ಒಂದು ಕಳ್ಳ ಪೋಲಿಸ್ ಕಥೆ
" ಅಪ್ಪನಿಗೆ ಟೈಗರ್ ಪ್ರಭಾಕರ್ ಮೂವಿ ಅಂದರೆ ತುಂಬಾನೇ ಇಷ್ಟ. ಟೈಗರ್ ಪ್ರಭಾಕರೇ ಇಷ್ಟ ಅಂತ ಅಲ್ಲ, ಟೈಗರ್ ಪ್ರಭಾಕರ್ ಇರುವ ಮೂವಿ ಯಲ್ಲಿ ಸಿಕ್ಕಾಪಟ್ಟೆ ಪೈಟಿಂಗ್ ಇರುತ್ತೆ ಅಲ್ವಾ ಸಾರ್, ಅದಕ್ಕಾಗಿ ಟೈಗರ್ ಪ್ರಭಾಕರ್ ಇಷ್ಟ .ಅವರು ಪೈಟಿಂಗ್ ಮೂವಿ ಗಳ ಭಯಂಕರ ಪ್ಯಾನ್. ಆದರೆ ನಾನು ಅಲ್ಲ.
ಅದರೆ ಪೈಟಿಂಗ್ ಮೂವಿ ಗಳ ಪ್ರೇಮಿ ನನ್ನ ಅಪ್ಪನಿಂದಾಗಿ, ನಮಗೆ ಮನೆಯಲ್ಲಿ ಎಲ್ಲರಿಗೂ ಪೆಟ್ಟ್ ಲಡಾಯಿ ಯ ಮೂವಿ ನೋಡುವುದು ಅನಿವಾರ್ಯ ಆಗಿತ್ತು . ಹಾಗಾಗಿ ನನ್ನ ಪಾಲಿನ ನೆಚ್ಚಿನ ರೊಮ್ಯಾಂಟಿಕ್ ಹೀರೋ ಗಳಾದ ರಣಬೀರ್, ರಣ್ವೀರ್ ಮೂವಿ ನೋಡುವ ಭಾಗ್ಯ ನನಗಿರಲಿಲ್ಲ. ಇಲ್ಲದಿದ್ದರೆ ನಾನು ಕೂಡ ಜೀವನದಲ್ಲಿ ತುಂಬಾನೇ ರಸಿಕ ವ್ಯಕ್ತಿ ಆಗುತ್ತಿದೆನೋ ಏನೋ, ಇರ್ಲಿ ಬಿಡಿ ಸಾರ್ ನಮ್ಮ ನಮ್ಮ ಹಣೆಬರಹ. ಯಾರು ಏನೂ ಮಾಡಕ್ಕೆ ಆಗಲ್ಲ.
ಹಾಗೇ ಆ ಟೈಮ್ ನಲ್ಲಿ ಹಳೆಯ ಕಾಲದ ಪೆಟ್ಟ್ ಲಡಾಯಿ ಮೂವಿ ನೋಡಿ ನೋಡಿ, ನನಗೂ ನಿಧಾನವಾಗಿ ಪೆಟ್ಟಿಸ್ಟ್ ಮೂವಿ ಇಷ್ಟ ಆಗ ತೊಡಗಿತು. ನನಗೂ ಯಾರಿಗಾದರೂ ಸರಿಯಾಗಿ ಹೊಡಿಯುವ, ನಾಲ್ಕು ಇಕ್ಕುವ ಅಂತ ಎಲ್ಲಾ ಅನಿಸ್ತಾ ಇತ್ತು ಸಾರ್. ಆವಾಗಲೆಲ್ಲ ನನಗೆ ಸದಾ ಉಪದ್ರ ಮಾಡುವ, ಉಪದೇಶ ನೀಡುವ ಅಣ್ಣನನ್ನು ಹಿಡಿದು ಸರಿಯಾಗಿ ಬಾರಿಸ್ ಬೇಕು ಅಂತ ಅನಿಸ್ತಾ ಇತ್ತು. ಆದರೆ ಅಣ್ಣಾ WWE under taker ಪ್ಯಾನು, ಭಯಂಕರ WWE ಬೇರೆ ನೋಡ್ತಾ ಇದ್ದ. ಹಾಗಾಗಿ ಅವನ ಸುದ್ದಿಗೆ ಹೋಗಲು ಭಯ.
ನಿಜ ಹೇಳಬೇಕೆಂದರೆ ನಾನು ಪುಕ್ಕಲ ಸಾರ್.
ಆದರೂ ನೋಡಲು ತುಂಬಾನೇ ಸುಂದರ ಆಗಿದ್ದ ನಾನು ಹೃತಿಕ್ ರೋಷನ್ ತರನೇ ಇದ್ದೆ ಸಾರ್. ಆದರೆ ಯಾಕೋ ಮನೆಯಲ್ಲಿ ಆ ಹೆಸರು ಇಡ್ಲೇ ಇಲ್ಲ ನಂಗೆ .ಅದೊಂದು ಬೇಜಾರು ಇಗಲೂ ನನ್ನನ್ನು ಕಾಡ್ತಾನೆ ಇರುತ್ತೆ ಸಾರ್ .
ಮನಸ್ಸು ಅದೆಷ್ಟು ಮುಗ್ಧ ಆಗಿದ್ದರೂ ನಿಜ ಜೀವನದಲ್ಲಿ ಅದೆಷ್ಟು decent - innocent ಆಗಿದ್ದರೂ ಕೂಡ ನನ್ನ ಅಜಾನುಬಾಹು ದೇಹದಿಂದಾಗಿ, ನನಗೇ ಗೊತ್ತಿಲ್ಲದೆಯೇ ನಾನೊಂದು ರೌಡಿ ಮೆಟಿರಿಯಲ್ ಅಂತ ಉಳಿದವರಿಗೆ ಯಾಕೆ ಅನ್ನಿಸತೊಡಗಿತೋ ನನಗಂತೂ ನಿಜವಾಗಿಯೂ ಗೊತ್ತಿಲ್ಲ ಸಾರ್. ನಿಜ ಹೇಳ್ತಿನಿ ಸಾರ್, ನಾನು ನಿಜವಾಗಿಯೂ ರೌಡಿ ಆಗಿರಲಿಲ್ಲ.
ಮನೆಯಲ್ಲಿ ನಮ್ಮ ನಾಯಿಗೂ ನಾನು ಒಂದು ಏಟು ಇಲ್ಲಿಯತನಕ ಹೊಡಿದವನಲ್ಲ. ಆದರೆ ಅದೇ ನಾಯಿ ನಾನು ಯಾರು ಅಂತ ಗೊತ್ತಾಗದೇ ನನಗೇ ಎಷ್ಟೋ ಬಾರಿ ಕಚ್ಚಿದೆ, ಮನೆಯ ಬೆಕ್ಕು ಕೂಡ ರಾತ್ರಿ ನನ್ನನ್ನು ಹುಡುಕಿಕೊಂಡು ಬಂದು ಪರಚುತ್ತದೆ. ನೀವೇ ಹೇಳಿ ಸಾರ್ ನನ್ನಂತವರು ಎಲ್ಲಾ ಹೇಗೆ ರೌಡಿ ಆಗ್ತಾರೆ ಸಾರ್..
ಆದರೆ ಕಾಲೇಜು ಕೂಡ ನನ್ನನ್ನು ಇದೇ ರೀತಿ ಟ್ರೀಟ್ ಮಾಡಿತು ಸಾರ್. ನನ್ನೊಳಗೆ ಒಬ್ಬ ರೌಡಿ ಇರ್ಬಹುದು, ಮುಂದೊಂದು ದಿನ ಕಾಲೇಜಿನಲ್ಲಿ ಪೆಟ್ಟ್ ಲಡಾಯಿ ಎಲ್ಲಾ ಆದಾಗ ಹೆಲ್ಪಿಗೆ ಬರ್ಬಹುದು ಅಂತ ಬಚ್ಚಾಲಿ ಹುಡುಗರು ಎಲ್ಲಾ ಅವರಾಗಿಯೇ ಬಂದು ನನ್ನ ಸ್ನೇಹಿತರಾದರು. ಲಾಸ್ಟ್ ಬೆಂಚ್ ನಲ್ಲಿ ನನಗಾಗಿ ಒಂದು ಸೀಟು ಯಾವತ್ತೂ ಇಡ್ತಿದ್ದರು. ಕಾಲೇಜು ಕ್ಯಾಂಪಸ್ ಅಲ್ಲಿ ನಾನು ನಡೀತಾ ಇದ್ರೆ ಹುಡುಗರ ಗ್ಯಾಂಗ್ ಒಂದು ಸದಾ ನನ್ನ ಹಿಂದೆ ಇರುತ್ತಿತ್ತು.
ಹುಡುಗಿಯರೆಲ್ಲಾ ನನ್ನ ಹತ್ತಿರ ನೇ ಬರುತ್ತಿರಲಿಲ್ಲ, ನನ್ನನ್ನು ದೂರದಿಂದಲೇ ನೋಡಿ ಓಡಿ ಹೋಗುತ್ತಿದ್ದರು.
ನನ್ನ ಈ ಪ್ರೆಂಡ್ಸ್ ಕಾಲೇಜಿನ ಎಲ್ಲಾ ಪೆಟ್ಟು ಲಡಾಯಿ ಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಎಲ್ಲಾ ಪೆಟ್ಟು ಲಡಾಯಿ ಗಳಲ್ಲಿ ನನ್ನನ್ನೇ ಮುಂದೆ ನಿಲ್ಲುಸುತ್ತಿದ್ದರು.
ನಾನು ಹೇಳುತ್ತಿದ್ದೆ. ನನಗೆ ಇದೆಲ್ಲಾ ಇಷ್ಟ ಇಲ್ಲ, ನನ್ನನ್ನು ನನಷ್ಟಕ್ಕೆ ಬಿಡಿ, ನಾನು ರೌಡಿ ಅಲ್ಲ. ಆದರೆ ಅವರು ಒಪ್ಪಲು ರೆಡಿ ಇರಲಿಲ್ಲ. ಅವರು ಹೇಳುತ್ತಿದ್ದರು "ನೀನು ಜಸ್ಟ್ ನಮ್ಮೊಡನೆ ಬಾ,ನೀನು ಏನು ಮಾಡಬೇಡ, ಕೇವಲ ನಮ್ಮ ಮುಂದೆ ನಿಂತಿರು. ನಿನ್ನನ್ನು ನೋಡಿಯೇ ಇತರರು ಹೆದರಿ ಓಡಿ ಹೋಗ್ತಾರೆ"
ನಾನು ಅವರ ಸ್ನೇಹ ಕ್ಕೆ ಕಟ್ಟು ಬಿದ್ದು ಅವರು ಮಾಡುವ ಎಲ್ಲಾ ಪೆಟ್ಟು ಲಡಾಯಿ ಗಳಲ್ಲಿ ಮುಂದೆ ಹೋಗಿ ನಿಂತುಕೊಳ್ಳುತ್ತಿದ್ದೆ. ಅವರು ಹೇಳಿದ್ದು ನಿಜ, ನನ್ನ ಕಣ್ಣಿನ ತೀಕ್ಷ್ಣತೆ ಯನ್ನು ಎದುರಿಸಿ ನಿಲ್ಲಿಸುವ ಶಕ್ತಿ ಯಾರಲ್ಲೂ ಇರಲಿಲ್ಲ, ಕೇವಲ ನನ್ನನ್ನು ನೋಡಿಯೇ ಜನ ಓಡಿ ಹೋಗ್ತಾ ಇದ್ರು.
ಇದು ಹೀಗೆ ಮುಂದುವರಿದು ಕೆಲವೊಂದು ಕಾಲೇಜು ಜಗಳಗಳು ಪೋಲೀಸ್ ಠಾಣೆಯ ಮೆಟ್ಟಿಲು ಕೂಡ ಹತ್ತಿದ್ದವು,ಈ ರೀತಿಯಾಗಿ ಪೋಲೀಸರಿಗೂ ನನ್ನ ಪರಿಚಯ ಆಯಿತು.
ಆದರೆ ಸಾರ್ ಇಲ್ಲಿಯ ತನಕ ಏನೂ ಒಂದು ತಪ್ಪೇ ಮಾಡದ ನಾನು ವಿನಾಕಾರಣ ಸಮಾಜದಲ್ಲಿ ರೌಡಿ ಎಂದು ಇತರರು ಗುರುತಿಸಿಕೊಳ್ಳುವ ಮಟ್ಟಿಗೆ ಬೆಳೆಯುತ್ತೆನೆ , sorry ಸಮಾಜವೇ ನನ್ನನ್ನು ಬೆಳೆಸುತ್ತದೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ ಸಾರ್.
ಸೊಳ್ಳೆ ಬಂದು ರಕ್ತ ಹೀರುವಾಗ ಕೂಡ ಕೈಯಿಂದ ಹೊಡೆದು ಕೊಲ್ಲಲು ಮನಸ್ಸು ಬಾರದೇ ಉಫ್ ಎಂದು ಗಾಳಿ ಊದಿ ಒಡಿಸುತ್ತಿದ್ದ ನಾನು ಅದು ಹೇಗೆ ಸಾರ್ ರೌಡಿ ಆಗಲು ಸಾಧ್ಯ ..
ಆದ್ರೆ ಸಾರ್, deep inside ನಾನೊಬ್ಬ ರೌಡಿ ಆಗಿರಲಿಲ್ಲ ಸಾರ್. ನಾನೊಬ್ಬ ಅಮಾಯಕ ಆಗಿದ್ದೆ. ಕಾಲೇಜಿಗೆ ಬರುವ ಎಲ್ಲಾ ಹುಡುಗರಂತೆ ನನಗೂ ಕನಸುಗಳಿದ್ದವು, ಚೆನ್ನಾಗಿ ಕಲಿತು ಕ್ಲಾಸ್ ಗೆ topper ಆಗ್ಬೇಕು. ಕಲಿತು ಒಂದೊಳ್ಳೆಯ ಕೆಲಸಕ್ಕೆ ಸೇರ್ಬೆಕು, ಒಳ್ಳೆಯ ಹುಡುಗಿಯೊಬ್ಬಳನ್ನು ಪ್ರೀತಿಸಬೇಕು, ಪ್ರೀತಿಸಿ ಮದುವೆ ಆಗ್ಬೇಕು, ಹುಟ್ಟುವ ಮಕ್ಕಳಿಗೆ ಚಂದದ ಹೆಸರು ಇಡ್ಬೇಕು.. Etc..etc..
ಇತ್ತು ಸಾರ್ ನನಗೂ ಇಂತಹದ್ದೇ ಕನಸುಗಳಿದ್ದವು.
ಈ ರೀತಿ ರೀತಿ ಮುದ್ದು ಮುದ್ದಾದ ಕನಸು ಹೊಂದಿರುವ ವ್ಯಕ್ತಿ ಕೇವಲ ರೌಡಿ ತರಹ ಕಾಣ್ತಾನೆ ಎಂಬ ಒಂದೇ ಕಾರಣಕ್ಕೆ, ಸಮಾಜ ಈತ ರೌಡಿ ಯೇ ಎಂದು ತನ್ನ ತೀರ್ಪನ್ನು ಘೋಷಿಸಿ ಬಿಟ್ಟರೆ..ಅದರಲ್ಲಿ ನನ್ನ ತಪ್ಪು ಏನಿದೆ ನೀವೇ ಹೇಳಿ ಸಾರ್. ಗಟ್ಟು ಮುಟ್ಟಾಗಿ, ಬಲಶಾಲಿಯಾಗಿ ದೃಡಕಾಯನಾಗಿ ಇದ್ದದ್ದು, ಅದು ನನ್ನ ತಪ್ಪಾ? ಚಿಕ್ಕ ಮಗುವಿಗೂ ಕೂಡ ಮೆಲ್ಲನೆ ಚಿವುಟಿ ಅಳಿಸುತ್ತಿದ್ದ ಹುಡುಗ ಕೂಡ ನಾನಲ್ಲ!
ಅದೊಂದು ದಿನ ಆ ಘಟನೆ ನಡೆಯಿತು ಸಾರ್. ಅವತ್ತು ಹೋಳಿ ಹಬ್ಬ. ನಾನು ರೋಡ್ ನಲ್ಲಿ ಒಬ್ಬನೇ ನಡೆದು ಬರುತ್ತಿದ್ದೆ. ರೋಡ್ ಬದಿಯಲ್ಲಿ ಕೆಂಪು ಬಣ್ಣದ ಕತ್ತಿಯೊಂದು ಬಿದ್ದಿತ್ತು. ನಾನು ಹೋಳಿ ಯ ಕಲರ್ ಬಿದ್ದು ಬಹುಶಃ ಕತ್ತಿ ಕೆಂಪಾಗಿರಬೇಕು ಎಂದು ಕೊಂಡೆ. ಮನೆಗೆ ತಗೊಂಡು ಹೋದರೆ ಪೆಲಕಾಯಿ (ಹಲಸಿನ ಹಣ್ಣು) ಕಟ್ ಮಾಡ್ಲಿಕ್ಕೆ ಹೆಲ್ಪ್ ಆಗ್ತದೆ ಅಂತ ಬಾಗಿ ಕತ್ತಿ ಎತ್ತಿಕೊಂಡೆ.
ಅಷ್ಟೇ ಸಾರ್ ನನಗೆ ಅಲ್ಲಿ ಏನಾಗುತ್ತಿದೆ ಎಂದೇ ಗೊತ್ತಾಗಲಿಲ್ಲ.ಎಲ್ಲಿಂದಲೋ ಹಲವಾರು ಮಾಧ್ಯಮದವರು ಒಮ್ಮೆಲೇ ಪ್ರತ್ಯಕ್ಷ ಆದರು. ಎಲ್ಲಾ ಕ್ಯಾಮೆರಾ ಗಳು ರಪ ರಪ ಅಂತ ನಾನು ಕತ್ತಿ ಹಿಡಿದುಕೊಂಡಿರುವ ಫೋಟೊ ವನ್ನು ಎಲ್ಲಾ angle ನಿಂದ ತೆಗೆದು ಬಿಟ್ಟರು. ನನಗೇ ಒಂದೂ ಅರ್ಥ ಆಗಲಿಲ್ಲ. ಪಕ್ಕನೇ ತಿರುಗಿ ನೋಡಿದೆ. ಅಲ್ಲೊಂದು ಹೆಣ ಬಿದ್ದಿತ್ತು. ನಿಧಾನವಾಗಿ ನಾನು ಹಿಡಿದಿದ್ದ ಕತ್ತಿಯನ್ನು ಗಮನಿಸಿದೆ. ಕತ್ತಿಯನ್ನು ಮೆತ್ತಿದ್ದು ಹೋಳಿಯ ಕೆಂಪು ಬಣ್ಣ ಆಗಿರಲಿಲ್ಲ ಸಾರ್. ಬದಲಾಗಿ ಆ ಹೆಣ ದ ರಕ್ತವಾಗಿತು!
ಪೋಲಿಸ್ ಜೀಪು ಬಂತು. ನನ್ನನ್ನು ಎತ್ತಿಕೊಂಡು ಹೋಗಿ ಏರೋಪ್ಲೇನು, ಹೆಲಿಕಾಪ್ಟರ್ ಡ್ರೋನ್, ರಾಪೇಲ್ ಎಲ್ಲವನ್ನೂ ಹತ್ತಿಸಿದರು. ಕಾಲೇಜಿನಲ್ಲಿ ಇರುವಾಗಲೇ ಪೋಲಿಸ್ ಠಾಣೆಯ ಮೆಟ್ಟಿಲು ಹತ್ತಿದುದರಿಂದಾಗಿ ಈ ಕೊಲೆ ಕೂಡ ನಾನೇ ಮಾಡಿದ್ದೆನೆ ಎಂದು ತಿಳಿದು ನನ್ನ ಮೇಲೆ ಕೇಸು ಜಡಿದು ಜೈಲಿಗೆ ಹಾಕಿದರು.!
ನನಗೆ ಸುತ್ತ ಮುತ್ತ ಏನು ಆಗುತ್ತಿದೆ ಎಂದೇ ಗೊತ್ತಾಗಲಿಲ್ಲ. ಒಬ್ಬ ಪೊಲಿಟಿಷಿಯನ್ ಮಾಮು ಬಂದು ನನ್ನನ್ನು ಜೈಲಿನಿಂದ ಬಿಡಿಸಿಕೊಂಡು ಬಂದರು. ತಮ್ಮ ಪರವಾಗಿ ಕೆಲಸ ಮಾಡಬೇಕೆಂದು ಕೇಳಿಕೊಂಡರು. ನಾನು ಆಗಲೂ ಹೇಳಿದೆ " ಪೊಲಿಟಿಷಿಯನ್ ಮಾಮ್ , ನಾನು ರೌಡಿ ಅಲ್ಲ" ಎಂದು.
"ಎಲ್ಲ ರೌಡಿಗಳೂ ಹೀಗೆಯೇ ಹೇಳುವುದು" ಅಂತ ಗಹಗಹಿಸಿ ನಕ್ಕರು.
ಆದರೂ ನಾನು ಖಡಕ್ ಆಗಿಯೇ ಹೇಳಿದೆ "ಪೊಲಿಟಿಷಿಯನ್ ಮಾಮ್ , ನೀವು ಏನೇ ಹೇಳಿ ನಾನು ನಿಮ್ಮ ಕೆಟ್ಟ ಕೆಲಸಗಳಿಗೆ ಕೈ ಜೋಡಿಸಲಾರೆ" ಎಂದು.
ಅದಕ್ಕವರು "ಆಯ್ತು ನೀನೇನು ಮಾಡಬೇಡ, ಜಸ್ಟ್ ನಮ್ಮ ಹುಡುಗರ ಜೊತೆ ಇರು, ಬಾಕಿ ಎಲ್ಲಾ ಅವರೇ ನೋಡ್ಕೊತ್ತಾರೆ".
ಜೈಲಿನಿಂದ ಬಿಡಿಸಿದ ಅವರ ಋಣ ಒಂದು ಬಾಕಿ ಇತ್ತು ಸಾರ್. ಅದಕ್ಕಾಗಿ ನಾನು ಅವರ ಬಳಿ ನಿಲ್ಲಲೇ ಬೇಕಾಗಿತ್ತು.
ಟಿವಿ ಮಾಧ್ಯಮಗಳಲ್ಲಿ, ಪೇಪರ್ ಗಳಲ್ಲಿ ನನ್ನ ಬಗ್ಗೆ ಹೇರಳವಾಗಿ ಬರೆದರು. ಕುಖ್ಯಾತ ಪಾತಾಕಿ, ಕೊಲೆಗಾರ, ಹೀಗೆ ಏನೇನೋ.. ನಮ್ಮ ಜೊತೆ ಇದ್ದ ಪುಡಿ ರೌಡಿಗಳೂ ಕೂಡ ನನ್ನ ಹೆಸರು ಹೇಳಿ ಹಪ್ತಾ ವಸೂಲಿ ಮಾಡತೊಡಗಿದರು. ನನಗೆ ಇದರ ಯಾವುದರ ಅರಿವೇ ಇರಲಿಲ್ಲ.
ನಿಧಾನವಾಗಿ ನಗರದಲ್ಲಿ ನನ್ನ ಹವಾ ಹೆಚ್ಚಾಗತೊಡಗಿತು, ನನಗೆ ಅರಿವಿಲ್ಲದೇ.
ನಗರದಲ್ಲಿ ಏನೇ ಕೊಲೆ ಸುಲಿಗೆ ಆದರೂ ನನಗೂ ಅದಕ್ಕೂ ಸಂಬಂಧವೇ ಇರದಿದ್ದರೂ ಎಲ್ಲದರಲ್ಲೂ ನನ್ನದೇ ಹೆಸರೇ ಕೇಳಿಬರುತ್ತಿತ್ತು.
ಕೊನೆಗೊಂದು ದಿನ ನನಗೆ ರೌಡಿ ಶೀಟರ್ ಅಂತ ಪಟ್ಟ ಕೂಡ ಬಂತು!
ಕೇವಲ ಕತ್ತಿ ಒಂದನ್ನು ಕಂಡರೆ ಇದರಿಂದ ಪೆಲಕಾಯಿ(ಹಲಸಿನ ಹಣ್ಣು) ಕಟ್ ಮಾಡ್ಲಿಕ್ಕೆ ಆಗ್ಬಹುದಾ ಎಂದು ಆಲೋಚಿಸುವ ಮುಗ್ಧ ಹುಡುಗ ಅದು ಹೇಗೆ ಸಾರ್ ಲಾಂಗ್ ಮಚ್ಚು ಹಿಡಿದು ರುಂಡ ಮುಂಡಗಳನ್ನು ಚೆಂಡಾಡುವ ರೌಡಿ ಆಗಬಲ್ಲಾ..!
ಪ್ರೀತಿಯೇ ಆಗುವುದಿಲ್ಲ ಎಂದು ತಿಳಿದಿದ್ದ ನನ್ನ ಬಾಳಿನಲ್ಲಿ ಅದು ಕೂಡ ಆಯಿತು. ಒಂದು ದಿನ ಪೊಲಿಟಿಷಿಯನ್ ಮಾಮ್ ನ ಮಗಳು ನನಗೆ ಪ್ರಪೋಸ್ ಮಾಡಿದಳು. ನಾನು ದಂಗಾಗಿ ಕೇಳಿದೆ."ಸಮಾಜ ನನ್ನನ್ನು ರೌಡಿ ಅಂತ ಕರೆಯುತ್ತೆ, ನನ್ನನ್ನೇ ಯಾಕೆ ಲವ್ ಮಾಡ್ತಿಯಾ? "
ಅದಕ್ಕವಳು ಅಂದವಳು" ನನಗೆ ಹೀರೋ ಗಿಂತ ವಿಲನ್ ಅಂದ್ರೆನೇ ತುಂಬಾ ಇಷ್ಟ, ಬದುಕಿನಲ್ಲಿ ಥ್ರಿಲ್ ಬೇಕು " ಅಂದಳು.
ನನ್ನಂತವನನ್ನು ಯಾರು ಲವ್ ಮಾಡ್ತಾರೆ ಅಂತ ಅವಳ ಲವ್ ಗೆ ಕೊನೆಗೂ ಒಪ್ಪಿದೆ ಸಾರ್.
ಒಂದು ದಿನ ಅವಳು ಬಂದು ವಿಭಿನ್ನ ಬೇಡಿಕೆ ಇಟ್ಟಳು." ನನ್ನ ಫ್ರೆಂಡ್ ಒಬ್ಬ ದುಬೈ ಅಲ್ಲಿ ಇದ್ದಾನೆ, ಅವನಿಗೆ ಅರ್ಜೆಂಟ್ ಆಗಿ ಬೇಟಿ ಆಗಿ ಒಮ್ಮೆ ಬಾ , ನನಗೆ ನಿನ್ನನ್ನು ಬಿಟ್ಟರೆ ಬೇರೆ ಯಾರೂ ಇದ್ದಾರೆ, ಪ್ಲೀಸ್..ನೀನೇ ಹೋಗಿ ಬಾ, ಹೋಗುವಾಗ ಅವನಿಗೆ ಈ ಕೆಲವು ಗಿಫ್ಟ್ ಗಳನ್ನು ಕೂಡ ಕೊಟ್ಟು ಬಾ " ಎಂದು ದೊಡ್ಡ ಬ್ಯಾಗ್ ಒಂದನ್ನು ನೀಡಿದಳು.
ಬ್ಯಾಗ್ ನಲ್ಲಿ ಏನಿದೆ ಎಂದು ನೋಡಿದೆ. ಕೆಲವು ಸ್ವೀಟ್ಸ್ ಐಟಮ್ಸ್, ಸೋನ್ ಪಾಪುಡಿ.. ಹೀಗೆ ಎಲ್ಲವೂ ಇತ್ತು.
ಓಕೆ ಸರಿ ಎಂದು ಒಪ್ಪಿ ನಾನು ದುಬೈ ಗೆ ಹೋಗಲು ರೆಡಿ ಆದೆ.
ದುಬೈ ಗೆ ಹೀಗೆ ಹೋದರೆ ಇಲ್ಲಿಯೇ ನಮ್ಮ ಏರ್ಪೊಟ್ ನಲ್ಲಿಯೇ ಹಲವು ಕೇಸುಗಳಲ್ಲಿ ಬೇಕಾಗಿದ್ದ ನನ್ನನ್ನು ಹಿಡಿಯುತ್ತಾರೆ ಎಂದು ಖಂಡಿತ ಗೊತ್ತಿತ್ತು. ಅದಕ್ಕಾಗಿ ವೇಷ ಬದಲಾಯಿಸಿಕೊಂಡು ಏರ್ಪೊಟ್ ಗೆ ಹೋದೆ.
ನನ್ನೆಲ್ಲಾ ಬ್ಯಾಗ್, ವಸ್ತು ಗಳು ತಪಾಸಣೆಯಾದವು.ಎಲ್ಲವೂ ಸರಿಯಾಗಿಯೇ ಇತ್ತು. ಆದರೂ ನನ್ನನ್ನು ಏರ್ಪೊಟಿನ ಅಧಿಕಾರಿಗಳು ಬಂದಿಸಿದರು.!
ನಾನು ಕಾರಣ ಕೇಳಿದೆ.
ಅವರು ನೀಡಿದ ಕಾರಣ ಕೇಳಿ ನಾನು ಬೆಚ್ಚಿ ಬಿದ್ದಿದ್ದೆ.
ಅವರು ನನ್ನನ್ನು ಬಂದಿಸಲು ಕಾರಣ ಏನು ಗೊತ್ತಾ? ನಾನು ಸಾಗಿಸುತ್ತಿದ್ದ ಸೋನ್ ಪಾಪುಡಿ ಯಲ್ಲಿ ಡ್ರಗ್ಸ್ ಇತ್ತು!
ನಾನು ಪೊಲಿಟಿಷಿಯನ್ ಮಾಮು ನ ಮಗಳು ಹೆಣೆದ ಆ ಪ್ರೇಮದ ನಾಟಕಕ್ಕೆ ಬಲಿಪಶು ಆಗಿದ್ದೆ ಸಾರ್, ಹೌದು ಆದೊಂದು trap ಆಗಿತ್ತು!
ನನ್ನನ್ನು ಮಾಧ್ಯಮದವರು ಡ್ರಗ್ ರಾಕೆಟ್, ಡ್ರಗ್ ಡಾನ್ ಅಂತ ಏನೇನೋ ಹೆಸರಿನಿಂದ ಕರೆದರು.
ಡ್ರಗ್ ಕೇಸ್ ಅಲ್ವಾ ಅದಕ್ಕಾಗಿ ಈ ಸಲ ನನ್ನನ್ನು ಜೈಲಿನಿಂದ ಬಿಡಿಸಲೂ ಯಾರೂ ಬರ್ಲೆ ಇಲ್ಲಾ ಸಾರ್.ಅದಕ್ಕಾಗಿ ಇನ್ನೂ ಇದೇ ಜೈಲಿನಲ್ಲಿ ಕೊಳಿತಾ ಇದ್ದೆನೆ ಸಾರ್!
ನೀವೇ ಹೇಳಿ ಸಾರ್, ಡ್ರಗ್ ಯಾವುದು ಸೋನ್ ಪಾಪುಡಿ ಎಂದು ಗೊತ್ತಾಗದ ಅಮಾಯಕ ನಾನು.. ನಾನು ಯಾವತ್ತಾದರೂ ರೌಡಿ ಆಗಲು ಸಾಧ್ಯವಾ? ಹೇಳಿ ಇನ್ಸ್‌ಪೆಕ್ಟರ್ ಪಚ್ಚು ಸಾರ್.. ಹೇಳಿ... "
ಪೆಟ್ಟಿಸ್ಟ್ ಸಂತು ತನ್ನ ಕಥೆ ಹೇಳಿ ಮುಗಿಸಿದ್ದ!
ಸಂತು ಕೇಳಿದ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರಗಳಿರಲಿಲ್ಲ. ಜೈಲಿನಲ್ಲಿ ನೀರವ ಮೌನ ತುಂಬಿತ್ತು. ಮುಗ್ಧ ಸಂತು ತನಗಾದ ಅನ್ಯಾಯಕ್ಕೆ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಅವನ ಅಳು ಜೈಲಿನ ನಾಲ್ಕೂ ಗೊಡೆಗಳಿಗೂ ಅಪ್ಪಳಿಸಿ ಸಾಗರದ ಬೋರ್ಗರೆತ ದಂತೆ ಭಾಸವಾಗುತ್ತಿತ್ತು.
ಸಂತುವಿನ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದ ಕಾನ್ಸ್ಟೇಬಲ್ ರಾಮಣ್ಣ ನ ಕಣ್ಣಲ್ಲೂ ನೀರು ಜಿನುಗಿತ್ತು.
ನನಗೂ ಕಣ್ಣು ನೀರಾಗಿತ್ತು. ಆದರೆ ಏನು ಮಾಡಲಿ. ಕಾನೂನು ಅನ್ನು ಪಾಲಿಸ ಬೇಕಾದ ನನ್ನ ಪಾಲಿಗೆ ಭಾವನೆಗಳಿಗೆ ಬೆಲೆ ಇಲ್ಲ.
ನನ್ನ ಈ ಕೆರಿಯರ್ ನಲ್ಲಿ ಎಷ್ಟೋ ಕೈದಿಗಳನ್ನು ನೋಡಿದ್ದೆನೆ, ಆದರೆ ಸಂತು ವಿನಂತಹ ಅಮಾಯಕನನ್ನು ನಾನು ಎಂದಿಗೂ ನೋಡಿರಲಿಲ್ಲ. ಕೆಲವೊಮ್ಮೆ ಅನಿಸುತ್ತದೆ ಈ ಬದುಕು ಅದೆಷ್ಟು ಕ್ರೂರಿ!
"ಪಚ್ಚು ಸಾರ್.. " ಟೀ ತರಿಸಲಾ, ಎಂದು ಕಾನ್ಸ್ಟೇಬಲ್ ರಾಮಣ್ಣ ಕೇಳಿದ. ಟೀ ಕುಡಿಯುವ ಮನಸ್ಸು ನನ್ನಲ್ಲಿರಲಿಲ್ಲ. ಬೇಡ ಎಂದು ಹೇಳಿದವನೇ ನೇರವಾಗಿ ಸ್ಟೇಷನ್ ನಿಂದ ಹೊರ ನಡೆದೆ.
ಬುಲೆಟ್ start ಮಾಡಿ ಮನೆ ಕಡೆಗೆ ಹೊರಟೆ.
ಹೋಗುತ್ತಾ ನಗರದ ಮಧ್ಯೆ ಭಾಗದಲ್ಲಿ ಹೃತಿಕ್ ರೋಷನ್ ನ ಒಂದು ದೊಡ್ಡ ಸಿನಿಮಾ ಫ್ಲೆಕ್ಸ್ ಕಂಡಿತು. ಯಾಕೋ ಸಂತುವಿನ ಸ್ಟೋರಿ ಯೇ ನೆನಪಾಯಿತು.
ಮುಗ್ಧ ಸಂತು ಹೇಳುತ್ತಿದ್ದ ಆ ಮಾತುಗಳು ನೆನಪಾದವು
" ಚಿಕ್ಕಂದಿನಲ್ಲಿ ನೋಡಲು ತುಂಬಾನೇ ಸುಂದರ ಆಗಿ ನಾನು ಹೃತಿಕ್ ರೋಷನ್ ತರನೇ ಕಾಣ್ತಾ ಇದ್ದೆ ಸಾರ್. ಆದರೆ ಯಾಕೋ ಮನೆಯಲ್ಲಿ ಆ ಹೆಸರು ಇಡ್ಲೇ ಇಲ್ಲ .ಅದೊಂದು ಬೇಜಾರು ಇಗಲೂ ನನ್ನನ್ನು ಕಾಡ್ತಾನೆ ಇರುತ್ತೆ ಸಾರ್ .. ".
ಮರು ಕ್ಷಣವೇ ಸಂತು ಪದೇ ಪದೇ ಹೇಳುತ್ತಿದ್ದ, ಕೇಳುತ್ತಿದ್ದ ಆ ಒಂದು ಮಾತು ನನ್ನನ್ನು ಇನ್ನೊಮ್ಮೆ ಬಹಳವಾಗಿ ಕಾಡಿತು, ಅದೇ ..
" ಸಾರ್, ಹೇಳಿ ಸಾರ್... ನಾನು ರೌಡಿ ಯಾ? "
ಬುಲೆಟ್ ಮನೆಯ ಕಡೆಗೆ ತಿರುಗಿಸಿದೆ!
#ಒಂದು_ಕಳ್ಳ_ಪೋಲಿಸ್_ಕಥೆ!
#ಶುಭಂ
.....................................................
story by - AB Pacchu,
Moodbidri
Mangalore(D.K)

Comments
Post a Comment