ಪೆಟ್ಟ್ ಲಡಾಯಿಯ ದಿನಗಳು - 2
.
#ಲಡಾಯಿಯ_ದಿನಗಳು - 2
ನನ್ನೆದುರೇ ಓಮ್ನಿಯಲ್ಲಿ ಕೂತಿದ್ದ ಬ್ಲೇಡ್ ಬಾಬು..
ನಗರದ ಖ್ಯಾತ ಹಾಗೂ ಕುಖ್ಯಾತ ರೌಡಿ..!
ಬಾಯಿಯಲ್ಲಿ ಅವನ ಹೆಸರಿಗೆ ತಕ್ಕಂತೆಯೇ ಬ್ಲೇಡ್ ಒಂದನ್ನು ಜಗೀತಾ ಇದ್ದ... ಗುಟ್ಕಾ ಜಗಿಯುವಂತೆ.
ಬಹುಶಃ ಇದು ಇವನ ಸ್ಟೈಲ್ ಇರಬಹುದು ಅಂತ ಅನ್ಕೊಂಡೆ.ಒಂದೊಂದು ರೌಡಿದ್ದೂ ಒಂದೊಂದು ಭಿನ್ನ ವಿಭಿನ್ನ ಚಿತ್ರ ವಿಚಿತ್ರ ಮರ್ಲ್ ಸ್ಟೈಲ್ ಇರ್ತದೆ ಅಲ.
ಈಗ ವಿಷಯ ಇರುವುದು ಇಷ್ಟೇ..ಅವನ ಸೈಡಿನ ಹುಡುಗ ಒಬ್ಬ ನಮ್ಮ ಮನೆಯ ಕೆಳಗಿನ ಬೈಲು ಮನೆಯ ರಾಧ(ಅನುರಾಧ)ನ ತಂಗಿ ರುಕ್ಕು(ರುಕ್ಮಿಣಿ) ಗೆ ಛೇಡಿಸಿದ್ದಾನೆ.
ಹಾಗಾಗಿ ನಾನು ಇಂದು ರುಕ್ಕು ತಮ್ಮಪೊಲ್ಲನ(ಪುರಂದರ್) ಮಿತಿಮೀರಿದ ಕೋರಿಕೆಗೆ ಮಣಿದು ಉಳಿದವರು ಕಂಡಂತೆ ರಕ್ಷಿತ್ ಶೆಟ್ಟಿಯ ಹಾಗೆ ಕಪ್ಪು ಶರ್ಟ್ ಹಾಕಿ,ಕಣ್ಣಿಗೆ ಕಪ್ಪು ಕೂಲಿಂಗ್ ಗ್ಲಾಸು ಹಾಕಿ,ಕೊರಳಿಗೆ ಸೇವಂತಿ ಮಾಲೆಯನ್ನು ಕೂಡ ಹಾಕಿಕೊಂಡು,Sorry..ಪೊಲ್ಲನೇ ಇದನ್ನೆಲ್ಲಾ ನನಗೆ ಹಾಕಿಸಿ, ನನ್ನನ್ನು ಅವರೆದುರು ನಿಲ್ಲಿಸಿದ್ದ...ಇವರಿಗೆ ಹೊಡಿ ಎಂದು!
ನನ್ನ ಪಕ್ಕದಲ್ಲಿಯೇ Live ಆಗಿ ಪೆಟ್ಟ್ ಲಡಾಯಿ ನೋಡಬೇಕಂಬ ಆಸೆಯಿಂದ ಬಂದಿದ್ದ ರುಕ್ಕು ಇದ್ದರೆ ಮತ್ತೊಂದು ಸೈಡಿನಲ್ಲಿ ಅವಳ ತಮ್ಮ ಪೊಲ್ಲ ಇದ್ದ.
ಓಮ್ನಿಯಲ್ಲಿ ಇದ್ದ ಕೇಡಿಗಳೆಲ್ಲ ಕೆಳಗೆ ಇಳಿದು ಬಂದರು.
ಅವರ ಕೈಯಲ್ಲಿ ನಾನಾ ತರಹದ ಮಾರಕ ಆಯುಧಗಳಾದ ಮಚ್ಚು,ಲಾಂಗ್,ಸೈಕಲ್ ಚೈನ್,Acid Bottle,ಬೇಸ್ ಬಾಲ್ ಬ್ಯಾಟ್ ಎಲ್ಲಾ ಇತ್ತು.
ನನ್ನ ಕೈಯಲ್ಲಿ ಜಸ್ಟ್ ಕ್ರಿಕೆಟ್ ಬ್ಯಾಟ್ ಮಾತ್ರ ಇತ್ತು.
ನನ್ನ ಪಕ್ಕದಲ್ಲಿ ಇದ್ದ ಪೊಲ್ಲನಿಗೆ ಮಾತ್ರ ಕೇಳುವಂತೆ ಹೇಳಿದೆ.. "ಪೊಲ್ಲ...ನೋಡು ಅವರ ಕೈಯಲ್ಲಿ ಬೇಸ್ ಬಾಲ್ ಬ್ಯಾಟ್ ಸ ಇದೆ,ನೀನು ಹೇಳಿದೆ.. ಇಲ್ಲಿ ಎಲ್ಲಾ ಯಾರು ಬೇಸ್ ಬಾಲ್ ಆಡಲ್ಲ ಅಂತ.
ಅದಕ್ಕೆ ಪೊಲ್ಲ ನನಗೆ ಮಾತ್ರ ಕೇಳುವಂತೆ ಹೇಳಿದ.
ಓ ಅಣ್ಣ... ನಾನು ನಮ್ಮೂರು ಪುಲ್ಕಿಯಲ್ಲಿ ಯಾರೂ ಬೇಸ್ ಬಾಲ್ ಆಡಲ್ಲ ಅಂತ ಹೇಳಿದ್ದು.ಇಲ್ಲಿ ಇವರ ಕೈಯಲ್ಲಿ ಬೇಸ್ ಬ್ಯಾಟ್ ಇದೆ ಎಂದ ಮಾತ್ರಕ್ಕೆ ಇವರೆಲ್ಲ ದೊಡ್ಡ ಬೇಸ್ ಬಾಲ್ ಪ್ಲೇಯರ್ ಅಂತ ನೀನು ತಿಳ್ಕೋ ಬೇಡ. ಇವರು ರೌಡಿಸಂ ನಲ್ಲಿ ಎದುರಾಳಿಯ ಬುರುಡೆ ಹೊಡಿಲಿಕ್ಕೆ ಅಂತಾನೇ ಇದನ್ನೆಲ್ಲಾ ತಮ್ಮೊಂದಿಗೆ ಇಟ್ಟುಕೊಂಡಿರ್ತಾರೆ.
ಇವತ್ತು May be ಅವರು ಅದರಲ್ಲಿ ನಿನಗೆ Attack ಮಾಡ್ಲಿಕ್ಕೆ ಇಲ್ಲ.ನಿನ್ನ ಹತ್ತಿರ ಕ್ರಿಕೆಟ್ ಬ್ಯಾಟ್ ಇದೆಯಲ್ಲ,ಹಾಗಾಗಿ ಮಚ್ಚು ಲಾಂಗು ಕೂಡ Use ಮಾಡ್ಬಹುದು,But ನನಗೆ ವಿಶ್ವಾಸವಿದೆ ನೀನು ಅವರನ್ನು ಚಿಂದಿ ಚಿತ್ರಾನ್ನ - ಬೂಂದಿ ಮೊಸರನ್ನ ಮಾಡ್ತೀಯಾ ಅಂತ.
ಅವನು ಬೇಸ್ ಬಾಲ್ ಬ್ಯಾಟ್ ಬಿಟ್ಟು ಅವರ ಕೈಯಲ್ಲಿ ಮಚ್ಚು ಲಾಂಗ್ ಕೂಡ ಇದೆ ಎನ್ನುವುದನ್ನು ನನಗೆ ನೆನಪು ಹುಟ್ಟಿಸಿದ್ದು ಇನ್ನಷ್ಟು ಭಯ ಹುಟ್ಟಿಸಿ ಬಿಟ್ಟಿತ್ತು.
ಪಕ್ಕದಲ್ಲಿ ರುಕ್ಕುವನ್ನು ನೋಡಿದೆ.
ಅವಳಿಗೆ ಯಾವುದೇ ಭಯವೇ ಇಲ್ಲದೆ ನಿಂತಿದ್ದಾಳೆ.
ಅವರಿಬ್ಬರಿಗೂ ಭಯ ಯಾಕೆ ಆಗ್ತದೆ,ಲಡಾಯಿ ಶುರುವಾದಾಗ ಪೆಟ್ಟು ಬೀಳುವುದು ನನಗೆ ಮಾತ್ರ ಅಲ್ವಾ.
ಅವರ ಸೈಡಿನವನ ಒಬ್ಬ ನನ್ನನೇ ನೋಡಿ... ಹೇಯ್ ಬಾರೋ ಇಲ್ಲಿ... ಎಂದು ಕರೆದ.
ನಾನು ಇನ್ನೂ ನಿಂತೇ ಇದ್ದೆ.
ಪಕ್ಕದಲ್ಲಿದ್ದ ಪೊಲ್ಲ ಮೆಲ್ಲ ಕುಟ್ಟಿ ಹೇಳಿದ...
- ಅಣ್ಣ.. ಕೇಡಿಗಳು ಪೆಟ್ಟು ಮಾಡ್ಲಿಕ್ಕೆ ಕರೀತಾ ಇದ್ದಾರೆ,ಈಗ ನೀನು ಹೋಗ್ಬೇಕು,ಇಲ್ಲದಿದ್ದರೆ ಹೆದರಿದ್ದೀಯಾ ಅಂತ ಆಗ್ತದೆ... ಎಂದು ಹೇಳಿ ಮತ್ತಷ್ಟು ಹೆದರಿಸಿದ..
ನಾನು ಹೋಗಲಿಲ್ಲ.. ಅಲ್ಲೇ ಇದ್ದ.
ಅಯ್ಯೋ ಹೋಗು ಅಣ್ಣಾ...ಲೇಟ್ ಆಗ್ತಾ ಇದೆ, ಎಂದು ಜೋರಾಗಿ ಅವನೇ ಅವರ ಕಡೆಗೆ ನನ್ನನ್ನು ದೂಡಿ ಬಿಟ್ಟ.
ನಾನು ತೂರಾಡುತ್ತಾ ಸ್ವಲ್ಪ ಮುಂದೆ ಹೋದೆ.
ನಡೆಯುತ್ತಾ ನಡೆಯುತ್ತಾ ಮುಂದೆ ಹೋದಂತೆ ಗಮನಿಸಿದೆ ನನ್ನೊಂದಿಗೆ ರುಕ್ಕು ಮತ್ತು ಪೊಲ್ಲ ಕೂಡ ರೌಡಿಗಳ ಕಡೆಗೆಯೇ ಹೆಜ್ಜೆ ಹಾಕುತ್ತಿದ್ದರು
ಅಲ್ಲೇ ನಿಂತು.. ನೀನು..ನೀನು ಯಾಕೆ ಬರ್ತಾ ಇದ್ದೀಯಾ? ರುಕ್ಕುಗೆ ಕೇಳಿದೆ.
ಅಲ ಅದು.. ಹತ್ತಿರ ನಿಂತು ಫೈಟ್ ನೋಡುವಾ ಅಂತ.
ನೀನೇನು ಇಲ್ಲಿ ಕೋಳಿ ಅಂಕ ನೋಡ್ಲಿಕ್ಕೆ ಬಂದದ್ದಾ... ಹೋಗು ದೂರ ಹೋಗಿ ನಿಲ್ಲು.
ಪೊಲ್ಲ ಕೂಡ ಹೇಳಿದ.. ಅಕ್ಕ ನಿನಗೆ ಸ್ವಲ್ಪ ಸ ಗೊತ್ತಾಗಲ್ಲ...ಅಣ್ಣ ಅವರನ್ನು ಕೊಚ್ಚಿ ಹಾಕುವಾಗ ಕೇಡಿಗಳ ಬ್ಲಡ್ ಎಲ್ಲಾ ಹಾರ್ತದೆ, ಹೋಗು ದೂರ ನಿಂತುಕೊಂಡು ಸುಮ್ಮನೆ ನೋಡು, ನಾವು ಗಂಡಸರು ಇದನ್ನು ಡೀಲ್ ಮಾಡ್ತೇವೆ.
ನನ್ನ ಮಗನೇ...ನಾನು ಅವರನ್ನು ಕೊಚ್ಚಿ ಹಾಕುವುದಾ, ಅಥವಾ ಅವರೇ ನನ್ನನ್ನು ಕೊಚ್ಚಿ ಹಾಕ್ತಾರ..ನನ್ನ ಕೈಯಲ್ಲಿ ಇರುವುದು ಬ್ಯಾಟ್.. ಅವರ ಕೈಯಲ್ಲಿ ಇರುವುದು ಮಚ್ಚು..ಅಂತ ನನಗೆ ನಾನೇ ಹೇಳಿಕೊಂಡೆ.
ರುಕ್ಕು ಅಲ್ಲಿಂದ ದೂರ ಹೋಗಿ ನಿಂತಳು..
ಅವಳು ಎಷ್ಟು ದೂರ ಹೋಗಿ ನಿಂತಿದ್ದಾಳೆ ಎಂದು ನೋಡುವುದಕ್ಕೆ ಹಿಂದಿ ತಿರುಗಿ ಮುಂದೆ ತಿರುಗುವಷ್ಟರಲ್ಲಿ... ನನ್ನ ಪಕ್ಕದಲ್ಲಿದ್ದ ಪೊಲ್ಲ ನನ್ನ ಕೈಯನ್ನು ಹಿಡಿದುಕೊಂಡು ಧರ ಧರ ಎಂದು ಎಳೆದುಕೊಂಡು ಹೋಗಿ ಓಮ್ನಿಯಲ್ಲಿ ಕುಳಿತಿದ್ದ ಬ್ಲೇಡ್ ಬಾಬುನ ಮುಂದೆ ಮುಖಾಮುಖಿಯಾಗಿ ನನ್ನನ್ನು ನಿಲ್ಲಿಸಿ ಬಿಟ್ಟು ಆಗಿತ್ತು.!
ನಿನ್ನೆ ನನ್ನಿಂದ ಹೊಡೆತ ತಿಂದವನೂ ಅಲ್ಲೇ ಇದ್ದ.
ನನ್ನನು ನೋಡಿ ಅವನು ಬ್ಲೇಡ್ ಬಾಬುವಿನ ಬಳಿ ಹೇಳಿದ..
ಅಣ್ಣಾ.. ಇವನೇ ನನಗೆ ನಿನ್ನೆ ಹೊಡೆದದ್ದು..
ಅಲ್ಲಿಯವರೆಗೆ ಓಮ್ನಿಯಲ್ಲಿ ಕೂತಿದ್ದ ಬ್ಲೇಡ್ ಬಾಬು ಕೂತಲ್ಲಿಂದ್ದ ಎದ್ದು ಬಂದ.
ಆವಾಗಲೇ ನಾನು ಅವನನ್ನು ಸರಿಯಾಗಿ ಗಮನಿಸಿದ್ದು.
ಹೆಚ್ಚು ಕಡಿಮೆ ಆರುವತ್ತು ವರ್ಷ ದಾಟಿದೆ.
ಒಬ್ಬನೇ ಆದರೆ ಹೇಗಾದರೂ ಕಣ್ಣಿಗೆ ಮಣ್ಣು ಎರಚಿ ಓಡಿ ಬರ್ಬಹುದು,ಆದ್ರೆ ಅವನ ಗ್ಯಾಂಗ್ ಉಂಟಲ್ಲಾ,ಅದೇ ದೊಡ್ಡ ಸಮಸ್ಯೆ.. ಎಲ್ಲರೂ ಮಾರಾಕಾಯುಧಗಳನ್ನು ಹಿಡಿದುಕೊಂಡು ನಿಂತಿದ್ದರು.
ಬ್ಲೇಡ್ ಬಾಬು ಬಾಯಲ್ಲಿದ್ದ.. ಬ್ಲೇಡ್ ಅನ್ನು ಕೆಳಗೆ ಉಗುಳಿ ನನ್ನನ್ನೇ ನೋಡಿ ಕೇಳಿದ..
- ಹೇಯ್... ಯಾರೋ ನೀನು.. 😡😡
ನಾನು ನೀಲಮೇಘ.. ಎಂದು ಹೇಳುವಷ್ಟರಲ್ಲಿ..
ಪೊಲ್ಲ KGF ನ ಒಂದು ಪಂಚಿಂಗ್ ಡೈಲಾಗ್ ಬಿಟ್ಟ...
" ಮಳೆ ಬಂದ್ರೆ ಮಣ್ಣು ಮಾತಾಡುತ್ತೆ..
ಗಾಳಿ ಬಂದ್ರೆ ಗಿಡ ಮಾತಾಡುತ್ತೇ..
ನೀಲು ಭಾಯ್ ಬಂದ್ರೆ.... ರಕ್ತ ಮಾತಾಡುತ್ತೆ..! "
ರಾಕಿ ಭಾಯ್ ಇದ್ದಲ್ಲಿ ನನ್ನ ಹೆಸರು ಹಾಕಿ,ನನ್ನನ್ನು ನೀಲುವಿನಿಂದ ನೀಲು ಭಾಯ್ ಮಾಡಿ,ನಾನು ಕೂಡ ನಗರದ ಒಬ್ಬ ಮಹಾನು ಡಾನ್ ಎಂಬಂತೆ ಬ್ಲೇಡ್ ಬಾಬುಗೆ ನನ್ನನ್ನು Introduce ಮಾಡಿಯೇ ಕೊಟ್ಟ ಪೊಲ್ಲ..
ಭಯ ಹೆಚ್ಚಾಯಿತು,ಆದರೂ ತೋರಿಸದೇ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಕೂಲ್ ಆಗಿ ಬ್ಯಾಟ್ ಹಿಡಿದು ನಿಂತಿದ್ದೆ.ಮತ್ತೊಂದು ಕೈಯಲ್ಲಿ ಕೊರಳಿನಲ್ಲಿ ಇದ್ದ ಸೇವಂತಿಗೆ ಮಾಲೆ ಫ್ರೆಶ್ ಇದೆಯಾ ಅಂತ ಚೆಕ್ ಮಾಡ್ತಾ ಇದ್ದೆ.
ಅವರಲ್ಲಿ ಒಬ್ಬ ಮೀಸೆ ಮಾಮ ಕೇಳಿದ..
- ಹೌದಾ.. ಅಂತಹ ಕಿಲಾಡಿಯಾ ಇವ,ಇವನನ್ನು ನಾವು ಎಲ್ಲಿಯೂ ನೋಡ್ಲೇ ಇಲ್ಲ,ಯಾವ ಊರೋ ನಿಂದು.😡?
ನಾನು ಪುಲ್ಕಿ ಅಂತ ಹೇಳಬೇಕೆನ್ನುವಷ್ಟರಲ್ಲಿ ನಡುವಲ್ಲಿ ಬಾಯಿ ಹಾಕಿ ಪೊಲ್ಲ ಮತ್ತೊಂದು KGF ಡೈಲಾಗ್ ಸಿಡಿಸಿ ಬಿಟ್ಟ...
''ಪವರ್ ಫುಲ್ ಫೀಪಲ್ ಕಮ್ ಫ್ರಮ್
ಪವರ್ ಫುಲ್ ಪ್ಲೇಸಸ್ "
ಅವರ ಪಾರ್ಟಿಯಲ್ಲಿ ಸೈಕಲ್ ಚೈನ್ ಹಿಡಿದುಕೊಂಡು ನಿಂತವ ಕೇಳಿದ..
-ನೋಡಿದ್ರೆ ಓಡಿ ಹೋಗುವವನ ತರಹ ಇದ್ದಾನೆ.ಇವನೂ ಕೂಡ ಒಬ್ಬ ಡಾನ್ a?
ನನಗೆ.. ಇಲ್ಲ ರೌಡಿ ಅಣ್ಣ,ಆ ತರಹ ಏನಿಲ್ಲ.. ಅಂತ ಹೇಳಿ ಜೀವ ಉಳಿಸಿಕೊಳ್ಳುವ ಆಸೆ ಇತ್ತು.
ಆದರೆ ಪೊಲ್ಲ ಅದಕ್ಕಿಂತ ಮೊದಲೇ ಮತ್ತೊಂದು ಡೈಲಾಗ್ ಹೇಳಿ ಆಗಿತ್ತು...
" ನಿನ್ನ ಹಾಗೆ ಯಾರೋ ಹತ್ತು ಜನರಿಗೆ ಹೊಡೆದು ಡಾನ್ ಆದವನು ಅಲ್ಲ ಕಣೋ ಇವ್ನು..
ನಮ್ಮ ಈ ನೀಲು ಭಾಯ್ ಹೊಡೆದಿರೋ ಆ ಹತ್ತು ಜನನೂ ..ಡಾನೇ..."
ಸರಿಯಾಗಿ Counter Strike, PubG ಆಡ್ಲಿಕ್ಕೇನೆ ನನಗೆ ಬರಲ್ಲ, ಇನ್ನು ನಾನು ಯಾವಾಗ ಹತ್ತು ಜನ ಡಾನ್ ಗಳನ್ನು ಹೊಡೆದದ್ದು?
ಮತ್ತೊಬ್ಬ ಕೇಡಿ ಕೇಳಿದ..
- ಸತ್ಯ ಅಲ...ಆಮೇಲೆ ಓಡಿ ಹೋಗ್ಲಿಕ್ಕೆ ಇಲ್ಲ ಅಲ.
ಪೊಲ್ಲನೇ ಏನಾದರೊಂದು ಹೇಳ್ತಾನೆ ಎಂದು ಗೊತ್ತಿತ್ತು.ಹಾಗಾಗಿ ಸುಮ್ಮನಿದ್ದೆ.
ಆದರೆ ಅವನ ಡೈಲಾಗುಗಳನ್ನು ನನ್ನನ್ನು ಸಾವಿನಿಂದ ಪಾರು ಮಾಡುವ ಬದಲು,ನನ್ನ ಸಾವಿನ ಹತ್ತಿರಕ್ಕೆ ತಗೊಂಡು ಹೋಗುತ್ತಿದ್ದವು.
ಪೊಲ್ಲ ಮೆಲ್ಲನೆ ನನಗೆ ಹೇಳಿದ.. ಅಣ್ಣ ನಿಂಗೆ ಕೇಳ್ತಾ ಇದ್ದಾರೆ, ಏನಾದರೊಂದು ಹೇಳು,ನೀನು Confirm ಓಡಿ ಹೋಗಲ್ಲ ಅಲ..
Actually ನಾನು ಓಡಿ ಹೋಗ್ಬೇಕು ಅಂತಲೇ ಇದ್ದೆ.ಇಲ್ಲಿಯವರೆಗೂ ಅದ್ದನ್ನೇ ಯೋಚಿಸಿದ್ದೆ.ಆದರೆ ಈ ಮಾರಿ ಪೊಲ್ಲನ ಡೈಲಾಗುಗಳಿಂದ ಆ ಎಲ್ಲಾ ಸಾಧ್ಯತೆಗಳು ಕ್ಷೀಣಿಸಿ ಹೋಗಿತ್ತು.
ಪೊಲ್ಲ ಪುನಃ ನನಗಷ್ಟೇ ಕೇಳುವಂತೆ ಹೇಳಿದ.ಇಲ್ಲಿ ನಾನೇ ಎಲ್ಲಾ ಮಾತಾಡ್ಲಿಕ್ಕೆ ಆಗಲ್ಲ.ನೀನು ಸ ಮಾತಾಡ್ಡೇಕು.
ನೀನೇ ಏನಾದರೂ ಒಂದು ಡೈಲಾಗ್.. ಬಿಡು ಅಂದೆ.
ಸತ್ರೆ ಅಷ್ಟೇ ಹೋಯಿತು..ಅಂತ ಮನಸ್ಸಿನಲ್ಲಿ ನಾನು ಫಿಕ್ಸ್ ಆಗಿದ್ದೆ.
ಪೊಲ್ಲನ ಬಾಯಿಯಿಂದ ಮತ್ತೊಂದು ಪಂಚಿಂಗ್ KGF ಡೈಲಾಗ್ ಬಂತು.
" ನಮ್ಗೆ ಓಡಿ ಹೋಗಿ ಅಭ್ಯಾಸ ಇಲ್ಲ..
ಓಡಾಡಿಸಿಕೊಂಡು ಹೋಗಿಯೇ ಅಭ್ಯಾಸ.."
ಆ ಕೇಡಿ ಪಾರ್ಟಿಯಲ್ಲಿ ಒಬ್ಬ ಬಹಳ ಫಿಲ್ಮ್ ಎಲ್ಲಾ ನೋಡ್ತಾನೆ ಅಂತ ಕಾಣುತ್ತೆ..
ಅವನು ಹೇಳಿದ,ನೋಡ್ಲಿಕ್ಕೆ ಉಳಿದವರು ಕಂಡಂತೆ ರಕ್ಷಿತ್ ಶೆಟ್ಟಿ ತರಹ ಇದ್ದಾನೆ ..ಆದ್ರೆ ಡೈಲಾಗ್ ಗಳು ಎಲ್ಲಾ KGF ದ್ದು ಯಾಕೆ...
ಮನಸ್ಸಿನಲ್ಲಿಯೇ ಆ ರೌಡಿಯನ್ನು ನಾನು ಅಭಿನಂದಿಸಿದೆ... ಹೌದು ಬಹಳ ಸಮಂಜಸವಾದ ಕೇಳಲೇ ಬೇಕಾದ ಪ್ರಶ್ನೆ.
ಅದಕ್ಕೆ ಪೊಲ್ಲ ಹೇಳಿದ..
-ರೌಡಿ ಅಂಕಲ್, ನೀವು ಇಲ್ಲಿ ಮೂವಿ ಡೈಲಾಗ್ ವಿಮರ್ಶಿಸಲು ಬಂದದ್ದಾ ಅಥವಾ ಅಣ್ಣನೊಡನೆ ಪೈಟಿಂಗ್ ಗೆ ಅಂತ ಬಂದದ್ದಾ.. ಒಬ್ಬ ರೌಡಿ ಆಗಿ ಈ ರೀತಿ ಮಾತುಗಳು ನಿಮಗೆ ಶೋಭೆ ತರುತ್ತಾ
ಅಲ್ಲಿಗೆ ಹೆಚ್ಚಿನ ಎಲ್ಲಾ ರೌಡಿಗಳ ಒಂದು ಸುತ್ತು ಮಾತು ಮುಗಿದಿತ್ತು..
ಬ್ಲೇಡ್ ಬಾಬು ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ..
- ನಾನು ಎಷ್ಟು ಕೆಟ್ಟವನು ಅಂತ ನಿಂಗೆ ಇನ್ನೂ ಗೊತ್ತಿಲ್ಲ.. 😡😡
ಅವನು ಹೇಳಿ ಮುಗಿಸಿದ ಕೂಡಲೇ..
"If you think you are Bad.
He is your Dad..! "
ಪೊಲ್ಲ ನಮ್ಮ ಸೈಡಿನ ಡೈಲಾಗ್ ಹೇಳಿ ಮುಗಿಸಿ ಬಿಟ್ಟಿದ್ದ
ಆಹಾ ಎಂತಹ Damaging ಡೈಲಾಗ್ ಅದು.ಡೈಲಾಗ್ ಅಲ್ಲ ಅದು ನನ್ನ ಮರಣ ಶಾಸನ.
ಆದರೆ ಪುಣ್ಯಕ್ಕೆ ಅವರಿಗೆ ಯಾರಿಗೂ ಅರ್ಥವೇ ಆಗಲಿಲ್ಲ.
ಬಹುಶಃ ಅವರಿಗೆ ಯಾರಿಗೂ ಇಂಗ್ಲಿಷ್ ಅಷ್ಟಾಗಿ ಬರಲ್ಲ ಅಂತ ಕಾಣುತ್ತೆ.
ಇಲ್ಲದಿದ್ದರೆ ಈ Dad ಅನ್ನು ಅವರು ಆ ಕ್ಷಣವೇ ಖತಂ ಮಾಡುತ್ತಿದ್ದರು.
ಇನ್ನು ನಾನೇ ಏನಾದರೂ ಮೂವಿಯಲ್ಲಿ ಅನಂತ್ ನಾಗ್ ಮಾಡುವಂತೆ ಕಟ್ಟಕಡೆಯ ಪ್ರಯತ್ನ ಮಾಡಲೇ ಬೇಕು ಎಂದು ನಿರ್ಧರಿಸಿದೆ..
ಬ್ಲೇಡ್ ಬಾಬು ಗೆ ಹೇಳಿದೆ..
-ನೋಡಿ ರೌಡಿ ಸಾರ್.. ನನಗೆ ನಿಮ್ಮತ್ರ ಪರ್ಸನಲ್ ಆಗಿ ಎರಡು ನಿಮಿಷ ಮಾತಾಡ್ಬೇಕು ಅಷ್ಟೇ.ಆಮೇಲೆ ಹೇಗೂ ಪೈಟಿಂಗ್ ಶುರು ಮಾಡ್ಲಿಕ್ಕೆ ಉಂಟಲ್ಲಾ..
ನೀವು ನಿಮ್ಮವರನ್ನು ಸ್ವಲ್ಪ ದೂರ ಕಳುಹಿಸಿ,ನಾನು ನಮ್ಮವನನ್ನು ಸ್ವಲ್ಪ ದೂರ ಕಳುಹಿಸ್ತೇನೆ,ಇಲ್ಲದಿದ್ದರೆ ನಾವೇ ಸ್ವಲ್ಪ ದೂರ ಹೋಗಿ ಮಾತಾಡುವ ಪ್ಲೀಸ್..ವಿಷಯ ಉಂಟು ಅದಕ್ಕೆ ಅಂದೆ.
ಬಹುಶಃ ಆ ಮನುಷ್ಯನಿಗೆ ನಾನು ರೌಡಿ ಸಾರ್ ಅಂತ Respect ಕೊಟ್ಟು ಮಾತಾಡಿದ್ದು ಬಹಳ ಇಷ್ಟ ಆಯಿತು ಅಂತ ಕಾಣುತ್ತೆ...
ಆಯಿತು ಎರಡು ನಿಮಿಷ ಅಷ್ಟೇ,ಅಲ್ಲೋಂದು ಫಾಸ್ಟ್ ಫುಡ್ ಗಾಡಿ ಕಾಣ್ತಾ ಉಂಟು ನೋಡು.ಅಲ್ಲಿಗೆ ಹೋಗೋಣ ನಡಿ..
ನಾನು ನನ್ನ ಪಕ್ಕ ಇದ್ದ ಪೊಲ್ಲನಿಗೆ ಹೋಗು ಅಕ್ಕನತ್ರ ನಿಂತ್ಕೋ ಹೇಳಿದೆ.
ಅವನಿಗೆ ಹೋಗ್ಲಿಕ್ಕೆ ಮನಸಿರಲಿಲ್ಲ.ಆದರೆ ಜಸ್ಟ್ ಎರಡು ನಿಮಿಷ ಅಲ್ವಾ ಹಾಗಾಗಿ ಅಕ್ಕನ ಬಳಿ ಹೋಗಿ ನಿಂತುಕೊಂಡ.
ನಾನು ಕೈಯಲ್ಲಿ ಹಾಗೇ ಬ್ಯಾಟ್ ಹಿಡಿದುಕೊಂಡು ಕುತ್ತಿಗೆಯಲ್ಲಿದ್ದ ಸೇವಂತಿ ಮಾಲೆಯನ್ನು ಕೈಯಲ್ಲಿ ಮುಟ್ಟಿಕೊಂಡು ಉಳಿದವರು ಕಂಡಂತೆ ರಕ್ಷಿತ್ ಶೆಟ್ಟಿಯ ಹಾಗೇ ನಡೆಯುತ್ತಾ..ಬ್ಲೇಡ್ ಬಾಬು ಜೊತೆಗೆ ಆ ಫಾಸ್ಟ್ ಫುಡ್ ಗಾಡಿಯ ಬಳಿಗೆ ಬಂದೆ.
ಆ ಫುಡ್ ಗಾಡಿಯ ಬಳಿ ಇದ್ದ ಎರಡು ಸ್ಟೂಲ್ ಗಳನ್ನು ತಗೊಂಡು ಬಂದು..
ಕುತ್ಕೊಳ್ಳಿ ರೌಡಿ ಸಾರ್.. ಕುತ್ಕೊಳ್ಳಿ ಅಂದೆ.
ಅವನು ಹಿಂದೆ ಮುಂದೆ ನೋಡಿದ.ಆಮೇಲೆ ನನ್ನ ಬಲವಂತಕ್ಕೆ ಕಟ್ಟು ಬಿದ್ದು ಒಂದರಲ್ಲಿ ಅವನು ಕುಳಿತ.ಮತ್ತೊಂದರಲ್ಲಿ ನಾನು ಕುಳಿತೆ.
ಏನು ಮ್ಯಾಟ್ರು.. ಅಂದ ಬ್ಲೇಡ್ ಬಾಬು.
ನಾನು ಕಥೆ ಶುರು ಮಾಡಿದೆ...
ಸಾರ್ ನಾನು ಚಿಕ್ಕಂದಿನಿಂದಲೂ ಅನಂತ್ ನಾಗ್ ಅಭಿಮಾನಿ.
ಅವರು ಬಿಟ್ರೆ ನನಗೆ ಹೀರೋಗಳಿಗಿಂತ ಈ ವಿಲನ್ ಗಳನು ಇಷ್ಟ ಆಗ್ತಾ ಇದ್ರು.
ಅದರಲ್ಲಿ ಸ ಟೈಗರ್ ಪ್ರಭಾಕರ್ ಪೈಟಿಂಗ್ ಅಂದ್ರೆ ಬಾರಿ ಮಜಾ ಕೊಡುವುದು..
ಆದರೆ ಅವರೆಲ್ಲ ನಟರು.ಮೂವಿಯಲ್ಲಿ ರೌಡಿಯ ಹಾಗೆ ನಟಿಸ್ತಾ ಇದ್ದರು ಅಷ್ಟೇ.
ಎಲ್ಲರಿಗೂ ಸಿನೆಮಾ ಹೀರೋಗಳನ್ನು ನೋಡ್ಬೇಕು ಅಂತ ಆಸೆ.
ಆದರೆ ನನಗೆ ಜೀವನದಲ್ಲಿ ಇದ್ದ ಒಂದೇ ಒಂದು ಆಸೆ ಏನೆಂದರೆ ರಿಯಲ್ ರೌಡಿಗಳನ್ನು ನೋಡ್ಬೇಕು ಅಂತ.
ಆಗ ನಾನು ಕೇಳಿದ್ದೆ ನಿಮ್ಮ ಹೆಸರು ರೌಡಿ ಸಾರ್.
ಹೌದು ರೌಡಿ ಸಾರ್.ನಾನು ಚಿಕ್ಕಂದಿನಿಂದಲೂ ನಿಮ್ಮ ಫ್ಯಾನ್..
ಪೇಪರ್ ನಲ್ಲಿ ಎಲ್ಲಾ ಡೈಲಿ ನಿಮ್ಮದೇ ಕೊಲೆ,ಸುಲಿಗೆ ಬಗ್ಗೆ ಬರ್ತಾ ಇರುವುದನ್ನು ನೋಡಿ ನಾನು ಥ್ರಿಲ್ ಆಗ್ತ ಇದ್ದೆ.
ಅಪ್ಪನಲ್ಲಿ ಕೇಳ್ತಾ ಇದ್ದೆ.. ಯಾರಪ್ಪ ಈ ಬ್ಲೇಡ್ ಬಾಬು ಅಂತ.
ಅಪ್ಪ ಹೇಳ್ತಾ ಇದ್ದರು ಅವರೊಬ್ಬ ಮಹಾನ್ ಡಾನ್..ಕೇವಲ ಕೆಟ್ಟವರಿಗೆ ಮಾತ್ರ ಅವರು ದುಷ್ಟ.
ಅವರೊಬ್ಬ ಬಡವರ ಬಂದು ರೌಡಿ,ಸಮಾಜ ಸೇವಕ ರೌಡಿ,ಕೊಡುಗೈ ದಾನಿ ರೌಡಿ..ಅಂತ ಅಪ್ಪ ನಿಮ್ಮನ್ನು ಹಾಡಿ ಹೋಗಳಿದಾಗ ನನಗೆ ನಿಮ್ಮನ್ನು ಒಮ್ಮೆ ಮೀಟ್ ಆಗ್ಲೇಬೇಕು ಎಂಬ ಆಸೆ ಇನ್ನಷ್ಟು ಹೆಚ್ಚಾಯಿತು.
ನಿಜ ಹೇಳಬೇಕು ಎಂದರೆ ನಾನು ಇಂದು ನಿಮ್ಮ ಜೊತೆ ಫೈಟ್ ಮಾಡ್ಲಿಕ್ಕೆ ಬಂದದ್ದೇ ಅಲ್ಲ..
ರೌಡಿ ಸಾರ್.. ನಾನು ಒಬ್ಬ ಬರಹಗಾರ.
ನಾನು ಹಲವು ಜನರ ಬದುಕಿನ ಯಾರಿಗೂ ಗೊತ್ತಿರದ ಕಥೆಗಳನ್ನು ಬರೆದಿದ್ದಾನೆ.
ಆದರೆ ನಾನು ಯಾವತ್ತೂ ರೌಡಿಗಳ ಬಗ್ಗೆ ಬರಿಲೇ ಇಲ್ಲ ಸಾರ್.
ನಾನೇನಾದರೂ ರೌಡಿಗಳ ಬಗ್ಗೆ ಬರೆದ್ರೆ ಬ್ಲೇಡ್ ಬಾಬು ಸಾರ್ ಬಗ್ಗೆನೇ ಬರೀಬೇಕು ಅಂತ ನಿರ್ಧರಸಿ ಬಿಟ್ಟಿದ್ದೆ. ಅದೊಂದು ಕೊರಗು ನನ್ನಲ್ಲಿ.
ಆದರೆ ಈ Incident ನಿಂದಾಗಿ ನನಗೆ ನಿಮ್ಮನ್ನು ಮೀಟ್ ಆಗುವ ಒಂದು ಚಾನ್ಸ್ ಸಿಕ್ಕಿತು.
ಅದಕ್ಕೆ ನಾನೇ ನಿಮ್ಮ ಹುಡುಗನಿಗೆ ಬೇಕೆಂದೇ ಸುಳ್ಳು ಆವಾಜ್ ಹಾಕಿದ್ದು.
ಈಗ ನಾನು " ಅಂದಕಾಲತ್ತಿಲ್ ಬಾಬು " ಎಂಬ ನಿಮ್ಮ ಜೀವನ ಚರಿತ್ರೆಯ ಪುಸ್ತಕ ಬರೆಯಬೇಕು ಅಂತ ನಿರ್ಧಿರಿಸಿದ್ದೇನೆ..
ಬೇಕಿದ್ದರೆ ನೋಡಿ.. ನಿಮಗೆ ಸಂಬಂಧಿಸಿದ ನ್ಯೂಸ್ ಪೇಪರ್ ಅಲ್ಲಿ ಬಂದ ಎಲ್ಲಾ ಸುದ್ದಿಗಳು ಕೂಡ ನನ್ನಲ್ಲಿ ಇದೆ..
ಎಂದು ಮೊಬೈಲ್ ಓಪನ್ ಮಾಡಿ ಹಿಂದಿನ ದಿನ ಗೂಗಲ್ ನಿಂದ ಡೌನ್ ಮಾಡಿದ ಹಲವಾರು ಪೇಪರ್ ಗಳ ಸುದ್ದಿಗಳನ್ನು ಅವನಿಗೆ ಮೊಬೈಲ್ ನಲ್ಲಿ ತೋರಿಸಿದೆ.
ಬ್ಲೇಡ್ ಬಾಬು ಅದನ್ನೇ ಆಸಕ್ತಿಯಿಂದ ನೋಡುತ್ತಿದ್ದ. ಅವನ ಕಣ್ಣುಗಳು ಅರಳಿದವು.
ನಾನು ಮುಂದುವರಿಸಿದೆ...
ನೋಡಿ ರೌಡಿ ಸಾರ್,ರೌಡಿಸಂ.. ಎಲ್ಲರೂ ಮಾಡ್ತಾರೆ ಆದ್ರೆ Ethics ಯಾರೂ ಇಟ್ಕೊಳ್ಳಲ್ಲ..
ನಾನು ಹಲವಾರು ತಿಂಗಳಿನಿಂದ ನ್ಯೂಸ್ ಪೇಪರ್ ನಲ್ಲಿ ನಿಮಗೆ ಸಂಬಂಧಿಸಿದಂತೆ ಬಂದ ಎಷ್ಟೋ ವರ್ಷಗಳ ಸುದ್ದಿಯನ್ನು ಒಬ್ಬನೇ ಕುಳಿತುಕೊಂಡು Analysis ಮಾಡಿದಾಗ ನನಗೆ ಕಂಡು ಬಂದ ಅಚ್ಚರಿ ಹುಟ್ಟಿಸಿದ ವಿಷಯ ಏನು ಗೊತ್ತಾ ರೌಡಿ ಸಾರ್..
ನೀವು ಇಲ್ಲಿಯವರೆಗೂ ಒಂದೇ ಒಂದು ರೇಪ್ ಮಾಡ್ಲಿಲ್ಲ..
ಹೆಂಗಸರ ಕರಿಮಣಿ ಸರ ಎಳೆದು ಕೊಂಡು ಹೋಗಲಿಲ್ಲ..
ಹುಡುಗಿಯರ ಮುಖಕ್ಕೆ Acid ಎರಚಿಲಿಲ್ಲ..
ನಮ್ಮ ನಾಡಿನ ಹೆಂಗಸರ ಬಗ್ಗೆ ನಿಮಗೆ ಎಷ್ಟು ಗೌರವ ಸಾರ್.. ಆವಾಗದಿಂದ ನನಗೆ ನಿಮ್ಮ ಮೇಲೆ ಅಭಿಮಾನ ಕೂಡ ಜಾಸ್ತಿ ಆಯಿತು..
ಅದೇ ಆ Acid ಮಂಜ, ಸಬ್ಬಲ್ ಸುರೇಶ, ಕಿಂಗ್ ಕೊಬ್ರಾ, black ನಾಗ ಅವರೆಲ್ಲ ಎಂತೆಂತಹ ಕೆಟ್ಟ ಕೆಲಸ ಮಾಡ್ತಾರೆ ಸಾರ್.ಎಲ್ಲಾ ರೇಪ್ ಕೆಲಸಗಳಲ್ಲೂ ಅವರೇ ಇರ್ತಾರೆ.
ಆದ್ರೆ ನಿಮ್ಮದು ಸಾರ್..ಕೇವಲ ಕೋಳಿ ಅಂಕದಲ್ಲಿ ರೈಡ್ ಆಗುವಾಗ ನೀವು ಸಿಕ್ಕಿ ಬಿದ್ದದು.
ಬಸ್ ಸ್ಟ್ಯಾಂಡ್ ಹಿಂದೆ ಇಸ್ಪಿಟ್ ಆಡಿ ಸಿಕ್ಕಿ ಬಿದ್ದದ್ದು.
ಊರಿನ ಗುಡ್ಡೆಯಲ್ಲಿ ಕಳ್ಳ ಭಟ್ಟಿ ಸರಾಯಿ ಮಾಡುವಾಗ ಸಿಕ್ಕಿ ಬಿದ್ದದ್ದು.
ಜಾತ್ರೆಯಲ್ಲಿ ಪಿಕ್ ಪಾಕೆಟ್ ಮಾಡುವಾಗ ಭಕ್ತಾದಿಗಳಿಂದ ಚೆನ್ನಾಗಿ ಥಳಿತ..
ಇಷ್ಟೇ ರೌಡಿ ಸಾರ್... ನಿಮಗೆ ಬಗ್ಗೆ ಪೇಪರ್ ನಲ್ಲಿ ತಿಳಿದು ಬಂದ ಸುದ್ದಿ ಇಷ್ಟೇ.
ಹಾನ್.. ಕೆಲವೊಂದು ಹಾಫ್ ಮರ್ಡರ್ ಸುದ್ದಿ ಸ ಇತ್ತು.
ಅದನ್ನು ಕೇಳಿ ಅಲ್ಲಿಯವರೆಗೆ ಸುಮ್ಮನಿದ್ದ ಬ್ಲೇಡ್ ಬಾಬು ಹೇಳಿದ..
-ಇಲ್ಲ ಇಲ್ಲ.. ನಿಜ ಹೇಳಬೇಕೆಂದರೆ ಅದು ಸುಳ್ಳು ಸುದ್ದಿ.ನಾನು ಹಾಫ್ ಮರ್ಡರ್, ಫುಲ್ ಮರ್ಡರ್ ಯಾವುದೂ ಮಾಡ್ಲಿಲ್ಲ.ಪೇಪರ್ ನವರು ನ್ಯೂಸ್ ಸಿಕ್ಲಿಲ್ಲ ಅಂತ ಸುಳ್ಳು ಸುಳ್ಳು ಹಾಕಿದ್ದು ಅಷ್ಟೇ..ಅಂದ ನಗುತ್ತಾ.
ನನ್ನ ಮಗನೇ.. ಈಗ ಬಂದೆ ನನ್ನ ದಾರಿಗೆ.. ಇನ್ನು ನಿನಗೆ ಮಾಡ್ತಾನೆ.. ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ.
ಹೌದಾ... ಸಾರ್..ಹಾಗಾದರೆ ನಿಮ್ಮ ಬಾಳಿನ ಯಾರಿಗೂ ಗೊತ್ತಿರದ ಸತ್ಯ ಘಟನೆಗಳು ಈ ಜಗತ್ತಿನ ಪ್ರತಿಯೊಬ್ಬರಿಗೂ ಗೊತ್ತಾಗುವಂತೆ ನಾನು ಮಾಡ್ತೇನೆ..ನಿಮ್ಮ ಜೀವನ ಚರಿತ್ರೆ ಹೇಳಿ ಸಾರ್..
ಈ ತರಹದ ರೌಡಿ ಸ ಇರ್ತಾರ ಅಂತ ಪ್ರಪಂಚವೇ ಬೆಚ್ಚಿ ಬೀಳ್ಬೇಕು..ಆ ತರಹ " ಅಂದಕಾಲತ್ತಿಲ್ ಬಾಬು" ಪುಸ್ತಕ ನಾನು ಬರೀತೇನೆ ರೌಡಿ ಸಾರ್.
ಹೇಳಿ... ನಿಮ್ಮ ಕಥೆಗೆ ನನಗೆ ಹೇಳ್ತಿರಾ..ಅಂದೆ.
ಬಾಬು ನಿಧಾನಕ್ಕೆ ತಗ್ಗಿದ ಧ್ವನಿಯಲ್ಲಿ ಹೇಳಿದ..
ಅದು ನೀಲು ಭಾಯ್... ಬೇಜಾರ್ ಮಾಡ್ಬೇಡಿ... ನಮ್ಮ ಹುಡುಗರು ಆಗ ನಿಮಗೆ ಸ್ವಲ Rash ಆದ್ರು ಅಂತ.ಅದಕ್ಕೆ ನಾನು Sorry. ಮತ್ತೆ ನೀವು ಇಷ್ಟೆಲ್ಲಾ ಹೇಳುವಾಗ ನನ್ನ ಕಥೆ ಎಲ್ಲ ನಿಮಗೆಯೇ ಹೇಳುವ ಅಂತ ನನಗೆ ಆಗ್ತದೆ.ದುಡ್ಡು ಎಷ್ಟೇ ಖರ್ಚು ಆಗಲಿ,ನಾನು ಕೊಡ್ತೇನೆ..ಬುಕ್ ಮಾತ್ರ ಒಳ್ಳೆ ಮಾಡ್ಬೇಕು ನೀವು.. .
ಅವನ ಬಾಯಿಯಲ್ಲಿ ನೀಲು ಭಾಯ್ ಎಂದು ಕೇಳಿ ಒಂದು ಲೋಟ ಹಾಲು ಕುಡಿದಷ್ಟು ಖುಷಿ ಆಯಿತು.
ಆಯ್ತು ಮಾಡುವ ಸಾರ್.. ನೀವೆಲ್ಲಾ ಅದಕ್ಕೆ ಯಾಕೆ ಈ ರೀತಿ Request ಮಾಡುವುದು,ಖಂಡಿತ ಮಾಡುವ.
ಆದ್ರೆ ರೌಡಿ ಸಾರ್.. ಈಗ ಜೋರು ಹಸಿವಾಗ್ತ ಇದೆ.ಏನಾದರೂ ತಿಂದುಕೊಂಡು ಮಾತಾಡುವನಾ.. ಅಲ್ಲೇ ಇದ್ದ ಫಾಸ್ಟ್ ಫುಡ್ ಗಾಡಿಯನ್ನೇ ನೋಡಿ ಹೇಳಿದೆ.
ಅದಕ್ಕೆ ಅವ.. ಓಹ್ ಮರೆತೇ ಹೋಯಿತು ನೋಡಿ .
ಬಾಬು ಫಾಸ್ಟ್ ಫುಡ್ ಅಂಗಡಿಯವನಿಗೆ ಜೋರಾಗಿ ... ಹೇಯ್..ನೀಲು ಭಾಯ್ ಗೆ ಒಂದು ಎಗ್ಸ್ ರೈಸ್ ಹಾಕೋ..
ರಪ್ಪ ಅಂತ ಮಾಡಿ ಟಕ್ಕ ಅಂತ ನನ್ನ ಕೈಗೆ ಎಗ್ ರೈಸ್ ಇಟ್ಟ ಅಂಗಡಿಯವ...
ಎಗ್ ರೈಸ್ ತಿನ್ನತೊಡಗಿದೆ..
ದೂರದಲ್ಲಿ ನಿಂತುಕೊಂಡು ಪರಸ್ಪರ ತಮ್ಮಲೇ ಮಾತಾಡುತ್ತಿದ್ದ ರುಕ್ಕು ಮತ್ತು ಪೊಲ್ಲನನ್ನು ಒಮ್ಮೆ ನೋಡದೆ..
ಅವರಿಬ್ಬರು ನಮ್ಮನ್ನೇ ನೋಡಿ ಪರಸ್ಪರ ಮಾತಾಡುವುದು ಕಂಡಾಗ ಯಾಕೋ ಮತ್ತೆ KGF ಡೈಲಾಗ್ ನೆನಪಾಯಿತು...
ಈಗ ರುಕ್ಕು ಮಾಳವಿಕಾ ತರಹ ಕೇಳ್ತಾ ಇರಬಹುದು...
" ಪೆಟ್ ಲಡಾಯಿಗೆ ಅಂತ ಬಂದವನು,ಈಗ ರೌಡಿ ಜೊತೆಗೆ ಫಾಸ್ಟ್ ಫುಡ್ ಅಂಗಡಿಯಲ್ಲಿ ಎಗ್ ರೈಸ್ ತಿನ್ತಾ ಇದ್ದಾನೆ..
ಈಗ ಏನು ಮಾಡ್ತಾನೆ ನಿಮ್ಮ ಹೀರೋ? "
ಅದಕ್ಕೆ ನಮ್ಮ ಪೊಲ್ಲ ಅನಂತ್ ನಾಗ್ ಸ್ಟೈಲ್ ಅಲ್ಲಿ Confirm ಹೀಗೆಯೇ ಹೇಳ್ತಾನೆ...
" ಮತ್ತೇನು ಮಾಡ್ತಾನೆ. ಸ್ವಲ ಹೊತ್ತು ಎಗ್ ರೈಸ್ ತಿನ್ತಾನೆ.. ಆಮೇಲೆ ಅಲ್ಲಿರುವ ಬಿಸಿ ಬಾಣಲೆಯಿಂದ ರೌಡಿ ತಲೆಗೆ ಬಡಿದು ಅವನ ತಲೆ ಹೊಳು ಮಾಡಿ ಬಿಡ್ತಾನೆ ಅಷ್ಟೇ!"
ನೀಲು ಭಾಯ್... ಕಥೆ ಶುರು ಮಾಡುವುದಾ.. ಪಕ್ಕದಲ್ಲಿದ್ದ ಬಾಬು ಕೇಳಿದ.
ಯಾಕೋ ಈ ಜನ ಲೆಕ್ಕಕ್ಕಿಂತ ಜಾಸ್ತಿಯೇ ಭಯಂಕರ ಇಂಟ್ರೆಸ್ಟ್ ತೋರಿಸುತ್ತಿದೆಯಲ್ಲಾ ಅಂತ ಅನಿಸಿತು.
ರೌಡಿ ಸಾರ್... ನೀವು ಎಗ್ ರೈಸ್ ತಿನ್ನಲ್ವಾ...
ಇಲ್ಲ... ಕಥೆ ಹೇಳುವಾಗ ತಿನ್ತಾ ಇದ್ದರೆ ಮೂಡ್ ಬರಲ್ಲ..
ಆಹಾ... ಎಂತಹ ಶ್ರದ್ಧೆ ಈ ರೌಡಿಯಲ್ಲೂ ಸಹ ಅಂತ ಅನಿಸಿತು.
ಆಯಿತು... ಅಯಿತು... ಹೇಳಿ, ಅಂದೆ ಎಗ್ ರೈಸ್ ತಿನ್ನುತ್ತಲೇ..
ರೌಡಿ ಬ್ಲೇಡ್ ಬಾಬು ಆ ಫಾಸ್ಟ್ ಫುಡ್ ಅಂಗಡಿಯಲ್ಲಿ " ಅಂದಕಾಲತ್ತಿಲ್ ಬಾಬು" ಪುಸ್ತಕಕ್ಕಾಗಿ ತನ್ನ ಜೀವನ ಚರಿತ್ರೆಯನ್ನು ಬಹಳ ಫೀಲಿಂಗ್ ನಿಂದ ಹೇಳಲು ಶುರು ಮಾಡಿದ...
ನನ್ನ ಹೆಸರು ಬಾಬು..
ನನ್ನ ಹುಟ್ಟುವಾಗ ರೌಡಿ ಆಗಿರಲಿಲ್ಲ..
ನಾನು ಬೆಳೆದು ದೊಡ್ಡವನಾದ ಮೇಲೆ ರೌಡಿ ಆದೆ..
ಇವ ಯಾಕೋ ನನಗೆ ಚಂದಮಾಮ ಕಥೆ ಹೇಳುವ ಮೂಡ್ ನಲ್ಲಿ ಇದ್ದಾನೆ ಅಂತ ಅನಿಸಿತು.
ಸಾರ್.. ಹುಟ್ಟುವಾಗಲೇ ಯಾರಾದರೂ ರೌಡಿ ಆಗ್ತಾರ...ಅದಕ್ಕಿಂತ ಸ್ವಲ್ಪ ಮುಂದೆ ಬನ್ನಿ.
ಅವನು ತನ್ನ ಸ್ಟೂಲ್ ಹಿಡಿದುಕೊಂಡು ಇನ್ನಷ್ಟು ಮುಂದೆ ಬಂದು ನನ್ನೆದುರು ಕುಳಿತುಕೊಂಡ.
ರೌಡಿ ಸಾರ್... ಹಾಗೇ ಅಲ್ಲ..ಕಥೆಯಲ್ಲಿ ಸ್ವಲ್ಪ ಮುಂದಕ್ಕೆ ಬನ್ನಿ.. ಅಂತ ಹೇಳಿದ್ದು
ಅದನ್ನು ಕೇಳಿ ಅವ ತಲೆ ಕರೆದುಕೊಂಡು ಪುನಃ ಹಿಂದೆ ಹೋಗಿ ಕುಳಿತುಕೊಂಡು ಮತ್ತೆ ತನ್ನ ಕಥೆ ಮುಂದುವಿರಿಸಿದ..
ನನಗೇನು ಅವನ ಕಥೆಯಲ್ಲಿ ಭಯಂಕರ ಇಂಟ್ರೆಸ್ಟ್ ಇರ್ಲಿಲ್ಲ... ಆದರೆ ನನ್ನನ್ನು ಇಂದು ಬದುಕಿಸಿದ್ದು "ಅಂದಕಾಲತ್ತಿಲ್ ಬಾಬು.." ಪುಸ್ತಕ ಅಲ್ವಾ.. ಹಾಗಾಗಿ ಸುಮ್ಮನೆ ಕೇಳುವ ಅನಿವಾರ್ಯ.
ಬ್ಲೇಡ್ ಬಾಬುವಿನ ಕಥೆ ಮುಂದುವಿರಿದಿತ್ತು...
ನೀಲು ಭಾಯ್..ನನ್ನ ನಿಜವಾದ ಹೆಸರು ಬ್ಲೇಡ್ ಬಾಬು ಅಲ್ಲ.
ಬ್ರೆಡ್ ಬಾಬು..
ನಾನು ಬೇಕರಿಯೊಂದರಲ್ಲಿ ಬ್ರೆಡ್, ಬನ್, ರಸ್ಕ್ ಎಲ್ಲಾ ಮಾಡ್ತಾ ಇದ್ದೆ.
ಅದರಲ್ಲೂ ಬ್ರೆಡ್ ಮಾತ್ರ ಬಹಳ ಚೆನ್ನಾಗಿ ಮಾಡ್ತಾ ಇದ್ದೆ.
ಅದಕ್ಕಾಗಿ ನನಗೆ ಬೇಕರಿಯವರೆಲ್ಲ ಬ್ರೆಡ್ ಬಾಬು.. ಬ್ರೆಡ್ ಬಾಬು.. ಅಂತ ಕರೆಯುತ್ತಿದ್ದರು.
ಒಂದು ದಿನ ಬೇಕರಿಯಲ್ಲಿ ದೊಡ್ಡ ಮೊತ್ತದ ಹಣ ಕಳುವಾಯಿತು..
ನಾನು ಸ್ವಲ್ಪ ನೋಡಲು ಕಳ್ಳನ ಹಾಗೆಯೇ ಇದ್ದೆ.ಆದರೆ ನಿಜವಾಗಿಯೂ ನಾನು ಕಳ್ಳ ಆಗಿರಲಿಲ್ಲ.
ನಂತರ ಬೇಕರಿಯಲ್ಲಿ ಎಲ್ಲರೂ ನನ್ನನ್ನು ಹಣ್ಣುಗಾಯಿ ನೀರುಗಾಯಿ ಆಗುವಂತೆ ಹೊಡೆದು ಹಾಕಿ ಆಮೇಲೆ ಪೋಲಿಸರಿಗೆ ನನ್ನನ್ನು ಒಪ್ಪಿಸಿದರು..
ಪೋಲಿಸರು ನನಗೆ ಏರೋಪ್ಲೋನ್ ಹತ್ತಿಸಿದರು.. ಇನ್ನು ಜಾಸ್ತಿ ಪೆಟ್ಟ್ ತಿನ್ನುವುದು ಬೇಡ ಅಂತ,ಕೊನೆಗೆ ನಾನೇ ಕದ್ದದ್ದು ಅಂತ ಸುಳ್ಳು ಹೇಳಿದೆ.
ಒಂದು ವಾರದ ಒಳಗೆ ಹಣ ಹಿಂದಿರುಗಿಸಿ ಕೊಡ್ಬೇಕು ಅಂತ ಎಚ್ಚರಿಕೆ ಕೊಟ್ಟು ಬಿಟ್ಟರು..
ನನಗೆ ಎಂತ ಮಾಡುವುದು ಅಂತ ಗೊತ್ತಾಗ್ಲಿಲ್ಲ....
ಹಣ ಮಾಡುವುದಕ್ಕಾಗಿ ನಗರದ ಖ್ಯಾತ ಕಳ್ಳ ಭಟ್ಟಿ ಸರಾಯಿ ಮಾಡುವವರೊಂದಿಗೆ ನಾನು ಸೇರಿಕೊಂಡೆ.
ಒಂದು ಗುಡ್ಡೆಯಲ್ಲಿ ಕಳ್ಳ ಭಟ್ಟಿ ಸರಾಯಿ ಮಾಡುವಾಗ ಫೋಲಿಸ್ ರೈಡ್ ಆಯಿತು...
ಬಾಕಿಯವರೆಲ್ಲ ವೇಗವಾಗಿ ಓಡಿ ಹೋದರು... ನನಗೆ ಒಂದು ಕಾಲು ಪ್ರಾಬ್ಲಂ ಇತ್ತು.. ಹಾಗಾಗಿ ಓಡ್ಲಿಕ್ಕೆ ಆಗದೇ ಸಿಕ್ಕಿ ಬಿದ್ದೆ.
ಪೋಲಿಸರನ್ನು ಮತ್ತೆ ಕರೆದುಕೊಂಡು ಹೋಗಿ ಏರೋಪ್ಲೋನ್ ಹತ್ತಿಸಿದರು.
ಹೀಗೆ ನಾನು ಅವರ ಕಣ್ಣಿನಲ್ಲಿ ಕಳ್ಳನೇ ಆಗಿ ಹೋದೆ ನೀಲು ಭಾಯ್.
ಅಯ್ಯೋ ದೇವರೇ ಎಂತಹ ಕರುಣಾಜನಕ ಕಥೆ ಇವನದ್ದು ಅಂತ ಅನಿಸಿತು.
ಈ ಕಥೆಯನ್ನು ಏನಾದರೂ ನಾನು ಬುಕ್ ಮಾಡಿದರೆ ಖಂಡಿತಾ ಇದು ಮಾರ್ಕೆಟ್ ನಲ್ಲಿ ಚಿಂದಿ ಉಡಾಯಿಸ್ತದೆ ಅಂತ ಅಂದ್ಕೊಂಡೆ.
ರೌಡಿ ಸಾರ್... ಹಾಗಾದರೆ ಅದು ಕೋಳಿ ಅಂಕದಲ್ಲಿ ರೈಡ್ ಆದಾಗ... ಇಸ್ಪೀಟು ಆಡುವಾಗ ರೈಡ್ ಆಗುವಾಗ ಕೂಡ... ನೀವು ಹೀಗೆಯೇ ಸ್ಲೋ ಓಡಿಯೇ ಸಿಕ್ಕಿಬಿದ್ದದ್ದಾ... ಕೇಳಿದೆ ಎಗ್ ರೈಸ್ ತಿನ್ನುತ್ತಲೇ..
ಹೌದು ಹೌದು... ಕರೆಕ್ಟ್ ಹಾಗೆಯೇ ಹೇಳಿದಿರಿ.. ಅಂದ ನಗು ನಗುತ್ತಾ ಬ್ಲೇಡ್ ಬಾಬು,Sorry.. ಬ್ರೇಡ್ ಬಾಬು.
ರೌಡಿ ನನ್ನ ಮಗನೇ.. ಇದೂ ಒಂದು ಸ್ಟೋರಿಯ.. ನಿನ್ನದೂ ಒಂದು ಜನ್ಮವಾ ಅಂತ ಅನ್ನಿಸಿತು.. ಆದರೆ ಹೇಳ್ಲಿಲ್ಲ.
ಸೂಪರ್ ರೌಡಿ ಸಾರ್...ಕಥೆ ಚೆನ್ನಾಗಿದೆ..ನನಗೆ ಹಿಡಿಸಿತು.ಮತ್ತೆ ನೀವು ಹಾಪ್ ಮರ್ಡರ್, ಫುಲ್ ಮರ್ಡರ್ ಎಲ್ಲಾ ಮಾಡಿದ್ದು ಯಾವಾಗ... ಅದನ್ನು ಸ್ವಲ್ಪ ಸೂಕ್ಷ್ಮವಾಗಿ ವಿವರಿಸಿ.
ಬ್ರೆಡ್ ಬಾಬು ಪುನಃ ಕಥೆ ಹೇಳಲು ಶುರು ಮಾಡಿದ...
ನಿಜ ಹೇಳಬೇಕೆಂದರೆ ನಾನು ಯಾವುದೇ ಮರ್ಡರ್ ಮಾಡಿಲ್ಲ ಭಾಯ್...
ನಾನು ಹೇಗೋ ಸಮಾಜದ ದೃಷ್ಟಿಯಲ್ಲಿ ಕಳ್ಳನೇ ಆಗಿ ಹೋಗಿದ್ದೆ ಅಲಾ..
ಆದ್ದರಿಂದ ನನಗೆ ಬೇರೆ ಕೆಲಸ ಎಲ್ಲಾ ಸಿಗ್ತಾ ಇರ್ಲಿಲ್ಲ.
ಹಾಗಾಗಿ ನಗರದಲ್ಲಿ ಎಲ್ಲಾದರೂ ಹಾಫ್ ಮರ್ಡರ್ ಆದರೆ ಅದು ನಾನೇ ಮಾಡಿದ್ದು ಅಂತ ನಾನೇ ಹೋಗಿ ಪೋಲಿಸರಲ್ಲಿ ಒಪ್ಪಿಕೊಂಡು ಬಿಡುತ್ತಿದ್ದೆ.ಆ ರೀತಿ ಆದರೂ ಫೇಮಸ್ ಆಗುವ ಅಂತ.
ಹೀಗಾಗಿ... ನಾನು ರೌಡಿ ಶೀಟರ್ ಆದೆ.
ಆಗ ಯಾರು ಸ ರೌಡಿ ಇರ್ಲಿಲ್ಲ ಊರಲ್ಲಿ..
ಹಾಗಾಗಿ ನಾನೇ ನಗರದ ಖ್ಯಾತ ಹಾಗೂ ನಂಬರ್ ಒನ್ ರೌಡಿ ಆದೆ.
ಜನರು ನನಗೆ ಹೆದರಿ ಹಣ ಕೊಟ್ಟರು.
ನನ್ನೊಂದಿಗೆ ಹುಡುಗರು ಸೇರಿಕೊಂಡರು.
ನನ್ನದೊಂದು ಗ್ಯಾಂಗ್ ಆಯಿತು.
ಎಲ್ಲರೂ ಮಚ್ಚು ಲಾಂಗ್ ಇಟ್ಕೊಂಡು ಫೀಲ್ಡ್ ಗೆ ಇಳಿದರೆ...
ನಾನು ಸ್ವಲ್ಪ ಡಿಫರೆಂಟ್ ಆಗಿ ಇರ್ಲಿ ಅಂತ ಬಾಯಿಯಲ್ಲಿ ಬ್ಲೇಡ್ ಇಟ್ಕೊಂಡು ಫೀಲ್ಡ್ ಗೆ ಇಳಿದೆ.
ಹಾಗಾಗಿ ಮುಂದೆ ಈ ಭವ್ಯ ಸಮಾಜ ಬ್ರೇಡ್ ಬಾಬು ಅನ್ನು ಮರೆತು ನನ್ನನ್ನು ಬ್ಲೇಡ್ ಬಾಬು ಎಂದು ಕರೆಯಿತು.
ನನಗೆ ಸ ಅದೇ ಹೆಸರು ಇಷ್ಟ ಆಯಿತು..ನಾನು ಕೂಡ ಅದೇ ಹೆಸರು ಇಟ್ಟುಕೊಂಡೆ.. ಹೀಗೆ ನಾನು ಬ್ಲೇಡ್ ಬಾಬು ಆದೆ.
ಇದು... ಇದು ನೀಲು ಭಾಯ್ ನನ್ನ ಕಥೆ.ಪ್ರಪಂಚದಲ್ಲಿ ಯಾರಿಗೂ ಗೊತ್ತಿರದ ತೆರೆಮರೆಯ ಪುಟಗಳು..
ಅಂತ ತನ್ನ ಕಥೆ ಮುಗಿಸಿ ತನ್ನ ಕಣ್ಣೀರು ಒರೆಸಿಕೊಂಡ ಬ್ರೆಡ್ ಬಾಬು.
ನನ್ನ ಮಗನೇ...ಪೋಲಿಸ್ ರೈಡ್ ಆದಾಗ ವೇಗವಾಗಿ ಓಡ್ಲಿಕ್ಕೆ ಆಗದೇ ಇದ್ದದಕ್ಕೆ... ಸಮಾಜ ಕೊಟ್ಟ ಹೆಸರೇ ಇಷ್ಟ ಆಯಿತು ಎಂಬ ಕಾರಣಕ್ಕೆ..ಫೇಮಸ್ ಆಗ್ಲಿಕ್ಕೆ ಸುಳ್ಳು ಸುಳ್ಳು ಮರ್ಡರ್ ಕೇಸ್ ಗಳನ್ನು ಒಪ್ಪಿಕೊಂಡು ರೌಡಿ ಆದವನು ಬಹುಶಃ ನೀನೇ ಇರ್ಬೇಕು ಇಡೀ ಪ್ರಪಂಚದಲ್ಲಿ...ನಿನಗೇನಾ ನಾನು ಆವಾಗದಿಂದ ಹೆದರಿ ಸಾಯ್ತಾ ಇದ್ದದ್ದು.. ಅಂತ ಮನಸ್ಸಿನಲ್ಲಿ ನಾನೇ ಬೈಕೊಂಡೆ.
ಎಗ್ ರೈಸ್ ತಿನ್ನುತ್ತಲೇ ಕೇಳಿದೆ.. ಆದ್ರೂ ಸ ನೀವು ಇನ್ನೂ ಒಂದು ಮರ್ಡರ್ ಮಾಡ್ಲಿಲ್ಲ ಅಲ.
ಇಲ್ಲ...ಇನ್ನೂ ಸ ಮಾಡ್ಲಿಲ್ಲ...
ಗ್ರೇಟ್ ಸಾರ್.. ನಿಮ್ಮ ಕಥೆ ಖಂಡಿತಾ ಹಿಟ್ ಆಗ್ತದೆ ಬಿಡಿ.
ಹೌದಾ.. ಅಷ್ಟು ಒಳ್ಳೆ ಉಂಟಾ...?
ಮತ್ತೆಂತ ಸಾರ್... ಯಾವನಾದರೂ ರೌಡಿಗೆ ಇಂತಹ ಒಂದು ಕಥೆ ಇರುತ್ತಾ... ಇದು ಬರೀ ಹಿಟ್ಟು ಅಲ್ಲ, ಸೂಪರ್ ಹಿಟ್ಟು ಆಗ್ತದೆ...
ಅವನಿಗೆ ಖುಷಿ ಹೇಳತಿರದು..
ಮನಸ್ಸಿನಲ್ಲಿ ನಾನೇ ಹೇಳಿಕೊಂಡೆ.. ಮಗನೇ ಇದು ಸೂಪರ್ ಹಿಟ್ಟು ಅಲ್ಲಾ ಕಡ್ಲೆ ಹಿಟ್ಟು... ಮೈದಾ ಹಿಟ್ಟು ಆಗುವ ಸ್ಟೋರಿ ತರಹ ಇದೆ.
ಎಗ್ ರೈಸ್ ಪೂರ್ತಿ ಮುಗಿಸಿ ಅಲ್ಲೇ ಕೈ ತೊಳೆದೆ..
ದೂರದಲ್ಲಿ ಪೊಲ್ಲ,ರುಕ್ಕು ನನ್ನನೇ ನೋಡುತ್ತಿದ್ದರು..
ರಪ್ಪ ಅಂತ ನೆನಪಾಯಿತು...
ನೋಡಿ ರೌಡಿ ಸಾರ್. ನಿಮ್ಮ ಹುಡುಗನೇ ಮೊದಲು ತಪ್ಪು ಮಾಡಿದ್ದು.ಹಾಗಾಗಿ ಅವನು ನಮ್ಮ ಹುಡುಗಿ ಬಳಿ ಕ್ಷಮೆ ಕೇಳ್ಬೇಕು ಅಷ್ಟೇ.
ನೀಲು ಭಾಯ್..ಈಗಲೇ ಈಗಲೇ... Sorry ಕೇಳಿಸ್ತೀನಿ.ನಿಮ್ಮ ಹುಡುಗಿಯನ್ನು ಕರೆಯಿರಿ... ಅಂದ ಬ್ರೆಡ್ ಬಾಬು.
ನಾನು ಪೊಲ್ಲ ಮತ್ತು ರುಕ್ಕುಗೆ ಇಲ್ಲಿ ಬನ್ನಿ ಎಂದು ಕೈ ಸನ್ನೆ ಮಾಡಿ ಕರೆದೆ.
ಅವರಿಬ್ಬರೂ ಓಡುತ್ತಾ ನನ್ನಲ್ಲಿಗೆ ಬಂದರು.
ಅದೇ ರೀತಿ ಬಾಬು ತನ್ನ ಗ್ಯಾಂಗ್ ಅವರನ್ನು ಕರೆದ.ಅವರೆಲ್ಲರು ತಮ್ಮ ಮಾರಕ ಆಯುಧಗಳೊಂದಿಗೆ ನಾವಿದ್ದಲ್ಲಿಗೆ ಬಂದರು.
ಅವರು ಅಲ್ಲಿಗೆ ಬಂದ ಕೂಡಲೇ,ಆ ತೊಂದರೆ ಕೊಟ್ಟ ಹುಡುಗನಿಗೆ ಕಪಾಳಕ್ಕೆರಡು ಸರಿಯಾಗಿ ಬಾರಿಸಿ..
ಹೋಗು.. ಆ ಹುಡುಗಿ ಬಳಿ ಹಾಗೆಯೇ ನೀಲು ಭಾಯ್ ಬಳಿ ಕೂಡ Sorry ಕೇಳು.. ಅಂದ ಬಾಬು
ಆ ಹುಡುಗ.. ಅಣ್ಣಾ ಅದು.. ಅಂದ.
ಏನು ಅಣ್ಣಾ.... ನೀಲು ಭಾಯ್ ನನ್ನ ಜನ. Sorry ಕೇಳು.. ಇಲ್ಲಂದ್ರೆ ಗೊತ್ತಾಲ್ಲ... ಎಂದು ಕಣ್ಣು ದೊಡ್ಡದು ಮಾಡಿದ ಬಾಬು.
ಕೊನೆಗೆ ಆ ಹುಡುಗ ಮೊದಲು ರುಕ್ಕು ಬಳಿ Sorry ಕೇಳಿದ.ನಂತರ ನನ್ನ ಬಳಿ Sorry ಕೇಳಿದ.
ನಂತರ ಬಾಬು ತನ್ನ ಗ್ಯಾಂಗ್ ಕಡೆಗೆ ತಿರುಗಿ ಪ್ರಖರ ಭಾಷಣ ಮಾಡಿದ...
ನೋಡಿ... ನೀಲು ಭಾಯ್ ನಮ್ಮ ಜನ..
ಇವರಿಗೆ ಇನ್ನು ತೊಂದರೆ ಕೊಡುವುದಲ್ಲಾ.ನಗರದಲ್ಲಿ ಅವರೇ ಏನಾದರೂ ತೊಂದರೆಯಲ್ಲಿ ಇದ್ರೆ ನೀವೇ ಹೋಗಿ ಅವರಿಗೆ ಸಹಾಯ ಮಾಡ್ಬೇಕು..ಮತ್ತು ಅವರನ್ನು ಪ್ರೋಟೆಕ್ಟ್ ಮಾಡಬೇಕು ಗೊತ್ತಾಯಿತ್ತಲ್ಲಾ..
ರೌಡಿಗಳೆಲ್ಲಾ.. ಒಕ್ಕೊರಲಿನಿಂದ... ಆಯ್ತು ಅಣ್ಣಾ ಹಾಗೇ ಮಾಡ್ತೀವಿ ಅಂದರು.
ಅದನ್ನು ಕೇಳಿ ರುಕ್ಕು ನನ್ನನ್ನು ನೋಡಿ ಪರವಾಗಿಲ್ವೇ ಎಂದು ಖುಷಿಯಲ್ಲಿ ಕಣ್ಣರಳಿಸಿದಳು.
ಪೊಲ್ಲನಿಗೆ ಅದು ಇಷ್ಟವೇ ಆಗಲಿಲ್ಲ.. ಅವನಿಗೆ ಅನ್ಯಾಯವಾಗಿ ಪೆಟ್ಟ್ ಲಡಾಯಿ ಮಿಸ್ ಆದ ಭಯಂಕರ ಬೇಜಾರು.
ಬ್ರೆಡ್ ಬಾಬು ಹೇಳಿದ...
-ನೀಲು ಭಾಯ್ ನಾವು ಇನ್ನು ಹೋಗ್ತೇವೆ.. ಆದಷ್ಟು ಬೇಗ ಪುಸ್ತಕ ಬರೆಯಿರಿ ಅದೇ.. "ಅಂದಕಾಲತ್ತಿಲ್ ಬಾಬು.."
ಆಯಿತು.. ಆಯಿತು ನೀವು ಟೆನ್ಶನ್ ಮಾಡ್ಬೇಡಿ.. " ಅಂದಕಾಲತ್ತಿಲ್ ಬಾಬು" ಬರೆಯಲೇ ಬೇಕಾದ... ಎಲ್ಲರೂ ಓದಲೇ ಬೇಕಾದ ಬಹು ಮುಖ್ಯ ಪುಸ್ತಕ ಆಗ್ತದೆ.
ಸೂಪರ್ ಹಿಟ್ಟು ಆಗ್ತದೆ ಅಲ..
ಹೌದು ಖಂಡಿತಾ..ಸೂಪರ್ ಹಿಟ್ಟು ಆಗ್ತದೆ.ನೀವು ಇನ್ನು ಹೊರಡಿ... ಎಂದು ನನ್ನ ಕೊರಳಲ್ಲಿ ಇದ್ದ ಸೇವಂತಿ ಮಾಲೆಯನ್ನು ಅವನ ಕೊರಳಿಗೆ ಹಾಕಿ ಬಿಟ್ಟೆ.
ಥ್ಯಾಂಕ್ಸ್.. ಎಂದು ಹೇಳಿ ಬಾಬು ಅವನ ಕೇಡಿ ಪರಿವಾರದೊಂದಿಗೆ ಓಮ್ನಿ ಯಲ್ಲಿ ಕುಳಿತುಕೊಂಡು ಅಲ್ಲಿಂದ ಹೋಗಿಯೇ ಬಿಟ್ಟ.
ರುಕ್ಕು ಮತ್ತು ಪೊಲ್ಲ ನನ್ನನ್ನೇ ಬಿಟ್ಟ ಕಣ್ಣುಗಳಿಂದಲೇ ಹಾಗೇ ನೋಡುತ್ತಿದ್ದರು. ಕೈಯಲ್ಲಿದ್ದ ಕ್ರಿಕೆಟ್ ಬ್ಯಾಟ್ ಪೊಲ್ಲನಿಗೆ ಕೊಟ್ಟೆ.
ನಂತರ ಅಲ್ಲೇ ಒಂದು ರಿಕ್ಷಾ ಹಿಡಿದು ಡ್ರೈವರ್ ಗೆ ಹೋಗಬೇಕಾದ Address ಹೇಳಿದೆ.
ರಿಕ್ಷಾದಲ್ಲಿ ಮೂವರೂ ಕುಳಿತುಕೊಂಡೆವು..
ರಿಕ್ಷಾ ಹೊರಟಿತು..
ಆದರೆ ಪುಲ್ಕಿಯ ಕಡೆಗೆ ಅಲ್ಲ..
ಪೊಲ್ಲ ಹೇಳಿದ.. ಅಣ್ಣ ಎಲ್ಲಿಗೆ..ನಾವು ಪುಲ್ಕಿಗೆ ಹೋಗ್ತಾ ಇಲ್ವಾ?
ಇಲ್ಲ...ಅಂದೆ.
ಮತ್ತೆ...
ನಿಮ್ಮ ಅಕ್ಕನ ರೂಮಿಗೆ.. !
ಯಾರು ಅನುರಾಧ(ರಾಧ) ಅಕ್ಕನಾ?
ಹೌದು..
ಅಲ್ಲಿಗೆ ಯಾಕೆ..?
ಅವಳನ್ನು ಕರ್ಕೊಂಡು ಬರ್ಲಿಕ್ಕೆ..
ಎಲ್ಲಿಗೆ..
ನಮ್ಮ ಮನೆ ಮೇಲಿನ ರೂಮ್ ಖಾಲಿ ಉಂಟು ನೋಡು.. ಅಪ್ಪ ಹೇಳಿದ್ದಾರೆ ಅದನ್ನು ಅವಳಿಗೆ ಬಾಡಿಗೆ ಕೊಡ್ಲಿಕ್ಕೆ.
ಆದ್ರೆ ಅಣ್ಣ ಅವಳು ಬರಲ್ಲ...ಭಾವ ತೀರಿಕೊಂಡ ಮೇಲೆ ಅವಳು ನಮ್ಮ ಮನೆಗೂ ಬರ್ಲಿಲ್ಲ, ನಾವು ಹೋಗಿ ಎಷ್ಟು ಕೇಳಿಕೊಂಡಿದ್ದೆವು..
ಪೊಲ್ಲ ಅವಳು ಸ್ವಾಭಿಮಾನಿ ಕಣೋ.ನಿಮಗೆ ಹೊರೆಯಾಗ್ಲಿಕ್ಕೆ ಅವಳಿಗೂ ಇಷ್ಟ ಇಲ್ಲ.ಅದಕ್ಕೆ ನೀವು ಕರೆದಾಗ ಬರ್ಲಿಲ್ಲ.ಅವಳ ಕಥೆ ನನ್ನ ಅಪ್ಪನಿಗೆ ಹೇಳಿದೆ.ಅವರಿಗೆ ಮನಸ್ಸು ತಡೀಲಿಲ್ಲಾ... ಎಷ್ಟಾದರೂ ಅವರಿಗೆ ಅವಳೆಂದರೆ ಬಹಳ ಪ್ರೀತಿ...ಹೆಣ್ಣು ಮಕ್ಕಳಿಲ್ಲದ ನನ್ನ ಅಪ್ಪ ಸ್ವಂತ ಮಗಳಂತೆ ಅವಳನ್ನು ಚಿಕ್ಕಂದಿನಲ್ಲಿ ನೋಡಿಕೊಂಡಿದ್ದರು ಎಂದು ನಿಮಗೆಲ್ಲರಿಗೂ ಗೊತ್ತಿದ್ದದ್ದೇ.
ಅದು ಬೇರೆ ಅವಳು ಪ್ರೈಮರಿಯಿಂದ ನನ್ನ ಬೆಸ್ಟ್ ಫ್ರೆಂಡ್. ಆಮೇಲೆ ನಮ್ಮ ಸ್ನೇಹ ಕಡಿದಿತ್ತು ನಿಜ.ಆದರೆ ಅವಳ ಸ್ನೇಹ ಮರೆಯಲು ಸಾಧ್ಯವಿಲ್ಲ.ನಾನೇ ಅವಳಿಗೆ ಹೇಳಿದೆ.ಬೇರೆ ಕಡೆ ಬಾಡಿಗೆಗೆ ಇರುವುದಕ್ಕಿಂತಲೂ ನಮ್ಮ ಮನೆಯ ಮೇಲೆಯಲ್ಲಿಯೇ ಬಾಡಿಗೆಗೆ ಇರು ರಾಧ.ಅಪ್ಪನಿಗೂ ನೀನಂದರೆ ತುಂಬಾ ಇಷ್ಟ. ಅವರಿಗೂ ಖುಷಿ ಆಗ್ತದೆ.ನಿನಗೆ ಬೇಕೆನಿಸಿದಾಗ ನಿಮ್ಮ ಬೈಲು ಮನೆಗೆ ಕೂಡ ಆವಾಗವಾಗ ಹೋಗಿರಬಹುದು. ಚಿಕ್ಕ ಮಗು ಬೇರೆ ಇದೆ.ನಾವೆಲ್ಲ ನಿನ್ನ ಬಳಿಯೇ ಇದ್ದರೆ ನಿನಗೂ ನಿನ್ನವರು ಇದ್ದಾರೆ ಅಂತ ಫೀಲ್ ಆಗ್ತದೆ ಅಲ್ಲ ರಾದ ಎಂದು ಹೇಳಿದ್ದೆ.
ಮೊದಲು ಅವಳು ಒಪ್ಪಲಿಲ್ಲ...ನಂತರ ಒಪ್ಪಿದಳು.
ಅಪ್ಪನಿಗೆ ಕೂಡ ಪೋನ್ ಮಾಡಿ ಮಾತಾಡಿಸಿದೆ.ಅಪ್ಪ ಅಳುತ್ತಲೇ ಹೇಳಿದ್ದರು...ನಮ್ಮನೆಲ್ಲಾ ಇಷ್ಟು ಬೇಗ ಮರೆತು ಬಿಟ್ಟೆಯಾ ಮಗಳೇ...ನಿನ್ನ ಪಾಲಿಗೆ ಇಷ್ಟು ಬೇಗ ನಾನು ಸತ್ತು ಹೋದೆನಾ ಎಂದು.
ನಂತರ ಅವಳಿಗೆ ತಡೆಯಲು ಆಗಲೇ..ಅವಳೂ ಕೂಡ ಅತ್ತಳು. ಕೊನೆಗೆ ಬಂದೇ ಬರ್ತೇನೆ ಅಂತ ಒಪ್ಪಿ ಬಿಟ್ಟಳು.
ಅದನ್ನು ಕೇಳಿ ಪೊಲ್ಲ ಮತ್ತು ರುಕ್ಕುಗೆ ತುಂಬಾ ಖುಷಿ ಆಯಿತು...
ಪೊಲ್ಲ ಹೇಳಿದ...ಆದ್ರೆ ಇದು ನಮ್ಮ ಅಮ್ಮ ಅಪ್ಪನಿಗೆ ವಿಷಯ ಗೊತ್ತಾ.
ಗೊತ್ತಿದೆ...ನಾನು ನಿಮ್ಮ ಅಪ್ಪ ಕಾಂತಪ್ಪಣ್ಣ ಮತ್ತು ನಿಮ್ಮ ಅಮ್ಮ ಅಂಬಕ್ಕನನ್ನು ಕೂಡ ಒಪ್ಪಿಸಿದೆ.ಎಷ್ಟಾದರೂ ಹೆತ್ತ ಮಗಳು ಅಲ್ಲವೇ,ನಮ್ಮ ಮನೆಯಲ್ಲಿ ಇರದಿದ್ದರೂ ಕೊನೆಯ ಪಕ್ಷ ನಮ್ಮ ಕಣ್ಣಿದುರು ಆದರೂ ನಮ್ಮ ಪಕ್ಕವೇ ಇರ್ತಾಳೆ ಅಲ್ವಾ ಎಂದು ಅವರಿಗೂ ಸಂತೋಷ ....
ರಿಕ್ಷಾ ಹೋಗಿ ರಾಧಳ(ಅನುರಾಧ) ಮನೆಯ ಮುಂದೆ ನಿಂತಿತು.
ರುಕ್ಕು ಹಾಗೂ ಪೊಲ್ಲ... ಓಡಿ ಹೋಗಿ ಅಕ್ಕ ಎಂದು ಅವಳನ್ನು ತಬ್ಬಿಕೊಂಡರು.
ಅವರಿಗೂ ಖುಷಿ... ಎಷ್ಟಾದರೂ ಅವರ ಅಕ್ಕ ಅಲ್ಲವೇ.
ನನ್ನನ್ನು ನೋಡಿ ಎಂದಿನಂತೆ ನಕ್ಕಳು ನನ್ನ ಬಾಲ್ಯದ ಗೆಳತಿ ರಾಧ..
ನನ್ನ ಪಾಲಿಗೆ ಒಂದು ಸಮಯದಲ್ಲಿ ಎಲ್ಲವೂ ಆಗಿದ್ದವಳು ಅವಳೇ.
ಆ ಪುಲ್ಕಿಯ ಗುಡ್ಡೆ, ಶಾಲೆಯ ಸ್ವರ್ಗದ ದಾರಿ ಎಲ್ಲವೂ ನೆನಪಾಯಿತು.
ಒಂದು ಟೆಂಪೋದಲ್ಲಿ ಅವಳ ಎಲ್ಲಾ ಸಾಮಾನು ಅದಾಗಲೇ ತುಂಬಿಸಿ ಆಗಿತ್ತು ಅವಳು.
ನಾನು ಪೊಲ್ಲನಿಗೆ ಹೇಳಿದೆ....
ಪೊಲ್ಲ ನೀನು ಆ ಟೆಂಪೋದಲ್ಲಿ ಕುಳಿತುಕೊಂಡು ಡ್ರೈವರ್ ಗೆ ನಮ್ಮ ಮನೆ ದಾರಿ ತೋರಿಸು.ನಾವು ಮೂವರು ಆಟೋದಲ್ಲಿ ಬರ್ತವೆ..
ಪೊಲ್ಲ ಖುಷಿಯಿಂದಲೇ ತನ್ನ ಕ್ರಿಕೆಟ್ ಬ್ಯಾಟು ಹಿಡಿದುಕೊಂಡು ಆ ಟೆಂಪೋದಲ್ಲಿ ಕುಳಿತುಕೊಂಡು ಪುಲ್ಕಿಯ ನಮ್ಮ ಮನೆ ಕಡೆ ಹೋದ.
ಮಗು ಹಿಡಿದುಕೊಂಡು ರಾಧ ರಿಕ್ಷಾದಲ್ಲಿ ಕುಳಿತುಕೊಂಡಳು. ಅವಳ ಪಕ್ಕದಲ್ಲಿಯೇ ನಾನು ಕುಳಿತುಕೊಂಡೆ.ನನ್ನ ಪಕ್ಕದಲ್ಲಿಯೇ ರುಕ್ಕು ಕುಳಿತುಕೊಂಡಳು..
ನಮ್ಮ ಪಯಣ ಕೂಡ ಪುಲ್ಕಿಯತ್ತ ಸಾಗಿತ್ತು..
ನಿಜವಾಗಿಯೂ ಅದೊಂದು ಸುಖವಾದ ಪ್ರಯಾಣ.
ಮನಸ್ಸು ಹಗುರವಾಗಿತ್ತು.
ರಿಕ್ಷಾ ಮನೆಗೆ ಬಂದ ಕೂಡಲೇ...
ಮನೆಯ ಅಂಗಳದಲ್ಲಿಯೇ ಅಪ್ಪ ರಾಧಳಿಗಾಗಿಯೇ ಕಾದು ನಿಂತಿದ್ದರು.
ಅವರೊಟ್ಟಿಗೆ ಪಕ್ಕದ ಮನೆಯ ದರ್ಶನ್ ದೊಡ್ಡಪ್ಪ, ರಕ್ಷಿತಾ ದೊಡ್ಡಮ್ಮ, ಮುರ್ಲಿ(ಮುರಳಿ)ಅಣ್ಣ, ಅವನ ತಂಗಿ ಇಂಪು(ಇಂಪನ) ಕೂಡ ಅಲ್ಲೇ ಇದ್ದರು.
ರಾಧಳನ್ನು ನೋಡಿ ನನ್ನ ಅಪ್ಪನಿಗೆ ಆದ ಆನಂದ ಅಷ್ಟಿಷ್ಟಲ್ಲ...
ಬಂದೆಯಾ... ಮಗಳೇ.. ಎಂದು ಕಣ್ಣೀರಾದಳು.
ರಾಧ ಹೋಗಿ ಅವರ ಆಶೀರ್ವಾದ ಪಡೆದಳು.. ಅವಳು ಕೂಡ ಆ ಕಣ್ಣೀರ ಧಾರೆಯನ್ನೇ ಹರಿಸಿದ್ದಳು.
ಕೆಳಗಿನ ಬೈಲು ಮನೆಯಿಂದ ಕಾಂತಪ್ಪಣ್ಣ... ಅಂಬಕ್ಕ.. ಮಗಳೇ ಅನ್ನುತ್ತಾ ಓಡೋಡಿ ಬಂದರು. ಎಷ್ಟಾದರೂ ಅವರ ಮಗಳು.
ಅದೊಂದು ಸುಂದರ ದೃಶ್ಯ... ಎಲ್ಲರೂ ಅತ್ತರು ಎಲ್ಲರೂ ನಕ್ಕರು..
ನನ್ನ ಅಪ್ಪ ಅಂತು ಅವರ ಮೊಮ್ಮಗಳೇ ಎಂದು ತಿಳಿದು ರಾಧಳ ಮಗಳ ಜೊತೆ ಆಟ ಆಡುತ್ತಿದ್ದರು.
ಟೆಂಪೋ ದಲ್ಲಿ ಬಂದ ಪೊಲ್ಲ... ತನ್ನ ಬ್ಯಾಟ್ ಅನ್ನು ಅಲ್ಲೇ ಕೆಳಗೆ ಇಟ್ಟು,ಟೆಂಪೋದಲ್ಲಿದ್ದ ರಾಧಳ ಸಾಮಾನುಗಳನ್ನು ನಮ್ಮ ಮನೆಯ ಟೆರೇಸ್ ಮೇಲಿನ ರೂಮಿಗೆ ತೆಗೆದುಕೊಂಡು ಹೋಗಿ ಅದನ್ನ ಜೋಡಿಸುವುದರಲ್ಲಿ busy ಆದ.ಅಪ್ಪ ನೀಲಣ್ಣ... ಕಾಂತಪ್ಪಣ್ಣ.. ಅಂಬಕ್ಕ,ದೊಡ್ಡಪ್ಪ, ದೊಡ್ಡಮ್ಮ, ಮುರ್ಲಿ,ಇಂಪು ಕೂಡ ಅವನಿಗೆ ಸಹಾಯ ಮಾಡಲು ಮೇಲಿನ ರೂಮ್ ಗೆ ಹೋದರು.
ರಾಧ ನನ್ನ ಹತ್ತಿರ ಬಂದು ಕಣ್ಣು ತುಂಬಿ ಕೊಂಡು ಹೇಳಿದಳು...
ನೀಲು... ಥ್ಯಾಂಕ್ಸ್..
ನನ್ನ ಕಣ್ಣು ಕೂಡ ತುಂಬಿ ಬಂತು.
ಹಾಗೇ ನನ್ನ ತಲೆ ಸವರಿ ಅವಳು ಕೂಡ ಅವಳ ಮಗುವಿನೊಂದಿಗೆ ಮೇಲಿನ ರೂಮಿಗೆ ಹೋದಳು.
ಕಳೆದು ಹೋಗಿದ್ದ ನನ್ನ ಪ್ರೈಮರಿ ಫ್ರೆಂಡ್,ನನ್ನ ಬೆಸ್ಟ್ ಫ್ರೆಂಡ್... ಕೊನೆಗೂ ನನಗೆ ಮರಳಿ ಸಿಕ್ಕದ್ದಳು.
ಕಣ್ಣು ಒರೆಸಿಕೊಂಡೆ...
ಅಲ್ಲೇ ಇದ್ದ ರುಕ್ಕು ಮತ್ತೆ ರಾಗವಾಗಿ ಹೇಳಿದಳು.
ನಿಮಗೆ ಥ್ಯಾಂಕ್ಸ್ ಆಯ್ತಾ...
ಯಾಕೆಯಾ ಮಂಗ..
ನೀವು ಕೇಡಿಗಳಿಂದ ನನಗೆ Sorry ಕೇಳಿಸಿದ್ದಿರಿ ಅದಕ್ಕೆ ...
ಅವಳು ಪೆದ್ದಿಯ ಹಾಗೇ ಮಾತಾಡಿದರೂ ಮುದ್ದಾಗಿ ಮಾತಾಡುತ್ತಾಳೆ..
ನಗುತ್ತಾ ಹೇಳಿದೆ.. ಮತ್ತೆ ನೀನು ಮನೆಯಲ್ಲಿ ಸೌತೆ ಕಟ್ಟಿ ನೇತು ಹಾಕ್ಲಿಕ್ಕೆ ನನ್ನ Kung Fu ಬೆಲ್ಟ್ ಕೇಳಿದ್ದೆ ಅಲ,ಬೇಡ್ವಾ ಅದು..
ಹೌದಲ್ಲ...ಮರೆತೇ ಹೋಗಿತ್ತು..ಹತ್ತು ಬೆಲ್ಟ್ ಕೊಡಿ ಅಲ ಬೇಗ..
ಇಲ್ಲವ ರುಕ್ಕು .ನಾನು ಸುಮ್ಮನೆ ಹೇಳಿದ್ದು. ನಾನು Kung-fu ಚಾಂಪಿಯನ್ ಸ ಅಲ್ಲ ನನಗೆ Kung fu ಕೂಡ ಬರಲ್ಲ.ಮತ್ತು ನಾನು ಚಾಂಪಿಯನ್ ಆಗಿದ್ರೆ ಕೂಡ ನಾನು ನನ್ನ ಕುಂಗ್ಫು ಬೆಲ್ಟ್ ಅನ್ನು ನಿನಗೆ ಮನೆಯಲ್ಲಿ ಸೌತೆ ಕಟ್ಟಿ ನೇತು ಹಾಕ್ಲಿಕ್ಕೆ ಎಲ್ಲಾ ಕೊಡ್ತಿರ್ಲಿಲ್ಲ.ನಿನಗೆ ಬೇರೆ ಏನಾದರೂ ಹಗ್ಗ ಇದ್ರೆ ಕೊಡುವ ಬಾ... ಎಂದು ನಗುತ್ತಲೇ ಹೇಳಿ ಅವಳಿಗೆ ಸೌತೆ ಕಟ್ಟಲು ಬೇಕಾಗುವ ಹಗ್ಗ ಕೊಡಲು ನಮ್ಮ ಮನೆಯೊಳಗೆ ಹೋದೆ.
ನನ್ನ ಹಿಂದೆಯೇ ಬಂದ ರುಕ್ಕು ಏನೇನೋ ಞಕ್ಕ್ ಞೈ (ಪದೇ ಪದೇ)ಹೇಳ್ತಲೇ ಇದ್ದಳು..
ಆಗ್ಬಹುದಾ ನೀವು..ಆ ಕೇಡಿಗಳೊಂದಿಗೆ ಪೈಟ್ ಮಾಡದೆಯೇ ಅವರಿಂದ Sorry ಕೇಳಿಸಿದ್ರೆ.... ಗ್ರೇಟ್ ನೀವು.
ನನಗೆ ಭಯ ಇರ್ಲಿಲ್ಲ ಆದ್ರೆಸ.. ಏನು ಆಗ್ತದೆ ಅಂತ ಕುತೂಹಲ ಇತ್ತು..
ಆದ್ರೆ ಪಾಪ ಪೊಲ್ಲನಿಗೆ ಪೆಟ್ಟ್ ಲಡಾಯಿ ಆಗ್ಲಿಲ್ಲ ಅಂತ ಬಾರೀ ಬೇಜಾರು...
ಮತ್ತೆ ಅದು "ಅಂದಕಾಲತ್ತಿಲ್ ಬಾಬು" ಪುಸ್ತಕ ಬರೆದರೆ ನನಗೆ ಒಂದು ಓದ್ಲಿಕ್ಕೆ ಕೊಡಿ ಆಯ್ತಾ..
ಅಂತ ಏನೇನೋ ಹೇಳುತಲೇ ನನ್ನ ಹಿಂದೆಯೇ ಬಂದಳು..
ಅವಳು ಪೊಲ್ಲನ ವಿಷಯ ಹೇಳಿದಾಗ ಮಾತ್ರ ಯಾಕೋ ಅವನು Serious ಆಗಿ ಹೇಳಿದ ಅವನ ಡೈಲಾಗುಗಳೇ ನೆನಪಾಗಿ ಬಿಟ್ಟಿತು.
"ಗ್ಯಾಂಗ್ ಕಟ್ಟಿಕೊಂಡು ಬರೋನು ಗ್ಯಾಂಗ್ ಸ್ಟರ್..
ನಮ್ಮ ಅಣ್ಣ.. ಒಬ್ನೇ ಬರೋನು.. ಮೋನ್ ಸ್ಟರ್ "
ನಗು ತಡೆಯಲಾಗದೇ ರುಕ್ಕು ಜೊತೆ ಸೌತೆ ಕಟ್ಟಲು ಬೇಕಾಗುವ ಹಗ್ಗ ಹುಡುಕುವುದರಲ್ಲಿ busy ಆದೆ ನಾನು.
#ಮುಕ್ತಾಯ 😊🙏
.....................................................................................
#ನೀಲಮೇಘ 💙
ab pacchu
moodubidire

Comments
Post a Comment