ಸುನಂದಕ್ಕನ ಏಳೆಂಟು ಮೀನುಗಳು ಮತ್ತು ಒಂದು ಬಲ್ಯಾರ್

 


ಅವರು ಹಾಗೆಯೇ,ಅವರಲ್ಲಿಗೆ ಹೋದ ಕೂಡಲೇ ಎಂದಿನಂತೆ ಹೇಳಿ ಬಿಡುತ್ತಾರೆ  "ಅಂದದೆ ಬಾಲೆ..ಏತ್ ಸಮಯ ಆಂಡ್ ದೆ ನಿನನ್ ತೂವಂದೆ,ಎಡ್ಡೆ ಮೀನ್ ಉಂಡು ಪತೊಂದು ಪೋಲದೆ ಬಾಲೆ.." (ಎಷ್ಟು ಸಮಯ ಆಯಿತು ನೀನು ಬರದೆ ಮಗು, ಒಳ್ಳೆಯ ಮೀನು ಉಂಟು ತಗೊಂಡು ಹೋಗು).

ಬೇಕಿದ್ದರೆ ಅದಕ್ಕಿಂತ ಹಿಂದಿನ ವಾರವೇ ಅವರಲ್ಲಿಗೆ ಹೋಗಿದ್ದರು ಕೂಡ ಅವರು ಹೇಳುವುದು ಹೀಗೆಯೇ.ಅವರು ಸುನಂದಕ್ಕ. ಮೂಡುಬಿದಿರೆಯ ಮಾರ್ಕೆಟ್ ನಲ್ಲಿ ಮೀನು ಮಾರ್ತಾರೆ.


ಮೂಡುಬಿದಿರೆಯ ಮಾರ್ಕೆಟ್ ಅಂದರೆನೇ ನನಗೆ ಅದೆಷ್ಟೋ ಮುಗಿಯದ ನೆನಪುಗಳು.ಅವುಗಳಲ್ಲಿ ಸಮೃದ್ಧವಾದ ನೆನಪುಗಳು ಇರುವುದು ಹಿಂದಿನ ಹಳೆಯ ಮಾರ್ಕೆಟ್ ನಲ್ಲಿಯೇ. ಹಳೆಯ ಮಾರ್ಕೆಟ್  ಬಸ್ ಸ್ಟ್ಯಾಂಡ್ ಕೆಳಗೆ,ಹಿಂದಿನ ಲಕ್ಷೀ ಹೋಟೆಲ್ ನ ಎದುರು(ಈಗ ಇಲ್ಲ),ದುರ್ಗಾ ಸ್ಟೋರ್ ಪಕ್ಕವೇ ಇತ್ತು.


ಬಹಳ ಚಂದದ ಮಾರ್ಕೆಟ್ ಅದು.ಮಾರ್ಕೆಟ್ ನಿಂದ ಮುಂದಿನ ಬದಿಯಲ್ಲಿ ಹೋದರೆ ತರಕಾರಿ ಮಾರ್ಕೆಟ್, ಹಿಂದಿನ ಬದಿಯಲ್ಲಿ ಹೋದರೆ ಫಿಶ್ ಮಾರ್ಕೆಟ್. ಎರಡೂ ಮಾರ್ಕೆಟ್  ಒಂದೇ ದೊಡ್ಡ ಕಾಂಪೌಂಡ್ ನ ಒಳಗೆಯೇ ಇದ್ದರೂ ಕೂಡ ಒಳಗಿನಿಂದ ಎರಡೂ ಪ್ರತ್ಯೇಕ ಪ್ರತ್ಯೇಕವಾಗಿಯೇ ಇತ್ತು. 


ತರಕಾರಿ ಮಾರುಕಟ್ಟೆಯ ಒಳಗೊಂದು ನಮ್ಮಂತಹ ಚಿಕ್ಕ ಹುಡುಗರ ಪಾಲಿನ ದೊಡ್ಡದೊಂದು ದುನಿಯಾವೇ ಅಲ್ಲಿ  ಇತ್ತು.ಮೊದಲಿಗೆ ಹೋದ ಕೂಡಲೇ ಹೂವು,ಹಣ್ಣು ಮಾರುವವರು,ನಂತರ ಎರಡು ಇಕ್ಕೆಲಗಳಲ್ಲಿ ತರಕಾರಿಯ ಮಾರುವವರ ಅಂಗಡಿ.ಇಂಡೋರ್ ಮಾರುಕಟ್ಟೆ ಅಲ್ಲದಿದ್ದರೂ ಎದುರು ಬದುರು ಇರುವ  ಅಂಗಡಿಯವರು ತಮ್ಮ ಅಂಗಡಿಯಿಂದ ತಮ್ಮ ಮುಂದಿನ ಅಂಗಡಿಗೆ  ಟರ್ಪಾಲೋ ಅಥವಾ ಬಿಡಿಸಿದ ಗೋಣಿ ಚೀಲವೋ ಕಟ್ಟಿ.. ಅಲ್ಲೊಂದು ಸದಾ ನೆರಳು. ಒಮ್ಮೆ ಒಳ ಹೊಕ್ಕರೆ ಆ ತರಕಾರಿಗಳ ತಾಜಾ ಪರಿಮಳ ಹಿತವೆನಿಸುತ್ತಿತ್ತು.ಎರಡೂ ಬದಿಯಲ್ಲಿರುವ ತರಕಾರಿಗಳನ್ನು ಮುಟ್ಟಿ ಮುಟ್ಟಿ ನೋಡುತ್ತಾ ಹೋಗುವುದರಲ್ಲಿಯೂ ಏನೋ ಒಂದು ಸುಖವಿತ್ತು.ಆಗಿನ ತರಕಾರಿ ಮಾರುಕಟ್ಟೆ ನಿಜವಾಗಿಯೂ ತುಂಬಾ ಸ್ವಚ್ಛವಾಗಿ,ಅಚ್ಚುಕಟ್ಟಾಗಿ ಇತ್ತು.


ತರಕಾರಿ ಮಾರುಕಟ್ಟೆಯ ಕೊನೆಯಲ್ಲಿ  ಕಬ್ಬಿನ ಜ್ಯೂಸ್ ನ ಒಂದೆರಡು ಅಂಗಡಿಗಳು.ಬಹುಶಃ ಇಡೀ ಮೂಡುಬಿದಿರೆಗೆ ಆವಾಗ ಕಬ್ಬಿನ ಜ್ಯೂಸ್ ಸಿಗುತ್ತಿದ್ದದ್ದ ಅಂಗಡಿಗಳು ಅಂದರೆ ಅದೇ ಇರಬೇಕು.ತರಕಾರಿ ಮಾರುಕಟ್ಟೆಯ ಮತ್ತೊಂದು ಬಲಬದಿಯಲ್ಲಿ ಕರ, ಬಿಸಿಲೆ, ರೊಟ್ಟಿದ ಓಡು ಮುಂತಾದ ಮಣ್ಣಿನ ಪಾತ್ರೆಗಳನ್ನು ಮಾರುವ ಅಂಗಡಿಗಳು.ಎಲ್ಲಾ ಮಣ್ಣಿನ ಪಾತ್ರೆಗಳನ್ನು ಒಪ್ಪವಾಗಿ ಬಹಳ ಜಾಗರೂಕತೆಯಿಂದ ಪೇರಿಸಿ ಇಡುತ್ತಿದ್ದರು.


ಅದರ ಪಕ್ಕವೇ ವಾಚ್ ರಿಪೇರಿ ಅಂಗಡಿಗಳು,ಬಳೆ ಅಂಗಡಿ, ಕತ್ತರಿ ಸಾಣಿ ಹಿಡಿಯುವವರು ಇದ್ದರು. ಕತ್ತರಿ ಸಾಣಿಗೆ ನಮ್ಮಲ್ಲಿ ಹೆಚ್ಚಿನ ಮಹತ್ವ, ಏಕೆಂದರೆ ನಮ್ಮ ಎಲ್ಲರ ಮನೆಯಲ್ಲಿ ಹೆಚ್ಚಿನ ತಾಯಂದಿರು ಬೀಡಿ ಕಟ್ಟುವವರೇ. ತಕ್ಕ ಮಟ್ಟಿಗೆ ಅಲ್ಲ, ಹೆಚ್ಚಿನ ಮನೆಯ ಬಹು ದೊಡ್ಡ ಜವಾಬ್ದಾರಿಯನ್ನು ಆ ಕಾಲದಲ್ಲಿ ಹೊತ್ತುಕೊಂಡಿದ್ದು ಈ ಬೀಡಿ ಉದ್ಯಮವೇ.ತಾಯಂದಿರ ಬೀಡಿ ಕಟ್ಟುವ ಸೂಪು(ಬೀಡಿ ಕಟ್ಟಲು ಬಳಸುತ್ತಿದ್ದ ಸಾಧನ)ಮನೆಯ ಮಕ್ಕಳ ಪಾಲಿನ ಎಟಿಎಮ್ ಇದ್ದ ಹಾಗೆ. 


ತರಾಕಾರಿ ಮಾರುಕಟ್ಟೆ ಆದ ನಂತರ ಫಿಶ್ ಮಾರುಕಟ್ಟೆ. ಅದಕ್ಕೆ ಹಿಂದಿನಿಂದ ಡೈರೆಕ್ಟ್ ಆಗಿಯೂ ಬರಬಹುದು ಅಥವಾ ತರಕಾರಿ ಮಾರುಕಟ್ಟೆಯ ಪರಿಧಿ ಮುಗಿದ ಕೂಡಲೇ ಮೀನು ಸಾಮ್ರಾಜ್ಯದ ಆ ವೃತ್ತಕ್ಕೂ ಅಲ್ಲೇ ಈ ಸೈಡಿಂದ ಆ ಸೈಡಿಗೆ ಕಾಲು ಎತ್ತಿ ಇಡುವ ಮೂಲಕ ಹೋಗಬಹುದು. 


ಫಿಶ್ ಮಾರ್ಕೆಟ್ ನಲ್ಲಿ ತರಹೇವಾರಿ ಮೀನುಗಳದ್ದೇ  ಕಾರುಬಾರು.ಎಲ್ಲವೂ ಕಡಲ ಮೀನುಗಳೇ. ಕೆರೆ ಮೀನುಗಳು ನಮ್ಮಲ್ಲಿ ಇಲ್ಲವೇ ಇಲ್ಲ.ಹಸಿ ಮೀನಿನ ಮತ್ತೊಂದು ಬದಿಯಲ್ಲಿ ಒಣ ಮೀನು ಮಾರುವವರು ಇದ್ದರೆ ಮತ್ತೊಂದು ಬದಿಯಲ್ಲಿ ಚಿಕನ್, ಮಟನ್ ಮುಂತಾದ ಸ್ಟಾಲ್ ಗಳು. 


ಮೊದಲೇ ಹೇಳಿದಂತೆ ನನಗೂ ಮೂಡುಬಿದಿರೆಯ ಹಳೆಯ ಮಾರ್ಕೆಟ್ ಗೂ ಅವಿನಾಭಾವ ಸಂಬಂಧ.ಬಾಲ್ಯದ ಸವಿ ಸವಿ ನೆನಪುಗಳಲ್ಲಿ ಮೂಡುಬಿದಿರೆಯ ತರಕಾರಿ ಹಾಗೂ ಫಿಶ್ ಮಾರ್ಕೆಟ್ ಗೂ ಕೂಡ ಒಂದೆರಡು ಪುಟಗಳ ಆಸ್ಥೆಯ ಜಾಗವಿದೆ. 


ಹೈಸ್ಕೂಲ್ ಗೆ ಹೋಗುವಾಗ ನೇರವಾಗಿ ಶಾಲೆಗೆ ಹೋಗುತ್ತಿದ್ದರೂ ಸಂಜೆ ಮನೆಗೆ ಮರಳುವ ದಾರಿಯೇ ಬೇರೆ ಇರುತ್ತಿತ್ತು.ಸಾವಿರ ಕಂಬದ ಬಸದಿಯ ಪಕ್ಕದಲ್ಲಿ ಕೆಳಗಿಳಿದು ಮೂಡುಬಿದಿರೆ ಅರಮನೆಯ ಅರಮನೆ ಬಾಗಿಲಿನ ಮೂಲಕ  ಹಾದು, ಅರಮನೆಯ ಕಾಂಪೌಂಡ್ ನ ಒಳಗಿರುವ ಮರಗಳಲ್ಲಿ ಹಾಗೂ ಪದ್ಮಾವತಿ ಕಲ್ಯಾಣ ಮಂಟಪದ ಪಕ್ಕದ ಎತ್ತರದ ಮರದಲ್ಲಿ ಸದಾ ತಲೆ ಕೆಳಗಾಗಿ ನೇತಾಡುತ್ತಿದ್ದ ಬಾವಲಿಗಳ ಹಿಂಡನ್ನು ನೋಡದೆ ಸಾಗದ ದಿನವಿರುತ್ತಿರಲಿಲ್ಲ.


ಅವೆಲ್ಲವನ್ನೂ ಹಾದು ನಂತರ ಮಾರ್ಕೆಟ್ ನ ಹಿಂದಿನಿಂದ ಫಿಶ್ ಮಾರ್ಕೆಟ್ ಗೆ ಹೋಗಿ, ಎಲ್ಲಾ ತಾಜಾ ಫಿಶ್ ಗಳನ್ನು ಹಾಗೇ ಕಣ್ಣರಳಿಸಿ ನೋಡಿ ಅಲ್ಲಿಂದ ಮುಂದಕ್ಕೆ ತರಕಾರಿ ಮಾರ್ಕೆಟ್ ಒಳಗೆ ಹೋಗಿ ನಂತರ ಬಸ್ ಸ್ಟ್ಯಾಂಡ್ ಕಡೆಗೆ ಹೋದರೆನೇ ನನಗೆ ಏನೋ ಒಂದು ಸಮಾಧಾನ. 


ನನ್ನ ಪ್ರೆಂಡ್ಸ್ ಗೆ ಇಷ್ಟವಿಲ್ಲದಿದ್ದರೂ ಯಾರನ್ನಾದರೂ ಒಬ್ಬರನ್ನು ಎಳೆದುಕೊಂಡು ಅದೇ ದಾರಿಯಲ್ಲಿ ನಾನು ಹೋಗುತ್ತಿದ್ದೆ. ಅವರೆಲ್ಲರದ್ದೂ ಒಂದೇ ಪ್ರಶ್ನೆ.." ನೀನು ಅಲ್ಲಿ ಎಂತಸ ತೆಗೆದುಕೊಳ್ಳುವುದಿಲ್ಲ, ಮತ್ತೆ ಸುಮ್ಮನೆ ಯಾಕೆ ಮರ್ರೆ ಆ ಮಾರ್ಕೆಟ್ ಆಗಿಯೇ ಹೋಗುವುದು ಡೈಲಿ..ನಿಂಗೆ ಮರ್ಲನಾ.. ".ನನಗೆ ಈ ವಿಜ್ಞಾನ ಪಠ್ಯ ಪುಸ್ತಕದ ಚಿತ್ರಗಳಿಗಿಂತಲೂ ಅತ್ಯಾಕರ್ಷಕ  ಎನಿಸುತ್ತಿದ್ದದ್ದು ಆ ಜೀವಂತ ಮೂಡುಬಿದಿರೆಯ ಹಳೆಯ ಮಾರ್ಕೆಟೇ. 


ಮನೆಗೆ ಹೆಚ್ಚಾಗಿ ಬಂಗುಡೆ ಬೂತಾಯಿ ಮೀನುಗಳೇ ತರುತ್ತಿದ್ದದ್ದು. ಹಾಗಾಗಿ ನನಗೆ ಫಿಶ್ ಮಾರ್ಕೆಟ್ ನಲ್ಲಿರುವ ಉದ್ದ ಸೈಜಿನ ಅಂಜಲ್(King fish), ಬೆಳ್ಳಿ ಬಣ್ಣದ ಮಾಂಜಿ(Pomfret) , ಹಾರುವ ತಟ್ಟೆಯಂತಹ ಉದ್ದ ಬಾಲದ ತೊರಕೆ ಮೀನು(Stingray) ಗಳನ್ನು ನೋಡುವುದೇ ಒಂದು ತರಹದ ಆನಂದ ಹಾಗೂ ಕೌತುಕ. ಹೆಚ್ಚಾಗಿ ಅವುಗಳು ದುಬಾರಿ ಬೆಲೆಯ ಮೀನುಗಳು.. ಹಾಗಾಗಿ ಮನೆ ಬಾಗಿಲಿಗೆ ಬರುತ್ತಿದ್ದದ್ದು ಬಲು ಅಪರೂಪವೇ.. ಹೇಗೆ ಹೋಟೆಲ್ ಗೆ ಹೋದರೆ ಇಡ್ಲಿ ವಡೆ ಸಾಮಾನ್ಯ ತಿಂಡಿಯೋ  ಹಾಗೇ ತುಳುನಾಡಿನಲ್ಲಿ ಬಂಗುಡೆ ಬೂತಾಯಿಗೆ ಹೆಚ್ಚಿನವರ ಮೊದಲ ಪ್ರಾಶಸ್ತ್ಯ .


ನಮ್ಮವರು ಎಲ್ಲಾ ಫಿಶ್ ಗಳನ್ನು ನೋಡಿ ಕೊನೆಗೆ ಖರೀದಿಸುವುದು ಈ ಬಂಗುಡೆ ಮತ್ತು ಬೂತಾಯಿಯನ್ನೇ. ಆದರೂ ಬೇರೆ ಮೀನುಗಳು ಎಷ್ಟೇ ದುಬಾರಿ ಇದ್ದರೂ ಈ ಬಂಗುಡೆ ಬೂತಾಯಿಯೂ ಕೂಡ  ರುಚಿಯಲ್ಲಿ ಯಾವುದರಲ್ಲಿಯೂ ಕಡಿಮೆ ಇಲ್ಲ ಆಯ್ತ.ಹಾಗಂತ ಬೇರೆ ಮೀನುಗಳು ರುಚಿ ಇಲ್ಲ ಎಂದು ಹೇಳಲೂ ಕೂಡ ಬರುವುದಿಲ್ಲ.. ಒಂದೊಂದು ಮೀನಿನದ್ದು ಒಂದೊಂದು ರುಚಿ.. ಒಂದೊಂದು ಘಮ. ಮರುವಾಯಿಯದ್ದೇ(Clam)ಬೇರೆ.. ಏಡಿಯದ್ದೇ(Crab) ಬೇರೆ,ಎಟ್ಟಿ(Prawns),ಕಾಣೆ(Lady Fish)ಹಾಗೂ ಬೊಂಡಾಸ್(Squid)ನ ಪರಿಮಳ ಹಾಗೂ ಆ ರುಚಿಯೇ ಬೇರೆ. ಕೆಲವರಿಗೆ ಕೆಲವೊಂದು ಇಷ್ಟ.ಒಟ್ಟಿನಲ್ಲಿ ಬಂಗುಡೆ ಬೂತಾಯಿ ಎವರೇಜ್ ಆಗಿ ಎಲ್ಲರಿಗೂ ಇಷ್ಟ. ಬೂತಾಯಿ ಮತ್ತು ಭೂಮಿತಾಯಿ ತುಳುನಾಡಿನ ಮತ್ಸ್ಯಾಹಾರಿಗಳ ಇನ್ನಿಬ್ಬರು ತಾಯಂದಿರು ಎಂದೇ ಹೇಳಬಹುದು. 


ಒಟ್ಟಿನಲ್ಲಿ ಫಿಶ್ ಮಾರ್ಕೆಟ್ ಸುತ್ತುವುದು ಅಂದರೆ ಅದೆನೋ ಸಂಭ್ರಮ ನನಗೆ. ಈಗಲೂ ಮಂಗಳೂರಿನಲ್ಲಿ ಸ್ಟೇಟ್ ಬ್ಯಾಂಕ್ ಬಸ್ ಸ್ಟ್ಯಾಂಡ್ ಗೆ ಹೋದರೆ.. ಅಲ್ಲಿರುವ ಫಿಶ್ ಮಾರ್ಕೆಟ್ ನಲ್ಲಿ ಒಂದು ಬಾರಿ ಸುತ್ತಿ.." ಬಲ ಬಾಲೆ..ಎಡ್ಡೆ ಮೀನ್ ಉಂಡು (ಬಾ ಮಗು.. ಒಳ್ಳೆಯ ಮೀನಿದೆ) ಎಂಬ ಸವಿ ನುಡಿ ಕಿವಿಗೆ ಬೀಳದಿದ್ದರೆ ನನಗೆ ಸಮಾಧಾನವಿಲ್ಲ. ಅಷ್ಟು ಏಕೆ ಮನೆ ಸಮೀಪ.. ಸೈಕಲ್ ನಲ್ಲಿ ಇಲ್ಲವೇ ಸ್ಕೂಟರ್ ನಲ್ಲಿ ಮೀನು ಮಾರುವವರು ಪಾಂಗ್ ಪಾಂಗ್.. ಎಂದು ಹಾರನ್ ಹೊಡೆದು ಕೊಂಡು ಬರುವಾಗಲೂ ಮನೆಗೆ ಮೀನು ತೆಗೆದುಕೊಳ್ಳಲು ಇರದಿದ್ದರೂ ಸುಮ್ಮನೆ ಹೋಗಿ ಯಾವ ಯಾವ ಮೀನ್ ಇದೆ.. ಎಷ್ಟು ಫ್ರೆಶ್ ಇದೆ ಎಂದು ನೋಡುವ ಹುಮ್ಮಸ್ಸು ನನ್ನಲ್ಲಿ ಯಾವತ್ತೂ ಕಮ್ಮಿ ಆಗಿಯೇ ಇಲ್ಲ.


ಫಿಶ್ ಮಾರ್ಕೆಟ್ ಜೊತೆ ಜೊತೆಗೆ ನಾನು ತರಕಾರಿ ಮಾರ್ಕೆಟ್ ಗೆ ಕೂಡ ಯಾಕೆ ಹೋಗುತ್ತಿದ್ದೆ ಎಂದರೆ.. ನನಗೆ ಅಲ್ಲಿನ ತಾಜಾ ವಾತಾವರಣವೇ ಅತೀ ಇಷ್ಟ ವಾಗುತ್ತಿತ್ತು, ಆ ಸೊಪ್ಪು ತರಕಾರಿಗಳ ಪರಿಮಳ, ತರಕಾರಿಗಳ ತಾಜಾತನ ಎಲ್ಲಕ್ಕಿಂತ ಹೆಚ್ಚಾಗಿ ಅವರುಗಳು ಈ ತರಕಾರಿಗಳನ್ನು ಒಪ್ಪವಾಗಿ ಪೇರಿಸಿ ಇಡುತ್ತಾರೆ ಅಲ್ಲವಾ ಅದು ನೋಡುವುದೇ ಕಣ್ಣಿಗೆ ಒಂಥರಾ ಹಬ್ಬ. ಯೆಸ್ ನನಗದು ಟ್ರೀಟ್ ಫಾರ್ ಐಸ್.ಈಗಲೂ ಕೂಡ. 


ಮೂಡುಬಿದಿರೆಯ ಸಂತೆ ಶುಕ್ರವಾರ ಆಗುವುದು. ಆವಾಗ ಮೂಡುಬಿದಿರೆಯ ಹೆಚ್ಚಿನ ಕ್ರೌಡ್ ಇರುವುದೇ ಈ  ಮಾರ್ಕೆಟ್ ನ ಒಳಗೆ. ಅಪ್ಪ ಮನೆಗೆ ಶುಕ್ರವಾರದ ಸಂತೆಯ ದಿನ ಮಾರ್ಕೆಟ್ ನಿಂದ ನಾಲ್ಕು ಪೀಸ್ ಕಬ್ಬುಗಳನ್ನು ಹೆಚ್ಚಾಗಿ ತರುತ್ತಿದ್ದರು. ಆದರೆ ಸಂತೆಯ ದಿನ ಅಮ್ಮನೊಟ್ಟಿಗೆ ಮಾರ್ಕೆಟ್ ಗೆ ಹೋದರೆ ಅದರ ಖುಷಿಯೇ ಬೇರೆ. ನನಗೂ ಅಮ್ಮನಿಗೂ ಮಾರ್ಕೆಟ್ ಸುತ್ತುವುದು ಎಂದರೆ ಬಾರೀ ಇಷ್ಟ. ಅಪ್ಪ ಹಾಗಲ್ಲ..ಅವರಿಗೆ ಯಾವಾಗಲೂ ಒಂದು ಅಮಸರವೇ(ಅವಸರ).ಇಂದಿಗೂ ಅದು ಮುಗಿದೇ ಇಲ್ಲ. ಪಿರಿ ಪಿರಿ ಮಾಡುತ್ತಲೇ ಇರುತ್ತಾರೆ, ಎಲ್ಲಿಗಾದರೂ ಹೋಗಿ ಮುಟ್ಟಿದ ಕೂಡಲೇ ಹೋಗುವ ಹೋಗುವ ಎಂದು. ಬಿಟ್ಟರೆ ಥಕ್ಕ ಥೈ ಕಥಕ್ಕಳಿ ಎಲ್ಲಾ ಮಾಡುವರೋ ಏನೋ ಆ ರೀತಿಯ ಒಂದು ರಪ್ಪನೆ ನಿಲ್ಲದ ಅತ್ತಿಂದಿತ್ತ ಇತ್ತಿಂದತ್ತ ಸಾಗುವ ವಿಚಿತ್ರ ಕುಣಿತವೇ ಅವರದ್ದು. 


ಅಮ್ಮ ಹಾಗಲ್ಲ. ಅವಳು ಮಾರುಕಟ್ಟೆಯ ಮೂಲೆ ಮೂಲೆಗೂ ಹೋಗುತ್ತಿದ್ದಳು. ಅವಳೊಂದಿಗೆ ಅವಳ ಕೈ ಹಿಡಿದುಕೊಂಡು ನಾನು ಕೂಡ ಹೋಗುತ್ತಿದ್ದೆ. ಅವಳಿಗೆ ಮಾರ್ಕೆಟ್ ನಲ್ಲಿ ಅತಿಯಾಗಿ ಆಸಕ್ತಿ ಇದ್ದದ್ದೇ ಎರಡರಲ್ಲಿ.ಒಂದು ಬಿಸಲೆ(ಮಣ್ಣಿನ ಪಾತ್ರೆ) ಮತ್ತೊಂದು ಒಣ ಮೀನು. 


ಪ್ರತೀ ಸಲ ಹೋದಾಗಲು ಕೊಳ್ಳಲು ಇರದಿದ್ದರೂ ತರಕಾರಿ ಮಾರ್ಕೆಟ್ ನಲ್ಲಿರುವ ಮಣ್ಣಿನ ಪಾತ್ರೆಗಳ ಅಂಗಡಿಗೆ ಹೋಗಿ, ಒಂದೊಂದೇ ಬಿಸಲೆ ಯನ್ನು ಕೈಗೆತ್ತಿಕೊಂಡು ಅದನ್ನೇ ಶ್ರದ್ಧೆಯಿಂದ ಅದರ ಅಂಚು ಅಂಚುಗಳನ್ನು ದಿಟ್ಟಿಸಿ ನೋಡಿ .. " ಉಂದು ಬಿಸಲೆ ಪೊರ್ಲೇ ಇಜ್ಜಿ.. ಕಾರ್ಲ ದ ಬಿಸಲೆ ಆಂಡ ಏತ್  ಶೋಕು ಇಪ್ಪುಂಡು.."(ಈ ಮಣ್ಣಿನ ಪಾತ್ರೆ ಅಷ್ಟೇನೂ ಚೆನ್ನಾಗಿಲ್ಲ, ಕಾರ್ಕಳ ಸಂತೆಯಲ್ಲಿ ಸಿಗುವ ಮಣ್ಣಿನ ಪಾತ್ರೆ ಇದಕ್ಕಿಂತ ಚಂದ ಇರ್ತದೆ) ಅಂತ ಮಣ ಮಣ ಮಾಡುತ್ತಿದ್ದಳು. 


ಅಮ್ಮ ಫಿಶ್ ಮಾರ್ಕೆಟ್ ಗೆ ಒಮ್ಮೆ ಹೋಗುವ ಅಮ್ಮ... ಅಂತ ಅವಳನ್ನು ನಾನೇ ಆ ಸೈಡಿಗೆ ಎಳೆದುಕೊಂಡು ಹೋಗಬೇಕು ಮತ್ತೆ. ಫಿಶ್ ಮಾರ್ಕೆಟ್ ನಲ್ಲಿ ತೆಗೆದುಕೊಳ್ಳುತ್ತಿದ್ದದ್ದು ಅದೇ ಬಂಗುಡೆ ಇಲ್ಲವೇ ಬೂತಾಯಿ. ಅವಳಿಗೆ ಅದರಲ್ಲಿ ಅಂತು  ಆಸಕ್ತಿಯೇ ಇಲ್ಲ. ನಮಗಾಗಿ ತೆಗೆದುಕೊಳ್ಳುತ್ತಿದ್ದಳು ಅಷ್ಟೇ. ಅವಳ ಆಸಕ್ತಿಯನ್ನು ಸೂಚಿಗಲ್ಲಿನಂತೆ ಸೆಳೆಯುತ್ತಿದ್ದದ್ದು ಫಿಶ್ ಮಾರ್ಕೆಟ್ ನೊಳಗಿರುವ ಆ ಒಣಮೀನಿನ ಮಾರ್ಕೆಟ್ಟೇ.. 


ಅಲ್ಲಿರುವ ಮೀನು ಮಾರುವ ತಾಯಂದಿರೆಲ್ಲ ಅವಳಿಗೆ ಬಲು ಪರಿಚಯ. ಅವರ ಬಳಿ ಎಷ್ಟೋ ಹೊತ್ತು ಞಕ್ಕ್ ಞೈ (ಏನೋ ಅವರದ್ದೊಂದು ರಪ್ಪನೆ ಮುಗಿಯದ  ಕಷ್ಟ ಸುಖಗಳು) ಮಾತಾಡುತ್ತಾಳೆ.ಅವಳು ಮಾತಿಗೆ ನಿಂತರೆ ಇಡೀ ದಿನ ಮಾತಾಡ್ತಾನೆ ಇರ್ತಾಳೆ. ಆ ನಗು ಅದರೊಟ್ಟಿಗೆ ಆ ಮುಗಿಯದ ಮಾತು ಎರಡೂ ಅವಳಲ್ಲಿ ಎಂದಿಗೂ ಖಾಲಿಯಾಗುವುದೇ ಇಲ್ಲ. ಕೆಲವೊಮ್ಮೆ ಮನೆಯಿಂದ ಬಸಳೆ ಕಟ್ಟು ತಂದಿದ್ದರೆ ಒಣ ಮೀನು ಮಾರುವವರಿಗೆ ಕೊಡುತ್ತಾಳೆ. ಅವರಿಗೆಲ್ಲ ಊರಿನ  ಬಸಳೆ ಎಂದರೆ ಬಹಳ ಇಷ್ಟ. ನಂತರ ಅಮ್ಮ ಏಳೆಂಟು ಬೇರೆ ಬೇರೆ ಬಗೆಯ ಒಣ ಮೀನುಗಳನ್ನು ಖರೀದಿಸುತ್ತಾಳೆ.ಆ ನಂತರವೇ ಅವಳು ಅಲ್ಲಿಂದ ಹೊರಡುವುದು. 


ಗೇರು ಬೀಜ ಮಾರಿ ಬಂದ ಹಣ, ಇಲ್ಲವೇ ಬೀಡಿ ಕಟ್ಟಿ ಉಳಿಸಿದ ಹಣ ಹಿಡಿದುಕೊಂಡೇ ಅಮ್ಮ ಶುಕ್ರವಾರದ ಮೂಡುಬಿದಿರೆಯ ಸಂತೆಗೆ ಹೋಗುವುದು. ಅಪ್ಪನ ಜೊತೆ ಕೆಲವೊಮ್ಮೆ ಹೋದರೆ ಅವರು  ಮಾರ್ಕೆಟ್ ನ ಎದುರಲ್ಲೇ ಇದ್ದ ಲಕ್ಷೀ ಹೋಟೆಲ್ ಗೆ ಕರೆದುಕೊಂಡು ಹೋಗಿ ಪೂರಿ ಬಾಜಿ ಕೊಡಿಸುತ್ತಿದ್ದರು. ಅವರಿಗೆ ಆ  ಒಂದು ಪೂರಿ ಬಾಜಿ ಯಾಕೆ ಇಷ್ಟವೋ.. ಅವರಿಗೆ ಇಷ್ಟ ಎಂದು ನಮಗೂ ಅದನ್ನೇ ತೆಗಿಸಿ ಕೊಡ್ತಾರೆ.


ಖಾಲಿ ಅಷ್ಟೇ ಅಲ್ಲ. ನಮಗೆ ಆದರೆ ಪೂರಿ ಬಾಜಿ.. ಅವರಿಗೆ ಪೂರಿಗೆ ಬಾಜಿಯ ಜೋಡಿ ಇಷ್ಟವೇ ಆಗುವುದಿಲ್ಲ. ಅವರ ಫೇವರೆಟ್ ಮೆನು ಶೀರಾ ಪೂರಿ. ನನಗೆ ಈ ಶೀರಾ ಆದರೂ ಇಷ್ಟ. ಆದರೆ ಶೀರಾ ಜೊತೆಗೆ ಈ ಪೂರಿ ಯಾಕೆ.. ಅನ್ನುವುದೇ ನನ್ನ ಮಿಲಿಯನ್ ಡಾಲರ್ ಪ್ರಶ್ನೆ. ಈ ಅಪ್ಪ ಇದೆರಡನ್ನು ಯಾಕೆ ಮರ್ರೆ ಜೋಡಿಗಳನ್ನಾಗಿ ಮಾಡಿದ್ದಾರೆ ಎಂದು ಅನ್ನಿಸುತ್ತಿತ್ತು. ಅಪ್ಪನ ಬಳಿ ಕೇಳಿದರೆ.. ಅಪ್ಪ..ಹೀಗೆ ಎಲ್ಲ ಕಾಂಬಿನೇಶನ್ ನಲ್ಲಿ ಯಾರಾದರೂ ಪೂರಿ ತಿಂತಾರಾ ಅಂತ ಬಾಯಿ ತೆರೆದು ಕೇಳಿದರೆ... ಎಡ್ಡೆ ಪಂಡ, ನೆತ್ತ ಟೇಸ್ಟ್ ಗೊತ್ತಿತ್ತಿನಕ್ಲೆಗ್ ಮಾತ್ರ ಗೊತ್ತು (ಒಳ್ಳೆ ಹೇಳಿದ್ದಿ.. ಇದರ ಟೇಸ್ಟ್ ಹಾಗೆ ಎಲ್ಲರಿಗೆ ಗೊತ್ತಾಗ್ಲಿಕ್ಕೆ ಚಾನ್ಸೇ ಇಲ್ಲ) ಅಂತ ಅವರು ಶ್ರದ್ಧೆಯಿಂದ  ಶೀರಾ ಪೂರಿ ತಿಂದು ಮುಗಿಸುತ್ತಿದ್ದರೆ ನಾನು ಪೂರಿಬಾಜಿ ತಿಂದು ನನ್ನಿಷ್ಟದ ಮಸಾಲೆ ದೋಸೆ ಕೊಡಿಸಿ ಅಪ್ಪ ಎಂದು ದುಂಬಾಲು ಬೀಳುತ್ತಿದ್ದೆ.ಅಪ್ಪ ಕೇಳಿದ್ದಕ್ಕೆ ಇಲ್ಲ ಅನ್ನದೇ ಮಸಾಲೆ ದೋಸೆ ಕೂಡ ನನಗೆ ಕೊಡಿಸುತ್ತಿದ್ದರು. ಶೀರಾ ಪೂರಿ ತಿನ್ನುವುದಿಲ್ವಾನ.. ಅಂತ ಕೇಳಿದರೆ, ಅಯ್ಯೋ ಬೇಡ ಅಪ್ಪಾ... ನೀವೇ ತಿನ್ನಿ.. ಅಂತ ಹೇಳಿ ಮಡಚಿದ ಮಸಾಲೆ ದೋಸೆಯನ್ನು  ಬಿಡಿಸುವತ್ತ ಗಮನ ಹರಿಸುತ್ತಿದ್ದೆ. 


ಅಮ್ಮನ ಜೊತೆ ಹೋದರೆ ಹಾಗಲ್ಲ.ಅವಳು ಒಂದು ರೂಪಾಯಿ ಕೂಡ ಖರ್ಚು ಮಾಡಲು ಸಾವಿರ ಬಾರಿ ಆದರೂ ಯೋಚನೆ ಮಾಡಿಯೇ ಮಾಡುತ್ತಾಳೆ.ಭಯಂಕರ ಜಾಣೆ.ಆದರೂ ನನಗೆ ಅವಳೊಂದಿಗೆ ಮಾರ್ಕೆಟ್ ಗೆ ಹೋಗಲು ಇಷ್ಟ. ಕಾರಣ ಅವಳು ಚಂದವಾಗಿ ಮಾರ್ಕೆಟ್ ಸುತ್ತಿಸುತ್ತಾಳೆ ಮಾತ್ರವಲ್ಲ ಕೊನೆಗೊಂದು ತರಕಾರಿ ಮಾರ್ಕೆಟ್ ನಲ್ಲಿ ತಣ್ಣನೆಯ ಕಬ್ಬಿನ ಜ್ಯೂಸ್ ಕೊಡಿಸುತ್ತಾಳೆ. ಆ ಸ್ಟೀಲ್ ಲೋಟದಲ್ಲಿ ಜ್ಯೂಸ್ ನ ತಂಪನ್ನು ಫೀಲ್ ಮಾಡಿಕೊಂಡು.. ಲೋಟ್ ವನ್ನು ಎರಡೂ ಕೈಯಲ್ಲಿ ಹಿಡಿದುಕೊಂಡು ಹಾಗೇ ಜ್ಯೂಸ್ ಕುಡಿದು.. ತುಟಿ ಮೇಲೊಂದು ಕಬ್ಬಿನ ಹಾಲಿನ ಮೀಸೆ ಮೂಡಿಸಿ.. ಅಮ್ಮ... ಇನ್ನೊಂದು ಬೇಕು.. ಎಂದು ಅವಳಿಗೆ ಬೇಡಿಕೆ ಇಡುವುದನ್ನು ನಾನು ಯಾವತ್ತೂ ನಿಲ್ಲಿಸಿಯೇ ಇರಲಿಲ್ಲ.ಅವಳಿಗೆ ಮಾತ್ರ ಕಬ್ಬಿನ ಜ್ಯೂಸ್ ಕೂಡ ಬೇಡ, ಹೋಟೆಲ್ ನ ಟೀ, ಕಾಫಿ ಕೂಡ ಯಾವುದೂ ಬೇಡ. ಅವಳ ಧ್ಯಾನ ವೆಲ್ಲ ತೊಟ್ಟೆಯಲ್ಲಿರುವ ಒಣ ಮೀನಿನ ಮೇಲೆಯೇ. 


ಮನೆಗೆ ಹೋದ ಮೇಲೆ ಒಣ ಮೀನನ್ನು ಮತ್ತೊಮ್ಮೆ ಅಂಗಳದಲ್ಲಿ ಹಾಕಿ ಚೆನ್ನಾಗಿ ಒಣಗಿಸಿ ನಂತರ ಡಬ್ಬಿಯಲ್ಲಿ ಸಪರೇಟ್ ಸಪರೇಟ್ ಆಗಿ ತುಂಬಿ ಇಡುತ್ತಿದ್ದಳು. ಅವಳ ಪಾಲಿನ ಮುತ್ತು ರತ್ನಗಳು ಅದೇ. 


ನಿಜವಾಗಿಯೂ ಒಣ ಮೀನು ತುಳುನಾಡಿನಲ್ಲಿ ವಿಶೇಷವಾದ ಸ್ಥಾನ ಪಡೆದಿದೆ ಅನ್ನುವುದು ಸುಳ್ಳಲ್ಲ. ಮಂಗಳೂರು ಮೀನು ಅಂತ ಆಸೆ ಪಟ್ಟು ಅದನ್ನು ಸವಿಯಲು ಇಲ್ಲಿಗೆ ಬರುವ ಹೊರಗಿನ ಹಲವಾರು ಸ್ನೇಹಿತರನ್ನು ನೋಡಿದ್ದೇನೆ, ಆದರೆ ಒಮ್ಮೆ  ಮಂಗಳೂರಿಗರಿಗೆ  ಅದರಲ್ಲೂ ಹಿರಿಯರಿಗೆ ಕೇಳಿ ನೋಡಿ ಅಂತೆ... ನಮ್ಮಲ್ಲಿ ಹಸಿ ಮೀನಿಗಿಂತಲೂ ಒಣ ಮೀನಿಗಿರುವ ರಾಜ ಮರ್ಯಾದೆಯೇ ಬೇರೆ. ಹೆಚ್ಚಿನವರಿಗೆ ಅದೇ ಇಷ್ಟ. 


ನಿಜವಾಗಿಯೂ ಅದರದ್ದೊಂದು ಪದಾರ್ಥದ ಪರಿಮಳ ಉಂಟಲ್ಲಾ.. ಹಾಗೇ ಎರಡೆರಡು ಸಲ ಕಜೆ ಅಕ್ಕಿಯಲ್ಲಿ ಊಟ ಮಾಡಿ ಎದ್ದೇಳಬಹುದು. ಪೊಡಿ ಎಟ್ಟಿಯ (ಒಣ ಸಿಗಡಿ) ಚಟ್ನಿ ಗಂಜಿಯ ಬಹಳ ಒಳ್ಳೆಯ ಮಿತ್ರ, ಕಡ್ಲೆಗೆ ಬಲ್ಯಾರ್ ಜೋಡಿ ಆಗದಿದ್ದರೆ ಮತ್ಸ್ಯಾಹಾರಿಗಳ ಮನೆಯಲ್ಲಿ ಕಡಲೆಗೆ ಕೆಲವೊಮ್ಮೆ ಬೆಲೆಯೇ ಇಲ್ಲ.ತೆಂಗಿನ ಎಣ್ಣೆಯಲ್ಲಿ ಹಾಗೇ ಕಾಯಿಸಿ ತಿನ್ನಬಹುದಾದ ನಂಗ್, ಬಲ್ಯಾರ್ ಗಳ ರುಚಿಯೇ ಬೇರೆ. ಅಷ್ಟೇ ಏಕೆ ಹಿಂದೆ ಕಲಿ ಗಡಂಗ್(ಶೇಂದಿ  ಅಂಗಡಿ) ನಲ್ಲಿ ಈ ಕುರ್ಚಿ ಮೀನನ್ನು, ನಂಗ್ ಮೀನನ್ನು ಬೆಂಕಿಯಲ್ಲಿ ಹಾಗೇ ಸುಟ್ಟು ತಿನ್ನಲು ಕೊಡುತ್ತಿದ್ದರಂತೆ. ಅದನ್ನು ಕಚ್ಚಿಕೊಂಡು ತಿಂದು ಕುಜಿಲಿ(ಮಣ್ಣಿನ ಪಾತ್ರೆ) ಪೂರ್ತಿ ಕಲಿ (ಶೇಂದಿ) ಕುಡಿದವರು ಎಷ್ಟೋ ಜನ....ಅವರು ಅಂದಕಾಲತ್ತಿಲ್ ಕಥೆಗಳನ್ನು ಹೇಳುವಾಗ ಕೂಡ ಬಾಯಿ ಚಪ್ಪರಿಸಿಕೊಂಡೇ ಹೇಳುತ್ತಾರೆ. 


ಈ ಹಸಿ ಮೀನು ಇಲ್ಲವೇ ಒಣ ಮೀನು ತಿನ್ನದವರು... ಯೆಬೆ ಮೀನು ಎಂದರೆ ಬರೀ ವಾಸನೆ..ಎಂದು ಮೂಗು ಮುರಿಯುತ್ತಾರೆ.ಆದರೆ ಊರಿನ ಮೀನು ಪ್ರೀಯರಿಗೆ ಮೀನುಗಳೆಲ್ಲವೂ ತವಾ ಪ್ರೈ ಇಲ್ಲವೇ ಪುಳಿ ಮುಂಚಿ ಆಗುವುದಕ್ಕಿಂತ ಮೊದಲೂ ಕೂಡ ಈ ಮೀನುಗಳೆಲ್ಲವೂ  ಪರ್ಫ್ಯೂಮ್ ಗಿಂತ ಅಧಿಕ ಪರಿಮಳವೇ. ಮೀನು ಅಂದರೆ ಕರಾವಳಿಗರಿಗೆ ಅಷ್ಟೊಂದು ಪ್ರೀತಿ. ಚಿಕನ್, ಮಟನ್ ಗಳಿಗೆ ಆ ನಂತರದ ಸ್ಥಾನ.


ಒಂದು ಮಾತಿದೆ.. ಮಂಗಳೂರಿಗರು ಕೇವಲ ಮೀನಿಗೆ ಖರ್ಚು ಮಾಡುವ ಹಣದಿಂದಲೇ ಎಷ್ಟೋ ಪವನ್ ಚಿನ್ನ ಮಾಡಿಸಿ  ಕೊಳ್ಳಬಹುದು ಎಂದು.ಆದರೂ ನಮ್ಮವರು ಚಿನ್ನ ಮಾಡಿಸಿಕೊಳ್ಳದಿದ್ದರೂ ಮೀನು ತಿನ್ನುವುದಕ್ಕೆ ಒಂದು ಚೂರು ಕಡಿಮೆ ಎಂದಿಗೂ ಮಾಡಿಕೊಳ್ಳುವುದಿಲ್ಲ.ಎಷ್ಟೇ ಬಡತನ ಇದ್ದರೂ.ವಾರದ ಹೆಚ್ಚಿನ ದಿನವೂ ಕೆಲವರ  ಮನೆಯಲ್ಲಿ ಅಂತು ಬರೀ ಮೀನೇ. ಅವರು ಅಪರೂಪಕ್ಕೆ ಸಭೆ ಸಮಾರಂಭಗಳಿಗೆ ಹೋದಾಗ ವೆಜ್ ಊಟ ಮಾಡುವುದು ಎಂದರೆ ನೀವು ನಂಬಲೇ ಬೇಕು. ಅಂತಹ ಹಲವು ಗೆಳೆಯರನ್ನು ನೋಡಿದ್ದೇನೆ ಕೂಡ. ಏನೂ ಇರದಿದ್ದರೂ ಕನಿಷ್ಟ ಪಕ್ಷ ಊಟ ಮಾಡುವಾಗ ಯಾವುದಾದರೊಂದು ಫಿಶ್ ಫ್ರೈ ಆದರೂ ಕಡ್ಡಾಯವಾಗಿ ಇರಲೇಬೇಕು ಅವರಿಗೆ. 


ಇತ್ತೀಚೆಗೆ ಕೆಲವು ವರ್ಷಗಳ ಹಿಂದೆ ನನ್ನ ಹಲವು ಬಾಲ್ಯದ ನೆನಪುಗಳನ್ನು ಹೊತ್ತುಕೊಂಡ ಮೂಡುಬಿದಿರೆ ಹಳೆಯ ಮಾರ್ಕೆಟ್ ಅನ್ನು ಹೊಸ ಮಾರ್ಕೆಟ್ ಸಮುಚ್ಛಯ ಮಾಡುವುದಕ್ಕಾಗಿ  ಕೆಡವಲಾಯಿತು. ಅದರ ಎದುರಿಗೆ ನಿಂತುಕೊಂಡಾಗ ಎಷ್ಟೊ ಹಳೆಯ ನೆನಪುಗಳು ಹಾಗೇ ನೋವಿನ ವಿಧಾಯ ಹೇಳಿ ಸೈಲೆಂಟ್ ಆಗಿ ಅಲ್ಲಿಂದ ಎದ್ದು ನಡೆದಿದ್ದವು. 


ಆ ನಂತರ ಮಾರ್ಕೆಟ್ ಶಿಫ್ಟ್ ಆಗಿದ್ದು ಮೂಡುಬಿದಿರೆಯ ಸ್ವರಾಜ್ಯ ಮೈದಾನದ ಬಳಿ. ಇಟ್ಟಿಗೆಗಳನ್ನು ಕಟ್ಟಿ ಗೋಡೆಗಳನ್ನು ಎಬ್ಬಿಸಿ, ತಾತ್ಕಾಲಿಕ ಮಾರ್ಕೆಟ್ ಮಾಡಿಯೇ ಬಿಟ್ಟರು. ಹಳೆಯ ಮಾರ್ಕೆಟ್ ನ ಎಲ್ಲಾ ತರಕಾರಿ ಮಾರುವವರು, ಮೀನು ಮಾರುವವರು ಮತ್ತು ಸಣ್ಣಪುಟ್ಟ ವ್ಯಾಪಾರಿಗಳು ಕೂಡ ಅಲ್ಲಿಗೆ ಶಿಫ್ಟ್ ಆದರು.ಅದು ದೂಳು ತುಂಬಿದ ಗ್ರೌಂಡಿನ ನಡುವೆ ಎಷ್ಟೇ ಗಟ್ಟಿಯಾಗಿ ಇಲ್ಲವೇ ತಾತ್ಕಾಲಿಕವಾಗಿ ಎದ್ದು ನಿಂತರೂ ಕೂಡ  ಹಳೆಯ ಮಾರ್ಕೆಟ್ ನ ಫೀಲ್ ಎಂದಿಗೂ ಬರಲು ಸಾಧ್ಯವೇ ಇಲ್ಲ. 


ಅದು ಬೇರೆ ಬಸ್ ಸ್ಟ್ಯಾಂಡ್ ನಿಂದ ತುಂಬಾ ದೂರ. ಹೆಚ್ಚಿನವರಿಗೆ ಅಲ್ಲಿಗೆ ನಡೆದುಕೊಂಡು ಹೋಗಲು ಕಷ್ಟವೇ. ಹಾಗಾಗಿ ನಮ್ಮ ಮನೆಗೂ ಈ ಮೀನು, ತರಕಾರಿ ಹಾಗೂ ಒಣಮೀನು ತರುವ ಗುರುತರ ಜವಾಬ್ದಾರಿ ನನ್ನ ಮೇಲೆ ಬಿತ್ತು. ನನಗಂತು ಇದು ಭಯಂಕರ ಇಷ್ಟದ ಕೆಲಸವೇ.ಹಳೆಯ ಮಾರ್ಕೆಟ್ ಇದ್ದಾಗಲೂ ಅಮ್ಮ ಒಮ್ಮೊಮ್ಮೆ ಹಣ ಕೊಟ್ಟು ಕಳುಹಿಸುತ್ತಿದ್ದಳು... ಆವಾಗ ಖುಷಿಯಿಂದ ಪೇಟೆ ಇಡೀ ತಿರುಗಿ ಅಮ್ಮ ಹೇಳಿದ್ದು ತೆಗೆದುಕೊಂಡು ಬರುತ್ತಿದ್ದೆ. 


ಈ ಹೊಸ ಮಾರ್ಕೆಟ್ ಆದ ನಂತರ ನಿರಂತರವಾಗಿ ಹೋಗಿ ಹೋಗಿ ನನಗೆ ಪರಿಚಯ ಆದವರೇ ಈ ಸುನಂದಕ್ಕ. ಹಳೆಯ ಮಾರ್ಕೆಟ್ ನಲ್ಲಿ ಕೂಡ ಇದ್ದರು. ಆಗ ಅಮ್ಮನೇ ಜಾಸ್ತಿಯಾಗಿ ಮೀನು ತೆಗೆದುಕೊಳ್ಳಲು ಹೋಗುತ್ತಿದ್ದುದರಿಂದ ನನಗೆ ಅವರನ್ನು ಕೇವಲ ನೋಡಿದ ಅಸ್ಪಷ್ಟ ನೆನಪು ಅಷ್ಟೇ ಇತ್ತು. 


ಸುನಂದಕ್ಕ ಮೀನು ಮಾರ್ತಾರೆ. ಆದರೆ ಹಸಿ ಮೀನಲ್ಲ. ಒಣ ಮೀನು. 


ನನಗೂ ಒಣ ಮೀನು ಬಹಳ ಇಷ್ಟ. ಹಾಗಾಗಿ ಅಮ್ಮನಂತೆಯೇ.. ತರಕಾರಿ ಹಾಗೂ ಫಿಶ್ ಮಾರ್ಕೆಟ್ ಗೆ ಹೋಗಿ, ಏನಾದರೂ ತೆಗೆದುಕೊಳ್ಳಲು ಇದ್ದರೆ ತೆಗೆದುಕೊಂಡು ಕೊನೆಗೊಮ್ಮೆ ಒಣ ಮೀನು ಮಾರುವ ಸುನಂದಕ್ಕನ ಬಳಿ ಹೋಗದಿದ್ದರೆ ನನಗೆ ಸಮಾಧಾನವಿಲ್ಲ. 


ಅವರು ಹೋದ ಕೂಡಲೇ ಹೇಳುತ್ತಾರೆ "ಅಂದದೆ ಬಾಲೆ..ಏತ್ ಸಮಯ ಆಂಡ್ ದೆ ನಿನನ್ ತೂವಂದೆ,ಎಡ್ಡೆ ಮೀನ್ ಉಂಡು ಪತೊಂದು ಪೋಲದೆ ಬಾಲೆ.." (ಎಷ್ಟು ಸಮಯ ಆಯಿತು ನೀನು ಬರದೆ ಮಗು, ಒಳ್ಳೆಯ ಮೀನು ಉಂಟು ತಗೊಂಡು ಹೋಗು).  ಹಿಂದಿನ ವಾರವೇ ಅವರಲ್ಲಿಗೆ ಹೋಗಿದ್ದರು ಕೂಡ ಅವರು ಹೇಳುವುದು ಹೀಗೆಯೇ. 


ಅವರ ಬಳಿ ಏಳೆಂಟು ಬಗೆಯ ಒಣ  ಮೀನುಗಳಾದರೂ ಇದ್ದೇ ಇರುತ್ತದೆ. ಕುರ್ಚಿ, ನಂಗ್,ಕೊಲ್ಲತ್ತರು,ಕಜಿಪುದ ಎಟ್ಟಿ, ಚಟ್ನಿದ ಪೊಡಿ ಎಟ್ಟಿ, ಅಡೆ ಮೀನ್, ಬಂಗುಡೆ,ಬಲ್ಯಾರ್ ಹೀಗೆ ಎಲ್ಲಾ ಮೀನುಗಳು ಇರುತ್ತದೆ. 


ಈ ಹಸಿ ಮೀನು ತರ್ಲಿಕ್ಕೆ ಹೋಗುವುದಾದರೆ ಹೆಚ್ಚು ಕಡಿಮೆ ನೂರೋ, ಇನ್ನೂರು ರೂಪಾಯಿ ಮೀನುಗಳು ಸಾಕು.ಆದರೆ ಒಣ ಮೀನು ಹಾಗೆ ಅಲ್ಲವೇ ಅಲ್ಲ... ಅಲ್ಲಿಗೆ ಹೋದರೆ ಎಲ್ಲವೂ ಬೇಕೆನಿಸುತ್ತದೆ, ಕೆಲವೊಮ್ಮೆ ಮೀನು ಒಳ್ಳೆಯದಿದ್ದರೆ 500,1000 ರೂಪಾಯಿ ವರೆಗೂ ನಾವು ಇಷ್ಟು ಪಟ್ಟೇ ಖರೀದಿ ಮಾಡಿ ಬಿಡ್ತೇವೆ. ಏಕೆಂದರೆ ಯಾವಾಗ ಬೇಕಾದರೂ ಅದರಲ್ಲೂ ಮಳೆಗಾಲದಲ್ಲಿ ಕೂಡ ಹಾಗೇ ಅಡುಗೆ ಮಾಡಿ ತಿನ್ಲಿಕ್ಕೆ ಆಗ್ತದೆ ಅಲ್ವಾ ಹಾಗಾಗಿ. 


ಸುನಂದಕ್ಕ ಯಾವಾಗ ಹೋದರೂ ಬಹಳ ಪ್ರೀತಿಯಿಂದ ಗುರುತು ಹಿಡಿದು ಮಾತಾಡಿಸುತ್ತಾರೆ. ಅವರಿಗೆ ನನ್ನ ಹೆಸರು ಗೊತ್ತಿಲ್ಲ, ಆದರೂ ಕೊನೆಯಲ್ಲಿ ಅಲ್ಲಿಂದ ಹಿಂದೆ ಬರುವಾಗ ನಿನ್ನ ಹೆಸರೇನು ಎಂದು ತಪ್ಪದೇ ಪ್ರತೀ ಸಲ ಕೇಳ್ತಾರೆ.. ಪಚ್ಚು ಅಂತ ಹೇಳಿದರೆ, ನನ್ನ ಮಗನಿಗೂ ಊರವರು ಹಾಗೇ ಏನೋ ಒಂದು ಕರೀತಾರೆ ಅಂತ ಹೇಳ್ತಾರೆ. 


ಅವರಿಗೆ ಹೆಸರೆಲ್ಲ ನೆನಪಿನಲ್ಲಿ ಉಳಿಯುವುದಿಲ್ಲ, ನನ್ನಂತಹ ಗ್ರಾಹಕರು ಅವರಿಗೆ ಎಷ್ಟೋ. ಅವರು ಬಾಲೆ(ಮಗು) ಎಂದೆ ಕರೆಯುತ್ತಾರೆ. ಮೀನು ಮಾರುವ ತಾಯಂದಿರು ಹಾಗೆಯೇ.. ನೀವು ಎಷ್ಟೇ ದೊಡ್ಡವರು ಇರಿ  ಅವರು ಎಲ್ಲರಿಗೂ "ಬಲ ಬಾಲೆ.. "ಎಂದೇ ಕರೆಯುವುದು. ಅವರ ಬಳಿ ಒಮ್ಮೆ ಹೋದರೂ ಸಾಕು ಬಹಳ ಆತ್ಮೀಯತೆ ಹಾಗೇ ಬೆಳೆದು ಬಿಡುತ್ತದೆ. ಈ ಸುನಂದಕ್ಕ ಕೂಡ ಹಾಗೆಯೇ. 


ಎಷ್ಟೇ ಬೇಡ ಎಂದರೂ.. ಈ ಎಟ್ಟಿ ಒಳ್ಳೆ ಉಂಟು ತೆಗೆದುಕೊಂಡು ಹೋಗು.. ಚಟ್ನಿಗೆ ಒಳ್ಳೆಯದಾಗ್ತದೆ, ಈ ಬಂಗುಡೆ ನೋಡು ಎಷ್ಟು ಒಣಗಿದೆ.. ಅಂಬಡೆ ಹಾಕಿ ಸಾರು ಮಾಡು.. ಅಮ್ಮನಿಗೆ ತೆಗೆದುಕೊಂಡು ಹೋಗಿ ಕೊಡು.. ಅವಳು ಚೆನ್ನಾಗಿ ಮಾಡ್ತಾಳೆ ಎಂದು ಹೇಳ್ತಾರೆ. 


ಮನೆಗೆ ಅಮ್ಮ ಈ ಒಣ ಬಲ್ಯಾರ್ ಮೀನ್ ತೆಗೆದುಕೊಂಡು ಹೋದರೆ  ಮಾತ್ರ ನಂಗೆ ಸರಿ ಬಯ್ತಾಳೆ ಆಯ್ತ.. ನಿನಗೆ ಅದೆಲ್ಲ ಗೊತ್ತಾಗಲ್ಲ ಮಾರಾಯ, ಬೇರೆ ಏನೋ ಎಲ್ಲಾ ಮಿಕ್ಸ್ ಮಾಡಿ ಕೂಡ ಕೊಡ್ತಾರೆ  ಎಂದು. ಈ ಬಲ್ಯಾರ್ ಎಂದರೆ ತಾಟೆ ಮೀನು. ಇನ್ನು ಭಯ ಹುಟ್ಟಿಸುವಂತೆ ಹೇಳಬೇಕೆಂದರೆ ಶಾರ್ಕ್ ಮೀನು. ದೊಡ್ಡದು ಅಲ್ಲ ಆಯ್ತಾ.. ಸಣ್ಣ ಗಾತ್ರದ್ದು. ಅದನ್ನು ಒಣಗಿಸಿ ಮಾರ್ತಾರೆ. ಹಸಿ ಕೂಡ ಉಂಟು. 


ಈ ಸುನಂದಕ್ಕ ಒಂದು ನನ್ನನ್ನು ಬಿಡುವುದೇ ಇಲ್ಲ ಮರ್ರೆ... ಒಂಜಿ ನುಂಗೆಲ್  ಬಲ್ಯಾರ್ ಪತೊಂದು ಪೋಲದೆ ಬಾಲೆ (ಒಂದು ಒಣ  ಬಲ್ಯಾರ್ ಮೀನು ತಗೊಂಡು ಹೋಗು ಮಗ) ಅಂತ ಪ್ರತೀ ಸಲವೂ ಗಂಟು ಬಿದ್ದೆ ಬೀಳುತ್ತಾರೆ. ಆವಾಗ ನಾನು.. ಅಮ್ಮ ಮನೆಯಲ್ಲಿ ಬೈತಾರೆ.. ಅದು ಎಂತೆಂತದೋ ಕಟ್ ಮಾಡಿ ಮಾರ್ತಾರೆ ಅಂತೆ.. ಎಂದು ನಾನು ಹೇಳಿದರೆ, ಸುನಂದಕ್ಕ ಹೇಳ್ತಾರೆ... ಯಾನ್ ನಿಕ್ಕ ಏಪಾಂಡಲ ಮೋಸ ಮಲ್ಪೆನಾ ಬಾಲೆ.. ಈ ಎನ್ನ ಬಾಲೆ ಲಕ ಅತ್ತಾ.. (ನಾನು ನಿನಗೆ ಯಾವತ್ತಾದರೂ ಮೋಸ ಮಾಡ್ಲಿಕ್ಕೆ ಉಂಟಾ.. ನೀನು ನನ್ನ ಮಗ ಇದ್ದ ಹಾಗೆ ಅಲ್ವಾ..).ಎಂದು ಹೇಳಿ ಬಿಡ್ತಾರೆ.


ಕೊನೆಗೆ ಅವರೇ ಹೇಳ್ತಾರೆ ಇದನ್ನು ಪದಾರ್ಥ ಮಾಡದಿದ್ದರೂ ಒಂದು ತುಂಡು ತೆಂಗಿನೆಣ್ಣೆಯಲ್ಲಿ ಹಾಗೇ ಕರಿದು ಗಂಜಿ ಜೊತೆಗೆ  ತಿನ್ನು... ಒಳ್ಳೆಯದಾಗದಿದ್ದರೆ ಮುಂದಿನ ಸಲ ಬಂದು ನನಗೆ ಹೇಳು... ನಾನು ನಿನ್ನ ಫುಲ್ ದುಡ್ಡು ವಾಪಸ್ ಕೊಡ್ತೇನೆ ಎಂದು ಹೇಳ್ತಾರೆ. ಈ ತರಹ ಅವರು ಎಮೋಷನಲ್ ಆಗಿ ಮಾತಾಡಿ ಬಿಟ್ಟರೆ ತೆಗೆದುಕೊಳ್ಳದೇ ಇರಲು ಮನಸ್ಸು ಬರುವುದೇ ಇಲ್ಲ. ಹಾಗಾಗಿ ಪ್ರತೀ ಸಲ ಅವರ ಬಳಿ ಹೋದಾಗ ಎಲ್ಲಾ ಮೀನಿನ ಜೊತೆಗೆ ಈ ಒಂದು ಬಲ್ಯಾರ್ ಮೀನು ಮನೆಗೆ ಬಂದೇ ಬರುತ್ತದೆ. 


ಈ ಒಣ ಮೀನಿನಲ್ಲಿ ಅತ್ಯಧಿಕ ಬೆಲೆಯ ಮೀನು ಅಂದರೆ ಅದು ಬಲ್ಯಾರ್ ಆಯ್ತಾ. ಕೆಲವೊಮ್ಮೆ ಒಂದು ಇಡೀ ಮೀನಿಗೆ 500 ರಿಂದ ಸಾವಿರ ರೂಪಾಯಿ ವರೆಗೂ ಇದೆ. ನಾನು ಸುನಂದಕ್ಕನಿಗೆ ಮೊದಲೇ ಹೇಳ್ತೇನೆ.. ನೋಡಿ ನನಗೆ ಅಷ್ಟೆಲ್ಲ ದೊಡ್ಡ ಬಲ್ಯಾರ್ ಬೇಡ... ಇಷ್ಟೆಲ್ಲಾ ಹಣ ಕೊಟ್ಟು ತೆಗೆದುಕೊಂಡು ಹೋದರೆ ಅಮ್ಮ ಗ್ಯಾರಂಟಿ ನನ್ನ ಬೆರಿ ಬ್ಯಾಂಡ್(ಚೆನ್ನಾಗಿ ಬಡೀತಾಳೆ) ಮಾಡ್ತಾಳೆ ಎಂದು. ಕೊನೆಗೆ ಅವರು ನನಗೆ ಇದ್ದುದರಲ್ಲಿ ಚಿಕ್ಕ ಬಲ್ಯಾರ್ ಒಂದನ್ನು ಹೆಕ್ಕಿ ನನ್ನ ತೊಟ್ಟೆಗೆ ತುಂಬಿಸಿ ಕಳುಹಿಸುತ್ತಾರೆ.


ಪದಾರ್ಥ ಕ್ಕೆ ಎಲ್ಲ ಚಿಕ್ಕ ಬಲ್ಯಾರ್ ಅಷ್ಟೊಂದು ರುಚಿ ಅಲ್ಲ, ಅದಕ್ಕೆಲ್ಲ ದೊಡ್ಡ ಬಲ್ಯಾರ್ ಬೇಕು. ಆದರೂ ಕಾಯಿಸಿ ತಿನ್ಲಿಕ್ಕೆ ಆಗ್ತದೆ. ಈ ಸುನಂದಕ್ಕನ ಒತ್ತಾಯಕ್ಕೆ ಅವರದ್ದೊಂದು ಪ್ರೀತಿಗೆ ನಾನು ಅದನ್ನು ಖರೀದಿಸುವುದು. ಆದರೂ ಮನೆಗೆ ತೆಗೆದುಕೊಂಡು ಹೋದ ಮೇಲೆ ಅಮ್ಮ ಯಾವತ್ತು ಸುನಂದಕ್ಕನ  ಬಲ್ಯಾರ್ ಮೀನ್ ಗೆ ನೋ ಎಂದು ಹೇಳಿದವಳೇ ಅಲ್ಲ.ಹಾನ್.. ಇದು ಒಳ್ಳೆದು ಉಂಟು... ಅಂತ ಮೀನನ್ನು ಮೂಸಿ ಕಣ್ಣರಳಿಸಿ ಹೇಳ್ತಾಳೆ. 


ಬಲ್ಯಾರ್ ತುಂಬಾ Intensive ಪರಿಮಳದ ಮೀನು. ಅದನ್ನು ಸ್ವಲ್ಪವೇ ಸ್ವಲ್ಪ ಚಟ್ನಿಗೆ ಹಾಕಿದರೂ ಬಹಳ ಪರಿಮಳ. ಕೆಲವು ಫಂಕ್ಷನ್ ಗಳಲ್ಲಿ ಮತ್ತು ದೈವಕ್ಕೆ ಬಡಿಸುವಾಗ ಕಡ್ಲೆ ಬಲ್ಯಾರ್ ಪದಾರ್ಥ ಇರಲೇಬೇಕು. ಅಷ್ಟರ ಮಟ್ಟಿಗೆ ಅದರದ್ದೊಂದು ಹವಾ ಇದೆ. ಕೆಲವರು ಬಲ್ಯಾರ್ ಅಂದರೆನೇ ಜೀವ ಬಿಡ್ತಾರೆ. 


ನಮ್ಮ ಊರಿನಲ್ಲಿ  ಹೆಚ್ಚಿನವರ ಮನೆಯ ಸಂಬಂಧಿಕರು ಇರುವುದು ಬೊಂಬಾಯಿಯಲ್ಲಿಯೇ(ಮುಂಬೈ).ಇಲ್ಲಿಂದ ಹೋಗಿ ಅಲ್ಲಿಯೇ ಸೆಟಲ್ ಆಗಿ ಇರ್ತಾರೆ.ಅವರು ರಜೆಯಲ್ಲಿ ಊರಿಗೆ ಬಂದಾಗ ಹೇಗೆ ಗುಜ್ಜೆ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಉಪ್ಪಡ್ ಪಚ್ಚಿರ್ ತೆಗೆದುಕೊಂಡು ಹೋಗುತ್ತಾರೋ ಹಾಗೇ ಅವರು ಮರೆಯದೇ ತೆಗೆದುಕೊಂಡು ಹೋಗುವ ಇನ್ನೊಂದು ಐಟಂ ಎಂದರೆ ಅದು ಇಲ್ಲಿಯ ಒಣ ಮೀನು. 


ನನಗೆ ಅವರೆಲ್ಲ ಊರಿಗೆ ಬರುವುದು ಬರೀ ಈ ಒಣಮೀನು ತೆಗೆದುಕೊಂಡು ಹೋಗ್ಲಿಕ್ಕೆನೇ ಅಂತಾನೇ ಹಲವು ಸಲ ಅನ್ನಿಸುವುದು ಇದೆ. ಅವರು ಏನಾದರು ಈ ಒಣ ಮೀನಿನ ಮಾರ್ಕೆಟ್ ಗೆ ಹೋದರೆ ಆ ದಿನ ಮೀನು ವ್ಯಾಪಾರಿಗಳಿಗೆ ಹಬ್ಬ. ಅಬ್ಬಾ... ಎರಡು ವರ್ಷಕ್ಕೆ, ಮೂರು ವರ್ಷಕ್ಕೆ ಆಗುವಷ್ಟು ಸಾವಿರಾರು ಬೆಲೆಯ  ಒಣ ಮೀನು ಅವರು ಖರೀದಿಸುತ್ತಾರೆ.


ಅವರು ಮಾರ್ಕೆಟ್ ಗೆ ಬಂದಾಗಲೇ ಈ ಮೀನುಗಾರರ ಗೋಣಿಯೊಳಗಿರುವ ದೊಡ್ಡ ಸೈಜಿನ ಬಲ್ಯಾರ್ ಮೀನಿಗೊಂದು ಬೆಲೆ ಬರುವುದು. ಅದನ್ನು ಅವರು ತೆಗೆದುಕೊಂಡು ಹೋಗಿಯೇ ಹೋಗ್ತಾರೆ. ಏನೋ ಅವರಿಗೆ ಊರಿನ ಒಣ ಮೀನು ಎಂದರೆ ಅಪಾರ ಪ್ರೀತಿ. ನಮಗೂ ಬೊಂಬಾಯಿ ಜನ ಅಂದರೆ ಏನೋ ವಿಶೇಷ ಪ್ರೀತಿ ವಿಶ್ವಾಸ. ಹಲವಾರು ಒಳ್ಳೆಯ ಕೆಲಸಗಳಿಗೆ ದೈವ ದೇವರುಗಳ ಕೆಲಸಕ್ಕೆ ನಮ್ಮ ಬೊಂಬಾಯಿಯ ಜನರು ಯಾವತ್ತೂ ಕೊಡುಗೈ ದಾನಿಗಳು.ತಾವೂ ಹೇಗೋ ಉದ್ದಾರ ಆಗಿದ್ದೆವೆ ಅದೇ ರೀತಿ ನಮ್ಮ ಊರು ಕೂಡ ಉದ್ದಾರ ಆಗಲಿ ಎಂಬುವುದು ಅವರುಗಳ ಆಶಯ. ನನಗೆ ಅದಕ್ಕಾಗಿ ಮಾತ್ರವಲ್ಲ ಬೊಂಬಾಯಿವರು ಆಡುವ ತುಳು ಭಾಷೆಗಾಗಿ ಕೂಡ ನನಗೆ ಅಷ್ಟೇ ಇಷ್ಟ. ಅದರದ್ದೊಂದು ಪ್ಲೇವರ್ ಬೇರೆಯೇ. 


ಸುನಂದಕ್ಕ ನನಗೆ ಹೇಳುವುದುಂಟು.. ಯಾರಾದರೂ ಬೊಂಬಾಯಿವರು ಇದ್ದರೆ ನನ್ನಲ್ಲಿಗೆ ಕರೆದುಕೊಂಡು ಬಾ ಮಗ.. ಒಳ್ಳೆಯ ಕ್ವಾಲಿಟಿಯ ಬಲ್ಯಾರ್ ಕೊಡುವ ಅಂತ... ನಮ್ಮ ಮನೆಯಿಂದ ಯಾರೂ ಇಲ್ಲ. ಆದರೂ ಊರಿಗೆ ಬಂದ ಯಾರಾದರೂ ಬೊಂಬಾಯಿಯವರಿಗೆ ಒಣ ಮೀನು ಬೇಕಿದ್ದರೆ ನಿಮ್ಮ ಹೆಸರನ್ನೇ ಶಿಫಾರಸು ಮಾಡ್ತೇನೆ ಬಿಡಿ.. ನೀವು ಟೆನ್ಶನ್ ಮಾಡ್ಬೇಡಿ ಎಂದು ಹೇಳಿ ಅವರನ್ನು ಖುಷಿ ಪಡಿಸುತ್ತೇನೆ ನಾನು.


ಸುನಂದಕ್ಕ ನನ್ನ ಮನೆಯಲ್ಲಿರುವವರ ಬಗ್ಗೆ ಕೂಡ  ಆಗಾಗ ಕೇಳ್ತಾರೆ. ಸಹೋದರಿ ಬಾಣಂತಿ ಆಗಿರುವಾಗ ಅವರೇ ಹೇಳುವುದು.. ಯಾವುದೇ ನಂಜಿ ಮೀನು ತೆಗೆದುಕೊಂಡು ಹೋಗ್ಬೇಡ. ಕೇವಲ ಅಡೆ ಮೀನು ತೆಗೆದುಕೊಂಡು ಹೋಗು.. ಅದು ಬಾರಿ ಒಳ್ಳೆಯದು ಸ್ವಲ್ಪವೂ ನಂಜಿ ಇಲ್ಲ ಅಂತ ಹೇಳ್ತಾರೆ.


ಸುನಂದಕ್ಕನ ಮನೆಯವರ ಬಗ್ಗೆ ಕೇಳಿದರೆ ಅವರು ಹೇಳುವುದು.. ನನಗೆ ಒಬ್ಬ ಮಗ ಇದ್ದಾನೆ ಅವನು ಬೆಂಗಳೂರಿನಲ್ಲಿ ಕರೆಂಟ್ ಕಂಪನಿಯಲ್ಲಿ ಕೆಲಸ ಮಾಡ್ತಾನೆ ಎಂದು. ಬಹುಶಃ Bescom ಇರಬಹದೋ ಅಥವಾ BHEL ಇರಬಹುದೋ ಅದು ಅವರಿಗೂ ಗೊತ್ತಿಲ್ಲ. ನಾನೇನಾದರೂ.. ಪರವಾಗಿಲ್ಲ ಬಿಡಿ.. ಸರಕಾರಿ ಕೆಲಸವೇ ಸಿಕ್ಕಿದೆ ನಿಮ್ಮ ಮನೆಗೆ ಅಂತ ಹೇಳಿದರೆ,ಅವರು ಹೇಳ್ತಾರೆ... ಮತ್ತೆ ನನ್ನದು ಎಂತ ಕೆಲಸ.. ಎಂದು ಸ್ವಲ್ಪ ಗತ್ತಿನಲ್ಲಿಯೇ ನಗುತ್ತಾ ಕೇಳುತ್ತಾರೆ. ನಾನೇನಾದರೂ.. ನೀವು ಬಿಡಿ, ನೀವು ದೊಡ್ಡ Entrepreneur ಅಂದರೆ, ಅಂಚ ಪಂಡ  (ಹಾಗೆಂದರೆ..) ಏನು ಎಂದು ಕೇಳುತ್ತಾರೆ ... ನೀವು ಸ್ವಂತವಾಗಿ ನಿಮ್ಮ ಕಾಲ ಮೇಲೆ ನಿಂತುಕೊಂಡು ಕೆಲಸ ಮಾಡುವವರು ಅಂತ ನಾನು ಹೇಳಿದರೆ ಅವರು ಖುಷಿಯಿಂದ ಇನ್ನಷ್ಟು ಜೋರಾಗಿ ನಕ್ಕು ಸರಿಯಾಗಿ ಹೇಳಿದ್ದಿ ಎಂದು ಹೇಳ್ತಾರೆ. 


ನೀವು ಅಂದು ಕೊಂಡಂತೆ ಸುನಂದಕ್ಕ ನನ್ನ ಅಮ್ಮನ ವಯಸ್ಸಿನವರಲ್ಲ. ಅವರೇ ಹೇಳುತ್ತಾರೆ... ನನಗೀಗ 80 ಆಗಿರಬಹುದು.. ಇಲ್ಲ ಇಲ್ಲ ಹೆಚ್ಚು ಕಡಿಮೆ 75,76 ಆಗಬಹುದು ಮಗ.. ಎಂದು ಏನೋ ಒಂದು ಲೆಕ್ಕಾಚಾರ ಮಾಡಿ, ಆ ಕಾಲದ ಘಟನೆಗಳನ್ನು ನೆನಪಿಸಿಕೊಂಡು ಹೇಳುತ್ತಾರೆ.


ಅವರು ಮೂಲತಃ ಪಣಬೂಂರಿನವರಂತೆ.ಶುಕ್ರವಾರ ಅಷ್ಟೇ ಮೂಡುಬಿದಿರೆ ಗೆ ಮೀನು ಮಾರಲು ಬರ್ತಾರೆ. ನೀವು ಎಷ್ಟು ವರ್ಷದಿಂದ ಮೂಡುಬಿದಿರೆಗೆ ಮೀನ್ ಮಾರಲು ಬರ್ತೀರಿ ದೊಡ್ಡ(ಅಜ್ಜಿ) .. ಎಂದು ಕೇಳಿದರೆ.. ಎರಡೂ ಕೈಯಲ್ಲೂ  ನಾಲ್ಕು ನಾಲ್ಕು ಬೆರಳನ್ನು ತೋರಿಸಿ 44 ವರ್ಷ  ಎಂದು ಹೇಳಿ ಅಚ್ಚರಿ ಮೂಡಿಸುತ್ತಾರೆ. ಅಷ್ಟೊಂದು ವರ್ಷದಿಂದ ಬರುತ್ತೀರಾ.. ಇಲ್ಲಿ ಜಾಸ್ತಿ ಓಲ್ಡ್ ಅಂದರೆ ನೀವೇನಾ ಎಂದು ಕೇಳಿದರೆ.. ಇಲ್ಲ ಇನ್ನೊಬ್ಬಳು ಬರ್ತಾ ಇದ್ದಳು.. ಈಗ ಕೆಲವೊಮ್ಮೆ ಬರುವುದಿಲ್ಲ ಅವಳು.. ನಾವೆಲ್ಲ ನಾಲ್ಕೈದು ಜನ ತುಂಬಾ ಹಿಂದಿನಿಂದ ಒಟ್ಟಿಗೆ ಇಲ್ಲಿಗೆ ಹಳೆಯ ಮಾರ್ಕೆಟ್ ನ ಸಂತೆಗೆ ಬರುತ್ತಿದ್ದೆವು.. ಬಹುಶಃ ನಿನ್ನ ಅಮ್ಮ ನಿನ್ನ ದೊಡ್ಡ ಎಲ್ಲ ನನ್ನನ್ನು ನೋಡಿರ್ತಾರೆ ಬಿಡು ಎಂದು ಹೇಳುತ್ತಾರೆ ಸುನಂದಕ್ಕ. 


ಈಗಲೂ ದುಡಿದು ತಮ್ಮ ಸಂಸಾರವನ್ನು ಸುಭದ್ರಗೊಳಿಸುತ್ತಿರುವ ಸುನಂದಕ್ಕನನ್ನು ಕಂಡರೆ ಹೆಮ್ಮೆ ಮೂಡುತ್ತದೆ. ಮತ್ತು ಇಂತಹ ಸುನಂದಕ್ಕನಂತವರು ಅಲ್ಲಲ್ಲಿ ಹಲವಾರು ಇದ್ದಾರೆ. ಅವರಿಗೆಲ್ಲ ಚಿಕ್ಕಂದಿನಿಂದಲೂ ಕೆಲಸ ಮಾಡಿ ಗೊತ್ತೇ ವಿನಹ ಮನೆಯಲ್ಲಿ ಕೂತು ಗೊತ್ತಿಲ್ಲ. ಈಗಲೂ ಮೀನು ಬುಟ್ಟಿ ಹಿಡಿದುಕೊಂಡು, ಇಲ್ಲವೇ ಪೇರಳೆ ಹಣ್ಣು ಮಾರಿ,ಹೂ ಕಟ್ಟಿ ಮಾರಿ,ಜೋಳ ಸುಟ್ಟು ಮಾರುವ ತಾಯಂದಿರನ್ನು, ದೊಡ್ಡನಂತವರನ್ನು ಕಂಡಾಗ ಹೆಣ್ಣು ಜೀವಗಳ ಬದುಕಿನ ಹೋರಾಟ ಅದೆಷ್ಟು ದೊಡ್ಡದು ಎಂದು ಅನ್ನಿಸದೇ ಇರದು. 


ಇಲ್ಲಿ ಹೊಸ ಮಾರ್ಕೆಟ್ ನಲ್ಲಿ ಹೇಗೆ ಆಗ್ತದೆ ದೊಡ್ಡ... ಎಂದು ಕೇಳಿದರೆ... ಸುನಂದಕ್ಕ ಏನೂ ಹೇಳುವುದಿಲ್ಲ... ಹೇಗೋ ಒಂದು ನಡೆಯುತ್ತೆ ಅಂತ ಅಷ್ಟೇ ಹೇಳ್ತಾರೆ. ಅವರು ಹೇಳಿದರೂ, ಹೇಳದಿದ್ದರೂ.. ಅವರಿಗೂ, ಅಲ್ಲಿರುವ ಎಲ್ಲಾ ವ್ಯಾಪಾರಿಗಳಿಗೂ ಮಾತ್ರವಲ್ಲ... ಊರಿನ ಹೆಚ್ಚಿನವರಿಗೆ ಆ ಹಳೆಯ ಮಾರ್ಕೆಟ್ಟೇ ಎಂದಿಗೂ ಬಹಳ ಇಷ್ಟ. ಏಕೆಂದರೆ ವ್ಯಾಪಾರಿಗಳಿಗೆ ಹೇಗೆ ಅವರುಗಳಿಗೆ ಅದು ಒಂದು ಬದುಕು ಕಟ್ಟಿ ಕೊಟ್ಟ ಜಾಗವೋ, ಹಾಗೆಯೇ ಊರಿನವರಿಗೆ ಅದು ತಾಜಾ ನೆನಪುಗಳನ್ನು ಹುಟ್ಟಿಸಿದ Good Old ಮೂಡುಬಿದಿರೆಯ ಹಳೆ ಮಾರುಕಟ್ಟೆ. 


ಏನು ಮಾಡುವುದು... ಹಳೆಯದನ್ನು ಎಷ್ಟು ದಿನ ಅಂತ ಇಟ್ಟುಕೊಳ್ಳಲು ಸಾಧ್ಯ. ಹೊಸತು ಬಂದಾಗ ಹಳೆಯದ್ದು ಜಾಗ ಖಾಲಿ ಮಾಡಲೇ ಬೇಕು. ಕೆಲವೊಂದು ನೆನಪುಗಳಿಗೆ  ನೆನಪುಗಳಾಗಿ ಇರಲು ಮಾತ್ರ ಅವಕಾಶ! 


ಮೊನ್ನೆ ಶುಕ್ರವಾರ ಕೂಡ ಸುನಂದಕ್ಕ ಬಳಿ ಹೋಗಿದ್ದೆ.. ಎಂದಿನಂತೆ ಎಳೆಂಟು ಮೀನುಗಳ ಜೊತೆಗೆ ಒಂದು ಬಲ್ಯಾರ್ ಹಾಕಿ ಕೊಡಲು ಅವರು ಮರೆಯಲಿಲ್ಲ. ನಾನು ಬೇಡ ಕೂಡ ಹೇಳಲಿಲ್ಲ.. ಅವರು ನಕ್ಕರು, ನಾನು ಕೂಡ ನಕ್ಕೆ. ಎಷ್ಟು ದಿನ ಒಟ್ಟಿಗೆ ನಗುತ್ತೆವೆಯೋ ಗೊತ್ತಿಲ್ಲ.ಹೇಗೆ ಮೂಡುಬಿದಿರೆಯ ಹಳೆಯ ಮಾರ್ಕೆಟ್,ಶುಕ್ರವಾರದ ಸಂತೆ, ಅಪ್ಪನ ತಿಂಡಿ, ಅಮ್ಮನ ಕಬ್ಬಿನ ಜ್ಯೂಸ್ ನೆನಪಿನಲ್ಲಿ ಸದಾ ಇರುವುದೋ ಅದರ ಜೊತೆ ಜೊತೆಗೆ ಸುನಂದಕ್ಕನ ಎಳೆಂಟು ಮೀನು ಮತ್ತು ಒಂದು ಬಲ್ಯಾರ್ ಮುಂದೆಯೂ ಸದಾ ನೆನಪಿನಲ್ಲಿ ಉಳಿಯುತ್ತದೆ.


.....................................................................................


#ಏನೋ_ಒಂದು.. 


ab pacchu 

moodubidire

(ಚಿತ್ರದಲ್ಲಿರುವುದು ಕುರ್ಚಿ ಮೀನು)

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ