ಆಹುತಿ (ಕ್ಲೈಮ್ಯಾಕ್ಸ್ -1)

 


ಕಡಲಿಗೊಂದು ಸದ್ದು ಇದೆ.ಅದರ ಭೋರ್ಗರೆವ ಅಲೆಗಳಲ್ಲಿ ಎಲ್ಲರಿಗೂ ಕೇಳಿಸುವ ಅಬ್ಬರದ ಶಬ್ಧವಿದೆ. 


ಆದರೆ ಕಡಲಿಗೊಂದು ಮೌನವೂ ಕೂಡ ಇದೆ.ಅದರ ಹಠಮಾರಿ ಅಲೆಗಳ ಭೋರ್ಗರೆತದ ಆ ಶಬ್ಧದೊಳಗೆಯೇ ಅದು ಅಡಗಿಕೊಂಡಿದೆ. 


ಕಡಲಿನೆದುರು ನಿಂತಾಗ ನಾವು ಕಿವಿ ಮುಚ್ಚಬೇಕು,ಮನಸ್ಸು, ಹೃದಯ ತೆರೆಯಬೇಕು.. ಆಗ ಆ ಮೌನ ನಮ್ಮದಾಗುತ್ತದೆ.


ಆ ಮೌನದಲ್ಲಿ ಕೆಲವರಿಗೆ ನೆಮ್ಮದಿ ಸಿಗುತ್ತದೆ,ಇನ್ನು ಕೆಲವರಿಗೆ  ಅವರವರ ಕಥೆಯಷ್ಟೇ  ನೆನಪಾಗುತ್ತದೆ..! 


ಹುಡುಕಿದರೆ ಕಡಲಿನ ಮರಳಿನಲ್ಲಿ ಹಾಗೂ ಮೌನದಲ್ಲಿ ಕಡಲಿನ ಮಕ್ಕಳದ್ದೊಂದು ಕಥೆ ಯಾವಾಗಲೂ ಹುದುಗಿರುತ್ತದೆ. 


ಕಡಲಿನ ತೀರದಲ್ಲಿಯೇ ದಿನನಿತ್ಯ ಉಸಿರಾಡುವ ವನಜಮ್ಮ ಗಟ್ಟಿಗಿತ್ತಿ ಹೆಂಗಸು.ಕಡಲಿನ ಮಗಳು ಎಂದರೆ ತಪ್ಪಾಗಲಾರದು. 


ಅವಳು ಕಡಲನ್ನು ಚೆನ್ನಾಗಿ ಬಲ್ಲಳು.ಕಡಲಿನ ಕಾಲಡಿಯಲ್ಲಿ ಆಡಿ ಬೆಳೆದು ದೊಡ್ಡವಳಾದ ವನಜಮ್ಮನದ್ದು ಮೀನು ಮಾರುವುದೇ ದಿನ ನಿತ್ಯದ ಕಾಯಕ.


ಅವಳ ಗಂಡ ಶೇಕರಣ್ಣ ತನ್ನ ಹೆಂಡತಿಯೇ ತನ್ನ ಜೀವನದ ಸರ್ವಸ್ವ ಎಂದು ನಂಬಿ ಬದುಕ ಹುಟ್ಟು ಶ್ರದ್ಧೆಯಿಂದ ಹಾಕಿದವನು.


ಕಡಲಿನ ನಾಡಿ ಮಿಡಿತ ಎಲ್ಲವನ್ನೂ ಚೆನ್ನಾಗಿಯೇ ಬಲ್ಲ ಶೇಕರಣ್ಣ ಬೆಳಿಗ್ಗೆ ಎಲ್ಲರಿಗಿಂತಲೂ ಮೊದಲೇ ಐದು ಗಂಟೆಯ ಒಳಗೆ,ದೋಣಿ ಏರಿ ಮೀನು ಹಿಡಿಯಲು ಹೋಗುತ್ತಿದ್ದ.


ವನಜಮ್ಮ ಶೇಖರಣ್ಣನಿಗಾಗಿ ಕಾಯುತ್ತ ದಡದಲ್ಲಿ ನಿಂತು ತಪಸ್ಸಿನಂತಹ  ಪ್ರತೀಕ್ಷೆ ಮಾಡುತ್ತಿದ್ದಳು. 


ಸುಮಾರು ಹತ್ತು ಗಂಟೆಯ ಒಳಗಾಗಿ ಶೇಖರಣ್ಣ ತನ್ನ ದೋಣಿಯಲ್ಲಿ ಬಲೆ ಹಾಕಿ  ಹಿಡಿದ ಮೀನುಗಳನ್ನು  ಪೇರಿಸಿಕೊಂಡು ದಡ ಸೇರುತ್ತಿದ್ದ.


ದಡದಲ್ಲಿ ನಿಂತು ಶೇಖರಣ್ಣನ ಪ್ರತೀಕ್ಷೆಯಲ್ಲಿಯೇ ಇರುತ್ತಿದ್ದ ವನಜಮ್ಮನಿಗೆ  ಕಡಲಿನ ತುದಿಯಲ್ಲಿ ಶೇಖರಣ್ಣನ ದೋಣಿ ಕಂಡ ಕೂಡಲೇ ಅವಳ ಮುಖವರಳಿ ಬಿಡುತ್ತಿತ್ತು.


ಕೇವಲ ಮೀನು ಬಂತೆಂದು ಅಲ್ಲ.ತನ್ನ ಗಂಡ ಕೂಡ ಸುರಕ್ಷಿತವಾಗಿ ಹಿಂದಿರುಗಿ ಬಂದಿದ್ದಾನೆ ಎಂಬ ನೆಮ್ಮದಿ ಅವಳದ್ದು.


ಏಕೆಂದರೆ ಕಡಲಿನಲ್ಲಿ ಪಯಣ,ದಿನನಿತ್ಯದ ಸಾವು ಬದುಕಿನ ಹೋರಾಟದಂತೆ,ಕಡಲನ್ನು ಎಂದಿಗೂ ನಂಬುವಂತಿಲ್ಲ. 


ಕೆಲವೊಮ್ಮೆ ಹೇರಳವಾಗಿ ಮೀನು ಸಿಕ್ಕರೆ,ಇನ್ನು ಕೆಲವೊಮ್ಮೆ ಏನೂ ಸಿಗುವುದಿಲ್ಲ. 


ಆವಾಗಲೆಲ್ಲ ಬೇರೆ ದೋಣಿಯವರಿಂದ ಮೀನು ಖರೀದಿಸಿ ಮಾರಲು ಹೋಗುತ್ತಿದ್ದಳು ವನಜಮ್ಮ.ಈ ರೀತಿ ಮೀನು ಬೇರೆಯವರಿಂದ ಖರೀದಿಸಿ ಮಾರಿದರೆ,ತಾವೇ ಹಿಡಿದು  ಮೀನನ್ನು ಮಾರುವುದಕ್ಕಿಂತಲೂ ಲಾಭ ಸ್ವಲ್ಪ ಕಡಿಮೆಯೇ, ಆದರೆ ಜೀವನ ಹೇಗೋ ಸಾಗುತ್ತಿತ್ತು.


ಶೇಖರಣ್ಣ ಕಷ್ಟ ಪಟ್ಟು ಮೀನು ಹಿಡಿದು ತರುತಿದ್ದ... ವನಜಮ್ಮ ಅದನ್ನು ಶ್ರಮ ವಹಿಸಿ ಮಾರ್ಕೆಟ್ ನಲ್ಲಿ ಮಾರಿ ಅವರಿಬ್ಬರಿಗೊಂದು ಬೆಚ್ಚನೆಯ ಬದುಕು ಕಟ್ಟಿಕೊಂಡಿದ್ದಳು.


#ಕ್ಲೈಮ್ಯಾಕ್ಸ್_1... 


ವನಜಮ್ಮ ಶೇಖರಣ್ಣ ದಂಪತಿಗೆ ಮಕ್ಕಳಿರಲಿಲ್ಲ. 


ಅವರಿಗೆ ಅವರೇ ಒಬ್ಬರಿಗೊಬ್ಬರು ಮಕ್ಕಳಾಗಿದ್ದರು.


ಮಕ್ಕಳಾಗಲಿ ಎಂದು ಎಲ್ಲಾ ಕಡೆ ಹರಕೆ ಹೊತ್ತಿದ್ದರು ಸಹ  ಅವರ ಪ್ರಾರ್ಥನೆ ಯಾವ ದೇವರಿಗೂ ಕೇಳಲೇ ಇಲ್ಲ.


ಇಬ್ಬರಿಗೂ ವಯಸ್ಸಾಗುತ್ತಾ ಬಂತು.ಹಿಂದಿನಂತೆ ಮೀನು ಹಿಡಿಯಲು ಹೋಗಲು ಶೇಖರಣ್ಣನಿಗೂ ಕೂಡ ಆಗುತ್ತಿರಲಿಲ್ಲ.

ಕೊನೆ ಕೊನೆಗೆ ಶೇಖರಣ್ಣ ಮೀನು ಹಿಡಿಯುವುದನ್ನೇ ನಿಲ್ಲಿಸಿ ಬಿಟ್ಟರು.


ವನಜಮ್ಮ ಆ ಇಳಿ ವಯಸ್ಸಿನಲ್ಲೂ  ಅವರಿವರ ಬಳಿಯಿಂದ ಮೀನು ಖರೀದಿಸಿ ಅದನ್ನು ಮಾರಿ,ಕೇವಲ ಅದರಲ್ಲಿ ಬಂದ ಸಂಪಾದನೆಯಿಂದಲೇ ತಾವೇ ಇಡೀ ಸಂಸಾರದ ಸಂಪೂರ್ಣ ಭಾರವನ್ನು ಹೊತ್ತುಕೊಂಡು ಬಿಟ್ಟರು.


ಹಾಗೋ ಹೀಗೋ ಅವರ ಜೀವನ ಸಾಗುತ್ತಿತ್ತು.ಆದರೆ ಅವರಿಬ್ಬರ ಬದುಕು ದುಸ್ತರವಾಗುತ್ತಿದ್ದದ್ದು ಮಳೆಗಾಲ ಬಂದಾಗಲೇ.


ಮಳೆಗಾಲ ಬಂದಾಗ ಕಡಲಿನಲ್ಲಿ ಮೀನು ಹಿಡಿಯಲು ಹೋಗುವ ಮೀನುಗಾರರಿಗೆ ಒಂದು ತೆರನಾದ ಭಯವಾದರೆ,ಕಡಲಿನ ದಂಡೆಗೆ ಹೊಂದಿಕೊಂಡೇ ಮನೆ ಕಟ್ಟಿಕೊಂಡವರದ್ದು ಇನ್ನೊಂದು  ರೀತಿಯ ಭಯ.


ವರ್ಷ ವರ್ಷವೂ ಕಡಲ ಕೊರೆತ ಜಾಸ್ತಿಯಾಗುತ್ತಲೇ ಹೋಗುತ್ತಿತ್ತು.ಪ್ರತೀ ವರ್ಷವೂ ಮೀಟರ್ ಗಟ್ಟಲೆ ಕಡಲ ದಂಡೆಯನ್ನು ಸಮುದ್ರ ರಾಜ ನುಂಗಿ ಹಾಕಿ,ಅಲ್ಲಿದ್ದ ಮನೆಗಳನ್ನು ಆಹುತಿ ತೆಗೆದುಕೊಂಡು ಮತ್ತೆ ಮತ್ತೆ ಮುಂದಕ್ಕೆ ಮುನ್ನುಗ್ಗಿ ಬರುತ್ತಲೇ ಇದ್ದ. 


ಸರ್ಕಾರ ಎಷ್ಟೇ ಪ್ರಯತ್ನಿಸಿದರೂ ಈ ಕಡಲ ಕೊರೆತಕ್ಕೆ ಶಾಶ್ವತ ಪರಿಹಾರ ಇನ್ನೂ ಕಂಡು ಹಿಡಿಯಲು ಆಗಲಿಲ್ಲ.ಪ್ರತೀ ಮಳೆಗಾಲಕ್ಕೂ ಮೊದಲು ಕಡಲ ಕೊರೆತ ತಡೆಯಲು ಸರಕಾರ  ಕಡಲ ದಂಡೆಯಲ್ಲಿ ತಂದು ಸುರಿಯುತ್ತಿದ್ದ ದೊಡ್ಡ ದೊಡ್ದ ಬಂಡೆ ಕಲ್ಲುಗಳು ಕೂಡ ಕೊನೆಗೆ ಕಡಲಿನ ಆರ್ಭಟಕ್ಕೆ  ಸೇರಿಕೊಳ್ಳುತ್ತಿದ್ದವು ಕಡಲಿನ ತಳವನ್ನೇ. 


ವನಜಮ್ಮ ಮತ್ತು ಶೇಖರಣ್ಣನ ಮನೆ ಕೂಡ ಸಮುದ್ರಕ್ಕೆ ತಾಗಿಯೇ ಇತ್ತು.


ಶೇಖರಣ್ಣ ಚಿಕ್ಕಂದಿನಲ್ಲಿ ಇರುವಾಗ ಮನೆಯಿಂದ ನೂರು ಮೀಟರ್ ಗಳಷ್ಟು ದೂರ ಇದ್ದ ಕಡಲು,ಈಗಪ್ರತೀ ವರ್ಷ ಮುಂದೆ ಬಂದು ಬಂದು,ಕಳೆದ ವರ್ಷ ಕೇವಲ ಹತ್ತು ಮೀಟರ್ ಗಳಷ್ಟು ದೂರದಲ್ಲಿ ನಿಂತಿತ್ತು..! 


ಸರಕಾರ ಕಡಲ ದಂಡೆಯಲ್ಲಿದ್ದ ಎಲ್ಲರಿಗೂ ಮನೆ ಖಾಲಿ ಮಾಡಿ ಹೋಗಿ ಎಂದು ಕಳೆದ ವರ್ಷವೇ ಎಚ್ಚರಿಸಿತ್ತು. ಹೆಚ್ಚಿನವರು ಮನೆ ಖಾಲಿ ಮಾಡಿ ಕೂಡ  ಹೋಗಿದ್ದರು. 


ಆದರೆ ಶೇಖರಣ್ಣ ಒಪ್ಪಲಿಲ್ಲ.ಏಕೆಂದರೆ ಚಿಕ್ಕಂದಿನಿಂದಲೂ ಅವರು ಆಡಿ ಬೆಳೆದ ಮತ್ತು ಅವರ ಹಿರಿಯರು ಬಾಳಿ ಬದುಕಿದ ಮನೆ ಅದು.ಹಾಗಾಗಿ ಆ ಮನೆಯೊಂದಿಗೆ ಅವರಿಗೊಂದು ಭಾವನಾತ್ಮಕ ಸಂಬಂಧ ಬೆಸೆದು ಕೊಂಡಿತ್ತು.


ಈ ವರ್ಷದ ಮಳೆಗಾಲದ ಆರಂಭದಲ್ಲಿಯೇ ಸರಕಾರದವರು ಮತ್ತೊಮ್ಮೆ ಶೇಖರಣ್ಣನಿಗೆ ಎಚ್ಚರಿಸಿದ್ದರು. ಆದಷ್ಟು ಬೇಗ ಮನೆ ಖಾಲಿ ಮಾಡಿ ಹೋಗಿ ಎಂದು.


ವನಜಮ್ಮ ಕೂಡ ತನ್ನ ಗಂಡ ಶೇಖರಣ್ಣನಿಗೆ ಬಹಳಷ್ಟು ಹೇಳಿ ನೋಡಿದರು.ಆದರೆ.. ಏನೂ ಆಗಲ್ಲ ಭಗವತಿ ಕಾಪಾಡ್ತಾಳೆ.. ಎಂದು ದೇವರ ಮೇಲೆ ಭಾರ ಹಾಕಿ ಅಲ್ಲೇ ಇರಲು ದೃಢ ಮಾಡಿ ಬಿಟ್ಟಿದ್ದರು ಶೇಖರಣ್ಣ.


ಆ ಒಂದು ರಾತ್ರಿ ಜೋರು ಮಳೆ.


ಕಡಲು ಆದಾಗಲೇ ಮುಂದೆ ಬಂದು ಅವರ  ಅಂಗಳವನ್ನು ಒದ್ದೆ ಮಾಡಿ ಆಗಿತ್ತು..!


ಅಲೆಗಳ ಭೋರ್ಗರೆತದ ಸದ್ದು ಕೇಳಿ ಎಚ್ಚರವಾದ ಶೇಖರಣ್ಣ ವನಜಮ್ಮ ಇಬ್ಬರೂ ಮನೆಯ ಬಾಗಿಲು ತೆರೆದು ಅಂಗಳಕ್ಕೆ ಓಡಿ ಬಂದಿದ್ದರು.


ಅಂಗಳಕ್ಕೆ ಬಂದು ನೋಡಿದರೆ.. ಅಂಗಳದಲ್ಲಿ ಇದ್ದ ಶೇಖರಣ್ಣನ ದೋಣಿ ಸಮುದ್ರದ ಅಲೆಯಲ್ಲಿ ಇನ್ನೇನು ಕೊಚ್ಚಿ ಹೋಗುವುದರಲ್ಲಿತ್ತು! 


ಅದನ್ನು ಹೋಗಿ ಗಟ್ಟಿಯಾಗಿ ಹಿಡಿದುಕೊಂಡರು ಶೇಖರಣ್ಣ.


ವನಜಮ್ಮ ಕೂಗಿ ಕೂಗಿ ಹೇಳಿದರು... ಬೇಡ ಬಿಟ್ಟು ಬಿಡಿ.. ದೋಣಿ ಉಳಿಸಿಕೊಳ್ಳಲು ಇನ್ನು ಸಾಧ್ಯವಾಗದು.. ಸಮುದ್ರದ ಅಬ್ಬರ ಬಹಳಷ್ಟು ಜೋರಿದೆ.. ಎಂದು ಹೇಳಿದರು ವನಜಮ್ಮ. 


ಆದರೆ ಆ ದೋಣಿ ಶೇಖರಣ್ಣನ ಜೀವ ಮತ್ತು ಜೀವನವೇ ಆಗಿತ್ತು.ಈ ಇಳಿ ವಯಸ್ಸಿನಲ್ಲಿ ಮೀನು ಹಿಡಿಯಲು ಹೋಗದೇ ಇದ್ದಾಗಲೂ ಕೂಡ ಅದನ್ನು ಅವರು ಯಾರಿಗೂ ಮಾರದೇ,ಹಾಗೇ ತನ್ನಲ್ಲೇ ಇಟ್ಟುಕೊಂಡಿದ್ದರು ಮತ್ತು ಪ್ರತೀ ದಿನ  ಅದರ ಮೈಯನ್ನು ಹಾಗೇ  ತನ್ನ ಕೈಗಳಿಂದ ಹಿತವಾಗಿ ಸವರಿ  ಮೈದವಡಿದರೆನೇ ಅವರಿಗೂ  ಏನೋ ಒಂದು ನೆಮ್ಮದಿ,ಸಮಾಧಾನ.ಏಕೆಂದರೆ ಆ ದೋಣಿಯಲ್ಲಿ ಅವರ ಬಾಲ್ಯದ ನೆನಪುಗಳಿದ್ದವು.


ಶೇಖರಣ್ಣನಿಗೆ ಹಠಮಾರಿ ಕಡಲಿನೆದುರು ಸೋಲಲು ಮನಸ್ಸಿರಲಿಲ್ಲ..


ಹಾಗಾಗಿ ದೋಣಿಯನ್ನು ಕೈ ಬಿಡದೆ ಅದನ್ನು ಹಿಂದೆ ಎಳೆಯುವ ಪ್ರಯತ್ನ  ಮತ್ತಷ್ಟು ಮುಂದುವರಿಸಿದರು.ತನ್ನ ಇದ್ದ ಬದ್ದ ಬಲವನ್ನೆಲ್ಲ  ಪ್ರಯೋಗಿಸಿದರು. 


ಕೊಚ್ಚಿಕೊಂಡು ಹೋಗುತ್ತಿರುವ ದೋಣಿಯನ್ನು ಹಾಗೇ ಒಬ್ಬರಿಗೆ ಮೇಲೆಳೆಯಲು ಸಾಧ್ಯವೇ.. ಶೇಖರಣ್ಣನ ವ್ಯರ್ಥ ಪ್ರಯತ್ನ ಕಂಡು  ಕೊನೆಗೆ ವನಜಮ್ಮ ಕೂಡ ಶೇಖರಣ್ಣನೊಂದಿಗೆ ದೋಣಿ ಎಳೆಯುವ ಸಾಹಸಕ್ಕೆ ಕೈ ಜೋಡಿಸಿಯೇ ಬಿಟ್ಟರು. 


ಇಬ್ಬರೂ ಸೇರಿ ದೋಣಿ ಎಳೆಯಲು ಶುರು ಮಾಡಿದರು.


ಅಷ್ಟೇ...!!


ವನಜಮ್ಮ - ಶೇಖರಣ್ಣ ದೋಣಿ ಎಳೆಯುತ್ತಿದ್ದಂತೆಯೇ ಹಾಗೇ  ನೋಡು ನೋಡುತ್ತಿದ್ದಂತೆಯೇ.. ಮತ್ತೊಂದು ಭಾಗದಲ್ಲಿ ಮುನ್ನುಗಿದ ಕಡಲು...ಶೇಖರಣ್ಣನ ಮನೆಯನ್ನೇ ಮುಳುಗಿಸಿ ಆ ಇಡೀ ಮನೆಯನ್ನು ಬೀಳಿಸಿ ಬಿಟ್ಟಿತ್ತು!!


ಅದನ್ನು ನೋಡಿದ ಶೇಖರಣ್ಣನ ಹೃದಯವೇ ಒಡೆದು ಹೋಯಿತು..!


ಗೋಳೋ ಎಂದು ಎದೆ ಹೊಡೆದುಕೊಂಡು ಅತ್ತರು ಶೇಖರಣ್ಣ..! 


ಇನ್ನು ಇಲ್ಲಿದ್ದರೆ ಜೀವಕ್ಕೆ ಅಪಾಯ ಎಂದು ಅರಿತ ವನಜಮ್ಮ ತುಂಬಾ ಕಷ್ಟ ಪಟ್ಟು ಕೊನೆಗೂ ಹೇಗೋ ಶೇಖರಣ್ಣನ ಕೈಯಿಂದ ದೋಣಿಯನ್ನು ತಪ್ಪಿಸಿ,ಶೇಖರಣ್ಣನನ್ನು ಮನೆಯ ಅಂಗಳದಿಂದ  ಸ್ವಲ್ಪ ಹಿಂದಕ್ಕೆ ಎಳೆದುಕೊಂಡು ಬಂದೇ ಬಿಟ್ಟರು. 


ಮಳೆ ಇನ್ನೂ ಜೋರಾಗಿ ಬಿಟ್ಟು ಬಿಡದೇ ಸುರಿಯುತ್ತಲೇ ಇತ್ತು.


ಮನೆಯ ಅಂಗಳದಿಂದ ಸ್ವಲ್ಪ ದೂರದಲ್ಲಿಯೇ ನಿಂತುಕೊಂಡು ಶೇಖರಣ್ಣ ಮತ್ತು ವನಜಮ್ಮ ಕಡಲಿನ ಆರ್ಭಟವನ್ನೇ ಹಾಗೇ ನೋಡುತ್ತಾ ನಿಂತು ಬಿಟ್ಟರು..! 


ಮೊದಲು ಶೇಖರಣ್ಣನ ದೋಣಿ ಕಡಲು ಪಾಲು ಆಯಿತು..!


ಆ ನಂತರ ಮನೆಯ ಒಂದೊಂದೇ ಗೋಡೆ ಮುರಿದು ಬಿದ್ದು, ಬಿದ್ದ ಪ್ರತೀ ಗೋಡೆಯೂ ಕೂಡ ಕಡಲು ಪಾಲು ಆಯಿತು..!!


ಅಲ್ಲೊಂದು ಮನೆ ಇದ್ದ ಯಾವುದೇ ಕುರುಹು ಈಗ ಅಲ್ಲಿರಲಿಲ್ಲ..!


ಶೇಖರಣ್ಣ ತಲೆಗೆ ಕೈ ಹೊಡೆದು ಕೊಂಡು ..ನೆಲದಲ್ಲಿ ಹೊರಳಾಡಿಕೊಂಡು ಮುಗಿಲು ಮುಟ್ಟುವಂತೆ ಆಕ್ರಂಧನ ಮಾಡುತ್ತಲೇ ಇದ್ದರು..!


ಆದರೆ ಅವರ ಕೂಗು ಕಡಲಿಗೆ ಕೇಳಲೇ ಇಲ್ಲ..


ಅವರ ಕಣ್ಣೀರು ಕಡಲಿಗೆ ಅರ್ಥವೇ ಆಗಲಿಲ್ಲ.


ಅದು ಮತ್ತಷ್ಟು ಭೋರ್ಗರೆದು ಅವರೆದರು ಆರ್ಭಟಿಸುತ್ತಲೇ ಇತ್ತು.


ಅದರೆದರು ಶೇಖರಣ್ಣನ ಆಕ್ರಂಧನ ಕೂಡ ಮತ್ತಷ್ಟು ಹೆಚ್ಚಾಯಿತು..!


ವನಜಮ್ಮ ಮಾತ್ರ ಹಾಗೇ ಕಡಲನ್ನೇ ದಿಟ್ಟಿಸಿ ನೋಡುತ್ತಾ ಉಳಿದು ಬಿಟ್ಟರು!!


ಆ ವೃದ್ಧ ದಂಪತಿಗಳ ಮೇಲೆ ಸ್ವಲ್ಪವೂ ಕರುಣೆ ತೋರದ ಕಡಲು ಅವರನ್ನು ಕೂಡ ನುಂಗಿ ಹಾಕಲು ಮತ್ತೆ ಅವರತ್ತಲೇ  ಮುನ್ನುಗಿ ಬಂತು.!!


ಅದನ್ನು ಕಂಡ ಅವರಿಬ್ಬರು ಸ್ವಲ್ಪವೂ ಹಿಂದೆ ಸರಿಯದೆ,ಗಟ್ಟಿಯಾಗಿ ಕೈ ಕೈ ಹಿಡಿದುಕೊಂಡು ತಮ್ಮತ್ತ ಮುನ್ನುಗ್ಗಿ ಬರುತ್ತಿರುವ ಕಡಲನ್ನೇ ದಿಟ್ಟಿಸಿ ನೋಡುತ್ತಾ ಅಲ್ಲಿಯೇ ದೃಢವಾಗಿ ನಿಂತುಕೊಂಡು ಬಿಟ್ಟರು..!!


ಅವರ ಹಠವನ್ನು ಕಂಡ ಕಡಲು ಅವರತ್ತಲೇ ಮತ್ತಷ್ಟು ರಭಸವಾಗಿ ಮುನ್ನುಗ್ಗಿ ಬಂತು!!



.....................................................................................


#ಇಷ್ಟೇ.... 


ab pacchu 

moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ