ಪ್ರತೀಕ್ಷೆ (ಕ್ಲೈಮ್ಯಾಕ್ಸ್ - 3)

 



ಕಡಲಿಗೊಂದು ಸದ್ದು ಇದೆ.ಅದರ ಭೋರ್ಗರೆವ ಅಲೆಗಳಲ್ಲಿ ಎಲ್ಲರಿಗೂ ಸ್ಪಷ್ಟವಾಗಿ ಕೇಳಿಸುವ ಅಬ್ಬರದ ಶಬ್ಧವಿದೆ. 


ಆದರೆ ಕಡಲಿಗೊಂದು ಮೌನವೂ ಕೂಡ ಇದೆ.ಅದರ ಹಠಮಾರಿ ಅಲೆಗಳ ಭೋರ್ಗರೆತದ ಆ ಶಬ್ಧದೊಳಗೆಯೇ ಅದು ಅಡಗಿಕೊಂಡಿದೆ. 


ಕಡಲಿನೆದುರು ನಿಂತಾಗ ನಾವು ಕಿವಿ ಮುಚ್ಚಬೇಕು,ಮನಸ್ಸು, ಹೃದಯ ಎರಡೂ ತೆರೆದು ನಿಲ್ಲಬೇಕು.. ಆಗ ಆ ಮೌನ ನಮ್ಮದಾಗುತ್ತದೆ.


ಆ ಮೌನದಲ್ಲಿ ಕೆಲವರಿಗೆ ದಿವ್ಯವಾದ ನೆಮ್ಮದಿ ಸಿಗುತ್ತದೆ,ಇನ್ನು ಕೆಲವರಿಗೆ  ಕೇವಲ ಅವರವರ ಕಥೆಯಷ್ಟೇ  ನೆನಪಾಗುತ್ತದೆ..! 


ಹುಡುಕಿದರೆ ಕಡಲಿನ ಮೌನದಲ್ಲಿ ಹಾಗೂ ಅದರ ದಡದ ಮರಳಿನಲ್ಲಿ ಕಡಲಿನ ಮಕ್ಕಳದ್ದೊಂದು ಕಥೆ ಯಾವಾಗಲೂ ಹುದುಗಿರುತ್ತದೆ.. 


ಕಡಲಿನ ತೀರದಲ್ಲಿಯೇ ದಿನನಿತ್ಯ ಉಸಿರಾಡುವ ವನಜಮ್ಮ ಗಟ್ಟಿಗಿತ್ತಿ ಹೆಂಗಸು.ಕಡಲಿನ ಮಗಳು ಎಂದರೆ ತಪ್ಪಾಗಲಾರದು.


ಅವಳು ಕಡಲನ್ನು ಚೆನ್ನಾಗಿ ಬಲ್ಲಳು.ಕಡಲಿನ ಕಾಲಡಿಯಲ್ಲಿ ಆಡಿ ಬೆಳೆದು ದೊಡ್ಡವಳಾದ  ವನಜಮ್ಮನದ್ದು ಮೀನು ಮಾರುವುದೇ ದಿನ ನಿತ್ಯದ ಕಾಯಕ.


ಅವಳ ಗಂಡ ಶೇಕರಣ್ಣ ತನ್ನ ಹೆಂಡತಿಯೇ ತನ್ನ ಜೀವನದ ಸರ್ವಸ್ವ ಎಂದು ನಂಬಿ ಬದುಕ ಹುಟ್ಟು ಬಹಳ ಶ್ರದ್ಧೆಯಿಂದ ಹಾಕಿದವನು.


ಕಡಲಿನ ನಾಡಿ ಮಿಡಿತ ಎಲ್ಲವನ್ನೂ ಚೆನ್ನಾಗಿಯೇ ಬಲ್ಲ ಶೇಕರಣ್ಣ ಬೆಳಿಗ್ಗೆ ಎಲ್ಲರಿಗಿಂತಲೂ ಮೊದಲೇ ಐದು ಗಂಟೆಯ ಒಳಗೆ,ದೋಣಿ ಏರಿ ಮೀನು ಹಿಡಿಯಲು ಹೋಗುತ್ತಿದ್ದ.


ವನಜಮ್ಮ ಶೇಖರಣ್ಣನಿಗಾಗಿ ಕಾಯುತ್ತ ದಡದಲ್ಲಿ ನಿಂತು ತಪಸ್ಸಿನಂತಹ ಪ್ರತೀಕ್ಷೆ ಮಾಡುತ್ತಿದ್ದಳು. 


ಸುಮಾರು ಹತ್ತು ಗಂಟೆಯ ಒಳಗಾಗಿ ಶೇಖರಣ್ಣ ಬಲೆ ಹಾಕಿ ಹಿಡಿದ ಮೀನುಗಳನ್ನು ತನ್ನ ದೋಣಿಯಲ್ಲಿ ಪೇರಿಸಿಕೊಂಡು ದಡ ಸೇರುತ್ತಿದ್ದ.


ದಡದಲ್ಲಿ ನಿಂತು ಶೇಖರಣ್ಣನ ಪ್ರತೀಕ್ಷೆಯಲ್ಲಿಯೇ ಇರುತ್ತಿದ್ದ ವನಜಮ್ಮನಿಗೆ  ಕಡಲಿನ ತುದಿಯಲ್ಲಿ ಶೇಖರಣ್ಣನ ದೋಣಿ ಕಂಡ ಕೂಡಲೇ ಮುಖ ಇಷ್ಟಗಲ ಅರಳಿ ಬಿಡುತ್ತಿತ್ತು.


ಕೇವಲ ಮೀನು ಬಂತೆಂಬ ಕಾರಣಕ್ಕಾಗಿ ಅಲ್ಲ,ತನ್ನ ಗಂಡ ಕೂಡ ಸುರಕ್ಷಿತವಾಗಿ ಹಿಂದಿರುಗಿ ಬಂದಿದ್ದಾನೆ ಎಂಬ ವಿವರಿಸಲಾಗದ ನೆಮ್ಮದಿ ಅವಳದ್ದು.


ಏಕೆಂದರೆ ಕಡಲಿನಲ್ಲಿ ಪಯಣ ಟಾರು ರೋಡಿನಲ್ಲಿ ಬಂಡಿ ಯಾತ್ರೆಯಂತಲ್ಲ,ದಿನನಿತ್ಯವೂ ಸಾವು ಬದುಕಿನ ಹೋರಾಟ, ಹೊಯ್ದಾಟ ಅದು,ಕಡಲನ್ನು ಎಂದಿಗೂ ನಂಬುವಂತಿಲ್ಲ.ಅದು ಎಂತವರನ್ನೂ ಯಾಮಾರಿಸಿ ಬಿಡುತ್ತದೆ.


ಕೆಲವೊಮ್ಮೆ ಹೇರಳವಾಗಿ ಮೀನು ಸಿಕ್ಕರೆ,ಇನ್ನು ಕೆಲವೊಮ್ಮೆ  ಏನೂ ಸಿಗುವುದಿಲ್ಲ. 


ಆವಾಗಲೆಲ್ಲ ಬೇರೆ ದೋಣಿಯವರಿಂದ ಮೀನು ಖರೀದಿಸಿ ಮಾರಲು ಹೋಗುತ್ತಿದ್ದಳು ವನಜಮ್ಮ.ಈ ರೀತಿ ಮೀನು ಬೇರೆಯವರಿಂದ ಖರೀದಿಸಿ ಮಾರಿದರೆ,ತಾವೇ ಹಿಡಿದು  ಮೀನನ್ನು ಮಾರುವುದಕ್ಕಿಂತಲೂ ಲಾಭ ಸ್ವಲ್ಪ ಕಡಿಮೆಯೇ, ಆದರೆ ಜೀವನ ಹೇಗೋ ಸಾಗುತ್ತಿತ್ತು.


ಶೇಖರಣ್ಣ ಕಷ್ಟ ಪಟ್ಟು ಮೀನು ಹಿಡಿದು ತರುತಿದ್ದ... ವನಜಮ್ಮ ಅದನ್ನು ಶ್ರಮ ವಹಿಸಿ ಮಾರ್ಕೆಟ್ ನಲ್ಲಿ ಮಾರಿ ಅವರಿಬ್ಬರಿಗೊಂದು ಬೆಚ್ಚನೆಯ ಬದುಕು ಕಟ್ಟಿಕೊಂಡಿದ್ದಳು. 


ಶೇಖರಣ್ಣ ದೊಡ್ಡ ದೊಡ್ಡ ಮೀನು ಹಿಡಿದು ತಂದ ದಿನ ವನಜಮ್ಮ ಕೈ ಚೀಲ,ನೋಟುಗಳಿಂದ ಭರ್ತಿ ಆಗಿ ತುಂಬಿತುಳುಕುತ್ತಿದ್ದವು.


#ಕ್ಲೈಮ್ಯಾಕ್ಸ್_3.. 


ವನಜಮ್ಮ ಶೇಖರಣ್ಣ ದಂಪತಿಗೆ ಮಕ್ಕಳಿರಲಿಲ್ಲ. 


ಅವರಿಗೆ ಅವರೇ ಒಬ್ಬರಿಗೊಬ್ಬರು ಮಕ್ಕಳಾಗಿ ಬಿಟ್ಟಿದ್ದರು.


ಮಕ್ಕಳಾಗಲಿ ಎಂದು ಎಲ್ಲಾ ಕಡೆ ಹರಕೆ ಕೂಡ ಹೊತ್ತಿದ್ದರು.


ಕೊನೆಯ ಪ್ರಯತ್ನ ಎಂಬಂತೆ ಮಕ್ಕಳಾಗಲಿ ಎಂದು ಶೇಖರಣ್ಣ ಅಯ್ಯಪ್ಪನ ವ್ರತ ಕೂಡ ನಿಷ್ಠೆಯಿಂದ ಮಾಡಿ ಶಬರಿ ಮಲೆಗೂ ಕೂಡ ಹಲವು ಸಲ  ಹೋಗಿ ಬಂದರು.


ಕೊನೆಗೂ ಅಯ್ಯಪ್ಪ ಅವರ ಪ್ರಾರ್ಥನೆಗೆ ಕರಗಿದ.ಹತ್ತು ವರ್ಷಗಳ ನಂತರ ಒಂದು ಕುಡಿ,ವನಜಮ್ಮ ಹೊಟ್ಟೆಯಲ್ಲಿ ಅರಳಿಯೇ ಬಿಟ್ಟಿತು.


ಭಗವಂತ ಮಗುವನ್ನು ಏನೋ ಕೊಟ್ಟ.ಆದರೆ ಆ ಮಗುವಿನಿಂದ ಮಾತನ್ನೇ  ಕಿತ್ತುಕೊಂಡು ಬಿಟ್ಟಿದ್ದ..! 


ಆದರೆ ವನಜಮ್ಮ ದಂಪತಿಗಳು ಅದಕ್ಕೆ ಏನೂ ಬೇಸರ ಪಡಲಿಲ್ಲ..


ಅಯ್ಯಪ್ಪ ಕೊಟ್ಟದ್ದು.. ಇದು ಅವನ ಪ್ರಸಾದ ಎಂದು ಬಹು  ಪ್ರಿತಿಯಿಂದಲೇ ಅವನನ್ನು ಸಾಕಿದರು.


ಅವನಿಗೆ ಆನಂದ ಎಂದೇ ಹೆಸರಿಟ್ಟರು.ಈ ರೀತಿಯಾಗಿ ಆ ದಿನದಿಂದ ಅವರಿಬ್ಬರು ಬಾಳಿನಲ್ಲಿ ಸದಾ ಆನಂದ ಪಡಲು ಅವರಿಗೆ ಸಕಾರಣವೊಂದು ದೊರೆತಿತ್ತು. 


ಆನಂದ ಶಾಲೆಗೆ ಕೂಡ ಹೋಗಲಿಲ್ಲ.ಅಮ್ಮನೊಂದಿಗೆ ಮೀನು ಮಾರಲು ಜೊತೆಯಾದ.ವನಜಮ್ಮನಿಗೂ ಅವನು ಅವಳೊಂದಿಗೆ ಇದ್ದರೆ ಏನೋ ಒಂದು ಸಮಾಧಾನ.ಎಷ್ಟಾದರೂ ಅವಳ ಮುದ್ದಿನ ಕರುಳ ಕುಡಿ ಅಲ್ಲವೇ. 


ಒಂದು ದಿನ ಮಳೆಗಾಲದ ಮುಂಜಾನೆ ಎಂದಿನಂತೆ ಶೇಖರಣ್ಣ ದೋಣಿ ಏರಿ ಕಡಲಿಗೆ ಹೋದ. ಆ ದಿನ ಅಲೆಗಳ ಅಬ್ಬರ ಲೆಕ್ಕಕ್ಕಿಂತ ಜಾಸ್ತಿ ಇತ್ತು,ಮತ್ತು ದೋಣಿ... ಕಡಲ ನಡುವಲ್ಲಿ ಹಾಗೇ ಮಗುಚಿ ಬಿದ್ದಿತ್ತು..!!! 


ದಡದಲ್ಲಿ ನಿಂತು ವನಜಮ್ಮ ಶೇಖರಣ್ಣನಿಗಾಗಿ ಕಾದಿದ್ದಳು!


ಆಗೊಮ್ಮೆ ಈಗೊಮ್ಮೆ ಕಡಲ ತುದಿಯನ್ನೇ ನೋಡುತ್ತಿದ್ದಳು.ಗಂಟೆ ಹತ್ತು ಕಳೆಯಿತು... ಹನ್ನೆರಡು ಆಯಿತು, ಮಧ್ಯಾಹ್ನ ಹೋಗಿ ಸಂಜೆ ಆಯಿತು.ರಾತ್ರಿ ಕಳೆದು ಮರುದಿನ ಸೂರ್ಯ ಉದಯಿಸಿದರೂ ಶೇಖರಣ್ಣ  ಬರಲೇ ಇಲ್ಲ..!! 


ತನ್ನ ಗಂಡನಿಗೆ ಏನಾಗಿರಬಹುದೆಂಬ ಸತ್ಯದ ಅರಿವಿದ್ದರೂ ವನಜಮ್ಮನ ಮನಸ್ಸು ಆ ಕಹಿ ಸತ್ಯ ಒಪ್ಪಲು ಸಿದ್ದವಾಗಿರಲಿಲ್ಲ.. 


ಮಾತು ಬರದಿದ್ದರೂ ಮಗ ಆನಂದ ಪದೇ ಪದೇ ಬಾಯಿ ಸನ್ನೆಯಲ್ಲಿ,ಕೈ ಸನ್ನೆಯಲ್ಲಿ ವನಜಮ್ಮನ ಕೈ ಎಳೆದು.. "ಅಪ್ಪ ಎಲ್ಲಿ ಅಮ್ಮ.." ಎಂದು ಪದೇ ಪದೇ ಕೇಳುತ್ತಿದ್ದ..! 


ಅಪ್ಪ ಬಹಳ ದೂರ ಮೀನು ಹಿಡಿಯಲು ಹೋಗಿದ್ದಾರೆ ಮಗ.. ಬರಲು ಇನ್ನಷ್ಟು ದಿನ ಹಿಡಿಯುತ್ತೆ.. ಎಂದು ಆನಂದನನ್ನು ಸಮಾಧಾನ ಮಾಡಿದಳು ವನಜಮ್ಮ!


ಎಷ್ಟಾದರೂ ಅವಳು ಕಡಲಿನ ಮಗಳು,ಮನಸ್ಸು ಗಟ್ಟಿಮಾಡಿಕೊಂಡಳು,ಕೊನೆಗೂ ಸತ್ಯವನ್ನು ಒಪ್ಪಿಕೊಂಡು ಬದುಕು ಮತ್ತೆ ಕಟ್ಟಿಕೊಳ್ಳುವ ಪ್ರಯತ್ನ ಮಾಡಿದಳು. 


ಬೇರೆ ದೋಣಿಯವರಿಂದ ಮೀನು ಖರೀದಿಸಿ ಮತ್ತೆ ಮೀನು ಮಾರಲು ಶುರು ಮಾಡಿದಳು ವನಜಮ್ಮ 


ಮೀನು ಮಾರುವಾಗಲೆಲ್ಲ ಪಕ್ಕದಲ್ಲೆ ಇದ್ದ ಆನಂದ ಕೇಳುತ್ತಲೇ ಇದ್ದ.. "ಅಮ್ಮ.. ಅಪ್ಪ ಎಲ್ಲಿ ಅಮ್ಮ.." ಎಂದು.. 


ಪ್ರತೀ ಸಲ ಕೇಳಿದಾಗಲೂ ವನಜಮ್ಮ... ಅಪ್ಪ ನಾಳೆ ಬರುತ್ತಾರೆ ಆನಂದ.. ಈ ಬಾರಿ ತುಂಬಾ ಮೀನು ತರುತ್ತಾರೆ ಎಂದೇ ಹೇಳುತ್ತಿದ್ದಳು. 


ಕಣ್ಣೀರು ಒತ್ತರಿಸಿಕೊಂಡು ಬಂದರೂ ವನಜಮ್ಮ ಎಂದು ತನ್ನ ಮಗನ ಮುಂದೆಯಾಗಲಿ ಯಾರ ಮುಂದೆ ಆಗಲಿ ಅತ್ತವಳಲ್ಲ..ಯಾರ ಮುಂದೆ ತನ್ನ ಕಷ್ಟ ಕೂಡ ತೊಡಿಕೊಂಡವಳಲ್ಲ.ಬದುಕೇ ಅವಳನ್ನು ಮತ್ತಷ್ಟು ಗಟ್ಟಿ ಮಾಡಿತು..ಅವಳ ಮನಸ್ಸು ಅಲೆಗಳ ಹೊಡೆತಗಳಿಗೆ ಜಗ್ಗದ  ಕಡಲಿನ ನಡುವಿನ ನಿಶ್ಚಲ ಕಲ್ಲುಬಂಡೆಯಂತಾಗಿತ್ತು.


ಆನಂದ ಒಂದು ದಿನ ಅಮ್ಮನ ಬಳಿ ಕೈ ಸನ್ನೆ ಮಾಡಿ.. ನಾನು ಮಾಲೆ ಹಾಕಿ ಅಪ್ಪನಂತೆ ಶಬರಿಮಲೆಗೆ ಹೋಗಿ ಬರಲೇ ಅಮ್ಮ.. ಎಂದು ಮುಗ್ಧನಾಗಿ ಕೇಳಿ ಬಿಟ್ಟ. 


ವನಜಮ್ಮ ಏನೂ ಯೋಚಿಸದೇ.. ಆಯಿತು ಮಗ ಹೋಗಿ ಬಾ.. ದೇವರು ನಿನಗೆ ಒಳ್ಳೆಯದು ಮಾಡಲಿ.. ಆ ಅಯ್ಯಪ್ಪ ಆದರೂ ನಿನಗೆ ಮಾತು ಬರುವಂತೆ ಮಾಡಲಿ.. ಎಂದು ಅವನಿಗೆ ವ್ರತಾಚರಣೆ ಮಾಡಲು ಅಯ್ಯಪ್ಪನ ಶಿಬಿರಕ್ಕೆ ಕಳುಹಿಸಿ ಕೊಟ್ಟರು ವನಜಮ್ಮ. 


ಇರುಮುಡಿ ಹಿಡಿದುಕೊಂಡು ತನ್ನ ತಾಯಿಯ ಕಾಲಿಗೆ ಅಡ್ಡ ಬಿದ್ದು.. ಬರುತ್ತೇನೆ ಅಮ್ಮ.. ಎಂದು ಹೇಳಿದ ಆನಂದ ತನ್ನ ತಂಡದೊಂದಿಗೆ ಶಬರಿ ಮಲೆಗೆ ಹೊರಟೇ ಬಿಟ್ಟ.ಆದರೆ ಹೋದವನು ಮತ್ತೆ ತಿರುಗಿ ಬರಲೇ ಇಲ್ಲ..!!


ಶಬರಿಮಲೆಯಲ್ಲಿ ಪಂಪಾ ನದಿ ಉಕ್ಕಿ ಹರಿದಿದ್ದಳು.ಇಡೀ ಮಲೆಯೇ ಅಡಿಮೇಲು ಆಗಿತ್ತು.ಎಷ್ಟೋ ಜನರು ನದಿ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದರು.ಅವರೆಲ್ಲರ ನಡುವೆ ಬಾಲಕ ಆನಂದ ಕೂಡ ತನ್ನ ತಂಡದಿಂದ ಬೇರ್ಪಟ್ಟು ಆ ನದಿ ನೀರಲ್ಲಿ ಎಲ್ಲೋ ಕೊಚ್ಚಿಕೊಂಡು ಹೋಗಿದ್ದ...!!


ಹೋದ ಇಡೀ ತಂಡವೇ ಮರಳಿ ಬಂದರೂ.. ಆನಂದ ಒಬ್ಬ ಹಿಂದಿರುಗಿ ಬಂದಿರಲಿಲ್ಲ! 


ಅವನಿಗಾಗಿ ಸಾಕಷ್ಟು ಹುಡುಕಾಡಿದರು.. ಆದರೂ ಅವನ ಸುಳಿವು ಯಾರಿಗೂ ಸಿಗಲೇ ಇಲ್ಲ!


ಆದರೂ ವನಜಮ್ಮ ಹಿಂದಿರುಗಿ ಬಾರದ ಮಗನಿಗಾಗಿ ಅಳಲಿಲ್ಲ.." ಬಹುಶಃ ಅಯ್ಯಪ್ಪನಿಗೆ ನನ್ನ ಮಗ ಬಹಳ ಇಷ್ಟ ಆಗಿರಬೇಕು.. ಅವನೇ ಕೊಟ್ಟದ್ದು.. ಈಗ ಅವನೇ ತನ್ನ ಬಳಿ ಕರೆಸಿಕೊಂಡಿದ್ದಾನೆ ಅಷ್ಟೇ... ಎಂದು ಮರ್ಮರವಾಗಿ ಮೂಖರಾಗ ಹಾಡಿ ಬಿಟ್ಟಿದ್ದಳು ವನಜಮ್ಮ!!


ಆ ನಂತರದ ದಿನಗಳಲ್ಲಿ ಅವಳ ಬಾಳಲ್ಲಿ ನಗು ಎನ್ನುವುದು ಮರೀಚಿಕೆ ಆಗಿತ್ತು.ನಗುವುದಕ್ಕೆ ಅವಳಿಗೆ ಕಾರಣಗಳಿರಲಿಲ್ಲ. ಅಳುವುದಕ್ಕೆ ಅವಳಿಗೆ ಬರುವುದಿಲ್ಲ,ಏಕೆಂದರೆ ಕಲಿತಿಲ್ಲ! ಅವಳ ಜೀವನದ ಸರ್ವಸ್ವ ಎನ್ನುವುದನ್ನು ಗಂಡ ಶೇಖರಣ್ಣ ಆದಾಗಲೇ ತನ್ನೊಡನೆ ಕೊಂಡು  ಹೋಗಿದ್ದ,ಬಾಳಿನ ಆನಂದ ಮಗ ಆನಂದನೊಡನೆ ಕೊಚ್ಚಿ ಹೋಗಿತ್ತು! 


ಆದರೂ ಮೀನು ಮಾರುವುದನ್ನು ಅವಳು ಇನ್ನೂ ನಿಲ್ಲಿಸಿಲ್ಲ.. ಪ್ರತೀ ಸಲ ಮಿನು ಮಾರುವಾಗಲೂ ಪಕ್ಕದಲ್ಲಿ ತನ್ನ ಬಾಯಿ ಬರದ ಮಗ ಆನಂದ... "ಅಮ್ಮ... ಅಪ್ಪ ಯಾವಾಗ ಬರ್ತಾರೆ ಅಮ್ಮ" ಎಂದು...ಕೈ ಸನ್ನೆ ಮಾಡಿ, ಬಾಯಿ ಸನ್ನೆ ಮಾಡಿ ಕೇಳುತ್ತಿರುವಂತೆಯೇ ಭಾಸವಾಗುತ್ತದೆ ಅವಳಿಗೆ. 


ಶೇಕರಣ್ಣನ ದೋಣಿ ಕಡಲಿನಲ್ಲಿ ಮಗುಚಿದ್ದ ದಿನ,ಕೇವಲ ದೋಣಿಯಷ್ಟೇ ಮಗುಚಿತ್ತು,ಶೇಖರಣ್ಣ ಕಡಲಿನ ನಡುವಿನಲ್ಲಿ ತನ್ನ ಉಸಿರು ಚೆಲ್ಲಿರಲಿಲ್ಲ..! 


ದೋಣಿಯಲ್ಲಿದ್ದ ಪ್ಲಾಸ್ಟಿಕ್ ಡಬ್ಬವನ್ನೇ ಹಿಡಿದುಕೊಂಡು ವಾರಗಟ್ಟಲೆ ಈಜಿ ಈಜಿಯೇ ಯಾವುದೋ ಒಂದು ಅನಾಮಿಕ ದ್ವೀಪದ ದಡ ಸೇರಿದ್ದರು ಶೇಖರಣ್ಣ.ದ್ವೀಪಕ್ಕೆ ಹೊಂದಿಕೊಂಡು ಅಲ್ಲೇ ಬದುಕಲು ಕೂಡ ಕಲಿತರು.ಒಂಟಿ ದ್ವೀಪದಲ್ಲಿ ಒಬ್ಬಂಟಿಯಾಗಿದ್ದುಕೊಂಡು,ವನಜಮ್ಮನನ್ನು ಮತ್ತೆ ಸೇರಲು ಆ ದ್ವೀಪದ ದಂಡೆಯಲ್ಲಿ ಪ್ರತೀ ದಿನವೂ ನಿಂತುಕೊಂಡು ಬಾರದ ಹಡಗಿಗಾಗಿ,ಅವರದ್ದೊಂದು ಅನುದಿನದ ಪ್ರತೀಕ್ಷೆ.. ಸದ್ದಿಲ್ಲದೆ,ಸುದ್ದಿಯಾಗದೇ ಹಾಗೇ ಮೌನವಾಗಿಯೇ  ಮುಂದುವರಿದಿತ್ತು!!


ಪಂಪೆಯ ಪ್ರವಾಹಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿದ್ದ ಆನಂದನನ್ನು ಯಾರೋ ಒಬ್ಬರು ಹೇಗೋ ಕಾಪಾಡಿದ್ದರು. ಮಾತು ಬಾರದ ಆನಂದ ಮರಳಿ ಊರಿಗೆ ಬರಲಾಗದೇ ಅವರ ಹೋಟೆಲಿನಲ್ಲಿಯೇ ಕ್ಲೀನರ್ ಆಗಿ ಕೆಲಸ ಮಾಡುತ್ತಾ ಉಳಿದು ಬಿಟ್ಟ! ಹೋಟೆಲಿಗೆ ಬರುವ ಯಾವುದೇ ತಾಯಂದಿರನ್ನು ಕಂಡರೂ ಸಹ.. ಅವನು ಅವರಲ್ಲಿ ತನ್ನ ತಾಯಿ ಮೀನು ಮಾರುವ ವನಜಮ್ಮನನ್ನೇ  ಹುಡುಕುತ್ತಿದ್ದ!! 


ವನಜಮ್ಮ ಈಗಲೂ ಮೀನು ಮಾರುತ್ತಾಳೆ.ಮೀನು ಮಾರುವಾಗಲೆಲ್ಲ ಪಕ್ಕದಲ್ಲೇ ಆನಂದ ತನ್ನ ಕೈ ಎಳೆದು... "ಅಮ್ಮಾ.. ಅಪ್ಪ ಯಾವಾಗ ಬರುತ್ತಾರೆ ಹೇಳಮ್ಮ.. " ಎಂದು ಪದೇ ಪದೇ ಮೂಖರಾಗ ಹಾಡಿದಂತೆ  ಅವಳಿಗೆ ಭಾಸವಾಗುತ್ತದೆ. 


ಆವಾಗಲೆಲ್ಲ ತನ್ನ ಮೀನು ಬುಟ್ಟಿ ಹಿಡಿದುಕೊಂಡು ಸೀದಾ   ಕಡಲಿನ ತೀರಕ್ಕೆ ಓಡುತ್ತಾಳೆ ವನಜಮ್ಮ... 


ಕಡಲಿನ ತುದಿಯಲ್ಲಿ ಯಾರೇ ದೋಣಿಯಲ್ಲಿ ಹಿಂದಿರುಗಿ ಬಂದರೂ.. ಅದು ತನ್ನ ಗಂಡ ಶೇಖರಣ್ಣನೇ ಇರಬಹುದೇ ಎಂದು ಕಣ್ಣಗಲಿಸಿ ನೋಡುತ್ತಾ ತೀವ್ರವಾಗಿ ಕಾತಾರಿಸುತ್ತಾಳೆ,ಚಡಪಡಿಸುತ್ತಾಳೆ ವನಜಮ್ಮ. ಆದರೆ ಅದು ತನ್ನ ಗಂಡನಲ್ಲವೆಂದು ಗೊತ್ತಾದಾಗ ಎಂದಿನಂತೆ ನಿರಾಸೆಗೊಂಡು ಪುನಃ ಕಡಲನ್ನೇ ದಿಟ್ಟಿಸಿ ನೋಡುತ್ತಾ ಸುದೀರ್ಘ ಮೌನಕ್ಕೆ ಜಾರುತ್ತಾಳೆ ಅವಳು.


ಕಡಲಿಗೆ ಆದರೂ ಒಂದು ಕೊನೆಯಿದೆ.. ಆದರೆ ವನಜಮ್ಮನ ನೋವಿಗೆ ಕೊನೆಯೆಲ್ಲಿದೆ!!? 


ಅವಳಲ್ಲಿ ಈಗ ಮಾತುಗಳಿಲ್ಲ.ಕಡಲಿನ ಅಲೆಗಳ  ಭೋರ್ಗರೆತದಂತೆ,ಅವಳ ಮನಸ್ಸಿನ ನೋವುಗಳ ಭೋರ್ಗರೆತ ಯಾರಿಗೂ ಕೇಳಿಸುವುದೇ ಇಲ್ಲ..!


ಕಡಲಿಗಂತು ಮೊದಲೇ ಕೇಳಿಸುವುದಿಲ್ಲ...


ಏಕೆಂದರೆ ಕಡಲಿಗೆ ಕಿವಿ ಇಲ್ಲ!!



.....................................................................................


 #ಇಷ್ಟೇ....! 


ab pacchu 

moodubidire

Comments

Popular posts from this blog

ಗಗನದ ಸೂರ್ಯ

ಒಂದು ಉಗ್ರ ಪ್ರತಿಭಟನೆ

The Priest.!