ಭಾಗ್ಯದ ಕಥೆ
ಹೆಚ್ಚಾಗಿ ಮೂವಿಗಳಲ್ಲಿ ಇಂತಹದ್ದೊಂದು ಸೀನ್ ಇದ್ದೇ ಇರುತ್ತದೆ.
ಮೂವಿಯಲ್ಲಿ Usually ಆಗಿ ಒಂದು ಚಿಕ್ಕ ಊರು ಇರುತ್ತೆ.
ಚಿಕ್ಕದೇ ಇರುತ್ತೆ.ದೊಡ್ಡ ಊರನ್ನು ಕಥೆಯಲ್ಲಿ ಸೇರಿಸಿದ್ರೆ ಮೂವಿ ಮಾಡಲು ಕಷ್ಟ ಆಗುತ್ತೆ ಅದಕ್ಕಾಗಿ.
ಒಂದಾನೊಂದು ಕಾಲದಲ್ಲಿ ಒಂದೂರಿನಲ್ಲಿ ಒಬ್ಬ ರಾಜ ಇದ್ದ,ಆ ರಾಜನಿಗೆ ಇಬ್ಬರು ರಾಣಿಯರು ಇದ್ದರು..ಇದೆಲ್ಲಾ ಅಜ್ಜಿಕಥೆಯಲ್ಲಿ ಬರೋ ಕಥೆಗಳು ಮತ್ತು ಪಾತ್ರಗಳು.
ಆದರೆ ಮೂವಿ ಕಥೆಯಲ್ಲಿ ರಾಜ ಇರ್ತಾನೋ,ಪೋಲಿಸ್ ಇರ್ತಾನೋ ಗೊತ್ತಿಲ್ಲ,ಆದರೆ ವಿಲನ್..ಅವಶ್ಯವಾಗಿಯೇ ಒಬ್ಬ ವಿಲನ್ ಇದ್ದೇ ಇರ್ತಾನೆ!!
ಮತ್ತು ಮೂವಿಯ ವಿಲನ್ ಯಾವತ್ತೂ ತುಂಬಾನೇ ಖಡಕ್ ಆಗಿ ಖತರ್ನಾಕ್ ಆಗಿಯೇ ಇರ್ತಾನೆ.
ಅವನು ಬರೀ Bad ಅಲ್ಲ...Very Bad ಆಗಿರ್ತಾನೆ.
ಅವನು ಎಷ್ಟೊಂದು ದುಷ್ಟ ಅಂದರೆ ಆ ಚಿಕ್ಕ ಊರಿನ ಎಲ್ಲರಿಗೂ ಕಷ್ಟದ ಮೇಲೆ ಕಷ್ಟ, ಕಿರುಕುಳ ದ ಮೇಲೆ ಕಿರುಕುಳ, ತೊಂದರೆಯ ಮೇಲೆ ತೊಂದರೆ..ಕೊಡ್ತಾನೇ ಇರ್ತಾನೆ.
ಹೆಚ್ಚಾಗಿ ಇಂತಹ ಚಿಕ್ಕ ಊರಿನ ದೊಡ್ಡ ವಿಲನ್ ನ ಉದ್ದೇಶ ಯಾವತ್ತೂ ಇಷ್ಟೇ ಆಗಿರುತ್ತದೆ,ಅಲ್ಲಿನ ಜನರನ್ನು ಹೇಗಾದರೂ ಮಾಡಿ ಓಡಿಸಿ ಅಲ್ಲೊಂದು ದೊಡ್ಡ ಫ್ಯಾಕ್ಟರಿ ಕಟ್ಬೇಕು ಇಲ್ಲ ಅಲ್ಲಿನ ಮಣ್ಣಿನ ಅಡಿಯಲ್ಲಿ ಯಾವುದಾದರೂ ಖನಿಜದ ಅದಿರುಗಳಿದ್ದರೆ ಅಲ್ಲೊಂದು ಮೈನಿಂಗ್ ಮಾಡ್ಬೇಕು ಅಂತ.
ಊರಿನವರು ಕೂಡ ಅವನಿಗೆ ಹೆದರಿ ಅವನನ್ನು ಸುಮ್ಮನೆ ಸಹಿಸಿಕೊಳ್ಳುತ್ತಾರೆಯೇ ಹೊರತು ಅವನ ವಿರುದ್ಧ ತಿರುಗಿ ಬೀಳಲು ಹೋಗಲ್ಲ,ನಮಗೆ ಯಾಕೆ ಬೇಕು ಇಲ್ಲ ಸಲ್ಲದ ಉಸಾಬರಿ ಎಂದು.
ಮೂವಿಯ ಕ್ಲೈಮ್ಯಾಕ್ಸ್ ನಲ್ಲಿ ವಿಲನ್ ನ ಉಪಟಳ ವಿಪರೀತವಾಗುತ್ತದೆ.
ಊರಿನ ಜನರನ್ನು ಓಡಿಸಬೇಕೆಂದು ವಿಲನ್ ತನ್ನ ಹತ್ತು ಪುಡಿ ರೌಡಿಗಳನ್ನು ಕಳುಹಿಸಿ JCB, ಬುಲ್ಡೋಜರ್ಸ್ ನಿಂದ ಜನರ ಮನೆ,ಅಂಗಡಿ ಎಲ್ಲಾ ನೆಲಸಮ ಮಾಡ್ಲಿಕ್ಕೆ ಶುರು ಮಾಡ್ತಾನೆ.
ಆ ಊರಿನಲ್ಲಿ ಹೆಚ್ಚು ಕಡಿಮೆ ಇನ್ನೂರರಿಂದ ಮುನ್ನೂರು ಜನರು ಇರಬಹುದು.ಎಲ್ಲರೂ ಸೇರಿ ಮನಸ್ಸು ಮಾಡಿದರೆ,ಆ ಹತ್ತು ಜನ ಪುಡಿ ರೌಡಿಗಳನ್ನು ಚಚ್ಚಿ ಬಿಸಾಕುವುದು ಅಷ್ಟು ಕಷ್ಟದ ಹಾಗೂ ಅಷ್ಟು ದೊಡ್ಡ ವಿಷಯವೇನಲ್ಲ.
ಆದರೆ ಅವರೆಲ್ಲ ಹಾಗೇ ಮಾಡೋದೇ ಇಲ್ಲ.ಅವರಿಗೆಲ್ಲಾ ಗೊತ್ತು ಮೂವಿಯಲ್ಲಿ ಹೀರೋ ಅನ್ನುವವನು ಒಬ್ಬ ಇರ್ತಾನೆ ಅವನು ಬಂದು ಏನಾದರೊಂದು ಮಾಡಿಯೇ ಮಾಡುತ್ತಾನೆ ಎಂದು.
ಹಾಗಾಗಿ ಅಲ್ಲಿ ಸೇರಿದ್ದ ಜನರೆಲ್ಲಾ ಪುಡಿ ರೌಡಿಗಳ ವಿರುದ್ಧ ತಿರುಗಿ ಬೀಳದೆ ದೇವರ ಮೊರೆ ಹೋಗ್ತಾರೆ.
ಮೇಲಿನ ಆಕಾಶ ನೋಡಿ,ಕಣ್ಣಲ್ಲಿ ನೀರು ತುಂಬಿಕೊಂಡು ಡೈಲಾಗ್ ಹೇಳ್ತಾರೆ.
Usually ಎಲ್ಲಾ ಮೂವಿಯಲ್ಲಿ ಈ ವಿಲನ್ ಗಳ ಕಾಟ ವಿಪರೀತ ಆದಾಗ,ಊರಿನ ಜನ ಹೆಚ್ಚಾಗಿ ಇಂತಹದ್ದೇ ಡೈಲಾಗ್ ಹೇಳೋದು...
ಆ ಡೈಲಾಗ್ ಏನೆಂದರೆ..
" ಅಯ್ಯೋ ದೇವರೇ..ನಮ್ಮನ್ನು ಈ ಕಷ್ಟದಿಂದ ಪಾರು ಮಾಡುವವರು ಈ ಜಗತ್ತಿನಲ್ಲಿ ಯಾರೂ ಇಲ್ವೇ..ಅಯ್ಯಯ್ಯೋ"
ಇಷ್ಟೇ..ನಂತರ ನಮ್ಮ ಸಿನಿಮಾದ ಹೀರೋ.. ದುರ್ಬಲರ, ಅಶಕ್ತರ,ಅಸಾಹಯಕರ,ಅಬಲೆಯರ ಆರ್ತನಾದ ಹಾಗೂ ಮುಗಿಲು ಮುಟ್ಟಿದ ಆಕ್ರಂದನ ಕೇಳಿಸಿಕೊಂಡು ಎಲ್ಲೆಲ್ಲಿಂದನೋ ಹಾರ್ಕೊಂಡು ಆ ಜಾಗಕ್ಕೆ ಬರ್ತಾನೆ.
ಕೆಲವೊಮ್ಮೆ ಬೈಕ್ ಅಲ್ಲಿ ಗಾಳಿಯಲ್ಲಿ ಹಾರ್ಕೊಂಡು ಬರ್ತಾನೆ, ಇನ್ನು ಕೆಲವೊಮ್ಮೆ ರೋಡ್ ರೋಲರ್ ಅಲ್ಲಿ..ಇನ್ನು ಕೆಲವೊಮ್ಮೆ ಬೋರಿ ಗಾಡಿ(ಎತ್ತಿನಗಾಡಿ) ಯಲ್ಲಿ ಸ ಬಂದು,ಗೋಡೆ ಇದ್ದರೆ ಗೋಡೆಯನ್ನು ಒಡೆದು..ಬೆಂಕಿ ಇದ್ದರೆ ಬೆಂಕಿಯ ಮಧ್ಯೆ ಹಾರಿ.. ನೀರಿದ್ದರೆ ನೀರಿನೊಳಗೆ ಧುಮುಕಿ ವಿಲನ್ ಗೆ ಹಾಗೂ ಅವನ ಕೇಡಿಗಳಿಗೆ ಸಕ್ಕತ್ ಆಗಿ ಹೊಡೆದು ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ಬಿಡ್ತಾನೆ.ಹೀಗೆ ಕೊನೆಗೂ ಎಲ್ಲರನ್ನೂ ನಮ್ಮ ಸಿನಿಮಾದ ಹೀರೋ ಕಾಪಾಡ್ತಾನೆ.
ನಂತರ ಎಲ್ಲರೂ ನಮ್ಮ ಆಪತ್ಭಾಂಧವ ಹೀರೋನನ್ನು ಇಂದ್ರ ಚಂದ್ರ ದೇವೇಂದ್ರ ಅಂತ ಹೋಗಳಿ ಅಟ್ಟಕ್ಕೆ ಏರಿಸ್ತಾರೆ.
ಇದಿಷ್ಟನ್ನು ನಾನು ಹೇಳಿದ ಮೇಲೆ ನೀವು ಏನು ತಿಳ್ಕೋತಿರಾ ಅಂದ್ರೆ.. ನಾನು ಈಗ ಹೇಳಕ್ಕೆ ಹೊರಟಿರೋ ನನ್ನ ಕಥೆಯ ನಾಯಕ ಕೂಡ ಇದೇ ರೀತಿ ಜನರನ್ನು ರಕ್ಷಿಸೋ ಮಾಸ್ ಹೀರೋನೇ ಆಗಿರ್ತಾನೆ ಎಂದು ಅಲಾ..
No way...you are wrong..ಖಂಡಿತಾ ಅಲ್ಲ.ಅಂತಹ ಚಾನ್ಸೇ ಇಲ್ಲ!
ಹಾಗಾದರೆ ಆ ಖತರ್ನಾಕ್ ರೌಡಿ ತರಹನಾ?
ಅಲ್ಲ.. ಅವನ ತರಹನೂ ಅಲ್ಲ!
ಮತ್ತೆ ಯಾವ ತರಹ?
ನನ್ನ ಕಥೆಯ ನಾಯಕನ ಹೆಸರು ಏನೋ ರಾಜನೇ.
ಆದರೆ ಈ ಸಿನಿಮಾ ಹೀರೋಗಳ ತರಹ,ವಿಲನ್ ಗಳ ತರಹ ಅವನಲ್ಲ.
ಮತ್ತೆ ಹೇಗೆ ಈ ರಾಜ?
ಮೇಲೆ ಹೇಳಿದ ಮೂವಿ ಕಥೆಯಲ್ಲಿ ಹೀರೋ ಮತ್ತು ವಿಲನ್ ನನ್ನು ಬಿಟ್ಟು ಇನ್ನೂ ಒಂದು ಕೆಟಗರಿ ಇತ್ತು..
ಗೊತ್ತಾಗ್ಲಿಲ್ಲವಾ?
ಈಗ ಮೂವಿ ಸ್ಟೋರಿಯನ್ನು ಸ್ವಲ್ಪ rewind ಮಾಡಿ,ಮೇಲೆ ಹೇಳಿದ ಡೈಲಾಗ್ ಅನ್ನು ಒಮ್ಮೆ ನೆನಪು ಮಾಡಿಕೊಳ್ಳಿ..
" ಅಯ್ಯೋ ದೇವರೇ..ನಮ್ಮನ್ನು ಈ ಕಷ್ಟದಿಂದ ಪಾರು ಮಾಡುವವರು ಈ ಜಗತ್ತಿನಲ್ಲಿ ಯಾರೂ ಇಲ್ವೇ..ಅಯ್ಯಯ್ಯೋ " ..ಅಂತ ಯಾರಾದರೂ ಬಂದು ನಮ್ಮನ್ನು ಕಾಪಾಡಲಿ..ಎಂದು ಬೊಬ್ಬೆ ಹಾಕೋ ಜನರು ಇರ್ತಾರೆ ಅಲ್ಲಾ..Yess,exactly.. ಈ ರಾಜ ಕೂಡ ಆ ಗುಂಪಿಗೆ ಸೇರಿದ ಜಾತಿಯೇ!
Yess..ಸಿಂಪಲ್ ಆಗಿ ಹೇಳ್ಬೇಕಂದ್ರೆ ಹೆದರುಪುಕ್ಕಲ,ಧೈರ್ಯ ಇಲ್ಲದವನು,ಪ್ರತಿಯೊಂದಕ್ಕೂ ಇತರರ ಸಹಾಯ ಬಯಸೋನು,ಅಥವಾ ಯಾರಾದರೂ ಬಂದು ಸಹಾಯ ಮಾಡಿಯೇ ಮಾಡ್ತಾರೆ ಅನ್ನೋ ಮನಸ್ಥಿತಿ ಹೊಂದಿರೋನು.
ಒಂದು ಅರ್ಥದಲ್ಲಿ ನೋಡಿದರೆ ಮೇಲೆ ಹೇಳಿದ ಆ ಮೂವಿಯ ಊರಿನವರಂತೆ ಇವನು ಕೂಡ ಅಸಹಾಯಕನೇ.
ಆದರೆ ಇವನದ್ದು ಬೇರೆ ರೀತಿಯ ಅಸಹಾಯಕತೆ!
ಇವನ ಕಥೆ ಅವರೆಲ್ಲರ ಕಥೆ ತರಹ ಅಲ್ಲವೇ ಅಲ್ಲ!!
ಕೇವಲ ಮನಸ್ಥಿತಿ ಮಾತ್ರ ಆ ಮೇಲಿನವರ ತರಹ ಅಷ್ಟೇ.
ಇವನ ಹೆಸರು ಬರೀ ರಾಜ ಅಲ್ಲ..ಇವನು ಜಯರಾಜ.
ಆದರೆ ಜಯ..ಯಾವುದರಲ್ಲಿಯೂ ಇಲ್ಲ.
ಏನಾದರೂ ಮಾಡಿದರೆ ಅಲ್ಲವೇ ಜಯ ಸಿಗೋದು.
ಇನ್ನು ಹೆಸರಿನಲ್ಲಿ ರಾಜ ಇದ್ದರೂ,ಅವನ ಅಪ್ಪನಿಗಂತು ಇವನು ರಾಜ ಅಲ್ಲ.
ಅಣ್ಣಂದಿರ ಹೆಸರು ಪುಷ್ಪರಾಜ,ಹೇಮರಾಜ ಎಂದು ಇತ್ತು. ಹಾಗಾಗಿ ಕೊನೆಯಲ್ಲಿ ಇವನಿಗೂ ಒಂದು ರಾಜ ಇರ್ಲಿ ಎಂದು ಜಯರಾಜ ಎಂದು ಇಟ್ಟರು.
ಆದರೆ ಈ ಜಯರಾಜ ಒಬ್ಬ ಅಂಗವಿಕಲ!!
ಅದಕ್ಕಾಗಿಯೇ ಹೇಳಿದ್ದು ಇವನ ಮನಸ್ಥಿತಿ ಮಾತ್ರ ಆ ಮೂವಿ ಜನರ ತರಹ,ಆದರೆ ಇವನ ಕಥೆ ಮಾತ್ರ ಅವರ ಕಥೆಗಿಂತ ಸ್ವಲ್ಪ ವಿಭಿನ್ನವಾದದ್ದು ಎಂದು.
ಹೌದು ಜಯರಾಜನಿಗೆ ಅಂಗವೈಕಲ್ಯತೆ ಇತ್ತು.
ಆದರೆ ಅದು ಅವನ ತಪ್ಪಲ್ಲ.ಅವನು ಹುಟ್ಟು ಅಂಗವಿಕಲ. ಆಧಾರವಿಲ್ಲದೇ ತನ್ನ ಕಾಲಿನಲ್ಲಿ ನಡೆಯುವುದಕ್ಕೆ ಅವನಿಗೆ ಸಾಧ್ಯವಿಲ್ಲ.
ಅವನ ಕಾಲುಗಳೆರಡರಲ್ಲೂ ಬಲವಿರಲಿಲ್ಲ!
ಆದರೆ ಅವನ ಅಪ್ಪ ಶ್ಯಾಮರಾಯರು ಯಾವತ್ತೂ ಹೇಳೋರು.ನಿನ್ನ ಭಾಗ್ಯನೇ ಇಷ್ಟು ಜಯರಾಜ..ನಿನ್ನ ಹಣೆಬರಹನೇ ಇಷ್ಟು..ನಿನ್ನದು ಮಾತ್ರವಲ್ಲ,ಇದು ನಮ್ಮದೂ ಕೂಡ ಧೌರ್ಭಾಗ್ಯ ಎಂದು ಹೇಳುತ್ತಿದ್ದರು!!
ಜಯರಾಜನಿಂದಾಗಿ ಶ್ಯಾಮರಾಯರಿಗೂ ನೆಮ್ಮದಿ ಇಲ್ಲ.
ಸ್ಕೂಲ್ ಗೆ ಹೋದರೆ,ಸರಿಯಾಗಿ ಓದುವುದಿಲ್ಲ ಅನ್ನುವುದು ಒಂದು ವಿಷಯವಾದರೆ ಇತರ ಹುಡುಗರೊಂದಿಗೆ ಮಾಡಿಕೊಳ್ಳುವ ಅವಾಂತರದಿಂದಾಗಿ ದಿನ ನಿತ್ಯವೂ ಶಾಲೆಯಿಂದ ಶ್ಯಾಮರಾಯರಿಗೆ ಕಂಪ್ಲೈಂಟ್ ಬರುವುದು ತಪ್ಪುತ್ತಿರಲಿಲ್ಲ.
ಜಯರಾಜನಿಗೂ ಓದು ಹತ್ತಲಿಲ್ಲ,ಚಿಕ್ಕಂದಿನಲ್ಲಿಯೇ ಸ್ಕೂಲ್ ಬಿಟ್ಟ.
ಶ್ಯಾಮರಾಯರು ಹೇಳಿದರು ನಿನ್ನ ಭಾಗ್ಯದಲ್ಲಿ ಓದು ಅನ್ನುವುದು ಕೂಡ ಇಲ್ಲ,ವಾಸ್ತವವಾಗಿ ನೀನು ನಮ್ಮ ಮಗನಾಗಿ ಹುಟ್ಟಿದ್ದು ನಿನ್ನ ತಪ್ಪೋ,ಅಥವಾ ನಾವು ನಿನಗೆ ತಂದೆ ತಾಯಿ ಆಗಿದ್ದು ನಮ್ಮ ತಪ್ಪೋ ಎಂದು ನನಗೇ ಗೊತ್ತಾಗುತ್ತಿಲ್ಲ ಎಂದು ಹೇಳಿ ಬಿಟ್ಟಿದ್ದರು ಶ್ಯಾಮರಾಯರು!!
ಶ್ಯಾಮರಾಯ ಸುನಂದ ದಂಪತಿಗಳಿಗೆ ನಾಲ್ಕು ಜನ ಮಕ್ಕಳು.
ಪುಷ್ಪರಾಜ,ಹೇಮರಾಜ,ಜಯರಾಜ ಮೂರು ಜನ ಗಂಡು ಮಕ್ಕಳಾದರೆ ಅವರ ಒಬ್ಬಳೇ ಮಗಳು ಸುಕನ್ಯಾ.
ಇದರಲ್ಲಿ ಪುಷ್ಪರಾಜ,ಹೇಮರಾಜ ದೊಡ್ಡವರಾದರೆ ನಂತರ ಹುಟ್ಟಿದ್ದು ಸುಕನ್ಯಾ.ಕೊನೆಯವನೇ ಜಯರಾಜ.
ವಾಸ್ತವದಲ್ಲಿ ಶ್ಯಾಮರಾಯರಿಗೆ ತಮ್ಮ ಕಿರಿಯ ಮಗ ಜಯರಾಜನ ಅಂಗವೈಕಲ್ಯಕ್ಕಿಂತಲೂ ಅವನ ಮೇಲೆ ಅತಿಯಾದ ತಾತ್ಸಾರ ಬರಲು ಕಾರಣ ಆಗಿದ್ದು ಅವರ ಉಳಿದ ಮಕ್ಕಳು.
ಅವರ ಉಳಿದ ಮೂರು ಮಕ್ಕಳು ಕಲಿಯುವುದರಿಂದ ಹಿಡಿದು ಎಲ್ಲದರಲ್ಲೂ ಮುಂದಿದ್ದರು.
ಶಾಲೆ ಕಾಲೇಜ್ ಗಳಲ್ಲಿ ಎಲ್ಲದರಲ್ಲೂ ಈ ಶ್ಯಾಮರಾಯರ ಮೂವರು ಮಕ್ಕಳೇ ಪ್ರಥಮ.ಈ ಮೂರು ಜನ ಮನೆಗೆ ಗೆದ್ದು ತಂದ ತಟ್ಟೆ, ಲೋಟ, ಪ್ರಶಸ್ತಿ,ಪ್ರಶಸ್ತಿ ಪತ್ರಗಳಿಗೆ ಲೆಕ್ಕವೇ ಇಲ್ಲ.
ಶಾಲಾ ಕಾಲೇಜಿನಲ್ಲಿ,ಊರಿನಲ್ಲಿ ಶ್ಯಾಮರಾಯರ ಮೂವರು ಮಕ್ಕಳಿಗೆ ಪ್ರತಿಭಾನ್ವಿತರು ಎಂದು ಆವಾಗವಾಗ ಸನ್ಮಾನ ಬೇರೆ ಆಗುತ್ತಲೇ ಇತ್ತು.ಒಟ್ಟಿನಲ್ಲಿ ಶ್ಯಾಮರಾಯರ ಕೀರ್ತಿ ಪಾತಕೆಯನ್ನು ಊರು ತುಂಬಾ ಪುಷ್ಪರಾಜ,ಹೇಮರಾಜ ಮತ್ತು ಸುಕನ್ಯಾ ಹಾರಿಸಿದ್ದರು.
ಆದರೆ ಜಯರಾಜನ ವಿಷಯಕ್ಕೆ ಬಂದಾಗಲೆಲ್ಲ ಊರಿನ ಜನರೆಲ್ಲಾ ಶ್ಯಾಮರಾಯರ ಬಳಿ ಹೀಗೆ ಹೇಳುತ್ತಿದ್ದರು,ನಿಮ್ಮ ಮೂವರು ಮಕ್ಕಳು ಆದರೂ ಪರವಾಗಿಲ್ಲ,ಆದರೆ ನಿಮ್ಮ ಕೊನೆಯ ಮಗನಿಗೆ ಮಾತ್ರ ಹೀಗೆ ಆಗಬಾರದಿತ್ತು ಅಲ್ವಾ ರಾಯರೇ..ಎಂದು.
ಇಂತಹ ಮಾತುಗಳೇ ಅವರಿಗೆ ವಿಪರೀತ ಕಿರಿಕಿರಿ ಕೊಡುತ್ತಿತ್ತು.ಹಾಗಾಗಿ ಅವರಿಗೆ ಜಯರಾಜ ಅಂದರೆ ಏನೋ ಒಂದು ತಾತ್ಸಾರ.
ಶ್ಯಾಮರಾಯರೇನು ಅಗರ್ಭ ಶ್ರೀಮಂತರಲ್ಲ.ಅವರು ಕೂಡ ಮಧ್ಯಮ ವರ್ಗದ ಕುಟುಂಬವೇ.
ಆದರೂ ತನ್ನ ಮೂವರು ಪ್ರತಿಭಾನ್ವಿತ ಮಕ್ಕಳನ್ನು ಓದಿಸುವುದು ಅವರಿಗೇನು ಕಷ್ಟ ಆಗಲಿಲ್ಲ.ಬೇಕಾದಷ್ಟು ವಿದ್ಯಾರ್ಥಿ ವೇತನ ಎಲ್ಲಾ ಕಡೆಯಿಂದ ಮಕ್ಕಳಿಗೆ ಹರಿದು ಬಂದಿತ್ತು. ಹಾಗಾಗಿ ಪುಷ್ಪರಾಜ, ಹೇಮರಾಜ ಇಂಜಿನಿಯರಿಂಗ್ ಮಾಡಲು ಮುಂದಾದರೆ ಸುಕನ್ಯಾ ಬಿ.ಕಾಂ ಓದಲು ಕಾಲೇಜಿಗೆ ಸೇರಿದಳು.
ಆದರೆ ಜಯರಾಜ..?
ಅಪ್ಪ ಅಮ್ಮನೇ ನನ್ನನ್ನು ಇದೇ ತರಹ ಕೊನೆಯವರೆಗೂ ಸಾಕುತ್ತಾರೆ ಎಂದು ತಿಳಿದುಕೊಂಡು ಬಿಟ್ಟಿದ್ದ ಅವ!
ಇಲ್ಲವೇ,ಹುಟ್ಟಿಸಿದ ದೇವರು ಹುಲ್ಲು ಮೇಯಿಸಲ್ಲ ಹಾಗಾಗಿ ಅವನೇ ಏನಾದರೊಂದು ಮಾಡಿಯೇ ಮಾಡುತ್ತಾನೆ ಅಥವಾ ಸಿನಿಮಾದಲ್ಲಿ ಕಷ್ಟದಲ್ಲಿ ಇರುವವರಿಗೆ ಹೇಗೆ ಎಲ್ಲಿಂದಲೋ ಒಬ್ಬ ಹೀರೋ ಹಾರಿಕೊಂಡು ಬಂದು ಹೆಲ್ಪ್ ಮಾಡ್ತಾನೋ ಆ ತರಹದ ಯಾವನೋ ಒಬ್ಬ ಪುಣ್ಯಾತ್ಮ ನನ್ನ ಲೈಫ್ ನಲ್ಲೂ ಬಂದು ನನಗೆ ಅವಶ್ಯವಾಗಿ ಸಹಾಯ ಮಾಡುತ್ತಾನೆ ಎಂದೇ ತಿಳಿದುಕೊಂಡಿದ್ದ.
ವಾಸ್ತವವಾಗಿ ಅವನ ಈ ರೀತಿಯ ಯೋಚನೆಗಳೇ ಅವನನ್ನು ಈ ರೀತಿಯ ಸೋಮಾರಿಯನ್ನಾಗಿಸಿದ್ದು.
ಅಪ್ಪ ಅಂತ ಅನ್ನಿಸಿಕೊಂಡಿದ್ದ ಶ್ಯಾಮರಾಯರು ಪ್ರತೀ ಸಲ ಬಂದು,ದೇವರೇ ಮನಸ್ಸು ಮಾಡಿದರೂ ನಿನ್ನ ಭಾಗ್ಯದಲ್ಲಿ ಏನೂ ಬದಲಾವಣೆ ಆಗದು..ಎಂದು ಹೇಳಿದಾಗಲೆಲ್ಲ,ಅವನಿಗೆ ಅತೀವ ನೋವಾಗುತ್ತಿತ್ತು.
ಆವಾಗಲೆಲ್ಲ ಅವನಿಗೆ ಮಹಾಭಾರತದ ಕರ್ಣ ನೆನಪಾಗುತ್ತಿದ್ದ.ಕರ್ಣನಿಗೂ ಹೀಗೆ ಎಲ್ಲರೂ ಅವಮಾನ, ಅಪಮಾನ ಮಾಡುತ್ತಿದ್ದರು.ಆದರೆ ಕರ್ಣನಿಗೆ ಬೇರೆಯವರೆಲ್ಲಾ ಅಪಮಾನ ಮಾಡಿದರೆ ನನಗಿಲ್ಲಿ ನನ್ನ ಸ್ವಂತ ತಂದೆಯೇ ಮೋದಲಿಸುತ್ತಿದ್ದಾರೆ ಎಂದು ತೀವ್ರವಾಗಿ ಬೇಜಾರು ಪಟ್ಟುಕೊಳ್ಳುತ್ತಿದ್ದ ಜಯರಾಜ.
ಆದರೆ ತಾಯಿ ಸುನಂದಮ್ಮನಿಗೆ ಎಷ್ಟಾದರೂ ಅವರು ಹೆತ್ತ ಮಗನಲ್ಲವೇ.ಹೆತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ ಅವರು ಜಯರಾಜನನ್ನು ತಮ್ಮ ಪ್ರಿತಿಯಿಂದ ವಂಚಿಸಲಿಲ್ಲ.ಅಂಗವೈಕಲ್ಯದ ಮಗು ಎಂದು ಎಲ್ಲರಿಗಿಂತಲೂ ಹೆಚ್ಚಿನ ಅಕ್ಕರೆ,ಪ್ರೀತಿ ಎರಡನ್ನೂ ಅವರು ಜಯರಾಜನ ಮೇಲೆಯೇ ತೋರಿಸಿದ್ದರು.
ಎಷ್ಟೋ ಸಲ ಸುನಂದಮ್ಮ ಶ್ಯಾಮರಾಯರಿಗೆ ಹೇಳುತ್ತಿದ್ದರು ಎಲ್ಲರ ಎದುರು ಜಯರಾಜನಿಗೆ ಹಾಗೆಲ್ಲ ಹೇಳಬೇಡಿ.ಪಾಪ ಅವನಿಗೂ ಬೇಜಾರು ಆಗುವುದಿಲ್ಲವೇ ಎಂದು.
ಆದರೆ ಶ್ಯಾಮರಾಯರಿಗೆ ಇದೆಲ್ಲಾ ಅರ್ಥವಾಗುವುದಿಲ್ಲ.
ಸುನಂದಮ್ಮ ಜಯರಾಜನಿಗೂ ಆಗಾಗ ಹೇಳುತ್ತಲೇ ಇದ್ದರು ನೀನು ಕೂಡ ಜೀವನದಲ್ಲಿ ಏನಾದರೊಂದು ಮಾಡಬೇಕು ಜಯರಾಜ ಎಂದು.
ದಿನಪೂರ್ತಿ ಮನೆಯಲ್ಲಿಯೇ ಇರುತ್ತಿದ್ದ ಜಯರಾಜ ತುಂಬಾ ಬೋರ್ ಆದಾಗ ಅಮ್ಮನಿಗೆ ಅಡುಗೆ ಮನೆಯಲ್ಲಿ ಸಹಾಯ ಮಾಡುತ್ತಿದ್ದ.ತರಕಾರಿ ಹಚ್ಚಿ ಕೊಡುವುದು,ಅಮ್ಮನೊಂದಿಗೆ ಸೇರಿ ಹೋಳಿಗೆ ಮಾಡುವುದು,ಹಪ್ಪಳ ಒತ್ತುವುದು,ಸಂಡಿಗೆ ಮಾಡುವುದು ಇತ್ಯಾದಿ ಇತ್ಯಾದಿ ಎಲ್ಲಾ ಮಾಡುತ್ತಿದ್ದ.
ಜಯರಾಜ ಹೊರಗೂ ಹೆಚ್ಚಾಗಿ ಹೋಗುತ್ತಿರಲಿಲ್ಲ.ಅವನ ಊರುಗೋಲಿನಂತಹ ಸಾಧನವನ್ನು ಊರಿಕೊಂಡು ಒಮ್ಮೊಮ್ಮೆ ಊರಿನ ಗಣಪತಿ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ಗಣಪನಿಗೆ ಕೈ ಮುಗಿದು ಬರುತ್ತಿದ್ದ.
ಯಾವುದೇ ಸಭೆ ಸಮಾರಂಭಗಳಿಗೆ ಕೂಡ ಹೋಗುತ್ತಿರಲಿಲ್ಲ ಅವನು.ತಂದೆ ಶ್ಯಾಮರಾಯರು ಅಂತು ಅವನು ಎಲ್ಲಿಗೂ ಬರುವುದೇ ಬೇಡ ಎಂದು ಹೇಳುತ್ತಿದ್ದರು.
ಅಮ್ಮ ಯಾವುದಾದರೂ ಫಂಕ್ಷನ್ ಗೆ ಹೋದರೆ ಜಯರಾಜ ಮನೆಯಲ್ಲಿ ಒಬ್ಬಂಟಿಯಾಗಿ ಇರುತ್ತಿದ್ದ.ಆಗ ಅವನ ಪಾಲಿಗೆ ಆ ಮನೆಯೇ ನರಕ.
ಅಮ್ಮ ಪಕ್ಕದಲ್ಲಿ ಇದ್ದರೆ ಅವನಿಗದು ಸ್ವರ್ಗ.
ಅಮ್ಮ ಬಿಟ್ಟರೆ ಅವನಿಗೆ ಬೇರೆ ಯಾರೂ ಪ್ರೀತಿ ತೋರಿಸಿಯೇ ಇರಲಿಲ್ಲ.ಅಪ್ಪ ಅಂತು ಹುಟ್ಟಿನಿಂದಲೇ ಅವನನ್ನು ಪ್ರತಿಯೊಂದಕ್ಕೂ ಹೀಯಾಳಿಸುತ್ತಿದ್ದರು.ಇಬ್ಬರು ಅಣ್ಣಂದಿರು ಹಾಗೂ ಅಕ್ಕ ಕೂಡ ಅವನೊಂದಿಗೆ ಎಷ್ಟು ಬೇಕೋ ಅಷ್ಟೇ ಇದ್ದರು.
ಅವನಿಗೂ ಅವನ ದೇವರು,ದೇವತೆ ಎಲ್ಲಾ ಅಮ್ಮನೇ ಆಗಿದ್ದರು.
ಆದರೆ ಒಂದು ದಿನ ಜಯರಾಜ ಯೋಚಿಸಿದ.ಅಮ್ಮ ಕೂಡ ನನಗೆ ಎಷ್ಟು ದಿನ ಸಹಾಯ ಮಾಡಬಹುದು,ಎಷ್ಟು ದಿನ ಅವಳು ನನ್ನೊಂದಿಗೆ ಇರಬಲ್ಲಳು..?!
ಈ ಯೋಚನೆ ಅವನ ಮನಸ್ಸಿಗೆ ಬಂದ ದಿನ ಜಯರಾಜ ಬಹಳನೇ ವಿಚಲಿತನಾಗಿ ಹೋದ.
ಅವನಿಗೆ ಕರ್ಣ ಇಷ್ಟ ಎಂದು ಮನೆಯಲ್ಲಿ ಎಲ್ಲರೂ ಮಹಾಭಾರತ ಧಾರವಾಹಿಯನ್ನು ನೋಡುವಾಗ ಅವನು ಕೂಡ ಇಷ್ಟ ಪಟ್ಟೇ ಮಹಾಭಾರತ ನೋಡುತ್ತಿದ್ದ.ಅವನಿಗೆ ಪದೇ ಪದೇ ಅಪಮಾನಗೊಳ್ಳುತ್ತಿದ್ದ ಕರ್ಣನನ್ನು ನೋಡುವಾಗ ಆ ಟಿವಿಯಲ್ಲಿ ಇರುವುದು ಮಹಾಭಾರತದ ಕರ್ಣ ನಲ್ಲ ಅದು ನಾನೇ ಎಂದು ಅನ್ನಿಸುತ್ತಿತ್ತು!
ಅದೊಂದು ದಿನ ಮನೆಯಲ್ಲಿ ಎಲ್ಲರೂ ಕುಳಿತುಕೊಂಡು ಮಹಾಭಾರತ ಧಾರವಾಹಿ ನೋಡುತ್ತಿದ್ದರು.
ಜಯರಾಜ ಕೂಡ ತನ್ನ ಅಮ್ಮನ ಬಳಿಯೇ ಕುಳಿತುಕೊಂಡು ಮಹಾಭಾರತ ನೋಡುತ್ತಿದ್ದ.
ಆ ದಿನದ ಧಾರವಾಹಿಯಲ್ಲಿ ಕರ್ಣ ಮತ್ತು ಕೃಷ್ಣನ ನಡುವೆ ಒಂದು ಸುಂದರವಾದ ಸಂಭಾಷಣೆ ಇತ್ತು.
ವಾಸುದೇವ ಕೃಷ್ಣ,ಕರ್ಣನಿಗೆ ಈ ರೀತಿಯಾಗಿ ಹೇಳುತ್ತಾನೆ..
" ಕರ್ಣ.. ಭಾಗ್ಯ ಎನ್ನುವುದು ನಮ್ಮ ಯೋಚನೆಗಳ ಫಲವೇ ಆಗಿರುತ್ತದೆ.ಎಲ್ಲಿಯವರೆಗೆ ನಾವು ನಮ್ಮ ಯೋಚನೆಯನ್ನು ಬದಲಾಯಿಸುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಭಾಗ್ಯವೂ ಕೂಡ ಬದಲಾಗುವುದಿಲ್ಲ.ಮನುಷ್ಯನ ಹುಟ್ಟುಗುಣ ಏನೆಂದರೆ ಅವನು ಜೀವನಪೂರ್ತಿ ಒಂದೇ ರೀತಿ ಯೋಚಿಸಿರುತ್ತಾನೆ ತಾನು ಇರುವುದೇ ಹೀಗೆ ಎಂದು.ಆದ್ದರಿಂದ ಅವನು ಅಷ್ಟು ಸುಲಭವಾಗಿ ತನ್ನ ಯೋಚನಾ ಕ್ರಮವನ್ನು ಬದಲಿಸಲಾರ. ಆದರೆ ಎಲ್ಲಿಯವರೆಗೆ ಅವನು ತನ್ನ ಯೋಚನೆಯನ್ನು ಬದಲಾಯಿಸುವುದಿಲ್ಲವೋ,ಅವನ ಜೀವನದಲ್ಲಿ ಆಗಲಿ,ಭಾಗ್ಯದಲ್ಲಿ ಆಗಲಿ ಅಂತಹದ್ದೇನೂ ಬದಲಾವಣೆ ಕೊನೆಯವರೆಗೂ ಆಗುವುದೇ ಇಲ್ಲ.ಆದರೆ ಮನುಷ್ಯ ಮನಸ್ಸು ಮಾಡಿದರೆ ಅವನ ಯೋಚನೆಯನ್ನು ಅವಶ್ಯವಾಗಿ ಬದಲಾಯಿಸಬಹುದು ಆ ಮೂಲಕ ಅವನ ಭಾಗ್ಯವನ್ನು ಕೂಡ.ಆದ್ದರಿಂದ ಕರ್ಣ,ನಿನಗೆ ಹುಟ್ಟಿನಿಂದಲೇ ಅಪಮಾನವಾಗಿದೆ,ನಿಂದನೆ ಆಗಿದೆ ಎನ್ನುವ ಯೋಚನೆಯನ್ನು ಬದಿಗಿರಿಸಿ,ಧರ್ಮಾತ್ಮರಾದ ಪಾಂಡವರ ಪಕ್ಷವನ್ನು ಸೇರು.ಆ ಮೂಲಕ ನಿನ್ನ ಭಾಗ್ಯದಲ್ಲೂ ಅವಶ್ಯವಾಗಿ ಬದಲಾವಣೆ ಆಗಿಯೇ ಆಗುತ್ತದೆ.." ಎಂದು ಕೃಷ್ಣ ಕರ್ಣನಿಗೆ ಹೇಳುತ್ತಾನೆ.
ಆ ದಿನ ಮಹಾಭಾರತ ನೋಡುತ್ತಿದ್ದ ಬೇರೆಯವರಿಗೆ ಏನೂ ಅನ್ನಿಸಲಿಲ್ಲ.ಆದರೆ ಕೃಷ್ಣ ಹೇಳಿದ ಈ ಮಾತುಗಳು ಜಯರಾಜ ನ ಮೇಲೆ ಅತೀ ಹೆಚ್ಚಿನ ಪ್ರಭಾವವನ್ನು ಬೀರಿತ್ತು ಮತ್ತು ಕೃಷ್ಣ ಅಷ್ಟೂ ಹೇಳಿದ್ದು ಆ ಕರ್ಣನಿಗಲ್ಲ ಅದು ಸ್ವತಃ ತನಗೇ ಹೇಳಿದ್ದು ಎಂದು ತಿಳಿದುಕೊಂಡ ಜಯರಾಜ.
ಅವನು ತನ್ನಲ್ಲೇ ಪ್ರಶ್ನೆಗಳನ್ನು ಹಾಕಿಕೊಂಡ.ನಾನು ಏಕೇ ನನ್ನ ಯೋಚನಾ ಕ್ರಮವನ್ನು ಬದಲಾಯಿಸಬಾರದು.ನನ್ನಿಂದ ಏನೂ ಆಗುವುದಿಲ್ಲ ಎನ್ನುವುದನ್ನು ಮನಸ್ಸಿನಿಂದ ಕಿತ್ತು ತೆಗೆದು, ಏನನ್ನಾದರೂ ಜೀವನದಲ್ಲಿ ಮಾಡಲು ಪಕರಮಾಣಿಕ ಪ್ರಯತ್ನ ಪಡಬಾರದು.ಪ್ರಯತ್ನ ಪಡುವುದರಲ್ಲಿ ತಪ್ಪೇನಿದೆ.ಆ ಮೂಲಕ ಆದರೂ ನನ್ನ ಭಾಗ್ಯದಲ್ಲಿ ಪರಿವರ್ತನೆ ಆಗುವುದಾದರೆ ಆಗಲಿ ಎಂದು ಗಟ್ಟಿಯಾಗಿ ನಿರ್ಧರಿಸಿಬಿಟ್ಟ ಜಯರಾಜ.
ಮಹಾಭಾರತ ಮುಂದುವರಿದಿತ್ತು..
ಎಲ್ಲರೂ ಮಹಾಭಾರತ ನೋಡುತ್ತಿದ್ದರು..
ಜಯರಾಜ ಕುಳಿತಲ್ಲಿಂದಲೇ ಜೋರಾಗಿ.. " ಅಪ್ಪಾ .." ಎಂದು ಕರೆದ.
ಅಣ್ಣರಾದ ಪುಷ್ಪರಾಜ,ಹೇಮರಾಜ,ಅಕ್ಕ ಸುಕನ್ಯಾ.. ಅಮ್ಮ ಸುನಂದ ಎಲ್ಲರೂ ಜಯರಾಜನನ್ನೇ ಒಮ್ಮೆಗೆ ಹಾಗೇ ತಿರುಗಿ ನೋಡಿದರು.
ಯಾಕೆಂದರೆ ಜಯರಾಜ ಎಂದಿಗೂ ಅವನ ಅಪ್ಪನನ್ನು, ಅವನಾಗಿಯೇ ಹೋಗಿ ಮಾತಾಡಿಸಿದ್ದಿಲ್ಲ ಆ ಮನೆಯಲ್ಲಿ!
ಅದೂ ಅಲ್ಲದೇ ಈ ರೀತಿಯಲ್ಲಿ ಎತ್ತರದ ಸ್ವರದಲ್ಲಿ ಅದಕ್ಕೂ ಮೊದಲು ಅವ ಮಾತಾಡಿದ್ದೇ ಇಲ್ಲ.
ಶ್ಯಾಮರಾಯರಿಗೂ ಆಶ್ಚರ್ಯವಾಯಿತು.
ಏನು..? ಎಂದು ಹುಬ್ಬೇರಿಸಿ ಕುಳಿತಲ್ಲಿಂದಲೇ ಕೇಳಿದರು.
ಅಪ್ಪ...ಅದು ನಾನು..ನಾನು ಒಂದು Own business ಮಾಡ್ತೇನೆ ಅಪ್ಪಾ..ಎಂದ ಜಯರಾಜ.
Own business ಮಾಡ್ತೀಯಾ! ಅದೂ ನೀನು..!
ಏನು ಮಾಡ್ತೀಯಾ?
ಅದು... ಅದು...ನಾನು Home Products ಮಾಡ್ತೀನಿ.
ಏನು..Home Product ಮಾಡ್ತೀಯಾ...?
ನಿನಗೆ ಅಂತಹದ್ದು ಏನು ಮಾಡ್ಲಿಕ್ಕೆ ಬರುತ್ತೆ...?
ಹಪ್ಪಳ... ಸಂಡಿಗೆ.. ಕಾಯಿಹೋಳಿಗೆ... ಚಕ್ಕುಲಿ...ಉಪ್ಪಿನಕಾಯಿ ಹೀಗೆ ಎಲ್ಲಾ ಮಾಡ್ತಿನಿ,ನಂಗೆ ಇದೆಲ್ಲ ಮಾಡ್ಲಿಕ್ಕೆ ಸ್ವಲ್ಪ ಸ್ವಲ್ಪ ಗೊತ್ತು.ಅಮ್ಮನ ಜೊತೆ ಸೇರಿ ಮಾಡಿದ್ದೀನಿ ಹಲವು ಸಲ..ಎಂದ ಜಯರಾಜ.
ಎಲ್ಲರೂ ಈ Waste Body ಜಯರಾಜ ಏನು ಹೇಳುತ್ತಿದ್ದಾನೆ ಎಂದು ಆಶ್ಚರ್ಯದಿಂದ ನೋಡುತ್ತಿದ್ದಾರೆ.
ಆದರೆ ಸುನಂದಮ್ಮನ ಹೊರತು!
ಅವರಿಗೆ ಖುಷಿ ಆಗಿತ್ತು ಕೊನೆಗೂ ನನ್ನ ಮಗ ಏನೋ ಒಂದನ್ನು ಮಾಡಬೇಕು ಎಂದು ಯೋಚಿಸುತ್ತಿದ್ದಾನೆ ಅಲ್ಲವೇ ಎಂದು.
ಶಾಮ್ಯರಾಯರು ಹೇಳಿದರು - ಈಗ ಏನು..ನೀನು ಹಪ್ಪಳ ಸಂಡಿಗೆ ಮಾಡಿ ನಮ್ಮನೆಲ್ಲಾ ಸಾಕ್ಬೇಕು ಅಂತ ಇದ್ದೀಯಾ?ಮನೆಯಲ್ಲಿ ಇಂಜಿನಿಯರಿಂಗ್ ಮಾಡುತ್ತಿರೋ ಇಬ್ಬರು ಗಂಡುಮಕ್ಕಳು ಇದ್ದಾರೆ.ಮುಂದಿನ ವರ್ಷ ಒಳ್ಳೆಯ ಕಂಪೆನಿಯಲ್ಲಿ ಕೆಲಸನೂ ಸಿಗುತ್ತೇ ಅವರಿಗೆ.ನೀನು ದುಡಿದು ನಮ್ಮನೇನು ಸಾಕಬೇಕಾಗಿಲ್ಲ.ಅಡುಗೆ ಕೋಣೆಯಲ್ಲಿ ಅಮ್ಮನಿಗೆ ತರಕಾರಿ ಕಟ್ ಮಾಡ್ಲಿಕ್ಕೆ ಹೆಲ್ಪ್ ಮಾಡು ಅಷ್ಟು ಸಾಕು.ಒಂದು ದಿನ ಮನೆಯಲ್ಲಿ ಹಪ್ಪಳ ಒತ್ತಿ ಬಿಟ್ಟು..ಅದನ್ನೇ ನಂಬಿಕೊಂಡು ಈಗ Home products ಮಾಡ್ತಾನೆ ಅಂತೆ Home products. ನೋಡು ನಿನ್ನ ಭಾಗ್ಯದಲ್ಲಿ ಇರುವುದೇ ಇಷ್ಟು,ಅದನ್ನು ಮೊದಲು ಒಪ್ಪಿಕೋ.
ಅದನ್ನು ಕೇಳಿ ಜಯರಾಜ ಹೇಳಿದ - ಆದರೆ ಮಹಾಭಾರತದಲ್ಲಿ ಈಗ ತಾನೇ ಕೃಷ್ಣನೇ ಹೇಳಿದ್ದಾನೆ ಅಲ್ಲವೇ ಅಪ್ಪ, ನಮ್ಮ ಯೋಚನೆಯನ್ನು ಬದಲಾಯಿಸಿದರೆ ನಮ್ಮ ಭಾಗ್ಯವನ್ನು ಕೂಡ ಬದಲಾಯಿಸಬಹುದು ಎಂದು...
ಶ್ಯಾಮರಾಯರು ಹೇಳಿದರು...ಯಾವುದು ಸೀರಿಯಲ್ ಮಹಾಭಾರತವ?? ಸೀರಿಯಲ್ ನಲ್ಲಿ ಹೇಳಿದ್ದನ್ನು ಸೀರಿಯಸ್ ಆಗಿ ತಗೊಂಡು ಏನೇನೋ ಆಗದ್ದನ್ನೆಲ್ಲಾ ಮಾಡ್ಲಿಕ್ಕೆ ಹೋಗಿ,ಅದು ಇನ್ನೇನೋ ಒಂದು ಆಗಿ,ಕೊನೆಗೆ ಊರವರ ಬಾಯಿಗೆ ಆಹಾರವಾಗಿ ನನ್ನ ಮರ್ಯಾದೆ ತೆಗೀಬೇಕು ಎಂದು ನಿರ್ಧರಿಸಿದ್ದೀಯಾ!
ಹಾಗಾದರೆ ಒಳ್ಳೆಯದನ್ನು ಜೀವನದಲ್ಲಿ ಸ್ವೀಕರಿಸಲೇ ಬಾರದೇ ಅಪ್ಪಾ. ಒಳ್ಳೆಯ ವಿಷಯ ಎಲ್ಲಿಂದಲೇ ಬರಲೇ ಅದು ಬೇಕಾದರೆ ಧಾರಾವಾಹಿಯೇ ಆಗಲಿ ಅಥವಾ ಭಗವದ್ಗೀತೆ ಯೇ ಆಗಲಿ, ಒಳ್ಳೆಯ ವಿಷಯಗಳನ್ನು ಸ್ವೀಕರಿಸಿದರೆ ತಪ್ಪೇನು.ಒಳ್ಳೆಯ ವಿಷಯಗಳು ಕೇವಲ ಕೇಳಿಸಿಕೊಳ್ಳಲು ಮಾತ್ರ ಇರುವುದೇ, ಜೀವನದಲ್ಲಿ ಅಳವಡಿಸಿಕೊಳ್ಳಲು ಅಲ್ಲವೇ?
ಶ್ಯಾಮರಾಯರಿಗೆ ಜಯರಾಜನ ತರ್ಕವನ್ನು ಕೇಳಿ ವಿಪರೀತ ಕೋಪ ಬಂದಿತ್ತು.ಅದಕ್ಕೀಗ ನಾನು ಏನು ಮಾಡಬೇಕೆಂದು ಹೇಳುತ್ತಿರುವೆ ನೀನು..ಎಂದು ಕೇಳಿದರು.
ಏನೂ ಇಲ್ಲ ಅಪ್ಪ,ಸ್ವಲ್ಪ ದೊಡ್ಡ ಪಾತ್ರೆಗಳು,ದೊಡ್ಡ ಗ್ಯಾಸ್ ಸ್ಟೌವ್,ಅಡುಗೆಗೆ ಬೇಕಾದ ಸಾಮಾನು ಇತ್ಯಾದಿಗಳು ಬೇಕು. ಅದಕ್ಕೆಲ್ಲಾ ಸ್ವಲ್ಪ ದುಡ್ಡು ಬೇಕು.
ಖಂಡಿತವಾಗಿಯೂ ಕೊಡಲಾರೆ.ಇದಕ್ಕೆಲ್ಲ ಹಣ ಕೊಟ್ಟು ನೀರಿನಲ್ಲಿ ಹೋಮ ಮಾಡಲಾರೆ ನಾನು.ನೀನು ಏನು ಬೇಕಾದರೂ ಮಾಡಿಕೋ.ನನ್ನಲ್ಲಿ ಮಾತ್ರ ಬಿಡಿಗಾಸು ಕೇಳಬೇಡ.
ಸುನಂದಮ್ಮ ತಮ್ಮ ಮಗನ ಪರವಾಗಿ ಮಾತಾಡಿದರು- ಏನೋ ಒಂದು ಮಾಡ್ತೀನಿ ಅಂತ ಹೋಗ್ತಾ ಇದ್ದಾನೆ.ನಾವೇ ಅವನಿಗೆ ಸಹಾಯ ಮಾಡದಿದ್ದರೆ ಇನ್ನು ಯಾರು ಮಾಡ್ತಾರೆ ಕಣ್ರಿ ಅಂದರು.
ಸುನಂದ ನಿನ್ನ ಮಗನ ಪರ ವಹಿಸಿ ನನಗೆ ಬುದ್ಧಿ ಹೇಳಲು ಬರಬೇಡ.ನೀವು ಅಮ್ಮ ಮಗ ಇಬ್ಬರು ಸೇರಿಕೊಂಡು ಏನು ಬೇಕಾದರೂ ಮಾಡಿ ಹಾಳಾಗಿ ಹೋಗಿ,ಆದರೆ ನಾನು ಮಾತ್ರ ಹಣ ನೀಡಲಾರೆ ಎಂದು ಕುಳಿತಲ್ಲಿಂದ ಎದ್ದು ಹೊರಗೆ ನಡೆದರು ಶ್ಯಾಮರಾಯರು.
ಅಂದು ಸುನಂದಮ್ಮನಿಗೆ ತನ್ನ ಮಗನಿಗೆ ಸಹಾಯ ಮಾಡಲೇಬೇಕು ಎಂದು ಬಲವಾಗಿ ಅನಿಸಿತ್ತು.
ತನ್ನ ಬಂಗಾರ ಗಿರವಿಗಿಟ್ಟು ಅದರಿಂದ ಬಂದ ಹಣವನ್ನು ಜಯರಾಜನಿಗೆ ತಂದು ಕೊಟ್ಟರು.ತವರು ಮನೆಗೆ ಹೋಗಿ ತನ್ನ ತಮ್ಮಂದಿರಿಂದ ಕೂಡ ಸ್ವಲ್ಪ ಹಣ ತಗೊಂಡು ಬಂದರು ಸುನಂದಮ್ಮ.
ಅಮ್ಮನೊಂದಿಗೆ ಗಣಪತಿ ದೇವಸ್ಥಾನ ಕ್ಕೆ ಹೋಗಿ ಭಕ್ತಿಯಿಂದ ಪ್ರಾರ್ಥನೆ ಮಾಡಿ ಬಂದ ಜಯರಾಜ.
ಕೊನೆಗೂ ಜಯರಾಜನ ಹೋಮ್ ಪ್ರಾಡಕ್ಟ್ ಬ್ಯುಸಿನೆಸ್ ಮನೆಯ ಹಿಂಭಾಗದ ಜಾಗದಲ್ಲಿ ಒಂದು ತಗಡು ಶೀಟಿನ ಕೆಳಗೆ ಆರಂಭವಾಯಿತು.
ಜಯರಾಜ ಅಂಗವಿಕಲ ಇರಬಹುದು ಆದರೆ ಅವನ ಬುದ್ಧಿವಂತಿಕೆಗೆ ಅಂಗವಿಕಲತೆ ಬಂದಿರಲಿಲ್ಲ.
ಸುನಂದಮ್ಮ ಕೇಳಿದರು "ಜಯರಾಜ.. ಏನು ಹೆಸರು ಇಡ್ತಿಯೋ.. ನಿನ್ನ ಹೋಮ್ ಪ್ರಾಡಕ್ಟ್ ಗೆ.. "
ಅಮ್ಮಾ... ನಾನು ನಿರ್ಧರಿಸಿಯಾಗಿದೆ. ನಮ್ಮ ಹೋಮ್ ಪ್ರಾಡಕ್ಟ್ ಗೆ " ಶ್ಯಾಮ್ ಹೋಮ್ ಪ್ರಾಡಕ್ಟ್.. " ಎಂದು ಅಪ್ಪನ ಹೆಸರೇ ಇಡ್ತೀನಿ ಅಮ್ಮಾ..
ಸುನಂದಮ್ಮನ ಕಣ್ಣುಗಳಲ್ಲಿ ನೀರಿತ್ತು.
ಹೇಯ್ ಭಗವಂತ ವಿಘ್ನವಿನಾಶಕ..ಹೇಗಾದರೂ ಮಾಡಿ ನನ್ನ ಮಗನ ಭಾಗ್ಯದ ಬಾಗಿಲನ್ನು ನೀನೇ ತೆರೆಸಿಬಿಡು ದೇವರೇ..ಅವನನ್ನು ದಡ ಸೇರಿಸು ಎಂದು ಮನಸಾರೆ ಇದ್ದಲ್ಲಿಂದಲೇ ಪ್ರಾರ್ಥಿಸಿದರು.
ಜಯರಾಜನೇ ತನ್ನ Walking stick ಅನ್ನು ಬಳಸಿಕೊಂಡು ಕುಂಟುತ್ತಾ ಹೋಗಿ ಪೇಟೆಯಲ್ಲಿ ಹಲವಾರು ಅಂಗಡಿ, ಬೇಕರಿಗಳಲ್ಲಿ ಮಾತಾಡಿ ಬಂದ.ಅವನ ಪರಿಚಯದವರು ಹಲವರು ಇದ್ದರು.ಅವರಿಗೂ ಇವನನ್ನು ನೋಡಿ ಅಯ್ಯೋ ಅನಿಸಿತು. ಅದಕ್ಕಾಗಿಯೇ ಜಯರಾಜನಿಗೆ ಆರ್ಡರ್ ಕೊಡಲು ಕೆಲವರು ಒಪ್ಪಿದರು.
ಈ ರೀತಿಯಾಗಿ ಜಯರಾಜನ "ಶ್ಯಾಮ್ ಹೋಮ್ ಪ್ರಾಡಕ್ಟ್" ಬ್ಯುಸಿನೆಸ್ ಶುರು ಆಯಿತು.
ಲಾಭ ತಂದು ಕೊಡದಿದ್ದರೂ ತಕ್ಕ ಮಟ್ಟಿಗೆ ಅದರಷ್ಟಕ್ಕೆ ಸಾಗಿತ್ತು.
ಆದರೆ ಶ್ಯಾಮರಾಯರು,ಜಯರಾಜ ಈ ತಿಂಡಿ ತಿನಿಸುಗಳ ಬ್ಯುಸಿನೆಸ್ ಆರಂಭಿಸಿದ ನಂತರ ಒಂದು ದಿನವೂ ಅದರತ್ತ ತಿರುಗಿಯೂ ನೋಡಲಿಲ್ಲ.ಅಷ್ಟೇಕೆ ತಿಂಡಿ ತಿನಿಸುಗಳು ತಯಾರಾಗುತ್ತಿದ್ದ ಮನೆಯ ಹಿಂಬಾಗಕ್ಕೆನೇ ಅವರು ಹೋಗುವುದನ್ನು ಸಂಪೂರ್ಣವಾಗಿ ನಿಲ್ಲಿಸಿದರು.
ಜಯರಾಜನ ಇಬ್ಬರು ಅಣ್ಣ ಆಗಲಿ,ಅಕ್ಕ ಆಗಲಿ ಯಾರೂ ಕೂಡ ಒಮ್ಮೆಯೂ ಬಂದು ಚಿಕ್ಕ ಸಹಾಯವನ್ನು ಕೂಡ ಜಯರಾಜನಿಗೆ ಮಾಡಲಿಲ್ಲ.
ಆದರೆ ಜಯರಾಜನಿಗೆ ಜೀವನದಲ್ಲಿ ಆ ಕೆಲಸ ಶುರು ಮಾಡಿದ ದಿನದಿಂದ ಹೊಸ ಹುಮ್ಮಸ್ಸು ಬಂದಿತ್ತು.ಅವನಿಗೆ ಸೋಲುವುದು ಇಷ್ಟವಿರಲಿಲ್ಲ.ಸೋಲು ಬಂದರೂ ಬೇಜಾರ್ ಇಲ್ಲ,ನನ್ನ ಪ್ರಾಮಾಣಿಕ ಪ್ರಯತ್ನವನ್ನು ಅಂತು ನಾನು ಮಾಡುತ್ತೇನೆ,ಬಾಕಿ ಎಲ್ಲಾ ಫಲಾಫಲ ಗಳು ದೇವರಿಗೆ ಬಿಟ್ಟದ್ದು ಎಂದು ಅಂದುಕೊಂಡು ಬಿಟ್ಟ.
ಈಗೀಗ ಸುನಂದಮ್ಮ ಮನೆಯ ಅಡುಗೆಕೋಣೆ ಬಿಟ್ಟರೆ ಹೆಚ್ಚಿನ ಸಮಯವನ್ನು ಮನೆಯ ಹಿಂದಿನ ಮಗನ ಪಾಕಶಾಲೆಯಲ್ಲಿಯೇ ಕಳೆಯತೊಡಗಿದರು.ಅಲ್ಲಿ ಅವರದ್ದೇ ಹೆಚ್ಚಿನ ಉಸ್ತುವಾರಿ ಮತ್ತು ಸೂಕ್ತವಾದ ಮಾರ್ಗದರ್ಶನ ಎಲ್ಲಾ.
ಕೊನೆಗೂ ಶ್ಯಾಮರಾಯರ ಆಶಯದಂತೆ ಅವರ ಇಬ್ಬರು ಮಕ್ಕಳಿಗೂ ಒಳ್ಳೆಯ ಕಂಪನೆಯಲ್ಲಿ ಕೆಲಸ ಸಿಕ್ಕಿತು.
ಇಬ್ಬರೂ ವಿದೇಶಕ್ಕೆ ಹಾರಿದರು.
ಶ್ಯಾಮರಾಯರು ಹಿರಿ ಹಿರಿ ಹಿಗ್ಗಿದರು.
ನನ್ನ ಭಾಗ್ಯದ ಬಾಗಿಲು ತೆರೆಯಿತು ಎಂದು ತಿಳಿದರು.
ಅದನ್ನು ಸುನಂದಮ್ಮ ಹಾಗೂ ಜಯರಾಜನಿಗೆ ಕೇಳುವ ಹಾಗೆಯೇ ಹೇಳಿದರು.
ಸುನಂದ..ಒಬ್ಬ ತಂದೆಯ ಭಾಗ್ಯ ಯಾವುದು ಎಂದರೆ ಹುಟ್ಟಿಸಿದ ಮಗ ಒಂದೊಳ್ಳೆಯ ಕೆಲಸ ಗಿಟ್ಟಿಸಿ, ಮನೆಯ ಜವಾಬ್ದಾರಿಯನ್ನು ಹೊತ್ತುಕೊಂಡು ತನ್ನ ತಂದೆ ತಾಯಂದಿರನ್ನು ಸಾಕುತ್ತಾನೆ ಅಲ್ಲವೇ.. ಅದುವೇ ವಾಸ್ತವವಾಗಿ ಅವನ ಭಾಗ್ಯ.. ಎಂದು ಹೇಳಿದರು.
ಅಲ್ಲೇ ಇದ್ದ ಜಯರಾಜ ಏನೂ ಹೇಳಲಿಲ್ಲ.
ಮನೆಯ ಹಿಂಬದಿಗೆ ಕುಂಟುತ್ತಾ ಹೋಗಿ ಎಂದಿನಂತೆ ಹಪ್ಪಳ ಒತ್ತುವುದನ್ನು ಮುಂದುವರಿಸಿದ್ದ.
ಜಯರಾಜನ ಗುಣಮಟ್ಟದ ತಿಂಡಿ ತಿನಿಸುಗಳ ಕಾರಣದಿಂದಾಗಿ ಜಯರಾಜನಿಗೆ ನಗರದಲ್ಲಿ ಒಂದಷ್ಟು ಖಾಯಂ ಗಿರಾಕಿಗಳು ಸಿಕ್ಕರು.ಹಾಗೆಯೇ ಆರ್ಡರ್ ಗಳು ಕೂಡ ಜಾಸ್ತಿ ಆದವು.ಜಯರಾಜನ ಕೈಯಲ್ಲಿ ತಕ್ಕಮಟ್ಟಿನ ಹಣದ ಹರಿವು ಇತ್ತು.
ಇತ್ತ ವಿದೇಶಕ್ಕೆ ಹಾರಿದ ಇಬ್ಬರೂ ಗಂಡು ಮಕ್ಕಳ ಪತ್ತೆಯೇ ಇಲ್ಲ. ಮೊದಲು ಮೊದಲು ಕಾಲ್ ಮಾಡಿ ಮಾತಾಡುತ್ತಿದ್ದರಾದರೂ ನಂತರದಲ್ಲಿ ಅವರ ಸುದ್ದಿಯೇ ಇಲ್ಲ.
ಮನೆಗೆ ಹಣ ಕೂಡ ಕಳುಹಿಸಿಕೊಡುತ್ತಿರಲಿಲ್ಲ.
ವರ್ಷಗಳು ಉರುಳಿದವು.
ಸಾಲ ಮಾಡಿ ಹಾಗೂ ಕೈಯಲ್ಲಿ ಇದ್ದ ಬದ್ದ ಹಣದಿಂದಲೇ ಮನೆಯ ಖರ್ಚು ವೆಚ್ಚ ಗಳನ್ನು ಹೇಗೋ ನಿಭಾಯಿಸಿದರು ಶ್ಯಾಮರಾಯರು.ಆದರೆ ಎಂದೂ ಜಯರಾಜನ ಬಳಿ ಹಣಕ್ಕಾಗಿ ಕೈ ಚಾಚಲಿಲ್ಲ ಅವರು.ಅವರ ಸ್ವಾಭಿಮಾನ ಅವರಿಗೆ ಅಡ್ಡ ಬರುತ್ತಿತ್ತು.
ಆದರೂ ಮನೆಯಲ್ಲಿ ಹೆಣ್ಣು ಮಗಳೊಬ್ಬಳು ಬೆಳೆದು ನಿಂತಿದ್ದಳು.
ಅದು ಶ್ಯಾಮರಾಯರಿಗೆ ವಿಪರೀತ ಚಿಂತೆ ಉಂಟು ಮಾಡಿತ್ತು.
ಅವರು ಇನ್ನೂ ಅಂದುಕೊಂಡಿದ್ದರು,ಮಕ್ಕಳಿಗೆ ವಿದೇಶದಲ್ಲಿ ಏನೋ ಒಂದು ಸಮಸ್ಯೆ ಆಗಿರಬೇಕು.ಅದಕ್ಕಾಗಿ ಹಣ ಕಳುಹಿಸುತ್ತಿಲ್ಲ ಎಂದು.
ಆ ದಿನ ಗಣೇಶ ಚರ್ತುಥಿ ಹಬ್ಬ.ಸಂಜೆ ಮನೆಯ ಹಾಲ್ ನಲ್ಲಿ ಕುಳಿತು ಎಲ್ಲರೂ ಟಿವಿ ನೋಡುತ್ತಿದ್ದಾಗ ಶ್ಯಾಮರಾಯರ ಫೋನ್ ರಿಂಗ್ ಆಯಿತು.
" ಜಯ ಗಣೇಶ.. ಜಯ ಗಣೇಶ.. ಜಯ ಗಣೇಶ ಪಾಹಿಮಾಮ್
ಜಯ ಗಣೇಶ.. ಜಯ ಗಣೇಶ.. ಜಯ ಗಣೇಶ ರಕ್ಷಮಾಮ್
ಮುದಾ ಕರಾತ್ತಮೋದಕಂ,ಸದಾ ವಿಮುಕ್ತಿಸಾಧಕಂ.......... "
ಸೂರ್ಯಗಾಯತ್ರಿ ಮುದ್ದಾಗಿ ಹಾಡಿರುವ ಗಣೇಶ ಪಂಚರತ್ನಂ ನ ಶ್ಲೋಕ ಅದು.ರಾಯರಿಗೆ ಆ ಶ್ಲೋಕ ಎಂದರೆ ಬಹಳನೇ ಇಷ್ಟ. ಅದಕ್ಕಾಗಿ ಅದನ್ನೇ ರಿಂಗ್ ಟೋನ್ ಆಗಿ ಇಟ್ಟುಕೊಂಡಿದ್ದರು.
ಆ ಕಾಲ್ ನಿಜವಾಗಿಯೂ ವಿದೇಶದಿಂದಲೇ ಬಂದಿತ್ತು ಮತ್ತು ಅದು ಅವರ ಮಕ್ಕಳದ್ದೇ ಫೋನ್ ಕಾಲ್ ಆಗಿತ್ತು.
ಎಷ್ಟೋ ವರ್ಷಗಳ ನಂತರ ಬಂದ ಅವರ ನೆಚ್ಚಿನ ಮಕ್ಕಳ ಪೋನ್ ಕಾಲ್. ಶ್ಯಾಮರಾಯರ ಖುಷಿಗೆ ಪಾರವೇ ಇರಲಿಲ್ಲ.
ನೋಡು ಸುನಂದ,ನಮ್ಮ ಪುಷ್ಪರಾಜ ಮತ್ತು ಹೇಮರಾಜ ಕಾಲ್ ಮಾಡಿದ್ದಾರೆ.. ಎಂದು ಖುಷಿಯಲ್ಲಿ ಬೀಗಿದರು.
ಅಲ್ಲೇ ಇದ್ದ ಸುನಂದಮ್ಮ ಹಾಗೂ ಸುಕನ್ಯಾ ಳಿಗೂ ಅಪಾರ ಖುಷಿಯಾಯಿತು.ಜಯರಾಜ ತನ್ನ ಮುಖದಲ್ಲಿ ಯಾವುದೇ ಭಾವವನ್ನೂ ಪ್ರಕಟಿಸದೇ ಅಲ್ಲೇ ನಿಂತಿದ್ದ.
ಸುಕನ್ಯಾ ಹೇಳಿದಳು - ಅಪ್ಪ ಪೋನ್ ಅನ್ನು ಲೌಡ್ ಸ್ಪೀಕರ್ ಗೆ ಹಾಕು.ಅಣ್ಣಂದಿರ ವಾಯ್ಸ್ ಕೇಳದೆ ಎಷ್ಟೋ ವರ್ಷ ಆಗಿದೆ, ಎಲ್ಲರೂ ಒಟ್ಟಿಗೆ ಮಾತಾಡೋಣ ಅಂದಳು.
ಸುನಂದಮ್ಮ ಕೂಡ.. ಹೌದು ಕಣ್ರೀ.. ಎಷ್ಟೋ ವರ್ಷ ಆಗಿದೆ ಅವರ ಧ್ವನಿ ಕೇಳದೆ ಅಂದರು.
ಶ್ಯಾಮರಾಯರು ಲೌಡ್ ಸ್ಪೀಕರ್ ಗೆ ಫೋನ್ ಹಾಕಿದರು.
ಇಲ್ಲಿ ಮನೆಯಲ್ಲಿ ಎಲ್ಲರೂ ಕಿವಿಗೊಟ್ಟು ಕೇಳುತ್ತಿದ್ದರು..
ಪೋನ್ ಮಾಡಿದ ಮಕ್ಕಳಿಬ್ಬರೂ ಅಲ್ಲಿಂದಲೇ ಹೇಳಿದರು - ಅಪ್ಪಾ..ನಮಗೆ ಇಂಡಿಯಾ ಗೆ ಬರಲು ಮನಸ್ಸಿಲ್ಲ.ನಾವು ಇಲ್ಲಿಯೇ USA ಅಲ್ಲಿಯೇ ಸೆಟಲ್ ಆಗ್ಬೇಕು ಅಂತ ಇದ್ದೇವೆ. ನಮಗೆ ಇಲ್ಲಿಯ ಹುಡುಗಿಯರೊಂದಿಗೆ ಅದಾಗಲೇ ಮದುವೆ ಕೂಡ ಆಗಿದೆ.ಇಬ್ಬರಿಗೂ ಒಂದೊಂದು ಮಗು ಕೂಡ ಆಗಿದೆ.ಹಾಗಾಗಿ ನಮಗೆ ಊರಿಗೆ ಬರಲು ಆಗುವುದಿಲ್ಲ.ತಂಗಿ ಸುಕನ್ಯಾಳ ಮದುವೆ ಖರ್ಚಿಗಾಗಿ ನಮ್ಮ ಇಬ್ಬರ ಪಾಲಿಗೆ ಬರುವ ಜಾಗವನ್ನು ಮಾರಿ ಬಿಡಿ..ಎಂದು ಹೇಳಿ ಕಾಲ್ ಕಟ್ ಮಾಡಿದ್ದರು ಶ್ಯಾಮರಾಯರ ಮುದ್ದಿನ ಮಕ್ಕಳಾದ ಪುಷ್ಪರಾಜ ಮತ್ತು ಹೇಮರಾಜ!
ಶ್ಯಾಮರಾಯರ ಹೃದಯವೇ ಒಡೆದು ಹೋದಂತೆ ಆಯಿತು.
ಅಲ್ಲೇ ಕುಸಿದರು!
ಕುಸಿದು ಅತ್ತರು.
ಬಿಕ್ಕಿ ಬಿಕ್ಕಿ ಅತ್ತರು..
ಅಪಾರವಾದ ಭರವಸೆ ಇಟ್ಟುಕೊಂಡು ಅಷ್ಟು ಮುದ್ದಿನಿಂದ ಸಾಕಿದ್ದ ತನ್ನ ಪ್ರೀತಿಯ ಮಕ್ಕಳು ಈಗ ಒಂದೇ ಮಾತಿನಲ್ಲಿ ಕಡ್ಡಿ ಮುರಿದಂತೆ ಈ ರೀತಿಯಾಗಿ ಹೇಳಿ ಬಿಟ್ಟರೆ ಶ್ಯಾಮರಾಯರಂತಹ ಶ್ಯಾಮರಾಯರಿಗೆ ಹೇಗಾಗಬೇಡ.
ಎಷ್ಟಾದರೂ ಹಿರಿಯ ಜೀವ ಅದು...
ಮಕ್ಕಳು ಹಣ ಕಳುಹಿಸದೇ ಇದ್ದಾಗಲೂ ಅವರು ಜೀವನದಲ್ಲಿ ಸೋತಿರಲಿಲ್ಲ... ಆದರೆ ಇಂದು?!
ಅವರ ಮನಸ್ಸು ಹೇಳಿತು,ಹೌದು.. ನಾನು ಸೋತಿದ್ದೇನೆ, ಇಂದು ನಾನು ಜೀವನದಲ್ಲಿ ನಿಜವಾಗಿಯೂ ಸೋತುಹೋಗಿದ್ದೇನೆ ಎಂದು.
ಅವರಿಗಾದ ನೋವನ್ನು ಅವರಿಗೆ ತಡೆದುಕೊಳ್ಳಲು ಆಗಲೇ ಇಲ್ಲ.ಮತ್ತಷ್ಟು ಅತ್ತರು ಶ್ಯಾಮರಾಯರು.
ಅಳುತ್ತಲೇ ಇದ್ದರು.
" ಅಪ್ಪಾ..ಅಳಬೇಡಪ್ಪ... ನಿನಗೆ ನಾನಿದ್ದಿನಿ ಅಪ್ಪಾ.." ಎಂಬ ಸ್ವರವೊಂದು ಆ ರೋಧನೆಯ ಮಧ್ಯೆಯೂ ಕೇಳಿ ಬಂದಿತ್ತು ಆ ಮನೆಯ ನಡುವಿನಿಂದ.
ಶ್ಯಾಮರಾಯರು ಆ ಮಾತು ಬಂದತ್ತ ಒಮ್ಮೆ ಹಾಗೇ ತಿರುಗಿ ನೋಡಿದರು. ಆ ಮಾತು ಆಡಿದ್ದು ಬೇರಾರು ಆಗಿರದೇ,ಅವರು ತಮ್ಮ ಜೀವನದಲ್ಲಿಯೇ ಅತೀ ಕಡಿಮೆ ಮಾತಾಡಿದ್ದ ಅವರ ಕಿರಿಯ ಮಗ ಜಯರಾಜನದ್ದೇ ಆಗಿತ್ತು!
ಜಯರಾಜ ಹೇಳಿದ...
- ಅಪ್ಪ.. ನಾನು ಒತ್ತುವ ಹಪ್ಪಳಗಳು ನಿಮಗೆ ಡಾಲರ್ ಗಟ್ಟಲೆ ಹಣ ತಂದು ಕೊಡದೇ ಇರಬಹುದು,ಆದರೆ ಸುಕನ್ಯಾ ಳ ಮದುವೆಗಾಗಿ ನಮ್ಮ ಜಾಗವನ್ನು ಮಾರಲು ಅದು ಎಂದಿಗೂ ಬಿಡುವುದಿಲ್ಲ ಅಪ್ಪ..ನಾನಿನ್ನೂ ಜೀವಂತವಾಗಿಯೇ ಇದ್ದೇನೆ ಅಪ್ಪ,ನಾನು ನಿಮ್ಮ ಪಾಲಿಗೆ ಯಾವತ್ತಿಗೂ ಸತ್ತಿಲ್ಲ.ಸುಕನ್ಯಾ ನನಗೂ ಅಕ್ಕ,ವಾಸ್ತವವಾಗಿ ಅವಳ ಮದುವೆ ಮಾಡುವುದು ನನ್ನ ಜವಾಬ್ದಾರಿಯೂ ಕೂಡ ಹೌದು,ಹಾಗೂ ನನ್ನ ಜವಾಬ್ದಾರಿಯಿಂದ ನಾನು ಹಿಂದೆ ಸರಿಯಲಾರೆ ಅಪ್ಪ.ನೀವು ಹೇಳಿದಂತೆ ಈ ಜೀವನದಲ್ಲಿ ನನ್ನ ಭಾಗ್ಯ ಬಾಗಿಲು ಎಷ್ಟು ತೆರೆಯುತ್ತೋ ಇಲ್ಲವೋ ಎಂದು ನನಗೆ ಗೊತ್ತಿಲ್ಲ ಅಪ್ಪಾ..ಆದರೆ ನನ್ನ ಅಕ್ಕನ ಭಾಗ್ಯದ ಬಾಗಿಲು ಹಾಗೂ ಈ ಮನೆಯ ಭಾಗ್ಯದ ಬಾಗಿಲು ನಾನು ಎಂದಿಗೂ ಮುಚ್ಚಲು ಬಿಡಲಾರೆ ಅಪ್ಪ..
ಶ್ಯಾಮರಾಯರ ಕಣ್ಣುಗಳಲ್ಲಿ ನೀರು ಗಳಗಳನೇ ಎಂದು ಹರಿದಿತ್ತು!
ಎಂತಹ ಮಾತು ಆಡಿ ಬಿಟ್ಟ ನನ್ನ ಕಿರಿಯ ಪುತ್ರ.ಇವನಿಗೆ ಅಲ್ಲವೇ ನಾನು ಪದೇಪದೇ ಹೇಳಿದ್ದು... ನಿನ್ನ ಭಾಗ್ಯದಲ್ಲಿ ಇರುವುದೇ ಇಷ್ಟು ಜಯರಾಜ..ಭಗವಂತನಿಗೂ ನಿನ್ನ ಹಣೆಬಹರ ಬದಲಾಯಿಸಲು ಸಾಧ್ಯವಿಲ್ಲ...ನೀನು ಹಪ್ಪಳ ಒತ್ತಿ ನಮ್ಮನ್ನು ಸಾಕಬೇಕಾಗಿಲ್ಲ..ನನ್ನ ಉಳಿದ ಇಬ್ಬರು ಮಕ್ಕಳು ಇಂಜಿನಿಯರಿಂಗ್ ಮಾಡಿದ್ದಾರೆ..ಮುಂದಿನ ವರ್ಷ ಒಳ್ಳೆಯ ಕೆಲಸ ಕೂಡ ಸಿಗುತ್ತದೆ..ನೀನು ಅಡುಗೆ ಕೋಣೆಯಲ್ಲಿ ಅಮ್ಮನಿಗೆ ತರಕಾರಿ ಕಟ್ ಮಾಡಲು ಸಹಾಯ ಮಾಡು..ಎಂದು ಹೇಳಿದ್ದು.
ಆದರೆ ಈಗ ಏನಾಯಿತು.
ಅವರು ಯಾರೂ ನನ್ನ ಕೊನೆಯ ಕಾಲದಲ್ಲಿ ನನ್ನ ಜೊತೆ ಇಲ್ಲ, ಆದರೆ ಯಾರನ್ನು ನಾನು ನನ್ನ ಜೀವನದ ಅನಿಷ್ಟ ಎಂದು ತಿಳಿದಿದ್ದೆನೋ..ಆ ಮಗನೇ ಬಂದು ಹೇಳುತ್ತಿದ್ದಾನೆ..ಅಪ್ಪಾ ನಾನು ಒತ್ತುವ ಹಪ್ಪಳಗಳು ನಿಮಗೆ ಡಾಲರ್ ಗಟ್ಟಲೆ ಹಣ ತಂದುಕೊಡದೇ ಇರಬಹುದು..ಆದರೆ ಖಂಡಿತವಾಗಿಯೂ ಅದು ನಮ್ಮ ಹಿರಿಯರ ಜಾಗವನ್ನು ಮಾರಲು ಬಿಡುವುದಿಲ್ಲ ಎಂದು.
ಆಹಾ.. ಎಂತಹ ಮಗ ಈ ನನ್ನ ಜಯರಾಜ.
ಆದರೆ ಎಂತಹ ಕೆಟ್ಟ ಮನಸ್ಥಿತಿಯ ತಂದೆ ನಾನು..ಎಂದು ಮನಸ್ಸಲ್ಲೇ ತನ್ನನ್ನು ತಾನು ಬೈದುಕೊಂಡು ಬಿಟ್ಟರು ಶ್ಯಾಮರಾಯರು.
ನಾನು ಅತಿಯಾಗಿ ವಿಶ್ವಾಸ ಇಟ್ಟ ತನ್ನ ಇಬ್ಬರು ಪುತ್ರರು ಇಂದು ಹೇಳುತ್ತಿದ್ದಾರೆ..ಜಾಗ ಮಾರಿ ಮಗಳ ಮದುವೆ ಮಾಡಿ ಎಂದು.. ಆದರೆ ನಾನು ಮೊದಲಿನಿಂದಲೇ ಕಡೆಗಣಿಸಿದ ಪುತ್ರ ಇವತ್ತು ಬಂದು ಹೇಳುತ್ತಿದ್ದಾನೆ,ಅಪ್ಪಾ..ಜಾಗ ಮಾರುವುದು ಬೇಡ, ನಾನು ಹಪ್ಪಳ ಒತ್ತಿ ಆದರೂ ಅಕ್ಕನ ಮದುವೆ ಮಾಡುತ್ತೇನೆ, ಅದು ನನ್ನ ಜವಾಬ್ದಾರಿ..ಎಂದು.
ಶ್ಯಾಮರಾಯರಿಗೆ ಅವರ ಬಗ್ಗೆನೇ ವಿಪರೀತ ಬೇಸರವಾಯಿತು. ತಲೆ ತಗ್ಗಿಸಿಕೊಂಡು ಮಗನ ಎದುರು ಹಾಗೇ ನಿಂತುಕೊಂಡು ಬಿಟ್ಟರು ಅವರು.
ಅಲ್ಲೇ ಇದ್ದ ಜಯರಾಜನ ಅಕ್ಕ ಸುಕನ್ಯಾಳದ್ದೂ ಹೆಚ್ಚು ಕಡಿಮೆ ಅದೇ ಪರಿಸ್ಥಿತಿ.ಅವಳು ಯಾವತ್ತೂ ತನ್ನ ತಮ್ಮನನ್ನು ಪ್ರೀತಿಯಿಂದ ಮಾತಾಡಿಸಿದ್ದೇ ಇಲ್ಲ.ಸಹೋದರರು ಎಂದರೆ ತನ್ನ ಅಣ್ಣಂದಿರು ಮಾತ್ರ ಎಂದು ತಿಳಿದುಕೊಂಡಿದ್ದಳು ಅವಳು.ಅಷ್ಟೇ ಏಕೆ ನನ್ನ ತಮ್ಮ ಏನು ಮಾಡುತ್ತಿದ್ದಾನೆ ಎಂದು ಒಂದು ಬಾರಿಯೂ ಮನೆಯ ಹಿಂದುಗಡೆ ಹೋಗಿ ನೋಡಿರಲಿಲ್ಲ ಅವಳು.ಈ ಹಪ್ಪಳ ಸಂಡಿಗೆ ಮಾಡುವುದು ಎಲ್ಲಾ ಕಾಲೇಜಿಗೆ ಹೋಗುವ ನನ್ನಂತವಳಿಗೆ ಬಹಳ ಚೀಪ್ ವಿಷಯ ಎಂದು ಅವಳು ತಿಳಿದುಕೊಂಡಿದ್ದಳು.ಆದರೆ ಈಗ ಅಣ್ಣಂದಿರು ಜಾಗ ಮಾರಿ ನನ್ನ ಮದುವೆ ಮಾಡಿ ಎಂದು ಹೇಳಿದಾಗ.. ನನ್ನ ತಮ್ಮ ಹೇಳುತ್ತಿದ್ದಾನೆ..ಹಪ್ಪಳ ಸಂಡಿಗೆಗಳನ್ನು ಮಾರಿ ಆದರೂ ನನ್ನ ಅಕ್ಕನ ಮದುವೆ ಮಾಡುತ್ತೇನೆ..ಜೀವನದಲ್ಲಿ ನನ್ನ ಭಾಗ್ಯದ ಬಾಗಿಲು ಎಷ್ಟು ತೆರೆಯುತ್ತೋ ಎಂದು ನನಗೆ ಗೊತ್ತಿಲ್ಲ...ಆದರೆ ನನ್ನ ಅಕ್ಕನ ಭಾಗ್ಯದ ಬಾಗಿಲು ಮುಚ್ಚಲು ನಾನು ಬಿಡಲಾರೆ..ಎಂದು.
ಸುಕನ್ಯಾ ಳಿಗೆ ತಡೆದು ಕೊಳ್ಳಲು ಆಗಲೇ ಇಲ್ಲ.. ಅವಳ ಕಣ್ಣಲ್ಲೂ ಕಣ್ಣೀರು ಗಳಗಳನೇ ಹರಿಯಿತು.ಅವಳಿಗೂ ತಲೆ ಎತ್ತಿ ತನ್ನ ಒಡಹುಟ್ಟಿದ ತಮ್ಮ ಜಯರಾಮನನ್ನು ನೋಡಲು ಆಗಲೇ ಇಲ್ಲ.
ಆದರೆ ಒಬ್ಬರು ಸುನಂದಮ್ಮ ಮಾತ್ರ ಅಲ್ಲಿ ತಲೆ ಎತ್ತಿಕೊಂಡು ನಿಂತಿದ್ದರು.
ಅವರ ಕಣ್ಣಲ್ಲೂ ನೀರಿತ್ತು. ಆದರೆ ವಾಸ್ತವವಾಗಿ ಅದು ಆನಂದಬಾಷ್ಪದ ಪನ್ನೀರಾಗಿತ್ತು..
ಯಾಕೆಂದರೆ ಇಡೀ ಮನೆಗೆ ಯಾರ ಮೇಲೆ ವಿಪರೀತ ಭರವಸೆ ಇತ್ತೋ ಅವರೆಲ್ಲರೂ ಕೊನೆಯಲ್ಲಿ ಕೈ ಕೊಟ್ಟಾಗ,ಯಾರಿಗೂ ಬೇಡವಾಗಿದ್ದ ಮನೆಯ ಕಿರಿಯ ಮಗ ಒಬ್ಬ...ನಾನಿದ್ದೇನೆ ಯಾರೂ ಹೆದರಬೇಡಿ ಎಂದು ಹೇಳುವ ಮೂಲಕ ಮನೆಯ ಎಲ್ಲರ ಭಾಗ್ಯದ ಬಾಗಿಲು ತೆರೆದಿದ್ದ.
ಅಲ್ಲಿಂದಲೇ ತಾವು ನಂಬಿದ್ದ ಮಹಾಗಣಪತಿಗೆ ಮನದಲ್ಲಿಯೇ ನಮಸ್ಕರಿಸಿದರು ಸುನಂದಮ್ಮ.
ಆ ಸಮಯದಲ್ಲಿಯೇ ಶ್ಯಾಮರಾಯರ ಮೊಬೈಲ್ ಮತ್ತೆ ರಿಂಗಣಿಸಿದ್ದು.ಗೆಳೆಯನ ಪ್ರತೀ ದಿನದ ಮಾಮೂಲಿ ಕಾಲ್.
ಫೋನ್ ರಿಂಗ್ ಟೋನ್ ಅದೇ..ಗಣೇಶ ಪಂಚರತ್ನಂ.
" ಜಯ ಗಣೇಶ.. ಜಯ ಗಣೇಶ.. ಜಯ ಗಣೇಶ ಪಾಹಿಮಾಮ್
ಜಯ ಗಣೇಶ.. ಜಯ ಗಣೇಶ.. ಜಯ ಗಣೇಶ ರಕ್ಷಮಾಮ್.. "
ತುಂಬಾ ಹೊತ್ತಾದರೂ ಶ್ಯಾಮರಾಯರು ಆ ಕಾಲ್ ಪಿಕ್ ಮಾಡಲೇ ಇಲ್ಲ. ಶ್ಲೋಕವನ್ನೇ ಕೇಳುವುದರಲ್ಲಿ ಮಗ್ನರಾಗಿದ್ದರು ಅವರು.
" ಜಯ ಗಣೇಶ" ಕಿವಿಗೆ ಬಿದ್ದಾಗ ಅವರಿಗನಿಸಿತು,ಹೌದು ನಾನು ಸೋತಿಲ್ಲ,ಜಯಿಸಿದ್ದೇನೆ.ದೊಡ್ಡ ಮಕ್ಕಳು ಕೈ ಬಿಟ್ಟಾಗ ಜೀವನದಲ್ಲಿ ಸೋತು ಹೋದೆ ಎಂದೇ ತಿಳಿದುಕೊಂಡಿದ್ದೆ.ಆದರೆ ಈಗ,ಇಲ್ಲ.. ನಾನು ಸೋತಿಲ್ಲ. ಭಗವಂತ ಗಣೇಶ,ನನ್ನ ಕಿರಿಯ ಮಗನ ಮೂಲಕ ನನ್ನನ್ನು ಕೊನೆಗೂ ಜಯಿಸುವಂತೆ ಮಾಡಿಬಿಟ್ಟ ಎಂದುಕೊಂಡು ಬಿಟ್ಟರು.
ಮಗನ ಕಡೆಗಿದ್ದ ಅವರ ತಾತ್ಸಾರ ಭಾವ ಕರಗಿ ಹೋಯಿತು,ಅವರಿಗೆ ಗೊತ್ತಿಲ್ಲದೇ ಅವರ ಕಣ್ಣಲ್ಲೂ ಸುಖದ ಕಣ್ಣೀರು ಒಂದು ಹಾಗೇ ಹರಿಯಿತು.ಚೌತಿಯ ಆ ದಿನ ರಾಯರ ಮನಸ್ಸಿನ ತುಂಬಾ ಅವರ ಆರಾಧ್ಯ ಗಣೇಶನೇ ಇದ್ದ.
ಶ್ಲೋಕವನ್ನು ಕೇಳುವುದರಲ್ಲಿಯೇ ತನ್ಮಯರಾಗಿದ್ದ ಶ್ಯಾಮರಾಯರು ಗೆಳೆಯನ ಪೋನ್ ಕಾಲ್ ಕೊನೆಯವರೆಗೂ ರಿಸೀವ್ ಮಾಡಲೇ ಇಲ್ಲ.
ಕುಮಾರಿ ಸೂರ್ಯಗಾಯತ್ರಿಯ ಮುದ್ದಾದ ಧ್ವನಿಯಲ್ಲಿ ಗಣೇಶ ಪಂಚರತ್ನಂ ಶ್ಲೋಕದ ರಿಂಗ್ ಟೋನ್,ಮತ್ತಷ್ಟು ಹೊತ್ತು ಹಾಗೇ ಮುಂದುವರಿದಿತ್ತು.... ಆ ಮನೆಯ ಹಾಲ್ ನಲ್ಲಿ.
" ಮುದಾ ಕರಾತ್ತಮೋದಕಂ
ಸದಾ ವಿಮುಕ್ತಿಸಾಧಕಂ
ಕಲಾಧರಾವತಂಸಕಂ
ವಿಲಾಸಲೋಕರಕ್ಷಕಮ್
ಅನಾಯಾಕೈಕನಾಯಕಂ
ವಿನಾಶಿತೇಭದೈತ್ಯಕಂ
ನತಾಶುಭಾಶುನಾಶಕಂ
ನಮಾಮಿ ತಂ ವಿನಾಯಕಮ್...."
.....................................................................................
Ab Pacchu
Moodubidire


Comments
Post a Comment