ಬಿಡುಗಡೆ!

                                    " ಬಿಡುಗಡೆ  "





ಕೆಲವರು ಗೊಂಚಲು ಗೊಂಚಲು ಪುಗ್ಗೆಗಳನ್ನು  ಮಾರುತ್ತಾರೆ. ಇನ್ನು ಕೆಲವರು ಡಬ್ಬದಲ್ಲಿ ಸಿಹಿತಿಂಡಿಗಳನ್ನು ಮಾರುತ್ತಾರೆ; ಮತ್ತೆ ಕೆಲವರದ್ದು ಬುಟ್ಟಿಯ ತುಂಬಾ ಹೂ ಹಣ್ಣು, ನೆಲಗಡಲೆಯ ವ್ಯಾಪಾರ. ಆದರೆ ನಾನು ಹಕ್ಕಿ ಮಾರುತ್ತೇನೆ.


ಬಣ್ಣದ ಜೀವಂತ ಹಕ್ಕಿಗಳನ್ನು ನನ್ನ ಪಂಜರದಲ್ಲಿಟ್ಟುಕೊಂಡು, ಹೆಗಲಿಗೊಂದು ಹಳೆಯ ಜೋಳಿಗೆ ಏರಿಸಿಕೊಂಡು ನಾನು ರಸ್ತೆಯ ಬದಿಯಲ್ಲಿ ನನ್ನಿಷ್ಟದ ಹಾಡುಗಳನ್ನು ಮೆಲುವಾಗಿ ಗುನುಗುತ್ತಾ ಪ್ರತೀ ದಿನವೂ ಉದ್ದಕ್ಕೆ ನಡೆಯುತ್ತೇನೆ. ದೇವರಿಗೆ ದಿನಾಲೂ ದೀಪ ಹೊತ್ತಿಸದಿದ್ದರೂ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಬಹಳಷ್ಟು ಹೊತ್ತು ಕೆಂಪು ದೀಪವೊಂದೇ ಪ್ರಜ್ವಲವಾಗಿ ಸದಾ  ಉರಿಯುತ್ತಿರಲಿ ಎನ್ನುವುದೇ ನನ್ನದೊಂದು ಅನುದಿನದ ಪ್ರಾರ್ಥನೆ.


ಅಂದ ಹಾಗೆ ನನ್ನಲ್ಲಿ ಮಾರಲು ಮುದ್ದಾದ ಮೂರು ಹಕ್ಕಿಗಳಿವೆ. ಹೌದು, ಕೇವಲ ಮೂರು ಮಾತ್ರ. ಪ್ರತೀ ಬಾರಿಯೂ ಮಾರಲು ನನ್ನಲ್ಲಿರುವುದು ಈ ಮೂರು ಹಕ್ಕಿಗಳೇ! 


ರಸ್ತೆ ಪಕ್ಕ ನಡೆಯುವಾಗ ಯಾರಾದರೊಬ್ಬರ ಕಣ್ಣಿಗೆ ನಾನು ಅವಶ್ಯವಾಗಿ ಬೀಳುತ್ತೇನೆ. ನನಗಿಂತಲೂ ಹೆಚ್ಚು ನನ್ನ ಪಂಜರದ  ಹಕ್ಕಿಗಳ ಕಲರವವೇ ಈ ಹೆತ್ತವರ ಸಣ್ಣಪುಟ್ಟ ಮಕ್ಕಳ ಗಮನವನ್ನು ಇನ್ನಿಲ್ಲದೆ ಸೆಳೆದು ಬಿಡುತ್ತದೆ. ಏಕೆಂದರೆ ನನ್ನ ಈ ಮೂರೂ ಹಕ್ಕಿಗಳಿಗೆ ನಾನು ಆಕರ್ಷಿಸುವುದನ್ನು ಸಹ ಬಹುವಾಗಿ ಕಲಿಸಿದ್ದೇನೆ..ಹಹ್ಹಾ... ಹಹಹ್ಹಾ..ಹೌದು, ಇದನ್ನು ಹೇಳಿದರೆ ಯಾರೂ ನಂಬುವುದಿಲ್ಲ. ಆದರಿದು ನಿಜ,ಅವಶ್ಯವಾಗಿ  ನಂಬಲೇಬೇಕು.


ನಿಜ ಹೇಳಬೇಕೆಂದರೆ ಆಕರ್ಷಣೆ ನನ್ನ ಹಕ್ಕಿಗಳ ಆ ಸುಂದರ ಬಣ್ಣದಲ್ಲಿಲ್ಲ, ಅದು ಅವುಗಳ ಆ ಪುಟ್ಟ ಪುಟ್ಟ ಜಾದೂ ಕಣ್ಣಿನಲ್ಲಿದೆ! 


' ಹೇಯ್..' ಎಂದು ಯಾರಾದರೂ ಸಿಗ್ನಲ್ ನಲ್ಲಿ ಕೆಂಪು ದೀಪ ಬಿದ್ದಾಗ ನನ್ನನ್ನೇ ಜೋರಾಗಿ ಕೂಗಿ ಕರೆದರೆ, ಸಡಗರದಿಂದಲೇ ನನ್ನಲ್ಲಿರುವ ಬಣ್ಣದ ಹಕ್ಕಿಗಳನ್ನು ಅವರಿರುವ ಕಾರುಗಳ ಬಳಿಯೇ ಒಯ್ದು, ಪಂಜರ ಸಹಿತ ಅವರಿಗೆ ಹಕ್ಕಿ ಮಾರಲು ತುದಿಗಾಲಿನಲ್ಲಿಯೇ ನಿಂತು ಬಿಡುತ್ತೇನೆ ನಾನು.


ವಿಷಯ ಏನೆಂದರೆ ನನ್ನ ಬಳಿ ಯಾರೂ ಸಹ ಹಕ್ಕಿಗಳಿಗಾಗಿ ಚೌಕಾಸಿ ಮಾಡುವುದೇ ಇಲ್ಲ; ಮಾಡಲಾರರು ಕೂಡ. ಹೌದು ಅದು ಮಾತ್ರ ಎಂದಿಗೂ ಸಾಧ್ಯವೇ ಇಲ್ಲ. ಆದರೆ ಅದು ಜೀವ ಇರುವ ಹಕ್ಕಿಗಳು ಎಂಬ ಕಾರಣಕ್ಕಾಗಿ ಅಲ್ಲ. ಯಾರು ಕೂಡ ನನ್ನೊಡನೆ ಚೌಕಸಿಗೆನೇ ಇಳಿಯದಂತಹ ವಿಚಿತ್ರ ವಿಧ್ಯೆಯೊಂದು ನನಗೆ ಬಹಳ ಚಿಕ್ಕಂದಿನಿಂದಲೇ ಗೊತ್ತು..ಹಹ್ಹಾ... ಹಹಹ್ಹಾ..ಹೀಗೆಲ್ಲಾ ಹೇಳಿದರೂ ಇದನ್ನು ಕೂಡ ಯಾರೂ ನಂಬಲು ತಯಾರಿಲ್ಲ. ಯಾರೂ ನಂಬದಿದ್ದರೂ ನನ್ನ ಹಕ್ಕಿಗಳು ಇದನ್ನೆಲ್ಲಾ ನಂಬುತ್ತವೆ ಮತ್ತು ನನ್ನ ಹಕ್ಕಿಗಳನ್ನು ನಾನು ನಂಬುತ್ತೇನೆ!


ಹಣ ಕೊಟ್ಟು ನನ್ನಿಂದ ಗೂಡಿನ ಸಹಿತ ಹಕ್ಕಿ ಪಡೆದವರು ಅವರ ಗೂಡಿಗೆ ಹೋಗುತ್ತಾರೆ, ನನ್ನ ಗೂಡಿನ ಒಂದು ಹಕ್ಕಿ ಖಾಲಿಯಾದ ಖುಷಿಯಲ್ಲಿ ಒಂದಿಷ್ಟು ಹಣ ಎಣಿಸಿಕೊಂಡು ನಾನು ನನ್ನ ಡೇರೆಗೆ ಮರಳುತ್ತೇನೆ. ಇದು ನನ್ನ ನಿತ್ಯದ ದಿನಚರಿ. 


ಹಾನ್.. ಕೇವಲ ನಾನು ಮಾತ್ರ ನನ್ನ ಡೇರೆ ತಲುಪುತ್ತೇನೆ ಎಂದರೆ ಅದೂ ಕೂಡ ತಪ್ಪಾಗುತ್ತದೆ. ಏಕೆಂದರೆ ಕೇವಲ ಒಂದೇ ವಾರದ ಒಳಗೆ ನಾನು ಮಾರಿದ ಈ ಮೂರೂ ಹಕ್ಕಿಗಳು ಪುನಃ ನನ್ನ ಬಳಿಗೆಯೇ ಹಾರಿಕೊಂಡು ಬಂದು ಬಿಡುತ್ತವೆ. ಎಲ್ಲಿಗೇ ಹೋದರೂ ಅವುಗಳಿಗೆ ನನ್ನ ಡೇರೆಯದ್ದೊಂದು ವಿಳಾಸ ಬಹಳ ಸ್ಪಷ್ಟವಾಗಿಯೇ ಗೊತ್ತಿದೆ! 


ನಿಜ ಹೇಳಬೇಕೆಂದರೆ ಹಕ್ಕಿಗಳಿಗೆ ಮನೆಯನ್ನೆಲ್ಲಾ ಕೂಲಂಕಷವಾಗಿ ಪರಿಶೀಲಿಸಿ ಒಂದೇ ವಾರದಲ್ಲಿ ಹೇಗೆ ಸೇರಿಕೊಂಡ ಮನೆಯಿಂದ, ಆ ನನ್ನ ಪಂಜರದಿಂದ ತಪ್ಪಿಸಿಕೊಂಡು ಮರಳಿ ನನ್ನತ್ತ ಹಾರಿ ಬರಬೇಕೆಂದು ಮತ್ತು ಪುನಃ ನನ್ನನ್ನೇ ಬಂದು ಸೇರಬೇಕೆಂದು ನನ್ನ ಹಕ್ಕಿಗಳಿಗೆ ನಿರ್ದೇಶನ ನೀಡಿದ್ದೇ ಸ್ವತಃ ನಾನು!! 


ಅವುಗಳು ನನ್ನ ಮೈಯ ವಾಸನೆಯನ್ನು, ನನ್ನ ಧ್ವನಿಯ ಕಂಪನವನ್ನು ಎಂದಿಗೂ ಮರೆತಿದ್ದೇ ಇಲ್ಲ ಹಾಗೂ ಕೇವಲ ನನ್ನ ಪಂಜರದಲ್ಲಿ ಮಾತ್ರ ನಿರಂತರವಾಗಿ ಬಂಧಿಯಾಗುತ್ತಾ ಹೋಗುವುದನ್ನು ಸಹ ಅವುಗಳು ಇಲ್ಲಿಯವರೆಗೆ ಎಂದೂ ತಪ್ಪಿಸಿಯೂ ಇಲ್ಲ.


ಹಕ್ಕಿ ಮಾರಿದ ಹಣವೂ ನನ್ನದೇ, ಮಾರಿದ ಹಕ್ಕಿಯೂ ಮಾರಿದಷ್ಟೂ ಸಲವು ಪದೇ ಪದೇ ನನ್ನದೇ...ಮುಂದೆಯೂ ನನ್ನದೇ..ಎಂದೆಂದೂ ನನ್ನದೇ..ಹಹ್ಹಾ... ಹಹ್ಹಾ. 


ಆದರೆ ಇದೆಲ್ಲಾ ಹೇಗೆ?


ಇದೆಲ್ಲಾ ಹೇಗೆಂದರೆ ನನ್ನಲ್ಲಿ ಒಂದು ವಿಚಿತ್ರವಾದ ವಿಷಯವಿದೆ. ಅದುವೇ ಜಾದೂ. ಬರೀಯ ಕೈ ಚಮತ್ಕಾರದ ಸಣ್ಣಪುಟ್ಟ ಜಾದೂ ನನ್ನದಲ್ಲ,ನನ್ನದು ಮಂತ್ರ ತಂತ್ರಗಳ ಕಾಲಾ ಜಾದೂ !!ಹಹಹ್ಹಾ..ಹಹಹ್ಹಾ...!


ಹೌದು, ನಾನೊಬ್ಬ ಕಾಲಾ ಜಾದೂ ತಿಳಿದಂತಹ ಮಾಯಾವಿ, ಆದರೆ ನಾನು ಬರೀ ಎಲ್ಲರಂತೆ ಸಾಮಾನ್ಯ ಮಾಯಾವಿಯೂ ಅಲ್ಲ, ಕೆಲವೊಂದು ವಿಷಯಗಳಲ್ಲಿ ನಾನು ಅಸಾಮಾನ್ಯ ಮಾಂತ್ರಿಕನೂ ಹೌದು!! ಈ ಶಹರದಲ್ಲಿ ಹುಲುಸಾಗಿ ಅರಳಿ ದಟ್ಟವಾಗಿ ಹರಡಿಕೊಂಡ ರಾತ್ರಿಯ ಕತ್ತಲಿಗೆ ಮಾತ್ರ ನನ್ನದೊಂದು ಹುಚ್ಚು ಸಾಹಸದ ಸ್ಪಷ್ಟ ಪರಿಚಯವಿರುವುದು! 


ಈ ಒಂದು ಹಕ್ಕಿಗಳ ವಿಶಿಷ್ಟ ಮಾಯಾವಿ ತಂತ್ರ ವಿದ್ಯೆ ನನ್ನ ಹಳ್ಳಿಯ ಸ್ಮಶಾನದ ಆ ನನ್ನ ಮಾಂತ್ರಿಕ ಗುರುವಿಗೆ, ಅವರ ಪುತ್ರನಿಗೆ ಮತ್ತು ನನಗೆ, ಒಟ್ಟಿನಲ್ಲಿ ಮೂರು ಜನರಿಗಷ್ಟೇ ತಿಳಿದಿದೆಯೇ ಹೊರತು ಇನ್ನು ಯಾರಿಗೂ ಗೊತ್ತಿಲ್ಲ. ಅದರಲ್ಲೂ ಈ ಮಹಾಶಹರದಲ್ಲಿ ಈ ತಂತ್ರ ವಿದ್ಯೆ ಕೇವಲ...ಕೇವಲ ನನಗಷ್ಟೇ ಗೊತ್ತು.. ಹಹ್ಹಾ... ಹಹ್ಹಾ! 


ಅಂದ ಹಾಗೆ ಈ ಮೂರು ಹಕ್ಕಿಗಳು ಕೂಡ ಹಳ್ಳಿಯ ಆ ನನ್ನ ಗುರುವಿನ ಬಳಿ ಇದ್ದ ಸ್ಮಶಾನದ ಮಾಯಾವಿ ಹಕ್ಕಿಗಳೇ ಆಗಿವೆ. ವಿದ್ಯೆ ಕಲಿಸಿದ ಮಾಂತ್ರಿಕ ಗುರುವಿನಿಂದಲೇ ಅವುಗಳನ್ನು  ವಶಪಡಿಸಿಕೊಂಡು, ಮಂತ್ರ ತಂತ್ರದ ಮೂಲಕವೇ ಉಪಯವಾಗಿ ಎಗರಿಸಿಕೊಂಡು, ಹಳ್ಳಿಯ ಸ್ಮಶಾನದಿಂದ ಹೊರಟು ಈ ಶಹರಕ್ಕೆ ಅದು ಯಾವುದೋ ರಣಬೇಸಿಗೆಯಲ್ಲಿ ಜೋಳಿಗೆ ಏರಿಸಿಕೊಂಡು ಹಾಗೇ ನಡೆದವನು ಬಂದವನು ನಾನು. ಹೌದು, ಕಲಿಸಿದ ಗುರುವಿಗೆನೇ ತಿರುಮಂತ್ರ..ಹಹಹ್ಹಾ! 


ಹೀಗಾಗಿ ನಾನು ಮಾರಿದ ಹಕ್ಕಿಗಳು ಎಲ್ಲಿಗೂ ಹೋಗದೆ ಮತ್ತೆ ಮತ್ತೆ ನನ್ನನ್ನೇ ಹುಡುಕಿಕೊಂಡು ಬಂದು ನನ್ನ ಬಳಿಯೇ ಇದ್ದು ಬಿಡುತ್ತವೆ. ಈ ಕಾರಣದಿಂದಾಗಿ ನನಗೆ ಬದುಕು ಸಾಗಿಸಲು ಮತ್ತು ಹಕ್ಕಿಗಳದ್ದೊಂದು ಇಂತಹ ವ್ಯಾಪಾರ ನಡೆಸಲು ಜೀವನದುದ್ದಕ್ಕೂ ಕೇವಲ ಮೂರೇ ಮೂರು ಹಕ್ಕಿಗಳು ಸಾಕು. ಹೌದು ಕೇವಲ ಮೂರು ಈ ಹಕ್ಕಿಗಳು ಮತ್ತು ಪ್ರತೀ ಬಾರಿಯೂ ಈ ಮೂರು ಹಕ್ಕಿಗಳಿಗಾಗಿ ಹೊಸ ಪುಟ್ಟ ಪುಟ್ಟ ಪಂಜರಗಳು ಅಷ್ಟೇ.


ಹಾಗಾದರೆ ನಾನು ಮೋಸಗಾರನೇ?


ಅಲ್ಲ..! 


ನಾನು ಬರೀಯ ಮೋಸಗಾರನಲ್ಲ. ನಾನೊಬ್ಬ ಅವಶ್ಯವಾಗಿ  ಡಕಾಯಿತನು ಕೂಡ ಹೌದು! ಹೌದು, ನಾನೊಬ್ಬ ಹಕ್ಕಿ ವ್ಯಾಪಾರಿ ವೇಷದದಲ್ಲಿರುವ ಈ ಶಹರದ ಅತೀ ದೊಡ್ಡ ಡಕಾಯಿತ. ಆದರೆ... ಆದರೆ ಅದು ಈ ಶಹರಕ್ಕೆ ಗೊತ್ತೇ ವಿನಹ ಇಲ್ಲಿಯ  ಜನರಿಗಲ್ಲ..ಹಹಹ್ಹಾ... ಹಹಹ್ಹಾ...!!


ನಾನು ಮಾರಿದ ಹಕ್ಕಿಗಳು ಮತ್ತೆ ಬಂದು ನನ್ನ ಗೂಡು ಸೇರಿದ ಮೇಲೆ, ನನ್ನಿಂದ ಹಕ್ಕಿ ಕೊಂಡವರ ಮನೆಯ ದಾರಿಯನ್ನು ಸಹ ನನಗೆ ಈ ಹಕ್ಕಿಗಳೇ ತೋರಿಸುತ್ತವೆ. ನಾನು ಅಲ್ಲಿಗೆ ಹೋಗಿ  ಹೊರಗಡೆಯೇ ಇದ್ದು ಸರಿಯಾದ ಸಮಯಕ್ಕೆ ಹೊಂಚು ಹಾಕಿ ಕಾಯುತ್ತೇನೆ. ಮಾರಟವಾದ ಹಕ್ಕಿ ಆ ಮನೆಯಲ್ಲಿ ಅದಾಗಲೇ ತನಗೆ ಗೊತ್ತಿರುವ ಜಾಗದ ಮೂಲಕ ರಪ್ಪನೇ ಒಳಗೆ ನುಸುಳಿ ಬಿಡುತ್ತದೆ. ಮನೆಯೊಳಗೆ ಸಂಪೂರ್ಣವಾಗಿ ಹಾರಾಡಿ ಯಾವಾಗ ಮನೆಯಲ್ಲಿ ಯಾರೂ ಇಲ್ಲವೆಂದು ಅದಕ್ಕೆ ಖಚಿತವಾಗಿ ಗೊತ್ತಾಗುತ್ತದೆಯೋ ಆಗ ನನ್ನ ಮಾಯಾವಿ ಹಕ್ಕಿ ವಿಶಿಷ್ಟವಾಗಿ ಶಿಳ್ಳೆ ಹೊಡೆದು ಯಾವುದೇ ಅಪಾಯವಿಲ್ಲ ಇಲ್ಲವೆಂದು ನನಗೆ ತಿಳಿಸಿ ಬಿಡುತ್ತದೆ. ಆ ನಂತರದ ಮುಂದಿನ ಕೆಲ ನಿಮಿಷಗಳು ನನ್ನ ಅದ್ಭುತವಾದ ಕೈಚಳಕದ ಪ್ರದರ್ಶನಕ್ಕೆಂದೇ ಸೀಮಿತವಾಗಿರುತ್ತದೆ ಮತ್ತು ಕೆಲವೇ ಕ್ಷಣಗಳಲ್ಲಿ ಆ ಮನೆಯೇ ದರೋಡೆಯಾಗಿ ಬಿಟ್ಟಿರುತ್ತದೆ!


ಈ ಹಕ್ಕಿ ವ್ಯಾಪಾರ ಕೇವಲ ಹೆಸರಿಗಷ್ಟೇ, ದರೋಡೆಯೇ ನನ್ನ ನಿಜವಾದ ವೃತ್ತಿ ಹಾಗೂ ಅದುವೇ ನನ್ನ ಆತ್ಮದ್ದೊಂದು ಪರಮ ಸುಖ. ನಾನು ಬಿಡಬೇಕು ಎಂದುಕೊಂಡರೂ ಅದು ನನ್ನನ್ನು ಬಿಡುವುದಿಲ್ಲ. ಬಹಳ ಹಳೆಯ ಚಾಳಿಯದು, ಅದನ್ನು ನಾನು ಬಹಳ ಚಿಕ್ಕಂದಿನಲ್ಲಿ ನನ್ನ ಹಳ್ಳಿಯ ಗುರುವಿನ ಈ ಮೂರು ಹಕ್ಕಿಗಳನ್ನು ಲೂಟಿ ಹೊಡೆಯುವುದರಿಂದಲೇ ಶುರುಮಾಡಿ ಬಿಟ್ಟಿದ್ದೆ.


ನನಗೆ ಹಿಂದೆ ಮುಂದೆ ಅಂತ ಯಾರೂ ಇಲ್ಲ. ಚಿಕ್ಕಂದಿನಿಂದಲೇ ತೀರಾ ಒಂಟಿ ನಾನು. ಅನಾಥ ಎನ್ನುವ ಪದಕ್ಕೂ ಬೇಜಾರು ಬರುವಷ್ಟು ಅನಾಥ. ಬಾಲ್ಯದ ಆ ಹಸಿವು ಹಾಗೂ ಕಿತ್ತು ತಿನ್ನುವ ಬಡತನ ನನ್ನ ಬಾಳಿನ ಕೊನೆಯಿಲ್ಲದ ದುಃಸ್ವಪ್ನಗಳು. ಚಿಕ್ಕ ವಯಸ್ಸಿನಲ್ಲಿ ಹಸಿವು ಆದಾಗ ಸಿರಿವಂತರ ಎದುರು ಹೋಗಿ ಕೈ ಚಾಚಿ ನಿಂತಿದ್ದೆ, ಅವರುಗಳು ನನ್ನನ್ನು ಬಡಿದು ಹಿಂಸಿಸಿದರೆ ಹೊರತು ನನ್ನ ಹಸಿದ ಹೊಟ್ಟೆಗೆ ಒಂದು ಕಾಳನ್ನಾಗಲಿ ಕೂಳನ್ನಾಗಲಿ ಎಸೆಯಲಿಲ್ಲ. ಮಗು ಎಂಬ ಕನಿಕರವೂ ಅವರಲ್ಲಿ ಯಾರಲ್ಲೂ ಇರಲಿಲ್ಲ. ನನಗೆ ಸಮಾಜದ ಈ ಸಿರಿವಂತರ ದರ್ಪ ಹಿಡಿಸಲಿಲ್ಲ, ಹಾಗಾಗಿ ದೊಡ್ಡವನಾದ ಮೇಲೆ ನಾನು ಕೂಡ ಯಾರಿಂದಾದರೂ ಕಿತ್ತು ತಿನ್ನುವುದೇ ಆದರೆ ಈ ದೊಡ್ಡ ದೊಡ್ಡ ಶ್ರೀಮಂತರಿಂದಲೇ ಕಿತ್ತು ತಿನ್ನಬೇಕು ಎಂದು ನಾನು ಆಗಲೇ  ನಿರ್ಧರಿಸಿ ಬಿಟ್ಟಾಗಿತ್ತು. 


ಅದಕ್ಕಾಗಿ ನಾನು ಶಹರ ಸೇರಿದ ಮೇಲೆ ಅದನ್ನೇ ಬಹಳ ಶ್ರದ್ಧೆಯಿಂದ ಇಲ್ಲಿಯವರೆಗೂ ಮಾಡಿಬಿಟ್ಟೆ. ನನಗೇನು ಈ ಸಿರಿವಂತಿಕೆ, ಹಣ,ಐಶ್ವರ್ಯದ ಮೇಲೆ ಅಂತಹ ಯಾವುದೇ ಆಸೆಯಾಗಲಿ, ಆಸಕ್ತಿಯಾಗಲಿ ನಿಜಕ್ಕೂ ಇಲ್ಲ. ನನಗೆ ಈ ಸಿರಿವಂತರ ದರ್ಪದ ಮನೆಯ ಮೇಲೆ ನಾನು ಮಾಡುವ ಈ ಮಾಯಾವಿ ಲೂಟಿಗಳು ಸಿಕ್ಕಾಪಟ್ಟೆ ನಶೆಯನ್ನು ತಂದು ಕೊಡುತ್ತದೆ. ದೊಡ್ಡ ನಶೆಗಾಗಿ ಸಣ್ಣಪುಟ್ಟ ಮನೆಗಳ ಲೂಟಿಗಳನ್ನು ಮಾಡದೇ ಕೇವಲ ದೊಡ್ಡ ದೊಡ್ಡ ಮನೆಗಳನ್ನಷ್ಟೇ ದರೋಡೆ ಮಾಡಲು ನಾನು ಮುಂದಾಗುತ್ತಿದ್ದೆ ಮತ್ತು ಪ್ರತೀ ಬಾರಿಯೂ ನನ್ನ ಸಾಹಸದಲ್ಲಿ ನಾನು ಸದಾ ಯಶಸ್ವಿ. ಕೇವಲ ಒಬ್ಬನೇ ನಡುರಾತ್ರಿ ರಾಜರೋಷವಾಗಿ ದೊಡ್ಡ ಮನೆಗೆ ನುಗ್ಗಿ, ಇಡೀ ಮನೆಯನ್ನು ನನ್ನದೊಂದು ಕೂದಲು ಕೂಡ ಕೊಂಕದಂತೆ ಡರೋಡೆ ಮಾಡುವುದರಲ್ಲಿ ನನಗೆ ಅದೇನೋ ಮಜಾ ಸಿಗುತ್ತದೆ.. ಹಹ್ಹಾ..!


ಇಲ್ಲಿಯವರೆಗೂ ನಾನು ಈ ಶಹರದಲ್ಲಿ ಬಹಳಷ್ಟು ದರೋಡೆ ಮಾಡಿದ್ದೇನೆ. ಆದರೂ ನಾನು ಇನ್ನೂ ಸಿಕ್ಕಿ ಬಿದ್ದಿಲ್ಲ. ನನ್ನ ಈ ಮಾಯಾವಿ ಹಕ್ಕಿಗಳಿಂದಾಗಿ ನಾನು ಸಿಕ್ಕಿ ಬೀಳುವುದೂ ಇಲ್ಲ.. ಹಹಹ್ಹಾ.... ಇಲ್ಲ, ಎಂದಿಗೂ ಸಿಕ್ಕಿ ಬೀಳುವುದೇ ಇಲ್ಲ. 


ಅದೊಂದು ದಿನ ಕಾರಿನಲ್ಲಿ ದಂಪತಿಗಳಿಬ್ಬರು ಇದ್ದರು. ಆ ತಾಯಿಯ ಮಡಿಲಲ್ಲಿ ಪುಟ್ಟ ಕೋಳಿಮರಿಯಂತಹ ಒಂದು ಹೆಣ್ಣು ಮಗು ಕೂಡ ಇತ್ತು. ಸಿಹಿ ನಿದ್ದೆ ಮುಗಿಸಿ ಆಗಷ್ಟೇ ಆಕಳಿಸುತ್ತಾ ಎದ್ದಿದ ಅದು ಸಿಗ್ನಲ್ ನಲ್ಲಿ ನಿಂತಿದ್ದ ಅದರ ಕಾರಿನ ಹೊರಗಿನ ಪ್ರಪಂಚವನ್ನು ಇಷ್ಟಿಷ್ಟೇ ಕಣ್ಣು ಬಿಟ್ಟುಕೊಂಡು ನಿಧಾನಕ್ಕೆ ಎಲ್ಲವನ್ನೂ ಕಣ್ತುಂಬಿಸಿಕೊಳ್ಳುತ್ತಿತ್ತು. ಆಗ ಅದರ ಕಣ್ಣಿಗೆ ಬಿದ್ದಿದ್ದು ನನ್ನ ಈ ಮಾಯಾವಿ ಹಕ್ಕಿಗಳು.


ಆ ಮಗು ಮತ್ತಷ್ಟು ಕಣ್ಣರಳಿಸಿ ನನ್ನ ಹಕ್ಕಿಗಳನ್ನು ಕೈ ಚಾಚಿ  ಕರೆಯಿತು. ನಾನು ಮತ್ತೊಂದು ರಾತ್ರಿಯ ಬೇಟೆ ಸಿಕ್ಕಿತೆಂದು ಮನಸ್ಸಿನಲ್ಲಿ ಮಂಡಿಗೆ ಮುರಿಯುತ್ತಾ ಸಂಭ್ರಮದಿಂದಲೇ ಆ ಕಾರಿನ ಬಳಿ ಓಡಿದೆ! 


" ನಿನಗೆ ಯಾವ ಬಣ್ಣದ ಹಕ್ಕಿ ಬೇಕು ಕಂದಾ.. "  ಎಂದು ತುಂಬಾ ನಯವಾಗಿಯೇ ಆ ಮಗುವಿನ ಬಳಿ ಕೇಳಿದೆ ನಾನು.


ನನ್ನ ಬಳಿ ಒಂದು ನೀಲಿ ಬಣ್ಣದ ಆಕರ್ಷಕ ಹಕ್ಕಿ ಇತ್ತು. ಇದು  ಬೇಕು ಎಂದು ಆ ಮಗು ತನ್ನ ಕೈ ಬೆರಳನ್ನು ಪಂಜರದಲ್ಲಿದ್ದ ನೀಲಿ ಹಕ್ಕಿಯತ್ತ ಬೊಟ್ಟು ಮಾಡಿ ತೋರಿಸಿತು.


ನಾನು ಪಂಜರದ ಸಹಿತ ಆ ನೀಲಿ ಹಕ್ಕಿಯನ್ನು ಆ ಮಗುವಿನ ತಾಯಿ ಕೈಗಿತ್ತೆ. ಮಗು ಆ ಕೂಡಲೇ ನನ್ನ ಕೈಗೆ ಹಕ್ಕಿಯನ್ನು ಕೊಡು ಎಂದು ತನ್ನ ತಾಯಿಯನ್ನು ಇನ್ನಿಲ್ಲದಂತೆ ಒತ್ತಾಯಿಸಿತು.


ತಾಯಿ ಮಗುವಿನ ಒತ್ತಾಯಕ್ಕೆ ಮಣಿದು ನೀಲಿ ಹಕ್ಕಿಯನ್ನು ಪಂಜರದಿಂದ ಹೊರ ತೆಗೆದು ಆ ಕಂದಮ್ಮನ ಕೈಗೆ ಅತೀ ಜಾಗರೂಕತೆಯಿಂದ ನೀಡಿದಳು. ತನ್ನ ಮುದ್ದು ಕೈಗಳಲ್ಲಿ ಪುಟ್ಟ ನೀಲಿ ಹಕ್ಕಿಯನ್ನು ಹಿಡಿದುಕೊಂಡ ಆ ಮಗು ಅದಕ್ಕೊಂದು ಸಿಹಿ ಪಪ್ಪಿ ನೀಡಿತು, ಆಮೇಲೆ ತನ್ನೆರಡೂ ಕೈಗಳನ್ನು ಇದ್ದಕ್ಕಿದ್ದಂತೆ ಸಡಿಲಿಸಿದ ಮಗು ಆ ನೀಲಿ ಹಕ್ಕಿಯನ್ನು ಮೇಲಕ್ಕೆ ಹಾರಿ ಹೋಗಲು ಬಿಟ್ಟು ಬಿಟ್ಟಿತು! 


ನೀಲಿ ಹಕ್ಕಿ ನೀಲಿ ಬಾನಿಗೆನೇ ಹಾರಿತು. ದೂರ,ಬಹು ದೂರ ಹಾರಿ  ಹೋಯಿತು. ಹಾರಿ ಹಾರಿ ಹಾಗೇ ನೀಲಿಯಲ್ಲೇ ಅದು ಕಣ್ಮರೆಯಾಯಿತು!


ಅದನ್ನು ಕಂಡ ಮಗು ಹಿರಿ ಹಿರಿ ಹಿಗ್ಗಿತು, ಚಪ್ಪಾಳೆ ತಟ್ಟುತ್ತಾ ಮತ್ತಷ್ಟು ನಕ್ಕಿತು. ಬಹುಶಃ ಆ ಮಗು ಯಾವತ್ತೂ ಅಷ್ಟೊಂದು ನಕ್ಕಿರಲಿಲ್ಲ ಎಂದು ಕಾಣುತ್ತದೆ. ಹಾಗಾಗಿ ಆ ದಂಪತಿಗಳಿಬ್ಬರ ಮುಖದಲ್ಲಿ ಖುಷಿಯ ಬುಗ್ಗೆಯೇ ಆ ಕ್ಷಣದಲ್ಲಿ ಟಿಸಿಲೊಡೆದು ಬಿಟ್ಟಿತು. 


ಈಗ ಮಗು ನನ್ನ ಬಳಿಯಿದ್ದ ಇನ್ನೊಂದು ಅರಶಿಣ ಬಣ್ಣದ ಹಕ್ಕಿಯತ್ತ ಕೈ ತೋರಿಸಿತು. ನಾನು ಮಗುವಿನ ತಾಯಿಯನ್ನೇ ನೋಡಿದೆ. ಆ ತಾಯಿ ನಗು ನಗುತ್ತಾ ಅದನ್ನೇ ಕೊಡಿ ಎಂದು ತಲೆ ಅಲ್ಲಾಡಿಸುವ ಮೂಲಕ ಒಪ್ಪಿಗೆ ಸೂಚಿಸಿದಳು.


ನಾನು ಈ ಬಾರಿ ಅರಶಿನ ಬಣ್ಣದ ಹಕ್ಕಿಯ ಪಂಜರವನ್ನು ತಾಯಿಯ ಕೈಗೆ ಕೊಟ್ಟೆ. ಮಗು ಆ ತಾಯಿಗೆ ಮತ್ತೆ ಹಕ್ಕಿ ಕೊಡು ಎಂದು ಬೇಡಿಕೆ ಸಲ್ಲಿಸಿತು.


ತಾಯಿ ಪಂಜರದಿಂದ ಹಕ್ಕಿ ತೆಗೆದು ಮತ್ತೆ ಮಗುವಿನ ಕೈಗೆ ನಾಜೂಕಾಗಿಯೇ ಆ ಅರಶಿನದ ಹಕ್ಕಿಯನ್ನು ಒಪ್ಪಿಸಿದಳು. ಹಕ್ಕಿಗೆ ಮುತ್ತು ನೀಡಿ ಮಗು ಮತ್ತೆ ತನ್ನ ಎರಡೂ ಕೈಗಳನ್ನು ಬಿಟ್ಟು ಬಿಟ್ಟಿತು, ಅರಶಿನ ಬಣ್ಣದ ಹಕ್ಕಿ ಪುರ್ರೆಂದು ಮೇಲಕ್ಕೆ ಹಾರಿತು. ಮಗು ಮತ್ತೆ ಜೋರಾಗಿ ನಕ್ಕಿತು; ಜೊತೆಯಲ್ಲಿ ಆ ದಂಪತಿಗಳು ಕೂಡ ನಗುವಿನ ಹೂಗಳನ್ನೇ ತಮ್ಮ ಮುಖದ ತುಂಬೆಲ್ಲಾ ಅರಳಿಸಿಕೊಂಡು ಬಿಟ್ಟರು.


ಮಗು ಈ ಬಾರಿ ಕೆಂಪು ಬಣ್ಣದ ಹಕ್ಕಿಯತ್ತ ಮನಸ್ಸು ಮಾಡಿತು.  ಅದು ಅದರ ತಾಯಿಗೂ ಅರಿವಾಯಿತು. ನಾನು ಮತ್ತೆ ತಾಯಿಯನ್ನೇ ನೋಡಿದೆ. ಆ ತಾಯಿ ತನ್ನ ಕಣ್ಣುಗಳಲ್ಲಿಯೇ ಅದೇ ಹಕ್ಕಿಯನ್ನು ಕೊಡಿ ಎಂಬ ಇಶಾರೆಯನ್ನು ಮತ್ತೆ ನಗುತ್ತಲೇ ನನಗೆ ರವಾನಿಸಿದಳು.


ಈಗಲೂ ಅದೇ ಕತೆ. ಕೆಂಪು ಹಕ್ಕಿ ಮಗುವಿನ ಕೈಯಿಂದ ಬಿಡುಗಡೆಗೊಂಡು ಮನಸ್ಸು ಬಂದತ್ತ ರೆಕ್ಕೆ ಬಡಿದುಕೊಂಡು ಹೋಗಿ ಆಕಾಶದಲ್ಲಿ ಮರೆಯಾಯಿತು! 


ಆ ಕಾರಿನಲ್ಲಿದ್ದ ಮೂವರೂ ಆ ದಿನ ಬಹಳ ಖುಷಿ ಪಟ್ಟರು. ಅವರನ್ನು ನೋಡುವಾಗ ಮೊದಲ ಬಾರಿಗೆ ಆ ಮೂವರೂ ಒಟ್ಟಿಗೆ ಅಷ್ಟೊಂದು ಖುಷಿಯಾಗಿದ್ದಾರೆ ಎಂದು ಒಮ್ಮೆ ನನಗೆ ಅನ್ನಿಸಿ ಬಿಟ್ಟಿತು. 


ಹಕ್ಕಿಗಳು ಹಾರಿ ಹೋದ ನಂತರ ತಾಯಿ ಅವಳ ಕೈಯಲ್ಲಿದ್ದ ಮೂರೂ ಖಾಲಿ ಪಂಜರಗಳನ್ನು ಮತ್ತೆ ನನ್ನ ಕೈಗಿತ್ತಳು. ಮಗುವಿನ ತಂದೆ ಮೂರು ಹಕ್ಕಿಗಳ ಬೆಲೆಗೆ ಇನ್ನೊಂದಿಷ್ಟು ಹಣ ಸೇರಿಸಿಯೇ ಮಗುವಿನ ಕೈಗೆ ಕೊಟ್ಟು, ಅದನ್ನು ನನಗೆ ಕೊಡಲು ಹೇಳಿದನು.


ಹಣ ಪಡೆಯಲು ಕಾರತ್ತ ಬಾಗಿದ ನನ್ನ ಒರಟು ಕೆನ್ನೆಯನ್ನು ಮಗು ಬಹಳ ಪ್ರೀತಿಯಿಂದ ಸವರಿತು. ಯಾವತ್ತೂ ನಾನು ಮಗುವಿನದ್ದೊಂದು ಅಂತಹ ಸುಕೋಮಲ ಸ್ಪರ್ಶವನ್ನು ಅನುಭವಿಸಿದವನೇ ಅಲ್ಲ. ಆ ಮಗುವಿನ ಕಣ್ಣಲ್ಲಿ ಅದೆನೋ ಸೆಳೆತವಿತ್ತು, ನನ್ನ ಹಕ್ಕಿಗಳ ಕಣ್ಣಿಗಿಂತಲೂ ಹೆಚ್ಚಿನ ನೆಮ್ಮದಿ ನೀಡುವ ಆಕರ್ಷಣೆ ಆ ಪುಟ್ಟ ಪುಟ್ಟ ಕಣ್ಣುಗಳಲ್ಲಿ ಇದ್ದವು. ಅವತ್ತು ಮೊದಲ ಬಾರಿಗೆ ನನ್ನೊಳಗೆ ಏನೋ ಒಂದು ಅವಶ್ಯವಾಗಿ ಜರುಗಿತ್ತು. ಆದರೆ ಅದೆನೆಂದು ನನಗೆ ಆ ಕ್ಷಣಕ್ಕೆ ಅರಿಯಲು ಸಾಧ್ಯವಾಗಲಿಲ್ಲ. 


ಪುಟ್ಟ ಪರಿವಾರವಿದ್ದ ಆ ಕಾರು ಸಿಗ್ನಲ್ ಬದಲಾದ ನಂತರ ಅಲ್ಲಿಂದ ವೇಗವಾಗಿ ಹೊರಟು ಹೋಯಿತು.


ಕಾರು ಮರೆಯಾದ ಕೂಡಲೇ ನಾನು ಜೋರಾಗಿ ಮೂರು ಬಾರಿ ಆಕಾಶ ನೋಡುತ್ತಾ ಶಿಳ್ಳೆ ಹೊಡೆದೆ.ಆ ಕೂಡಲೇ ನನ್ನ ಮೂರೂ ಹಕ್ಕಿಗಳು ಒಂದೊಂದು ಶಿಳ್ಳೆಗೆ ಒಂದೊಂದರಂತೆ ಆಕಾಶದಿಂದಿಳಿದು ಬಂದು ಮತ್ತೆ ನನ್ನ ಭುಜದ ಮೇಲೆಯೇ ಕುಳಿತುಕೊಂಡಿದ್ದವು..ಹಹ್ಹಾ.. ಹಹ್ಹಾ. 


ಹಕ್ಕಿಗಳನ್ನು ಮತ್ತೆ ಪಂಜರಗಳಿಗೆ ಹಾಕಿಕೊಂಡು ನನ್ನ ಡೇರೆಯತ್ತ ನಡೆದೆ ನಾನು. ಆ ದಿನ ಮೂರು ಹಕ್ಕಿಗಳ ಹಣವನ್ನು ಜೇಬಿಗಿಳಿಸಿದ ನಾನು ಆ ಒಂದು ಪುಟ್ಟ ಮಗುವಿನಲ್ಲಾದ ಖುಷಿಯನ್ನು ಕಂಡು ಒಂದು ಹೊಸ ನಿರ್ಧಾರಕ್ಕೆನೇ ಬಂದು ಬಿಟ್ಟಿದ್ದೆ.


ಅದೇನೆಂದರೆ ಇನ್ನು ಮುಂದೆ ನಾನು ಹಕ್ಕಿ ಮಾರುವುದಿಲ್ಲ ಎಂದು! 


ಹಕ್ಕಿ ಮಾರುವುದಿಲ್ಲ ಎಂದರೆ ಹಕ್ಕಿಗಳ ವ್ಯಾಪಾರವನ್ನೇ ಮಾಡುವುದಿಲ್ಲ ಎಂಬುದಾಗಿ ಅಲ್ಲ.


ಇಷ್ಟು ವರ್ಷ ಮಾಮೂಲಿಯಾಗಿ ಹಕ್ಕಿ ಮಾರಿದಂತೆ ಇನ್ನು ಮುಂದೆ ವ್ಯಾಪಾರ ಮಾಡುವುದಿಲ್ಲ ಎಂದು ನಾನು ಆ ದಿನ ಬಹಳ ಸ್ಪಷ್ಟವಾಗಿ ನಿರ್ಧರಿಸಿ ಬಿಟ್ಟಾಗಿತ್ತು. 


ಮರುದಿನದಿಂದ ಒಂದು ಬೋರ್ಡ್ ಅನ್ನು ನಾನು ನನ್ನ ಕುತ್ತಿಗೆಗೆ ಹಾಕಿಕೊಂಡೆ ಮತ್ತು ಅದರಲ್ಲಿ ಈ ರೀತಿ ಬರೆಸಿಕೊಂಡೆ...


" ಹಕ್ಕಿಗಳನ್ನು ಬಂಧ ಮುಕ್ತಗೊಳಿಸುವ ಹರುಷವನ್ನು ಇಲ್ಲಿ ಹಂಚಲಾಗುವುದು, ಒಂದು ಹಕ್ಕಿಗೆ ಕೇವಲ 200 ರೂಪಾಯಿ..."


ಹಕ್ಕಿಗಳನ್ನು ಬಂಧನದ ಗೂಡಿನಲ್ಲಿಟ್ಟು ಸಾಕುವ ಬದಲಾಗಿ ಈ ರೀತಿಯಾಗಿ ಸ್ವತಂತ್ರಗೊಳಿಸುವ ಈ ನನ್ನ ಹೊಸ ಕಲ್ಪನೆ ಹಲವರಿಗೆ ಇಷ್ಟವಾಯಿತು. ಹಾಗಾಗಿ ಈ ಪ್ರಾಣಿ ಪ್ರೇಮಿಗಳು, ಪಕ್ಷಿ ಪ್ರೇಮಿಗಳು, ಪರಿಸರ ಪ್ರೇಮಿಗಳು ಅದೇ ರೀತಿ ಮುಕ್ತವಾದ ಸ್ವಾತಂತ್ರ್ಯವನ್ನು ಬಯಸುವ ಎಲ್ಲರೂ ನನ್ನಲ್ಲಿ ಮುಗಿ ಬಿದ್ದು ಹಕ್ಕಿ ಖರೀದಿಸಿ, ಬಾನೆತ್ತರಕ್ಕೆ ಅವುಗಳನ್ನು ಹಾರಲು ಬಿಟ್ಟು ಹಕ್ಕಿಯನ್ನು ಸ್ವತಂತ್ರಗೊಳಿಸಿದ ಖುಷಿಯನ್ನು ಎಲ್ಲರೂ ಅನುಭವಿಸಿದರು. ಈ ನನ್ನ ಕಲ್ಪನೆ ಶಹರದ ತುಂಬೆಲ್ಲಾ ಇನ್ನಿಲ್ಲದಂತೆ ಪ್ರಚಾರ ಪಡೆಯಿತು. ಹೆತ್ತವರು ತಮ್ಮ ಪುಟ್ಟ ಪುಟ್ಟ ಮಕ್ಕಳೊಂದಿಗೆ ಬಂದು  ಬಂಧನದ ಹಕ್ಕಿಗಳಿಗೆ ಮಕ್ಕಳ ಕೈಗಳಿಂದಲೇ ಬಿಡುಗಡೆಯ ಭಾಗ್ಯ ಕೊಡಿಸಿ ಬಿಟ್ಟರು. ಆ ದಿನದಿಂದ ನನ್ನ ಬದುಕೇ ಬದಲಾಯಿತು. 


ಈ ನನ್ನ ಹೊಸ ಯೋಜನೆಯಿಂದಾಗಿ ನನ್ನ ಜೇಬು ಕೂಡ ಹಿಂದಿಗಿಂತಲೂ ಅಧಿಕವಾಗಿಯೇ ತುಂಬತೊಡಗಿತು. ಏಕೆಂದರೆ ಈ ಬಾರಿ ಹಕ್ಕಿಗಳು ಮತ್ತೆ ನನ್ನನ್ನು ಬಂದು ಸೇರಲು ನಾನು ದಿನಗಟ್ಟಳೆ ಕಾಯಬೇಕಾದ ಅಗತ್ಯವೇ ಇರಲಿಲ್ಲ. ಹಾರಿದ ಹಕ್ಕಿಗಳು ಕೆಲವೇ ಕ್ಷಣಗಳಲ್ಲಿ ನಾನು ಹೊಡೆಯುವ ಮೂರು ಶಿಳ್ಳೆಗೆ ಒಂದೊಂದಾಗಿ ಬಂದು ಮತ್ತೆ ನನ್ನ ಪಂಜರವನ್ನು ಸೇರುತ್ತಿತ್ತು. ನಾನು ಪುನಃ ಅದೇ ದಿನ ನನ್ನ ಈ ಮೂರು ಹಕ್ಕಿಗಳನ್ನು ಪದೇ ಪದೇ ಮಾರುತ್ತಲೇ ಇರುತ್ತಿದ್ದೆ ಮತ್ತು ಗರಿಗರಿ  ನೋಟುಗಳನ್ನು ಎಣಿಸುತ್ತಲೇ ಹೋಗುತ್ತಿದ್ದೆ. ಈ ಬಾರಿಯಂತು ನನಗೆ ಹಕ್ಕಿಗಳಿಗಾಗಿ ಹೊಸ ಹೊಸ ಪಂಜರಗಳನ್ನು ಕೂಡ  ಖರೀದಿಸಬೇಕಾದ ಅನಿವಾರ್ಯತೆಯೂ ನನಗೆ  ಬರಲಿಲ್ಲ. ಅಂದಿನಿಂದ ನನ್ನ ಕತೆಯಲ್ಲಿ ಇದ್ದದ್ದು ಎಂದಿನಂತೆ ಮೂರು ಹಕ್ಕಿಗಳು ಹಾಗೂ ಕೇವಲ ಮೂರು ಅದೇ ಪಂಜರಗಳು ಅಷ್ಟೇ.. ಹಹ್ಹಾ.. ಹಹ್ಹಾ


ಹಣ ಏನೋ ನನ್ನ ಕೈ ಸೇರಿತ್ತು. ಆದರೆ ಹಣ ನನ್ನೊಳಗಿನ ಡಕಾಯಿತನನ್ನು ತೃಪ್ತಿ ಪಡಿಸುತ್ತಿರಲಿಲ್ಲ. ಹಾಗಾಗಿ ಅವನನ್ನು ತಣಿಸುವುದಕ್ಕಾಗಿ, ಅವನಿಗೆ ನಶೆ ಏರಿಸುವುದಕ್ಕಾಗಿ ನಾನು ಏನಾದರೊಂದು ಮಾಡಲೇಬೇಕಿತ್ತು. ಮತ್ತೇನೂ ಅಲ್ಲ,ಮತ್ತದೇ ಹಳೆಯ ದರೋಡೆಯನ್ನೇ ಮುಂದುವರಿಸಬೇಕಿತ್ತು! 


ಆದರೆ ಈ ಬಾರಿ ಹಕ್ಕಿಗಳನ್ನು ಮೊದಲು ಬಿಡದೇ ನಾನೇ ದರೋಡೆ ಮಾಡಲು ನೇರವಾಗಿ ಇಳಿದು ಬಿಟ್ಟೆ. ಹೆಚ್ಚು ಜನ ಸಂಚಾರವಿಲ್ಲದ ನಗರದ ದೊಡ್ಡ ಮನೆಗಳನ್ನು ಮೊದಲೇ ಗುರುತು ಮಾಡಿಟ್ಟುಕೊಂಡೆ. ನಾನು ಆಯ್ಕೆ ಮಾಡಿಕೊಳ್ಳುವ ಮನೆಯ ಒಳಗಿನ ಭಾಗದ ಯಾವುದೇ ಪರಿಚಯವಿಲ್ಲದ ಕಾರಣಕ್ಕಾಗಿ ನನ್ನ ಮೂರು ಹಕ್ಕಿಗಳನ್ನು ಮನೆಯ ಕಾಂಪೌಂಡ್ ಬಳಿಯೇ ಇರುವಂತೆ ಮಾಡಿ, ಮನೆಯೊಳಗೆ ಯಾರೂ ಇಲ್ಲವೆಂದು ನನಗೆ ದೃಢವಾದ ಕೂಡಲೇ ಮನೆಯೊಳಗೆ ಹೊಕ್ಕುತ್ತಿದ್ದೆ. ಒಂದು ವೇಳೆ ಹೊರಗೆ ಹೋದಂತಹ ಆ ಮನೆಯ ಯಾರಾದರೂ ಮತ್ತೆ ಮನೆಯ ಕಡೆಗೆ ಬಂದರೆ, ಕಾಂಪೌಂಡ್ ಬಳಿ ಇದ್ದ ನನ್ನ ಹಕ್ಕಿಗಳು ಅಪಾಯದ ಶಿಳ್ಳೆಗಳನ್ನು ಆ ಕ್ಷಣವೇ ಜೋರಾಗಿ ಕೂಗುತ್ತಿದ್ದವು. ಹೀಗಾಗಿ ಎಂತಹ ಅಪಾಯ ಬಂದರೂ ನಾನು ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದೆ. 


ಆದರೆ ಈ ಅಪಾಯ ಎನ್ನುವುದೇ ನನ್ನನ್ನು ಅರಸುತ್ತಾ ಬಂದಿದ್ದೇ ಬಹಳ ಕಡಿಮೆ..ಹಹ್ಹಾ... ಹಹ್ಹಾ..


ನನ್ನ ಈ ಹೊಸ ರೀತಿಯ ದರೋಡೆ ಮತ್ತೆ ಅದೆಷ್ಟೋ ವರ್ಷಗಳು ಎಗ್ಗಿಲ್ಲದೇ ನಡೆದವು. ಆರಂಭದಲ್ಲಿ ಮಾರಾಟವಾಗಿ ಹೋಗಿ ಮನೆಯೊಳಗಿದ್ದುಕೊಂಡು ಗೂಢಚಾರರಂತೆ ಮನೆಯ ವಿಳಾಸವನ್ನು ನನಗೆ ತಿಳಿಸುತ್ತಿದ್ದ ನನ್ನ ಹಕ್ಕಿಗಳು, ಈ ಬಾರಿ ಕಾವಲುಗಾರರಂತೆ ಮನೆಯ ಹೊರಗಿದ್ದುಕೊಂಡು ನನ್ನ ದರೋಡೆಯನ್ನು ಮತ್ತಷ್ಟು ಯಶಸ್ವಿಗೊಳಿಸಲು ಸಹಕರಿಸಿದವು. ನನ್ನೊಳಗಿನ ಡಕಾಯಿತ ಬಹಳಷ್ಟು ಸಂತುಷ್ಟನಾಗಿದ್ದ.


ನನಗೆ ದರೋಡೆಯ ನಶೆ ಏರಿಕೊಂಡಾಗಲೆಲ್ಲ ಶಹರದಲ್ಲಿ ಯಾವುದಾದರೊಂದು ದರ್ಪದ ದೊಡ್ಡಮನೆ ಹಾಗೇ ಸಿಪ್ಪೆ ಸುಲಿದ ಹಣ್ಣಿನಂತೆ ಲೂಟಿಯಾಗಿ ಬಿಡುತ್ತಿತ್ತು. ಮರುದಿನದ ಸಿರಿವಂತನ ಗೋಳನ್ನು ನನ್ನಷ್ಟಕ್ಕೆ ಕಲ್ಪಿಸಿಕೊಂಡು ಹಾಗೇ ನಗುತ್ತಾ ನಾನು ನನ್ನ ಡೇರೆಯಲ್ಲಿ ಸುಖ ನಿದ್ರೆಗೆ ಜಾರುತ್ತಿದ್ದೆ..ಹಹ್ಹಾ.. ಹಹ್ಹಾ. 


ಆದರೆ ಅದೊಂದು ದಿನದ ರಾತ್ರಿ ನನ್ನ ಎಂದಿನ ದರೋಡೆಯ ರಾತ್ರಿಯಂತೆ ಇರಲಿಲ್ಲ. ಅಪಾಯ ಎದುರಿಗೇ ಬಂದು ನಿಂತಿದ್ದರೂ  ನನ್ನ ಮೂರೂ ಹಕ್ಕಿಗಳು ಒಂದೇ ಒಂದು ಶಿಳ್ಳೆಯನ್ನು ಕೂಡ ಹಾಕಲೇ ಇಲ್ಲ!! 


ಹೊರ ಹೋಗಿದ್ದರೂ ಮತ್ತೆ ಮನೆಗೆ ಹಿಂದಿರುಗಿ ಬಂದಿದ್ದ ಆ ಮನೆಯ ಮಾಲೀಕನ ಕೈಗೆನೇ ನಾನು ಸಿಕ್ಕಿ ಬಿದ್ದಿದ್ದೆ. ನಡೆದ ಜಿದ್ದಾಜಿದ್ದಿನಲ್ಲಿ ಮನೆಯೊಳಗಿನ ಆ ದಟ್ಟ ಕತ್ತಲೆಯಲ್ಲಿ ನಾನು ಮನೆಯ ಮಾಲೀಕನ ಜೊತೆಗೆ ಬಂದಿದ್ದವನಿಗೊಬ್ಬನಿಗೆ ಜೋರಾಗಿ ಚಾಕು ಇರಿದು, ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆನಾದರೂ ಮನೆಯ ಮಾಲಿಕ ನನ್ನ ಹಣೆಗೆ ಅದಾಗಲೇ ಅವನ ತಣ್ಣನೆಯ ರಿವಾಲ್ವರ್ ಇಟ್ಟಾಗಿತ್ತು!


ನನಗೆ ಜೀವಂತವಾಗಿ ತಪ್ಪಿಸಿಕೊಳ್ಳುವ ಯಾವುದೇ ಅವಕಾಶವೇ ಅಲ್ಲಿರಲಿಲ್ಲ. ಕತ್ತಲಿದ್ದ ಆ ಮನೆಯೊಳಗಿನ ಎಲ್ಲಾ ವಿದ್ಯುತ್ ದೀಪಗಳು ಒಮ್ಮೆಲೇ ಧಿಗ್ಗನೇ ಹೊತ್ತಿಕೊಂಡವು. ಆಗಲೇ ಸರಿಯಾಗಿ ಗಮನಿಸಿದ್ದು ನನ್ನ ಹಣೆಗೆ ರಿವಾಲ್ವರ್ ಹಿಡಿದವನು ಸಮವಸ್ತ್ರದಲ್ಲಿದ್ದ ಒಬ್ಬ ಪೋಲಿಸ್ ಇನ್ಸ್‌ಪೆಕ್ಟರ್ ಆಗಿದ್ದ ಹಾಗೂ ನನ್ನ ಚೂರಿ ಇರಿತದಿಂದ ಸತ್ತು ಹೋದವನು ರಾತ್ರಿ ಕರ್ತವ್ಯದಲ್ಲಿದ್ದ ಪೋಲಿಸ್ ಕಾನ್ಸ್ಟೇಬಲ್ ಆಗಿದ್ದ!!


ನನ್ನ ಕೈಗೆ ಬೇಡಿ ಹಾಕಿ ದರದರನೇ ಅಲ್ಲಿಂದ ಎಳೆದುಕೊಂಡು ಹೋಗಲಾಯಿತು. ಪೋಲಿಸ್ ಜೀಪಿನಲ್ಲಿ ಕುಳಿತುಕೊಂಡು ಹೊರ ಹೋಗುವಾಗ ನಾನು ಮನೆಯ ಕಾಂಪೌಂಡ್ ಅನ್ನೇ ಒಮ್ಮೆ ತಿರುಗಿ ನೋಡಿದೆ. ನನ್ನ ಮೂರೂ ಹಕ್ಕಿಗಳು ಇನ್ನೂ ಅಲ್ಲೇ ಒಟ್ಟಿಗೆ ಕುಳಿತಿದ್ದವು ಮತ್ತು ಅವುಗಳು ಸುಮ್ಮನೆ ನನ್ನನ್ನೇ ನೋಡುತ್ತಿದ್ದವು!! 


ಹೌದು..ನನ್ನ ಹಕ್ಕಿಗಳು ಅಪಾಯದ ಶಿಳ್ಳೆ ಏಕೆ ಹೊಡೆಯಲಿಲ್ಲ? ನನ್ನನ್ನು ಏಕೆ ಇಂತಹದ್ದೊಂದು ಅತೀ ದೊಡ್ಡ ಅಪಾಯದಿಂದ ಅವುಗಳು ಪಾರು ಮಾಡಲಿಲ್ಲ?!


ಕೋರ್ಟ್ ಕೇಸು ನಡೆಯಿತು. ನನ್ನ ಹಿಂದಿನ ಎಲ್ಲಾ ದರೋಡೆಗಳು ಬಯಲಾದವು, ನನ್ನ ಡೇರೆಗೆ ನುಗ್ಗಿ ನನ್ನ ಎಲ್ಲಾ ವಸ್ತುಗಳನ್ನು,  ದರೋಡೆಯ ಆಭರಣಗಳನ್ನು ಎಲ್ಲವನ್ನೂ ಮುಟ್ಟುಗೋಲು ಹಾಕಲಾಯಿತು. ಇದರ ಜೊತೆಗೆ ನಾನು ಕರ್ತವ್ಯದಲ್ಲಿದ್ದ ಪೋಲಿಸ್ ಒಬ್ಬನನ್ನು ಕೊಂದ ಕಾರಣಕ್ಕಾಗಿ ಕೋರ್ಟ್ ನನ್ನನ್ನು ಶಾಶ್ವತವಾಗಿಯೇ ಜೈಲು ಹಕ್ಕಿಯನ್ನಾಗಿ ಮಾಡಿ ಬಿಟ್ಟಿತು!


ಜೈಲಿನಲ್ಲಿ ಅದೆಷ್ಟೋ ದಿನಗಳು ಕಳೆದವು. 175 ಎಂಬ ಖೈದಿ ಸಂಖ್ಯೆಯ ಸಮವಸ್ತ್ರ ಹಾಕಿಕೊಂಡು ನಾನು ಹೆಚ್ಚು ಕಡಿಮೆ ನಾಲ್ಕೈದು ತಿಂಗಳೇ ಆಗಿ ಹೋದವು. ಡೇರೆಯಲ್ಲಿ ಸದಾ ಒಬ್ಬಂಟಿಯಾಗಿರುತ್ತಿದ್ದ ನನಗೆ ಈ ಜೈಲಿನ ಬಂಧನವೂ ಕೂಡ ಒಂದು ರೀತಿಯಲ್ಲಿ ಹಿತ ಅನ್ನಿಸತೊಡಗಿತು! 


ಜೈಲು ಗೋಡೆಗಳ ಬಂಧನದಲ್ಲಿದ್ದ ನನಗೆ ಒಂದು ದಿನ ನನ್ನಿಂದ ಮೊದಲ ಬಾರಿಗೆ ಹಕ್ಕಿಗಳನ್ನು ಪಂಜರದ ಬಂಧನದಿಂದ ಬಿಡುಗಡೆ ಮಾಡಿಸಿಕೊಂಡ ಆ ಹೆಣ್ಣು ಮಗು ನೆನಪಾಯಿತು. ಆ ಹೆಣ್ಣು ಮಗು ನನ್ನ ಕೆನ್ನೆ ಸವರಿ ಮೌನವಾಗಿ ಏನೋ ಹೇಳಲು ಪ್ರಯತ್ನಿಸಿದ ಆ ಬಿಡುಗಡೆಯದ್ದೊಂದು ಸ್ಪರ್ಶವೂ ಸಹ ನನ್ನನ್ನು ಅತಿಯಾಗಿ ಕಾಡಿತು, ಜೊತೆಗೆಯೇ ನಾನು ಅಷ್ಟು ವರ್ಷ ಹಕ್ಕಿಗಳನ್ನು ಮಾರುತ್ತಿದ್ದಾಗ ಹೆಗಲಿಗೆ ಹಾಕಿಕೊಂಡು ತಿರುಗುತ್ತಿದ್ದ ನನ್ನದೊಂದು ಆಪ್ತಮಿತ್ರನಂತಿದ್ದ ಆ ಹಳೆಯ ಜೋಳಿಗೆ ಕೂಡ ಯಾಕೋ ನನಗೆ ಆ ಕ್ಷಣದಲ್ಲಿ ಇನ್ನಿಲ್ಲದಂತೆ ನೆನಪಾಯಿತು. 


ಕೂಡಲೇ ನಾನು ನನ್ನ ಜೈಲರಿಗೆ ಮನವಿ ಮಾಡಿದೆ. ದಯವಿಟ್ಟು ನನ್ನ ವಸ್ತುಗಳನ್ನು ಒಮ್ಮೆ ನನಗೆ ನೀಡಿ ಎಂದು. ಹೇಗಿದ್ದರೂ ಬಹುಕಾಲ ಜೈಲಿನಲ್ಲಿಯೇ ಕೊಳೆಯುವವನು ಎಂದು ಅರಿತಿದ್ದ ಆ ಜೈಲರ್ ಸಹ ನನ್ನ ಮನವಿಯನ್ನು ತಿರಸ್ಕರಿಸಲಿಲ್ಲ.


ಕೊನೆಗೂ ಜೈಲಿನೊಳಗೆ ಡೇರೆಯಿಂದ ವಶಪಡಿಸಿಕೊಂಡಿದ್ದ ನನ್ನ ಹಕ್ಕಿ ಮಾರಾಟದ ಆ ಹಳೆಯ ಜೋಳಿಗೆ ಬಂತು. ಆ ಮಗುವಿನ ನೆನಪಿನಲ್ಲಿಯೇ ಅದರಲ್ಲಿದ್ದ ಒಂದೊಂದೇ ವಸ್ತುಗಳನ್ನು ಹೊರ ತೆಗೆದೆ. ಅದರಲ್ಲಿ ಒಂದಿಷ್ಟು ಹಕ್ಕಿ ಮಾರಿ ಬಂದಂತಹ ನೋಟುಗಳು, ನೀಲಿ, ಅರಶಿನ ಹಾಗೂ ಕೆಂಪು ಬಣ್ಣದ ಹಕ್ಕಿಯ ಬಹಳಷ್ಟು ಸಣ್ಣ ಸಣ್ಣ ಪುಕ್ಕಗಳು ಕೂಡ ಇದ್ದವು. ಮತ್ತು ಅದರಲ್ಲಿ ಇತ್ತು ನಾನು ಸದಾ ಕುತ್ತಿಗೆ ಹಾಕಿಕೊಂಡು ತಿರುಗುತ್ತಿದ್ದ ಆ ಒಂದು ನನ್ನ ಬಿಡುಗಡೆಯ ಬೋರ್ಡ್!


" ಹಕ್ಕಿಗಳನ್ನು ಬಂಧ ಮುಕ್ತಗೊಳಿಸುವ ಹರುಷವನ್ನು ಇಲ್ಲಿ ಹಂಚಲಾಗುವುದು, ಒಂದು ಹಕ್ಕಿಗೆ ಕೇವಲ 200 ರೂಪಾಯಿ.."


ಅದನ್ನು ನೋಡುತ್ತಿದ್ದಂತೆ ನನಗೆ ಎಷ್ಟೋ ದಿನಗಳ ನಂತರ ನನ್ನ ಮೂರು ಬಣ್ಣದ ಹಕ್ಕಿಗಳು ಮತ್ತೆ ನೆನಪಾದವು!


ಕೊನೆ ಕ್ಷಣದಲ್ಲಿ ನನ್ನನ್ನು ಬಚಾವ್ ಮಾಡದ ಅವುಗಳ ಮೇಲೊಂದು ಸಿಟ್ಟು ನನ್ನಲ್ಲಿ ಇದ್ದಕ್ಕಿದ್ದಂತೆ ಅತಿಯಾಯಿತು.


ಅವುಗಳು ನನಗೆ ಏತಕ್ಕಾಗಿ ಮೋಸ ಮಾಡಿದವು? ಇದು ನನಗೆ ಇನ್ನೂ ಉತ್ತರ ಸಿಗದ ಪ್ರಶ್ನೆ! 


ನನ್ನದೊಂದು ವಿಚಿತ್ರ ಕಾಲಾ ಜಾದೂ ಯಾವ ಜಾಗದಲ್ಲಿ ಅಧಿಕವಾದ ದೈವೀ ಸಾನಿಧ್ಯ ಇರುತ್ತದೆಯೋ, ಅಲ್ಲಿ ನಡೆಯಲು ಸಾಧ್ಯವಿಲ್ಲ ಎನ್ನುವುದು ನನಗೂ ಬಹಳ ಚೆನ್ನಾಗಿಯೇ ಗೊತ್ತಿತ್ತು. ಅಂತಹ ಜಾಗಗಳಲ್ಲಿ ನನ್ನ ಮಾಯಾವಿ ಹಕ್ಕಿಗಳು ಕೂಡ ನನ್ನ ನೆರವಿಗೆ ಬರಲಾರವು. ಒಂದು ವೇಳೆ ಆ ಜಾಗದಲ್ಲಿ ಬೇರೆ ಯಾರಾದರೊಬ್ಬರಿದ್ದು ಅವರು ತಮ್ಮ ಶಕ್ತಿಯಿಂದ ನನ್ನ ಹಕ್ಕಿಗಳನ್ನು ಅವರ ವಶ ಮಾಡಿಕೊಂಡಿದ್ದರೆ ಆಗಲೂ ಸಹ ನನ್ನ ಹಕ್ಕಿಗಳು ನನ್ನ ನೆರವಿಗೆ ಬರಲಾರವು. ಆದರೆ ಇದು ಎರಡೂ ಆ ಕೊನೆಯ ಮನೆಯಲ್ಲಿ ಘಟಿಸಲು ಸಾಧ್ಯವೇ ಇರಲಿಲ್ಲ, ಏಕೆಂದರೆ ಮೊದಲನೆಯದಾಗಿ ಅಂತಹ ದೈವಿಕಶಕ್ತಿ ಇರುವ ಯಾವುದೇ ಮನೆಗಳಿಗೆ ನಾನೆಂದು ಕಾಲಿಡುತ್ತಲೇ ಇರಲಿಲ್ಲ ಮತ್ತು ಆ ಕೊನೆಯ ಮನೆಯಲ್ಲಿ ಕೂಡ ಅಂತಹ ಸಾನಿಧ್ಯದ ಕುರುಹು ನನಗೆ ಕಂಡುಬಂದಿರಲಿಲ್ಲ. ಆ ಮನೆಯ ಇನ್ಸ್‌ಪೆಕ್ಟರ್ ಹಾಗೂ ಸತ್ತು ಹೋದ ಕಾನ್ಸ್ಟೇಬಲ್ ಗೆ ಕೂಡ ನನ್ನ ಮಾಯಾವಿ ಹಕ್ಕಿಗಳನ್ನೇ ತಡೆದು ನಿಲ್ಲಿಸುವಂತಹ ಯಾವುದೇ ದಿವ್ಯ ಶಕ್ತಿಗಳು ಇರಲಿಲ್ಲ ಅನ್ನುವುದು ಸಹ ನನಗೆ ಬಹಳ ಚೆನ್ನಾಗಿಯೇ ಗೊತ್ತು. 


ಹಾಗಾದರೆ ಸ್ವತಃ ನನ್ನ ಪಂಜರದ ಹಕ್ಕಿಗಳೇ ಏಕೆ ನನಗೆ ಈ ರೀತಿ  ಕೈ ಕೊಟ್ಟು, ನನ್ನನ್ನು ಇಲ್ಲಿ ಜೈಲು ಹಕ್ಕಿಗಳನ್ನಾಗಿ ಮಾಡಿ ಬಿಟ್ಟವು?!


ನಾನಿಲ್ಲಿ ಬಂಧಿಯಾಗಿರುವಾಗ ಹೊರಗಡೆಯೆಲ್ಲೋ ಆರಾಮವಾಗಿ ಹಾರಾಡುತ್ತಿರುವ ಅವುಗಳ ವರ್ತನೆ ನನ್ನ ಸಿಟ್ಟನ್ನು  ಮತ್ತಷ್ಟು ಹೆಚ್ಚಿಸಿತು. ಅದೇ ಕೋಪದಲ್ಲಿ ನನ್ನ ಕೈಯಲ್ಲಿದ್ದ ಆ ಬಿಡುಗಡೆಯ ಬೋರ್ಡ್ ಅನ್ನು ತೆಗೆದುಕೊಂಡು ನೇರವಾಗಿ ಜೈಲಿನ  ಪ್ರಾಂಗಣಕ್ಕೆ ಬಂದು, ಜೈಲಿನ ಎತ್ತರದ ಕಾಂಪೌಂಡ್ ನಿಂದ ಆ ಬೋರ್ಡ್ ಹೊರಗೆ ಹೋಗಿ ಬೀಳುವಂತೆ  ಜೋರಾಗಿಯೇ ಅದನ್ನು ಮೇಲಕ್ಕೆ ಎಸೆದು ಬಿಟ್ಟೆ!


ಆದರೆ ನಾನು ಎಸೆದ ಆ ಬೋರ್ಡ್ ಜೈಲಿನ ಕಾಂಪೌಂಡ್ ನಿಂದ ಹೊರಗೆ ಹೋಗಿ ಬೀಳದೆ, ಕಾಂಪೌಂಡ್ ನ ಮೇಲಿದ್ದ ತಂತಿ ಬೇಲಿಯ ಮೇಲೆ ಹೋಗಿ ಬಿತ್ತು ಮತ್ತದು ಅಲ್ಲೇ ನೇತಾಡುತ್ತಾ ಹಾಗೇ ಉಳಿದು ಬಿಟ್ಟಿತು! 


ಮೇಲಿನ ತಂತಿ ಬೇಲಿಯಲ್ಲಿ ನೇತಾಡುತ್ತಿದ್ದರೂ ಅದರಲ್ಲಿದ್ದ ಬರಹ ಈಗಲೂ ಕೆಳಗಿದ್ದ ನನ್ನ ಕಣ್ಣಿಗೆ ಸ್ಪಷ್ಟವಾಗಿ ಬೀಳುವ ಮೂಲಕ ನನಗೆ ಇನ್ನಷ್ಟು ಸಿಟ್ಟು ಬಂತು. ಕೂಡಲೇ ನನ್ನ ಹಕ್ಕಿಗಳಿಗೊಂದು ತಕ್ಕ ಶಾಸ್ತ್ರಿ ಮಾಡಬೇಕೆಂದು ನಿರ್ಧರಿಸಿ ಅಲ್ಲಿಗೆನೇ ಅವುಗಳನ್ನು ಕರೆಸುವುದಕ್ಕಾಗಿ ನಾನು ಮೇಲಿನ  ಆಕಾಶ ನೋಡುತ್ತಾ ಜೋರಾಗಿ ಒಂದು ಶಿಳ್ಳೆ ಹೊಡೆದೆ!


ನನ್ನ ಮೊದಲ ಶಿಳ್ಳೆಗೆ ಯಾವತ್ತೂ ನೀಲಿ ಹಕ್ಕಿ ಗಗನದ  ಯಾವುದೇ ನೀಲಿ ಅಂಚಿನಲ್ಲಿದ್ದರೂ ಹಾರುತ್ತಾ ಬಂದು ನನ್ನ ಭುಜದ ಮೇಲೆ ಕುಳಿತುಕೊಳ್ಳುತ್ತಿತ್ತು. ಎರಡನೇ ಶಿಳ್ಳೆಗೆ ಅರಿಶಿನ ಬಣ್ಣದ ಹಕ್ಕಿ ಬರುತ್ತಿತ್ತು ಮತ್ತು ಮೂರನೇ ಹಾಗೂ ಕೊನೆಯ ಶಿಳ್ಳೆಗೆ ಕೆಂಪು ಹಕ್ಕಿ ಹಾಗೇ ವೇಗವಾಗಿ ರೆಕ್ಕೆ ಬಡಿಯುತ್ತಲೇ ನನ್ನ ಬಳಿ ಸುಳಿಯುತ್ತಿತ್ತು. 


ಇಲ್ಲ... ನನ್ನ ಮೊದಲ ಶಿಳ್ಳೆಗೆ ನೀಲಿ ಹಕ್ಕಿ ಬರಲಿಲ್ಲ!


ಜೋರಾಗಿ ಎರಡನೇ ಶಿಳ್ಳೆ ಹೊಡೆದೆ.


ಉಹೂಂ.... ಅರಶಿನದ ಹಕ್ಕಿ ಬರಲಿಲ್ಲ!


ಕೊನೆಯದಾಗಿ ಇನ್ನೂ ಜೋರಾಗಿ ಮೂರನೇ ಶಿಳ್ಳೆ ಹೊಡೆದೆ.


ಇಲ್ಲ... ಕೆಂಪು ಹಕ್ಕಿಯೂ ಬರಲೇ ಇಲ್ಲ!


ಕೆಲವೇ ಕ್ಷಣಗಳಲ್ಲಿ ನನ್ನ ಹಿಂದಿನಿಂದಲೇ ಒಂದು ಮೆಲುವಾದ ಶಿಳ್ಳೆ ನನ್ನದೇ ಶಿಳ್ಳೆಯ ಧಾಟಿಯಲ್ಲಿ ಕೇಳಿ ಬಂದಿತ್ತು..!!


ಅದರ ನಂತರ ಮತ್ತೊಂದು..!


ಅದರ ನಂತರ ಇನ್ನೊಂದು..!


ಒಟ್ಟು ಮೂರು ಶಿಳ್ಳೆಗಳು.... ಒಂದಾದ ನಂತರ ಒಂದು!!!


ಅಷ್ಟೇ....!


ಕೆಲವೇ ಕ್ಷಣಗಳಲ್ಲಿ ತಂತಿ ಬೇಲಿಯ ಮೇಲೆ ನೇತಾಡುತ್ತಿದ್ದ ನನ್ನ ಬಿಡುಗಡೆಯ ಬೋರ್ಡ್ ಮೇಲೆಯೇ ನನ್ನ ನೀಲಿ, ಅರಶಿನ ಹಾಗೂ ಕೆಂಪು ಹಕ್ಕಿಗಳು ಎಲ್ಲಿಂದಲೋ ಹಾರುತ್ತಾ ಬಂದು ಹಾಗೇ ಸಾಲಾಗಿ ಒಂದರ ಪಕ್ಕ ಮತ್ತೊಂದು ಕುಳಿತುಕೊಂಡು ಬಿಟ್ಟವು!!!


ಅವುಗಳನ್ನು ಅಲ್ಲಿ ಕಂಡು ನನ್ನ ಸಿಟ್ಟು ಈಗಂತು ದ್ವಿಗುಣವಾಗಿತ್ತು.ಆದರೆ... ಆದರೆ ನನ್ನಂತೆಯೇ ಇಲ್ಲಿ, ಅದೂ ಈ ಜೈಲಿನಲ್ಲಿ ಶಿಳ್ಳೆ ಹೊಡೆದದ್ದು ಯಾರು??! 


ತೀವ್ರ ಕುತೂಹಲದಿಂದ ರಪ್ಪನೇ ಹಿಂದಿರುಗಿ ನೋಡಿದೆ.


ಆಗ ಅಲ್ಲಿ ನಗುತ್ತಾ ನಿಂತಿದ್ದ ನನ್ನಂತೆಯೇ ಮಾಯಾವಿ ತಂತ್ರಗಳ ಜ್ಞಾನವಿದ್ದ ಸ್ಮಶಾನದ ನನ್ನ ಮಾಂತ್ರಿಕ ಗುರುವಿನ ಏಕೈಕ ಪುತ್ರ!!


ಅಂದರೆ... ಅಂದರೆ ಇವನ ಕಾರಣದಿಂದಾಗಿ ಆ ದಿನ ನನ್ನ ಮೂರೂ ಹಕ್ಕಿಗಳು ಇವನ ವಶವಾಗಿ ನನ್ನನ್ನು ಬಚಾವ್ ಮಾಡಲು ಮುಂದಾಗದೇ ನಾನು ಬಂಧಿಯಾಗುವಂತೆ ಮಾಡಿಬಿಟ್ಟವೇ?


ಅಷ್ಟು ಮಾತ್ರವಲ್ಲ ಆ ರಾತ್ರಿ ಇವನು... ಇವನು ಕೂಡ ಅದೇ ಮನೆಯ ಪರಿಸರದಲ್ಲಿ ಇದ್ದನೇ??!! 


ಅವನ ಹೊಚ್ಚ ಹೊಸ ಖೈದಿ ಸಮವಸ್ತ್ರದಲ್ಲಿ "200" ಎಂಬ ಸಂಖ್ಯೆಯನ್ನು ದಪ್ಪ ಅಕ್ಷರಗಳಲ್ಲಿ ಬರೆದಿದ್ದರು! 


ಆ "200" ಅನ್ನು ನೋಡಿದ ಕೂಡಲೇ ನನಗೆ ಮತ್ತೆ ನನ್ನ ಬಿಡುಗಡೆಯ ಬೋರ್ಡ್ ನೆನಪಾಯಿತು, ಜೈಲಿನ ತಂತಿ  ಬೇಲಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಅದರತ್ತ ಮತ್ತೆ ನೋಡಿದೆ.. 


" ಹಕ್ಕಿಗಳನ್ನು ಬಂಧ ಮುಕ್ತಗೊಳಿಸುವ ಹರುಷವನ್ನು ಇಲ್ಲಿ ಹಂಚಲಾಗುವುದು, ಒಂದು ಹಕ್ಕಿಗೆ ಕೇವಲ 200 ರೂಪಾಯಿ..".


ಈ ಬಾರಿ ಆ ನನ್ನ ಬಿಡುಗಡೆಯ ಬೋರ್ಡ್ ಸ್ವತಃ ಬಂಧನದ ಜೈಲು ಹಕ್ಕಿಯಾಗಿದ್ದ ನನ್ನನ್ನೇ ಇನ್ನಿಲ್ಲದಂತೆ ಅಣಕಿಸಿದಂತಾಯಿತು! 


ನನ್ನ ಮೂರೂ ಹಕ್ಕಿಗಳು ಇನ್ನೂ ತಂತಿ ಬೇಲಿಯಲ್ಲಿ ನೇತಾಡುತ್ತಿದ್ದ ಆ ಬಿಡುಗಡೆಯ ಬೋರ್ಡ್ ಮೇಲೆಯೇ ಕುಳಿತಿದ್ದವು. ಆದರೆ ನನ್ನನ್ನು ನೋಡಿಯೂ ನೋಡದಂತೆ ಅವುಗಳು ಇದ್ದವು. ಅವುಗಳ ಪುಟ್ಟ ಕಣ್ಣುಗಳಲ್ಲಿ ನನ್ನೆಡೆಗೆ ಒಂಚೂರು ಆಕರ್ಷಣೆಯೇ ಇರಲಿಲ್ಲ! 


ನನಗೆ ಅದನ್ನು ನೋಡಿ ನನ್ನ ಪಿತ್ತ ನೆತ್ತಿಗೇರಿತು.


ಕಣ್ಣೆದುರಿದ್ದ ಹಕ್ಕಿಗಳು ಈ ಬಾರಿ  ನನ್ನ ಭುಜದ ಮೇಲೆ  ಬಂದು ಕುಳಿತುಕೊಳ್ಳಲಿ ಎಂದು ನಾನು ಮತ್ತೊಮ್ಮೆ ಮೇಲೆ ನೋಡುತ್ತಾ ಜೋರಾಗಿ ಶಿಳ್ಳೆ ಹೊಡೆದೆ.


ಇಲ್ಲ.... ನೀಲಿ ಹಕ್ಕಿ ಬರಲಿಲ್ಲ!


ಮತ್ತೆ ಎರಡು ಶಿಳ್ಳೆಗಳನ್ನು ಇನ್ನೂ ಜೋರಾಗಿಯೇ ಹೊಡೆದೆ.


ಉಹೂಂ.. ಅರಶಿನದ ಹಕ್ಕಿಯೂ ಬರಲಿಲ್ಲ,ಕೆಂಪು ಹಕ್ಕಿಯೂ ನನ್ನತ್ತ ಹಾರಿ ಬಂದು ನನ್ನ ಭುಜದ ಮೇಲೆ ಕುಳಿತುಕೊಳ್ಳಲಿಲ್ಲ! 


" ಹಹ್ಹಾ.....ಹಹ್ಹಾ...ಹಹಹ್ಹಾ.... "


ನನ್ನ ಹಿಂದಿದ್ದ ಆ ನನ್ನ ಮಾಂತ್ರಿಕ ಗುರುವಿನ ಪುತ್ರ ನನ್ನದೊಂದು ಅಸಹಾಯಕತೆ ಹಾಗೂ ವಿಫಲ ಪ್ರಯತ್ನವನ್ನು ನೋಡಿ, ಇಡೀ ಜೈಲಿಗೆ ಕೇಳುವಂತೆ ಜೋರಾಗಿಯೇ ಗಹಿಗಹಿಸಿ ನಕ್ಕು ಬಿಟ್ಟಿದ್ದ!


ಮತ್ತೆ ಹಿಂದೆ ತಿರುಗಿ ಅವನನ್ನೇ ನೋಡಿದೆ ನಾನು. 


ಮಾಂತ್ರಿಕ ಗುರುವಿನ ಪುತ್ರ ಅಲ್ಲೇ ಬಿದ್ದಿದ್ದ ನನ್ನ ಜೋಳಿಗೆಯನ್ನು ನಿಧಾನಕ್ಕೆ ಎತ್ತಿಕೊಂಡ. ಆ ನಂತರ ಅದರಲ್ಲಿದ್ದ ಒಂದಿಷ್ಟು ನೋಟುಗಳನ್ನು ತನ್ನ ಕೈಗೆ ತೆಗೆದುಕೊಂಡ. ನೂರರ ಎರಡು ನೋಟುಗಳನ್ನು ಬಿಟ್ಟು ಉಳಿದ ಎಲ್ಲಾ ನೋಟುಗಳನ್ನು ಮತ್ತೆ ನನ್ನ ಜೋಳಿಗೆಗೆ ತುರುಕಿ, ನನ್ನ ಜೋಳಿಗೆ ಹಿಂದೆ ಎಲ್ಲಿ ಬಿದ್ದಿತ್ತೋ ಅಲ್ಲೇ ಹಾಕಿದ.ಅವನ ಕೈಯಲ್ಲಿದ್ದ ನೂರರ ಆ ಎರಡು ನೋಟಗಳನ್ನು ತೆಗೆದುಕೊಂಡು ಬಂದು, ಅದನ್ನು ಮೆತ್ತಗೆ ನನ್ನ ಕೈಯಲ್ಲಿಟ್ಟು, ಮತ್ತೊಮ್ಮೆ ತಂತಿಯಲ್ಲಿದ್ದ ನನ್ನ ಬಿಡುಗಡೆಯ ಬೋರ್ಡ್ ಅನ್ನು ನೋಡಿ ಅದರಲ್ಲಿ ಬರೆದಿದ್ದನ್ನು ವ್ಯಂಗ್ಯವಾಗಿ ಓದುತ್ತಾ, ಇನ್ನಷ್ಟು ಜೋರಾಗಿ ನಗುತ್ತಾ ಆ ಜೈಲಿನ ಕಾರಿಡಾರಿನಲ್ಲಿ ಹಾಗೇ ಅವನು ಮುಂದಕ್ಕೆ ನಡೆದು ಬಿಟ್ಟ!!


ಅವನದ್ದೊಂದು ಪರಿವಾರದ ಪ್ರತೀಕಾರ ಈ ರೀತಿಯಾಗಿ ತೀರಿತ್ತು! 


ಆ ಇನ್ನೂರು ರೂಪಾಯಿಗಳನ್ನು ಕೈಯಲ್ಲಿ ಹಿಡಿದುಕೊಂಡು ಮತ್ತೆ ಕಾಂಪೌಂಡಿನ ತಂತಿ ಬೇಲಿಯಲ್ಲಿ ನೇತಾಡುತ್ತಿದ್ದ ಆ ನನ್ನ ಬಿಡುಗಡೆಯ ಬೋರ್ಡ್ ನತ್ತ ನಾನು ಕತ್ತೆತ್ತಿ ನೋಡಿದೆ.


 " ಹಕ್ಕಿಗಳನ್ನು ಬಂಧ ಮುಕ್ತಗೊಳಿಸುವ ಹರುಷವನ್ನು ಹಂಚಲಾಗುವುದು,ಒಂದು ಹಕ್ಕಿಗೆ ಕೇವಲ ಇನ್ನೂರು ರೂಪಾಯಿ"


ಈ ಬಾರಿ ಬೋರ್ಡ್ ನನ್ನ ಕೈಯಲ್ಲಿದ್ದ ಇನ್ನೂರು ರೂಪಾಯಿಗಳನ್ನು ಬಾಯಿ ಬಿಟ್ಟು ಕೇಳಿದಂತಿತ್ತು! 


ಆ ಕ್ಷಣವೇ ಅಲ್ಲೇ ಇದ್ದ ಜೈಲಿನ ಹಳೆಯ ಖೈದಿಯೊಬ್ಬ ವೇಗವಾಗಿ ಬಂದು ನನ್ನ ಕೈಯಲ್ಲಿದ್ದ ಆ  ಇನ್ನೂರು ರೂಪಾಯಿಗಳನ್ನು ಕಸಿದುಕೊಂಡು, ನನ್ನ ಜೋಳಿಗೆಯೊಳಗಿದ್ದ ರಾಶಿ ಬಣ್ಣದ ಪುಕ್ಕಗಳನ್ನು ಹೊರಗೆ ಚೆಲ್ಲಿಕೊಂಡು ಬಂದಷ್ಟೇ ವೇಗದಲ್ಲಿ ಅಲ್ಲಿಂದ ಓಡಿ ಹೋದ! 


ಆ ಕೂಡಲೇ ನನ್ನ ಮೂರು ಹಕ್ಕಿಗಳು ಯಾವತ್ತೂ ಹೊಡೆಯದ ಹರುಷದ ಶಿಳ್ಳೆಯನ್ನೇ ಮಧುರವಾಗಿ ಹೊಡೆದು ಬಿಟ್ಟವು ಮತ್ತು ಬೋರ್ಡ್ ಮೇಲೊಮ್ಮೆ ಕೊನೆಯ ಬಾರಿಗೆ ಎಂಬಂತೆ ಕೃತಜ್ಞತೆಯಿಂದ ರೆಕ್ಕೆ ಬಡಿದು, ಮನಸ್ಸಿನಲ್ಲಿಯೇ ಬಹಳಷ್ಟು ಧನ್ಯವಾದ ಹೇಳುತ್ತಾ ಹಾಗೇ ಪುರ್ರೆಂದು ಬಾನೆತ್ತರಕ್ಕೆ ಹಾರಿಯೇ ಹೋದವು ನನ್ನ ಆ ಗುರುವಿನ ಮೂರು ಬಣ್ಣದ ಹಕ್ಕಿಗಳು!


ಅವುಗಳು ಮೊದಲ ಬಾರಿಗೆ ಬಾನಿನಲ್ಲಿ ಬಿಡುಗಡೆಯ ಹಾರಾಟ ನಡೆಸಿದಂತೆ ನನಗೆ ಕಂಡು ಬಂದವು. ಇದಕ್ಕೂ ಮೊದಲು ಅವು ಮತ್ತೆ ಮತ್ತೆ ಬಂಧಿಯಾಗಲು ಸುಮ್ಮನೆ ಹಾರುತ್ತಿದ್ದವು ಅಷ್ಟೇ!


ಯಾಕೋ ಗೊತ್ತಿಲ್ಲ ಮೊದಲ ಸಲ ಹಕ್ಕಿಗಳನ್ನು ಬಿಡುಗಡೆ ಮಾಡಿದ್ದ ಹೆಣ್ಣು ಮಗುವಿನ ಆ ಸ್ವಾರ್ಥವಿಲ್ಲದ ಬಿಡುಗಡೆಯದ್ದೊಂದು ಸ್ಪರ್ಶ ನನ್ನ ಕೆನ್ನೆಯನ್ನು ಮತ್ತೊಮ್ಮೆ ನೇವರಿಸಿದಂತಾಯಿತು ಮತ್ತು ಈ ಬಾರಿ ನನಗೆ ಒಂದಿಷ್ಟು ವಿಷಯಗಳು ಬಹಳ ಚೆನ್ನಾಗಿಯೇ ಅರ್ಥವಾಗಿ ಬಿಟ್ಟವು!! 


ನಾನು ಮತ್ತೆ ಜೈಲುಹಕ್ಕಿಯಾಗಿ ನನ್ನ ಬಿಡುಗಡೆಯ ಬೋರ್ಡ್ ಅನ್ನೇ ಮೇಲಕ್ಕೆ ನೋಡುತ್ತಾ ಉಳಿದೆ.


ಕೆಲವೇ ಕ್ಷಣಗಳಲ್ಲಿ ಜೈಲು ಗೋಡೆಯ ತಂತಿ ಬೇಲಿಯಲ್ಲಿ ನೇತಾಡುತ್ತಿದ್ದ ಆ ನನ್ನ ಬಿಡುಗಡೆಯ ಬೋರ್ಡ್, ಬೀಸಿ ಬಂದ  ಜೋರು ಗಾಳಿಯ ಹೊಡೆತಕ್ಕೆ ಹಾಗೇ ಜಾರಿಕೊಂಡು ಹೋಗಿ  ಕಾಂಪೌಂಡಿನ ಹೊರ ಬದಿಯಲ್ಲಿ ಬಿದ್ದು ಬಿಟ್ಟಿತು....ಮತ್ತು ಅದು ಕೂಡ ತಂತಿಯಿಂದ ಶಾಶ್ವತವಾಗಿ ಬಿಡುಗಡೆ ಹೊಂದಿತು!


ನನ್ನ ಜೋಳಿಗೆಯಿಂದ ಅಲ್ಲೆಲ್ಲಾ ಚೆಲ್ಲಿ ಹೋಗಿದ್ದ ನೀಲಿ, ಅರಶಿನ ಹಾಗೂ ಕೆಂಪು ಬಣ್ಣದ ರಾಶಿ ರಾಶಿ ಸಣ್ಣ ಪುಕ್ಕಗಳು ಕೂಡ ಮೆಲ್ಲಗೆ ನೆಲದಿಂದ ಮೇಲೆದ್ದು, ಆ ತಂತಿ ಬೇಲಿಯನ್ನು ಹಾಗೇ  ಹಾದು ತಾವು ಸಹ ಬಿಡುಗಡೆಗೊಂಡು ಹಗುರವಾದಂತೆ, ಖುಷಿಯ ಮುಗಿಲು ಮುಟ್ಟುವುದಕ್ಕಾಗಿ ಸಾವಧಾನದಿಂದ ಮತ್ತಷ್ಟು ಮೇಲಕ್ಕೆ ಹಾರಿದವು. 


ಬಾನಿನಲ್ಲಿ ಹಾರಿ ಹೋಗುತ್ತಿದ್ದ ಆ ನನ್ನ ಬಣ್ಣದ ಹಕ್ಕಿಗಳ ಹಗುರ  ಪುಕ್ಕಗಳನ್ನು ನೋಡುತ್ತಾ ನೋಡುತ್ತಾ,ಎದುರಿಗೆ ಕಾಣುತ್ತಿದ್ದ ಅಚಲವಾದ ತಂತಿ ಬೇಲಿಯಲ್ಲಿ ನಾನು ಮಾತ್ರ ಮತ್ತಷ್ಟು ಬಂಧಿಯಾಗುತ್ತಾ ಹೋದೆ!! 


ಆ ದಿನದಿಂದ ನನಗೆ ಬಂಧನ ಹಿತವೆನಿಸಲಿಲ್ಲ!!! 


.....................................................................................


- ಪಚ್ಚು ಕುಟ್ಟಿದಪಲ್ಕೆ.


ಚಿತ್ರ ಕೃಪೆ - ಅಂತರ್ಜಾಲ

https://phalgunikadeyavanu.blogspot.com

Comments

Popular posts from this blog

VIKINGS - S06E20

ಗಗನದ ಸೂರ್ಯ

ಪಯ್ಯನ ಪರಾಕ್ರಮ