ನಿರೀಕ್ಷೆ (ಕ್ಲೈಮ್ಯಾಕ್ಸ್ - 2)
ಕಡಲಿಗೊಂದು ಸದ್ದು ಇದೆ.ಅದರ ಭೋರ್ಗರೆವ ಅಲೆಗಳಲ್ಲಿ ಎಲ್ಲರಿಗೂ ಕೇಳಿಸುವ ಅಬ್ಬರದ ಶಬ್ಧವಿದೆ.
ಆದರೆ ಕಡಲಿಗೊಂದು ಮೌನವೂ ಕೂಡ ಇದೆ.ಅದರ ಹಠಮಾರಿ ಅಲೆಗಳ ಭೋರ್ಗರೆತದ ಆ ಶಬ್ಧದೊಳಗೆಯೇ ಅದು ಅಡಗಿಕೊಂಡಿದೆ.
ಕಡಲಿನೆದುರು ನಿಂತಾಗ ನಾವು ಕಿವಿ ಮುಚ್ಚಬೇಕು,ಮನಸ್ಸು, ಹೃದಯ ತೆರೆಯಬೇಕು.. ಆಗ ಆ ಮೌನ ನಮ್ಮದಾಗುತ್ತದೆ.
ಆ ಮೌನದಲ್ಲಿ ಕೆಲವರಿಗೆ ನೆಮ್ಮದಿ ಸಿಗುತ್ತದೆ,ಇನ್ನು ಕೆಲವರಿಗೆ ಅವರವರ ಕಥೆಯಷ್ಟೇ ನೆನಪಾಗುತ್ತದೆ..!
ಹುಡುಕಿದರೆ ಕಡಲಿನ ಮರಳಿನಲ್ಲಿ ಹಾಗೂ ಮೌನದಲ್ಲಿ ಕಡಲಿನ ಮಕ್ಕಳದ್ದೊಂದು ಕಥೆ ಯಾವಾಗಲೂ ಹುದುಗಿರುತ್ತದೆ.
ಕಡಲಿನ ತೀರದಲ್ಲಿಯೇ ದಿನನಿತ್ಯ ಉಸಿರಾಡುವ ವನಜಮ್ಮ ಗಟ್ಟಿಗಿತ್ತಿ ಹೆಂಗಸು.ಕಡಲಿನ ಮಗಳು ಎಂದರೆ ತಪ್ಪಾಗಲಾರದು.
ಅವಳ ಗಂಡ ಶೇಕರಣ್ಣ ತನ್ನ ಹೆಂಡತಿಯೇ ತನ್ನ ಜೀವನದ ಸರ್ವಸ್ವ ಎಂದು ನಂಬಿ ಬದುಕ ಹುಟ್ಟು ಶ್ರದ್ಧೆಯಿಂದ ಹಾಕಿದವನು.
ಕಡಲಿನ ನಾಡಿ ಮಿಡಿತ ಎಲ್ಲವನ್ನೂ ಚೆನ್ನಾಗಿಯೇ ಬಲ್ಲ ಶೇಕರಣ್ಣ ಬೆಳಿಗ್ಗೆ ಎಲ್ಲರಿಗಿಂತಲೂ ಮೊದಲೇ ಐದು ಗಂಟೆಯ ಒಳಗೆ,ದೋಣಿ ಏರಿ ಮೀನು ಹಿಡಿಯಲು ಹೋಗುತ್ತಿದ್ದ.
ವನಜಮ್ಮ ಶೇಖರಣ್ಣನಿಗಾಗಿ ಕಾಯುತ್ತ ದಡದಲ್ಲಿ ನಿಂತು ತಪಸ್ಸಿನಂತಹ ಪ್ರತೀಕ್ಷೆ ಮಾಡುತ್ತಿದ್ದಳು.
ಸುಮಾರು ಹತ್ತು ಗಂಟೆಯ ಒಳಗಾಗಿ ಶೇಖರಣ್ಣ ತನ್ನ ದೋಣಿಯಲ್ಲಿ ಬಲೆ ಹಾಕಿ ಹಿಡಿದ ಮೀನುಗಳನ್ನು ಪೇರಿಸಿಕೊಂಡು ದಡ ಸೇರುತ್ತಿದ್ದ.
ದಡದಲ್ಲಿ ನಿಂತು ಶೇಖರಣ್ಣನ ಪ್ರತೀಕ್ಷೆಯಲ್ಲಿಯೇ ಇರುತ್ತಿದ್ದ ವನಜಮ್ಮನಿಗೆ ಕಡಲಿನ ತುದಿಯಲ್ಲಿ ಶೇಖರಣ್ಣನ ದೋಣಿ ಕಂಡ ಕೂಡಲೇ ಅವಳ ಮುಖವರಳಿ ಬಿಡುತ್ತಿತ್ತು.
ಕೇವಲ ಮೀನು ಬಂತೆಂದು ಅಲ್ಲ.ತನ್ನ ಗಂಡ ಕೂಡ ಸುರಕ್ಷಿತವಾಗಿ ಹಿಂದಿರುಗಿ ಬಂದಿದ್ದಾನೆ ಎಂಬ ನೆಮ್ಮದಿ ಅವಳದ್ದು.
ಕೆಲವೊಮ್ಮೆ ಹೇರಳವಾಗಿ ಮೀನು ಸಿಕ್ಕರೆ,ಇನ್ನು ಕೆಲವೊಮ್ಮೆ ಏನೂ ಸಿಗುವುದಿಲ್ಲ.
ಆವಾಗಲೆಲ್ಲ ಬೇರೆ ದೋಣಿಯವರಿಂದ ಮೀನು ಖರೀದಿಸಿ ಮಾರಲು ಹೋಗುತ್ತಿದ್ದಳು ವನಜಮ್ಮ.ಈ ರೀತಿ ಮೀನು ಬೇರೆಯವರಿಂದ ಖರೀದಿಸಿ ಮಾರಿದರೆ,ತಾವೇ ಹಿಡಿದು ಮೀನನ್ನು ಮಾರುವುದಕ್ಕಿಂತಲೂ ಲಾಭ ಸ್ವಲ್ಪ ಕಡಿಮೆಯೇ, ಆದರೆ ಜೀವನ ಹೇಗೋ ಸಾಗುತ್ತಿತ್ತು.
#ಕ್ಲೈಮ್ಯಾಕ್ಸ್_2...
ವನಜಮ್ಮ ಶೇಖರಣ್ಣ ದಂಪತಿಗೆ ಮಕ್ಕಳಿರಲಿಲ್ಲ.
ಅವರಿಗೆ ಅವರೇ ಒಬ್ಬರಿಗೊಬ್ಬರು ಮಕ್ಕಳಾಗಿದ್ದರು.
ಮಕ್ಕಳಾಗಲಿ ಎಂದು ಎಲ್ಲಾ ಕಡೆ ಹರಕೆ ಹೊತ್ತಿದ್ದರು.
ಕೊನೆಗೂ ದೇವರ ದಯೆಯಿಂದ ಅವರಿಗೊಂದು ಒಂದು ಗಂಡು ಮಗು ಹುಟ್ಟಿಯೇ ಬಿಟ್ಟಿತು.ಅವನಿಗೆ ಆನಂದ ಎಂದು ಹೆಸರಿಟ್ಟರು.
ಶಾಲೆಯಲ್ಲಿ ಕಲಿಯುವುದರಲ್ಲಿಯೂ ಬಹಳ ಬುದ್ದಿವಂತನಾಗಿದ್ದ ಆನಂದ.ತಮ್ಮ ಮಗ ತಮ್ಮ ರೀತಿ ಆಗದೆ ಚೆನ್ನಾಗಿ ಕಲಿತು ಒಳ್ಳೆಯ ಉದ್ಯೋಗ ಹಿಡಿಯಬೇಕೆಂಬುವುದು ವನಜಮ್ಮನ ಆಸೆಯಾಗಿತ್ತು.
ವನಜಮ್ಮ ಅದಕ್ಕಾಗಿ ಒಂದೊಂದು ರೂಪಾಯಿಯನ್ನು ಕೂಡ ಬಹಳ ಜೋಪಾನವಾಗಿ ಕೂಡಿಟ್ಟು ಬಿಡುತ್ತಿದ್ದಳು.
ಎಲ್ಲವೂ ಸರಿಯಾಗಿಯೇ ಇತ್ತು.ಆದರೆ ಸುನಾಮಿ ಒಂದು ಬಂದು ಕಡಲ ದಂಡೆಗೆ ಭೀಕರವಾಗಿ ಅಪ್ಪಳಿಸುವವರೆಗೆ!
ಹಾಗೇ ಬಂದ ಸುನಾಮಿ ಅಷ್ಟೇ ವೇಗವಾಗಿ ಹಿಂದಿರುಗಿ ಕೂಡ ಹೋಗಿತ್ತು.
ಆದರೆ ಹಿಂದಿರುಗಿ ಹೋಗುವಾಗ ಮನೆಯಲ್ಲಿದ್ದ ವನಜಮ್ಮನನ್ನು ಆ ಭೀಕರ ಸುನಾಮಿ ಮನೆಯಿಂದಲೇ ನಾಪತ್ತೆ ಮಾಡಿ ಬಿಟ್ಟಿತ್ತು!!
ಆದರೆ ವನಜಮ್ಮ ನಿಜವಾಗಿಯೂ ಕಡಲು ಪಾಲು ಆಗಿದ್ದರು ಎಂದು ಆನಂದ ಆಗಲಿ,ಶೇಖರಣ್ಣ ಆಗಲಿ ಎಂದೂ ನಂಬಲು ತಯಾರಿರಲಿಲ್ಲ.ಏಕೆಂದರೆ ಎಷ್ಟೋ ದಿನಗಳ ನಂತರ ಹಲವರ ಮನೆಯಿಂದ ನಾಪತ್ತೆ ಆದವರು ಸಹ ಎಲ್ಲೆಲ್ಲೋ ಭೀಕರವಾಗಿ ಗಾಯಗೊಂಡು,ಇಲ್ಲವೇ ಕೈ ಕಾಲುಗಳನ್ನು ಕಳೆದುಕೊಂಡು ಪತ್ತೆಯಾಗಿದ್ದರು.ಕೆಲವರು ಶವವಾಗಿಯೂ ಸಹ ಸಿಕ್ಕಿದ್ದರು.
ಆದರೆ ವನಜಮ್ಮನದ್ದು ಶವವೂ ಕೂಡ ಸಿಕ್ಕಿರಲಿಲ್ಲ,ಕಡಲ ದಂಡೆಯಲ್ಲಿ ಈ ರೀತಿಯಾಗಿ ಸತ್ತು ಹೋದರೆ ಅವರ ಶವವನ್ನು ಕಡಲು ಕೂಡ ತನ್ನೊಡಲೊಳಗೆ ಬಹಳ ದಿನ ಇಟ್ಟುಕೊಳ್ಳುವುದಿಲ್ಲ.ಅದು ಮತ್ತೆ ದಡಕ್ಕೆ ಉಗುಳಿ ಬಿಡುತ್ತದೆ. ಆದರೆ ಆ ರೀತಿಯಾಗಿಯೂ ವನಜಮ್ಮನ ಶರೀರ ಪತ್ತೆಯಾಗಲಿಲ್ಲ!
ಹಾಗಾಗಿ ಆನಂದ ಮತ್ತು ಶೇಖರಣ್ಣನಿಗೆ ಅದೆನೋ ಆಸೆ, ಮುಗಿಯದ ನಿರೀಕ್ಷೆ.
ವನಜಮ್ಮ ಎಲ್ಲೋ ಇನ್ನೂ ಜೀವಂತವಾಗಿಯೇ ಇದ್ದಾಳೆ ಎಂದೇ ಅವರಿಬ್ಬರು ಬಲವಾಗಿ ನಂಬಿದ್ದರು.
ಹಲವಾರು ವರ್ಷಗಳು ಒಂದರ ನಂತರ ಒಂದು ಹಾಗೇ ಉರುಳಿ ಹೋದವು.ಆನಂದ ಓದಿ ಡಿಗ್ರಿಯನ್ನು ಸಹ ಮುಗಿಸಿದ ಮತ್ತು ಒಂದೊಳ್ಳೆಯ ಕೆಲಸವನ್ನು ಕೂಡ ಗಿಟ್ಟಿಸಿಕೊಂಡ.
ಮನೆಯಲ್ಲಿಯೇ ಇದ್ದರೂ,ದೋಣಿಯಲ್ಲಿ ಕಡಲಿನ ನಡುವಲ್ಲಿಯೇ ಇದ್ದರೂ ಶೇಖರಣ್ಣನಿಗೆ ಸದಾ ವನಜಮ್ಮನದ್ದೇ ಧ್ಯಾನ.ನನ್ನ ವನಜ ಒಂದು ದಿನ ಬಂದೇ ಬರುತ್ತಾಳೆ ಎಂದು ನಂಬಿದ್ದ ಶೇಖರಣ್ಣ.
ಒಂದು ದಿನ ಆನಂದ ನಗರದ ಸರಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಮಾಡಲು ಹೋಗಿದ್ದ.ಆಗ ಅಲ್ಲೇ ಯಾರೋ ಒಬ್ಬರು ವಾರಸುದಾರರಿಲ್ಲದ ಮೃತಶರೀರದ ಬಗ್ಗೆ ವಿಚಾರಿಸಲು ವೈದ್ಯರ ಬಳಿಗೆ ಬಂದಿದ್ದರು.
ಅದನ್ನು ಕಂಡು ಆನಂದನಿಗೆ ತನ್ನ ತಾಯಿ ವನಜಮ್ಮನ ನೆನಪಾಯಿತು.ಕೂಡಲೇ ಹೋಗಿ ಆನಂದ ಕೂಡ ಆ ವೈದ್ಯರ ಬಳಿ ತನ್ನ ತಾಯಿಯ ವಿಷಯವನ್ನು ಹೇಳಿದ.
ಅದನ್ನು ಕೇಳಿ ಆ ವೈದ್ಯರು ಒಬ್ಬ ಆಸ್ಪತ್ರೆಯ ಸಹಾಯಕ ಸಿಬ್ಬಂದಿಯನ್ನು ಕರೆದು ಅವನಿಗೆ ಆನಂದನಿಗೆ ಸಹಾಯ ಮಾಡಲು ಆದೇಶಿಸಿದರು.
ಆ ಸಹಾಯಕ ಆನಂದನನ್ನು ಶವಗಾರಕ್ಕೆ ಕರೆದುಕೊಂಡು ಹೋದ.
ಅಲ್ಲಿ ಯಾರೂ ವಾರಸುದಾರರಿಲ್ಲದ ಹಲವಾರು ಶವಗಳಿದ್ದವು.
ಆನಂದನಿಗೆ ನಿಧಾನವಾಗಿ ಭಯ ಹೆಚ್ಚಾಗತೊಡಗಿತು.. ದೇವರೇ ಇದರಲ್ಲಿ ಯಾರೂ ಕೂಡ ನನ್ನ ತಾಯಿ ಆಗದಿರಲಿ ಎಂದು ಮನಸ್ಸಿನಲ್ಲಿಯೇ ಪ್ರಾರ್ಥಿಸಿದ.
ಆಸ್ಪತ್ರೆಯ ಸಹಾಯಕ ಆಸ್ಪತ್ರೆಯ ಶವಾಗಾರದ ಶೀತಲೀಕರಣ ಘಟಕದಲ್ಲಿದ್ದ ಒಂದೊಂದೇ ಶವದ ಮೇಲಿದ್ದ ಬಟ್ಟೆಯನ್ನು ತೆಗೆದು ಆನಂದನಿಗೆ ತೋರಿಸುತ್ತಾ ಹೋದ..
ಆನಂದನ ಹೃದಯ ಬಡಿತ ಜಾಸ್ತಿ ಆಗುತ್ತಾ ಹೋಯಿತು..ಆದರೆ ಯಾವ ಶರೀರವೂ ವನಜಮ್ಮನದ್ದು ಆಗಿರಲಿಲ್ಲ..
ಕೊನೆಗೆ ಸಹಾಯಕ ಅಲ್ಲಿದ್ದ ಕೊನೆಯ ಶರೀರದ ಮುಖವನ್ನು ಸಹ ಆನಂದನಿಗೆ ತೋರಿಸಿದ.
ಅದೂ ಕೂಡ ವನಜಮ್ಮನದ್ದು ಆಗಿರಲಿಲ್ಲ.
ಆನಂದನಿಗೆ ಅವನಿಗೆ ಹೋದ ಜೀವ ಹಿಂದಿರುಗಿ ಬಂದಂತಾಗಿತ್ತು.ಮನಸ್ಸಿನಲ್ಲಿಯೇ ದೇವರಿಗೆ ಒಂದು ಥ್ಯಾಂಕ್ಸ್ ಹೇಳಿದ.ಏಕೆಂದರೆ ಅವನು ಇನ್ನೂ ನಂಬಿದ್ದ ನನ್ನ ಅಮ್ಮ ಎಲ್ಲೋ ಒಂದು ಕಡೆ ಖಂಡಿತವಾಗಿಯೂ ಜೀವಂತವಾಗಿಯೇ ಇದ್ದಾಳೆ ಎಂದು. ಆ ನಂಬಿಕೆಗೆ ಘಾಸಿಯಾಗಲು ಅವನಿಗೆ ಇಷ್ಟವಿರಲಿಲ್ಲ.
ನಂತರ ಸಹಾಯಕ ಶವಾಗಾರದ ಬಾಗಿಲು ಮುಚ್ಚಿ,ಆನಂದನನ್ನು ಮತ್ತೆ ವೈದ್ಯರ ಬಳಿಗೆ ಕರೆದುಕೊಂಡು ಬಂದ.
ಆನಂದ ವೈದ್ಯರ ಈ ಸಹಾಯಕಕ್ಕಾಗಿ ಅವರಿಗೆ ಥ್ಯಾಂಕ್ಸ್ ಹೇಳಿದ... ಮತ್ತೆ ತನ್ನ ತಾಯಿಯ ಶರೀರ ಇಲ್ಲಿಲ್ಲ .. ಎಂದು ಅವರಿಗೆ ತಿಳಿಸಿದ.
ಅದಕ್ಕೆ ವೈದ್ಯರು ಆನಂದನಿಗೆ ಹೇಳಿದರು.. ನೀವು ಒಂದು ಕೆಲಸ ಮಾಡಿ..ಶವಗಾರದ ಪಕ್ಕದ ಕೋಣಿಯಲ್ಲಿಯೇ ಒಂದು ದಾಖಲೀಕರಣದ ಕೊಠಡಿ ಇದೆ. ಅಲ್ಲಿ ಎಲ್ಲಾ ದಾಖಲಾತಿಗಳು ಇರುತ್ತವೆ. ಅಲ್ಲಿ ಒಮ್ಮೆ ಚೆಕ್ ಮಾಡಿ. ಏಕೆಂದರೆ ಕೆಲವೊಮ್ಮೆ ಯಾರೂ ಕೂಡ ಶರೀರವನ್ನು ತೆಗೆದುಕೊಂಡು ಹೋಗಲು ಬರದಿದ್ದರೆ ನಾವು ವಾರಸುದಾರರಿಲ್ಲದ ಆ ಶರೀರಗಳನ್ನು ಸುಟ್ಟು ಬಿಡುತ್ತೇವೆ,ಒಮ್ಮೆ ಖಚಿತ ಪಡಿಸಲು ಅದನ್ನು ಕೂಡ ಒಮ್ಮೆ ನೋಡಿ ಬಿಡಿ. ನಿಮಗೂ ಒಂದು ನೆಮ್ಮದಿ ಇರುತ್ತೆ... ಅಂತ ಹೇಳಿ ಬಿಟ್ಟರು ವೈದ್ಯರು.
ನಂತರ ಪುನಃ ಆ ಸಹಾಯಕನಿಗೆ ಆನಂದನನ್ನು ಕರೆದುಕೊಂಡು ಹೋಗುವಂತೆ ವೈದ್ಯರು ಹೇಳಿದರು.
ಆನಂದನ ಹೃದಯದ ಬಡಿತ ಮತ್ತಷ್ಟು ಹೆಚ್ಚಾಯಿತು.. ದೇವರೇ ಇದರಲ್ಲೂ ನನ್ನ ತಾಯಿಯ ಹೆಸರಿಲ್ಲದೇ ಇರಲಿ ಎಂದು ಮನಸ್ಸಿನಲ್ಲಿಯೇ ಬೇಡಿಕೊಂಡ.
ಇಬ್ಬರೂ ವೈದ್ಯರು ಹೇಳಿದ ಕೊಠಡಿ ತಲುಪಿದರು.ದಾಖಲೆ ಪುಸ್ತಕಗಳನ್ನು ತಡಕಾಡಿದರು.
ಸಹಾಯಕ ಒಂದೊಂದೇ ವರ್ಷದ ಪುಸ್ತಕಗಳ ಪೇಜ್ ಗಳನ್ನು ತಿರುಗಿಸುತ್ತಾ ಹೋದ..
ಇಲ್ಲ.. ಯಾವುದರಲ್ಲೂ ವನಜಮ್ಮನ ಪೋಟೋವಾಗಲಿ,ಯಾವುದೇ ವಿವರವಾಗಲಿ ಅಲ್ಲಿರಲಿಲ್ಲ.
ಯಾವ ವರ್ಷದ ಪುಸ್ತಕದಲ್ಲೂ ವಿವರ ಸಿಗದೇ ಇದ್ದಾಗ ಕೊನೆಗೆ ಸುನಾಮಿ ಘಟಿಸಿದ ವರ್ಷದ ಪುಸ್ತಕವನ್ನೇ ಹೊರ ತೆಗೆದ ಸಹಾಯಕ.
ಆನಂದ ಹೃದಯದ ಬಡಿತ ಮತ್ತಷ್ಟು ಹೆಚ್ಚಾಗುತ್ತಲೇ ಹೋಯಿತು.
ಆ ಪುಸ್ತಕದ ಪುಟಗಳನ್ನು ತಿರುಗಿಸುತ್ತಾ ಹೋದಂತೆ ಒಂದು ಪೇಜಿನಲ್ಲಿ ದೊಡ್ಡದಾಗಿಯೇ ಅಂಟಿಸಿತ್ತು... ವನಜಮ್ಮನ ಒಂದು ಸ್ಪಷ್ಟವಾದ ಭಾವಚಿತ್ರ..!!
ಅದನ್ನು ಖಂಡು ಆನಂದನ ಹೃದಯವೇ ಒಡೆದು ಹೋಯಿತು ..!
ಅಲ್ಲೇ ಕುಸಿದು ಬಿದ್ದ..
ಬಿಕ್ಕಿ ಬಿಕ್ಕಿ ಅತ್ತ ಆನಂದ...!
ದುಃಖದಿಂದ, ಕ್ರೋಧದಿಂದ ಸಹಾಯಕನನ್ನೇ ಕೇಳಿದ... ಯಾಕೆ.. ಯಾಕೆ.. ನೀವು ನಮಗೆ ಯಾರಿಗೂ ಈ ಮಾಹಿತಿಯೇ ನೀಡಲಿಲ್ಲ?!
ಸಹಾಯಕ ಹೇಳಿದ.. ನಾವು ಪೇಪರ್ ಗಳಲ್ಲಿಯೇ ಎಲ್ಲಾ ವಿವರಗಳನ್ನು ಹಾಕಿರುತ್ತೆವೆ ಸಾರ್. ಆದರೆ ಯಾರೂ ವಾರಸುದಾರರು ಬರದಿದ್ದಾಗ.. ಕೊನೆಗೆ ನಾವೇ ಶವ ಸಂಸ್ಕಾರ ಮಾಡಿ ಬಿಡುತ್ತೇವೆ..!
ಕಷ್ಟ ಪಟ್ಟು ಮನೆಗೆ ಹಿಂದಿರುಗಿದ ಆನಂದ ಆ ದಿನದಿಂದ ಜೀವನದಲ್ಲಿ ತನ್ನ ತಾಯಿಯ ಆಗಮನದ ಬಗ್ಗೆ ಯಾವುದೇ ನಿರೀಕ್ಷೆಗಳು ಇರಲಿಲ್ಲ!
ಆದರೆ ಏನೂ ಗೊತ್ತಿಲ್ಲದ... ಶೇಖರಣ್ಣ ಇನ್ನೂ ತನ್ನ ವನಜಮ್ಮನಿಗಾಗಿ ಪ್ರತೀ ದಿನವೂ,ಪ್ರತೀ ಕ್ಷಣವೂ ಕಾಯುತ್ತಲೇ ಇದ್ದ!!
ಆನಂದ ಶೇಖರಣ್ಣನಿಗೆ ವನಜಮ್ಮ ಇನ್ನಿಲ್ಲ ಎಂಬ ವಿಷಯ ಹೇಳಲೇ ಇಲ್ಲ..ಶೇಖರಣ್ಣನಿಗೆ ನೋವು ನೀಡಲು ಅವನಿಗೆ ಮನಸ್ಸಾಗಲಿಲ್ಲ...!
ಒಂದು ದಿನ ಶೇಖರಣ್ಣ ತುಂಬಾ ಮೀನು ಹಿಡಿದು ದಡಕ್ಕೆ ತಂದು ಹಾಕಿದ್ದ.
ಬಲೆಯಿಂದ ಮೀನು ಬಿಡಿಸುವಾಗ ಆನಂದನಿಗೆ ಶೇಖರಣ್ಣ ಹೇಳಿದ.. ವನಜ ಇದ್ದಿದ್ದರೆ ಇಷ್ಟು ಮೀನುಗಳನ್ನು ನೋಡಿ ಎಷ್ಟು ಖುಷಿ ಪಡುತ್ತಿದ್ದಳೋ ಏನೋ. ಆದರೂ ಕೂಡ ನನಗೆ ನಂಬಿಕೆ ಇದೆ ಆನಂದ,ಅವಳು ಒಂದಲ್ಲ ಒಂದು ದಿನ ಖಂಡಿತವಾಗಿಯೂ ಹಿಂದಿರುಗಿ ಬಂದೇ ಬರುತ್ತಾಳೆ ನೋಡು,ಅವಳು ಈ ಕಡಲಿಗೆ ಎಲ್ಲ ಅಷ್ಟು ಸುಲಭವಾಗಿ ಸೋಲುವವಳಲ್ಲ. ಎಲ್ಲಾದರೂ ಒಂದು ಕಡೆ ಈಗಲೂ ಜೀವಂತವಾಗಿಯೇ ಇರ್ತಾಳೆ ಬಿಡು..ಗೊತ್ತು ಬಿಡು ನಿನ್ನದು ಕೂಡ ಇದೆ ನಂಬಿಕೆ ಅಲಾ ಆನಂದ..ಎಂದು ಹೇಳಿ ಬಿಟ್ಟಿದ್ದ ಶೇಖರಣ್ಣ!
ಶೇಖರಣ್ಣನ ಮಾತಿಗೆ ಏನು ಹೇಳಬೇಕೆಂದು ಗೊತ್ತಾಗದೇ ಆನಂದ... ಕಡಲನ್ನೇ ದಿಟ್ಟಿಸಿ ನೋಡುತ್ತಾ ಹಾಗೇ ಉಳಿದು ಬಿಟ್ಟ!
ಶೇಖರಣ್ಣ ಮಾತ್ರ ಶ್ರದ್ಧೆಯಿಂದ ಬಲೆಯಿಂದ ಮೀನುಗಳನ್ನು ಒಂದೊಂದಾಗಿ ಬಿಡಿಸುತ್ತಲೇ ಇದ್ದ ..!!
ಕಡಲು ತನಗೆಲ್ಲವೂ ಗೊತ್ತು ಎಂದು ಭೋರ್ಗರೆದು ಸಾರಿ ಸಾರಿ ಶೇಖರಣ್ಣನಿಗೆ ಹೇಳುತ್ತಲೇ ಇತ್ತು..!
ಆದರೆ ಅದು ಶೇಖರಣ್ಣನಿಗೆ ಅರ್ಥವಾಗುವಂತಿರಲ್ಲಿಲ್ಲ ಅಷ್ಟೇ.!!
ಏಕೆಂದರೆ ವನಜಮ್ಮ ನಿರೀಕ್ಷೆಯಲ್ಲಿದ್ದ ಅವರಿಗೆ.. ತಾನು ಮೀನು ಹಿಡಿಯುವುದು,ಅದನ್ನು ವನಜಮ್ಮ ಮಾರುವುದು ಬಿಟ್ಟರೆ ಬೇರೆ ಯಾವ ವಿಷಯದಲ್ಲೂ ಆಸಕ್ತಿ ಇರಲಿಲ್ಲ.
ಶೇಖರಣ್ಣ ಮೀನುಗಳನ್ನು ದಡದಿಂದ ತೆಗೆದುಕೊಂಡು ಹೋದರೂ.. ಆನಂದ ಮಾತ್ರ ಯಾವುದೇ ಆನಂದವಿಲ್ಲದೇ ಕಡಲನ್ನೇ ಮತ್ತಷ್ಟು ಗಾಢವಾಗಿ ದಿಟ್ಟಿಸಿ ನೋಡುತ್ತಾ ಅಲ್ಲೇ ಉಳಿದು ಬಿಟ್ಟ!
ಅವನೊಳಗೂ ಮೌನವಿತ್ತು.. ಕಡಲೊಳಗೂ ಮೌನವಿತ್ತು..
ಆದರೆ ಶೇಖರಣ್ಣನ ಬಾಳಿನಲ್ಲಿ ಕೇವಲ ವನಜಮ್ಮನ ನಿರೀಕ್ಷೆ ಇತ್ತು!!
.....................................................................................
#ಇಷ್ಟೇ....!
ab pacchu
moodubidire

Comments
Post a Comment