲೇ ಟೇಬಲ್ ನಲ್ಲಿ ಇದ್ದ ವಾಟರ್ ಬಾಟಲ್ ತಗೊಂಡು ಗಟ ಗಟ ಎಂದು ನೀರು ಕುಡಿದೆ.ಏಕೆಂದರೆ ಅವನು ಹೇಳಿದ "ಇಲ್ಲಿ ತನಕ ಆ ಬ್ಲೇಡ್ ಬಾಬುವನ್ನು ಯಾರೂ ಕೂಡ ಟಚ್ ಮಾಡಿಲ್ಲ ಅಂತ ಬಲ್ಲ ಮೂಲಗಳಿಂದ ವರದಿ ಬಂದಿದೆ.." ಎನ್ನುವುದು ನನ್ನಲ್ಲಿ ಇನ್ನು ಹೆಚ್ಚಿನ ಭಯ ಉಂಟು ಮಾಡಿತು.
ಪೊಲ್ಲ...ನಮ್ಮ ದರ್ಶನ್ ದೊಡ್ಡಪ್ಪನವರ ಮಗ ನಮ್ಮಣ್ಣ ಮುರ್ಲಿ(ಮುರುಳಿ)ಇದ್ದಾನೆ ಅಲ್ವಾ.ಅವನನ್ನು ಕೂಡ ನಾಳೆ ನಮ್ಮ ಜೊತೆ ಕರ್ಕೊಂಡು ಹೋಗುವನಾ..ಕೇಳಿದೆ
ಬೇಡ... ಬೇಡ.. ಅವರು ಯಾರು ಸ ಬೇಡವೇ ಬೇಡ... ನಾನು ಇವತ್ತು ನಿನ್ನ ಬಗ್ಗೆ ಡೈಲಾಗ್ ಏನು ಹೇಳಿದ್ದು ನೆನಪಿಲ್ವಾ..
" ಗ್ಯಾಂಗ್ ಕಟ್ಕೊಂಡು ಬರೋನು ಗ್ಯಾಂಗ್ ಸ್ಟರ್. ಇವನು ಒಬ್ನೇ ಬರೋನು ಮೋನ್ ಸ್ಟಾರ್..."
ಈಗ ಏನಾದರೂ ನಾವು ಜನ ಮಾಡ್ಕೊಂಡು ಹೋದ್ರೆ ನಾನು ಮಾತಿಗೆ ತಪ್ಪಿದ ಹಾಗಾಗಲ್ವ...
ಆಹಾ... ವಚನ ಪರಿಪಾಲಕ ಸತ್ಯ ಹರಿಶ್ಚಂದ್ರ ಇವನು.ಅವರಿಗೆ Gang ಕಟ್ಟಿಕೊಂಡು ಬನ್ನಿ ಎಂದು ಪ್ರಚೋದಿಸಿ,ನನಗೆ ಮಾತ್ರ ಒಬ್ಬನೇ ಹೋಗಿ ಎಲ್ಲರನ್ನೂ ಹೊಡೆದು ಹಾಕು ಎಂದು ಉತ್ತೇಜಿಸುತ್ತಿದ್ದಾನೆ.
ಇವ ಧೈರ್ಯ ನೀಡುವ ಬದಲು ಹೆದರಿಸಲಿಕ್ಕೆಯೇ ಕಾಲ್ ಮಾಡಿದ್ದು..ಅಂತ ಅನಿಸಿತು.
ಅಣ್ಣ...ನಾವು ನಾಳೆ ಅರ್ಧ ಗಂಟೆ ಬೇಗ ಹೋಗ್ಬೇಕು... ಮಿಸ್ ಆಗ್ಬಾರ್ದು.. ಇಲ್ಲದಿದ್ದರೆ ನಮ್ಮ ಮರ್ಯಾದೆ ಸತ್ಯ ಹೋಗ್ತದೆ.
ಆಹಾ... ಎಂತಹ ಸಮಯದ ಮಹತ್ವ.. ನಾವು ಎಂತ ಪರೀಕ್ಷೆ ಬರೀಲಿಕ್ಕೆ ಹೋಗುವುದಾ..
ಪುನಃ ಅವನೇ ಶುರು ಮಾಡಿದ.
ಅಣ್ಣ... ನಾಳೆ ಉಂಟಲ್ಲಾ... ನೀವು ಹೇಗೆ ಪೈಟ್ ಮಾಡ್ಬೇಕು ಅಂದ್ರೆ ನಮ್ Yash boss ಹೊಡಿತಾರೆ ಅಲ..ಹಾನ್.ಆ ರೇಂಜಿಗೆ ಆ ಬ್ಲೇಡು ಬಾಬುಗೆ ನೀವು ಹೋಡಿಬೇಕು..ಅಂದ.
ನಾನು ನೋಡಿದ್ರೆ ಅನಂತ್ ನಾಗ್ ಅವರ ಕಾಮಿಡಿ ಮೂವಿಗಳ ಕಾಮೆಡಿ ಪೈಟಿಂಗ್ ನೋಡಿ ಬೆಳೆದವನು. ಇವನಿಗೆ ಹೇಗೆ ಅರ್ಥ ಮಾಡಿಸುವುದು ಅಂತ ಗೊತ್ತಾಗ್ಲಿಲ್ಲ.
ನಾನೇ ಹೇಳಿದೆ...
ಆಯಿತು ಬಿಡು,ಹೊಡೆದು ಅವನನ್ನು ಚಿಂದಿ ಚಿತ್ರಾನ್ನ...ಮತ್ತೆ ಎಂತ ಅದು..
ಅವ ಹೇಳಿದ.. ಬೂಂದಿ ಮೊಸರನ್ನ,
ಹಾನ್ ಅದೇ ಅದೇ..ಚಿಂದಿ ಚಿತ್ರಾನ್ನ... ಮತ್ತೆ ಹಾಗೇ ಟೈಮ್ ಇದ್ರೆ ಬೂಂದಿಯ ಮೊಸರನ್ನ ಕೂಡ ಮಾಡುವ..ಅಂದೆ ಬಹಳ ಸ್ಲೋ ಆಗಿ ..
ದೇವರೇ ಯಾರೂ ಮೊಸರನ್ನ ತಿನ್ಬೇಕೋ ನಿನಗೆಯೇ ಗೊತ್ತು... ಅಂತ ಮನಸ್ಸಿನಲ್ಲಿಯೇ ಅಂದ್ಕೊಂಡೆ.
ಸುಮ್ಮನೆ ಹೀಗೆ ಅವನಲ್ಲಿಯೇ ಕೇಳಿದೆ...ಅಲ ಪೊಲ್ಲ,ನಿನಗೆ ಏನೂ ಭಯ ಆಗ್ತ ಇಲ್ವಾ.
ನನಗೆ ಯಾಕೆ ಭಯ ಆಗ್ಲಿ.. ನನ್ನ ಜೊತೆ ನೀನು ಇರುವಾಗ.. ನನಗೆ ಯಾರ ಭಯನೂ ಇಲ್ಲ...
ಅವನೇ ಇನ್ನೊಂದು KGF ಡೈಲಾಗ್ ಬಿಟ್ಟ.
" ಜೀವನದಲ್ಲಿ ಭಯ ಇರ್ಬೇಕು,ಭಯ ಅನ್ನೊದು ಗುಂಡ್ಗೆಯಲ್ಲಿ ಇರ್ಬೇಕು.ಆದ್ರೆ ಆ ಗುಂಡ್ಗೆ ನಮ್ದಲ್ಲ..ನಮ್ಮ ಎದುರ್ಗಡೆಯವನದ್ದು ಆಗಿರ್ಬೇಕು.."
ಇವನು ಹೀಗೆ ಹೇಳಿ ಹೇಳಿಯೇ ಎದುರಾಳಿ ಅಲ್ಲ ನನ್ನದೇ ಗುಂಡಿಗೆಯಲ್ಲಿ ಭಯ ಜಾಸ್ತಿ ಆಗ್ತ ಇದೆ.
ಅಣ್ಣ.. ನೀನು ನಾಳೆ Black ಶರ್ಟ್ ಹಾಕು ಆಯಿತಾ.. ಪೊಲ್ಲ ಹೇಳಿದ.
Black ಶರ್ಟಾ..ಯಾಕೆ?
ನೀನು ಹಾಕು..ಅದು ನಾನು ನಾಳೆ ಹೇಳ್ತಿನಿ..
ಇನ್ನು ಮಾತಾಡಿದ್ರೆ ಇವನ ರಾಮಾಯಣ ಮುಗಿಯುವುದಿಲ್ಲ ಅಂದು ಕೊಂಡು..ಆಯ್ತು ಮರ್ರೆ ಬ್ಲ್ಯಾಕೇ ಹಾಕ್ತೀನಿ..ಅಂದೆ.
ಕೊನೆಗೂ Good night ಹೇಳಿ ಕಾಲ್ ಕಟ್ ಮಾಡಿದ.
ಅದರ ಬೆನ್ನಿಗೇ ರುಕ್ಕುವಿನ WhatsApp ಮೆಸೇಜ್...
"ನಾಳೆಯ ಫೈಟಿಗೆ ನಿಮಗೆ All the best.."
ನಾನೆಂತಹ ಮರ್ರೆ ಕಪ್ಪು ಗೆಲ್ಲಿಕ್ಕೆ ಯಾವುದಾದರೂ ಮ್ಯಾಚ್ ಆಡ್ಲಿಕ್ಕೆ ಹೋಗ್ತಾ ಇದ್ದೇನಾ...
ಶೇ.. ಈ ಅಕ್ಕ ತಮ್ಮ ಪೈಟನ್ನು ಇಷ್ಟೊಂದು ಸೀರಿಯಸ್ ಆಗಿ ಯಾಕೆ ತಗೊಂಡಿದ್ದರೋ.
ಅವಳ ಸಮಾಧಾನಕ್ಕೆ...ಆಯಿತು ಆಯಿತು.. ಅವರನ್ನು ಚಚ್ಚಿ ಬಿಸಾಕುವೆನು.. ಎಂದು Reply ಮಾಡಿದೆ.
ತುಂಬಾ ಥ್ಯಾಂಕ್ಸ್...ಮೆಸೇಜ್ ಬಂತು.
ಆ ಮೆಸೇಜ್ ಅನ್ನು ಕೂಡ ತುಂಬಾ ರಾಗವಾಗಿ ಟೈಪ್ ಮಾಡಿದಂತಿತ್ತು ಅವಳು.
ಸ್ವಲ್ಪ ಹೊತ್ತೂ YouTube ನಲ್ಲಿ ಅನಂತ್ ನಾಗ್ ಅವರ ಕಾಮಿಡಿ ಪೈಟ್ ಗಳನ್ನು ನೋಡಿದೆ. ಹೇಗೆ ಕೇಡಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಓಡಿ ಹೋಗ್ಬಹುದು ಅಂತ ಎಲ್ಲಾ ಸರಿಯಾಗಿ ಗಮನಿಸಿದೆ.
ಭಗವಂತ ನೀನೇ ಕಾಪಾಡು ಅಂತ ಒಮ್ಮೆ ಪ್ರಾರ್ಥಿಸಿ... ಅಂತು ಇಂತು ನಿದ್ರೆಗೆ ಜಾರಿಗೆ ಜಾರಿದೆ.
ಕನಸಿನಲ್ಲಿ ಕೂಡ ನನಗೆ ಪೊಲ್ಲ ಮತ್ತು ರುಕ್ಕನ ಕನಸಿನಲ್ಲಿ ಈಗ ಏನಾಗ್ತಾ ಇರ್ಬಹುದು ಅಂತಲೇ ಕನಸು ಬಿತ್ತು..
ಪೊಲ್ಲನ ಕನಸಿನಲ್ಲಿ ನಾನು ಬ್ಲೇಡ್ ಬಾಬುವನ್ನು ಚಿಂದಿ ಚಿತ್ರಾನ್ನ...ಬೂಂದಿ ಮೊಸರನ್ನ ಮಾಡುತ್ತಿದ್ದೆ..ಅವನು ಸೈಡಿನಲ್ಲಿ ನಿಂತುಕೊಂಡು ಡಂಕ್ ಣಕ.. ಸ್ಟೆಪ್ಸ್ ಹಾಕಿ ವಿಷಲ್ ಹೊಡಿತಾ ಇದ್ದ.
ರುಕ್ಕುನ ಕನಸಿನಲ್ಲಿ ನಾನು.. ಎಲ್ಲರನು ಚಚ್ಚಿ ಬಿಸಾಕಿ ಅವಳ ಕೈಯಿಂದ ಬೇಶ್ ಎಂದು ಅನ್ನಿಸಿಕೊಳ್ಳುತ್ತಿದ್ದೆ.ಅವಳು ಖುಷಿಯಿಂದ ಜೋರಾಗಿ ಚಪ್ಪಾಳೆ ಹೊಡೆಯುತ್ತಿದ್ದಳು.
ನನ್ನ ಕನಸಿನಲ್ಲಿ ಮಾತ್ರ ನಾನು Alvas Hospital ನ ICU ಯುನಲ್ಲಿ ತುಂಬಾ ಗಂಭೀರ ಸ್ಥಿತಿಯಲ್ಲಿ,ಜೀವನ್ಮರಣ ಹೋರಾಟ ಮಾಡುತ್ತಾ ಮಲಗಿದ್ದೆ!
ನನಗೆ ಆ ದಿನ ಬೆಳಿಗ್ಗೆ ಆಗುವುದು ಬೇಡ ಇತ್ತು.ಆದರೂ ಆಯಿತು.
ಮಾರಿ ಪೊಲ್ಲ ಮತ್ತು ರುಕ್ಕು ಯಾವಾಗ ಬೆಳಿಗ್ಗೆ ಆಗುತ್ತೋ ಅಂತ ಬಕಪಕ್ಷಿಯ ಹಾಗೆ ಕಾಯುತ್ತಿದ್ದರೋ ಏನೋ..
ಕೊನೆಯಲ್ಲಿ ಕ್ಷಣದಲ್ಲಿ ಸ್ವಲ್ಪ ಮಾರ್ಯಾದೆಗೆ ಆದರೂ ಪೈಟ್ ಮಾಡ್ಲಿಕ್ಕೆ ಇರ್ಲಿ ಅಂತ...ಟೈಗರ್ ಪ್ರಭಾಕರ್ ಅವರ ಹಳೆಯ ಪೈಟಿಂಗ್ ಗಳನ್ನು ನೋಡಿದೆ.
ಕೊನೆಗೂ ಮಧ್ಯಾಹ್ನ ಮೂರುವರೆ ಗಂಟೆ ಆಯಿತು.
ಪೋನ್ ರಿಂಗ್ ಆಯಿತು..
ಪೊಲ್ಲನದ್ದೇ ಕಾಲ್.. ಅಣ್ಣಾ.. ಇನ್ನು ಅರ್ಧ ಗಂಟೆಯಲ್ಲಿ ಪುಲ್ಕಿ ಬಸ್ ಸ್ಟ್ಯಾಂಡ್ ಅಲ್ಲಿ ಇರ್ತೇನೆ. ಫುಲ್ ರೆಡಿ ಆಗಿ ಬಾ,ಹಾನ್ Black shirt ಹಾಕ್ಲಿಕೆ ಮರೀಬೇಡ.
ಆಹಾ.. ಎಂತಹ ಉತ್ಸಾಹ... ಉಲ್ಲಾಸ... ಸಂಭ್ರಮ..
ಅವನಿಗೇನು ಪೈಟ್ ಮಾಡ್ಬೇಕಾದವನು ನಾನು ಅಲ್ಲ.
ಬೀರುವಿನಲ್ಲಿದ್ದ ಒಂದು ಬ್ಲ್ಯಾಕ್ ಶರ್ಟ್ ಹಾಕ್ಕೊಂಡು ಜೀನ್ಸ್ ಪ್ಯಾಂಟ್ ಹಾಕ್ಕೊಂಡು... ಹೇಗೆ ಸುಖವಾಗಿ ಹೋಗ್ತೆನೋ ಹಾಗೇ ಸುಖವಾಗಿ ಜೀವಂತ ಮರಳಿ ಬರುವಂತೆ ಮಾಡು ದೇವರೇ ಎಂದು ಮನೆಯ ದೇವರಿಗೆ ಹರಕೆ ಹೊತ್ತುಕೊಂಡು,ದೇವರ ಕೋಣೆಯಎಲ್ಲಾ ದೇವರ ಫೋಟೋ ಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ,ಪುಲ್ಕಿ ಬಸ್ಸ್ ಸ್ಟ್ಯಾಂಡ್ ಕಡೆಗೆ ನಡೆದೆ.
ಅದಾಗಲೇ ಬಸ್ ಸ್ಟ್ಯಾಂಡ್ ನಲ್ಲಿ ಬಂದು ನನಗಾಗಿಯೇ ಕಾಯುತ್ತಾ ನಿಂತಿದ್ದ ಮಾರಿ ಪೊಲ್ಲ.
ಅವ ಮಾತ್ರ ಅಲ್ಲ,ರುಕ್ಕು ಕೂಡ ಇದ್ದಳು ಅವನೊಂದಿಗೆ.
ಹೇಯ್.. ಇವಳನ್ನು ಯಾಕೆಯಾ ಕರ್ಕೊಂಡು ಬಂದದ್ದು ... ನಾವು ಹೋಗುವುದು ಪೆಟ್ಟಿಗೆ... ಪಿಚ್ಚರ್ ನೋಡ್ಲಿಕ್ಕೆ ಅಲ್ಲ.
ಅದು ಗೊತ್ತುಂಟು.. ಆದರೆ ಅವಳಿಗೆ ಲೈವ್ ಆಗಿ ನೀನು ರೌಡಿಗೆ ಹೊಡೆಯುವುದು ನೋಡ್ಬೇಕು ಅಂತೆ.
ಅವಳನ್ನೇ ನೋಡಿದೆ..
ಅಹಾ..ನನ್ನ Action ಸ್ಟೋರಿಯ ಹಭಿಮಾಣಿ ದೇವತೆ... ಮನಸ್ಸಿನಲ್ಲಿಯೇ ಅಂದುಕೊಂಡೆ..
ಪೊಲ್ಲ ಮುಂದುವರಿಸಿದ..
ಒಮ್ಮೆ ಸ ಅವಳು ಪೆಟ್ಟ್ ಲಡಾಯಿ ಎಲ್ಲಾ ನೋಡ್ಲಿಲ್ಲ ಅಂತೆ.. ಮತ್ತೆ ಇದು ಅವಳದ್ದೇ ಮ್ಯಾಟರ್ ಅಲ್ವಾ,ಅವಳಿಗೆ ಟೀಸ್ ಮಾಡಿದವನ ಗ್ಯಾಂಗ್ ಅನ್ನು ನೀನು ಪೊಡಿ (ಹುಡಿ ಹುಡಿ) ಮಾಡುವುದನ್ನು ನೋಡ್ಬೇಕು ಅಂತ ಅವಳಿಗೂ ಸ ಆಸೆ ಇರಲ್ವಾ ಅಂದ.
ಆಹಾ...ಅತೆಂತಹ ಆಸೆಗಳು ಇದೆಯಪ್ಪ ಈ ಕ್ರೂರ ದುನಿಯಾದಲ್ಲಿ.
ಅವನ ಕೈಯಲ್ಲಿ ಕ್ರಿಕೆಟ್ ಬ್ಯಾಟ್ ಇತ್ತು..
ಅದನ್ನು ನನ್ನ ಕೈಗೆ ಕೊಟ್ಟ.
ನಂತರ ಕಿಸೆಯಿಂದ(ಜೇಬಿನಿಂದ) ಒಂದು ಕಪ್ಪು ಕೂಲಿಂಗ್ ಗ್ಲಾಸ್ ತೆಗೆದು ನನ್ನ ಕಣ್ಣಿಗೆ ಇಟ್ಟ
ಆಹಾ... ಈಗ ನೀನು ಸೇಮ್ ಉಳಿದವರು ಕಂಡತೆ ರಕ್ಷಿತ್ ಶೆಟ್ಟಿ ತರಹ ಕಾಣ್ತೀಯಾ.. ಅಂದ.
ಆದ್ರೆ ನೀನು Yash Fan ಅಲ್ವಾ..
ನಾನು Yash Fan ಹೌದು,ಆದ್ರೆ ಅಣ್ಣ ನಿಂಗೆ ರಕ್ಷಿತ್ ಶೆಟ್ಟಿ ಲುಕ್ ಕರೆಕ್ಟ್ ಮ್ಯಾಚ್ ಆಗ್ತದೆ, ನಿನ್ನೆಯೇ ಥಿಂಕ್ ಮಾಡಿದ್ದೆ,ನೀನು ಹೀಗೆ ಡ್ರೆಸ್ ಹಾಕಿಕೊಂಡು ಹೋಗಿ ಉಳಿದವರು ಕಂಡಂತೆ ಫಿಲ್ಮ್ ಅಲ್ಲಿ ರಕ್ಷಿತ್ ಶೆಟ್ಟಿ ಆ ಹುಲಿವೇಷದ ಹುಲಿಗೆ ನಾಯಿಗೆ ಹೊಡೆದ ಹಾಗೆ ಹೋಡಿತಾನೆ ಅಲ್ವಾ,ಹಾನ್ ಹಾಗೆ... ಹಾಗೆ ನೀನು ಬ್ಲೇಡ್ ಬಾಬುವನ್ನು ಚಚ್ಚಿ ಬಿಸಾಕ್ಬೇಕು ಎಂದು.
ಆದರೆ ಫಿಲ್ಮ್ ಅಲ್ಲಿ ಪಿಲಿ(ಹುಲಿ)ಗೆ ಮರದ ಬೆಡಿ(ಗನ್)ಯಲ್ಲಿ ಹೊಡೆಯುವುದು ಅಲ್ವಾ...ಕೇಳಿದೆ.
ಇರ್ಬಹುದು.. ಈಗ ಬ್ಲೇಡ್ ಬಾಬು ಏನು ಹುಲಿ ವೇಷ ಹಾಕ್ಕೊಂಡು ಡ್ಯಾನ್ಸ್ ಮಾಡ್ಲಿಕ್ಕೆ ಬರ್ತಾ ಇದ್ದಾನಾ..ಇಲ್ಲ ಅಲ. ನಮಗೆ ಸದ್ಯಕ್ಕೆ ಇದೇ ಸಾಕು, ನೆನಪಿರಲಿ ನಾವು ಪಿಲಿ ನಲಿಕೆಗೆ(ಹುಲಿ ಕುಣಿತಕ್ಕೆ) ಹೋಗುವುದು ಅಲ್ಲ,ಪೆಟ್ಟಿಗೆ ಹೋಗ್ತಾ ಇರುವುದು ನೆನಪು ಉಂಟಲ್ಲಾ.
ನಾನು ಬ್ಯಾಟ್ ಹಿಡಿದುಕೊಂಡು ಏನೇನೋ ಗಂಭೀರವಾಗಿ ಅಲೋಚಿಸಲು ತೊಡಗಿದೆ.. ಅಲಾ ಎಂತಹ Involvement ಈ ಹುಡುಗನದ್ದು.
ನಾನು ಆಲೋಚಿಸುತ್ತಿರುವುದನ್ನು ನೋಡಿ ಪೊಲ್ಲನೇ ಹೇಳಿದ..
- ಅಣ್ಣ... ಬೇಜಾರ್ ಮಾಡ್ಬೇಡಿ...ಬೇರೆ ಯಾವುದೇ ಮಾರಾಕ ಆಯುಧ ಸಿಗ್ಲಿಲ್ಲ ಮನೆಯಲ್ಲಿ.
ಅವನನ್ನೇ ಮೇಲೆ ಕೆಳಗೆ ನೋಡಿದೆ..
ಅವನು ನನಗೆ ಕಿಂಡಲ್ ಮಾಡುವವನಂತೆ ಕಂಡಿತು..
ಇದು... ಬೇಸ್ ಬಾಲ್ ಬ್ಯಾಟ್ ಇರ್ಲಿಲ್ಲ...ಅದು ಇದ್ರೆ ಹಿಡಿಯಲು ಗ್ರಿಪ್ಪಿಗ್ಗೆ ಒಳ್ಳೆ ಆಗ್ತಾ ಇತ್ತು..
ಅವನು ಕೂಡ ನನ್ನನು ಒಮ್ಮೆ ಮೇಲೆ ಕೆಳಗೆ ನೋಡಿದ.
ಓಹ್...ನೀನು ಈಗ ಬಾರೀ ದೊಡ್ಡ ಬೇಸ್ ಬಾಲ್ ಪ್ಲೇಯರ್.. ಅನ್ನುವಂತಹ ಲುಕ್ಕು..
ಅದು ಅಣ್ಣ,ನಮ್ಮ ಪುಲ್ಕಿಯಲ್ಲಿ ಯಾರು ಬೇಸ್ ಬಾಲ್ ಆಡ್ತಾರೆ..ಸದ್ಯಕ್ಕೆ ಪ್ಲೀಸ್ ಇದರಲ್ಲಿಯೇ adjust ಮಾಡಿ ಬಿಡು.. ಅಂದ
ಇರಲಿ.. ಇರಲಿ.. ಅವರು ನನಗೆ ಚೆನ್ನಾಗಿ ಬಾರಿಸುವಾಗ ಅಡ್ಡ ಹಿಡಿಯಲು ಏನಾದರೂ ಒಂದು ಬೇಕಲ್ಲ,ಈ ಬ್ಯಾಟ್ ತಕ್ಕ ಮಟ್ಟಿನ ಹೊಡೆತಗಳನ್ನು ತಪ್ಪಿಸಬಲ್ಲದು..ನನಗೆ ನಾನೇ ಸಮಾಧಾನ ಪಟ್ಟುಕೊಂಡೆ.
ಅಲ್ಲೇ ಇದ್ದ ರುಕ್ಕು ರಾಗವಾಗಿ ಹೇಳಿದಳು..
ಮತ್ತೆ ಇದು ಉಳಿದವರು ಕಂಡತೆ ಫಿಲ್ಮ್ ಅಲ್ಲಿ ನಮ್ಮ ರಕ್ಷಿತ್ ಶೆಟ್ಟಿ ಕೊರಳಿಗೆ,Yellow ಕಲರ್ ಸೇವಂತಿ ಮಾಲೆ ಹಾಕ್ತಾರೆ ಅಲ. ಅದು ಇಲ್ವನಾ ಪೊಲ್ಲ...
ಆಹಾ....ಎಂತಹ ಬುದ್ದಿವಂತ ಅಕ್ಕ.
ಅದಕ್ಕೆ ತಕ್ಕ ತಮ್ಮ.
- ಅಯ್ಯೋ ಅಕ್ಕಾ..ನಾನು ಎಲ್ಲಾ Plan ಅದಾಗಲೇ ಮಾಡಿ ಆಗಿದೆ, ಇಲ್ಲಿ ಪುಲ್ಕಿಯಲ್ಲಿ ಎಲ್ಲಿ ಸೇವಂತಿಗೆ ಮಾಲೆ ಸಿಗ್ತದೆ. ಮೂಡುಬಿದಿರೆಯಲ್ಲಿ ಅಣ್ಣನಿಗೆ ಸೇವಂತಿ ಮಾಲೆ ಹಾಕುವುದೇ..ನೀಲು ಅಣ್ಣನನ್ನು ಸೇಮ್ ಉಳಿದವರು ಕಂಡಂತೆ ರಕ್ಷಿತ್ ಶೆಟ್ಟಿಯೇ ಸ್ಟೈಲಿನಲ್ಲಿ ನೋಡುವುದೇ..
ಈ ಅಕ್ಕ ಮತ್ತು ತಮ್ಮ ನನ್ನನ್ನು ಛದ್ಮವೇಷ ಸ್ಪರ್ಧೆ ಗೆ ಕಳುಹಿಸುತ್ತಿರುವಂತೆ ಕಂಡಿತು..
ಒಂದು ಸ ಬಸ್ ಬರ್ಲಿಲ್ಲ..
ಎಂತ ಮರ್ರೆ ಇವತ್ತು ಬಸ್ ಇಲ್ವಾ ಅಂತಾ...ಲಡಾಯಿಗೆ ನಾಳೆ ಹೋಗುವನಾ ಪೊಲ್ಲ..ಕೇಳಿದೆ.
ಇಲ್ಲ... ಇಲ್ಲ.. ಹೀಗೆ ಎಲ್ಲಾ ಆಗ್ಬಹುದು ಅಂತಹ ನಾನು ಮೊದಲೇ ಅಪ್ಪಣ್ಣನ ರಿಕ್ಷಾ ಕ್ಕೆ ಹೇಳಿದ್ದೇನೆ.ಈಗಲೇ ಬರ್ಬಹುದು ಅವರು ಕಾಲ್ ಕೂಡ ಮಾಡಿ ಆಗಿದೆ ಮೂರು ಗಂಟೆಗೆ ಒಮ್ಮೆ.
ಆಹಾ...ಎಂತಹ ಮುಂಜಾಗರುಕತೆ... ಏನೊಂದು ಶ್ರದ್ಧೆ ಇವನಲ್ಲಿ.
ಒಟ್ರಾಸಿ ಇದನ್ನು ಅವನಿಗೆ Success ಮಾಡ್ಲೇ ಬೇಕು ಅಷ್ಟೇ. ಪೆಟ್ಟು ಯಾರೂ ತಿನ್ತಾರೆ ಅನ್ನುವುದು ಬಹುಶಃ ಅವನಿಗೆ ಅಷ್ಟೊಂದು ಮುಖ್ಯ ಆಗಿರ್ಲಿಕ್ಕಿಲ್ಲ ಅಂತ ಮೇಲ್ನೋಟಕ್ಕೆ ಅನಿಸಿತು.
ಅಪ್ಪಣನ ರಿಕ್ಷಾ ಕೂಡಲೇ ಬಂತು..
ಮೂವರು ಹೋಗಿ ಕುಳಿತುಕೊಂಡೆವು..
ರಿಕ್ಷಾ ಹೊರಟಿತು ಮೂಡುಬಿದಿರೆ ಕಡೆಗೆ.
"ನಮ ಇತ್ತೆ ಸ್ವರಾಜ್ಯ ಮೈದಾನ ಗ್ ಪೋಯಿ ಅಪ್ಪಣ್ಣ... " (ನಾವು ಈಗ ಸ್ವರಾಜ್ಯ ಮೈದಾನಕ್ಕೆ ಹೋಗುವ ಅಪ್ಪಣ್ಣ) ಅವರಿಗೆ ಪೊಲ್ಲನೇ ಹೇಳಿದ.
ನನ್ನನು ನೋಡಿ...ನನ್ನ ಕೈಯಲ್ಲಿ ಬ್ಯಾಟ್ ಇರುವುದನ್ನು ಕಂಡು ಅಪ್ಪಣ್ಣ ಕೇಳಿದರು..
ಓಹ್ ನೀಲಮೇಘ.. ಎಂತ ಮರ್ರೆ,ಬ್ಯಾಟ್ ಎಲ್ಲಾ ಹಿಡಿದುಕೊಂಡು ಎಲ್ಲಿಗೆ ನೀನು .
ಅದು ಅಪ್ಪಣ್ಣ..ಸ್ವರಾಜ್ಯ ಮೈದಾನ್ ದಲ್ಲಿ ಒಂದು ಬೆಟ್ ಮ್ಯಾಚ್ ಇದೆ.. ಹಾಗೇ ಹೋಗುವುದು.
ಎಂತ ಒಬ್ಬನೇಯಾ... ಅವರು ಕೇಳಿದರು.
ಇಲ್ಲ,ಅಲ್ಲಿ ಜನ ಬರ್ತಾರೆ.. ಒಳ್ಳೆಯ ಹೊಡೆತಗಾರರು ಎಲ್ಲಾ ಇವರು ಬರ್ತಾ ಇದ್ದಾರೆ ಅಲ್ಲಿ..ಅಂದೆ ಮನದ ವೇದನೆಯನ್ನು ಡೈರೆಕ್ಟ್ ಆಗಿ ಹೇಳಲಾಗದೇ.
ಹೌದಾ..All the best ಆಯ್ತಾ,ಈ ಸಲ ಕಪ್ಪು ನಮ್ದೇ .. ಅಂದರು.
ಹೌದು.. ಹೌದು...ಈ ಸಲ ಕಪ್ಪು ನನಗೆಯೇ ಅಂದೆ.
ರಿಕ್ಷಾ ಹಾಗೇ ಹೋಗುತ್ತಿತ್ತು.
ಪೊಲ್ಲ ಮಾತ್ರ ಆಗಲೇ ಮುಂದಿನ ಪೆಟ್ಟ್ ಲಡಾಯಿಯ ಸೀನ್ ಗಳನ್ನು Imagination ಮಾಡ್ಕೋತಿದ್ದ.
ಪಕ್ಕದಲ್ಲಿಯೇ ಇದ್ದ ರುಕ್ಕು ರಾಗವಾಗಿ ಕೇಳಿದಳು
- ನಿಮಗೆ ಕರಾಟೆ ಎಲ್ಲಾ ಬರುತ್ತಾ.
ಇಲ್ಲ ನನಗೆ Kung-fu ಬರುತ್ತೆ ಅಂದೆ.
ಹೌದಾ..ನೀವು ಗ್ರೇಟ್.. ಅಂದಳು.
ಯಾರಿಗೆ ಬರುತ್ತೆ ಕುಂಗ್ಫು..ಅವಳು ಕೇಳಿದಳು ಅಂತ ನಾನು ಸುಮ್ಮನೆ ಹೇಳಿದ್ದು ಅಷ್ಟೇ.
ಮತ್ತೆ ಈ ಕರಾಟೆ ಮತ್ತು ಕುಂಗ್ಫು ಗೆ ಇರುವ ವ್ಯತ್ಯಾಸ ಎಂತ? ಪುನಃ ಅವಳೇ ಕೇಳಿದಳು.
ಇವಳು ಯಾರು ಮರ್ರೆ..ಈ ಟೈಂ ಅಲ್ಲಿ ಇದು ಎಲ್ಲಾ ಬೇಕಾ.
Actually ನನಗೆ ಸ ಅದು ಗೊತ್ತಿಲ್ಲ.
ರಿಕ್ಷಾ ಡ್ರೈವರ್ ಅಪ್ಪಣ್ಣ ಸ ರಿಕ್ಷಾ ಬಿಡುತ್ತಲೇ ಉತ್ಸಾಹದಿಂದ ಕೇಳಿದರು... ಹೌದಾ ನೀಲು..ಎಂತದ ಅಂತಹ ವ್ಯತ್ಯಾಸ...
ಅಂತಹ ವ್ಯತ್ಯಾಸ ಏನಿಲ್ಲ.. ಕೇವಲ Spelling ಅಷ್ಟೇ.. ಅಂದೆ.
ರಿಕ್ಷಾ ಬಿಡುತ್ತಿದ್ದ ಅಪ್ಪಣ್ಣ ಒಮ್ಮೆಲೇ ಹಿಂದೆ ತಿರುಗಿ ಹಾಗೇ ನನ್ನನ್ನು ಒಮ್ಮೆ ಮೇಲೆ ಕೆಳಗೆ ನೋಡಿದರು.
ಬಹುಶಃ ಅವರಿಗೆ ಬೆಚ್ಚ ಆಗಿರ್ಬೇಕು.
ಪುನಃ ರುಕ್ಕುವೇ ರಾಗವಾಗಿ ಕೇಳಿದಳು..
ಮತ್ತೆ ನಿಮ್ಮ ಹತ್ರ ಯಾವ ಯಾವ ಬೆಲ್ಟ್ ಇದೆ..
ನನ್ನತ್ರ ಲೆದರ್ ಬೆಲ್ಟ್... ಪ್ಲಾಸ್ಟಿಕ್ ಬೆಲ್ಟ್.. ಕಾಟನ್ ಬೆಲ್ಟ್ ಎಲ್ಲಾ ಉಂಟು..
ಅದಲ್ಲ...ಯಾವ ಕಲರ್ ಬೆಲ್ಟ್ ಉಂಟು..
ನನ್ನತ್ರ Brown ಕಲರ್ ಬೆಲ್ಟ್, black ಕಲರ್ ಎಲ್ಲಾ ಉಂಟು.
ಅಷ್ಟೇಯಾ...Orange,Green,Purple, Yellow ಬೆಲ್ಟ್ ಎಲ್ಲಾ ಇಲ್ವಾ..
ಅದೆಲ್ಲಾ ಯಾರು ಹಾಕ್ತಾರೆ... ವೇಷ ಕಟ್ಟಿದ್ದ ಹಾಗೆ..
ಅಲ್ಲಾ Kung-fu ಅಲ್ಲಿ ನೀವು ಮೇಲೆ ಮೇಲೆ ಗೆಲ್ಲುತ್ತಾ ಹೋದಂತೆ ಕರಾಟೆಯಂತೆ ಬೆಲ್ಟ್ ಎಲ್ಲಾ ಕೊಡಲ್ವಾ...
ಓಹ್.. ಇವಳು ಆ ಬೆಲ್ಟ್ ಬಗ್ಗೆ ಮಾತಾಡಿದ್ದಾ.
ಅದಾ... ಅದು ಎಲ್ಲಾ ಕಲರ್ ಬೆಲ್ಟ್ ನನ್ನತ್ರ ರಾಶಿ ಇದೆಯಾ ರುಕ್ಕು.ಎಲ್ಲಾ ಮನೆಯ ಅಟ್ಟದಲ್ಲಿ ಹಾಕಿಟ್ಟಿದ್ದೇನೆ.ಬೇಕಾದಷ್ಟು ಉಂಟು,ನಿನಗೆ ಬೇಕಾದರೆ ಹೇಳು.. ಕೊಡುವಾ ಸ್ವಲ್ಪ.
ಹೌದಾ.. ಸತ್ಯ..
ಹೌದಾ.. ಸತ್ಯವೇ ಕೊಡುವಾ..
ಆಯಿತು ನಾಳೆಯೇ ಮನೆಗೆ ಬರ್ತೇನೆ,ನನಗೆ ಒಂದು ಹತ್ತು ಬೆಲ್ಟ್ ಕೊಡಿ..
ಯಾವ ಕಲರ್ ಬೇಕು.
ನನಗೆ ಪರ್ಪಲ್ ಓಕೆ..
ಯಾಕೆ ಗ್ರೀನ್ ಬೇಡವಾ.
ಪರ್ಪಲ್ ನನ್ನ ಫೇವರೆಟ್..
ಅಲಾ.. ನಿನಗೆ ಅಷ್ಟೊಂದು ಬೆಲ್ಟ್ ಯಾಕೆ ಅಂತ.
ವಿಷಯ ಎಂತ ಗೊತ್ತುಂಟಾ,ನಮ್ಮ ತೋಟದಲ್ಲಿ ತುಂಬಾ ಸೌತೆಕಾಯಿ ಆಗಿದೆ,ಅದನ್ನು ಮನೆಯಲ್ಲಿ ಮೇಲೆ ನೇತಾಕ್ಲಿಕ್ಕೆ.... ಬೆಲ್ಟ್ ಇದ್ರೆ ಸ್ವಲ್ಪ ಗಟ್ಟಿ ಅಲ...
ಅದನ್ನು ಕೇಳಿ ಆಟೋ ಓಡಿಸುತ್ತಿದ್ದ ಅಪ್ಪಣ್ಣ ಮತ್ತೊಮ್ಮೆ ಹಿಂದಿ ತಿರುಗಿ ನಮ್ಮಿಬ್ಬರನ್ನೇ ಮೇಲೆ ಕೆಳಗೆ ನೋಡಿದರು.
ಎಂತಹ ಮರ್ಲ್ ಜೋಡಿ ಮರ್ರೆ ಇವರಿಬ್ಬರದ್ದು.. ಅಂತ Confirm ಆಗಿ ಮನಸ್ಸಿನಲ್ಲಿಯೇ ಅಂದುಕೊಂಡಿರ್ತಾರೆ ಅವರು.
ಮತ್ತೆ ರುಕ್ಕು ಈ ಮುದ್ದು ಲಕ್ಷ್ಮಿ ಸೀರಿಯಲ್ ನಲ್ಲಿ ಆ ಮುದ್ದು ಲಕ್ಷ್ಮಿಗೆ ಪಾಪ ಕಷ್ಟವೇ ಅಲ್ವಾ... ಸುಮ್ಮನೆ ಟೈಂ ಪಾಸ್ ಗೆ ಕೇಳಿದೆ.
ರುಕ್ಕು ಕೂಡ... ಹೌದಲ್ಲ... ಪಾಪ..ಅಂತ ಒಟ್ರಾಸಿ ಫಿಲ್ ಆದಳು.
ಅಲ್ಲಿಯವರೆಗೆ ಏನೇನೋ ಕಲ್ಪನೆ ಮಾಡುತ್ತಾ ಸುಮ್ಮನೆ ಕೂತಿದ್ದ ಪೊಲ್ಲ..
" ಭಾವನೆಗಳಿಗೆ ಓಳಗಾಗಬೇಡ.. ಇಲ್ಲಿ ಅದುಕ್ಕೆ ಬೆಲೆ ಇಲ್ಲ..."
ಮತ್ತೊಂದು KGF ಡೈಲಾಗ್..
ಅವನು ನನಗೆ ಹೇಳಿದ್ದಾ... ರುಕ್ಕುವಿಗೆ ಹೇಳಿದ್ದಾ ಅಂತ ಗೊತ್ತಾಗ್ಲಿಲ್ಲ...
ಆದ್ರೆ ಸ ನಾನು ಅದರ ಮುಂದುವರಿದ ಡೈಲಾಗ್ ಬಿಟ್ಟೆ..
"ಎದೆಯಲ್ಲಿ ಕಲ್ಲು ಇದ್ದವನಿಗೆ..ಇದೆಲ್ಲ ಅಂಟೋದೂ ಇಲ್ಲ ..."
ನೀಲು ಅಣ್ಣಾ.. ಇದು, ಇದು ಬೇಕಾದದ್ದು.
ಅವನ ರಣೋತ್ಸಾಹ ಕಂಡು ಪುನಃ ಭಯ ಪಡಲು ಶುರು ಮಾಡಿದೆ.ಎಂತ ಅವಸ್ಥೆ ಮರ್ರೆ ನನ್ನದು.
ಅಂತು ಇಂತು ಸ್ವರಾಜ್ಯ ಮೈದಾನ ಬಂತು.
ಅಕ್ಕ... ಅಪ್ಪಣನ ಬಾಡಿಗೆ ಕಾಸು ಕೊಡು,ಈಗ ಬಂದೆ ಅಂತ ಎಲ್ಲಿಗೋ ಓಡಿದ ಪೊಲ್ಲ.
ರುಕ್ಕು ಅಪ್ಪಣನಿಗೆ ಬಾಡಿಗೆ ಹಣ ಕೊಟ್ಟಳು.
ನಾನು ಅಲ್ಲೇ ನಿಂತು ಬ್ಯಾಟ್ ಹಿಡಿದುಕೊಂಡು ಕೂಲಿಂಗ್ ಗ್ಲಾಸ್ ಏರಿಸಿ ಏನೇನೋ ಯೋಚನೆ ಮಾಡುತ್ತಿದ್ದೆ.
ನೀಲು All the best, ಗೆದ್ದು ಬಾ...ಕಪ್ಪು ತಾ.. ಅಂತ ಹೇಳಿ ಅಲ್ಲಿಂದ ಅಪ್ಪಣ್ಣ ಹೊರಟು ಬಿಟ್ಟರು..
ನಾನು ರುಕ್ಕು ಇಬ್ಬರೇ ನಿಂತಿದ್ದೆವು..
ಈ ಮಾರಿ ಎಲ್ಲಿಗೆ ಹೋದ ಅಂತ ಯೋಚಿಸುತ್ತಿರುವಾಗಲೇ... ಯಾವುದೋ ಹೂವಿನ ಅಂಗಡಿಗೆ ಹೋಗಿ ಒಂದು ಸೇವಂತಿ ಮಾಲೆಯನ್ನು ತಗೊಂಡು ಬಂದು ನನ್ನ ಕೊರಳಿಗೆ ಹಾಕಿಯೇ ಬಿಟ್ಟ ಪೊಲ್ಲ..
ಅಕ್ಕ... ಈಗ ನೋಡು ಹೀಗೆ ನಮ್ಮ ರಕ್ಷಿತ್ ಶೆಟ್ಟಿ.... ಬೋಡ ಶೀರಾ...
ಯಾವ ಮರ್ಲ ಮರ್ರೆ ಈ ಪೊಲ್ಲ..
ಅದಕ್ಕೆ ರುಕ್ಕು ಕೂಡ.. ವಾವ್... ಸೇಮ್ ರಕ್ಷಿತ್ ಶೆಟ್ಟಿಯೇ ಅಲ.. Super.. ಅಂದಳು ರಾಗವಾಗಿ.
ಇಬ್ಬರೂ ಆ ಸೈಡ್ ಈ ಸೈಡ್ ನಿಂತುಕೊಂಡು ಸೆಲ್ಫೀ ಕೂಡ ತೆಗೆದರು. ಗೊಂಬೆಯೊಂದಿಗೆ ತೆಗೆಸಿಕೊಂಡ ಹಾಗೇ.
ಹೇಯ್ ಪೊಲ್ಲ...ಈ ಮಾಲೆ ಎಲ್ಲಾ ಬೇಡವಾ... ಜನರು ಮಾರ್ನೆಮಿದ ವೇಷ(ನವರಾತ್ರಿಯ ವೇಷ) ಅಂತ ತಿಳ್ಕೊಬಹುದು ಮತ್ತೆ.
ಅವರಿಗೆ ಅಜ್ಜಿ ಬೇಡಿ(Dont care), ನೀನು ಬಾ,ಎಂದು ನಿನ್ನೆ ಅವನು ಹೇಳಿದ Place ಗೆ ನನ್ನನ್ನು ಕೈ ಹಿಡಿದುಕೊಂಡು ಎಳೆದು ಹೋದ..
ನಮ್ಮ ಹಿಂದಿನಿಂದಲೇ ರುಕ್ಕು ಬಂದಳು.
ನನಗೆ ಹೂವಿನ ಮಾಲೆ ಹಾಕಿ ಬಲಿ ಕೊಡಲು ಕರೆದುಕೊಂಡು ಹೋಗುವ ಕುರಿ ತರ ಫೀಲ್ ಆಯಿತು.
ಅವರ ಗ್ಯಾಂಗ್ ಅವರು ಇನ್ನೂ ಬರ್ಲಿಲ್ಲ.
ಸ್ವಲ್ಪ ಸಮಯ ಕಾದೆವು.
ಅವರ ಸುಳಿವಿಲ್ಲ.
ನನಗೆ ನೆಮ್ಮದಿಯಾಯಿತು..
ಪೊಲ್ಲ..ಅವರು ಬರಲ್ಲ... ಬಹುಶಃ ಹೆದರಿರಬೇಕು ಅಂತ ಕಾಣುತ್ತೇ.ಬಾಲ್ ಇದ್ರೆ ಕ್ರಿಕೇಟ್ ಆದರೂ ಆಡ್ಬಹುದಿತ್ತು..
ಇಲ್ಲ ಅಣ್ಣಾ.. Confirm ಬರ್ತಾರೆ Tension ಮಾಡ್ಬೇಡ....ನಿನಗೆ ಹಾಕಿದ ಈ ಸೇವಂತಿ ಹಾರ ಹೀಗೆ ಪೆಟ್ ಲಡಾಯಿಯೇ ಆಗದೆ ವೇಸ್ಟ್ ಆಗಿ ಹೋಗ್ಲಿಕ್ಕೆ ನಾನು ಬಿಡಲ್ಲ.
ನನಗೆ ಪೆಟ್ಟು ತಿನ್ನಿಸಲು ಎಂತಹ ಕಾತುರ... ಎಂತಹ ಆತುರ ಇವನಿಗೆ.
ಸುಮ್ನೆ ಅವನತ್ರ ಕೇಳಿದೆ,ನಿನ್ನ ಹತ್ರ ಅವರ ಫೋನ್ ನಂಬರ್ ಇದ್ರೆ ಬೇಗ ಬನ್ನಿ.. ನಮಗೆ ಮತ್ತೆ Return ಹೋಗ್ಲಿಕ್ಕೆ ಹೊತ್ತಾಗ್ತದೆ ಅಂತ ಕಾಲ್ ಮಾಡಿ ಹೇಳ್ಬಹುದಲ್ಲಾ.
ಅಯ್ಯೋ ಶೇ... ಈ ಐಡಿಯಾ ನನಗೆ ಹೋಳೆಯಲೇ ಇಲ್ಲ ನೋಡು, ಇಲ್ಲದಿದ್ದರೆ ಈಗಲೇ ಕಾಲ್ ಮಾಡಿ ಕರೆಯಬಹುದಿತ್ತು..ಎಂದು ತಲೆ ಚಚ್ಚಿಕೊಂಡ ಪೊಲ್ಲ.
ಎಂತಹ ಇದು ಬೆಟ್ ಮ್ಯಾಚ್ ಆಡ್ಲಿಕೆ ಎದುರು ಟೀಮ್ ನವರಿಗೆ ಬೇಗ ಬನ್ನಿ ಲೇಟ್ ಆಗ್ತದೆ ಅಂತ ಫೋನ್ ಮಾಡಿ ಕರೆಯುವುದಾ.. ನನಗೆ ನಾನೇ ಹೇಳಿಕೊಂಡೆ.
ಅಯ್ಯೋ...ಇನ್ನು ಯಾಕೆ ಬರ್ಲಿಲ್ಲ... ಇನ್ನು ಯಾಕೆ ಬರ್ಲಿಲ್ಲ... ಅಂತ ಅತ್ತಿಂದಿತ್ತ ಇತ್ತಿಂದತ್ತ ಅಲ್ಲೇ ಗಿರಕಿ ಹೊಡೆಯಲು ಶುರು ಮಾಡಿದ ಅವ.
ಅಲ್ಲೇ ಸ್ವರಾಜ್ಯ ಮೈದಾನದ ಕೊನೆಯಲ್ಲಿ ಅಥ್ಲೆಟಿಕ್ಸ್ ಗಾಗಿ ಸಿಂಥೆಟಿಕ್ ಟ್ರ್ಯಾಕ್ ಇದೆ.ಅದರಲ್ಲಿ ನಮ್ಮ ಆಳ್ವಾಸ್ ಕಾಲೇಜಿನ ಸ್ಟೂಡೆಂಟ್ಸ್ ರನ್ನಿಂಗ್ ಎಲ್ಲಾ Practice ಮಾಡುತ್ತಿದ್ದರು.
ಅದನ್ನೇ ನೋಡುತ್ತಿದ್ದ ರುಕ್ಕು ನನ್ನ ಬಳಿ ಕೇಳಿದಳು..
- ನಿಮಗೆ ರನ್ನಿಂಗ್ ಎಲ್ಲಾ ಬರುವುದಿಲ್ವಾ..
ಯಾಕೆ ಬರಲ್ಲ..ನನಗೆ ಎಲ್ಲಾ ಬರ್ತದೆ,ನಾನು ಹೇಗೆ ಓಡ್ತೇನೆ ಎಂದು ನೀನು Imagination ಕೂಡ ಮಾಡಲ್ಲ,ಕಾಲೇಜ್ ನಲ್ಲಿ ನಾನೇ ಚಾಂಪಿಯನ್.. ನಾನು ಜಿಂಕೆಯಂತೆ ಓಡ್ತೇನೆ.. ಅಂದೆ.
ಮನಸ್ಸಿನಲ್ಲಿಯೇ ಹೇಳಿಕೊಂಡೆ.. Next ಅದನ್ನು ಕಣ್ಣಾರೆ ನೋಡುವ ಭಾಗ್ಯ ನಿನಗೆ ಇಲ್ಲಿಯೇ ಸಿಗ್ತದೆ ನೋಡು.. ಕೆಲವೇ ಕ್ಷಣಗಳಲ್ಲಿ.
ನೀವು ಯಾವುದು 100 ಮೀಟರ್ ಓಡುವುದಾ?
ಅಲ್ಲ... ನಾನು ದೊಡ್ಡ ದೊಡ್ದದು..5000, 10000,20000, 50000 ಎಲ್ಲಾ.
ಹೌದಾ... ಅಷ್ಟೆಲ್ಲಾ.. ದೂರ ಓಡುವ ರೇಸ್ ಉಂಟಾ...
ಹಾನ್ ಉಂಟು.. ಟ್ರ್ಯಾಕ್ ಇರ್ತದೆ ಅಲಾ.. ಹಾಗೇ ಒಡ್ತಾನೇ ಇರ್ಬಹುದು.. ಲಕ್ಷ ಕೂಡ ಓಡ್ಬಹುದು.
ಅವಳು ಏನೇನೋ ಲೆಕ್ಕಾಚಾರ ಮನಸ್ಸಿನಲ್ಲಿಯೇ ಹಾಕತೊಡಗಿದಳು..ಬಹುಶಃ ಅದೇ ಇರ್ತದೆ ಲಕ್ಷ ಮೀಟರ್ ನಿಜವಾಗಿಯೂ ಇರ್ಬಹುದಾ ಅಂತ.
ಪುನಃ ಕೇಳಿದಳು..
ನೀವು ಗುಡ್ಡಗಾಡು ರೇಸ್ ಎಲ್ಲಾ ಓಡ್ಲಿಲ್ವಾ...
ಇಲ್ಲ... ಇಲ್ಲ..ಅದೆಲ್ಲ ಇಲ್ಲ... ಗುಡ್ಡೆಯಲ್ಲಿ ಹೀಗೆ ಸುಮ್ನೆ ಓಡ್ತೇನೆ.. ಗುಡ್ಡಗಾಡು ಆ ತರಹ ರೇಸ್ ಎಲ್ಲಾ ನಾನು ಓಡಿಲ್ಲ..
ಅವನೊಬ್ಬ Action ಮೂವಿ ನೋಡ್ಲಿಕ್ಕೆ ಬಂದಿದ್ದರೆ..
ಇವಳೊಬ್ಬಳು ಟೂರಿಸ್ಟ್ ಗೈಡ್ ಹಿಡ್ಕೊಂಡು ಶಾಲಾ ಪ್ರವಾಸಕ್ಕೆ ಬಂದ ಹಾಗೇ ಬಂದಿದ್ದಾಳೆ.
ಆಗಲೇ ರಪ್ಪ ಅಂತ ಒಂದು ಓಮ್ನಿ ಬಂದು ನಮ್ಮ ಎದುರು ನಿಂತಿದ್ದು..!
ಯಾರೋ ಒಬ್ಬರು ಎದುರು ಸೀಟಿನಿಂದ ಇಳಿದು ಬಂದು ಅದರ Sliding Door ಅನ್ನು ರಪ್ಪ ಅಂತ ಜಾರಿಸಿ ಬಿಟ್ಟರು...
ಆಗ ಅಲ್ಲಿ ಇದ್ದ ನೋಡಿ... ಬಾಯಿಯಲ್ಲಿ ಬ್ಲೇಡ್ ಅನ್ನು ಕಚ್ಚಿಕೊಂಡು ನಗರದ ಖ್ಯಾತ ರೌಡಿ ಬ್ಲೇಡ್ ಬಾಬು!!
(ಮುಂದುವರಿಯುತ್ತದೆ...)
.....................................................................................
#ನೀಲಮೇಘ 💙
Ab Pacchu
Moodubidire
(photo - 'ಉಳಿದವರು ಕಂಡಂತೆ' )

Comments
Post a Comment