ಕೊಳದ ಮೇಲ್ ಬಿರಿಯುವುದೆಲ್ಲವೂ ಕೆಂದಾವರೆಯಲ್ಲ..






ಕೆಲವೊಂದು ರಚನೆಗೆಳು ಸುಂದರವಾಗಿಯೇ ಇರುತ್ತದೆ.ಅದರೊಡನೆ ಮತ್ತೊಂದು ಸುಂದರವಾದದ್ದು ಹಾಗೇ ಸೇರಿಕೊಂಡು,ಕೂಡಿಕೊಂಡು ಬಿಟ್ಟರೆ,ಸುಂದರವೆನ್ನುವುದು ಬಹು ಸುಂದರವಾಗುವುದು. 


ನಮ್ಮಲ್ಲಿ ಹಲವಾರು ಪುರಾತನ ದೇವಳಗಳಿವೆ.ಅದು ಬೇಕಿದ್ದರೆ ಸಣ್ಣದಾಗಿಯೇ ಇರಲಿ,ಆದರೆ ಅದರ ಮಗ್ಗುಲಲ್ಲಿಯೋ ಅಥವಾ ಅದರ ಕಾಲಬುಡದಲ್ಲಿಯೇ ಒಂದು ಪುಟ್ಟ ಸರೋವರವೋ,ಒಂದು ಚಂದದ ಕೊಳವೋ ತುಂಬಿ ತುಳುಕಾಡಿ ಹಾಗೇ ಬಳುಕಾಡುತ್ತಿದ್ದರೆ ಕೆಲವೊಮ್ಮೆ ಆ ದೇವರ ಆಲಯದ ಸೌಂದರ್ಯ ಅದರಿಂದಲೇ ಇನ್ನಷ್ಟು ವೃದ್ಧಿ ಆಗುವುದೆಂದು ಕೆಲವೊಮ್ಮೆ ಅನ್ನಿಸಿಬಿಡುವುದಿದೆ.ಆದರೆ ಹೆಚ್ಚಾಗಿ ಸಣ್ಣದೊಂದು ಪುಷ್ಕರಣಿಯಾದರೂ ನಮ್ಮ ಪ್ರತೀ ದೇವಾಲಯದಲ್ಲಿ ಇದ್ದೇ ಇರುವುದು.

ತಿಳಿ ನೀರ ಕೊಳದಲ್ಲಿ ಹಂಸಗಳು ಈಜಾಡುತ್ತಿದ್ದರೆ ನೋಡಲು ಮನಸ್ಸಿಗೆ ಅದೆನೋ ಮುದ.ಆದರೆ ಈಗೆಲ್ಲಿ ಹಂಸ,ರಾಜ ಹಂಸಗಳೆಲ್ಲ.ಬಾತುಕೋಳಿ,ನೀರುಕಾಗೆಗಳು ಇದ್ದರೆನೇ ಹೆಚ್ಚು.ಇರಲಿ ನೀರ ಹಕ್ಕಿ ಪಕ್ಕಿಗಳು ನೀರಲ್ಲಿ ಹಾಗೇ ಮುಳುಗಿ ಏಳಿ ಒಂದಷ್ಟು ಲಗಾಟೆ ಹೊಡೆದರೆ ಸರೋವರಕ್ಕೂಕೂಡ ತನ್ನ ಇರುವಿಕೆಗಾಗಿ ಅದೆನೋ ಸಮಾಧಾನ ಹಾಗೂ ತಕ್ಕಮಟ್ಟಿಗೆ ಧನ್ಯತಾ ಭಾವ.

ಹಂಸ ಬರಲಿ,ಬರದೇ ಇರಲಿ,ಆದರೆ ಸರೋವರವಾಗಲಿ ಕೋಳವಾಗಲಿ ಚಂದ ಕಾಣುವುದು ಕೆಂದಾವರೆಯೊಂದು ಅದರಲ್ಲಿ ಬಿರಿದು ಅದರಷ್ಟಕ್ಕೆ ನಕ್ಕಾಗ ಮಾತ್ರ.ಇಲ್ಲದಿದ್ದರೆ ಅದು ಬರೀ ಖಾಲಿ ಖಾಲಿ.

ಮೂಡುಬಿದಿರೆಯಿಂದ ಸ್ವಲ್ಪ ದೂರದಲ್ಲಿ ಕಾರ್ಕಳ ಇದೆ.ಅದು ಗೊಮ್ಮಟೇಶ್ವರನ ವಿಗ್ರಹಕ್ಕಾಗಿಯೂ ಕೂಡ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಅದೇ ಕಾರ್ಕಳದಲ್ಲಿ ಒಂದು ದೊಡ್ಡ ಕೆರೆ ಇತ್ತು.ಈಗಲೂ ಇದೆ.ಹೆಚ್ಚು ಕಡಿಮೆ 24 ಎಕ್ರೆ ಆ ಕೆರೆ ಎಂಬ ಸರೋವರದ ಒಟ್ಟಾರೆ ಗಾತ್ರ.ಅದರ ಹೆಸರು ಆನೆಕೆರೆ ಎಂದು.ಅದರ ಮಧ್ಯದಲ್ಲಿ  ಸುಮಾರು ಐದು ಶತಮಾನಗಳಷ್ಟು ಹಳೆಯದಾದ,ಹೆಚ್ಚು ಕಡಿಮೆ ಕಾರ್ಕಳದ ಮತ್ತೊಂದು ಪ್ರಸಿದ್ಧವಾದ ಚತುರ್ಮುಖ ಬಸದಿಯ ವಾಸ್ತುಶಿಲ್ಪವನ್ನೇ ಹೋಲುವ ಬಹಳ ಸುಂದರ ಕೆರೆಬಸದಿ ಇದೆ.ಆನೆಕರೆ ಬಸದಿ ಎಂದು ಕೂಡ ಅದನ್ನು ಕರೆಯುತ್ತಾರೆ. 

ವರಂಗ ಎಂಬ ಸ್ಥಳದಲ್ಲಿ ಕೆರೆ ಮಧ್ಯದಲ್ಲಿರುವ ಬಸದಿಗೆ ಹೋಗಬೇಕಾದರೆ ನಾವು ದೋಣಿ ಮೂಲಕವೇ ಹೋಗಬೇಕು,ಆದರೆ ಈ ಆನೆಕೆರೆಯ ಮಧ್ಯದಲ್ಲಿರುವ ಬಸದಿಗೆ ಹೋಗಬೇಕಾದರೆ ಒಂದು ಬದಿಯಲ್ಲಿ ಮಣ್ಣಿನ ದಾರಿ ಕೂಡ ಇದೆ.ಭೈರವ ಅರಸು ವಂಶದ ಪಾಂಡ್ಯನಾಥ ಪಾಂಡ್ಯಪ್ಪೆಡೆಯ ಕಟ್ಟಿಸಿದ ಎಂಬ ಐತಿಹ್ಯವಿರುವ ಈ ಬಸದಿ,ಕೆರೆ ಮಧ್ಯೆ ಇರುವುದನ್ನು  ಬಹಳ ದೂರದಿಂದಲೇ ನೋಡಲು ಬಹಳ ಚಂದ. 

ಅರಮನೆಯ ಆನೆಗಳಿಗೆ ನೀರು ಕುಡಿಸಲು ಹಾಗೂ ಸ್ನಾನ ಮಾಡಿಸಲು ಮಾಡಿದ ಕೆರೆಯಾದ್ದರಿಂದ ಇದಕ್ಕೆ ಆನೆಕೆರೆ ಎಂದು ಹೆಸರು ಬಂದಿದೆ ಎಂದು ತಿಳಿದವರು ಹೇಳುತ್ತಾರೆ.ಕಾರ್ಕಳದ ಒಂದು ಬಹು ಪ್ರಮುಖ ಜಾಗವೇ ಈ ಆನೆಕೆರೆ.

ಚಿಕ್ಕಂದಿನಲ್ಲಿ ಬಸ್ಸಿನಲ್ಲಿ ಈ ದೊಡ್ಡದಾದ ಆನೆಕೆರೆಯನ್ನು ನೋಡುತ್ತಾ ಹೋಗುವಾಗ ಅದರಲ್ಲಿ ಇದ್ದ ಈ ಕೆಂಪು ತಾವರೆ ಹೂಗಳು ವಿಶೇಷ ಆಕರ್ಷಣೆ ನನ್ನಲ್ಲಿ ಹುಟ್ಟಿಸುತ್ತಿತ್ತು.ಅಲ್ಲಿ ಬಿಟ್ಟು ಬೇರೆ ಎಲ್ಲೂ ನಾನು ಆವಾಗ ತಾವರೆ ಹೂ ನೋಡಿದವನೇ ಅಲ್ಲ.ಕೇವಲ ಚಿತ್ರಗಳಲ್ಲಿ, ಟಿವಿಯಲ್ಲಿ ನೋಡಿದ್ದೆ ಅಷ್ಟೇ.ಆದರೆ ಅದು ನಿಜವಾಗಿಯೂ ತಾವರೆಯೇ? ಅದು ಮಾತ್ರ ನನಗೆ ಗೊತ್ತಿರಲಿಲ್ಲ.ನನ್ನ ಪಾಲಿಗೆ ನೀರಿನ ಮೇಲೆ ಕೆಂಪಗೆ ಅರಳುವ ಎಲ್ಲವೂ ತಾವರೆಯೇ ಆಗಿದ್ದ  ದಿನಗಳು ಅವು.ಆದರೆ ಆನೆಕೆರೆಯಲ್ಲಿ ತಾವರೆ ಕೂಡ ಇತ್ತು. 


ಆಮೇಲೆ ಸ್ವಲ್ಪ ದೊಡ್ಡದಾದ ನಂತರ ಗೊತ್ತಾಯಿತು ಯಾವುದೇ ನೀರ ಕೊಳದಲ್ಲಿ ಕೆಂಪಗೆ ಅರಳಿ ನಗುವ ಎಲ್ಲವೂ ತಾವರೆಯಲ್ಲ,ಅದೇ ರೀತಿ ಬಿಳಿಯ ಬಣ್ಣದ ಎಲ್ಲವೂ ಕೂಡ  ನೈದಿಲೆಯೂ ಸಹ ಅಲ್ಲವೆಂದು.

ಹೌದು ತಾವರೆಯೇ ಬೇರೆ.. ನೈದಿಲೆಯೇ ಬೇರೆ..

ನೈದಿಲೆಯು ಕೂಡ ಕೆಂಪಾಗಿ ಅರಳುವುದು.ಅದೇ ರೀತಿ ತಾವರೆ ಕೂಡ ಬಿಳಿಯಾಗಿ ಬಿರಿಯುವುದು.ಕೇಳಿಲ್ಲವೇ..ಶ್ವೇತಕಮಲ,ನೀಲಕಮಲ ಎಂಬ ಹಲವು ಬಣ್ಣಗಳ ಬಣ್ಣ ಬಣ್ಣದ ಶ್ರೇಷ್ಟ ಕಮಲಗಳ ಬಗ್ಗೆ.

ಹೌದು ಚಿತ್ರದಲ್ಲಿ ಇರುವ ಈ ಎರಡೂ ಕೂಡ ಬೇರೆ ಬೇರೆಯೇ.

ಇಲ್ಲಿ ಚಿತ್ರ "A"  ಯಲ್ಲಿ ಇರುವುದು ನೈದಿಲೆಯದ್ದಾಗಿದ್ದರೆ, ಚಿತ್ರ "B" ಯಲ್ಲಿ ಇರುವುದು ತಾವರೆಯದ್ದಾಗಿದೆ. 

ಈ ಎರಡೂ Aquatic Plant(ನೀರಿನ ವಾತಾವರಣದಲ್ಲಿಯೇ ಬೆಳೆಯುವಂತಹದ್ದು/ಜಲ ಸಸ್ಯ) ಆದರೂ ಇವೆರಡರಲ್ಲಿ ವ್ಯತ್ಯಾಸಗಳು ಹಲವಾರು ಇದೆ. ನೋಡಲು ಒಂದೇ ರೀತಿ ಕಾಣುವುದರಿಂದ ನಾವು ಹೆಚ್ಚಾಗಿ ನಮ್ಮ ಸುತ್ತ ಮುತ್ತ ಕಂಡು ಬರುವ ನೈದಿಲೆಯನ್ನೇ ತಾವರೆ ಎಂದುಕೊಂಡು ಬಿಡುತ್ತೇವೆ.

ಆದರೆ ಕೆಂಪು ಬಣ್ಣವಿದ್ದ ಮಾತ್ರಕ್ಕೆ ನೈದಿಲೆ ತಾವರೆ ಆಗುವುದಿಲ್ಲ, ಅದು ಕೆನ್ನೈದಿಲೆ ಎಂದೇ ಬೇರೆ ರೀತಿಯಲ್ಲಿ ಗುರುತಿಸಿಕೊಳ್ಳುತ್ತದೆ. ಅದೇ ರೀತಿ ನೈದಿಲೆಯಲ್ಲಿಯೇ ಹಲವಾರು ಬಣ್ಣಗಳಿವೆ ಕೆಂಪು,ಬಿಳಿ, ಹಳದಿ, ನೀಲಿ, ಪಿಂಕ್ ಹೀಗೆ ಹಲವಾರು.ನೈದಿಲೆ, ತಾವರೆ ಬೇರೆ ಬೇರೆ ಆದರೂ ಎರಡೂ ಕೂಡ ನೋಡಲು ಒಂದಕ್ಕಿಂತ ಒಂದು ಚಂದವೇ.

ಇಂದು ಈ ಬರಹದಲ್ಲಿ ನಾವು ಹೇಗೆ ಈ ತಾವರೆ ಮತ್ತು ನೈದಿಲೆಗಳು ಪರಸ್ಪರ ಬೇರೆ ಬೇರೆಯಾಗಿದೆ,ಹಾಗು ನಾವು ಹೇಗೆ ಇವರೆಡರ ನಡುವಿನ ವ್ಯತ್ಯಾಸವನ್ನು ಬಹಳ ಸುಲಭವಾಗಿ ಮತ್ತು ಅಷ್ಟೇ ಸ್ಪಷ್ಟವಾಗಿ ಕಂಡು ಹಿಡಿಯಬಹುದು ಎಂಬುದನ್ನು  ನೋಡೋಣ..

Lotus ಎಂದು ಕರೆಯಲ್ಪಡುವ ತಾವರೆಯ ವೈಜ್ಞಾನಿಕ ಹೆಸರು Nelumbo nucifera. ಅದೇ ರೀತಿ Water lily ಎಂದು ಕರೆಯಲ್ಪಡುವ ನೈದಿಲೆಯ ವೈಜ್ಞಾನಿಕ ಹೆಸರು Nymphaeaceae.


ತಾವರೆ ಯಾವಾಗಲೂ ನೀರಿನಿಂದ ಬಹು ಮೇಲಕ್ಕೆ ಬಂದು ಅರಳಿ ನಿಲ್ಲುತ್ತದೆ.ಅದರ ಎಲೆಗಳು ಕೂಡ ಮೊದಲ ಹಂತದಲ್ಲಿ ನೀರಿಗೆ ತಾಗಿಕೊಂಡೇ ಇದ್ದರೂ ಸಹ ಆ ನಂತರದಲ್ಲಿ ಬೆಳೆದ ಬಲಿತ ಎಲೆಗಳು ಕೂಡ ನೀರಿನಿಂದ ಸ್ವಲ್ಪ ಮೇಲಕ್ಕೆ ಬಂದು ಗಾಳಿಯಲ್ಲಿ ಇರುತ್ತದೆ,ಕೆಲವೊಮ್ಮೆ ಆರೇಳು ಇಂಚು ಆದರೂ ನೀರಿನಿಂದ ಅದರ ಎಲೆಗಳು ಮೇಲೆ ಇರುತ್ತದೆ.ಆ ಎಲೆಗಳಿಗಿಂತ ತುಸು ಮೇಲೆ ತಾವರೆ ಇರುತ್ತದೆ. 

ತಾವರೆಯ ಎಲೆಗಳಲ್ಲಿ ನೀರು ನಿಲ್ಲುವುದಿಲ್ಲ,ನಮ್ಮ ಕೆಸುವಿನ ಎಲೆಗಳಂತೆ ಅದರಲ್ಲಿ ಬಿದ್ದ ನೀರ ಮಣಿ ಮುತ್ತಿನಂತೆ ಹೊಳೆದು ಹಾಗೇ ಜಾರಿ ಹೋಗುತ್ತದೆ.ಇಲ್ಲಿ ಎಲೆಗಳಿಗೂ ಒಂಥರಾ ಮ್ಯಾಟ್ ಫಿನಿಷ್ ಇದ್ದಂತೆ ಭಾಸವಾಗುವುದು.ಆದರೆ ನೈದಿಲೆ ಹಾಗಲ್ಲ. ಅದರ ಎಲೆಗಳಲ್ಲಿ ನೀರ ಪಸೆ ಬಲು ಸುಲಭವಾಗಿ ನಿಲ್ಲುತ್ತದೆ. 

ತಾವರೆಯಂತಿರದೆ ಈ ನೈದಿಲೆ ನೀರ ಮೇಲೆಯೇ ಇಲ್ಲವೇ ನೀರಿಗೆ ಬಹು ಸಮೀಪದಲ್ಲಿ ಅರಳುತ್ತದೆ. ಅದರ ಎಲೆಗಳು ಹೆಚ್ಚಾಗಿ ನೀರಿನಲ್ಲಿಯೇ ಇರುತ್ತದೆ. ಕೆಲವೊಮ್ಮೆ ನೀರಲ್ಲಿ ಮುಳುಗಿಯೂ ಕೂಡ ಇರುತ್ತದೆ. ಆದರೆ ಎಂದು ಅದರ ಎಲೆಗಳು ತಾವರೆಯಂತೆ ಮೇಲಕ್ಕೆ ಬಂದು ಗಾಳಿಯಲ್ಲಿ ನಿಂತುಕೊಳ್ಳುವುದಿಲ್ಲ. 

ತಾವರೆಯ ಎಲೆ ಸಂಪೂರ್ಣ ವೃತ್ತಾಕಾರವಾಗಿರುತ್ತದೆ. ಕೆಲವೊಮ್ಮೆ ಅಂಚುಗಳು ಕರ್ಲಿ ಆಗಿದ್ದರೂ ಸಹ ಎಲೆಗಳು ಮಾತ್ರ ವೃತ್ತಾಕಾರವಾಗಿಯೇ ಇರುವುದು. ಆದರೆ ನೈದಿಲೆ ಎಲೆ ಹಾಗಲ್ಲ. ನೋಡಲು ಅವುಗಳ ಎಲೆಗಳು ಕೂಡ ವೃತ್ತಾಕಾರದಂತೆ ಕಂಡರೂ ಅವುಗಳ ಒಂದು ಭಾಗದಲ್ಲಿ ಸ್ವಲ್ಪವೇ ಸ್ವಲ್ಪ ಸೀಳಿರುತ್ತದೆ,ಬ್ರಾಹ್ಮಿ(ತಿಮರೆ, ಒಂದೆಲಗ)ಯ ಎಲೆಯಂತೆ.ಈ ಕಪ್ಪೆಗಳು,ಕೀಟಗಳು ಇದರ ಎಲೆಯ ಮೇಲೆ ಬಂದು ಕುಳಿತುಕೊಳ್ಳಲು ಬಹಳ ಖುಷಿ ಪಡುತ್ತವೆ. 

ಮೊದಲ ದಿನ ನೈದಿಲೆ ಅರಳಿದಾಗ ಅದರ ಮಧ್ಯದ ಭಾಗದಲ್ಲಿ ಒಂದು ರೀತಿಯ ಸುವಾಸಿತ ದ್ರವ ಒಸರುತ್ತದೆ.ಅದರಿಂದ ಕೀಟಗಳು ಆಕರ್ಷಿತವಾಗಿ ಪರಾಗಸ್ಪರ್ಶ ಕ್ರೀಯೆ ಮಾಡುತ್ತದೆ.ಎರಡನೆಯ ದಿನ ಆ ದ್ರವ ಒಸರುವುದು ನಿಂತು ನೈದಿಲೆ ಮತ್ತೆ ನೀರಿನೊಳಕ್ಕೆ ಹೋಗಿ ಬಿಡುವುದು. ಆ ನಂತರ ಅಲ್ಲೇ ಅದರೊಳಗಿನ ಬೀಜ ಬೆಳೆದು,ಆ ಬೀಜಗಳು ಪುನಃ ನೀರಿನ ಮೇಲ್ಭಾಗಕ್ಕೆ ಬಂದು ಬಿಡುವುದು. 

ಆದರೆ ತಾವರೆ ಹಾಗಲ್ಲ.ಅದರಲ್ಲಿ ಬೀಜಗಳ ಗುಚ್ಛ(ಪಾಡ್) ಮೊದಲಿನಿಂದ ಕೊನೆಯವರೆಗೂ ಮೇಲ್ಭಾಗದಲ್ಲಿ ಹೂವಿನ ಮಧ್ಯ ಭಾಗದಲ್ಲಿ ಒಂದು ಬಟನ್ ರೀತಿಯಲ್ಲಿ ಇರುತ್ತದೆ.ಯಾರ ಕೈಗೆ ಬೇಕಾದರೂ ಸುಲಭವಾಗಿ ಸಿಗುವ ಈ ಬೀಜ ಆರೋಗ್ಯದ ದೃಷ್ಟಿಯಿಂದ ಬಹಳನೇ ಒಳ್ಳೆಯದು.

ಇದರ ಬೀಜಗಳೇ ಮಕನಾ ಎಂದು ಕರೆಯಲ್ಪಡುವುದು.ಇದು ಹೃದಯದ ಕಾಯಿಲೆ,ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯ ನಿಯಂತ್ರಣಕ್ಕೆ ಬಹಳ ಸಹಕಾರಿ.ಮಲಬಧ್ಧತೆ ನಿವಾರಣೆ,ಮೂಲವ್ಯಾಧಿಗೂ ಕೂಡ  ಇದು ಬಹಳ ಪರಿಣಾಮಕಾರಿ.ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ಕೂಡ ಇದು ತುಂಬಾ ಒಳ್ಳೆಯದು.

ಚರ್ಮ ಬಹು ಬೇಗ ಸುಕ್ಕುಗಟ್ಟದಂತೆ ಇದು ತಡೆಯುತ್ತದೆ ಮಾತ್ರವಲ್ಲ ದೇಹದ ರೋಗ ನಿರೋಧಕ ಶಕ್ತಿಯನ್ನು ಕೂಡ ಇದು ಹೆಚ್ಚು ಮಾಡಬಲ್ಲದು. ಅದೇ ರೀತಿ ಮಕ್ಕಳ ಬುದ್ಧಿ ಶಕ್ತಿಯನ್ನು ಕೂಡ ಹೆಚ್ಚು ಮಾಡಬಲ್ಲದು.ಹಾಗಾಗಿ ಮಾರುಕಟ್ಟೆಯಲ್ಲಿ ಕೂಡ ಇದು ದುಬಾರಿ ಬೆಲೆಗೆ ಮಾರಾಟ ಆಗುವುದು.ಬಿಹಾರ  ರಾಜ್ಯದಲ್ಲಿ ಜನರು ಇದನ್ನು ವಾಣಿಜ್ಯ ಬೆಳೆಯನ್ನಾಗಿ ಬೆಳೆದು,ಮಕಾನ ಮಾರಿ ತಕ್ಕ ಮಟ್ಟಿಗೆ ದುಡ್ಡು ಕೂಡ ಎಣಿಸುತ್ತಾರೆ ಅವರು.ಇದರ ಹಸಿ ಬೀಜಗಳನ್ನು ಹಾಗೆಯೇ ಅಥವಾ ಬೇಯಿಸಿ ತಿನ್ನಬಹುದು ಇಲ್ಲವೇ ಪಾಪ್ ಕಾರ್ನ್ ತರಹ ಹುರಿದು ತಿನ್ನಬಹುದು ಮಾತ್ರವಲ್ಲ ಪಾಯಸ ಕೂಡ ಮಾಡಿ ರುಚಿ ರುಚಿಯಾಗಿ ಸವಿಯಬಹುದು.

ತಾವರೆಯ ಗಡ್ಡೆಗಳು ಅಡುಗೆಗೂ ಕೂಡ ಆಗಿ ಬರುವುದು.ಅದರ ಸೂಪ್ ಜಪಾನ್ ದೇಶದಲ್ಲಿ ಬಹಳನೇ ಪ್ರಸಿದ್ಧಿ ಪಡೆದಿದೆ. ಬೇಕಿದ್ದರೆ ಗಮನಿಸಿ ನೋಡಿ ಜಪಾನಿಯರು ಅನಾರೋಗ್ಯ ಪೀಡಿತರಾಗುವುದೇ ಬಹಳ ಅಪರೂಪ. ಬಹುಶಃ ತಾವರೆಯ ಪ್ರಭಾವ ಇರಬಹುದೋ ಏನೋ.ತಾವರೆಯ ಎಲೆಯ ಟೀ ಇಲ್ಲವೇ ಕಷಾಯ ಮಾಡಿ ಕುಡಿಯುವುದರಿಂದ ದೇಹದ ಬೊಜ್ಜು ಮತ್ತು ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದಂತೆ. ಔಷಧಿಯ ಗುಣಗಳು ತಾವರೆ ಹಾಗೂ ನೈದಿಲೆ ಎರಡರಲ್ಲೂ ಸಾಕಷ್ಟಿದೆ.

ಆಗ ತಾನೇ ತೆಗೆದ ಬಿಳಿ ತಾವರೆಯ ಗೆಡ್ಡೆಯ ರಸವನ್ನು ನಾಗರ ಹಾವು ಕಡಿವರಿಗೆ ನೀಡುವ ಕ್ರಮ ಶ್ರೀಲಂಕಾದಲ್ಲಿ ಇದೆಯಂತೆ. ಆಯುರ್ವೇದದಲ್ಲಿ ಕೆಲವೊಂದು ಚಿಕಿತ್ಸೆಗೆ ನಿರ್ಧಿಷ್ಟ ಬಣ್ಣದ ತಾವರೆಯನ್ನೇ ಸೂಚಿಸುತ್ತಾರೆ. ಕೆಲವೊಮ್ಮೆ ಕೆಲವೊಂದು ಚಿಕಿತ್ಸೆಗೆ ಎಲ್ಲಾ ತಾವರೆಯನ್ನು ಬಳಸದೇ ಕೇವಲ ಬಿಳಿ ತಾವರೆಯನ್ನೇ ಬೆಳಸಬೇಕಾಗುತ್ತದೆ, ಅದೇ ರೀತಿ ಕೆಲವೊಂದಕ್ಕೆ ಕೆಂಪು ತಾವರೆಯನ್ನೇ ಬಳಸಬೇಕಾಗುತ್ತದೆ.ಈ ತಾವರೆ ಎಲೆಯನ್ನೇ ಹಾಸಿಗೆಯನ್ನಾಗಿ ಮಾಡಿ ಅದರಲ್ಲಿ ಜ್ವರ ಬಂದವರನ್ನು ಮಲಗಿಸಿದರೆ ಜ್ವರದ ತಾಪ ಕಡಿಮೆ ಆಗುವುದು.

ಬಿಳಿ ತಾವರೆಯ ದಳದ ಗುಲ್ಕನ್ ನಿಂದ ಹೃದಯ ಮತ್ತು ಮೆದುಳು ಬಲಗೊಳ್ಳುವುದು ಮತ್ತು ಉದರದೊಳಗಿನ ಗಾಯಕ್ಕೆ ಇದು ಉತ್ತಮ.ತಾವರೆಯ ಶರಬತ್ತು ಕೂಡ ಸಿಡುಬು ರೋಗಕ್ಕೆ ಪರಿಣಾಮಕಾರಿಯಂತೆ.ಕೆಂದಾವರೆಯನ್ನು ಅರೆದು ಮುಖಕ್ಕೆ ದಿನಾಲೂ ಹಚ್ಚುವುದರಿಂದ ಮುಖದ ಅಂದ ದಿನೆ ದಿನೇ  ಹೆಚ್ಚಾಗುವುದು.ತಾವರೆ ಒಂದು ರೀತಿಯಲ್ಲಿ ಸೌಂದರ್ಯ ವರ್ಧಕವೂ ಹೌದು. 

ನೈದಿಲೆಯ ಬೀಜಗಳು ಕಾಮ ಕಸ್ತೂರಿ ಇಲ್ಲವೇ ತುಳಸಿ ಬೀಜದ ಗಾತ್ರದಲ್ಲಿ ಇದ್ದರೆ,ತಾವರೆ ಬೀಜಗಳು ಅದಕ್ಕಿಂತ ದೊಡ್ಡ ಗಾತ್ರದಲ್ಲಿ ಅಂದರೆ ಹೆಬ್ಬಲಸಿನ ಬೀಜದ ಗಾತ್ರದಲ್ಲಿ ಕಪ್ಪು ಬಣ್ಣದಲ್ಲಿ ಇರುತ್ತದೆ.ನೈದಿಲೆಯ ಬೀಜಗುಚ್ಛ ಮುಚ್ಚಿದ ರೀತಿಯಲ್ಲಿ ಇದ್ದು ಅದರಲ್ಲಿ ಸಾವಿರಕ್ಕಿಂತಲೂ ಅಧಿಕ ಸಣ್ಣ ಸಣ್ಣ ಬೀಜ ಇರುತ್ತದೆ. ಆದರೆ ತಾವರೆಯ ಬೀಜಗುಚ್ಛ ಇಲ್ಲವೇ ಪಾಡ್  ಮುಕ್ತವಾಗಿ ಕಣ್ಣಿಗೆ ಕಾಣುವಂತೆ ಇದ್ದು,ಒಂದು ಪಾಡ್ ನಲ್ಲಿ ಹೆಚ್ಚು ಕಡಿಮೆ 15 ರಿಂದ 20 ದೊಡ್ಡ ಬೀಜಗಳು ಇರುತ್ತದೆ.

ನಿಮಗೊಂದು ವಿಷಯ ಗೊತ್ತೇ ತಾವರೆಯ ಬೀಜಗಳು ಬಹಳ ವರ್ಷಗಳವರೆಗೆ ಹಾಗೇ ಬಾಳಿ ಬದುಕಬಲ್ಲವು. ಚೀನಾದ ಒಂದು  ಸರೋವರಡಿಯಲ್ಲಿ ಸಿಕ್ಕಿದ್ದ ತಾವರೆಯ ಬೀಜ,ಸರಿ ಸುಮಾರು 2000 ವರ್ಷದಷ್ಟು ಹಳೆಯದಾಗಿತ್ತಂತೆ ಮತ್ತು ಇನ್ನೂ ಜೀವಂತವಾಗಿದ್ದು ಮೊಳಕೆಯೊಡುವ ಎಲ್ಲಾ ಸಾಮರ್ಥ್ಯವನ್ನು ಅದು ಪಡೆದಿದೆ. 

ನೈದಿಗಳು ಶುಂಠಿಯಂತೆ Rhizome ಗೆಡ್ಡೆಗಳಿಂದ ಬೆಳೆಯುತ್ತದೆ,ತಾವರೆಗಳು Tubers ಗಳನ್ನು ಉತ್ಪಾದಿಸುತ್ತದೆ  ಮತ್ತು ಅವುಗಳು ಹೆಚ್ಚಾಗಿ ಬೀಜಗಳಿಂದಲೇ ಸಂತಾನೋತ್ಪತಿ ಮಾಡಿಕೊಳ್ಳುತ್ತದೆ.

ನೈದಿಲೆ ಹೂವಿನ ದಳಗಳು ಸ್ವಲ್ಪ ಉದ್ದದ ಎಸಳುಗಳನ್ನು(Narrow)ಹೊಂದಿದ್ದರೆ,ತಾವರೆಯ ದಳಗಳು ಸ್ವಲ್ಪ ಅಗಲವಾಗಿ ಬಟ್ಟಲಿನಂತೆ ಇರುತ್ತದೆ ಮತ್ತು ಹೆಚ್ಚಾಗಿ ತಾವರೆ ಹೂವಿನ ಗಾತ್ರ ನೈದಿಲೆಗಿಂತ ದೊಡ್ಡದೇ ಇರುತ್ತದೆ. ನೈದಿಲೆ ದಳಗಳು ಸ್ವಲ್ಪ ದಪ್ಪವಾಗಿದ್ದರೆ ತಾವರೆಯ ದಳಗಳು ತೆಳುವಾಗಿರುತ್ತದೆ.ನೈದಿಲೆಯ ದಳಗಳಲ್ಲಿ ಸ್ವಲ್ಪ Oily ಇಲ್ಲವೇ ವ್ಯಾಕ್ಸ್ ನಂತಹ ಕೋಟಿಂಗ್ ಕಂಡು ಬಂದರೆ, ಪೇಪರ್ ನಂತಿರುವ ತಾವರೆಯ ದಳಗಳಲ್ಲಿ ಆ ರೀತಿ ಯಾವುದೂ ಕಂಡು ಬರುವುದಿಲ್ಲ. 

ನೈದಿಲೆ ಎರಡರಿಂದ 5 ft ಆಳವಿರುವ ನೀರಿನಲ್ಲಿ ಬೆಳದರೆ, ತಾವರೆ ಬೆಳೆಯಲು  ಕೇವಲ 1 ft ನೀರು ಇದ್ದರೂ ಸಾಕು. 
ನೈದಿಲೆ ಅರಳಿದಾಗ ಗಾಢವಾದ ಪರಿಮಳವಿದ್ದರೆ, ತಾವರೆ ಅಷ್ಟೇನು ಗಾಢವಲ್ಲದ ಮೈಲ್ಡ್ ಆದ  ಕಂಪನ್ನು ಹೊರಸೂಸುತ್ತದೆ. 


ತಾವರೆ ಸಂಪೂರ್ಣ ಬೆಳಕಲ್ಲಿ ಸೂರ್ಯನ ಅಡಿಯಲ್ಲಿಯೇ  ಅರಳುತ್ತದೆ, ನೈದಿಲೆ ಚಂದ್ರನ ಬೆಳಕಿನಲ್ಲಿ ಅಂದರೆ ರಾತ್ರಿ ಅರಳುತ್ತದೆ. ಬೆಳಿಗ್ಗೆ ಅರಳುವ ಸ್ಥಿತಿಯಲ್ಲಿ ಇದ್ದರೂ ಕೂಡ ಸೂರ್ಯನ ಕಿರಣಗಳು ಬಿದ್ದ ಕೂಡಲೇ ಅವುಗಳು ಮುದುಡಿ ಬಿಡುತ್ತದೆ. 

ಆದರೆ ನೈದಿಲೆಯಲ್ಲಿಯೂ ಕೂಡ ಅರಳುವ ಬಗೆಯಲ್ಲಿ ಎರಡು ವಿಧಗಳಿವೆ. ಕುಮುದಿನಿ ಮತ್ತು ಕುಮುದ್ ಅಂತ. ಕುಮುದಿನಿ ಪಿಂಕ್,ಬಿಳಿ ಮತ್ತು ಕೆಂಪು ಬಣ್ಣದಲ್ಲಿದ್ದು ಅದು ಹೆಚ್ಚಾಗಿ ರಾತ್ರಿಯಲ್ಲಿ ಮಾತ್ರ ಅರಳುವುದು. ಆದರೆ ಕುಮುದ್ ಹೆಚ್ಚಿನ ಎಲ್ಲಾ  ಬಣ್ಣಗಳಲ್ಲಿ ಇದ್ದು ಅದು ದಿನದಲ್ಲಿಯೂ ಸಹ ಅರಳಬಲ್ಲದು.ನೈದಿಲೆಗಳು ಹೆಚ್ಚಾಗಿ ಮಳೆಗಾಲದಿಂದ ಅಕ್ಟೋಬರ್ ನವೆಂಬರ್ ತಿಂಗಳವರೆಗೆ ಅರಳುತ್ತದೆ. 

ಮಾರ್ಕೆಟ್ ನಲ್ಲಿ ತಾವರೆ ಖರೀದಿಸುವಾಗ ಅದರ ದಳ ಹಾಗೂ ಎಲೆಯನ್ನು ಗುರುತು ಹಿಡಿದು ಯಾವುದು ನಿಜವಾದ ತಾವರೆ ಎಂದು  ಕಂಡುಕೊಳ್ಳಬಹುದು. ನೆನಪಿಟ್ಟುಕೊಳ್ಳಿ ಕೆಂಪು ಇರುವುದು ಎಲ್ಲವೂ ತಾವರೆಯಲ್ಲ.ನೈದಿಲೆಯೂ ಕೆಂಪು ಸಹಿತ ಹಲವು ಬಣ್ಣಗಳಲ್ಲಿ ಅರಳುತ್ತದೆ. 

ಇವೆರಡಕ್ಕೂ ದೊಡ್ಡ ದೊಡ್ಡ ಕೊಳವೇ ಬೇಕಿಲ್ಲ, ಈಗೆಲ್ಲಾ  ಮನೆಯಲ್ಲೂ ನೀರು,ಮಣ್ಣು,ಸ್ವಲ್ಪ ಮರಳು ಇದ್ದರೆ ತಾವರೆಯನ್ನಾಗಲಿ,ನೈದಿಲೆಯನ್ನಾಗಲಿ ದೊಡ್ಡ ಪಾಟುಗಳಲ್ಲಿಯೇ  ಮನೆಯ ಬಳಿಯೂ, ಮನೆಯ ಒಳಗೂ ಬೆಳೆದು ಹಾಗೇ  ನಳನಳಿಸಬಹುದು.

ಹೆಚ್ಚು ಕಡಿಮೆ ಐದು ಸಾವಿರ ವರ್ಷದಷ್ಟು ಇತಿಹಾಸವಿದೆ ಈ ನಮ್ಮ ತಾವರೆಗೆ ಎಂದು ಹೇಳುತ್ತಾರೆ.ಈ ತಾವರೆ ಪುಷ್ಪ ನಮ್ಮ ಹಿಂದುಗಳಿಗಂತು ಬಹಳ ಶ್ರೇಷ್ಟವಾದದ್ದು.ತಾವರೆಗೆ ದೇವಿ,ದೇವರ ಪೂಜೆಯಲ್ಲಿ ನಮ್ಮಲ್ಲಿ ಹೆಚ್ಚಿನ ಪ್ರಾಶಸ್ತ್ಯ ಉಂಟು. ಹಾಗಂತ ನೈದಿಲೆಯನ್ನು ದೇವರ ಪೂಜೆಗೆ ಉಪಯೋಗಿಸಬಾರದು ಅಂತ ಏನೂ ಇಲ್ಲ.ಅದನ್ನು ಕೂಡ ಬಳಸುತ್ತಾರೆ.ಆದರೆ ತಾವರೆ ದೇವರಿಗೂ ಅತೀ ಪ್ರೀಯವಾದದ್ದು.

ಹಿಂದುಗಳ ಪ್ರಮುಖ ಹದಿನೆಂಟು ಪುರಾಣದಲ್ಲಿ ತಾವರೆಯ ಹೆಸರಿನಲ್ಲಿಯೇ ಒಂದು ಪದ್ಮ ಪುರಾಣವೆಂಬ ಪುರಾಣವೂ ಇದೆ. ವಿಷ್ಣುವಿನ ನಾಲ್ಕು ಕೈಯಲ್ಲಿ ಒಂದು ಕೈಯಲ್ಲಿ ಅಂತು ಸದಾ ಪದ್ಮವೇ ಇರುವುದು.ವೀರ ಅಭಿಮನ್ಯು ಸೆಣಸಾಡಿದ ಮಹಾಭಾರತದ ಚಕ್ರವ್ಯೂಹದ ಮತ್ತೊಂದು ಹೆಸರೇ ಪದ್ಮವ್ಯೂಹ. 

ರುದ್ರಾಕ್ಷಿ ರೀತಿಯಲ್ಲಿ ಒಣ ತಾವರೆಯ ಬೀಜದಿಂದ ಮಾಡಿದ  ಸರ ಶಿವನಿಗೆ ಬಹಳ ಪ್ರೀಯವಂತೆ.ಕುತ್ತಿಗೆಯಲ್ಲಿ ಅದನ್ನು ದರಿಸಿದಲ್ಲಿ ಸಕಲ ಕಾರ್ಯ ಸಿದ್ಧಿ,ದುಷ್ಟ ಶಕ್ತಿ ನಿವಾರಣೆ, ಕೆಟ್ಟ ದೃಷ್ಟಿ ತಡೆಗಟ್ಟಲು ಇದು ಸಹಕಾರಿ ಎಂಬ ನಂಬಿಕೆಯೂ ಕೂಡ ಇದೆ. 

ಶ್ರೀಹರಿಯ ಪತ್ನಿ ಲಕ್ಷ್ಮಿ ದೇವಿಗಂತು ಪದ್ಮವೆಂದರೆ ತುಂಬಾನೇ ಇಷ್ಟ.ಅವಳು ಅದರಲ್ಲಿಯೇ ಕುಳಿತುಕೊಳ್ಳುವವಳು.ಅದೇ ಅವಳ ಆವಾಸವಂತೆ.ಪದ್ಮದ ಮೇಲೆ ಕುಳಿತುಕೊಂಡ ಅವಳ ಅಕ್ಕ ಪಕ್ಕ ಆನೆಗಳೆರಡು ಸೊಂಡಿಲು ಎತ್ತಿಕೊಂಡು ಅವಳಿಗೆ ವಂದಿಸುವ ಫೋಟೋವೇ ಹೆಚ್ಚಿನವರ ಮನೆಯಲ್ಲಿ ಇರುವುದು.

ಮಹಾ ವಿಷ್ಣುವಂತು ಪದ್ಮನಾಭ, ಕಮಲನಾಭನೆಂದೇ ಹೆಸರು ಪಡೆದವನು.ಬ್ರಹ್ಮ ಕೂಡ ಸಾವಿರ ಸ್ವರ್ಣ ದಳಗಳ ಕಮಲದ ಮೇಲೆ ಸದಾ ಆಸೀನನಾಗಿದ್ದುಕೊಂಡು ಜಗತ್ತಿನ ಸೃಷ್ಟಿ ಕಾರ್ಯಮಾಡುವ ಕಮಲಭವ ಆಗಿರುವನು.ಮನ್ಮಥನ ಐದು ಬಾಣಗಳಲ್ಲಿ ಒಂದು ಬಾಣ ಪದ್ಮ ಬಾಣವಂತೆ.ಇನ್ನು ಹಬ್ಬಗಳ ವಿಷಯಕ್ಕೆ ಬಂದರೆ ವರ ಮಹಾಲಕ್ಷ್ಮಿ ಹಾಗೂ ಗೌರಿಪೂಜೆಯ ದಿನ ತಾವರೆಯ ಹೂಗಳಿಗೆ ನಮ್ಮಲ್ಲಿ ಭಯಂಕರ ಡಿಮ್ಯಾಂಡು. ಕೆಲವೊಂದು ದೇವಸ್ಥಾನದಲ್ಲಿ ಬಾಳೆ ಎಲೆ, ಮುತ್ತುಗದ ಎಲೆಯನ್ನು ಊಟ ಮಾಡಲು ಬಳಸುವಂತೆ ತಾವರೆ ಎಲೆಯಲ್ಲಿ ಭೋಜನ ಕೂಡ ಮಾಡುತ್ತಾರೆ. 

ಜೈನ ಹಾಗೂ ಬೌದ್ಧ ಧರ್ಮಿಯರಿಗೂ ತಾವರೆ ಬಹಳ ಶ್ರೇಷ್ಟವಾದದ್ದು. ಭಾರತದಂತೆ ಚೀನಾ,ಈಜಿಪ್ಟ್ ಹಾಗೂ ನೈಜೀರಿಯಾದಂತಹ ದೇಶಗಳ ಸಂಸ್ಕೃತಿ ಹಾಗೂ ಕಥೆಗಳಲ್ಲಿ ತಾವರೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ.ನಮ್ಮ ದೇವಳಗಳಲ್ಲಿ ಹೆಚ್ಚಾಗಿ ಕಮಲದ ಹೂವಿನ ಕೆತ್ತನೆ ಇದ್ದೇ ಇರುತ್ತದೆ. ಪುರಾತತ್ವ ಇಲಾಖೆಯವರು ಉತ್ಖನನ ಮಾಡಿದಾಗಲೂ ಕೂಡ ನಮಗೆ ಹಲವಾರು ಕೆತ್ತನೆಗಳಲ್ಲಿ ಕಮಲದ ಶಿಲ್ಪಕಲೆಯು  ದೊರೆತಿದೆ. ಸಿಂಧೂಕಣಿವೆಯ ಮೆಹೆಂಜೋದಾರೋ ನಲ್ಲಿ ದೊರೆತ ಕ್ರಿ.ಪೂ ಮೂರನೇ ಶತಮಾನದ ಕಲಾಕೃತಿಯಲ್ಲೂ ಕೂಡ  ಕಮಲದ ಕೆತ್ತನೆಗಳು ಇತ್ತು. 

ತಾವರೆ ಫಲವಂತಿಕೆಯ ಸಂಕೇತ, ಸ್ತ್ರೀಯ ಸಂಕೇತ...ಸೌಂದರ್ಯದ ಸಂಕೇತ.. ಅದರೊಟ್ಟಿಗೆ ಕೆಸರಿನಲ್ಲಿ ಅರಳಿದರೂ ಕೂಡ ತಾವರೆ ಎಂದಿಗೂ ಪಾವಿತ್ರ್ಯತೆಯ, ದಿವ್ಯತೆಯ ಸಂಕೇತವೇ ಆಗಿದೆ. ಒಂದು ಅರಳಿದ ತಾವರೆ ನೋಡಿದರೆ ಮನಸ್ಸು ಅದೆಷ್ಟೋ ಪ್ರಪುಲ್ಲವಾಗುವುದು.ಇಡೀ ಕೊಳದ ತುಂಬೆಲ್ಲಾ ಅರಳಿದ ತಾವರೆ ಕಂಡರೆ ಇಡೀ ದಿನ ತನು ಮನಕ್ಕೆ ಅದೆನೋ ಉಲ್ಲಾಸ. 

ಸುಂದರ ಕಣ್ಣುಳ್ಳವನಿಗೆ ಕಮಲ ನಯನ ಎಂದೇ ಕರೆಯುತ್ತಾರೆ.ಅಂದದ ಮೊಗದವಳಿಗೆ ಕಮಲ ವದನೆ ಎಂದು ಹೇಳುತ್ತಾರೆ. ಆವೋದ,ಕಮಲ,ತಾವರೆ, ನಳಿನ, ಸರೋಜ, ಕುಮುದ, ಪಂಕಜ, ಪದ್ಮಜ, ತಾಮರೆ.. ಇವೆಲ್ಲವು ತಾವರೆಗೆ ಸಂಬಂಧಿಸಿದ ಇಲ್ಲವೇ ತಾವರೆಯಿಂದ ಹುಟ್ಟಿದ ಹೆಸರುಗಳೇ.

ಬಿಳಿಯ ಮಲ್ಲಿಗೆ,ಪ್ರೀತಿಯ ಗುಲಾಬಿ,ಕೆಂಡಸಂಪಿಗೆ ಇದ್ದರೂ.....ನಮ್ಮ ಕವಿಗಳಿಗಂತು ತಮ್ಮ ಸಾಹಿತ್ಯದಲ್ಲಿ ವರ್ಣನೆಗೆ ತಾವರೆ ಕೂಡ ಬಹಳನೇ  ಪ್ರಿಯವಾದದ್ದು.ತಾವರೆಯನ್ನೇ ಬಳಸಿದ ಅದೆಷ್ಟೋ ಹಾಡಿನ ಸಾಲುಗಳು ನಮ್ಮಲ್ಲಿ ಇದೆ.

ಒಂದು ಭಾವಗೀತೆ ಇದೆ. ನನಗದು ಬಹಳ ಇಷ್ಟ. ಆವಾಗವಾಗ ಕೇಳುತ್ತಲೇ ಇರುತ್ತೇನೆ.ಸಿ.ಅಶ್ವತ್ಥ್ ಅವರು ಸುಮಧುರವಾಗಿ ಹಾಡಿದ ಕೆ.ಎಸ್ ನರಸಿಂಹ ಸ್ವಾಮಿ ಅವರು ರಚಿಸಿದ ಈ  ಸಾಲುಗಳಲ್ಲಿ ಕೆಂದಾವರೆ ಅದೆಷ್ಟು ಚಂದ ನೋಡಿ.. "ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು... "

ದೊಡ್ಡ ರಂಗೇಗೌಡರು ಮುದುಡಿದ ತಾವರೆ ಅರಳಿತು(1983)ಚಲನ ಚಿತ್ರದಲ್ಲಿ "ಅರಳಿದೆ.. ಅರಳಿದೆ.. ಮುದುಡಿದ ತಾವರೆ ಅರಳಿದೆ" ಎಂಬ ಸಾಲು ಬರೆದಿದ್ದಾರೆ.ಅದನ್ನು ಜಾನಕಿಯವರು ತಾವರೆ ಅರಳುವಂತೆಯೇ ಸೊಗಸಾಗಿ ಹಾಡಿದ್ದಾರೆ.

ಹೊಸ ಇತಿಹಾಸ(1984) ಎಂಬ ಚಿತ್ರದಲ್ಲಿ ಚಿ. ಉದಯಶಂಕರ್ ಅವರು ಈ ಒಂದು  ಹಾಡಿನ ಮೊದಲ ಸಾಲುಗಳನ್ನು ಬರೀ ತಾವರೆಯಿಂದಲೇ ಹೇಗೆ ಸಿಂಗರಿಸಿದ್ದಾರೆ ನೋಡಿ.. ವರ ಮಹಾಲಕ್ಷ್ಮಿಗಾಗಿಯೇ ಅದನ್ನು ಬರೆದಿದ್ದು ಅಂತೆ. 

" ಕಮಲದ ಮೊಗದೊಳೆ ಕಮಲದ ಕಣ್ಣೋಳೆ
  ಕಮಲವ ಕೈಯಲ್ಲಿ ಹಿಡಿದೊಳೆ..
  ಕಮಲದ ಮೊಗದೊಳೆ ಕಮಲದ ಕಣ್ಣೋಳೆ
  ಕಮಲವ ಕೈಯಲ್ಲಿ ಹಿಡಿದೊಳೆ..
  ಕಮಲನಾಭನ ಹೃದಯ ಕಮಲದಲಿ ನಿಂತೋಳೆ
  ಕಮಲಿ ನೀ ಕರಮುಗಿವೆ ಬಾ ಮಾ..
  ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ... "

ಕೇವಲ ತಾವರೆ ಮಾತ್ರವಲ್ಲ ನಮ್ಮ ನೈದಿಲೆ ಕೂಡ ಕವಿಗಳಿಗೆ ಪ್ರಿಯವಾದದ್ದೇ. ವಿಜಯವಾಣಿ (1976) ಚಲನಚಿತ್ರದಲ್ಲಿ ಬಹಳನೇ ಸೊಗಸಾದ ಒಂದು ಹಾಡಿದೆ.ಅದರಲ್ಲಿಯೂ ನೈದಿಲೆ ಇದೆ.ಅದುವೇ " ಮಧುಮಾಸ ಚಂದ್ರಮ,ನೈದಿಲೆಗೆ ಸಂಭ್ರಮ.ಒಲವಿನಾ ಲೋಕಕೆ ನೀ ತಂದೆ ಪೌರ್ಣಿಮಾ.. " ಆರ್. ಎನ್ ಜಯಗೋಪಾಲ್ ಅವರ ಸಾಹಿತ್ಯಕ್ಕೆ ಎಸ್. ಜಾನಕಿ ಮತ್ತು ವಾಣಿ ಜಯರಾಂ ಅವರು ಅತ್ಯಧ್ಭುತವಾಗಿ ಹಾಡಿದ್ದಾರೆ. ಕೇಳದಿದ್ದರೆ ಒಮ್ಮೆ ಕೇಳಿಬಿಡಿ.ನಿಮಗೂ ಅದು ಖಂಡಿತಾ ಇಷ್ಟವಾಗುತ್ತದೆ. 

ಬಸವಣ್ಣನವರು ಕೂಡ ತಮ್ಮದೊಂದು ವಚನದಲ್ಲಿ ನೈದಿಲೆಯನ್ನು ಬಳಸಿಕೊಂಡಿದ್ದಾರೆ.ವಚನದ ಮೊದಲ ಸಾಲಿನಲ್ಲಿಯೇ ನೈದಿಲೆ ಇಲ್ಲಿ ಶೃಂಗಾರಗೊಂಡಿದ್ದಾಳೆ...

" ನೀರಿಗೆ ನೈದಿಲೆ ಶೃಂಗಾರ, ಸಮುದ್ರಕೆ ತೆರೆಯೆ ಶೃಂಗಾರ,
 ನಾರಿಗೆ ಗುಣವೆ ಶೃಂಗಾರ, ಗಗನಕೆ ಚಂದ್ರಮ ಶೃಂಗಾರ
ನಮ್ಮ ಕೂಡಲ ಸಂಗನ ಶರಣರ ನೊಸಲಿಗೆ ವಿಭೂತಿಯ ಶೃಂಗಾರ.. " ಇದು ಬಸವಣ್ಣನವರ ಆ ವಚನ. 

"ನವಿಲೂರ ನೈದಿಲೆ" "ಪದ್ಮವ್ಯೂಹ" ಎಂಬ ಮೂವಿಗಳು ಕೂಡ  ಬಂದಿದೆ."ಬಿರಿದ ನೈದಿಲೆ.." ಎಂಬ ಸಾಯಿಸುತೆಯವರ ಪುಸ್ತಕ ಕೂಡ ಇದೆ. ಹೀಗೆ ತಾವರೆ ಹಾಗೂ ನೈದಿಲೆಗಳು ಕನ್ನಡ ಚಲನಚಿತ್ರಗಳಲ್ಲಿ, ಸಾಹಿತ್ಯದಲ್ಲಿ  ಸಾಕಷ್ಟು ಬಂದು ಹೋಗಿವೆ.ದೇವರ ನಾಮಗಳಲ್ಲಿ ಅಂತು ಬೇಕಾದಷ್ಟು ಇವುಗಳನ್ನು ಬಳಸಿಕೊಳ್ಳಲಾಗಿದೆ.

ಪುರಂದರ ದಾಸರ.. " ಕಾಗದ ಬಂದಿದೆ ನಮ್ಮ ಕಮಲನಾಭನದು,ಈ ಕಾಗದವನ್ನು ಓದಿಕೊಂಡು ಕಾಲವ ಕಳೆಯಿರೊ.. "

ಅದೇ ರೀತಿ ಕನಕದಾಸರ.." ಕುಲ ಕುಲ ಕುಲವೆನ್ನುತಿಹರು, 
ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ,ಕೆಸರೊಳು ತಾವರೆ  ಪುಟ್ಟಲು,ಅದ ತಂದು ಬಿಸಜನಾಭನಿಗರ್ಪಿಸಲಿಲ್ಲವೆ,ಹಸುವಿನ ಮಾಂಸದೊಳುತ್ಪತ್ತಿ ಕ್ಷೀರವು ವಸುಧೆಯೊಳಗೆ ಭೂಸುರರುಣ್ಣಲಿಲ್ಲವೆ.."...

ಹೀಗೆ ಎಲ್ಲಾ ಕಡೆಯೂ ಇವುಗಳ ಮೂಲಕವೇ ವರ್ಣನೆಯನ್ನು ಮಾಡಲಾಗಿದೆ.ಮಂತ್ರಗಳಲ್ಲಿ,ಸೂಕ್ತಗಳಲ್ಲಿ,ಶ್ಲೋಕಗಳಲ್ಲಿ ಅಂತು ಪದ್ಮ ಅಲ್ಲಲ್ಲಿ ಇದೆ.ವಿಷ್ಣು ಸಹಸ್ರನಾಮದಲ್ಲಿ ಭಗವಂತನನ್ನು ಪದ್ಮನಿಭೇಕ್ಷಣಾಯ,ಪದ್ಮಿನೇ,ಪದ್ಮನಾಭಾಯ,ಪದ್ಮಗರ್ಭಾಯ ಎಂದು ಅರ್ಚಿಸಲಾಗಿದೆ.ಲಲಿತ ಸಹಸ್ರನಾಮದಲ್ಲೂ  ಪದ್ಮನಯನಾ,ಪದ್ಮಾಸನಾ,ಪದ್ಮನಾಭ ಸಹೋದರಿ.. ಎಂದೆಲ್ಲ  ದೇವಿ ಲಲಿತೆಯನ್ನು ಕರೆಯಲಾಗಿದೆ.ಹೀಗೆ ತಾವರೆ ಎಲ್ಲಾ ಕಡೆಯೂ ಕಮಲ ಇಲ್ಲವೇ ಪದ್ಮಳಾಗಿ ಆವರಿಸಿಕೊಂಡಿದ್ದಾಳೆ. 

ಕಣ್ಣು ಮತ್ತು ಮನಸ್ಸನ್ನು ತಣಿಸುವ ಈ ನೈದಿಲೆ ಮತ್ತು ತಾವರೆಗೆ ಪರಸ್ಪರ ವ್ಯತ್ಯಾಸಗಳು ಹಲವು ಇದ್ದರೂ ಕೂಡ,ಕೆಸರಿನಲ್ಲಿ ಅರಳಿ ನಲಿಯುವ ಈ ಪುಟ್ಟ ತಾವರೆಯಿಂದಾಗಲಿ ಇಲ್ಲವೇ  ನೈದಿಲೆಯಿಂದಾಗಲಿ ಮನುಷ್ಯ ಎಂಬ ದೊಡ್ಡ ಜೀವಿ ಕೂಡ  ಕಲಿಯುವಂತಹದ್ದು ಬಹಳಷ್ಟು ಇದೆ..

ಕೆಸರಿನಲ್ಲಿ ಹುಟ್ಟಿದರೂ ದೇವರ ಪಾದ ಸೇರುವ ದಿವ್ಯ ಹೂಗಳು ಅವು...ನಾವು ಕೂಡ ಎಲ್ಲೇ ಇದ್ದರೂ,ಯಾವುದೇ ಸ್ಥಿತಿಯಲ್ಲಿ ಇದ್ದರೂ, ಕಷ್ಟಪಟ್ಟು ನಮ್ಮ ಜೀವನವನ್ನು ಸುಂದರವನ್ನಾಗಿಸಿಕೊಂಡರೆ.. ನೈದಿಲೆಯಂತೆಯ ಚಂದಿರನ ಬೆಳಕಲ್ಲೂ ಅರಳಬಹುದು,ತಾವರೆಯಂತೆ ಸೂರ್ಯನ ಪ್ರಖರ ಬೆಳಕಲ್ಲೂ ಕೂಡ ಹಾಗೇ ನಳನಳಿಸಬಹುದು.ಏನಂತೀರಿ. 

ಅಂದ ಹಾಗೆ.. ಮುಂದಿನ ಬಾರಿ ಕೆಂದಾವರೆ ಇಲ್ಲವೇ ಕೆನ್ನೈದಿಲೆ ನಿಮ್ಮ ಕಣ್ಣಿಗೆ ಬಿದ್ದಾಗ ಎರಡರಲ್ಲೂ ಸ್ಪಷ್ಟವಾದ ವ್ಯತ್ಯಾಸ ಗುರುತಿಸಲು ನಿಮಗೆ ಖಂಡಿತವಾಗಿಯೂ ಯಾವುದೇ ಗೊಂದಲವಿರುವುದಿಲ್ಲ ಅಲ್ಲವೇ... 😊🙏


.....................................................................................

#ಏನೋ_ಒಂದು...

ab pacchu
moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ