ನಿನ್ನಿಂದ ತುಂಬಾ ದೂರ ಇರಲಾರೆನು.. ಹಾಗಂತ ಕಣ್ಣ ಮುಂದೂ ಬರಲಾರೆನು


 

ನೀನೇ ಬೇಕು ಎನ್ನುವ ಈ ಹುಚ್ಚಿಗೆ....ಏನೆಂದು ಹೆಸರಿಡಲಿ?

ಆದರೂ ಈ ಹುಚ್ಚೇ ಚೆನ್ನಾಗಿದೆ...
ಹಿತವಾಗಿದೆ,ಬಲು ಸೊಗಸಾಗಿದೆ..
ವಿವರಿಸಲಾಗದ ಸುಖವಿದೆ..
ಮತ್ತಷ್ಟು ಬೇಕೆನ್ನುವ ಬೇಡಿಕೆ ಅತಿಯಾಗಿದೆ..

ಇದಕ್ಕೂ ಹಿಂದೆ ಯಾವತ್ತೂ ಈ ರೀತಿ ಎಲ್ಲಾ ಆಗಿಯೇ ಇರಲಿಲ್ಲ..
ಆವಾಗಲೆಲ್ಲ ನಾನು ಕೇವಲ  ನಾನಗಿದ್ದೆ..

ಆದರೆ ನೀನು ಅದೆಂತಹ ಪಾಪಿ...
ಹೇಳಲಿಲ್ಲ...ಕೇಳಲಿಲ್ಲ..
ನೇರವಾಗಿ ಮನಸ್ಸಿನೊಳಗೆ ನುಗ್ಗಿಯೇ ಬಿಟ್ಟೆ
ಲಗ್ಗೆ ಹಾಕಿ ನನ್ನ ನೆಮ್ಮದಿಯನ್ನೇ ಕಸಿದುಬಿಟ್ಟೆ...

ಹೇಳು ನೀನು ಯಾಕಿಷ್ಟು ಡಕಾಯಿತ?

ಗಂಡುಬೀರಿ ಎಂದೇ ಗೆಳೆಯರು ಕರೆಯುತ್ತಿದ್ದರು ನನ್ನನ್ನು ..

ಹೌದು.. ಹೆಚ್ಚು ಕಡಿಮೆ ನಾನೂ ಹಾಗೇ ಇದ್ದವಳು. ನನಗೆ ಅದೇ ಇಷ್ಟ.

ಬೆಳೆದದ್ದೇ ಹಾಗೇ ನಾನು... ಟಾಮ್ ಬಾಯ್ ತರಹ.

ಆದರೆ ಈ ಹುಡುಗಿ ಕಲ್ಲೆದೆಯಲ್ಲೂ,ಒಂದು ದಿನ ನಳನಳಿಸುವ ಹೂವು ಅರಳುತ್ತೆ ಎಂದು ನನಗೆಂದಿಗೂ ಗೊತ್ತೇ ಇರಲಿಲ್ಲ ಹುಡುಗ !

ಆ ಕಲ್ಪನೆಯೂ ನನಗಿರಲಿಲ್ಲ..

ಆದರೆ ಆ ಹೂವು ಒಂದು ನೀನೇ ಅರಳಿಸಿಬಿಟ್ಟೆ ನೋಡು..

ಆ ದಿನದಿಂದ ನಾನು... ಮತ್ತೆ ಮೊದಲಿನಂತೆ ಆಗಲೇ ಇಲ್ಲ!

ಯಾವ ಹುಡುಗನೂ  ಇಷ್ಟ ಆಗಿರಲಿಲ್ಲ ನನಗೆ..

ಏಕೆಂದರೆ ನನಗೆ ಹುಡುಗರೇ ಇಷ್ಟವಿರಲಿಲ್ಲ..

ಹಾಗಂತ ನೀನು ಇಷ್ಟ ಆಗುವಂತೆಯೇ ಇದ್ದೆ ಎಂದು ನಾನು ಹೇಳುವುದೂ ಇಲ್ಲ.....

ನೀನು ಕೇವಲ ಜಾದೂ ಮಾಡಿಬಿಟ್ಟೆ..

ಹಾಗಂತ ನೀನು ಜಾದುಗಾರನಾ?

ಅಲ್ಲ.. ಖಂಡಿತವಾಗಿಯೂ ಅಲ್ಲ...

ನೀನು ಏನೂ ಅಲ್ಲ....

ಆದರೆ ಮಾಯಗಾರ ಇರುವೆ ನೀನು..

ನನ್ನ ಅದೆಷ್ಟೋ ನಿದ್ದೆಗಳನ್ನು ನನಗೇ ಗೊತ್ತಿಲ್ಲದಂತೆ ಅಪಹರಿಸಿದ ಕಳ್ಳ ನೀನು ಖಂಡಿತವಾಗಿಯೂ ಹೌದು..

ಯಾವ ನಾವೆ ಏರಿ ಬಂದ.. ಸಮುದ್ರ ಕಳ್ಳ ನೀನೆಂದು ನಾನರಿಯೆ.

ಆದರೂ ಕಡಲುಗಳ್ಳರು ಹಡಗು ಕೊಳ್ಳೆ ಹೊಡೆಯುವಂತೆ  ಸಂಪೂರ್ಣ ಮನಸ್ಸನ್ನೇ ಸೂರೆ ಮಾಡಿಬಿಟ್ಟೆ ನೀನು..

ಕಳ್ಳರು ಬರೀ ಕದಿಯುತ್ತಾರೆ..

ನೀನು ಕದ್ದುಬಿಟ್ಟೆ.. ಗೆದ್ದೂ ಬಿಟ್ಟೆ.

ಹಾಗಂತ ನೀನು ಯಾವತ್ತೂ ನನ್ನ ಹಿಂದೆ ಬಿದ್ದವನಲ್ಲ...

ನನ್ನ ಹಿಂದೆ ಮಾತ್ರವಲ್ಲ .. ಯಾರ ಹಿಂದೆಯೂ ಬಿದ್ದವನಲ್ಲ ನೀನು ....

ಸತ್ಯ ಹೇಳಬೇಕೆಂದರೆ ನೀನು ನನಗೇ ಏನೂ ಮಾಡಲಿಲ್ಲ...

ನೀನು ನನ್ನ ಕಣ್ಣಿಗೆ ಬಿದ್ದಾಗಿನಿಂದ ಎಲ್ಲವೂ ಅದರಷ್ಟಕ್ಕೆ ನನ್ನಲ್ಲಿ ನಡೆದು ಹೋದವು...ಘಟಿಸಿ ಹೋದವು..

ಬೇಡ ಬಿಡು.. ಹೇಳಿ ಪ್ರಯೋಜನವಿಲ್ಲ,
ನಿನಗಂತು ಕಡೇ ಪಕ್ಷ ಹುಡುಗಿಯನ್ನು ಮೆಚ್ಚುಗೆ ಪಡಿಸಲು ಏನೇನು ಸರ್ಕಸ್ ಮಾಡಬೇಕು ಎಂಬುವುದು ಕೂಡ  ಗೊತ್ತಿಲ್ಲ..

ಯಾರ ವಿಷಯದಲ್ಲೂ, ಯಾವ ವಿಷಯದಲ್ಲೂ ಆಸಕ್ತಿಯೇ ಇಲ್ಲದವನು ನೀನು..

ನೀನು ಯಾವತ್ತೂ ಜಸ್ಟ್ ನೀನಾಗಿದ್ದೆ.. ಅಷ್ಟೇ

ಹೌದು.. ಅದಕ್ಕೆನೇ  ಇಷ್ಟವಾದೆ ನೀನು.

ಹೇಳು ನನ್ನದೇನಾದರೂ ತಪ್ಪು ಇದೆಯೇ ?

ತುಂಬಾ ಹೇಳಬೇಕು ನಾನು ನಿನಗೆ...

ಏನೇನೋ ಕೇಳಬೇಕು ಕೂಡ..

ಆದರೆ  ನೀನು ಇದ್ದೀಯ ನೋಡು.. ನಿನಗೆ  ನಾನು ಯಾರೆಂದೇ ಗೊತ್ತಿಲ್ಲ....

ಈಗಲೂ ಗೊತ್ತಿಲ್ಲ...

ನನ್ನವಂತಳು ಒಬ್ಬಳು ನಿನಗಾಗಿ ಎಲ್ಲೋ ಒಂದು ಕಡೆ ಕುಳಿತು  ಕನಸುಗಳನ್ನು ಹೆಣೆಯುತ್ತಿದ್ದಾಳೆ ಎಂಬ ಕಲ್ಪನೆಯೇ ನಿನಗಿಲ್ಲ..

ಆದರೆ ನನಗೆ ನಿನ್ನ ಬಗ್ಗೆ ಗೊತ್ತು ... ಎಲ್ಲವೂ ಗೊತ್ತು.

ಬಹಳ ಚೆನ್ನಾಗಿಯೇ ಗೊತ್ತು.

ನಿನ್ನ ಹೆಸರೂ ಗೊತ್ತು..

ಅದು ಹೌದು,ಯಾರು ನಿನಗೆ " ನೀಲಮೇಘ" ಎಂದು ಹೆಸರಿಟ್ಟರು ಹೇಳು?

ನೀಲಿ ಕಣ್ಣುಗಳೇ ನಿನಗಿಲ್ಲ...

ಕನಿಷ್ಟ ಪಕ್ಷ ಕನಸುಗಳೂ...? ಹ್ಞೂ ತಡಕಾಡಿದರೂ ನನಗೆ  ಸಿಗಲಿಲ್ಲ!

ಬರೀ ನಿದ್ದೆ ಕಣ್ಣುಗಳು ಅವು..

ಆದರೂ ಆ ನಿನ್ನ ಕಣ್ಣುಗಳನ್ನು ನಾನು  ಎದುರಿಸಲಾರೆನು....

ಯಾವ ಗುಂಪು ಕಂಡರೂ ನನ್ನ ಕಣ್ಣು ಕೇವಲ ನಿನ್ನ ಕಣ್ಣುಗಳನ್ನೇ  ಹುಡುಕಾಡುತ್ತದೆ... ತಡಕಾಡುತ್ತದೆ.. ಸಿಗದಿದ್ದರೆ ಚಡಪಡಿಸಿ ಬಿಡುತ್ತದೆ...

ಒಂದು ವೇಳೆ ಕಣ್ಣಿಗೆ ಕಣ್ಣುಗಳು ಆಕಸ್ಮಿಕವಾಗಿ ಸಂಧಿಸಿಬಿಟ್ಟರೆ....

ಆ ಕ್ಷಣವಂತು ನಾನೆಷ್ಟು ವಿಲಿವಿಲಿ ಗೊತ್ತಾ...ನೀರಿನಿಂದ ತೆಗೆದ ಮೀನು ನಾನು.

ಹೃದಯದ ಬಡಿತವೊಂದು ಅನುಮತಿ ಇಲ್ಲದೇ ಹೇಳದೇ ಕೇಳದೇ ತಾಳ ತಪ್ಪುವುದು ಆವಾಗಲೇ..

ಹೀಗೆಲ್ಲಾ ಎಂದೂ ಆಗಿರಲೇ ಇಲ್ಲ...

ಕೆಲಸ ಹುಡುಕುವುದನ್ನೇ ಒಂದು  ಕೆಲಸವನ್ನಾಗಿ ಮಾಡಿಕೊಂಡಿರುವ ಓ ಹುಡುಗನೇ..

ದೇವರಲ್ಲಿ ನನ್ನ ಅನುದಿನದ  ಪ್ರಾರ್ಥನೆ ಆದರೂ ಏನೆಂದು  ನಿನಗೆ ಗೊತ್ತಿದೆಯೇ?

ಆದಷ್ಟು ಬೇಗ ನಿನಗೆ ಒಂದು ಒಳ್ಳೆಯ ಕೆಲಸ ಸಿಗಲಿ ಎಂದು ಅಲ್ಲವೇ ಅಲ್ಲ..

ನಿನಗೆ ಇನ್ನೂ ಸ್ವಲ್ಪ ದಿನ ಹೀಗೆ ಕೆಲಸವೇ ಸಿಗದಿರಲಿ... ಎಂದೇ ನನ್ನ ನಿತ್ಯದ ಪ್ರಾರ್ಥನೆಯಾಗಿದೆ!

ಸ್ವಾರ್ಥಿ ನಾನು.. ಕೆಲಸ ಸಿಕ್ಕರೆ ಎಲ್ಲೋ ಹಾರಿ ಹೋಗಿ ಬಿಡುತ್ತಿ ನೋಡು..ಹಾಗಾಗಿ ಇನ್ನಷ್ಟು ದಿನ ಕಣ್ಣ ಮುಂದೆಯೇ resume,file ಹಿಡಿದುಕೊಂಡು ಅಲೆಯುತ್ತಿರು ಎಂದು ನನ್ನದೊಂದು ದೇವರಲ್ಲಿ ಸದ್ಯದ ಶ್ರದ್ಧೆಯ ಪ್ರಾರ್ಥನೆ.

ಆದರೆ ಕೇವಲ ನಾನು ಪ್ರಾರ್ಥಿಸಿದ್ದಕ್ಕೆ ನಿನಗೆ ಕೆಲಸ ಸಿಕ್ಕಿಲ್ಲ ಎಂದು ತಿಳಿದುಕೊಳ್ಳಬೇಡ ಇನ್ನು ನೀನು....

ನಿನ್ನ ಅಪ್ಪ ನೀಲಣ್ಣನೇ ಪೇಟೆಯಲ್ಲಿ ಎಷ್ಟೋ ಸಲ ಹೇಳುತ್ತಿದುದನ್ನು ಕೇಳಸಿಕೊಂಡಿದ್ದೇನೆ.. " ಎಷ್ಟೇ ಇಂಟರ್ವ್ಯೂ ಗೆ ಹೋದರೂ ನಮ್ಮ ನೀಲುಗೆ ಈ ಜನ್ಮದಲ್ಲಿ ಕೆಲಸ ಸಿಗುವುದು ನನಗಂತು ಡೌಟೇ...ಅವನಿಗೆ ಚೆನ್ನಾಗಿ ಊಟ ಮಾಡುವುದು..ನಿದ್ದೆ ಮಾಡುವುದು ಬಿಟ್ಟರೆ.. ಅಂತಹ ಯಾವುದೇ ಟ್ಯಾಲೆಂಟ್ ಸಹ ಇಲ್ಲ.. ಶಿಸ್ತು,ಜವಾಬ್ದಾರಿಗಳು  ಅಂತು ಮೊದಲೇ ಇಲ್ಲ..."

ನೀಲು... ಹೌದಾ ನಿನಗೆ ಜವಾಬ್ದಾರಿ, ಶಿಸ್ತು ಎರಡೂ ಇಲ್ಲವೇ..?

ನಿನ್ನನ್ನು ನೋಡುವಾಗ ನನಗೂ ನಿನ್ನ ಅಪ್ಪ ಹೇಳಿದ್ದೇ ಸರಿ ಎಂದು ಅನ್ನಿಸಿದರೆ ಅದರಲ್ಲಿ ನನ್ನದೇನು ತಪ್ಪಿಲ್ಲ ನೋಡು ಮತ್ತೆ...

ಸದಾ ನಿನ್ನ ಮುಂದೆಯೂ ಸುಳಿದಾಡಿದರೂ ನಿನಗೆ ನನ್ನ ಬಗ್ಗೆ ಗೊತ್ತಾಗದು ಬಿಡು.

ಏಕೆಂದರೆ ನಿನ್ನ ಆಸಕ್ತಿಗಳೇ ಬೇರೆ...

ಯಾವಾಗ ನೋಡಿದರೂ ಎಲ್ಲೋ ಕಳೆದು ಹೋದಂತೆ ಇರುತ್ತಿಯಾ ನೀನು..

ಆದರೂ ಕದ್ದು ಕದ್ದು ನಿನ್ನನ್ನು ನೋಡುವುದನ್ನು ನಿಲ್ಲಿಸಿಲ್ಲ ನಾನು.

ಅದರಲ್ಲೆನೋ ಸುಖವಿದೆ...

ನಿನ್ನೆದುರು ಬಂದು ಎಲ್ಲವನ್ನೂ ಹೇಳಿಯೂ ಬಿಡಲಾರೆ .
ನೋಡು ಈ ರೀತಿ ಬರೆದು ಮನಸ್ಸನ್ನು ಹಗುರ ಮಾಡಿಕೊಳ್ಳುವುದನ್ನು ನಾನು ಅದಾಗಲೇ ಕಲಿತಾಗಿದೆ ..

ಈ ಕಣ್ಣಾಮುಚ್ಚಾಲೆ ಆಟ ಹೀಗೆ ಇರಲಿ...

ನಿನಗೆ ನಾನು ಯಾರೆಂದು ಗೊತ್ತಾಗುವುದೇ ಬೇಡ..

ಎದುರು ಸಿಕ್ಕಾಗಲೆಲ್ಲ ಯಾವತ್ತೂ ನಗಬೇಡ ನೀನು...

ನಕ್ಕು ಲೈಫ್ ಇನ್ನಷ್ಟು ಲಗಾಡಿ ಹೋದರೆ ಅದಕ್ಕೆ ಖಂಡಿತಾ ನೀನೇ ಜವಾಬ್ದಾರನು.. ಹೊಣೆಗಾರನು..

ಆದರೂ ನೀಲು...

ನಿನ್ನಿಂದ ತುಂಬಾ ದೂರ ಇರಲಾರೆನು..

ಹಾಗಂತ ಕಣ್ಣ ಮುಂದೆಯೂ ಬರಲಾರೆನು...

ಹೇಯ್ ನೀಲಮೇಘಾ...

ನೀನೇ ನನ್ನ ಶ್ಯಾಮನಾಗಬೇಕು ಎಂದು ಸದಾ ಬಯಸುವ ನಿನ್ನ ಭಾಮೆ ನಾನು...

ಈ ಪತ್ರಕ್ಕೆ ಇಷ್ಟು ಸಾಕು..

ಮುಂದಿನದ್ದನ್ನು ಇನ್ನೊಮ್ಮೆ ಹೇಳುವೆನು..

ಪಾಪದ ಹುಡುಗಿ ನಾನಂತು ಅಲ್ಲವೇ ಅಲ್ಲ ..

ಖಂಡಿತವಾಗಿಯೂ ಲೆಕ್ಕಕ್ಕಿಂತ ಜೋರೇ ಇರುವೆನು...

ಅಧಿಕಪ್ರಸಂಗ ಜಾಸ್ತಿ ಮಾಡದಿರು..

ಪ್ರತೀ ರಾತ್ರಿಯ ಕನಸ್ಸಲ್ಲಿ ತಪ್ಪದೇ ಹಾಜರಿರು...

                                                               ತುಂಬಾ ನಿನ್ನವಳು...
                                                      
                                                                 ✒️ #ಭಾಮ..

.....................................................................................

#ನೀಲಮೇಘ

ab pacchu
moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ