ಅನಾರ್ಕಲಿಯ ಸೇಫ್ಟಿಪಿನ್ | ಜಯಂತ್ ಕಾಯ್ಕಿಣಿ

 ಅನಾರ್ಕಲಿಯ ಸೇಫ್ಟಿಪಿನ್ l ಜಯಂತ ಕಾಯ್ಕಿಣಿ 





" ಪ್ರಪಂಚದಲ್ಲಿ ಯಾವುದೇ ಜಾಗಕ್ಕಿಂತ, ಮಕ್ಕಳನ್ನು ಹೆತ್ತು ಅವರ ಬಾಲ್ಯವನ್ನು ಪೊರೆದ ಜಾಗಗಳು ಎಂಥ ಕಾರ್ಪಣ್ಯಗಳ ನಡುವೆಯೂ ಜೀವದ ಭಾಗವೇ ಆಗಿರುತ್ತದೆ. ಮಕ್ಕಳ ಕಂಪನ್ನು ಮರೆಸುವ ಶಕ್ತಿ ಯಾವ ಬಿರುಗಾಳಿಗೂ ಇಲ್ಲ..." 


ಇದೊಂದೇ ಅಲ್ಲ, ಇಂತಹ ಹಲವಾರು ಸಾಲುಗಳು ಇಲ್ಲಿರುವ ಎಲ್ಲಾ ಕಥೆಗಳ ಪ್ರತೀ ಪುಟ ಪುಟದಲ್ಲಿಯೂ ಗೊಂಚಲು ಗೊಂಚಲಾಗಿ ಕಣ್ಣಿಗೆ ಬೀಳುತ್ತವೆ. ಮಳೆಗೊಂದಿಷ್ಟು ಪದ ಬೆರೆಸಿ ಭಾವ ಸುರಿಸಿದ ಮಳೆಕವಿ ಜಯಂತ ಕಾಯ್ಕಿಣಿಯವರ ಗದ್ಯವೂ ಕೂಡ ಅವರ ಪದ್ಯಗಳಷ್ಟೇ ಚಂದ. ಕಥೆಯ ಪ್ರತೀ ಸಾಲನ್ನು(ಬಹುತೇಕ)ಎಷ್ಟೊಂದು ಕಾವ್ಯಾತ್ಮಕವಾಗಿ ಪೋಣಿಸಿ ಇಲ್ಲಿಯ ಕಥೆಗಳನ್ನು ಕಟ್ಟಿದ್ದಾರೆ ಎಂದರೆ ಹೆಚ್ಚಿನ ಸಾಲುಗಳನ್ನು ಎರಡೆರಡು ಬಾರಿ ಓದಿಯೇ ಇನ್ನಷ್ಟು ಚಪ್ಪರಿಸಬೇಕೆಂದು ಅನಿಸುತ್ತದೆ. 


ಇಲ್ಲಿ ಒಟ್ಟು 9 ಕಥೆಗಳಿವೆ. ಎಲ್ಲಾ ಕಥೆಗಳು ಹೀಗೇ ಇರಬೇಕು, ಹಾಗೇ ಅಂತ್ಯ ಕಾಣಬೇಕು ಎಂಬ ಧಾವಂತದಿಂದ ಲೇಖಕರು ಯಾವ ಕಥೆಯನ್ನೂ ಇಲ್ಲಿ ಬರೆದಿಲ್ಲ. ಛಾಯಚಿತ್ರಗಾರನೊಬ್ಬ ಬೀದಿಯಲ್ಲಿ ನಿಂತುಕೊಂಡು ತೆಗೆದ ಸ್ಟ್ರೀಟ್ ಪೋಟೋಗಳು ಹೇಳುವ ಕಥೆಗಳಂತೆ ಇದೆ ಈ ಸಂಕಲನದ ಎಲ್ಲಾ ಕಥೆಗಳು. ತಾಜಾ ಸೀಬೆ ಹಣ್ಣುಗಳನ್ನು ಕತ್ತರಿಸಿ ಅದಕ್ಕೆ ಉಪ್ಪು, ಮೆಣಸಿನ ಹುಡಿಯನ್ನು ಇಷ್ಟಿಷ್ಟೇ ಉದುರಿಸಿ ಕೊಡುವ ಹಣ್ಣು ಹಣ್ಣು ಮುದುಕಿಯ ಪೋಟೋದಂತೆ, ಜೋರಾಗಿ ಅಳುತ್ತಿರುವ ಮಗುವನ್ನು ಕಂಕುಳದಲ್ಲಿ ಇಟ್ಟುಕೊಂಡು ಕೆಂಡದಲ್ಲಿ ಸುಡುತ್ತಿರುವ ಹಸಿ ಜೋಳಕ್ಕೆ ಗಾಳಿ ಬೀಸಿ ಬೀಸಿ ಉರಿವ  ಕೆಂಡವನ್ನು ನಿರಂತರವಾಗಿ ಸಮಾಧಾನ ಪಡಿಸುತ್ತಿರುವ ತಾಯಿಯ ಪೋಟೋದಂತೆ, ಮಾಸಲು ಬಣ್ಣದ ಬಟ್ಟೆ ಹಾಕಿಕೊಂಡು ಕೈಗಳಲ್ಲಿ ಬಣ್ಣದ ಬಣ್ಣದ ರಾಶಿ ಪುಗ್ಗೆಗಳನ್ನು ಖುಷಿ ಖುಷಿಯಲ್ಲಿ ಮಾರುತ್ತಾ ಹೋಗುವ ಪುಟ್ಟ ಬಾಲಕನ ಕ್ಯಾಂಡಿಡ್ ಪೋಟೋದಂತೆ ಇಲ್ಲಿರುವ ಪ್ರತೀ ಕಥೆಯು ನಮಗೆ ನೂರು ಕಥೆಗಳನ್ನು ಹೇಳಲು ನಿಂತು ಬಿಡುತ್ತವೆ. ನಾವು ಕೇಳಬೇಕು ಅಷ್ಟೇ. ಬಾಚಿಕೊಂಡಷ್ಟು ಕಥೆಗಳೊಳಗಿನ ಆ ಉಳಿದ ಕಥೆಗಳು ಕೂಡ ನಮ್ಮದೇ. ವ್ಯಕ್ತದಲ್ಲಿರುವ ಅವ್ಯಕ್ತವು ಅರಿವಾದರೆ, ದೃಶ್ಯದೊಳಗಿನ ಅದೃಶ್ಯವು ಗೋಚರವಾದರೆ, ಯಾರು ಆಡದೇ ಇದ್ದರೂ ಕಿವಿಗೆ ಏನಾದರೊಂದು ಕೇಳಿಸಿದರೆ, ಅದುವೇ ಹಾಡಾದರೆ, ಹಾಡು ಕಾಡುವಷ್ಟು ಉಳಿದು ಬಿಟ್ಟರೆ ಆಗ ಆ ಕಾವ್ಯದ ಸುಖವೂ ನಮ್ಮದೇ. 


' ಬೆಳಕಿನ ಬಿಡಾರ ' ಕಥೆಯಲ್ಲಿ ಬರುವ ಬಬನ್ ನಂತಹ ಪಾತ್ರಗಳು ನಮ್ಮ ನಿಮ್ಮ ಬಾಲ್ಯದಲ್ಲಿಯೂ ಎಲ್ಲಾದರೊಂದು ಕಡೆ ಇದ್ದಿರಬಹುದು. ಈ ಕಥೆಯಲ್ಲಿ ಬಬನ್ ಸ್ವಲ್ಪವೇ ಸ್ವಲ್ಪ ಹೊತ್ತು ಕಾಣಿಸುತ್ತಾನೆ. ಎಷ್ಟಾದರೂ ಚಂದದ ಬಾಲ್ಯದಲ್ಲಿ ಕಣ್ಣಿಗೆ ಬಿದ್ದವನಲ್ಲವೇ ಕಥೆ ಮುಗಿದರೂ, ಅವನು ಮರೆಯಾದರೂ ಕಥೆಯೊಳಗೆ ಅವನು ಅಲ್ಲೇ ಎಲ್ಲೋ ಅವಶ್ಯವಾಗಿ ಇದ್ದಾನೆ. ಇಪ್ಪತ್ತು ವರ್ಷಗಳ ನಂತರ ತದಡಿಯ ಆ ಕಡಲ ತೀರಕ್ಕೆ ಬಂದ ಮುನ್ನ, ಬಾಲ್ಯದ ಜಾಗಗಳಲ್ಲಿ ಹಾಗೇ ನಡೆಯುತ್ತಾ ನೆನಪುಗಳನ್ನು  ತಾಜಾವಾಗಿಸುತ್ತಾ ಹೋಗುತ್ತಾನೆ. ಅವನಿಗೊಮ್ಮೆ ಬಬನ್ ಸಿಗಬಾರದೇ ಎಂದು ಅನ್ನಿಸಿಬಿಟ್ಟರೆ ಅದರಲ್ಲಿ ಓದುಗನ ತಪ್ಪೇನೂ ಇಲ್ಲ ಬಿಡಿ. 


' ಹಲೋ.. ಮೈಕ್ ಟೆಸ್ಟಿಂಗ್ ' ಕಥೆಯಲ್ಲಿ ಒಂದಿಷ್ಟು ಹಳೆಯ ಹಿಂದಿ ಹಾಡುಗಳನ್ನು ನಾವು ಮತ್ತೆ ಮೆಲುಕು ಹಾಕಿಕೊಳ್ಳಲು ಅವಕಾಶ. ಚಾರುದತ್ತ, ಘನಶ್ಯಾಮ ಇಡೀ ಕಥೆಯನ್ನು ಆವರಿಸಿಕೊಂಡರೂ ಕೊನೆಯ ಭಾಗದಲ್ಲಿ ಬಟಾಟಾ ಅಂಬಡೆ ಮತ್ತು ಬಿಸಿ ಚಹಾದೊಂದಿಗೆ ಬರುವ ಮಂದಾರಮಾಲ ಹಾಗೂ ಪಿಯಾನೋ ನುಡಿಸುವ ಸಂಗೀತಗಾರ ಉಸ್ತಾದ್ ಖಲೀಲ್, ನಮ್ಮನ್ನೂ ಬಟಾಟಾ ವಡೆಯನ್ನು ಮೆಲ್ಲುವಂತೆ, ಹಿತವೆನಿಸುವ  ಸಂಗೀತಕ್ಕೆ ಕರಗುವಂತೆ ಮಾಡಿ ಬಿಡುತ್ತಾರೆ.


' ಅನಾರ್ಕಲಿಯ ಸೇಫ್ಟಿಪಿನ್ ' ಇದು ಬಹಳ ಮುದ್ದಾದ ಕಥೆ. ಈ ಮಕ್ಕಳ ಕಥೆಯಲ್ಲಿ ಅನುಕ್ತಾಳದ್ದು ಒಂದು ಕಥೆಯಾದರೆ ಚಮೇಲಿಯದ್ದು ಇನ್ನೊಂದು ಕಥೆ. ಎಲ್ಲವೂ ಮಕ್ಕಳ ಮನಸ್ಸಿನ ಬೆರಗಿನ ಕಥೆಗಳು. ಲಾಂಚು ಹತ್ತಿಕೊಂಡು ಕಡಲಿನ ಎದೆ ಸೀಳುತ್ತಾ ನೊರೆ ನೊರೆ ತೆರೆಗಳ ಮೇಲೆ ನಾವೂ ಕಾರವಾರದ ತೀರದಿಂದ ದೇವಗಡದ ನಡುಗಡ್ಡೆಯ ದೀಪಸ್ತಂಭಕ್ಕೊಮ್ಮೆ  ಹೋಗಿ ಬಂದಂತಹ ಅನುಭವ ನೀಡುವ ಕಥೆ ಇದು. ದೇಶದ ಜನ ಮಾನಸವನ್ನು ಸೂರೆಗೈದ ಸಿನಿಮಾದ 'ಅನಾರ್ಕಲಿ'ಯ ಉಡುಪಿನ ಬಗ್ಗೆ ಅದರ ನಟಿ ಎಂದೋ ಸಂದರ್ಶನದಲ್ಲಿ ಹೇಳಿದ್ದ " ನಿಮಗೇನೋ  ನೋಡಲು ಚಂದ, ಆದರೆ ಅದು ನೂರಾರು ಸೇಫ್ಟಿಪಿನ್ನುಗಳಿಂದ ನಿಯಂತ್ರಿಸಲ್ಪಟ್ಟಿದ್ದು" ಎಂಬ ಆ ಉಡುಪಿನ ಹಿಂದಿನ ರಹಸ್ಯ, ಮನುಷ್ಯರಿಗೆ ಬಂಗಾರದ ಆಭರಣಗಳ ಬದಲಿಗೆ ಸೇಫ್ಟಿಪಿನ್ನುಗಳೇ ಆಭರಣವಾದರೆ ಹೇಗಿರಬಹುದು ಎಂಬ ಒಂದು ಆಲೋಚನೆ, ಲಾಂಚಿನಿಂದ ಇಳಿಯುವಾಗ ಅನುಕ್ತಾಳನ್ನು 'ಅನಾರ್ಕಲಿ' ಎಂದು ತಲೆಗೆ ಕನಕಾಂಬರ ಬಣ್ಣದ ಹೆಡ್ ಬ್ಯಾಂಡ್ ಧರಿಸಿದ್ದ ಲಾಂಚಿನ ಎಳೆಯ ಯುವಕನೊಬ್ಬ ಕರೆದ ಮೇಲೆ, ಅನುಕ್ತಾಳ ಮುಂದೆ ಹಾಗೇ ಕಡಲು, ಬಾನು, ಭೂಮಿ ಎಲ್ಲವೂ ಕನಕಾಂಬರ ಬಣ್ಣವಾಗಿ ಹೋಗುವ ಬಗೆ ಎಲ್ಲವೂ ಒಂಥರಾ ಚೆನ್ನಾಗಿದೆ. 


' ಮೃಗನಯನಾ' ಕಥೆಯಲ್ಲಿ ಹಸ್ತಾಕ್ಷರನ ತಾಯಿ ಚಂದ್ರಭಾಗ. ಆದರೆ ಆ ತಾಯಿ ನಾನೊಮ್ಮೆ ಪಂಡರಾಪುರದ ವಿಠ್ಠಲನನ್ನು ನೋಡಿ ಬರಲೇ ಬೇಕೆಂದು ಭಕ್ತರೊಂದಿಗೆ ಬೆಟ್ಟದಷ್ಟು ರೊಟ್ಟಿ ಕಟ್ಟಿಕೊಂಡು ಹೊತ್ತುಕೊಂಡು ಕಾಲ್ನಡಿಗೆಯಲ್ಲಿ ಹೊರಟೇ ಬಿಡುತ್ತಾಳೆ. ಅವಳು ಈ ಕಥೆಯಲ್ಲಿ ಎಲ್ಲಿ ಹೋದಳೋ ಸುಳಿವೇ ಇಲ್ಲ. ಆದರೆ ಅವಳು ಹಸ್ತಾಕ್ಷರ ಹಾಗೂ ಅವನ ತಂದೆ ದಿಗಂಬರನ ನೆನಪುಗಳಲ್ಲಿ ಕ್ಷಣ ಕ್ಷಣವೂ ಅದೆಷ್ಟು ಜೀವಂತ ಎಂದರೆ ಅವಳು ಈ ಕಥೆಯ ತುಂಬೆಲ್ಲಾ ಇದ್ದಾಳೆ ಆದರೆ ಎದುರಿಗೆ ಬರುವುದಿಲ್ಲ ಅಷ್ಟೇ. ನನಗೆ ಈ ಕಥೆ ಇಷ್ಟವಾಯಿತು. 


ಉಳಿದ ಕಥೆಗಳು ಕೂಡ ಚೆನ್ನಾಗಿಯೇ ಇದೆ. ಆದರೆ ಕವಿ ಹೃದಯಿಯು ಕಾವ್ಯ ಪ್ರೇಮಿಯೂ ಆದಂತಹ ಜಯಂತ ಕಾಯ್ಕಿಣಿಯವರು ಕೆಲವೊಮ್ಮೆ ಅತಿಯಾದ ವರ್ಣನೆಗೆ ಹಾಗೂ ಅಲಂಕಾರದ ಕುಸುರಿಗೆ ಇಳಿದ ಕಾರಣ ಆ ಸಾಹಸ ಕೆಲವು ಕಥೆಗಳನ್ನು ಇಲ್ಲಿ ಕೈ ಹಿಡಿದು ನಡೆಸಿದ್ದರೆ, ಮತ್ತೆ ಕೆಲವು ಕಥೆಗಳನ್ನು ಅರ್ಧ ದಾರಿಯಲ್ಲಿಯೇ ಕೈ ಬಿಟ್ಟಿದೆ ಅನ್ನುವುದು ಕೂಡ ಅಷ್ಟೇ ಸತ್ಯ. ಓದಿನ ಸುಖಕ್ಕೆ ನಿಜಕ್ಕೂ ಚೆನ್ನಾಗಿಯೇ ಇದೆ, ಆದರೆ ಕಥೆಯಾಗಿ ಅದರಲ್ಲೂ ಸಾಂಪ್ರದಾಯಿಕವಾಗಿ ಕಥೆಯನ್ನು ಓದುವವರಿಗೆ ಕೆಲವು ಕಥೆಗಳು ಅಷ್ಟೊಂದು ರುಚಿಸದು ಎಂದು ಅನಿಸುತ್ತದೆ. ಆದರೂ 'ಕುತಾನಿ ಕುಲಾವಿ'ಯ ಕಥೆಯ ಅಸಹಾಯಕ ಸತ್ಯಭಾಮಾ,'ಭಾಮೆ ಕೇಳೊಂದು ದಿನ' ಕಥೆಯ ತಾಳಮದ್ದಲೆಯ ಪದ್ಮಾಕರ ಮಾಸ್ತರರು, 'ವಾಯಾ ಚಿನ್ನದ ಕೇರಿ' ಯಲ್ಲಿ ಸೈಕಲ್ ಹೊಡೆಯುವ ವಿಹಂಗಮ,'ಎವರ್ ಗ್ರೀನ್' ಕಥೆಯಲ್ಲಿ ತಾರುಣ್ಯ ಕಾಯ್ದುಕೊಳ್ಳಲು ಹರ ಸಾಹಸ ಪಡುವ ನಟ ಶರತ್ಚಂದ್ರ,'ಕಾಗದದ ಚೂರು' ಕಥೆಯಲ್ಲಿ ಒಂದೇ ಕಾರೊಳಗಿನ ಸೋನಿ, ಸುಭದ್ರಾ ಮತ್ತು ಡ್ರೈವರ್ ಭುಜಂಗ...ಹೀಗೆ ಎಲ್ಲರೂ ಆಯಾಯ ಕಥೆಗಳ ನಿರೂಪಣೆಯಿಂದಾಗಿಯೇ ಒಂದಿಷ್ಟನ್ನೇ ಹೇಳಿ ಬಹಳಷ್ಟನ್ನು ಉಳಿಸಿ, ಹಾಗೇ ಎದ್ದು ಹೋಗಿ ನೆನಪಿನಲ್ಲಿ ಉಳಿಯುತ್ತಾರೆ.


ಹಕ್ಕಿ ಕುಕ್ಕಿದ ಜಂಬೇಳರ ಹಣ್ಣು, ಡಬ್ಬಕ್ಕೆ ಒಂದಿಷ್ಟು ಬೆಳಂಜಿ ಮೀನಿನದ್ದೇ  ಫ್ರೈ, ಬಾಜಿಗೆ ಬೃಹತ್ ಗಾತ್ರದ ಪೂರಿ, ಅಪ್ಪೆಹುಳಿಯಲ್ಲಿ ಒಂದು ಊಟ, ಒಂದಕ್ಕಿಂತ ಹೆಚ್ಚು ಕಸಾಟಾ ಐಸ್‌ಕ್ರೀಂ, ಗೋಕರ್ಣಕ್ಕೆ ಬರುವ ವಿದೇಶಿ ಯಾತ್ರಿಕರ ಕೊರಳಲ್ಲಿ ಹಾರವಾಗಿ ನುಲಿವ ಕರವೀರ, ದಾಸವಾಳ ಹೂವುಗಳು, ಸುಸ್ತಾಗಿ ನಿಂತಿರುವ ಹಿಟ್ಟಿನ ಗಿರಾಣಿಗಳು, ಗಾಳಿಯಲ್ಲಿ ಒಣ ಮೀನಿನದ್ದೇ ಗಂಧ, ಅಂಗಳದಲ್ಲಿ ಒಣಗಲು ಹಾಕಿದ ರಾಶಿ ಸಂಡಿಗೆ, ನೆಂಚಿಕೊಳ್ಳಲು ನಾಲ್ಕೈದು  ಬಾಳಕ, ಸಿಹಿಗೆ ಶಿರಾ, ಚಹಾದ ಬಾಯಿಗೆ ಬಿಸ್ಕೀಟು-ಚಿವಡಾ, ಲವಂಗ ಚುಚ್ಚಿದ ಬೂಂದಿ ಲಾಡು, ನಡು ನಡುವೆ  ಮರಾಠಿ ಮತ್ತೊಂದಿಷ್ಟು ಕೊಂಕಣಿಯ ಸೊಗಡು, ಅಲ್ಲೊಂದು ಇರಾನಿ ಬೇಕರಿ, ಇಲ್ಲೊಂದು ಐರಿಷ್ ಕಾಫಿ, ಬಿಸಿಯಾದ ಪಾವ್ ಗೆ ಸ್ವಪ್ನಸದೃಶ ಮೃದುತ್ವ, ನಡುವೆ ಎಲ್ಲೋ ವಿಶೇಷ ತಬ್ಬಿಬ್ಬು, ಜೊತೆಗೆ ಹೇರಿಕೊಂಡ ಬುಟ್ಟಿಯಷ್ಟು ಅಮೂಲ್ಯವಾದ ಮುಜುಗರ, ನೆನಪುಗಳಲ್ಲಿ ಹಸಿರಾಗುವ ಹಳೆಯ ದಾರಿಗಳು, ಬೆಳವಣಿಗೆಯಲ್ಲಿ ಬರಡಾಗುವ ನಾವೀನ್ಯದ ನಗರಗಳು, ಮೌನದಲ್ಲಿಯೇ ಅಧಿಕ ಸದ್ದು.. ಹೀಗೆ ಇಲ್ಲಿಯ ಎಲ್ಲಾ ಪ್ರತಿಮೆಗಳು, ಬಳಸಿಕೊಂಡ ಉಪಮೇಯಗಳು, ರೂಪಕಗಳು ಕರಾವಳಿಯ ಕಂಪನ್ನು, ಮಲೆನಾಡಿನ ತಂಪನ್ನು, ಬಾಂಬೆಯ ವೇಗೋತ್ಕರ್ಷವನ್ನು, ಕಾರವಾರದ ಜೀವೋತ್ಕರ್ಷವನ್ನು ಓದುಗನಿಗೆ ಸೊಗಸಾಗಿ ಒಣಬಡಿಸುತ್ತವೆ. 


ಅಂದ ಹಾಗೆ ಈ ಎಲ್ಲಾ ಕಥೆಗಳನ್ನು, ಓಡಿಸಿಕೊಂಡು ಮೂವಿ ನೋಡಿದಂತೆ ಉದ್ದಕ್ಕೆ ಓದುತ್ತಾ ಹೋಗಿ ರಪ್ಪನೆ ಮುಗಿಸಿ ಬಿಡುತ್ತೇನೆ ಎಂದಾದರೆ ನೀವು ಇದರದ್ದೊಂದು ನಿಜವಾದ ಓದಿನ ಸುಖದಿಂದ ಖಂಡಿತವಾಗಿಯೂ ವಂಚಿತರಾದಂತೆಯೇ ಸರಿ. ಕಷಾಯವನ್ನು ಕಣ್ಣು ಮುಚ್ಚಿಕೊಂಡು ತೆರೆಯುವುದರೊಳಗೆ ಒಂದೇ ಗುಕ್ಕಿನಲ್ಲಿ ಕುಡಿದು ಮುಗಿಸುವಂತಹ ವೇಗ ಇದಕ್ಕೆ ವರ್ಜ್ಯ. ಬೆಲ್ಲ- ಕಾಯಿಹಾಲಿನ ಹಿಬುಲದ ಹಣ್ಣಿನ ಜ್ಯೂಸಿಗೆ ಇಷ್ಟಿಷ್ಟೇ ಅವಲಕ್ಕಿ ಸುರಿದುಕೊಂಡು ನಿಧಾನಕ್ಕೆ ಹೀರುವಂತಹ, ಜೊತೆಗೆಯೇ ಘಮದ ಆ  ಹಣ್ಣಿನ ಪಲ್ಪನ್ನು ನಿಧಾನಕ್ಕೆ ಮೆಲ್ಲುವಂತಹ ಧ್ಯಾನದಂತಹ ಸಮಾಧಾನ ಇದ್ದರೆ ಇಲ್ಲಿರುವ ಎಲ್ಲಾ ಕಥೆಗಳ ಓದು ನಿಜಕ್ಕೂ ರಸವತ್ತಾಗಿಯೇ ಇದೆ. 


ಅನಾರ್ಕಲಿಯ ಸೇಫ್ಟಿಪಿನ್ |  ಕಥಾ ಸಂಕಲನ 

ಲೇಖಕರು - ಜಯಂತ ಕಾಯ್ಕಿಣಿ 

ಪ್ರಕಾಶಕರು - ಅಂಕಿತ ಪುಸ್ತಕ,ಬೆಂಗಳೂರು. 

ಪ್ರಥಮ ಮುದ್ರಣ - 2021

ಪುಟಗಳ ಸಂಖ್ಯೆ- 176

ಬೆಲೆ - 175 Rs. 


ಪುಸ್ತಕಗಳು 

Ab Pacchu

(https://phalgunikadeyavanu.blogspot.com)

Comments

  1. ಕಥೆಗಳಿಗೆ ವಿಭಿನ್ನವಾದ ನೋಟ ಕೊಟ್ಟು ಸುಂದರವಾಗಿ ಪರಿಚಯಿಸಿದ್ದೀರಿ

    ReplyDelete

Post a Comment

Popular posts from this blog

VIKINGS - S06E20

ಗಗನದ ಸೂರ್ಯ

ಪಯ್ಯನ ಪರಾಕ್ರಮ