ಚಿಪ್ಸ್ ಹಂಚಿಕೊಂಡ ಹುಡುಗಿ

 

ಹಾಗೇ ಮಲಗಿಕೊಂಡೇ ಚಂದ್ರನನ್ನು ನೋಡುತ್ತಾ ಆಲೋಚನೆಗೆ ಬಿದ್ದು ಬಿಟ್ಟೆ. 


ಸಾವು ಎಂದರೆ ಯಾರಿಗೆ ಇಷ್ಟ ಆಗುತ್ತದೆ ಹೇಳಿ,ಜಗತ್ತಿನಲ್ಲಿ ಎಲ್ಲರೂ ಸಾವಿಗೆ ಹೆದರುವವರೇ.ಆದರೂ ಕೆಲವರು ಹೆದರಲ್ಲ!


ಹೆಚ್ಚಿನವರು ಆಯಸ್ಸು ಮುಗಿದಾಗ ಹರಿ ಪಾದ ಸೇರುತ್ತಾರೆ.ಆದರೆ ಇನ್ನು ಕೆಲವರಿಗೆ ಇನ್ನು ಬದುಕು ಕಷ್ಟ ಅಂತ ಅನಿಸಿದಾಗ ತಾವೇ ಸಾವಿನ ಬಳಿಗೆ ಓಡೋಡಿ ಬರುತ್ತಾರೆ.ಸಾವಿಗೆನೇ ಆಮಂತ್ರಣ ನೀಡುವುದು ಅಂದರೆ ಅದುವೇ.


ಸಿಂಪಲ್ ಆಗಿ ಹೇಳಬೇಕೆಂದರೆ ಅದನ್ನು ಆತ್ಮಹತ್ಯೆ ಮಾಡಿಕೊಳ್ಳುವುದು ಎಂದು ಹೇಳುತ್ತಾರೆ.ನಾನು ಇಂದು ಅದನ್ನೇ ಮಾಡಿಕೊಳ್ಳಲು ಬಂದಿದ್ದೇನೆ! ಅದಕ್ಕಾಗಿ ರೈಲ್ವೆ ಟ್ರ್ಯಾಕ್ ನಲ್ಲಿ ಅಂಗಾತ ಮಲಗಿಕೊಂಡು ಮೇಲಿನ ಚಂದ್ರನನ್ನು ಸುಮ್ಮನೆ ನೋಡಿಕೊಂಡು ಏನೇನೋ ಆಲೋಚಿಸುತ್ತಿದ್ದೆನೆ!


ವಿಷಯ ಎಂತ ಗೊತ್ತುಂಟಾ,ನಾನು ನಿಜವಾಗಿಯೂ ಸಾಯ್ಲಿಕ್ಕೆ ಅಂತ ಬಂದದ್ದು ಅಲ್ಲ.ಸುಮ್ಮನೆ ಸುಮ್ಮನೆ ಸಾಯ್ಲಿಕ್ಕೆ ನನಗೆ ಎಂತ ಮರ್ಲ್ ಉಂಟಾ.ಸದ್ಯಕ್ಕೆ ಅಂತಹದ್ದು ಗಂಭೀರವಾದ ಏನೂ ಆಗ್ಲಿಲ್ಲ ನನ್ನ ಲೈಫ್ ನಲ್ಲಿ.


ನನಗೆ ಈ ಸಾವಿಗೂ ಮೊದಲು ಇರೋ ಆ ಒಂದು ಮೂಮೆಂಟ್ ಇರುತ್ತೆ ಅಲ್ಲಾ, ಅದನ್ನು ಒಮ್ಮೆ experience ಮಾಡಬೇಕು ಎಂದು ಬಹಳ ದಿನದ ಆಸೆ. ಅಂದರೆ ಸಾವು ಹತ್ತಿರ ಬರುತ್ತಿದ್ದಂತೆ ಮನುಷ್ಯ ಯಾವು ತರಹ ಫೀಲ್ ಆಗ್ತಾನೆ,ಹೆದರುತ್ತಾನಾ ಇಲ್ಲ ಅಲ್ಲೊಂದು ನಿಜವಾಗಿಯೂ ದಿವ್ಯವಾದ ನೆಮ್ಮದಿ ಇರುತ್ತಾ ಇಲ್ವಾ etc..etc..


ನನ್ನ ಐಡಿಯಾ ಏನಿತ್ತು ಅಂದರೆ,ಈ ರೈಲ್ವೆ ಟ್ರ್ಯಾಕ್ ನಲ್ಲಿ ಸುಮ್ಮನೆ ಹೀಗೆ ನಾನು ಈಗ ಮಲಗಿಕೊಂಡಿರುವ ಹಾಗೆ  ಮಲಗಿಕೊಳ್ಳುವುದು.ರೈಲು ತುಂಬಾ ಹತ್ತಿರ ಬರ್ತದೆ ಅಲ್ಲಾ ಆವಾಗ ರಪ್ಪ ಅಂತ ಮಿಂಚಿನ ವೇಗದಲ್ಲಿ ಅಲ್ಲಿಂದ ಎದ್ದು ಪಕ್ಕಕ್ಕೆ ಸರಿಯುವುದು. ಹೇಗಿದೆ ನನ್ನ ಐಡಿಯಾ..? 


ಯೋಚಿಸಿ ಆ experience ಹೇಗಿರಬಹುದು ಅಲಾ. ನನಗಂತು ಇಂತಹ crazy things ಮಾಡುವುದು ಅಂದರೆ ಅದೇನೋ ಬಹಳನೇ ಕಿಕ್ ಸಿಗುತ್ತೆ  ಲೈಫ್ ನಲ್ಲಿ. ದೇವರ ದಯೆದಲ್ಲಿ ನನ್ನ ಮರ್ಲ್ ನಿಂದಾಗಿ ಏನೇನೋ ಉಲ್ಟಾ ಪಲ್ಟ ಆಗಿ ನಾನು ನಿಜವಾಗಿಯೂ ರೈಲಿನ ಅಡಿಗೆ ಬಿದ್ದು ಸಾಯದಿದ್ದರೆ ಸಾಕು ದೇವರೇ.. ಎಂದು ಮತ್ತೊಮ್ಮೆ ನನ್ನ ಇಷ್ಟ ದೇವರಲ್ಲಿ ಮನಸಾರೆ ಪ್ರಾರ್ಥಿಸಿದೆ.


ಈ ರೈಲ್ವೆ ಟ್ರ್ಯಾಕ್ ನಲ್ಲಿ ಮಲಗುವುದು ನಮ್ಮ ಮನೆಯ ಹಾಸಿಗೆಯಲ್ಲಿ ಮಲಗಿದಷ್ಟು comfort ಕೊಡುವುದಿಲ್ಲ. ಅಲ್ಲದೇ ಇಲ್ಲಿ ಸೊಳ್ಳೆ ಕಾಟ ಬೇರೆ ಭಯಂಕರ. ಹಾಗಾಗಿ ಮನೆಯಿಂದ  ಬರುವಾಗಲೇ ಎರಡು ಚಿಕ್ಕ small size ದಿಂಬುಗಳನ್ನು ಬ್ಯಾಗ್ ನಲ್ಲಿ ಹಾಕಿಕೊಂಡು ಬಂದಿದ್ದೆ. ನನಗೆ ಎರಡು ದಿಂಬುಗಳನ್ನು ಇಟ್ಟು ಮಲಗಿಯೇ ಅಭ್ಯಾಸ.


ಒಟ್ಟಿನಲ್ಲಿ ಒಟ್ರಾಸಿ comfort ಬೇಕು. ಅದೇ ರೀತಿ ಸೊಳ್ಳೆ ಬತ್ತಿ ಗಳನ್ನು ಕೂಡ ತಂದಿದ್ದೆ.ಹಾಗೆಯೇ ಬೋರ್ ಆದಾಗ ತಿನ್ನಲು ಬೇಕಾಗಬಹುದು ಎಂದು ಬಾಳೆಕಾಯಿ ಚಿಪ್ಸು, ಸೋಂಟೆ, ಮಿಕ್ಷರ್ ಎಲ್ಲಾ ಬ್ಯಾಗ್ ನಲ್ಲಿ ಹಾಕಿಕೊಂಡು ಬಂದಿದ್ದೆ.


ಸೊಳ್ಳೆ ಬತ್ತಿಯನ್ನು ಟ್ರ್ಯಾಕ್ ನ ಪಕ್ಕವೇ ಬೆಂಕಿಪೆಟ್ಟಿಗೆ ಯ  ಸಹಾಯದಿಂದ ಹೊತ್ತಿಸಿ, ಎರಡು ದಿಂಬುಗಳನ್ನು ರೈಲ್ವೆ ಪಟ್ಟಿಯ ಮೇಲಿಟ್ಟು ಹಾಗೆ comfort ಆಗಿ ಮೇಲಿನ  ಆಕಾಶ ನೋಡುತ್ತಾ ಮಲಗಿದ್ದೆ ನಾನು. 


ಇನ್ನೂ ರೈಲು ಬಂದಿರಲಿಲ್ಲ ನನ್ನ ಮಾಹಿತಿ ಪ್ರಕಾರ,ನಾನಿದ್ದ ಜಾಗಕ್ಕೆ ರೈಲು ಬರಲು ಇನ್ನು ಅರ್ಧ ಗಂಟೆ ಇದೆ. ಮತ್ತೆ ಕೆಲವೊಮ್ಮೆ ಇನ್ನೂ ಸ ಲೇಟ್ ಆಗುವ ಚಾನ್ಸ್ ಉಂಟು. ಆದರೆ ಯಾವುದಕ್ಕೂ ನಾನು ಮಾತ್ರ ಲೇಟ್ ಆಗಬಾರದು ಎಂದು ನಾನಂತು ಮುಕ್ಕಾಲು ಗಂಟೆ ಮೊದಲೇ ಬಂದು ರೈಲ್ವೆ ಟ್ರ್ಯಾಕ್ ಗೆ ಎರಡೆರಡು ದಿಂಬು ಹಾಕಿ, ಪಕ್ಕದಲ್ಲಿ ಸೊಳ್ಳೆ ಬತ್ತಿ ಹೊತ್ತಿಸಿ ಆರಾಮವಾಗಿ ಮಲಗಿದ್ದೆ.


ಯಾವತ್ತೂ ಲೈಫ್ ನಲ್ಲಿ ನಾವು ಲೇಟ್ ಮಾಡಬಾರದು. punctual ಆಗಿ ಇರಬೇಕು, ಅದುವೇ ನನ್ನ ಪಾಲಿಸಿ. ಲೈಫ್ ನಲ್ಲಿ ಒಂದು L.I.C ಪಾಲಿಸಿ ಕೂಡ ಮಾಡಿರದಿದ್ದರೂ ಇಂತಹ ಪಾಲಿಸಿಗಳನ್ನು ನಾನು strictly follow ಮಾಡ್ತೇನೆ.


ಹಾಗೇ ಯೋಚನೆಗೆ ಬಿದ್ದೆ, ಅಲ್ಲಾ ಸ್ವಲ್ಪ ಏಳುವಾಗ ಹೆಚ್ಚು ಕಮ್ಮಿ ಆಗಿಯೋ, ಅಥವಾ ರೈಲು ಬರುವ ಟೈಂ ಅಲ್ಲಿ ರಪ್ಪ ಅಂತ ಪಕ್ಕಕ್ಕೆ ಸರಿವಾಗ ಈ ಟ್ರ್ಯಾಕ್ ನಲ್ಲಿ ನನ್ನ ಕಾಲು ಏನಾದರೂ ಸಿಕ್ಕಿ ಹಾಕಿಕೊಂಡು ನಾನು ನಿಜವಾಗಿಯೂ  ಸತ್ತೇ ಹೋದರೆ,ಈ ಭವ್ಯ ಸಮಾಜ ನನ್ನ ಬಗ್ಗೆ ಏನು ತಿಳಿದುಕೊಳ್ಳಬಹುದು.


ಬದುಕಲಾರದೆ ಸೋತು ಹೋದ ರಣಹೇಡಿ ಅಂತ ಹೇಳಬಹುದಾ..? ಇಲ್ಲ ಪಾಪ ಅವನ ನೋವು ಏನು ಇತ್ತೋ ಅವನಿಗೆ ಗೊತ್ತು, ಸಾಯುವಂತಹ ನೋವು ಇರದಿದ್ದರೆ ಅವನು ಯಾಕೆ ಸುಮ್ಮನೆ ಸಾಯ್ತಾ ಇದ್ದ ಅಂತ ಯಾರಾದರೊಬ್ಬರು ಫೇಸ್ಬುಕ್ ಫ್ರೆಂಡ್ ತಮ್ಮ ಫೇಸ್ಬುಕ್ ನಲ್ಲಿ ಅನುಕಂಪದ ಪೋಸ್ಟ್ ಬರೆದು ನನಗೂ ಟ್ಯಾಗ್ ಮಾಡಬಹುದಾ? 


"Excuse me... " ಯಾವುದೋ ಒಂದು ಮಧುರವಾದ ಧ್ವನಿ ಕೇಳಿ ನನ್ನ ಆಲೋಚನೆ ಗಳಿಗೆ ಬ್ರೇಕು ಹಾಕಿ, ಮಲಗಿದ್ದಲ್ಲಿಂದಲೇ ಪಕ್ಕಕ್ಕೆ ತಿರುಗಿ ನೋಡಿದೆ.


ಒಬ್ಬಳು ಸುಂದರವಾದ ಹುಡುಗಿ. ಬ್ಯಾಗ್ ಹಾಕಿಕೊಂಡು ನಿಂತಿದ್ದಾಳೆ.


ಬಹುಶಃ ಇವಳು ನಾನು ಇಲ್ಲಿ ಸಾಯಲು ಮಲಗಿರುವುದನ್ನು ನೋಡಿ ಇಲ್ಲಿಗೆ ಬಂದಿದ್ದಾಳೆ ಅಂತ ಕಾಣುತ್ತೆ. ಈಗ ನನಗೆ ಖಂಡಿತ ಬದುಕು, ಜೀವನ, ಮನ್ನಂಗಟ್ಟಿ, ಸಾಯಬೇಡಿ.. ಅಂತ ನೀತಿ ಬೋಧನೆ ಎಲ್ಲಾ ಮಾಡಿ confirm ನನ್ನ ಐಡಿಯಾ ಎಲ್ಲಾ ಹಾಳು ಮಾಡ್ತಾಳೆ ಇವಳು  ಸಾವ್.. ಅಂತ ಮನಸ್ಸಿನಲ್ಲಿಯೇ ಅಂದಕೊಂಡೆ..


"hellow excuse me..."  ಮತ್ತೊಮ್ಮೆ ಕರೆದಳು.


"yes.. ಏನು?" ಮಲಗಿದ್ದಲ್ಲಿಂದಲೇ ಕೇಳಿದೆ.


"ಏನು ಸಾಯ್ಬೇಕು ಅಂತ ಮಲಗಿದ್ದೀರಾ.." ಕೇಳಿದಳು.


"ಇಲ್ಲ ಭರತ ನಾಟ್ಯ ಮಾಡ್ಬೇಕು ಅಂತ ಮಲಗಿದ್ದೆನೆ.." ಅಂದೆ.


"ನೋಡಿ ನಾನು ಕೂಡ ಸಾಯ್ಬೇಕು ಅಂತಲೇ ಬಂದಿದ್ದೇನೆ.. ನೀವು ಬೇರೆ ಕಡೆ ಮಲಗಿ.. ನಾನು ಇಲ್ಲೇ ಮಲಗ್ತೀನಿ.." ಅಂದಳು.


"ಇಲ್ಲೇ ಯಾಕೆ.."


"ಇಲ್ಲಿ ಸ್ವಲ್ಪ ಲೈಟ್ ಇದೆ.ಬೇರೆ ಕಡೆ  ಕತ್ತಲೆಯಲ್ಲಿ ಒಬ್ಬಳೇ ಮಲಗ್ಲಿಕ್ಕೆ ಭಯ ಆಗುತ್ತೆ.. "


ಅಲ್ಲಾ ಇವಳು ಹೇಗೋ ಸಾಯ್ಲಿಕ್ಕೆ ಅಂತಾನೇ ಬಂದಿದ್ದಾಳೆ.ಮತ್ತೆ ಇವಳಿಗೆ ಕತ್ತಲೆಯಲ್ಲಿ ಮಲಗ್ಲಿಕ್ಕೆ ಭಯ ಏನು. ಏನು ಹುಡುಗೀರಪ್ಪಾ.. ಇವರೆಲ್ಲಾ ಯಾಕೆ ಸಾಯ್ಲಿಕ್ಕೆ ಬರ್ತಾರೆ ಮರ್ರೆ ನಮಗೆಲ್ಲ ಇಂತಹ ಟೈಂ ಅಲ್ಲಿ ಉಪದ್ರ ಕೊಡ್ಲಿಕ್ಕೆ ಅಂತ ಮನಸ್ಸಲೇ ಅಂದುಕೊಂಡೆ.


" ನಿಮಗೆ ಭಯ ಆಗುವುದಾದರೆ, ಇಲ್ಲಿ ನನ್ನ ಪಕ್ಕವೇ ಮಲಗಿಕೊಳ್ಳಿ..."


"ಬೇಡ.. ಬೇಡ.. ಪರಪುರುಷನ ಪಕ್ಕ  ಈ ನಡುರಾತ್ರಿ ಹೀಗೆಲ್ಲಾ ಮಲಗಿಕೊಂಡು ಬಿಟ್ಟರೆ ಈ ಸಮಾಜ ತಪ್ಪು ತಿಳಿಯುತ್ತೆ..."


ಆಹಾ..ಎಂತಹ  ಸಾತ್ವಿಕ ಪತಿವ್ರತೆ ಮನಸ್ಸು ಇವಳದ್ದು. ಸಾಯುವ ಟೈಂ ಅಲ್ಲೂ ಈ ಲಾಜಿಕ್ ಎಲ್ಲಾ ಬೇಕಾ ಅಂತ ಅಂದುಕೊಂಡೆ. 


"ಇಲ್ಲ, ನಾನು ಬೇರೆ ಕಡೆ ಹೋಗಲ್ಲ.. ನಾನೇ ಫಸ್ಟ್ ಬಂದು ಇಲ್ಲಿ ದಿಂಬು ಹಾಕಿ, seat reserve, sorry.. ಟ್ರ್ಯಾಕ್ ರಿಸರ್ವ್ ಮಾಡಿದ್ದು.. ಬೇಕಾದರೆ ನೀವೇ ಬೇರೆ ಕಡೆಗೆ ಹೋಗಿ.. "


" ನಿಮ್ಮ ಲಾಜಿಕ್ ಹೇಗೆ ಇದೆ ಎಂದರೆ, ಲೋಕಲ್ ಬಸ್ ನಲ್ಲಿ ಹೊರಗಿನಿಂದ ವೀಂಡೋ ದ ಮೂಲಕ ಟವೆಲ್ ಎಸೆದು  seat reservation ಮಾಡಿಕೊಂಡ ಹಾಗೇ ಉಂಟು.. "


" ಏನೇ ಇರಲಿ, ನಾನು ಮಾತ್ರ ಹೋಗಲ್ಲ.. "


" ಲೇಡಿಸ್ ಫಸ್ಟ್.. ಆ ಪಾಲಿಸಿ ನಿಮ್ಮಲಿ ಇಲ್ಲವಾ.. "


" ಇದೆ, ಆದರೆ ಅದು ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ತಗೊಳ್ಳುವ ಸರತಿ ಲೈನ್ ನಲ್ಲಿ ಇದ್ದಾಗ, ಅನ್ನ ಸಂತರ್ಪಣೆ ಯ ಲೈನ್ ನಲ್ಲಿ  ಊಟಕ್ಕೆ ನಿಂತಾಗ.. ಇಲ್ಲವೇ ಬಸ್ ನಲ್ಲಿ ಕುಳಿತುಕೊಂಡಿದ್ದಾಗ ಮಾತ್ರ ಲೇಡಿಸ್ ಗೆ ಸೀಟ್ ಬಿಟ್ಟುಕೊಡುವ  ಲೇಡಿಸ್ ಫಸ್ಟ್ ಎನ್ನುವ ಪಾಲಿಸಿ. ಆದರೆ ಸಾಯುವಾಗ ಅಲ್ಲ. ಅದು ಅಲ್ಲದೇ ನೀವು young ಇದ್ದೀರಿ. ಅಲ್ಲೇ ದೂರದಲೆಲ್ಲೋ  ಹೋಗಿ ಮಲಗಿ ಕೊಳ್ಳಿ.. ನಾನಂತೂ ಈ ಜಾಗ ಬಿಟ್ಟು ಕೊಡಲ್ಲ.. " ಅಂತ ಖಡಕ್ ಆಗಿ ಹೇಳಿಬಿಟ್ಟೆ. 


ಅವಳಿಗೆ ತುಂಬಾ ಕೋಪ ಬಂತು. ಅದನ್ನು ಮುಖದಲ್ಲಿ ತೋರಿಸಿಕೊಂಡು ಅಲ್ಲೇ ಸ್ವಲ್ಪ ದೂರದಲ್ಲಿಯೇ ಹೋಗಿ ರೈಲೈ ಟ್ರ್ಯಾಕ್ ಮೇಲೆ ಮಲಗಿ ಬಿಟ್ಟಳು.ಜಾಸ್ತಿ ದೂರ ಏನಲ್ಲ ಹೆಚ್ಚೆಂದರೆ ಹತ್ತು ಹದಿನೈದು ಮೀಟರ್ ದೂರ ಅಷ್ಟೇ. ಮಲಗಿದ್ದಲ್ಲಿಂದಲೇ ಅವಳ ಮುಖ ಸ್ಪಷ್ಟವಾಗಿಯೇ ಕಾಣುತ್ತಿತ್ತು.


ತುಂಬಾ ಹೊತ್ತಾಯಿತು. ಇಬ್ಬರ ಮಧ್ಯೆಯೂ ಮಾತಿಲ್ಲ ಕಥೆಯಿಲ್ಲ. ರೈಲು ಬರಲು ಇನ್ನೂ ಹೆಚ್ಚು ಕಡಿಮೆ ಅರ್ಧ ಗಂಟೆ ಇದೆ. ನಾನೇ ಅವಳನ್ನು ಮಾತಾಡಿಸಲು ನಿರ್ಧರಿಸಿದೆ. ಒಂದೊಳ್ಳೆಯ ಸಂಭಾಷಣೆ ಸಾವಿಗೆ ಕೊಡ ಒಳ್ಳೆಯ ಕಳೆ ಕೊಡುತ್ತದೆ. ನನ್ನ ಸಾವಿಗಲ್ಲ,ಅವಳ ಸಾವಿಗೆ. ಯಾಕೆಂದರೆ ಸಾಯಲು ಬಂದಿರುವುದು ಅವಳು ಅಲ್ಲವೇ.


"ಹಲೋ..." ಎಂದೇ ಜೋರಾಗಿ ಅವಳಿಗೆ ಕೇಳುವಂತೆ.


"ಏನು..." ಅಂದಳು ಸಿಡುಕ್ಕುತ್ತಾ.


"ಏನು ಮಾಡ್ತಾ ಇದ್ದಿರಿ..."


" ಕಥಕ್ಕಳ್ಳಿ ಮಾಡ್ತಾ ಇದ್ದೇನೆ.."


ಒಹೋ.. ಹುಡುಗಿ ಭಯಂಕರ ಚೂಟಿ ಇದ್ದಾಳೆ. ನನ್ನ ಡೈಲಾಗ್ ನನಗೇ ವಾಪಸ್.. ಅದೂ  ಇಷ್ಟು ಬೇಗ.. ಇರಲಿ ಇರಲಿ.. ಹಾಗಾದರೆ ಈ ಸಂಭಾಷಣೆ ಖಂಡಿತವಾಗಿಯೂ ಬೋರ್ ಹೊಡಿಸಲ್ಲ ಅಂತ ಅನಿಸಿತು.


"ಹೆದರಿಕೆ ಆಗ್ತಾ ಉಂಟಾ.." ಕೇಳಿದೆ.


" ಇಲ್ವಲ್ಲಾ.." 


"ಮತ್ತೆ ಇದು. ಫಸ್ಟ್ ಟೈಮಾ ನೀವು  ಸಾಯ್ಲಿಕ್ಕೆ ಬರುವುದು..? "


" ಇಲ್ಲ ತುಂಬಾ ಸಲ ಸತ್ತಿದ್ದೆನೆ. ಈಗ ನನ್ನ ಪ್ರೇತ ಬಂದು ಸಾಯ್ತಾ ಉಂಟು.." ಅಂದಳು.


ಭಯ ಆಯ್ತು. ನಿಜವಾಗಿಯೂ ಇವಳು ಪ್ರೇತ, ಪಿಶಾಚಿ ಇರಬಹುದಾ.. ಇಲ್ಲ.. ಇಲ್ಲ.. ಇರ್ಲಿಕ್ಕೆ ಇಲ್ಲ.. ಪ್ರೇತಗಳು ಬೆಳಕಿನ ಅಡಿಗೆ ಬರುವುದಿಲ್ಲ ಅಂತ ನನ್ನ  ಭಯಂಕರ ಫ್ರೆಂಡ್ ಒಬ್ಬ ನನಗೆ ಪ್ರೇತಗಳ ಬಗ್ಗೆ ಭಯಂಕರ ಉಪನ್ಯಾಸವನ್ನೇ ನೀಡಿದ್ದ ಸಂಗತಿ ಒಂದು ನೆನಪಾಯಿತು.ಮತ್ತೆ ಪ್ರೇತಗಳ ಕಾಲು ಉಲ್ಟಾ ಇರುತ್ತೆ ಅಂತೆ. ನಾನೇ ಮನಸ್ಸಿಗೆ ಅಂದುಕೊಂಡೆ. ಇಲ್ಲ ಇಲ್ಲ.. ಇವಳು ಖಂಡಿತವಾಗಿಯೂ ಪ್ರೇತ ಅಲ್ಲ.


"ಮತ್ತೆ ಮನೆಯಲ್ಲಿ ಎಲ್ಲಾ ಹೇಳಿ ಬಂದಿದ್ದಿರಾ..." ಎಂದು ಜೋರಾಗಿ ಮತ್ತೆ ಕೇಳಿದೆ.


"ಹೌದು ಮನೆಯಲ್ಲಿ ಹೇಳಿದೆ, ನಾನು ರೈಲಿನ ಅಡಿಗೆ ಬಿದ್ದು ಸಾಯ್ಲಿಕ್ಕೆ ಹೋಗ್ತಾ ಇದ್ದೆನೆ ಎಂದು. ಅದಕ್ಕೆ ಬಿರಿಯಾನಿ ಎಲ್ಲಾ ಮಾಡಿಸಿ, ಒಟ್ರಾಸಿ ಸೆಲೆಬ್ರೇಶನ್ ಎಲ್ಲಾ ಮಾಡಿ, ಕೇಕ್ ಕಟ್ ಮಾಡಿ, ಶ್ಯಾಂಪೇನ್ ಚಿಮ್ಮಿಸಿ, ಎಲ್ಲರೂ ನಗು ನಗುತ್ತಾ ಇಲ್ಲಿಗೆ  ಕಳುಹಿಸಿ ಕೊಟ್ಟರು.." ಅಂದಳು.


ಇವಳೇನು ನಾನಂದು ಕೊಂಡ ಹಾಗೆ  ಕಡಿಮೆಯವಳಲ್ಲ,ತುಂಬಾ ಸೊಕ್ಕು ಇದೆ ಇವಳಿಗೆ.ಇರಲಿ ಇರಲಿ... ಏನೇ ಇದ್ರೂ ಇವಳು ಸತ್ತೇ ಸಾಯುತ್ತಾಳೆ. ರೈಲು ಅವಳ ಸೈಡ್ ನಿಂದಲೇ ಫಸ್ಟ್ ಬರುವುದು. ಅವಳ ಹತ್ತಿರ ರೈಲ್  ಬರುವಾಗ ನಾನಂತು ಅವಳನ್ನು ಕಾಪಾಡಲು ಹೋಗುವುದಿಲ್ಲ. ಅವಳಿಗೆ ಭಯಂಕರ ಕೊಬ್ಬು ಇದೆ ಅಂತ ಮನಸ್ಸಿನಲ್ಲಿಯೇ ಅಂದುಕೊಂಡೆ.


" excuse me..." ಅವಳೇ ಕರೆದಳು.


"ಇಲ್ಲಿ ಭಯಂಕರ ಸೊಳ್ಳೆ ಉಂಟು,ನಿಮಗೆ ಅಲ್ಲಿ ಸೊಳ್ಳೆ ಏನೂ  ಕಚ್ಚಲ್ವಾ.."


"ಇಲ್ಲ.. ನಾನು ಸೊಳ್ಳೆ ಬತ್ತಿ ಹಚ್ಚಿ ಇಟ್ಟಿದ್ದೀನಿ"


"ನನಗೂ ಒಂದು ಸೊಳ್ಳೆ ಬತ್ತಿ ಕೊಡಿ, ಹೇಗೋ ನಿಮ್ಮ ಹೆಸರು ಹೇಳಿ ಸತ್ತು ಬಿಡ್ತಿನಿ.."


"ಇಲ್ಲ.. ಒಂದೇ ಇರುವುದು, ನಾನು ಕೊಡಲ್ಲ"


"at least ಸ್ವಲ್ಪ ಕಟ್ ಮಾಡಿ ಒಂದು ತುಂಡು ಸೊಳ್ಳೆ ಬತ್ತಿ ಆದರೂ ಕೊಡಿ.."


"ಇಲ್ಲ.. ಕೊಡಲ್ಲ.. ನಿಮಗೆ ಸಾಯ್ಲಿಕ್ಕೆ ಬರುವಾಗ ನಿಮ್ಮ comfort ಗೆ ಏನೇನು ತರಬೇಕು ಎಂದು ಅಷ್ಟು ಸ ನಿಮಗೆ ಗೊತ್ತಾಗುವುದಿಲ್ಲವಾ.."


" ಸಾಯುವಾಗ comfort a?.."


"ಮತ್ತೆ ನೋಡಿ ಇನ್ನು ಅರ್ಧ ಗಂಟೆ ಇದೆ. ಈ ಸೊಳ್ಳೆ ಬತ್ತಿ ಇರದಿದ್ದರೆ, ಈ ಸೊಳ್ಳೆ ಕಚ್ಚಿ ಕಚ್ಚಿಯೇ ಸಾಯ್ಬಹುದು ನಾವಿಬ್ಬರು. ಹೇಗೋ ಸಾಯ್ತಾ ಇದ್ದೀರಾ.. ಸಾಯುವಾಗಲೂ ನೆಮ್ಮದಿಯಿಂದ ಸಾಯ್ಬೇಕು. ಏನೂ  tension ಮಾಡ್ಬೇಡಿ.. ಇಲ್ಲೇ ಬಂದು ನನ್ನ ಪಕ್ಕವೇ ಮಲಗಿಕೊಳ್ಳಬಹುದು ನೀವು .. ಮತ್ತೆ ಸಾಯುವ ಟೈಂ ಅಲ್ಲಿ ನಿಮ್ಮನ್ನು ರೇಪ್ ಮಾಡಿ ರೇಪಿಸ್ಟ್ ಅಂತ ಅನ್ನಿಸಿಕೊಳ್ಳೊಕೆ ನನಗೂ ಮನಸಿಲ್ಲ.. " ಅಂದೆ.


ಅವಳಿಗೆ ಏನು ಅನ್ನಿಸಿತೋ ಏನೋ, ಮಲಗಿದಲ್ಲಿಂದ ಎದ್ದು, ಪಕ್ಕದಲ್ಲಿ ಇಟ್ಟಿದ್ದ ಅವಳ ಬ್ಯಾಗ್ ಹಾಕಿಕೊಂಡು ನನ್ನ ಕಡೆಗೆ ನಡೆದು ಬಂದಳು. ಆ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿದ್ದ ಲೈಟ್ ನಿಂದಾಗಿ ಅವಳ ಮುಖ ಈಗ ಎಂದೆಂದಿಗೂ ಸ್ಪಷ್ಟವಾಗಿಯೇ ಕಾಣುತ್ತಿತ್ತು. ನಿಜವಾಗಾಯೂ ಸುಂದರಿಯೇ ಅವಳು. ಅಲ್ಲ ಈ ಸುಂದರಿಯರು ಎಲ್ಲಾ ಯಾಕೆ ಸಾಯ್ತಾರೆ ಅಂತ.

ಬಹುಶಃ ಲವರ್ ಕೈ ಕೊಟ್ಟಿರಬೇಕು ಅಂತ ಅಂದುಕೊಂಡೆ.


ಬಂದವಳೇ ನನ್ನ ಪಕ್ಕವೇ ಮಲಗಿ ಬಿಟ್ಟಳು. ಅವಳ ಮೈ ನನ್ನ ಮೈಗೆ ತಾಗುತಿತ್ತು.


" ಒಂದು ಇಂಚು ಬಿಟ್ಟು ಆದರೂ ನನ್ನಿಂದ ಸ್ವಲ್ಪ ದೂರ ಮಲಗಿ ಅಲ್ಲಾ, ನಾನು ಬೇಕುಂತ  ಏನು ಮಾಡಲಾರೆ, but ಏನೇ ಆದರೂ  ಉಪ್ಪು ಹುಳಿ ಖಾರ ತಿಂದ ಬಾಡಿ ಅಲ್ವಾ.. ಮತ್ತೆ ಏನಾದರೂ ಹೆಚ್ಚು ಕಡಿಮೆ ಆದರೆ ಕಷ್ಟ ಆಗುತ್ತೆ.." ಅಂದೆ.


" ಏನೂ ಆಗಲ್ಲ ಬಿಡಿ, ನೀವು ರೇಪು ಗೀಪು ಎಲ್ಲಾ ಮಾಡುವ  ರೇಂಜಿಗೆ ಇಲ್ಲ.." ಅಂದಳು.


ಅವಳ ಈ ಕೊಬ್ಬೆ, ಅವಳು next ಸಾಯುವಾಗ, ನಾನು ಅವಳನ್ನು ಸಾವಿನ ದವಡೆಯಿಂದ ಪಾರು ಮಾಡದಂತೆ ಮಾಡುವುದು ಎಂದು ಅಂದುಕೊಂಡೆ. 


" ಅಲ್ಲಾ ಈಗ ನಾವು ಒಟ್ಟಿಗೆ ಒಟ್ಟಿಗೆ ಮಲಗಿ, ನೆಕ್ಸ್ಟ್ ರೈಲು ಬಂದಾಗ.. ನಾನು ಮೊದಲು  ಅಡಿಗೆ ಬಿದ್ದು ಅದರಿಂದ  speed ಕಡಿಮೆ ಆಗಿ.. ನೆಕ್ಸ್ಟ್ ನಿಮ್ಮ ಮೇಲೆ ರೈಲು ಬರುವಾಗ ಆ ಕಡಿಮೆ speed ಗೆ ನೀವು ಸಾಯದೇ ಅರೆ ಜೀವ ಆಗಿ.. ನಿಮ್ಮ ಸಾಯುವ  ಉದ್ದೇಶವೇ  ಈಡೇರದಿದ್ದರೆ.. ಆವಾಗ  ನೀವು ಏನು ಮಾಡುತ್ತಿರಾ..? "


ಇವಳೇನು ದೊಡ್ಡ ಆನೆ ಮಲಗಿದ್ದಾ..speed ಕಡಿಮೆ ಆಗ್ಲಿಕ್ಕೆ, ಅದೂ ರೈಲಿನ ಅಡಿಯಲ್ಲಿ. ಅಲ್ಲಾ ಇದು ಬೀದಿನಾಯಿಗಳು ಕಾರ್ ನ ಅಡಿಗೆ ಬಿದ್ದು speed ಕಡಿಮೆ ಆಗುವ ಅವಳ ಈ ಪೊಟ್ಟು ಲಾಜಿಕ್ ಬಗ್ಗೆ ನನಗೇನು ಅಷ್ಟೇನು ಆಸಕ್ತಿ ಹುಟ್ಟಲಿಲ್ಲ. ನನಗೆ ಗೊತ್ತಿತ್ತು ಅವಳು ಬೇಕೆಂದೇ ಟಾಂಟ್ ನೀಡಲು ಹಾಗೆ ಹೇಳಿದ್ದು ಎಂದು. ಆದರೆ ನನಗೆ ಟೆನ್ಶನ್ ಅದದ್ದು ಏನೆಂದರೆ ಅವಳು ಪಕ್ಕವೇ ಮಲಗಿದ್ದರೆ ನನ್ನ ಯೋಜನೆಯಂತೆ ರೈಲು ಬರುವಾಗ ನಾನು  ಪಕ್ಕಕ್ಕೆ ಸರಿಯುವುದು ಹೇಗೆ.. ಅವಳು ನನ್ನನ್ನು ಹೆದರು ಪುಕ್ಕಲ ಅಂತ ಅಂದುಕೊಳ್ಳುವುದಿಲ್ಲವೇ.. 


"ಏನಾಗಲ್ಲ ಬಿಡಿ. ದೇವರ ದಯೆಯಿಂದ ಏನು ಆಗಬೇಕೋ ಅದೇ ಆಗುತ್ತೆ.." ಅಂದೆ.


ಅಂದರೆ ಅವಳು ಹೇಗೋ ಸಾಯ್ತಾಳೆ, ನಾನು ಮಾತ್ರ ಚಾಕಚಕ್ಯತೆಯಿಂದ ಮಲಗಿದ್ದಲ್ಲಿಂದಲೇ  ಜಿಗಿದು ಹಾರಿ ಹೇಗೋ ಬಚಾವ್ ಆಗ್ತೇನೆ ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ.

ಆದರೆ ಈ ಮಾರಿ ರೈಲು ಹತ್ತಿರ ಬರುವಾಗ ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡರೆ?!!  ಪುನಃ ಟೆನ್ಶನ್ ಆಯಿತು.


" ನಿಮ್ಮ ಮಂಡೆ ಭಯಂಕರ ಉಂಟು ಮರ್ರೆ.." ಅಂದಳು.


"ಯಾಕೆ..? "


"ಅಲ್ಲಾ.. ಸಾಯುವಾಗಲೂ ಈ ಸೊಳ್ಳೆ ಬತ್ತಿ.. ಎರಡೆರಡು ದಿಂಬು..ಭಯಂಕರ ಜನ ನೀವು..  ಇಷ್ಟು comfort ಆಗಿ ಸಾಯುವವರನ್ನು ನಾನು ಎಲ್ಲೂ ನೋಡಿಲ್ಲ "


ನಿನ್ನಂತಹ ಪಿರ್ಕಿಯನ್ನು ಕೂಡ ನಾನೆಲ್ಲೂ ನೋಡಿಲ್ಲ ಅಂತ ಹೇಳಬೇಕೆಂದು ಅನ್ನಿಸಿತ್ತಾದರೂ " ಪರವಾಗಿಲ್ಲ.. ಇಂದು ನೋಡಿದ್ದಿರಿ ಅಲ್ಲ.. ನಿಮ್ಮ ಭಾಗ್ಯ ಅಂತ ತಿಳಿದುಕೊಳ್ಳಿ.. " ಅಂದೆ.


" ನನಗೆ ಒಂದು ದಿಂಬು ಕೊಡಿ ಅಲ್ಲಾ..ನನಗೂ ಸ್ವಲ್ಪ ಸಾಯುವಾಗ comfort ಸಿಗಲಿ.. ನಿಮಗೂ ಸಾಯುವ ಟೈಂ ಅಲ್ಲಿ ಕರ್ಣನಂತೆ ದಾನ ಮಾಡುವ ಅವಕಾಶ ಸಿಗಲಿ.."


" ನನಗೆ ಯಾವತ್ತೂ ಎರಡು ದಿಂಬುಗಳನ್ನು ಇಟ್ಟುಕೊಂಡು ಮಲಗಿಯೇ ಅಭ್ಯಾಸ.. ಆದರೂ ನೀವು ಇಷ್ಟೊಂದು ಕೇಳ್ತೀರಿ ಅಂದರೆ ನಾನು ಹೇಗೆ ಬೇಡ ಎಂದು ಹೇಳಲಿ, ತಗೊಳ್ಳಿ ಒಂದು ದಿಂಬು...ಹಾಗೇ ಆರಾಮವಾಗಿ ಮಲಗಿ ಸಾಯಿರಿ " ಅಂತ ಅವಳಿಗೆ ಒಂದು ದಿಂಬು ಕೊಟ್ಟೆ.


ಸಾಯುವಾಗ ಆದರೂ ನೆಮ್ಮದಿಯಿಂದ ಸಾಯಲಿ ಅಂತ ಅನ್ನಿಸಿತು. ಅದಕ್ಕಾಗಿ ಕೊಟ್ಟೆ.


ಅವಳು ಕೂಡ  ದಿಂಬನ್ನು ರೈಲ್ವೇ ಪಟ್ಟಿಯ ಮೇಲೆ ಇಟ್ಟು, ಹಾಗೇ ಅದರ ಮೇಲೆ ತಲೆ ಇಟ್ಟುಕೊಂಡು ಮೇಲೆ ಆಕಾಶ ನೋಡುತ್ತಾ ಮಲಗಿದಳು.


ಅವತ್ತು ಹುಣ್ಣಿಮೆ ಬೇರೆ. ಚಂದ್ರ ಮೇಲಿನಿಂದ ನಮ್ಮಿಬ್ಬರನ್ನೇ ನೋಡುತ್ತಿದ್ದಾನೆ ಎಂದು ನನಗನಿಸಿತು. ಸೊಳ್ಳೆ ಬತ್ತಿ ಅರ್ದ ಉರಿದಿತ್ತು.ಪಾಪ ಹುಡಿಗಿ ನಿಜವಾಗಿಯೂ ಸಾಯುತ್ತಾಳೆ, ನನ್ನ ಹಾಗೆ ಪಕ್ಕಕ್ಕೆ ಸರಿಯುವುದಿಲ್ಲ.ಮನಸ್ಸು ಕರಗಿತ್ತು.

ನೋಡುವ ಆದರೆ ಇವಳ ಮನಸ್ಸು ಬದಲಾಯಿಸುವ,ಪ್ರಾಬ್ಲಂ ಎಷ್ಟೇ ದೊಡ್ಡದಿರಲಿ ಜನರು  ಆತ್ಮಹತ್ಯೆ ಮಾಡಿಕೊಳ್ಳಬಾರದು. ಎದುರಿಸಬೇಕು,ಬದುಕಬೇಕು,ಹಾಗೇ ಗೆಲ್ಲಬೇಕು. ಅದೇ ಬದುಕು.


" ಅಲ್ಲಾ ನಿಮಗೆ ಸಾಯುವಂತಹದ್ದಾದರೂ ಏನು ಬಂದಿದೆ  ದೊಡ್ಡ ರೋಗ..love failure? " ಎಂದು ಕೇಳಿದೆ.


"ಹೇಗೆ ಹೇಳ್ತೀರಾ.. Love failure ಇರಬಹುದು ಅಂತ.."


"ನೀವು ಇಷ್ಟು ಚಂದ ಇದ್ದೀರಾ.. ಖಂಡಿತ ಯಾವನಾದರೂ ಬಡ್ಡಿ ಮಗ ನಿಮಗೆ ಕೈ ಕೊಟ್ಟೇ ಕೊಟ್ಟಿರುತ್ತಾನೆ.. ಅದೇ ದುಃಖದಲ್ಲಿ ನೀವು ಇಲ್ಲಿ ಸಾಯಲು ಬಂದ್ದಿದ್ದಿರಿ.. ನಾನು  ಹೇಳಿದ್ದು ಕರೆಕ್ಟ್ ಅಲ್ವಾ.. " ಅಂದೇ ಉತ್ಸಾಹದಲ್ಲಿ.


" ಅಂದರೆ ನಾನು ಚೆನ್ನಾಗಿ ಇದ್ದೇನೆ ಎಂದು ನಿಮ್ಮ ಮಾತಿನ ಅರ್ಥ.. "


" ಹೌದು ನನಗೆ ಸುಳ್ಳು ಹೇಳಿ ಗೊತ್ತಿಲ್ಲ.. ಚೆನ್ನಾಗಿರುವುದನ್ನು ಚೆನ್ನಾಗಿದೆ ಎಂದು ಹೇಳಿದರೆ ಏನು ತಪ್ಪು.. ನೋಡಿ ಅಲ್ಲಿ ಮೇಲೆ ನಮ್ಮಿಬ್ಬರನ್ನು ನೋಡಿ ನಗುತ್ತಿದ್ದಾನೆ ಅಲ್ಲಾ ಆ ಕಳ್ಳ ಚಂದ ಮಾಮ.. ನೀವು ಕೂಡ ಹೆಚ್ಚು ಕಡಿಮೆ ಅವನಷ್ಟೇ ಚಂದ.." ಅಂದೆ.


"ನಿಮಗೆ ಚಂದ್ರ ಅಂದರೆ ಇಷ್ಟನಾ.. "


" ಹೌದು ಮತ್ತೆ ತುಂಬಾನೇ ಇಷ್ಟ.. ನಾನಂತು ಅವನಲ್ಲಿಗೆ  ಪದೇ ಪದೇ ಹೋಗುತ್ತಲೇ ಇರುತ್ತೇನೆ.. "


" ಎಲ್ಲಿಗೆ.. ಚಂದ್ರಲೋಕ ಕ್ಕೆ..? "


" ಹೌದು.. ಒಂದು ರೀತಿ ಹಾಗೆಯೇ..."


"ಅದು ಹೇಗೆ..?"


" ನೇರವಾಗಿ ಚಂದ್ರಲೋಕ ಕ್ಕೆ ಅಲ್ಲ, ಆದರೆ ಚಂದಿರನ ಊರಿಗೆ ಅಂತು ಪದೇ ಪದೇ  ಹೋಗುತ್ತೇನೆ.. "


" ಅರ್ಥ ಆಗುತ್ತಿಲ್ಲ ..ಬಿಡಿಸಿ ಹೇಳಿ"


" ನಿಮಗೆ ಚಂದಿರನ ಊರು ಗೊತ್ತಿಲ್ಲವೇ?.. "


" ಇಲ್ಲ... "


"  ನಮ್ಮ ಉಡುಪಿ ಚಂದ್ರನದ್ದೇ ಊರು ಅಲ್ಲವೇ.. "


" ಅದು ಹೇಗೆ ?"


"ಅಂದರೆ ಅದು ಉಡುಪನ ಊರು.. "


" ಗೊತ್ತಾಗಲಿಲ್ಲ.. "


" ಉಡುಪ ಅಂದರೆ ಚಂದಿರ..ಇನ್ನೂ ಬಿಡಿಸಿ ಹೇಳಬೇಕೆಂದರೆ ನಕ್ಷತ್ರಗಳ ಒಡೆಯ.. ಉಡುಪ ತಪಸ್ಸು ಮಾಡಿದ ಜಾಗವೇ ನಮ್ಮ ಉಡುಪಿ.. "


" ಓಹ್ ಹಾಗೇ.. "


" ತುಳುವಿನಲ್ಲಿ ಒಡಿಪು ಎಂಬ ಹೆಸರು ಕೂಡ ಇದೆ.. "


"ನೀವು ಉಡುಪಿಯವರಾ.. "


" ಅಲ್ಲ ನಮ್ಮದು ಮಂಗಳೂರು.. ಆದರೆ ನನಗೆ ಉಡುಪಿ ಮಂಗಳೂರು ಎನ್ನುವ ಭೇದವಿಲ್ಲ. ಎಷ್ಟಾದರೂ ಹಿಂದೆ ಎರಡೂ ಜಿಲ್ಲೆ ಸೇರಿಯೇ  ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಆಗಿತ್ತು  ಅಲ್ಲವೇ.. ಅದೂ ಅಲ್ಲದೇ ಉಡುಪಿಯ ಪೊಡವಿಗೊಡೆಯ ಕಡೆಗೋಲು ಕೃಷ್ಣ ಅಂದರೆ ನನಗೆ ತುಂಬಾನೇ ಇಷ್ಟ,ಅದಕ್ಕಾಗಿಯೂ  ನನಗೆ ಉಡುಪಿ ಇಷ್ಟ.."


" ನಾನು ಕೂಡ ಹಿಂದೆ ಉಡುಪಿಯವಳೇ..ಈಗ ಮಂಗಳೂರಿನಲ್ಲಿಯೇ ಇರುವುದು "


" ಓಕೆ ನಿಮ್ಮ ಕಥೆ ಹೇಳಿ ..ಸಾಯುವುದಕ್ಕಿಂತಲೂ ಮೊದಲು ನಿಮ್ಮದೊಂದು  ರೋಚಕ ಕಥೆ ಕೇಳಿಯೇ ಸಾಯ್ತೇನೆ "


" ನನಗೆ ಜೋರು ಹಸಿವು ಆಗ್ತಾ ಇದೆ.. " ಎಂದಳು.


" ಅದಕ್ಕೆ ನೀವು ಟೆನ್ಶನ್ ಮಾಡ್ಬೇಡಿ.. ನನ್ನ ಬ್ಯಾಗ್ ನಲ್ಲಿ ಬಾಳೆಕಾಯಿ ಚಿಪ್ಸು, ಸೋಂಟೆ, ಮಿಕ್ಷರ್ ಎಲ್ಲಾ ಇದೆ... ಒಂದು ನಿಮಿಷ... " ಅಂತ ಹೇಳಿ ಅವಳಿಗೆ ಒಂದು ಪ್ಯಾಕೆಟ್ ಬಾಳೆಕಾಯಿ ಚಿಪ್ಸು ಕೊಟ್ಟೆ. 


ಅವಳನ್ನು ಅದನ್ನು ತೆಗೆದುಕೊಂಡು ಪ್ಯಾಕೇಟ್ ಓಪನ್ ಮಾಡಿ" ನೀವೂ ತಗೊಳ್ಳಿ... "ಅಂದಳು


ಹೀಗೆ ಬಾಳೆಕಾಯಿ ಚಿಪ್ಸು ತಿನ್ನುತ್ತಾ.. ಮೇಲೆ ಆಕಾಶ ನೋಡುತ್ತಾ.. ಚಂದಿರನನ್ನು ದಿಟ್ಟಿಸುತ್ತಾ ಪುನಃ ಮಲಗಿಕೊಂಡೆವು.


" ನನ್ನದು ಬಿಡಿ.. ನಿಮ್ಮದು ಸ್ಟೋರಿ ಹೇಳಿ.." ಅಂದಳು.


"ನನ್ನದಾ..."


"ಹೌದು ನಿಮ್ಮದೇ.. ನಿಮಗೂ ಒಂದು ಕರುಣಾಜನಕ ಸ್ಟೋರಿ ಇರ್ಬಹುದು ಅಲ್ವಾ.. ಇಲ್ಲದಿದ್ದರೆ ಸಾಯ್ಲಿಕ್ಕ ಯಾಕೆ ಬರ್ತಿದ್ದೀರೀ.."


ಇರಲಿ ಇರಲಿ ಇವಳಿಗೊಂದು ನಂಬುವ ಹಾಗೇ ಖತರ್ನಾಕ್ ಸ್ಟೋರಿ ಹೇಳಿ  ಮಂಗ ಮಾಡುವ ಅಂತ ಅಂದುಕೊಂಡೆ. ಈಗ ನಾನು ಅವಳಿಗೆ ಒಂದು ಕಾಲ್ಪನಿಕ ಕಥೆಯನ್ನು ಅವಳು ನಂಬುವ ಹಾಗೇ ಹೇಳಬೇಕಿತ್ತು.


" ಅದೊಂದು ದೊಡ್ಡ ಕಥೆ.. "


" ಪರವಾಗಿಲ್ಲ.. Short ಆಗಿ ಈ ಚಿಪ್ಸು ಖಾಲಿ ಆಗುವುದರ ಒಳಗೆ ಹೇಳಿಬಿಡಿ.."


ಎಲ್ಲಿಂದ ಶುರು ಮಾಡುವುದು ಅಂತ ನನಗೆ ಗೊತ್ತಾಗಲಿಲ್ಲ. ಆದರೂ ಶುರು ಮಾಡಿದೆ.


"ನಾನು ಒಬ್ಬಳನ್ನು ಪ್ರೀತಿಸಿದೆ.. ಅವಳು ಕೂಡ ನನ್ನನ್ನೂ ತುಂಬಾನೇ ಪ್ರೀತಿಸಿದ್ದಳು.. ಆದರೆ ಮದುವೆ ಮಾತ್ರ ಬೇರೆಯವನ ಜೊತೆ ಆದಳು.."


" ಅಷ್ಟಕ್ಕೇ... ಸಾಯುವುದಾ.. "


" ಇಲ್ಲ ಇದು ಫಸ್ಟ್ ಸ್ಟೋರಿ... "


" ಹಾಗಾದರೆ ಇನ್ನೊಂದು ಸ್ಟೋರಿ ಉಂಟಾ.."


"ಇಲ್ಲ ಇನ್ನೂ ಮೂರು ಇದೆ.."


"ಎಂತ ಎಲ್ಲರೂ ಲವ್ ಮಾಡಿ ನಿಮಗೆ ಮೋಸ ಮಾಡಿದ್ದ.. "


" ಹೌದು.. ಹೇಗೆ ಅಷ್ಟು ಕರೆಕ್ಟ್ ಆಗಿ ಹೇಳಿದ್ದಿರಿ.. "


" ನಾನು ಹಾಗೇ ಇರಬಹುದು ಅಂತ ಮೊದಲೇ  ಅಂದ್ಕೊಂಡೆ ಬಿಡಿ. ... ನಿಜವಾಗಿಯೂ ನಿಮ್ಮಂತವರು ಸಾಯ್ಲೇ ಬೇಕು " ಅಂದಳು.


ಇವಳಿಗೆ ಸ್ವಲ್ಪವೂ ಕರುಣೆಯೇ ಇಲ್ಲವೇ.. ಖಂಡಿತ ಇವಳು ಸಾಯುವಾಗ ನಾನು ಹೆಲ್ಪ್ ಮಾಡಲಾರೆ ಮನಸ್ಸು ದೃಡ ನಿರ್ಧಾರ ಮಾಡಿತು.


ಅವಳು ನಿಮ್ಮಂತವರು ಸಾಯಲೇಬೇಕು ಬಿಡಿ, ಅಂತ ಹೇಳಿದ್ದು ಬಾಯಿಯ ಪಸೆ ಆರುವಂತೆ ಮಾಡಿತು.


" ಬಾಳೆಕಾಯಿ ಚಿಪ್ಸು ತಿಂದು ಬಾಯಾರಿಕೆ ಜಾಸ್ತಿ ಆಗಿದೆ..ನಿಮ್ಮ ಬ್ಯಾಗ್ ನಲ್ಲಿ ನೀರು ಇದೆಯಾ.." ಕೇಳಿದೆ.


" ಬರೀ ನೀರು ಯಾಕೇ.. Sprite ಅನ್ನೇ ಕುಡಿಯುವಾ,ತಡೀರಿ ಒಂದು ನಿಮಿಷ .." ಅಂತ ಹೇಳಿ  ಅವಳ ಬ್ಯಾಗ್ ನಿಂದ sprite ಬಾಟಲ್ ತೆಗೆದುಕೊಟ್ಟಳು.


ಓಹ್ ಇವಳು ಕೂಡ jolly ಆಗಿ sprite ಎಲ್ಲಾ ಕುಡ್ಕೊಂಡು ಸಾಯುವ ಅಂತ ಡಿಸೈಡ್ ಮಾಡಿಯೇ ಬಂದಿದ್ದಾಳೆ.


ಇಬ್ಬರೂ ಕಂಠ ಪೂರ್ತಿ sprite ಕುಡಿದೆವು..ಪುನಃ ರೈಲು ಪಟ್ಟಿಯ ಮೇಲೆ ಇದ್ದ ದಿಂಬಿಗೆ ಒರಗಿ ಮಲಗಿಬಿಟ್ಟೆವು. 


" ಒಂದು ವಿಷಯ ಹೇಳ್ಲಾ.. " ಕೇಳಿದಳು.


"ಬೇಡ... "


" ಯಾಕೇ.. "


" ಎರಡು ಮೂರು ವಿಷಯ ಹೇಳಿ.. "


"ಒಹ್ ಹಾಗೆಯಾ.."


" ಆಯಿತು..ಏನದು ಹೇಳಿ.."


"ಜೀವನದಲ್ಲಿ ಕಷ್ಟ ಬರುತ್ತೆ, ಆದರೆ ಅದಕ್ಕೆ ಸಾವು ಪರಿಹಾರ ಅಲ್ಲ,ಪ್ರಾಬ್ಲಂ ಎಷ್ಟೇ ದೊಡ್ಡದಿರಲಿ ಜನರು  ಆತ್ಮಹತ್ಯೆ ಮಾಡಿಕೊಳ್ಳಬಾರದು. ಎದುರಿಸಬೇಕು,ಬದುಕಬೇಕು,ಹಾಗೇ ಗೆಲ್ಲಬೇಕು. ಅದೇ ಬದುಕು.." ಅಂದಳು.


" ಮತ್ತೆ ನೀವು ಯಾಕೆ ಸಾಯಲು ಬಂದದ್ದು.. ವೇದಾಂತ ಹೇಳೋಕೆ, ಬದನೆಕಾಯಿ ತಿನ್ಲಿಕ್ಕೆ ಯಾ? "


" ನಿಮಗೆ ಒಂದು ನಿಜ ವಿಷಯ ಹೇಳ್ಲಾ.."


"ಆಯಿತು ಮರ್ರೆ, ಹೇಳಿ ಸಾಯಿರಿ.. "


" ಇಲ್ಲ ನಾನು ಸಾಯಲ್ಲ.. "


" ಅಂದರೆ..? "


" ನಾನು ನಿಮ್ಮ ಹಾಗೇ ಇಲ್ಲಿಗೆ ಸಾಯ್ಲಿಕ್ಕೆ ಬಂದದ್ದು ಅಲ್ಲಾ.. "


" ಮತ್ತೆ... "


" ಸಾಯುವುದಕ್ಕಿಂತ ಮೊದಲು ಸಾಯುವ experience ಹೇಗಿರುತ್ತೆ, ಮನಸ್ಸಿಗೆ ಏನು ಅನಿಸುತ್ತೆ ಅಂತ ತಿಳಿದುಕೊಳ್ಳುವ ಅಂತ ಅಷ್ಟೇ ಬಂದದ್ದು.. ನೀವು ಅಂದ ಕೊಂಡ ಹಾಗೇ ನಾನು ಸಾಯಲ್ಲ.. ಆ ಸೈಡ್ ನಿಂದ ರೈಲು ಬರುತ್ತೆ ಅಲ್ಲಾ.. ಜಸ್ಟ್ ಇನ್ನೇನು ನನ್ನನ್ನು ಅಡಿಗೆ ಹಾಕಬೇಕು ಅಂತ ಇರುವಾಗ,ನಾನು ರಪ್ಪ ಅಂತ  ಪಕ್ಕಕ್ಕೆ ಡೈವ್ ಹೊಡೆದು ಇಲ್ಲಿಂದ ಎದ್ದು ಹೋಗ್ತೇನೆ.. ನಾನು ಸಾಯಲ್ಲ.. ಹೇಗಿದೆ ನನ್ನ ಐಡಿಯಾ.. "


ನನಗೆ ನನ್ನ ಚಪ್ಪಲಿಯಲ್ಲಿಯೇ ಹೊಡೆದು ಕೊಂಡ ಫೀಲ್ ಆಯಿತು. ನಾನು ಪಾಪ ಸಾಯ್ತಾಳೆ ಅಂತ ಅವಳನ್ನು ನಂಬಿ ಮೂರು ನಾಲ್ಕು ಸುಳ್ಳು love failure story ಗಳನ್ನು  ಕ್ರಿಯೇಟ್ ಮಾಡಿ, ಅದನ್ನು ಅವಳು ನಂಬುವಂತೆ  ಹೇಳಿದರೆ.. ಇವಳು ನನ್ನ ಹಾಗೆಯೇ  ಐಡಿಯಾ ಇಟ್ಟುಕೊಂಡು ಈಗ ನೀವು ಸಾಯಬೇಡಿ, ಆತ್ಮಹತ್ಯೆ ಮಹಾಪಾಪ.. ಹೇಗಿದೆ ನನ್ನ ಐಡಿಯಾ... ಅಂತ ನನಗೇ ಸರಿಯಾಗಿಯೇ  ಚಳ್ಳೆಹಣ್ಣು ತಿನ್ನಿಸಿಬಿಟ್ಟಿದ್ದಳು.


ಮೇಲೆ ನೋಡಿದೆ. Seriously ಈಗ ಚಂದಮಾಮ ನನ್ನನ್ನು ಒಬ್ಬನನ್ನೇ ನೋಡಿ ನಕ್ಕಂತೆ ಭಾಸವಾಯಿತು,ಅವನೊಟ್ಟಿಗೆ ಅವನ ಮೇಲಿರುವ ಮೊಲಗಳು ಕೂಡ ನಕ್ಕಂತೆ ಫೀಲ್ ಆಯಿತು. 


ಏನೇ ಇರಲಿ ಇವಳು ಪೆಟ್ಟು ಕಮ್ಮಿ ಜನ ಆದರೂ ಸ್ವಲ್ಪ ಡಿಫರೆಂಟ್ ಇದ್ದಾಳೆ. ಅದರಲ್ಲೂ ಸಾಯಬೇಡಿ ಎಂದು ಹೇಳಿದ್ದು ನನಗೆ ಇಷ್ಟ ಆಯಿತು.


"ಹೌದಾ...ಹಾಗಾದರೆ ನೀವು ಸಾಯಲ್ವಾ.."


"ಇಲ್ಲ.. ನಾನು ಸಾಯಲ್ಲ.. ಅದೇ ರೀತಿ ನೀವು ಕೂಡ ಸಾಯಲ್ಲ.."


"ಹೇಗೆ..? "


"ನಾನು ನಿಮ್ಮನ್ನು ಸಾಯಲು ಬಿಡಲ್ಲ.."


"ಅದು ಹೇಗೆ.."


"ನಾನಿರುವಾಗ ನೀವು ಹೇಗೆ ಸಾಯ್ತೀರಾ.. ಮನುಷ್ಯ ಸಾಯ್ಬರ್ದು.. ಬನ್ನಿ.. ಇದು ಒಂದು ಕೆಟ್ಟ ದಿನ ಅಂತ ಮರೆತು ಬಿಡಿ.."


"ಹಾಗಾದರೆ ನಾನು ಕೂಡ  ಸಾಯುವುದು ಬೇಡವಾ... "


" ಅಯ್ಯೋ ಬೇಡಾ ಮರ್ರೆ... ಬನ್ನಿ, ಎದ್ದೇಳಿ, ರೈಲು ಬರುವ ಹೊತ್ತಾಯಿತು.. "


" ಆಯ್ತು ನೀವು ಇಷ್ಟೊಂದು ಹೇಳ್ತೀರಿ ಅಂದರೆ ನಾನು ಸಾಯಲ್ಲ ಬಿಡಿ.. "


" ಥ್ಯಾಂಕ್ಸ್.. ಕೊನೆಗೂ ಮನಸ್ಸು ಚೇಂಚ್ ಮಾಡಿ ಬಿಟ್ರಿ ನೋಡಿ.. ನಂಗೆ ಖುಷಿ ಆಯಿತು.. " ಅಂದಳು ಖುಷಿಯಿಂದ.


ನಂತರ ಮಲಗಿದ್ದಲ್ಲಿಂದ ಇಬ್ಬರೂ ಮೇಲೆ ಎದ್ದೆವು. ಬ್ಯಾಗ್ ಗೆ ನಾನು ಮಲಗಲು ಇಟ್ಟುಕೊಂಡಿದ್ದ  ನನ್ನ ಚಿಕ್ಕದಾದ ತಲೆದಿಂಬನ್ನು ತುರುಕಿಸಿದೆ.


" ಈ ದಿಂಬು ನನ್ನಲ್ಲೇ ಇರಲಿ ಆಯ್ತಾ.. ಈ ಸಾಯಲು ಬಂದ ದಿನದ ನೆನಪಿಗಾಗಿ " ಅಂದಳು ನಗುತ್ತಾ ಅವಳಿಗೆ ನಾನು ಕೊಟ್ಟಿದ್ದ ದಿಂಬು ಹಿಡಿದುಕೊಂಡು.


" ಆಯ್ತು ಇಟ್ಟುಕೊಳ್ಳಿ... ಆದರೆ ಒಂದು ವಿಷಯ "


" ಏನು..? "


" ನೀವು ಹೇಳಿದ ಹಾಗೇ ಈ ದಿನವನ್ನು ನಾನು ಕೆಟ್ಟ ದಿನವೆಂದು ಮರೆತು ಬಿಡಲ್ಲ.." ಅಂದೆ ಟ್ರ್ಯಾಕ್ ಪಕ್ಕವೇ ನಿಧಾನವಾಗಿ ನಡೆಯುತ್ತಾ. 


"ಯಾಕೇ.."


"ನೀವು ಸಿಕ್ಕಿದ ದಿನ ಕೆಟ್ಟ ದಿನ ಹೇಗೆ ಆಗುತ್ತೆ... ನನಗೆ ಜ್ಞಾನೋದಯ ಮಾಡಿಸಿ, ನನ್ನನ್ನು ಸಾವಿನ ದವಡೆಯಿಂದ ಬದುಕಿಸಿದ ದೇವತೆ ನೀವು.. ನೀವು ಅಂತೂ ಸಾಯುವ ತನಕವೂ ದಿನಾಲೂ ನೆನಪಿನಲ್ಲಿ ಇರ್ತೀರಿ  ಬಿಡಿ.. " ಅಂದೆ.


ಕೊಬ್ಬಿನ ಹುಡುಗಿ ನಕ್ಕಳು. ಎಷ್ಟೇ ಚೆಲ್ಲಾಟದ ಪೆಟ್ಟ್ ಕಮ್ಮಿ ಹುಡುಗಿ ಆದರೂ ನಕ್ಕಾಗ ಮಾತ್ರ ಅವಳು ಪೌರ್ಣಮಿ ಯ ಚಂದಿರನಷ್ಟೇ ಸೊಗಸಾಗಿದ್ದಳು.


" ಆಯಿತು, ಮನೆಗೆ ನಡೀರಿ.. ನನ್ನದು ಇಲ್ಲೇ ಪಕ್ಕದಲ್ಲೇ ಮನೆ.. ಇನ್ನು ನಾನು ಹೋಗಬೇಕು.. ಬಾಳಿನಲ್ಲಿ ಯಾವತ್ತೂ ಟೆನ್ಶನ್ ಮಾಡ್ಬೇಡಿ.. ಬಿಂದಾಸ್ ಆಗಿ ಇರಿ..ಇನ್ನೊಮ್ಮೆ ಇಲ್ಲೇಲ್ಲಾದರೂ ಸಾಯ್ಲಿಕ್ಕೆ ಅಂತ ಬಂದರೆ.. ನಾನೇ ಕತ್ತು ಹಿಸುಕಿ ನಿಮ್ಮನ್ನು ಸಾಯಿಸ್ತೇನೆ ನೋಡಿ.." ಅಂದಳು ಟ್ರ್ಯಾಕ್ ಪಕ್ಕವೇ ನಡೆಯುತ್ತಾ. 


ನಾನು ಕೂಡ ಜೋರಾಗಿ ನಕ್ಕೆ, ಅವಳು ಕೂಡ ನಗುವಿನಲ್ಲಿ ಜೊತೆಯಾದಳು. ಚಂದ್ರ ಮತ್ತಷ್ಟು ಹಿತವಾಗಿ ನಗುತ್ತಿದ್ದ.


ಅವಳೇ ಕೇಳಿದಳು" ಅಂದ ಹಾಗೇ ನಿಮ್ಮ ಹೆಸರು..? "


"ನಾನು ಪಚ್ಚು...ನಿಮ್ಮ ಹೆಸರು? "


" ಸಾಹಿತ್ಯ.... " ಅಂದಳು ನಗುತ್ತಲೇ.


ಸಾಹಿತ್ಯ.. ಆಹಾ ಎಷ್ಟು ಮುದ್ದಾಗಿದೆ ಹೆಸರು ಮನಸ್ಸಿನಲ್ಲಿಯೇ ಅಂದುಕೊಂಡೆ. 


ನಂತರ ಅವಳು ಟಾಟಾ ಬೈ..ಬಾಯ್ ಹೇಳಿ.. ಅಲ್ಲೇ ಪಕ್ಕದಲ್ಲಿದ್ದ ಅವಳ ಮನೆಯ ಕಡೆಗೆ ನಡೆದು ಹೋದಳು. ಮನಸಿಗೆ ಅನಿಸಿತು ಈ ಹುಡುಗಿ ಬರೀಯ ಹುಡುಗಿ ಅಲ್ಲಾ, ಹುಡುಗಾಟ ಇದ್ದರೂ ಇವಳು ಕಾಡುವಂತಹ ಹುಡುಗಿ! 


ನಾನು ಹಾಗೇ ನಡೆದುಕೊಂಡು ರೋಡ್ ಗೆ ಬಂದೆ. ಮೊಬೈಲ್ ನಲ್ಲಿ ಟೈಂ ನೋಡಿದೆ, ರಾತ್ರಿ ಹತ್ತು ಗಂಟೆ. ಕೂಡಲೇ ಪಕ್ಕದ ಮನೆಯ  ಆಂಟಿ ಮಗಳು ಸಾಮಿಪ್ಯ ಳ  ನೆನಪಾಯಿತು. ಅವಳಿಗೇ ಕಾಲ್ ಮಾಡಿ ಹೇಳಿದೆ. ಯಾವುದೇ ಆಟೋ ಸಿಗ್ತಾ ಇಲ್ಲ, ಬೇಗ ನಿನ್ನ ಹೊಸ ಸ್ಕೂಟಿ ಹಿಡ್ಕೊಂಡು ಬಾ ಅಂದೆ.


ಹೇಳಿದ ಕೂಡಲೇ ಸ್ವಲ್ಪ ಹೊತ್ತು ಬಿಟ್ಟುಕೊಂಡು ನಾನಿದ್ದಲ್ಲಿಗೆ  ಶಾರ್ಟ್ಸ್ ಹಾಗೂ ಮೇಲೊಂದು ಟೀ ಶರ್ಟ್ ಹಾಕಿಕೊಂಡು ಸ್ಕೂಟಿಯಲ್ಲಿ ಬಂದಳು ಸಾಮಿಪ್ಯ.


ಸ್ಕೂಟಿಯಲ್ಲಿ ಕೂತುಕೊಂಡೆ. ಸಾಮಿಪ್ಯ ಳ ಸ್ಕೂಟಿ ಹೊರಟಿತು.


"ಇಷ್ಟು ಹೊತ್ತಿಗೆ ಎಲ್ಲಿಗೆ ಸಾಯ್ಲಿಕ್ಕೆ ಹೋಗಿದ್ರಿ..." ಸ್ಕೂಟಿ ಬಿಡುತ್ತಳೇ ಕೇಳಿದಳು ಸಾಮಿಪ್ಯ.


" ಸಾಯ್ಲಿಕ್ಕೆನೇ ಹೋಗಿದ್ದೆ.. ಏನೀಗ.."


" ಸತ್ತಿದ್ದರೆ ಚೆನ್ನಾಗಿತ್ತು.." ಅಂದಳು.


ಮನಸ್ಸಿನಲ್ಲಿಯೇ ಅಂದುಕೊಂಡೆ,ಇವಳಿದ್ದು ಯಾವಾಗಲೂ ಇದ್ದದ್ದೇ.. ಈ ಅಂಡೆ ಪಿರ್ಕಿ ಗೆ ಏನೂ ಗೊತ್ತಾಗಲ್ಲ.. ಸಾಮಿಪ್ಯ ಳ ಸ್ಕೂಟಿ ಮುಂದೆ ಮುಂದೆ ಹೋದಂತೆ.. ನಾನು ಸ್ಕೂಟಿ  ಹಿಂದೆ ಕುಳಿತುಕೊಂಡು ಆಲೋಚಿಸಲು ಶುರು ಮಾಡಿದೆ..


ಅಲ್ಲಾ ಈ ಸಾಹಿತ್ಯ ನನ್ನ ಹಾಗೆಯೇ ಹೆಚ್ಚು ಕಡಿಮೆ ಪಿರ್ಕಿ ಇದ್ದಾಳೆ.. ಇವಳು ನನಗೆ ಕರೆಕ್ಟ್ ಆಗಿ ಸೂಟ್ ಆಗ್ತಾಳೆ ಅಂತ ಅಂದು ಕೊಂಡೆ.


ಅದೇ ಹೊತ್ತಿಗೆ ಕಾಲೇಜಿನಲ್ಲಿ ತುಂಬಾ ಇಷ್ಟ ಆಗಿದ್ದ, ಇನ್ನೂ ಬದುಕಿ ಇದ್ದಾಳೋ ಇಲ್ಲವೋ ಎಂದೇ ಗೊತ್ತಿಲ್ಲದ ಸಂಕೋಚ ಸ್ವಭಾವದ ಆ ಮುಗ್ಧೆ "ಸಾನಿಧ್ಯ" ....ಈ ಸ್ಕೂಟಿ ಬಿಡುವ ಸಾಮಿಪ್ಯಳ ಮಾವನ ಮಗಳು ಮಾತನಾಡುವ ಸುಂದರ ಗಿಣಿ "ಸಾಂಗತ್ಯ" ಕೂಡ ನೆನಪಾಗಿ ಬಿಟ್ಟರು.


ನನಗೆ ನಿಜವಾಗಿಯೂ ಯಾರೂ ಸೂಟ್ ಆಗಬಹುದು.. ಅವಳ, ಇವಳ ಅಥವಾ ಆ ಅವಳ ಅಂತ ಮನಸ್ಸಿನಲ್ಲೇ ಲೆಕ್ಕಚಾರ ಮಾಡುವಾಗ..


"ಮನೆ ಬಂತು ಇಳಿಯಿರಿ.." ಅಂದಳು ಸಾಮಿಪ್ಯ.


ಆಲೋಚನೆ ಗೆ ಬ್ರೇಕ್ ಹಾಕಿ,ನಾನು ನನ್ನ ಮನೆ ಸೇರಿಕೊಂಡೆ. ಅವತ್ತು ಕನಸಿನಲ್ಲೂ  ಕೂಡ ಅವಳಾ.. ಇವಳಾ.. ಅಥವಾ ಆ ಅವಳ ಎನ್ನುವ ಲೆಕ್ಕಾಚಾರ ವೇ ನನ್ನಲ್ಲಿ ಜೋರಾಗಿತ್ತು 😊😴


.....................................................................................



 Ab Pacchu

Moodubidire

Comments

  1. Super story.....ಚಂದಿರನಂತ ಚಂದದ ಹುಡುಗಿ... ಕುಲೆ ಆಗಿರ್ಬಹುದು ಅಂತ ಅಂದ್ಕೊಂಡೆ ಮರ್ರೆ...😃

    ReplyDelete

Post a Comment

Popular posts from this blog

ಗಗನದ ಸೂರ್ಯ

ಒಂದು ಉಗ್ರ ಪ್ರತಿಭಟನೆ

The Priest.!