ನವಿಲು ಕೊಂದ ಹುಡುಗ | ಸಚಿನ್ ತೀರ್ಥಹಳ್ಳಿ

 ನವಿಲು ಕೊಂದ ಹುಡುಗ l ಸಚಿನ್ ತೀರ್ಥಹಳ್ಳಿ 




ಒಂದೊಳ್ಳೆಯ ಕತೆ ಓದಿ ಮುಗಿಸಿದರೆ ರುಚಿಯ ಲಡ್ಡು ತಿಂದಷ್ಟೇ ಖುಷಿ ನನಗೆ. ಕತೆಗಳ ಮಾಯಲೋಕಗಳು ಹುಟ್ಟಿಸುವ ಬೆರಗುಗಳು ನನ್ನಲ್ಲಿ ಎಲ್ಲಾ ಕಾಲಕ್ಕೂ ಬಹಳ ಜೋಪಾನ. ಬೆರಗು ಬದುಕಿಗೆ ಬೇಕು. ಬೆರಗಿನಲ್ಲಿ ಒಂಥರಾ ಪುಳಕವಿದೆ. ಅಂತಹದ್ದರಲ್ಲಿ ಅವೆಲ್ಲವೂ ಇರುವ, ಬರೀ ಒಂದಲ್ಲ ಹತ್ತು ಚಂದ ಚಂದದ ಉಲ್ಲಾಸದ್ದೇ ಕತೆಗಳಿಂದ ಕೂಡಿರುವ ಈ ಒಂದು ಸಂಕಲನವನ್ನು ಮನೆಯಲ್ಲಿಟ್ಟುಕೊಂಡು, ಇನ್ನೂ ಓದದೇ ಉಳಿದುದಕ್ಕೆ ಸ್ವತಃ ನನಗೆಯೇ ನನ್ನ ಬಗ್ಗೆ ಸಿಕ್ಕಾಪಟ್ಟೆ ಬೇಜಾರಿದೆ. ಲಡ್ಡುಗಳ ತಟ್ಟೆಯೇ ಎದುರಿದ್ದರೂ ಸವಿಯದೇ ಸುಮ್ಮನುಳಿಯುವ ಉದಾಸೀನಕ್ಕೆ ಜೈ ಹೇಳಲೇಬಾರದು. 


ಪ್ರದೀಪ್ ಬತ್ತೇರಿ ಕೈಚಳಕದ ಈ ಪುಸ್ತಕದ ಆಕರ್ಷಕ ಮುಖಪುಟದಲ್ಲಿ ನವಿಲು ತನ್ನದೊಂದು ಸಾವಿರ ಕಣ್ಣುಗಳ ಗುರಿಯನ್ನು ಬಿಚ್ಚದೆ, ತಲೆಗೆ ಹನ್ನೆರಡು ಪುಕ್ಕಗಳ ಬಿಡಿ ಬಿಡಿ ಜುಟ್ಟು ಹಾಕಿಕೊಂಡು, ಉದ್ದದ ಚುಂಚು ಕೆಳಗೇ ಮಾಡಿಕೊಂಡು ಏನನ್ನೋ ಹೇಳುವುದಕ್ಕಾಗಿ ನಿಂತಂತಿದೆ. ಅದರ ಒಂಟಿ ಕಣ್ಣಿನಲ್ಲಿ ನೆತ್ತರು ಕದಡಿದ ಸಂಜೆಯದ್ದೇ ಬಣ್ಣ. ಪುಸ್ತಕದ ಶೀರ್ಷಿಕೆಯಲ್ಲೂ ಒಂದು ಕೆಂಪು ಬಣ್ಣದ್ದೇ ಬೊಟ್ಟು. ನವಿಲಿನ ಕಂಠದಲ್ಲಿ ಕೋವಿ ಹಿಡಿದ ಶಿಖಾರಿಯವನ ಅಸ್ಪಷ್ಟ ಗೆಲುವಿನ ಚಿತ್ರ. ಶೀರ್ಷಿಕೆಯಲ್ಲಿ ವಿಭಕ್ತಿ ಪ್ರತ್ಯಯ ಮಾಯವಾಗಿ ಹುಡುಗ ನವಿಲನ್ನು ಕೊಂದದ್ದೋ ಅಥವಾ ನವಿಲೇ ಹುಡುಗನನ್ನು ಕೊಂದದ್ದೋ ಎಂಬ ವಿಶೇಷ ಗಲಿಬಿಲಿ ನನಗೆ. ಏನೇನೋ ಕುತೂಹಲಗಳಿಂದ ಕತೆ ಓದಲು ಆರಂಭಿಸಿ ಕೊನೆಗೊಮ್ಮೆ ಮುಗಿಸಿದಾಗ ನನ್ನದೆಯಲ್ಲಿ ಕೂಡ  ಸಾವಿರ ಕಣ್ಣುಗಳ ಮಲೆನಾಡಿನದ್ದೇ ಮಯೂರ ಗರಿ ಬಿಚ್ಚಿ ಕುಣಿದಾಡಿದ್ದಂತು ನೂರಕ್ಕೆ ನೂರು ಸತ್ಯ. 


' ಬಿಡುಗಡೆ..' ಕತೆಯಲ್ಲಿ ನನಗೆ  ನಾಯಿಮರಿ ಹಿಡಿಸಿತು. ಅದು ಬಟ್ಟೆ ಕಸಿದು ಬೆತ್ತಲುಗೊಳಿಸಿ ಎಲ್ಲರಿಗೂ ಎಲ್ಲದರಿಂದ ಮೋಕ್ಷ ದಯಪಾಲಿಸಿದ ಈ ಕತೆಯ ಧೀಮಂತ ನಾಯಕ. ತನ್ನನ್ನು ಕಾಡು ಪಾಲು ಮಾಡಿದವರನ್ನು ದಾರಿಯಲ್ಲಿ ಅಡ್ಡ ಹಾಕಿ ಅವರ ಕಣ್ಣುಗಳಲ್ಲಿ ಉತ್ತರಕ್ಕಾಗಿ ತಡಕಾಡಿದ ಆ ನಾಯಿಮರಿಯದ್ದೊಂದು ಕಿಚ್ಚು ಮೆಚ್ಚುವಂತಹದ್ದೇ.


 ' ಒಂದು ಅಪ್ರಸ್ತುತ ಪ್ರಸಂಗ..' ಎಂಬ ಕತೆಯಲ್ಲಿ ಭೂಮಿತೂಕದ ಭಾರ ಹೊತ್ತವಳಂತೆ ಹೆಣ್ಣು ಹುಡುಗಿಯೊಬ್ಬಳು ಪಶ್ಚಿಮ ಘಟ್ಟದ ಗರ್ಭದಲ್ಲಿ ಅಬ್ಬರಿಸಿಕೊಂಡು ನಿಂತು , ತನ್ನ ತಂದೆಯ ಶವಕ್ಕೆ ಬೆಂಕಿ ಇಡುವ ದೃಶ್ಯ ಒಂದಿಷ್ಟು ದಿನ ಓದುಗನಿಗೆ ಕಾಡದೇ ಇರುವುದಿಲ್ಲ. ಮನುಷ್ಯನ ಕಠೋರತೆ ಪರಿಸ್ಥಿತಿಗಳಿಗೆ ತಕ್ಕಂತೆ ನಿಧಾನಕ್ಕೆ ಬದಲಾಗುತ್ತಾ ಹೋಗುತ್ತದೆ, ಕೆಲವೊಮ್ಮೆ ಪರಿಸ್ಥಿತಿಗಳೇ ಮನುಷ್ಯನನ್ನು ಇನ್ನಿಲ್ಲದಂತೆ ಕಠೋರನನ್ನಾಗಿಸುತ್ತದೆ ಎನ್ನುವುದು ಬಹಳಷ್ಟು ಸತ್ಯ ಇಲ್ಲಿ. 


ಇನ್ನೊಂದು ಕತೆ ' ಕಾಡು ಮಲ್ಲಿಗೆ..'. ಈ ಕತೆಯಲ್ಲಿ ಹಂದಿ ಹೊಡೆಯಲು ಹೋಗಿ ಹೆಣ್ಣು ಹೊಡೆದು, ಹೊಡೆದ ಹೆಣ್ಣನ್ನು ಮನೆಗೆ ಕರೆದುಕೊಂಡು ಬರುವ ಘಟನೆ ಒಂದಿಷ್ಟನ್ನು ಹೇಳಿ ಬಹಳಷ್ಟನ್ನು ಬಚ್ಚಿಟ್ಟುಕೊಂಡು ಓದಿನ ಸುಖವನ್ನು ಪ್ರಸಾಧಿಸುತ್ತದೆ. ' ನವಿಲು ಕೊಂದ ಹುಡುಗ..' ಕತೆ ಕೋವಿ ಮಾತಾಡುವ ಕತೆಯಾದರೂ ಮೌನದ ಭಾಷೆಯಲ್ಲಿ ಬಹಳಷ್ಟು ನವಿರು ಪ್ರೇಮದ ಸಾಲುಗಳು ಇಲ್ಲಿ ಸೇರಿಕೊಂಡಿವೆ, ' ಅತಿಥಿ..' ಕತೆ ಪಶ್ಚಾತಾಪದ ಬೇಗುದಿ. ಈ ಕತೆ ಕೊನೆಗೆ ಏನನ್ನೂ ಮಾಡುವುದಿಲ್ಲ,ಅದರಿಂದಾಗಿಯೇ ಈ ಕತೆ ಗೆಲ್ಲುತ್ತದೆ. ' ಹಾವು ಮತ್ತು ಹುಡುಗಿ.. ' ಕತೆಯಲ್ಲಿ ರಸಿಕತೆಯ ಕತೆಯ ಜೊತೆ ಜೊತೆಗೆ ಒಂದಿಷ್ಟು ಹಾಸ್ಯದ ತೆಳು ಹೂರಣವಿದೆ; ಕಾಯಿಹೋಳಿಗೆಯೊಳಗಿನ ಬೆಲ್ಲ ಕಾಯಿಯಂತೆ. 


' ಯಾವತ್ತೂ ಹಾಡುತ್ತಿದ್ದ ಹಾಡು..' ಕತೆ ನಿಜವಾಗಿಯೂ ಈ ಸಂಕಲನದ ನನ್ನ ಅಚ್ಚುಮೆಚ್ಚಿನ ಕತೆಗಳಲ್ಲಿ ಒಂದು. ಲೇಖಕ ಓದುಗರ ಕಣ್ಣಂಚನ್ನು ಒಂದಿಷ್ಟು ಒದ್ದೆ ಮಾಡುವಲ್ಲಿ ನಿಜವಾಗಿಯೂ ಸಫಲರಾಗುತ್ತಾರೆ ಇಲ್ಲಿ. ' ದೀಪಾವಳಿ..' ಎಂಬ ಕತೆಯಲ್ಲಿ ಒಬ್ಬ ಪುಟಾಣಿ ಬಾಲಕ, ಮಲೆನಾಡಿನ ಯಾವುದೋ ಅನಾಮಿಕ ಅಂಗಳದಲ್ಲಿ, ಕತ್ತಲು ನುಂಗುವ ಸಂಜೆಯ ವೇಳೆಗೆ  ಒಬ್ಬನೇ ಕುಳಿತುಕೊಂಡು, ತನ್ನ ಹಲವಾರು ಭಾವಯಾನದ ಕತೆಗಳನ್ನು ಯಾರೂ ಕೇಳುವವರಿಲ್ಲದೆ ತೀರಾ ಅಸಹಾಯಕನಾಗುತ್ತಾ ಹೋಗುವ ದೃಶ್ಯವನ್ನು ಕಣ್ಣಿಗೂ ಒಳಗಣ್ಣಿಗೂ ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ ಕತೆಯ ಲೇಖಕ .


 ' ಕನ್ನಡಿ ಹಿಂದಿನ ಹುಡುಗಿ...' ಕತೆಯಲ್ಲಿ ಒಂದು ಅಮಾಯಕ ಕಾಯುವಿಕೆ ಇದೆ; ಜೊತೆಗೆ  ನಂಬಿಕೆ ನಿಜವಾಗಲಿ ಎಂಬ ಎಂದಿಗೂ ಮುಗಿಯದ ಪ್ರಾರ್ಥನೆಯೂ ಇದೆ. ಇದೊಂದೇ ಕಥೆ ಉಳಿದೆಲ್ಲಾ ಕತೆಗಳಿಗಿಂತ ಓದುಗನನ್ನು ರಮಿಸುವುದರಲ್ಲಿ ಸ್ವಲ್ಪ ಹಿಂದೆ ಬಿತ್ತು ಅನ್ನುವುದು ನನ್ನ ಅಭಿಪ್ರಾಯ. ಗಮನಿಸಿದಂತೆ ಕೆಲವು ಕತೆಗಳಲ್ಲಿ ಕೆಲವೊಂದು ಸಾಲುಗಳು ಪೂರ್ಣವಿರಾಮದ ಹಂಗಿಲ್ಲದೆ ಅತೀ ಉದ್ದವಾಗಿ ಬಿಟ್ಟವು ಅಂತ ಅನ್ನಿಸಿದ್ದು ಕೂಡ ಸತ್ಯ. ಆದರೆ ಅವೆಲ್ಲ ಏನೇ ಇದ್ದರೂ ಲೇಖಕರು ಮುತ್ತಿನಂತಹ  ಸಾಲುಗಳನ್ನೇ ಶ್ರದ್ಧೆಯಿಂದ ಪೋಣಿಸಿ ಪೋಣಿಸಿ ಕತೆಗಳನ್ನು ಹೆಣಿದಿದ್ದ ಕಾರಣ ಯಾವುದೇ ಕತೆಯು ಇಲ್ಲಿ ಓದಿಗೆ ಒಂಚೂರೂ ರಸಭಂಗವನ್ನು ತಂದೊಡ್ಡುವುದಿಲ್ಲ. 


ನಿಜ ಹೇಳಬೇಕೆಂದರೆ ಯಾವುದೇ ಒಂದು ಕಥಾ ಸಂಕಲನದಲ್ಲಿ ಸಾಮಾನ್ಯವಾಗಿ ಅರ್ಧದಷ್ಟು ಕತೆಗಳು ಇಲ್ಲವೇ ಅದಕ್ಕಿಂತ ಹೆಚ್ಚೋ ಇಲ್ಲವೋ ಕಡಿಮೆ ಕತೆಗಳು ಚೆನ್ನಾಗಿರುತ್ತದೆ ಅಷ್ಟೇ. ಎಂತಹ ಖ್ಯಾತ ಬರಹಗಾರನಾದರೂ ಪುಸ್ತಕದ ಎಲ್ಲಾ ಕತೆಗಳನ್ನು ಹಾಯೆನಿಸುವುದು ಬಹಳಷ್ಟು ಅಪರೂಪದ ಸಂಗತಿಯೇ ಸರಿ. ಇಲ್ಲಿ ' ಕತೆಗಾರನ ಕತೆ 'ಯಲ್ಲಿ ಒಂದು ಕತೆ ಸ್ವತಃ ತಾನೇ ಓದುಗನಿಗೆ ಹೇಳುತ್ತದೆ "ನೀವು ಕತೆಗಾರನನ್ನು ಇಷ್ಟಪಟ್ಟಷ್ಟು,ನನ್ನನ್ನು ಇಷ್ಟ ಪಡುವುದಿಲ್ಲ, ನನ್ನನ್ನು ಆಮೇಲೆ ಮರೆತೇ  ಬಿಡುತ್ತೀರಿ ನೋಡಿ.." ಎಂದು. ಆದರೆ ಎಲ್ಲಾ ಕತೆ ಓದಿದ ನನಗೆ ಮಾತ್ರ ಸಚಿನ್ ತೀರ್ಥಹಳ್ಳಿಯವರಷ್ಟೇ ಅವರ ಕತೆಗಳು ಕೂಡ ಬಹಳಷ್ಟು ಪ್ರೀಯವಾದವು. ಖಂಡಿತವಾಗಿಯೂ ಹೆಚ್ಚಿನ  ಕತೆಗಳು ನನಗಂತು ತುಂಬಾ ಸಮಯದವರೆಗೆ ನೆನಪಿನಲ್ಲಿ ಉಳಿಯುತ್ತದೆ. 


ಮಲೆನಾಡಿನ ಕತೆಗಳು ಎಂದರೆ ಓದುಗ ಸಹಜವಾಗಿಯೇ ಕುವೆಂಪು ಅವರನ್ನು ತೇಜಸ್ವಿಯವರನ್ನು ನೆನಪಿಗೆ ತಂದುಕೊಳ್ಳದೇ ಇರುವುದಿಲ್ಲ. ಅವರುಗಳ ಪ್ರಭಾವ ಮಲೆನಾಡಿನ ಲೇಖಕರಲ್ಲಿ ಸಹಜವಾಗಿಯೆ ಇದ್ದೇ ಇರುತ್ತದೆ. ಸ್ವತಃ ಲೇಖಕರು ತೇಜಸ್ವಿಯವರನ್ನು ತಮ್ಮ ಆರಾಧ್ಯ ಎಂದು ಒಪ್ಪಿಕೊಂಡಿದ್ದರೂ ಅಪ್ಪಿಕೊಂಡಿದ್ದರೂ ಸಚಿನ್ ಅವರು ಇಲ್ಲಿ ಬಳಸಿದ ಪ್ರತಿಮೆ, ರೂಪಕಗಳನ್ನು ಓದುವಾಗ ನನಗೆ ಜಯಂತ ಕಾಯ್ಕಿಣಿಯವರ ಛಾಯೆಯೇ ಇಲ್ಲಿನ ಕತೆಗಳ ವರ್ಣನೆಗಳಲ್ಲಿ ಅಲ್ಲಲ್ಲಿ ಇಣುಕಿ ಒಂದಿಷ್ಟು ಕಣ್ಣು ಮಿಟುಕಿಸಿದವು. ಇದು ಅಪವಾದವಲ್ಲ,ಆರೋಪವಂತು ಖಂಡಿತವಾಗಿಯೂ ಅಲ್ಲವೇ ಅಲ್ಲ; ಬಹಳಷ್ಟು ಮೆಚ್ಚುಗೆ. ಸಚಿನ್ ಅವರ ಎಲ್ಲಾ ಕತೆಗಳು ಅವರದ್ದೇ ಸ್ವಂತ ಶೈಲಿಯಲ್ಲಿ ಮಲೆನಾಡಿನ ಕತ್ತಲನ್ನು ಉದ್ದಕ್ಕೆ ಸೀಳಿ ಹೊರಬಂದಂತಹ ಬಹಳ ಅಪರೂಪದ ಕಾಡುಮಲ್ಲಿಗೆಗಳು. ಓದದಿದ್ದರೆ ನೀವೆಲ್ಲಾ ಓದಲೇಬೇಕು. ಅದರಲ್ಲೂ ಸಾಲು ಸಾಲುಗಳನ್ನು ಕೂಡ ಚಪ್ಪರಿಸಿಕೊಂಡು ಓದುವವರು ನೀವಾಗಿದ್ದರೆ ಇದೊಂದನ್ನು ತಪ್ಪದೇ ಓದಿ. 


ಸಚಿನ್ ತಮ್ಮ ಕತೆಗಳಲ್ಲಿ ಒಂದಿಷ್ಟು ಕಾಡುಕುರಿಗಳನ್ನು ಕಾಣಿಸಿದರು, ಕಾಡುಹಂದಿಯ ರುಚಿಯನ್ನು ಉಣಬಡಿಸಿದರು, ಒಣ ಮೀನಿನ ಗಂಧವನ್ನೂ ಗಾಳಿಗೆ ಬೆರೆಸಿದರು ಆದರೆ ಓಡುವ ಹಾರಾಡುವ ಕಾಡುಕೋಳಿಗಳ ಚಂದದ ಹಿಂಡನ್ನು, ಹೊಳೆಯಲ್ಲಿ ಈಜಾಡುವ ದಪ್ಪನೆಯ ಬಳುಕುವ ಮೀನುಗಳನ್ನು ತೋರಿಸದೆ ಇದ್ದುದರ ಕಾರಣ ನನಗೆ ವೈಯಕ್ತಿಕವಾಗಿ ಅವರ ಮೇಲೊಂದು ಗಾಳಿಗುಳ್ಳೆಯಂತಹ ಸಿಟ್ಟು ಅವಶ್ಯವಾಗಿ ಇದೆ. ಒಂದೊಳ್ಳೆಯ ಕೃತಿಗಾಗಿ ಅಭಿನಂದನೆಗಳು. ಓದಿನ ಸುಖವನ್ನು ದೊಡ್ಡ ಸೌಟಿನಲ್ಲಿಯೇ ಪುಷ್ಕಳವಾಗಿ ಬಡಿಸಿದ್ದಕ್ಕೆ ಅನಂತ ವಂದನೆಗಳು. " ಛೇ..ಯಾಕೆ ನಾನು ಇಷ್ಟು ದಿನ ಈ ಕತೆಗಾರನನ್ನು ಓದಲೇ ಇಲ್ಲ ..?" ಎಂಬ ಸಾಲೊಂದೇ ಸಚಿನ್ ತೀರ್ಥಹಳ್ಳಿ ಅವರಿಗೆ ನಾನು ಮಾಡಬಯಸುವ ಒಂದು ಸಾಲಿನ ಪುಟ್ಟ ಪ್ರಶಂಸೆ. 


ನವಿಲು ಕೊಂದ ಹುಡುಗ |  ಕಥಾ ಸಂಕಲನ 

ಲೇಖಕರು - ಸಚಿನ್ ತೀರ್ಥಹಳ್ಳಿ 

ಪ್ರಕಾಶಕರು - ಅಂಕಿತ ಪುಸ್ತಕ,ಬೆಂಗಳೂರು. 

ಪ್ರಥಮ ಮುದ್ರಣ - 2018

ಪುಟಗಳ ಸಂಖ್ಯೆ- 104

ಬೆಲೆ - 95 Rs. 


ಪುಸ್ತಕಗಳು 

Ab Pacchu

(https://phalgunikadeyavanu.blogspot.com)

Comments

Popular posts from this blog

VIKINGS - S06E20

ಗಗನದ ಸೂರ್ಯ

ಪಯ್ಯನ ಪರಾಕ್ರಮ