ಹೋಟೆಲ್ ಮೆನುವಿನಲ್ಲಿ ಕೇದಗೆಯ ಮೂಡೆ...
ಮೆನುವಿನಲ್ಲಿ "ಮೂಡೆ" ಇರುವುದನ್ನು ನೋಡಿ ಅದೇ ಕೊಡಿ ಅಂದೆ. ಸಾಂಬಾರ್, ಚಟ್ನಿ ಹಾಗೂ ತೊವ್ವೆ..ಇದರಲ್ಲಿ ಯಾವುದರ ಜೊತೆಗೆ ಕೊಡಲಿ ಅಂದರು, ಮೂರೂ ಇರಲಿ ಅಂದೆ.ಪರಿಚಯದ ಸಪ್ಲೈರ್ ನನ್ನನ್ನು ನೋಡಿ ಹಾಗೇ ನಗುತ್ತಲೇ ಹೋಟೆಲ್ ನ ಅಡುಗೆ ಕೋಣೆಗೆ ಹೋಗಿ ಒಂದಿಡೀ ಮೂಡೆ ಜೊತೆಗೆ ಚಟ್ನಿ, ತೊವ್ವೆ, ಸಾಂಬಾರ್ ಗಳನ್ನು ಅಕ್ಕ ಪಕ್ಕ ಪ್ಲೇಟ್ ನಲ್ಲಿ ಅಲಂಕರಿಸಿ ತಂದು ನನ್ನೆದುರು ಇಟ್ಟರು.
ನಿಧಾನವಾಗಿ ಕೇದಗೆಯ ಒಲಿಗಳನ್ನು(ಎಲೆ)ಜತನದಿಂದ ಬಿಡಿಸಿದ ಅದರೊಳಗಿನ ಮೂಡೆಯನ್ನು ಮೊದಲಿಗೆ ತೊವ್ವೆ,ಆ ನಂತರ ಸಾಂಬಾರ್ ಮತ್ತು ಚಟ್ನಿಯೊಂದಿಗೆ ಕೂಡ ಮನದಣಿಯೆ ಬಾಯಿ ಚಪ್ಪರಿಸಿದೆ.ಧಣಿ ಎಷ್ಟಾಯಿತು ಎಂದು ಕೊನೆಯಲ್ಲಿ ಕೇಳಿದರೆ.. 40 Rs ಅಂದರು.ಬೇರೆ ತಿಂಡಿಗೆ ಆದರೆ 25,ಮೂವತ್ತು.ಆದರೆ ಮೂಡೆಗೆ 40,ಕೆಲವೊಮ್ಮೆ 50 ಅಂತೆ.ಸೀಸನ್ ನಲ್ಲಿ ಹೋಟೆಲ್ ನ ತಿಂಡಿಗಳಲ್ಲಿ ನಮ್ಮ "ಮೂಡೆ" ಗೆ ರಾಜ ಮರ್ಯಾದೆ.
ಮನೆಯಲ್ಲಿ ಆದರೆ ಮುಕ್ಕಾಲು ಕೆ.ಜಿ ಅಕ್ಕಿಗೆ ಅರ್ಧ ಕೆಜಿ ಉದ್ದಿನಬೇಳೆಯನ್ನು ಹಾಕಿ, ತುಂಬಾ ಮೆದುವಾಗಬೇಕಾದರೆ ಎರಡನ್ನೂ ಸಮ ಪ್ರಮಾಣದಲ್ಲಿ ಹಾಕಿ,ಎರಡನ್ನೂ ಚೆನ್ನಾಗಿ ರುಬ್ಬಿ ..ನೈಸರ್ಗಿಕವಾಗಿ ಸಿಗುವ ಕೇದಗೆಯ ಎಲೆಗಳನ್ನು ಮೂಡೆ ಕಟ್ಟಿ,ಅದರಲ್ಲಿ ಹೊಯ್ದು ಇಡ್ಲಿ ಪಾತ್ರೆಯಲ್ಲಿಟ್ಟು ಹಬೆಯಲ್ಲಿ ಬೇಯಿಸಿದರೆ.. ಒಂದೆರಡು ದಿನ ಅದೆಷ್ಟೋ ಮೂಡೆ ಯನ್ನು ಹಾಗೇ ಬಾರಿಸಬಹುದಿತ್ತು ಅಲ್ಲವೇ ಎಂಬ ಮೂಡೆಗಳ ಲೆಕ್ಕಾಚಾರ ಹಾಕುವ ಮೂಡ್ ನಿಂದ ಹೊರಬಂದು,ಹೋಟೆಲ್ ನವನಿಗೆ ಹಣ ಕೊಟ್ಟು ಹೋಟೆಲ್ ನಿಂದ ಹೊರಬಂದೆ.
ತುಳುನಾಡಿನ ತಿಂಡಿಗಳು ತುಳುನಾಡಿನಲ್ಲಿಯೇ ಸಾಕಷ್ಟು ದುಡ್ಡು ಗಳಿಸುತ್ತದೆಯಲ್ಲ ಎಂಬುದಕ್ಕಿಂತಲೂ.. ಮೂಡೆ ಕಟ್ಟಿ ಮಾರುವ ಕೈಗಳಿಗೆ ಒಂದಷ್ಟು ಹಣ ಸಿಗುತ್ತಿದೆಯಲ್ಲ ಎಂಬ ಸಮಾಧಾನವೇ ಜಾಸ್ತಿ ಇತ್ತು.ಏಕೆಂದರೆ ನಾನು ಕೂಡ ಅಷ್ಟಮಿಯ ಸಂದರ್ಭದಲ್ಲಿ ಮೂಡೆ ಕಟ್ಟಿ ಅದನ್ನು ಮಾರಿ ತಕ್ಕ ಮಟ್ಟಿಗೆ ಜೇಬು ಬಿಸಿ ಮಾಡಿಕೊಂಡವನೇ..ಹೋಟೆಲ್ ನಿಂದ ಹೊರ ಬಂದ ನಂತರವೂ ನೆನಪುಗಳ ಪರಿಮಳ,ಮೂಡೆಯ ಕೇದಗೆ ಎಲೆಯಂತೆ ಹಾಗೇ ನನ್ನಲ್ಲಿ ಆವರಿಸಿಕೊಂಡು ಬಿಟ್ಟಿತ್ತು..
ಈ "ಮೂಡೆ" ಅಂದರೆ ಏನು..?
ಗೊತ್ತಿಲ್ಲದವರಿಗಾಗಿ ಕೃಷ್ಣ ಜನ್ಮಾಷ್ಟಮಿಗೆ ನಾನೇ ಬರೆದ ಮೂಡೆಯ ಸುತ್ತಮುತ್ತಲಿನ ನೆನಪುಗಳ ಒಂದು ಬರಹ...👉
#ಅಷ್ಟಮಿ_ಮತ್ತು_ಮೂಡೆ_ಎಂಬ_ಸ್ವಾದದ_ತಿಂಡಿ.. 😍😋
ನಾಗರ ಪಂಚಮಿಯ ದಿನ ನಾಗ ದೇವರಿಗೆ ತನು ಎರೆಯದಿದ್ದರೆ....
ಮಾರ್ನೆಮಿ(ನವರಾತ್ರಿ)ಗೆ ಹುಲಿ ವೇಷವನ್ನು ನೋಡಿದಿದ್ದರೆ ಮಾತ್ರವಲ್ಲ ಹುಲಿಗಳೊಂದಿಗೆ ಸೇರಿ ಒಂದೆರಡು ಸ್ಟೆಪ್ಸ್ ಹಾಕಿ ಹಾಗೇ ಕುಣಿಯದಿದ್ದರೆ...
ಅಷ್ಟಮಿಗೆ ಒಂದು ಬಾರಿ ಆದರೂ ಮೂಡೆ ಮಾಡಿ ತಿನ್ನದಿದ್ದರೆ, ನಮ್ಮ ತುಳುನಾಡಿನ ಜನರಿಗೆ ಸಮಾಧಾನವೇ ಇರುವುದಿಲ್ಲ😊😍😋
ಅದು ಹಾಗೆಯೇ,ಅದೊಂದು ಕ್ರಮ ಇಲ್ಲಿ ಹಾಗೇ ಪರಿಪಾಠವಾಗಿ ಬೆಳೆದು ಬಿಟ್ಟಿದೆ.ಹಿಂದಿನಿಂದಲೂ ಇದು ಹೀಗೆಯೇ ಇರುವುದು.
ಹೇಗೆ ನಾಗರ ಪಂಚಮಿ ಅಂದರೆ ಅರಶಿನದ ಎಲೆ ಕಡುಬೋ.. ಹಾಗೇ ನಮ್ಮವರಿಗೆ ಅಷ್ಟಮಿ ಅಂದರೆ ಎಷ್ಟು ಕೃಷ್ಣನೋ... ಅಷ್ಟೇ ಅಷ್ಟಮಿಯ ಮೂಡೆಯೂ ಕೂಡ ಹೌದು ಎಂದರೆ ತಪ್ಪಾಗಲಿಕ್ಕಿಲ್ಲ.
ಹೇಗೆ ಮಳೆಗಾಲದಲ್ಲಿ ಪತ್ರೋಡೆ ತಿನ್ನದಿದ್ದರೆ ಮನಸ್ಸಿಗೆ,ನಾಲಗೆಗೊಂದು ಸುಖವಾದ ಸಮಾಧಾನ ಇರುವುದಿಲ್ಲವೋ ಹಾಗೆಯೇ ಅಷ್ಟಮಿಯಂದು ಒಮ್ಮೆ ಮೂಡೆ ತಿನ್ನದಿದ್ದರೆ, ಅದೊಂದು ಅಷ್ಟಮಿಯೇ ಅಲ್ಲವೇನು ಅನ್ನಿಸಿಬಿಡುವುದಿದೆ ನಮ್ಮವರಿಗೆ.
ಹೇಗೆ ತುಳುನಾಡಿನಲ್ಲಿ ಒಂದೊಂದು ಹಬ್ಬಕ್ಕೆ ನಮ್ಮಲ್ಲಿ ಒಂದೊಂದು ತಿಂಡಿಗಳು ತಳುಕು ಹಾಕಿಕೊಂಡಿದ್ದಾವೋ ಹಾಗೆಯೇ ಅಷ್ಟಮಿ ಅಂದ ಕೂಡಲೇ ನಮಗೆ ಮೊದಲು ನೆನಪಾಗುವುದೇ ಮೂಡೆ. ಅಷ್ಟು ಮಾತ್ರವಲ್ಲ ಕೇವಲ ಮೂಡೆ ಎಂಬ ಹೆಸರು ಕಿವಿಗೆ ಬಿದ್ದರೂ ಸಾಕು ನಮಗೆ ಮೊದಲು ನೆನಪಾಗುವ ಹಬ್ಬ ಅಂದರೆ ಅದು ಅಷ್ಟಮಿಯೇ.
ಆ ರೀತಿಯ ಅವಿನಾಭಾವ ಸಂಬಂಧ ಮೂಡೆ ಮತ್ತು ಅಷ್ಟಮಿಯದ್ದು. ನಂತರ ಮೂಡೆ ಎಂಬ ತಿಂಡಿಯನ್ನು ಚೌತಿಗೂ ಮಾಡುತ್ತಾರೆ, ನವರಾತ್ರಿಗೂ ಮಾಡುತ್ತಾರೆ ಹೀಗೆ ಮುಂದಿನ ಎಲ್ಲಾ ಹಬ್ಬ ಹರಿದಿನಗಳಲ್ಲಿ ಇದು ಕಾಣಿಸುವುದು ಉಂಟು.
ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನದಂದು ಕೆಲವರು ಪತ್ರೋಡೆ ಮಾಡುತ್ತಾರೆ,ಇನ್ನು ಕೆಲವರು ಸೇಮೆದಡ್ಡೆ (ಒತ್ತು ಶ್ಯಾವಿಗೆ) ಮ್ತತು ಕಾಯಿ ಹಾಲು ಮಾಡುತ್ತಾರೆ. ಆದರೆ ನಮ್ಮಲ್ಲಿ ಹೆಚ್ಚಾಗಿ ಹೆಚ್ಚಿನವರು ಮಾಡುವ ತಿಂಡಿ ಅಂದರೆ ಅದು ಮೂಡೆಯೇ.
ಕೆಲವರು ಇದನ್ನು ಮೂಡೆ ಅನ್ನುತ್ತಾರೆ,ಕೊಟ್ಟಿಗೆ ಅನ್ನುತ್ತಾರೆ, ಗುಂಡ ಅನ್ನುತ್ತಾರೆ.ಎಲ್ಲವೂ ಅವರವರ ಭಾವಕ್ಕೆ ಭಕುತಿಗೆ ಅವರವರ ರುಚಿಗೆ, ಸಂಪ್ರದಾಯಕ್ಕೆ ಸಂಬಂಧಿಸಿದ್ದೇ ಆಗಿದೆ.ಆದರೂ ಇಲ್ಲಿ ಮೂಡೆ ಎಂಬ ಒಂದು ಹೆಸರು ಎಲ್ಲರನ್ನೂ ಬೆಸೆದಿದೆ.
ಹಲಸಿನ ನಾಲ್ಕು ಎಲೆಗಳನ್ನು ಬಳಸಿ ಮಾಡುವ ತಿಂಡಿಗೆ ಗುಂಡ ಎಂದು ಹೆಚ್ಚಾಗಿ ಹೇಳುತ್ತಾರೆ. ಅಷ್ಟಮಿ ದಿವಸ ಮೂಡೆ ಅಥವಾ ಇದನ್ನು ಹೆಚ್ಚಾಗಿ ಮಾಡುತ್ತಾರೆ.
ಬಾಳೆ ಎಲೆಯನ್ನು ಬಾಡಿಸಿ ಅದನ್ನು ಒಂದು ಉದ್ದದ ಲೋಟದಂತೆ ಬಾಳೆಯ ದಾರಗಳಿಂದಲೇ ಕಟ್ಟಿ ಅದರಲ್ಲಿ ತಿಂಡಿ ಮಾಡುವುದಕ್ಕೆ ಕೆಲವರು ಕೊಟ್ಟಿಗೆ ಅನ್ನುತ್ತಾರೆ ಇನ್ನು ಕೆಲವರು ಕೊಟ್ಟೆ ಎಂದು ಕೂಡ ಹೇಳುತ್ತಾರೆ.
ಇನ್ನು ಮೂರನೆಯದ್ದು ಅಂದರೆ ಮೂಡೆ.ಇದನ್ನಂತು ಮಾಡಲು ದಿವ್ಯವಾದ ಶ್ರದ್ಧೆಯೇ ಬೇಕು. ಉಳಿದ ಎಲ್ಲದಕ್ಕಿಂತಲೂ ಇದನ್ನು ಮಾಡುವುದು ತುಸು ತ್ರಾಸದಾಯಕವೇ ಹಾಗೂ ಒಂದೆರಡು ದಿನಗಳ ಸಮಯವನ್ನು ಕೂಡ ಬೇಡುತ್ತದೆ ಇದು. ಅದೂ ಅಲ್ಲದೇ ಮೂಡೆ ಮಾಡಲು ಅನುಭವವಂತು ಬೇಕೆ ಬೇಕು. ಅದೊಂದು ಕಲೆ. ಎಲ್ಲರಿಗೂ ಅದನ್ನು ಸುಲಭವಾಗಿ ಮಾಡಲು ಸಾಧ್ಯ ಆಗುವುದಿಲ್ಲ.
ಮೂಡೆ ಮಾಡಲು ಹೆಚ್ಚಾಗಿ ನದಿ ಪಾತ್ರದಲ್ಲಿ ಇಲ್ಲವೇ ನೀರು ನಿಲ್ಲುವ ಬೈಲು ಗದ್ದೆಗಳ ಪ್ರದೇಶದಲ್ಲಿ ಇರುವ ಒಂದು ಜಾತಿಯ ಕೇದಗೆಯ ಎಲೆಯನ್ನು ಮೊದಲು ನಾವು ಕಡಿದು ತರಬೇಕಾಗುತ್ತದೆ. ಅದನ್ನು ನಾವು ಇಲ್ಲಿ ತುಳುವಿನಲ್ಲಿ "ಒಲಿ" ಎಂದು ಹೇಳುತ್ತೇವೆ. ಈ ಎಲೆ ಜಾಸ್ತಿ ಬಲಿತೂ ಕೂಡ ಇರಬಾರದು ಹಾಗೇ ಎಳೆಯ ಎಲೆಗಳು ಕೂಡ ಆಗಿರಬಾರದು. ಅದನ್ನು ತರುವುದು ತುಸು ಕಷ್ಟದ ಕೆಲಸವೇ. ಹೇರಳವಾದ ಮುಳ್ಳುಗಳಿರುತ್ತದೆ ಅದರಲ್ಲಿ. ಮತ್ತು ಗಿಡ ಇರುವ ಜಾಗ ಕೂಡ ನೀರಿನಲ್ಲಿ ಕೆಸರಿನಲ್ಲಿ ಇರುತ್ತದೆ. ಗಿಡದ ಎಲೆ ತಂದು ಅದರ ಮುಳ್ಳು ತೆಗೆದು ಅದನ್ನು ಬೆಂಕಿಯಲ್ಲಿ ಬಾಡಿಸಿದ ನಂತರವೇ ಮೂಡೆ ಮಾಡಲು ಅದರ ಎಲೆಯನ್ನು ಬಳಸಬಹುದಾಗಿದೆ. ಎಷ್ಟೇ ಕಷ್ಟ ಆದರೂ ಕೇದಗೆಯ ಎಲೆಯಲ್ಲಿ ಮಾಡುವ ಮೂಡೆಯ ಪರಿಮಳವೇ ಬೇರೆ.ಅದು ತಿಂದವನಿಗೆಯೇ ಗೊತ್ತು.
ಈಗ ಹಲವು ಕಶಿ ಜಾತಿಯ ಮೂಡೆಯ ಗಿಡಗಳನ್ನು ಬೆಳೆಸುತ್ತರಾದರೂ ಅವು ಯಾವುದೂ ಕೇದಗೆ ಜಾತಿಗೆ ಸೇರಿದ ಮೂಡೆಯ ಎಲೆಯಿಂದ ಮಾಡಿದ ಮೂಡೆಯಷ್ಟು ಪರಿಮಳಯುತವಾಗಿರುವುದಿಲ್ಲ.
ಈಗ ಮೂಡೆ ಮಾಡುವುದು ಹೇಗೆ ಎಂದು ನೋಡೋಣ. ಮೊದಲು ತಂದ ಎಲೆಯ ಹಿಂಭಾಗದಲ್ಲಿ ಇರುವ ಮುಳ್ಳನ್ನು ತೆಗೆಯಬೇಕು. ನಂತರ ಬೆಂಕಿಗೆ ಹಿಡಿದು ಚೆನ್ನಾಗಿ ಬಾಡಿಸಬೇಕು.
ನಂತರ ಎಲೆಯನ್ನು ಒದ್ದೆ ಬಟ್ಟೆಯಿಂದ ಒರೆಸಿ, ಚೆನ್ನಾಗಿ ರೀಲ್ ಸುತ್ತಿದಂತೆ ಎಲ್ಲಾ ಎಲೆಗಳನ್ನು ಒಂದರ ಹಿಂದೆ ಒಂದರಂತೆ ಸುತ್ತುತ್ತಾ ಹೋಗಬೇಕು.ಮತ್ತು ಗಟ್ಟಿಯಾಗಿಯೇ ಸುತ್ತಬೇಕು. ಹೀಗೆ ಮಾಡುವುದಕ್ಕೆ "ಚಂದ್ರಿಕೆ" ಎಂದು ಹೆಸರು.
ಒಂದು ಚಂದ್ರಿಕೆಯಲ್ಲಿ ಹತ್ತರಿಂದ ಇಪ್ಪತ್ತು ಎಲೆಗಳನ್ನು ಬೇಕಾದರೂ ಸುತ್ತಬಹುದು. ಜಾಸ್ತಿ ಎಲೆ ಸುತ್ತಿದ್ದಂತೆ ಚಂದ್ರಿಕೆಯ ಡಯಾಮೀಟರ್(ಗಾತ್ರ) ದೊಡ್ಡದು ಆಗುತ್ತದೆ ಅಷ್ಟೇ. ಈ ರೀತಿ ಮಾಡಿ ಕನಿಷ್ಟ ಪಕ್ಷ ಒಂದು ದಿನ ಇಲ್ಲವೇ ಅರ್ಧ ದಿನ ಆದರೂ ಇಡಬೇಕು.
ಹೀಗೆ ಚಂದ್ರಿಕೆ ಮಾಡಿ ಇಡುವ ಕಾರಣ ಇಷ್ಟೇ ಹೀಗೆ ಮಾಡುವುದರಿಂದ ಎಲೆಗಳು ತುಂಬಾನೇ flexible ಆಗಿ ಬೆಂಡಾಗಿ, ನಮಗೆ ಸುಲಭವಾಗಿ ಮೂಡೆ ಮಾಡಲು ಎಲೆಯನ್ನು ಬೇಕಾದಂತೆ ತಿರುಗಿಸಲು ಸಹಾಯವಾಗುತ್ತದೆ ಎಂದು.
ನಂತರ ಚಂದ್ರಿಕೆಯನ್ನು ಬಿಡಿಸಿ ಮತ್ತೊಮ್ಮೆ ಎಲೆಯನ್ನು ಒರೆಸಬೇಕು.ಎಲೆಯಲ್ಲಿ ಇದ್ದ ನೀರಿನ ಪಸೆ, ಕೊಳೆ ಎಲ್ಲಾ ತೆಗೆಯಬೇಕು. ನಂತರ ನಾವು ಮೂಡೆಯನ್ನು ಕಟ್ಟಬೇಕು. ಇದಕ್ಕಾಗಿ ನಾವು ಬಿದಿರಿನ ಕಡ್ಡಿ, ಇಲ್ಲವೇ ಹಿಡಿಸೂಡಿಯ ಕಡ್ಡಿ(ಒಣ ತೆಂಗಿನ ಗರಿಗಳ ಕಡ್ಡಿ) ಯನ್ನು ಬಳಸಬಹುದು.
ನಮ್ಮ ಹಳ್ಳಿಯಲ್ಲಿ ಆದರೆ ನಮಗೆ ಕಾಡು ಗುಡ್ಡೆಯಲ್ಲಿ ಒಂದು ಜಾತಿಯ ಮುಳ್ಳು ಸಿಗುತ್ತದೆ. ಅದು ಸಿಕ್ಕಿದ್ದರೆ ತುಂಬಾ ಉತ್ತಮ. ಅದನ್ನು ಹಾಗೆಯೇ ಬಳಸಬಹುದು. ನಾವು "ಮೂಡೆದ ಮುಳ್ಳು" ಎಂದೇ ಹೇಳುವುದು. ಆ ಮುಳ್ಳು ಹೆಚ್ಚಾಗಿ ಬಳಕೆ ಆಗುವುದೇ ಮೂಡೆ ಮಾಡಲು.
ಈಗೀಗ ಈ ಮುಳ್ಳು ಗಿಡಗಳು ಕೂಡ ನಿಧಾನವಾಗಿ ಕಣ್ಮರೆಯಾಗುತ್ತಿದೆ. ಬಿದಿರಿನ ಕಡ್ಡಿ ಇಲ್ಲವೇ ಒಣ ತೆಂಗಿನ ಗರಿಗಳ ಕಡ್ಡಿ ಬಳಸುವುದಾದರೆ ನೀವು ಅದನ್ನು ಚಿಕ್ಕ ತುಂಡುಗಳನ್ನಾಗಿ ಮಾಡಿದ ನಂತರ ಆ ಕಡ್ಡಿಗಳನ್ನು ಕತ್ತಿಯ ಸಹಾಯದಿಂದ ಚೂಪು(sharp) ಮಾಡಬೇಕಾಗುತ್ತದೆ. ಆದರೆ ಮುಳ್ಳನ್ನೇ ಮೂಡೆ ಮಾಡಲು ಬಳಸುವುದಾದರೆ ಈ ಎಲ್ಲಾ ಕೆಲಸ ಉಳಿಯುವುದು.
ಹೀಗೆ ಮುಳ್ಳು ಇಲ್ಲವೇ ಕಡ್ಡಿ ಬಳಸಿ ಮೂಡೆ ಕಟ್ಟುವುದು ನಿಜವಾಗಿಯೂ ಒಂದು ಸುಂದರವಾದ ಆರ್ಟ್.ಒಮ್ಮೆ ಇದು ಗೊತ್ತಾದರೆ ಅದನ್ನು ಮಾಡುವುದು ನಿಜವಾಗಿಯೂ ವಿಶೇಷ ಖುಷಿಯನ್ನು ಕೊಡುತ್ತದೆ. ಆದರೆ ಅದಕ್ಕಿಂತಲೂ ಮೊದಲಿನ ಅಷ್ಟೊಂದು ಕೆಲಸವಿದೆಯಲ್ಲಾ ಅದು ಮಾತ್ರ ತುಂಬಾನೇ ಶ್ರಮದಾಯಕ ಮಾತ್ರವಲ್ಲ ಅಪಾರವಾದ ಶ್ರಮವನ್ನು ಬೇಡುವಂತಹದ್ದು. ಅಷ್ಟೆಲ್ಲಾ ಮಾಡಿದರೆನೇ ಸ್ವಾದದ ಪರಿಮಳದ ಕೇದಗೆಯ ಮೂಡೆಯನ್ನು ನಾವು ಅಷ್ಟಮಿಗೆ ಸವಿಯಬಹುದು. Instant ಆಗಿ ಮೂಡೆ ಮಾಡಲು ಸಾಧ್ಯವಿಲ್ಲ.
ಮೂಡೆಗೆ ಸ್ವಾದ ಬರುವುದು, ಆ ಪರಿಮಳ ಸೇರಿಕೊಳ್ಳುವುದು ಅದರ ಎಲೆಯಿಂದಾಗಿಯೇ. ಹೇಗೆ ಅರಶಿನದ ಎಲೆ ಕಡುಬಿಗೆ ಅದರ ಎಲೆ ಸುಗಂಧವನ್ನು ಧಾರೆ ಎರೆಯುತ್ತದೋ ಹಾಗೇ ಇಲ್ಲಿ ಮೂಡೆಯ ಎಲೆಗಳು ಮೂಡೆಗೆ ವಿಶಿಷ್ಟವಾದ ಪರಿಮಳವನ್ನು ಕೊಡುತ್ತದೆ.
ಮೂಡೆ ಕಟ್ಟಿದ ನಂತರ ಮೂಡೆ ತಿಂಡಿ ಮಾಡುವುದು ಸುಲಭ. ಇದಕ್ಕೆ ಬೇರೆ ಯಾವುದೇ ವಿಶೇಷವಾದ ಹಿಟ್ಟು ಬೇಕಾಗಿಲ್ಲ. ನಮ್ಮ ಇಡ್ಲಿಗೆಂದು ಬಳಸುವ (ಅಕ್ಕಿ+ಉದ್ದು) ಹಿಟ್ಟನ್ನೇ ಈ ಮೂಡೆಗೆ ಸುರಿದು ಹಬೆಯಲ್ಲಿ ಇಡ್ಲಿಯಂತೆ ಬೇಯಿಸಿದರೆ ಮೂಡೆ ಎಂಬ ಘಮಘಮಿಸುವ ಪರಿಮಳದ ತಿಂಡಿಯೊಂದು ಇಡ್ಲಿ ಪಾತ್ರೆಯಲ್ಲಿ ಜನ್ಮ ತಾಳುವುದು.
ಇದನ್ನು ಬೇಯಿಸುವುದು ಕೂಡ ಅಷ್ಟು ಸುಲಭವಲ್ಲ. ಕಟ್ಟಿದ ಮೂಡೆಯಲ್ಲಿ ಒಂದೇ ಒಂದು ತೂತು ಇರಬಾರದು. ತೂತು ಇರದ ಹಾಗೇ ಮುಳ್ಳಿನಲ್ಲಿ, ಕಡ್ಡಿಯಲ್ಲಿ ಮೂಡೆ ಕಟ್ಟುವುದು ಕೂಡ ಒಂದು ಕಲೆಯೇ.ಕೆಲವರು ನೇರವಾಗಿ ಇಡ್ಲಿ ಪಾತ್ರೆಯೊಳಗೆ ನೀರು ಹಾಕಿ ಅದರಲ್ಲಿ ಹಿಟ್ಟು ತುಂಬಿದ ಉದ್ದುದ್ದದ ಮೂಡೆಯನ್ನು ಇಟ್ಟು ಬೇಯಿಸುತ್ತಾರೆ. Direct Heating ಅಂದರೆ ಇದೇ. ಇದುವೇ ನಿಜವಾಗಿ ಕಷ್ಟ, ಯಾಕೆಂದರೆ ನೀರು ನೇರವಾಗಿ ಮೂಡೆಯನ್ನು ತಾಗುವುದರಿಂದ ಮೂಡೆಯಲ್ಲಿ ಯಾವುದೇ ಸಣ್ಣ ತೂತು ಇರುವಂತಿಲ್ಲ.ಚಿಕ್ಕ ತೂತು ಇದ್ದರೂ ಮೂಡೆಯೊಳಗಿರುವ ಹಿಟ್ಟು ಎಲ್ಲವೂ ನೀರಿನಲ್ಲಿ ಸೇರಿಕೊಂಡು ಬಿಡುತ್ತದೆ.
ಇನ್ನು ಕೆಲವರು ಇಡ್ಲಿ ಪಾತ್ರೆಯಲ್ಲಿರುವ ಮೇಲಿನ ಅಡ್ಡವಾದ ಪ್ಲೇಟ್ ನ ಮೇಲೆ ಚಿಕ್ಕ ಚಿಕ್ಕ ಮೂಡೆಗಳನ್ನು ಇಟ್ಟು ಬೇಯಿಸುತ್ತಾರೆ, ಪುಂಡಿ(ಅಕ್ಕಿ ಕಡುಬು) , ಅರಶಿನದ ಎಲೆ ಕಡುಬು ಬೇಯಿಸಿದಂತೆ. ಅದುವೇ Indirect heating. ಇದು ತುಂಬಾನೇ ಸೇಫ್ ಮೆತಡ್,ಇಡ್ಲಿ ಬೇಯಿಸಿದಂತೆ ಬೇಯಿಸಬಹುದು.ಹಿಟ್ಟು ಸೋರಿ ನೀರಿಗೆ ಸೇರುವ ಯಾವುದೇ ಪ್ರಮೇಯವಿಲ್ಲ ಇಲ್ಲಿ.
ಹೀಗೆ ನಮ್ಮ ಇಷ್ಟಕ್ಕೆ ತಕ್ಕಂತೆ ಮೂಡೆಯನ್ನು ಎಷ್ಟು ಉದ್ದ ಬೇಕೋ, ಎಷ್ಟು ಗಿಡ್ಡ ಬೇಕೋ ಹಾಗೆ ಮಾಡಿಕೊಂಡು ಮೂಡೆ ಮಾಡಿಕೊಳ್ಳಬಹುದು. ಆದರೂ ಮೂಡೆ ಎಂಬುದನ್ನು ಮಾಡುವುದಾದರೆ ಉದ್ದ ಉದ್ದ ಮೂಡೆ ಮಾಡಿ ಅದನ್ನು ನೇರವಾಗಿ ನೀರಿನಲ್ಲಿ ಇಟ್ಟು ಬೇಯಿಸುವುದೇ ಸಾಂಪ್ರದಾಯಿಕವಾದ ಕ್ರಮ ಆಗಿದೆ. ಹೀಗೆ ಮಾಡಿದರೆ ನಮಗೆ ತುಂಬಾ ಚಿಕ್ಕ ಚಿಕ್ಕ ಮೂಡೆಗಳ ಅವಶ್ಯಕತೆ ಇರುವುದಿಲ್ಲ. ಗೊತ್ತಿದ್ದವರು ಹೆಚ್ಚಾಗಿ ಹೀಗೆಯೇ ಮಾಡುವುದು.
ಮೂಡೆಯನ್ನು ಕಟ್ಟಿ ಈಗೀಗ ಮಾರುಕಟ್ಟೆಯಲ್ಲಿ ಮಾರುವುದನ್ನು ಕೂಡ ಕಾಣಬಹುದು.ಮಂಗಳೂರಿನ ಕಾರ್ ಸ್ಟ್ರೀಟ್ ನಲ್ಲಿ ವರ್ಷದ ಹೆಚ್ಚಿನ ದಿನ ಅಲ್ಲಿಯೇ ಮೂಡೆ ಕಟ್ಟಿ ಅಲ್ಲಿಯೇ ಮಾರುವವರನ್ನು ಗಮನಿಸಿದ್ದೇನೆ.ಬೇರೆ ದಿನ ಒಂದು ಮೂಡೆಗೆ ಐದು ರೂಪಾಯಿ ಇಲ್ಲ ಹತ್ತು ರೂಪಾಯಿ ಇದ್ದರೆ ಅಷ್ಟಮಿ ಹತ್ತಿರ ಬಂತೆಂದರೆ ನಮ್ಮ ಮಾರುಕಟ್ಟೆಯಲ್ಲಿ ಇಪ್ಪತ್ತು ರೂಪಾಯಿ, ಇಪ್ಪತ್ತೈದು, ಮೂವತ್ತು ರೂಪಾಯಿಗಳವರೆಗೂ ಹೋಗುವುದು ಇದೆ. ಆದರೂ ಜನರು ಎಷ್ಟೇ ಹಣ ಆದರೂ ಕೃಷ್ಣ ಅಷ್ಟಮಿ ಎಂಬ ಹಬ್ಬದ ಪ್ರೀತಿಗೆ, ಮೂಡೆಯನ್ನು ಇಷ್ಟ ಪಟ್ಟೇ ಕೊಂಡು, ಮನೆಗೆ ತಗೊಂಡು ಹೋಗುವುದನ್ನು ನಮ್ಮಲ್ಲಿ ಕಾಣಬಹುದು.
ಮೂಡೆ ಎನ್ನುವುದು ನಮ್ಮಲ್ಲಿ ಹೆಚ್ಚಿನವರಿಗೆ ಬಾಲ್ಯದ ನೆನಪು.
ಮನೆಯವರೆಲ್ಲಾ ಸೇರಿ ಒಂದು ವಾರ ಮೊದಲೇ plan ಮಾಡಿ, ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡು ಮಾಡುವ ಒಂದು ಅಧ್ಬುತ ತಿಂಡಿ ಮೂಡೆ. ನಿಜವಾಗಿಯೂ ಇದಕ್ಕಾಗಿ ಮಾಡಿಕೊಳ್ಳುವ ಸಿದ್ಧತೆ ಉಳಿದೆಲ್ಲಾ ತಿಂಡಿಗಳಿಗಿಂತಲೂ ಸುಧೀರ್ಘವಾದದ್ದೇ..
ನನ್ನದಂತು ಬಾಲ್ಯ ಈ ಮೂಡೆಯ ಚಂದ್ರಿಕೆಯಂತೆ ಹಲವಾರು ಮೂಡೆಯ ಸವಿ ಸವಿ ನೆನಪುಗಳನ್ನು ತನ್ನೊಂದಿಗೆ ಸುತ್ತಿಕೊಂಡಿದೆ. ಮನೆಯಲ್ಲಿ ಎಲ್ಲರೂ ಮಾಡುವಾಗ ಇಷ್ಟೇ ಪಟ್ಟೆ ಕಲಿತೆ. ಅದನ್ನು ಮಾಡುವುದೆಂದರೆ ನನಗೆನೋ ಬಹಳ ದೊಡ್ಡ Craftsman ಎಂಬತೆ ಫೀಲು ಬರುತ್ತದೆ.
ಅಷ್ಟಮಿ ಬಂತೆಂದರೆ ನನ್ನೆಲ್ಲಾ ಧ್ಯಾನ ಮೂಡೆಯ ಗಿಡ, ಮೂಡೆಯ ಎಲೆ, ಎಲೆ ಸುಡುವುದು, ಚಂದ್ರಿಕೆ ಸುತ್ತುವುದು, ಹಿಟ್ಟು ಹಾಕಿ ಹಬೆಯಲ್ಲಿ ಮೂಡೆ ಬೇಯಿಸುವುದು, ಬೇಯುತ್ತಿರುವಾಗಲೇ ಇಡ್ಲಿ ಪಾತ್ರೆಯ ಬಾಯಿ ತೆಗದು ಬಿಸಿ ಬಸಿ ಹಬೆಯ ಸಹಿತ ಮೂಡೆಯ ಪರಿಮಳವನ್ನು ಹಾಗೆಯೇ ಕಣ್ಣು ಮುಚ್ಚಿ ಮೂಗಿನಲ್ಲಿ ಧೀರ್ಘವಾಗಿ ಆಘ್ರಾಣಿಸಿ ಆಸ್ವಾದಿಸುವುದು.. ನಂತರ ಹಾಗೇ ಸಿಹಿ ಕಾಯಿಹಾಲಿನೊಂದಿಗೆ ಸವಿಯುವುದು.. ಹೀಗೆ ಅಷ್ಟಮಿ ಬಂದೊಡನೆ ಇದರಲ್ಲಿಯೇ ನನ್ನೆಲ್ಲಾ ಧ್ಯಾನ ಕೇಂದ್ರೀಕೃತವಾಗಿರುತ್ತದೆ.
ನಮ್ಮ ಮನೆಯ ಅಕ್ಕ ಪಕ್ಕ ಹೆಚ್ಚಿನವರಿಗೆ ಮೂಡೆ ಕಟ್ಟಲು ಬರುವುದಿಲ್ಲ. ಹಾಗಾಗಿ ಅಷ್ಟಮಿ ಬಂತೆಂದರೆ ನನ್ನ ಬಳಿಗೆ ಯಾರಿಗೆ ಎಷ್ಟು ಮೂಡೆ ಬೇಕು ಎಂಬ ಪಟ್ಟಿ,ನನ್ನ ಕೈಗೆ ಸೇರುತ್ತದೆ ಒಂದು ವಾರ ಮೊದಲೇ. ಕೆಲವರು ಮನೆಗೆ ಬಂದು ಹೇಳುತ್ತಾರೆ, ಕೆಲವರು ರೋಡಿನಲ್ಲಿ ಸಿಕ್ಕಾಗ, ಇನ್ನು ಕೆಲವರು WhatsApp, Facebook ನಲ್ಲಿ ಮೆಸೇಜ್ ಮಾಡಿ,ಇಲ್ಲವೇ ಇನ್ನು ಕೆಲವರು ಕಾಲ್ ಮಾಡಿಯೇ ಹೇಳುತ್ತಾರೆ. ಪಚ್ಚು ನನಗಿಷ್ಟು ಮೂಡೆ ನೀನೇ ಮಾಡಿಕೊಡಬೇಕು..ಎಂದು.
ನಿಜವಾಗಿಯೂ ಮೂಡೆ ಕಟ್ಟುವುದು, ಗುಂಡ ಕಟ್ಟುವುದು ನನ್ನ ಅತೀ ಪ್ರೀಯ ಕೆಲಸಗಳಲ್ಲಿ ಒಂದು. ಹಾಗಾಗಿ ಅಷ್ಟಮಿ ಬಂತೆಂದರೆ ಮನೆಗಾಗಿ ಆದರೂ ಮೂಡೆಯ ಎಲೆ ತಂದು, ಗುಡ್ಡದಿಂದ ಮುಳ್ಳು ತಂದು ಒಂದಷ್ಟು ಮೂಡೆ ನಾನು ಕಟ್ಟಿಯೇ ಕಟ್ಟುತ್ತೇನೆ.
ಈ ಸಮಯದಲ್ಲಿ ಯಾರಾದರೂ ಕೇಳಿದರೆ ಇಲ್ಲ ಎನ್ನಲು ಮನಸ್ಸು ಬರುವುದಿಲ್ಲ. ಹಾಗಾಗಿ ಎಲ್ಲರಿಗೂ ಸೇರಿಸಿಯೇ ಮೂಡೆ ಕಟ್ಟುತ್ತೇನೆ. ತಗೊಂಡು ಹೋಗುವವರು ಕೂಡ ಹಾಗೇ ಸುಮ್ಮನೆ ತಗೊಂಡು ಹೋಗುವುದೇ ಇಲ್ಲ. ಶುರುವಲ್ಲಿ ಹಣ ಎಲ್ಲಾ ಬೇಡವೆಂದರೂ "ಮೂಡೆ ಮಾಡಲು ಎಷ್ಟು ಕೆಲಸ ಹಿಡಿಯುತ್ತೇ.. ಎಷ್ಟು ಶ್ರಮ ಇದೆ.. ಅದೂ ಅಲ್ಲದೇ ಮಾರುಕಟ್ಟೆಯಲ್ಲಿ ಈ ಅಷ್ಟಮಿಯ ಸೀಸನ್ ನಲ್ಲಿ ಎಷ್ಟು ರೇಟ್ ಇದೆ ಎಂದು ನಮಗೂ ಗೊತ್ತು.. ಹಾಗಾಗಿ ಬೇಡ ಎಂದು ಹೇಳಬೇಡ..." ಎಂದು ಹೇಳಿ ಕೈಗಿಷ್ಟು ಹಣ ತುರುಕಿ ನನ್ನಿಂದ ಮೂಡೆ ತಗೊಂಡು ಹೋಗಿದ್ದರು ಆರಂಭದಲ್ಲಿ ಕೆಲವರು.ಆ ಸಂಪಾದನೆ ಇದೆಯಲ್ಲ ನಿಜವಾಗಿಯೂ ದಿವ್ಯವಾದ ಆನಂದ ಕೊಟ್ಟಿತ್ತು. ನಂತರ ಪ್ರತೀ ವರ್ಷವೂ ಅವರೇ ಇಷ್ಟು ಎಂದು ಹಣ ಫಿಕ್ಸ್ ಮಾಡಿ ಅವರೇ ಹಣ ಕೊಟ್ಟು ನನ್ನಿಂದ ಮೂಡೆ ತೆಗೆದುಕೊಂಡು ಹೋಗುತ್ತಿದ್ದದ್ದು ರೂಡಿ ಆಗಿ ಬಿಟ್ಟಿತ್ತು.
ಕೇವಲ ಒಂದು ರೂಪಾಯಿಯೂ ಖರ್ಚು ಮಾಡದೇ ಅಷ್ಟಮಿ ಹಬ್ಬದ ಪ್ರೀತಿ, ಕೃಷ್ಣನ ಪ್ರೀತಿ,ಮೂಡೆಯ ಪ್ರೀತಿಗಾಗಿ ಮಾಡಿದ್ದ ಮೂಡೆಯೊಂದು ಬೇಡ ಬೇಡ ಎಂದು ಹೇಳಿದರೂ ಕೂಡ ನನಗೆ ಪ್ರತೀ ವರ್ಷ ಹೆಚ್ಚು ಕಡಿಮೆ ಒಂದು ಸಾವಿರದಷ್ಟು ಹಣವನ್ನು ಕೈಯಲ್ಲಿ ಇಟ್ಟೇ ಹೋಗುತ್ತಿತ್ತು. ಅಷ್ಟಮಿ ಸಮಯದ ನನ್ನ ಪಾಕೆಟ್ ಮನಿ ಅಂದರೆ ಅದೇ.ಆ ಹಣವನ್ನು ಬೇರೆ ದಿನಗಳಂತೆ ಅದು ಯಾಕೋ ಖರ್ಚು ಮಾಡಲು ಮನಸ್ಸೇ ಬರುತ್ತಿರಲಿಲ್ಲ. ಇಂದಿಗೂ ಮೂಡೆಯ ಹಣಕ್ಕೆ ಸಂಬಂಧಿಸಿದಂತೆ ಇದೇ ಮನಸ್ಥಿತಿ ನನ್ನಲ್ಲಿ ಇದೆ.
ಕೃಷ್ಣ ಜನ್ಮಾಷ್ಟಮಿಯ ದಿನ ಎಲ್ಲರಿಗೂ ಕೃಷ್ಣನ ನೆನಪು ಅತಿಯಾಗಿ ಬಂದೇ ಬರುತ್ತದೆ ಅದೇ ರೀತಿ ಆ ದಿನ ಕೃಷ್ಣನ ಜೊತೆಗೆಯೇ ಮೂಡೆಯೆಂಬ ಅತೀ ಸುಂದರ, ಅತೀ ಸ್ವಾದದ ತಿಂಡಿಯೊಂದು ಅತಿಯಾಗಿಯೇ ನೆನಪಾಗಿ ಬಿಟ್ಟರೆ ಆ ಊರಿನ ಹೆಸರು ಖಂಡಿತವಾಗಿಯೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಎಂದೇ ಆಗಿರುತ್ತದೆ 😊😍.
ಕೃಷ್ಣನ ಜನ್ಮಾಷ್ಟಮಿಗೂ.. ಕೇದಗೆಯ ಮೂಡೆಗೂ ಇಲ್ಲಿ ಒಂದು ಬಿಡಿಸಲಾರದ ನಂಟು. ಅದು ಇಂದಿಗೂ ಮುಂದುವರಿದಿದೆ.
ಇಲ್ಲಿಯ ಅಷ್ಟಮಿಯಲ್ಲಿ ಅರಳುವ ಪರಿಮಳಗಳಲ್ಲಿ ಎಂದಿಗೂ ಮೂಡೆಯ ಪರಿಮಳವೇ ಅತಿಯಾಗಿ ಇರುವುದು..
ಮಾತ್ರವಲ್ಲ ಇಂದಿಗೂ ಕೇದಗೆಯ ಎಲೆಯ ಚಂದ್ರಿಕೆಯನ್ನು ತೆಗೆದು ಒಂದೊಂದೇ ಮೂಡೆ ಮಾಡುವಾಗ ನನ್ನಲ್ಲೂ ಕೂಡ ಬಾಲ್ಯದ ಅಷ್ಟಮಿ ಹಾಗೂ ಬಾಲ್ಯದ ನೆನಪುಗಳು ಮೂಡೆಯ ಚಂದ್ರಿಕೆಯ ಹಾಗೇ ನಿಧಾನವಾಗಿ ಬಿಡಿಸಿಕೊಳ್ಳಲು ಶುರುವಾಗುತ್ತದೆ.
ಮತ್ತು ಆ ನೆನಪುಗಳಲ್ಲೇ ಕಳೆದು ಹೋಗುವುದೆಂದರೆ ನನಗೆ ಅದೇನೋ ವಿಪರೀತ ಇಷ್ಟ.. ಇಡ್ಲಿ ಪಾತ್ರೆಯೊಳಗಿನ ಹಬೆಯಲ್ಲಿ ಬೇಯುತ್ತಿರುವ ಮೂಡೆಯ ಪರಿಮಳದ ಘಮವನ್ನು ಹಾಗೇ ಮೂಗಿನ ಹೊಳ್ಳೆಗಳೆರಡನ್ನು ಅರಳಿಸಿ ಆಘ್ರಾಣಿಸಿಕೊಂಡಾಗ ಸಿಗುವ ಸುಖದಂತೆ.. ಅಷ್ಟಮಿ ಹಾಗೂ ಅಷ್ಟಮಿಯ ಮೂಡೆಯ ನೆನಪು ನನ್ನಲ್ಲಿ ಎಂದಿಗೂ ತುಂಬಾನೇ ಅಪ್ಯಾಯಮಾನವಾದ್ದು 😊
ಜನ್ಮಾಷ್ಟಮಿಯನ್ನು ಆಚರಿಸುವಾಗ .. ಅಷ್ಟಮಿಯ ಮೂಡೆಯನ್ನು ಕೂಡ ಎಲ್ಲರೂ ಮರೆಯದೇ ಸವಿಯಿರಿ .. ☺️😋
ನಮೋ ಭಗವತೇ ವಾಸುದೇವಾಯ 😊🙏
.....................................................................................
#ಏನೋ_ಒಂದು..
Ab Pacchu
Moodubidire
Comments
Post a Comment