ಪುರಾಣ ಕಥೆಗಳು ಮತ್ತು ಗುರುರಾಜುಲು ನಾಯ್ಡು
ಪುರಾಣ ಕಥೆಗಳು ಯಾರಿಗೆ ಇಷ್ಟ ಆಗಲ್ಲ ಹೇಳಿ. ಓದುವಷ್ಟು ವ್ಯವಧಾನ ಇರದೇ ಇದ್ದಾಗ ಚೆನ್ನಾಗಿ ಕಥೆ ಹೇಳುವವರೊಬ್ಬರಿರಬೇಕು. ಆಗಲೇ ಕಥೆಗಳು ನಮ್ಮ ಕೈ ಹಿಡಿಯುವುದು ,sorry.. ನಾವು ಅದರ ಜಾಡು ಹಿಡಿದು ಹೋಗುವುದು, ಇನ್ನಷ್ಟು ಕಥೆ ಕೇಳಬಯಸುವುದು, ಮತ್ತಷ್ಟು ಓದುವುದು.
ಚಿಕ್ಕಂದಿನಲ್ಲಿ ಪುರಾಣ ದ ಕಥೆಗಳು ಬೆರಗು ಮೂಡಿಸುತ್ತಿದ್ದವು. ಆ ಯುದ್ಧಗಳನ್ನು ಕಣ್ಣಿಗೆ ಕಟ್ಟುವಂತೆ ಯಾರಾದರೂ ಹೇಳಿದಾಗ ನಾನು ಕಳೆದು ಹೋಗುತ್ತಿದ್ದೆ. ಯಾವುದೇ ಕಥೆ ಅಂತ ಬಂದಾಗ ಮೊದಲು ನೆನಪಾಗುವುದೇ ಅಜ್ಜಿ. ನನ್ನಜ್ಜಿ ಪುರಾಣ ದ ಕಥೆ ಹೇಳದ್ದಿದ್ದರೂ, ಅಜ್ಜಿ ಮನೆಯ ಬಳಿ ಮತ್ತೊಬ್ಬರು ಅಜ್ಜಿ ಇದ್ದರು, ಅವರು ಬಕಾಸುರನ ಕಥೆ ಹೇಳುತ್ತಿದ್ದರು. ನಂತರ ಅಪ್ಪ, ಅವರು ಕೂಡ ಚೆನ್ನಾಗಿ ಕಥೆ ಹೇಳಬಲ್ಲರು. ಬಾಲಮಂಗಳ, ಬಾಲಮಿತ್ರ, ಚಂದ ಮಾಮ ದಲ್ಲಿ ಬರುತ್ತಿದ್ದ ಚಿತ್ರ ಸಹಿತ ಪುರಾಣದ ಕಥೆಗಳು ಕೂಡ ಇನ್ನೂ ನೆನಪಿದೆ.
ಮುಂದಕ್ಕೆ ಟಿ.ವಿ ಬಂದಾಗ ರಾಮಾಯಣ, ಮಹಾಭಾರತ, ಶ್ರೀ ಕೃಷ್ಣ, ಜೈ ಹನುಮಾನ್ ಗಳು, ಪೌರಾಣಿಕ ಕನ್ನಡ ಚಲನಚಿತ್ರ ಗಳು ನಮ್ಮಲ್ಲಿ ಪುರಾಣ ಕಥೆಗಳ ಆಸಕ್ತಿಯನ್ನು ಹೆಚ್ಚಿಸಿಬಿಟ್ಟವು. ಇನ್ನೂ ನೆನಪಿದೆ ಹೈಸ್ಕೂಲ್ ನಲ್ಲಿ ಇರುವಾಗ ಮುನಿರಾಜ ರೆಂಜಾಳ ಸಾರ್ ಅಂತ ನಮ್ಮ ಕನ್ನಡದ ಟೀಚರ್ ಒಬ್ಬರು ಇದ್ದರು. ಅವರು ಅದೆಷ್ಟು ಚೆನ್ನಾಗಿ ಪುರಾಣದ ಕಥೆಗಳನ್ನು ಬಿಡಿಸಿ ಹೇಳುತ್ತಿದ್ದರೆಂದರೆ ನಾವು ಬಾಯಿಬಿಟ್ಟುಕೊಂಡು ಕೇಳುತ್ತಿದ್ದೆವು.ಮಹಾಭಾರತದ ಉಪಕಥೆಗಳನ್ನು ಅವರಷ್ಟು ಚೆನ್ನಾಗಿ ಬೇರೆ ಯಾರು ಹೇಳಿದ್ದು ನಾನು ಕೇಳಿಲ್ಲ. ಒಂದು ವೇಳೆ ತರಗತಿಯಲ್ಲಿ ಪಾಠದಲ್ಲಿ ಬರೋ ಉಪಕಥೆಗಳನ್ನು ಹೇಳಲು ಸಮಯ ಸಾಕಾಗದೇ ಇದ್ದರೇ, ಮಧ್ಯಾಹ್ನ ದ ಊಟದ ಬಿಡುವಿನ ಸಮಯದಲ್ಲೂ ಬಂದು ಆಸಕ್ತರಿಗೆ ಕಥೆ ಹೇಳಿ ಹೋಗುತ್ತಿದ್ದರು. ಪುರಾಣ ಕಥೆ ಗಳ ಬಗ್ಗೆ ನನ್ನಲ್ಲಿ ಇನ್ನಿಲ್ಲದ ಆಸಕ್ತಿ ಹುಟ್ಟಿಸಿದ್ದೇ ಅವರು.ಹೈಸ್ಕೂಲ್ ನ ಲೈಬ್ರರಿಯಲ್ಲಿದ್ದ ಸಂಪೂರ್ಣ ಮಹಾಭಾರತ, ರಾಮಾಯಣ ಗಳು ತಕ್ಕಮಟ್ಟಿಗೆ ನನ್ನ ಪುರಾಣವನ್ನು ಸಮೃದ್ಧಿಗೊಳಿಸಿಬಿಟ್ಟವು.
ಮಂಗಳೂರು ಆಕಾಶವಾಣಿಯಲ್ಲಿ ಬುಧವಾರ ರಾತ್ರಿ ಬರುತ್ತಿದ್ದ ಯಕ್ಷಗಾನ ವನ್ನು ಮನೆಯಲ್ಲಿ ಮಲಗಿಕೊಂಡೇ ಕೇಳಿ ದೃಶ್ಯಗಳನ್ನು ಕಲ್ಪಿಸಿಕೊಳ್ಳುತ್ತಿದ್ದೆ.
ಇನ್ನು ಕರಾವಳಿ ಭಾಗದವರಾಗಿದ್ದರೆ ಪುರಾಣ ಕಥೆಗಳನ್ನು ಕೇಳಿಸಿಕೊಳ್ಳಲು ಇನ್ನೆರಡು ಪ್ರಕಾರಗಳು ನಮ್ಮಲ್ಲಿ ಇವೆ. ಒಂದು ಯಕ್ಷಗಾನ,ಮತ್ತೊಂದು ತಾಳಮದ್ದಲೆ. ಯಕ್ಷಗಾನದಲ್ಲಿ, ಭಾಗವತಿಕೆ, ವೇಷ, ಚಂದದ ನೃತ್ಯ, ಮಾತು ಎಲ್ಲವೂ ಇದ್ದರೆ,ತಾಳಮದ್ದಲೆಯಲ್ಲಿ ಭಾಗವತಿಕೆ ಮತ್ತು ಅರ್ಥಗಾರಿಕೆ ಗೆ ಹೆಚ್ಚಿನ ಪ್ರಾಶಸ್ತ್ಯ. ಎರಡರಲ್ಲೂ ಇದ್ದದ್ದು ಪುರಾಣದ ಕಥೆಗಳೇ. ಚಿಕ್ಕವರಾಗಿದ್ದಾಗ ಮೈಸಾಸುರ(ಮಹಿಷಾಸುರ) ನೇ ಪ್ರಧಾನ ಆಕರ್ಷಣೆ ಯಾಗಿದ್ದರೂ ಯಕ್ಷಗಾನದ ಮೂಲಕ ದೇವಿ ಮಹಾತ್ಮೆ ಚೆಂದವಾಗಿ ಅರ್ಥವಾಗಿತ್ತು. ತಾಳಮದ್ದಲೆಯ ಪ್ರೌಢ ಮಾತುಕತೆ, ಸಂಭಾಷಣೆ ಗಳು ಕರ್ಣ- ಅರ್ಜುನ, ಧರ್ಮರಾಯ- ಧುರ್ಯೋಧನರನ್ನು ಅಕ್ಕ ಪಕ್ಕ ಕುಳ್ಳಿರಿಸಿ ಮಾತಾಡಿಸಿದಂತಿತ್ತು.ನಿಜವಾಗಿಯೂ ತಾಳಮದ್ದಲೆಯೊಂದು ಇಷ್ಟವಾಗಿಬಿಟ್ಟರೆ ಬೇರೆ ಎಲ್ಲಾ ಚರ್ಚೆ ವಾಗ್ವಾದ ಡಿಬೇಟ್ ಗಳು ನೀರಸವಾಗಿಬಿಡುತ್ತದೆ.
ಇವೆಲ್ಲದರ ಜೊತೆಗೆ ಅಚ್ಚುಕಟ್ಟಾಗಿ ನಮಗೆ ಪುರಾಣ ಕಥೆಗಳ ಸವಿಯನ್ನು ಉಣಬಡಿಸಿದ ಇನ್ನೂ ಒಂದು ಪ್ರಕಾರ ಇದೆ. ಅದುವೇ ಹರಿಕಥೆಗಳು.
ಹರಿಕಥೆ ಎಂದರೆ ನೆನಪಾಗುವುದೇ ಶ್ರೀ ಆರ್. ಗುರುರಾಜುಲು ನಾಯ್ಡು ರವರು 😊🙏🏻
ಹರಿಕಥೆ ಎಂದರೆ ಗುರುರಾಜುಲು ನಾಯ್ಡು, ಗುರುರಾಜುಲು ನಾಯ್ಡು ಎಂದರೆ ಹರಿಕಥೆ ಆಗಿದ್ದ ಕಾಲವೊಂದು ಇತ್ತು. ಮನೆಯಲ್ಲಿ ಅಪ್ಪ ಅವರ ಹರಿಕಥೆಯ ಕ್ಯಾಸೆಟ್ ಗಳನ್ನು ಹಾಕಿಕೊಂಡು ಕೇಳುತ್ತಿದ್ದರು. ಹಾಗಾಗಿ ನನಗೆ ನಳದಮಯಂತಿ ಕಥೆ, ಗಜಗೌರಿ ವ್ರತ, ರಾಮಾಂಜನೇಯ ಯುದ್ಧ,ನಲ್ಲತಂಗಾ ದೇವಿ.. ಹೀಗೆ ಹಲವು ಕೇಳದ ಕಥೆಗಳು ಕಿವಿಗೆ ಬಿದ್ದಿದ್ದವು.
ನಿನ್ನೆ ಮನೆಯಲ್ಲಿಯೇ ಇದ್ದಾಗ ಅಪ್ಪ ಇಂಟರ್ನೆಟ್ ನಲ್ಲಿ ಗುರುರಾಜುಲು ನಾಯ್ಡು ರವರ ಹರಿಕಥೆ ಇದ್ದರೆ ಒಮ್ಮೆ ಹಾಕು ಎಂದು ಹೇಳಿದಾಗ Youtube ನಲ್ಲಿ ಹುಡುಕಾಡಿದರೆ ಗುರುರಾಜುಲು ರವರ ರಾಶಿ ಹರಿಕಥೆಗಳು ಸಿಕ್ಕಿಬಿಟ್ಟವು. ತಡ ಮಾಡದೇ ಮೊದಲಿಗೆ ಗಜಗೌರಿ ವ್ರತ ವನ್ನೇ ಪ್ಲೇ ಮಾಡಿದೆ. ಮಹಾಭಾರತದಲ್ಲಿ ಬರುವಂತಹ ಕಥೆ ಅದು.
ಆಹಾ ಅದೆಂತಹ ದಿವ್ಯವಾದ ಧ್ವನಿ ಗುರುರಾಜುಲು ನಾಯ್ಡು ಅವರದ್ದು. ದೇವರ ಸ್ತುತಿಗಳೆಲ್ಲ ಮುಗಿದ ಮೇಲೆ, " ಕೀರ್ತನಾರಂಭ ಕಾಲದಲ್ಲಿ....." ಎಂದು ಅವರು ಹೇಳೋ ಹರಿಕಥೆ ಎಂತ ವರನ್ನೂ ಮಂತ್ರ ಮುಗ್ಧರನ್ನಾಗಿ ಮಾಡಿಬಿಡುತ್ತದೆ. ನವರಸಗಳನ್ನು ತಮ್ಮ ಧ್ವನಿಯ ಮೂಲಕ ಹೊರಹಾಕುವ ಕಲೆ ಅವರಿಗೆ ಸಿದ್ದಿಸಿದೆ. ರಾವಣ,ಧುರ್ಯೋಧನರಾಗಿ ಅವರು ಬೊಬ್ಬಿರಿಯಬಲ್ಲರು. ಸತ್ಯ ಹರಿಶ್ಚಂದ್ರ, ನಳ ಮಹಾರಾಜ ಕಷ್ಟ ಅನುಭವಿಸುವ ಕಥೆ ಹೇಳುವಾಗ ಕೇಳುಗರರು ತಾವೇ ಕಷ್ಟ ಅನುಭವಿಸದಂತೆ ಫೀಲ್ ಆಗುತ್ತಾರೆ.
ಹಾಸ್ಯ ಅವರ ಹರಿಕಥೆಯಲ್ಲಿ ಅಲ್ಲಲ್ಲಿ ಬಂದು ಹೋಗುತ್ತಲೇ ಇರುತ್ತದೆ. ಅವರ ಒಂದೇ ಹರಿಕಥೆಗಳನ್ನು ಎಷ್ಟು ಬೇಕಾದರೂ ಕೂಡ ಕೇಳಬಹುದು. ಕಥೆ ಹೇಳುವ ಅವರ ಆ ಗತ್ತು ಗಾಂಭೀರ್ಯ ಅವರನ್ನು ಹರಿಕಥಾ ಲೋಕದ ಮೇರುಶಿಖರಕ್ಕೆ ಒಯ್ದು ಬಿಟ್ಟಿತ್ತು.
ಈಗ ಗುರುರಾಜುಲು ನಾಯ್ಡು ಅವರು ಇಲ್ಲ. ಅದರೆ ಅವರ ಶಾರೀರ ಇನ್ನೂ ಧ್ವನಿಮುದ್ರಿಕೆಗಳಲ್ಲಿ ಜೀವಂತವಾಗಿಯೇ ಇದೆ. You tube ನಲ್ಲೂ ಇದೆ. ಕೇಳಿದಷ್ಟು ಹಿತವೆನಿಸುತ್ತದೆ. ಹರಿಕಥೆ ಗಳು ಕೇಳುವ ಆಸಕ್ತಿ ಇಂದಿಗೆ ಹೆಚ್ಚಾಗಿ ಯಾರಲ್ಲೂ ಉಳಿದಿಲ್ಲ. ಯಾರ ಮನೆಯಲ್ಲೂ ಅವರ ಆಡಿಯೋ ಆಗಲಿ ಅಥವಾ ಇತರರ ಹರಿಕಥೆ ಗಳು ಕೇಳಿಬುರುತ್ತಿಲ್ಲ. ಅಪರೂಪಕ್ಕೆ ಒಮ್ಮೆ ಎಲ್ಲಾದರೂ ಬ್ರಹ್ಮಕಲಶೋತ್ಸವ, ಜೀರ್ಣೋದ್ಧಾರ, ಉತ್ಸಾವದಿಗಳು ನಡೆದಾಗ ಆಯೋಜಕರು ಹರಿಕಥೆಗಳನ್ನು ಏರ್ಪಡಿಸುತ್ತಾರೆ. ಆವಾಗಲೆಲ್ಲ ಹರಿಕಥೆ ಆಲಿಸುವಾಗ ಜಾಸ್ತಿ ಆಗಿ ನೆನಪಾಗುವುದೇ ದಿವಂಗತ ಗುರುರಾಜುಲು ನಾಯ್ಡು ರವರು. 😊🙏🏻
ಪುರಾಣವನ್ನು ವಿಭಿನ್ನ ರೀತಿಯಲ್ಲಿ ಉಣಬಡಿಸಿದ್ದು ಹರಿಕಥೆಗಳಾದರೆ, ಅದರ ಮಹಾನು ಬಾಣಸಿಗ ಯಾವತ್ತೂ ಅವರೇ ಆಗಿದ್ದರು 😊🙏
........................................................................................
#ಏನೋ_ಒಂದು
ab pacchu
moodubidire

Comments
Post a Comment