ಹರಕೆಯ ಕುರಿ

 

ಹರಕೆಯ ಕುರಿಯಲ್ಲಿ ಯಾರೂ ಬಯಕೆಗಳನ್ನು ಕೇಳುವುದಿಲ್ಲ...


ಕುರಿಯೇ ನಮ್ಮ ಬಯಕೆ ಆಗಿರುವಲ್ಲಿ  ಕ್ಷಣ ಮಾತ್ರಕ್ಕೆ ಹಾಕೋ ಗಂಧ,ಹಾರಕ್ಕೆ ತೃಣ ಮಾತ್ರದ ಬೆಲೆಯೂ ಇರುವುದಿಲ್ಲ..! 


ಹರಕೆ ನಮ್ಮದೇ.. 


ಆದರೆ ಬಲಿದಾನ ನಮ್ಮದಲ್ಲ...! 


ಕುರಿ ನಮ್ಮದೋ,ಯಾರದ್ದೋ... 


ಆದರೆ ಹರಕೆ ತೀರಿಸುವುದು ಮಾತ್ರ ಕುರಿಯೇ.... 


ಅದು ನಮ್ಮನ್ನು ಸಂಕಷ್ಟಗಳಿಂದ ಮುಕ್ತಗೊಳಿಸುವುದು ಎಂಬುವುದು ಬರೀಯ ನಂಬಿಕೆ.


ಬಲಿಯ ನಂತರದಲ್ಲಿ ಅದು ಬಾಯಿಯನ್ನು ರುಚಿಯನ್ನಾಗಿಸುತ್ತದೆ ಎನ್ನುವುದೇ ವಾಸ್ತವದ ಸತ್ಯ..!


ಆದರೆ ನಾನು ಸಸ್ಯಹಾರಿ.


ಕುರಿ ತಿನ್ನುವವನೂ ಅಲ್ಲ.. 


ಕುರಿ ಕಡಿಯುವವನೂ ಅಲ್ಲ..! 


ನನ್ನೊಳಗೊಂದು ಕಲ್ಲು ಹೃದಯ ಇದೆ ನಿಜ.


ಆದರೆ ಕಟುಕನಂತೂ ನಾನು ಮೊದಲಿನಿಂದಲೂ ಅಲ್ಲ....!


ಜೀವನ ಚಕ್ರದಲ್ಲಿ ಅಂಕೆಗೆ ಸಿಗದೇ ಎಲ್ಲೋ ಕಳೆದುಹೋದಂತೆ ಬದುಕಿದ್ದೇನೆ.


ನನ್ನನ್ನು ಯಾರೂ ಹುಡುಕಲಿಲ್ಲ.


ಏಕೆಂದರೆ ನನ್ನನ್ನು ಹುಡುಕುವವರು ಕೂಡ ಯಾರೂ ಇಲ್ಲ.!


ಅನಾಥರನ್ನು ಯಾರೂ ಹುಡುಕುವುದಿಲ್ಲ..!! 


ಹಿಂದೆ ಕೆಲವರು ಇದ್ದರು.. 


ಆದರೆ ಈಗ ಯಾರೂ ಇಲ್ಲ.. 


ಮುಂದೆ..?


ಗೊತ್ತಿಲ್ಲ..! 


ಕಳೆದು ಹೋದವನಿಗೂ ಕಳೆದುಕೊಂಡವರ ನೋವುಗಳೇ ಸಂಗಾತಿ. 


ನನ್ನಂತೆ ಹಲವಾರು ಜನ ಅನಾಥರೇ ನನ್ನ ಒಡನಾಡಿ. 


ಪ್ರತೀ ದಿನ ದೇವಸ್ಥಾನದ ಹೊರಾಂಗಣದಲ್ಲಿ ಮಲಗಿ ಅಲ್ಲೇ ಮಗ್ಗುಲು ಬದಲಾಯಿಸುವಾಗ ರಾತ್ರಿ ಕಳೆದು ಬೆಳಿಗ್ಗೆ ಆಗಿರುತ್ತದೆ ಅಷ್ಟೇ... ಆದರೆ ಬದುಕು ಬದಲಾಗಿರುವುದಿಲ್ಲ!


ಸತ್ಯನಾರಾಯಣ ಪೂಜೆಯ ಸಪಾದ ಭಕ್ಷ್ಯ ಬೇರೆಯವರಿಗೆಲ್ಲ ಭಕ್ತಿ ಹಾಗೂ ಸ್ವಾದದ ಪ್ರಸಾದ.ಆದರೆ ನನಗದು ಕ್ಷಣ ಮಾತ್ರದ ಹಸಿವು ನಿವಾರಿಸುವ ಭಕ್ತರು ಹಂಚುವ ಒಂದು ಹೊತ್ತಿನ ಕೈ ತುತ್ತು. 


ಕೆಲವೊಮ್ಮೆ ನನ್ನ ಹಸಿವು ಕಂಗಳನ್ನೇ ನೋಡಿ ಒಂದೆರಡು ತುತ್ತು ಜಾಸ್ತಿ ಸಪಾದ ಭಕ್ಷ್ಯ ಹಾಕಿದವರೂ ಇದ್ದಾರೆ.. 


ಅವರೆಲ್ಲಾ ಯಾರು ಎಂದೇ ನನಗದು ಗೊತ್ತಿಲ್ಲ..!! 


ಅವರ ಹೊಟ್ಟೆ ತಣ್ಣಗಿರಲಿ ಎಂದಷ್ಟೇ ನನ್ನದೊಂದು ಭಗವಂತನಲ್ಲಿ ಪ್ರಾರ್ಥನೆ.


ಪ್ರಾರ್ಥನೆ ಎಂದ ಕೂಡಲೇ ಭಗವಂತನನ್ನು ಅತಿಯಾಗಿ ನಂಬುತ್ತೇನೆ ಎಂದಲ್ಲ..


ಅವನೆಡೆಗೆ ನನಗೆ ಆಸಕ್ತಿ ಇಲ್ಲ. 


ಅವನಲ್ಲಿ ನಾನು ವಿಶ್ವಾಸ ಕಳೆದುಕೊಂಡಿದ್ದೇನೆ! 


ಏಕೆಂದರೆ ಅವನು ಚಿಕ್ಕಂದಿನಿಂದಲೂ ನನ್ನಿಂದ ಬರೀ  ಕಿತ್ತುಕೊಂಡಿದ್ದಾನೆಯೇ ಹೊರತು ಏನನ್ನೂ ನೀಡಿಲ್ಲ!!


ಇಲ್ಲವೆಂದಲ್ಲ... ಕೆಲವೊಂದನ್ನು ಹುಡುಕಿ ಹುಡುಕಿಯೇ  ನೀಡಿದ್ದಾನೆ.


ಆದರೆ ಕ್ಷಣ ಮಾತ್ರದಲ್ಲಿ ಅವೆಲ್ಲವನ್ನೂ  ಪುನಃ ಕಿತ್ತುಕೊಂಡಿದ್ದಾನೆ!!


ನನ್ನನ್ನು ಮತ್ತೆ ಮತ್ತೆ ಅನಾಥ ಮಾಡಿದ್ದು ಅವನೇ! 


ದೇವಸ್ಥಾನದ ಮಧ್ಯಾಹ್ನದ ಅನ್ನ ಸಂತರ್ಪಣೆಯೂ ಸಹ ನನಗೊಂದು ಹೊತ್ತಿನ ಊಟ ಅಷ್ಟೇ..ಎಲ್ಲರಂತೆ ಸ್ವಾಮಿಯ ಅನ್ನ ಪ್ರಸಾದ ಎಂದು ನನಗೆ ಅನ್ನಿಸುವುದಿಲ್ಲ. 


ಶೆಟ್ಟರ ಅಂಗಡಿಯಲ್ಲಿ ಹೊರುವ ಅಕ್ಕಿ ಮೂಟೆಗಳು ಎಷ್ಟೇ ಭಾರವಿದ್ದರೂ ಭಾರ ಎನಿಸುವುದಿಲ್ಲ.. 


ಕಳೆದುಕೊಂಡವರ ನೋವೇ ನನಗೆ ಎಂದಿಗೂ ಎಲ್ಲದಕ್ಕಿಂತಲೂ ಅತೀ ಹೆಚ್ಚಿನ ಭಾರ!


ಎಲ್ಲವನ್ನೂ ಕಳೆದುಕೊಂಡವನು ನಾನು. 


ಎಲ್ಲವನ್ನೂ ಕಳೆದುಕೊಂಡವರಲ್ಲಿ ಮುಂದೇನು ಕಳೆದುಕೊಳ್ಳಲು ಇಲ್ಲ ಎನ್ನುವ ನೆಮ್ಮದಿ ಆದರೂ ಇರುತ್ತದೆ. 


ಆದರೆ ನನಗೆ ಅದೂ ಇಲ್ಲ..


ಭಗವಂತ ಎಂತಹ ಕ್ರೂರಿ ಎಂದರೆ...


ಕಳೆದುಕೊಂಡ ನಂತರವೂ ನನ್ನ ಬಳಿಗೆ ಯಾರನ್ನಾದರೂ ತಪ್ಪದೇ  ಕಳುಹಿಸಿ ಕೊಡುತ್ತಾನೆ. 


ಯಾರಾದರೂ ನನಗೆ  ಸಿಕ್ಕೇ ಸಿಗುತ್ತಾರೆ..


ಹೌದು ಆಕಸ್ಮಿಕವಾಗಿ..!


ನನಗೆಯೇ ಯಾಕೆ ಸಿಗುತ್ತಾರೋ.. ಅದು ನನಗೆ ಗೊತ್ತಿಲ್ಲ..


ಕಳೆದುಹೋಗಬೇಕಾದವರೆಲ್ಲ ನನ್ನ ಬಳಿಗೆ ನನ್ನನ್ನೇ ಹುಡುಕಿ ಹುಡುಕಿ ಬರುತ್ತಾರೆ..! 


ಮತ್ತೆ ನಾನು..


ಪನ್ನೀರು ಚಿಮುಕಿಸಿ,ಕಲಶ ಕನ್ನಡಿ ಹಿಡಿದುಕೊಂಡೇ ಅವರನ್ನು ನನ್ನ ಬರಡು ಬಾಳಿಗೆ ಸ್ವಾಗತಿಸಿಬಿಡುತ್ತೇನೆ. 


ಬದುಕಿಗೊಂದಿಷ್ಟು ಸಡಗರ ಸಂಭ್ರಮ ನಾನು  ದಕ್ಕಿಸಿಕೊಳ್ಳುವುದು ಆವಾಗಲೇ. 


ಉತ್ಸಾಹದಲ್ಲಿರುವಾಗ,ಬದುಕಲ್ಲೊಂದು ಉತ್ಸವದ ತೇರು ಎಳೆಯುವಾಗ...


ಭಗವಂತನಿಗೆ ಆ ದೃಶ್ಯ ಸಹ್ಯ ಎನಿಸುವುದಿಲ್ಲ! 


ಅದಕ್ಕಾಗಿ ಭಗವಂತನ ಇಚ್ಛೆಯಂತೆ,ಸಿಕ್ಕವರನ್ನು ನಾನು ಮತ್ತೆ ಹಾಗೇ ಕಳೆದುಕೊಳ್ಳುತ್ತೇನೆ..! 


ಆ ನಂತರ ನಾನು ಮೊದಲಿನಂತೆ ಅದೆಷ್ಟು ಅನಾಥ... ಅದೆಷ್ಟೋ ನಿರ್ಲಿಪ್ತ!


ಅದಕ್ಕಾಗಿ ಭಗವಂತ ಅಂದರೆ ನನಗೆ ಅಷ್ಟಕಷ್ಟೇ.


ಏಕೆಂದರೆ ಅವನು ಮನಸ್ಸು ಮಾಡಿದರೆ ನನಗೊಂದು ಬೆಚ್ಚನೆಯ ಬದುಕು ಎಂದೋ ಸಿಗುತ್ತಿತ್ತು.


ಅವನೂ ಮನಸ್ಸು ಮಾಡಲಿಲ್ಲ..


ಹಾಗಾಗಿ ಅವನೆಡೆಗೆ ನಾನೂ ಮನಸ್ಸು ಮಾಡಲಿಲ್ಲ!! 


ಹುಟ್ಟಿಸಿದ ಅಮ್ಮನಿಂದ ಮೊದಲುಗೊಂಡು ಜೀವನದಲ್ಲಿ ನನ್ನೊಡನೆ ಹುಟ್ಟದವರನ್ನೂ ಕೂಡ ಕಳೆದುಕೊಂಡಿದ್ದೇನೆ !


ಇನ್ನೆಷ್ಟು ಜನರನ್ನು ಗಳಿಸಲು..ಅದೆಷ್ಟು ಜನರನ್ನು ಕಳೆದುಕೊಳ್ಳಲು ಬಾಕಿ ಇದೆಯೋ.. ಅದೂ ಕೂಡ ಆ ಭಗವಂತನಿಗೆಯೇ ಗೊತ್ತು..!


ನನ್ನದೂ ಒಂದು ಬಾಳೇ..? 


ಅನಾಥರು ಆದರೂ ಅನಾಥರಾಗಿಯೇ ಎರಡು ಹೊತ್ತು ತಿಂದು ಉಂಡು ಸುಖವಾಗಿರುತ್ತಾರೆ..


ಆದರೆ ನನ್ನ ಕಥೆ..


ನನ್ನಷ್ಟೇ ಅನಾಥ....!!


ಹೀಗೆ ಏನೇನೋ ಯೋಚನೆ ಮಾಡುತ್ತಾ ದೇವಸ್ಥಾನದ ಅಂಗಳದಲ್ಲಿ ನಡೆದು ಬರುತ್ತಿರುವಾಗಲೇ ಜೋರು ಮಳೆ ಬಂದದ್ದು.. 


ಅದ್ಯಾವುದೋ ಹೆಣ್ಣು ಜೀವ ಆ ಜೋರು ಗಾಳಿ ಮಳೆಗೆ ಅವಳ ಕೊಡೆ ಹಾರಿ ಹೋಗಿ ಗಡಗಡ ನಡುಗುವುದನ್ನು ನೋಡಿ ಅವಳಿಗೆ ನನ್ನದೇ ಕೊಡೆ ನೀಡಿ ದೇವಸ್ಥಾನದ ಈ ಕಡೆಗೆ ಓಡಿ ಬಂದಿದ್ದೆ.


ಇದ್ದ ಒಂದು ಕೊಡೆಯನ್ನೂ ಕೊಟ್ಟು ಬಂದಿದ್ದೆ.. 

ಇನ್ನು ಮಳೆ ನಿಲ್ಲುವವರೆಗೂ ಇನ್ನಷ್ಟು ಹೊತ್ತು ಕಾಯಬೇಕು.ಆದರೂ ಒಂದು ನೆಮ್ಮದಿ ಇತ್ತು ಆ ಹೆಣ್ಣುಮಗಳು ಬೆಚ್ಚಗೆ ಮನೆ ಸೇರುತ್ತಾಳೆ ಎಂದು!


ಎಷ್ಟು ಹೊತ್ತಾದರೂ ಮಳೆ ನಿಲ್ಲಲಿಲ್ಲ... ಹೊರಗೆ ಹೋಗಲು ಕೊಡೆ ಬೇರೆ ಇರಲಿಲ್ಲ. 


ಶೆಟ್ಟರ ಅಂಗಡಿ ಕೆಲಸಕ್ಕೆ ರಜೆ ಬೇರೆ.. ಹಾಗಾಗಿ ಮಳೆ ನಿಲ್ಲುವವರೆಗೂ ದೇವಸ್ಥಾನದ ಬಳಿ ಅಲ್ಲೇ ನಿಂತಿದ್ದೆ. 


ಆಗಲೇ ಗಮನಿಸಿದ್ದು ಆ ಪುಟ್ಟ ಹುಡುಗನನ್ನು.


ಅವನೂ ಅಲ್ಲೇ  ನಿಂತಿದ್ದ..! 


ಬಟ್ಟೆಯೆಲ್ಲಾ ಕೊಳೆಯಾಗಿತ್ತು.. 


ಹಸಿದವನಂತೆ ಕಾಣುತ್ತಿದ್ದರೂ ಕಣ್ಣುಗಳಲ್ಲಿ ಹೊಳಪಿತ್ತು.. 


ಅದೇನೋ ಖುಷಿ ಇತ್ತು..


ನೆಮ್ಮದಿಯೂ ಇತ್ತು.


ನನಗಿಂತಲೂ ಹೆಚ್ಚೇ ಇತ್ತು. 


ಅವನ ನಗುವೇ ನನ್ನ ಹಸಿವನ್ನು ಮಾಯ ಮಾಡುವಂತಿತ್ತು.


ಯಾವ ಚಂದಿರನ ತುಂಡೋ ಅಪ್ಪಿ ತಪ್ಪಿ ಇಲ್ಲಿ ಬಿದ್ದು ಬಿಟ್ಟಿದೆ  ಎಂದುಕೊಂಡೆ. 


ದೇವಸ್ಥಾನದ ಹಂಚಿನಿಂದ ಕೆಳಗಿಳಿಯುತ್ತಿದ್ದ ನೀರಿಗೆ ಕೈ ಒಡ್ಡಿ ಬೊಗಸೆ ತುಂಬಿಕೊಂಡು ಆ ಹುಡುಗ ನೀರಾಟವಾಡುತ್ತಿದ್ದ.. 


ಮಳೆ ನಿಂತಿತು.. 


ಎಲ್ಲರೂ ಹೋದರು. 


ಆ ಬಾಲಕ ಇನ್ನೂ ಅಲ್ಲೇ ಇದ್ದ. 


ಅವನ ಬಳಿ ಯಾರೂ ಬರಲೇ ಇಲ್ಲ..


ಯಾರೋ ಬರುತ್ತಾರೆ.. ಕರೆದುಕೊಂಡು ಹೋಗುತ್ತಾರೆ ಎನ್ನುವ ಪ್ರತೀಕ್ಷೆ,ನಿರೀಕ್ಷೆ ಕೂಡ ಅವನಲ್ಲಿ ಕಂಡು ಬರಲಿಲ್ಲ. 


ಬಹುಶಃ ಅವನೂ ನನ್ನಂತೆಯೇ ಅನಾಥನೇ ಇರಬೇಕು ಅಂದುಕೊಂಡೆ. 


ಹೆಚ್ಚು ಕಡಿಮೆ ಏಳರಿಂದ ಎಂಟು ವರುಷ ಇರಬಹುದು ಅಷ್ಟೇ.


ಇಷ್ಟು ಚಿಕ್ಕ ಹುಡುಗ.. ಇಲ್ಲಿ ಹೇಗೆ..? 


ಅವನ ಹರಿದ ಬಟ್ಟೆ ನೋಡಿ ಅಯ್ಯೋ ಅನಿಸಿತು.. 


ಅವನ ಹತ್ತಿರ ಹೋದೆ... 


ನಿನ್ನ ಹೆಸರು ಏನು.. ಕೇಳಿದೆ. 


ನನ್ನನ್ನು ನೋಡಿ ಕಣ್ಣು ಮಿಟುಕಿಸಿ... ನನ್ನ ಹೆಸರು ಶಿಶಿರ್....


ತೊದಲುತ್ತಲೇ ಹೇಳಿದ್ದ ಆ ಪುಟ್ಟ ಹುಡುಗ. 


ಹೆಸರು ಚೆನ್ನಾಗಿತ್ತು.. ಅವನಂತೆಯೇ.


ಆದರೆ ಅವನು ಬರೀ ಅಷ್ಟಕ್ಕೆ ಸುಮ್ಮನಾಗಲಿಲ್ಲ..


ನನ್ನ ಬಳಿ ಬಂದು ನನ್ನ ಕೈ ಜಗ್ಗಿ ನನ್ನಲ್ಲಿ ಮತ್ತೆ ಮುದ್ದಾಗಿ ಕೇಳಿದ... 


ನಿಮ್ಮ ಹೆಸರು ಏನು ಮಾಮ..?


ಆಹಾ...ಯಾವ ತಾಯಿ ಹೆತ್ತ ಕೂಸೋ.. 


ನನ್ನನ್ನು ಅಲ್ಲಿಯವರೆಗೂ ಯಾರೂ ಕೂಡ ಮಾಮ ಎಂದರೆ ಕರೆದೇ ಇಲ್ಲ..


ಅದೊಂದು ಹಿತವಾದ ಅನುಭವ.


ಹಿಂದೊಮ್ಮೆ ಪರಿಮಳ ಎಂಬುವ ಅಕ್ಕ ಇವನಂತೆಯೇ ಸಿಕ್ಕಿದ್ದಳು. 


ಅವಳಿಗೆ ಹುಟ್ಟುವ ಮಗು ನನ್ನನ್ನು ಬಾಯಿ ತುಂಬಾ ಮಾಮ ಎಂದು ಕರೆಯುತ್ತದೆ ಎಂದೇ ನಾನು ಕನಸು ಕಂಡಿದ್ದೆ.


ಆ ಖುಷಿಗಾಗಿ ಹಂಚಲು ಲಾಡು ಕೂಡ ತಂದಿಟ್ಟವನು ನಾನು... 


ಆದರೆ ಅವಳು ಮತ್ತ ಅವಳ ಮಗು ಇಬ್ಬರೂ ಈ ಲೋಕದ ಲೆಕ್ಕ ಚುಕ್ತಾ ಮಾಡಿ ನನ್ನನ್ನು ಮತ್ತೆ ಅನಾಥನನ್ನಾಗಿಸಿ ಬೇರೆ ಲೋಕಕ್ಕೆ ಅವಸರವಸರವಾಗಿ ಹೋಗಿಬಿಟ್ಟಿದ್ದರು..!!


ಈ ಪುಟ್ಟ ಶಿಶಿರ ನನ್ನನ್ನು ಮಾಮ ಎಂದು ಕರೆದದ್ದು  ಕೇಳಿ ನನಗೆ ಮತ್ತೊಮ್ಮೆ ಹಾಗೇ ಪರಿಮಳಳ ನೆನಪಾಯಿತು. 


ನಂತರ ಸಾವರಿಸಿಕೊಂಡು... 


"ನನ್ನ ಹೆಸರು ಪುಷ್ಯರಾಗ. ಇಲ್ಲಿ ಎಲ್ಲರೂ ಪುರು ಅಂತಾರೆ..


ನೀನು ಬೇಕಾದರೆ ಪುರು ಮಾಮ ಎಂದು ಕರೆಯಬಹುದು.. " ಅಂದೆ ಮಾಮನಾಗುವ ಆಸೆಯಿಂದ.


ಶಿಶಿರ ನಕ್ಕ..


ಅದೆಷ್ಟು ಸುಂದರವಾಗಿ ನಗುತ್ತಾನೆ ಆತ. 


ಹಸಿವು ಆಗುತ್ತಿದೆಯೇ ಕೇಳಿದೆ.. 


ಹೂಂ.. ಅಂದ. 


ಅವನನ್ನು ಕರೆದುಕೊಂಡು ಪಕ್ಕದಲ್ಲಿಯೇ ಇದ್ದ ರಾಮಣ್ಣನ ಹೋಟೆಲ್ ಗೆ ಹೋದೆ. 


ಬಿಸಿ ಬಿಸಿ ದೋಸೆ.. ಬಿಸಿ ಬಿಸಿ ಟೀ ಕೊಡಿಸಿದೆ. 


ಚೆನ್ನಾಗಿಯೇ ತಿಂದ ಶಿಶಿರ. 


ಬಹುಶಃ ತುಂಬಾನೇ ಹಸಿದಿದ್ದ ಎಂದು ಕಾಣುತ್ತೆ. 


ಆದರೆ ಈ ಪುಟ್ಟ ಬಾಲಕನನ್ನು ಮುಂದೆ ಏನು ಮಾಡುವುದು ಎಂದು ನನಗೆ ಗೊತ್ತಾಗಲಿಲ್ಲ... 


ಚಿಕ್ಕ ಹುಡುಗ,ಇನ್ನೂ ಭವಿಷ್ಯ ಇದೆ.. 


ನನ್ನೊಡನೆ ಇದ್ದರೆ ಖಂಡಿತವಾಗಿಯೂ ಅವನ ಭವಿಷ್ಯ ಉಜ್ವಲವಾಗದು. 


ಇನ್ನೂ ಓದಿ ಬೆಳೆಯ ಬೇಕಾದವನು. 


ಅವನ ತಾಯಿ ಯಾರೋ.. ತಂದೆ ಯಾರೋ.. ಯಾವ ಊರೋ..


ಒಂದೂ ಗೊತ್ತಿಲ್ಲ. 


ಅವನಲ್ಲಿಯೇ ಕೇಳಿದೆ..


ಅದಕ್ಕವನು ಅಡ್ಡಡ್ಡ ತಲೆ ಅಲ್ಲಾಡಿಸಿದ..


ಬಹುಶಃ ಹೇಳುವ ಮನಸ್ಸಿಲ್ಲವೋ..ಬೇಸರವೋ ಒಂದೂ ಗೊತ್ತಾಗಲಿಲ್ಲ. 


ಏನೂ ಮಾಡುವುದು ಎಂದು ತೋಚಲಿಲ್ಲ.


ಆದರೆ ದೇವರು ದೊಡ್ಡವನು.. 


ದೇವರನ್ನು ಭಕ್ತಿಯೇ ಮಾಡವನಿಗೆ ದೇವರ ನೆನಪು ಕೂಡ ಆಗುವುದು, ಕರೆಯದೇ ಅವನಾಗಿಯೇ ಬಂದು ಸಹಾಯ ಮಾಡಿದಾಗಲೇ... ಆದರೆ ಅವನು ಮಾಡಿದ ಸಹಾಯಗಳು ಯಾವ ರೀತಿಯದ್ದು ಎಂದು ನನಗೆ ಅವಶ್ಯವಾಗಿ ಗೊತ್ತಿದೆ!!!


ಆದರೆ ಇಲ್ಲಿ ಏನೋ ಒಂದು ಮಾರ್ಗ ಮಾತ್ರ ಅವನೇ ತೋರಿಸಿದ್ದ. 


ಹೋಟೇಲ್ ನ ಟೇಬಲ್ ನಲ್ಲಿ ನನ್ನೆದುರಿಗೆ ಇದ್ದ ಪೇಪರ್ ಮೇಲೆ ನನ್ನ ಗಮನ ಹರಿಯಿತು. 


ಪೇಪರ್ ತೆಗೆದು ಮಗುಚಿದೆ.. 


ಮಗುಚುತ್ತಾ ಮಗುಚುತ್ತಾ ಹೋದೆ..


ಆಗ ಅದರಲ್ಲಿ ಕಂಡು ಬಂದಿತ್ತು ಶಿಶಿರನ ಪೋಟೋ..!. 


ಕಾಣೆಯಾದವರ ಪೇಜ್ ನಲ್ಲಿ ಮೊದಲ ಸಾಲಿನಲ್ಲಿಯೇ ಇತ್ತು ಶಿಶಿರನ ಚಂದದೊಂದು  ಪೋಟೋ!!


ಪೋಟೋ ಕೆಳಗೆ  ಪೋನ್ ನಂಬರ್ ಸಹಿತ ಬರೆದಿದ್ದರು.. ಎಲ್ಲಾದರೂ ಸಿಕ್ಕರೆ ಸಂಪರ್ಕಿಸಿ,ಸೂಕ್ತ ಬಹುಮಾನ ಕೊಡಲಾಗುವುದು.. ಇಂತೀ ನೊಂದ ಹೆತ್ತವರು. 


ಕತ್ತಲೆಯ ಗುಹೆಯಲ್ಲಿ ಮಿಂಚುಹುಳವೇ ದಾರಿದೀಪ ಇದ್ದಂತೆ... 


ಅದೇ ರೀತಿ ಸದ್ಯಕ್ಕೆ ಈ ಪೇಪರೇ ನನಗೆ ಶಿಶಿರನನ್ನು ಅವನಿದ್ದಲ್ಲಿಗೆಯೇ ತಲುಪಿಸುವ ಮಾರ್ಗಸೂಚಿ,ದಿಕ್ಸೂಚಿ ಎಲ್ಲವೂ ಆಗಿ ಬಿಟ್ಟಿತ್ತು. 


ಉಬ್ಬರ ಇಳಿತಗಳಿಂದ ಅಲ್ಲೋಲ ಕಲ್ಲೋಲವಾಗಿದ್ದ ಮನಸ್ಸು ತಕ್ಕ ಮಟ್ಟಿಗೆ ಶಾಂತಸಾಗರವಾಯಿತು.


ಶಿಶಿರ ಇನ್ನೂ ದೋಸೆ ತಿನ್ನುತ್ತಲೇ ಇದ್ದ. 


ಅವನು ದೋಸೆ ತಿಂದಾದ ಮೇಲೆ ರಾಮಣ್ಣನಿಗೆ ತಿಂಡಿಯ  ಬಿಲ್ ಕೊಟ್ಟು... 


ನಂತರ ದೇವಸ್ಥಾನದ ಪುಷ್ಕರಣಿಯಲ್ಲಿ ಶಿಶಿರನಿಗೆ ಒಂದೊಳ್ಳೆಯ ಸ್ನಾನ ಮಾಡಿಸಿದೆ. 


ಆ ನಂತರ ಬಟ್ಟೆ ಅಂಗಡಿಗೆ ಹೋಗಿ ಅವನಿಗೊಪ್ಪುವ ಒಂದು  ಬಟ್ಟೆ ಕೂಡ ಕೊಡಿಸಿದೆ. 


ನಿಜವಾಗಿಯೂ ಶಿಶಿರ ಚಂದದ ಹುಡುಗ. 


ಯಾವ ತಾಯಿ ಹೆತ್ತ ಮಗನೋ ಏನೋ...ನೋಡುವಾಗಲೇ ಗೊತ್ತಾಗುತ್ತಿತ್ತು ನನ್ನಂತೆ ಬಡವರ ಮನೆಯಲ್ಲಿ ಹುಟ್ಟಿದವನಲ್ಲ ಅವನು ಎಂದು. 


ಇರಲಿ ಅವನ ಗೂಡು ಅವ ಮರಳಿ ಸೇರಿದರೆ ಅಷ್ಟೇ ಸಾಕು ನನಗೆ. 


ಪೇಪರ್ ನಲ್ಲಿದ್ದ ನಂಬರ್ ಗೆ ಕಾಲ್ ಮಾಡಿದೆ.


ವಿಷಯ ತಿಳಿದು ಅವರಿಗೆ ಬಹಳ ಸಂತೋಷವಾಯಿತು.


ಅವರು ಬೆಂಗಳೂರಿನವರು. 


ನಾವೇ ಮಂಗಳೂರಿಗೆ ಬರುತ್ತೇವೆ ಎಂದರು. 


ಬೇಡ... ನಾನೇ ಜೋಪಾನವಾಗಿ ಬೆಂಗಳೂರಿಗೆ ತಂದು ಶಿಶಿರನನ್ನು ಒಪ್ಪಿಸುತ್ತೇನೆ. ನನಗೇನು ಬಹುಮಾನ  ಬೇಡ..ಬಹುಮಾನ,ಉಡುಗೊರೆ, ಹಣದ ಆಸೆಗೆ ಈ ಕೆಲಸ ನಾನು ಮಾಡುತ್ತಿಲ್ಲ.ನಿಮಗೆ ನಿಮ್ಮ ಮಗ ಸಿಕ್ಕ ಖುಷಿಯೇ ನನಗೆ ಅತೀ ದೊಡ್ಡ ಬಹುಮಾನ ಅಂದೆ. 


ಆಯಿತು ಹಾಗಾದರೆ ನೀವು ರೈಲಿನಲ್ಲಿ ಬೆಂಗಳೂರು ಜಂಕ್ಷನ್ ಸ್ಟೇಷನ್ ಗೆ ಬನ್ನಿ... ನಾವು ಅಲ್ಲೇ ನಮ್ಮ ಮಗನಿಗಾಗಿ ಕಾಯ್ತಾ ಇರ್ತೇವೆ. ಎಂದು ಹಲವು ಬಾರಿ  ಧನ್ಯವಾದಗಳನ್ನು ಹೇಳಿ ಹೇಳಿಯೇ ಪೋನ್ ಕಟ್ ಮಾಡಿದ್ದರು ಶಿಶಿರನ ತಂದೆ. 


ಅವರ ಸಂತೋಷ ನಾನು ಅರ್ಥ ಮಾಡಿಕೊಳ್ಳ ಬಲ್ಲೆ..


ಕಳೆದು ಹೋದವರು ಮತ್ತೆ ಸಿಕ್ಕರೆ ಪಡೆದುಕೊಳ್ಳುವವರ ಖುಷಿ ನಿಜವಾಗಿಯೂ ಅಧಿಕವಾಗಿಯೇ ಇರುತ್ತದೆ.


ಅದನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. 


ನನಗಂತು ಆ ಭಾಗ್ಯ ಇರಲಿಲ್ಲ ಕಾರಣ...ನಾನು ಕಳೆದುಕೊಂಡವರು ಎಲ್ಲರೂ ಮರಳಿ ಬಾರದ ಲೋಕಕ್ಕೆ ಹೋದವರೇ ಜಾಸ್ತಿ!


ಪಕ್ಕದಲ್ಲಿಯೇ ಇದ್ದ ಶಿಶಿರ ಹೇಳಿದ...


ಮಾಮ.. ನೀನು ಕೊಡಿಸಿದ ಬಟ್ಟೆಯೂ ಚೆನ್ನಾಗಿದೆ.. ದೋಸೆಯೂ ಚೆನ್ನಾಗಿದೆ.. ನಿಮಗೆ ಥ್ಯಾಂಕ್ಸ್ ಪುರು ಮಾಮ .. 


ಅವನನ್ನೇ ನೋಡಿದೆ... 


ನನಗಾಗಿ ಥ್ಯಾಂಕ್ಸ್ ಹೇಳುವವರು ಸಹ  ಇದ್ದಾರೆಯೇ ಈ ಭೂಮಿಯಲ್ಲಿ ಎಂದು ಒಮ್ಮೆ ಅನಿಸಿತು.. 


ನನ್ನಿಂದ ಕೊಡೆ ಪಡೆದುಕೊಂಡ ಹುಡುಗಿ ಕೂಡ ಏನೋ ಒಂದು  ಹೇಳಿದ್ದಳು.. ಬಹುಶಃ ಅದು ಕೂಡ ಥ್ಯಾಂಕ್ಸ್ ಅಥವಾ ಅಂತಹದ್ದೊಂದು ಏನೋ ಇರಬೇಕು.. ಆದರೆ ಆ ಗಡಿಬಿಡಿಯಲ್ಲಿ ಆ ಜೋರು ಮಳೆಯಲ್ಲಿ ನನಗದು  ಕೇಳಿಸಿರಲಿಲ್ಲ!!!


ಶಿಶಿರನ ಮುದ್ದಾದ ಮಾತು ಕೇಳಿ ಹಾಗೇ ಬಾಗಿ ಶಿಶಿರನ  ಕೆನ್ನೆಗೊಂದು ಮುತ್ತು ಕೊಟ್ಟೆ..


ಪುರು ಮಾಮ ಇನ್ನೊಂದು... ಎಂದು ಇನ್ನೊಂದು ಕೆನ್ನೆ ತೋರಿಸಿದ ಪುಟ್ಟ ಶಿಶಿರ. 


ಆಹಾ.. ಈ ಮಕ್ಕಳು ಅಂದರೆ ಅದೆಷ್ಟು ಪರಿಶುದ್ಧ ಮನಸ್ಸಿನವರು.


ಅವರ ಮನಸ್ಸಿನಲ್ಲಿ ಎಳ್ಳಷ್ಟೂ ಮೋಸವಿಲ್ಲ,ಕಪಟವಿಲ್ಲ.ಬಹುಶಃ ಮಕ್ಕಳಲ್ಲಿಯೇ ದೇವರು ಕೂಡ ಇರುತ್ತಾನೋ ಏನೋ..ಆದರೆ ಜನರು ದೇವಸ್ಥಾನಕ್ಕೆ ಹೋಗುತ್ತಾರೆ ಅಷ್ಟೇ!! 


ಶಿಶಿರನ ಇನ್ನೊಂದು ಕೆನ್ನೆಗೂ ಮುತ್ತು ಕೊಟ್ಟೆ. 


ಪುರು ಮಾಮ ಈಗ ನಾನು ನಿನಗೊಂದು ಮುತ್ತು ಕೊಡಬೇಕು ಅದುವೇ ಮುತ್ತಿನ ರೂಲ್ಸ್ ಮಾಮ ಅಂದ ತೊದಲುತ್ತಲೇ ಶಿಶಿರ.


ಅವನನ್ನು ನನ್ನ ಕೈಗಳಿಂದ ಹಾಗೇ ಮೇಲೆತ್ತಿ ಅವನಿಗೆ ನನ್ನ ಕೆನ್ನೆ ತೋರಿಸಿದೆ..


ನಂಜಿಲ್ಲದ್ದ ಮುತ್ತಿನ ಮುದ್ರೆ ಒತ್ತಿ ಬಿಟ್ಟ ಶಿಶಿರ.


ನನ್ನ ಪಾಲಿಗೆ ಕಡಲ ಮುತ್ತಿಗಿಂತಲೂ ಹೆಚ್ಚಿನ ಬೆಲೆಯುಳ್ಳದ್ದು!


ನಂತರ ಶಿಶಿರನೊಂದಿಗೆ ನೇರವಾಗಿ ಮಂಗಳೂರು ಸೆಂಟ್ರಲ್ ಸ್ಟೇಷನ್ ಗೆ ನಡೆದೆ.ಬೆಂಗಳೂರಿಗಾಗಿ ರೈಲು ಹಿಡಿದೆ..


ಶಿಶಿರ ಕೇಳಿದ... ಪುರು ಮಾಮ ನಾವು ಎಲ್ಲಿಗೆ ಹೋಗುತ್ತಿದ್ದೆವೆ.


ಅದು ಈಗ  ಹೇಳಲಾರೆ.. ಆದರೆ ಈ ಪ್ರಯಾಣದ ಕೊನೆಯಲ್ಲಿ ಈ ಪುರು ಮಾಮ ಖಂಡಿತವಾಗಿಯೂ ನಿನಗೆ ಖುಷಿ ಆಗುವ ವಿಶೇಷ ಉಡುಗೊರೆಯನ್ನೇ  ನೀಡಲಿದ್ದಾನೆ..


ಉಡುಗೊರೆಯೇ.... ಅದನ್ನು ಕೇಳಿ ಶಿಶಿರನ ಮನಸ್ಸು ಮತ್ತಷ್ಟು ಪ್ರಪುಲ್ಲವಾಯಿತು.


ಮಕ್ಕಳು ಹಾಗೇ ಅಲ್ಲವೇ... ಉಡುಗೊರೆ... ಗೊಂಬೆ.. ಚಾಕೊಲೇಟ್..ಒಂದಷ್ಟು ಮುದ್ದು.. ಎಲ್ಲವೂ ಅವರಿಗೆ ಇಷ್ಟ. 


ಹೌದು  ಖಂಡಿತವಾಗಿಯೂ ಉಡುಗೊರೆಯನ್ನೇ ಕೊಡಲಿದ್ದೇನೆ.. ಎಂದು ಅವನ ತಲೆ ನೇವರಿಸಿದೆ. 


ರೈಲು ತನ್ನ ಗಮ್ಯದ ಕಡೆಗೆ ವೇಗವಾಗಿ ಒಡುತ್ತಿತ್ತು. 


ನನ್ನ ಅಪ್ಪಿಕೊಂಡೇ ಮಲಗಿದ್ದ ಶಿಶಿರನಿಗೆ ಗಟ್ಟಿ ನಿದ್ದೆ. 


ಎಷ್ಟು ದಿನ ಆಗಿತ್ತೋ ಏನೋ.. ಒಂದೊಳ್ಳೆಯ ನಿದ್ದೆ ಮಾಡದೇ.. ಗಟ್ಟಿಯಾಗಿ ಊಟ ಮಾಡದೇ.


ಕೊನೆಗೂ ಬೆಂಗಳೂರು ಜಂಕ್ಷನ್ ಬಂತು. 


ಶಿಶಿರನನ್ನು ಎಬ್ಬಿಸಿದೆ. 


ಶಿಶಿರನ ತಂದೆಗೆ ಅಲ್ಲಿಂದಲೇ ಕಾಲ್ ಮಾಡಿದೆ. 


ಅವರೊಂದು ಪ್ಲಾಟ್ ಫಾರ್ಮ್ ನಲ್ಲಿ ನಿಲ್ಲಲು ಹೇಳಿ ಇನ್ನೆರಡು ನಿಮಿಷಗಳಲ್ಲಿ ಅಲ್ಲಿಗೆನೇ  ಬರುತ್ತೇವೆ ಎಂದು ಹೇಳಿದರು.. 


ಈಗಲೂ ಅವರ ಮಾತು ಮಾತಿನಲ್ಲೂ  ನನಗಾಗಿ ಬರೀ ಥ್ಯಾಂಕ್ಸ್ ಒಂದೇ ಇತ್ತು.


ಕೊನೆಗೂ ಬೇರೆ ಆದ ಜೀವಗಳನ್ನು ಒಂದು ಮಾಡಿಸಿ ಬಿಟ್ಟೆನಲ್ಲಾ  ಎಂಬ ಧನ್ಯತಾ ಭಾವ ಹಾಗೇ ನನ್ನಲ್ಲಿ ಆವರಿಸಿಕೊಂಡು ಬಿಟ್ಟಿತು.


ಇಂತಹ ಖುಷಿಗಳೇ  ಜೀವನದಲ್ಲಿ ಜೀವಿಸಲು  ಬೇಕಾದದ್ದು.


ಇದನ್ನು ಎಷ್ಟು ಹಣ ತೆತ್ತರೂ ಯಾವ ಮಾರುಕಟ್ಟೆಯಲ್ಲೂ, ಕಿರಾಣಿ ಅಂಗಡಿಯಲ್ಲೂ ಖರೀದಿಸಲು ಸಾಧ್ಯವಿಲ್ಲ.


ಅದು ಹಾಗೇ ಘಟಿಸಬೇಕು.


ಅದರ ಅನುಭೂತಿಯೇ ಬೇರೆಯದ್ದು. 


ನನಗೊಂದು ಟೀ.. ಶಿಶಿರನಿಗೊಂದು ಟೀ.. ನನಗೊಂದು ಮದ್ದೂರು ವಡೆ.. ಶಿಶಿರನಿಗೊಂದು ಮದ್ದೂರು ವಡೆ..ತೆಗೆದುಕೊಂಡು ಶಿಶಿರನ ತಂದೆ  ಹೇಳಿದ ಪ್ಲಾಟ್ ಫಾರ್ಮ್ ನಲ್ಲಿ ಅಲ್ಲೇ ಇದ್ದ ಬೆಂಚ್ ಒಂದರ ಮೇಲೆ ಇಬ್ಬರೂ  ಕುಳಿತುಕೊಂಡೆವು.. 


ಬಿಸಿಯಾದ ಟೀ... ಗರಿಗರಿಯಾದ ವಡೆ.. 


ಬೆಂಗಳೂರು ವಾತಾವರಣಕ್ಕೆ ಎರಡೂ ಚೆನ್ನಾಗಿತ್ತು.. 


ಶಿಶಿರ ವಡೆ ತಿನ್ನುತ್ತಲೇ ಕೇಳಿದ... ಪುರು ಮಾಮ ಕೊನೆಯಲ್ಲಿ ನನಗೊಂದು ಉಡುಗೊರೆ ಕೊಡುವೆ ಎಂದು ಹೇಳಿದ್ದೆ..ಈಗ ಆ ಉಡುಗೊರೆ ಕೊಡು ಮಾಮ..


ಅವನ ಅತಿಯಾದ ಉತ್ಸಾಹ ಗಮನಿಸಿ ಹೇಳಿದೆ.. 


- ಮಗು ಶಿಶಿರ.. ಈ ಅನಾಥ ಅದು ಎಂತಹ ಬೆಲೆ ಬಾಳುವ ಉಡುಗೊರೆ ನಿನಗೆ ನೀಡಲು ಸಾಧ್ಯ ಹೇಳು.. 


ಹಾಗೆ ಹೇಳಬೇಡ ಮಾಮ... ನೀನು ದೋಸೆ ಕೊಟ್ಟಿದ್ದಿಯಾ... ವಡೆ ಕೊಟ್ಟಿದ್ದೀಯಾ.. ನೀನು ಒಳೆಯವನು ಮಾಮ... ನಾನಿರುವಾಗ ನೀನು ಅನಾಥ ಅಲ್ಲ..


ನನ್ನ ಕಣ್ಣಾಲಿಗಳು ಹಾಗೇ ತುಂಬಿಕೊಂಡವು..!! 


ಆಹಾ...ಇಷ್ಟು ಚಿಕ್ಕ ವಯಸ್ಸಿಗೆ ಅದೆಂತಹ ಬೆಟ್ಟದಂತಹ ಮಾತುಗಳನ್ನು ಬರೀ ತೊದಲು ಮಾತಿನಲ್ಲಿಯೇ ಹೇಳಿ ಮುಗಿಸಿದ್ದ ಶಿಶಿರ....!


ಅವನಿರುವಾಗ ನಾನು ಅನಾಥನಲ್ಲವಂತೆ..!


ಬಹುಶಃ ಮನೆಯವರ ಸಂಸ್ಕಾರ ಅಂತಹದ್ದು ಇರಬೇಕು.


ಮನಸ್ಸಿನಲ್ಲಿಯೇ ನಂಬದ ದೇವರನ್ನು ಪ್ರಾರ್ಥಿಸಿದೆ.. ಹೇಯ್ ಭಗವಂತ ಇವನ ಬಾಳು ಎಂದೆಂದಿಗೂ ಸುಖವಾಗಿಯೇ ಇರಲಿ ಎಂದು. 


ಥ್ಯಾಂಕ್ಸ್ ಕಣೋ ಶಿಶಿರ.. ನೀನು ಸಿಕ್ಕಿದ ನಂತರದ ಈ ಹಲವು ಗಂಟೆಗಳು ನಾನು ನಿಜವಾಗಿಯೂ ಅನಾಥ ಆಗಿರಲಿಲ್ಲ.. 


ಆದರೆ.. ಆದರೆ ಈಗ ನಾನು ಮತ್ತೊಮ್ಮೆ ಅನಾಥ ಖಂಡಿತವಾಗಿಯೂ ಆಗುವೆ.. 


ಯಾಕೆ ಪುರು ಮಾಮ... ನೀನು ಯಾಕೆ ನನ್ನನ್ನು ಬಿಟ್ಟು ಹೋಗಬೇಕು?


ಅವನಿಗೆ ಹೇಗೆ ಹೇಳಲಿ ನಾನು..!!


ಆದರೂ ಹೇಳಿದೆ.. 


ನಾನು ಬಿಟ್ಟು ಹೋಗುತ್ತಿಲ್ಲಪ್ಪ... ನಾನು ಯಾರನ್ನೂ ಬಿಟ್ಟು ಹೋಗಲಾರೆ..


ಆದರೆ ಈಗ ನೀನೇ ನನ್ನನ್ನು ಬಿಟ್ಟು ಹೋಗುತ್ತಿದ್ದಿಯಾ ಶಿಶಿರ....!


ನಾನೇ..? 


ಹೌದು ನೀನೇ...! 


ಹಾಗೇ ಹೇಳಬೇಡ ಪುರು ಮಾಮ... ನನಗೆ ನೀನಂದರೆ ಇಷ್ಟ... ನೀನು ಕೊಡಿಸಿದ ಮಂಗಳೂರಿನ ದೋಸೆ ಇಷ್ಟ.. ಸ್ನಾನ ಮಾಡಿದ  ಆ ಕೆರೆ ಇಷ್ಟ.. ನಾನು ನಿನ್ನನ್ನು ಬಿಟ್ಟು ಎಲ್ಲೂ ಹೋಗಲಾರೆ ಎಂದು ಕೈಯಲ್ಲಿದ್ದ ವಡೆ ಬಿಸಾಡಿ ನನ್ನನ್ನು ಹಾಗೇ ಬಾಚಿ ತಬ್ಬಿಕೊಂಡ ಶಿಶಿರ..


ನಾನು ತಾಯಿ ಅಲ್ಲ...


ತಂದೆ ಕೂಡ ಆದವನಲ್ಲ.. 


ಮಗುವಿಗೆ ಒಂದೊಳ್ಳೆಯ  ಸಾಂತ್ವನ ಯಾವ ರೀತಿ ಹೇಳಲಿ...!?.


ನನಗದು ಗೊತ್ತಿಲ್ಲ..


ಆದರೂ ಹೇಳಿದೆ... 


ಇಲ್ಲ ಶಿಶಿರ ಅದೆಲ್ಲವೂ ಕ್ಷಣಿಕ...ತಾತ್ಕಾಲಿಕ ಸುಖ. ಆದರೆ ಈಗ ನಾನು ನಿನ್ನನ್ನು ಎಲ್ಲಿಗೆ ತಲುಪಿಸಬೇಕೋ ಎಂದು ಬಂದಿದ್ದೆನೆ ನೋಡು ಅದುವೇ ನಿನ್ನ ಶಾಶ್ವತವಾದ ಸುಖ,ಸಂತೋಷ ಎಲ್ಲವೂ.. ಮತ್ತು ಅದುವೇ ನಾನು ನಿನಗೆ ನೀಡುತ್ತಿರುವ ದೊಡ್ಡ ಉಡುಗೊರೆ... 


ಅಂದರೆ ಮಾಮ..? 


ಅಂದರೆ.. ನಾನು ನಿನ್ನನ್ನು ನಿನ್ನ ಅಪ್ಪ ಅಮ್ಮನ ಬಳಿ ಮತ್ತೆ  ತಲುಪಿಸಲು ಬಂದಿದ್ದೇನೆ ಶಿಶಿರ..


ಅದನ್ನು ಕೇಳಿ ಶಿಶಿರ ಏನೂ ಮಾತಾಡಲಿಲ್ಲ...!


ಗಾಢ ಮೌನಕ್ಕೆ ಜಾರಿ ಬಿಟ್ಟ! 


ಅವನ ಮೌನ ಕಂಡು ನನಗೆ ಮತ್ತಷ್ಟು ಗಾಬರಿ ಆಯಿತು. 


ಏನಾಯಿತು ಶಿಶಿರ.. ಖುಷಿ ಆಗಲಿಲ್ಲವೇ?


ಶಿಶಿರ ಹೇಳಿದ....ಏತಕ್ಕಾಗಿ ಖುಷಿ ಪಡಲಿ ಮಾಮ..!!


ಅಂದರೆ..?


ನನಗೆ ಅಪ್ಪನೂ ಇಲ್ಲ ಅಮ್ಮನೂ ಇಲ್ಲ ಪುರು ಮಾಮ...!! 


ಅಷ್ಟು ಹೇಳಿದ ಶಿಶಿರ ಬಿಕ್ಕಿ ಬಿಕ್ಕಿ ಅತ್ತುಬಿಟ್ಟ..!


ಆ ಪುಟ್ಟ ಮಗುವಿನ ಕಣ್ಣಲ್ಲೂ ಕಣ್ಣೀರು ಧಾರಕಾರ !! 


ಮತ್ತೆ.. ಮತ್ತೆ ಅವರು ಯಾರು.?  ತೊದಲುತ್ತಲೇ ಕೇಳಿದೆ! 


ನನ್ನ ಚಿಕ್ಕಪ್ಪ ಅವರು...


ಆಸ್ತಿಗಾಗಿ ನನ್ನ ಅಪ್ಪ ಅಮ್ಮನನ್ನು ನನ್ನೆದುರೇ ಚೂರಿ ಹಾಕಿ ಕೊಂದವರು ಅವರೇ ಮಾಮ ! ನನ್ನನ್ನೂ ಕೂಡ ಸಾಯಿಸಲು ಹೊರಟಿದ್ದರು...! 


ಮನೆ ಕೆಲಸದವರಿಂದಾಗಿ ಹೇಗೋ ರೈಲು ಸೇರಿದೆ,ಮಂಗಳೂರು ತಲುಪಿದೆ... ನಂತರ ನನಗೆ ದೇವರಂತೆ ನೀನು ಸಿಕ್ಕಿದೆ ಪುರು ಮಾಮ! 


ಶಿಶಿರ ಹೇಳಿದ ಕಥೆ ಕೇಳಿ ನಾನು ಸ್ತಬ್ಧನಾಗಿ ಹೋಗಿ ಬಿಟ್ಟೆ!! 


ಕೆಲವೇ ಕ್ಷಣಗಳಲ್ಲಿ ನನ್ನ ಮುಂದೆಯೇ ಹಲವಾರು ಜನರಿದ್ದರು..! 


ನನ್ನ ಕೈಯಲ್ಲಿ ಒಂದು ಹಣದ ಕಟ್ಟು ಇಟ್ಟು. ಶಿಶಿರನನ್ನು ದರದರ ಎಂದು ಅವರು ಅಲ್ಲಿಂದ ಎಳೆದುಕೊಂಡು ಹೋಗಿಯೇ ಬಿಟ್ಟಿದ್ದರು!! 


ಶಿಶಿರ ಅವರಿಂದ ಬಿಡಿಸಿ ಕೊಳ್ಳುವ ಪ್ರಯತ್ನ ಮಾಡುತ್ತಾ..ಕೊಸರಾಡುತ್ತಾ..ಕೂಗಾಡುತ್ತಲೇ ಇದ್ದ.. 


ಮಾಮ.... ನನ್ನನ್ನು ಬಿಡಿಸು ಪುರು ಮಾಮ.. ನನಗೆ ನಿನ್ನ ಈ ಉಡುಗೊರೆ ಬೇಡ ಪುರು ಮಾಮ..ನನ್ನನ್ನು ಇವರು ಕೊಂದೇ ಹಾಕಿ ಬಿಡುತ್ತಾರೆ ಪುರು ಮಾಮ.. !! 


ಕೆಲವೇ ಕ್ಷಣಗಳಲ್ಲಿ ಬಂದವರೆಲ್ಲರೂ ಕಣ್ಮರೆ ಆಗಿದ್ದರು..! 


ನಾನೊಬ್ಬನೇ ಅಲ್ಲಿದ್ದೆ..!


ಇನ್ನೂ ಅಲ್ಲೇ ನಿಂತಿದ್ದೆ!


ನಿಶ್ಯಬ್ಧ ಮೌನ!! 


ಕೈಯಲ್ಲೊಂದು ನಾನು ಮಾಡಿದ ದೇವರು ಮೆಚ್ಚುವ ಕೆಲಸಕ್ಕೆ ಬಹು ದೊಡ್ಡ ಉಡುಗೊರೆಯ ಕಟ್ಟು ಇತ್ತು!! 


ಉಡುಗೊರೆ ನಾನು ಶಿಶಿರನಿಗೆ ಕೊಡಲು ಎಂದು ಬಂದಿದ್ದೆ..


ಆದರೆ ನಾನು ಕೊಟ್ಟ ಉಡುಗೊರೆ ಅವನಿಗೆ ಬೇಡವಾಗಿತ್ತು..


ಅದಕ್ಕಾಗಿ ಅವನೇ ನನಗೆ ಉಡುಗೊರೆ ಕೊಡಿಸಿದ್ದ..!! 


ದೇವರೇ ನಾನೆಂತಹ ಕೆಲಸ ಮಾಡಿದೆ...! 


ನನ್ನ ಮೆಲೆಯೇ ನನಗೆ ಸಿಟ್ಟು ಬಂದು ಕೈಯಲ್ಲಿ ಇದ್ದ ಆ ಕಟ್ಟನ್ನು ಅಷ್ಟು ದೂರಕ್ಕೆ ರೈಲು ಪಟ್ಟಿಯೇ ಮೇಲೆಯೇ ಬಿಸಾಡಿ ಬಿಟ್ಟೆ! 


ಶೂನ್ಯ ಭಾವ ಆವರಿಸಿತು..! 


ಹಾಗೇ ಅಲ್ಲೇ ಆ ರೈಲು ಪ್ಲಾಟ್ ಫಾರ್ಮ್ ನಲ್ಲಿಯೇ ಕುಸಿದು ಕುಳಿತುಕೊಂಡೆ....!


ಮನಸ್ಸಿನಲ್ಲಿ ಎಂದಿನಂತೆ ಅದೇ ಏನೇನೋ ಯೋಚನೆಗಳು,ಆಲೋಚನೆಗಳು... 


ಹರಕೆಯ ಕುರಿಯಲ್ಲಿ ಯಾರೂ ಬಯಕೆಗಳನ್ನು ಕೇಳೋದೇ ಇಲ್ಲ .. 


ಕುರಿಯೇ ಯಾರದ್ದೋ ಬಯಕೆ ಆಗಿರುವಾಗ ಕ್ಷಣ ಮಾತ್ರಕ್ಕೆ ಹಾಕೋ ಗಂಧ,ಹಾರಕ್ಕೆ ಇಲ್ಲಿ ಬೆಲೆಯಿಲ್ಲ..!! 


ಕಪಟವರಿಯದೆ ನಾನು ಕುರಿಯಾಗಿ ಹೋಗಿದ್ದೆ ನಿಜ,ಆದರೆ...


ಆ ಪುಟ್ಟ ಹುಡುಗ ಶಿಶಿರ....


ಬಲಿ ವೇದಿಕೆಯತ್ತ ಎಳೆಯ ಕುರಿ ಮರಿಯಂತೆ ತಾನೇ ನಡೆದು ಹೋಗಿದ್ದ..!


ಇಲ್ಲ...


ಅವನು ಇಷ್ಟ ಪಟ್ಟು ನಡೆದು ಹೋಗಿರಲಿಲ್ಲ..!! 


ಅವನಿಗೆ ಚೆನ್ನಾಗಿ ತಿನ್ನಿಸಿ.. ಪುಷ್ಕರಣಿಯಲ್ಲಿ ಸ್ನಾನ ಮಾಡಿಸಿ.. ಒಂದೊಳ್ಳೆಯ ಉಡುಗೆ ತೊಡಿಸಿ ಖುಷಿ ಖುಷಿಯಿಂದ ಉತ್ಸವದ  ಮೆರವಣಿಗೆ ಮಾಡಿಸಿ ನಾನೇ ನನ್ನ ಕೈಯಾರೇ ಬಲಿಯಾಗಲು ಕಳುಹಿಸಿ ಕೊಟ್ಟಿದ್ದೆ! 


ಅಯೋ ದೇವರೇ... ನಾನು ಅದೆಂತಹ ಪಾಪಿ..!!


ಶಿಶಿರ ಹೇಳಿದ್ದ ಆ ತೊದಲು ಮಾತುಗಳೇ ಮತ್ತೆ ಮತ್ತೆ ಕಿವಿಯಲ್ಲಿ ಗುನುಗಿ ಬಿಟ್ಟವು ... 


"ಮಾಮ..ನೀನು ಕೊಡಿಸಿದ ಬಟ್ಟೆಯೂ ಚೆನ್ನಾಗಿದೆ.. ದೋಸೆಯೂ ಚೆನ್ನಾಗಿದೆ....ನಿಮಗೆ ಥ್ಯಾಂಕ್ಸ್ ಪುರು ಮಾಮ.." !!!


ನನ್ನನ್ನು ನೋಡಿದ ಖಾಲಿ ಪ್ಲಾಟ್‌ಫಾರ್ಮ್...


ಒಮ್ಮೆ ಹಾಗೇ ನಕ್ಕು  ಬಿಟ್ಟಿತು!!! 


.....................................................................................


#ಪುಷ್ಯರಾಗ 🧡


ab pacchu 

moodubidire

(photo-internet)

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ