ಮಸಾಲೆದೋಸೆ ತಿನ್ನುವುದು ಹೇಗೆ..
ಈ ಮಸಾಲೆ ದೋಸೆ ಇದೆಯಲ್ಲ,ಇದು ಕೇವಲ ದೋಸೆಗಳ ರಾಜ ಅಲ್ಲ,ಒಂದು ಸಮಯದಲ್ಲಿ ಇದು ಎಲ್ಲಾ ತಿಂಡಿಗಳ ರಾಜನೇ ಆಗಿತ್ತು.
ಬೇಕಿದ್ದರೆ ಗಮನಿಸಿ ನೀವು ಹಿಂದೆ ಹೋಟೆಲ್ ಗೆ ಊಟಕ್ಕೆ ಎಂದು ಹೋದಾಗ ಏನಾದರೂ luxury ಆಗಿ ತಿನ್ನಬೇಕು ಅಂತ ಅನ್ನಿಸಿದರೆ ,ಮೆನು ಕಾರ್ಡ್ ಅನ್ನು ಮೇಲಿಂದ ಕೆಳಗೆ ಒಮ್ಮೆ ನೋಡಿ ಹೆಚ್ಚಿನವರು ಕೊನೆಗೆ ಹೇಳುತ್ತಿದ್ದದ್ದು ಬಿರಿಯಾನಿಯನ್ನೇ.ಒಂದೋ ಚಿಕನ್ ಬಿರಿಯಾನಿ ಇಲ್ಲವೇ ವೆಜ್ ಬಿರಿಯಾನಿ.
ಅದೇ ರೀತಿ luxury ಆಗಿ ಏನಾದರೂ ತಿಂಡಿ ತಿನ್ನುವ ಎಂದು ಹಿಂದೆ ಎಲ್ಲಾ ಹೋಟೆಲ್ ಗೆ ಹೋದಾಗ ಕೂಡ , ಹೋಟೆಲ್ ಸಪ್ಲೈಯರ್ ಬಳಿ ಒಂದೆರಡು ಸೆಕೆಂಡ್ ಗಳ ಕಾಲ ತಿನ್ಲಿಕ್ಕೆ ಏನಿದೆ ಎಂದು ಎಲ್ಲಾ ತಿಂಡಿಗಳ ಹೆಸರು ಕೇಳಿಸಿಕೊಂಡು, ಕೊನೆಯಲ್ಲಿ ಹೇಳುತ್ತಿದ್ದದ್ದು ಇದನ್ನೇ .. ನಂಗೊಂದು ಮಸಾಲೆ ದೋಸೆ ಕೊಡಿ ಆಯ್ತಾ ಎಂದು.
ಮಂಗಳೂರಿನಲ್ಲಿ ಆದರೆ ಇದೇ ರೀತಿ ಇನ್ನೆರಡು ವಿಷಯ ಆಗುತ್ತದೆ... ಫಿಶ್ ಮಾರ್ಕೆಟ್ ಗೆ ಹೋಗಿ ಎಲ್ಲಾ ಫಿಶ್ ನೋಡಿ,ಅವುಗಳ ರೇಟ್ ಕೇಳಿ, ಕೊನೆಗೆ ಎಂದಿನಂತೆ ಬಂಗುಡೆಯನ್ನೋ ಇಲ್ಲವೇ ಬೂತಾಯಿಯನ್ನು ಖರೀದಿಸಿ ಬರುವುದು. ಅದೇ ರೀತಿ ಐಸ್‌ಕ್ರೀಂ ಪಾರ್ಲರ್ ಗೆ ಹೋದರೆ ಎಲ್ಲಾ ಐಸ್‌ಕ್ರೀಂ ಹೆಸರು ಕೇಳಿ ಕೊನೆಗೆ, " ಬಾಸ್.. ಎಂಕೊಂಜಿ ಗಡ್ ಬಡ್" (ಒಂದು ಗಡ್ ಬಡ್ ಐಸ್‌ಕ್ರೀಂ ಕೊಡಿ) ಎಂದು ಹೇಳುವುದು. ಈಗ ಅಂತು ಕಾಲ ಬದಲಾಗಿದೆ ಐಸ್‌ಕ್ರೀಂ ಪಾರ್ಲರ್ ಗೆ ಹೋದರೂ ಕೂಡ ಗಡ್ ಬಡ್ ಒಂದನ್ನು ಬಿಟ್ಟು ಬೇರೆ ಯಾವುದಾದರೂ ಹೊಸತ್ತನ್ನು ತಿನ್ನುವ ಎನ್ನುವ ಉಮೇದು ನಮ್ಮ ಜನರಿಗೆ ಬಂದಿದೆ. ಅದೇ ರೀತಿ ಕೇವಲ ಬಂಗುಡೆ ಬೂತಾಯಿ ಮೀನುಗಳು ಬರುತ್ತಿದ್ದ ಮನೆಗೆ ದುಬಾರಿ ಬೆಲೆಯ ಅಂಜಲ್, ಮಾಂಜಿಗಳು ಕೂಡ ಮನೆಯೊಳಗೆ ಬಂದು ದರ್ಬಾರು ಮಾಡುತ್ತಿದ್ದೆ.ಜನರ ಜೀವನ ಮಟ್ಟ ಕೂಡ ಸಾಕಷ್ಟು ಸುಧಾರಿಸಿದೆ ಇಂದು.
ಈಗ ಚೈನೀಸ್,ನಾರ್ತ್ ಇಂಡಿಯನ್ ಫುಡ್, ಕಾಂಟಿನೆಂಟಲ್ ಫುಡ್ ಅದು ಇದು ಎಂದು ಬಂದು ಜನಗಳು ಕೂಡ ತಮ್ಮ ಜಿಹ್ವಾಚಾಪಲ್ಯವನ್ನು ಬೇರೆ ತಿಂಡಿಗಳ ಕಡೆಗೂ ವಿಸ್ತರಿಸಿದ್ದಾರೆ.
ಮಸಾಲ ದೋಸೆಗಳಿಗಿಂತಲೂ ಹೆಚ್ಚಾಗಿ ಫ್ರೈಡ್ ರೈಸ್, ನೂಡಲ್ಸ್, ಗೋಬಿ ಮಂಚೂರಿಯನ್, ಪನ್ನೀರ್, ಬೇಬಿ ಕಾರ್ನ್, ಮಶ್ರೂಮ್ ಹೀಗೆ ಹಲವಾರು ಐಟಂ ಗಳು ಜನರ ಬಾಯಲ್ಲಿ ನೀರೂರಿಸಿ ಬಿಡುತ್ತದೆ.
ಅದೆಲ್ಲ ಏನೇ ಇರಲಿ. ಮಸಾಲೆ ದೋಸೆ ಗೆ ಅದರದ್ದೇ ಫ್ಯಾನ್ ಬೇಸ್ ಈಗಲೂ ಇದೆ. ಮೈಸೂರು ಮಸಾಲ, ಪನ್ನೀರ್ ಮಸಾಲ, stuffed ಮಸಾಲ, ಪಾಲಕ್ ಮಸಾಲ, ಬಟರ್ ಮಸಾಲ... ಹೀಗೆ ಹಲವಾರು ವೆರೈಟಿಗಳಲ್ಲಿ ಮಸಾಲೆ ದೋಸೆಯು ಕೂಡ ತನ್ನ ಅವತಾರ ಎತ್ತಿದೆ.ನನಗಂತು ಹಳೆಯ ಸಿಂಪಲ್ ಮಸಾಲೆ ದೋಸೆಯೇ ಇಷ್ಟ.
ನನಗೂ ದೋಸೆ ಎಂದರೆ ತುಂಬಾನೇ ಇಷ್ಟ. ಅದರಲ್ಲೂ ನೀರು ದೋಸೆ, ಹಾಗೂ ಈ ಮಸಾಲೆ ದೋಸೆ ಅಂದರೆ ಬಹಳನೇ ಪ್ರೀತಿ. ಈ ಎರಡೂ ದೋಸೆಯ ಮೂಲ ಅವಿಭಜಿತ ದಕ್ಷಿಣ ಜಿಲ್ಲೆಯೇ ಎನ್ನುವುದು ನನಗೆ ಇನ್ನೂ ಒಂದು ಖುಷಿಯ ವಿಷಯವೇ.
ನಮ್ಮದು ಅನ್ನುವ ಒಂದು ವಿಶೇಷ ಪ್ರೀತಿ ಇರುತ್ತೆ ಅಲ್ವಾ ಯಾವತ್ತೂ, ಹಾಗಾಗಿ ನನಗೂ ಅಂತಹ ಪ್ರೀತಿ ಈ ಎರಡೂ ದೋಸೆಗಳ ಮೇಲೆ ಇದೆ. ನಮ್ಮದೇ ಊರಿನಲ್ಲಿ ಹುಟ್ಟಿದ ತಿಂಡಿಗಳು ಇಂದು ವಿಶ್ವದ ಎಲ್ಲಾ ಕಡೆಯೂ ಪಸರಿಸಿ ತುಂಬಾನೇ ಪ್ರಸಿದ್ಧಿ ಪಡೆದುಕೊಂಡು ಬಿಟ್ಟಿವೆ.
ನಾವು ಈಗ ಈ ಮಸಾಲೆ ದೋಸೆಯನ್ನು ತಿನ್ನುವುದು ಹೇಗೆ ಎಂದು ನೋಡೋಣ.
ಮಸಾಲೆ ದೋಸೆ ಆರ್ಡರ್ ಮಾಡಿದ ಕೂಡಲೇ ಚಾಪೆಯಂತೆ ಮಡಚಿದ ಉದ್ದದ ಮಸಾಲೆ ದೋಸೆ ಹಾಗೂ ಅದರ ಇಕ್ಕೆಲಗಳಲ್ಲಿ ಒಂದು ಕಪ್ ನಲ್ಲಿ ತೆಂಗಿನಕಾಯಿ ಚಟ್ನಿ ಹಾಗೂ ಇನ್ನೊಂದು ಕಪ್ ನಲ್ಲಿ ಸಾಂಬಾರು ತಂದು ಇಡುತ್ತಾರೆ.
ತಂದು ಇಟ್ಟ ಕೂಡಲೇ ಗಬ ಗಬ ಎಂದು ತಿಂದು ಬಕಾಸುರನಂತೆ ಖಾಲಿ ಮಾಡಬೇಡಿ.
ಹಾಗೇ ಕಣ್ಣಿನಿಂದ ಅದರ ಸೌಂದರ್ಯವನ್ನು ಸವಿದು ಬಿಡಿ.
ಮಸಾಲೆ ನಿಜವಾಗಿಯೂ ಸುಂದರವಾದ ದೋಸೆ.. ಕಲರ್ ಫುಲ್ ದೋಸೆ.. ಅದಕ್ಕೆ ನಿಮ್ಮ ಕಣ್ಣು ತಂಪು ಮಾಡುವ ಸಾಮರ್ಥ್ಯ ಇದೆ.
ಕಣ್ಣಲ್ಲಿ ಒಮ್ಮೆ ಸವಿದ ನಂತರ, ಈಗಲೂ ರಪ ರಪ ಎಂದು ಕೈ ಹಾಕಿ ದೋಸೆ ತಿಂದು ಖಾಲಿ ಮಾಡ ಬೇಡಿ.
ನಿಧಾನಕ್ಕೆ ಸ್ವಲ್ಪ ಮುಂದಕ್ಕೆ ಬಾಗಿ ಹಾಗೇ ಬಿಸಿಯಾದ ಮಸಾಲೆ ದೋಸೆಯ ಪರಿಮಳವನ್ನು ಮೂಗಿನಲ್ಲಿ ಆಘ್ರಾಣಿಸಿ ಬಿಡಿ. ಮೈ ಮನಸ್ಸುಗಳನ್ನು ಅರಳಿಸುತ್ತದೆ ಅದು. ಉದ್ದಿನ ಬೇಳೆಯ ಪರಿಮಳವೇ ಅಂತಹದ್ದು.
ಈಗ ನಿಧಾನವಾಗಿ ಕೈಯಿಂದ ಅದರ ಬೆನ್ನು ಸವರಿ, ಸ್ಪರ್ಶ ಸುಖವನ್ನು ಅನುಭವಿಸಿ. ಮಸಾಲೆ ದೋಸೆ ಯಾವತ್ತೂ ಕ್ರಿಸ್ಪಿಯಾಗಿ ಬಿಸಿಯಾಗಿಯೇ ಇರುತ್ತದೆ. ನವಿರಾದ ದೋಸೆಯನ್ನು ಹಾಗೇ ಮುಟ್ಟುತ್ತಿದ್ದಂತೆ ಬಾಯೊಳಗಿನ ನಾಲಗೆಗೆ ಅದೆನೋ ಉಲ್ಲಾಸ.
ಈಗಲು ರಪ್ಪ ಅಂತ ಬಾಯಿಗೆ ಹಾಕಿ ಗುಳುಂ ಮಾಡಬೇಡಿ.
ನಿಧಾನವಾಗಿ ಒಂದು ತುಂಡು ಮಸಾಲೆ ದೋಸೆಯನ್ನು ತೆಗೆದುಕೊಂಡು ಚಟ್ನಿಯೊಂದಿಗೆಯೋ, ಸಾಂಬಾರ್ ನಲ್ಲಿಯೋ ಅದ್ದಿ ಹಾಗೇ ಬಾಯಿಗೆ ಇಡಿ...
ಬಾಯಿಯಲ್ಲಿ ಇಟ್ಟು ಹಾಗೇ ಒಮ್ಮೆ ಕಣ್ಣು ಮುಚ್ಚಿ, ಮನಸ್ಸಿನಲ್ಲಿಯೇ ಬಾಯೊಳಗಿರುವ ತುಂಡು ಮಸಾಲೆ ದೋಸೆಯನ್ನು ಚಿತ್ರಿಸಿಕೊಂಡು ಹಾಗೇ ಮಸಾಲೆ ದೋಸೆಯನ್ನು ಬಾಯೊಳಗೆ ಅರೆಯಲು ಶುರು ಮಾಡಿ.ಅದರ ಸದ್ದು ಹೊರಗೆ ಬರಬಾರದು.ನಮ್ಮ ಹೊರಗಿನ ಕಿವಿಗೆ ಅದರ ಸದ್ದು ಹಿತವಾಗಿ ಕೇಳುವಂತಿರಲಿ,ಆದರೆ ಮನಸ್ಸಿನ ಒಳಗಿನ ನಮ್ಮ ಅಗೋಚರ ಕಿವಿಗೆ ಮಾತ್ರ ಅದರದ್ದೊಂದು ನವಿರಾದ ಶಬ್ದ ಹಾಗೇ ಸ್ಪಷ್ಟವಾಗಿಯೇ ಕೇಳಿ ಬರುತ್ತಿರಬೇಕು.ರುಚಿಯನ್ನು ನಾಲಗೆ ಅನುಭವಿಸುವಾಗ ಸ್ವಲ್ಪ ಸ್ವಾದವನ್ನು ಮನಸ್ಸಿಗೆ ಅನುಭವಿಸಲು ಕೂಡ ಜಾಗ ಮಾಡಿ ಕೊಡಿ..
ದೋಸೆಯನ್ನು ಬಾಯಿಯೇ ತಿನ್ನುವುದಾದರೂ ಮನಸ್ಸಿಗೂ ಹಾಗೂ ಇತರ ಇಂದ್ರೀಯಗಳಿಗೂ ಸ್ವಲ್ಪ ಸ್ವಲ್ಪ ಅನುಭವಿಸಲು ಅವಕಾಶ ಕೊಟ್ಟರೂ ಅದೇನೋ ಅತ್ಮಕ್ಕೂ ಒಂದು ರೀತಿಯಲ್ಲಿ ಸಂತೃಪ್ತಿಯಾಗುವುದು.
ಹೀಗೆ ಮಾಡಿ ತಿಂದರೆ ಕೇವಲ ಮಸಾಲೆ ದೋಸೆ ಒಂದೇ ಅಲ್ಲ ಯಾವುದೇ ತಿನಿಸನ್ನು ಪಂಚೇಂದ್ರಿಯಗಳಾದ ಕಣ್ಣು,ಮೂಗು, ಕಿವಿ,ಚರ್ಮ, ನಾಲಗೆ ಮಾತ್ರವಲ್ಲ ನಮ್ಮ ಮನಸ್ಸು ಕೂಡ ಅನುಭವಿಸುವವು. ಇದನ್ನೇ ಸುಂದರವಾಗಿ "ಸವಿಯುವುದು" ಎಂದು ಹೇಳಬಹುದು.. ಇಲ್ಲದಿದ್ದರೆ ಕೇವಲ ಹೊಟ್ಟೆ ತುಂಬಿಸಿಕೊಳ್ಳುವುದು ಎಂದೇ ಅರ್ಥ.
ಇನ್ನು ಮಸಾಲೆ ದೋಸೆಯನ್ನು ಯಾವ ಯಾವ ರೀತಿ ಎಲ್ಲಾ ತಿನ್ನಬಹುದು ಎಂದು ನೋಡೋಣ.
ನೋಡಿ ಮಸಾಲೆ ದೋಸೆಯನ್ನು ಹಾಗೇ ಒಂದೇ ಸೈಡಿನಿಂದ ತಿನ್ನುತ್ತಾ ಹೋಗುತ್ತಾ ಯಾವತ್ತಿಗೂ ಒಂದೇ ಏಟಿಗೆ ಹಾಗೆ ಮಂಗ ಮಾಯ ಮಾಡಬಾರದು.
ಯಾವತ್ತೂ ಮಸಾಲೆ ದೋಸೆಯನ್ನು ತಿನ್ನುವಾಗ ನಾವು ನರಸಿಂಹ ದೇವರ ಕಥೆಯನ್ನು ನೆನಪಿಸಿಕೊಂಡು,ಶ್ರೀ ದೇವರ ಪ್ರಾರ್ಥನೆ ಮಾಡಬೇಕು.
ನಂತರ ನರಸಿಂಹ ದೇವರು ಹಿರಣ್ಯ ಕಶಿಪುವಿನ ಎದೆಯನ್ನು ಬಗೆದಂತೆ ನಾವು ಮಸಾಲೆ ದೋಸೆಯ ನಡು ಭಾಗವನ್ನು ತೆಗೆಯಬೇಕು.
ಆದರೆ ನೆನಪಿರಲಿ, ನಮ್ಮ ಪ್ರೀತಿಯ ಮಸಾಲೆ ದೋಸೆ ಹಿರಣ್ಯ ಕಶಿಪುವಿನಂತಹ ದುಷ್ಟ ಅಲ್ಲ. ಆದ್ದರಿಂದ ಸಾಧ್ಯವಾದಷ್ಟು ಹಿತವಾಗಿ ಮೃದುವಾಗಿ ನಯವಾಗಿ ಅದರ ಮಧ್ಯ ಭಾಗವನ್ನು ಕೈ ಬೆರಳುಗಳಿಂದ ತುಂಡು ಮಾಡಿ ತೆಗೆಯಿರಿ. ಕಾರಣ ಇಷ್ಟೇ,ಬಟಾಟೆಯ ಬಾಜಿ ಎಂಬ ಮಸಾಲೆ ದೋಸೆಯೊಳಗೆ ಹುದುಗಿರುವ ಅದರ ಅನರ್ಘ್ಯ ರತ್ನವನ್ನು ಹುಡುಕಿ ತೆಗೆಯುವುದಕ್ಕಾಗಿಯೇ ಈ ಬಗೆದು ಅಗೆದು ತೆಗೆಯುವ ಸಾಹಸ.
ಈಗ ನಿಮಗೆ ಬಂಗಾರ ಬಣ್ಣದ ಬಟಾಟೆ ಬಾಜಿ, ಮಸಾಲೆ ದೋಸೆಯ ಹೊಟ್ಟೆಯ ಒಳಗಿನಿಂದ ದರ್ಶನ ನೀಡುತ್ತದೆ. ಮಸಾಲೆ ದೋಸೆಯ ಹೃದಯ ಇದ್ದಂತೆ ಅದು.
ಖಂಡಿತವಾಗಿಯೂ ಭಯ ಭಕ್ತಿಯಿಂದ ಅದಕ್ಕೆ ಕೈ ಮುಗಿಯ ಬೇಕಾಗಿಲ್ಲ. ಏಕೆಂದರೆ ಈ ಮೊದಲೇ ನಾವು ದೇವರನ್ನು ಸ್ತುತಿಸಿ ಆಗಿದೆ. ಆದರೆ ಬಾಜಿಯ ಕಡೆಗೂ ಒಂದು ಪ್ರೀತಿ ಇರಲಿ, ಮೃದುತ್ವವಿರಲಿ.
ಯಾವುದೇ ತಿಂಡಿ ಇರಲಿ.. ಅದನ್ನು ಎದುರಿಗೆ ತಂದು ಇಟ್ಟಾಗ ಅದನ್ನು ರಕ್ಕಸನ ಹಾಗೇ ತಿಂದು ಸಪಾಯಿ ಮಾಡಿ ಬಿಡಬಾರದು. ಅದರ ಪ್ರತೀಯೊಂದು ಕಣದ ರಸ ಸ್ವಾದವನ್ನು ಹಾಗೇ ನಯವಾಗಿ ಹಿತವಾಗಿ ಸವಿದು ಬಿಡಬೇಕು.
ನೋಡಿ ಈಗ ನಮಗೆ ಮಸಾಲೆ ದೋಸೆ ಸವಿಯಲು ಮೂರು ಆಯ್ಕೆ ಗಳಿವೆ. ಮಸಾಲೆ ದೋಸೆ ಅಂದರೆ ಹೆಚ್ಚಾಗಿ ಎಲ್ಲಾ ಕಡೆ ಈ ಮೂರು ಆಯ್ಕೆಗಳು ಇದ್ದೇ ಇರುತ್ತದೆ.
1. ಚಟ್ನಿ
2. ಸಾಂಬಾರು
3. ಬಾಜಿ.
ನಾನು ನಿಮಗೆ ಕೇವಲ ಮೂರು ಅಲ್ಲ, ಮೂರಕ್ಕಿಂತಲೂ ಹೆಚ್ಚಾಗಿ ಹೇಗೆ ಮಸಾಲೆ ದೋಸೆಯನ್ನು ಸವಿಯಬಹುದು ಎಂಬುದನ್ನು ಕೂಡ ಹೇಳಿಕೊಡುತ್ತೇನೆ. ಈಗ ಮೊದಲ ಮೂರು ಆಯ್ಕೆ ಗಳ ಬಗ್ಗೆ ತಿಳಿಯೋಣ.
1. ಮೊದಲು ಒಂದು ತುಂಡು ಮಸಾಲೆಯನ್ನು ಕಟ್ ಮಾಡಿ ಅದನ್ನು ತೆಂಗಿನಕಾಯಿ ಚಟ್ನಿಯಲ್ಲಿ ಅದ್ದಿ ಹಾಗೇ ಅದನ್ನು ಬಾಯಲ್ಲಿ ಇಟ್ಟು ಹಾಗೇ ಸ್ವಾಹ ಮಾಡಿ.
2. ಈಗ ಇನ್ನೊಂದು ತುಂಡು ಮಸಾಲೆಯನ್ನು ತೆಗೆದು ಕೊಂಡು ಅದನ್ನು ನಾವು ನದಿಯಲ್ಲಿ ಮೂರು ಬಾರಿ ಮುಳುಗಿ ಮೇಲೇಳುವಂತೆ ಸಾಂಬಾರ್ ನಲ್ಲಿ ಎರಡು ಮೂರು ಬಾರಿ ಮುಳುಗಿಸಿ ತೆಗೆದು ಹಾಗೇ ಬಾಯಲ್ಲಿ ಇಟ್ಟು ಸ್ವಾಹ ಮಾಡಿ.
3.ಈಗ ಮಸಾಲೆಯ ಇನ್ನೊಂದು ತುಂಡು ತೆಗೆದು ಅದರೊಳಗೆ ಮಸಾಲೆ ದೋಸೆಯ ಹೃದಯ ಭಾಗವಾದ ಬಾಜಿಯು ಈ ತುಂಡು ದೋಸೆಯೊಳಗೆ ಬರುವಂತೆ ಕೈಬೆರಳುಗಳಲ್ಲಿಯೇ ದೋಸೆಯನ್ನು ಬಾಜಿಯ ಸುತ್ತಾ ಶ್ರದ್ಧೆಯಿಂದ ಸುತ್ತಿ ನಂತರ ಅದನ್ನು ತೆಗೆದು ಬಾಯಿಯೊಳಗೆ ಇಟ್ಟು ಹಾಗೇ ಮಸಾಲೆ ದೋಸೆಯನ್ನು ಸ್ವಾಹ ಮಾಡಿ.
ಪ್ರತೀ ಬಾರಿಯೂ ಸ್ವಾಹ ಮಾಡುವ ವಿಧಾನ ನಾನು ಈ ಮೊದಲು ಮೇಲೆ ಕೊಟ್ಟ ಹಾಗೆಯೇ ಆಯ್ತಾ..ಅದೇ ನಮ್ಮ ಪಂಚೇಂದ್ರಿಯಗಳಿಗೂ ಆಹಾರ ಸವಿಯುವ ಭಾಗ್ಯವನ್ನು ನಾವು ಕಲ್ಪಿಸಿಕೊಡುವುದು.
ಈ ಮೂರು ಮೆತಡ್ ಗಳು ಟೆನ್ನಿಸ್ ನ ಡಬಲ್ಸ್ ಮ್ಯಾಚ್ ಇದ್ದ ಹಾಗೇ. ಆದರೆ ನಾನು ಈಗ ಚಿತ್ರ ವಿಚಿತ್ರ ಮಿಕ್ಸಡ್ ಡಬಲ್ಸ್ ಮ್ಯಾಚ್ ಗಳನ್ನು ಮಸಾಲೆ ದೋಸೆಯೊಂದಿಗೆ ಹೇಗೆ ಆಡಬಹುದು ಎಂದು ಹೇಳಿಕೊಡುತ್ತೇನೆ.
ಈಗ ಮೊದಲಿಗೆ ಚಟ್ನಿಯೊಂದಿಗೆ ಶುರು ಮಾಡುವ...
ದೋಸೆಯ ತುಂಡು ತೆಗೆಯಿರಿ... ಅದನ್ನು ಮೊದಲು ಸಾಂಬಾರು ನಲ್ಲಿ ಮುಳುಗಿಸಿ, ನಂತರ ಒಂದು ಬಾರಿ ಚಟ್ನಿಯಲ್ಲಿ ಅದ್ದಿ ತೆಗೆಯಿರಿ.. ಈಗ ಬಾಯಿಯೊಳಗಿಟ್ಟು ಸ್ವಾಹ ಮಾಡಿ.
ಈಗ ಮತ್ತೊಮ್ಮೆ ದೋಸೆಯ ತುಂಡು ತೆಗೆಯಿರಿ, ಅದರೊಳಗೆ ಬಾಜಿ ಬರುವಂತೆ ನೋಡಿಕೊಳ್ಳಿ, ಈಗ ಇದನ್ನು ಕೂಡ ಚಟ್ನಿಯಲ್ಲಿ ಅದ್ದಿ.. ನಂತರ ಬಾಯಿಯೊಳಗಿಟ್ಟು ಸ್ವಾಹ ಮಾಡಿ..
ನೋಡಿ ಈಗ ಚಟ್ನಿ - ಸಾಂಬಾರು, ಚಟ್ನಿ- ಬಾಜಿ ಕಾಂಬಿನೇಶನ್ ಆಯಿತು. ಅದೇ ರೀತಿ ಸಾಂಬಾರು- ಚಟ್ನಿ ಹಾಗೂ ಬಾಜಿ-ಚಟ್ನಿ ಕಾಂಬಿನೇಶನ್ ಕೂಡ ಮುಗಿದಂತೆಯೇ ಆಯಿತು. ಆದರೆ ಇಲ್ಲಿ ಇನ್ನೂ ಒಂದು ಕಾಂಬಿನೇಶನ್ ಬಾಕಿ ಉಳಿದಿದೆ ಅದೇ ಮಸಾಲೆ ದೋಸೆ ವಿತ್ ಬಾಜಿ & ಸಾಂಬಾರು.
ಬನ್ನಿ ಅದನ್ನು ಕೂಡ ಟ್ರೈ ಮಾಡುವ..
ಮೊದಲಿಗೆ ತುಂಡು ದೋಸೆಯೊಳಗೆ ಬಾಜಿ ಬರುವಂತೆ ಮಾಡಿಕೊಳ್ಳಿ ನಂತರ ಅದನ್ನು ಒಂದು ಬಾರಿ ಸಾಂಬಾರು ನಲ್ಲಿ ಮುಳುಗಿಸಿ ತೆಗೆದು.. ಆಮೇಲೆ ಅದನ್ನು ಬಾಯಿಯೊಳಗಿಟ್ಟು ಸ್ವಾಹ ಮಾಡಿ.
ಈಗ ಒಟ್ಟಿಗೆ ಆರು ಕಾಂಬಿನೇಶನ್ ನಲ್ಲಿ ನಾವು ಮಸಾಲೆ ದೋಸೆಯನ್ನು ಸವಿದಂತಾಯಿತು.
ಈಗ ಇನ್ನೊಂದು ವಿಚಿತ್ರ ಕಾಂಬಿನೇಶನ್ ಇದೆ. ಇದರಲ್ಲಿ ನಮ್ಮ ಚಟ್ನಿ, ಸಾಂಬಾರು, ಬಾಜಿ ಎಲ್ಲರೂ ಕೈ ಜೋಡಿಸುತ್ತಾರೆ. ಇದನ್ನು ಕೂಡ ಒಮ್ಮೆ ಟ್ರೈ ಮಾಡಿ. ಅಂದ ಹಾಗೆ ಇದು ಏಳನೇ ಮೆತಡ್.
ಮೊದಲು ಮಸಾಲೆಯ ತುಂಡಿನೊಳಗೆ ಬಾಜಿ ಬರುವಂತೆ ಮಾಡಿಕೊಳ್ಳಿ ನಂತರ ಒಮ್ಮೆ ಸಾಂಬಾರು ನಲ್ಲಿ ಮುಳುಗಿಸಿ, ನಂತರ ಚಟ್ನಿಯಲ್ಲಿ ಅದ್ದಿ ತೆಗೆಯಿರಿ.. ನಂತರ ಹಾಗೇ ಬಾಯಿಗಿಟ್ಟು ಮಸಾಲೆ ದೋಸೆಯನ್ನು ಸ್ವಾಹ ಮಾಡಿ. ಇಲ್ಲಿ ಬಾಜಿ ಇರುವ ಮಸಾಲೆಯ ತುಂಡನ್ನು ಮೊದಲು ಸಾಂಬಾರು ನಲ್ಲಿಯೇ ಮುಳುಗಿಸಿ ನಂತರ ಚಟ್ನಿಯಲ್ಲಿ ಅದ್ದಿ ತೆಗೆಯಿರಿ, ಏಕೆಂದರೆ ಮೊದಲು ಚಟ್ನಿಯಲ್ಲಿ ಅದ್ದಿ ನಂತರ ಸಾಂಬಾರು ನಲ್ಲಿ ಮುಳುಗಿಸಿದರೆ ... ಸಾಂಬಾರು ಯಾವತ್ತೂ ಚಟ್ನಿಗಿಂತ ನೀರಾಗಿರುವುದರಿಂದ ಮೊದಲು ಅದ್ದಿ ತೆಗೆದಂತಹ ಚಟ್ನಿ ಸಾಂಬಾರುನಲ್ಲಿ ಮುಳುಗಿಸುವಾಗ ದೋಸೆಯ ತುಂಡಿನಿಂದ ಜಾರಿ ಹೋಗುವ ಚ್ಯಾನ್ಸ್ ತುಂಬಾನೇ ನಿಚ್ಚಳವಾಗಿರುತ್ತದೆ.
ನೋಡಿ ಈ ರೀತಿಯಾಗಿ ಎಲ್ಲಾ ನಾವು ಮಸಾಲೆ ದೋಸೆ ಎಂಬ ದೋಸೆಗಳ ರಾಜನನ್ನು ಸವಿಯಬಹುದು. ನರಸಿಂಹ ದೇವರು ನೆನಪಾದರೆ ಇಲ್ಲಿ ಆಧ್ಯಾತ್ಮಿಕ ಭಾವವೂ ಇದೆ,ಪಂಚೇಂದ್ರಿಯ ಜ್ಞಾನೇಂದ್ರಿಯಗಳನ್ನು ತೃಪ್ತಿ ಪಡಿಸಿ ತಿಂದರೆ ಹೊಟ್ಟೆ ಮಾತ್ರವಲ್ಲ ಮನಸ್ಸನ್ನು ಕೂಡ ಸಂತೃಪ್ತಿಗೊಳಿಸುವ ಭಾವವೂ ಇದೆ.
ಹಾಗಾದರೆ ಮತ್ತೆ ಯಾಕೆ ತಡ... ಈಗಲೇ ಹೋಟೆಲ್ ಗೆ ಹೋಗಿ ಒಂದು ಮಸಾಲೆ ದೋಸೆಗೆ ಆರ್ಡರ್ ಕೊಡಿ ಅಲಾ.. 😋😋🏃♂️🏃♂️
.....................................................................................
Ab Pacchu
Moodubidire



Comments
Post a Comment