ಒಂದೇ ಒಂದು ಆಸೆಯು ತೊಳಲಿ ಬಳಸಲು
.
#ಒಂದೇ_ಒಂದು_ಆಸೆಯು_ತೋಳಲಿ_ಬಳಸಲು......
ನನಗೆ ಕರಾಟೆ ಗೊತ್ತಿದೆ...
ಹಾಗಂತ ಇಟ್ಟಿಗೆ ಒಡೆಯುವುದು,ಮಡಿಕೆ ಒಡೆಯುವುದು ಬರೀ ಅಷ್ಟು ಮಾತ್ರ ಮಾಡುತ್ತೇನೆ ಎಂದು ತಪ್ಪು ತಿಳಿಯಬೇಡ.
ತಲೆಕೆಟ್ಟರೆ ಎದುರಿರುವವರ ತಲೆಯನ್ನು ಕೂಡ ಚೆನ್ನಾಗಿ ಒಡೆದು ಹೋಳು ಮಾಡಿ ಹಾಕುವಂತಹ ಕಲೆ ನನಗೆ ಸಿದ್ದಿಸಿದೆ.
ಇನ್ನೂ ಯಾರದ್ದೂ ತಲೆ ಒಡೆದು ಹಾಕಿಲ್ಲ ಎನ್ನುವುದು ಸಹ ನಿಜವೇ ಆದರೂ..
ನೀಲಮೇಘ... ನನ್ನ ಬಳಿ ನೀನೇದಾರೂ ಅಧಿಕಪ್ರಸಂಗದ ಪರಮಾವಧಿ ತೋರಿಸಿದರೆ ನಾನು ಮೊದಲಿಗೆ ಒಡೆದು ಹಾಕುವ ತಲೆ ನಿನ್ನದೇ ಆಗಿರುತ್ತದೆ ಎನ್ನುವುದರಲ್ಲಿ ನನಗಂತು ಯಾವುದೇ ಸಂಶಯವಿಲ್ಲ..
ಆದ್ದರಿಂದ ಸುಮ್ಮನೆ ನಾನು ಹೇಳುವುದನ್ನು ಸಹ ಸ್ವಲ್ಪ ಕೇಳು.
ನಾನೇ ಹೇಳಿದಂತೆಯೇ ಕೇಳಬೇಕು ಎಂಬ ಮಹದಾಸೆ ನನ್ನದಲ್ಲ. ಆದರೆ ನನ್ನ ಬಳಿ ಇರುವಾಗಲೆಲ್ಲ ನಾನು ಹೇಳಿದನ್ನೂ ಸಹ ನೀನು ಸ್ವಲ್ಪ ಕಿವಿಗೊಟ್ಟು ಕೇಳಬೇಕು ಎಂಬುದು ಈ ಲೋನ್ಲಿ ಹುಡುಗಿಯ ಸಣ್ಣ ಆಸೆ ಅಷ್ಟೇ.
ಆದರೆ ನೀನು ನನ್ನ ಬಳಿ ಬರುವುದು.. ನಾನು ಎಲ್ಲವನ್ನೂ ಹೇಳುವುದು.. ನೀನು ಪೆಕ್ರನಂತೆ ಕೇಳುವುದು ಇದೆಲ್ಲಾ ಯಾವಾಗ ಸಂಭವಿಸುವುದು ..?!
ನನಗಂತು ಗೊತ್ತಿಲ್ಲ..
ಕಾರಣ ನಮ್ಮ ಭೇಟಿಯೇ ಆಗಿಲ್ಲ..!
ನಿನಗೆ ಯಾವಾಗ ಕೆಲಸ ಸಿಗುತ್ತೋ... ಕೆಲಸ ಸಿಕ್ಕ ಮೇಲೆ ನಿನಗೆ ನಿನ್ನ ಅಪ್ಪ ಯಾವಾಗ ಮದುವೆ ಮಾಡುತ್ತಾನೋ ಆ ವಿಚಾರಗಳಲ್ಲಿ ನನಗೆ ಆಸಕ್ತಿಯೇ ಇಲ್ಲ.
ನನಗೆ ಸದ್ಯಕ್ಕೆ ಗೊತ್ತಿರುವುದು ಇಷ್ಟೇ.. ನೀನು ಮರ್ಲ್ ಮರ್ಲ್ ತರಹ ಮಾಡುವುದನ್ನು ನೋಡಿಯೇ ನನಗರಿವಿಲ್ಲದೆ ನನ್ನಲ್ಲಿ ನಿನ್ನೆಡೆಗೆ ಆಕರ್ಷಣೆ ಅತಿಯಾಗಿದೆ.
ನಿನಗದು ಗೊತ್ತಿಲ್ಲ...
ಅದು ಬಿಡು.. ನಿನಗೆ ನಾನೆಂದರೆನೇ ಯಾರೆಂದು ಗೊತ್ತಿಲ್ಲ..!!
ಭಾಮೆ ಎಂಬುವವಳೊಬ್ಬಳು ಸತ್ಯಭಾಮೆಯಂತೆ ನಿನಗಾಗಿ ಚಡಪಡಿಸುತ್ತಿದ್ದಾಳೆ ಎಂಬ ಕಲ್ಪನೆಯೇ ನಿನಗಿಲ್ಲ..
ಆದರೆ ನನಗೆ ನಿನ್ನ ಬಗ್ಗೆ ಎಲ್ಲವೂ ಗೊತ್ತು...
ನಿನ್ನ ಅಪ್ಪ ನೀಲಣ್ಣ.. 'ನಮ್ಮ ನೀಲುಗೆ ಈ ಜನ್ಮದಲ್ಲಿ ಕೆಲಸ ಸಿಗುವುದು ಡೌಟು..' ಎಂದು ಹೇಳಿ ಹೇಳಿಯೇ ನಿನಗೆ ಕೆಲಸ ಸಿಕ್ಕಿಲ್ಲ ಎಂದು ನೀನು ತಿಳಿದುಕೊಂಡರೆ ಅದು ಸಹ ನಿನ್ನ ತಪ್ಪೇ..
ಏಕೆಂದರೆ .. " ಹೇಯ್ ದೇವರೇ.. ಈ ನೀಲಮೇಘನಿಗೆ ಇನ್ನೂ ಸ್ವಲ್ಪ ದಿನ ಕೆಲಸ ಸಿಗದಿರಲಿ.. ಹೀಗೆ ಮೂಡುಬಿದಿರೆಯಲ್ಲಿ ನನ್ನ ಕಣ್ಣೆದುರಿಗೆಯೇ ಅಲೆದಾಡುತ್ತಿರಲಿ.. ಊರಲ್ಲಿಯೇ ಇನ್ನಷ್ಟು ದಿನ ಹೀಗೆಯೇ ಇರಲಿ.." ಎಂಬ ನನ್ನದೊಂದು ಸಿನ್ಸಿಯರ್ ಪ್ರಾರ್ಥನೆ ದೇವರಲ್ಲಿ ಇನ್ನೂ ಹಾಗೇ ಮುಂದುವರಿದಿದೆ..
ಮತ್ತು ದೇವರು ನಾನು ಹೇಳಿದ್ದನ್ನು ಶ್ರದ್ಧೆಯಿಂದ ಕೇಳಿಸಿಕೊಂಡಿದ್ದಾನೆ ಕೂಡ.
Sorry.. ನೀನು ಎಲ್ಲೋ ಹಾರಿ ಹೋಗಿ ಮಹಾನಗರದಲ್ಲಿ ಇರುವುದು ನನಗೆ ಇಷ್ಟವಿಲ್ಲ. ಇನ್ನಷ್ಟು ದಿನ ಹೀಗೆ ನನ್ನ ಕಣ್ಣಿಗೆ ಬೀಳುವಂತೆ ಅಲೆದಾಡುತ್ತಿರು... ನಾನು ನನಗೆಯೇ ಅರಿವಾಗದಂತೆ ನಿನಗೂ ಸುಳಿವು ನೀಡದೆಯೇ ನಿನ್ನ ಬಳಿಯೇ ಸುಳಿದಾಡುತ್ತಿರುವೆ.
ನೀನು ನಮ್ಮ ತರಕಾರಿ ಅಂಗಡಿ ಗೋಪಾಲನಣ್ಣನವರ ಬಳಿ ಕೊತ್ತಂಬರಿ ಸೊಪ್ಪನ್ನು ಕೆ.ಜಿ ಗಟ್ಟಲೆ ಕೇಳುವಾಗ ನಾನು ಅಲ್ಲೇ ಇದ್ದೆ.
ವನಜ ಆಂಟಿಯ ತೋಟದಿಂದ ಲೋಡುಗಟ್ಟಲೆ ಪ್ರೂಟ್ಸ್ ಅನ್ನು ಅವರ ಮಗಳು ಇಂಚರಳ ಸ್ಕೂಟಿಯಲ್ಲಿ ನಿಮ್ಮ ಮನೆಗೆ ತುಂಬಿಕೊಂಡು ಹೋಗುವಾಗ... ನೀನು ಅದನ್ನು ತಿನ್ಲಿಕ್ಕೆ ತಗೊಂಡು ಹೋಗ್ತಾ ಇದ್ದೀಯಾ ಅಥವಾ ನೀನೇ ಏನಾದರೂ ಒಂದು ಪ್ರೂಟ್ಸ್ ಅಂಗಡಿ ಹಾಕ್ತೀಯಾ ಎಂದು ಬಾಯಿ ಬಿಟ್ಟುಕೊಂಡು ರೋಡ್ ಬದಿಯಲ್ಲಿ ನಿಂತುಕೊಂಡು ನೋಡಿದ್ದೆ ನಾನು.
ಪ್ರೂಟ್ಸ್ ಅಂಗಡಿಯ ಪುರ್ಸ (ಪುರುಷೋತ್ತಮ) ನವರ ಬಳಿ ಪ್ರತೀ ಬಾರಿಯೂ ಕೇವಲ ಅರ್ಧ ಕೆ.ಜಿ ಚಿತ್ತುಪುಲಿ(ಕಿತ್ತಳೆ) ತಗೆದುಕೊಳ್ಳಲಿಕ್ಕೆ ಹೋಗುವೆಯಾದರೂ.. ಅದಕ್ಕಿಂತ ಮೊದಲು ಒಂದು ಕಾಲು ಕೆ.ಜಿ ದ್ರಾಕ್ಷಿ ಹಣ್ಣನ್ನು ಹಾಗೇ ಟೇಸ್ಟ್ ನೋಡಿ ನೋಡಿಯೇ ನೀನು ತಿಂದು ಸಪಾಯಿ ಮಾಡುವುದನ್ನು .. ಆಮೇಲೆ ಪುರ್ಸಣ್ಣ ಎಂದಿನಂತೆ ನಿನ್ನೊಡನೆ ಜಗಳ ಮಾಡುವುದನ್ನು ನಾನು ಎಷ್ಟು ಸಲ ನೋಡಿಲ್ಲ ಹೇಳು... ಆವಾಗಲೆಲ್ಲ ನಾನು ಅಲ್ಲೇ ನಿಂತು ನಿನ್ನ ಅಧಿಕಪ್ರಸಂಗವನ್ನು ಗಮನಿಸುತ್ತಿದ್ದೆ.
ಹೇಳು ನಿನ್ನಂತಹ ಅಂಡೆ ಪಿರ್ಕಿ ಯ ಕಡೆಗೆ ನಾನು ಹೇಗೆ ಆಕರ್ಷಿತಳಾಗದೇ ಇರಲಿ.
ಈ ಆಕರ್ಷಣೆಯ ಹೆಸರು ಪ್ರೀತಿಯೋ ಗೀತಿಯೋ ಮಣ್ಣು ಮಸಿಯೋ ನನಗದು ಗೊತ್ತಿಲ್ಲ..
ಆದರೆ ನೀಲಮೇಘ ಜೀವನದಲ್ಲಿ ಹುಚ್ಚು ಕಟ್ಲಿಕ್ಕೆ ನೀನೇ ನನಗೆ ಸರಿಯಾದ ಜೋಡಿ ಎಂದು ಈ ಹುಚ್ಚು ಹುಡುಗಿ ತಿಳಿದುಕೊಂಡು ಆಗಿದೆ.
ನೀನು ಪೆಟ್ಟ್ ಕಮ್ಮಿ ಜನ ಆದರೆ.. ನಾನಂತು ಪೆಟ್ಟಿಸ್ಟೇ ಜನವೇ.. ಅದರಲ್ಲಿ ಡೌಟೇ ಬೇಡ.
ಈ ಬದುಕು ಫುಲ್ ಆಫ್ ಪೆಟ್ ಲಡಾಯಿಗಳಿಂದಲೇ ತುಂಬಿದ್ದರೆ ಅದೆಷ್ಟು ಚಂದ ಅಲಾ..
ನೀನು ಹೋದಲೆಲ್ಲಾ ಒಂದು ಪೆಟ್ ಲಡಾಯಿ ಸೀನ್ ಕ್ರೀಯೇಟ್ ಮಾಡುತ್ತಿರು ನೀಲಮೇಘ ..ಕ್ರೀಯೇಟ್ ಮಾಡುವುದು ಏನು.. ನೀನು ಹೋದಲ್ಲಿ ಅಂತಹದ್ದೊಂದು ಏನಾದರೂ ಆಗಿಯೇ ಆಗುತ್ತೆ ಬಿಡು,ಆ ವಿಶ್ವಾಸ ನಿನಗಿಂತ ಜಾಸ್ತಿ ನನಗೆ ಇದೆ.. ಆ ನಂತರ ನಾನು ಪೆಟ್ಟಿಸ್ಟ್ ತರಹ ಅಲ್ಲಿಗೆ ಓಡೋಡಿ ಬಂದು ನಿನ್ನನ್ನು ಬಿಡಿಸುವೆ...
ಆವಾಗ ನಮ್ಮದು ಎಲ್ಲರಂತೆ ಜಸ್ಟ್ ಹೋರಾಟದ ಬದುಕು ಆಗಿರುವುದಿಲ್ಲ ..ಓನ್ಲೀ ಪೆಟ್ಟ್ ಲಡಾಯಿಯ ಡಿಫರೆಂಟ್ ಬದುಕು.
ನನಗೆ ನಿಜವಾಗಿಯೂ ನಿನ್ನ ನಟ್ಟು ಬೋಲ್ಟ್ ಲೂಸ್ ಮಾಡಿ ನಿನಗೆ ಚೆನ್ನಾಗಿ ಕೀಟಲೆ ಕೊಟ್ಟು ನಿನ್ನನ್ನು ಆಟ ಆಡಿಸಬೇಕು ಎನ್ನುವುದರಲ್ಲಿ ಇಂಟ್ರೆಸ್ಟ್ ಜಾಸ್ತಿ ಇದೆಯೇ ಹೊರತು ಬಾಕಿ ಪ್ರೇಮಿಗಳಂತೆ ಪಾರ್ಕ್,ಗಾರ್ಡನ್ ಗಳಲ್ಲಿ ಸುತ್ತುವುದರಲ್ಲಿ ಇಲ್ಲ..
ನಿನ್ನನ್ನು ನೋಡುವಾಗ ನೀನು ಅಂತು ಯಾವುದೇ ಹುಡುಗಿಗೂ ಸೇಲ್ ಆದ ಹುಡುಗನಂತೆ ಕಾಣಿಸುವುದಿಲ್ಲ.
ನಿನ್ನ ಅಬತರವೇ ಅಂತಹದ್ದು ಇರುವಾಗ ಬಹುಶಃ ನಿನ್ನೊಂದಿಗೆ ಯಾರು ಬರುತ್ತಾಳೋ ಮಾರಾಯ...ಅಥವಾ ಪ್ರೀತಿ ಪ್ರೇಮ ಅಂತವುಗಳಿಗೆಲ್ಲಾ ನಿನ್ನಲ್ಲಿ ಸಯಯವಾದರೂ ಎಲ್ಲಿದೆ ಅಲಾ ನೀಲು..
ಪ್ರೀ ಟೈಂ ಸಿಕ್ಕಿದ್ರೆ ಮನೆಯಲ್ಲಿ ಮಾತ್ರವಲ್ಲ, ಬಸ್ಸಿನಲ್ಲಿ,ಹೋದಲ್ಲಿ, ಬಂದಲ್ಲಿ ಬರೀ ನಿದ್ದೆಯನ್ನೇ ಮಾಡುವೆಯೋ ಏನೋ ನೀನು..
ಕಣ್ಣಿನಲ್ಲಿ ಎದ್ದು ಕಾಣುತ್ತೆ ಅದು.
ಬಸ್ಸಿನಲ್ಲಿ ಸಹ ಹಲವು ಸಲ ಗಮನಿಸಿದ್ದೇನೆ ನೇರವಾಗಿ ಬಂದು ಸೀಟು ಹಿಡಿಯುವ ಬದಲು ಕರ್ಚೀಪು ಹಾಕಿ ಸೀಟ್ ರಿಸರ್ವೇಶನ್ ಮಾಡಿ ಕೊಳ್ಳುವ ನೀನು ಅದೆಷ್ಟು ಉದಾಸೀನದ ಮಾರಿ...
ನೀಲಮೇಘ ನೀನು ಸುಧಾರುವುದು ಯಾವಾಗನ...?
ಲೈಫ್ ನಲ್ಲಿ ಸೀರಿಯಸ್ ಆಗುವುದು.. ಶಿಸ್ತಿನ ಜೀವನ.. ಜವಾಬ್ದಾರಿಯುತ ಬದುಕು.. ಇದೆಲ್ಲಾ ನೀನ್ನ ಶಬ್ಧಕೋಶದಲ್ಲಿಯೇ ಇಲ್ಲವಾ..?
ಆದರೂ ನೀನು ಈ ರೀತಿ ಮರ್ಲನಂತೆ ಇದ್ದರೆನೇ ನನಗೆ ಅದೇ ಇಷ್ಟ.
ನೀನೂ ಇಷ್ಟ.. ನಿನ್ನ ಅಬತರವೂ ಇಷ್ಟ.
ಸತ್ಯ ಹೇಳ್ತೇನೆ ವನಜ ಆಂಟಿಯ ಮಗಳು ಇಂಚು(ಇಂಚರ) ಜೊತೆಗೆ ಮೊನ್ನೆ ನೀನು ಅವಳ ಸ್ಕೂಟಿಯಲ್ಲಿ ಹೋಗಿದ್ದು ನನಗೆ ಒಂಚೂರೂ ಇಷ್ಟ ಆಗ್ಲಿಲ್ಲ...😏
ಮೊನ್ನೆ ಮೂಡುಬಿದಿರೆ ಬಸ್ ಸ್ಟ್ಯಾಂಡ್ ನಲ್ಲಿ ನಿಶ್ಮಿತಾ ಬಸ್ ನ ವಿಂಡೋ ಸೀಟ್ ಪಕ್ಕ ಇದ್ದ ಚಂದದ ಹುಡುಗಿಗೆ ನೀನು ಟಾಟಾ.. ಬಾ.. ಬಾಯ್ ಮಾಡಿದ್ದು ಕೂಡ ನನಗೆ ಇಷ್ಟ ಆಗ್ಲಿಲ್ಲ ...😏
ಯಾಕೆ ನನಲ್ಲಿ ನಿನ್ನ ಬಗ್ಗೆ ಈ ರೀತಿ ಎಲ್ಲಾ ಆಗುವುದು ಎಂದು ನನಗದು ಗೊತ್ತಿಲ್ಲ....
ಹುಡುಗರನ್ನು ಕಂಡರೆ ಒಂಚೂರು ಇಷ್ಟ ಆಗದ ನನಗೆ ನೀನೊಬ್ಬನೇ ಇಷ್ಟ ಆಗಿದ್ದು.
ಅಪ್ಪನ ಬುಲೆಟ್ ಬೈಕ್ ಈಗ ನಾನೇ ಓಡಿಸುವುದು.
ಆ ಇಂಚರಳಂತೆ ನಾನು ಸ್ಕೂಟಿ ಎಲ್ಲಾ ಓಡಿಸುವವಳಲ್ಲ.. 😏
ನೀಲಮೇಘ.. ನನ್ನದೊಂದು ಆಸೆ ಇದೆ. ನಿನ್ನೊಡನೆ ನಮ್ಮ ಕುದುರೆಮುಖದ ದಟ್ಟ ಕಾಡಿನ ಆ ಒಂಟಿ ರೋಡಲ್ಲಿ ಹಾಗೇ ಲಾಂಗ್ ರೈಡ್ ಹೋಗಬೇಕೆಂದು.
ಬುಲೆಟ್ಟು ನಾನೇ ಬಿಡುತ್ತೇನೆ..
ನೀನು ಕೇವಲ ಹಿಂದೆ ಕುಳಿತುಕೊಂಡು ನನಗೆ ನಿನ್ನ ಮರ್ಲ್ ಸ್ಟೋರಿ ಹೇಳುತ್ತಿರಬೇಕು ಅಷ್ಟೇ..
ನಾನು ನಡು ನಡುವೆ ಮಾತಾಡಿ ಡಿಸ್ಟರ್ಬ್ ಮಾಡಲಾರೆ.
ಜಸ್ಟ್ ನೀನಾಡುವುದನ್ನು ಕೇಳುತ್ತಾ.. ಆ ದಟ್ಟ ಕಾಡನ್ನು ಗುಡು ಗುಡು ಎಂದು ಬುಲೆಟ್ ನಲ್ಲಿ ಸೀಳಿ ಹೋಗುತ್ತಾ ನಾನಲ್ಲೇ ಕಳೆದು ಹೋಗಬೇಕು.
ಈ ಬುಲೆಟ್ ಭಾಮಳ ಕನಸು ಸದ್ಯಕ್ಕೆ ಇದೊಂದೇ..
ನೆರವೇರಬಹುದಾ..?
ನೋಡು ನೀಲಮೇಘ.. ನನಗೂ ಪ್ರೀತಿ ಬಗ್ಗೆ ಜಾಸ್ತಿ ಗೊತ್ತಿಲ್ಲ...
ನಿನಗೂ ಪ್ರೇತಿ ಪ್ರೇಮ ಪುಸ್ತಕದ ಬದನೆಕಾಯಿ ಬಗ್ಗೆ ಜಾಸ್ತಿ ಗೊತ್ತಿಲ್ಲ ಎಂದು ನನಗೂ ಸಹ ಗೊತ್ತಿದೆ..
ನಿನ್ನನ್ನು ನೋಡಿದರೆ ನಿನ್ನಲ್ಲಿ ಅಂತಹ ಅನುಭವದ ಕೊರತೆ ಎದ್ದು ಎದ್ದು ಕಾಣುತ್ತಿದೆ ನನಗೆ ಯಾವಾಗಲೂ.
ನಿಜವಾಗಿಯೂ ಆ ಮುರಳಿ ಶ್ಯಾಮನ ಸತ್ಯಭಾಮೆಯಷ್ಟೇ ಕೋಪ ನನ್ನಲ್ಲಿ ಇದ್ದರೂ ಸಹ.. ಈ ಭಾಮೆಯ ಕೋಪ ನಿನ್ನ ಹುಚ್ಚಾಟವನ್ನು ಕಂಡ ಕ್ಷಣವೇ ಕರಗಿ ನೀರಾಗಿ ಬಿಡುವುದು.
ಆದರೂ... ನನ್ನಲ್ಲಿ ಎಷ್ಟೇ ಧೈರ್ಯವಿದ್ದರೂ ಸಹ ಎಲ್ಲವನ್ನೂ ನಿನ್ನೆದುರಿಗೆ ಬಂದು ಹೇಳಿ ಬಿಡುವ ಧೈರ್ಯ ನನ್ನಲ್ಲಿ ಇನ್ನೂ ಬಂದಿಲ್ಲ ನೋಡು..
ಅದಕ್ಕಾಗಿ ಈ ರೀತಿ ತೆರೆಮರೆಯಲ್ಲಿ ನಿನ್ನನ್ನು ನೋಡಿಕೊಂಡು.. ಈ ರೀತಿ ಎಲ್ಲಾ ಬರೆದುಕೊಂಡು ಹಗುರವಾಗುತ್ತಿದ್ದೇನೆ..
ಪ್ರತಿಯೊಬ್ಬರಿಗೂ ಯಾರಾದರೊಬ್ಬರು ಜಗತ್ತಿನ ಯಾವುದಾದರೊಂದು ಮೂಲೆಯಲ್ಲಿ ಇದ್ದೇ ಇರುತ್ತಾರೆ ಎಂದು ಹೇಳುವುದನ್ನು ಕೇಳಿದ್ದೇನೆ.
ಆ ನಿನ್ನ ಮೂಲೆಯ ಹುಡುಗಿ ನಾನೇ ಆಗಬೇಕು ಎಂದು ನನ್ನಾಸೆ ಅಷ್ಟೇ..
ಮೂಲೆಯಲ್ಲಿ ಇರದಿದ್ದರೂ ಓಕೆ... ಸೆಂಟ್ರಲ್ ಅಲ್ಲಿ ಇರದಿದ್ದರೂ ಓಕೆ.. ಆದರೆ ನಿನ್ನ ಬಾಳ ತುಂಬಾ ನಾನು... ನನ್ನ ಬುಲೆಟ್ ಹಿಂದೆ ನೀನು... ಗಾಳಿಯು ಮಿಸುಕಾಡದಂತೆ ಹಾಗೇ ಗಟ್ಟಿಯಾಗಿ ತಬ್ಬಿಕೊಂಡು ನನ್ನನ್ನು ನೀನು.. ಬುಲೆಟ್ಟು ಹಾಗೂ ಈ ಬಾಳು ಮುಂದಕ್ಕೆ ಮುಂದಕ್ಕೆ.. ಹಾಗೇ ಗುಡು ಗುಡು ಎಂದು ಓಡುತ್ತಿರಬೇಕು ಅಷ್ಟೇ..
ಗಾಡಿ ಹೊಡೆಯುವಾಗ ನಾನು ಪದೇ ಪದೇ ಬ್ರೇಕ್ ಹೊಡೆಯಲಾರೆ..
ಮತ್ತಷ್ಟು ತಬ್ಬಿಕೊಳ್ಳುವ ಆಸೆ ಇದ್ದರೆ ಮೊದಲೇ ಹೇಳಿ ಬಿಡು..
ನನಗೂ ಇದೆ...
ಒಂದೇ ಒಂದು ಆಸೆಯು... ನಿನ್ನ ತೋಳಲಿ ಬಳಸಲು,
ಒಂದೇ ಒಂದು ಬಯಕೆಯು... ನಿನ್ನ ಮುದ್ದಾಡಲು....
ನಿನ್ನಲ್ಲಿ ಹೇಗೆಲ್ಲಾ ಹೇಳಿದರೆ 'ಬಯಕೆ' ಅಂದರೆ ಸೀಮಂತ ವ? ಎಂದು ಕೇಳಬಹುದಾದ ಮರ್ಲು ಹುಡುಗ ನೀನು..
ಆದರೂ ಹಾಗೆಯೇ ಇರು...
ನನಗೂ ಒಂಚೂರು ನಿನ್ನ ಹುಚ್ಚು ಕಲಿಸು..
ಬರೀ ನಿನ್ನದೇ ಹುಚ್ಚು ಹಿಡಿಸು....
ಈ ಬುಲೆಟ್ ಭಾಮ..ದಾರಿಯಲ್ಲಿ ಕಂಡರೆ
ಜಸ್ಟ್ ಕೈ ಅಡ್ಡ ಹಾಕಿ ಏರಿ ಬಿಡು ನನ್ನ ಬುಲೆಟ್ ತೇರು..
ಗುಡು... ಗುಡು....ಗುಡು...
ಎನ್ನುತ್ತಾ ಎಲ್ಲಿಯೂ ನಿಲ್ಲದೇ,
ಹಾಗೇ ಸಾಗಿ ಬಿಡುವ ನಾವು ನೂರಾರು ಊರು....
ಕೇವಲ ನಿನ್ನವಳು,
✒️ಭಾಮ
.....................................................................................
#ನೀಲಮೇಘ
ab pacchu
moodubidire
(photo-internet)

Comments
Post a Comment