ಅವನು, ಅವಳು ಮತ್ತು ಹೋಳಿ
ತನ್ನ ಕ್ಲಾಸ್ ನ ಅಷ್ಟೂ ಹುಡುಗರಿಗೂ, ಪರಿಚಯವಿರುವ ಬೇರೆ ಬ್ರಾಂಚ್ ನ ಹುಡುಗಿಯರಿಗೂ ಮನಸೋ ಇಚ್ಛೆ ಬಣ್ಣ ಹಾಕಿದ್ದಾನೆ,ಅವರ ಮುಖದ ಮೇಲೆಲ್ಲಾ ತನ್ನಿಷ್ಟದ ಬಣ್ಣ ಮೆತ್ತಿದ್ದಾನೆ, ಮಾತ್ರವಲ್ಲ ತನಗೆ ಸಮಾಧಾನ ಆಗುವವ ವರೆಗೂ ಓಡಾಡಿಸಿಕೊಂಡು ಅಟ್ಟಾಡಿಸಿಕೊಂಡು ತರ ತರಹದ ಬಣ್ಣಗಳನ್ನು ಅವರ ಮೈಮೇಲೆ ಸುರಿದಿದ್ದಾನೆ . ಆದರೆ ಅವಳೊಬ್ಬಳು ಬಾಕಿ ಇದ್ದಾಳೆ!
ಹೌದು ಅವಳು. ಎಂದಿಗೂ ಮಾತಾಡಿಸದ ಅವಳಲ್ಲಿ, ಎಷ್ಟೋ ಬಾರಿ, ಬರೀ ಕಣ್ಣಿನಲ್ಲಿಯೇ ಮಾತಾಡಿದ್ದಾನೆ, ಕಾಲೇಜು ಬಸ್ಸು ಹತ್ತುವಾಗ, ಲೈಬ್ರರಿ ಯಲ್ಲಿ ಬುಕ್ ಸ್ಟ್ಯಾಂಡ್ ನಿಂದ ಬುಕ್ ತೆಗೆಯುವಾಗ,ಬುಕ್ ಇಡುವಾಗ,ಕ್ಯಾಂಟೀನ್ ನಲ್ಲಿ ತಿಂಡಿ ತಿನ್ನುವಾಗ, ಸೆಮಿನಾರ್ ಹಾಲ್, ಆಡಿಟೋರಿಯಂ.. ಹೀಗೆ ಎಷ್ಟೋ ಬಾರಿ ಕಣ್ಣು ಗಳು ಪರಸ್ಪರ ಮಾತಾಡಿ ಕೊಂಡು ಬಿಟ್ಟಿವೆ. ಆದರೆ ಮಾತುಗಳು ಎಂದಿಗೂ exchange ಆಗಿಲ್ಲ, ಪರಸ್ಪರ ಎದುರು ಬದುರು ಕೂಡ ಎಂದಿಗೂ ನಿಂತಿಲ್ಲ.
ಅವನ ಕೈಯಲ್ಲಿ ಈಗ ಒಂದಿಷ್ಟು ಬಣ್ಣ ಬಣ್ಣದ ಹುಡಿ ಇದೆ,ಸ್ಪೆಷಲ್ ಆಗಿ ಅವಳಿಗೆಂದೇ ತೆಗೆದಿಟ್ಟಿದ್ದಾನೆ. ಹುಡಿ ಹಿಡಿದು ಗುಂಪಿನ ಮಧ್ಯದಿಂದ ಅವಳನ್ನು ಹುಡುಕುತ್ತಾ ಅವಳ ಬ್ರಾಂಚ್ ಕಡೆಗೆ ಹೊರಡಿಟ್ಟಾನೆ..
ಅವನು first year Mechanical Engineering, ಅವಳು first year Information Science Engineering. ಇದೇ ಒಂದು ದಿನಕ್ಕಾಗಿ ಅವ ತಿಂಗಳುಗಟ್ಟಲೆ ಕಾದಿದ್ದಾನೆ. ಅವನಿಗೆ ಅವಳು ಇಷ್ಟ.ಆದರೆ ಅವಳಿಗೆ?... ಗೊತ್ತಿಲ್ಲ!
ಕಾಲೇಜು ಕ್ಯಾಂಪಸ್ ಕಲರ್ ಫುಲ್ ಆಗಿದೆ, ಹುಡುಗ ಹುಡುಗಿಯರು ಒಬ್ಬರ ಮೇಲೆ ಒಬ್ಬರು ಬಣ್ಣ ಎರಚಿ ಕಾಲೇಜು ಕ್ಯಾಂಪಸ್ ,ಎಲ್ಲರ ಮುಖ ಮತ್ತು ಗಾಳಿ ಕೂಡ ವರ್ಣಮಯವಾಗಿ ಹೋಗಿದೆ. ಬಣ್ಣ ಗಳಿಂದ ಮುಖ ಮುಚ್ಚಿ ಹೋಗಿ, ದೂರದಿಂದ ನೋಡಿದರೆ ಯಾರು ಯಾರೆಂದೇ ಗೊತ್ತಾಗುತ್ತಿಲ್ಲ...
ಈಗ ಅವನು ಅವಳ ಬ್ರಾಂಚ್ ಮುಂದೆ ನಿಂತಿದ್ದಾನೆ. ಬರೀ ಹುಡುಗಿಯರೇ ಅಲ್ಲಿ. ಈಗ ಅವನ ಅವಳು ಎಲ್ಲಿ ಎಂದು ಹುಡುಕುತ್ತಿದ್ದಾನೆ, ಕಣ್ಣರಳಿಸಿ ಕಣ್ಣಗಲಿಸಿ ಹುಡುಕಾಡುತ್ತಿದ್ದಾನೆ,ತಡಕಾಡುತ್ತಿದ್ದಾನೆ. ಅವನೆನೋ ಖಡಕ್ ಬ್ರಾಂಚ್ ನ ಹುಡುಗನೇ, ಆದರೆ ಹುಡುಗಿಯನ್ನು ಎದುರಿಸುವಾಗ ಸೋತು ಹೋಗುತ್ತಾನೆ.ಅದರಲ್ಲೂ ಅವಳು ಎದುರು ಬಂದಾಗ ಅವನ ಹೃದಯದ ಬಡಿತ ತಾಳ ತಪ್ಪುತ್ತದೆ. ಆದರೂ ಧೈರ್ಯ ಮಾಡಿಕೊಂಡು ತನ್ನ ಮುಖದ ತುಂಬಾ ಬಣ್ಣ ಬಳಿದುಕೊಂಡು, ಅವಳಿಗೆ ಇಂದು ಬಣ್ಣ ಬಳಿಯಲೇಬೇಕೆಂದು ,ಯಾವತ್ತೂ ಬಾರದ ಧೈರ್ಯದೊಂದಿಗೆ ಅವಳ ಡಿಪಾರ್ಟ್‌ಮೆಂಟ್ ಕಡೆಗೆ ಬಂದಿದ್ದಾನೆ...
ಹೃದಯ ಜೋರಾಗಿ ಬಡಿಯುತ್ತಿದೆ, ಕೈ ನಿಧಾನವಾಗಿ ನಡುಗುತ್ತಿದೆ, ಕೈಯಲ್ಲಿದ್ದ ಹುಡಿ ಕೆಳಗೆ ನೆಲಕ್ಕುದುರುತ್ತಿದೆ...!
ಇಲ್ಲ ಅವಳೆಲ್ಲಿಯೂ ಇಲ್ಲ. ಅವಳು ನನಗಾಗಿ ಎಲ್ಲಿ ಕಾದಿರುತ್ತಾಳೆ,ನನಗಾಗಿ ಯಾಕೆ ಹುಡುಕಾಡುತ್ತಿರುತ್ತಾಳೆ.. ನನ್ನಂತವರು ಎಷ್ಟೋ ಏನೋ ಅವಳಿಗೆ,
ನನ್ನದು ಬರೀ ಆಸೆ.. ಕನಸು.. ಕಲ್ಪನೆ. ಇಲ್ಲ ನಾನಿನ್ನು ಹಿಂದಿರುಗುತ್ತೆನೆ.. ನನ್ನಿಂದ ಇದು ಸಾಧ್ಯವಿಲ್ಲ ಎಂದು ಅಂದುಕೊಳ್ಳುತ್ತಾನೆ...ಹಾಗೇ ವಾಪಸ್ ಹಿಂದಿರುಗುತ್ತಾನೆ.
"ಹಾಯ್.." ಎಂದು ಯಾರೋ ತುಂಬಾನೇ ಇಂಪಾಗಿ ಅವನನ್ನೇ ಕರೆದಂತಾಗುತ್ತದೆ. ನಿಧಾನವಾಗಿ ಹಿಂದೆ ತಿರುಗಿ ನೋಡುತ್ತಾನೆ. ಅಲ್ಲಿ ಅವಳು! ಹೌದು ಅವಳೇ, ಅವನ ಅವಳು. ಎದೆ ಜಿಲ್ ಎಂದಂತಾಗುತ್ತದೆ! ಅವಳ ಕೈಯ ತುಂಬೆಲ್ಲಾ ಬಣ್ಣ. ಅವನಿಗೆಂದೇ ತೆಗೆದಿರಿಸಿಟ್ಟ ಕೆಂಪು ಬಣ್ಣ . "ಹ್ಯಾಪಿ ಹೋಳಿ..." ಎಂದು ನಗುತ್ತಾ ಹೇಳಿದವಳೇ, ಶ್ರದ್ಧೆಯಿಂದ ತನ್ನ ನುಣುಪಾದ ಎರಡು ಕೈಗಳಿಂದ ಅವನ ಒರಟಾದ ಎರಡೂ ಕೆನ್ನೆಗಳಿಗೆ ಬಣ್ಣ ಹಚ್ಚಲು ಶುರು ಮಾಡುತ್ತಾಳೆ,ಅಷ್ಟು ಹತ್ತಿರದಿಂದ ಅವಳ ಉಸಿರು ತಾಗಿ ಒಮ್ಮೆಗೆ ಅವನ ಉಸಿರು ನಿಂತು ಹೋದಂತಾಗುತ್ತದೆ. ಬಣ್ಣ ಹಚ್ಚಿದವಳೇ, ಅವನು ಕೂಡ ನನಗೆ ಓಡುತ್ತಾ ಓಡೋಡುತ್ತಾ ಬಂದು ಬಣ್ಣ ಹಚ್ಚಲಿ ಎಂದು ಒಂದು ಕ್ಷಣವೂ ಅಲ್ಲಿ ನಿಲ್ಲದೇ ಅಲ್ಲಿಂದ ಓಡಲು ಶುರುಮಾಡುತ್ತಾಳೆ..
ಇದು ಕನಸಲ್ಲ ನಿಜ ಎಂದು ತಿಳಿಯಲು ಅವನಿಗೆ ಒಂದೆರಡು ನಿಮಿಷಗಳು ಬೇಕಾಯಿತು.ನಿಧಾನವಾಗಿ ತನ್ನ ಕೈಯಿಂದ ಅವಳು ಬಣ್ಣ ಹಚ್ಚಿದ ತನ್ನ ಕೆನ್ನೆಯನ್ನು ಒಮ್ಮೆ ಸವರುತ್ತಾನೆ. ಕೆನ್ನೆ ತುಂಬಾ ಅವಳು ಹಚ್ಚಿದ ಕೆಂಪು ಬಣ್ಣ. ಹೃದಯ ದ ಬಡಿತಕ್ಕೆ ವೇಗ ಹೆಚ್ಚಾಗುತ್ತದೆ ಅವನು ಕಾಲು ಈಗ ನೆಲದಲ್ಲಿ ನಿಲ್ಲಲ್ಲು ಕೇಳುತ್ತಿಲ್ಲ.
ಉದುರುತ್ತಿರುವ ಬಣ್ಣದ ಹುಡಿ ಯನ್ನು ಮತ್ತೊಮ್ಮೆ ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡು, ಅವಳಿಗೆ ಬಣ್ಣ ಹಚ್ಚಲು.. ಅವಳ ಹಿಂದೆ ಅವ ಓಡಲು ಶುರು ಮಾಡುತ್ತಾನೆ...ಅವಳು ಜಿಂಕೆ ಆದರೆ, ಅವನೀಗ ಕುದುರೆ.. ಇಬ್ಬರೂ ಓಡುತ್ತಿದ್ದಾರೆ.. ಕಾಲೇಜಿನ ಬಣ್ಣದ ಲೋಕದ ಕ್ಯಾನ್ವಾಸಿನ ಮಧ್ಯೆ ಅವರಿಬ್ಬರದ್ದೇ ದೊಡ್ಡ ಚಿತ್ರ ಎದ್ದು ಕಾಣುತ್ತಿದೆ...
ಹೋಳಿಯ ಬಣ್ಣ ಆಕಾಶ ಮುತ್ತಿತ್ತು.. ಪ್ರೀತಿಸಿದವನ ಹೃದಯ ಗಾಳಿಯಲ್ಲಿ ತೇಲಿತ್ತು ... 😊
...............................................................................
ಬಣ್ಣದ ಹೋಳಿ ಹಬ್ಬ ಕ್ಕೆ..ಹೃದಯಗಳನ್ನು ಬೆಸೆಯುವ ಶಕ್ತಿ ಇದೆ.🥰😊🙏🏻
Ab Pacchu
moodbidri

Comments
Post a Comment