ಜಾಗಗಳಿಗೂ ಜೀವವಿದೆ

 

ಕೆಲವೊಂದು ಜಾಗ ಇರುತ್ತೆ, ಅದೆಂತಹ ಜಾಗ ಅಂದರೆ ತಾಜ್ ಮಹಲ್ ಕೂಡ ಅದರಷ್ಟು ತಾಜಾ ಅಲ್ಲ. ನಮ್ಮ ಪಾಲಿಗೆ ಅದು ಮತ್ತು ಅದರ ನೆನಪೇ ಮಡಿಕೇರಿ ಯ ಮಂಜು,ಕೆಮ್ಮಣ್ಣು ಗುಂಡಿಯ ತಂಪು,ಜೋಗದ ಇಂಪು.. ಹೀಗೆ ಎಲ್ಲವೂ. ಕೊನೆಯವರೆಗೂ ಅದರದ್ದೊಂದು ಚಿತ್ರ ನಮ್ಮ ಸ್ಮೃತಿಪಟಲದಲ್ಲಿ ಭದ್ರವಾಗಿ ಅಚ್ಚಾಗಿರುತ್ತದೆ. ಅಷ್ಟು ಸುಲಭದಲ್ಲಿ ಅದು  ಅಳಿಸಿಹೋಗುವಂತಹದ್ದಲ್ಲ, ಕೆಲವೊಮ್ಮೆ ಆ ಜಾಗವೇ ಅಳಿಸಿ ಹೋದರೂ ಕೂಡ.

ಅವರಿಬ್ಬರೂ ಒಂದೇ ಸ್ಕೂಲ್. ಅವನಿಗೆ ಅವಳೆಂದರೆ ಇಷ್ಟ, ಆದರೆ ಅವಳಿಗೆ...? ಅದು ಅವನಿಗೂ ಗೊತ್ತಿಲ್ಲ. ಅವನಿಗೆ ಅವಳಲ್ಲಿ ಮಾತಾಡುವುದು ಬಿಡಿ, ಬರೀ ಕಣ್ಣಲ್ಲಿ ಕಣ್ಣಿಟ್ಟು ನೋಡುವುದು ಕೂಡ ಎಂದಿಗೂ ಸಾಧ್ಯವಾಗದ ಮಾತು. ಅಂತಹ ಅವರಿಬ್ಬರಿರೋ ಊರಲ್ಲಿ ಒಂದು ಪುಟಾಣಿ ಓಣಿ ಎಂದಿನಂತೆ ಎರಡು ಬೇರೆ ಬೇರೆ ಜಾಗಗಳ ಮಣ್ಣಿನ ಕಂಪೌಡುಗಳ ಮಧ್ಯೆ ಕಾಲು ಚಾಚಿ ಮಲಗಿತ್ತು.ಎಷ್ಟೋ ಸಲ ಆ ಓಣಿ ಎಂಬ one way ಯಲ್ಲಿ ಅವಳು ಆಚೆಯಿಂದ ನಡೆದು ಬಂದರೆ,ಇವನು ಈ ಕಡೆಯಿಂದ ನಡೆದು ಹೋಗಬೇಕಾದ ಸಂಧರ್ಭ,ಹೌದು ಆಕಸ್ಮಿಕವಾಗಿ. ಆ ಓಣಿಯ ಎಲ್ಲೋ ಒಂದು ಕಡೆ ಅವರಿಬ್ಬರು  ಪರಸ್ಪರ ಸಂದಿಸಲೇಬೇಕು, ಸಂದಿಸುತ್ತಾರೆ ಕೂಡ. ಅದೇ ಅಮೃತ ಘಳಿಗೆ,ಹುಡುಗನ ಎದೆ ಜಿಲ್ ಎನ್ನೋ ಕ್ಷಣ. ಒಬ್ಬರು ದಾರಿ ಬಿಟ್ಟರೆ ಮತ್ತೊಬ್ಬರು ಇನ್ನೊಂದು ದಿಕ್ಕಿನತ್ತ ಹೋಗಬಹುದು. ನಾಚಿಕೆಯ ಮುದ್ದೆಯಂತ ನಮ್ಮ ಹುಡುಗ ಪಕ್ಕಕ್ಕೆ ಸರಿದು ತಲೆ ತಗ್ಗಿಸಿ ನಿಲ್ಲುತ್ತಾನೆ, ಅವಳು ವಾರೆ ಕಣ್ಣಿನಲ್ಲಿಯೇ ಅವನನ್ನು ನೋಡಿ, ತುಟಿಯಂಚಲ್ಲಿ ತುಸು ನಕ್ಕು ಎದುರು ಮಾಡಿಕೊಂಡಿದ್ದ ತನ್ನ ಜಡೆಯನ್ನು ಹಾಗೇ ಹಿಂದಕ್ಕೆ ಸರಿಸಿ ಮುಂದಕ್ಕೆ ಹೋಗಿಬಿಡುತ್ತಾಳೆ, ಹುಡುಗ ನಿಂತ ನೆಲ ಬಿಟ್ಟು ಆ ಒಣಿಯಲ್ಲಿ ಅಕ್ಷರಶಃ ಗಾಳಿಯಲ್ಲಿ ತೇಲುವುದು ಆವಾಗಲೇ. ಅವನು ಮತ್ತೆ ವಾಸ್ತವಕ್ಕೆ ಬರಲು, ಕಾಲು ನೆಲ ಮುಟ್ಟಲು ಇನ್ನೂ ಕೆಲವು ಸೆಕೆಂಡುಗಳೇ  ಬೇಕು.
ಎಷ್ಟೋ ವರ್ಷಗಳ ನಂತರವು ಆ ಓಣಿಯಲ್ಲಿ ಯಲ್ಲಿ ಹೋಗಿ ಒಮ್ಮೆ ಹಾಗೇ  ನಿಂತುಕೊಂಡು ಓಣಿ ಯ ಉದ್ದಕ್ಕೂ ದೃಷ್ಟಿ ಹರಿಸಿದಾಗ,ಅವನ  ಕಣ್ಣ ಮುಂದೆ ಬರುವುದು ಅವಳು,ಅವಳ ನಗೆ ಮತ್ತು ಅವಳ ಉದ್ದದ ಜಡೆ...

ಅದೊಂದು ಹಳ್ಳಿಯ ಚಿಕ್ಕ ಬಸ್ ಸ್ಟ್ಯಾಂಡ್. ಆದರೆ ಆವಾಗ ಅಲ್ಲಿ ಯಾವುದೇ ಸ್ಟ್ಯಾಂಡ್ ಇರಲಿಲ್ಲ. ಕಾಲೇಜಿಗೆ ಹೋಗುವಾಗ ಅಲ್ಲಿರುವ ದೊಡ್ಡ ಮರದ ಕೆಳಗಿನ ಕಲ್ಲು ಬೆಂಚಿನಲ್ಲೇ ನೀವು ಎಲ್ಲಾ ಕುಳಿತುಕೊಳ್ಳುತ್ತಿದ್ದಿರಿ. ಈಗ ಅದರ ಪಕ್ಕದಲ್ಲಿಯೇ ಅಲ್ಲೊಂದು ಬಸ್ ಸ್ಟ್ಯಾಂಡ್ ಅಂತ  ಕಟ್ಟಿದ್ದಾರೆ. ಕಲ್ಲು ಬೆಂಚ್ ಕೂಡ ಅನತಿ ದೂರದಲ್ಲಿ ಹಾಗೇ ಒಬ್ಬಂಟಿಯಾಗಿ  ಕುಳಿತುಕೊಂಡಿದೆ.  ಆದರೆ ಅಲ್ಲಿ ಯಾರೂ ಈಗ  ಕುಳಿತುಕೊಳ್ಳುವುದಿಲ್ಲ. ಆದರೆ ಪುಣ್ಯಕ್ಕೆ ಅದು ಇನ್ನೂ ಅಲ್ಲೇ ಇದೆ. ಎಷ್ಟೋ ವರ್ಷಗಳ ನಂತರ ನೀವು ಹೋದಾಗ ಸ್ಟಾಂಡ್ ಗಿಂತಲೂ ಮೊದಲು ನಿಮ್ಮನ್ನು ಕೈ ಬೀಸಿ ಕರೆಯುವುದು ಆ ಕಲ್ಲು ಬೆಂಚೇ.ಅಲ್ಲಿ ಒಮ್ಮೆ ಹೋಗಿ ಕುಳಿತುಕೊಂಡರೆ ಸಾಕು ಕಾಲೇಜಿಗೆ ಹೋಗಲು ದಿನಾ ಅಲ್ಲೇ ಬಂದು ಸೇರುತ್ತಿದ್ದ  ಪ್ರಥಮ್, ರಾಜೇಶ್, ಸುರಭಿ ಎಲ್ಲರೂ ನಿಮ್ಮ ಪಕ್ಕದಲ್ಲೇ ಕುಳಿತು ಕೊಂಡಿದ್ದಾರೋ ಏನೋ ಎಂದು ಅನ್ನಿಸಿಬಿಡುತ್ತೆ...

ಅದೊಂದು ಚಿಕ್ಕ ಗ್ರೌಂಡ್, ಅಲ್ಲೇ ನೀವು ಮೊದಲು ಕ್ರಿಕೆಟ್ ಆಡಿದ್ದು. ರೈಟ್ ಹ್ಯಾಂಡ್ ಬ್ಯಾಟ್ಸ್ಮನ್ ಆಗಿದ್ದರೆ ಮುಂದೊಂದು ದಿನ ನಾನು ಸಚಿನ್ ಆಗ್ತೇನೆ, ಲೆಪ್ಟ್ ಹ್ಯಾಂಡ್ ಬ್ಯಾಟ್ಸ್‌ಮನ್ ಆಗಿದ್ದರೆ ನಾನು ಗಂಗೂಲಿ ಆಗ್ತೇನೆ ಎಂದು ಕನಸು ಕಂಡಿದ್ದು ನೀವು ಅಲ್ಲೇ. ಗ್ರೌಂಡ್ ಈಗಲೂ ಇದೆ. ಆದರೆ ಈಗ  ಅಲ್ಲಿ ಆಡುವವರೇ ಇಲ್ಲ. ಹೆಚ್ಚಿನ ಮಕ್ಕಳು ಈಗ ಮೊಬೈಲ್ ನಲ್ಲಿಯೇ  ಆಡ್ತಾರೆ. ಗ್ರೌಂಡ್ ತುಂಬಾ ಕಳೆ ಬಂದು ಬಿಟ್ಟಿದೆ. ಈಗಲೂ ಹೋಗಿ ನೀವು ಗ್ರೌಂಡ್ ನಲ್ಲಿ ಒಮ್ಮೆ ಕೈಕಟ್ಟಿಕೊಂಡು ನಿಂತುಕೊಂಡು ಬಿಟ್ಟರೆ, ಬ್ಯಾಟ್ ಬಾಲ್ ಹಿಡಿದುಕೊಂಡು ನಿಂತಿರೋ ಬಾಲ್ಯದ ಬಂಟಿ, ಬಬ್ಲಿ ಯರು ಕಣ್ಣ ಮುಂದೆ ಒಂದು ಕ್ಷಣ ಪಾಸಾಗಿ ಬಿಡುತ್ತಾರೆ...

ಊರಿನ ಹೊರಬಾಗದಲ್ಲಿ ಗುಡ್ಡ ಕ್ಕೆ ತಾಗಿಕೊಂಡು ಅದೊಂದು ದೊಡ್ಡದಾದ ತುಳುವೆ ಹಲಸಿನ ಮರ ಇದೆ. ಹಣ್ಣಾದ ಮೇಲೆ ಅದರ ಹಲಸನ್ನು ಕತ್ತಿ ಇಲ್ಲದೆಯೂ ಕೈಯಾರೆ ಬಿಡಿಸಿ ಒಬ್ಬನೇ ಒಂದು ಇಡೀ ಹಲಸನ್ನು ತಿಂದು ಹಾಕಿ ಬಿಡಬಹುದು. ನಾವು ಮರ ಹತ್ತಿ ಮರದಲ್ಲಿಯೇ ತಿನ್ನುತ್ತಿದ್ದೆವು ಕೂಡ. ಈಗ ಮರ ಇಲ್ಲ, ಯಾರೋ ಬುಡದಿಂದಲೇ ಕಟ್ ಮಾಡಿ ಮನೆಗಾಗಿ  ಮರಮಟ್ಟು ಮಾಡಿಕೊಂಡಿದ್ದಾರೆ. ಆದರೆ ಹಲಸಿನ ಮರ ಸೋತಿಲ್ಲ. ಬುಡದಿಂದ ಪುನಃ ಚಿಕ್ಕ ಗಿಡವಾಗಿ ಚಿಗುರಿ ನಿಂತಿದೆ.ನಾನಾಗ ಚಿಕ್ಕ ಇದ್ದೆ, ಅದು ಆಗ ತುಂಬಾ ದೊಡ್ಡದಿತ್ತು. ನಾನೀಗ ದೊಡ್ಡವನಾಗಿದ್ದೆನೆ, ಆದರೆ ಅದು ಯಾರದ್ದೋ ತಪ್ಪಿನಿಂದಾಗಿ ನನಗಿಂತಲೂ ಈಗ ಚಿಕ್ಕದಾಗಿ ನಿಂತಿದೆ. ಅಲ್ಲಿಗೆ ಹೋದಾಗ ಹಾಗೇ ಕೈಯಿಂದ ಒಮ್ಮೆ ಅದರ ತಲೆ ಸವರದೇ ಬರಲು ಮನಸ್ಸೇ ಬರುವುದಿಲ್ಲ. ಒಂದು ಕಾಲದಲ್ಲಿ ಹಸಿವು ತಣಿಸಿದ ದೇವರು ಅದು...

ಅಜ್ಜಿ ಮನೆಯಲ್ಲಿ ಅದೊಂದು ಹೆಸರಿಲ್ಲದ ತೊರೆ ಇದೆ. ಮುಂದೆ ಅದು ಹೋಗಿ ಸೇರುವುದು ಫಲ್ಗುಣಿ ನದಿಯನ್ನು. ಅಮ್ಮ ಸೀರೆ ಬಟ್ಟೆ ಬರೆ ಎಲ್ಲಾ ತಗೊಂಡು ಹೋಗಿ ಅಲ್ಲೇ ಓಗೆಯುತ್ತಿದ್ದಳು, ಒಬ್ಬಳೇ ಅಲ್ಲ ಅಕ್ಕ ಪಕ್ಕದ ಹೆಂಗಸರು ಕೂಡ ಬರುತ್ತಿದ್ದರು,ಜೊತೆಗೆ ನಾವೆಲ್ಲ ಮಕ್ಕಳು. ಅವರೆಲ್ಲ ಹೆಂಗಸರ ಮನೆ ಮನೆ ದೋಸೆ  ಕಥೆಗಳು ಅಲ್ಲಿ ವಿನಿಮಯ ಆಗುತ್ತಿರಬೇಕಾದರೆ, ನಾವು ಮಕ್ಕಳು ನೀರಿನಲ್ಲಿ ಪೇಪರ್ ಬೋಟ್ ಬಿಡುತ್ತಿದ್ದೆವು, ಅಮ್ಮನ ಸೀರೆಯನ್ನು ಬಲೆಯಂತೆ ಮಾಡಿಕೊಂಡು  ನೀರಿನಲ್ಲಿ ಲಗಾಟೆ ಹೊಡೆಯುತ್ತಿದ್ದ ಹೊಳೆಯುವ ಹೊನ್ನ ಮೀನುಗಳನ್ನು ಬಲೆಗೆ ಬೀಳಿಸಲು ಮುಂದಾಗುತ್ತಿದ್ದೆವು. ತೊರೆ ಬಿಡಿ, ಸಮೃದ್ಧವಾಗಿ ಹರಿಯುತ್ತಿದ್ದ ಫಲ್ಗುಣಿಯೇ ಈಗ ಬೇಸಿಗೆಯ ಮೊದಲೇ ಅಬ್ಬರವನ್ನು ಕಳೆದುಕೊಂಡು ಬತ್ತಲು ಶುರುವಾಗಿದ್ದಾಳೆ. ಆದರೂ ಈಗಲೂ ನನ್ನ ಕನಸಿನಲ್ಲಿ, ಮನಸ್ಸಿನಲ್ಲಿ ನಾನು ಆ ತೋರೆಯಲ್ಲಿ ಆವತ್ತು ಬಿಟ್ಟ ಪೇಪರ್ ಬೋಟ್, ಫಲ್ಗುಣಿ ಸೇರಿ ಮುಂದೆ ಅಲ್ಲಿಂದ ಅರಬ್ಬಿ ಸಮುದ್ರವನ್ನೂ  ಸೇರಿ, ಅಲ್ಲಿರೋ ಹತ್ತಾರು ದೊಡ್ಡ ಹಡಗುಗಳಿಗೆ  ಡಿಕ್ಕಿ ಹೊಡೆದು, ಆ ಹಡಗುಗಳನ್ನು ಮಗುಚಿ ಹಾಕಿದ್ದು ಮಾತ್ರವಲ್ಲ ಸಪ್ತ ಸಾಗರ ಗಳನ್ನು ದಾಟಿ ಪುನಃ ನಮ್ಮ ಫಲ್ಗುಣಿ ಯ ತೋರೆ ಗೆ ವಾಪಸು ಬಂದು ಇನ್ನೂ ನನಗಾಗಿಯೇ  ಕಾದು ನಿಂತಿದೆ...

ತೋಟಕ್ಕೆ ಹೋಗುವ ಮೊದಲು ಮೂರು ಉದ್ದನೆಯ ಕಲ್ಲುಗಳನ್ನು ಲಂಬವಾಗಿ ಒಂದು ಹಿಂದೆ ಎರಡು ಮುಂದೆ  ನಿಲ್ಲಿಸಿದಂತಹ ಒಂದು ಚಿಕ್ಕ ಗೇಟು. ಮನುಷ್ಯರು ಮಾತ್ರ ಹೋಗಬಹುದು. ಆ  ಕಲ್ಲಿನ ಗೇಟಿಗೆ ತಾಕಿ ಕೊಂಡೇ ಇರೋ ತೋಟದ ಬೇಲಿ, ಆ ಬೇಲಿ ತುಂಬಾ ಅರಳೋ ಬೇಲಿಗಾಗಿಯೇ ನೆಟ್ಟ ಕೆಂಪು ದಾಸವಾಳ, ಬಿಳಿಯ ಕಾಡು ಮಲ್ಲಿಗೆ, ಕ್ರೀಮ್ ಬಣ್ಣದ ಗೋ ಸಂಪಿಗೆ,ಹೆಸರೇ ಗೊತ್ತಿಲ್ಲದ್ದ ನೀಲೀ ಬಣ್ಣದ ಬೇಲಿ ಹೂಗಳು, ಆ ಹೂವು ಗಳಿಗೆ ಜೋತು ಬಿದ್ದಿರೋ ಚಿಟ್ಟೆಗಳು, ಬೇಕಾದಷ್ಟು ಮಕರಂದ ಹೀರಿ ಹೊಟ್ಟೆ ಉಬ್ಬರಿಸಿಕೊಂಡಿರೋ ಜೇನು ಹುಳಗಳು,ಬೇಲಿಯಲ್ಲೇ ಪಲ್ಟಿ ಹೊಡೆಯುತ್ತಿರೋ ಗುಬ್ಬಿ, ಗೊರವಂಕ,ಕುಪುಲ್ ಪಕ್ಷಿಗಳು, ಮೇಲಿಂದ ಕೆಳಗೆ, ಕೆಳಗಿಂದ ಮೇಲೇ ಓಡಾಡೋ ಪುಟ್ಟ ಅಳಿಲು ಮರಿಗಳು,ಬೇಲಿಯ ತುದಿಯಲ್ಲಿ ಇರೋ ಚಿಕ್ಕ ಚಿಕ್ಕ ಹಣ್ಣುಗಳ ಅನಾಮಿಕ ಕಾಟು ಮಾವು..ತೋಟದ ಬದಿಯ ಹುಲ್ಲು ಮೇಯಲು ಆ ಮರಕ್ಕೆ ಕಟ್ಟಿ ಹಾಕಿದಂತಹ ಕಪ್ಪನೆಯ ಗೌರಿ ಹಸು ಹಾಗೂ ಕಿವಿ ನೆಟ್ಟಗೆ ಮಾಡಿಕೊಂಡು,ಮೂಗು ಅರಳಿಸಿ, ಕಾಲು ಎಗರಿಸಿ ಅತ್ತಿಂದಿತ್ತ ಓಡೋ ಅದರ ಪುಟ್ಟ ಕರು..ತೋಟದ ಒಳಬಾಗದಲ್ಲಿ ಬೇಲಿಗೆ ತಾಗಿಕೊಂಡೇ ಇರುವ ಪುಟ್ಟ ಕೆರೆ,ಆ ಕೆರೆಯ ಸುತ್ತ ನೀರ ಮಣಿ ಗಳನ್ನು ಮುತ್ತಿನ ಮಣಿ ಯಂತೆ ಹೊಳೆಸುವ ಪತ್ರೋಡೆಯ  ಕೆಸುವಿನ ಎಲೆಗಳು, ಆ ಕೆರೆಯ ನೀರು ಎಳನೀರಷ್ಟು ಸ್ವಚ್ಛ.. ಆಹಾ,ನನಗೆ  ಆ ಕಲ್ಲು ಗೇಟು, ತೋಟದ ಬೇಲಿಯೇ ಸ್ವರ್ಗ ಅಂತ ಅನ್ನಿಸುತ್ತಿತ್ತು. ಆ ಕಲ್ಲು ಗೇಟಿನ ಆ ಜಾಗವನ್ನು ಹಾದು, ಬೇಲಿಯ ಸೌಂದರ್ಯವನ್ನು ಆಸ್ವಾದಿಸುತ್ತಾ, ಕೆರೆಯ ನೀರನ್ನು ಬೊಗಸೆಯಲ್ಲಿ ಕುಡಿದು ಕೊಂಡು,ಕಾಲನ್ನು ನೀರಲ್ಲಿ ಅದ್ದಿಕೊಂಡು ಓಡುತ್ತಾ ನಲಿದಾಡುತ್ತಾ ಮನಸ್ಸಿಗೆ ಬಂದ  ಹಾಡು ಗುನುಗಿಕೊಂಡು,ಕೈಯಲ್ಲೊಂದು ಚಿಕ್ಕ ಬಾಟಲಿ ಹಿಡಿದುಕೊಂಡು ನಾನು ದಿನಾಲೂ  ಹಾಲು ತರಲು ಹೋಗುತ್ತಿದ್ದೆ. ಈಗಲೂ ಎಲ್ಲೇ ಇದ್ದರೂ ಆ ಜಾಗ ನೆನಪಾದರೆ ಸಾಕು ನನ್ನಲ್ಲಿ ಅದೆಷ್ಟು ದಾಸವಾಳಗಳು ಅರಳಿಬಿಡುತ್ತೆ ಗೊತ್ತಾ..ಮತ್ತು ನನ್ನಲ್ಲಿ ಅರಳೋ ಆ ಬೇಲಿಯ  ದಾಸವಾಳಗಳು ಯಾವತ್ತೂ ಬಾಡಿಯೇ ಇಲ್ಲ...

ಕೆಲವು ಜಾಗಗಳು ಹಾಗೇ, ಮನುಷ್ಯರಿಗೆ ಮಾತ್ರ ವಲ್ಲ, ಅವುಗಳಿಗೂ ಜೀವವಿದೆ... ನಾವು ನಮ್ಮೊಳಗೆ ಅವುಗಳಿಗೆ ಒಂದಿಷ್ಟು ಜಾಗ ಮಾಡಿಕೊಟ್ಟರೆ, ಈ ಜೀವ ಹೋಗುವವರೆಗೂ ಆ ಜಾಗಗಳಿಗೂ ನಮ್ಮಷ್ಟೇ ಜೀವವಿದೆ..❤️

.....................................................................................

#ಏನೋ_ಒಂದು

AB Pacchu
Moodubidire



Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ