ಒಂದೊಳ್ಳೆಯ ಮಜ್ಜಿಗೆಗೆ ಮೂರ್ನಾಲ್ಕು ಜೀರಿಗೆ ಮೆಣಸು
ಚಿಕ್ಕಂದಿನಿಂದಲೂ ಮಜ್ಜಿಗೆ ಅಂದರೆ ಅದೆನೋ ಬಹಳ ಪ್ರೀತಿ.ಅದರಲ್ಲೂ ಮಜ್ಜಿಗೆ ಖಡಕ್ ಆಗಿದ್ದರೆ ಒಂದು ಏಕೆ ಎರಡು ಮೂರು ಗ್ಲಾಸ್ ಆದರೂ ಒಪ್ಪಿಗೆ ಬೇಡದೆ ಹಾಗೆ ಹೊಟ್ಟೆಗೆ ಇಳಿದು ಒಡಲು ಸೇರಿಬಿಡುತ್ತದೆ.ಬಾಯಾರಿದಾಗ ಯಾವ ಕೋಲ್ಡ್ ಡ್ರಿಂಕ್ ಕೂಡ ಮಜ್ಜಿಗೆಯಷ್ಟು ಹಿತವಲ್ಲ.
ಅಮ್ಮ ಮನೆಯಲ್ಲಿ ಶ್ರದ್ಧೆಯಿಂದ ಮೊಸರು ಕಡೆದು,ಅದರ ಮೇಲಿನ ಬೆಣ್ಣೆಯನ್ನು ತೆಗೆದು ಕೊನೆಯಲ್ಲಿ ಮಜ್ಜಿಗೆ ಮಾಡಿ ಅದನ್ನು ಒಂದು ದೊಡ್ಡ ಬಾಲ್ದಿಯಲ್ಲಿ ಹಾಕಿ ಇಡುತ್ತಿದ್ದಳು.ಅದರಲ್ಲಿ ಎರಡು ಪದಾರ್ಥವನ್ನು ಅವಳು ತಪ್ಪದೇ ಸೇರಿಸುವಳು ಅವಳು.ಒಂದು ರುಚಿಗೆ ತಕ್ಕಷ್ಟು ಉಪ್ಪು ಜೊತೆಗೆ ಸ್ವಲ್ಪ ಹಿಂಗು.. ಆ ಮತ್ತೊಂದೇ ನಾಲ್ಕೈದು ಬಲು ಚೂಟಿ ಜೀರಿಗೆ ಮೆಣಸು.
ಜೀರಿಗೆ ಮೆಣಸು ಅಂದರೆ ಅದೇ ಗಾಂಧಾರಿ ಮೆಣಸು ಇಲ್ಲವೇ Bird's Eye Chilli.ಅದು ಮಜ್ಜಿಗೆಗೆ ಬಿದ್ದರೆ ಅದರ ರುಚಿಯೇ ಬೇರೆ. ಮಜ್ಜಿಗೆ ಮಾತ್ರವಲ್ಲ ಗಟ್ಟಿ ಮೊಸರಿಗೆ ಸ್ವಲ್ಪ ಕಲ್ಲು ಉಪ್ಪು ಹಾಕಿಕೊಂಡು ಅದರ ಮೇಲೆ ಜಜ್ಜಿದ ನಾಲ್ಕೈದು ಈ ಜೀರಿಗೆ ಮೆಣಸು ಹಾಕಿಕೊಂಡು ಊಟ ಮಾಡಿ ಬಿಟ್ಟರೆ ಬೇರೆ ಯಾವುದೂ ಬೇಕು ಎನಿಸುವುದಿಲ್ಲ...ಆ ಕ್ಷಣಕ್ಕೆ ಅದೇ ಸ್ವರ್ಗ.ಬಾಯಿ ಚಪ್ಪರಿಸುವಂತೆ ಮಾಡಿದರೂ ಕೈ ಮತ್ತು ಬಾಯಿಯನ್ನು ಖಾರ ಖಾರವನ್ನಾಗಿ ಮಾಡಿ ಒಂದು ದೊಡ್ಡ ಚೊಂಬು ನೀರು ಕುಡಿಸಿಯೇ ಎದ್ದೇಳಿಸುವುದು ಈ ಜೀರಿಗೆ ಮೆಣಸು,ಅಷ್ಟೊಂದು ಉರಿ ಖಾರ.ಆದರೂ ಜೀರಿಗೆ ಮೆಣಸಿನ ಪ್ರೀತಿ ಅದರದ್ದೊಂದು ಧ್ಯಾನ ನನ್ನಲ್ಲಿ ಯಾವತ್ತೂ ಕಮ್ಮಿ ಆಗಿದ್ದೇ ಇಲ್ಲ.
ಪ್ರೈಮರಿ ಸ್ಕೂಲ್ ನಲ್ಲಿ ಸ್ಟಾಫ್ ರೂಮ್ ಪಕ್ಕವೇ ಒಂದು ದೊಡ್ದ ಜೀರಿಗೆ ಮೆಣಸಿನ ಗಿಡ ಇತ್ತು. ಮನೆಯಿಂದ ಮೊಸರು ತೆಗೆದುಕೊಂಡು ಹೋದರೆ ನನ್ನ ಮಧ್ಯಾಹ್ನದ ಊಟದ ಅತೀ ದೊಡ್ಡ ಸಖ ಅಂದರೆ ಅದು ಆ ಗಿಡವೇ. ಮಧ್ಯಾಹ್ನ ಊಟಕ್ಕೆ ಬೆಲ್ ಹೊಡೆದ ಕೂಡಲೇ ಹಾಗೇ ಆ ಗಿಡದ ಬಳಿ ಹೋಗಿ ನಾಲ್ಕೈದು ಮೆಣಸು ಕಿತ್ತುಕೊಂಡು ಬಂದು ಅದನ್ನು ಜಜ್ಜಿ ಬುತ್ತಿಯಲ್ಲಿರುವ ಮೊಸರು ಹಾಗೂ ಕುಚಲಕ್ಕಿ ಅನ್ನದೊಂದಿಗೆ ಹಾಗೇ ಕಲಸಿಕೊಂಡು ತಿನ್ನುವಾಗ,ನನ್ನ ಗೆಳೆಯರು ಬಾಯಿ ಬಿಟ್ಟು ಕೊಂಡು ನನ್ನನ್ನೇ ಕಣ್ಣರಳಿಸಿ ನೋಡಿ,ನನ್ನ ಕಣ್ಣಿನಲ್ಲಿ ನೀರು ಬರದಿದ್ದರೂ ಅವರ ಕಣ್ಣಲ್ಲಿ ನೀರು ಬಂದಂತೆ ಮಾಡುತ್ತಿದ್ದರು.
ಚಿಕ್ಕಂದಿನಿಂದಲೂ ನನಗೆರಡು ಅಭ್ಯಾಸ. ಗದ್ದೆಯಲ್ಲಿ ನಡೆದು ಕೊಂಡು ಹೋಗುವಾಗ ಅಲ್ಲಿ ದನ ಸೆಗಣಿ ಹಾಕಿ ಅದು ಒಣಗಿ ಅದರಲ್ಲೊಂದು ಮುಳ್ಳುಸೌತೆಯೋ ಇಲ್ಲ ಮಂಗಳೂರು ಸೌತೆ, ಕೆಂಬುಡೆ(ಸಿಹಿಗುಂಬಳ),ಕರ್ಕುಂಬುಡ(ಬೂದುಗುಂಬಳ ಕಾಯಿ), ಟೊಮೆಟೊ ಗಿಡ ಹುಟ್ಟಿದ್ದರೆ ಅದನ್ನು ಹಾಗೇ ಮನೆಗೆ ತಂದು ಮನೆಯಲ್ಲಿ ಗೊಬ್ಬರ ಹಾಕಿ ನೆಟ್ಟು ಅದರಿಂದ ಒಂದು ಫಲ ತೆಗೆಯುವ ಹುಚ್ಚು. ಎಷ್ಟೋ ಸಲ ಮನೆಯಲ್ಲಿ ಕೆಂಬುಡೆ ಆಗಿದ್ದೇ ನಾನು ಈ ರೀತಿ ನೆಟ್ಟ ಗಿಡದಿಂದಲೇ.
ಮತ್ತೊಂದು ಅಭ್ಯಾಸ ಈ ನಮ್ಮ ಹಳ್ಳಿ ದಾರಿ ಅಥವಾ ಫಲ್ಗುಣಿ ನದಿ ಪಕ್ಕ ಎಲ್ಲಾದರು ಈ ಜೀರಿಗೆ ಮೆಣಸಿನ ಗಿಡ ಒಂದು ಕಂಡು ಬಂದರೆ ಅದನ್ನು ಹಾಗೇ ಬೇರು ಸಹಿತ ಕಿತ್ತುಕೊಂಡು ಬಂದು ಮನೆಯ ಜಾಗದಲ್ಲಿ ನೆಡುವುದು.ಮುಂದೆ ಮಜ್ಜಿಗೆಗೋ, ಮೊಸರಿಗೋ ಗೆಳೆತೆನ ಬೆಸೆಯಲು ಸಹಾಯ ಆಗಬಹುದು ಎಂದು.
ಈ ಊರಲ್ಲಿ ಅಲ್ಲಲ್ಲಿ ಜೀರಿಗೆ ಮೆಣಸಿನ ಗಿಡ ಹುಡುಕುವ ಅಭ್ಯಾಸ ನನ್ನಲ್ಲಿ ಈಗಲೂ ಇದೆ. ಕಾರಣ ಇಷ್ಟೇ ಮೇಲೆ ಹೇಳಿದ ದನದ ಸಗಣಿಯಲ್ಲಿ ಸಿಗುವ ಆ ಕೆಲವು ತರಕಾರಿಗಳನ್ನು ಆದರೂ ಬೀಜ ಬಿತ್ತಿ ಸುಲಭವಾಗಿ ಬೆಳೆಯಬಹುದು ಆದರೆ ಜೀರಿಗೆ ಮೆಣಸಿನ ಗಿಡವನ್ನು ಯಾರೂ ಕೂಡ ಅಷ್ಟಾಗಿ ಬೀಜ ಬಿತ್ತಿ ಸುಲಭವಾಗಿ ಗಿಡ ಮಾಡಲು ಸಾಧ್ಯವಿಲ್ಲ.ಮಾಡಿದರೂ ಅದು ಗಿಡವಾಗಿ ಬೆಳೆಯುವ ಸಾಧ್ಯತೆ ತುಂಬಾ ಕಡಿಮೆ.ಬೀಜವನ್ನು ಬಹು ಪಾಲು ಇರುವೆಗಳೇ ತಿಂದು ಸಪಾಯಿ ಮಾಡಿ ಬಿಡುತ್ತದೆ. ಮಾತ್ರವಲ್ಲ ಅದು ಬೀಜದಿಂದ ಗಿಡವಾಗಲು ಬೇಕಾದ ಪೂರಕ ವಾತಾವರಣ ಒದಗಿಸುವುದು ಕೂಡ ನಮಗೆ ಸ್ವಲ್ಪ ಕಷ್ಟವೇ.
ಅದರ ಹೆಸರೇ Bird's Eye Chilli. ಮಾಮೂಲಿ ಮೆಣಸಿಗಿಂತ ಅತೀ ಸಣ್ಣ ಗಾತ್ರದ ಇದು ಹಕ್ಕಿಗಳ ಪಾಲಿನ ಫೇವರೆಟ್ ಆಹಾರ.ಈ ಹಕ್ಕಿಗಳೇ ಇದನ್ನು ಯಥೇಚ್ಛವಾಗಿ ತಿಂದು ಬೇರೆ ಎಲ್ಲೋ ಪಿಕ್ಕೆ ಹಾಕುವ ಮೂಲಕ ಇದರ ಬೀಜವೊಂದು ಊರೆಲೆಲ್ಲಾ ಪಸರಸಿ ಇದರ ಬೀಜ ಪ್ರಸರಣ ಕ್ರಿಯೆಯನ್ನು ಕಾಲ ಕಾಲಕ್ಕೆ ಮಾಡುತ್ತಲೇ ಇರುತ್ತದೆ. ಹಾಗಾಗಿ ಹಕ್ಕಿಯ ಹೊಟ್ಟೆಯ ಒಳಗೊಂದು ಈ ಬೀಜಕ್ಕೆ ಬೇಕಾದ ಪೂರಕ ವಾತಾವರಣ, ತಾಪಮಾನ ಹಾಗೂ ಹಕ್ಕಿ ಪಿಕ್ಕೆಯು ಗೊಬ್ಬರದಂತೆ ಕೆಲಸ ಮಾಡಿ ಈ ರೀತಿಯಾಗಿ ಇದು ಅಲ್ಲಲ್ಲಿ ಹಾಗೇ ಬೆಳೆದು ನಿಲ್ಲುತ್ತದೆ.
ಅತಿಯಾದ ಖಾರವಾಗಿರುವ ಇದು ತನ್ನ ಖಾರದ ಕಾರಣದಿಂದ ಹಾಗೂ ಔಷಧಿಯ ಗುಣಗಳಿಂದಾಗಿ ಅತಿಯಾದ ಬೇಡಿಕೆಯನ್ನು ಇತ್ತೀಚಿನ ದಿನಗಳಲ್ಲಿ ಸಂಪಾದಿಸಿದೆ.ಕೆ.ಜಿ ಗೆ ಸುಮಾರು 800 ರೂಪಾಯಿಯಿಂದ 1000 ದ ಮೇಲೂ ಕೂಡ ಒಮ್ಮೊಮ್ಮೆ ಹೋಗುತ್ತದೆಯಂತೆ. ಆದರೆ ಇದನ್ನು ನಮ್ಮಲ್ಲಿ ದೊಡ್ಡ ಪರಿಧಿಯಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯುವವರು ತುಂಬಾನೇ ಕಡಿಮೆ. ಕಾರಣ ಒಮ್ಮೆಗೆ ಇದರ ಅಷ್ಟೊಂದು ಗಿಡ ಮಾಡುವುದು ಸುಲಭ ಸಾಧ್ಯವಿಲ್ಲ, ಹಾಗಾಗಿ ಕಷ್ಟ. ಆದರೆ ಈ ಗಿಡ ಜಾಸ್ತಿ ಆರೈಕೆ ಏನು ಬೇಡುವುದಿಲ್ಲ. ಒಮ್ಮೆ ಜೀವಗೊಂಡರೆ ತನ್ನಷ್ಟಕ್ಕೆ ತಾನೇ ಹಾಗೇ ಬೆಳೆದು ಬಿಡುತ್ತದೆ.
ನಿಜವಾಗಿಯೂ ನಾನು ಕೂಡ ಇದರದ್ದೊಂದು ಗಿಡ ಮಾಡಬೇಕು ಎಂದು ತುಂಬಾ ಪ್ರಯತ್ನಿಸಿ ಸೋತಿದ್ದೆ. Youtube ನಲ್ಲಿ ಜೀರಿಗೆ ಮೆಣಸಿನ ಗಿಡವನ್ನು ಹೇಗೆ ನಾವು ಲಾರ್ಜ್ ಸ್ಕೇಲ್ ನಲ್ಲಿ ಅತ್ಯಂತ ಸುಲಭವಾಗಿ ಮನೆಯಲ್ಲಿಯೇ ಮಾಡಿಕೊಳ್ಳಬಹುದು,ಹೇಗೆ ಹಕ್ಕಿಯ ಹೊಟ್ಟೆಯೊಳಗಿನ ವಾತಾವರಣವನ್ನು ನಾವೇ ನಿರ್ಮಾಣ ಮಾಡಿಕೊಳ್ಳಬಹುದು ಎಂದು ಹಲವಾರು ವಿಡಿಯೋಗಳು ಕನ್ನಡದಲ್ಲಿಯೇ ಇದೆ.ನೀವು ಕೂಡ ನನ್ನಂತೆ ಜೀರಿಗೆ ಮೆಣಸಿನ ಭಯಂಕರ ಪ್ರೇಮಿ ಆಗಿದ್ದರೆ.. ಅಥವಾ ಇದನ್ನು ಒಂದು ವಾಣಿಜ್ಯ ಬೆಳೆಯನ್ನಾಗಿ ಬೆಳೆಯುವ ಹುಮ್ಮಸ್ಸು ನಿಮ್ಮಲ್ಲಿ ಇದ್ದರೆ ಆಸಕ್ತರು ಖಂಡಿತವಾಗಿಯೂ ಒಮ್ಮೆ ಆ ವೀಡಿಯೋಗಳನ್ನು ನೋಡಿಕೊಂಡು ಬರಬಹುದು.
ಜೀರಿಗೆ ಮೆಣಸು.. ಕೇವಲ ಮಜ್ಜಿಗೆ ಮತ್ತು ಮೊಸರಿಗೆ ಮಾತ್ರ ಜೋಡಿಯಲ್ಲ ಕೆಲವೊಮ್ಮೆ ಚಟ್ನಿಗೆ ಇನ್ನು ಕೆಲವೊಮ್ಮೆ ಮಾಂಸಹಾರದಲ್ಲೂ ಇದರ ಬಳಕೆ ಯಥೇಚ್ಛವಾಗಿದೆ.ನಮ್ಮ ಕರಾವಳಿಯಲ್ಲಿ ಹಾಗೂ ಕೇರಳದಲ್ಲಿ ಇದನ್ನು ಮಾಂಸಹಾರದಲ್ಲೂ ತುಂಬಾನೇ ಬಳಸುತ್ತಾರೆ.
ಹಸಿ ಮೆಣಸು ಉಷ್ಣ ಪ್ರಕೃತಿ ಹೊಂದಿದ್ದರೆ ಜೀರಿಗೆ ಮೆಣಸು ತಂಪು ಪ್ರಕೃತಿಯನ್ನು ಹೊಂದಿದೆ. ಹಾಗಾಗಿ ನಾಟಿ ಔಷಧದಲ್ಲಾಯೂ ಬಳಕೆಯಲ್ಲಾದೆ.ಅಜೀರ್ಣ,ಹೊಟ್ಟೆ ಉಬ್ಬರಿಸುವುದು,ದೇಹದಲ್ಲಿ ಕೊಲೆಸ್ಟರಾಲ್ ಕಡಿಮೆ ಮಾಡುವುದು, ರಕ್ತದೊತ್ತಡ ನಿಯಂತ್ರಣದಲ್ಲಿಡುವುದು ಮುಂತಾದವುಗಳಿಗೆ ಜೀರಿಗೆ ಮೆಣಸಿನ ಸೇವನೆ ಬಹಳ ಒಳ್ಳೆಯದು ಎಂದು ಹೇಳುತ್ತಾರೆ.
ಕರ್ನಾಟಕದಲ್ಲಿ ಮಲೆನಾಡು ಮತ್ತು ಕರಾವಳಿಯಲ್ಲಿ ಅದರಷ್ಟಕ್ಕೆ ಬೆಳೆಯುತ್ತಿದ್ದ ಈ ಜೀರಿಗೆ ಮೆಣಸು ಅಳಿದು ಹೋಗದೆ ಇನ್ನು ಮುಂದಕ್ಕೂ ಉಳಿದು ಬಿಡಬೇಕು.ರೈತರಿಗೆ ಕರಿ ಮೆಣಸಿನಂತೆಯೇ(Black Pepper) ಜೀರಿಗೆ ಮೆಣಸು ಕೂಡ ಒಂದೊಳ್ಳೆಯ ಆದಾಯದ ಮೂಲವಾದರೆ ಖಂಡಿತಾ ನಮ್ಮ ಮಲೆನಾಡಿನಲ್ಲಿ ಹಾಗೂ ಕರಾವಳಿಯ ತೋಟಗಳಲ್ಲಿ ಅಸಂಖ್ಯಾತ ಜೀರಿಗೆ ಮೆಣಸಿನ ಗಿಡಗಳು ತಲೆ ಎತ್ತಿ ಗರ್ವದಿಂದ ಹಾಗೇ ನಳ ನಳಿಸಬಹುದು.
ಎಂತಹ ಅಧ್ಭುತವಾದ ಪಾನೀಯ ಇದ್ದರೂ ಮಧ್ಯಾಹ್ನದ ಹೊತ್ತಿಗೆ ನನಗಂತು ಮೊದಲು ನೆನಪು ಆಗುವುದು ಮಜ್ಜಿಗೆಯೇ.ಅದರೊಂದಿಗೆ ಜೀರಿಗೆ ಮೆಣಸಿನ ಆ ಘಮ,ಅದರ ಆ ಖಾರ ಸರಿ ಸಮನಾಗಿ ಬೆರೆತುಕೊಂಡು ಮುಂದೆಯೂ ಮಜ್ಜಿಗೆ ಬಾಲ್ಯದಂತೆ ಮತ್ತಷ್ಟು ಘಮ್ ಅನ್ನಲ್ಲಿ, ಅದರೊಟ್ಟಿಗೆ ಜೀರಿಗೆ ಮೆಣಸಿನ ಗಿಡವೂ ರೈತರ ಜೇಬು ತುಂಬಿಸುವ ಗಿಡವಾಗಿ ಮತ್ತಷ್ಟು ಹುಲುಸಾಗಿ ಬೆಳೆಯಲಿ.
.....................................................................................
#ಏನೋ_ಒಂದು
ab pacchu
moodubidire
(photo-internet)

Comments
Post a Comment