ಕಲ್ಲುಗಳೆಡೆಯಲ್ಲಿ ಒಂದು ಸರಳ ಸುಂದರ ಬಾಳ್ವೆ..
ಚಿಕ್ಕಂದಿನಲ್ಲಿ ಈ ನಮ್ಮ ಶಿರಾಡಿ ಘಾಟ್ ಮತ್ತು ಚಾರ್ಮಾಡಿ ಘಾಟ್ ಸೆಕ್ಷನ್ ಗಳಲ್ಲಿ ಬಸ್ಸಿನಲ್ಲಿ ಹೋಗುವಾಗ,ಕಾಡಿನ ಮಧ್ಯೆ ಮಧ್ಯೆ ಒಂದೊಂದು ಸುಂದರವಾದ ಬಾಳೆಗಿಡವೊಂದು ಅಲ್ಲಲ್ಲಿ ಆವಾಗವಾಗ ಇಣುಕಿ ನೋಡುತ್ತಾ ನನ್ನನ್ನು ಅದರೆಡೆಗೆ ಬಹಳನೇ ಆಕರ್ಷಿಸುತ್ತಿತ್ತು.
ಕಾಡಿನಲ್ಲಿ ಬಾಳೆ ಆಗುತ್ತಾ.. ಹಣ್ಣೂ ಕೂಡ ಆಗುತ್ತಾ.. ಎಂದು ಕಣ್ಣು ಬಾಯಿ ಬಿಟ್ಟುಕೊಂಡು ಬಸ್ಸಿನ ವಿಂಡೋದಿಂದ ಅದನ್ನೇ ಮತ್ತೆ ಹುಡುಕಿ ಹುಡುಕಿ ನೋಡುತ್ತಾ ಹೋಗುತ್ತಿದ್ದದ್ದು ಉಂಟು.ಮತ್ತೆ ಮತ್ತೆ ಆ ಬಾಳೆಗಿಡಗಳು ಕಣ್ಣಿಗೆ ಬಿದ್ದಾಗ ಅದೆನೋ ಒಂಥರಾ ಖುಷಿ.
ಅಂದ ಹಾಗೆ ಆ ಮುದ್ದು ಬಾಳೆಯ ಹೆಸರೇ ಕಲ್ಲುಬಾಳೆ ಅಂತ.ಎರಡು ಕಾರಣಗಳಿಗಾಗಿ ಇದಕ್ಕೆ ಈ ಹೆಸರು ಬಹಳನೇ ಸರಿ ಹೊಂದುತ್ತದೆ.ಒಂದು ಇದು ಕಾಡುಗಳಲ್ಲಿರುವ ದೊಡ್ಡ ಡೊಡ್ಡ ಬಂಡೆ ಕಲ್ಲುಗಳ ಸಂದುಗಳಲ್ಲಿ ಸ್ವಲ್ಪವೇ ಸ್ವಲ್ಪ ಜಾಗ ಸಿಕ್ಕರೂ,ಹಿಡಿ ಮಣ್ಣು ಅನ್ನು ತನ್ನ ಬೇರುಗಳಲ್ಲಿ ಭದ್ರವಾಗಿ ಹಿಡಿದುಕೊಂಡು,ಇದು ಹಾಗೆಯೇ ದೃಢವಾಗಿ ಬೆಳೆದು ನಿಂತು,ಗತ್ತಿನಿಂದ ಸುತ್ತಲೂ ತನ್ನ ದೃಷ್ಟಿ ಹರಿಸುತ್ತದೆ.ಇದರ ಹೆಸರಿಗೆ ಮತ್ತೊಂದು ಪ್ರಮುಖ ಕಾರಣ ಈ ಗಿಡದ ಬಾಳೆಹಣ್ಣಿನಲ್ಲಿ ಹಣ್ಣಿನ ಪ್ರಮಾಣಕ್ಕಿಂತಲೂ ಕಲ್ಲಿನಂತ ಬೀಜಗಳೇ ಅಧಿಕವಾಗಿರುವುದು.
ಇತರ ಬಾಳೆಗಿಡಗಳಂತೆ ಇದು ಜಾಸ್ತಿ ಎತ್ತರಕ್ಕೆ ಬೆಳೆಯುವುದಿಲ್ಲ. ಬುಡದಿಂದಲೇ ಉದ್ದಕ್ಕೆ ಮತ್ತು ಅಗಲಕ್ಕೆ ಬಾಳೆ ಎಲೆ ಬಿಡುತ್ತಾ ಹಾಗೇ ಬೆಳೆಯುತ್ತಾ ಹೋಗುತ್ತದೆ ಇದು.ಕಾಡಿನಿಂದ ತೋಟಕ್ಕೆ ಏನಾದರೂ ಇದನ್ನು ತಂದು ನೆಟ್ಟರೆ ನೆಲದಿಂದ ಸ್ವಲ್ಪ ಹೆಚ್ಚು ಎತ್ತರದವರೆಗೂ ಕೂಡ ಇದು ಬೆಳೆಯ ಬಲ್ಲದು.ತೋಟದಲ್ಲಿ ಇದನ್ನು ಬೆಳೆಯುವ ಒಂದೇ ಒಂದು ಅಪಾಯ ಏನೆಂದರೆ ಇದು ಆನಂತರ ತೋಟವೆಲ್ಲಾ ಪಸರಿಸಿಕೊಂಡು ಬೇಕಾದಷ್ಟು ಗಿಡಗಳು ಹುಟ್ಟಿಕೊಂಡು ಇತರ ಬಾಳೆಗಿಡಗಳಿಗೆ ಕಂಟಕವಾಗಿ ಬಿಡುವ ಸಾಧ್ಯತೆ ಇದೆ.
ಅದಕ್ಕಾಗಿ ಇದನ್ನು ತೋಟಕ್ಕೆ ತೆಗೆದುಕೊಂಡು ಬರುವ ಸಾಹಸ ಹೆಚ್ಚಿನವರು ಮಾಡುವುದಿಲ್ಲ.ಆದರೆ ಇದರಲ್ಲಿರುವ ಹೇರಳವಾದ ಔಷಧಿಯ ಗುಣದ ಕಾರಣ ಇದನ್ನು ಬಹು ಪ್ರೀತಿಯಿಂದ ತಂದು ತಮ್ಮ ತೋಟದಲ್ಲಿ ನೆಟ್ಟು ಬೆಳೆಸುತ್ತಾರೆ. ಕಾಡಿನಲ್ಲಿ ಬೆಳೆಯುವ ಗಿಡವಾದ ಕಾರಣ ಹೆಚ್ಚು ಆರೈಕೆ ಬೇಡದ ಗಿಡ ಇದು.ಹಾಗೇ ಬೆಳೆದು ಬಿಡುತ್ತದೆ.
ಪ್ರಕೃತಿಯಲ್ಲಿ ಅದರಷ್ಟಕ್ಕೆ ಬೆಳೆಯುವ ಈ ಕಲ್ಲುಬಾಳೆ ಉಂಟಲ್ಲ,ಇತರ ಎಲ್ಲಾ ಬಾಳೆಗಿಡಗಳಿಗಿಂತಲೂ ಮನುಷ್ಯನಿಗೆ ಬಹಳನೇ ಉಪಕಾರಿ.ಒಂದು ರೀತಿಯಲ್ಲಿ ಮನುಷ್ಯನಿಗೆ ಸಂಜೀವಿನಿ ಇದ್ದಂತೆ ಎಂದು ಹೇಳಬಹುದು.ಇದರ ದಿಂಡಿನ ರಸ ಸೇವನೆಯಿಂದ ದೇಹದಲ್ಲಿನ ವಿಷವನ್ನು ಮಲ ಮೂತ್ರಗಳ ರೂಪದಲ್ಲಿ ಹೊರಹಾಕಬಹುದಂತೆ.ಮತ್ತು ಇದರ ಹಣ್ಣಿನಲ್ಲಿರುವ ಬೀಜ ಉಂಟಲ್ಲ ಅದು ಮೂತ್ರಕೋಶದ ಕಲ್ಲು ನಿವಾರಣೆಗೆ ರಾಮಭಾಣ.ಅಷ್ಟು ಮಾತ್ರವಲ್ಲ ಇದರ ದಿಂಡಿನ ನಾರು ಒಳಿದೆಲ್ಲ ಬಾಳೆಗಿಂತ ಗಟ್ಟಿಯಾಗಿರುವ ಕಾರಣ ಹಗ್ಗದಂತೆ ಬಳಸಬಹುದು.
ಹಣ್ಣನ್ನು ಹತ್ತು ದಿನಗಳ ಕಾಲ ನೀರಿನಲ್ಲಿ ಹಾಕಿ ಇಟ್ಟರೆ ಇದರ ಬೀಜಗಳನ್ನು ಬಹಳ ಸುಲಭವಾಗಿ ಬೇರ್ಪಡಿಸಬಹುದು.ಆ ನಂತರ ಬೀಜಗಳನ್ನು ಜಜ್ಜಿ ರಸ ತೆಗೆದು ಕಷಾಯ ಮಾಡಬಹುದು. ಇದು ತುಂಬಾ ಉಷ್ಣವಿರುವುದಿಂದ ಜೀರಿಗೆ ಮತ್ತು ಬೇಕಿದ್ದರೆ ಹಾಲು ಕೂಡ ಹಾಕಿ ಕಷಾಯ ಮಾಡುವುದು ಉತ್ತಮ. ಎರಡು ಲೋಟ ನೀರಿಗೆ, ಎರಡು ಚಮಚ ಜಜ್ಜಿದ ಹಣ್ಣಿನ ಬೀಜ, ಎರಡು ಚಮಚ ಜೀರಿಗೆ ಹಾಕಿ ಚೆನ್ನಾಗಿ ಕುದಿಸಿ ನಂತರ ಈ ಕಷಾಯ ಒಂದು ಲೋಟದಷ್ಟು ಆದಾಗ,ಇದನ್ನು ಸೋಸಿ ಹಾಗೇ ಕುಡಿಯಬಹುದು.ಸ್ವಲ್ಪ ಕಹಿ ಆಗಿರುವುದರಿಂದ ಬೆಲ್ಲ ಕೂಡ ಹಾಕಿ ಸೇವಿಸಿಬಹುದು.ಆದರೆ ಆರೋಗ್ಯ ದೃಷ್ಟಿಯಿಂದ ಹಾಗೇ ಕುಡಿಯುವುದೇ ಉತ್ತಮ.ಇದು ಮೂತ್ರಕೋಶದ ಕಲ್ಲು ನಿವಾರಣೆಗೆ ಉತ್ತಮವಂತೆ.ಅದೇ ರೀತಿ ಇದರ ದಿಂಡಿನ ರಸವನ್ನು ಬೆಳಿಗ್ಗೆ ಖಾಲಿ ಹೊಟ್ಟೆಗೆ ಹತ್ತು ದಿನಗಳವರೆಗೆ ನಿರಂತರವಾಗಿ ತೆಗೆದುಕೊಳ್ಳುವುದು ಕೂಡ ಮೂತ್ರಕೋಶದ ಹೆಚ್ಚಿನ ತೊಂದರೆಗಳಿಗೆ ಬಹಳ ಒಳ್ಳೆಯದಂತೆ.
ಇದರ ಎಲೆಗಳು ಇತರ ಬಾಳೆಗಿಂತ ಅಗಲ ಹಾಗೂ ಉದ್ದವಾಗಿ ಇರುತ್ತದೆ. ಮಾತ್ರವಲ್ಲ ಇದರ ಎಲೆಗಳು ಬಹಳ ದಪ್ಪವಾಗಿದ್ದು ಬಲು ಬೇಗ ಹರಿದು ಹೋಗುವುದಿಲ್ಲ.ಹೂವು ಕೂಡ ದೊಡ್ಡ ಗಾತ್ರದ್ದೇ.ಅಗಲವಾಗಿ ತಾವರೆ ಹೂವಿನಂತೆ ನೋಡಲು ಬಲು ಆಕರ್ಷಕವಾಗಿರುತ್ತದೆ.ಇದರ ಗಿಡದ ಬೊಡ್ಡೆ ಮಾತ್ರ ತಾಳೆಗಿಡದ ಒರಟಾದ ಬೊಡ್ಡೆಯಂತೆ ಕಾಣುತ್ತದೆ.ಆದರೆ ಹಣ್ಣುಗಳು ಮಾತ್ರ ಸಣ್ಣ ಗಾತ್ರದವು.ಬೇಸಿಗೆ ಕಾಲದಲ್ಲಿ ಇದು ಸಂಪೂರ್ಣ ಎಲೆ ಉದುರಿಸಿ ನಿಂತರೂ ಬೊಡ್ಡೆಯಲ್ಲಿನ ನೀರಿನಂಶದ ಕಾರಣದಿಂದಾಗಿ ಜೀವಂತವಾಗಿಯೇ ಇದ್ದು ,ಮತ್ತೆ ಮಳೆಗಾಲದಲ್ಲಿ ಹಸಿರಾಗಿ ಅರಳಿ ನಿಲ್ಲುತ್ತದೆ.
ಇಥಿಯೋಪಿಯಾದಂತಹ ದೇಶದಲ್ಲಿ ಇದರ ಗಡ್ಡೆಯನ್ನು ಕೂಡ ಆಹಾರ ರೂಪದಲ್ಲಿ ಬಳಸುತ್ತಾರೆ ಅಂತೆ.ಇತರ ಬಾಳೆಗಿಡದಂತಿರದ ಇದರ ವಿಶಿಷ್ಟ ಸೌಂದರ್ಯದಿಂದಾಗಿ ಇದು ಇತ್ತೀಚೆಗೆ ಅಲಂಕಾರಿಕ ಸಸ್ಯವಾಗಿ ಗಾರ್ಡನ್ ಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತದೆ.ನರ್ಸರಿಗಳು ಕೂಡ ಇದನ್ನು ಬೆಳೆದು ಮಾರುವತ್ತ ಹೆಚ್ಚಿನ ಆಸಕ್ತಿ ವಹಿಸುತ್ತಿದೆ.
ಪೂರ್ತಿ ಹಣ್ಣಾದಾಗ ಸಿಹಿ ಜೊತೆಗೆ ಸ್ವಲ್ಪ ಪ್ರಮಾಣದ ಕಹಿ ಅಂಶವನ್ನೂ ಕೂಡ ಹೊಂದಿರುವ ಇದರ ಹಣ್ಣನ್ನು ತಿನ್ನಬಹುದಾದರೂ ಹಣ್ಣಿನಲ್ಲಿರುವ ಅಧಿಕ ಬೀಜಗಳ ಕಾರಣದಿಂದಾಗಿ,ಕಲ್ಲಿನಂತಹ ಬೀಜಗಳ ನಡುವೆ ಹಣ್ಣಿನ ಪಲ್ಪುಗಳನ್ನು ಹುಡುಕಿ, ಬೀಜವನ್ನೇ ಚೀಪಿ ಚೀಪಿ ಹಣ್ಣು ತಿಂದು ಬೀಜ ಉಗುಳಬೇಕಾದ ಬಹಳ ವಿಚಿತ್ರ ಬಾಳೆಹಣ್ಣು ಇದು.ಇದರ ಬೀಜಗಳು ಬಹಳ ಕಠಿಣವಾಗಿರುವುದರಿಂದ ಇದನ್ನು ತಿನ್ನುವುದೇ ಬೇಡ ಎಂದು ಅನ್ನಿಸಿಬಿಡುವುದಿದೆ.
ಕಾಡಿನಲ್ಲಿರುವ ಆನೆಗಳಿಗೆ ಈ ಕಲ್ಲುಬಾಳೆ ಎಂದರೆ ಪಂಚ ಪ್ರಾಣವಂತೆ.ಈ ಗಿಡದಲ್ಲಿ ಹೇರಳವಾದ ನೀರಿನ ಅಂಶ ಇರುವುದರಿಂದ ಆನೆಗಳು ಇದನ್ನು ಎಲ್ಲಿ ನೋಡಿದರೂ ಹಸಿವು ಹಾಗೂ ಬಾಯಾರಿಕೆಗಾಗಿ ಹಾಗೇ ಸಪಾಯಿ ಮಾಡಿ ಬಿಡುತ್ತದೆ.
ಕಾಡಿನಲ್ಲಿ ಹೇರಳವಾಗಿ ಈ ಕಲ್ಲುಬಾಳೆ ಗಿಡವಿದ್ದರೆ ಆನೆಗಳು ಕೂಡ ಆಹಾರದ ದೃಷ್ಟಿಯಿಂದ ಊರಿಗೆ ಬಂದು ರೈತರ ಹೊಲ,ಗದ್ದೆ,ಬಾಳೆ ತೋಟ ನಾಶ ಮಾಡುವುದು ಕೂಡ ಕಡಿಮೆ ಆಗಬಹುದೆನೋ.ಇದರ ಹಣ್ಣಿನ ಬೀಜದಿಂದಲೇ ಇದರ ಸಂತಾನೋತ್ಪತಿ ಆಗುತ್ತದೆ. ಹಕ್ಕಿ, ಮಂಗ, ಅಳಿಲುಗಳು ಇದರ ಹಣ್ಣನ್ನು ತಿಂದು ಅಲ್ಲಲ್ಲಿ ಉಗುಳಿ ಇದು ಕಾಡಿನಲ್ಲಿ ಹಾಗೇ ಹುಟ್ಟಿಕೊಳ್ಳುತ್ತದೆ.ಇತರ ಬಾಳೆಗಿಡದಂತೆ ಕಂದುಗಳ ಮೂಲಕ ಕಲ್ಲುಬಾಳೆಗೆ ವಂಶಾಭಿವೃದ್ಧಿಯ ಭಾಗ್ಯ ಇಲ್ಲ.ಒಂದು ಗಿಡ ನಾಲ್ಕು ವರ್ಷದವರೆಗೂ ಬದುಕಬಲ್ಲದು. ಇದರ ನಡುವೆ ಎಂದಾದರೂ ಗಿಡ ಹೂವು ಬಿಟ್ಟಿತು ಎಂದರೆ ನಂತರ ಗೊನೆ ಬಿಡುವವರೆಗೆ ಮಾತ್ರ ಅದರ ಆಯಸ್ಸು. ಕಲ್ಲುಗಳೆಡೆಯಲ್ಲಿ ಕಾಡಿನ ನಡುವೆ ತನ್ನಷ್ಟಕ್ಕೆ ಬೆಳೆಯುವ ಕಲ್ಲು ಬಾಳೆಯದ್ದು ಸರಳ ಬಾಳ್ವೆ ಆದರೂ.. ಜೀವನದುದ್ದಕ್ಕೂ ಅದರದ್ದೊಂದು ಹೋರಾಟ ಮಾತ್ರ ಬಹಳ ಕಠಿಣವಾದದ್ದೇ.ಇದರ ನಡುವೆ ಪ್ರಾಣಿಗಳಿಗೆ ಹಾಗೂ ಮನುಷ್ಯನಿಗೆ ಕೂಡ ಉಪಕಾರ ಮಾಡಿ ಆ ನಂತರವೇ ಮಣ್ಣಾಗಲು ಬಯಸುತ್ತದೆ ಕಲ್ಲುಬಾಳೆ.
ಮಂಗಳೂರಿಗೆ ಹೋಗುವಾಗ ಶಿರಾಡಿ,ಚಾರ್ಮಾಡಿ ಘಾಟ್ ಸೆಕ್ಷನ್ ಗಳಲ್ಲಿ, ಚಿಕ್ಕಮಗಳೂರು,ಉತ್ತರ ಕನ್ನಡ,ಕೊಲ್ಲೂರು,ಆಗುಂಬೆ ಅತ್ತ ಮಲೆನಾಡು ಮತ್ತು ಪಶ್ಚಿಮ ಘಟ್ಟದ ಕಾಡುಗಳ ಪಕ್ಕವೇ ಬಸ್ಸ್ ಇಲ್ಲವೇ ಕಾರಿನಲ್ಲಿ ಹಾದು ಹೋಗುವಾಗ ಕಾಡಿನೊಳಗೊಂದು ಬಂಡೆಗಳೆಡೆಯಲ್ಲಿ ಬಾಳೆಯ ಗಿಡವೊಂದು ನಿಮ್ಮನ್ನು ನೋಡಿ ಹಾಗೇ ಕೈ ಬೀಸಿ ಕರೆದರೆ ಅದು ಹೆಚ್ಚಾಗಿ ಮನುಷ್ಯನ ಬಹುಪಯೋಗಿ ಗೆಳೆಯ ಕಲ್ಲು ಬಾಳೆಯೇ ಆಗಿರುತ್ತದೆ. ಕಲ್ಲುಬಾಳೆ ಯಾವತ್ತಿಗೂ ಕಾಡುಗಳು ನಮಗಿತ್ತ ಒಂದು ಸಂಜೀವಿನಿ ಎನ್ನುವುದರಲ್ಲಿ ಅನುಮಾನವೇ ಇಲ್ಲ.ಕಾಡುಗಳಲ್ಲಿ ಆದರೂ ಈ ಕಲ್ಲುಬಾಳೆ ಹುಲುಸಾಗಿ ಬೆಳೆಯಲಿ,ತೋಟಕ್ಕೂ ತಕ್ಕ ಮಟ್ಟಿಗೆ ಬರಲಿ.. ಅಲ್ಲಲ್ಲಿ ಅವುಗಳು ಉಳಿದು ಕಲ್ಲುಬಾಳೆ ಮತ್ತಷ್ಟು ಹಸಿರಾಗಿ ಸೊಗಸಾಗಿ ಬೆಳೆಯಲಿ..
.....................................................................................
#ಏನೋ_ಒಂದು
ab pacchu
moodubidire
(photo-internet)



Comments
Post a Comment