ಅವಳ ಜಡೆಯಲ್ಲಿ ಮತ್ತದೇ ಗೋರಂಟಿ!
ನಾನು ಆಗ ಚಿಕ್ಕವನಿದ್ದೆ.
ಅವಳೂ ಚಿಕ್ಕವಳಿದ್ದಳು.
ಹೆಂಚಿನ ಸೂರಿನ ಆ ಶಾಲೆ ದೊಡ್ಡದಿತ್ತು.ತರಗತಿಯಲ್ಲಿ ಹೆಚ್ಚುಕಡಿಮೆ ನಲ್ವತ್ತು ಐವತ್ತು ಮಕ್ಕಳು.
ನಾವೆಲ್ಲರೂ ನೀಲಿ ಬಿಳಿಯ ಮಕ್ಕಳು.ಅಂಗಿ ಚಡ್ಡಿಯ ಹುಡುಗರು,ಅಂಗಿ ಫ್ರಾಕಿನ ಹುಡುಗಿಯರು.
ಅವಳದ್ದು ಎಡ ಭಾಗದ ಬೆಂಚು.ನನ್ನದು ಅವಳ ಪಕ್ಕದ ಬಲ ಭಾಗದ ಬೆಂಚು.
ತಿರುಗಿ ತಿರುಗಿ ಅವಳನ್ನೇ ನೋಡುವ ಮನಸ್ಸಿತ್ತು,ಆದರೆ ಧೈರ್ಯವಿರಲಿಲ್ಲ.
ಆದರೆ ಅವಳು ಹಾಗಲ್ಲ.ಎಲ್ಲವನ್ನೂ ಎಲ್ಲರನ್ನೂ ನೋಡುತ್ತಿದ್ದಳು.ಏಕೆಂದರೆ ಅವಳಿಗೆ ಭಯವಿರಲಿಲ್ಲ.
ನಾನು ಗೋಧಿ ಮೈ ಬಣ್ಣ,ಅಸಾಧಾರಣ ಮೈಕಟ್ಟು ಹೊಂದಿರಲಿಲ್ಲ.
ಕಡುಗಪ್ಪುಗಿಂತ ಸ್ವಲ್ಪ ಕಡಿಮೆ ಎನ್ನಬಹುದಾದ ಎಣ್ಣೆಗಪ್ಪು, ತಿಳಿಕಪ್ಪು ಬಣ್ಣ,ಸಾಧಾರಣ ಮೈಕಟ್ಟು ಹಾಗೂ ಅವಳ ಬಗ್ಗೆ ತುಸು ಜಾಸ್ತಿಯೇ ಎನ್ನಬಹುದಾದ ಅಸಾಧಾರಣ ಕೂತುಹಲ ಹೊಂದಿದ್ದವನು.
ಅವಳಾದರೂ ಹೇಗಿದ್ದಳು?
ತರಗತಿಯಲ್ಲಿ ಬರೀ ಬಿಳಿ ಮಾತ್ರ ಅವಳಲ್ಲ..
ಚಂದ ಅಂದರೂ ಅವಳೇ,ಅಂದ ಅಂದರೂ ಅವಳೇ..
ಗೋಧಿ ಬಣ್ಣ,ಸಾಧಾರಣ ಮೈಕಟ್ಟಿನ ಅವಳ ತಲೆಗೊಂದು ಕಪ್ಪು ಬಣ್ಣದ ಜುಟ್ಟು. ಕೆಲವೊಮ್ಮೆ ಎರಡು,ಇನ್ನು ಕೆಲವೊಮ್ಮೆ ಎರಡೂ ಜುಟ್ಟನ್ನು ಒಟ್ಟು ಸೇರಿಸಿದರ ನೀಲವೇಣಿ ಇಲ್ಲವೇ ನಾಗವೇಣಿ ಜಡೆ.ಜಡೆಯ ಮೇಲೆ ಸದಾ ಒಂದು ಗೋರಂಟಿಯೋ..ಮುತ್ತು ಮಲ್ಲಿಗೆಯೋ.. ಅಬ್ಬಲಿಗೆಯ ಅಬ್ಬರವೋ ಎಂದೂ ಅವಳು ಕಡಿಮೆ ಮಾಡಿಕೊಂಡವಳಲ್ಲ.
ಲಂಬಕೋನ ಪ್ರಮೇಯ ಹಾಗೂ ಇನ್ನಿತರ ಗಣಿತದ ಪ್ರಮೇಯಗಳನ್ನು,ವಿಜ್ಞಾನದ ಸೂತ್ರಗಳನ್ನು ಕಷ್ಟಪಟ್ಟು ಬಾಯಿಪಾಠ ಹೊಡೆದಾದರೂ ಪರೀಕ್ಷೆಯಲ್ಲಿ ಉತ್ತರಿಸಬಹುದಿತ್ತು..ಆದರೆ ಪ್ರಾರ್ಥಮಿಕ ತರಗತಿಯಲೆಲ್ಲಾ ಪ್ರೀತಿ ಹುಟ್ಟಲು ಸಾಧ್ಯವೇ.. ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟವಾಗಿತ್ತು.
ಆದರೂ ಏನೋ ಒಂದು ಸೆಳೆತವಿತ್ತು..ದಿನಾ ಶಾಲೆಗೆ ಹೋಗಲು ಖುಷಿ ಆಗುತ್ತಿತ್ತು.
ಒಂದು ದಿನ ನನ್ನ ಗೆಳೆಯನಿಗೊಬ್ಬನಿಗೆ ನನ್ನ ವಿಷಯ ತಿಳಿಯಿತು.
ನಾನು ಬಾಯಿಬಿಟ್ಟು ಹೇಳಿರಲಿಲ್ಲ. ಅವನು ದಿನ ಬಾಯಿಬಿಟ್ಟುಕೊಂಡು ನನ್ನನ್ನು ನೋಡುತ್ತಿದ್ದ..ಹಾಗೇ ಗಮನಿಸುತ್ತಿದ್ದ.. ಮನಸ್ಸಿನಲ್ಲಿಯೇ ನನ್ನ ಮನಸ್ಸನ್ನು ಓದಿ ಬಿಟ್ಟಿದ್ದ. ಶಾಲೆಯಲ್ಲೂ ಅದೇ ರೀತಿ ಚೆನ್ನಾಗಿ ಓದುತ್ತಿದ್ದರೆ ಅವನು ಯಾವತ್ತೂ ಗಣಿತದಲ್ಲಿ,ವಿಜ್ಞಾನದಲ್ಲಿ ಅನುತ್ತೀರ್ಣನಾಗುತ್ತಿರಲಿಲ್ಲ.
ಒಂದು ದಿನ ಶಾಲೆಯಲ್ಲಿ ಬಿಸಿ ಹಾಲು ಕೊಡುತ್ತಿದ್ದರು.ನಾನು ನನ್ನ ಲೋಟವನ್ನು ಎರಡು ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡು ಬಿಸಿ ಹಾಲಿಗಾಗಿ ಸರತಿ ಸಾಲಿನಲ್ಲಿ ನಿಂತಿದ್ದೆ.
ನನ್ನ ಹಿಂದೆ ನನ್ನ ಮನಸ್ಸು ಓದುವ ಗೆಳೆಯನಿದ್ದರೆ.. ನನ್ನ ಮುಂದೆ ಮನಸ್ಸು ಕದ್ದ ಗೋರಂಟಿ ಹೂವು ಮೂಡಿದ ಅವಳು ಇದ್ದಳು. ಆ ದಿನವೂ ಅವಳ ಎರಡೂ ಜಡೆಯಲ್ಲಿ ಇದ್ದದ್ದು ಬರೀ ನೀಲೀ ಗೋರಂಟಿಯೇ.
ನೋಡು ನೋಡುತ್ತಿದ್ದಂತೆ ನನ್ನ ಗೆಳೆಯ ಅವಳ ಒಂದು ಜಡೆ ಮೆಲ್ಲನೆ ಎಳೆದು,ಏನೂ ಗೊತ್ತಿಲ್ಲದವನಂತೆ ಸಾಲಿನಲ್ಲಿ ಅವನ ಹಿಂದೆ ನಿಂತಿದ್ದವರೊಂದಿಗೆ ಮಾತನಾಡಲು ಶುರು ಮಾಡಿಕೊಂಡ.
ಹುಡುಗಿ ತಿರುಗಿದಳು.
ನನ್ನನ್ನೇ ನೋಡಿದಳು.
ಅವಳ ಕಣ್ಣುಗಳನ್ನು ತೀರಾ ಹತ್ತಿರದಿಂದ ನೇರವಾಗಿ ನಾನು ನೋಡಿದ್ದು ಅವತ್ತೇ. ಬೇರೆ ದಿನ ಕದ್ದು ಮುಚ್ಚಿ ನೋಡುತ್ತಿದ್ದೆ.
ಅವಳ ಕಣ್ಣುಗಳಲ್ಲಿ.. ನನ್ನ ಜಡೆಯನ್ನು ಎಳೆದವರು ಯಾರು ಎಂಬ ಪ್ರಶ್ನೆ ಇರಲಿಲ್ಲ. ಏಕೆಂದರೆ ಅವಳಿಗೆ ಸ್ಪಷ್ಟತೆ ಇತ್ತು.
ಬಾಯಿ ಬಿಟ್ಟು ಅವಳೇ ಕೇಳಿದಳು..ಹೌದು ಮೊದಲ ಬಾರಿಗೆ ನನ್ನಲ್ಲಿ ಮಾತಾಡಿದ್ದಳು..
- ಯಾಕೆ ನನ್ನ ಜಡೆ ಎಳೆದೆ?
ನನಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ.
ಚಡಪಡಿಸಿದೆ,ತಡವರಿಸಿದೆ,ಮಿಡುಕಾಡಿದೆ..
ನಾನಲ್ಲ.. ನನ್ನ ಗೆಳೆಯ ಅದು.. ಎಂದು ಹೇಳಬಹುದಿತ್ತು.ಆದರೆ ನಾನು ಹೇಳಲಿಲ್ಲ.
ಅದು... ಅದು... ಗೋ.. ಗೋರಂಟಿ, ನಿನ್ನ ಜಡೆಯ ನೀಲಿ ಗೋರಂಟಿ ಇಷ್ಟವಾಯಿತು..ಅದನ್ನು ಮುಟ್ಟಬೇಕು ಎಂದು ಅನಿಸಿತು. ಅದಕ್ಕೆ ಹಾಗೇ ಕೈ ಹಾಕಿದೆ, ಆದರೆ ಹಿಂದಿನಿಂದ ಯಾರೋ ದೂಡಿದ್ದರಿಂದ ನಿನ್ನ ಜಡೆ ಎಳೆದಂತಾಯಿತು.. ಕ್ಷಮಿಸು.. ಅಂದೆ.
ಅವಳು ನನ್ನನ್ನೇ ನೋಡಿದಳು. ನೋಡಿ ಹಾಗೇ ನಕ್ಕಳು.. ಅರಳು ಹುರಿದಂತೆ.
ಅವಳು ನಕ್ಕಾಗ ನನ್ನೊಳಗೊಂದು ಹೂ ನನಗೆ ಗೊತ್ತಿಲದೆ ಹಾಗೇ ಅರಳಿ ಬಿಟ್ಟಿತು,ಕ್ಷಮಿಸಿ.... ಗೋರಂಟಿ ಹೂವೇ ಅರಳಿತ್ತು.
ಅವಳೇ ಮತ್ತೆ ಕೇಳಿದಳು.. ಗೋರಂಟಿ ಅಂದರೆ ಅಷ್ಟೊಂದು ಇಷ್ಟವೇ?
ಹೌದು ಮನೆಯಲ್ಲಿ ಇದೆ.ಅಪ್ಪನಿಗೆ ತುಂಬಾ ಇಷ್ಟ.ದೇವರಿಗೆ ದಿನಾಲೂ ಇಡುತ್ತಾರೆ.ಬಿಳಿ ಮತ್ತು ಹಳದಿ ಗೋರಂಟಿ ಇದೆ.. ಆದರೆ ನೀಲಿ ಮನೆಯಲ್ಲಿ ಇಲ್ಲ.. ಅದಕ್ಕಾಗಿ ನೋಡಲು ಎಂದು ಕೈ ಹಾಕಿದೆ..ಎಂದೆ.
ಮನೆಯಲ್ಲಿ ನೀಲಿ ಗೋರಂಟಿಯ ಹೂವಿನ ತುಂಬಾ ಗಿಡಗಳಿವೆ.. ನಿನಗೆ ಗಿಡ ಬೇಕೆ.. ಅಥವಾ ದಿನಾ ಹೂ ಬೇಕೆ ? ಅವಳೇ ಕೇಳಿದಳು.
ಗಿಡ ಬೇಕು ಎಂದು ಹೇಳಿದರೆ ಅದು ಒಂದು ದಿನದ ಮಾರಾಟ.. ಅದೇ ದಿನಾ ಹೂ ಬೇಕು ಎಂದು ಹೇಳಿದರೆ ಅದು ದಿನ ನಿತ್ಯದ ವ್ಯಾಪಾರ ಎಂದು ನನಗನಿಸಿತು.
ದಿನಾ ಹೂ ಬೇಕೆಂದರೆ ದಿನಾಲೂ ಗೋರಂಟಿ ತಂದುಕೊಡುವೆಯಾ.. ಕೇಳಿದೆ.
ನೀನು ಬೇಕು ಎಂದು ಬಾಯಿಬಿಟ್ಟು ಹೇಳಿದರೆ.. ಶಾಲೆಗೆ ಬರುವ ದಾರಿಯಲ್ಲಿ, ನಿನ್ನ ಮನೆಯ ಗೇಟಿನಲ್ಲಿ ಹೂ ಸಿಕ್ಕಿಸಿ ಬರುವೆ ಎಂದಳು.
ನಿನಗೆ ನನ್ನ ಮನೆ ಗೊತ್ತೇ? ಕೇಳಿದೆ..
ಹಾಗೇ ನಕ್ಕಳು. ಗೊತ್ತು ಎಂದು ಬಾಯಿ ಬಿಟ್ಟು ಹೇಳದೆ ತಲೆ ಮೇಲೆ ಕೆಳಗೆ ಅಲ್ಲಾಡಿಸಿ ಗೊತ್ತಿದೆ ಅಂದಳು.
ಹಾಗಾದರೆ ಅವಳು ಕೂಡ ನನ್ನನ್ನು ನನ್ನಂತೆಯೇ ಗಮನಿಸಿದ್ದಳೇ?!
ದಿನಾ ಹೂ ಬೇಕು.. ಅಂದೆ.
ಆಯಿತು.. ಕೊಯ್ಯಲು ಸಿಕ್ಕಷ್ಟು ಕೈಗೆ ಬಂದಷ್ಟು ನೀಲಿ ಗೋರಂಟಿ ನಿಮ್ಮ ಮನೆಯ ಗೇಟ್ ತುದಿಯಲ್ಲಿ ದಿನಾ ಇರುವುದು ಅಂದಳು.
ನಂತರ ಮುಂದೆ ತಿರುಗಿದಳು.
ಹುಡುಗಿಯೊಬ್ಬಳ ಬಳಿ ಮಾತಾಡಿದ್ದು ಅದೇ ಮೊದಲು.
ವೀಣೆ ಎಂದೂ ನೋಡಿರಲಿಲ್ಲ, ಮೀಟಿಯೂ ಇರಲಿಲ್ಲ.. ಮೊದಲ ಬಾರಿಗೆ ಜೀವವೀಣೆಯೇ ಮೀಟಿದಂತಾಗಿತ್ತು.
ಏನೋ ಧೈರ್ಯ ಬಂತು.
ಗೆಳೆಯ ಮಾಡಿದ ಕೆಲಸ ನಾನು ಒಮ್ಮೆ ಏಕೆ ಮಾಡಬಾರದು ಎಂದು ಅನಿಸಿತು..
ಗಂಟಲಿನಲ್ಲಿ ಕಿಚ್ ಕಿಚ್ ಸದ್ದು ಮಾಡಿದೆ.
ಅವಳು ಮತ್ತೆ ಹಿಂದೆ ತಿರುಗಿ ಕಣ್ಣಲ್ಲೇ ಏನು ಎಂದು ಕೇಳಿದಳು.
ಅದು.. ಅದು..ನಾನು ಮತ್ತೊಮ್ಮೆ ನಿನ್ನದೊಂದು ಜಡೆಯನ್ನು ಎಳೆಯ ಬಹುದೇ.. ಎಂದು ಕೇಳಿದೆ.
ಇದ್ದ ಬದ್ದ ನನ್ನ ಎಲ್ಲಾ ಧೈರ್ಯ ಒಟ್ಟು ಹಾಕಿ,ಆ ಪ್ರಶ್ನೆ ಕೇಳಿ ಹಾಗೇ ತಲೆತಗ್ಗಿಸಿ ಅವಳೆದುರು ನಿಂತುಬಿಟ್ಟೆ.
ಅವಳು ಬಹುಶಃ ಈಗಲೂ ನನ್ನನ್ನೇ ಮೇಲೆ ಕೆಳಗೆ ಹಾಗೇ ನೋಡುತ್ತಿರಬಹುದು.. ಕೋಪದಿಂದ.
ಆದರೆ ತಲೆತಗ್ಗಿಸಿ ನಿಂತಿದ್ದ ನನಗದು ಕಾಣುತ್ತಿಲ್ಲ ಎಂದು ನಾನಂದುಕೊಂಡೆ.
ಅವಳು ಹತ್ತಿರ ಬಂದಳು.
ನನ್ನ ಕಣ್ಣುಗಳು ಹತ್ತಿರ ಬಂದ ಅವಳ ಜೋಡಿ ಕಾಲುಗಳೆರಡನ್ನೇ ನೋಡ ತೊಡಗಿದವು.
ತನ್ನ ಬೆರಳಿನಿಂದ ಹಾಗೇ ನನ್ನ ಗಲ್ಲ ಅವಳು ಮೇಲೆತ್ತಿದ್ದಳು.
ಅನಿವಾರ್ಯವಾಗಿ ತಲೆ ಮೇಲೆತ್ತಲೇ ಬೇಕಾದ ಪರಿಸ್ಥಿತಿ.
ಅವಳ ಕಣ್ಣುಗಳಲ್ಲಿ ಅದೆಂತಹ ಧೈರ್ಯ. ಆದರೆ ನನಗೆ ಯಾಕೆ ಇಲ್ಲ?
ಮತ್ತೊಮ್ಮೆ ಅವಳ ಕಣ್ಣುಗಳಲ್ಲಿ ಪ್ರಶ್ನೆಗಳಿಗಾಗಿ ಹುಡುಕಾಡಿದೆ.. ತಡಕಾಡಿದೆ.
ಅವಳ ಕಣ್ಣುಗಳಲ್ಲಿ ಆಳವಾಗಿ ಇಳಿದು ನೋಡಿದೆ.. ನಿನಗೆ ಅಷ್ಟೊಂದು ಧೈರ್ಯ ಇದೆಯೇ.. ಎಂಬ ಪ್ರಶ್ನೆ ಅವಳ ಕಣ್ಣುಗಳೆರಡರಲ್ಲಿ ಎದ್ದು ಕಾಣುತ್ತಿತ್ತು.
ಏನೂ ಹೇಳದೆ ಸುಮ್ಮನೆ ನಿಂತೆ.
ಅವಳೇ ಕೇಳಿದಳು.. ಆದರೆ ಅದು ಅವಳ ಕಣ್ಣಲ್ಲಿ ನಾ ಕಂಡ ಪ್ರಶ್ನೆಯಾಗಿರಲಿಲ್ಲ.
- ಬರೀ ಒಂದೇ ಏಕೆ... ಎರಡೂ ಜಡೆಯನ್ನು ಎಳೆದು ಕೇಳುವುದಿಲ್ಲವೇ..ಗೋರಂಟಿ ಬೇಕೆಂದು.. ಎಂದು ಹೇಳಿ ನಾಚಿ ನಕ್ಕಳು.
ಹಾಗೇ ಮುಂದೆ ತಿರುಗಿ ನಾನು ಜಡೆ ಎಳೆಯಲಿ ಎಂದೇ ಕಾದು ನಿಂತಳು.
ಹಿಂದಿನ ಗೆಳೆಯ ಕೈಯಲ್ಲಿ ಕುಟ್ಟಿದ. ನೀನು ಎಳೆಯುತ್ತಿಯೋ.. ಅಥವಾ ಮತ್ತೊಮ್ಮೆ ನಾನೇ..?
ಅವನಿಗೆ ಬೇಡ.. ಬೇಡ.. ಎಂದು ಹೇಳಿದವನೇ.. ನನ್ನೆದುರು ಹಾಲಿಗಾಗಿ ಲೋಟ ಹಿಡಿದು, ಎರಡೂ ಜಡೆಯಲ್ಲಿ ಗೋರಂಟಿ ಮುಡಿದು... ನಿಂತಿದ್ದ ಅವಳ ಆ ಎರಡೂ ಜಡೆಯನ್ನು ಹಾಗೇ ಮೆಲುವಾಗಿ ಎಳೆದು ಬಿಟ್ಟೆ.
ಅವಳು ನಕ್ಕಳು...ಗೋರಂಟಿ ತರುವೆನು ಎಂದು ಕಣ್ಣಲ್ಲಿಯೇ ಹೇಳಿ ಬಿಟ್ಟಳು.
ನಂತರ ಪ್ರತೀ ದಿನ ಗೋರಂಟಿ ಹೂವನ್ನು ನಮ್ಮ ಮನೆಯ ಗೇಟಿನಲ್ಲಿ ಸಿಕ್ಕಿಸಿ ಹೋಗುತ್ತಿದ್ದಳು. ತರಗತಿಯಲ್ಲಿ ತಿರುಗಿ ತಿರುಗಿ ನನ್ನನ್ನೇ ನೋಡುತ್ತಿದ್ದಳು. ಹಾಲಿಗಾಗಿ ಸಾಲಿನಲ್ಲಿ ನಿಂತಾಗ ಅವಳು ಜಡೆ ಎಳೆಯುವ ಹುಡುಗನಿಗಾಗಿ ಹುಡುಕಾಡುತ್ತಿದ್ದಳು... ತಡಕಾಡುತ್ತಿದ್ದಳು.
ಅವಳ ಹಿಂದೆಯೇ ಇರುತ್ತಿದ್ದೆ ನಾನು.ಆದರೆ ಮಾತಾಡುವ ಧೈರ್ಯವೂ ನನ್ನಲ್ಲಿ ಇರಲಿಲ್ಲ.ಆಮೇಲೆ ಅವಳ ಜಡೆಯನ್ನು ನಾನು ಎಳೆಯಲೂ ಇಲ್ಲ.ಆದರೆ ನೀಲಿ ಗೋರಂಟಿ ಪ್ರತೀ ದಿನ ಗೇಟಿನಲ್ಲಿ ಸಿಕ್ಕಿಸಿ ಹೋಗುತ್ತಿದ್ದಳು ಅವಳು.
ಆಮೇಲೆ ಶಾಲೆಗೂ ಅವಳು ಬರೀ ನೀಲಿ ಗೋರಂಟಿಯನ್ನೇ ಮುಡಿದು ಬರುತ್ತಿದ್ದಳು.ಅಬ್ಬಲಿಗೆ ಮತ್ತು ಮುತ್ತುಮಲ್ಲಿಗೆಯನ್ನು ಮತ್ತೆ ನಾನೆಂದೂ ಅವಳ ಜಡೆಯಲ್ಲಿ ನೋಡಲೇ ಇಲ್ಲ.
ಶಾಲೆ ಮುಗಿಯಿತು.
ನಾನು ಬೇರೆ ಹೈಸ್ಕೂಲ್, ಅವಳು ಬೇರೆ ಹೈಸ್ಕೂಲ್.
ನಂತರ ನನಗೆ ಅವಳು ಸಿಗಲೇ ಇಲ್ಲ.
ಹಾಗೇ ಕಾಲೇಜು ಮುಗಿಯಿತು,ಪದವಿ ಮುಗಿಯಿತು.. ಇಲ್ಲ ಅವಳು ಸಿಗಲೇ ಇಲ್ಲ.
ಒಂದು ದಿನ ಬಸ್ಸಿಗಾಗಿ ಬಸ್ ನಿಲ್ದಾಣದಲ್ಲಿ ನಿಂತಿದ್ದೆ.
ಗಂಡನೊಡನೆ ಕಂಕುಳದಲ್ಲೊಂದು ಮಗು ಹಿಡಿದುಕೊಂಡು ಹೋಗುತ್ತಿದ್ದಳು.
ಹೌದು ಅವಳೇ..!
ದೂರದಿಂದಲೇ ನನ್ನನು ನೋಡಿದಳು.
ನನ್ನ ಗುರುತು ಹಿಡಿದಳು..
ನೋಡಿ ನಕ್ಕಳು..
ನಾನೂ ಪ್ರಯತ್ನ ಪೂರ್ವಕವಾಗಿ ನಕ್ಕೆ.
ಆಮೇಲೆ ಹಾಗೇ ಅಲ್ಲಿಂದ ನಡೆದು ಹೋದಳು.
ನಡೆದು ಹೋಗುತ್ತಿದ್ದ ಅವಳನ್ನೇ ನೋಡಿದೆ.
ಈಗ ಅವಳಿಗೆ ಎರಡು ಜಡೆಯಿಲ್ಲ.
ಒಂದೇ ಉದ್ದದ ಜಡೆ ಇದೆ.
ಆದರೆ ಜಡೆ ಮೇಲೆ ನೀಲಿ ಗೋರಂಟಿ ಇನ್ನೂ ಇದೆ!
.....................................................................................
#ಇಷ್ಟೇ_ಕಥೆ..
ab pacchu
moodubidire
ಸೂಪರ್ ಸೂಪರ್........ ಪಚಣ್ಣ ನಿಮ್ಮ ಬರಹ ಬಾರಿ ಇಷ್ಟ ಆಯಿತು........ ನಿಮ್ಮ ಎರಡೂ ಕಿವಿ ನಾನು ಹಿಡಿಯಬೇಕು ಅನಿಸಿತು 😄😄😄😄
ReplyDeleteಮಸ್ತ್...😍♥️
ReplyDeleteನೀಲಿ ಶರ್ಟ್ ಹುಡುಗನ ನೀಲಿ ಗೋರಂಟಿಯ ಎಳೆಯ ಪ್ರೇಮ...👌👌👌