ಪರಮ ಪವಿತ್ರಳು
ನಿವೇದಿತಾ ನೋಡಲು ಬಹಳ ಚಂದದ ಹುಡುಗಿ,ಆದರೆ ಅವಳ ಬಾಳು ಅವಳಷ್ಟು ಚಂದ ಅಲ್ಲವೇ ಅಲ್ಲ..!
ಅನಾಥೆಯಾಗಿ ಬೆಳೆದ ಅವಳನ್ನು ಅನಾಥಾಶ್ರಮವೇ ಕೈ ಹಿಡಿದು ಬೆಳೆಸಿದ್ದು,ಮುನ್ನಡೆಸಿದ್ದು.
ಓದುವುದಕ್ಕಿಂತ ಹೆಚ್ಚಿನ ಆಸಕ್ತಿ ಇದ್ದದ್ದು ನೃತ್ಯದಲ್ಲಿ,ಹಾಗಾಗಿ ಡಿಗ್ರಿಯನ್ನು ಅರ್ಧಕ್ಕೆ ನಿಲ್ಲಿಸಿಬಿಟ್ಟಳು.
ಚೆನ್ನಾಗಿ ನೃತ್ಯ ಮಾಡುತ್ತಿದ್ದ ಅವಳು ಹಲವಾರು ಡಾನ್ಸ್ ತಂಡಗಳಲ್ಲಿ ಸೇರಿಕೊಂಡು ಹೊಟ್ಟೆ ಪಾಡಿಗಾಗಿ ಇದೇ ತನ್ನ ಉದ್ಯೋಗ ಎಂದು ನಿರ್ಧರಿಸಿದ ಮೇಲೆ ಅನಾಥಾಶ್ರಮ ಕೂಡ ಹೇಳಿತು.. ನಿವೇದಿತಾ ಇನ್ನು ನಿನ್ನ ದಾರಿ ನೀನೇ ನೋಡ್ಕೋಬೇಕಮ್ಮ.. ಎಂದು.
ನಿವೇದಿತಾ ಅನಾಥಾಶ್ರಮ ಕೂಡ ಬಿಟ್ಟಳು.ನಗರದಲ್ಲಿ ಒಂದು ಪುಟ್ಟ ರೂಮ್ ಬಾಡಿಗೆ ಹಿಡಿದಳು.ಅವಳಿಷ್ಟದ ಡಾನ್ಸ್ ಎಂದಿನಂತೆ ಮುಂದುವರಿದಿತ್ತು.
ಆ ನಂತರ ಸಿನಿಮಾದಲ್ಲಿ ಗ್ರೂಪ್ ಡಾನ್ಸ್ ಮಾಡುವ ತಂಡದಲ್ಲಿ ಕೂಡ ಅವಕಾಶ ಸಿಕ್ಕಿ,ಹೀರೋ,ಹೀರೋಯಿನ್ ಗಳ ಹಿಂದೆ ಅವಳಷ್ಟಕ್ಕೆ ಕುಣಿದಳು ನಿವೇದಿತಾ.
ಹೂವಿನ ಪರಿಮಳ ಬಚ್ಚಿಡಲು ಸಾಧ್ಯವೇ... ಅದೇ ರೀತಿ ಗ್ರೂಪ್ ಡಾನ್ಸ್ ನಲ್ಲಿ ತನ್ನಷ್ಟಕ್ಕೆ ಡಾನ್ಸ್ ಮಾಡುತ್ತಿದ್ದ ನಿವೇದಿತಾಳ ಸೌಂದರ್ಯ ನಿರ್ದೇಶಕನೊಬ್ಬನನ್ನು ಬಹುವಾಗಿ ಆಕರ್ಷಿಸಿ ಬಿಟ್ಟಿತು.
ಮರುದಿನವೇ... ಅವಳ ಮುಂದೆ ಸಿನಿಮಾ ನಾಯಕಿಯ ಆಫರ್ ಬಂದು ನಿಂತಿತ್ತು.
ದೊಡ್ಡ ಹೀರೋ.. ದೊಡ್ಡ ನಿರ್ದೇಶಕ.. ದೊಡ್ಡ ಬ್ಯಾನರ್ ನ ಬಿಗ್ ಬಜೆಟ್ ಮೂವಿ... ಯಾರೇ ಆಗಲಿ ಹೇಗೆ ಬೇಡ ಎಂದು ಹೇಳಬಲ್ಲರು.
ಆದರೆ ನಿವೇದಿತಾ ನನ್ನಿಂದ ಇದೆಲ್ಲ ಆಗದು ಎಂದೇ ಸ್ಪಷ್ಟವಾಗಿಯೇ ಹೇಳಿದ್ದಳು. ಕೊನೆಗೆ ಅವಳ ಸಹ ನೃತ್ಯಗಾರ್ತಿಯರೇ ಅವಳ ಭಾಗ್ಯದ ಬಾಗಿಲು ತೆರೆದಿರುವುದನ್ನು ಸವಿವರವಾಗಿ ತಿಳಿಸಿ,ಅವಳನ್ನು ಸಿನಿಮಾದಲ್ಲಿ ನಟಿಸುವಂತೆ ಮಾಡಿದರು.
ಈ ರೀತಿಯಾಗಿ ಅನಾಥೆ ಆಗಿದ್ದ ನಿವೇದಿತಾ ಕೇವಲ ಸಿನಿಮಾ ನಟಿ ಅಲ್ಲ... ಸಿನಿಮಾದಲ್ಲಿ ನಾಯಕಿಯೇ ಆಗಿ ಬಿಟ್ಟಳು.
ನಿವೇದಿತಾ ನಾಯಕಿಯಾಗಿ ನಟಿಸಿದ ಆ ಮೂವಿ ನೂರು ದಿನಕ್ಕೂ ಹೆಚ್ಚು ಯಶಸ್ವಿಯಾಗಿ ಓಡಿ ಬಿಟ್ಟಿತು.
ಜನರು ಈ ಬಾರಿ ನಾಯಕನಿಗಾಗಿ ಥಿಯೇಟರ್ ಗಾಗಿ ಬರಲಿಲ್ಲ... ನಿವೇದಿತಾಳಿಗಾಗಿ ಬಂದರು.
ಅವಳ ಚೆಲುವಿಗೆ ಜನರು ಮರುಳಾಗಿ ಹೋಗಿದ್ದರು.
ಆ ನಂತರ ನಿವೇದಿತಾ ಮುಟ್ಟಿದ್ದೆಲ್ಲಾ ಚಿನ್ನ..
ಸಾಲು ಸಾಲು ಮೂವಿಗಳು ಅವಳ ಕಾಲಬುಡಕ್ಕೆ ಬಂದು ಬಿದ್ದವು.ಅವಳ ಕಾಲ್ ಶೀಟ್ ಗಾಗಿ ನಿರ್ದೇಶಕರು, ನಿರ್ಮಾಪಕರು ಅವಳ ಅರಮನೆಯಂತಹ ಬಂಗಲೆ ಮುಂದೆ ಕ್ಯೂ ನಿಲ್ಲುವಂತಾಯಿತು.
ಹೌದು ಅವಳ ಬಳಿ ಈಗ ಕಾರು,ಬಂಗಲೆ, ಕೆಲಸದವರು..ಎಲ್ಲವೂ ಇತ್ತು.
ಕೇವಲ ಒಂದು ಇರಲಿಲ್ಲ...
ಅದುವೇ ಪ್ರೀತಿ!
ಅಂತಹ ಸುಂದರಿಯನ್ನು ಪ್ರಿತಿಸುವವರಿಗಿಂತಲೂ.. ಬಳಸಿಕೊಳ್ಳುವವರೇ ಸುತ್ತಾ ಮುತ್ತ ಅಧಿಕವಾಗಿ ಇದ್ದರು!!
ಹಾಗಾಗಿ ಎಲ್ಲದರಿಂದಲೂ,ಎಲ್ಲರಿಂದಲೂ ಬಹಳ ದೂರನೇ ಉಳಿದು ಬಿಟ್ಟಳು... ನಿವೇದಿತಾ.ಆದರೆ ಚಿತ್ರರಂಗದಲ್ಲಿ ಅವಳದ್ದೊಂದು ಓಟ ಎಂದಿಗೂ ನಿಲ್ಲಲೇ ಇಲ್ಲ.
ಬಹಳ ಚಿಕ್ಕ ವಯಸ್ಸು ಅವಳದ್ದು... ಆದರೆ ವರ್ಚಸ್ಸು ಅದಾಗಲೇ ದೇಶದ ಮೂಲೆ ಮೂಲೆಗೆ ತಲುಪಿ ಬಿಟ್ಟಿತು.
ರಾಜಕೀಯ ಅವಳಿಗೆ ಇಷ್ಟವಿರಲಿಲ್ಲ. ಆದರೆ ರಾಜಕೀಯ ಪಕ್ಷದ ಪ್ರಚಾರಕ್ಕೆ ಅವಳೇ ಬೇಕಾಗಿತ್ತು.
ಒತ್ತಾಯ ಹೆಚ್ಚಾದಾಗ ಕೊನೆಗೂ ಒಲ್ಲದ ಮನಸ್ಸಿನಿಂದ ನಿವೇದಿತಾ ರಾಜಕೀಯ ಪಕ್ಷದ ಧ್ವಜ ಹಿಡಿದುಕೊಂಡು ಪ್ರಚಾರ ಕೂಡ ಮಾಡಿದಳು.
ಅಷ್ಟೇ...
ಅದರ ಮುಂದಿನ ಲೋಕಸಭೆ ಚುನಾವಣೆಗೆ... ಪಕ್ಷದ ಅಭ್ಯರ್ಥಿ ಅವಳೇ ಎಂದು ಪಕ್ಷದ ಹೈಕಮಾಂಡ್ ನಿರ್ಧರಿಸಿ ಬಿಟ್ಟಿತು.
ನಿವೇದಿತಾ ಬೇಡ ಎಂದಳು... ಆದರೆ ರಾಜಕೀಯ ನಾಯಕರು ಅವಳನ್ನು ಬಿಡಲಿಲ್ಲ.. ನಿಮಗಿರುವ ಪ್ರಸಿದ್ಧಿ ಹಾಗೂ ಗ್ಲ್ಯಾಮರ್ ನಮ್ಮ ಪಕ್ಷಕ್ಕೆ ತುಂಬಾ ಸಹಾಯ ಮಾಡಬಲ್ಲದು.. ಅಷ್ಟು ಮಾತ್ರವಲ್ಲ ನಿಮ್ಮಂತಹ ಯುವ ನಾಯಕರು ಈ ದೇಶಕ್ಕೆ ಬೇಕು... ಸಿನಿಮಾವನ್ನೇ ಅಂತ ಎಷ್ಟು ದಿನ ಮಾಡಲು ಸಾಧ್ಯ ಹೇಳಿ...ವಯಸ್ಸು ಇರುವವರೆಗೆ ಮಾಡಬಹುದು ಅಷ್ಟೇ.. ನಿಮಗೆ ಭವಿಷ್ಯ ಇದೆ, ಯಾರಿಗೂ ಇದು ಇಷ್ಟು ಸುಲಭವಾಗಿ ದಕ್ಕುವುದಿಲ್ಲ...ಕೇವಲ ಒಂದು ಟಿಕೆಟ್ ಗಾಗಿ ಎಂತೆಂತಹ ಕಸರತ್ತು ಮಾಡುವ ಈ ಕಾಲದಲ್ಲಿ ಅದೃಷ್ಟ ಲಕ್ಷೀ ನಿಮ್ಮನ್ನೇ ಹುಡುಕಿಕೊಂಡು ಮನೆ ಬಾಗಿಲಿಗೆಯೇ ಬಂದಿದ್ದಾಳೆ ಎಂದರೆ ಅವಳನ್ನು ತಿರಸ್ಕರಿಸಬೇಡಿ.. ಅಂದರು.
ಕೊನೆಗೆ ಅವರೆಲ್ಲರ ನಿರಂತರ ಒತ್ತಾಯ ಹಾಗೂ ಕೇಂದ್ರದ ನಾಯಕರೇ ನೇರವಾಗಿ ಬಂದು ಅವಳಲ್ಲಿ ಮಾಡಿದ ಮನವಿಯನ್ನು ತಿರಸ್ಕರಿಸಲಾಗದೇ ರಾಜಕೀಯವನ್ನು ಕೂಡ ಒಪ್ಪಿಕೊಂಡು ಬಿಟ್ಟಳು ನಿವೇದಿತಾ.
ಚುನಾವಣೆಯೂ ನಡೆಯಿತು. ನಿವೇದಿತಾ ಬರೀ ಗೆಲ್ಲಲಿಲ್ಲ... ಅತೀ ದೊಡ್ಡ ಬಹುಮತದಿಂದ ಗೆದ್ದು ಜಯಭೇರಿ ಬಾರಿಸಿದ್ದಳು.
ಅಷ್ಟು ಮಾತ್ರವಲ್ಲ ಅವಳಿಗೆ ಮಂತ್ರಿ ಪದವಿಯೂ ಕೂಡ ಅನಾಯಾಸವಾಗಿ ಸಿಕ್ಕಿ ಬಿಟ್ಟಿತ್ತು.
ಅವಳೀಗ ರಾಜ್ಯ ನಾಯಕಿ ಅಲ್ಲ.. ಕೇಂದ್ರ ನಾಯಕಿಯಾಗಿ ಬೆಳೆದು ನಿಂತಿದ್ದಳು.
ಅಲ್ಲಿಯವರೆಗೆ ಎಲ್ಲವೂ ಸರಿಯಿತ್ತು..
ಆದರೆ ಅಧಿಕಾರ ಕೈಗೆ ಬಂದ ನಂತರ ಅದನ್ನು ಬಳಸಲು ಹಿಂದೆ ಮುಂದೆ ನೋಡಲಿಲ್ಲ ನಿವೇದಿತಾ... ಆದರೆ ಕೇವಲ ಒಳ್ಳೆಯ ಕೆಲಸಕ್ಕೆಯೇ ತನ್ನ ಅಧಿಕಾರವನ್ನು ಬಳಸಿಕೊಂಡಳು,ಮತ್ತು ತನ್ನ ಜವಾಬ್ದಾರಿಯುತ ಕೆಲಸ ಹಾಗೂ ನಡವಳಿಕೆಯಿಂದಲೇ ನಿವೇದಿತಾ ದೇಶಾದ್ಯಂತ ಗುರುತಿಸಿಕೊಂಡಳು.
ಆದರೆ ಸ್ವಂತ ಪಕ್ಷದಲ್ಲಿಯೇ... ನಿಧಾನವಾಗಿ ಅವಳಿಗೆ ವಿರೋಧಿಗಳು ಹುಟ್ಟಿಕೊಂಡರು!
ಯಾರೂ ಏನೇ ಮಾಡಿದರೂ ಅವಳನ್ನು ಪಕ್ಷದಿಂದ ಕೆಳಕ್ಕಿಳಿಸುವ ಧೈರ್ಯ ಹೈಕಮಾಂಡ್ ಗೂ ಇರಲಿಲ್ಲ.ಅವಳು ಅದಾಗಲೇ ಹೈಕಮಾಂಡ್ ಮೀರಿ ಬೆಳೆದಾಗಿತ್ತು.
ಸತತ ಮೂರು ಬಾರಿ ಗೆದ್ದು ದೇಶದ ರಾಜಧಾನಿಗೆ ಲಗ್ಗೆ ಹಾಕಿದ್ದ ನಿವೇದಿತಾ ಈಗ ದೇಶದಲ್ಲಿ ಮಾತ್ರವಲ್ಲ ದೇಶ ವಿದೇಶದಲ್ಲೂ ಕೂಡ ತನ್ನ ವರ್ಚಸ್ಸಿನಿಂದಲೇ ಗುರುತಿಸಿಕೊಂಡು ಬಿಟ್ಟಳು.
ಇವಳನ್ನು ಈ ರೀತಿ ಬೆಳೆಯಲು ಬಿಟ್ಟರೆ ಮುಂದೊಂದು ದಿನ ಇಡೀ ದೇಶವೇ ದೇಶದ ಚುಕ್ಕಾಣಿಯನ್ನು ಕೂಡ ಇವಳೇ ಹಿಡಿಯಬೇಕು ಎಂದು ಕೇಳುವಂತಾಗುತ್ತದೆ ಎಂದು ಅರಿತ ಆಳುವ ಪಕ್ಷದ ಹೈಕಮಾಂಡ್,ಸದ್ದಿಲ್ಲದೇ ಅವಳನ್ನು ದೇಶದ ಬಹು ದೊಡ್ಡ ಹಗರಣವೊಂದರಲ್ಲಿ ಸಿಕ್ಕಿಸಿಯೇ ಬಿಟ್ಟಿತು. ಅದರದ್ದೊಂದು ಸಣ್ಣ ಸುಳಿವು ಕೂಡ ಅವಳಿಗೆ ಇರಲಿಲ್ಲ.
ಕೋರ್ಟ್ ನಲ್ಲಿ ಕೇಸ್ ಕೂಡ ನಡೆಯಿತು.
ಜನ ನಿವೇದಿತಾಗೆ ಏನೂ ಆಗಲಾರದು ಏಕೆಂದರೆ ಅವಳು ಖಂಡಿತವಾಗಿಯೂ ತಪ್ಪು ಮಾಡಿರಲಿಕ್ಕಿಲ್ಲ ಎಂದೇ ನಂಬಿದ್ದರು..
ಆದರೆ ಹಾಗೇ ಏನೂ ಆಗಲಿಲ್ಲ... ಎಲ್ಲಾ ದಿಕ್ಕಿನಿಂದಲೂ ಅವಳೇ ಅಪರಾಧಿ ಸ್ಥಾನದಲ್ಲಿ ನಿಂತಿದ್ದಳು!
ಕೊನೆಗೂ ನಿವೇದಿತಾ ಜೈಲು ಹಕ್ಕಿ ಆದಳು..!!
ಅವಳನ್ನು ಆಸ್ಥೆಯಿಂದ, ಪ್ರೀತಿಯಿಂದ ನೋಡಲು ಅಲ್ಲಿಗೆ ಬರುವವರು ಯಾರೂ ಕೂಡ ಇರಲಿಲ್ಲ.
ಎಷ್ಟಾದರೂ ತಂದೆ ತಾಯಿಯೇ ಇಲ್ಲದ ಅನಾಥೆ ಅವಳು.
ಜೈಲಿನ ನಾಲ್ಕು ಗೋಡೆಗಳ ಮಧ್ಯೆ ನಿಂತ ನಿವೇದಿತಾ ತನಗೆ ತಾನೇ ಹೇಳಿಕೊಂಡಳು.. ನಾನು ಕೇವಲ ನೃತ್ಯಗಾರ್ತಿಯಾಗಿಯೇ ಇರಬೇಕಿತ್ತು..ಆವಾಗ ನನಗೆ ಈ ಅವಮಾನ ಎಂದೂ ಆಗುತ್ತಿರಲಿಲ್ಲ. ಆದರೆ ಇದರಲ್ಲಿ ನನ್ನದೇನು ತಪ್ಪಿದೆ.?. ನಾನು ಯಾವತ್ತೂ ಯಾವುದನ್ನೂ ಬೇಕು ಎಂದು ದೇವರಲ್ಲಿ ಕೇಳಲಿಲ್ಲ.. ಅವನೇ ಎಲ್ಲವನ್ನೂ ಕೊಟ್ಟ... ಕೊಟ್ಟವನೇ ಇನ್ನು ಸಾಕು ಎಂದು ಮತ್ತೆ ಎಲ್ಲವನ್ನೂ ನನ್ನಿಂದ ವಾಪಸ್ ಕಿತ್ತುಕೊಂಡು ಬಿಟ್ಟ.. ಬರೀ ಅಧಿಕಾರ ಕಳೆದುಕೊಂಡಿದ್ದರೆ.. ನನಗೇನೂ ಬೇಜಾರು ಆಗುತ್ತಿರಲಿಲ್ಲ.. ಆದರೆ ಗೌರವವೇ ಹೋದರೆ?! ... ಏನೂ ಇಲ್ಲದೆಯೂ ಬದುಕಬಹುದು.. ಆದರೆ ಮಾನ ಮರ್ಯಾದೆ ಇಲ್ಲದ ಬದುಕು ಎಷ್ಟೊಂದು ಅಸಹ್ಯ.ನಾನಂತು ಈ ರೀತಿ ಎಂದೂ ಬದುಕಿದವಳೇ ಅಲ್ಲ.. ಎಂದು ಕಣ್ಣೀರಾದಳು ನಿವೇದಿತಾ.
ನಿವೇದಿತಾಳ ಬಾಳಿನಲ್ಲಿ ಎಲ್ಲವನ್ನೂ ಕಂಡಿದ್ದಳು..
ಆದರೆ ಅವಳ ಬಾಳಿನಲ್ಲಿ ಒಂದು ಯಾವತ್ತೂ ಇರಲೇ ಇಲ್ಲ.. ಬರಲೂ ಇಲ್ಲ.
ಅದುವೇ ಪ್ರಿತಿ...!
ಅವಳಾಗಿ ಯಾರನ್ನೂ ಪ್ರಿತಿ ಮಾಡಲೂ ಇಲ್ಲ... ಅವಳು ಕೂಡ ಯಾರಲ್ಲೂ ನಿಜ ಪ್ರೀತಿಯನ್ನು ಕಂಡೇ ಇರಲಿಲ್ಲ.
ನನಗೂ ಗಂಡ,ಮಕ್ಕಳು, ಫ್ಯಾಮಿಲಿ ಅಂತ ಎಲ್ಲ ಇದ್ದರೆ ನಾನು ಕೂಡ ತಕ್ಕ ಮಟ್ಟಿಗೆ ಸಮಾಧಾನ ಪಡುತ್ತಿದ್ದೆನೋ ಏನೋ ಅಂದುಕೊಂಡಳು ನಿವೇದಿತಾ.
ಕೊನೆಗೂ ಅವಳ ಶಿಕ್ಷೆಯ ಅವಧಿ ಮುಗಿದು ಅವಳು ಜೈಲಿನಿಂದ ಹೊರಗೆ ಬಂದಳು.
ಆದರೆ ನಾಯಕಿಯಂತೆ ಮೆರೆಸಿದ್ದ ಇಡೀ ದೇಶ ಅವಳನ್ನು ಈಗ ಬರೀ ಖಳನಾಯಕಿಯಂತೆ ಕಂಡಿತು.
ಅವಳಿಗೂ ಕೂಡ ಈ ಸಮಾಜದಿಂದ ಅಂತಹ ಅಪೇಕ್ಷೆ ಏನೂ ಇರಲಿಲ್ಲ. ನಿಜ ಹೇಳಬೇಕೆಂದರೆ ಅವಳೇ ಈ ಎಲ್ಲದರಿಂದ ಬಹು ದೂರ ಹೋಗಬೇಕು ಎಂದು ನಿರ್ಧರಿಸಿದ್ದಳು.
ತನ್ನ ಹೆಸರಿನಲ್ಲಿದ್ದ ಎಲ್ಲಾ ಆಸ್ತಿಯನ್ನು ಮಾರಿದಳು. ಬಂದ ಹಣವನ್ನು ತನ್ನ ಅನಾಥಾಶ್ರಮಕ್ಕೆ ದಾನ ಮಾಡಿದಳು,ತಾನು ಡ್ಯಾನ್ಸ್ ಮಾಡುತ್ತಿದ್ದ ಡ್ಯಾನ್ಸ್ ಅಕಾಡೆಮಿಗೂ ಹಣ ನೀಡಿದಳು.
ಅವಳನ್ನು ಯಾರೂ ಕೂಡ ಬಾ ಎಂದು ಕರೆಯಲಿಲ್ಲ... ಮೀಡಿಯಾಗಳು ಕರೆದವು, ಆದರೆ ಅವಳು ಅವರೆದುರು ಹೋಗಿ ಮತ್ತೆ ಬಾಯಿ ತೆರೆಯಲಿಲ್ಲ. ಏಕೆ ತೆರೆಯಬೇಕಿತ್ತು.. ಮಾಡದ ತಪ್ಪಿಗೆ ಅವಳಾಗಲೇ ಶಿಕ್ಷೆ ಅನುಭವಿಸಿ ಆಗಿತ್ತು.
ವಯಸ್ಸು ಬೇರೆ ಆಗಿತ್ತು ನಿವೇದಿತಾಗೆ... ತನ್ನಲ್ಲಿ ಉಳಿದಿದ್ದ ಹಣದಲ್ಲಿ ಕಾಶಿ, ಬದರಿನಾಥ,ಕೇದಾರನಾಥ.. ಎಂದು ಯಾತ್ರೆಗೆ ಹೊರಟು ನಿಂತಳು.
ಹರಿದ್ವಾರದ ಗಂಗೆಯ ಪರಮ ಪವಿತ್ರ ಜಲದಲ್ಲಿ ಒಮ್ಮೆ ಮುಳುಗಿ ಎದ್ದು ನಿಂತವಳು,ಆ ತಣ್ಣನೆಯ ನೀರ ನಡುವಲ್ಲಿಯೇ ನಿಂತುಕೊಂಡು ಹಾಗೇ ಯೋಚಿಸಿದಳು...ನಾನು ಎಷ್ಟೇ ಸಲ ಗಂಗಾಸ್ನಾನ ಮಾಡಿದರೂ ನನ್ನ ಮನಸ್ಸಿಗೆ ಸಮಾಧಾನವಾಗದು...ಮಾತ್ರವಲ್ಲ ನಾನು ಅನುಭವಿಸುತ್ತಿರುವ ಈ ನೋವುಗಳಿಂದ ನನಗೆಂದಿಗೂ ಮುಕ್ತಿಯೂ ದೊರೆಯಲಾರದೆಂದು ಅನ್ನಿಸಿಬಿಟ್ಟಿತು ಅವಳಿಗೆ.
ಮತ್ತೊಮ್ಮೆ ಗಂಗೆಯಲ್ಲಿ ಮುಳುಗಿದ ಅವಳು ಮತ್ತೆ ನೀರನಡಿಯಿಂದ ಮೇಲೆ ಏಳಲೇ ಇಲ್ಲ....
ಹಲವು ಕ್ಷಣಗಳ ನಂತರ ಪವಿತ್ರ ಗಂಗೆಯಲ್ಲಿ ಹೆಣವಾಗಿ ತೇಲಿದ್ದಳು ನಿವೇದಿತಾ..!!
.....................................................................................
#ಇಷ್ಟೇ..!
ab pacchu
moodubidire

Comments
Post a Comment