ಅಜ್ಜನ ಗಡ್ಡ

 

ಆವಾಗ ನಾನು ಆರನೇ ಕ್ಲಾಸ್ ನಲ್ಲಿ ಇದ್ದೆ.ಅವಳು ಏಳನೇ ಕ್ಲಾಸ್ ನಲ್ಲಿ ಇದ್ದಳು.ಅವಳ ಹೆಸರು ಮಂದಾಕಿನಿ. ಇಡೀ ಪ್ರೈಮರಿಯಲ್ಲಿ ಅವಳೇ ಚಂದ.

ಇಡೀ ಕ್ಲಾಸ್ ಅವಳ ಹಿಂದೆ ಬಿದ್ದರೂ, ನಾನು ಅವಳ ಹಿಂದೆ ಬಿದ್ದಿರಲಿಲ್ಲ.

ಆದರೆ ಒಂದು ದಿನ ಮಂದಾಕಿನಿ ಯ ಕಣ್ಣು ನನ್ನ ಮೇಲೆ ಬಿತ್ತು. ಇಡೀ ಸ್ಕೂಲೇ ನನ್ನ ಹಿಂದೆ ಬೀಳುತ್ತೆ ಆದರೆ ಈ ಪಚ್ಚು ಯಾಕೆ ನನ್ನ ಹಿಂದೆ ಬೀಳಲ್ಲ ಅಂತ ಅವಳಿಗೆ ಬಹಳ ಟೆನ್ಶನ್ ಆಯಿತು.

ಆವಾಗ ಸ್ಕೂಲ್ ಗೆ ಹೋಗ್ಲಿಕ್ಕೆ ಸರಿಯಾದ ರೋಡ್ ಇರ್ಲಿಲ್ಲ, ಇರ್ಲಿಲ್ಲ ಅಂತ ಅಲ್ಲ, ಟಾರು ರೋಡ್ ಇತ್ತು. ಆದರೂ short cut ಮಾರ್ಗಕ್ಕಾಗಿ ನಾನು ಗದ್ದೆ ಯ ಬದುವಿನಲ್ಲಿ, ಹೊಳೆಯ ದಂಡೆಯಲ್ಲಿ, ಗುಡ್ಡದ ದಾರಿಯಲ್ಲಿ ಇಳಿದು ಹತ್ತಿ, ಕುಂಟಾಲ್, ಕೇಪುಳ, ರೆಂಜಿರ್ ಹಣ್ಣುಗಳನ್ನು ಕೊಯ್ದು ತಿನ್ನುತ್ತಾ, ಹಣ್ಣಾಗಿ ಕೆಳಗೆ ಬಿದ್ದಿರುವ ಕಾಟು ಮಾವನ್ನು ಹೆಕ್ಕುತ್ತಾ , ಮರದ ಬೊಡ್ಡೆಗೆ ಕೈ ಹಾಕಿ ಜೇನು ತೆಗೆದು ಅದನ್ನು ಬಾಯಿಗೆ ಹಾಗೇ ಹಿಂಡಿ ಕಾಡು ಜೇನು ಸವಿದು, ಗುಡ್ಡದ ಮೇಲಿನ ಹಲಸು ಮರ ಹತ್ತಿ ತುಳುವೆ ಹಲಸನ್ನು ಹಾಗೇ ಕೈಯಿಂದ ಓಪನ್ ಮಾಡಿ ಒಂದೊಂದೇ ತೋಳೆಯನ್ನು ತಿನ್ನುತ್ತಾ..ಮರ ಇಳಿದು ಹಾಗೇ ಓಡುತ್ತಾ.. ಹಾಡುತ್ತಾ.. ನಲಿಯುತ್ತಾ ಸ್ಕೂಲ್ ಗೆ ಹೋಗುತ್ತಿದ್ದ ಕಾಲ ಆದು.ಅದೇ ದಾರಿಯಲ್ಲಿ ಮಂದಾಕಿನಿ ಕೂಡ ಹೋಗುತ್ತಿದ್ದದ್ದು.

ಒಂದು ಸಂಜೆ ನಾನು ಶಾಲೆಯಿಂದ ಮನೆಗೆ ಹಿಂದಿರುಗುವಾಗ ಗುಡ್ಡದ ದಾರಿಯಲ್ಲಿ ಹೋಗುತ್ತಿದ್ದರೆ,ಆ ಗುಡ್ಡದ ಒಂದು ತುದಿಯಲ್ಲಿ ಬಲಕ್ಕೆ ತಿರುಗುವಾಗ ರಪ್ಪನೆ ಪಕ್ಕದ ಪೊದೆಯಿಂದ ಹಾರಿ ನಾನು ಹೋಗುತ್ತಿದ್ದ ದಾರಿಗೆ ಅಡ್ಡಲಾಗಿ ನಿಂತುಬಿಟ್ಟಳು ಮಂದಾಕಿನಿ. ಬಹುಶಃ ಮೊದಲೇ plan ಮಾಡಿ ಕಾದು ನಿಂತಿದ್ದಳೋ ಏನೋ. ಅಂಪೈರ್ ಕ್ರಿಕೆಟ್ ನಲ್ಲಿ ವೈಡ್ ಅಂತ ಹೇಳ್ಲಿಕ್ಕೆ ಎರಡೂ ಕೈಯನ್ನು ಅಗಲಿಸಿ ನಿಲ್ತಾರೆ ಅಲ್ಲ.. ಹಾಗೇ ತನ್ನ ಎರಡೂ ಕೈಯನ್ನು ಚಾಚಿಸಿ ನನ್ನ ದಾರಿಗೆ ಅಡ್ಡ ನಿಂತಿದ್ದಳು ಮಂದಾಕಿನಿ. ನಾನು ಏನೂ ತೋಚದೆ ತಲೆತಗ್ಗಿಸಿ ನಿಂತಿದ್ದೆ.

'ಹಾಯ್' ಅಂದಳು...

ನಾನು 'ಹೂಂ' ಅಂದೆ.

ನನ್ನ ಕಾಲ್ಬೆರಳು ನೆಲದ ಮೇಲೆ ರಂಗೋಲಿ ಬರೆಯುತ್ತಿತ್ತು. ನಾನು ಯಾವತ್ತೂ ಹುಡುಗಿ ಮುಂದೆ ಹೋಗಿ ನಿಂತವನಲ್ಲ ಅದರಲ್ಲೂ ಮಂದಾಕಿನಿ ನನಗಿಂತ ದೊಡ್ಡವಳು.

"ಮತ್ತೆ ಏನು ವಿಶೇಷ.." ಕೇಳಿದಳು.

"ವಿಶೇಷ ಏನಿಲ್ಲ, ತಿಂಡಿಗೆ ಮನೆಯಲ್ಲಿ ಪತ್ರೊಡೆ ಮಾಡಿದ್ರು. ಬುತ್ತಿಗೆ ಸ ಅದನ್ನೇ ಹಾಕಿಕೊಂಡು ಬಂದಿದ್ದೆ.."
ತಲೆತಗ್ಗಿಸಿಯೇ ಹೇಳಿದೆ.

ಸ್ವಲ್ಪ ಹೊತ್ತು ಹಾಗೇ ನನ್ನನ್ನು ನೋಡಿದಳು ಮಂದಾಕಿನಿ.

" ಮತ್ತೆ ನಿನ್ನೆ ಏನು ಮಾಡಿದ್ರೂ ..." ಕೇಳಿದಳು.

"ನಿನ್ನೆ ತೆಳ್ಳವು(ನೀರುದೋಸೆ) ಇತ್ತು.. "ಅಂದೆ.

"ನಾಳೆ ಏನು ಮಾಡ್ತಾರೆ ? " ಕೇಳಿದಳು.

" ಮರದಲ್ಲಿ ಪೆಲಕಾಯಿ ಹಣ್ಣಾಗಿದೆ. ಹಾಗಾಗಿ ಅಮ್ಮ ನಾಳೆ ಪೆಲಕಾಯಿ ಗಟ್ಟಿ(ಕಡುಬು) ಮಾಡುವ ಸಾಧ್ಯತೆ ಜಾಸ್ತಿ ಇದೆ.." ಅಂದೆ.

ಈ ಪತ್ರೊಡೆ, ತೆಳ್ಳವು, ಪೆಲಕಾಯಿ ಗಟ್ಟಿ, ತಿನ್ನುವುದು, ಮರ ಹತ್ತುವುದು,ಕಾಟು ಕುಕ್ಕು(ಮಾವು) ಹೆಕ್ಕುವುದು, ಗುಡ್ಡ ಏರುವುದು, ಜೇನು ಹೀರುವುದು ಇದು ಬಿಟ್ಟರೆ ಬೇರೆ ಏನು ವಿಶೇಷ ವಾದದ್ದು.. ಒಬ್ಬಂಟಿ ಹುಡುಗಿ ಸಿಕ್ಕಿದಾಗ ವಿಶೇಷವಾಗಿ ಹೇಳಿಕೊಳ್ಳುವಂತಹದ್ದು .. ಏನೂ ಇಲ್ಲವೇ ನಿನ್ನ ಬಳಿ .." ಕೇಳಿ ಬಿಟ್ಟಳು.

" ಇದೆಯಲ್ಲ ವಿಶೇಷ.. ಊರಿನ ಜಾತ್ರೆ.. ನಾಡಿದ್ದು,ಉಳ್ಳಾಲ್ದಿ ಯ ತೇರು.. ನಿನಗೆ ಗೊತ್ತಿಲ್ಲವೇ " ಅಂದೆ

ಮತ್ತೊಮ್ಮೆ ಮೇಲಿಂದ ಕೆಳಗೆ ಹಾಗೇ ನನ್ನನ್ನು ನೋಡಿದಳು.

" ಹುಡುಗಿ ಯ ಹತ್ತಿರ ಮಾತನಾಡುವುದು ಇದೇ ಮೊದಲ..."  ಕೇಳಿದಳು.

" ಹೂಂ..." ಅಂದೆ.

" ಕ್ಲಾಸ್ ನಲ್ಲಿ ಯಾರು ಹುಡುಗಿ ಪ್ರೆಂಡ್ಸ್ ಇಲ್ವಾ.. " ಕೇಳಿದಳು.

" ಇಲ್ಲ..." ಅಂದೆ

" ಯಾಕೆ ಇಲ್ಲ.. " ಕೇಳಿದಳು.

" ಗೊತ್ತಿಲ್ಲ.. " ಅಂದೆ.

" ಮತ್ತೆ ನಿನಗೆ ಏನು ಗೊತ್ತು.." ಅಂದಳು.

"ನನಗೆ ಕಾಡು ಗೊತ್ತು, ಬೆಟ್ಟ, ಗುಡ್ಡ, ನದಿ ಮರ, ಗದ್ದೆ .. ಹರಿಯೋ ತೊರೆ.. ಕೂಗೋ ಹಕ್ಕಿ.. ಆಟವಾಡೋ ಕರು..ಅರಳೋ ಹೂವು.. ಮರದ ಹಣ್ಣು...ಇತ್ಯಾದಿ ಗೊತ್ತು, ನನಗೆ ಅವುಗಳೆಂದರೆ ಇಷ್ಟ, ಅವುಗಳೊಂದಿಗೆ ನಾನು ಬೆರೆಯುತ್ತೇನೆ ಹಾಗೇ ಕಳೆದು ಹೋಗುತ್ತೆನೆ. ಪ್ರಕೃತಿ ನನಗೆ ಬೋರು ಹೊಡಿಸಲ್ಲ. ನನ್ನ ಪ್ರಪಂಚ ಅದೇ.. ನನಗೇ ಅದೇ ಇಷ್ಟ.. " ಅಂದೆ

ಅವಳು ಮೌನಿಯಾದಳು.

ನಾನು ಪರಮ ಮೌನಿ.

" ಪಚ್ಚು ನಿನ್ನ ಜಗತ್ತು ಚೆನ್ನಾಗಿದೆ... ನನಗೂ ನಿನ್ನ ಜಗತ್ತಿನಲ್ಲಿ ಸ್ವಲ್ಪ ಜಾಗ ಕೊಡ್ತಿಯಾ... " ಕೇಳಿ ಬಿಟ್ಟಳು ಮಂದಾಕಿನಿ.

ನನಗೆ ಅರ್ಥ ಆಗಲಿಲ್ಲ." ಹಾಗಂದರೆ...? " ಕೇಳಿದೆ.

" ನಿನ್ನ ಹಾಗೇ ನಾನು ಕೂಡ ಇದೇ ಬೆಟ್ಟ ಹತ್ತಿ, ಗುಡ್ಡ ಇಳಿದು ಗದ್ದೆ ಬದು ಏರಿ ಸ್ಕೂಲ್ ಗೆ ಹೋಗ್ತಿನಿ ಆದರೆ ನಾನು ಯಾವತ್ತೂ, ನೀನು ಈ ಪ್ರಕೃತಿಯನ್ನು ನೋಡುವ ಹಾಗೆ ನೋಡಿಯೇ ಇಲ್ಲ. ಆದರೆ ಸ್ಕೂಲ್ ನಲ್ಲಿ ಮನೆಯಲ್ಲಿ ಸದಾ ಮೌನಿಯಾಗಿರುವ ನೀನು ಮಾತ್ರ ಈ  ಪ್ರಕೃತಿಯ ಮಡಿಲಲ್ಲಿ ಸೇರಿ ಬಿಟ್ಟರೆ ಅದೆಷ್ಟು ಸಂತೋಷವಾಗಿರ್ತಿಯಾ...ನನಗೆ ಎಲ್ಲರೂ ಇದ್ದಾರೆ, ಆದರೆ ನಾನು ನಿನ್ನಷ್ಟು ಸಂತೋಷಿ ಅಲ್ಲ. ನಾನೂ ಈ ಪ್ರಕೃತಿಯನ್ನು ಅನುಭವಿಸಬೇಕು.. ನಿನ್ನ ಹಾಗೇ ಸಂತೋಷವಾಗಿರಬೇಕು.. ಇನ್ನು ಮುಂದೆ ನಾನೂ ನಿನ್ನ ಜೊತೆಗೆಯೇ ಬೆಳಿಗ್ಗೆ ಸ್ಕೂಲ್ ಗೆ ಹೋಗುವಾಗ, ಸಂಜೆ ಸ್ಕೂಲ್ ನಿಂದ ಮರಳುವಾಗ.. ನಿನ್ನ ಜೊತೆಯೇ ಬರ್ತಿನಿ, ಪ್ಲೀಸ್.. ಇಲ್ಲ ಎನ್ನಬೇಡ ... " ಅಂದಳು.

" ಅಷ್ಟೇ ತಾನೇ.. ಓಕೆ " ಅಂದೆ .

"ಥ್ಯಾಂಕ್ಸ್.. " ಎಂದವಳೇ," ಇನ್ನು ಮುಂದೆ ನಾವಿಬ್ಬರು ಫ್ರೆಂಡ್ಸ್.. " ಅಂತ ಕೈ ಚಾಚಿದಳು..

ನನಗೆ ಸಂಕೋಚ, ಅವಳೇ ನನ್ನ ಕೈಯಿಗೆ ಕೈ ಹಾಕಿ ಹ್ಯಾಂಡ್ ಶೇಕ್ ಮಾಡಿ ಬಿಟ್ಟಳು.

ಕತ್ತಲು ಆವರಿಸತೊಡಗಿತು. ನಾವಿಬ್ಬರು ಮನೆ ಕಡೆಗೆ ಹೆಜ್ಜೆ ಹಾಕಿದೆವು

ಗುಡ್ಡ ಇಳಿಯುವಾಗ ಮಂದಾಕಿನಿ ಕೇಳಿಬಿಟ್ಟಳು," ಅದು ಹೌದು, ಎಲ್ಲಾ ಕ್ಲಾಸ್, ನನ್ನ ಹಿಂದೆ ಇದೆ ಆದರೆ ನೀನು ಯಾಕೆ ನನ್ನನ್ನು ಕಣ್ಣೆತ್ತಿಯೂ ನೋಡಲ್ಲ.." ಅಂದಳು.

" ನೀನು ತುಂಬಾ ಚಂದ ಇದ್ದೀಯಾ.. ನಿಂಗೆ ಖಂಡಿತವಾಗಿಯೂ ಲವ್ವ್ ಇರುತ್ತೆ.. ಭಾಯ್ ಫ್ರೆಂಡ್ ಇರ್ತಾನೆ... ಮತ್ತೆ ನಮ್ಗೆಲ್ಲ ಯಾರು ಬೀಳ್ತಾರೆ ಅಂತ ನಾನು ನಿನ್ನ ಹಿಂದೆ ಬಿದ್ದಿಲ್ಲ.." ಅಂದೆ ಮತ್ತೆ ತುಂಬಾ ಅಮಾಯಕನ ಹಾಗೇ...

ಅವಳು ನಕ್ಕಳು. ಮಂದಾಕಿನಿ ನಕ್ಕರೆ ತುಂಬಾ ಸುಂದರವಾಗಿ ಕಾಣುತ್ತಾಳೆ.

ಈ ರೀತಿಯಾಗಿ ನನಗೂ ಮಂದಾಕಿನಿಗೂ  ಸ್ನೇಹ ಬೆಳೆದು ಬಿಟ್ಟಿತು.

ಮರುದಿವಸದಿಂದ ನಾವಿಬ್ಬರೂ ಒಟ್ಟೊಟ್ಟಿಗೆ ಸ್ಕೂಲ್ ಗೆ ಹೋಗತೊಡಗಿದೆವು. ಅವಳಿಗೆ ನಾನು ರೆಂಜೆ ಮರದ ಹೂವನ್ನು ಹೆಕ್ಕಿ ಕೊಟ್ಟೆ, ಕಾಡು ಮಲ್ಲಿಗೆಯನ್ನು ತಲೆಗೆ ಮುಡಿಸಿಬಿಟ್ಟೆ. ತಿನ್ನಲು ಕಾಡು ಮಾವು, ಹೆಬ್ಬಲಸು, ಕುಂಟಾಳೆ ಹಣ್ಣು,ಕೇಪುಳ ಹಣ್ಣು, ನೇರಳೆ ಹಣ್ಣು ಕಿತ್ತು ಕೊಟ್ಟೆ.ನೈದಿಲೆಯ ದಂಟಿನಲ್ಲಿ ಆಳವಾದ ಕೆರೆಯ ನೀರನ್ನು ಮೇಲಿನಿಂದ ಹೇಗೆ ಹೀರಿ, ಕೆರೆ ನೀರು ಕುಡಿಯಬಹುದು ಎಂದು ತೋರಿಸಿ ಕೊಟ್ಟೆ . ಕೇಪುಳ ದ ಹೂವಿನ ದಂಟನ್ನು ನಾಚಿಕೆ ಮುಳ್ಳಿನ ಅಂಟಿನಲ್ಲಿ ಮುಳುಗಿಸಿ ಗಾಳಿ ಗುಳ್ಳೆಗಳನ್ನು ಊದುವುದು ಹೇಗೆ ಎಂದು ನಾನು ಅವಳಿಗೆ ಕಲಿಸಿ ಕೊಟ್ಟೆ. ಅವಳು ಖುಷಿ ಪಟ್ಟಳು.

ಅವಳಿಗೆ ಇದೆಲ್ಲವೂ ಹೊಸದು. ತೆಂಗಿನ ಗರಿಗಳಿಂದ ತಿರುಗುವ ಗಿರ್ಗಿಟ್ ಮಾಡಿಕೊಟ್ಟೆ ಅದನ್ನು ಹಿಡಿದು ಅವಳು ಓಡುತ್ತಿದ್ದಳು.ಗಾಳಿಗೆ ಗಿರ್ಗಿಟ್ ತಿರುವಾಗ ಅವಳ ಖುಷಿಗೆ ಪಾರವೇ ಇರಲಿಲ್ಲ. ಗುಡ್ಡದಲ್ಲಿ ಒಟ್ಟಿಗೆ ನವಿಲು ಗರಿ ಹೆಕ್ಕುತ್ತಿದ್ದೆವು, ಅದೊಂದು ಎಲೆ ಇತ್ತು, ಅದು ಪುಸ್ತಕದಲ್ಲಿ ಇಟ್ಟರೆ ಮರಿ ಹಾಕುತ್ತೆ ಅಂತೆ, ಅದನ್ನು ಕೊಯ್ದು ಪುಸ್ತಕದೊಳಗೆ ಇಟ್ಟುಕೊಳ್ಳುತ್ತಿದ್ದೆವು.

ಗುಡ್ಡದಲ್ಲಿ ಅಜ್ಜ ನ ಗಡ್ಡ ಹಿಡಿಯಲು ಇಬ್ಬರೂ ಓಡುತ್ತಿದ್ದೆವು.ಅದು ಕೈಗೆ ಸಿಗದೇ ಎತ್ತರ ಎತ್ತರ ಆಗಸದೆತ್ತರ ಹಾರಿ ಹೋದಾಗ ನಿರಾಸೆ,ಕೆಲವೊಮ್ಮೆ ಹಾಗೇ ನಡೆದು ಕೊಂಡು ಹೋಗುವಾಗ ಸೀದಾ ಬಂದು ಕೈ ತೆಕ್ಕೆಗೆ ಬೀಳುವ ಅಜ್ಜನ ಗಡ್ಡ  ನಮ್ಮ ಖುಷಿಯನ್ನು ದುಪ್ಪಟ್ಟು ಮಾಡುತ್ತಿತ್ತು.
ನಾನು ಅವಳಿಗಿಂತ ಚಿಕ್ಕವ, ಆದರೂ ಎಲ್ಲವನ್ನೂ ನಾನೇ ಅವಳಿಗೆ ಹೇಳಿಕೊಡಬೇಕಾಗಿತ್ತು. ಮತ್ತು ಅದು ಯಾವತ್ತೂ ನನಗೆ ಬೇಜಾರು ಅನಿಸಲೇ ಇಲ್ಲ. ಒಬ್ಬನೇ ಪ್ರಕೃತಿಯನ್ನು ಮನಸಾರೆ ಆನಂದಿಸುತ್ತಿದ್ದವನು, ಮಂದಾಕಿನಿ ಯ ಜೊತೆಗೆ ಇನ್ನೂ ಹೆಚ್ಚು ಆಸ್ವಾದಿಸಲು ಶುರು ಮಾಡಿದೆ.

ಆ  ದಿನ ಮಂದಾಕಿನಿ ಗುಡ್ಡದ ತುದಿಯಲ್ಲಿ ನಡೆದು ಹೋಗುವಾಗ ಶುರುವಿನಿಂದಲೇ ತುಂಬಾ ಮೌನವಾಗಿದ್ದಳು.ಅವಳು ಮೌನಿಯಾದಾಗಲೆಲ್ಲ ನಾನು ಪರಮ ಮೌನಿ. ಯಾವಾಗಲೂ ಜಾಸ್ತಿ ಮಾತಾಡವುದು, ಮಾತಾಡಿಸುವುದು ಅವಳೇ . ಕೊನೆಗೂ ಮೌನ ಮುರಿದು ಮಂದಾಕಿನಿ ಮಾತನಾಡಲು ಶುರುಮಾಡಿದಳು. "  ಪಚ್ಚು ನನಗೆ ನೀನು ಅಂದರೆ ತುಂಬಾ ಇಷ್ಟ. ನೀನು ಬಂದ ಮೇಲೆ ನನ್ನ ಜಗತ್ತು ಬದಲಾಗಿದೆ. ನನಗೆ ನೀನು ಸದಾ ನನ್ನ ಜತೆ ಬೇಕು ಎಂದು  ಅನ್ನಿಸ್ತಾ ಇರುತ್ತೆ ..ಪಚ್ಚು ನೀನು ಇರ್ತಿ ಅಲ್ವಾ... ನೀನು ಇದ್ದರೆ ಮಾತ್ರ ನಾನು ಖುಷಿಯಲ್ಲಿ ಇರಬಲ್ಲೆ.. ನಿನಗೂ ಇದೇ ರೀತಿ ಅನ್ನಿಸುತ್ತೆ ಅಲ್ವಾ? ...ಪ್ರೀತಿ ಅಂದರೆ ಇದೇನಾ .. " ಅಂದುಬಿಟ್ಟಳು.

ಪ್ರೀತಿ ಪ್ರೇಮ ದ ಬಗ್ಗೆ ಏನೂ ಗೊತ್ತಿಲ್ಲದ ಆರನೇ ಕ್ಲಾಸ್ ನ ಹುಡುಗ ನಾನು.. ನಾನು ಏನು ಹೇಳಲಿ.. ನನಗೂ ಮಂದಾಕಿನಿ ಇಷ್ಟವೇ, ಅವಳು ಇದ್ದಷ್ಟು ಹೊತ್ತು ಸಮಯ ಸರಿಯುವುದೇ ಗೊತ್ತಾಗುವುದಿಲ್ಲ. ಆದರೆ ಅದು ಪ್ರೀತಿಯಾ..? ವಯಸ್ಸು ಮನಸ್ಸು ಸರಿಯಾಗಿ ಬೆಳೆಯದ ಈ ಸಂಬಂಧ ಒಂದು ಕೇವಲ ಆಕರ್ಷಣೆ ಎಂದು ನನಗೆ ಆವಾಗ ಯಾಕೆ ಅನಿಸಿತೋ ಗೊತ್ತಾಗಲಿಲ್ಲ. ಆದ್ದರಿಂದ ನಾನು ಏನೂ ಹೇಳಲಿಲ್ಲ.
ಅವಳು ಮತ್ತೆ ಮತ್ತೆ ಕೇಳಿದಳು.

"ನನಗೆ ಗೊತ್ತಿಲ್ಲ..." ಅಂದು ಬಿಟ್ಟೆ.

ಪ್ರೈಮರಿ ಮುಗಿಯಿತು.ಮುಂದಿನ ವಿಧ್ಯಾಭ್ಯಾಸ ಕ್ಕಾಗಿ ಅವಳೊಂದು ಕಡೆಗೆ ಹೋದಳು, ನಾನು ಇನ್ನೊಂದು ಕಡೆಗೆ ಹೋದೆ. ಮನೆ ಚೇಂಜ್ ಆಯಿತು. ಊರು ಚೇಂಜ್ ಆಯಿತು. ಬದಕು ಬೆಳೆಯಿತು, ಡಿಗ್ರಿ ಮುಗಿಯಿತು. ಕೆಲಸ ಸಿಕ್ಕಿತು, ಮದುವೆ ಆಯಿತು, ಮಕ್ಕಳು ಹುಟ್ಟಿದರು . ಮಕ್ಕಳಿಗೆ ಮಕ್ಕಳು ಹುಟ್ಟಿದರು. ನಾನೀಗ ಮೊಮ್ಮಕ್ಕಳ ಪಾಲಿನ ಅಜ್ಜ. ನನ್ನಲ್ಲಿ ಆಗಾಧವಾದ ನೆನಪುಗಳಿವೆ. ಹೇಳಲು ಕಥೆಗಳಿವೆ, ಹೇಳಲು ಸಾಧ್ಯವಾಗದ ಕಥೆಗಳೂ ಇವೆ. ಸಮಯ ಸಿಕ್ಕಿದಾಗಲೆಲ್ಲ ಕೆಲವೊಂದನ್ನು ಮೊಮ್ಮಕ್ಕಳಿಗೆ ಹೇಳುತ್ತೆನೆ. ಕೆಲವು ಕಥೆ ನನ್ನಲ್ಲೇ ಉಳಿದಿದೆ. ಅದು ನನ್ನೊಂದಿಗೆನೇ ಕೊನೆಯಾಗುತ್ತದೆ.

ಕೆಲವೊಮ್ಮೆ ಮೊಮ್ಮಕ್ಕಳೊಂದಿಗೆ ಊರುಗೋಲು ಹಿಡಿದುಕೊಂಡು ಕೇಪುಳ ದ ಹೂವು ಕೊಯ್ಯಲು ಸಂಜೆ ವೇಳೆಗೆ ಗುಡ್ಡದ ತುದಿ ಹತ್ತುತ್ತೆನೆ. ಈ ಎಂಬತ್ತರ ಇಳಿ ವಯಸ್ಸಿನಲ್ಲೂ ನನ್ನಲ್ಲಿ ಪ್ರಕೃತಿ ಯ ಕಡೆಗಿನ ಆಸಕ್ತಿ ಕಡಿಮೆ ಆಗಿಯೇ ಇಲ್ಲ.ಅದು ಆಗುವುದೂ ಇಲ್ಲ. ನನ್ನ ಮೊಮ್ಮಕ್ಕಳು ಶ್ರದ್ಧೆಯಿಂದ ಹೂವು ಕೊಯ್ಯುತ್ತಿದ್ದರೆ ನಾನು ಸ್ವಲ್ಪ ಹೊತ್ತು ಅಲ್ಲಿಯೇ ನಿಂತು ಬಾಲ್ಯಕ್ಕೆ ಜಾರುತ್ತೆನೆ.ನೆನಪುಗಳಿಗೆ ಮನೋವೇಗದಲ್ಲಿ  ಓಡಬಹುದು. ಆವಾಗಲೆಲ್ಲ ಮಂದಾಕಿನಿ ಇನ್ನಿಲ್ಲದಂತೆ ನೆನಪಾಗುತ್ತಾಳೆ, ಕಾಡುತ್ತಾಳೆ ಮತ್ತು ಪ್ರಶ್ನೆ ಕೇಳುತ್ತಾಳೆ. ಪ್ರೈಮರಿ ಸ್ಕೂಲ್ ನ ಪುಟ್ಟ ಮಂದಾಕಿನಿ ಅಲ್ಲೆ ಎದುರಲ್ಲೆ ಇದ್ದಂತೆ ಫೀಲ್ ಆಗುತ್ತದೆ. ಮಂದಾಕಿನಿ ಆವತ್ತು ಇದೇ ಜಾಗದಲ್ಲಿ ಹೇಳಿದ ಆ ಸಾಲುಗಳೇ ಕಿವಿಯಲ್ಲಿ ಗುಂಯ್ ಗುಡುತ್ತವೆ.. " ಪಚ್ಚು, ನನಗೆ ನೀನು ಅಂದರೆ ತುಂಬಾ ಇಷ್ಟ. ನೀನು ಬಂದ ಮೇಲೆ ನನ್ನ ಜಗತ್ತು ಬದಲಾಗಿದೆ. ನನಗೆ ನೀನು ಸದಾ ನನ್ನ ಜತೆ ಬೇಕು ಎಂದು  ಅನ್ನಿಸ್ತಾ ಇರುತ್ತೆ. ನೀನು ಇದ್ದರೆ ಮಾತ್ರ ನಾನು ಖುಷಿಯಲ್ಲಿ ಇರಬಲ್ಲೆ..ಪಚ್ಚು ನೀನು ಇರ್ತಿ ಅಲ್ವಾ.. ನಿನಗೂ ಇದೇ ರೀತಿ ಅನ್ನಿಸುತ್ತೆ ಅಲ್ವಾ ... ಪ್ರೀತಿ ಅಂದರೆ ಇದೇನಾ ..?? "

ಈ ಪ್ರಶ್ನೆಗೆ ಆವತ್ತು ನನ್ನಲ್ಲಿ ಉತ್ತರವಿರಲಿಲ್ಲ,ಆದರೆ ಇವತ್ತು ನನ್ನೊಳಗೊಂದು ಉತ್ತರವಿದೆ. ಆದರೆ ಈ ಉತ್ತರಕ್ಕೆ ಈಗ ಮಾನ್ಯತೆ ಇಲ್ಲ!

ಯಾಕೋ ಗೊತ್ತಿಲ್ಲ ಕೆಲವೊಮ್ಮೆ ನಾನು ಮಂದಾಕಿನಿ ನೆನಪಿಗಾಗಿ ಯೇ ಸಂಜೆ ವೇಳೆಯಲ್ಲಿ ಗುಡ್ಡ ಹತ್ತುತ್ತೆನೆ. ಮೊಮ್ಮಕ್ಕಳೊಂದಿಗೆ ಗುಡ್ಡ ಇಳಿಯುವಾಗ ಕೆಲವೊಮ್ಮೆ ಎಲ್ಲಿಂದಲೋ ಒಂದು ಅಜ್ಜ ನ ಗಡ್ಡ ಹಾಗೇ ಗಾಳಿಯಲ್ಲಿ ಹಾರಿಬಂದು, ಮೈ ಸ್ಪರ್ಶಿಸಿ ಹೋಗುತ್ತದೆ.ಯಾಕೋ ಗೊತ್ತಿಲ್ಲ ಮೈಯೊಂದಿಗೆ ಮನಸ್ಸು ಕೂಡ ತುಂಬಾನೇ ಭಾರವಾಗುತ್ತದೆ..ಸ್ವಲ್ಪ ಹೊತ್ತು ಅಜ್ಜನ ಗಡ್ಡ ಹಾರಿ ಹೋದ ಕಡೆಗೆಯೇ ನೋಡುತ್ತೇನೆ..ಪುನಃ ಏನೋ ನೆನಪಾಗುತ್ತದೆ.
ನಂತರ ನಿಧಾನವಾಗಿ ಗುಡ್ಡ ಇಳಿಯಲು ಶುರುಮಾಡುತ್ತೆನೆ..

ನೆನಪುಗಳಿಗೆ ಸಾವಿಲ್ಲ...!



Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ