ಅಮ್ಮ ಹಚ್ಚಿದ ಹಣತೆ..
ದೀಪಾವಳಿ ನಿಜವಾಗಿಯೂ ಬೇರೆಲ್ಲಾ ಹಬ್ಬಗಳಿಗಿಂತಲೂ ಅತಿಯಾದ ಸಂಭ್ರಮ ಸಡಗರ ತನ್ನೊಂದಿಗೆ ಹೊತ್ತು ತರುವ ಹಬ್ಬವೇ ಸರಿ.
ಇದರಲ್ಲಿ ಏನಿಲ್ಲ.ಎಲ್ಲವೂ ಇದೊಂದೇ ಹಬ್ಬದಲ್ಲಿ ಇದೆ.ಬೆಳಕು ಇದೆ,ಬಣ್ಣ ಇದೆ,ಹೂವು ಇದೆ,ಸಿಹಿ ಇದೆ,ಭೂಮಿ ಪೂಜೆ ಇದೆ,ಗೋ ಪೂಜೆ ಇದೆ,ಆಯುಧ ಪೂಜೆ,ಅಂಗಡಿ ಪೂಜೆ,ಲಕ್ಷ್ಮೀ ಪೂಜೆ ಹೀಗೆ ಒಂದೇ ಎರಡೇ.ಅದೊಂದು ಸಂಭ್ರಮದ ಸರಣಿ,ಉಲ್ಲಾಸದ ಉತ್ಸವ,ಮಕ್ಕಳಿಗೆ ಬೆರಗು,ಹಿರಿಯರಿಗೆ ಸಂಪ್ರದಾಯ.
ನರಕ ಚತುರ್ದಶಿಯಿಂದ ಶುರು ಆಗುವ ಹಬ್ಬ ಹೆಚ್ಚು ಕಡಿಮೆ ಒಂದು ವಾರವೂ ಖುಷಿಯ ವಾತಾವರಣವನ್ನೇ ಸುತ್ತೆಲ್ಲಾ ಪಸರಿಸಿ ಬಿಡುತ್ತದೆ.ಪಟಾಕಿ ಪ್ರೀಯ ಮಕ್ಕಳಿಗೆ ಅಂತು ಅದು ತುಳಸಿ ಪೂಜೆಯವರೆಗೂ ಮುಗಿಯದ ಜಾತ್ರೆ.
ಕತ್ತಲೆಯೊಂದು ಹಾಗೇ ತನ್ನ ಚಾದರ ಹೊದ್ದುಕೊಂಡು ಮಲಗಲು ಅನುವಾಗುವಾಗ ಮನೆಯ ಜಗಲಿಯ ಮೂಲೆ ಮೂಲೆಯಲ್ಲೂ ಬೆಳಗುವ ಪುಟ್ಟ ಹಣತೆಗಳು... ಬರೀ ಬೆಳಕಿನ ಪುಂಜಗಳಲ್ಲ,ಅದರಲ್ಲೊಂದು ಏನೋ ಹೊಸ ಹುರುಪಿನ ಸಂತೋಷ, ಹಳೆಯ ನವಿರಾದ ನೆನಪುಗಳು,ಪರಂಪರೆ ಸಂಪ್ರದಾಯದ ಮುಂದುವರಿಕೆ.. ಎಲ್ಲವೂ ಇದೆ.
ದೀಪಾವಳಿಯಲ್ಲಿ ಅತ್ಯಂತ ಖುಷಿ ಕೊಡುವುದು ಅಂದರೆ ಅದು ಹಣತೆ ಹಚ್ಚುವುದು.ಮಣ್ಣಿನ ಹಣತೆಗಳಿಗೆ ಇಷ್ಟಿಷ್ಟೇ ಎಣ್ಣೆ ಹಾಕಿ,ಬತ್ತಿಗಳನ್ನು ಅದರಲ್ಲಿ ಅದ್ದಿ ಸುತ್ತ ಮುತ್ತೆಲ್ಲಾ ಒಂದು ದೀಪಗಳ ಆಹ್ಲಾದಕರ ಲೋಕ,ಮಾಯಾ ಜಗತ್ತು ಸೃಷ್ಟಿ ಮಾಡುವುದರಲ್ಲಿ ಅದೇನೋ ವಿವರಿಸಲಾಗದ ಅದಮ್ಯ ಖಷಿ ಇದೆ.
ಅಮ್ಮ ಹಿಂದಿನ ವರ್ಷ ದೀಪಾವಳಿ ಆದ ನಂತರ ಎಲ್ಲೋ ಒಂದು ಕಡೆ ಹಣತೆಗಳನ್ನು ಜೋಪಾನವಾಗಿ ಜೋಡಿಸಿ ಇಟ್ಟಿರುತ್ತಾಳೆ. ಅವಳೇ ಅವುಗಳ ರಕ್ಷಕಿ. ನಮಗೆಲ್ಲಾ ಅದರ ನೆನಪಾಗುವುದು ಮತ್ತೆ ದೀಪಾವಳಿ ಬಂದಾಗಲೇ.
ದೀಪಾವಳಿ ಬಂದಾಗಲೆಲ್ಲ ಅಮ್ಮ ಮತ್ತೆ ಹಳೆಯ ಹಣತೆಗಳನ್ನು ತೆಗೆಯುತ್ತಾಳೆ. ಅದಕ್ಕೆ ಬೇಕಾದಷ್ಟು ಎಣ್ಣೆ, ಬತ್ತಿ ಕಟ್ಟುಗಳನ್ನು ತನ್ನಿ ಎಂದು ಅವಳದ್ದೊಂದು ಆದೇಶ ಇಂದು ನಿನ್ನೆಯದಲ್ಲ. ಕತ್ತಲೆ ಆವರಿಸಿದಂತೆ ಒಂದೊಂದೇ ಬತ್ತಿಗಳನ್ನು ಅದ್ದಿ ಹಣತೆಗಳನ್ನು ಬೆಳಗುವಾಗ ಅಮ್ಮ ಇದೊಂದು ಮಾತು ಸಹ ಎಂದಿನಂತೆ ಹೇಳಲು ಮರೆಯುವುದೇ ಇಲ್ಲ... ನಲವತ್ತು ಹಣತೆ ಇದೆ, ಮುಂದಿನ ವರ್ಷ ಐವತ್ತು ಆದರೂ ಮಾಡಬೇಕು ಕಣೋ...ಪ್ರತೀ ವರ್ಷವೂ ಅವಳು ಹೇಳಿ ಹೇಳಿಯೇ ಹಣತೆಗಳು ತಮ್ಮ ಸಂಖ್ಯೆಯನ್ನು ವೃದ್ಧಿಸಿಕೊಳ್ಳುವುದೇ ಹೊರತು ನಮ್ಮ ಸ್ವಂತ ಆಸಕ್ತಿಯಿಂದ ಅಲ್ಲ.
ಹಣತೆ ಎಲ್ಲವನ್ನೂ ಹಚ್ಚಿ ಕೆಲವರು ಮನೆಯೊಳಗೆ ಹೋಗಿ ಟಿ.ವಿ ನೋಡುತ್ತಾರೆ, ಮಕ್ಕಳು ಪಟಾಕಿ ಬಿಡುತ್ತಾರೆ, ಕೆಲವರು ಹರಟೆ ಹೊಡೆಯುತ್ತಾರೆ.. ಆದರೆ ಅಮ್ಮ ಎಂಬುವವಳಿಗೆ ಹಣತೆಯಲ್ಲಿರುವ ಎಣ್ಣೆ ವ್ಯರ್ಥವಾಗಿ ಹೋಗುವುದು ಇಷ್ಟವಾಗುವುದಿಲ್ಲ.ಎಣ್ಣೆಯ ಕೊನೆಯ ಹನಿ ಕೂಡ ಖಾಲಿ ಆಗಿ ಬತ್ತಿ ಉರಿದು ಹೋಗುವವರೆಗೂ ಅಮ್ಮ ಒಂದು ಚಿಕ್ಕ ಕಡ್ಡಿ ತೆಗೆದುಕೊಂಡು ಪ್ರತೀ ಹಣತೆಯ ಬತ್ತಿಯನ್ನು ಎಣ್ಣೆಯಲ್ಲಿ ಅದ್ದುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಲೇ ಇರುತ್ತಾಳೆ. ಮಕ್ಕಳನ್ನು ಅದಕ್ಕಾಗಿ ಕರೆಯುತ್ತಾಳೆ ಆದರೂ ಅಂತಹದ್ದೊಂದು ಅಪಾರವಾದ ತಾಳ್ಮೆ ಮಕ್ಕಳಲ್ಲಿ ಎಲ್ಲಿದೆ. ಅವಳೇ ಎಲ್ಲವನ್ನೂ ಖುಷಿ ಖುಷಿಯಿಂದ ಮಾಡುತ್ತಾಳೆ.ಏಕೆಂದರೆ ಅವಳಿಗದು ಇಷ್ಟ.
ನಂತರ ದೀಪಾವಳಿ ಮುಗಿಯುವವರೆಗೂ ಅಮ್ಮ ಮತ್ತು ಹಣತೆಯ ಒಂದು ಸಾಂಗತ್ಯ ಇದೇ ರೀತಿ ಮುಂದುವರಿಯುವುದು. ದೀಪಾವಳಿ ಮುಗಿದ ನಂತರ ಪುನಃ ಅಮ್ಮ ಹಣತೆಗಳನ್ನು ಜೋಪಾನವಾಗಿ ಅಟ್ಟ ಸೇರಿಸುತ್ತಾಳೆ. ಆವಾಗಲೇ ಅವಳಿಗೆ ನೆಮ್ಮದಿಯ ದೀಪಾವಳಿ ಮುಗಿಯುವುದು.
ಕೆಲವೊಂದು ಕಡೆ ಈ ರೀತಿಯ ಶ್ರದ್ಧೆಯ ಕೆಲಸವನ್ನು ಅಪ್ಪ ಮಾಡುತ್ತಾನೆ, ಅಜ್ಜ ಮಾಡುತ್ತಾನೆ, ಅಜ್ಜಿ ಮಾಡುತ್ತಾಳೆ..
ಆದರೆ ಯಾಕೋ ಅಮ್ಮ ಹಚ್ಚಿದ ಹಣತೆಗಳೇ ಎಲ್ಲಕಿಂತ ಹೆಚ್ಚಾಗಿ ನೆನಪಿಗೆ ಬರುವುದು..
ಅವಳು ಮತ್ತು ಹಣತೆಯ ಸಂಬಂಧ ದೀಪಾವಳಿ ಹಬ್ಬದಷ್ಟೇ ಸುಂದರವಾದದ್ದು,ಅನರ್ಘ್ಯವಾದದ್ದು..
ಕೆಲವರಿಗೆ ಅಮ್ಮ ಇರುವುದಿಲ್ಲ.. ಆದರೆ ಯಾರೇ ಇರಲಿ ಹಣತೆ ಬೆಳಗುವಾಗ ಅವರಿಗೊಮ್ಮೆ ಅಮ್ಮ ಎಂಬುವವಳು ನೆನಪಾಗದೇ ಇರುವುದೇ ಇಲ್ಲ..
ದೀಪಾವಳಿಯ ನರಕ ಚತುರ್ದಶಿಗೆ ಮೈಗೆಲ್ಲಾ ಎಣ್ಣೆ ತಿಕ್ಕಿ ಸ್ನಾನ ಮಾಡಿಸುವವಳು ಅಮ್ಮ.. ಗೋ ಪೂಜೆಗೆ ಹಸುಗಳಿಗೆ ಚಂದವಾಗಿ ಅಲಂಕಾರ ಮಾಡಿ ಅವುಗಳಿಗೆ ಕಡಬು ತಿನ್ನಿಸುವವಳು ಕೂಡ ಅಮ್ಮ..ಬಲೀಂದ್ರ,ತುಳಸಿ ಪೂಜೆಯ ಪ್ಲವರ್ ಡೆಕೋಷರನ್ ಕೂಡ ಅವಳದ್ದೇ..ದಿನಕ್ಕೊಂದು ಕಡಬು, ದೋಸೆ,ಸಿಹಿತಿಂಡಿ ಎಲ್ಲವೂ ಅವಳದ್ದೇ ತಯಾರಿ,ರಾತ್ರಿಯ ಹಣತೆಯ ತುಂಬೆಲ್ಲಾ ಇರುವವಳು ಕೂಡ ಎಂದೆಂದಿಗೂ ಅಮ್ಮನೇ..
ಎಲ್ಲಾ ಹಬ್ಬಗಳು ಅಮ್ಮ ಎಂಬುವವಳು ಇರದಿದ್ದರೆ ಅದು ಸಂಪೂರ್ಣವೂ ಆಗುವುದಿಲ್ಲ,ಪರಿಪೂರ್ಣವೂ ಆಗುವುದಿಲ್ಲ..ಆದರೆ ದೀಪಾವಳಿ ಎಂಬ ಹಬ್ಬವು ಎಷ್ಟು ದೀಪಗಳ ಹಬ್ಬವೋ ಅಷ್ಟೇ ಅಮ್ಮನ ಎಂಬುವವಳ ದಿವ್ಯ ಸಾನಿಧ್ಯದ ಹಬ್ಬ...
ಅಮ್ಮ ಉರಿಸಿದ ಹಣತೆ ಎಲ್ಲರ ಮನೆಯಲ್ಲೂ ಸುಖವಾಗಿ ಉರಿಯಲಿ... 😊
ab pacchu
moodubidire
Pc-pacchupatagalu

Comments
Post a Comment