ತಂಗಾಳಿಯಲ್ಲಿ ನಾನು ತೇಲಿಬಂದೆ..
ರಾತ್ರಿ ಹತ್ತು ಗಂಟೆಯ ಸಮಯ.
ಚಿಪ್ಸ್ ತಿನ್ನುತ್ತಾ ಬಹಳ ಏಕಾಗ್ರತೆಯಿಂದ ಮೂವಿ ನೋಡುತ್ತಾ ಇದ್ದೆ.
ಹೌದು ನಮ್ಮ ಮನೆಯಲ್ಲಿಯೇ...
ನಾನು ಮತ್ತು ಅಪ್ಪ ಇಬ್ಬರೇ ಭಯಂಕರ ಡೀಪಾಗಿ ಮೂವಿ ನೋಡುತ್ತಿದ್ದೆವು.
ಅದು ಅನಂತ್ ನಾಗ್ ಮೂವಿ.
ಹಳೆಯ ಮೂವಿಗಳಲ್ಲಿ ನಾನು ಅನಂತ್ ನಾಗ್ ಅವರ ಮೂವಿ ಆದ್ರೆ ಮಾತ್ರ ನೋಡುವುದು.
ನನ್ನ ಅಪ್ಪ ಹಾರರ್ ಫಿಲಂ, ದೆವ್ವ, ಭೂತಗಳ ಫಿಲಂ ಆದ್ರೆ ಮಾತ್ರ ನೋಡೋದು.
So ಇಬ್ಬರದ್ದೂ ಒಂದರಲ್ಲೇ ಇತ್ತಲ್ಲ,ಹಾಗಾಗಿ ಇಬ್ಬರೂ ಒಟ್ಟಿಗೆ ಕುಳಿತು ನೋಡುತ್ತಿದ್ದೆವು.
ಇಲ್ಲದಿದ್ದರೆ ಅಪ್ಪನೊಟ್ಟಿಗೆ ಕುಳಿತುಕೊಂಡು ನಾನು ಯಾಕೆ ಮೂವಿ ನೋಡ್ತೆನೆ.
ಅದು "ನಾ ನಿನ್ನ ಬಿಡಲಾರೆ.." ಫಿಲಂ.
ಮೂವಿಯಲ್ಲಿ ಅನಂತ್ ನಾಗ್ ಮೇಲೆ ಇನ್ನೂ ದೆವ್ವ ಬಂದಿರಲಿಲ್ಲ.
ಆದ್ರೆ ದೆವ್ವ Confirm ಬಂದೇ ಬರುತ್ತೆ ಅಂತ ಇಬ್ಬರಿಗೂ ಗೊತ್ತು.
ಏಕೆಂದರೆ ಆ ಮೂವಿಯನ್ನೇ ಅಪ್ಪ ಮನೆಯಲ್ಲಿ ಹತ್ತಿಪ್ಪತ್ತು ಸಲ ನೋಡಿದ್ದಾರೆ. ನಾನು ಅನಂತ್ ನಾಗ್ ಗಾಗಿ ಹೆಚ್ಚು ಕಡಿಮೆ ಐದಾರು ಬಾರಿ ಆದರೂ ಅದನ್ನು ನೋಡಿದ್ದೇನೆ.
ಅವರಿಗೆ ಈ ತರಹ ಹಾರರ್ ಮೂವಿ ನೋಡುವುದರಲ್ಲಿ ಅಪ್ಪನಿಗೆ ಅದೇನು ಸುಖವೋ.. ಧೈರ್ಯವೋ.. ದೇವರಿಗೆ ಗೊತ್ತು.
ಹಾಗಂತ ನನಗೆ ಧೈರ್ಯ ಇಲ್ಲ ಅಂತ ಅರ್ಥ ಅಲ್ಲ.
ನನಗೆ ಹಾರರ್ ಮೂವಿ ಅಂದ್ರೆ,ದೆವ್ವ ಅಂದ್ರೆ ಸಿಕ್ಕಾಪಟ್ಟೆ ಹೆದರಿಕೆ ಅಷ್ಟೇ..!
ಆದ್ರೆ ಸ ಅಷ್ಟೊಂದು ಭಯ ಇದ್ರೂ ಕೂಡ... ನನಗೆ ಭಯವಿದೆ ಎಂದು ಎಲ್ಲೂ ತೋರಿಸಲ್ಲ ನಾನು.
ಭಯ ಇದ್ರೂ ಅದನ್ನು ಸ್ವಲ್ಪವೂ ತೋರಿಸದೇ ಎದುರಿನವರನ್ನು ಭಯಬೀಳಿಸುವುದು ನನ್ನ ಹುಟ್ಟು ಗುಣ ಹಾಗೂ ಅದು ನನ್ನ ರಕ್ತದಲ್ಲಿ ಹಾಗೂ ಬ್ಲಡ್ ನಲ್ಲಿಯೇ ಇದೆ.
ಆ "ನಾ ನಿನ್ನ ಬಿಡಲಾರೆ.." ಮೂವಿಯಲ್ಲಿ ಕಾಮಿನಿ ಅಂತ ಒಬ್ಬಳು ಹುಡುಗಿ. ಅವಳು ನಮ್ಮ ಸಿನಿಮಾದ ಹೀರೋ ಕೃಷ್ಣನನ್ನು ಅಂದ್ರೆ ಅನಂತ್ ನಾಗ್ ಅನ್ನು ಸಿಕ್ಕಾಪಟ್ಟೆ ಇಷ್ಟ ಪಟ್ಟು ಲವ್ ಪ್ರಪೋಸ್ ಮಾಡ್ತಾಳೆ.
ಅದ್ರೆ ಬಹಳ ಒಳ್ಳೆಯ ಮನುಷ್ಯ ನಮ್ಮ ಕೃಷ್ಣ ಅದನ್ನು ನಿರಾಕರಿಸುತ್ತಾನೆ... ಏಕೆಂದರೆ ಮಡದಿಯನ್ನು ಪ್ರೀತಿಸುವವನು ಕಾಮಿನಿಯನ್ನು ಹೇಗೆ ಸ್ವೀಕರಿಸುತ್ತಾನೆ 🤷♂️
ನಂತರ ಕಾಮಿನಿ ಸತ್ತು ದೆವ್ವ ಆಗಿ ಪ್ರತೀ ದಿನ ಕೃಷ್ಣನ ದೇಹದಲ್ಲಿ ಬಂದು ಸಕ್ಕತ್ ಆಗಿ ಆಟ ಆಡಿಸೋದು, ಮಂಚವನ್ನು ಗಾಳಿಯಲ್ಲಿ ಗಿರಿ ಗಿರ ಎಂದು ತೇಲಿಸೋದು,ಮನೆಯೊಳಗೆ ಬಿರುಗಾಳಿ ಬರೋದು,ಬಿರುಗಾಳಿಯೊಂದಿಗೆ ಊರಿನಲ್ಲಿರುವ ತರಗೆಲೆಗಳು ಕಸಕಡ್ಡಿ ಮನೆಯೊಳಗೆ ಬಂದು ಬೀಳೋದು, ಆ ನಂತರ ಅದನ್ನು ನಮ್ಮ ಸಿನಿಮಾದ ನಾಯಕಿ ಕೃಷ್ಣನ ಹೆಂಡತಿ ಗಾಯತ್ರಿ ದಿನಾಲೂ (ಲಕ್ಷೀ) ಆ ಕಸ ಗುಡಿಸೋದು... ಕೊನೆಯಲ್ಲಿ ಗಾಯತ್ರಿಯೇ ಕೃಷ್ಣನ ದೆವ್ವ ಬಿಡಿಸೋದು ಇದು ಮೂವಿಯ ಕಥೆ.
ಎಷ್ಟು ಸಲ ಅಂತ ನಾನು ನೋಡಿಲ್ಲ ಅದನ್ನು.ಹಾಗಾಗಿ ಅಷ್ಟು ಸುಲಭಕ್ಕೆ ಮರೆತು ಹೋಗುವ ಕಥೆ ಅಲ್ಲ ಅದು.
ಅನಂತ್ ನಾಗ್ ಇದ್ದಾರೆ ಅಂತ ಆ ಮೂವಿ ನೋಡ್ತೇನೆ ಅಷ್ಟೇ, ಇಲ್ಲದಿದ್ದರೆ ಆ ದೆವ್ವದ ಮೂವಿ ನಾನು ಯಾಕೆ ನೋಡ್ತೇನೆ.
ಕಾಮಿನಿ ದೆವ್ವ ಕೃಷ್ಣನ ಮೇಲೆ ಆಗ ಬರಬಹುದು.. ಈಗ ಬರಬಹುದು... ಎಂಬ ಭಯಂಕರ ಇಂಟ್ರೆಸ್ಟ್ ಅಲ್ಲಿ,ಕುತೂಹಲದಲ್ಲಿ ಇದ್ದರು ನನ್ನ ಅಪ್ಪ ನೀಲಣ್ಣ.
ಕೊನೆಗೂ ಕೃಷ್ಣನ ಮೇಲೆ ಕಾಮಿನಿ ದೆವ್ವ ಬಂದೇ ಬಿಟ್ಟಿತು..!
ದೆವ್ವ ಬಂದದ್ದೇ ತಡ ಅಪ್ಪ ಮನೆಯ ಲೈಟ್ ಎಲ್ಲಾ ಆಫ್ ಮಾಡಿ, ಕಿಟಕಿ ಕರ್ಟನ್ ಎಲ್ಲಾ ಫುಲ್ ಎಳೆದು ಮನೆಯನ್ನು ಕತ್ತಲೆ ಕತ್ತಲೆ ಮಾಡಿ ಬಿಟ್ಟರು.
ಅಪ್ಪ... ಯಾಕೆ ಹೀಗೆ ಮಾಡ್ತೀರಾ...ಲೈಟ್ ಇದ್ರೆ ಏನಾಗ್ತದೆ... ಅಂದೆ.
ನೀನು ಸುಮ್ಮನೆ ಕೂತ್ಕೋ.. ನಿಂಗೆ ಏನೂ ಸ ಗೊತ್ತಿಲ್ಲ. ಹೀಗೆಲ್ಲ ಮಾಡಿ ನೋಡಿದ್ರೆ ದೆವ್ವದ ಮೂವಿಯ ಮಜಾನೇ ಬೇರೆ.. ನೀನು ದೆವ್ವ ಅಂದ್ರೆ ಹೆದ್ರಿ ಸಾಯ್ತೀಯಾ...ಹೆದರುಪುಕ್ಕಲ ನೀನು .. ದೆವ್ವದ ಮೂವಿ ನೋಡ್ಲಿಕ್ಕೆ ಗುಂಡಿಗೆ ಬೇಕು...ಬರೀ ಬಾಯಿಗೆ ಬಂದ ಹಾಗೆ ಮಾತಾಡುವಾಗ ಹಾಗೆ ಅಲ್ಲ ಅದು.. ಅಂದ್ರು..
ಅಪ್ಪನದ್ದು ಇದು ಯಾಕೋ ಸ್ವಲ್ಪ ಜಾಸ್ತಿ ಆಯಿತು ಅಂತ ಅನಿಸಿತು ನನಗೆ.
ನನ್ನನ್ನೇ ದೆವ್ವಕ್ಕೆ ಹೆದರೋನು, ಹೆದರು ಪುಕ್ಕಲ ಎಲ್ಲಾ ಅಂತಾರಲ್ಲಾ ಇವರು..
ಇರಲಿ.. ಇರಲಿ ಇವರಿಗೆ ಸರಿಯಾಗಿ ಮಾಡುವೆನು ಅಂತ ಮನಸ್ಸಿನಲ್ಲಿಯೇ ನಿರ್ಧರಿಸಿದೆ.
ಚಿಪ್ಸ್ ತಿನ್ನುತ್ತಲೇ ಕೇಳಿದೆ.. ಅಪ್ಪ ಈ ದೆವ್ವ - ಭೂತ ಎಲ್ಲಾ ಇರೋದು ನಿಜಾನಾ..
ಹೌದು ಮಾರಾಯ ಇದೆ... ಸ್ವಲ್ಪ ನೆಮ್ಮದಿಯಾಗಿ ಫಿಲಂ ನೋಡ್ಲಿಕ್ಕೆ ಬಿಡು ಈಗ.. ಅಂದರು.
ಅಪ್ಪ ಈ ದೆವ್ವಗಳು ನಮಗೆ ಈಗ ಬೇಕು ಅಂದ್ರೆ ಎಲ್ಲಿ ಸಿಗ್ತದೆ..
ನಿಂಗೆ ಎಂತ ಈಗ ಹೋಗಿ ಅದರೊಟ್ಟಿಗೆ ಡ್ಯಾನ್ಸ್ ಮಾಡಿ ಬರ್ಲಿಕ್ಕೆ ಉಂಟಾ..
ಹೌದು..ಏನೋ ಒಂದು... ನಾನು ಒಮ್ಮೆ ಅವುಗಳನ್ನು ನೋಡ್ಬೇಕು.. ಆಗಲೇ ನಾನು ಅವುಗಳು ಇದೆ ಅಂತ ನಂಬೋದು ಅಂದೆ.
ಹೌದಾ... ಹಾಗಾದರೆ ನಮ್ಮ ಊರಿನ ಪಕ್ಕದಲ್ಲಿ ಒಂದು ಸ್ಮಶಾನ ಇದೆ ನೋಡು.. ಅಲ್ಲಿಗೆ ಹೋಗು ನಿನಗೆ ಬೇಕಾದಷ್ಟು ದೆವ್ವ ಸಿಗ್ಬಹುದು.. ಇವತ್ತು ಅಮಾವಾಸ್ಯೆ ಬೇರೆ ಹಾಗಾಗಿ ಮಿಸ್ ಆಗುವ ಚಾನ್ಸೇ ಇಲ್ಲ, ಖಂಡಿತಾ ಇರುತ್ತೆ.. ಅಂದರು.
Confirm ಅಲಾ..ಹಾಗಾದ್ರೆ ಈಗ್ಲೇ ಹೋಗ್ತೇನೆ ಎಂದೆ.
ಈಗ ಬೇಡ.. ಈಗ ಜಸ್ಟ್ ಹತ್ತು ಗಂಟೆ ಆಗಿದ್ದು. ಹನ್ನೆರಡು ಗಂಟೆ ಮೇಲೆ ಹೋಗು.ಹಾಗೂ ಸದ್ಯಕ್ಕೆ ಜಾಸ್ತಿ ಪ್ರಶ್ನೆ ಕೇಳ್ಬೇಡ ನನಗೆ ಸುಮ್ಮನೆ ಫಿಲಂ ನೋಡ್ಲಿಕ್ಕೆ ಬಿಡು ಅಂದರು.
ಮೂವಿಯಲ್ಲಿ ಕಥೆ ಮುಂದುವರಿದಿತ್ತು..
ಅನಂತ್ ನಾಗ್ ಮೇಲೆ ದೆವ್ವ ಬಂದಾಗ ಯಾಕೋ ನನಗೆ ಅವರ ಮುಖದಲ್ಲಿ ಓವರ್ ಆಗಿ ಪೌಡರ್ ಹಾಕಿದ್ದಾರೆ ಅಂತ ಅನಿಸಿತು.
ಮನೆಯ ಹೊರ ಬಂದೆ..
ನಾನು ಮನಸ್ಸಿನಲ್ಲಿಯೇ ದೃಡ ನಿರ್ಧಾರ.. ದೃಢ ಸಂಕಲ್ಪ ಮಾಡಿ ಆಯಿತು.. ಆದದ್ದು ಆಗಲಿ ನಾನು ಇವತ್ತು ರಾತ್ರಿ ಹನ್ನೆರಡು ಗಂಟೆ ಮೇಲೆ ಸ್ಮಶಾನಕ್ಕೆ ಹೋಗಿ ದೆವ್ವ ನೋಡುವುದೇ ಅಂತ.
ಒಬ್ಬನಿಗೆ ಹೋಗ್ಲಿಕ್ಕೆ ಭಯ.. ರಪ್ಪನೇ ನಮ್ಮ ಪಕ್ಕದ ಮನೆಯ ದರ್ಶನ್ ದೊಡ್ಡಪ್ಪ ಹಾಗೂ ರಕ್ಷಿತ್ ದೊಡ್ಡಮ್ಮನವರ ಸುಪುತ್ರ ಮುರ್ಲಿ(ಮುರುಳಿ) ನೆನಪಾಯಿತು.
ಕಾಲ್ ಮಾಡಿ ಹೇಳಿದೆ.. ಹೇಯ್ ಮುರ್ಲಿ.. ನಾನಿವತ್ತು ಸ್ಮಶಾನಕ್ಕೆ ದೆವ್ವ ನೋಡ್ಲಿಕ್ಕೆ ಹೋಗ್ತಾ ಇದ್ದೇನೆ. ನೀನು ಸ ದೆವ್ವ ಎಲ್ಲಾ ನೋಡಿಲ್ಲ ಅಲ್ವಾ.. ಬಾ.. ಇವತ್ತು ನನ್ನೊಂದಿಗೆ...ನಿಂಗೆ ದೆವ್ವ ನಾನು ತೋರಿಸ್ತೇನೆ.. ಏನು ಭಯ ಪಡ್ಬೇಡ.. ಅಂದೆ.
ಅದಕ್ಕೆ ಅವನು - ಹೋಗು ಮಾರಾಯ.. ನಿಂಗೆ ಏನು ಮಾಡ್ಲಿಕ್ಕೆ ಬೇರೆ ಏನು ಕೆಲಸ ಇಲ್ವಾ.. ದೆವ್ವ ಅಂತೆ.. ದೆವ್ವ..ನೀನೇ..ಹೋಗಿ ಸಾಯಿ.. ಅಂದ.
ಈ ವಠಾರದಲ್ಲಿ ನನ್ನನ್ನು ಯಾಕೆ ಯಾರೂ ಅಷ್ಟೊಂದು ಸೀರಿಯಸ್ ಆಗಿ ತಗೋತಾನೇ ಇಲ್ಲ. ಅದರಲ್ಲೂ ನನಗೆ ಕೆಲಸ ಇಲ್ಲ ಅನ್ನುವುದೇ ಇವರಿಗೆಲ್ಲಾ ನನ್ನನ್ನು ಕಿಂಡಲ್ ಮಾಡಲು ಇರುವ ಅತೀ ದೊಡ್ಡ ಪ್ಲಸ್ ಪಾಯಿಂಟ್. ಇರಲಿ ಇರಲಿ ಒಂದು ದಿನ ಇವರನ್ನೆಲ್ಲಾ ನಾನು ನನ್ನ ಕೈಯಲ್ಲಿ ಆಟ ಆಡಿಸುವೆನು..
ಈ ಮುರ್ಲಿ ಗೆ ಒಂದು ಹುಡುಗಿ ಫಿಕ್ಸ್ ಬಾರೀ ಕಷ್ಟ ಆಯಿತು. ಎಲ್ಲಿಗೆ ಕರೆದರೂ ಬರಲ್ಲ.ಬರೀ ಅವಳೊಂದಿಗೆ ಫೋನ್ ಅಲ್ಲಿ ಮಾತಾಡಿಯೇ ಸಾಯ್ತಾ ಇರ್ತಾನೆ. ಇವನಿಗೆ ಅವಳೊಂದಿಗೆ ಮದುವೆ ಆಗುವವರೆಗೆ ಈ ಕಷ್ಟ ತಪ್ಪಿದಲ್ಲ... Especially ನನಗೆ. ಏಕೆಂದರೆ ನಾನು ಎಲ್ಲಿಗೆ ಕರೆದರೂ ಅವನು ಬರಲ್ಲ ಈಗ. ಇಡೀ ದಿನ ಬರೀ ಅವಳೊಂದಿಗೆ ಪೋನಿನಲ್ಲಿ ಮಾತುಕತೆ ಅಷ್ಟೇ ಅವನ ದಿನಚರಿ ಆಗಿ ಬಿಟ್ಟಿದೆ ಈಗ.
ಮುರ್ಲಿ ತಂಗಿ ಇಂಪನ ನೆನಪಾಯಿತು. ನನಗೂ ತಂಗಿಯೇ. ಅವಳೊಬ್ಬಳೇ ನನಗೆ ಈ ವಠಾರದಲ್ಲಿ ಗೌರವ ಅಂತ ಕೊಡುವುದು..
ಅವಳಿಗೆ ಕಾಲ್ ಮಾಡಿ ಹೇಳಿದೆ - ಹೇಯ್ ಇಂಪು.. ನಾನಿವತ್ತು ದೆವ್ವ ನೋಡ್ಲಿಕ್ಕೆ ಸ್ಮಶಾನಕ್ಕೆ ಹೋಗ್ತಾ ಇದ್ದೀನಿ..ಒಬ್ಬನಿಗೆ ಹೋಗ್ಲಿಕ್ಕೆ ಬೇಜಾರು.. ನೀನು ಕೂಡ ಬಾರೆ.. ಅಂದೆ
ನೀಲು ಅಣ್ಣ.. ನಿಂಗೆ ಹುಚ್ಚು ಹಿಡಿದಿದೆಯಾ.. ಬೋರ್ ಆಗುತ್ತೆ ಅಂತ ಹುಡುಗಿನಾ ಯಾರಾದರೂ ಸ್ಮಶಾನಕ್ಕೆ ಕರೀತಾರಾ..
ಓಹ್... ಹೌದಲ್ಲ.. ಹಾಗಾದ್ರೆ ನಾನು ಒಬ್ಬನೇ ಹೋಗು ಅಂತೀಯ..
ಹೋಗು ಅಣ್ಣ.. ನೀನು ಯಾರು ಈ ಪುಲಿಕೇಶಿಪುರದ ವೀರ ಪುಲಿಕೇಶಿ ನೀನು.. All the best.. ಅಂದಳು.
ಆಹಾ... ದೆವ್ವ ನೋಡಲು ಎಂತಹ ಪ್ರೋತ್ಸಾಹ.. ಉತ್ತೇಜನ...
ಆದರು ಅವಳು ಅಷ್ಟಾದರೂ ಪ್ರೋತ್ಸಾಹ ಕೊಡ್ತಾಳೆ.. ಬೇರೆಯವರು ನಾನು ಏನೇ ಮಾಡಿದ್ರೂ ಬರೀ ಮಕ್ಕರ್(ತಮಾಷೆ) ಮಾಡ್ತಾರೆ ಅಷ್ಟೇ. ಅದಕ್ಕೆ ಇಂಪು ಸಿಸ್ ಅಂದ್ರೆ ನನಗೆ ಇಷ್ಟ.
ಇವರೆಲ್ಲಾ ಬರದಿದ್ದರೆ ಏನಾಯಿತು.. ನಾನು ಒಮ್ಮೆ ಡಿಸೈಡ್ ಮಾಡಿದ ಮೇಲೆ.. ಕರ್ಣನಂತೆ ಇಟ್ಟ ಗುರಿ.. ತೊಟ್ಟ ಬಾಣ ಎಂದಿಗೂ ಚೇಂಜ್ ಮಾಡಲಾರೆ.. ಅದು ನನಗೆ ಶೋಭೆ ತರುವುದಿಲ್ಲ..
ನನಗೆ ನಾನೇ ಸಾಥಿ... ನನಗೆ ನಾನೇ ಹಾತಿ.. ಎಂದು ಹನ್ನೆರಡು ಗಂಟೆ ಆಗುವುದನ್ನೇ ಕಾಯುತ್ತಾ ಕುಳಿತೆ.
ಹನ್ನೆರಡು ಆಗುತ್ತಾ ಬರುವಾಗ ಎದೆ ಬಡಿತ ಲೈಟ್ ಆಗಿ ಜೋರಾಗಲು ಶುರು ಆಯಿತು.
ಎಷ್ಟಾದರೂ ದೆವ್ವ... ಫಸ್ಟ್ ಟೈಮ್.. ಅದು ಕೂಡ ಸ್ಮಶಾನದಲ್ಲಿ... ಅಮಾವಾಸ್ಯೆ ರಾತ್ರಿ ಒಬ್ಬನೇ Live ಆಗಿ ನೋಡ್ಲಿಕ್ಕೆ ಹೋಗ್ತಾ ಇದ್ದೇನೆ....
ಕೊನೆಗೂ ಹನ್ನೆರಡು ಗಂಟೆ ಆಯಿತು..
ಅಪ್ಪ "ನಾ ನಿನ್ನ ಬಿಡಲಾರೆ" ಮೂವಿ ನೋಡಿ ಅದಾಗಲೇ ಒಳಗಿನ ಕೋಣೆಯಲ್ಲಿ ಹೋಗಿ ಮಲಗಿದ್ದರು.
ಹೋಗಿ ಎಬ್ಬಿಸಿದೆ.. ಅಪ್ಪ ನಾನು ಸೀರಿಯಸ್ ಆಗಿ ಸ್ಮಶಾನಕ್ಕೆ ಹೋಗ್ತ ಇದ್ದೀನಿ.. ನೀವೊಂದು ಅಪ್ಪ ಆಗಿ.. ವಯಸ್ಸಾದ ಹುಡುಗ ಈ ತರಹ ನಡು ರಾತ್ರಿ ಸ್ಮಶಾನ ದೆವ್ವ ಅಂತ ಎಲ್ಲೆಲ್ಲೋ ಹೋಗ್ತಾ ಇದ್ರೆ..ನೀವು ತಡೆಯುವ ಯಾವುದೇ ಹರ ಸಾಹಸ ಮಾಡುವುದಿಲ್ವಾ ಅಪ್ಪ... ಅಂದೆ.
ಆದರೆ ನನ್ನ ಅಪ್ಪ ನನಗಿಂತ ದೊಡ್ಡ ಕಳ್ಳ.
ಇಲ್ಲ.. ಇಲ್ಲ.. ಅಂತಹ ತಡೆಯುವ ಯಾವುದೇ ದುಸ್ಸಾಹಸ ನಾನು ಮಾಡಲಾರೆ.. ನನ್ನ ಎಲ್ಲಾ ಪ್ರೋತ್ಸಾಹ ಇದೆ...ಸ್ಮಶಾನಕ್ಕೆ ಬೇಕಾದರೂ ಹೋಗು.. ಎಲ್ಲಿಗೆ ಬೇಕಾದರೂ ಹೋಗು.ಸದ್ಯಕೆ ನನಗೆ ಈಗ ಮಲಗ್ಲಿಕ್ಕೆ ಬಿಡು ಎಂದು ಬೆಡ್ ಶಿಟ್ ಎಳೆದುಕೊಂಡು ಮಲಗಿಯೇ ಬಿಟ್ಟರು ಮೈ ಫಾದರ್ ನೀಲಣ್ಣ.
ಅಲ್ಲಿ ಸ್ಮಶಾನದಲ್ಲಿ ಎಷ್ಟು ಹೊತ್ತು ಆಗುತ್ತೋ ಏನೋ.. ಬೋರ್ ಆದ್ರೆ ತಿನ್ಲಿಕ್ಕೆ ಏನಾದರೂ ಬೇಕಾಗ್ಬಹುದು ಅಂತ ಮನೆ ಎಲ್ಲಾ ಹುಡುಕಾಡಿದೆ..
ಹತ್ತು ಲೇಯ್ಸ್ ಪ್ಯಾಕೇಟ್(ಚಿಪ್ಸ್)ಗಳ ಒಂದು ಮಾಲೆ ಇತ್ತು ಅಷ್ಟೇ..
ಇರಲಿ ಅಂತ ಅದನ್ನೇ ಹೆಗಲು ಮೇಲೆ ಹಾಕಿಕೊಂಡು ನಮ್ಮ ಪುಲಿಕೇಶಿ ಪುರದ ಪಕ್ಕದಲ್ಲೇ ಇರೋ ಸ್ಮಶಾನ ಕಡೆಗೆ ನಡೆಯ ತೊಡಗಿದೆ... Of course ಇಂಪನ ಹೇಳಿದ ವೀರ ಪುಲಿಕೇಶಿ ರೇಂಜಿಗೆ.
ಲೇಯ್ಸ್ ಪ್ಯಾಕೇಟ್ ನ ಮಾಲೆ ಹೆಗಲ ಮೇಲೆ ಯಾವ ತರಹ ಹಾಕಿಕೊಂಡಿದ್ದೆ ಎಂದರೆ ನೋಡಿದವರು ಯಾರಾದರೂ WWE ಯ ಬೆಲ್ಟ್ ಅನ್ನು ಹೆಗಲ ಮೇಲೆ ಹಾಕಿಕೊಂಡು ಯಾವುದೋ ಚಾಂಪಿಯನ್ ಶಿಪ್ ಮ್ಯಾಚ್ ಆಡ್ಲಿಕ್ಕೆ ಹೋಗ್ತಾ ಇದ್ದಾನೆ ಅಂತ ಅನ್ಕೋಬೇಕು..
ಹೌದು.. ಒಂದು ರೀತಿಯಲ್ಲಿ ನೋಡಿದರೆ ಸದ್ಯಕ್ಕೆ ನಾನು Wwe ಯ Undertaker ತರಹನೇ ಇದ್ದೆ.. ಅವನು ಸಹ ಸ್ಮಶಾನದಿಂದ ಎಲ್ಲಾ ಎದ್ದು ಬರುವ wrestler ಅಲ್ವಾ.. ಆದ್ರೆ ನಂಗೆ ಅವನ ತರಹ ಅಲ್ಲಿಗೆ ಹೋಗಿ ದೆವ್ವಗಳ ಜೊತೆ ಫೈಟ್ ಮಾಡ್ಲಿಕ್ಕೆ ಏನೂ ಇಲ್ಲ. ಜಸ್ಟ್ ನೋಡಿ ಬರುವುದು ಅಷ್ಟೇ.
ನಡೆದು ನಡೆದು ನೇರವಾಗಿ ಸ್ಮಶಾನದೊಳಗೆ ಬಂದೆ.
ಅಲ್ಲಿ ಅದಾಗಲೇ ಯಾರೋ ಒಬ್ಬರು ವೈಟ್ ಬಟ್ಟೆ ಹಾಕಿಕೊಂಡು ಗೋರಿ ಒಂದರ ಮೇಲೆ ಕುಳಿತುಕೊಂಡಿದ್ದರು..!!
ಒಹ್.. ಬಹುಶಃ.. ಇವರು ಕೂಡ ನನ್ನಂತೆ ದೆವ್ವ ನೋಡ್ಲಿಕ್ಕೆ ಬಂದಿರ್ಬೇಕು ಅಂತ ಅನ್ಕೊಂಡೆ..
ಸೀದಾ ಅವರ ಬಳಿ ಹೋಗಿ...
ಹಾಯ್... ನಾನು ನೀಲಮೇಘ ಅಂತ.. ಎಲ್ಲರೂ ನನ್ನನ್ನು ನೀಲು ನೀಲು ಅಂತ ಕರೀತಾರೆ.. ಅಂದ ಹಾಗೆ ನಿಮ್ಮ ಹೆಸರೇನು..
ಆ ಜನಕ್ಕೂ ಹೆಚ್ಚು ಕಡಿಮೆ ನನ್ನಷ್ಟೇ ವಯಸ್ಸು..
ನನ್ನನ್ನೇ ನೋಡಿ... "ದಿನೇಶ.." ಅಂದ.
ಏನ್ರೀ ನೀವು.. ಯಾರಾದರೂ ಸ್ಮಶಾನಕ್ಕೆ ಬಂದು ನಿಮ್ಮ ಹೆಸರೇನು ಅಂತ ಕೇಳಿದ್ರೆ.. ಜಸ್ಟ್ ದಿನೇಶ ಅಂತ ಹೇಳಿ ಸುಮ್ಮನಾಗಿ ಬಿಡುವುದಾ. "ನನ್ನ ಹೆಸರು ದಿನೇಶ.. ಅದಾಗಲೇ ಸತ್ತು ಹತ್ತು ವರ್ಷ ಆಗಿದೆ... ಇದೇ ನನ್ನ ಗೋರಿ.. ಹಹ್ಹಾ.. ಹಹ್ಹಾ..." ಅಂತ ಹೇಳಿ ಹೆದರಿಸ್ಬೇಕಿತ್ತು ನೀವು..
ನಾನು ನಿಮಗಿಂತ ಮೊದಲು ಬಂದು ಕೂತಿದ್ರೆ ಹಾಗೆನೇ ಹೇಳ್ತಾ ಇದ್ದೆ.ಆಗ್ಲೇ ಮಜಾ ಬರೋದು.. ನೀವು ಹಾಗೆಲ್ಲಾ ಮಾಡ್ತೀರಿ ಅಂತ ಅನ್ಕೊಂಡ್ರೆ.. ನೀವು ನಂಗೆ ಒಂಚೂರು ಹೆದರಿಸದೇ ನಿರಾಸೆ ಮಾಡಿ ಬಿಟ್ರಿ.. ಸ್ಮಶಾನ ಅಂದ್ರೆ casual ಆಗಿ ಮಾತಾಡ್ಬಾರ್ದು.. ತುಂಬಾ ಭಯಾನಕವಾಗೀ ಮಾತಾಡಿ ನಿಜ ದೆವ್ವ ಬಂದ್ರೂ ಅದಕ್ಕೆನೇ ನಾವು ಭಯ ಹುಟ್ಟಿಸ್ಬೇಕು... ಅಂದೆ.
ಒಟ್ರಾಸಿ ನಂಗೆ ಭಯ ಆಗ್ಬಾರದಲ್ಲ... ಹಾಗಾಗಿ ಆ ಜನವನ್ನು ಸಹ ನನ್ನ ಜೊತೆ ಮಾಡಿ ಕೊಂಡ್ರೆ.. ನೆಕ್ಸ್ಟ್ ದೆವ್ವ ಬಂದಾಗ ನಂಗೆ ಒಂದು ಧೈರ್ಯ ಕ್ಕೆ ಆಗ್ತದೆ ಅಲಾ.. ಅನ್ನುವುದು ನನ್ನ ಐಡಿಯಾ..
ದಿನೇಶ್ ಏನೂ ಹೇಳದೆ ತಲೆತಗ್ಗಿಸಿಯೇ ಕೂತಿದ್ದ..!!
ಏನೋ ಟೆನ್ಶನ್ ಇರ್ಬೇಕು ಅಂತ ಅನ್ಕೊಂಡೆ...
ನೋಡಿ ದಿನೇಶ್ ಅವರೇ.. ನೀವು ಬರೀ ದಿನೇಶ ಅಲ್ಲ..ನೀವು ಡೇರಿಂಗ್ ದಿನೇಶ್.. ಯಾಕೆಂದರೆ ನೀವು ಕೂಡ ನನ್ನಂತೆ ದೆವ್ವ ನೋಡ್ಲಿಕ್ಕೆ ಬಂದಿದ್ದೀರಿ ನೋಡಿ.. ಭಯಂಕರ ಧೈರ್ಯಶಾಲಿಗಳು ಬಿಡಿ ನೀವು..ಹಹ್ಹಾ.. ಹಹ್ಹಾ ಅಂದೆ ನಗು ನಗುತ್ತಲೇ..
ಆ ಡೇರಿಂಗ್ ದಿನೇಶ ಇನ್ನೂ ತಲೆ ತಗ್ಗಿಸಿಯೇ ಕೂತಿದ್ದ..!!
ಓಹ್ ಬಹುಶಃ ಇನ್ನೂ ದೆವ್ವ ಯಾಕೆ ಬಂದಿಲ್ಲ ಅಂತ ಕಾದು ಕಾದು ಸುಸ್ತಾಗಿರ್ಬೇಕು ಪಾಪ.. Patience ತುಂಬಾ ಕಡಿಮೆ ಈ ಜನಕ್ಕೆ ಅಂತ ನನಗೆ ನಾನೇ ಅನ್ಕೊಂಡೆ..
ನೋಡಿ ಡೇರಿಂಗ್ ದಿನೇಶ್ ಅವರೇ... ನೀವು ದೆವ್ವ ಯಾಕೆ ಇನ್ನೂ ಬಂದಿಲ್ಲ ಅಂತ ಟೆನ್ಶನ್ ಆಗ್ಬೇಡಿ.. ಹೇಗೆ ಬಸ್ ಗೆ ನಾವೇ ಕಾಯ್ಬೇಕೋ.. ಬಸ್ಸು ನಮ್ಮನ್ನು ಕಾಯುವುದಿಲ್ಲವೋ.. ಹಾಗೆಯೇ ದೆವ್ವಕ್ಕೂ ನಾವೇ ಕಾಯ್ಬೇಕು.. ದೆವ್ವ ನಮ್ಮನ್ನು ಕಾಯಲ್ಲ.. ಅದರ ಟೈಂ ಬಂದಾಗ ಅದು ಬರುತ್ತೆ ಬಿಡಿ.. ಕೂಲಾಗಿ ಇರಿ ಅಂದೆ.
ದಿನೇಶ್ ಇನ್ನೂ ಏನೂ ಮಾತಡ್ಲಿಲ್ಲ..!!
ಗೋರಿ ಮೇಲೆ ಕುಳಿತಿದ್ದ ಅವನನ್ನು ಸ್ವಲ್ಪ ಪಕ್ಕಕ್ಕೆ ಸರಿಯಲು ಹೇಳಿ ನಾನೂ ಅವನ ಪಕ್ಕವೇ ಕುಳಿತುಕೊಂಡೆ..
ನೋಡಿ ದಿನೇಶ್... ದೆವ್ವ ಬರ್ಲಿಕ್ಕೆ ಇನ್ನೂ ತುಂಬಾ ಹೊತ್ತಿದೆ. ಅಲ್ಲಿ ತನಕ ಟೈಂ ಪಾಸ್ ಆಗ್ಬೇಕು ಅಲಾ.. ಅದಕ್ಕಾಗಿ ನಾನು ಚಿಪ್ಸ್ ತಂದಿದ್ದೀನಿ.. ತಗೊಳ್ಳಿ ಅಂದೆ..
ದಿನೇಶ್ ಚಿಪ್ಸ್ ತಗೊಳ್ಲೇ ಇಲ್ಲ..!
ಓಹ್..ನನ್ನಲ್ಲಿ ಹತ್ತು ಚಿಪ್ಸ್ ಪ್ಯಾಕೇಟ್ ಇದೆ..ಆದ್ರೂ ಸ ಕೇವಲ ಒಂದು ಪ್ಯಾಕೇಟ್ ಮಾತ್ರ ಕೊಡ್ತಾ ಇದ್ದಾನೆ ಅಂತ ಅಂದ್ಕೊಂಡಿದ್ದಾನೋ ಏನೋ..
Sorry.. Sorry ತಗೊಳ್ಳಿ ಈ ಹತ್ತು ಲೇಯ್ಸ್ ಪ್ಯಾಕೇಟ್ ನಲ್ಲಿ ನನಗೆ ಐದು.. ನಿಮಗೆ ಐದು... ಅಂತ ಐದು ಪ್ಯಾಕೇಟ್ ಹರಿದು ಅವನಿಗೆ ಕೊಟ್ಟೆ.. ಅದೇ WWE ತರಹದ ನನ್ನ ಚಿಪ್ಸ್ ಬೆಲ್ಟ್ ನಿಂದ, sorry ಚಿಪ್ಸ್ ಮಾಲೆಯಿಂದ.
ಚಿಪ್ಸ್ ತಗೊಂಡು ಗೋರಿ ಮೇಲೆ ಇಟ್ಟ ಡೇರಿಂಗ್ ದಿನೇಶ..
ಆದರೂ ಅವನು ತಲೆತಗ್ಗಿಸಿಯೇ ಇದ್ದ...ಏನೂ ಮಾತಾಡ್ಲಿಲ್ಲ!!
ನಾನು ಆರಾಮ್ ಸೇ ಚಿಪ್ಸ್ ಪ್ಯಾಕೇಟ್ ಒಡೆದು.. ಚಿಪ್ಸ್ ತಿನ್ನುತ್ತಾ...ಹೇಳಿದೆ..
- ಬಹುಶಃ.. ನೀವು ಫಸ್ಟ್ ಟೈಂ ಅಂತ ಕಾಣುತ್ತೆ ಅಲಾ.. ಅದಕ್ಕೆ ನರ್ವಸ್ ಆಗಿದ್ದಿರಾ ಇಷ್ಟೊಂದು..
ಏನು ಹೆದರ್ಬೇಡಿ... ನಾನಿದ್ದೇನೆ ನಿಮ್ಮ ಜೊತೆ.. ನಾನಿರುವಾಗ ನಿಮ್ಗೆ ಏನೂ ಆಗಲ್ಲ.. ಏನು ಆಗಲು ನಾನು ಬಿಡಲ್ಲ.... ಅಂದೆ ಚಿಪ್ಸ್ ತಿನ್ನುತ್ತಾ.
ಅದನ್ನು ಕೇಳಿ ನನ್ನನ್ನೇ ವಾರೆ ನೋಟದಲ್ಲಿ ಹಾಗೇ ನೋಡಿ ಬಿಟ್ಟ ದಿನೇಶ..!!
ಬಹುಶಃ ಅವನು ನನಗಿಂತ ಧೈರ್ಯಶಾಲಿಯೋ ಏನೋ.. ಅದಕ್ಕೆ ಈ ರೀತಿ ನನ್ನನ್ನು ನೋಡ್ತಾ ಇದ್ದಾನೆ ಅಂತ ಅನ್ಕೊಂಡೆ ನಾನು...
ಈಗ ನಾನು ಏನು ಕಮ್ಮಿ ಇಲ್ಲ.. ಸಾದಾರಣದವ ಅಲ್ಲ ಎಂದು ನನ್ನನ್ನು ನಾನೇ ಅವನಿಗೆ ಪ್ರೂವ್ ಮಾಡ್ಬೇಕಿತ್ತು..
ನಾನೇ ಅವನಿಗೆ ಮತ್ತೆ ಹೇಳಿದೆ..
ನೋಡಿ ದಿನೇಶ್.. ನಾನು ಇಲ್ಲೇ ಲೋಕಲ್.. ಪುಲಿಕೇಶಿ ವಠಾರದವನು.. ನಾನು ಎಷ್ಟು ಸಲ ಅಂತ ಇಲ್ಲಿಗೆ ಬಂದಿಲ್ಲ ಹೇಳಿ.. ಒಂದು ಸರ್ತಿಯಾ.. ಎರಡಾ ಸರ್ತಿಯಾ.. ಲೆಕ್ಕವೇ ಇಟ್ಟಿಲ್ಲ... ಬೋರ್ ಆದಾಗಲೆಲ್ಲ ಇಲ್ಲಿಗೆ ಬಂದು ಹೋಗ್ತಾನೇ ಇರ್ತೇನೆ ನಾನು .. ದೆವ್ವ ಕೂಡ ಹಾಗೆನೇ ಬೇಕಾದಷ್ಟು ಸಲ ನೋಡಿದ್ದಿನಿ.. Actually ಇಲ್ಲಿಯ ದೆವ್ವಗಳೇ ನಂಗೆ ಹೆದರುತ್ತೆ..ಆದ್ರೆ ನಾನು ಅವುಗಳಿಗೆ ಹೆದರಲ್ಲ.. ಎಷ್ಟೋ ಸಲ ಗೋರಿ ಮೇಲೆ ಗೀಟು ಎಳೆದು ನಾನು ಚೌಕ ಬಾರ ಆಡಿದ್ದೇನೆ ಅವುಗಳ ಜೊತೆ.. ಆದ್ರೆ ಪ್ರತೀ ಸಲ ಗೆಲ್ಲುವುದು ಮಾತ್ರ ನಾನೇ..
ಮತ್ತೆ ಈ ದೆವ್ವಗಳು ಉಂಟಲ್ಲಾ... ಸತ್ಯ ಹೇಳ್ತೇನೆ ದಿನೇಶ್ ಅವರೇ.. ಅವುಗಳಿಗೆ ಅಷ್ಟು ಧೈರ್ಯವಿಲ್ಲ...ಬರೀ ಹೆದರುಪುಕ್ಕಲುಗಳು ಅವ್ವ್... ಸುಮ್ನೆ ನಮ್ಮಂತಹ ಮನುಷ್ಯರೇ ಅವುಗಳಿಗೆ ಒಂದು ಬಿಲ್ಡ್ ಅಫ್ ಕೊಟ್ಟು.. ಅವುಗಳು ಸಹ ಒಂದು ಹವಾ ಮೈಂಟೇನ್ ಮಾಡಿದ್ದಾವೆ ಇತ್ತೀಚಿನ ದಿನಗಳಲ್ಲಿ .. ನಾವು ಏನಾದರೂ ಭಯ ಬಿಟ್ಟು ತಿರುಗಿ ನಿಂತ್ರೆ ಅವುಗಳೇ ನಮ್ಮನ್ನು ಕಂಡು ಹಾಗೆ ಓಡಿ ಬಿಡುತ್ತವೆ..
ಮತ್ತೆ ನಮ್ಮ ಊರಲ್ಲಿ ನಾನೇ ಧೈರ್ಯ ಶಾಲಿ.. ನನ್ನಷ್ಟು ಡೇರಿಂಗ್ ಯಾರಿಗೂ ಇಲ್ಲ... ಎಷ್ಟೋ ಜನ ನನ್ನ ಕೈ ಕಾಲು ಹಿಡೀತಾರೆ ನಾವು ಸ ನಿನ್ನೊಂದಿಗೆ ಒಮ್ಮೆ ಸ್ಮಶಾನಕ್ಕೆ ಬಂದು experience ಮಾಡ್ತೇವೆ.. ನಮ್ಮನ್ನು ಸ ನಿನ್ನೊಂದಿಗೆ ಕರೆದುಕೊಂಡು ಹೋಗು ಅಂತ...
ಆದ್ರೆ ನಾನು ಯಾರನ್ನೂ ಸ ಕರ್ಕೊಂಡು ಬರೋದೇ ಇಲ್ಲ..ನಾವು ಎಂತ ಇಲ್ಲಿ GD (Group Discussion) ಮಾಡ್ಲಿಕ್ಕೆ ಬರೋದಾ... ಏನೋ ಒಂದು ಶಾಂತಿ, ಸಮಾಧಾನ, ನೆಮ್ಮದಿ ಸಿಗುತ್ತೆ ಅಂತ ಬರ್ತೇವೆ ಅಲಾ... ಅದೆಲ್ಲ ಅವರಿಗೆ ಹೇಗೆ ಗೊತ್ತಾಗಬೇಕು.. ಅಂದೆ ಚಿಪ್ಸ್ ತಿನ್ನುತ್ತಲೇ...
ದಿನೇಶ್ ಏನೂ ಮಾತಾಡಲಿಲ್ಲ... ನೆಲ ನೋಡುತ್ತಲೇ ಇದ್ದ..!!
ನನಗೆ ಇವನೇ ಏನಾದರೂ ದೆವ್ವ ಇರ್ಬಹುದಾ ಅಂತ ಒಮ್ಮೆ ಅನಿಸಿತು..
ಇಲ್ಲ.. ಇಲ್ಲ ದೆವ್ವ ಹೀಗೆ ಇರಲ್ಲ..ಅದು ಸೈನ್ಸ್ ಲ್ಯಾಬ್ ಅಲ್ಲಿ ಇರೋ ಸ್ಕೆಲಿಟನ್ ತರಹ.. ಮೂಳೆ, ತಲೆ ಬುರುಡೆ ಎಲ್ಲಾ ಇರುತ್ತೆ. ಹಾಗಾಗಿ ಇವನು ಅದಲ್ಲ... ಅದು ಇವನಲ್ಲ.. ಅಂತ ನನಗೆ ನಾನೇ ಅನ್ಕೊಂಡೆ.
ಪಾಪ ಈ ಜನದ್ದು ಏನೋ ಒಂದು ಕರುಣಾಜನಕ ಸ್ಟೋರಿ ಇರ್ಬೇಕು ಅಂತ ಕಾಣುತ್ತೆ.. ಅದ್ರೆ ಯಾರೂ ಅದನ್ನು ಕೇಳ್ತಾ ಇಲ್ಲ.. ಅದಕ್ಕೆ ದುಃಖದಲ್ಲಿ ಇರುವಂತೆ ಕಾಣುತ್ತಿದೆ..
ಇರಲಿ ಇರಲಿ.. ಇಂತವರ ಪಾಲಿಗೆ ಎಂದೇ ನಾನಿದ್ದೇನೆ.. ಬಡವರ ಬಂದು.. ನೊಂದ ಹೃದಯಗಳ ಆಶಾಕಿರಣ.. ಭರವಸೆಯ ಬೆಳಕು.. 24x7 ನೀಲಮೇಘ.. ಅಂತ ನನಗೆ ನಾನೇ ಮನಸ್ಸಿನಲ್ಲಿ ಹೇಳಿಕೊಂಡೆ.
ನೋಡಿ ದಿನೇಶ್.. ನಿಮ್ಮ ಏನೋ ಒಂದು ಕಥೆ ಇರ್ಬೇಕಲ್ಲ ಅದನ್ನು ಹೇಳಿ... ನಿಮ್ಮ ಕಥೆ ವ್ಯಥೆ ಎರಡನ್ನೂ ನಾನು ಕೇಳ್ತೀನಿ.. ನನಗೆ ಹೇಳಿ.. ಏನು ನಿಮ್ಮ ಕಥೆ..
ಅಲ್ಲಿಯವರೆಗೆ ಸುಮ್ಮನಿದ್ದ ಡೇರಿಂಗ್ ದಿನೇಶ ಮಾತಾಡಲು ಶುರು ಮಾಡಿದ...
- ಜೀವ ಇದ್ದವರು ಜೀವಿಸ್ತಾರೆ..
ಪ್ರಾಣ ಇದ್ದವರು ಉಸಿರಾಡ್ತಾರೆ..
ಮನೆ ಇದ್ದರೋ ಹಾಸಿಗೆಯಲ್ಲಿ ಮಲಗ್ತಾರೆ..
ಆದ್ರೆ ಸತ್ತೋರು..
ಗೋರಿಯ ಗುಂಡಿಯಲ್ಲಿ ಮಲಗ್ತಾರೆ...!!
ಚಿಪ್ಸ್ ತಿನ್ನುತ್ತಲೇ ಕೇಳಿದೆ..
ಮಿಸ್ಟರ್ ಡೇರಿಂಗ್ ದಿನೇಶ್ ಅವರೇ... ನೀವು ಕವಿಯಾ..?
ಏಕೆ...ದಿನೇಶ ಕೇಳಿದೆ.
ನೋಡಿ ನಿಮ್ಗೆ ನಾನು ಕಥೆ ಹೇಳ್ಲಿಕ್ಕೆ ಹೇಳಿದ್ದು... ಕವನ, ಕವಿತೆ ಎಲ್ಲಾ ಅಲ್ಲ.. ಡೈರೆಕ್ಟ್ ಆಗಿ ಕಥೆಗೆ ಬಂದ್ಬುಡಿ.. ಅಂದೆ.
ದಿನೇಶ ಬಾರೀ ಕಷ್ಟದಲ್ಲಿ ಮತ್ತೆ ಕಥೆ ಹೇಳಲು ಶುರು ಮಾಡಿದ..
ನಮ್ಮ ಅಜ್ಜ ಊರಿನ ದೊಡ್ಡ ಪಾಳೇಗಾರ.. ಅವರಿಗೆ ಐದು ಮಕ್ಕಳು... ಮೂರು ಗಂಡು.. ಎರಡು ಹೆಣ್ಣು......
ನಂಗೆ ಇವನು ಯಾವುದೋ ಮೆಗಾ ಮೂವಿಯ ಕಥೆ ಹೇಳಲು ಶುರು ಮಾಡಿದಂತೆ ಫೀಲ್ ಆಯಿತು... ಈ ರೀತಿ ಇವ ಅಜ್ಜನ ಕಥೆಯಿಂದ ಶುರು ಮಾಡಿದ್ರೆ.. ನಂತರ ಇವನ ಅಪ್ಪನ ಕಥೆ ಆಗಿ... ಇವನ ಕಥೆ ಬರುವುದು ಯಾವಾಗ..
ನೋಡಿ ಡೇರಿಂಗ್ ದಿನೇಶ್... ಕಥೆ ಹೇಳಿ ಅಂದ್ರೆ ಆವಾಗ ಕವನ ಹೇಳ್ತಾ ಇದ್ರಿ... ಈಗ ಪುರಾಣ ಹೇಳ್ತಾ ಇದ್ರಿ...ಹೀಗೆ ನೀವು ಕಥೆ ಹೇಳ್ತಾ ಇದ್ರೆ ಬೆಳಿಗ್ಗೆ ಆಗ್ತದೆ..ಸ್ವಲ್ಪ short ಆಗಿ ಹೇಳಿಪ್ಪಾ...
ನೋಡಿ ನನ್ನ ಕಥೆ ಕೇಳಿದ್ರೆ ಬರೀ ಇಷ್ಟೇ ಇರೋದು... ಹೆಸರು ನೀಲಮೇಘ.. ಅಪ್ಪ ನೀಲಣ್ಣ... ಡಿಗ್ರಿ ಆಗಿದೆ.. ಕೆಲಸ ಇಲ್ಲ... ಸದ್ಯಕ್ಕೆ ಕೆಲಸ ಹುಡುಕೋದೇ ನನ್ನ ಕೆಲಸ.. ಊರಿಗೆ ಉಪಕಾರಿ.. ಮನೆಗೆ ಮಾರಿ.... ನೋಡಿ ಇಷ್ಟೇ ಕಥೆ ನನ್ನದು. ನೀವು ಹೀಗೆ short ಆಗೀ ಹೇಳಿ ಅಲಾ.. ಅಂದೆ.
ನನ್ನನ್ನೇ ದಿಟ್ಟಿಸಿ ನೋಡಿದ ದಿನೇಶ ಮತ್ತೊಮ್ಮೆ ಕಥೆ ಹೇಳಲು ಶುರು ಮಾಡಿದ...
- ಒಂದು ದಿನ ನಾನು ರೋಡ್ ಅಲ್ಲಿ ನಡೆದು ಬರ್ತಾ ಇದ್ದೆ.. ಆಗ ಒಂದು ಟಿಪ್ಪರ್ ನನಗೆ ಡಿಕ್ಕಿ ಹೊಡೆಯಿತು.. ನಾನು ಅಲ್ಲೇ spot ಅಲ್ಲಿಯೇ ಸತ್ತು ಹೋದೆ.ನಂತರ ಇದೇ ಗೋರಿಯಲ್ಲಿ ನನ್ನನ್ನು ಮಣ್ಣು ಮಾಡಿದರು...ನಾನು ಸತ್ತು ಇಲ್ಲಿಗೆ ಹತ್ತು ವರ್ಷ ಆಯಿತು !!
ನಾನು ಚಿಪ್ಸ್ ತಿನ್ನುತ್ತಲೇ ಹೇಳಿದೆ..
-ಚೆನ್ನಾಗಿದೆ... ಬಹಳ ಚೆನ್ನಾಗಿದೆ..
ಈ ಚಿಪ್ಸ್ ಕೂಡ ಚೆನ್ನಾಗಿದೆ.... ಹಾಗೇ ನಿಮ್ಮ ಈ ಕಥೆ ಕೂಡ ಬಹಳ ರಸವತ್ತಾಗಿದೆ..
ಆಹಾ... ಕಥೆಗಾರ..
ಈಗ ಏನು ನಾನು ನಿಮ್ಮ ಕಥೆಯನ್ನು ನಂಬಿ.. ನೀವು ಡೇರಿಂಗ್ ದಿನೇಶ ಅಲ್ಲ.. ಡೆವಿಲ್ ದಿನೇಶ,ದೆವ್ವ ದಿನೇಶ ಅಂತ ನಿಮ್ಮನ್ನು ತಿಳಿದು... ಈ ಚಿಪ್ಸ್ ಪ್ಯಾಕ್ ಎಲ್ಲಾ ಇಲ್ಲೇ ಬಿಸಾಕಿ ಎದ್ದು ಬಿದ್ದು ಮನೆ ಕಡೆ ಓಡ್ಬೇಕು ಅಲಾ...
No way ಚಾನ್ಸೇ ಇಲ್ಲ.. ಹೋಗ್ರಿ... ಹೋಗ್ರಿ... ಯಾವುದಾದರೂ ಮಂಗನಿಗೆ ಇಂತಹ ಕಥೆ ಹೇಳಿ ಎಂದು ಮತ್ತಷ್ಟು ಚಿಪ್ಸ್ ತಿನ್ನುವ ಕಾಯುಕವನ್ನು ಬಹಳ ಡೀಪಾಗಿ ಮುಂದುವರಿಸಿದೆ..
ದಿನೇಶ ಏನೂ ಮಾತಾಡದೇ ನೆಲ ನೋಡುತ್ತಲೇ ಇದ್ದ.
ಓಹ್.. ನಾನು ಮೊದಲೇ ಅವನಿಗೆ ಹೇಳಿದ್ದೆ.. ಸ್ಮಶಾನಕ್ಕೆ ಬಂದು regular ಆಗಿ ಮಾತಾಡ್ಬಾರ್ದು ಅಂತ.. ಪಾಪ ಅದನ್ನೇ ನಂಬಿ ಏನೋ ಒಂದು ಕಥೆ ಕಟ್ಟಿ ಹೇಳಿದ್ದು ಅಂತ ಕಾಣುತ್ತೆ. ಆದ್ರೆ ನಾನು ನಂಬ್ಲಿಲ್ಲ + ಹೆದರ್ಲಿಲ್ಲ... ಸೋ ಅದಕ್ಕೆ ಬೇಜಾರ್ ಆಗಿರ್ಬಹುದು ಅಂತ ಅನ್ಕೊಂಡೆ..
ಇರಲಿ ಅವನಿಗೆ ಏನಾದರೂ ಹೇಳಿ ಹುರಿದುಂಬಿಸ್ಬೇಕು.. ಪಾಪ ಕಷ್ಟ ಪಟ್ಟು ಏನೋ ಒಂದು ಕಥೆ ಕಟ್ಟಿದ್ದಾನೆ.
ನೋಡಿ.. ಮಿಸ್ಟರ್ ಡೇರಿಂಗ್ ದಿನೇಶ್ ಅವರೆ.. Sorry sorry, ಡೆವಿಲ್ ದಿನೇಶ್ ಅವರೆ... ಆಯ್ತು ನಾನು ನಿಮ್ಮನ್ನು ನಂಬ್ತೀನಿ.. ನೀವು ದೆವ್ವ ಅಂತಲೇ ನಂಬ್ತೀನಿ.. ಈಗ ಸಮಾಧಾನವಾ....?
ಮತ್ತು ನೀವೇ ಹೇಳಿದ ಹಾಗೇ ನೀವು ಸತ್ತು ಹತ್ತು ವರ್ಷ ಆಯಿತು ...ಆದ್ದರಿಂದ ದಶಮಾನೋತ್ಸವದ ಹಾರ್ದಿಕ ಶುಭಾಶಯಗಳು ನಿಮಗೆ..ಅಂದೆ.
ಥ್ಯಾಂಕ್ಸ್... ಅಂದ ಡೆವಿಲ್ ದಿನೇಶ..!
ಡೆವಿಲ್ ದಿನೇಶ್ ಅವರೇ ನೀವು ದೆವ್ವಗಳು ದಿನಾ ಪೂರ್ತಿ ಅಷ್ಟು ಪುಟ್ಟ ಗೋರಿಯೊಳಗೆನೇ ಮಲಗ್ತೀರಿ ಅಲ್ಲಾ... ನಿಮಗೆ ಸೆಕೆ ಆಗಲ್ವಾ..
ಅದು ಅಭ್ಯಾಸ ಆಗ್ತದೆ.. ನಾವು ಎಲ್ಲೇ ಹೋದರೂ ಪರಿಸ್ಥಿತಿಗೆ adjust ಆಗ್ಬೇಕು.. ಅಂದ ದಿನೇಶ..!
ಏನೋ ನಿಜ ದೆವ್ವದ ಹಾಗೆ ಗೋರಿಯಲ್ಲಿ ಮಲಗಿ ಈಗ ಅಷ್ಟೇ ಪ್ರೆಶ್ ಆಗಿ ಎದ್ದು ಬಂದಿರುವವನ ಹಾಗೇ ಡೈಲಾಗ್ ಹೊಡದ ದಿನೇಶ.
ಪರವಾಗಿಲ್ಲ.. ಪರವಾಗಿಲ್ಲ.. ಒಳ್ಳೆ jolly ಆಗ್ತಾ ಇದೆ.. ಇವನನ್ನು ಇನ್ನಷ್ಟು ಮಾತಾಡಿಸಬೇಕು ಎಂದು ನಿರ್ಧರಿಸಿದೆ.
ಚಿಪ್ಸ್ ತಿನ್ನುತ್ತಲೇ ಕೇಳಿದೆ.. ಅಂದ ಹಾಗೇ ನಿಮ್ಮ ಲೈಫ್ ಎಲ್ಲಾ ಹೇಗಿತ್ತು... ನೀವು ಸ ಎಲ್ಲರಂತೆ ಅಂದ ಕಾಲತ್ತಿಲ್ ಭಯಂಕರ ಲವರ್ ಭಾಯ್ ಯಾ? ಅಂದ್ರೆ ಗರ್ಲ್ ಫ್ರೆಂಡ್ ಏನಾದರೂ ಇತ್ತಾ...
ಇತ್ತು... ಅಂದ ದಿನೇಶ..!
ಪರವಾಗಿಲ್ವೇ.. ನಂಗೆ ಇನ್ನೂ ಗರ್ಲ್ ಫ್ರೆಂಡ್ ಇಲ್ಲ... ಇವನ ಕಥೆಯಲ್ಲಿ ಟಿಪ್ಪರ್ ಆಕ್ಸಿಡೆಂಟ್ ಮಾತ್ರವಲ್ಲ ಪ್ರೇಮ ಪ್ರಕರಣವೂ ಸಹ ಇದೆಯಲ್ಲ..
ಪುನಃ ಕೇಳಿದೆ.. ಹೌದಾ..ನಿಮ್ಮ ಗರ್ಲ್ ಫ್ರೆಂಡ್ ಹೆಸರೇನು..?
ಮೋಹಿನಿ..!!
ದಿನೇಶನನ್ನೇ ನೋಡಿದೆ.. ಇವನೇನೋ ಭಯಾನಕ ಕಥೆಗಳನ್ನು ಹೇಳುವ ಉತ್ಸಾಹದಲ್ಲಿ ಇರುವಂತೆ ಕಾಣುತ್ತಿದೆಯಲ್ಲಾ ಅಂತ ಒಮ್ಮೆ ಅನಿಸಿತು..
ಹೌದಾ...ಅವರು ಈಗ ಏನು ಮಾಡ್ಕೊಂಡಿದ್ದಾರೆ.. ಕೇಳಿದೆ ಚಿಪ್ಸ್ ತಿನ್ನುತ್ತಾ.
ನೋಡಿ ಅಲ್ಲಿ ಒಂದು ಗೋರಿ ಕಾಣ್ತಾ ಇದೆಯಲ್ಲಾ.. ಅದರೊಳಗೆ ಮಲಗಿದ್ದಾಳೆ!!
ಯಾಕೋ ಈ ಮನುಷ್ಯ ನಾನು ಹೇಳಿದ್ದನ್ನು ಭಯಂಕರ ಸೀರಿಯಸ್ ಆಗಿ ತಗೊಂಡು ಅತೀ ಭಯಾನಕವಾಗಿ ನಟಿಸುತ್ತಿದ್ದಾನೆ ಅಂತ ಒಮ್ಮೆ ಅನಿಸಿತು.
ಆಹಾ... ಹೇಳೋ ಕಥೆಯಲ್ಲಿ.. ಮಾಡುವ ನಟನೆಯಲ್ಲಿ ಎಂತಹ Involvement ಇವನದ್ದು.
ನಾನೇ ಕೇಳಿದೆ... ಅವರ ಹೆಸರು ಸಾಯುವುದಕ್ಕಿಂತ ಮೊದಲೇ ಮೋಹಿನಿಯಾ.. ಅಥವಾ ಸತ್ತ ಮೇಲೆ ಮೋಹಿನಿ ಅಂತ ಹೆಸರು ಇಟ್ಕೊಂಡ್ರಾ ... ಯಾಕಂದ್ರೆ ಈ ಹೆಸರು ಅವರಿಗೆ ಸಕ್ಕತ್ ಆಗಿಯೇ ಸೂಟ್ ಆಗ್ತದೆ.. ಅವರಿಗೆ ದೆವ್ವ ಆಗುವ ಎಲ್ಲಾ ಅರ್ಹತೆಯೂ ಇದೆ...
ದಿನೇಶ ನನ್ನನ್ನೇ ನೋಡಿದ.. ನಂತರ ಹೇಳಿದ.. ಅವಳ ನಿಜ ಹೆಸರೇ ಮೋಹಿನಿ ಕುಮಾರಿ!!
ಅವನಿಗೆ ಸಿಟ್ಟು ಬಂದಂತೆ ಕಂಡಿತು...
ಅಲಾ..ದೆವ್ವಗಳಿಗೆ ಈ ಮೋಹಿನಿ, ಕಾಮಿನಿ ಅಂತ ಹೆಸರು ಕಾಮನ್ ಅಲ್ವಾ... ಹಾಗಾಗಿ ಕೇಳಿದೆ.. ಬೇಜಾರ್ ಮಾಡ್ಕೋಬೇಡಿ... ಆದ್ರೂ ಸ ಕೇಳ್ತೀನಿ.. ಈ ಲೇಡಿ ದೆವ್ವಗಳಿಗೆ ಮೋಹಿನಿ.. ಕಾಮಿನಿ ಅಂತಾನೇ ಯಾಕೆ ಹೆಸರು..?
ನಾನು ಅದಾಗಲೇ ಮನೆಯಲ್ಲಿ ಅನಂತ್ ನಾಗ್ ಅವರ "ನಾ ನಿನ್ನ ಬಿಡಲಾರೆ" ಮೂವಿ ನೋಡಿ ಬಂದಿದ್ದೆ. ಅದರಲ್ಲಿಯ ಲೇಡಿ ದೆವ್ವದ ಹೆಸರು ಕೂಡ ಕಾಮಿನಿ ಎಂದೇ ಇತ್ತು.. ಹಾಗಾಗಿ ಜಸ್ಟ್ ಡೌಟ್ ಇದ್ದು ಆ ಪ್ರಶ್ನೆ ಕೇಳಿದ್ದು ನಾನು.
ದಿನೇಶ ಏನು ಹೇಳಲಿಲ್ಲ .. ಬರೀ ನೆಲವನ್ನೇ ನೋಡುತ್ತಿದ್ದ!!
ಪುನಃ ಕೇಳಿದೆ.. ಅಂದ ಹಾಗೆ ಮೋಹಿನಿ ಅವರು ಹೇಗೆ ಸತ್ತದ್ದು... ಅವರದ್ದು ಎಂತ ಟಿಪ್ಪರ್ ಆಕ್ಸಿಡೆಂಟಾ.... ಅಥವಾ ಟ್ರಾಕ್ಟರ್ ಆಕ್ಸಿಡೆಂಟಾ..
ಅಲ್ಲಾ... ಅವಳದ್ದು ಲಾರಿ ಆಕ್ಸಿಡೆಂಟ್...!!
ಓಹ್ ಏನೋ ಒಂದು ಆಕ್ಸಿಡೆಂಟ್.. ಅಂತು ಇಂತು ಅಪಘಾತಗಳ ಹೃದಯ ವಿದ್ರಾವಕ ಪ್ರೇಮ ಕಥೆ ಇವರದ್ದು...!
ಚಿಪ್ಸ್ ತಿನ್ನುತ್ತಲೇ ದಿನೇಶನಿಗೆ ಹೇಳಿದೆ.. ಹಾಗಾದರೆ ನಿಮ್ಮ ಫೇವರೆಟ್ ಸಾಂಗ್ confirm ಆಗಿ ... "ಭೂತ ಉಂಟು.. ಪಿಶಾಚಿ ಉಂಟು... ಇದ್ದರೂ ಅಲ್ಲಿಲ್ಲ.." ಅದೇ ಅಲ್ವಾ..ಅಂದೆ.
ಶ್ರೀರಾಮಚಂದ್ರ ಕನ್ನಡ ಮೂವಿಯ 'ಭೂತವಿಲ್ಲ ಪಿಶಾಚಿ ಇಲ್ಲ ಹಾಡನ್ನು ಈ ಪ್ರೇಮಿಗಳಿಗೋಸ್ಕರ ನಾನೇ ಸ್ವಲ ಎಡಿಟ್ ಮಾಡಿದ್ದೆ..
ಅದಕ್ಕೆ ದಿನೇಶ ಹೇಳಿದ್ದ.. ಅದಲ್ಲ ಮೋಹಿನಿಯ ಫೇವರೆಟ್ ಸಾಂಗ್ ಅಂದ್ರೆ....
" ಓಹೋ......ಹೋ .......
ಓಹೋ......ಹೋ ........
ತಂಗಾಳಿಯಲ್ಲಿ ನಾನು ತೇಲಿ ಬಂದೆ,
ನಿನ್ನನ್ನು ಪ್ರೀತಿಯಿಂದ ಸೇರಲೆಂದೇ,
ಓ ಇನಿಯಾ .........ಓ ಇನಿಯಾ .........
ಆಹಾ ..ಹಾ ...ಹಾ .......
ನನ್ನನು ಸೇರಲು ಬಾ... ಬಾ....
ನನ್ನನು ಸೇರಲು ಬಾ.. ಬಾ..
ಓಹೋ......ಹೋ .............. "
ಯಾಕೋ ಇವನೇ ಬಹಳ ದೊಡ್ಡ ಸಿಂಗರ್ ನಂತೆ ರಾಗವಾಗಿ ಹಾಡಿ ಬಿಟ್ಟ ಅದನ್ನು.
ನಾನು ಅವನಿಗೆ ಕೊಟ್ಟ ಆ ಐದು ಪ್ಯಾಕೇಟ್ ಲೇಯ್ಸ್ ಇನ್ನೂ ಅವನ ಪಕ್ಕದಲ್ಲಿಯೇ ಇತ್ತು.. ನನ್ನದು ತಿಂದು ಎರಡು ಪ್ಯಾಕೇಟ್ ಅದಾಗಲೇ ಖಾಲಿ ಆಗಿತ್ತು. ಆದರೆ ಅವನು ಇನ್ನೂ ಒಂದೂ ಪ್ಯಾಕೇಟ್ ಓಪನ್ ಮಾಡಿರಲೇ ಇಲ್ಲ!!
ಡೆವಿಲ್ ದಿನೇಶ್ ಅವರೇ... ನೀವು ಯಾಕೆ ಇನ್ನೂ ಚಿಪ್ಸ್ ತಿಂದಿಲ್ಲ...ಚಿಪ್ಸ್ ಅಂದ್ರೆ ನಿಮ್ಗೆ ಆಗ್ಬರಲ್ವಾ...?
ದೆವ್ವಗಳು ಚಿಪ್ಸ್ ಎಲ್ಲಾ ತಿನ್ನಲ್ಲ... ನಾವೂ ಏನೂ ತಿನ್ನಲ್ಲ..!!
ಅಂದ ಗಡುಸಾಗಿ.... ಸೇಮ್ ದೆವ್ವದ ತರಹವೇ..!!
ನನಗೆ ಅವನ ಅಮಾಯಕತೆ ಇಷ್ಟ ಆಯಿತು.. ನಿಜವಾಗಿಯೂ ಅವನೊಬ್ಬ ದೆವ್ವ ಎಂದು ತಿಳಿದು ಪರಕಾಯ ಪ್ರವೇಶ ಮಾಡಿ ದೆವ್ವದಂತೆ ಬಹಳ ಚೆನ್ನಾಗಿಯೇ ನಟಿಸುತ್ತಿದ್ದ.
ನಿಜವಾಗಿಯೂ ಮುಂದೊಂದು ದಿನ ಇವನೊಬ್ಬ ಒಂದೊಳ್ಳೆಯ ಸ್ಟಾರ್ ನಟ ಆಗಬಲ್ಲ ಎಂದು ಅನಿಸಿತು .. ಏಕೆಂದರೆ ಆ ಎಲ್ಲಾ ಲಕ್ಷಣಗಳು ಅವನಲ್ಲಿ ನನಗೆ ಎದ್ದು ಕಾಣುತ್ತಿತ್ತು..
ನಾನೇ ಮಾತು ಮುಂದುವರಿಸಿದೆ...
ಓಹ್ ಹಾಗೆ.. ದೆವ್ವಗಳು ಏನೂ ತಿನ್ನಲ್ಲಾ ಅಲಾ..
ಆದ್ರೆ ಅದು ದೆವ್ವಗಳಿಗೆ ಲಿಂಬು ಎಲ್ಲಾ ಇಡ್ತಾರೆ ಅಲ್ವಾ... ಅದನ್ನು ನೀವು ಏನಕ್ಕೆ use ಮಾಡ್ತೀರಾ.. ಕೇಳಿದೆ.
ದಿನೇಶ ಏನೂ ಹೇಳದೆ ಸೈಲೆಂಟ್ ಆಗಿ ನನ್ನನ್ನೇ ದಿಟ್ಟಿಸಿ ನೋಡಿದ.
ಅಲಾ.. ನಾವು ಆದ್ರೆ ಲಿಂಬೆಯಲ್ಲಿ ಶರ್ಬತ್, ಸೋಡ ಶರ್ಬತ್ ಎಲ್ಲ ಮಾಡಿ ಕುಡಿಯುತ್ತೇವೆ.. ನೀವು ಕೂಡ ಹಾಗೆ ಏನಾದರೂ ಮಾಡ್ಕೋಬಹುದು ಅಲಾ.. ಸೆಖೆ ಬೇರೆ ಜಾಸ್ತಿ.. ಎಂದೆ
ದೆವ್ವಗಳು ಸೋಡ ಶರ್ಬತ್ ಕುಡಿಯಲ್ಲ.... ಅಂದ
ಮತ್ತೇನು ರಕ್ತ ಕುಡಿತೀರಾ..ಫಿಲ್ಮ್ ಅಲ್ಲಿ ದೆವ್ವಗಳು ಕಾಮನ್ ಆಗಿ ಹೇಳುತ್ತವೆ ಅಲಾ... "ಕುಡೀಬೇಕು.. ರಕ್ತ ಕುಡೀಬೇಕು.." ಹಾಗೇ ನೀವು ಸ ಏನಾದರೂ ಆವಾಗವಾಗ ರಕ್ತ ಗಿಕ್ತ ಎಲ್ಲಾ ತಗೋತೀರಾ..
ನಾನು ಸಹ ನನಗೆ ಗೊತ್ತಿಲ್ಲದೇ ಫುಲ್ involve ಆಗಿ ಎದುರಿಗಿರುವವ ಡೇರಿಂಗ್ ದಿನೇಶ ...ಅನ್ನುವುದು ಮರೆತು ಹೋಗಿ ಅವ ದೆವ್ವ ದಿನೇಶ ಎಂದೇ ತಿಳಿದುಕೊಂಡು ಮಾತಾಡುತ್ತಿದ್ದೆ.
ದಿನೇಶ ಏನೂ ಹೇಳದೇ ಬರೀ ನೆಲ ನೋಡುತ್ತಿದ್ದ..!!
ಓಹ್.. ಗೊತ್ತಾಯ್ತು ಬಿಡಿ.. ನೀವು ವೆಜ್ ದೆವ್ವ ಇರಬೇಕು ಹಾಗಾಗಿ ರಕ್ತ ಎಲ್ಲಾ ಕುಡಿಯಲ್ಲಾ ಅನಿಸುತ್ತೆ..
ಆದ್ರೂ ನಂಗೆ ಒಂದು ಕೇಳ್ಲಿಕ್ಕೆ ಇತ್ತು... ನೀವು ದೆವ್ವಗಳು ಯಾಕೆ ವೈಟ್ & ವೈಟ್ ಡ್ರೆಸ್ ಅನ್ನೇ ಹಾಕ್ತೀರಾ ಯಾವಾಗಲೂ... ಯಾಕೆ ಬೇರೆ ಕಲರ್ ಡ್ರೆಸ್ ಹಾಕಲ್ಲಾ...?
ಅದು ರೂಲ್ಸ್... ಅಂದ ದಿನೇಶ.!!
ಓಹ್.. ಭಯಂಕರ ಶಿಸ್ತಿನ ಸಿಪಾಯಿಗಳು..ರೂಲ್ಸ್ ಅನ್ನೇ ಬ್ರೇಕ್ ಮಾಡದ ಪಿಶಾಚಿಗಳು ಅಂತ ಅನ್ಕೊಂಡೆ...
ಅದ್ರೆ ನಿಮ್ಮೆಲ್ಲರ ಬಟ್ಟೆ ಅಷ್ಟೊಂದು ವೈಟ್ ಹೇಗೆ.. ನೀವು ನಿರ್ಮಾ ಸೋಪು use ಮಾಡುವುದಾ.. ಅಥವಾ Surf Excel Powder.. ಇಲ್ಲ ಉಜಾಲಾ.. ಏನಾದರೂ..
ನನ್ನನ್ನೇ ಮತ್ತೊಮ್ಮೆ ಹಾಗೇ ನೋಡಿದ ಡೆವಿಲ್ ದಿನೇಶ..!!
ಯಾಕೋ ಅದು ನಾನು ಅವನನ್ನು ಮಕ್ಕರ್ ಮಾಡುವಂತೆ(ತಮಾಷೆ) ಅವನಿಗೆ ಅನಿಸಿತು.
ಮಾತು ಬದಲಾಯಿಸಿದೆ...
ಡೆವಿಲ್ ದಿನೇಶ ಅವರೆ ಮತ್ತೊಂದು ಪ್ರಶ್ನೆ.. ನೀವೆಲ್ಲಾ ಯಾಕೆ ಹುಣಸೆ ಮರದಲ್ಲಿಯೇ ಜಾಸ್ತಿ ನೇತಾಡೋದು.. ನಿಮಗೆ ಹುಣಸೆಹುಳಿ ಅಂದರೆ ಬಾರೀ ಇಷ್ಟವಾ..
ಹಾಗೇ ಅಲ್ಲ ಅದು ಪರಂಪರೆ..!!
ಓಹ್.. " ಪರಂಪರ.. ಪ್ರತಿಷ್ಟ.. ಅನುಶಾಸನ್.." ಅಂದ್ರೆ ಒಂದೋ ಇವನು ಅಮಿತಾಬ್ ಬಚ್ಚನ್ ಅಭಿಮಾನಿ ಇರ್ಬೇಕು ಇಲ್ಲ ಅಂದ್ರೆ "ಮೊಹಬತ್ತೇ.." ಹಿಂದಿ ಮೂವಿಯ ಪ್ಯಾನೋ.. ಎಸಿಯೋ ಇರಬೇಕು ಅಂತ ಮನಸ್ಸಿನಲ್ಲಿಯೇ ಅಂದೂಕೊಂಡೆ..
ಅಲಾ.. ಏನು ಹೇಳ್ತಾನೆ ಮರ್ರೆ ಇವ.. ಪರಂಪರೆ ಅಂತೆ ಪರಂಪರೆ.
ಪುನಃ ಕೇಳಿದೆ...
ಮತ್ತೆ ನೀವು ಬರುವಾಗ ಆ ನರಿ ಕೂಗುವುದು..ಗೂಬೆ ಕೂಗುವುದು.. ತರಗೆಲೆ ಹಾರುವುದು.. ಹೊಗೆ ಬರುವುದು ಅದೆಲ್ಲಾ ಯಾಕೆ.. ದೆವ್ವ ಆಗಿದ್ರೆ ಡೈರೆಕ್ಟ್ ಆಗಿ ಬಂದ್ರೆ ಸ ಜನ ಎಲ್ಲಾ ಹೆದರರ್ತಾರೆ ಅಲ್ವಾ... Extra effects ಎಲ್ಲಾ ಯಾಕೆ.. ಮೂವಿಯಲ್ಲಿ ಹೀರೋ ಬರುವಂತೆ...
ಅದು ಕ್ರಮ... ಅಂದ ದಿನೇಶ.
ಅಬ್ಬಾ... ಏನು ದೊಡ್ಡ ಕಟ್ಟು ಕಟ್ಟಲೆ.. ತಲೆತಲಾಂತರದಿಂದ ಬಂದ ಸಂಪ್ರದಾಯ ಬದ್ದ ಆಚರಣೆ ಇವರದ್ದು..ಅಂತ ಮನಸ್ಸಿನಲ್ಲಿಯೇ ಅಂದುಕೊಂಡೆ.. ಅವನಿಗೆ ಬೇಜಾರ್ ಆಗ್ಬಹುದು ಅಂತ ಅವನಲ್ಲಿ ಹೇಳಲಿಲ್ಲ!
ಚಿಪ್ಸ್ ತಿನ್ನುತ್ತಲೇ ಮಾತು ಮುಂದುವರಿಸಿದೆ - ನೋಡಿ ಡೆವಿಲ್ ದಿನೇಶ್ ಅವರೆ.. ನಮ್ಮ ಪುಲಿಕೇಶಿ ವಠಾರ ಉಂಟಲ್ಲಾ.. ಅಲ್ಲಿ ಹಿಂದೆ ಹೇರಳವಾಗಿ ಹುಣಸೆ ಮರ ಇತ್ತು ಅಂತೆ. ತುಳು ಬಾಷೆಯಲ್ಲಿ ಹುಣಸೆ ಅಂದ್ರೆ "ಪುಳಿ" ಅಲ್ವಾ.. ಹಾಗಾಗಿ ಅದೇ ಮುಂದೆ ಪುಳಿ ಹೋಗಿ ಪುಲಿ ಆಗಿ.. ಪುಲಿಕೇಶಿ ಅಂತ ಆಯಿತು ಅಂತ ನನ್ನ ಬಲವಾದ ನಂಬಿಕೆ. ಈಗ ಅಂತು ಅದು ಪುಲಿಕೇಶಿ ಸಹ ಹೋಗಿ ಪುಲ್ಕೇಶಿ ವಠಾರ ಅಂತ ಹಾಗಿದೆ. ಹುಣಸೆ ಮರ ಕೂಡ ಹಿಂದಿನಷ್ಟು ಇಲ್ಲ. ಬಹುಶಃ ನಿಮಗೆ ಈಗ ಹುಣಸೆ ಮರ ಇಲ್ಲದೆ ಊರ ಕಡೆ ಬರ್ಲಿಕ್ಕೆ ಕೂಡ ಅಷ್ಟೊಂದು ಇಂಟ್ರೆಸ್ಟ್ ಇಲ್ಲ ಎಂದು ಕಾಣುತ್ತೆ ಅಲಾ.. ಅಂದೆ.
ಹಾಗೇನಿಲ್ಲ... ಮನಸ್ಸಾದ್ರೆ ಊರ ಕಡೆಗೂ ಸಹ ಬರ್ತೇವೆ... ಎಂದ ಡೆವಿಲ್ ದಿನೇಶ!!
ಅಲಾ... ನೀವು ನಿಮ್ಮಿಷ್ಟಕ್ಕೆ ಹುಣಸೆ ಮರದಲ್ಲಿ ನೇತಾಡ್ಕೊಂಡು.. ಇಲ್ಲ ಈ ಸ್ಮಶಾನದಲ್ಲಿ ಇರ್ಬೇಕು.. ಅದು ಬಿಟ್ಟು ನೀವು ಏಕೆ ಊರ ಕಡೆ ಎಲ್ಲಾ ಬರೋದು.. ಅದು ಕೂಡ ಮನೆಗಳ ಕಡೆಗೆ ಬಂದು ಜನರನ್ನು ಹೆದರಿಸ್ತೀರಾ.. ನಿಮಗೆ ಸಾಮಾಜಿಕ ಕಳಕಳಿ, ಜವಾಬ್ದಾರಿ ಏನೂ ಇಲ್ವಾ...
ಅದೂ ಸಹ ಹಾರರ್ ಮೂವಿ ನೋಡುವಾಗ... ಕಿಟಕಿ ಹತ್ರ ನೀವುಗಳೇ ಬಂದಂತೆ ಆಗುತ್ತದೆ... ಸತ್ಯ ಹೇಳಿ ನೀವು ಮನೆಗಳಿಗೆ ಎಂತಕ್ಕೆ ಹಾರರ್ ಮೂವಿ ನೋಡ್ಲಿಕ್ಕೆಯೇ ಬರುವುದಾ...?
ದೆವ್ವಗಳಿಗೂ ಆಸೆ ಇರಲ್ವೇ.. ನಮ್ಮವರ ಮೂವಿ ಅಂತ ಅಭಿಮಾನ ಇರಲ್ವೇ... ಅಂದ ದಿನೇಶ!!.
ಹಾಗಾದರೆ ಒಮ್ಮೆ ನಮ್ಮ ಮನೆಗೆ ಈ ಸ್ಮಶಾನದಲ್ಲಿರುವ ನಿಮ್ಮ ಎಲ್ಲಾ ಫ್ರೆಂಡ್ಸ್ ಅನ್ನು ಮೂವಿ ನೋಡ್ಲಿಕ್ಕೆ ಕರ್ಕೊಂಡು ಬನ್ನಿ...
ನಮ್ಮ ಅಪ್ಪ ವಿಪರೀತ ದೆವ್ವದ ಮೂವಿ ನೋಡ್ತಾರೆ.. ನನಗೆ ಕಾಟ ತಡೀಲಿಕ್ಕೆ ಆಗ್ತಾ ಇಲ್ಲ..ಅವರಿಗೆ ಸಕ್ಕತ್ ಆಗಿ ಹೆದರಿಸಿ.. ಒಮ್ಮೆ ಅವರಿಗೆ ಹಿಡಿದಿರುವ ಹುಚ್ಚು,sorry..ದೆವ್ವ ಬಿಡಿಸ್ಬೇಕು ನೀವೆಲ್ಲಾ... Please.. Please.. ಮನೆಯಲ್ಲಿ ಶಾಂತಿ ಇಲ್ಲ... ಮನೆಯಲ್ಲಿ ಯಾವಾಗಲೂ ದೆವ್ವದ ಫಿಲಂ ನೋಡಿ ನೋಡಿ ನನಗೆ ಅದು ಭೂತ ಬಂಗಲೆ ತರಹ ಫೀಲ್ ಆಗ್ತಿ ಇದೆ... ಅಂದೆ.
ನಾವು ದೆವ್ವ ಬಿಡಿಸುವುದಿಲ್ಲ.. ನಾವು ಜಸ್ಟ್ ನಿಮ್ಮನ್ನು ಹಿಡಿಯುತ್ತೇವೆ.. ಅಂದ ಡೆವಿಲ್ ದಿನೇಶ!!
ಯಾಕೋ..ಈ ಬಡ್ಡಿ ಮಗಂದು ಅತಿಯಾಯಿತು. Acting ಮಾಡ್ಬೇಕು.. ಆದ್ರೆ ಈ ರೇಂಜಿಗೆ ತನ್ನನ್ನು ತಾನೇ ಮರೆತು ಹೋಗುವಂತೆ Acting ಮಾಡ್ಬಾರ್ದು ಅಂತ ಅನ್ನಿಸಿತು..!
ಟೈಂ ನೋಡಿದೆ.. ಅದಾಗಲೇ ಬಂದು ಮೂರು ಗಂಟೆ ಆಗಿದೆ..
ದೆವ್ವದ ಸುಳಿವೇ ಇಲ್ಲ..
ಬಹುಶಃ ಈ ಸ್ಮಶಾನದ ದೆವ್ವಗಳು ಇಂದು ಬೇರೆ ಸ್ಮಶಾನಕ್ಕೆ ಪಾರ್ಟಿ ಮಾಡಲು ಹೋಗಿರಬೇಕು ಅಂತ ಅನ್ಕೊಂಡೆ.. ಹೇಗೆ ನಾವು ನಮ್ಮ ಮನೆಯಿಂದ ಬೇರೆ ಮನೆಗೆ ಪಾರ್ಟಿಗೆ ಎಂದು ಹೋಗ್ತೇವೆಯೋ ಹಾಗೆ ಹೋಗಿರಬೇಕು .. ಎಷ್ಟಾದರೂ ಇವುಗಳ ಮನೆ ಇದೆ ಅಲ್ವಾ..ಬಹುಶಃ ಪಾರ್ಟಿಗೋ.. ಗೆಟ್ ಟು ಗೆದರ್ ಮಾಡ್ಲಿಕ್ಕೋ ಹೋಗಿರುತ್ತೆ.. ನಾನು ಬಂದದ್ದು ವೇಸ್ಟ್ ಆಯಿತು ಅಂತ ಅನ್ಕೊಂಡು... ಅಲ್ಲಿಯವರೆಗೆ ಡೆವಿಲ್ ದಿನೇಶ ಆಗಿ ಆಸ್ಕರ್ ಆವರ್ಡ್ ವಿನ್ ಆಗುವ ರೇಂಜಿಗೆ ನಟಿಸಿದ್ದ ನಮ್ಮ ಡೇರಿಂಗ್ ದಿನೇಶ ಬಳಿ ಹೇಳಿದೆ..
-ಡೇರಿಂಗ್ ದಿನೇಶ್ ಅವರೆ ನೋಡಿ... ಇವತ್ತು ದೆವ್ವಗಳು ಬರುವ ಯಾವ ಮುನ್ಸೂಚನೆಯೂ ದಟ್ಟವಾಗಿ ನನಗೆ ಗೋಚರಿಸುತ್ತಿಲ್ಲ.. ಆದ್ದರಿಂದ ನಾನು ಇನ್ನು ಬರುತ್ತೇನೆ.. ನಿದ್ದೆ ಬೇರೆ ಬರುತ್ತಿದೆ. ನೀವೂ ಕೂಡ ಹೊರಡಿ ಅಂದೆ..
ನಾನು ಎಲ್ಲಿಗೂ ಬರಲ್ಲ.... ಅಂದ ಸೇಮ್ ದೆವ್ವದಂತೆಯೇ ಗಡುಸಾದ ಧ್ವನಿಯಲ್ಲಿಯೇ..!
ನಾನು ಕೂಡ ಬೇಕಂತಲೇ ದೆವ್ವದ ಧ್ವನಿಯಲ್ಲಿಯೇ ಹೇಳಿದೆ..
ನೀವು ಯಾಕೆ ಬರಲ್ಲಾ... ಅಂದೆ.
ದಿನೇಶ ಹೇಳಿದ ...ಯಾಕೆಂದರೆ ನಾನು ದೆವ್ವ..!!
ನಾನು ನಿಮ್ಮ ಡೇರಿಂಗ್ ದಿನೇಶ ಅಲ್ಲ.. ಡೆವಿಲ್ ದಿನೇಶನೇ..!!
ಯಾಕೋ ಈ ನನ್ನ ಮಗಂದು ತುಂಬಾ ಓವರ್ ಆಯಿತು ಅಂತ ಮತ್ತೊಮ್ಮೆ ಅನಿಸಿತು..
ನೋಡಿ.. ನೀವು ಇನ್ನೂ ಆ ನಾಟಕದಿಂದ ಹೊರಗೆ ಬಂದಿಲ್ಲ ಅಂತ ಕಾಣುತ್ತೆ... ನಾನು ಹೇಳಿದ್ದು ದೆವ್ವಕ್ಕೆ ಭಯ ತರಿಸುವ ಹಾಗೆ ಭಯಾನಕವಾಗಿ ಮಾತಾಡ್ಬೇಕು, ನಟೀಸಬೇಕು ಅಂತ.. ನಿಮ್ಮಂತೆ ಇರುವ ಮನುಷ್ಯರ ಜೊತೆ ಅಲ್ಲಾ..
ನಾನು ಮನುಷ್ಯ ಅಲ್ಲ...!!
ಹೌದಾ... ಹಾಗಾದರೆ ನಾನು ನಿಮ್ಮನ್ನು ದೆವ್ವ ಅಂತ ಹೇಗೆ ನಂಬೋದು..?
ನನ್ನ ಕಾಲು ನೋಡು....!!.
ನಿಮ್ಮ ಕಾಲಿಗೆ ಏನಾಗಿದೆ.. ಸರಿಯಾಗಿಯೇ ಇದೆ ಅಲಾ..
ಕಾಲು ಹಿಂದೆ ತಿರುಗಿರುವುದನ್ನು ನೋಡು...!!
ಸರಿಯಾಗಿ ನೋಡಿದೆ... ದಿನೇಶನ ಕಾಲು ಹಿಂದೆ ತಿರುಗಿತ್ತು!!
ಬಹುಶಃ ನಿಮ್ಗೆ ಪೋಲಿಯೊ ಆಗಿರಬೇಕು ಅಂತ ಅನಿಸುತ್ತೆ... ಅಂದೆ!
ಮೂರ್ಖ.. ದೆವ್ವಗಳ ಕಾಲು ಹಿಂದೆ ತಿರುಗಿರುತ್ತೆ.. ನಿನಗೆ ಅಷ್ಟೂ ಗೊತ್ತಿಲ್ವಾ...!!
ನಾನು ನೋಡಿದ್ದೆ ಒಂದು ದೆವ್ವದ ಫಿಲಂ.. ಅದು "ನಾ ನಿನ್ನ ಬಿಡಲಾರೆ.." ಅದರಲ್ಲಿ ಎಲ್ಲಿಯೂ ಅನಂತ್ ನಾಗ್ ಅವರ ಕಾಲು ಉಲ್ಟಾ ಆಗಿದ್ದು ನೆನಪಿಲ್ಲ ನನಗೆ..
ಮತ್ತು ಇದರ ಬಗ್ಗೆ ಯಾರೂ ಸಹ ನನಗೆ ಸರಿಯಾದ ಮಾಹಿತಿ ಕೂಡ ಕೊಟ್ಟಿರಲಿಲ್ಲ....
ಬೇರೆ ಏನಾದರೂ ನಂಬುವಂತಹದ್ದು ಆಧಾರ ತೋರಿಸಿ.... ಅಂದೆ ದಿನೇಶನಿಗೆ.
ನೀನು ನನಗೆ ಒಮ್ಮೆ ಪಂಚ್ ಮಾಡಿ ನೋಡು... ಅಂದ ದಿನೇಶ.
ಆಯ್ತು ನನ್ನ ಮುಂದೆ ನಿಲ್ಲಿ ಅಂದೆ..
ದಿನೇಶ ನನ್ನ ಮುಂದೆ ನಿಂತ..
ನಾನು ಕೈಯಿಂದ ಅವನ ಹೊಟ್ಟೆಗೆ ಒಂದು ಪಂಚ್ ಮಾಡಿದೆ..!
ನನ್ನ ಕೈ ಅವನ ಹೊಟ್ಟೆಗೆ ತಾಗುವ ಬದಲು ಈ ಸೈಡಿಂದ ಹೋಗಿ ಆ ಸೈಡಿಂದ ಬಂತು..!!ಜಸ್ಟ್ ಗಾಳಿಯಲ್ಲಿ ಕೈ ಬೀಸಿದಂತಹ ಅನುಭವ!!
ಈಗ ನಿಜವಾಗಿಯೂ ಭಯ ಆಯಿತು...ಇವನು ಮಾರಿ ಖಂಡಿತವಾಗಿಯೂ ದೆವ್ವ ಇರಬಹುದು ಅಂತ.
ಆದರೆ ಆ ಭಯವನ್ನು ನಾನು ಅವನ ಮುಂದೆ ತೋರಿಸಲಿಲ್ಲ... ಏಕೆಂದರೆ ಭಯ ಎನ್ನುವುದು ನನ್ನ ಬ್ಲಡ್ ನಲ್ಲಿಯೇ ಇಲ್ಲ.. ಮತ್ತು ರಕ್ತದಲ್ಲಿಯೂ ಸಹ ಇಲ್ಲ.
ಹೋಗು ಮರ್ರೆ ಇದೆಲ್ಲಾ ಮ್ಯಾಜಿಕ್... ಯಾರು ಬೇಕಾದರೂ ಮಾಡ್ತಾರೆ.. ನಮ್ಮ ಫೇಮಸ್ ಜಾದುಗಾರ ಕುದ್ರೋಳಿ ಗಣೇಶ್ ಗೊತ್ತಾ.. ಅವರು ಎರಡು ಕಟ್ ಆಗಿ ಪುನಃ ಒಂದು ದೇಹ ಆಗಿ ಎದ್ದು ಬರ್ತಾರೆ.. ಇದಕ್ಕೆಲ್ಲಾ ಯಾರು ಹೆದರ್ತಾರೆ.. ನಾನು ಹೋಗ್ತೇನೆ.. ನನಗೆ ಹೊತ್ತಾಯಿತು.. ಎಂದು ಹಿಂದೆ ತಿರುಗಿ ಗೋರಿಯ ಮೇಲೆ ಇದ್ದ ಎರಡು ಚಿಪ್ಸ್ ಪ್ಯಾಕೇಟುಗಳನ್ನು ಎತ್ತಿಕೊಂಡು ಮತ್ತೆ ಮುಂದೆ ತಿರುಗಿದೆ..
ನೋಡ್ತೇನೆ.. ಎಲ್ಲಿಯೂ ದಿನೇಶ ಇಲ್ಲ..!!
ಅವನೇನಾದರೂ ನಿಜವಾದ ದೆವ್ವ ಆಗಿದ್ದವನು... ಈಗ ಮಾಯ ಆಗಿದ್ದಾನೋ ಏನೋ ಎಂದು ಯೋಚಿಸುತ್ತಿರುವಾಗಲೇ ಯಾರೋ ನನ್ನ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡ ಫೀಲ್ ಆಯಿತು..!!
ಕೆಳಗೆ ನೋಡಿದ್ರೆ ದಿನೇಶ ನನ್ನ ಕಾಲು ಹಿಡಿದುಕೊಂಡಿದ್ದ... ಮತ್ತು ದಿನೇಶ ಹೇಳುತ್ತಿದ್ದ...
ನಾನು ನಿಜವಾಗಿಯೂ ದೆವ್ವವೇ.. ನನ್ನನ್ನು ನಂಬು ಪ್ಲೀಸ್... ಪ್ಲೀಸ್...
ನನಗೆ ಅವನು ಆ ರೀತಿ ಅಂಗಾಲಾಚುವುದನ್ನು ನೋಡಿ ಬೇಜಾರ್ ಮಾತ್ರ ಅಲ್ಲ.. ಅಯ್ಯೋ ಪಾಪ ಎಂದು ಅನಿಸಿತು.. ಒಂದು ವೇಳೆ ಅವನು ನಿಜ ದೆವ್ವವೇ ಆಗಿದ್ದರೆ...ಒಂದು ದೆವ್ವ ಮನುಷ್ಯನ ಕಾಲು ಹಿಡಿದು.. ನಾನು ದೆವ್ವ... ನನ್ನನ್ನು ನಂಬು ಪ್ಲೀಸ್ ಅಂತ ಹೇಳುವುದು.. ನಿಜವಾಗಿಯೂ ದೆವ್ವ ದ ಜಾತಿಗೆಯೇ ಎಷ್ಟು ದೊಡ್ಡ ಅವಮಾನ.. ಅಪಮಾನ.. ಕಳಂಕ ಅಲ್ವಾ.. ಅಂತ ಅನಿಸಿತು.
ನೋಡಿ ದಿನೇಶ್... ಇವು ಇಲ್ಲಿಯವರೆಗೆ ಮಾಡಿದ ಮ್ಯಾಜಿಕ್.. ಆ ಪೋಲಿಯೊ ಕಾಲು ಇದಕ್ಕೆ ಮಕ್ಕಳು ಕೂಡ ಹೆದರಲ್ಲ..ಭಯ ಆಗುವ ಬದಲು ನನಗೆ ನಿಮ್ಮ ಮೇಲೆ ಅನುಕಂಪ ಬರುತ್ತೆ ಅಷ್ಟೇ ... ಕಾಲು ಹಿಂದೆ ತಿರುಗಿಸಿ... ನಾನು ದೆವ್ವ.. ನನ್ನನ್ನು ನಂಬಿ ಪ್ಲೀಸ್ ಪ್ಲೀಸ್ ..ಅಂದ್ರೆ ಯಾರಿಗಾದರೂ ಭಯ ಆಗುತ್ತಾ ನೀವೇ ಹೇಳಿ ...
ಇನ್ನು ಏನಾದರೂ ಭಯಾನಕವಾಗಿ ತೋರಿಸಿ.. ಅಂದ್ರೆ ಅಸ್ತಿಪಂಜರದ ದೆವ್ವ ಆಗಿ... ದೆವ್ವ ಅಂದ್ರೆ ಹಾಗೇ ಇರ್ಬೇಕು... ಈ ತರಹ ವೈಟ್ ಶರ್ಟ್ ವೈಟ್ ಪ್ಯಾಂಟು ಹಾಕಿದ ಕೂಡಲೇ ಯಾರಾದರೂ ದೆವ್ವ ಆಗ್ತಾರಾ... ಹಾಗೇ ನಾವು ಸ ಹೋಳಿ ಆಡುವಾಗ ವೈಟ್ & ವೈಟ್ ಡ್ರೆಸ್ಸೇ ಹಾಕ್ತೇವೆ.. ಅಂತ ಹೇಳಿದೆ.
ಅದನ್ನು ಕೇಳಿದ್ದ ತಡ ದಿನೇಶ... ಒಮ್ಮೆಲೇ ಮನುಷ್ಯ ರೂಪದಿಂದ ಅಸ್ತಿಪಂಜರ ರೂಪಕ್ಕೆ ತಿರುಗಿ ನನ್ನೆದುರು ಭಯಾನಕವಾಗಿ ನಿಂತು ಬಿಟ್ಟ!!
ನಿಜವಾಗಿಯೂ ಭಯ ಆಯಿತು..!.
ಮಾತ್ರವಲ್ಲ Confirm ಕೂಡ ಆಯಿತು...
ಇದು ಅದೇ ಅಂತ!!!
ಶೇ.. ಯಾವನು ಯಾರು ಮರ್ರೆ.. ಫಸ್ಟ್ ಗೆ ನಾನು ದೆವ್ವ ಅಂತ ಹೇಳ್ಲಿಕ್ಕೆ ಇವನಿಗೇನು ಸಂಕಟ..ಅಂತ ಅನ್ಕೊಂಡೆ!
ಆದ್ರೆ..ಅವನೇ ತುಂಬಾ ಸಲ ಹೇಳಿದ್ದ ಮಾತ್ರ .. ನಾನು ದೆವ್ವ.. ನಾನು ದೆವ್ವ....ಅಂತ. ಆದ್ರೆ ಅವನನ್ನು ನಾನು ಸೀರಿಯಸ್ ಆಗಿ ತಗೊಳ್ಳದೇ ignore ಮಾಡಿದ್ದೆ.
ಬೇಕಿತ್ತಾ ನನಗೆ...
ದೇವರೇ ಈಗ ಏನು ಮಾಡುವುದು .. ನಿಜವಾಗಿಯೂ ಭಯ ಜಾಸ್ತಿ ಆಗತೊಡಗಿತು.!!
ಹೇಗಾದರೂ ಮಾಡಿ ಅಲ್ಲಿಂದ ಎಸ್ಕೇಪ್ ಆಗುವ ಉಪಾಯ ಹುಡುಕತೊಡಗಿದೆ..
ಹೃದಯದ ಬಡಿತ ಮತ್ತಷ್ಟು ಜಾಸ್ತಿ ಆಗುತ್ತಲೇ ಇತ್ತು..!
ಆದರೂ ಅದನ್ನು ತೋರಿಸಿಕೊಳ್ಳದೇ...
ಇಲ್ಲ... ನಾನು ಇನ್ನೂ ನೀವು ದೆವ್ವ ಅಂತ ನಂಬಲ್ಲ..
ನಾನು ದೆವ್ವ ಅಂತ ನಂಬ ಬೇಕಾದರೆ ನೀವು ಈ ಗೋರಿಯೊಳಗೆ ಹೋಗಿ ಉಸಿರುಗಟ್ಟಿ ಅರ್ಧ ಗಂಟೆ ಕುಳಿತುಕೊಳ್ಳಬೇಕು...!
ಮನುಷ್ಯ ಆದವನು ಹಾಗೇ ಕುಳಿತುಕೊಳ್ಳಲು ಸಾಧ್ಯವೇ ಇಲ್ಲ...
ಒಂದು ವೇಳೆ ಅರ್ಧಗಂಟೆ ನಂತರ ಪುನಃ ನೀವು ಗೋರಿಯಿಂದ ಇದೇ ರೀತಿ ಹೊರಗೆ ಬಂದರೆ ಆವಾಗ ನಾನು ಖಂಡಿತ ಒಪ್ಪುತ್ತೇನೆ ನೀವು ಡೆವಿಲ್ ದಿನೇಶ ಎಂದು...
ಅಷ್ಟು ಹೇಳಿದ್ದು ಕೇಳಿ ದಿನೇಶ ರಪ್ಪ ಅಂತ ವೈಟ್ ಗಾಳಿಯ ರೂಪ ತಾಳಿ ಗೋರಿಯ ಒಳಗೆ ಹೋಗಿ ಸೇರಿಕೊಂಡ....!!
ಇನ್ನೂ ನಾನು ಇಲ್ಲೇ ನಿಂತರೆ ಪಕ್ಕದ ಗೋರಿಯಲ್ಲಿರುವ ದಿನೇಶನ ಗರ್ಲ್ ಫ್ರೆಂಡ್ ಮೋಹಿನಿ ಬಂದು confirm ನನ್ನನ್ನು ಕತ್ತು ಹಿಸುಕಿ ಸಾಯಿಸ್ತಾಳೆ ಎಂದು ಚಿಪ್ಸ್ ಪಾಕೆಟ್ ಹಿಡಿದುಕೊಂಡು, ಉಸಿರನ್ನು ಸಹ ಕೈಯಲ್ಲಿ ಹಿಡಿದುಕೊಂಡು ಹಾಗೇ ಎದ್ದು ಬಿದ್ದು ಮನೆಯ ಕಡೆ ಓಡಿದೆ....
ಯಾಕೋ ಗೊತ್ತಿಲ್ಲ ನನ್ನ ಹಿಂದೆಯೇ ಗಾಳಿಯಲ್ಲಿ ಸುರ್ರ್ ಅಂತ ಯಾರೋ ಬಂದಂತೆ ಫೀಲ್ ಆಯಿತು...
ಮಾತ್ರವಲ್ಲ ಗಾಳಿಯೊಂದಿಗೆ ಹಾಡು ಕೇಳಿ ಬಂತು..
" ಓಹೋ......ಹೋ .......
ಓಹೋ......ಹೋ ........
ತಂಗಾಳಿಯಲ್ಲಿ ನಾನು ತೇಲಿ ಬಂದೆ,
ನಿನ್ನನ್ನು ಪ್ರೀತಿಯಿಂದ ಸೇರಲೆಂದೇ,
ಓ ಇನಿಯಾ .........ಓ ಇನಿಯಾ .........
ಆಹಾ ..ಹಾ ...ಹಾ .......
ನನ್ನನು ಸೇರಲು ಬಾ... ಬಾ....
ನನ್ನನು ಸೇರಲು ಬಾ.. ಬಾ..
ಓಹೋ......ಹೋ .............. "
ಹೌದು.. ಹೌದು ಇದು ಮೋಹಿನಿಯೇ... ಡೌಟೇ ಬೇಡ.
ಮತ್ತೆ ಬಿಡ್ತಾಳ.. ನಾನು ಆ ಪಾಪದ ಡೆವಿಲ್ ದಿನೇಶನಿಗೆ ಎಷ್ಟು ಮಕ್ಕರ್ ಮಾಡಿದೆ.. ಅವಮಾನ ಮಾಡಿದೆ... ಮತ್ತೆ ಈಗ ಇವಳು ನನ್ನನ್ನು ಸುಮ್ಮನೆ ಹಾಗೇ ಬಿಟ್ಟು ಬಿಡ್ತಾಳ..
Confirm ಇದು ಅವಳೇ...
ಆದ್ರೂ ಹಾಡು ಮಾತ್ರ ಚೆನ್ನಾಗಿ ಹಾಡ್ತಾಳೆ...
ಹಿಂದಿನಿಂದ ಬರುತ್ತಿರುವ ಮೋಹಿನಿಯ ಹಾಡನ್ನು ಮತ್ತಷ್ಟು ಕೇಳುತ್ತಾ ಕೇಳುತ್ತಾ... ಮನೆಯ ಕಡೆಗೆ ಚಿಪ್ಸ್ ಪ್ಯಾಕೇಟ್ ಹಿಡಿದುಕೊಂಡೆ ಎದ್ದು ಬಿದ್ದು ಓಡಿದೆ..
ಮೋಹಿನಿ ಹಾಡುತ್ತಲೇ ನನ್ನ ಹಿಂದೆ ಬರುತ್ತಿದ್ದಳು..
" ಏತಕೆ ಹೀಗೆ ಅಲೆಯುತಲಿರುವೆ ,
ಯಾರನು ಹೀಗೆ ಹುಡುಕುತಲಿರುವೆ..
ಕಣ್ಣಲ್ಲಿ ನನ್ನಾ ಬಿಂಬ ಇಲ್ಲವೇನು ,
ನೀ ಕಾಣೆ ಏನು ನನ್ನನು ....
ಓ ಇನಿಯಾ .........ಆಹಾ ..ಹಾ ...ಹಾ ...
ನನ್ನನು ಸೇರಲು...ಬಾ...ಬಾ....
ನನ್ನನು ಸೇರಲು...ಬಾ.. ಬಾ...."
.....................................................................................
#ನೀಲಮೇಘ 💙
Ab Pacchu
Moodubidire
(photo - internet)

Comments
Post a Comment