ನಾನೊಬ್ಬ ಕಳ್ಳ
ನಾನು ಒಬ್ಬ ಕಳ್ಳ. ಎಲ್ಲರ ಹಾಗೆ ಹಾರ್ಟ್ ಕದಿಯೋದು, ಮನಸ್ಸು ಕದಿಯೋದು.. ಅದೆಲ್ಲ ನಾನು ಮಾಡಲ್ಲ. ಅದೆಲ್ಲ ಪ್ರೀತಿಯಲ್ಲಿ ಬಿದ್ದೋರು ಮಾಡೋದು. ನನ್ನಂತವನನ್ನು ಯಾರು ಪ್ರೀತಿಸ್ತಾರೆ. ನಾನು ಪಕ್ಕಾ ಕಳ್ಳನೇ, ಡೌಟೇ ಬೇಡ. ಆದರೆ ಹುಟ್ಟಿನಿಂದ ಕಳ್ಳ ಅಲ್ಲ, ಪರಿಸ್ಥಿತಿ ಗಳು ನನ್ನನ್ನು ಕಳ್ಳನನ್ನಾಗಿ ಮಾಡಿತು. ಆದರೆ ದರೋಡೆ, ಮನೆ ಕಳ್ಳತನ, ಬ್ಯಾಂಕ್ ರಾಬರಿ, ತಲೆ ಹೊಡೆಯುವುದು ಅಂತಹದ್ದೆನಲ್ಲ ನಾನು ಮಾಡಲ್ಲ.
ನಾನು ಜಸ್ಟ್ ಪರ್ಸ್ ಕದಿತೇನೆ ಅಷ್ಟೇ!!
ಮನಸ್ಸು, ಕನಸ್ಸು, ಸ್ನೇಹ, ಪ್ರೀತಿ, ಪ್ರೇಮ, ನಗು,ಕಣ್ಣೀರು, ಸಂಬಂದಗಳಿಗೆ ನನ್ನಲ್ಲಿ ಜಾಗವಿಲ್ಲ. ಅದು ಏನೆಂದೇ ನನಗೆ ಗೊತ್ತಿಲ್ಲ. ಮತ್ತು ಅದು ನನಗೆ ಬೇಕಾಗಿಯೂ ಇಲ್ಲ.
ರಶ್ ಆಗಿರೋ ಬಸ್ ನಲ್ಲಿ ಯಾರಿಗೂ ಗೊತ್ತಾಗದಂತೆ ಪರ್ಸ್ ಎಗರಿಸೊ ಕಲೆ ನನಗೆ ಒಲಿದಿದೆ.ನನಗಿರುವ ಏಕೈಕ ಕಲೆ ಅಂದರೆ ಅದೊಂದೇ.ಅದೂ ನಾನಾಗಿಯೇ ಇಷ್ಟ ಪಟ್ಟು ಕಲಿತದ್ದಲ್ಲ, ಹಸಿವು ಕಲಿಸಿತ್ತು, ಬದುಕು ಅದನ್ನೇ ವೃತ್ತಿ ಯನ್ನಾಗಿ ಮಾಡಿಸಿಬಿಟ್ಟಿತ್ತು.
ನನ್ನ ಜೊತೆಗೆ ಯಾರೂ ಇರಲ್ಲ. ಒಬ್ಬನೇ ಪ್ಯಾಸೆಂಜರ್ ತರಹ ಬಸ್ ಗೆ ಹೋಗ್ತೀನಿ. ಬಸ್ಸು ಇಳಿದು ಬರುವಾಗ ಕೈಯಲ್ಲಿ ಯಾರದ್ದೋ ಒಂದು ಪರ್ಸು ಹಿಡ್ಕೊಂಡು ಬರ್ತಿನಿ. ಚೆನ್ನಾಗಿರುವ ಬಟ್ಟೆ ಬರೆ ಹಾಕಿಕೊಳ್ಳುವ ನನ್ನನ್ನು ಒಬ್ಬ ಪಿಕ್ ಪಾಕೆಟ್ ಮಾಡುವ ಕಳ್ಳ ಅಂತ ಯಾರೂ ಕೂಡ ಗುರುತಿಸಲು ಸಾಧ್ಯವಿಲ್ಲ.
ನಾನೊಬ್ಬ ಅನಾಥ, ಅನಾಥಾಶ್ರಮ ದಲ್ಲಿ ಇದ್ದೆ. ನಾಲ್ಕನೇ ಕ್ಲಾಸ್ ತನಕ ಓದಿದೆ. ಆದರೆ ಸ್ಕೂಲ್ ನನಗೆ ಹಿಡಿಸ್ಲಿಲ್ಲ. ಅನಾಥಾಶ್ರಮ, ಸ್ಕೂಲ್ ಎರಡೂ ಬಿಟ್ಟೆ. ಹೀಗೆ ತುಂಬಾ ಚಿಕ್ಕವನಿದ್ದಾಗಲೇ ಬೀದಿಗೆ ಬಿದ್ದೆ. ನೀರು ಕುಡಿದು ಎರಡು ದಿನ ಹೇಗೋ ತಡ್ಕೊಂಡಿದ್ದೆ. ಮೂರನೇ ದಿನ ಹಸಿವನ್ನು ತಡೆದುಕೊಳ್ಲಿಕ್ಕೆ ನಂಗೆ ಆಗ್ಲಿಲ್ಲ, ಭಿಕ್ಷೆ ಬೇಡೋಕೆ ಅಂತ ಹೋದೆ. ಇಡೀ ದಿನ ದೇವಸ್ಥಾನದ ಮುಂದೆ ಕೂತಾಗ ತಟ್ಟೆಯಲ್ಲಿ ಬಿದ್ದಿದ್ದು ಒಂದು ರೂಪಾಯಿ ಮಾತ್ರ . ಅಂಗಡಿಗೆ ಹೋದವನೇ ಅದರಿಂದ ಒಂದು ಕಡ್ಲೆ ಚಿಕ್ಕಿ(ಚುಕ್ಕಿ) ತಗೊಂಡು ತಿಂದೆ. ಕೇವಲ ಒಂದು ಚಿಕ್ಕಿಗೆ ಹಸಿವನ್ನು ನಿವಾರಿಸುವ ಶಕ್ತಿ ಎಲ್ಲಿದೆ.ಅಂಗಡಿಯವನ ಬಳಿ "ಅಣ್ಣಾ ಬೇರೆ ಏನಾದರೂ ತಿನ್ಲಿಕ್ಕೆ ಕೊಡಿ.. ಕಾಸು ನಾಳೆ ಕೊಡ್ತಿನಿ" ಅಂದೆ.
"ಕಾಸು ನಾಳೆನೇ ಕೊಡು, ಅದೇ ರೀತಿ ತಿಂಡಿನೂ ನಾಳೆನೇ ಕೊಡ್ತಿನಿ.." ಅಂದ ಅಂಗಡಿಯವ...
ಬೇರೆ ಕಡೆ ಕೂಡ ಬೇಡಿ ನೋಡಿದೆ, ಯಾರೂ ಕೂಡ ಕೊಡ್ಲಿಲ್ಲ. ಮನೆ ಮಂದೆ ಹೋಗಿ ನಿಂತೆ. ಹೇಳಿ ಅಭ್ಯಾಸ ಇರ್ಲಿಲ್ಲ, ಆದ್ರೂ ಹೇಳಿದೆ.. "ಅಮ್ಮಾ... ತಾಯಿ, ಯಾರಾದರೂ ಊಟ ಕೊಡಿ, ವಿಪರೀತ ಹೊಟ್ಟೆ ಹಸಿವು.. ಎರಡು ದಿನದಿಂದ ಊಟ ಮಾಡ್ಲಿಲ್ಲ..."
ನನ್ನ ಕೂಗು ಈ ಸಮಾಜಕ್ಕೆ ಕೇಳ್ಲಿಲ್ಲ. ಅವತ್ತೇ ಡಿಸೈಡ್ ಮಾಡಿದ್ದು, ನೀವು ಕೊಡದಿದ್ದರೆ ನಾನೇ ಕಿತ್ಕೊತ್ತೆನೆ ಎಂದು.
ಮೊದಲು ದೇವಸ್ಥಾನ ದ ಬಳಿ ಪಿಕ್ ಪಾಕೆಟ್ ಮಾಡ್ಲಿಕ್ಕೆ ಶುರು ಮಾಡಿದೆ, ನಂತರ ಬಸ್ಸಿನಲ್ಲಿ ಪಿಕ್ ಪಾಕೆಟ್ ಮಾಡುವುದನ್ನು ರೂಡಿಸಿಕೊಂಡೆ.
ಬಾಯಾರಿಕೆ ಆದಾಗ ನಲ್ಲಿ ನೀರು ಕುಡಿದೆ, ಹಸಿವಾದಾಗ ಹೋಟೆಲ್ ಗೆ ಹೋಗಿ ಚಿತ್ರಾನ್ನ ತಿಂದೆ. ಜಾಸ್ತಿ ಹಣ ಸಿಕ್ಕಿದ ದಿನ ಬಿರಿಯಾನಿ ತಿಂದೆ. ದೀಪಾವಳಿ, ಹೋಳಿ, ಯುಗಾದಿ ಇದ್ಯಾವುದೂ ನನಗಿಲ್ಲ. ಜಾಸ್ತಿ ಹಣ ಸಿಕ್ಕಿದ ದಿನವೇ ದೀಪಾವಳಿ ಯುಗಾದಿ ಸಂಕ್ರಾಂತಿ ಎಲ್ಲಾ. ರಾತ್ರಿ ಮಲಗ್ಲಿಕ್ಕೆ ಅದೇ ಇದೇ ಅಂತ ಯಾವುದೇ ಜಾಗ ಇಲ್ಲ, ಕೆಲವೊಮ್ಮೆ ರಾತ್ರಿ ದೇವಸ್ಥಾನದ ಹೊರ ಪ್ರಾಂಗಣದಲ್ಲಿ ಮಲಗಿದರೆ , ಇನ್ನು ಕೆಲವೊಮ್ಮೆ ಬಸ್ ನಿಲ್ದಾಣದಲ್ಲಿ, ಮತ್ತೊಮ್ಮೆ ನಗರದ ಹೊರವಲಯದ ಗುಡ್ಡದ ಪಾಳು ಬಿದ್ದ ಗುಂಡಿಯಲ್ಲಿ.. ಹೀಗೆ ಬಾಳು ಸಾಗಿತ್ತು.
ಅವತ್ತೊಂದು ದಿನ, ಆ ಒಂದು ಘಟನೆ ನಡೆಯಿತು.ನಡೆಯಿತು ಅನ್ನುವುದಕ್ಕಿಂತ ನಾನೇ ನಡೆಸಿಬಿಟ್ಟೆನೋ ಎನ್ನುವಂತೆ ಫೀಲ್ ಆಗುತ್ತೆ ಹಲವು ಸಲ!
ಮಂಗಳೂರಿನಲ್ಲಿ ಅವತ್ತು ಜಿಡಿ ಮಳೆ. ಒದ್ದೆಯಾಗಿಯೇ ಹೇಗೋ ಬಸ್ ಹತ್ತಿದ್ದೆ. ಇಳಿಯುವಾಗ ಕೈಯಲ್ಲೊಂದು ಬೆಚ್ಚನೆಯ ಪರ್ಸ್ ಇತ್ತು. ಮಳೆ ಜೋರ್ ಇತ್ತು. ಹಾಗಾಗಿ ಆ ಪರ್ಸ್ ಜೇಬಿನಲ್ಲಿ ಹಾಕಿಕೊಂಡವನೇ ನೇರಾ ನಾನಿರುತ್ತಿದ್ದ ನಗರದ ಹೊರವಲಯದ ಪಾಳು ಗುಡಿಗೆ ಬಂದೆ.
ಗುಡಿಯ ಒಂದು ಸೈಡಿಗೆ ಕುಳಿತುಕೊಂಡವನೇ ನಿಧಾನವಾಗಿ ಪರ್ಸ್ ಓಪನ್ ಮಾಡಿದೆ. ತೆಗೆದು ನೋಡಿದಾಗ ಅದರಲ್ಲಿ ಇದ್ದದ್ದು 5000 ರೂಪಾಯಿ. ಇನ್ನು ಒಂದು ತಿಂಗಳಿಗೆ ಊಟಕ್ಕೆ ತಿಂಡಿಗೆ ಏನೂ ತೊಂದರೆ ಇರಲಿಲ್ಲ. ಕುಳಿತಲ್ಲಿಂದಲೇ ದೇವರಿಗೆ ದೊಡ್ಡ ಥ್ಯಾಂಕ್ಸ್ ಹೇಳಿದೆ.
ನಾನು ಕಳ್ಳನೇ ಇರಬಹುದು ಆದರೆ ಯಾವತ್ತೂ ನಾನು ಯಾವುದೇ ಪರ್ಸ್ ಕದ್ದರೂ ಅದರಲ್ಲಿರುವ ಹಣ ಮಾತ್ರ ತೆಗಿತೇನೆಯೇ ಹೊರತು ಪರ್ಸ್ ನಲ್ಲಿರುವ ಬೇರೆ ಯಾವುದೇ ವಸ್ತುಗಳ ಕಡೆಗೆ ಗಮನ ನೀಡುವುದಿಲ್ಲ, ಕೈ ಹಾಕುವುದಿಲ್ಲ . ಹಣ ತೆಗೆದ ಮೇಲೆ ಪರ್ಸ್ ಅನ್ನು ಚರಂಡಿಗೋ ಮೋರಿಗೋ ಎಸೆಯುವುದು ನನ್ನ ವಾಡಿಕೆ, ನಾನಿರುವ ಜಾಗದಲ್ಲಿಯೇ ಪರ್ಸ್ ಗಳನ್ನು ಬಿಸಾಡುತ್ತಿದ್ದರೆ, ನಾನಿರುವ ಜಾಗದ ಸುಳಿವುಗಳು ಯಾರಿಗಾದರೂ, ಅದರಲ್ಲಿ ಮುಖ್ಯವಾಗಿ ಪೋಲಿಸರಿಗೆ ಸಿಗಬಹುದು ಎಂಬ ಕಾರಣಕ್ಕಾಗಿ ಹಾಗೆ ಮಾಡುತ್ತಿದ್ದೆ.
ಅವತ್ತು ಮಳೆ ಬೇರೆ ಜೋರು ಇತ್ತು,ಮೊದಲೇ ನೆನೆದುದರಿಂದ ಮತ್ತೆ ಹೊರಗೆ ಹೋಗಲು ಉದಾಸೀನವಾಗಿತ್ತು. ಅದಲ್ಲದೆ ಮೋರಿ ಸೈಡಿಗೆ ಹೋಗಲು ಸ್ವಲ್ಪ ದೂರ ನಡೆಯಬೇಕಾಗಿತ್ತು. ಆಮೇಲೆ ಹೋಟೆಲ್ ಕಡೆ ಗೆ ತಿಂಡಿ ತಿನ್ಲಿಕ್ಕೆ ಹೋಗುವಾಗ, ಪರ್ಸ್ ಬಿಸಾಡಿ ಬಿಟ್ಟರೆ ಆಯಿತು ಅಂತ ಅಂದುಕೊಂಡೆ.
ಮಳೆ ಪಕ್ಕಕ್ಕೆ ಬಿಡುವ ಮುನ್ಸೂಚನೆ ಕಾಣ್ತಾ ಇರ್ಲಿಲ್ಲ. ಇನ್ನು ಸ್ವಲ್ಪ ಹೊತ್ತು ಇರ್ತೇನೆ, ಆಮೇಲೆ ಮಳೆ ಬಿಟ್ಟ ಮೇಲೆ ಹೊರಗೆ ಹೋಗ್ತೇನೆ ಅಂತ ಅನ್ಕೊಂಡೆ. ಅಲ್ಲಿಯವರೆಗೆ ಏನು ಮಾಡುವುದು ಎಂದು ಗೊತ್ತಾಗಲಿಲ್ಲ. ನಿಧಾನವಾಗಿ ನನ್ನ ದೃಷ್ಟಿ ಪರ್ಸಿನ ಕಡೆಗೆ ಹೋಯಿತು.
ಈ ಪರ್ಸು ಗಳಲ್ಲಿ ಜನ ಹಣ ಬಿಟ್ಟು ಬೇರೆ ಏನೆಲ್ಲ ಇಟ್ಕೋತ್ತಾರೆ, ಏನೆಲ್ಲಾ ಇರಬಹುದು, ಅಂತ ಒಮ್ಮೆ ನೋಡೆ ಬಿಡುವ ಅಂತ ಮನಸ್ಸು ಹೇಳಿತು. ಹಾಗೆ ಕುಳಿತಲ್ಲಿಂದಲೇ ಪಕ್ಕದಲ್ಲಿ ಬಿದ್ದಿದ್ದ ಪರ್ಸ್ ಓಪನ್ ಮಾಡಿದೆ. ತುಂಬಾ ಸಲ ಅನಿಸಿದೆ,
ನಾನು ಆ ದಿನ ಆ ಪರ್ಸ್ ನಿಜವಾಗಿಯೂ ಓಪನ್ ಮಾಡಿದಬಾರದಿತ್ತಾ....?
ಪರ್ಸಿನಲ್ಲಿ ಒಂದು ಉಡುಪಿ ಕೃಷ್ಣ ನ ಫೋಟೋ, ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಫೋಟೋ, ಇನ್ನೊಂದು ಮೂರು ಜನರಿರುವ ಚಿಕ್ಕ ಫ್ಯಾಮಿಲಿ ಫೋಟೋ. ಅದರಲ್ಲಿ ಅಪ್ಪ ಅಮ್ಮ ಮತ್ತು ಒಂದು ಪುಟ್ಟ ಮಗು. ಕೆಲವು ಮೆಡಿಕಲ್ ನ ಚೀಟಿಗಳು, ಆಸ್ಪತ್ರೆ ಯ ಚೀಟಿಗಳು,ಕರೆಂಟ್ ಬಿಲ್, ವಾಟರ್ ಬಿಲ್ ಇತ್ಯಾದಿ. ಇನ್ನು ಬೇರೆ ಏನು ಇರಬಹುದು ಎಂದು ತುಂಬಾ ತಡಕಾಡಿದಾಗ, ಪರ್ಸಿನ ಒಳಗೊಂದು ಮಡಚಿದ ಚಿಕ್ಕ ಲೆಟರ್ ಇತ್ತು. ಆ ಲೆಟರ್ ಕೈಗೆತ್ತಿಕೊಂಡೆ, ಕೈಯಲ್ಲಿದ್ದ ಪರ್ಸ್ ಕೆಳಗಿಟ್ಟೆ.. ಲೆಟರ್ ಓದಲು ಶುರುಮಾಡಿದೆ. ಹೇಗೆ ಆ ಲೆಟರ್ ನಾನು ಓದಿದ್ದು ಒಳ್ಳೆಯದಾಯಿತು ಅಂತ ತುಂಬಾ ಸಲ ಅಂದುಕೊಳ್ಳುತ್ತೆನೆಯೋ ಅದೇ ರೀತಿ ಆ ಲೆಟರ್ ಓದಲೇಬಾರದಿತ್ತು ಅಂತ ನನಗೆ ತುಂಬಾ ಸಲ ಅನಿಸಿದೆ!
ಪತ್ರದಲ್ಲಿ ಹೀಗಿತ್ತು...
" ಪ್ರೀತಿಯ ಸ್ಮೀತಾ...
ಹೇಗಿದ್ದಿ ಎಂದು ಕೇಳಲಾರೆ, ಅದನ್ನೇ ಕೇಳಿ ಕೇಳಿ ನಿನಗೆ ಮತ್ತಷ್ಟು ನೋವು ನೀಡಲಾರೆ! ನನಗೆ ಒಂದು ಸತ್ಯವನ್ನು ನಿನ್ನಲ್ಲಿ ಬಾಯಿ ಬಿಟ್ಟು ಹೇಳಲು ಸಾಧ್ಯವಾಗುತ್ತಿಲ್ಲ, ಅದು ನನ್ನಿಂದ ಎಂದಿಗೂ ಸಾಧ್ಯ ಆಗುವುದು ಕೂಡ ಇಲ್ಲ.ಎಲ್ಲವನ್ನೂ ಹೇಳದೆ ಇದ್ದರೆ ನನಗೆ ಸಮಾಧಾನವೂ ಇಲ್ಲ. ಅದಕ್ಕಾಗಿ ನನ್ನ ಮನಸ್ಸಿನ ದುಗುಡ ವನ್ನು ನಾನು ಈ ಪತ್ರದಲ್ಲಿ ಬರೆಯುತ್ತಿದ್ದೆನೆ, ಹೌದು ನನ್ನ ಸಮಾಧಾನಕ್ಕಾಗಿ.
ನೀನು ಬರುವುದಕ್ಕಿಂತ ಮೊದಲು ಈ ಬಾಳು ಬರಡಾಗಿತ್ತು, ನೀನು ಬಂದ ಮೇಲೆ ನಗು ಹೆಚ್ಚಾಯಿತು. ನೀನು ನನ್ನ ಬಾಳಿಗೆ ಬಂದ ನಂತರ ನಾನೆಷ್ಟು ಪರಮ ಸುಖಿ ಆಗಿದ್ದೆ ಎಂದು ನನಗೆ ಮಾತ್ರ ಗೊತ್ತು. ಆದರೆ ಭಗವಂತನಿಗೆ ನಾನೇನೋ ಮೊಸ ಮಾಡಿದ್ದೆ. ಅದಕ್ಕಾಗಿ ನನ್ನ ಖುಷಿ ನಗು ಎಲ್ಲವನ್ನೂ ಕಿತ್ತುಕೊಂಡು ಬಿಟ್ಟ!
ಒಂದು ದಿನ ಬಾಯಲ್ಲಿ ರಕ್ತ ಬಂತು ಎಂದು ಆಸ್ಪತ್ರೆ ಗೆ ನಿನ್ನನ್ನು ಕರೆದುಕೊಂಡು ಬಂದರೆ, ಡಾಕ್ಟರ್ ಎಲ್ಲವನ್ನೂ ಪರಿಶೀಲಿಸಿ ದ ಮೇಲೆ, ನಿನ್ನ ರೋಗಕ್ಕೊಂದು ಚಂದದ ಹೆಸರು ಇಟ್ಟುಬಿಟ್ಟರು ಮಗಳೇ, ಅದರ ಹೆಸರೇ ಕ್ಯಾನ್ಸರ್. ನಮ್ಮಂತ ಬಡವರಿಗೆ ಯಾಕೇ ಇಷ್ಟೊಂದು ಶ್ರೀಮಂತ ಕಾಯಿಲೆ ಕೊಟ್ಟೆ ಭಗವಂತ ಎಂದು ಪ್ರತಿ ಬಾರಿಯೂ ಭಗವಂತನಲ್ಲಿ ಕಣ್ಣೀರಾಗಿ ಕೇಳಿದೆ. ಅವನು ಮಾತನಾಡಲಿಲ್ಲ!
ನಿನಗಿನ್ನು 7 ವರ್ಷ ವಯಸ್ಸು ಮಗು. ನಿನಗೆ ಕ್ಯಾನ್ಸರ್ ಇದೆ, ಜಾಸ್ತಿ ವರ್ಷ ನೀನು ಬದುಕಲಾರೆ ಎಂದು ನಾನು ನಿನ್ನಲ್ಲಿ ಹೇಳುವುದಾದರೂ ಹೇಗೆ, ನಿನ್ನ ಅಪ್ಪ ಶಂಕರ್ ಗೂ ಕೂಡ ಆ ಧೈರ್ಯ ಇಲ್ಲ. ಅದಕ್ಕಾಗಿ ಈ ತರಹದ ಪತ್ರ ಒಂದು ಬರೆದು, ನಾನೇ ಇಟ್ಟುಕೊಂಡಿದ್ದೆನೆ ಮಗಳೇ. ನಿನಗೆ ಕೊಡುವುದಕ್ಕೆ ಅಲ್ಲ,ಬರೀ ನನಗೆ ಓದಲಿಕ್ಕೆ.
ಇಷ್ಟು ದೊಡ್ಡ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಾನು ಒಬ್ಬಳೇ ನಿನ್ನ ಬಳಿ ಹಗಲು ರಾತ್ರಿ ಕುಳಿತುಕೊಂಡಾಗ, ನಿನ್ನನ್ನು ಹಾಗೇ ನೋಡುತ್ತಿದ್ದಾಗ ನನಗೆ ಅತೀವವಾದ ನೋವು ಕಾಡುತ್ತೆ ಮಗಳೇ, ಕರುಳು ಚುರುಕ್ ಅನ್ನುತ್ತೆ. ನಿನಗೆ ಏನೆಲ್ಲಾ ಹೇಳಬೇಕು ಎಂದು ಅಂದುಕೊಳ್ಳುತ್ತೆನೋ ಅದನ್ನು ಈ ಪತ್ರದಲ್ಲಿ ಬರೆಯುತ್ತಾ ಹೋಗಿದ್ದೆನೆ. ಈ ಪತ್ರ ತೆಗೆದು ಓದಿದಾಗಲೆಲ್ಲ ನನಗೆ ನಿನ್ನ ಬಳಿ ಎಲ್ಲವನ್ನೂ ಹೇಳಿಕೊಂಡ ಹಾಗೆ ಏನೋ ಒಂದು ಸಮಾಧಾನ ಆಗುತ್ತೆ ಅಷ್ಟೇ. ಆದರೆ ನನಗೆ ಗೊತ್ತು.. " ಪುಟ್ಟಿ, ಬಾಯಿಯಲ್ಲಿ ಚಿಕ್ಕ ಗಾಯ ಆಗಿದೆ, ಅದಕ್ಕೆ ಹಾಗೆ ರಕ್ತ ಬರ್ತಾ ಇದೆ, ಅದಕ್ಕೆ ಒಂದು ಸಣ್ಣ ಅಪರೇಶನ್ ಆಗ್ಬೇಕು" ಎಂದು ನಾನು ನಿನಗೆ ಸುಳ್ಳೇ ಹೇಳಿದ್ದೆನೆಂದು.
ಮಗಳೇ ಆವಾಗಲೆಲ್ಲ ನೀನು ಕೇಳ್ತೀ ಅಲ್ಲಾ..." ಅಮ್ಮ ಬಾಯಿಗೆ ಗಾಯ ಆದರೆ, ತಲೆಕೂದಲು ಯಾಕೆ ಉದುರುತ್ತೆ ಅಮ್ಮಾ... " ಆ ಪ್ರಶ್ನೆಗೆ ನನ್ನಲ್ಲಿ ಕಣ್ಣೀರು ಬಿಟ್ಟರೆ ಬೇರೆ ಉತ್ತರವಿಲ್ಲ ಮಗಳೇ!
ಎಷ್ಟೋ ಸಲ ಅನಿಸಿದೆ ನೀನು ಈ ಪಾಪಿ ಹೊಟ್ಟೆಯಲ್ಲಿ ಹುಟ್ಟದಿದ್ದರೆನೇ ಚೆನ್ನಾಗಿತ್ತು ಎಂದು... ನಿನ್ನನ್ನು ಉಳಿಸಿಕೊಳ್ಳಲು ನಮಗೆ ಆಗುತ್ತೋ ಇಲ್ಲವೋ ಗೊತ್ತಿಲ್ಲ, ಒಂದು ವೇಳೆ ನಿನ್ನನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಹೋದರೆ...
ಈ ಬಡವರನ್ನು ಕ್ಷಮಿಸಿಬಿಡು ಮಗಳೇ..
ಇಂತೀ,
ಗೌರಿ . "
ಪತ್ರ ಓದಿ ಮುಗಿಸಿದ ನನಗೇ ಕಣ್ಣಿಂದ ಎರಡು ಹನಿ ಜಾರಿದ್ದು ಗೊತ್ತೇ ಆಗಲಿಲ್ಲ. ಯಾಕೋ ಆ ತಾಯಿಯ ಪರ್ಸ್ ಕದ್ದು ತುಂಬಾ ತಪ್ಪು ಮಾಡಿದೆ ಎಂದು ಅನಿಸಿತು. ಕದ್ದಿದಕ್ಕೆ ಮೊದಲ ಬಾರಿ ಬೇಜಾರ್ ಆಗಿದ್ದು ಅವತ್ತೇ. ನಾನು ಕೂಡ ಬಡತನದಲ್ಲೇ ಇದ್ದವ. ಅದರಲ್ಲೂ ಆ ತಾಯಿ ಹೇಳಿದ.." ನಿನ್ನನ್ನು ಉಳಿಸಿಕೊಳ್ಳಲು ನಮಗೆ ಆಗುತ್ತೋ ಇಲ್ಲವೋ ಗೊತ್ತಿಲ್ಲ, ಒಂದು ವೇಳೆ ನಿನ್ನನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಹೋದರೆ...
ಈ ಬಡವರನ್ನು ಕ್ಷಮಿಸಿಬಿಡು ಮಗಳೇ.." ನನ್ನನ್ನು ತುಂಬಾ ಕಾಡಿತು.
ಹಾಗಾದರೆ ಮುಂದೆ ಏನು ಮಾಡುವುದು. ಕುಳಿತುಕೊಂಡೇ ಯೋಚಿಸತೊಡಗಿದೆ.
ಏನು ಮಾಡಬೇಕು ಎನ್ನುವುದರ ಸ್ಪಷ್ಟತೆ ಆವತ್ತು ನನ್ನಲ್ಲಿ ಸ್ಪಷ್ಟವಾಗಿ ಇತ್ತು. ಆ ಐದು ಸಾವಿರದ ಜೊತೆಗೆ ಬೇರೆ ದಿನ ಕದ್ದಿದ ಹಣವನ್ನು ಸೇರಿಸಿದೆ, ಲೆಕ್ಕ ಹಾಕಿದೆ. ಒಟ್ಟು ಹನ್ನೆರಡು ಸಾವಿರ ರೂಪಾಯಿ ಆಯಿತು. ಅದರಲ್ಲಿ ಹತ್ತುಸಾವಿರ ವನ್ನು ಸಪರೇಟ್ ಆಗಿ ಪ್ಯಾಂಟಿನ ಜೇಬಿನಲ್ಲಿ ಇಟ್ಟುಕೊಂಡೆ.
ಆ ಪರ್ಸಿನಲ್ಲಿರುವ ಆಸ್ಪತ್ರೆ ಗೆ ಸಂಬಂಧ ಪಟ್ಟ ಬಿಲ್ಲುಗಳನ್ನು ನೋಡಿದೆ. ಅದರಲ್ಲಿದ್ದ ದಿನಾಂಕ ಎರಡು ದಿವಸದ ಹಿಂದಿನ ದಿವಸದ್ದಾಗಿತ್ತು. ಆಸ್ಪತ್ರೆಯ ಯಾವುದೆಂದು ಬಿಲ್ಲಿನ ಮೇಲೆ ನೋಡಿದೆ. ಅದರಲ್ಲಿ ಸ್ಪಷ್ಟವಾಗಿ ನಮೂದಿಸಿತ್ತು ಮಣಿಪಾಲ್ ಆಸ್ಪತ್ರೆಯ ಹೆಸರು.
ಮರುದಿನವೇ ಒಳ್ಳೆಯ ಬಟ್ಟೆ ಹಾಕಿಕೊಂಡು. ಮಂಗಳೂರಿನಿಂದ ಬಸ್ ಹಿಡಿದು ಮಣಿಪಾಲ್ ಗೆ ಹೋದೆ. ಸ್ವಲ್ಪ ಪ್ರೂಟ್ಸ್ ತಗೊಂಡೆ. ನಂತರ ಸೀದಾ ಹೋಗಿ ಆಸ್ಪತ್ರೆಗಳ ದೊಡ್ಡ ಸಮುಚ್ಛಯ ದ ಮುಂದೆ ನಿಂತೆ. ಕೆಲವರಲ್ಲಿ ಕೇಳಿದೆ ಇದರಲ್ಲಿ ಕ್ಯಾನ್ಸರ್ ಆಸ್ಪತ್ರೆ ಎಲ್ಲಿ ಎಂದು. ಒಬ್ಬರು ತೋರಿಸಿದರು. Reception ಬಳಿ ಹೋಗಿ ಗೌರಿ ಮತ್ತು ಶಂಕರ ರ ಮಗಳು ಸ್ಮೀತಾ ನೋಡ್ಬೆಬೇಕಿತ್ತು ಅಂದೆ. ಅವರು ಫ್ಲೋರ್ ನಂಬರ್, ವಾರ್ಡ್ ನಂಬರ್, ಬೆಡ್ ನಂಬರ್ ಎಲ್ಲಾ ಹೇಳಿದರು.
ನಾನು ಏನು ಮಾಡುತ್ತಿದ್ದೆನೆ ಎಂದು ನನಗೇ ಗೊತ್ತಿಲ್ಲ. ಆದರೂ ನನಗೆ ಗೊತ್ತಿಲ್ಲದೇ ಏನೋ ಒಂದು ಮಾಡುತ್ತಿದ್ದೆ.
ಎದುರು ಸಿಕ್ಕಿದವರಲ್ಲಿ ಕೇಳಿದೆ ಇದು ಎಲ್ಲಿ ಬರುತ್ತೆ ಅಂತ,ಅವರು ಹೇಳಿದ ಹಾಗೆಯೇ ಹುಡುಕುತ್ತಾ ಹೋದೆ. ಹೋಗುವಾಗ ಇತರ ಕ್ಯಾನ್ಸರ್ ರೋಗಿಗಳನ್ನು ಕೂಡ ನೋಡುತ್ತಾ ಹೋದೆ. ಹೆಚ್ಚಿನವರ ತಲೆಯಲ್ಲಿ ಕೂದಲು ಉದುರಿ ಬೋಳಾಗಿತ್ತು.
ಕ್ಯಾನ್ಸರ್ ನಿಂದ ಕೂದಲು ಉದುರಲ್ಲ ಅದಕ್ಕೆ ನೀಡುವ ಚಿಕಿತ್ಸೆಯಿಂದ ಅದರಲ್ಲೂ ಕಿಮೋ ತೆರಪಿ ಎಂಬ ವಿಧಾನದಿಂದಾಗಿ ಕೂದಲು ಉದುರುತ್ತೆ ಅಂತ ನನಗೆ ಮುಂದೆ ಗೊತ್ತಾಗಲಿಕ್ಕಿತ್ತು.
ಹೃದಯಗಳು ಕಲ್ಲು ಆಗುವ ಜಾಗ ಅದು. ರೋಗಿಗಳಂತೆಯೇ ಅವರ ಮನೆಯವರ ನೋವು ಕೂಡ ಅಪಾರವಾದದ್ದೇ, ಅದು ನನಗೆ ಆಗ ಗೊತ್ತಾಗಲಿಲ್ಲ, ಅದು ಕೂಡ ಮುಂದೆ ಗೊತ್ತಾಯಿತು!
ಹೇಗೋ ಕೊನೆಗೂ ನಾನು ಹೋಗಬೇಕಾದ ಜಾಗಕ್ಕೆ ಹೋದೆ. ಫ್ಯಾಮಿಲಿ ಫೋಟೋದಲ್ಲಿದ್ದ ಗೌರಿ ಮತ್ತು ಶಂಕರರನ್ನು ನಿಜದಲ್ಲಿ ನೋಡಿದ ಕೂಡಲೇ ಹೇಳಿಬಿಡಬಹುದು ಅದು ಅವರೇ ಎಂದು. ಅವರಿಬ್ಬರು, ಮತ್ತು ಮಲಗಿದ್ದ ಮಗು ಬಿಟ್ಟರೆ ಬೇರೆ ಯಾರೂ ಇರಲಿಲ್ಲ.
"ಶಂಕರ್.." ಎಂದು ಕರೆದೆ.
ದೂರದಿಂದಲೇ ನನ್ನನ್ನು ನೋಡಿ ಶಂಕರ್ ಮತ್ತು ಗೌರಿ, ಮಗು ಮಲಗಿದ್ದ ಬೆಡ್ ಬಳಿಯಿಂದ ನನ್ನ ಕಡೆಗೆ ನಡೆದು ಬಂದರು. ಈಗ ನಾನು ಅವರಿಗೊಂದು ನಂಬುವ ಕಥೆ ಹೇಳಬೇಕಾಗಿತ್ತು. ನನ್ನ ಬಳಿ ಕಥೆ ಕೂಡ ಸಿದ್ದವಾಗಿಯೇ ಇತ್ತು .ಹೇಳಲು ಮಾತ್ರ ಬಾಕಿ ಇದ್ದದ್ದು. ಮತ್ತು ಅದನ್ನು ಅವರು ನಂಬುವಂತೆ ಹೇಳಬೇಕಾಗಿತ್ತು.
ಹತ್ತಿರ ಬಂದವರು, "ಹೇಳಿ ಏನಾಗ್ಬೇಕಿತ್ತು.. ". ಅಂದರು.
"ನಿಮ್ಮ ಬಳಿ ಮಾತಾಡಬೇಕಿತ್ತು..."
"ಹೇಳಿ ಏನು ವಿಷಯ" ಅಂದರು.
" ನಿಮ್ಮಂತೆಯೇ ನಂಗೂ ಒಬ್ಬಳೇ ಮಗಳು. ಅವಳ ಹೆಸರೂ ಕೂಡ ಸ್ಮೀತಾ. ದೇವರು ಅವಳಿಗೆ ಕೂಡ ಕ್ಯಾನ್ಸರ್ ಅನ್ನೇ ಕರುಣಿಸಿದ. ನನಗೆ ಗೊತ್ತಾಗುವಾಗ ಫೈನಲ್ ಸ್ಟೇಜ್ ಗೆ ಹೋಗಿತ್ತು ಕ್ಯಾನ್ಸರ್. ಉಳಿಸಿಕೊಳ್ಳಲು ತುಂಬಾ ಪ್ರಯತ್ನ ಪಟ್ಟೆ, ಆಗ್ಲಿಲ್ಲ.ಬಡತನ ಕೂಡ ಒಂದು ಕಾರಣ, ಮಾತ್ರ ಅಲ್ಲ ಆ ದೇವರು ಕೂಡ ನಂಗೆ ತುಂಬಾ ಮೋಸ ಮಾಡಿದ, ಮಗಳು ತೀರಿಕೊಂಡು ಬಿಟ್ಟಳು. ಒಂದು ತಿಂಗಳು ಆಗಿದೆ"... ಅಂದೆ..
ಅವರಿಬ್ಬರ ಕಣ್ಣಲ್ಲೂ ನೀರು...
ನಾನೇ ಮುಂದುವರಿಸಿದೆ " ಇದೇ ಆಸ್ಪತ್ರೆಯಲ್ಲಿಯೇ ನಾನು ನನ್ನ ಮಗಳು ಇದ್ದದ್ದು. ನಮ್ಮ ಪಕ್ಕದ ಬೆಡ್ ನಲ್ಲಿಯೇ ಇನ್ನೊಬ್ಬ ಕ್ಯಾನ್ಸರ್ ಪೇಷಂಟ್ ಇದ್ದರು. ಇಲ್ಲೆ ಇದ್ದು ಇದ್ದು ಅವರಿಗೂ ನಮಗೂ ಒಂದು ಸ್ನೇಹ ಬೆಳೆದು ಬಿಟ್ಟಿತ್ತು, ಹಾಗೇ ಅವರನ್ನು ಮಾತಾಡಿಸಿಕೊಂಡು ವಿಚಾರಿಸಿಕೊಂಡು ಹೋಗುವ ಅಂತ ಬಂದೆ. ಆವಾಗಲೇ ನಿಮ್ಮ ಮಗಳನ್ನು ನೀವು ತಪಾಸಣೆ ಗೆ ಎಂದು ವೀಲ್ ಚೇರ್ ನಲ್ಲಿ ಕರೆದು ಕೊಂಡು ಹೋಗುತ್ತಿರುವುದನ್ನು ನೋಡಿದೆ. ನಿಮ್ಮ ಮಗಳು ನೋಡಲು ನನ್ನ ಮಗಳ ಹಾಗೇ ಇದ್ದಾಳೆ. ಮನಸ್ಸು ತಡೀಲಿಲ್ಲ ತಾಯಿ, ಯಾರ ಮಗು, ಏನು ಹೆಸರು ಎಲ್ಲವನ್ನೂ ವಿಚಾರಿಸಿದೆ. ನೋಡಿದರೆ ಹೆಸರು ಕೂಡ ನನ್ನ ಮಗಳದ್ದೇ. ಹೇಗೆ ತಾನೆ ತಡೆದುಕೊಳ್ಳುತ್ತೆ ಜೀವ... ಅದಕ್ಕಾಗಿ ಸೀದಾ ನಿಮ್ಮ ಬಳಿಯೇ ಓಡೋಡಿ ಬಂದೆ ಮಗು ನೋಡಲು" ಅಂದೆ.
ಮನಸ್ಸಿನಲ್ಲಿ ಅಷ್ಟು ನೋವಿದ್ದರೂ, ಅವರಿಬ್ಬರು ನನ್ನನ್ನು ಸಮಾಧಾನ ಪಡಿಸಲು ಶುರುಮಾಡಿದರು. ತಂದಿದ್ದ Fruits ಅವರಿಗೆ ಕೊಟ್ಟೆ. ಮಗುವಿನ ಬಳಿ ಹೋದೆ, ಮಲಗಿದ್ದ ಮಗು ಕಣ್ಣು ಬಿಟ್ಟಿತು. ತುಂಬಾ ಮುದ್ದಾದ ಮಗು. ಆ ಮಗುವಿಗೆ ಆ ರೀತಿ ಆದದ್ದು ತುಂಬಾ ಬೇಜಾರ್ ಆಯಿತು. ಸ್ವಲ್ಪ ಹೊತ್ತು ಮಗುವಿನ ಬಳಿ ಮಾತಾಡಿದೆ, ಆಟವಾಡಿದೆ. ಮಗುವಿಗೆ ನಾನು ತುಂಬಾ ಇಷ್ಟ ಆದೆ. ಬಹುಶಃ ನಾನು ಒಬ್ಬರಿಗೆ ಇಷ್ಟ ಆದದ್ದು ಅವತ್ತೇ ಏನೋ.!
ಮಗುವಿನ ಬಳಿಯಿಂದ ಎದ್ದು ಪುನಃ ತಂದೆ ತಾಯಿಯರ ಬಳಿ ಬಂದೆ.
ಗೌರಿ ಮಾತಾಡಲು ಶುರು ಮಾಡಿದರು " ಒಬ್ಬಳೇ ಮಗಳು ಸ್ಮೀತಾ.. ನಾವು ಕೂಡ ನಿಮ್ಮ ಹಾಗೆ ತುಂಬಾ ಮುದ್ದಿನಿಂದ ಸಾಕಿದ್ದೆವು, ಆದರೆ ದೇವರ ಇಚ್ಛೆ ಯೇ ಬೇರೆ ಇತ್ತು, ಹೀಗೆ ಆಯಿತು. ಇಲ್ಲಿಗೆ ಬಂದು ಸುಮಾರು ನಾಲ್ಕು ತಿಂಗಳು ಮೇಲೆ ಆಯಿತು. ಕಿಮೋತೆರಪಿ ಶುರುಮಾಡಿದ್ದಾರೆ, ಒಂದು ರೀತಿಯ ದುಬಾರಿ ಇಂಜೆಕ್ಷನ್. ಅದರ ಪ್ರಭಾವ ದಿಂದ ನಿಧಾನವಾಗಿ ಕೂದಲು ಕೂಡ ಉದುರಲು ಶುರು ಆಗುತ್ತೆ, ಕೊನೆಗೆ ತಲೆ ಕೂಡ ಬೋಳಾಗುತ್ತೆ.. " ಅಂದರು.
" ಡಾಕ್ಟರ್ ಏನು ಹೇಳಿದ್ದಾರೆ... " ಕೇಳಿದೆ.
" ಹೆಚ್ಚೆಂದರೆ ಒಂದು ವರ್ಷ ಅಂತ ಹೇಳಿದ್ದಾರೆ... " ಅಂದರು ಶಂಕರ್ ಕಣ್ಣು ತುಂಬಿಕೊಂಡು .
ಪುನಃ ಶಂಕರ್ ಅವರೇ ಮುಂದುವರಿಸಿದರು" ನಮಗೆ ಹಣಕಾಸಿನ ತುಂಬಾ ಪ್ರಾಬ್ಲಂ,ಮೊದಲೇ ಬಡವರು. ಮನೆ ಒಡವೆ ಎಲ್ಲಾ ಗಿರವಿಗೆ ಇಟ್ಟು ಬಿಟ್ಟಿದ್ದೆವೆ.ಮಗಳನ್ನು ಉಳಿಸಿಕೊಳ್ಳಲೇಬೇಕು ಎಂದು ಇದ್ದ ಬದ್ದವರಲ್ಲಿ ಸಾಲ ಮಾಡಿದ್ದೆವೆ. ನಮ್ಮ ಹಣೆಬರಹ ನೋಡಿ, ಮಂಗಳೂರಿನಲ್ಲಿ ಒಬ್ಬರು ಸಂಬಂಧಿಕರು ಖರ್ಚಿಗೆ ಬೇಕಾಗಬಹುದು ಅಂತ 5000 ರೂಪಾಯಿ ಕೊಡ್ತೇನೆ ಬನ್ನಿ ಅಂತ ಹೇಳಿದ್ದರು. ಇವಳು ಹಣ ತರಲಿ ಕ್ಕೆ ಅಂತ ಮಂಗಳೂರಿಗೆ ಹೋಗಿದ್ದಳು. ನಿನ್ನೆ ಅವರು ಹಣ ಕೊಟ್ರು ಕೂಡ. ಅದನ್ನು ಪರ್ಸಿನಲ್ಲಿ ಇಟ್ಟು, ಆ ಪರ್ಸ್ ಅನ್ನು ಬ್ಯಾಗ್ ನಲ್ಲಿ ಇಟ್ಟಿದ್ದಳು. ಅದನ್ನು ಯಾವೋನೋ ಪಾಪಿ ಪಿಕ್ ಪಾಕೆಟ್ ಮಾಡಿ ಬಿಟ್ಟಿದ್ದಾನೆ, ನಮ್ಮಂತವರ ಹಣ ಕದ್ದ ಅವನ ಹೊಟ್ಟೆ ಯಾವತ್ತೂ ತಣ್ಣಗಿರಲಿ ..!! " ಅಂದರು.
ಗೌರಿ ಅವರು ಪುನಃ ಜೋರಾಗಿ ಅಳಲು ಶುರುಮಾಡಿದರು..
ಅವರು ಪಾಪಿ ಅಂತ ನೋವಿನಲ್ಲಿ ಹೇಳಿದ್ದು, ನನ್ನ ಎದೆಗೆನೇ ನೆರವಾಗಿ ಚೂರಿ ಹಾಕಿದಷ್ಟು ನೋವಾಯಿತು.
" ನೋಡಿ ಗೌರಿ ಅವರೇ, ನಿಮ್ಮ ಮಗಳು ಬೇರೆ ಅಲ್ಲ ನನ್ನ ಮಗಳು ಬೇರೆ.. ನಿಮ್ಮ ಮಗಳು ನನಗೂ ಮಗಳು ಇದ್ದ ಹಾಗೆ, ಇದನ್ನು ತಗೊಳ್ಳಿ... " ಎಂದು ಪ್ಯಾಂಟಿನ ಜೇಬಿನಿಂದ ಹತ್ತು ಸಾವಿರ ತೆಗೆದು ಅವರ ಕೈಯಲ್ಲಿ ಇಟ್ಟೆ.
ಅವರು ತಗೋಳ್ಲಿಕ್ಕೆ ರೆಡಿನೇ ಇರ್ಲಿಲ್ಲ. ಆದರೆ ನಾನು ಬಿಡ್ಲಿಲ್ಲ. "ನಂಗು ಬೇರೆ ಯಾರೂ ಇಲ್ಲ, ಹೆಂಡತಿ ಮೊದಲೇ ಹೋಗಿಬಿಟ್ಟಿದ್ದಾಳೆ, ಈಗ ಮಗಳು ಹೋಗಿ ಬಿಟ್ಟಿದ್ದಾಳೆ. ನೀವು ನನ್ನ ತಂಗಿ ತರಹ, ತಗೊಳ್ಳಿ" ಅಂದೆ.
" ಅಣ್ಣಾ.. ನಿಮ್ಮ ಸಹಾಯ ನ ಯಾವತ್ತೂ ಮರೆಯಲ್ಲ... ಅಂದರು ಗೌರಿ.
ಯಾಕೋ ಅವರು ಬಾಯಿ ತುಂಬಾ ಅಣ್ಣಾ ಅಂತ ಕರೆದದ್ದು ನನ್ನನ್ನು ಅಲ್ಲಾಡಿಸಿಬಿಟ್ಟಿತ್ತು. ಅನಾಥನಾಗಿಯೇ ಬೆಳೆದ ನನಗೆ ಸಂಭಂದಗಳ ಬೆಲೆ ಗೊತ್ತಿರುವುದಾದರೂ ಹೇಗೆ. ಇದಕ್ಕೂ ಮೊದಲು ಈ ತರಹ ನನ್ನನ್ನು ಯಾರೂ ಕರೆದದ್ದು ಕೂಡ ಇಲ್ಲ.
"ಒಂದು ಕಡೆ ಬಡವರ ಹಣ ಕದಿಯುವವರು ಇದ್ದಾರೆ... ಇನ್ನೊಂದು ಕಡೆ ಬಡವರಾಗಿದ್ದರೂ ಉದಾರವಾಗಿ ಕೈಯಲ್ಲಿ ಇದ್ದುದನ್ನು ಇನ್ನೊಬ್ಬ ಬಡವನಿಗೆ ಕೊಡುವವರು ಕೂಡ ಇದ್ದಾರೆ...ನೀವು ಕೂಡ ಬಡವರೇ ಅಂತೀರಾ..ಆದರೂ ಬಡವರಿಗೆನೇ ಸಹಾಯ ಮಾಡ್ತೀರಾ..ಅದಕ್ಕೆ ಯಾರೋ ಹೇಳಿದ್ದು .. ಬಡವರಿಗೆ ಬಡವರೇ ಸಹಾಯಕ್ಕೆ ಬರೋದು ಅಂತ .." ಶಂಕರ್ ಅಂದುಬಿಟ್ಟರು.
ಕೊನೆಗೆ ಮಗುವಿಗೆ ಮತ್ತೊಮ್ಮೆ ಟಾಟಾ ಹೇಳಿ, ಅಲ್ಲಿಂದ ಹೊರ ನಡೆದ. ಗೌರಿ ಶಂಕರ್ ಇಬ್ಬರೂ ನನ್ನೊಟ್ಟಿಗೆನೇ ಆಸ್ಪತ್ರೆಯ ಗೇಟಿನ ಬಳಿ ನಡೆದುಕೊಂಡು ಬಂದರು.
ನನಗೆ ಏನೋ ಹೇಳಬೇಕು ಅಂತ ಅನಿಸಿತು.
" ನೀವು ಏನೂ ತಿಳ್ಕೊಳಲ್ಲ ಅಂದ್ರೆ ಒಂದು ಮಾತು ಹೇಳ್ಲಾ... " ಅಂದೆ.
" ಹೇಳಿ ಅಣ್ಣಾ... " ಗೌರಿ ಹೇಳಿದರು.
"ನನಗೆ ನನ್ನ ಮಗಳ ನೆನಪಾದಾಗಲೆಲ್ಲ, ನಿಮ್ಮ ಮಗಳನ್ನು ಬಂದು ನೋಡಿಕೊಂಡು ಹೋಗಬಹುದಾ..." ಕೇಳಿದೆ.
"ಅಷ್ಟೇ ತಾನೇ... ಬರಬೇಕು ಅಂತ ಅನ್ನಿಸಿದರೆ ದಿನಲೂ ಬನ್ನಿ.. ನಮಗೂ ಒಂಥರಾ ಸಮಾಧಾನ..ನಮಗೂ ನಮ್ಮವರು ಅಂತ ಬೇರೆ ಯಾರೂ ಇಲ್ಲ. ಕಳೆದುಕೊಳ್ಳಲಿಕ್ಕೆ ಇರುವವರ ನೋವು ಕಳೆದುಕೊಂಡವರಿಗೆ ಮಾತ್ರ ಅರ್ಥ ಆಗುವುದು ತಾನೇ..." ಅಂದರು ಗೌರಿ.
ನನಗೆ ಹೆಚ್ಚು ಹೊತ್ತು ಅಲ್ಲಿ ನಿಲ್ಲಲ್ಲು ಆಗಲಿಲ್ಲ, ಸೀದಾ ನನ್ನ ಪಾಳು ಬಿದ್ದ ಗುಡಿಗೆ ಬಂದೆ.
ಆ ದಿನ ನನ್ನ ಬಾಳನ್ನೇ ಚೇಂಜ್ ಮಾಡಿತು. ಆ ದಿನದಿಂದ ನಾನು ಪಿಕ್ ಪಾಕೆಟ್ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಉಡುಪಿಯಲ್ಲಿಯೇ ಕೂಲಿ ಕೆಲಸಕ್ಕೆ ಸೇರಿಕೊಂಡೆ. ಅಂಗಡಿಯಲ್ಲಿ ಮೂಟೆ ಎತ್ತುವುದು, ತೆಂಗಿನೆಣ್ಣೆ ಫಾಕ್ಟರಿ ಕೆಲಸ, ಐಸ್ ಪ್ಲಾಂಟ್ ಕೆಲಸ, ಮೀನು ಬಲೆ ಫಾಕ್ಟರಿ ... ಹೀಗೆ ನಾನು ಮಾಡದ ಕೆಲಸನೇ ಇರ್ಲಿಲ್ಲ. ಕೆಲಸ ಎಲ್ಲಾ ಮುಗಿದ ಮೇಲೆ ದಿನಲೂ ಮಣಿಪಾಲದ ಕ್ಯಾನ್ಸರ್ ಆಸ್ಪತ್ರೆ ಗೆ ಓಡುತ್ತಿದ್ದೆ. ಹಣ್ಣು ತಗೊಂಡು ಹೋಗುತ್ತಿದ್ದೆ. ನನಗೀಗ ಹೊಸ ಒಂದು ಕುಟುಂಬ ಸಿಕ್ಕ ಹಾಗೆ ಆಗಿದೆ. ಈ ಮೊದಲು ಯಾವತ್ತೂ ಈ ರೀತಿ ಆಗಿರಲಿಲ್ಲ. ಗೌರಿ ಅವರು ಬಾಯಿ ತುಂಬಾ ಅಣ್ಣಾ ಅಂತ ಕರೀತಾರೆ, ಮಗು ಸ್ಮೀತಾ ... ಮಾಮ.. ಮಾಮ ಅಂತ ಕರೀತಾಳೆ.
ಬಸ್ಸಿನಲ್ಲಿ ಕೆಲವೊಮ್ಮೆ ಕದಿಯುವಾಗ ಸಿಕ್ಕಿಹಾಕಿಕೊಂಡರೆ ಚೆನ್ನಾಗಿ ಪೆಟ್ಟು ತಿನ್ನುತ್ತಿದ್ದೆ. ಪೆಟ್ಟು ತಿಂದು ತಿಂದು ಅದೇ ಅಭ್ಯಾಸ ಆಗಿತ್ತು. ಬೇಜಾರ್ ಆಗ್ತಾ ಇರ್ಲಿಲ್ಲ. ಆದರೆ ಪ್ರೀತಿ ವಿಶ್ವಾಸ ಇದನ್ನು ನಾನು ಯಾವತ್ತೂ ನೋಡಿದವನೇ ಅಲ್ಲ. ನಾನು ಕೂಡ ಯಾವತ್ತೂ ಯಾರಿಗೂ ಪ್ರೀತಿಯನ್ನು ನೀಡಿದವನಲ್ಲ. ಈ ಪ್ರೀತಿಯನ್ನು ನಾನು ಯಾವತ್ತೂ ಕಳೆದುಕೊಳ್ಳಲಿಕ್ಕೆ ಇಷ್ಟಪಟ್ಟವನಲ್ಲ..
ಒಂದು ದಿನ ಆಸ್ಪತ್ರೆಯಲ್ಲಿಯೇ ಸ್ಮೀತಾ ಳ ಬರ್ತಡೆ ಯನ್ನು ಸರಳವಾಗಿ ಸದ್ದಿಲ್ಲದೇ ಆಚರಿಸಿಕೊಂಡೆವು. ಸುಖವಾಗಿ ನೂರು ಕಾಲ ಬಾಳು ಪುಟ್ಟಿ ಅಂದೆ. ಪಕ್ಕದಲ್ಲಿ ಇದ್ದ ಗೌರಿ ಮತ್ತು ಶಂಕರರ ಕಣ್ಣಲ್ಲಿ ನೀರು. " ಮಾಮ ನಾನು ಮಾತ್ರ ಅಲ್ಲ.. ನೀನೂ ಕೂಡ ನೂರು ವರ್ಷ ಸುಖವಾಗಿ ಬಾಳು.. ಬಾಳ್ತೀನಿ ಅಂತ ಮಾತು ಕೊಡು ನೋಡುವ...ಇದೇ ನೀನು ನಂಗೆ ಕೊಡುವ ದೊಡ್ಡ ಬರ್ತಡೆ ಗಿಫ್ಟ್.. " ಅಂದಳು. ಮುಗ್ಧ ಮಗು, ನೂರು ವರ್ಷ ಬಾಳುತ್ತೆವೆ ಎಂದು ಯಾರಾದರೂ ಮಾತು ಕೊಡುತ್ತಾರೆಯೇ, ಅಲ್ಲ ಬದುಕ ಬೇಕು ಎಂದು ಅನಿಸಿದರೂ, ಯಾರಾದರೂ ನೂರು ವರ್ಷ ಬದುಕಲು ಸಾಧ್ಯವೇ ಈ ಕಾಲದಲ್ಲಿ. ಹುಟ್ಟಿದ ಹಬ್ಬದ ದಿನ ಏನೇನೋ ಹೇಳಿ ಮಗು ಮನಸ್ಸು ನೋಯಿಸಬಾರದು ಎಂದು" ಆಯಿತು ಪುಟ್ಟಿ...ನೂರು ವರ್ಷ ಬಾಳ್ತೀನಿ, ಯಮ ಬಂದು ಕರೆದರೂ.. ಅವನಿಗೆ ಹೇಳ್ತಿನಿ, ನಾನು ಬರಲ್ಲ ನಾನು ನನ್ನ ಪುಟ್ಟಿಗೆ ನೂರು ವರ್ಷ ಬದುಕುತ್ತೀನಿ ಎಂದು ಮಾತು ಕೊಟ್ಟಿದ್ದೀನಿ ಎಂದು ಹೇಳಿ ವಾಪಸ್ ಕಳಿಸ್ತೇನೆ "ಎಂದು ಮಾತುಕೊಟ್ಟೆ. ಮಗು ಸ್ಮೀತಾ ಜೋರಾಗಿ ನಕ್ಕಳು. ನನ್ನನ್ನು ಬಾಚಿ ತಬ್ಬಿಕೊಂಡು ಕೆನ್ನೆಗೆ ಒಂದು ಮುತ್ತು ಕೊಟ್ಟು ಬಿಟ್ಟಳು. ಹಾಗೇ ಬಗ್ಗಿದವನೇ ಅವಳ ಗಲ್ಲಕ್ಕೆ ಒಂದು ಮುತ್ತು ನೀಡಿದೆ, ಗೊತ್ತಿಲ್ಲದೆ ಕಣ್ಣ ಹನಿ ಒಂದು ಜಾರಿತ್ತು! ಆ ದಿನ ಬಹಳ ಸುಂದರವಾಗಿತ್ತು.
ಈ ರೀತಿಯಾಗಿ ಹೇಗೋ ಒಂದು ವರ್ಷ ಕಳೆದದ್ದೇ ಗೊತ್ತಾಗಲಿಲ್ಲ.
ಕೆಲವೊಮ್ಮೆ ಏನು ಆಗಬೇಕೋ ಅಂತ ಅಂದುಕೊಂಡಿರುತ್ತೆವೆಯೋ ಅದು ಆಗಲ್ಲ. ಇನ್ನು ಕೆಲವೊಮ್ಮೆ ಏನು ಆಗಬಾರದು ಅಂತ ಅಂದುಕೊಂಡಿರುತ್ತೆವೆಯೋ ಅದು ಆಗಿಯೇ ಆಗುತ್ತೆ! ಕೆಲವೊಮ್ಮೆ ನಾವು ಯೋಚಿಸಿದ್ದಕ್ಕಿಂತಲೂ ಹೆಚ್ಚಿನದ್ದೇ ಆಗುತ್ತದೆ!!
ನಾನು ಈಗ ಸ್ಮಶಾನದಲ್ಲಿ ಇದ್ದೆನೆ,
ಮತ್ತು ನನ್ನ ಕೈಯಲ್ಲಿ ಹೂವು ಇದೆ ಮತ್ತು ನನ್ನೊಳಗೊಂದು ಅಗಾಧವಾದ ಸ್ಮಶಾನ ಮೌನವಿದೆ....
ಮಾತ್ರವಲ್ಲ... ನನ್ನ ಎದುರಿನಲ್ಲಿ ಮೂರು ಗೋರಿಗಳಿವೆ!!!
ನನ್ನ ಕೈಯಾರೇ ನಾನೇ ಕಟ್ಟಿದ ಗೋರಿ, ಮೂರು ಗೋರಿಗಳ ಮೇಲೂ ನಾನು ಎಂದೂ ಮರೆಯಲಾಗದ ಹೆಸರು .. ಸ್ಮೀತಾ.... ಗೌರಿ..... ಮತ್ತು ಶಂಕರ!!
ಸ್ಮೀತಾ ಬದುಕುವುದು ಹೆಚ್ಚೆಂದರೆ ಒಂದು ವಾರ ಅಂದಾಗ ನನ್ನ ಜೀವ ಅರ್ಧಕ್ಕೆ ಹಾರಿ ಹೋಗಿತ್ತು. ಯಾವತ್ತೂ ದೇವಸ್ಥಾನದ ಒಳಗೆ ಹೋಗದವನು ಮೊದಲ ಬಾರಿ ಉಡುಪಿಯ ಕೃಷ್ಣ ನ ದೇವಸ್ಥಾನದ ಒಳಗೆ ಹೋಗಿ ಕೈ ಮುಗಿದೆ.ನನಗಾಗಿ ಅಲ್ಲ, ಮಾಮ ಮಾಮ ಎಂದು ಸದಾ ಕರೆಯುತ್ತಿದ್ದ ಆ ಮಗುವಿಗಾಗಿ. ಉಡುಪಿ ಕೃಷ್ಣ ನಿಗೆ ಹೇಳಿದೆ.. "ಹೇಯ್ ಕೃಷ್ಣಾ.. ಬೇಕಾದರೆ ಆ ಕ್ಯಾನ್ಸರ್ ಸ್ಮೀತಾಳಿಂದ ಕಿತ್ತುಕೊಂಡು ನನಗೆ ಕೊಡು, ಆದರೆ ಆ ಮಗುವನ್ನು ಮಾತ್ರ ಏನು ಮಾಡಬೇಡ ತಂದೆ, ನಿನ್ನಲ್ಲಿ ಯಾವತ್ತೂ ಏನೂ ಕೇಳಿದವನಲ್ಲ. ಇದೊಂದು ಮಾತು ನಡೆಸಿಕೊಡಬಲ್ಲೆಯಾ....? "
ದಿನಾಲೂ ಪಿಕ್ ಪಾಕೆಟ್ ಮಾಡಿದವನಿಗೆ ಆ ಜನಗಳು ಹಾಕಿದ ಶಾಪಗಳು ಎಷ್ಟೋ. ಆ ವಾಸುದೇವನಿಗೂ ಕೂಡ ನನ್ನ ಪ್ರಾರ್ಥನೆ ಕೇಳಿಸಲಿಲ್ಲ. ನಾನು ನಿಜವಾಗಿಯೂ ಪಾಪಿಯೇ...ಅವನ ಮುಂದೆ ನಿಂತುಕೊಂಡು ತುಂಬಾನೇ ಅತ್ತೆ. ಆದರೆ ನನ್ನಂತವನ ಕಣ್ಣೀರಿಗೆ ಬೆಲೆ ಎಲ್ಲಿ..
ಒಂದು ವಾರದ ಒಳಗೆಯೇ ಮಗು ಸ್ಮೀತಾ ತೀರಿಕೊಂಡು ಬಿಟ್ಟಳು. ಅದರ ಮರುದಿನವೇ ಶಂಕರಣ್ಣನಿಗೆ ಹಾರ್ಟ್ ಅಟ್ಯಾಕ್ ಆಯಿತು. ಗಂಡ ಮಗಳು ಹೋದ ಮೇಲೆ ಗೌರಿ ಅವರಿಗೆ ಈ ಲೋಕ ಶೂನ್ಯ ಅನ್ನಿಸತೊಡಗಿತು.ವಿಷ ಕುಡಿದು ಅವರು ಕೂಡ ಈ ಲೋಕದ ಎಲ್ಲಾ ಲೆಕ್ಕ ಚುಕ್ತ ಮಾಡಿ ಮೇಲೆ ಹೊರಟು ಹೋದರು !!!
ಅವರಿಗೆ ಹಿಂದೆ ಮುಂದೆ ಅಂತ ಯಾರೂ ಇರಲಿಲ್ಲ. ಪ್ರೀತಿಸಿ ಮದುವೆ ಆದವರು. ಬಡತನ ಇತ್ತು ,ಆದರೆ ಅವರೊಳಗಿನ ಪ್ರೀತಿಯಲ್ಲಿ ಬಡತನ ಎಂದೂ ಇರಲಿಲ್ಲ. ಯಾವತ್ತೂ ಒಬ್ಬರನ್ನು ಬಿಟ್ಟು ಒಬ್ಬರು ಇರಲಿಲ್ಲ. ಅದಕ್ಕೆ ಮೂವರು ಕೂಡ ಒಟ್ಟಿಗೆ ಈ ಲೋಕ ಬಿಟ್ಟು, ಆ ಲೋಕ ಸೇರಿದರು. ಇದೇ ಸ್ಮಶಾನದಲ್ಲಿ ಅವರ ಚಿತೆ ಗೆ ನಾನೇ ಬೆಂಕಿ ಹಚ್ಚಿದೆ. ಅವರ ನೆನಪಿಗಾಗಿ ನಾನೇ ನನ್ನ ಕೈಯಾರೆ ಗೋರಿಗಳನ್ನು ಕಟ್ಟಿದೆ!!
ಕ್ಯಾನ್ಸರ್ ಒಬ್ಬರನ್ನು ಮಾತ್ರ ಕೊಲ್ಲಲ್ಲ, ಸುತ್ತ ಮುತ್ತ ಇರುವ ಪ್ರೀತಿ ಪಾತ್ರ ಜೀವಗಳನ್ನು ಕೂಡ ಒಂದು ಅರ್ಥದಲ್ಲಿ ಕೊಲ್ಲುತ್ತೆ. ಜೀವನ ಪೂರ್ತಿ ಕೊರಗುವಂತೆ ಮಾಡಿ ನರಳಿಸಿಬಿಡುತ್ತದೆ. ಅದಕ್ಕಿಂತ ಸಾವೇ ಮೇಲು!
ಇವತ್ತು ಸ್ಮೀತಾ ಳ ಬರ್ತಡೆ, ಹೆಚ್ಚು ಕಡಿಮೆ ಒಂದು ವರ್ಷ ಆಯಿತು, ಅವಳು ತೀರಿಕೊಂಡು, sorry ಅವರೆಲ್ಲಾ ತೀರಿಕೊಂಡು.
ಗೋರಿಯನ್ನೇ ನೋಡಿದೆ,ಎಲ್ಲವೂ ನೆನಪಾಯಿತು. ಮತ್ತೆ ಕಣ್ಣೀರು ಧಾರಾಕಾರ. ತುಂಬಾ ಸಲ ಅನಿಸುತ್ತೆ, ಅವತ್ತು ನಾನು ಗೌರಿ ಯ ಆ ಪರ್ಸ್ ಓಪನ್ ಮಾಡಿ ನೋಡಬಾರದಿತ್ತು, ಅವಳ ಆ ಲೆಟರ್ ಓದಬಾರದಿತ್ತು ಎಂದು.. ನೋಡಿರದೆ ಇದ್ದರೆ, ನಾನಿವತ್ತು ಇಷ್ಟೊಂದು ಕಣ್ಣೀರು ಆಗುತ್ತಿರಲಿಲ್ಲ!
ಇನ್ನು ಕೆಲವೊಮ್ಮೆ ಅನಿಸುತ್ತೆ. ನಾನು ಇವತ್ತು ಹೇಗೆ ಸಭ್ಯ ವ್ಯಕ್ತಿಯಾಗಿ ದುಡಿದು ಮಾರ್ಯದೆಯಿಂದ ಬದುಕುತ್ತಿದ್ದೆನೋ ಅದಕ್ಕೆ ಕಾರಣವೇ ಗೌರಿಯ ಆ ಪರ್ಸ್ ಮತ್ತು ಲೆಟರ್. ಇಲ್ಲದಿದ್ದರೆ ನನಗೆ ಒಬ್ಬಳು ತಂಗಿ, ಒಬ್ಬಳು ಸೊಸೆ, ಒಬ್ಬ ಬಾವ ಖಂಡಿತವಾಗಿಯೂ ಸಿಗುತ್ತಿರಲಿಲ್ಲ.
ಅದರೆ ದೇವರು ಎಷ್ಟು ಕ್ರೂರಿ, ಎಲ್ಲಾ ಕೊಟ್ಟ, ನನ್ನನ್ನು ಸರಿ ದಾರಿಗೆ ತಂದ. ಆದರೆ ನನ್ನಲ್ಲೊಂದು ಬರಿಸಲಾಗದ ವೇದನೆಯನ್ನು ಹಾಗೇ ಶಾಶ್ವತವಾಗಿ ಇಟ್ಟುಬಿಟ್ಟ. ಈ ಜೀವದ ಉಸಿರು ಹೋಗುವವರೆಗೂ, ಆ ನೋವು ಮಾಸುವುದಿಲ್ಲ. ಎಲ್ಲವನ್ನೂ ಕೊಟ್ಟು, ಹಾಗೆಯೇ ಅಷ್ಟೇ ನಾಜೂಕಾಗಿ, ಕೊಟ್ಟ ಎಲ್ಲವನ್ನೂ ಒಂದು ಚೂರೂ ಬಿಡದೇ ಕಿತ್ತುಕೊಂಡು ಬಿಟ್ಟ ಆ ಭಗವಂತ..
ನನಗೆ ಅತೀವ ನೋವು ಆದಾಗ ಇವತ್ತಿನ ಹಾಗೆಯೇ ಈ ಸ್ಮಶಾನದ ಒಳಗೆ ನಡೆದು ಬರುತ್ತೆನೆ. ಈ ಮೂರು ಗೋರಿಗಳ ಬಳಿ ಕೂರುತ್ತೆನೆ. ಈ ಮೂರು ಗೋರಿಗಳನ್ನು ಬಿಟ್ಟರೆ ನನಗೆ ಅಂತ ಈ ಪ್ರಪಂಚದಲ್ಲಿ ಬೇರೆ ಯಾರು ಇದ್ದಾರೆ... ಯಾರೂ ಇಲ್ಲ. ಇಲ್ಲಿಗೆ ಬಂದಾಗಲೆಲ್ಲ ಬಿಕ್ಕಿ ಬಿಕ್ಕಿ ಅಳುತ್ತೆನೆ. ಕಳ್ಳನಿಗೂ ಕಣ್ಣೀರು ಬರುತ್ತದೆ. ಯಾಕೆಂದರೆ ಈ ಕಳ್ಳನನ್ನೇ ಮನುಷ್ಯನನ್ನಾಗಿ ಮಾಡಿದ ಗೋರಿಗಳು ಇವು..!!
ಕೈಯಲ್ಲಿದ್ದ ಹೂವನ್ನು ಸ್ಮೀತಾ ಳ ಗೋರಿಯ ಮೇಲೆ ಇಟ್ಟೆ. ಜೋರಾಗಿ ಮಳೆ ಸುರಿಯಿತು. ನಿಧಾನವಾಗಿ ಸ್ಮಶಾನದಿಂದ ಭಾರವಾದ ಹೆಜ್ಜೆಗಳೊಂದಿಗೆ ಹೊರ ನಡೆಯಲು ಶುರು ಮಾಡಿದೆ.
ಮನಸ್ಸಿನಲ್ಲಿ ಇದ್ದದ್ದು ಒಂದೇ.. "ಹೇಯ್ ದೇವರೇ ನಾನು ಪರ್ಸು ಕಳ್ಳನಾಗಿಯೇ ಉಳಿಯಬಾರದಿತ್ತೇ..ಈ ನೋವನ್ನು ಭರಿಸುವ ಶಕ್ತಿ ನನಗಿಲ್ಲ.. 😭🙏🏻..."
ಎಷ್ಟೋ ಬಾರಿ ನಾನು ಕೂಡ ಸಾಯಬೇಕು ಅಂತ ಅನಿಸುತ್ತದೆ, ನಾನು ಬದುಕುವುದಾದರೂ ಯಾರಿಗಾಗಿ, ನನಗೆಂದು ಇಲ್ಲಿ ಯಾರಿದ್ದಾರೆ, ಆ ತರಹದ ಆಲೋಚನೆ ಬಂದಾಗಲೆಲ್ಲ
ಕಿವಿಯಲ್ಲಿ ಮಾತ್ರ ಸ್ಮೀತಾ ಪುಟ್ಟಿ ಹೇಳಿದ ಮಾತೇ ಗುಂಯ್ ಗುಡುತ್ತದೆ.. " ಮಾಮ ನಾನು ಮಾತ್ರ ಅಲ್ಲ.. ನೀನೂ ಕೂಡ ನೂರು ವರ್ಷ ಸುಖವಾಗಿ ಬಾಳು.. ಬಾಳ್ತೀನಿ ಅಂತ ಮಾತು ಕೊಡು ನೋಡುವ...ಇದೇ ನೀನು ನಂಗೆ ಕೊಡುವ ಅತೀ ದೊಡ್ಡ ಬರ್ತಡೆ ಗಿಫ್ಟ್ "
ಕಣ್ಣೀರಿನೊಂದಿಗೆ ಮಳೆಯೂ ಸೇರಿ, ಕಣ್ಣೀರಿನ ರಭಸ ಹೆಚ್ಚಾಯಿತು!!! ಸ್ಮಶಾನದಿಂದ ಕಣ್ಣೀರಾಗುತ್ತಾ ಹಾಗೇ ಹೊರ ನಡೆದು ಬಿಟ್ಟೆ!
.................................ಶುಭಂ.................................
ಬೆಲೆ ಕಟ್ಟಲಾಗದ ಸಂಬಂದಗಳೇ, ನಮ್ಮ ಕಣ್ಣೀರಿಗೊಂದು ಬೆಲೆ ತಂದುಕೊಡುವುದು!
AB pacchu

Comments
Post a Comment