ನೂರೆಂಟು ನೆನಪು ಆ ಎರಡು ಸೈಕಲ್‌ಗಳಿಂದ...

 

ಎಲ್ಲರಿಗೂ ಇಷ್ಟದ ಹೀರೋ ಅಂತ ಒಬ್ಬ ಇರ್ತಾನೆ.ಚಿಕ್ಕಂದಿನಲ್ಲಿ ನನಗೆ ಅಂತಹ ಯಾವ ಹೀರೋ ಕೂಡ ಇರಲಿಲ್ಲ.ಆದರೆ ನನ್ನ ಅಪ್ಪನಿಗೊಬ್ಬ ಹೀರೋ ಇದ್ದ.

ಆದರೆ ಅದು ಅವನೆಂಬ ಕೇಡಿಗಳ ಜೊತೆ ಬಡಿದಾಡುವ,ಚಂದದ ನಾಯಕಿಯ ಕೈ ಹಿಡಿದು ಕುಣಿದು ಕುಪ್ಪಳಿಸುವ ತೆರೆಯ ಮೇಲಿನ ಚಲನಚಿತ್ರದ ಮಾಸು ಇಲ್ಲವೇ ಕ್ಲಾಸು ಹೀರೋ ಅಲ್ಲವೇ ಅಲ್ಲ.

ಅದು ಎಂಬ ' ಹೀರೋ ಸೈಕಲ್ '... ಅಪ್ಪನ ಪಾಲಿನ ನಿಜವಾದ ಹೀರೋ ಆಗಿತ್ತು.

ಆ ಹೀರೋ ಸೈಕಲ್ ಮೇಲೆರಿ ಅಪ್ಪ ಸವಾರಿ ಹೋಗುತ್ತಿದ್ದ. ಕೆಲಸಕ್ಕೆ ಹೋಗಲು ಮಾತ್ರವಲ್ಲ,ಊರಲೆಲ್ಲಾ  ತಿರುಗಾಡಲು ಕೂಡ ಅಪ್ಪನಿಗೆ ಅದುವೇ ಸಾರಥಿ,ಅಂಬಾರಿ ಎಲ್ಲವೂ ಆಗಿತ್ತು.

ನಾನು ಆಗ ಬಹಳ ಸಣ್ಣವನಿದ್ದೆ. ಚಿಕ್ಕಂದಿನಲ್ಲಿ ಎಲ್ಲರೂ ಸಣ್ಣವರೇ ಇರ್ತಾರೆ. ಅದರಲ್ಲೇನು ಅಂತಹ ವಿಶೇಷತೆ ಇಲ್ಲ.ಆಗ ನನಗೆ ಈ ಸೈಕಲ್ ಎಂದರೆ ಬಹಳ ಕುತೂಹಲ ಹಾಗೂ ಅಷ್ಟೇ ಭಯ ಕೂಡ ಇತ್ತು.

ಅಪ್ಪ ತನ್ನ ಸೈಕಲ್ ನಲ್ಲಿರುವ ಎತ್ತರದ ಸೀಟಿನಲ್ಲಿ ತಾನು ವಿರಾಜಮಾನನಾಗಿ, ಅದರ ಮುಂದಿರುವ ಅಡ್ಡ ಪಟ್ಟಿಯಲ್ಲಿ ಇರುತ್ತಿದ್ದ ಮತ್ತೊಂದು ಪುಟ್ಟದಾದ ಸೀಟಿನಲ್ಲಿ ನನ್ನನ್ನು ಕುಳ್ಳಿರಿಸಿ ಹಾಗೇ ಊರಿಡೀ ಸುತ್ತಾಡಲು ನನ್ನನ್ನು ಕರೆದುಕೊಂಡು ಹೋಗುತ್ತಿದ್ದ.

ಎತ್ತರದಲ್ಲಿ ಕುಳಿತುಕೊಂಡು ಹೋಗಲು ಭಯ ಆಗುತಿತ್ತಾದರೂ ಅಪ್ಪನ ಜೊತೆಗಿರುವುದರಿಂದ ಮನಸ್ಸಿಗೆನೋ ತಕ್ಕ ಮಟ್ಟಿನ ಧೈರ್ಯ.ಆದರೂ ನನ್ನ ಎರಡೂ ಪುಟ್ಟ ಕೈಗಳಿಂದ ಆ ಸೈಕಲ್ ನ ಮುಂದಿನ ಕೈಯನ್ನು ಅನ್ನು ಭದ್ರವಾಗಿ ಹಿಡಿದುಕೊಳ್ಳುತ್ತಿದ್ದೆ. ಅದರಲ್ಲಿರುವ ಬೆಲ್ ಅನ್ನು ಸದಾ ಟ್ರಿಣ್ ಟ್ರಿಣ್ ಮಾಡದೇ ನಾನು ಕುಳಿತುಕೊಂಡಾಗ ಅಪ್ಪನ ಸೈಕಲ್ ನಲ್ಲಿ ಮುಂದೆ ಮುಂದೆ ಹೋದ ದಿನವೇ ಇಲ್ಲ.

ಮಳೆಗಾಲದಲ್ಲಿ ಮಳೆ ನಿಂತ ಮೇಲೆ ಸೈಕಲ್ ನಲ್ಲಿ ಅಪ್ಪನ ಜೊತೆ ಹೋಗಲು ಆ ತಂಗಾಳಿಗೆ ಹಾಯೆನಿಸುತ್ತಿತ್ತು.ಎಪ್ರಿಲ್ ಮೇ ಜೂನ್ ತಿಂಗಳಲ್ಲಿ ಮೇ ಪ್ಲವರ್ ಗಿಡಗಳು ರಸ್ತೆಯ ಇಕ್ಕೆಲಗಳಲ್ಲಿ ಎಲೆಗಿಂತಲೂ ಅಧಿಕವಾಗಿ ಕೇವಲ ಕೆಂಪು ಹೂವುಗಳನ್ನೇ ತಲೆಗೊಂದು ಮುಂಡಾಸಿನಂತೆ ಸುತ್ತಿಕೊಂಡು ನಿಂತು ಬಿಡುತ್ತಿದ್ದವು. ಮಾತ್ರವಲ್ಲ ತಮ್ಮ ಕಾಲ ಬುಡದಲ್ಲಿ ರಸ್ತೆ ಪೂರ್ತಿ ಆ ಹೂವುಗಳನ್ನೇ ಉದುರಿಸಿ ನೆಲದ ಮೇಲೊಂದು ಕೆಂಪುಗಂಬಳಿಯ ದೃಶ್ಯವನ್ನು ಸಾಕಾರಗೊಳಿಸಿದ್ದನ್ನು ಸೈಕಲ್ ಮೇಲಿನ ಪುಟ್ಟ ಸೀಟಿನಲ್ಲಿ ಕುಳಿತುಕೊಂಡೇ,ಇಕ್ಕೆಲಗಳಲ್ಲೂ  ಬೆರಗುಗಣ್ಣಿನಿಂದ ನೋಡುತ್ತಾ ನೋಡುತ್ತಾ ನಾನೂ ಬರೀ ಕೆಂಪನ್ನೇ ಕಣ್ತುಂಬಿಕೊಳ್ಳುತ್ತಿದ್ದೆ.ಆ ಮಾಸದಲ್ಲಿ ರಸ್ತೆ ಬದಿಗಳೆರಡೂ ಸದಾ ಕೆಂಪು ಕೆಂಪು.

ಕೆಲವು ಮರದ ಕಡೆ ಅಪ್ಪನ ಬಳಿ ಹಠ ಮಾಡಿ, ಸೈಕಲ್ ನಿಲ್ಲಿಸಿ ಒಂದು ದೊಡ್ಡ  ಗೊಂಚಲು ಗೊಂಚಲು ಮೇ ಪ್ಲೇವರ್ ಹೂವುಗಳಿರುವ ಗೆಲ್ಲನ್ನು , ಅಪ್ಪನಿಂದ ಮರದಿಂದ ಕಿತ್ತು ತೆಗೆಸಿ, ಅದನ್ನು ಸೈಕಲ್ ನ ಮುಂದಿನ ತಲೆಗೆ ಸಿಕ್ಕಿಸಿ,ಪುನಃ ನಮ್ಮಿಬ್ಬರ ಸೈಕಲ್ ಸವಾರಿ ಅಲ್ಲಿಂದ ಮುಂದುವರಿಯುತ್ತಿತ್ತು. ನನಗೆ ಆ ಹೂವಿನ ದೊಡ್ಡ ಗೊಂಚಲು ನಮ್ಮ ಸೈಕಲ್ ನ ಮುಂದೆ ಇರುವುದು ಬಹಳ ಖುಷಿ ಕೊಡುತ್ತಿತ್ತು.

ಆದರೂ ಯಾವಾಗಲೂ ನನ್ನಲ್ಲಿ ಮೇ ಪ್ಲವರ್ ಬಗ್ಗೆ ಇರುತ್ತಿದ್ದ ಪ್ರಶ್ನೆ ಒಂದೇ. ಅದನ್ನೇ ಅಪ್ಪನಲ್ಲಿ ಸೈಕಲ್ ನಲ್ಲಿ ಹೋಗುವಾಗಲೆಲ್ಲಾ ಕೇಳುತ್ತಿದ್ದೆ "ಅಪ್ಪ ಈ ಮೇ ಫ್ಲವರ್.. ಮೇ ತಿಂಗಳಿನಲ್ಲಿ ಮಾತ್ರ ಅರಳಬೇಕು ಅಲ್ವಾ.. ಆದರೆ ಅದು ಯಾಕೆ.. ಎಪ್ರಿಲ್ ನಲ್ಲಿ, ಜೂನ್ ತಿಂಗಳಲ್ಲಿ ಕೂಡ ಅರಳುವುದು ಎಂದು..". ಅಪ್ಪ ಏನು ಉತ್ತರ ಕೊಡಬೇಕು ಎಂದು ಗೊತ್ತಾಗದೇ ತಡಕಾಡಿ ಕೊನೆಗೆ "ಅದಕ್ಕೆ ಭಾಷೆ ಇಲ್ಲನಾ..ಹಾಗಾಗಿ ಯಾವಾಗ ಬೇಕೋ ಆವಾಗ ಅರಳುತ್ತದೆ " ಎಂದು ಹೇಳಿ ಮತ್ತೆ ಜೋರಾಗಿ ಸೈಕಲ್ ತುಳಿಯುತ್ತಿದ್ದ.ಮೇ ಫ್ಲವರ್ ಗೆ ಗುಲ್ ಮೊಹರ್ ಎಂದು ಕೂಡ ಹೇಳುತ್ತಾರೆ ಎಂದು ಆಮೇಲೆ ಸ್ವಲ್ಪ ದೊಡ್ಡದಾದ ನಂತರ ತಿಳಿಯಿತು.

ಮೇ ತಿಂಗಳು ಬಂದಾಗಲೆಲ್ಲ ನಾನು ಮರೆಯದೇ ಈ ಗುಲ್ ಮೊಹರ್ ಹೂವಿನ ಗೊಂಚಲು ಒಂದನ್ನು  ಅಪ್ಪನ ಸೈಕಲ್ ಗೆ ಸಿಕ್ಕಿಸುವುದನ್ನು ಮರೆಯುತ್ತಿರಲಿಲ್ಲ,ಅದೇ ರೀತಿ ಅಪ್ಪ ವರ್ಷ ಪೂರ್ತಿ ತನ್ನ ಸೈಕಲ್ ನ ಮುಂದೊಂದು ನಳನಳಿಸುವ ತಾಜಾ ಹೂವೊಂದನ್ನು ಸಿಕ್ಕಿಸುವುದನ್ನು ಪ್ರತೀ ದಿನವೂ ತಪ್ಪಿಸುತ್ತಿರಲಿಲ್ಲ.ಬೆಳಿಗ್ಗೆ ಪೂಜೆಗೆ ಮೊದಲು ಪೋಟೋ ದಲ್ಲಿರುವ ದೇವರ ಮುಡಿಗೊಂದು ಹೂವು ಏರಿಸಿದವನೇ..ಹೊರಗೆ ನಿಂತರುವ  ತನ್ನ ಹೀರೋ,ಹೀರೋ ಸೈಕಲ್ ನ ತಲೆಗೂ ಕೂಡ ಒಂದು ಹೂವು ಏರಿಸಿ ಬಿಡುತ್ತಿದ್ದ.

ಅವನಿಗೆ ಅದರಿಂದ ಏನೋ ಒಂದು ಆನಂದ ಸಿಗುತ್ತಿತ್ತು.ನಾವುಯಭಾರತಿಯರು ಕಲ್ಲು, ಮಣ್ಣು, ನೀರು, ವಸ್ತು ಹಾಗೂ ಪ್ರತಿಯೊಂದರಲ್ಲೂ ದೇವರನ್ನು ಕಾಣುವವರಲ್ಲವೇ ಹಾಗಾಗಿ ಅವನು ಕೂಡ ತನ್ನ ಹೀರೋ  ಸೈಕಲ್ ನಲ್ಲಿ ತನ್ನ ದೇವರನ್ನು ಕಾಣುತ್ತಿದ್ದನೋ ಅಥವಾ ಸುರಕ್ಷಿತವಾಗಿ ತನ್ನನ್ನು ಊರೆಲ್ಲಾ ಸುತ್ತಾಡಿಸಿ ಹಾಗೇ ಸುಖವಾಗಿ ವಾಪಸು ಮನೆಗೆ ಕರೆದುಕೊಂಡು ಬಾ ಎಂದು ಪ್ರಾರ್ಥಿಸಿ ಹೂವು ಇಡುತ್ತಿದ್ದನೋ ಅದು ನನಗೆ ಗೊತ್ತಿಲ್ಲ. ಆದರೆ ಪ್ರತೀ ದಿನ ಸೈಕಲ್ ಮುಡಿಗೊಂದು ಹೂವು ಅವನು ತಪ್ಪಿಸುತ್ತಿರಲಿಲ್ಲ ಮತ್ತು ಅಪ್ಪ ತನ್ನ ಸೈಕಲ್ ಗೆ ಸಿಕ್ಕಿಸುತ್ತಿದ್ದದ್ದು ಯಾವಾಗಲೂ ಒಂದೇ ಹೂವು ಅದುವೇ ಬೇಲಿ ಬದಿಯ  ದಾಸವಾಳ.

ನಾನು ಶಾಲೆಗೆ ನಡೆದೇ ಹೋಗುತ್ತಿದ್ದದ್ದು.ಒಮ್ಮೆಯೂ ಅಪ್ಪನ ಜೊತೆ ಸೈಕಲ್ ಏರಿ ಶಾಲೆಗೆ ಹೋದವ ನಾನಲ್ಲ,ಏಕೆಂದರೆ ರೋಡ್ ಪಕ್ಕದ ಗುಡ್ಡದ ಹಾದಿ ನಡೆಯಲು ಹಿತ ಆಗುತ್ತಿತ್ತು ನನಗೆ. ಅದು ಸ್ವರ್ಗದ ದಾರಿ.. ಅಪ್ಪನ ಸೈಕಲ್ ಸವಾರಿ ಅದು ನನ್ನ ಪಾಲಿನ ಎತ್ತರದ ಜಂಬೂ ಸವಾರಿ.

ಅಪ್ಪನ ಜೊತೆ ಸೈಕಲ್ ನಲ್ಲಿ ನಾನು  ಹೆಚ್ಚಾಗಿ ಎರಡು ವಿಷಯಗಳಿಗೆ ತಪ್ಪದೇ ಹೋಗುತ್ತಿದ್ದೆ.ಒಂದು ತಿಂಗಳಿಗೊಮ್ಮೆ ಕ್ಷೌರ ಮಾಡಲು.. ಮತ್ತೊಮ್ಮೆ ಪಕ್ಕದ ಊರಿನ ಪೇಟೆಯ ಸಂತೆಗೆ ಹೋಗಿ ಬರಲು.

ಕ್ಷೌರ ಮಾಡಿಸಿಕೊಳ್ಳಲು ಅಪ್ಪನ ಜೊತೆ ಸೈಕಲ್ ನಲ್ಲಿ ಹೋಗಿ  ಬರುವಾಗ ನನ್ನದೊಂದು ಕಣ್ಣು ರೋಡ್ ಗಿಂತ ರೋಡ್ ಪಕ್ಕವೇ ಜಾಸ್ತಿಯಾಗಿ ಇರುತ್ತಿತ್ತು. ಜೊತೆಗೆ ಅಪ್ಪನಲ್ಲಿ ಕೇಳಲು ನನ್ನ ಬಳಿ ಹಲವಾರು ಪ್ರಶ್ನೆಗಳು ಸದಾ ಇರುತ್ತಿದ್ದವು. ಪ್ರಶ್ನೆಗಳು ಹೆಚ್ಚಾಗಿ ಇದೇ ಇರುತ್ತಿತ್ತು... ಆ ಗಿಡ ಯಾವುದು, ಅದರಲ್ಲಿ ಹೂವು ಆಗುತ್ತಾ.. ಹಣ್ಣು ಆಗುತ್ತಾ.. ಇತ್ಯಾದಿ.. ಇತ್ಯಾದಿ ಪರಿಸರದ ಕೌತುಕದ ಪ್ರಶ್ನೆಗಳು.

ಅಪ್ಪ ಎಲ್ಲವನ್ನೂ ಸೈಕಲ್ ಬಿಡುತ್ತಲೇ ವಿವರಿಸುತ್ತಿದ್ದ.ಅಷ್ಟು ಮಾತ್ರವಲ್ಲ ಹಿಂದಿನ ದಿನ ಮಂಗಳೂರು ಆಕಾಶವಾಣಿಯಲ್ಲಿ ಕೇಳಿದ್ದ ಯಕ್ಷಗಾನ ಪ್ರಸಂಗಗಳ ಬಗ್ಗೆ,ಆ ಕಥೆಗಳಲ್ಲಿ ಬರುವ ಬಬ್ರುವಾಹನನ ಬಗ್ಗೆ,ರಾವಣನ ಬಗ್ಗೆ,ಚಂಡ ಮುಂಡರ ಬಗ್ಗೆ,ರಕ್ತ ಬೀಜಾಸುರನ ಬಗ್ಗೆ ಪ್ರಶ್ನೆಗಳನ್ನು ನಾನು ಕೇಳುತ್ತಾ ಹೋಗುತ್ತಿದ್ದರೆ, ಅಪ್ಪ ಪುರಾಣಗಳ  ಕಥೆಗಳನ್ನು, ದೇವಿ ಮಹಾತ್ಮೆಯ ಕಥೆಯನ್ನು ಬಹಳ ಸೊಗಸಾಗಿ ನಿಧಾನವಾಗಿ ಸೈಕಲ್ ತುಳಿಯುತ್ತಲೇ ಹೇಳುತ್ತಿದ್ದ.ನನ್ನ ಸಂದೇಹಗಳಿಗೆ ಕೊನೆ ಇರುತ್ತಿರಲಿಲ್ಲ. ಆದರೂ ಎಷ್ಟು ಕೇಳಿದರೂ ಅವನು ತಾಳ್ಮೆಯಿಂದ ಉತ್ತರಿಸುತ್ತಿದ್ದ.

ನಂತರ ಪೇಟೆಯಲ್ಲಿ ಕ್ಷೌರದ ಅಂಗಡಿಗೆ ಹೋಗಿ ತಲೆಯ ಕೂದಲು ಕತ್ತರಿಸಿಕೊಂಡ  ನಂತರ ಅಪ್ಪ ಕೆಲವೊಮ್ಮೆ ನನಗೆ  ನನ್ನಿಷ್ಟದ ಎರಡು ಗ್ಲಾಸ್ ತಣ್ಣನೆಯ ಕಬ್ಬಿನ ಜ್ಯೂಸ್ ಕೊಡಿಸುತ್ತಿದ್ದ.ಇಲ್ಲದಿದ್ದರೆ ಸ್ವಾಗತ್ ಹೋಟೆಲ್ ನಲ್ಲಿ ಒಂದು ಪ್ಲೇಟ್ ಗೋಳಿಬಜೆಯೋ ಅಥವಾ ಶೀರಾ - ಪೂರಿಯ ಸೇವೆಯೋ ಮಾಡಿಸುತ್ತಿದ್ದ.ಆ ನಂತರ ಮನೆಗೆರಡು ಕಟ್ಟು ಗೋಳಿಬಜೆ ಕಟ್ಟಿಸಿಕೊಂಡು,ಆ ತೊಟ್ಟೆಯನ್ನು ಮತ್ತೆ ಸೈಕಲ್ ನ ಕೈಗೆ ಸಿಕ್ಕಿಸಿ ನಾನು ಮತ್ತೆ ಅಪ್ಪ ಮತ್ತೆ ಸೈಕಲ್ ಏರಿ ಮನೆಗೆ ಮರಳುತ್ತಿದ್ದೆವು.. ಹಿಂದೆ ಬರುವಾಗ ಮತ್ತೆ  ಯಥಾಪ್ರಕಾರ ನನ್ನ ಕುತೂಹಲದ ಪ್ರಶ್ನೆಗಳು ಮುಂದುವರಿಯುತ್ತಿದ್ದವು.ಸೈಕಲ್ ಏರಿ ಪುಟ್ಟ ಸೀಟಿನಲ್ಲಿ ಕುಳಿತುಕೊಂಡು ಹಾಗೇ ಸುತ್ತಲಿನ ಪ್ರಪಂಚವನ್ನು ನೋಡುತ್ತಿದ್ದರೆ ಚಿಕ್ಕಂದಿನಲ್ಲಿ ಅದೆಷ್ಟೋ ಮುಗ್ಧ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿದ್ದವು.ಅದೆಲ್ಲವೂ ಮರಳಿ ಸಿಗಲಾರದ ದುಬಾರಿ ಬೆಲೆಯ ಬಾಲ್ಯದ ದಿನಗಳು.

ಮುಂದೆ ಮನೆಗೆ ಮರಳುವ ದಾರಿಯಲ್ಲಿ  ಮುರುಳಿಯ ಅಂಗಡಿ ಅಂತ ಒಂದು ಸಿಕ್ತಾ ಇತ್ತು. ಅಲ್ಲಿ ಅಪ್ಪ ನನಗೆ ಪ್ರತೀ ಹದಿನೈದು ದಿನಗಳಿಗೊಮ್ಮೆ ಬಾಲಮಂಗಳ ಕೊಡಿಸಲು ಮರೆಯುತ್ತಿರಲಿಲ್ಲ. ಅದನ್ನು ಅಂಗಡಿಯಿಂದ ತೆಗೆದುಕೊಂಡ ಕೂಡಲೇ ಆ ಹೊಸ ಪೇಪರ್ ಗಳ ಪರಿಮಳವನ್ನು ಆಘ್ರಾಣಿಸುವುದರಲ್ಲಿಯೇ ಅದೇನೋ ಸುಖವಿತ್ತು ನನಗೆ.ರಪ್ಪ ಅಂತ ಒಮ್ಮೆ ಡಿಂಗನ ಕಥೆಯಲ್ಲಿ ಕಾಡಿನ ಯಾವ ಕಿಡಿಗೇಡಿ ದೈತ್ಯನ ಚಿತ್ರವಿದೆ,ಈ ಬಾರಿಯೂ ಖೇರಗ ಇದ್ದಾನೋ.. ಫಕ್ರು ಎಲ್ಲೆಲ್ಲಿಗೆ ಹಾರಿದ್ದಾನೆ... ವೈದ್ಯರ ಶಕ್ತಿ ಮದ್ದಿನಲ್ಲಿ ಲಂಬೋದರ,ವೀರ ಬಾಲಕ ಎಲ್ಲ ಯಾವ ಕಾಡಿನ ಯಾವ ಪೊದೆಗಳಲ್ಲಿ ಏನು ಮಾಡುತ್ತಿದ್ದಾರೆ..ವೈದ್ಯರು ಈ ಬಾರಿ ಯಾವ ಮದ್ದು ಅರೆಯುತ್ತಿದ್ದಾರೆ... ಎಂದೆಲ್ಲ ಮೇಲಿಂದ ಮೇಲೆ  ಚಿತ್ರ ಸಹಿತ ನೋಡಿಕೊಂಡು ಪುನಃ  ಸೈಕಲ್ ಏರಿ ಮುಂದಿನ ಸೀಟಿನಲ್ಲಿ ಕುಳಿತುಕೊಂಡು ಬಾಲಮಂಗಳವನ್ನು ಮನೆಯವರೆಗೆ ಭದ್ರವಾಗಿ ಹಿಡಿದುಕೊಳ್ಳುತ್ತಿದ್ದೆ.ಆ ಕಾಲದ ಅತಿ ದೊಡ್ಡ ಆಸ್ತಿ ಅಂದರೆ ಅದೇ.ಮನೆಗೆ ಹೋದ ಕೂಡಲೇ ಆ ಒಂದು ದಿನವೇ ಇಡೀ ಬಾಲಮಂಗಳ ಪುಸ್ತಕ ಓದಿ ಮುಗಿಯುತ್ತಿತ್ತು.ಆವಾಗಲೆಲ್ಲ ನಮಗೆಲ್ಲ ಓದಿನ ಗೀಳು ಹಚ್ಚಿದ್ದೇ ಈ ಬಾಲಮಂಗಳ.. ಮತ್ತು ಅದನ್ನು ನಿರಂತರವಾಗಿ ಹೆಚ್ಚು ಮಾಡಿದ್ದು ಹೀರೋ ಸೈಕಲ್ ನ ಹೀರೋ ನನ್ನ ಅಪ್ಪ.

ಮುಂದೆ ದೀಪಾವಳಿ ಬಂದಾಗ ಕೂಡ ನಾನು ಅಪ್ಪ ಇಬ್ಬರೇ ಸೈಕಲ್ ನಲ್ಲಿ ಹೋಗಿ ಪಟಾಕಿ ಕೊಂಡು ತರುತ್ತಿದ್ದೆವು. ನಿಜವಾಗಿಯೂ ಆವಾಗ ಪಟಾಕಿ ಎಂದರೆ ಅದೆನೋ ಆಸಕ್ತಿ. ಅದರಲ್ಲೂ ಬೆಂಕಿ ಕೊಟ್ಟಾಗ  ಬಾಟಲಿಯೊಳಗಿಂದ ನಭಕ್ಕೆ ಹಾರುವ ರಾಕೇಟು ನನ್ನ ಪಾಲಿಗೆ ಅಂತರಿಕ್ಷಕ್ಕೆ ನಾನೇ ಒಂದು ರಾಕೇಟು ಕಳುಹಿಸಿದ ಭಾವ ಕೊಡುತ್ತಿತ್ತು. ಅಪ್ಪನೊಂದಿಗೆ ಸೈಕಲ್ ನಲ್ಲಿ ಹೋಗುವಾಗಲೂ ಇದೇ ಚರ್ಚೆ ಅಪ್ಪ ಬೇರೆ ಯಾವುದೂ ಬೇಡ ಕೇವಲ ರಾಕೇಟು ಒಂದೇ ಜಾಸ್ತಿ ಖರೀದಿಸಿ ಬಿಡುವ ಆಯ್ತಾ.. ಎಂದು. ಆದರೆ ಅಪ್ಪ ಬೇಡ ಎಂದು ಹೇಳುತ್ತಿದ್ದ. ಏಕೆಂದರೆ ಆವಾಗ ನಮ್ಮ ಮನೆಯ ಪಕ್ಕವೇ ಮುಳಿ ಹುಲ್ಲು  ಸೂರಿನ ಒಂದೆರಡು ಮನೆಗಳು ಕೂಡ ಇದ್ದವು. ಪಾಪ ಯಾರೋ ಬಿಟ್ಟ ರಾಕೇಟು ಒಮ್ಮೆ ಅವರುಗಳ ಮುಳಿ ಹುಲ್ಲಿನ ಸೂರಿಗೆ ಬಿದ್ದು ಅವಾಂತರ ಆಗಿದ್ದು ಇದೆ. ಹಾಗಾಗಿ ಅಪ್ಪ ಸುಮ್ಮನೆ ನಮ್ಮಿಂದ ಬೇರೆಯವರಿಗೆ ಏಕೆ ಇಲ್ಲ ಸಲ್ಲದ ತೊಂದರೆ ಎಂದು ರಾಕೇಟ್ ಕೊಳ್ಳಲು ಹಿಂಜರಿಯುತ್ತಿದ್ದ.

ಆವಾಗ ಅಪ್ಪನ ಹೀರೋ ಸೈಕಲ್ ಗೆ ಡೈನಮೋ ಇತ್ತು. ಹಾಗಾಗಿ ರಾತ್ರಿ ಎಷ್ಟೇ ಹೊತ್ತಾದರೂ ಕೂಡ ಅಪ್ಪ ಹಾಗೇ ಸೈಕಲ್ ತುಳಿದುಕೊಂಡು ಅದರ ಬೆಳಕಲ್ಲಿ ಮನಗೆ ಬರುತ್ತಿದ್ದ. ಈಗ ಎಲ್ಲಾ ಸೈಕಲ್ ನಲ್ಲಿ  ಡೈನಮೋಗಳು ಬಹತೇಕ ಮರೆಯಾಗಿ ಹೋಗಿದೆ. ಹಿಂದೆ ನನಗೆ ಅದುವೇ ಒಂದು ಅತ್ಯಧ್ಭುತ ತಾಂತ್ರಿಕತೆಯ  ಚಮತ್ಕಾರದಂತೆ ಕಾಣುತ್ತಿತ್ತು.ಹಿಂದಿನ ಸೈಕಲ್ ಚಕ್ರದ  ಮೇಲೆ ಇರುತ್ತಿದ್ದ ಈ ಡೈನಮೋ ಮುಂದಿರುವ ಲೈಟುದೀಪಕ್ಕೆ ಬೆಳಕು ಪ್ರವಹಿಸುವ ಕೆಲಸ ಮಾಡುತ್ತಿತ್ತು,ಸೈಕಲ್ ವೇಗವಾಗಿ ತುಳಿದಷ್ಟು ಜಾಸ್ತಿ ಲೈಟು,ವೇಗ ಕಡಿಮೆ ಆದರೆ ಕಡಿಮೆ ಲೈಟು. ಅಪ್ಪನ ಬಳಿ ಕೇಳುತ್ತಿದ್ದೆ. ಅಪ್ಪ ಇದೆಲ್ಲ ಹೇಗೆ ಸಾಧ್ಯ.. ಅಂತ. ಅವನು ಅದರಲ್ಲಿ ಬೆಟ್ರಿ ಇದೆ,ಕರೆಂಟು ಇದೆ,ಅದು ಇದೆ ಅಂತ ಏನೋ ಒಂದು ಹೇಳುತ್ತಿದ್ದ. ನನಗೆ ಅರ್ಥ ಆಗುತ್ತಿರಲಿಲ್ಲ. ಮುಂದೆ ಭೌತಶಾಸ್ತ್ರದಲ್ಲಿ ಸೈಕಲ್ ಡೈನಮೋ ಹೇಗೆ ಚಲನೆಯ ಶಕ್ತಿಯನ್ನು ಬಳಸಿಕೊಂಡು ಅಯಸ್ಕಾಂತದ ಸಹಾಯದಿಂದ ವಿದ್ಯುತ್ ಉತ್ಪಾದನೆ  ಮಾಡುತ್ತೆ ಅನ್ನುವುದು ನನಗೆ ಗೊತ್ತಾಗಿ ಬಿಟ್ಟಿತು. ಗೊತ್ತಾದ ದಿನ ಅಪ್ಪನಲ್ಲಿ ಹೋಗಿ ಹೇಳಿದ್ದೆ ಕೂಡ.. ನೋಡು ಅಪ್ಪ ಸೈಕಲ್ ಡೈನಮೋ ದಿಂದ ಹೀಗೆ ಲೈಟು ಉತ್ಪಾದನೆ ಆಗುತ್ತದೆ ಎಂದು. ಅವನಿಗೆ ಎಷ್ಟು ಅರ್ಥವಾಗಿತ್ತೋ ನನಗದು ಗೊತ್ತಿರಲಿಲ್ಲ.

ಸೈಕಲ್ ನ ಚೈನು ಕಿತ್ತು ಬರುವುದು ಸಾಮಾನ್ಯ, ಆಗ ಎಲ್ಲ ಅಪ್ಪನೇ ಕಡ್ಡಿ ಹಾಕಿ ಹೊರಗೆಳೆದು ಅದನ್ನು ಸರಿ ಮಾಡುತ್ತಿದ್ದ. ನಾನೂ ಕೂಡ ಕೆಲವೊಮ್ಮೆ ಕೈ ಹಾಕಿ ಬಟ್ಟೆಯನ್ನು ಕಪ್ಪು ಮಾಡಿಕೊಂಡು ಅಮ್ಮನಿಂದ ಬೈಸಿಕೊಂಡ ದಿನಗಳು ಹಲವಾರು ಇದ್ದವು. ಅಪ್ಪನಲ್ಲಿ ಗಾಳಿ ಹಾಕುವ ಪಂಪು ಕೂಡ ಇತ್ತು. ಅದನ್ನು ಹಾಗೇ ರಭಸವಾಗಿ ಒತ್ತಿ ಫುಸ್ ಎಂದು ಗಾಳಿ ಬರಿಸಲು ಖುಷಿಯಾಗುತ್ತಿತ್ತು. ಸೈಕಲ್ ನ ಸಣ್ಣಪುಟ್ಟ ರಿಪೇರಿ ಕೆಲಸಗಳಿಗೆ ಅಪ್ಪ ಸೈಕಲ್ ಅನ್ನು ರಿಪೇರಿ ಅಂಗಡಿಗೆ ತೆಗೆದುಕೊಂಡು ಹೋದದ್ದೇ ಇಲ್ಲ. ಅವನೇ ಅದನ್ನು  ಮನೆಯಲ್ಲಿ  ರಿಪೇರಿ ಮಾಡಲು ಇಳಿದು ಬಿಡುತ್ತಿದ್ದ.. ದೊಡ್ಡ ಕಾರು ರಿಪೇರಿ ಮಾಡುವವನಂತೆ. ನಾನು ಶ್ರದ್ಧೆಯಿಂದ  ಕಣ್ಣು ಬಿಟ್ಟುಕೊಂಡು ಅವನು ಮಾಡುತ್ತಿದ್ದ ಎಲ್ಲವನ್ನೂ ಹಾಗೇ ನೋಡುತ್ತಿದ್ದೆ. ಅಪ್ಪನ ಆ ಒಂದು ಹಿರೋ ಸೈಕಲೇ ನನಗೆ ಸೈಕಲ್ ಗೆ ಸಂಬಂದಿಸಿದಂತೆ ನನ್ನ ಮೊತ್ತ ಮೊದಲ ನೆನಪು.

ಸೈಕಲ್ ಎನ್ನುವುದು ಆ ದಿನಗಳಲ್ಲಿ ಸುತ್ತ ಮುತ್ತ ಮಾಮೂಲಿ. ಎಲ್ಲದಕ್ಕೂ ಸೈಕಲ್ ಪ್ರಧಾನವಾಗಿತ್ತು. ಅದನ್ನು ಬಾಡಿಗೆಗೆ ಎಂದು ಕೊಡಲು ಅಂಗಡಿಗಳು ಇದ್ದವು. ಅದರ ರಿಪೇರಿ ಅಂಗಡಿಗಳೂ ಕೂಡ ಅಲ್ಲಲ್ಲಿ ಇದ್ದವು. ಸೈಕಲ್ ಏರಿಯೇ  ಐಸ್ ಕ್ಯಾಂಡಿ ಮಾರುವವನು ಬರುತ್ತಿದ್ದ, ಮೀನು ಮಾರುವ ಅಸ್ಲಾಂ ಕೂಡ ತನ್ನ ಸೈಕಲ್ ಮುಂದಿದ್ದ ಹಾರನ್ ನಿಂದ ಪಾಂಗ್ ಪಾಂಗ್  ಸದ್ದು ಮಾಡುತ್ತಾ ಮನೆ ಮನೆಗೆ ಬರುತ್ತಿದ್ದ. ಅವೆಲ್ಲವೂ ನೆನಪಿದೆ. ಈಗ ಮನೆ ಮನೆಗೆ ಮೀನು ಬರುವವರ ಬಳಿ ಸ್ಕೂಟರ್ ಬಂದಿದೆ,ಸಣ್ಣ ಟೆಂಪೋ ಬಂದಿದೆ. ಸೈಕಲ್ ಹಾಗೇ ಮರೆಯಾಗಿದೆ.

ಅಪ್ಪನ ಸೈಕಲ್ ನ ಹಿಂದಿನ ಕ್ಯಾರಿಯರು ಲೆಕ್ಕಕ್ಕಿಂತ ದೊಡದೇ ಇತ್ತು.ಚಿಕ್ಕ ಇದ್ದುದನ್ನು ತೆಗೆದು ದೊಡ್ಡದು ಹಾಕಿಸಿದ್ದು  ಅಮ್ಮನಿಗಾಗಿ.ಏಕೆಂದರೆ ಅಮ್ಮನಿಗೆ ಹಲಸಿನ ಸೋಳೆಗಳನ್ನು ಉಪ್ಪಿನ ನೀರಿನಲ್ಲಿ ಹಾಕಿಡುವ ಭಯಂಕರ ಉಮೇದು ಆವಾಗ. ನಮ್ಮ ಮನೆಯಲ್ಲಿ ಹಲಸಿನ ಮರಗಳು ಇರಲಿಲ್ಲ. ಅದಕ್ಕಾಗಿ ಹಲಸಿನಕಾಯಿಯ ಸಮಯದಲ್ಲಿ ಎಲ್ಲೇ ಹಲಸಿಕಾಯಿ ಇದ್ದರೂ ಅವರಿಬರ ಬಳಿ ಹಲಸಿನ ಕಾಯಿಗಳನ್ನು ಕೇಳುತ್ತಿದ್ದಳು ಅಮ್ಮ.

ಅವರು ಬಂದು ತಗೊಂಡು ಹೋಗಿ ಎಂದರೆ ಅಪ್ಪನಿಗೆ ಹೇಳಿ ಆ  ಹಲಸಿನಕಾಯಿಗಳನ್ನು ಮನೆಗೆ ತರಿಸುತ್ತಿದ್ದಳು. ಈ ಹಲಸಿಕಾಯಿಗಳನ್ನು ಅಪ್ಪ ಬೇರೆಯವರ ಮನೆಯಿಂದ ಅವರ ಹೀರೋ ಸೈಕಲ್ ನ ಹಿಂದುಗಡೆಯ ಆ ದೊಡ್ಡ ಕ್ಯಾರಿಯರ್ಗೆ ಹಗ್ಗದಿಂದ ಗಟ್ಟಿಯಾಗಿ ಕಟ್ಟಿ ಹಾಗೇ ನಿಧಾನವಾಗಿ ಮನೆಗೆ ತರುತ್ತಿದ್ದರು.ನಂತರ ಮನೆಗೆ ಹಲಸಿನ ಕಾಯಿ ತಲುಪಿದ ಮೇಲೆ  ಅಮ್ಮ ಅದನ್ನು ತುಂಡು ತುಂಡು ಮಾಡಿ ಇಡುತ್ತಿದ್ದಳು.ಆ ರಾತ್ರಿಯೆಲ್ಲ ನಾನು ಅಪ್ಪ ಅಮ್ಮ ಹಾಗೂ ನನ್ನ ಸಹೋದರಿಯರಿಗೆ ಹಲಸಿನ ಸೋಳೆಗಳನ್ನು ಚೆನ್ನಾಗಿ ಬಿಡಿಸುವುದೇ ಅತೀ ದೊಡ್ಡ ಕೆಲಸವಾಗಿತ್ತು. ಬಿಡಿಸಿದ ನಂತರ ಅಮ್ಮ ಅದನ್ನು ಉಪ್ಪು ನೀರಿನಲ್ಲಿ ಹಾಕಿಡುತ್ತಿದ್ದಳು. ಉಪ್ಪು ನೀರಿನಲ್ಲಿ ಹಾಕಿಟ್ಟ ಹಲಸಿನ ಸೋಳೆ ಮಳೆಗಾಲದ ಆಟಿ ತಿಂಗಳಿಗೆ  ಹೇಳಿ ಮಾಡಿಸಿದ್ದು. ಅದರದ್ದೊಂದು ಪಲ್ಯ ಗಂಜಿ ಊಟಕ್ಕೆ ಬಲು ಸೊಗಸಾದ ಜೋಡಿ.

ಚಿಕ್ಕಂದಿನಲ್ಲಿ ಅಪ್ಪನೇ ಸೈಕಲ್ ಬಿಡುತ್ತಿದ್ದ. ನಾನು ಸ್ವಲ್ಪ ದೊಡ್ಡವನಾದ ನಂತರ ಸೈಕಲ್ ಬಿಡಲು ಕೇಳುವುದಕ್ಕಿಂತಲೂ ಅವನಿಗೆ ನಾನು ಸೈಕಲ್ ಬಿಡುವುದು ಅಂದರೆನೇ ಹೆದರಿಕೆ ಆಗುತ್ತಿತ್ತು. ಹೋದಲೆಲ್ಲಾ ಬಿದ್ದು ಗಾಯ ಮಾಡಿಕೊಂಡು ಬರುತ್ತಿದ್ದ ನನಗೆ ಅಪ್ಪ ಸೈಕಲ್ ಕೊಡಿಸುವ ಸಾಹಸ ಮಾಡಲಿಲ್ಲ. ನಾನು ಸ್ವಲ್ಪ ದೊಡ್ಡವನಾದ ಮೇಲೆಯೂ ಸಹ ಬೇರೆಯವರ ಸೈಕಲ್ ಅನ್ನು ಕಲಿಯುವ ಸಾಹಸಕ್ಕೆ ಕೂಡ  ಕೈ ಹಾಕಲಿಲ್ಲ.ಶಾಲೆಯಲ್ಲಿ  ಸೈಕಲ್ ಬಿಡಲು ಬರುವುದಿಲ್ಲ ಎಂದು ಹೇಳಿದಾಗ ಎಲ್ಲರೂ ನನ್ನನ್ನು ನೋಡಿ ನಗುತ್ತಿದ್ದರು. ಯೆಬೆ.. ನಿನಗೆ ಸೈಕಲ್ ಬಿಡ್ಲಿಕ್ಕೆ ಕೂಡ ಬರುವುದಿಲ್ವನಾ.... ಎಂದು.

ನಾನು ಹೈಸ್ಕೂಲ್ ನಲ್ಲಿ ಎನ್.ಸಿ.ಸಿ ಯಲ್ಲಿ ವಾಯು ವಿಭಾಗಕ್ಕೆ  ಸೇರಿಕೊಂಡೆ.. ಯಾರಾದರೂ ನಿನಗೆ ಸೈಕಲ್ ಬಿಡ್ಲಿಕ್ಕೆ ಬರುವುದಿಲ್ಲವಾ ಎಂದು ಕೇಳಿದಾಗಲೆಲ್ಲ... ಸೈಕಲ್ ಎಲ್ಲಾ ಯಾರು ಬಿಡ್ತರಾ.. ನೋಡು ಮುಂದೆ ನಾನು ವಿಮಾನವನ್ನೇ ಹಾರಿಸ್ತೇನೆ... ಹೇಗೋ ವಾಯು ವಿಭಾಗದಲ್ಲಿಯೇ ಎನ್.ಸಿ.ಸಿ ಯಲ್ಲಿ ಸಹ ಇದ್ದೇನೆ ಅಲ್ವಾ... ಎಂದು ಏನೇನೋ ದೊಡ್ಡ ದೊಡ್ಡದೇ  ಹೇಳುತ್ತಿದ್ದೆ. ಅದಕ್ಕೆ ಅವರು ನೀನು ರೈಲು ಬಿಡು ವಿಮಾನ ಎಲ್ಲಾ ನಿನಗೆ ಸರಿ  ಹೊಂದುವುದಿಲ್ಲ... ಎಂದು ಹೇಳುತ್ತಿದ್ದರು. ನಾನು ರೈಲು ಬಿಡದಿದ್ದರೂ... ವಿಮಾನ ಬಿಡದಿದ್ದರೂ... ದೀಪಾವಳಿಗೆ ಬಾಟಲಿಯಲ್ಲಿರುವ ರಾಕೆಟ್ ಗೆ ಬೆಂಕಿ ಹಚ್ಚೆ ಅಂತರಿಕ್ಷಕ್ಕೆ ಮಾತ್ರ ಪ್ರತೀ ವರ್ಷವೂ ರಾಕೇಟು ಕಳುಹಿಸುತ್ತಿದ್ದೆ. ನನ್ನ ಅಪ್ಪನ ಪುಣ್ಯಕ್ಕೆ ಅದು ಯಾವ ಮುಳಿ ಹುಲ್ಲು ಸೂರಿನ ಮನೆಯ ಮೇಲೆ ಬೀಳದೆ, ಹಾಗೇ ಮೇಲೆ ಹೋಗಿ ಪೂರ್ತಿ ಉರಿದು ಪಕ್ಕದ ರೋಡಿನಲ್ಲೋ... ಮೈದಾನದಲ್ಲಿಯೋ ಬಿದ್ದಿರುತ್ತಿತ್ತು.

ಎಲ್ಲಿಯವರೆಗೆ ಅಂದರೆ ನಾನು ಪದವಿಗೆ ತರಗತಿಗೆ  ಬರುವವರೆಗೂ ಸೈಕಲ್ ಬಿಡುವುದನ್ನು ಒಂದು ಕಲಿಯಲೇ ಇಲ್ಲ!

ಒಂದು ದಿನ ಪ್ರಬಲವಾಗಿ ಜ್ಞಾನೋದಯ ಆಯಿತು.ಇನ್ನು ನನಗೆ ಸೈಕಲ್ ಬ್ಯಾಲೆನ್ಸು ಬರದಿದ್ದರೆ ಮುಂದೆ ನಾನು ದ್ವಿಚಕ್ರ ವಾಹನ ಓಡಿಸಲು ಖಂಡಿತಾ ಸಾಧ್ಯವಿಲ್ಲ ಎಂದು.ನನಗೆ ಅಂತಹ ಜ್ಞಾನೋದಯ ಆಗುವಾಗ ಹೊತ್ತು ಮೀರಿತ್ತು. ಆದರೂ  ಕಲಿಕೆಗೆ ವಯಸ್ಸಿನ ಅಂತರವೆಲ್ಲಿ. ದೊಡ್ಡ ದೊಡ್ಡ ಸಾಧಕರು ತುಂಬಾ ದೊಡ್ಡವರಾದ ಮೇಲೆಯೂ ಕೂಡ ಏನೇನೆಲ್ಲಾ ಕಲಿತಿಲ್ಲ ಎಂದು ನನಗೆ ನಾನೇ  ಸಮಾಧಾನ ಪಟ್ಟುಕೊಂಡು,ಏನೇ ಆಗಲಿ ಈ ಸಲ ಸೈಕಲ್ ಒಂದು ಕಲಿಯುವುದೇ.. ಎಂದು ಮನಸ್ಸಿನಲ್ಲಿಯೇ ದೃಢ ನಿರ್ಧಾರ,ದೃಢ ಸಂಕಲ್ಪ ಎಲ್ಲಾ ಮಾಡಿದೆ.

ಪದವಿ ಕಲಿಯುವಾಗ ಒಂದು ಕಡೆ ಬಾಡಿಗೆ ಮನೆಯಲ್ಲಿ ಇದ್ದದ್ದು ನಾನು ಮತ್ತು ನನ್ನ ಐದು ಗೆಳೆಯರು. ಪಕ್ಕದಲ್ಲಿಯೇ ಸುಹಾನ್ ಅಂತ ಒಬ್ಬ ಚಿಕ್ಕ ಹುಡುಗ ಇದ್ದ.ಅವನ ಬಳಿ ಒಂದು ಸಣ್ಣ ಸೈಕಲ್ ಇತ್ತು. ನಾನು ಅವನಿಗೆ ಹೇಳಿದೆ.. ಹೇಯ್ ಸುಹಾನ್.. ನನಗೆ ನಿನ್ನ ಆ ಸೈಕಲ್ ಕಲೀಲಿಕ್ಕೆ  ಕೊಡ್ತೀಯಾ ಅಂತ. ಅದಕ್ಕೆ ಅವನು ಯೆಬೆ.. ಎಂತ ಅಣ್ಣ.. ನಿಮಗೆ ಇನ್ನೂ  ಸೈಕಲ್ ಬಿಡ್ಲಿಕ್ಕೆನೇ  ಬರುವುದಿಲ್ಲವ... ಎಂದು ಹೇಳಿ ನನ್ನನ್ನೊಮ್ಮೆ ಮೇಲೆ ಕೆಳಗೆ ಹಾಗೆ ನೋಡಿದ್ದ.

ಆಯ್ತು ಮರ್ರೆ.. ಕೊಡ್ತಿ ಆದ್ರೆ ಕೊಡು..ಇಲ್ಲದಿದ್ದರೆ ಬೇಡ.. ಆದರೆ ಮಕ್ಕರ್ ಮಾತ್ರ ಮಾಡ್ಬೇಡ..ಅಂದೆ.

ಅವನಿಗೆ ಬಹುಶಃ ನನ್ನನ್ನು ನೋಡಿ ಅಯ್ಯೋ  ಪಾಪ ಅನಿಸಿರಬೇಕು, ಕನಿಕರ ಬಂದಿರಬಹುದು... ನೀವು ಏನು ಚಿಂತೆ ಮಾಡ್ಬೇಡಿ ಅಣ್ಣ.. ನಿಮಗೆ ಸೈಕಲ್ ಕಲಿಸಿ ಕೊಡುವ ಜವಾಬ್ದಾರಿ ನನ್ನದು ಎಂದ. ಅವನು ಹೇಳಿದ ರೀತಿ ನಿಮ್ಮನ್ನು ಒಲಿಂಪಿಕ್ಸ್ ಗೆ  ತಯಾರಿ ಮಾಡುವ ಜವಾಬ್ದಾರಿ ನನ್ನದೇ ಎಂದು ಹೇಳಿದ ಹಾಗೆ ಇತ್ತು.ಅದು ಸ್ವಲ್ಪ ಹಾಗೆಯೇ, ನಮಗೆ ಏನಾದರೂ ಗೊತ್ತಿಲ್ಲದಿದ್ದರೆ ಈ ಚಿಕ್ಕ ಮಕ್ಕಳು ಕೂಡ ನಮಗೆ ಎಲ್ಲವನ್ನೂ ಕಲಿಸಿಕೊಡುವ ದೊಡ್ಡ ತರಬೇತುದಾರರಾಗಿ ಬಿಡುತ್ತಾರೆ.ಒಟ್ಟಿನಲ್ಲಿ ನನ್ನ ಕರ್ಮಕ್ಕೆ ನನಗೆ ಈ ಸುಹಾನ್ ಸಿಕ್ಕಿದ್ದನೋ..ಅಥವಾ ಅವನ ಹಣೆಬರಹಕ್ಕೆ ನಾನು  ಅವನಿಗೆ ಸಿಕ್ಕಿದೆನೋ.. ಎರಡೂ ಗೊತ್ತಾಗಲಿಲ್ಲ.

ಮರುದಿವಸವೇ ಅವನ ಅರ್ಧ ಗುಜರಿ ಆದ ಸೈಕಲ್ ನೊಂದಿಗೆ ನಮ್ಮ ಬಾಡಿಗೆ ಮನೆಯ ಅಂಗಳದಲ್ಲಿ ಪ್ರತ್ಯಕ್ಷನಾಗಿ... ಬನ್ನಿ ಅಣ್ಣ.. ಶುರು ಮಾಡುವ... ಇವತ್ತಿನಿಂದ ನಿಮಗೆ ಸೈಕಲ್ ನಾನು ಕಲಿಸಿ ಕೊಡ್ತೇನೆ.. ಎಂದು ಗತ್ತಿನಿಂದಲೇ ಹೇಳಿದ್ದ. ಚಿಕ್ಕ ವಯಸ್ಸಿಗೆನೇ ಬಹಳ ದೊಡ್ಡ ದ್ರೋಣಾಚಾರ್ಯ ಆಗಿದ್ದ ಅವನು.

ಅದು ಚಿಕ್ಕ ಅಂಗಳ. ಹಾಗಾಗಿ ಮೆಲ್ಲ ಮೆಲ್ಲನೆ ವೃತ್ತಕ್ಕಾರವಾಗಿ ಅಂಗಳದಲ್ಲಿಯೇ ಸುತ್ತು ಬರಬೇಕಾಗಿತ್ತು. ಆದರೆ ಸುಹಾನನ ಅತ್ಯಧ್ಭುತ ತರಬೇತಿ ಹಾಗೂ ನನ್ನ ಪದವಿ ಗೆಳೆಯರ ಒಟ್ರಾಸಿ ಪ್ರೋತ್ಸಾಹದಿಂದ ನಾನು ನಮ್ಮ ಮನೆಯ ಅಂಗಳದಲ್ಲಿಯೇ ಆ ಚಿಕ್ಕ ಸೈಕಲ್ ನಲ್ಲಿ ಸುತ್ತು ಹಾಕುವುದು ಒಂದನ್ನು ಬಾರೀ ಕಷ್ಟಪಟ್ಟು ಕಲಿತೆ.

ಅದಕ್ಕಾಗಿ ಪ್ರತೀ ದಿನ ಸಂಜೆ ಬೇಗ ಮನೆಯ ಕಡೆಗೆ ಬಂದು ಅಂಗಳದಲ್ಲಿ ಸುಹಾನನ ಸೈಕಲ್ ನಲ್ಲಿ ಸುತ್ತು ಬರುತ್ತಿದ್ದೆ. ಒಂದು ದಿನ ನಮ್ಮ ಕಾಲೇಜಿನ ಬಸ್ಸು ಮನೆಯ ಮೇಲಿನ ರಸ್ತೆಯಲ್ಲಿ  ಹೋಗುವಾಗ ಅದರಲ್ಲಿದ ಕಾಲೇಜಿನ ಹಾಗೂ ತರಗತಿಯ ಹುಡುಗಿಯರು ಆ ಚಿಕ್ಕ ಸೈಕಲ್ ಕಷ್ಟಪಟ್ಟು ಬಿಡುತ್ತಿದ್ದ ನನ್ನನ್ನು ನೋಡಿ... ಹೋ... ಎಂದು ಬೊಬ್ಬೆ ಹಾಕಿ ಬಿಟ್ಟರು.ಇದು ಹೀಗೆ ಮುಂದುವರಿದರೆ ತರಗತಿಯಲ್ಲಿ ನನ್ನ ಒಟ್ರಾಸಿ ಮಾನ ಮರ್ಯಾದೆ ಹರಾಜು ಆಗ್ತದೆ ಅಂತ ನಿರ್ಧರಿಸಿ ಆ ನಂತರ ಅಂಗಳದಲ್ಲಿ ಸೈಕಲ್ ನಲ್ಲಿ ಸುತ್ತು ಸುತ್ತುವುದನ್ನು ನಿಲ್ಲಿಸಿ ಬಿಟ್ಟೆ.

ಆದರೂ ನಾನು ಏನಾದರೂ ಒಂದು ಸಾಹಸ ಮಾಡಲೇಬೇಕಿತ್ತು. ನನ್ನೊಳಗಿನ ಸೈಕಲ್ ಚತುರನಿಗೆ ರಾತ್ರಿ ಎಲ್ಲಾ ನಿದ್ರೆಯೇ  ಬರುತ್ತಿರಲಿಲ್ಲ. ಮರುದಿನ ಸುಹಾನ್ ಗೆ ಕರೆದು ಮತ್ತೆ ಹೇಳಿದೆ.. ಹೇಯ್ ಸುಹಾನ್ ನೋಡ,ಹೇಗೋ ನಾನು ಈಗ ಸೈಕಲ್ ಬಿಡುವುದರಲ್ಲಿ ಅಪ್ರತಿಮ ಪರಿಣಿತಿಯನ್ನು ಸಾಧಿಸಿದ್ದೇನೆ..ಅದು ಹೇಗೋ ನಿನಗೆ ಕೂಡ ಗೊತ್ತುಂಟಲ್ಲಾ.. ಯಾಕೆ ನಾವು ಇನ್ನು ನೇರವಾಗಿ ರಸ್ತೆಗೆ ಇಳಿಯಬಾರದು..?

ಅದಕ್ಕೆ ಅವನು ಹೇಳಿದ... ಓ ಅಣ್ಣಾ... ವಾಹನದ ಅಡಿಗೆ ಬಿದ್ದು ಸಾಯ್ತೀರಾ ಮರ್ರೆ...ನನಗೆ ನಿಮ್ಮ ಮೇಲೆ ಸ್ವಲ್ಪ ಸ ಧೈರ್ಯವಿಲ್ಲ..ದಯವಿಟ್ಟು ಇಂತಹ ಹುಚ್ಚು ಸಾಹಸಕ್ಕೆ ಕೈ ಹಾಕ್ಬೇಡಿ... ಎಂದು ಹೇಳಿದ್ದ.

ಹೇಯ್ ಹೋಗು ಮರ್ರೆ ... ನನಗೇ  ಹೇಳ್ತೀಯಾ... ಈಗ ನೋಡು ..ನಾನು ಮಾಡಿ ತೋರಿಸುವೆನು ಒಂದು ಅಧ್ಬುತ ಚಮತ್ಕಾರವ.. ಎಂದು ಹೇಳಿ ನೇರವಾಗಿ ಅವನ ಆ ಪುಟ್ಟ ಸೈಕಲ್ ಎತ್ತಿಕೊಂಡು ಮನೆಯ ಮೇಲಿನ ರಸ್ತೆಗೆ ಹೋದೆ. ಅವನು ಬೇಡ.. ಬೇಡ.. ಸೈಕಲ್ ಹಾಳಾದರೆ ಮನೆಯಲ್ಲಿ ಅಪ್ಪ ಬೈತಾರೆ ಅಂದ ಬಾಯಿ ಬಡಿದುಕೊಳ್ಳುತ್ತಲೇ ಇದ್ದ.

ಬಡ್ಡಿ ಮಗನೇ..ನನಗೆ ಏನಾದರೂ ಪರವಾಗಿಲ್ಲ.... ಆದ್ರೆ ನಿನ್ನ ಈ ಗುಜರಿ ಸೈಕಲ್ ಗೆ ಏನೂ ಆಗಬಾರದು ಅಲ್ವಾ.. ಎಂದು ಮನಸ್ಸಿನಲ್ಲಿಯೇ ಹೇಳಿಕೊಂಡು,ರಸ್ತೆಗೆ ಹೋಗಿ ಸೈಕಲ್ ಹತ್ತಿ ಕುಳಿತೇ ಬಿಟ್ಟೆ.ಇದುವೇ  ನಾನು ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಸೈಕಲ್ ಅನ್ನು ರಸ್ತೆಗೆ ಇಳಿಸಿದ್ದು. ಚಿಕ್ಕಂದಿನಲ್ಲಿ ಮಾಡಿದ್ದು ಕೇವಲ ಅಪ್ಪನ ಹೀರೋ ಸೈಕಲ್ ಮೇಲೆ,ನನ್ನದೊಂದು ಸುಮ್ಮನೆ ಕುಳಿತುಕೊಂಡು ಸವಾರಿ ಅಷ್ಟೇ.

ನಾನು  ಸೈಕಲ್ ನಲ್ಲಿ ಹೋಗಿ ನಿಂತ ಜಾಗ ಹೇಗಿತ್ತು ಎಂದರೆ ಅದೊಂದು ಗುಡ್ಡಗಾಡಿನ ಅತೀ  ದೊಡ್ಡ ಇಳಿಜಾರು ಪ್ರದೇಶವಾಗಿತ್ತು.ಆ ಮನೆಯ ಸುತ್ತ ಮತ್ತ ಬರೀ ಗುಡ್ಡವೇ ಇದ್ದದ್ದು. ಆ ಇಳಿಜಾರಿನ ತುದಿಯಲ್ಲಿಯೇ ಹೋಗಿ ನಾನು  ನಿಂತುಕೊಂಡಿದ್ದೆ. ಕೆಳಗೆ ಬರುವಾಗ ಸೈಕಲ್ ತುಳಿಯಲು ಇರುವುದಿಲ್ಲ ಅಲ್ವಾ ಅದಕ್ಕಾಗಿ. ಸುಹಾನ್ ಬೊಬ್ಬೆ ಹೊಡೆಯುತ್ತಿದ್ದ.. ಅಣ್ಣಾ ನಿಮಗೆ ಸ್ವಲ್ಪ ಸ ಬ್ಯಾಲೆನ್ಸು ಬರುವುದಿಲ್ಲ...ಯಾವುದಾದರು ವಾಹನದ ಅಡಿಗೆ ಬಿದ್ದು ಧರ್ಮಕ್ಕೆ ಸಾಯ್ತೀರಾ.. ದಮ್ಮಯ್ಯ ಬೇಡ...ಹಾಗೇ ಹೀಗೆ ಅಂತ..ಏನೇನೋ ಹೇಳುತ್ತಲೇ ಇದ್ದ. ಸೈಕಲ್ ಅವನದಲ್ವ ಹಾಗಾಗಿ ಅವನಿಗೆ ಅದರ ಚಿಂತೆ. ನನ್ನದಲ್ಲ.

ಕೊನೆಗೆ ಮನೆಯ ದೇವರನ್ನು, ಗ್ರಾಮ ದೇವರನ್ನು ಹಾಗೂ ಇಷ್ಟ ದೇವರನ್ನು ಒಮ್ಮೆ ಮನದಲ್ಲಿಯೇ ಪ್ರಾರ್ಥಿಸಿ ಎದುರಿನಲ್ಲಿ ಯಾವುದೇ ಒಂದು ಭಯಾನಕವಾದ ವಾಹನ ಸವಾರ ಬರದೇ ಇರುವುದನ್ನು ಪದೇ ಪದೇ ಖಚಿತಪಡಿಸಿಕೊಂಡು,ಅದೇ ರೀತಿ ಇನ್ನು ಮುಂದೆಯೂ ನಾನು ಕೆಳಗೆ ತಲುಪುವವರೆಗೂ ಬೇರೆ ಯಾವುದೇ ವಾಹನ ಕೆಳಗಿನಿಂದ ಮೇಲಕ್ಕೆ ಬರದೇ ಇರಲಿ ಎಂದು ಮತ್ತೊಮ್ಮೆ ಮಗದೊಮ್ಮೆ ಬಲವಾಗಿ ಪ್ರಾರ್ಥಿಸಿ ವೇಗವಾಗಿ ಕೆಳಗೆ ಬಂದೇ ಬಿಟ್ಟೆ. ಆಗಲೇ ಕೆಳಗಿನಿಂದ ಮೇಲಕ್ಕೆ ಒಬ್ಬ ರಿಕ್ಷಾದವನು ರಪ್ಪನೇ  ವೇಗವಾಗಿ ಬಂದದ್ದು!

ಅಷ್ಟೇ..!

ಸುಹಾನನ ಬಾಯಿ ಮಾತಿನಂತೆ ಹೆದರಿಕೆಯಿಂದ ಕೈ ನಡುಗಿ ನನ್ನ ಬ್ಯಾಲೆನ್ಸು ತಪ್ಪಿತ್ತು. ಎದುರಿಗೆ ಬರುತ್ತಿರುವ ರಿಕ್ಷಾದವನತ್ತಲೇ ನನ್ನ ಸೈಕಲ್ ಹೋಯಿತು, ಇನ್ನು ಅದರಡಿಗೆ ಬಿದ್ದು ಸಾಯುವುದು ಬೇಡ ಎಂದು ಕೊನೆಯ ಕ್ಷಣದಲ್ಲಿ ನಿರ್ಧರಿಸಿ,ನಾನು ರಸ್ತೆಯಿಂದ ನನ್ನ ಸೈಕಲನ್ನು ಎಡಗಡೆ ರಪ್ಪನೇ ತಿರುಗಿಸಿದೆ. ಹೀಗೆ ರಿಕ್ಷಾಕ್ಕೆ ದಾರಿ ಕೊಡಲು ಹೋಗಿ ನಾನು ರಸ್ತೆಯ ದಾರಿ ತಪ್ಪಿ, ರಸ್ತೆಯ ಪಕ್ಕದ ಕೆಳಗಿನ ದೊಡ್ಡ ಹಳ್ಳದ ಪೊದೆಯೊಳಗೆ ಬಿದ್ದು ಬಿಟ್ಟೆ. ತಲೆ ಕೈ ಕಾಲುಗಳನ್ನೆಲ್ಲ  ಪೊದೆಯ ಅದು ಯಾವುದ್ಯಾವುದೋ ಬಳ್ಳಿಗಳಿಂದ ಕಟ್ಟಿ ಹಾಕಿದಂತಿತ್ತು. ಶಕ್ತಿಮದ್ದಿನಲ್ಲಿ ಬರುವ ಲಂಬೋದರ, ವೀರ ಬಾಲಕ ಕೂಡ ಹೀಗೆ ಅಲ್ಲಾ ಪೊದೆಯಿಂದೆಲ್ಲ ಎದ್ದು ಬರುವುದು ಅಂತ ಆಗಲೂ ಬಾಲಮಂಗಳವೇ ನನಗೆ ಅತಿಯಾಗಿ ನೆನಪಾಯಿತು.

ಮೇಲೆ ಏಳಲು ಆಗಲಿಲ್ಲ. ಪಾಪ ರಿಕ್ಷಾದವ ಹಿಂದೆ ತಿರುಗಿ ಬಂದು... ಎಂತ ಮರಾಯರೇ ನಿಮಗೊಂದು ಸೈಕಲ್ ಬಿಡ್ಲಿಕ್ಕೆ ಸ  ಬರುವುದಿಲ್ಲವಾ... ಎಂದು ನಗುತ್ತಾ,ಮಕ್ಕರ್ ಮಾಡುತ್ತಾ ಹೇಳಿ, ಕೊನೆಗೆ ಗುಂಡಿಯಿಂದ ಮೇಲೆ ಬರ್ಲಿಕ್ಕೆ ನನಗೆ ಸಹಾಯ ಹಸ್ತ ಚಾಚುವ ಮನಸ್ಸು ಮಾಡಿದ್ದ. ನಾನು ಅವನಿಗೆ.. ಬೇಡ.. ಬೇಡ.. ಏನೂ ಆಗಿಲ್ಲ... ನೀವು ಹೋಗಿ.. ಹೋಗಿ.. ಎಂದು ಬರೀ ಕೈ ಸನ್ನೆಯಲ್ಲಿಯೇ ಹೇಳಿ ಅವನನ್ನು ಅಲ್ಲಿಂದ ಕಳುಹಿಸಿದೆ.

ಅವನು ಪುನಃ.. ಎಂತ ಜನ ಮರ್ರೆ ಇಷ್ಟು ದೊಡ್ಡವನಾಗಿ ಒಂದು ಸೈಕಲ್ ಬಿಡ್ಲಿಕ್ಕೆ ಕೂಡ ಬರುವುದಿಲ್ಲ... ಧರ್ಮಕ್ಕೆ ಈಗ ನನ್ನ ರಿಕ್ಷಾ ದ ಅಡಿಗೆ ಬಿದ್ದು ಪಡ್ಚ ಆಗ್ತಾ ಇದ್ದ ಮಾರಿ.. ದೇವರು ದೊಡ್ಡವನು.. ನಾನು ಬದುಕಿದೆ.. ಎಂದು ಅವನ ಮನೆ ದೇವರಿಗೆ ಧನ್ಯವಾದ ಹೇಳಿ ಅಲ್ಲಿಂದ ತನ್ನ ರಿಕ್ಷಾದೊಂದಿಗೆ ಹೋಗಿಯೇ ಬಿಟ್ಟ.

ಗುಂಡಿಯ ಪೊದೆಯೊಳಗೆ ಬಿದ್ದಿದ್ದ ನಾನು ಆಮೇಲೆ ನನ್ನ ಮೈ ಮೇಲೆ ಕಟ್ಟಿ ಹಾಕಿಕೊಂಡಿದ್ದ, ಬಾಯಲೆಲ್ಲಾ ತುಂಬಿಕೊಂಡಿದ್ದ ಆ ಪೊದೆಯ ಬಳ್ಳಿಗಳನ್ನು ಕಿತ್ತು ಪಕ್ಕಕ್ಕೆಸೆದು ಹೇಗೋ ಕೊನೆಗೂ ಹರಸಾಹಸ ಮಾಡಿ ಮೇಲೆ ಬಂದೇ ಬಿಟ್ಟೆ. ಆವಾಗಲೇ ನಾನು ಸರಿಯಾಗಿ ನೋಡಿದ್ದು ಸುಹಾನನ ಗುಜುರಿ ಸೈಕಲ್ ಒಂದು ಕಡೆಯಲ್ಲಿ ನಜ್ಜು ಗುಜ್ಜಾಗಿ ಮುರಿದು ಹೋಗಿತ್ತು ಮತ್ತು ನನ್ನ ಕಾಲಿಗೆ ಗಾಯವಾಗಿ ಜೋರಾಗಿ ರಕ್ತ ಹರಿದಿತ್ತು.

ಬಿದ್ದಾಗ ಸುಹಾನ್ ಹತ್ತಿರ ಬಂದಿರಲಿಲ್ಲ..ನಾನು ಬಿದ್ದು ಎದ್ದಾಗ ಹತ್ತಿರ ಬಂದು ಅವನ ಆ ಗುಜುರಿ ಸೈಕಲ್ ನ ಅವಸ್ಥೆ ನೋಡಿ....ತಲೆಯ ಮೇಲೆ ಕೈ ಹೊತ್ತುಕೊಂಡು....

ಅಯ್ಯಯ್ಯೋ... ನನ್ನ ಸೈಕಲ್ ಹೋಯಿತು.. ನನ್ನನ್ನು ಸಾಯಿಸಿ ಬಿಟ್ರಿ.. ಇನ್ನು ಅಪ್ಪ ಮನೆಯಲ್ಲಿ ನನಗೆ ಸರೀ ಹೊಡಿತಾರೆ.. ಎಂದು ಜೋರಾದ ಆಕ್ರಂದನ ಹಾಗೂ ಬಲವಾದ ಆಕ್ರೋಶ ಎರಡನ್ನೂ ವ್ಯಕ್ತಪಡಿಸಿದ್ದ.

ನನ್ನ ಮಗನೇ.. ನಿನ್ನ ಬಾಯಿಯ ಮಚ್ಚೆಯಿಂದಾಗಿ ನನ್ನ ಜೀವ ಉಳಿದದ್ದೇ ಜಾಸ್ತಿ.. ಈಗಲೂ  ನಿನಗೆ ಸೈಕಲ್ ಚಿಂತೆಯಾ ಅಂದು ಹೇಳಬೇಕೆಂದು ಅನಿಸಿದರೂ, ಚಿಕ್ಕ ಹುಡುಗ ಅಲ್ವಾ.. ಹಾಗಾಗಿ ಹಾಗೇನೂ ಹೇಳದೆ... ಸುಹಾನ್ ಅದರ ಖರ್ಚು ಕೊಡುವನಾ.. ನೀನು ಚಿಂತೆ ಮಾಡ್ಬೇಡ.. ನಾನಿದ್ದೇನೆ ಅಲ್ಲ.. ಎಂದದಕ್ಕೆ ಅವನು.. ನೀವು ಇರುವುದೇ ನನಗೆ ದೊಡ್ಡ ಚಿಂತೆ.. ಎಂದು ಹೇಳಿ ಅವನ ಹಾಳಾದ ಆ ಗುಜಿರಿ ಸೈಕಲ್ ಎತ್ತಿಕೊಂಡು ಮನೆಯ ಕಡೆಗೆ ಅಳುತ್ತಲೇ ನಡೆದಿದ್ದ.

ನಂತರ ಗೆಳೆಯ ಗಣೇಶನ ಜೊತೆಗೆ ಆಸ್ಪತ್ರೆಗೆ ಹೋಗಿ ಗಾಯದ ಮೇಲೆ ಬ್ಯಾಂಡೇಜು ಎಲ್ಲಾ ಹಾಕಿಸಿ ಬಂದಿದ್ದೆ. ಅದರ ಪುಟಗಳನ್ನು ತೆಗೆದು ತರಗತಿಯ ವಾಟ್ಸಾಪು ಗುಂಪಿಗೆ ಹಾಕಿದಾಗ.... ಇವನಿಗೇನೋ ದೊಡ್ಡ ಅಪಘಾತವಾಗಿರಬೇಕು ಅಂದುಕೊಂಡು.. ಬೇಗ ಹುಷಾರಾಗಿ ಬಾ ಗೆಳೆಯ ಎಂಬ  ಸಂದೇಶಗಳನ್ನು ಗುಂಪಿನಲ್ಲಿನ  ಹೆಚ್ಚಿನವರು ಹಾಕಿದ್ದರು.ನನ್ನ ವಿಷಯ ಗೊತ್ತಿದ್ದ ಕೆಲವು ಗೆಳೆಯರು... ಎದ್ದು ಬಿದ್ದು ಗೆದ್ದು ಬಾ ಗೆಳೆಯ.. ಎಂಬ  ಸಂದೇಶ ಕೂಡ  ಕಳುಹಿಸಿದ್ದರು. ನಾನು ಗೆದ್ದಿದೆನೋ ಇಲ್ಲವೋ ಗೊತ್ತಿರಲಿಲ್ಲ.. ಆದರೆ ಬಿದ್ದು ಎದ್ದು ಬಂದಿದ್ದೆ ಮಾತ್ರ.

ಗಾಯ ಚಿಕ್ಕವೇ ಇತ್ತು.. ಆದರೂ ಒಂದೆರಡು ದಿನಗಳಲ್ಲಿ ಕಟ್ಟಿದ ಬ್ಯಾಂಡೇಜು ಕೂಡ ಹರಿದು ಹೋಗಿತ್ತು.ಹಾಗಾಗಿ ಮತ್ತೆ ಆಸ್ಪತ್ರೆಗೆ ಹೋಗುವುದಕ್ಕೆ ಉದಾಸೀನ ಆಗಿ ಪ್ಯಾಂಟ್ ಮೇಲೆ ಇನ್ನೊಂದು ಪ್ಯಾಂಟು, ಅಂದರೆ ಎರಡೆರಡು ಪ್ಯಾಂಟು ಹಾಕಿಕೊಂಡು ತರಗತಿಗೆ ಹೋಗಿದ್ದೆ. ಅದು ನನಗೇನು ಅಂತಹ ದೊಡ್ಡ ವಿಷಯ ಆಗಿರಲಿಲ್ಲ ಹಾಗಾಗಿ ಅದನ್ನು ನಾನು ಮರೆತಿದ್ದೆ.. ಆದರೆ ನನ್ನೊಡನೆ ಇದ್ದ  ಆ ಮನೆಯ ಇಬ್ಬರು ಗೆಳೆಯರು ಮಾತ್ರ ಇಂದಿಗೂ ಅದನ್ನು ಮರೆತೇ ಇಲ್ಲ...ಆ ಒಂದು ಚಿಕ್ಕ ಗಾಯಕ್ಕೆ ನಾನು ಹಾಕಿಕೊಂಡು ಹೋಗಿದ್ದ ಎರಡೆರಡು ಪ್ಯಾಂಟು ನನಗೆ ಸಂಬಂಧಿಸಿದಂತೆ ಅವರಿಗೆ ಎಂದಿಗೂ ಮರೆಯಲಾಗದ ಸವಿ ಸವಿ ನೆನಪು ಅಂತೆ. ಯಾಕೆ ಹಾಗೆ.. ಎಂದು ನಾನವರ ಬಳಿ ಕೇಳಿದ್ದಕ್ಕೆ.. ಪ್ಯಾಂಟು ಮೇಲೆ ಇನ್ನೊಂದು ಪ್ಯಾಂಟು ಹಾಕಿಕೊಂಡು ಕಾಲೇಜಿಗೆ ಹೋಗಿರುವವನನ್ನು ನಾವು ಈ ಮೊದಲು ಎಲ್ಲಿಯೂ ನೋಡಿಯೇ ಇಲ್ಲ ಎಂದು  ಬಾಯಿ ಮೇಲೆ  ಕೈ ಹಿಡಿದುಕೊಂಡು ಈಗಲೂ ಈ ವಿಷಯ ನೆನಪಾಗಿ ಎದ್ದು ಬಿದ್ದು ನಗುತ್ತಾರೆ ಅವರು.

ಈ ಸೈಕಲ್ ಅಪಘಾತದಿಂದಾಗಿ ನನ್ನ ದ್ವಿಚಕ್ರ ವಾಹನದ ಕನಸು ನನಸಾಗಿಯೇ ಉಳಿಯಿತು.ಆದರೆ ಸೂರಜ್ ಅಂತ ಒಬ್ಬ ಗೆಳೆಯ ಇದ್ದ. ಅವ ಹೇಳ್ತಾ ಇದ್ದ.. ಯೆಬೆ.. ದ್ವಿಚಕ್ರ ವಾಹನ ಬಿಡ್ಲಿಕ್ಕೆ ಸೈಕಲ್ ಎಲ್ಲ ಬಿಡ್ಲಿಕ್ಕೆ ಬರ್ಲೇ ಬೇಕು ಅಂತ ಏನೂ ಇಲ್ಲವ.. ಎಷ್ಟೋ ಜನ ನೇರವಾಗಿ ದ್ವಿಚಕ್ರ ವಾಹನವನ್ನೇ ಬಿಟ್ಟವರು ಇದ್ದಾರೆ.. ಎಂದು ನನ್ನನ್ನು ಮತ್ತೆ ಹುರಿದುಂಬಿಸಿದ.

ಕೊನೆಗೂ ಆ ನಂತರ ನಾನು ಆಗೋ ಹೀಗೋ  ದ್ವಿಚಕ್ರ ವಾಹನ  ಬಿಡಲು ಕಲಿತೆ. ಚಾಲನಾ ಪರವಾನಿಗೆ ಪತ್ರ ಪಡೆಯುವುದಕ್ಕಿಂತ ಮೊದಲು ವಾಹನ ಚಾಲನಾ ತರಬೇತಿ ಸಂಸ್ಥೆಯಲ್ಲಿ  ಎರಡು ಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ಬಿಡುವ ತರಬೇತಿ ಕೂಡ ಪಡೆದು.. ಹೇಗೋ ಬಹಳ ವಿಫಲ ಪ್ರಯತ್ನಗಳ ನಂತರ, ಹಾಗೂ ಬಿಡದ ಸತತ ಪ್ರಯತ್ನಗಳ ಆ ನಂತರ ಕಷ್ಟದಲ್ಲಿ ಚಾಲನಾ ಪರವಾನಗಿಯನ್ನು ಸಹ ಪಡೆದುಕೊಂಡೆ.

ಈಗಲೂ ಅಪ್ಪ ಆಚೆ ಈಚೆ ಹೋಗಲು ಇದ್ದರೆ, ಮನೆಯಲ್ಲಿಯೇ ಇದ್ದು ಇದ್ದು ಸೈಕಲ್ ಹಾಳಾಗಿ ಹೋಗಬಾರದು ಎಂದು.. ಸ್ವಲ್ಪ ದೇಹಕ್ಕೆ ವ್ಯಾಯಾಮ ಆಗಲಿ ಎಂದು.. ಅವನದ್ದೊಂದು ಸೈಕಲ್ ಹೊರಗೆ ತೆಗೀತಾನೆ.ಈಗಲೂ ಹೊರಗೆ ಎಲ್ಲಿಗೇ ಹೋಗ್ಲಿಕ್ಕೆ ಇದ್ದರೂ ಸೈಕಲ್ ನ ತಲೆಗೊಂದು ಬೇಲಿಯ ದಾಸವಾಳವನ್ನು ಕಿತ್ತು ಮುಡಿಸಲು ಅಪ್ಪ ಮರೆಯುವುದೇ ಇಲ್ಲ.

ಅಪ್ಪನ ಹೀರೋ ಸೈಕಲ್ ಕಂಡಾಗ ನನಗೆ ಅವರೊಂದಿಗಿನ ಮೊದಲ ನನ್ನ ಸೈಕಲ್ ನ ಆ ಮದುರ ನೆನಪುಗಳು.. ಆ ಎದುರಿನ ಪುಟ್ಟ ಸೀಟಿನಲ್ಲಿ ಕುಳಿತುಕೊಂಡು ಪ್ರಶ್ನೆ ಕೇಳುತ್ತಾ.. ಸುತ್ತಲಿನ ಪ್ರಕೃತಿಯನ್ನು ಹಾಗೇ ಸವಿಯುತ್ತಾ ಹೋದದ್ದು ಹಾಗೇ ಮತ್ತೊಮ್ಮೆ ನೆನಪಾಗಿ ಬಿಡುತ್ತದೆ. ಅದರ ಒಟ್ಟಿಗೆ ಆ  ದೊಡ್ಡ ಸೈಕಲ್ ನೋಡಿದಾಗಲೆಲ್ಲ..ನಾನು ಜೀವನದಲ್ಲಿ ಮೊತ್ತ ಮೊದಲು ಬಾರಿಗೆ ಬಿಟ್ಟ ಸುಹಾನನ ಆ ಚಿಕ್ಕ ಸೈಕಲ್ ಹಾಗೂ ಅವನು ಅವತ್ತು ತಲೆಯ ಮೇಲೆ ಕೈ ಹೊತ್ತುಕೊಂಡು ಅಳುತ್ತಾ ಆಕ್ರಂದನ ಹಾಗೂ ಆಕ್ರೋಶದ ಜೊತೆ ಜೊತೆಗೆಯೇ ಹೇಳಿದ್ದ ಈ ಮಾತುಗಳೇ ನನಗೆ ಈಗಲೂ  ಅತಿಯಾಗಿ  ನೆನಪಾಗುತ್ತಿದೆ...

" ಅಯ್ಯಯ್ಯೋ.... ನನ್ನ ಸೈಕಲ್ ಹೋಯಿತು.. ನನ್ನನ್ನು ಸಾಯಿಸಿ ಬಿಟ್ರಿ.. ಇನ್ನು ಅಪ್ಪ ಮನೆಯಲ್ಲಿ ನನಗೆ ಸರೀ  ಹೊಡಿತಾರೆ.."

.....................................................................................

#ಏನೋ_ಒಂದು

Ab Pacchu
Moodubidire


Comments

  1. ಬಾಲ್ಯದ ಸೈಕಲ್‌ನ ಸವಿನೆನಪುಗಳೇಲ್ಲ ಮರುಕಳಿಸಿದವು... ಸೂಪರ್ ಪಚ್ಚು ಅಣ್ಣ😍😍😍

    ReplyDelete
  2. ವಾಹ್ ಬಹಳ ಚೆನ್ನಾಗಿ ಬರೀತೀರ ಪಚ್ಚಣ್ಣ.🥰🤭 , ನನಗೆ ಮರೆತು ಹೋದ ಡಿಂಗನ ಕತೆ ನೆನಪಿಸಿದ್ದಕ್ಕೆ ಥ್ಯಾಂಕ್ಸ್🙏

    ReplyDelete

Post a Comment

Popular posts from this blog

ಗಗನದ ಸೂರ್ಯ

ಒಂದು ಉಗ್ರ ಪ್ರತಿಭಟನೆ

The Priest.!