ನಾನು ಮತ್ತು ಅವಳು ಒತ್ತಿದ ಸೇಮೆದಡ್ಡೆ
El Clasico ಎನ್ನುವುದು ಫುಟ್ಬಾಲ್ ನಲ್ಲಿ ಒಂಥರಾ ಕುರುಕ್ಷೇತ್ರ ಇದ್ದ ಹಾಗೆ. ಸ್ಪೈನ್ ಫುಟ್ಬಾಲ್ ನ ಬದ್ಧವೈರಿ ಕ್ಲಬ್ ಗಳಾದ Real Madrid ಹಾಗೂ Barcelona ತಂಡಗಳು ಪರಸ್ಪರ ಎದುರು ಬದುರಾಗ ನಡೆಯೋದೇ El Clasico.
ಕ್ರಿಕೆಟ್ ನಲ್ಲಿ ಇಂಡಿಯಾ ಪಾಕಿಸ್ತಾನ ಮ್ಯಾಚ್ ಇದ್ದ ಹಾಗೆ. El Clasico ನಂತಹ ಕ್ಲಾಸಿಕ್ ಮ್ಯಾಚ್ ಗೆ ಎಂದೇ ಫುಟ್ಬಾಲ್ ಪ್ರೇಮಿಗಳು ತುದಿಗಾಲಲ್ಲೇ ಯಾವಾಗಲೂ ಕಾಯ್ತಾ ಇರ್ತಾರೆ.ಅಂತಹ rivalry ಆ ತಂಡಗಳದ್ದು. ಜಗತ್ತಿನಲ್ಲಿ ಕೋಟ್ಯಂತರ ವೀಕ್ಷಕರು ಕೂಡ ಅದಕ್ಕಿದ್ದಾರೆ.ನನ್ನ ಜೊತೆ ಕೂಡ ಇಂದು ಬೇರೆಯದ್ದೇ ರೀತಿಯಾದ El Clasico ಒಂದು ನಡೆಯಿತು.ಅಂತಹ ಒಬ್ಬ ಅಪ್ಪಟ ಎದುರಾಳಿ ಸಿಕ್ಕಿದ್ದ, expect ಮಾಡಿರಲಿಲ್ಲ..!
ಆಂಟಿ ಹೇಳಿದ್ದ ಸಮಯಕ್ಕೆನೇ ಪಕ್ಕದ ಮನೆಯ ಆಂಟಿ ಮನೆಯ ಮುಂದೆ ನಾನು ಕರೆಕ್ಟ್ ಟೈಂ ಗೆ ಹಾಜರಾಗಿದ್ದೆ.
ಹೌದು ಅವರಿಗೆ ಸೇಮೆದಡ್ಡೆ(ಒತ್ತು ಶ್ಯಾವಿಗೆ) ಒತ್ತಿ ಕೊಡುವ ಅಂತ ಹೋಗಿದ್ದೆ 😊
ಆಂಟಿ ಹಿಂದಿನ ದಿವಸವೇ ತಮ್ಮ ಮಗಳ ಕೈಯಲ್ಲಿ ಹೇಳಿ ಕಳುಹಿಸಿದ್ದರು,ಪಚ್ಚು ನಾಳೆ ಒಮ್ಮೆ ಬಂದು ಸೇಮೆದಡ್ಡೆ ಒತ್ತಿ ಕೊಟ್ಟು ಹೋಗು ಆಯ್ತಾ,ತುಂಬಾ ಸಂಬಂಧಿಕರು ಬರ್ತಾ ಇದ್ದಾರೆ, ನಾನು busy ಇರುವುದರಿಂದ ನೀನು ಬಂದರೆ ನನಗೆ ಸ್ವಲ್ಪ ಸಹಾಯ ಆಗುತ್ತೆ ಎಂದು.
ಅದು ಅಲ್ಲದೇ ಆಂಟಿ ಮಗಳು ಬೇರೆ ವಯ್ಯಾರ ದಿಂದ, ನಂಗೆ ಸ ನೀವೇ ಸೇಮೆದಡ್ಡೆ ಒತ್ತಲು ಕಲಿಸ್ತೀರಾ ಅಂತ ನುಲಿದು ಹೇಳಿದ್ದಳು, ಅದರೊಟ್ಟಿಗೆ ಅವಳ ತಮ್ಮ ಅವಳಿಗೆ ಆವಾಗವಾಗ ಹೇಳೋ "ಅಕ್ಕಾ ನಿಮ್ಮಿಬ್ಬರ ಮಧ್ಯೆ ಏನೋ ಒಂದು ನಡೀತಿದೆ ಎಂದು ನನಗೆ ಡೌಟು .." ಎನ್ನುವ ಒಗಟಾದ ಮಾತು ಕೂಡ ಬಿಡಿಸಲು ಬಾಕಿ ಇತ್ತು ಇಂದು.
ನಂಗೆ ಏನೋ ಬಲವಾದ ಅನುಮಾನ,ಈ ಆಂಟಿ ಮಗಳು ನನಗೇನಾದರೂ ಗ್ರೀನ್ ಸಿಗ್ನಲ್ ಕೊಡ್ತಾ ಇದ್ದಾಳ? ಆದರೂ ನನಗ್ಯಾಕೆ ಅರ್ಥ ಆಗ್ತಾ ಇಲ್ಲ. ಅಲ್ಲಾ ಬಾಯಿ ಬಿಟ್ಟೆ ಹೇಳಲು ಅವಳಿಗೇನು ಸಂಕಟ.. ಇರಲಿ ಇರಲಿ ಅದೆಲ್ಲವನ್ನೂ ಪರಿಹರಿಸಿಕೊಳ್ಳಲೆಂದೇ ಅಲ್ಲವೇ ಇವತ್ತು ನಾನು ಓಡೋಡಿ ಬಂದಿರುವುದು.
ಮಾಮಾಲಿ ಸ್ಟೈಲ್ ನಲ್ಲಿ ಎಲ್ಲೋ ನೋಡಿಕೊಂಡು ಬಾಗಿಲು ಬಡಿದೆ. ಬಾಗಿಲು ತೆರೆಯಿತು. "ಬಾಗಿಲನ್ನು ತೆರೆದು ಸೇವೆಯನ್ನು ಕೊಡು ಹರಿಯೇ.." ಎಂದು ನಾನು ಪಾರ್ಥಿಸಬೇಕಿತ್ತೋ ಏನೋ.ಆದರೆ ನಾನು ಹಾಗೇ ಮಾಡಲಿಲ್ಲ ನೋಡಿ, ಹಾಗಾಗಿ ಅಲ್ಲಿ ಅವ ಇದ್ದ, ಅದೇ ಅವಳ ತಮ್ಮ, ಅವನ ಅಕ್ಕ ನಿಗೆ ಸಂಬಂಧಿಸಿದಂತೆ ಅವನೇ ನನಗೆ ಸದ್ಯಕ್ಕೆ ಇಲ್ಲಿ ಬದ್ಧ ಎದುರಾಳಿ.
ಮನೆಯೊಳಗೆ ಬನ್ನಿ ಎಂದು ಕೂಡ ಹೇಳಲಿಲ್ಲ.ನಾನು ಕೂಡ ಅವನ ಆಮಂತ್ರಣ ಕ್ಕೆ ಕಾಯಲಿಲ್ಲ. ಅವಸರವಸರವಾಗಿ ಮನೆಯೊಳಗೆ ಹೋದೆ. ಕಣ್ಣು ಆಂಟಿ ಮಗಳಿಗಾಗಿ ಹುಡುಕಾಡುತ್ತಿತ್ತು. ನಾನು ಬಂದದ್ದೇ ಅದಕ್ಕೆ ಅಲ್ಲವೇ. ಅದು ಬೇರೆ ಅವಳೇ ಹೇಳಿದ್ದಳು" ನೀವು ನಾಳೆ ಸೇಮೆದಡ್ಡೆ ಒತ್ತಿ ಕೊಡಲು ಬನ್ನಿ ಆಯ್ತಾ .. ನಾನು ಕಾಯ್ತಾ ಇರ್ತೀನಿ.." ಅಂತ.
ಆಂಟಿ ಮನೆ ಏನೋ ನನಗೆ ಹೊಸದಲ್ಲ, ಪರಿಚಯದ ಮನೆಯೇ ಅದು. ಆಂಟಿಗೆ ಸೇಮೆದಡ್ಡೆ ಮಾಡಲು ಇದ್ದಾಗ ಪ್ರತೀ ಸಲ ಬಂದು ಅಲ್ಲಿ ಸೇಮೆದಡ್ಡೆ ಒತ್ತಿಕೊಡುವುದು ನಾನೇ. ಆವಾಗ ಆಂಟಿ ಮಗಳು ಇಲ್ಲ ಆಂಟಿ ಮಗ ಯಾರೂ ಕೂಡ ಸ್ವಲ್ಪ ಸಹಾಯ ಮಾಡಲು ಸಹ ಬರುವುದಿಲ್ಲ.
ಮನೆಯನ್ನು ಕಣ್ಣಲ್ಲೇ scan ಮಾಡಿದೆ. ಆಂಟಿಯ ಮಗಳ ಸುಳಿವೇ ಇಲ್ಲ.
ಅವನನ್ನೇ ಕೇಳಿದೆ "ಅದು.. ಅದು.. ಆಂಟಿ ಇಲ್ಲವ.. ಸೇಮೆದಡ್ಡೆ ಒತ್ತಿಕೊಡು ಅಂತ ಆಂಟಿ ಹೇಳಿದ್ರು.."
"ಇಲ್ಲಿಯ ತನಕ ಇದ್ದರು,ನೀವು ಬರುವುದಕ್ಕಿಂತ ಸ್ವಲ್ಪ ಮುಂಚೆ ಸಾಮಾನು ತರ್ಲಿಕ್ಕೆ ಅಂತ ಮಾರ್ಕೆಟ್ ಗೆ ಹೋದರು.."
ಒಂಥರಾ ಉಡಾಪೆಯಾಗೇ ಹೇಳಿದ.
"ಹೌದಾ.."
"ಹೌದು..ಅಕ್ಕಾ ಕೂಡ ಮಮ್ಮಿಯೊಂದಿಗೆ ಹೋಗಿದ್ದಾಳೆ,sorry.. ಹೋಗಿದ್ದಲ್ಲ ನಾನೇ ಕಳುಹಿಸಿದ್ದು. ಇವತ್ತು ಎಲ್ಲಿಗೂ ಹೋಗುವುದಿಲ್ಲ ಅಂತ ಬೇಕಂತಲೇ plan ಮಾಡಿ ಇಲ್ಲೇ ಕುಳಿತುಕೊಂಡಿದ್ದಳು. ನಂತರ ಸೇಮೆದಡ್ಡೆ ಮಾಡಲು ತಾವು ದಯಮಾಡಿಸುತ್ತಿದ್ದಿರಿ ಎಂದು ಗೊತ್ತಾಯಿತು ನೋಡಿ,ಅದಕ್ಕೆ ನಾನೇ ಬಲವಂತ ಮಾಡಿ ಅವಳನ್ನು ಕೂಡ ಮಮ್ಮಿ ಜೊತೆ ಕಳುಹಿಸಿ ಬಿಟ್ಟೆ.. "
ಬಡ್ಡಿ ಮಗ.. ನನ್ನಾಸೆಗೆ ತಣ್ಣೀರೆರೆಚಿದ.. 😡😡
" ಹಾನ್.. ಬನ್ನಿ ಇಂದು ಸೇಮೆದಡ್ಡೆ ನಾವಿಬ್ಬರೂ ಸೇರಿ ಮಾಡುವ, ನಾನು ನಿಮಗೆ ಹೆಲ್ಪ್ ಮಾಡುತ್ತೇನೆ. ಅಮ್ಮ ಸೇಮೆದಡ್ಡೆ ಗೆ ಬೇಕಾದ ಪುಂಡಿ(ಬೇಯಿಸಿದ ಅಕ್ಕಿ ಕಡಬು) ಎಲ್ಲಾ ರೆಡಿ ಮಾಡಿ ಇಟ್ಟು ಹೋಗಿದ್ದಾಳೆ. ಬನ್ನಿ ಹಾಗಾದರೆ, ಯಾಕೇ ಸುಮ್ಮನೆ ಆಚೆ ಈಚೆ ನೋಡಿ ಟೈಂ ವೇಸ್ಟ್ ಮಾಡುವುದು.. ಹೋಗುವ ಅಲ್ಲಾ ಅಡುಗೆ ಮನೆಗೆ.. "
ಏನೋ ಮಹಾನು ಹೆಲ್ಪ್ ಮಾಡ್ತಾ ಇದ್ದಾನೆ ಅನ್ನುವ ಹಾಗೆ ಮಾಡ್ತಾ ಇದ್ದಾನೆ.. ಕನಿಷ್ಟ ಪಕ್ಷ ತನ್ನ ಮನೆಯ ಕೆಲಸವನ್ನು ನಾನು ಬಂದು ಮಾಡಿಕೊಟ್ಟು ಹೋಗುತ್ತಿದ್ದೆನೆ ಅನ್ನುವ ಪರಿಜ್ಞಾನ ಕೂಡ ಅವನಿಗಿಲ್ಲ. ಇರಲಿ ಇರಲಿ, ಇವನ ಮುಖ ನೋಡಿ ಯಾರು ಇಲ್ಲಿಗೆ ಬಂದಿದ್ದಾರೆ, ನಾನಂತೂ ನನಗೆ ದಿನಲೂ ತುಂಬಾ ಪ್ರೀತಿಯಿಂದ ತಿಂಡಿ ತೀರ್ಥ ಪಾಯಸ ಎಲ್ಲಾ ಕೊಟ್ಟು ಕಳುಹಿಸುವ ಆಂಟಿಗಾಗಿ,ಹಾಗೂ ಅವರ ಸಂಪಿಗೆ ಮುಡಿವ ಮಲ್ಲಿಗೆಯಂತಹ ಮಗಳಿಗಾಗಿಯೇ ಬಂದದ್ದು 😊
ಆದರೂ ನಾನು ಇವ ಮರ್ಲ ನೊಂದಿಗೆ ಸೇಮೆದಡ್ಡೆ ಒತ್ತುವುದಾ.. ನಾನು ಏನೇನೋ ರೊಮ್ಯಾಂಟಿಕ್ ಕನಸುಗಳನ್ನು ಕಂಡಿದ್ದೆ, ಆಂಟಿ ಮಗಳ ಜೊತೆಗೆ ಸೇಮೆದಡ್ಡೆ ಒತ್ತಿ ಒತ್ತಿ, ಕೊನೆಗೆ ಸೇಮೆದಡ್ಡೆ ಮಣೆಯೇ ಮುರಿದು ಹೋಗಬೇಕು ಎಂದು ಎಲ್ಲಾ..
ಆದರೆ ಇವ ಯಾಕೆ ಶನಿ ತರಹ ನನಗೆ ಇಂದು ವಕ್ಕರಿಸಿಕೊಂಡನೋ..
ಅದು ಕೂಡ ಯಾವತ್ತೂ ಸೇಮೆದಡ್ಡೆ ಒತ್ತಲು ಬರದವನು, ಇವತ್ತು ಯಾಕೇ ಅಷ್ಟು ಇಂಟ್ರೆಸ್ಟ್ ನಲ್ಲಿ ಬಂದ.. ಬಹುಶಃ ಅವನಿಗೆ ನಿಜವಾಗಿಯೂ ಅವನ ಅಕ್ಕ ಮತ್ತು ನನ್ನ ನಡುವೆ ಏನೋ ಒಂದು ನಡೆಯುತ್ತಿದೆ ಅಂತ ಗುಮಾನಿ ಬಂದಿರಬೇಕು.
ಮನೆಯಲ್ಲಿ ಇಬ್ಬರೇ. ಅಂಕಲ್ ಕೂಡ ಇರಲಿಲ್ಲ.
"ನೋಡಿ ನಾನು ಒಂದೊಂದೇ ಕಡುಬು ಮಣೆಗೆ ಹಾಕುತ್ತೇನೆ, ಮತ್ತೆ ಮಣೆಯ ಕೆಳಗಿನಿಂದ ಸೇಮೆದಡ್ಡೆ ತೆಗೆಯುತ್ತೇನೆ ..ಆದರೆ ಒತ್ತುವುದು ಮಾತ್ರ ನೀವೇ.. ಅದರಲ್ಲೂ ನೀವು ಸೇಮೆದಡ್ಡೆ ಎತ್ತುವುದರಲ್ಲಿ ಎತ್ತಿದ ಕೈ ಎಂದು ಇಡೀ ಊರಿಗೆ ಫೇಮಸ್ ಅಲಾ.. So, ಆ ಗೌರವಕ್ಕೆ ಅವಮಾನ ಮಾಡಲು ನಾನು ಬಯಸುವುದಿಲ್ಲ, ಆದ್ದರಿಂದ ನೀವೇ ಒತ್ತಬೇಕು.."
ಸೇಮೆದಡ್ಡೆ ಒತ್ತಲು ಅವನಿಗೆಲ್ಲಿ ಬರುವುದು, ಅದರಲ್ಲೂ ಉದಾಸೀನ ಬೇರೆ.. ಆದರೆ ಹೇಳುವುದು ನೋಡಿ.. ನಿಮ್ಮ ಕೀರ್ತಿ ಗೆ ಅವಮಾನ ಮಾಡಲು ಬಯಸುವುದಿಲ್ಲ ಅದಕ್ಕೆ ನೀವೇ ಒತ್ತಿ. ದೊಡ್ಡ ಧರ್ಮಾತ್ಮ. ಯುಧಿಷ್ಠಿರ ಬಿಟ್ಟರೆ ನೆಕ್ಸ್ಟ್ ಇವನೇ ಇರಬೇಕು.
ನಿಧಾನವಾಗಿ ನಮ್ಮ ಸೇಮೆದಡ್ಡೆ ಯ ಜರ್ನಿ ಶುರುವಾಯಿತು. ಅವನು ಒಂದೊಂದೇ ಬೇಯಿಸಿದ ಕಡುಬುಗಳನ್ನು ಹಾಕುತ್ತಿದ್ದ,ನಾನು ಶ್ಯಾವಿಗೆ ಮಣೆಯ ಸ್ಟೇರಿಂಗ್ ಅನ್ನು ತಿರುಗಿಸುತ್ತಿದ್ದೆ.
ಅವ ನನಗಿಂತಲೂ ಚಿಕ್ಕವನೇ. ಆದರೂ ಅವನಿಗೆ ಹಿಂದಿನಿಂದಲೂ ನನ್ನನ್ನು ಕಂಡರೆ ಅಷ್ಟಕಷ್ಟೇ. ಯಾಕೆಂದರೆ ಚಿಕ್ಕಂದಿನಲ್ಲಿ ನಾನೇ ಬೇಕಾದಷ್ಟು ಸಲ ಅವನನ್ನು ಗೋಳು ಹೊಯ್ದುಕೊಂಡಿದ್ದೆ.
ಇದೇ ರೀತಿ ಸೇಮೆದಡ್ಡೆ ಒತ್ತುತ್ತಿದ್ದರೆ ಬೋರ್ ಆಗುವುದು ಖಂಡಿತ ಎಂದು ನಾನೇ ಮಾತು ಶುರು ಮಾಡಿದೆ.
"ನೀನು ಹಿಂದೆ ಎಷ್ಟು ಚಿಕ್ಕ ಇದ್ದೆ ಅಲ್ಲಾ.. ಆವಾಗ ನೀನು ಚಡ್ಡಿಯೇ ಹಾಕುತ್ತಿರಲಿಲ್ಲ.."
" ಚಿಕ್ಕಂದಿನಲ್ಲಿ ನೀವು ಸ ಚಡ್ಡಿಯೇ ಹಾಕುತ್ತಿರಿಲ್ಲ..."
ಓಹೋ ಲಾಜಿಕ್ಕು.. ಸರಿಯಾಗಿಯೇ ಹಾಕ್ತಾ ಇದ್ದಾನೆ..ಇರಲಿ ಇರಲಿ ಅಂತ ಮನಸ್ಸಲ್ಲೇ ಅಂದುಕೊಂಡೆ
ಅವನನ್ನೇ ಮೇಲಿನಿಂದ ಕೆಳಗೆ ಸರಿಯಾಗಿ ನೋಡಿದೆ..
"ಅಲ್ಲಾ.. ನನಗೆ ನಿಜ ಹೆಸರೇ ಮರೆತು ಹೋಗಿದೆ..ನಿನ್ನ ನಿಜವಾದ ಹೆಸರೇನು"
"ಯಾಕೆ ನಿಮಗೆ ಗೊತ್ತಿಲ್ಲವಾ.."
"ಅದೇ ನಾವೆಲ್ಲ ಚಿಕ್ಕಂದಿನಿಂದಲೂ ಪೆರ್ಮರಿ ಪೆರ್ಮರಿ.. ಅಂತಲೇ ಹೇಳುತ್ತಿದ್ದದ್ದು.. ಅದು ನಿನಗೂ ಕೂಡ ಗೊತ್ತಲ್ಲ, ಹಾಗಾಗಿ ನಿಜ ಹೆಸರೇ ಮರೆತು ಹೋಗಿದೆ ನೋಡು.. "
ಪೆರ್ಮರಿ ಎಂದರೆ ನಮ್ಮ ಕಡೆ ಹೆಬ್ಬಾವು ಅಂತ ಅರ್ಥ. ಅವ ನೋಡಲೂ ಕೂಡ ಹೆಬ್ಬಾವಿನಂತೆ ಡುಮ್ಮ ಗೆ ಇದ್ದು ನಿಧಾನವಾಗಿ ನಡೆದುಕೊಂಡು ಹೋಗುತ್ತಿದ್ದರೆ ತೆವಳಿಕೊಂಡು ಹೋದ ಹಾಗೆ ಕಾಣುತ್ತಿತ್ತು,ಹಾಗಾಗಿ ಸುತ್ತ ಮುತ್ತ ಎಲ್ಲರೂ ಅವನಿಗೆ ಪೆರ್ಮರಿ ಎಂದೇ ಕರೆಯುತ್ತಿದ್ದರು. ಮತ್ತೆ ಆ ಹೆಸರು ಅವನಿಗೆ ಮೊದಲಿಗೆ ಇಟ್ಟದ್ದು ಕೂಡ ನಾನೇ,ನಂತರ ನಾನು ಮಾತ್ರ ಹೆಚ್ಚಾಗಿ ಹಾಗೇ ಕರೆಯದೇ ಇದ್ದರೂ ಸಮಾಜದಲ್ಲಿ ಮಾತ್ರ ಅವನಿಗೆ ಅದೇ ಹೆಸರು ಫಿಕ್ಸ್ ಆಯಿತು ಮತ್ತು ಅದೇ ಫೇಮಸ್ ಆಯಿತು.
ಎಷ್ಟು ಫೇಮಸ್ ಎಂದರೆ ಊರಲ್ಲಿರುವ ನಿಜ ಪೆರ್ಮರಿಗಳಿಗಿಂತಲೂ ಇವನೇ ಫೇಮಸ್ ಆಗಿದ್ದ.ನಾನೇ ಅವನಿಗೆ ಆ ಹೆಸರು ಇಟ್ಟದ್ದು ಎಂದು ಅವನಿಗೂ ಗೊತ್ತು. ಹಾಗಾಗಿ ಅವನಿಗೆ ಹಿಂದಿನಿಂದಲೂ ನನ್ನನ್ನು ಕಂಡರೆ ಅದಕ್ಕೆನೇ ಆಗುವುದಿಲ್ಲ ಮತ್ತು ಅದಕ್ಕಾಗಿ ಅವ ನಮ್ಮ ಗುಂಪಿನವರೊಟ್ಟಿಗೆ ಸೇರುವುದೇ ಇಲ್ಲ.
ಅವನೇ ಹೇಳಿದ..
"ಪನ್ನಗ.."
"ಪನ್ನಗ ಅಂದರೆ..."
"ನನ್ನ ಹೆಸರು.."
"ಅದೇ ಅದರ ಅರ್ಥ ಏನು.."
"ಪನ್ನಗ ಅಂದರೆ ಸರ್ಪ ಅಂತ.. ನೀವೆಲ್ಲಾ ಕರೆಯುವ ಲಾಟ್ ಪೋಟ್ ಹೆಬ್ಬಾವು ಅಲ್ಲ ಅದು, ಕಶ್ಯಪ ನ ಪತ್ನಿ ಕದ್ರುವಿನಲ್ಲಿ ಜನಿಸಿದ ಒಂದು ವಿಶೇಷವಾದ ನಾಗದ ಹೆಸರು ಪನ್ನಗ .."
ಅರೆ ಯಾವ ಕಶ್ಯಪ.. ಅಂಕಲ್ ಕೃಷ್ಣಪ್ಪ ನವರ ಮಗ ಇವ, ಈಗ ನೋಡಿದರೆ ಕಶ್ಯಪ ನ ಮಗ ಅಂತೆ, ಅದು ಬೇರೆ ವಿಶೇಷವಾದ ಹಾವಂತೆ.. ಸಾವ್ ಇವನದ್ದು.
ಆದರೆ ಏನೊ ಒಂದು ಅರ್ಥದಲ್ಲಿ ಕೊನೆಗೂ ಹಾವು ಮಾತ್ರ ಹೌದು ಅಲ್ಲವೇ. So ನಾನು ಹೆಬ್ಬಾವು ಅಂತ ಹೆಸರಿಟ್ಟದ್ದು ಕೂಡ ಸಾರ್ಥಕ ಆಯಿತು.
" ನಾನು ಪನ್ನಗ ಅಂದರೆ.. ಪನ್ನೀರಿನ ನಾಗ ಅಂತ ತಿಳಿದುಕೊಂಡೆ.. " ಅಂತ ಹೇಳಿದೆ.
" ನೀವು ಬಿಡಿ.. ಏನೇನೋ ತಿಳಿದುಕೊಂಡವರು.. ಅದರಲ್ಲೂ ಹೆಬ್ಬಾವು ಬಗ್ಗೆ ಜಾಸ್ತಿಯೇ ನಿಮಗೆ ತಿಳಿದಿದೆ 😏😏"
ಅವ in direct ಆಗಿ ನನಗೆ ಟಾಂಟ್ ನೀಡಿದ್ದು ಎಂದು ಗೊತ್ತಾಯಿತು. ನನ್ನಿಂದಲೇ ಅವ ಹೆಬ್ಬಾವು ಎಂದು ಫೇಮಸ್ ಆಗಿರುವುದರಿಂದ ಸಹಜವಾಗಿಯೇ ಅವನಿಗೆ ನನ್ನ ಮೇಲೆ ಕೋಪ ಇತ್ತು ಎಂದು ನನಗೂ ಗೊತ್ತಿತ್ತು.
" ಇಲ್ಲ ಇಲ್ಲ.. ನನಗೆ ಬೇರೆ ಹಾವುಗಳ ಬಗ್ಗೆಯೂ ಗೊತ್ತು...ಹಸಿರು ಬಣ್ಣದ ಪಾಪದ ಪಜ್ಜಿಮರಿ, ಕಂಡ ಕೂಡಲೇ ಮಾಯವಾಗುತ್ತೆ ಎನ್ನೋ ನಂಬಿಕೆಯ ಕೃಷ್ಣ ಸರ್ಪ, ಎರಡು ತಲೆ ಹಾವು,ನಮ್ಮ ಪಶ್ಚಿಮ ಘಟ್ಟದ ಸುಂದರ ಕಾಳಿಂಗ ಹಾವು.. etc etc ಹಾವುಗಳ ಬಗ್ಗೆಯೂ ಅಲ್ಪ ಸ್ವಲ್ಪ ಗೊತ್ತು .. ಆದರೆ ಈ ಪನ್ನಗ ಪೊನ್ನಗ ಗಳ ಬಗ್ಗೆ ಅಷ್ಟೇಲ್ಲ ಗೊತ್ತಿಲ್ಲಪ್ಪ.. 😏😏" ಅಂದೆ ಉಡಾಪೆಯಾಗಿ.
" ನನಗೆ ಕೂಡ ಈ ಪಚ್ಚು, ಕಚ್ಚು ಹೆಸರುಗಳ ಬಗ್ಗೆ ಅಷ್ಟೇನು ಗೊತ್ತಿಲ್ಲಪ್ಪ.. " ಅಂದ.
Counter ಮೇಲೆ Counter.. , ಇರಲಿ ಇರಲಿ ಮಾಡ್ತೇನೆ ಇವನಿಗೆ..
ನಾನೊಬ್ಬನೇ ಒತ್ತಿ ಒತ್ತಿ ಸೇಮೆದಡ್ಡೆ ಯ ಸಂಖ್ಯೆ ಮೂವತ್ತು ದಾಟಿತ್ತು.
ಪುನಃ ನಾನೇ ಮಾತು ಮುಂದುವರಿಸಿದೆ..
" ಅದು ಹೌದು.. ನೀನು ಯಾಕೆ ನಮ್ಮೊಡನೆ ಎಲ್ಲಾ ಕ್ರಿಕೆಟ್ ಆಡ್ಲಿಕ್ಕೆ ಬರಲ್ಲ.. "
" ನನಗೆ ಫುಟ್ಬಾಲ್ ಇಷ್ಟ.. "
" ಓಹ್.. ಕಾಲೇಜ್ ಟೀಮ್ ಅಲ್ಲಿ ಆಡ್ತಿ ಅಂತ ಕಾಣುತ್ತೆ.."
" ನಾನು ಫುಟ್ಬಾಲ್ ಆಡಲ್ಲ... ಟಿವಿಯಲ್ಲಿ ನೋಡ್ತೀನಿ.."
ಇವ ಯಾವ ಪೆಟ್ ಕಮ್ಮಿ(ಲೂಸ್) ಮರ್ರೆ..
"ಎಂತ English Premier league ನೋಡುವುದಾ.."
"ಅಲ್ಲ.... "
" la liga.. "
" ಓಹ್ ಅದಾ.. "
" ನೋಡ್ತೀರಾ ನೀವು... "
" El Clasico ಮ್ಯಾಚ್ ಗಳನ್ನು ನೋಡ್ತೇನೆ ಅಷ್ಟೇ.. "
" ನಿಮ್ಮದು ಫೇವರೆಟ್ ಟೀಮ್ ಯಾವುದು.."
" ಮೆಸ್ಸಿ ಇಷ್ಟ ಹಾಗಾಗಿ Fc Barcelona, ನೀನು ಖಂಡಿತವಾಗಿಯೂ Real Madrid Fc ಅಭಿಮಾನಿ ಅಲ್ವಾ..? "
" yesss.. hala Madrid, ಆದರೆ ನಿಮಗೆ ಹೇಗೆ ಗೊತ್ತಾಯಿತು.. "
" ನೀನು ಹಾಕಿರುವ CR7 ಟೀ ಶರ್ಟ್ ನೋಡಿಯೇ ಗೊತ್ತಾಯಿತು, ನೀನು ರೊನಾಲ್ಡೋ ಫ್ಯಾನ್ ಎಂದು.. "
" Barcelona ಪೊಟ್ಟು ಟೀಮ್,madrid ಎದುರು ಏನು ಇಲ್ಲ ಅದು, ಮೆಸ್ಸಿಗಿಂತ ರೋನಾಲ್ಡೋ ಒಳ್ಳೆಯ ಪ್ಲೇಯರ್, ಒಳ್ಳೆಯ ಜನ ಕೂಡ, ತುಂಬಾ ಚ್ಯಾರಿಟಿಗೆ ಹಣ ಎಲ್ಲಾ ಕೊಡ್ತಾನೆ, ಮೆಸ್ಸಿ ಸ್ವಾರ್ಥಿ, bla bla bla..."
ಶುರು ಮಾಡಿದ ಅವನ ಫುಟ್ಬಾಲ್ knowledge ನೊಂದಿಗೆ ರೋನಾಲ್ಡೋ ಅಭಿಮಾನ ಹಾಗೂ ಮೆಸ್ಸಿ ದ್ವೇಷವನ್ನು ಅಷ್ಟುದ್ದ ಕಾರಿಬಿಟ್ಟ.
ಮನೆಯ ಸುತ್ತಮುತ್ತ ಫುಟ್ಬಾಲ್ ಆಡುವವರ, ಹಾಗೂ ಅವರ ಅಭಿಮಾನಿಗಳ ಲೋಕವೇ ಬೇರೆಯದ್ದು.ಕೆಲವೊಮ್ಮೆ ಕಿರಿ ಕಿರಿ ಆಗುವಷ್ಟು. ಆದರೂ ಫುಟ್ಬಾಲ್ ಸುಂದರವಾದ ಆಟ ನನಗೂ ಕೂಡ ಇಷ್ಟ ಅದು.
" ಆದರೂ ಈಗ madrid ನಲ್ಲಿ ರೋನಾಲ್ಡೋ ಇಲ್ಲ.." ಅಂದೆ.
"ಆದರೂ ನಮ್ಮದು. ಯಾವತ್ತಿದ್ದರೂ hala madrid.. ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಬ್ರೋ ಅಂದ.."
ಇನ್ನು ಫುಟ್ಬಾಲ್ ಬಗ್ಗೆ ಜಾಸ್ತಿ ಮಾತಾಡಿದರೆ ಈ ಪನ್ನಗ ಇಲ್ಲೇ ಒಂದು El Clasico ಮ್ಯಾಚ್ ಆಡಿಯೇ ಬಿಡ್ತಾನೋ ಎಂದು ಅನ್ನಿಸಿತ್ತು,ಅದು ಬೇರೆ ನಾನು barcelona fan ಅವ real madrid fan...
ಸೇಮೆದಡ್ಡೆ ಒತ್ತಿ ಒತ್ತಿ ಕೊನೆಗೂ ಐವತ್ತು ಸೇಮೆದಡ್ಡೆ ಆಯಿತು.
" ನೋಡು ಐವತ್ತು ಸೇಮೆದಡ್ಡೆ ಒತ್ತಿದ್ದೇನೆ, ಇನ್ನು ನನಗೆ ಆಗಲ್ಲ.. ನಾನು ಹೋಗ್ತೇನೆ.. "
" ನೀವು ಸಾವಿರ ಸೇಮೆದಡ್ಡೆ ಒತ್ತಿಕೊಡ್ತೇನೆ ಅಂತ ಹೇಳಿದ ಸುದ್ದಿ ಕಿವಿಗೆ ಬಿತ್ತು... ಆದ್ರೂ ಸಾವಿರ ಏನೂ ಬೇಡ, ಅಷ್ಟೊಂದು ಬೇಯಿಸಿಟ್ಟ ಕಡುಬು ಕೂಡ ಇಲ್ಲಿ ಇಲ್ಲ. ಕನಿಷ್ಟ ಪಕ್ಷ ಇನ್ನುಳಿದ ಹತ್ತು ಕಡುಬುಗಳನ್ನು ಒತ್ತಿ ಬಿಟ್ಟರೆ ಸಾಕು.."
ಒಹೋ.. ನಾನು ಏನೋ ಒಂದು flow ಅಲ್ಲಿ ಹೇಳಿದ ಮಾತೇ ಇಲ್ಲಿ ಒಟ್ರಾಸಿ ಪ್ರಚಾರ,sorry ಅಪಪ್ರಚಾರ ಆಗಿದೆ.
ಕೊನೆಗೂ ಉಳಿದ ಕಡುಬುಗಳನ್ನು ಕೂಡ ಒತ್ತಿ, ಸುಮಾರು ಅರುವತ್ತರಷ್ಟು ಸೇಮೆದಡ್ಡೆ ಒತ್ತಿ ಬಿಟ್ಟೆ.
" ಇನ್ನು ನಾನು ಹೋಗಬಹುದೇ..."
" ಆಯಿತು..ಆಯಿತು.. ಹೋಗಬಹುದು.. "
ಮಾರಿ ಒಂದು ಥ್ಯಾಂಕ್ಸ್ ಕೂಡ ಹೇಳಿಲ್ಲ..
ಹೂಂ.. ಅವನ ಥ್ಯಾಂಕ್ಸ್ ಕೂಡ ಯಾರಿಗೆ ಬೇಕು.. 😏😏
ಆದರೆ ಅವನಿಗೆ ಜ್ಯೂಸ್ ಏನಾದರೂ ಮಾಡಿ ಕೊಡಬಹುದಿತ್ತು ಮರ್ರೆ, ಮರ್ಲ ನಿಗೆ ಜ್ಯೂಸ್ ಆದರೂ ಮಾಡ್ಲಿಕ್ಕೆ ಬರ್ತದಾ ಇಲ್ಲವೋ ಯಾರಿಗೆ ಗೊತ್ತು..
ಚೆನ್ನಾಗಿ ಕೈ ಎಲ್ಲಾ ತೊಳೆದು ಇನ್ನೇನು ಹೊರಡಬೇಕು ಅಂತ, ಮನೆಯಿಂದ ಕೆಳಗೆ ಇಳಿದು ಬಂದಾಗ, ಆಂಟಿ ಮತ್ತು ಮಗಳು ಇಬ್ಬರೂ ಪೇಟೆಯಿಂದ ಆಟೋದಲ್ಲಿ ವಾಪಸ್ ಬಂದು ಅಂಗಳದಲ್ಲಿ ನಿಂತುಕೊಂಡಿದ್ದರು.
ಆಂಟಿ ಮಗಳು ಕಣ್ಣು ಗುಡ್ಡೆ ಮೇಲೆ ಕೆಳಗೆ ಹಾರಿಸಿ ತುಸು ನಕ್ಕು ಕಾಲ ಬೆರಳಿನಲ್ಲಿಯೇ ನೆಲದ ಮೇಲೆ ರಂಗವಲ್ಲಿ ಬರೆದು ಹಾಯ್ ಹೇಳಿದಳು..ನನಗಷ್ಟೇ ಮೆಲುವಾಗಿ ಕೇಳುವಂತೆ.
ನಾನು ಕೂಡ ಅವಳತ್ತಲೇ ನೋಡಿ ಕೈ ಎತ್ತಿ ಹಾಯ್ ಅಂದೆ..ಅದು ಮಾತ್ರ ಜೋರಾಗಿ ಎಲ್ಲರಿಗೂ ಕೇಳಿತ್ತು.
ನಾವು ಹುಡುಗರೇ ಹೀಗೆ.. ನಾಯ ನಾಜೂಕು ಅಷ್ಟೊಂದು ಬರಲ್ಲ.
ಪೆರ್ಮರಿ, sorry.. ಪನ್ನಗ ಹಿಂದಿನಿಂದ ಅದನ್ನು ನೋಡಿ ಬುಸುಗುಟ್ಟುತ್ತಿದ್ದ
" ಪಚ್ಚು.. ಸೇಮೆದಡ್ಡೆ ಎಲ್ಲಾ ಒತ್ತಿದೆಯಾ.." ಅಂತ ಆಂಟಿಯೇ ಕೇಳಿದರು.
" ಹೌದು ಆಂಟಿ.. ಸುಮಾರು ಅರವತ್ತು ಆಯಿತು.. ಎಲ್ಲಾ ಕಡುಬುಗಳನ್ನು ಒತ್ತಿದೆ, ಇನ್ನು ಯಾವುದು ಇಲ್ಲ.."
"ತುಂಬಾ ಉಪಕಾರ ಆಯಿತು.. ಥ್ಯಾಂಕ್ಸ್.. ಬಾ ಜ್ಯೂಸ್ ಮಾಡಿ ಕೊಡ್ತೇನೆ, ಕುಡಿದು ಹೋಗು.."
"ಈಗ ಏನು ಬೇಡ ಆಂಟಿ... ಇನ್ನೊಮ್ಮೆ ಬರ್ತೇನೆ.. "
" ಇಲ್ಲದಿದ್ದರೆ ಜ್ಯೂಸ್ ಮಾಡಿ ಮನೆಗೆಯೇ ಕಳುಹಿಸಿ ಕೊಡ್ಲಾ.. "
"ಆಯಿತು ಆಂಟಿ ಹಾಗೇ ಮಾಡಿ, ಹೇಗೋ ಪನ್ನಗ ನಿಗೂ ಸೇಮೆದಡ್ಡೆ ಮಾಡಿ ಮಾಡಿ ಸುಸ್ತು ಆಗಿದೆ.. ಮಗಳ ಕೈಯಲ್ಲಿಯೇ ಜ್ಯೂಸ್ ಕೊಟ್ಟು ಕಳುಹಿಸಿ ಆಂಟಿ, ಪುನಃ ನೀವು ಬರ್ಲಿಕ್ಕೆ ಹೋಗ್ಬೇಡಿ ಮತ್ತೆ, ನಿಮಗೂ ತುಂಬಾ ಕೆಲಸ ಇದೆ ಇಲ್ಲಿ.. "
ಆಂಟಿ ಮಗಳು ತಲೆ ತಗ್ಗಿಸಿ ನಕ್ಕಳು,
ಕಳ್ಳಿ ಅವಳು, ಅವಳಿಗೆ ಎಲ್ಲಾ ಗೊತ್ತಾಗ್ತದೆ..
ಪನ್ನಗ ಮನೆಯ ಬಾಗಿಲಲ್ಲೇ ನಿಂತುಕೊಂಡು ನಮ್ಮಿಬ್ಬರನ್ನೇ ನೋಡುತ್ತಿದ್ದ, ಬಹುಶಃ ಇವರಿಬ್ಬರ ನಡುವೆ ಏನೋ ಒಂದು ನಡೀತಿದೆ ಎಂದು ಆಲೋಚಿಸುತ್ತಾರಬಹುದು ಅಂತ ಅಂದು ಕೊಂಡೆ.
ಸೀದಾ ರೂಮಿಗೆ ಹೋಗಿ, ಸ್ನಾನ ಮಾಡಿ ಹಾಗೇ ಮಂಚದಲ್ಲಿ ಬಿದ್ದುಕೊಂಡೆ.
ಮೊಬೈಲು ಟಿಂಗ್ ಅಂತ ಶಬ್ಧ ಮಾಡಿತು. ಯಾವುದೋ ಒಂದು ಫೇಸ್ಬುಕ್ ನೋಟಿಫಿಕೇಷನ್.
ಒಪನ್ ಮಾಡಿ ನೋಡಿದರೆ ಒಂದು ಫ್ರೆಂಡ್ ರಿಕ್ವೆಷ್ಟ್ ಅದು. ಹೆಸರು ನೋಡಿದೆ. ನೋಡಿದರೆ ಅದು ನಮ್ಮ ಆಂಟಿ ಮಗ ಪೆರ್ಮರಿ ಪನ್ನಗ ನ ರಿಕ್ವೆಷ್ಟ್
ಈ ದುಷ್ಮನ್ ನನಗೆ ಯಾಕೆ ಫ್ರೆಂಡ್ ರಿಕ್ವೆಷ್ಟ್ ಕಳುಹಿಸಿದ ಅಂತ ಯೋಚನೆ ಗೆ ಬಿದ್ದ. ಅದೂ ಇಷ್ಟು ವರ್ಷ ಕಳುಹಿಸದವನು.
ಅವನ ಪ್ರೊಫೈಲ್ ಓಪನ್ ಮಾಡಿ ನೋಡಿದೆ. ಆಗಷ್ಟೇ ಕೆಲವು ಪೋಟೋಗಳನ್ನು ಪೋಸ್ಟ್ ಮಾಡಿದ್ದ,ಅರೆ.. ನೋಡಿದರೆ ಅದು ನಾನು ಈಗ ಅಷ್ಟೇ ಒತ್ತಿ ಕೊಟ್ಟು ಬಂದ ಸೇಮೆದಡ್ಡೆಯ ಪೋಟೋ ಗಳು
Hashtag ಹಾಕಿ caption ಬೇರೆ ಹಾಕಿದ್ದ, ಕುತೂಹಲ ದಿಂದ ಏನಿರಬಹುದು ಎಂದು ಓದಿದೆ..
#Selfie_with_shyavige,
#My_fist_attempt,
#chef_pannaga,
#pannagas_kitchen ಅಂತೆಲ್ಲಾ ಬರೆದು ಹಾಕಿದ್ದ.
ಮಾರಿ ಒಂದೇ ಒಂದು ಸೇಮೆದಡ್ಡೆ ಕೂಡ ಅವ ಮಾಡ್ಲಿಲ್ಲ, ಇದ್ದಷ್ಟು ಹೊತ್ತು ಬರೀ ಅಧಿಕ ಪ್ರಸಂಗವೇ ಮಾತಾಡ್ತಾ ಇದ್ದ, ಈಗ ನೋಡಿದರೆ ಅವನೇ ಮಾಡಿದ್ದಂತೆ.. my first attempt ಬೇರೆ ಅಂತೆ.. 😡😡
ಮಾಡ್ತೀನಿ ಇವನಿಗೆ ಅಂತ ಅಂದುಕೊಂಡು,
" Waaw.. great permari bro "ಅಂತ ಕಮೆಂಟಿಸಿ ಹಾಗೇ ಮಲಗಿ ಬಿಟ್ಟೆ.. 😏😏
.....................................................................................
AB Pacchu
Moodubidire

Comments
Post a Comment