ಅವನು ಕದಿಯದಿದ್ದರೆ ಅದೊಂದು ಬೆಣ್ಣೆಯೇ

 

ಅದು ಮುದ್ದುಕೃಷ್ಣ ವೇಷ ಸ್ಪರ್ಧೆ.


ತಾಯಿಯಂದಿರು ತಮ್ಮ ತಮ್ಮ ಮಗುವಿಗೆ ಸಾಕಷ್ಟು ನೀಲಿ ಬಣ್ಣ ಮೆತ್ತಿ....


ತಲೆಯ ಮಣಿ ಮಣಿಗಳ ಕಿರೀಟಕ್ಕೊಂದು ನವಿಲುಗರಿ ಸಿಕ್ಕಿಸಿ....


ಕೈಗೊಂದು ನಾಲ್ಕೈದು ಕಣ್ಣುಗಳ ಪುಟ್ಟ ಕೊಳಲು ಕೊಟ್ಟು..


ತಮ್ಮ ಕಣ್ಣ ದೃಷ್ಟಿಯೇ ತಮ್ಮ ಮಗುವಿನ ಮೇಲೆ ಬೀಳಬಹುದು ಎಂದು ಸಾಕಷ್ಟು ಬಾರಿ ದೃಷ್ಟಿ ತೆಗೆದು...


ಮಗುವನ್ನು ಭದ್ರವಾಗಿ ಕೈಯಲ್ಲಿ ಹಿಡಿದು ಅಲ್ಲಿಗೆ ಕರೆ ತಂದಿದ್ದಾರೆ.. 


ಎಲ್ಲಾ ಮಕ್ಕಳು ಅಲ್ಲಿ ಬಾಲಕೃಷ್ಣರಾಗಿ  ಒಡಾಡಿಕೊಂಡಿದ್ದಾರೆ.


ಆಹಾ ಎಷ್ಟೊಂದು ಕೃಷ್ಣರು.. 


ಅದನ್ನು ನೋಡುವುದೇ ಚಂದ.


ಎಲ್ಲೆಲ್ಲೂ ಬರೀ ಮುದ್ದು ಕೃಷ್ಣರೇ... 


ನೋಡಿದವರಿಗೆ ನೀಲಮೇಘ ಶ್ಯಾಮ ನಿತ್ಯಾನಂದ ಧಾಮ ಅನ್ನಿಸದೇ ಇರದು ಅದು.. 


ಒಂದು ಕೃಷ್ಣ ವೇಷದಾರಿ ಪುಟ್ಟ ಮಗು ತನ್ನ ಅಮ್ಮನಲ್ಲಿ ಮುಗ್ಧವಾಗಿಯೇ ಕೇಳಿತು.


ಅಮ್ಮಾ...


ಏನು ಕಂದಾ..


ಅಮ್ಮಾ.. ನಮಗಿಲ್ಲಿ ಏತಕ್ಕೆ ಬೆಣ್ಣೆ ತಿನ್ನಲು ಕೊಡುತ್ತಿದ್ದಾರೆ..


ಏಕೆಂದರೆ ಕೃಷ್ಣ ಪರಮಾತ್ಮನಿಗೆ ಬೆಣ್ಣೆ ಎಂದರೆ ಅತೀ ಇಷ್ಟ ಕಣಪ್ಪಾ ಅದಕ್ಕಾಗಿ ಬೆಣ್ಣೆ ಕೊಡುತ್ತಿದ್ದಾರೆ.....


ಆತನಿಗೆ ಬೆಣ್ಣೆ ಎಂದರೆ ಅಷ್ಟೊಂದು ಇಷ್ಟವೇ.... ಮಗು ಮುಗ್ದವಾಗಿ ಕೇಳಿತು.


ಹೌದು ಕಂದಾ.. ಅದಕ್ಕಾಗಿ ಬಾಲಕೃಷ್ಣ ಬೃಂದಾವನದ ಮನೆ ಮನೆಗಳ  ಬೆಣ್ಣೆಯನ್ನು ಕದ್ದು ತಿನ್ನುತ್ತಿದ್ದನಂತೆ..


ಅಮ್ಮಾ... ಅವನಿಗೆ ಅಲ್ಲಿ ಯಾರೂ ಬೈಯುತ್ತಿರಲಿಲ್ಲವೇ


ಇಲ್ಲ.. ಯಾರೂ ಇಲ್ಲ.. ಆದರೂ ಒಬ್ಬಳು ಮಾತ್ರ ಅವಶ್ಯವಾಗಿಯೇ ಬೈಯುತ್ತಿದ್ದಳು..


ಯಾರು ಅವಳು ?


ಅದು ಅವನ ತಾಯಿ.. ಯಶೋದೆ..


ಯಾಕೆ ಅಮ್ಮ ಬೇರೆಯವರು ನಮ್ಮ ಕೃಷ್ಣನಿಗೆ ಬೆಣ್ಣೆ ಕದ್ದರೆ ಬೈಯುವುದಿಲ್ಲ..


ಏಕೆಂದರೆ ಬೃಂದಾವನದ ಜನರು ತಮ್ಮ ತಮ್ಮ ಮನೆಗಳಲ್ಲಿ ಬೆಣ್ಣೆ ಕಡೆಯುತ್ತಿದ್ದುದೇ, ಗಡಿಗೆಗಳಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದುದೇ.. ಕೃಷ್ಣ ಬರಲಿ.. ಬಂದು ಗಡಿಗೆ ಒಡೆಯಲಿ.. ಅಷ್ಟೂ ಬೆಣ್ಣೆಯನ್ನು ತಿಂದು ಹೋಗಲಿ ಎಂದೇ ಅವರೆಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಬೆಣ್ಣೆಯನ್ನು ಬಲು ಪ್ರೀತಿಯಿಂದ ಕಡೆದು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದರು..ಅದನ್ನು ಅವರು ಅವರ ಭಾಗ್ಯ ಎಂದೇ ತಿಳಿದಿದ್ದರು ಕಂದಾ.. 


ಹೌದೇ ಅಮ್ಮಾ...


ಹೌದು .. ಧೌರ್ಭಾಗ್ಯ ಅಂದರೆ ಯಾವುದು ಗೊತ್ತೇನು... ಯಾರ ಮನೆಯ ಬೆಣ್ಣೆ ಕದ್ದು ಹೋಗುವುದಿಲ್ಲವೋ.. ಯಾವ ಬೆಣ್ಣೆಯನ್ನು ಕೃಷ್ಣ ಸೇವಿಸುವುದಿಲ್ಲವೋ... ಯಾವ ಗಡಿಗೆಗಳು ಕೃಷ್ಣನಿಂದಾಗಿ ಒಡೆದು ಹೋಗುವುದಿಲ್ಲವೋ... ಅವುಗಳದ್ದು  ನಿಜವಾದ ಅರ್ಥದ ಧೌರ್ಭಾಗ್ಯವಾಗಿತ್ತು.


ಅಮ್ಮಾ...


ಏನು ಕಂದಾ...


ಆದರೂ ಕದಿಯುವುದು ತಪ್ಪು ಅಲ್ಲವೇ ಅಮ್ಮಾ.. ನೀನೇ ಹೇಳಿ ಕೊಟ್ಟಿದ್ದೀಯಾ ನನಗೆ.. ನಮ್ಮ ಭಗವಂತ ಕದ್ದರೆ ಅದು ಹೇಗೆ ಸರಿ ಆಗುತ್ತದೆ ಅಮ್ಮಾ .


ಮುದ್ದು ಕೃಷ್ಣನ ರೂಪದಲ್ಲಿ ಇದ್ದ ಮುದ್ದು ಕಂದನ ಪ್ರಶ್ನೆಗೆ ತಾಯಿ ನಕ್ಕಳು, ಮತ್ತು ಹೇಳಿದಳು


- ಯಾವುದು ಕದಿಯುವುದರಿಂದ ಎಲ್ಲರಿಗೂ ಆನಂದವಾಗುವುದೋ ಅದನ್ನು ಕದಿಯಬಹುದು ಮತ್ತು ಜೀವನದಲ್ಲಿ ಕದಿಯುವುದಾದರೆ ಅವಶ್ಯವಾಗಿ ಅಂತಹದ್ದನ್ನೇ  ಕದಿಯಬೇಕು 


ಅಂದರೆ..?


ಕೃಷ್ಣ ಬರೀ ಬೆಣ್ಣೆ ಕದಿಯಲಿಲ್ಲ ಕಂದಾ.. ಬೆಣ್ಣೆ ಕದಿಯುವುದರೊಂದಿಗೆ ಅವರೆಲ್ಲರ ಹೃದಯವನ್ನು  ಕದ್ದ..ಆ ಮೂಲಕ ಅವರೆಲ್ಲರ ಮನಸನ್ನು ಗೆದ್ದ..


ಅಮ್ಮಾ....


ಏನು...


ನಾನು ಕೂಡ ಕೃಷ್ಣನೇ ಅಲ್ಲವೇ..


ಎಲ್ಲ ಮಕ್ಕಳು ಭಗವಂತನ ಸ್ವರೂಪವೇ ಕಣಪ್ಪಾ.. ಅವಶ್ಯವಾಗಿ ನೀನು ಕೂಡ ಕೃಷ್ಣನೇ.. ನನ್ನ ಮುದ್ದು ಕೃಷ್ಣ ನೀನು. 


ಹಾಗಾದರೆ ನಾನು ಪಕ್ಕದ ಮನೆಯ ಬೆಣ್ಣೆಯನ್ನು ಕದಿಯಬಹುದೇ ಅಮ್ಮಾ..


ತಾಯಿ ನಕ್ಕಳು..


ಮಗು ಕೇಳಿತು ಮುಗ್ದವಾಗಿಯೇ..


ಏಕೆ ನಗುತಿದ್ದೀಯಾ ಅಮ್ಮಾ..


ತಾಯಿ ನಗುತ್ತಲೇ ಹೇಳಿದಳು..


- ಅವಶ್ಯವಾಗಿ ಕದಿಯಬಹುದು.. ಆದರೆ ನೀನು ಕದ್ದರೆ ಆ ಮನೆಯ  ಪುಟ್ಟ ಕೃಷ್ಣನೂ ಒಂದು ದಿನ ನಮ್ಮ ಮನೆಗೆ ಬೆಣ್ಣೆ ಕದಿಯಲು ಬರಬಹುದು ಮತ್ತು ನಿನಗೆಂದೇ ನಾನು ತೆಗೆದಿಟ್ಟಿರುವ ಅಷ್ಟೂ  ಬೆಣ್ಣೆಯನ್ನು, ತಿಂಡಿ ತಿನಿಸುಗಳನ್ನು ಆ ಮುದ್ದು ಕೃಷ್ಣ ಕದ್ದು ಓಡಬಹುದು..


ಮಗು ಗೊಂದಲದಲ್ಲಿ ಬಿತ್ತು...


ಅಮ್ಮಾ...


ಏನು...


ಗಡಿಗೆ ಬೆಣ್ಣೆಗಳನ್ನು  ಭಗವಂತ ಕೃಷ್ಣನೇ ಕದಿಯಲಿ ಅಮ್ಮಾ..ನಮಗೆ ಯಾಕೆ ಅಷ್ಟು ಬೆಣ್ಣೆ ಅಲ್ಲವೇ. ನಾವು ನಮ್ಮ ನಮ್ಮ ಮನೆಯ ಬೆಣ್ಣೆಗಳನ್ನು ಮಾತ್ರ ತಿನ್ನೋಣ..


ಆಯಿತು.. ಸದ್ಯಕ್ಕೆ ಇದನ್ನು ತಿನ್ನು... ಎಂದು ನಗುತ್ತಲೇ  ತಾಯಿ ತನ್ನ ಮಗುವಿಗೆ ಮುದ್ದು ಕೃಷ್ಣ ಸ್ಪರ್ಧೆಯ ಆಯೋಜಕರು ನೀಡಿದ್ದ ಒಂದು ಚೂರು ಬೆಣ್ಣೆಯನ್ನು ತಿನ್ನಿಸಲು ಶುರು ಮಾಡಿದಳು.


ತಾಯಿ ಹಾಗೂ ಮಗುವಿನಲ್ಲಿ ಇಬ್ಬರಲೂ ಸುಖವಿತ್ತು...ಆನಂದವಿತ್ತು...ಸಂತೋಷವಿತ್ತು.. 😊


ಕೃಷ್ಣ ಅಂದರೆ ಹಾಗೇ ಅಲ್ಲವೇ.. ಅವ ಸುಖದ, ಧರ್ಮದ, ಜ್ಞಾನದ ಹೊಳೆ ಹರಿಸುವ ದೇವರು.


ಅವನಿದ್ದಲ್ಲಿ ಒಂದು ದಿವ್ಯವಾದ ಆನಂದ ಹಾಗೇ ಪಸರಿಸಿಕೊಂಡಿರುತ್ತದೆ, ಆವರಿಸಿಕೊಂಡಿರುತ್ತದೆ.


ಅವನಂತಹದ್ದೇ ನಗು ಎಲ್ಲರ ಮುಖದಲ್ಲೂ ಅನುದಿನವೂ ಇರಲಿ.. 😊🙏


ಹೆಣ್ಣಾಗಲಿ ಗಂಡಾಗಲಿ ನಮ್ಮ ಮನೆಯ ಮುದ್ದು ಮಕ್ಕಳಲ್ಲಿ ಒಬ್ಬ ಬಾಲಕೃಷ್ಣ ಯಾವತ್ತೂ ಇರಲಿ,ಆ ಮಗುವಿನ ವಿನೋದಗಳಲ್ಲಿ ಶ್ರೀ ಕೃಷ್ಣನ ಲೀಲೆಗಳನ್ನು ಸ್ಮರಿಸುವ ಮನಸ್ಸು ನಮ್ಮದಾಗಲಿ.. 


#ಅತಸೀ_ಪುಷ್ಪ_ಸಂಕಾಶಂ_ಹಾರ_ನೂಪುರ_ಶೋಭಿತಮ್, 

#ರತ್ನ_ಕಂಕಣ_ಕೇಯೂರಂ_ಕೃಷ್ಣಂ_ವಂದೇ_ಜಗದ್ಗುರುಮ್ 😊🙏


#ಕೃಷ್ಣಾ. 

ab pacchu

moodbidri

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ