ಕುಶಲವೇ ಕ್ಷೇಮವೇ

(ವಿ.ಸೂ- ಈ ಕಥೆ ಕೇವಲ ಕಾಲ್ಪನಿಕವಾಗಿದ್ದು, ಒಂದು ವೇಳೆ ಈ ಕಥೆಯಲ್ಲಿ ಬರುವ ಪಾತ್ರಗಳು, ಹೆಸರುಗಳು, ಸ್ಥಳ, ಸನ್ನಿವೇಶ ಗಳಿಗೆ, ನಿಜ  ಜೀವನದಲ್ಲಿ ಯಾರೊಂದಿಗಾದರೂ ಅಥವಾ ಯಾರ ಕಥೆಗಾದರೂ ಹೋಲಿಕೆ ಕಂಡುಬಂದಲ್ಲಿ, ಸಾಮ್ಯತೆ ಇದ್ದಲ್ಲಿ ಅದು ಕೇವಲ ಕಾಕತಾಳೀಯ ಆಗಿರುತ್ತದೆಯೇ ಹೊರತು ಅದಕ್ಕೆ ಬರಹಗಾರರು ಹೊಣೆಯಲ್ಲ, ಜವಾಬ್ದಾರರಲ್ಲ!! -Ab Pacchu) 

.   .   .   .   .   .   .   .   .  .   .   .

        
        " ಕುಶಲವೇ_ಕ್ಷೇಮವೇ "

"ಮಳೆಯಲ್ಲಿ ನೆನೆದು ಬಂದಿದ್ದಿ  ಅಂತ ಕಾಣುತ್ತೆ, ಬಿಸಿ ಬಿಸಿ ಕಾಫಿ ಕುಡಿದು ಕೊಂಡು ಮಾತಾಡೋಣವೇ.. " ಅಂದೆ.

" ಬೇಡ.. " ಅಂದ.

" ಎಣ್ಣೆ..? " ಅಂದೆ.

" ಹಿಂದೆ ತುಂಬಾ ಕುಡಿತಿದ್ದೆ, ಈಗ ಕುಡಿಯೋದನ್ನು ಬಿಟ್ಟು ಬಿಟ್ಟಿದ್ದೀನಿ.. " ಅಂದ.

ನಿಮಗೊಂದು ಕಥೆ ಹೇಳ್ಬೇಕು ಎಂದು ರಾತ್ರಿ ಹೊತ್ತು, ನನ್ನ ಮನೆಯ ವಿಳಾಸ ಯಾರಿಂದಲೋ ಪಡೆದು ನನ್ನನ್ನೇ ಹುಡುಕಿಕೊಂಡು ನನ್ನ ಮನೆಗೇ ಬಂದಿದ್ದ.!! ಈಗ ನನ್ನೆದುರಿನ ಟೇಬಲ್ ನಲ್ಲಿ ಕುಳಿತುಕೊಂಡಿದ್ದಾನೆ. 
ನನಗೆ ಅವನ ಪರಿಚಯವಿಲ್ಲ! 

" ಎಲ್ಲಿಂದ ಬಂದದ್ದು..? " ಕೇಳಿದೆ.

" ಮದುವೆ ಮನೆಯಿಂದ..ನೇರವಾಗಿ ! " ಅಂದ.

"  ಯಾವ ಪ್ಲೇಸ್? " ಕೇಳಿದೆ.

" ಮದುವೆ ಬಂಟ್ವಾಳ ದಲ್ಲಿ .. " ಅಂದ.

" ಮದುವೆ ಎಲ್ಲಿ ಎಂದು ಕೇಳಿದ್ದು ಅಲ್ಲಾ.. ನೀವು ಎಲ್ಲಿಯವರು ಎಂದು ಕೇಳಿದ್ದು.. "ಅಂದೆ.

" BC Road... " ಅಂದ.

" ಹೆಸರು..? "

" ಕಥೆ ಹೇಳ್ತೀನಿ ಅಲ್ಲಾ, ಕಥೆಯಲ್ಲೇ ನನ್ನ ಹೆಸರು ಕೂಡ  ಹೇಳ್ತಿನಿ " ಅಂದ.

" ಆಯ್ತು ಹೇಳು" ಅಂದೆ.

ಕಥೆ  ಪೂರ್ತಿ ಹೇಳಿದ. ಪೂರ್ತಿಯಾಗಿಯೇ ಕೇಳಿಸಿಕೊಂಡೆ.

ಕಥೆ ಮುಗಿದ ಮೇಲೆ ಹೇಳಿದ,"ಬ್ರೋ ಬರೆದು ಏನೋ ಕೊಡ್ತಿಯಾ, ಆದರೆ ಇದೊಂದು ಕಾಲ್ಪನಿಕ ಕಥೆ ಎಂದು ಸೇರಿಸಿಯೇ ಬರೆದುಬಿಡು.!! ಯಾರಿಗೂ ಗೊತ್ತಾಗುವುದು ಬೇಡ. ಕೇವಲ ನನಗೆ  ಬೇಕಾದಾಗ  ಓದಿ ಕೊಳ್ಳಲು, ನನ್ನ ಮನಸ್ಸು ಹಗುರ ಮಾಡಿಕೊಳ್ಳಲು, ನನ್ನ ಕಥೆಯಿಂದಲೇ ನಾನು ಸ್ಫೂರ್ತಿ ಪಡೆಯಲು ನನಗೆ ನನ್ನ ಕಥೆ ಬೇಕು ಅಷ್ಟೇ, ಇಲ್ಲವೇ ನನ್ನಂತವರು ಯಾರಾದರೂ  ಇನ್ನೂ ಎಲ್ಲಾದರೂ  ಇದ್ದರೆ ನನ್ನ ಕಥೆ ಓದಿದ ಮೇಲೆ ಆದರೂ ಅವರು ಕೂಡ ತಮ್ಮನ್ನು ತಾವು ಬದಲಾವಣೆ ಮಾಡಿಕೊಳ್ಳುವಂತಾಗಬೇಕು. ಆ ರೀತಿಯಾಗಿ ನೀನು ನನ್ನ ಕಥೆ ಬರೆಯಬೇಕು..

.. ಓದಿದ ಯಾರಿಗೇ ಆದರೂ ಆ ಕಥೆಯಲ್ಲಿ ಇರುವುದು ನಾನೆಂದು ಗೊತ್ತಾದರೂ ಪರವಾಗಿಲ್ಲ, ಗೊತ್ತಾಗದಿದ್ದರೂ ಪರವಾಗಿಲ್ಲ, ಅದು ನನಗೆ ಚಿಂತೆ ಇಲ್ಲ. ಅದೇ ರೀತಿ ಓದುಗರಿಗೆ ಈ ಕಥೆಯ ನಾಯಕ  ನಾನೇ ಎಂದು ಗೊತ್ತಾಗದಿದ್ದರೂ ಕೂಡ  ಬೇಜಾರಿಲ್ಲ. ಆದರೆ ನಾನು ಈ ಕಥೆ ಓದಿಕೊಂಡಾಗ  ನನಗೊಬ್ಬನಿಗೆ  ಮಾತ್ರ ಅದು ಸ್ಪಷ್ಟವಾಗಿ ಗೊತ್ತಾಗುವಂತಿರಬೇಕು ಅಲ್ಲಿರುವುದು ನಾನೇ,ಅದರ ನಾಯಕನೂ ನಾನೇ ಮತ್ತು ಅದು ನನ್ನದೇ ಕಥೆ, ಎಂದು " ಅಂದ.

ಅವನ ಕಂಡಿಷನ್ ಏನೋ ತುಂಬಾನೇ ಉದ್ದವಾಗಿತ್ತು. 
ಅವನ ಗಡುಸಾದ ಮಾತಿನಂತೆ, ಅವನು ಅವನ ಕಥೆಯಲ್ಲಿ ಇರಲಿಲ್ಲ! ಇದ್ದಿದ್ದರೆ ಅದು ಬೇರೆಯದ್ದೇ ಕಥೆ ಆಗಿರುತ್ತಿತ್ತು!!

" ಆಯ್ತು ಪ್ರಯತ್ನ ಪಡ್ತಿನೀ" ಅಂದೆ.

ಅವನು ಎದ್ದು ಹೋದ.

ಇಲ್ಲಿಯ ತನಕ ಹೇಳಿದ್ದು  ಕಥೆಯಲ್ಲ. ನಿಜವಾದ ಕಥೆ ಇನ್ನು ಶುರುವಾಗಬೇಕು. 
ಹಾಗಾದರೆ ಮೇಲೆ ನಡೆದಿದ್ದು, ಅಂದರೆ ಅವನು ಬಂದದ್ದು, ಕಥೆ ಹೇಳಿದ್ದು ಕೂಡ ನನ್ನ ಕಾಲ್ಪನಿಕ ಕಥೆಯ ಮೊದಲ ಒಂದು ಭಾಗವೋ ಅಥವಾ  ಅವ ಹೇಳಿದ ಅವನ ಕಥೆಯ ಕೊನೆಯ  ಒಂದು ಭಾಗವೋ?

ಅವ ಹೇಳಿದ ಕಾರಣಕ್ಕೆ ನಾನು ಕಾಲ್ಪನಿಕ ಕಥೆ ಎಂದು ಶುರುವಲ್ಲಿ ಹಾಕಿ ಕೊಂಡದ್ದೋ,ಅಥವಾ ನಾನು ಕಾಲ್ಪನಿಕ ಕಥೆ ಎಂದು ಮೊದಲೇ  ಹೇಳಿದುದಕ್ಕಾಗಿ ಅವನ ಬಾಯಲ್ಲೂ ಸತ್ಯ ಕಥೆಯೊಂದನ್ನು  ಕಾಲ್ಪನಿಕ ಕಥೆ ಎಂದು  ಹೇಳಿಸಿದ್ದೆನೋ ? 
ಇಲ್ಲ ಅವನು ಕೂಡ ನನ್ನದೇ ಒಂದು  ಕಥೆಯೋ..!?

ಅದು ಗೊತ್ತಾಗಬೇಕಾದರೆ ನೀವು ಕಥೆ ಓದಲೇ ಬೇಕು. ಕಥೆ ಕೂಡ  ನಾನು ಹೇಳಲ್ಲ, ಕಥೆಯ ಪಾತ್ರ ಗಳೇ ನಿಮಗೆ ಎಲ್ಲವನ್ನೂ ಹೇಳುತ್ತೆ!

ಒಂದು ದಿನ ನಾನು ಅವನ ಕಥೆ ಬರೆದೆ.ಮೊದಲೇ ಹೇಳಿದಂತೆ ಈ ಕಥೆ ನಾನು ಹೇಳಲ್ಲ, ಅವನ ಕಥೆ ಅವನ ಬಾಯಿಯಿಂದಲೇ ಹೇಳಿಸುತ್ತೆನೆ 
ಹಾಗಾದರೆ ಬನ್ನಿ ಅವನ ಕಥೆ ಕೇಳುವ...

.............................................

ವಧು ವರರಿಗೆ ವಿಶ್ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದೆ. ಜಸ್ಟ್ ನಿಂತಿದ್ದೆ ಅಷ್ಟೇ .ಆದರೆ ಮನಸ್ಸು ಮಾತ್ರ ಅಲ್ಲಿರಲಿಲ್ಲ. ಅದೊಂದು ಹುಚ್ಚು ಕುದುರೆ, ಓಡ್ತಾನೆ ಇರುತ್ತೆ. ಲಗಾಮು ಹಾಕುವ ಕೆಲಸ ನಾನು ಕೂಡ ಯಾವತ್ತೂ ಮಾಡಿಯೇ ಇರಲಿಲ್ಲ . ಅದರ ಓಟ ನಿರಂತರ.

ಮದುವೆ ಫಂಕ್ಷನ್ ಗೆ ಹೋಗೊದು ನನಗೇನೂ ಹೊಸದಲ್ಲ,ವಧು ವರರಿಗೆ ವಿಶ್ ಮಾಡುವುದು ಕೂಡ ಹೊಸದೇನಲ್ಲ.ಎಲ್ಲಾ  ಮದುವೆ ಗಳಂತೆ ಇದು ಕೂಡ ಒಂದು ಮದುವೆ,ಆದರೆ ನನಗಲ್ಲ!   particular ಆಗಿ ಈ ಒಂದು ಮದುವೆಯಲ್ಲಿ  ವಿಶೇಷತೆ ಇದೆ,ಅದು ಕೂಡ ಕೇವಲ ನನಗೇ ಮಾತ್ರ. ಅಲ್ಲಿ ಮದುವೆ ಮಂಟಪದಲ್ಲಿ ಹಸೆಮಣೆ ಏರಿ ನಿಂತಿದ್ದಾಳೆ ಅಲ್ಲಾ ಮದುವೆ ಹುಡುಗಿ,ಹಾನ್ ಅವಳು ನನ್ನ ಹುಡುಗಿ.. ಶಾಲ್ಮಲಿ!!

ನಾನು ಇಷ್ಟ ಪಟ್ಟ ಹುಡುಗಿ ಶಾಲ್ಮಲಿ. ತುಂಬಾನೇ ಇಷ್ಟಪಟ್ಟಿದ್ದೆ. ಎಷ್ಟು ಇಷ್ಟ ಪಟ್ಟಿದ್ದೆ  ಎಂದರೆ ಅದು ನನ್ನ ಹೊರತು ಈ ಜಗತ್ತಿನಲ್ಲಿ ಬೇರೆ ಯಾರಿಗೂ ಗೊತ್ತಿರಲು ಸಾಧ್ಯವೇ ಇಲ್ಲ. ಸ್ವತಃ ಅವಳಿಗೂ ಗೊತ್ತಿರಲಿಕ್ಕಿಲ್ಲ!
ನನ್ನ ಪ್ರಕಾರ ಗೊತ್ತಿಲ್ಲ!

ತಾನು ಪ್ರೀತಿಸಿದ ಹುಡುಗಿಯ ಮದುವೆಗೆ ಬರುವುದು, ಉಡುಗೊರೆ ಕೊಡುವುದು,ಕಂಗ್ರಾಟ್ಸ್ ಹೇಳೋದು, ಕೊನೆಗೆ ಜೊತೆಯಲ್ಲಿ ನಿಂತಕೊಂಡು ಇಷ್ಟುದ್ದ ಹಲ್ಲು ಬಿಟ್ಟು ಪೋಟೊ  ತೆಗಿಸಿಕೊಳ್ಳುವ ಭಾಗ್ಯ ಯಾವ ಪಾಪಿ ಪ್ರೇಮಿಗೂ ಬರಬಾರದು.ಯಾವನೂ ಕೂಡ ಹೋಗುವುದೂ ಇಲ್ಲ. ಅದೊಂದು ತರಹ  ಇಷ್ಟವಿಲ್ಲದ ಮರಣದಂಡನೆ ಶಿಕ್ಷೆ ಯ ಹಾಗೆ.

ನಿಜ ಹೇಳಬೇಕೆಂದರೆ ನಾನು ಕೂಡ ಈ ಮದುವೆಗೆ ಬರಬೇಕೆಂದು ಇದ್ದವನಲ್ಲ, ತಪ್ಪಿಸಿಕೊಳ್ಳಲು ಎಲ್ಲಾ ರೀತಿಯ ಪ್ಲಾನ್ ಮಾಡಿದ್ದೆ. ಆದರೆ ಸೂರಜ್ ಮತ್ತು ಪ್ರಾಣೇಶ್  ನನ್ನನ್ನು ಇಲ್ಲಿಗೆ ಎಳೆದುಕೊಂಡು ಬಂದ್ದಿದ್ದರು. ಕ್ಲಾಸ್ ಮೇಟ್ ಮದುವೆ ಮಿಸ್ ಮಾಡಬಾರದು ಕಣೋ,  ಹೋಗುವ Jolly ಮಾಡುವ ಎಂದು ಮನೆಗೇ ಬಂದು ನನ್ನನ್ನು ಎತ್ತಿಕೊಂಡು ಹೋಗಿದ್ದರು. 
ಅವರಿಗಾದರೂ ಹೇಗೆ ಗೊತ್ತಿರಲು ಸಾಧ್ಯ ನಾನು ಶಾಲ್ಮಲಿ ಯನ್ನು ಪ್ರೀತಿಸಿದ್ದೆ ಎಂದು!

ಏಕೆಂದರೆ ನಾನು ಈ ಜಗತ್ತಿನ ಏದುರು ನಿಂತುಕೊಂಡು ಒಮ್ಮೆಯೂ ಕೂಗಿ ಹೇಳಿದವನಲ್ಲ ,ನಾನು ಶಾಲ್ಮಲಿ ಯನ್ನು ಪ್ರೀತಿಸುತ್ತೆನೆ ಎಂದು. ಕನಿಷ್ಟ ಪಕ್ಷ ಶಾಲ್ಮಲಿ ಗೂ ನಾನು ಹೇಳಿದವನಲ್ಲ!
ಒಂದು ವೇಳೆ ಹೇಳಿದ್ದರೂ ಕುಡಿದ ಮತ್ತಿನಲ್ಲಿ ಹೇಳಿರಬಹುದು. ಅದರೆ ಅದರ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ. ಕುಡಿದಾದ ಮೇಲೆ ನಾನು ಏನು ಮಾತಾಡುತ್ತೆನೋ ನನಗೆ ಗೊತ್ತಿರುವುದಿಲ್ಲ. ಆದರೆ ಒಂದಂತೂ ನಿಜ ಕುಡಿದವಾಗ ನಾನು  ಯಾವತ್ತೂ ಸುಳ್ಳು ಹೇಳಿದವನೇ ಅಲ್ಲ.

ಹಾಗಾಗಿ ಹೇಳಿರಲೂ ಬಹುದು. ಹಾಗಾದರೆ ಒಂದು ವೇಳೆ ನಾನು ಕುಡಿದಾಗ ಹೇಳಿದಿದ್ದರೆ.. ಶಾಲ್ಮಲಿ ಗೆ ನಾನು ಅವಳನ್ನು ಪ್ರೀತಿಸುತ್ತಿದ್ದ ವಿಷಯ ಗೊತ್ತಿತ್ತಾ? 
ನಿಜವಾಗಿಯೂ ನನಗೆ ಗೊತ್ತಿಲ್ಲ, ಏಕೆಂದರೆ ನಾನು ಆ ರಾತ್ರಿ ಏನು ಹೇಳಿದೆ ಎಂದು ಕೇವಲ ನನ್ನ ಶಾಲ್ಮಲಿ ಗೆ ಒಬ್ಬಳಿಗೇ ಗೊತ್ತು. ಆದರೆ ನಾನು  ಏನು ಹೇಳಿದೆ ಎಂದು ಒಮ್ಮೆಯೂ ಅವಳಲ್ಲಿ ನಾನು ಕೂಡ ಕೇಳಲಿಲ್ಲ, ಅವಳು ಕೂಡ ಬಾಯಿ ಬಿಟ್ಟು ಹೇಳಲಿಲ್ಲ. ಆದರೆ ಒಂದಂತು ನಿಜ.ಆ ರಾತ್ರಿ ನಾನು ಮಾತ್ರ ಏನೋ ಹೇಳಿದ್ದೆ!

ವದು ವರರಿಗೆ ವಿಶ್ ಮಾಡಲೆಂದು ನಿಂತಿದ್ದ ಸಾಲು ಮುಂದೆ ಮುಂದೆ ಹೋಯಿತು. ಇನ್ನೆನು ಸ್ಟೇಜ್ ಮೇಲೆ ಹತ್ತಿದರೆ, ಹತ್ತು ಜನರಾದರೆ ನನ್ನದೇ ಸರದಿ. ಯಾಕೋ ಗೊತ್ತಿಲ್ಲ ಹೃದಯ ಕ್ಕೆ ಕೈಹಾಕಿ ಪರಪರ ಕೆರೆದಂತೆ ಆಯಿತು. ಕೈಯಲ್ಲಿದ್ದ ಉಡುಗೊರೆ ಪ್ಯಾಕ್ ಅನ್ನು  ಸೂರಜ್ ಕೈಗಿತ್ತು, ಏನೂ ಹೇಳದೇ ಮದುವೆ ಹಾಲಿನಿಂದ ಸೀದಾ ಹೊರಗೆ ನಡೆದು  ಬಂದೆ. ಹಿಂದಿನಿಂದ ಸೂರಜ್, ಪ್ರಾಣೇಶ್ ವಾಯ್ಸ್ ಕೇಳಿಸುತ್ತಿತ್ತು.. ನಿಲ್ಲು ನಿಲ್ಲು..

ಬಸ್ ಹತ್ತಿ ಮನೆಗೆ ಹೊರಡಿದೆ. 
ಹಾಗೇ ಬಸ್ ಮುಂದೆ ಮುಂದೆ ಸಾಗುತ್ತಿತ್ತು, ನನ್ನ ಮನಸ್ಸು ಮಾತ್ರ ಹಿಂದೆ ಹಿಂದೆ ಓಡುತ್ತಿತ್ತು, ಅದೇ ನನ್ನ ಕಾಲೇಜು ಕಾರಿಡಾರ್ ಗೆ!
2010-13 ರ ಬ್ಯಾಚ್ ನಮ್ಮದು.

2010 ನೇ ಇಸವಿ, 1st Year. ನಾನು ಆವಾಗ  ಡಿಪ್ಲೊಮಾ ದ  ವಿದ್ಯಾರ್ಥಿ,Diploma in Electrical & Electronics Engineering ತೆಗೆದುಕೊಂಡಿದ್ದೆ. ಮಂಗಳೂರಿನ ಪ್ರತಿಷ್ಠಿತ ಪಾಲಿಟೆಕ್ನಿಕ್ ನಲ್ಲೇ ಸೀಟು ಸಿಕ್ಕಿತ್ತು.

ಅದು ಕಾಲೇಜಿನ ಮೊದಲ ದಿನ. 
ಆ ದಿನವೇ ನನಗೆ ನನ್ನ ಪ್ರಾಣ ಸ್ನೇಹಿತರು ಸಿಕ್ಕಿದ್ದು . ದಶಾಂತ್, ಶಶಾಂತ್, ರಕ್ಷಿತ್ ಶೆಟ್ಟಿ, ಚರಣ್.
ಇಂದಿಗೂ ಇವರೆಲ್ಲರೂ ನನ್ನ ಒಳ್ಳೆಯ ಗೆಳೆಯರೇ. 
ಅವರು ಮಾತ್ರವಲ್ಲ ಸುರತ್, ಪ್ರತೀಕ್ಷಿತ್, ಪ್ರವೀತ್, ಸಂದೀಪ್, ದ್ಯಾನೇಶ್, ಹೀಗೆ ಎಲ್ಲರೂ ಅಂದೇ ಸಿಕ್ಕಿದ್ದರು. 
ಆ ದಿನವನ್ನು ಹೇಗೆ ಮರೆಯಲಿ.

ಹೌದು ಅದೇ ದಿನವೇ  ನಾನು ನನ್ನ ಶಾಲ್ಮಲಿ ಯನ್ನು ನೋಡಿದ್ದು! ದೂರದಿಂದಲೇ ನೋಡಿ ಒಮ್ಮೆ ಕೈ ಮುಗಿಯ ಬೇಕು ಎಂದು ಅನ್ನಿಸಿತ್ತು. ಆ ಸೌಮ್ಯ ಮುಖಬಾವ, ಅವಳ ಸರಳತೆ, ಅವಳ ಸಹಜ ಸೌಂದರ್ಯ, ಆ ನಗು.ಎಲ್ಲವನ್ನೂ ನೋಡಿದರೆ ಧೈವಿಕ  ಭಾವ ಒಂದನ್ನು ಬಿಟ್ಟು ಬೇರೆನೂ ಭಾವ ಬರಲು ಸಾಧ್ಯವೇ ಇಲ್ಲವೇನೋ ಅನಿಸಿತು. ಅವಳೊಂತರ ಟ್ಯಾಬ್ಲೋ ದ ಮುಂದುಗಡೆಯ ಮೆರವಣಿಗೆಯಲ್ಲಿ ಸಾಗುವ ಶಾರದಾ ದೇವಿ ಯಂತೆ . ನಾನು ಮೆರವಣಿಗೆ ಯಲ್ಲಿ ದೇವಿ ಎದುರು ಮೈ ಮರೆತು ಕುಣಿಯುವ ಶಾರದಾ ಹುಲಿ . 
ನಾನು ನನ್ನನ್ನು ಮೊದಲ ಬಾರಿ ಕಳೆದುಕೊಂಡದ್ದು ಅವತ್ತೇ.

ಅವಳ ಮೇಲಿನ ಆ divine feel ನನ್ನಲ್ಲಿ ಯಾವತ್ತೂ ಇತ್ತು. ಅವಳನ್ನು ಹೆಸರಿಟ್ಟು ಕರೆದದ್ದು ಕೂಡ ನನಗೆ ನೆನಪಿಲ್ಲ. "ಮಾತಿನ ಕೊನೆಗೆ ಆಯ್ತು ದೇವರೆ.." ಎಂದೇ ಹೇಳುತ್ತಿದ್ದೆ
ಅಂದ ಹಾಗೆ ಅವಳು ನನ್ನ ಕ್ಲಾಸ್ ಮೇಟ್ ಆಗಿದ್ದರೂ ಕೂಡ ನಾನು ಅವಳನ್ನು ಸರಿಯಾಗಿ ಮಾತಾಡಿಸಿದ್ದು  ಫೈನಲ್ ಇಯರ್ ನಲ್ಲಿಯೇ!!

ಆದರೆ ಅವಳ ಕಡೆಗೆ ನನ್ನದೊಂದು ಸೆಳೆತ ಮಾತ್ರ ಪ್ರತಿದಿನವೂ ಇತ್ತು. ನಿರಂತರವಾಗಿತ್ತು ಮತ್ತು ಇಂದಿಗೂ ಇದೆ!

ಕ್ಲಾಸ್ ನಲ್ಲಿ ಅತ್ಯಂತ ಹೆಚ್ಚು ಹೈಟು ಅಂದರೆ ಅವಳೇ. ಚೆನ್ನಾಗಿ ಡಾನ್ಸ್ ಮಾಡುತ್ತಾಳೆ. ಅಷ್ಟೇ ಸುಮಧುರ ವಾಗಿ ಹಾಡುತ್ತಾಳೆ. Sports, ರನ್ನಿಂಗ್ ನಲ್ಲಿ ಎತ್ತಿದ ಕೈ. ಮಂಗಳೂರಿನಲ್ಲಿ ಹಾಸ್ಟೆಲ್ ಒಂದರಲ್ಲಿ ಉಳಿದು ಕೊಂಡಿದ್ದಳು. ಅವಳ ಊರು ಕಾಸರಗೋಡು.

ನನಗೆ ಅವಳ ಮುಂದೆ ಹೋಗಿ ನಿಂತುಕೊಳ್ಳಲು ಭಯವಾಗುತ್ತಿತ್ತು. ಅವಳು ಎದುರು ಬಂದು ನಿಂತರೆ ಹೃದಯದ ಬಡಿತ ದಿಕ್ಕು ತಪ್ಪುತ್ತಿತ್ತು. ಅವಳ ಮುಖ ನೋಡದೆ, ಮೇಲೆ ಇಲ್ಲವೇ  ಕೆಳಗೆ ನೆಲ ನೋಡುತ್ತಿದ್ದೆ. ಇಲ್ಲವೇ  ತಲೆತಗ್ಗಿಸಿ ಕೈ ಕಟ್ಟಿ ಕೊಂಡು ನಿಂತುಕೊಂಡು ಬಿಡುತ್ತಿದ್ದೆ. ಕೆಲವೊಮ್ಮೆ ಅವಳು  ಎದುರಿಗೇನೆ ನಡೆದುಕೊಂಡು ಕಾರಿಡಾರ್ ನಲ್ಲಿ ಬಂದರೆ, ದಾರಿ ತಪ್ಪಿಸಿಕೊಂಡು ದೂರ ಓಡಿ ಹೋಗುತ್ತಿದ್ದೆ. ಅವಳು ಮಾತ್ರ ಯಾವಾಗಲೂ ಶಾಂತ ಶಾರದೆ. ಅದೇ ತೇಜಸ್ಸು ಅದೇ ಸರಳತೆ.

ಅವಳು ದೂರ ಹೋದಾಗ ತುಂಬಾ ಬೇಕು ಎಂದು ಅನ್ನಿಸುತ್ತಿತ್ತು. ಹತ್ತಿರ ಬಂದಾಗ ಅವಳ ಕಣ್ಣಲ್ಲಿ ಕಣ್ಣು ಸೇರಿಸಲಾಗದೇ ಒಮ್ಮೆ ಆದಷ್ಟು ಬೇಗ ಓಡಿ ಹೋಗುವ ಅಂತ  ಅನ್ನಿಸುತ್ತಿತ್ತು. ನಾನು ಕೊನೆಯವರೆಗೂ ಮಾಡಿದ್ದು ಅದನ್ನೇ!! ಅದೇ ಬರೀ ಒಡುವುದು.

ಅವಳ ಕಡೆಗೆ ನನ್ನಲ್ಲಿ ಭಯ ಭಕ್ತಿ ಎರಡೂ  ಇತ್ತು. ಆ ಭಯದಲ್ಲಿಯೇ ನಿರ್ಮಲ ಪ್ರೀತಿ ಅಡಗಿತ್ತು. ಬಹುಶಃ ಈ ಜನ್ಮದಲ್ಲಿ ನನಗೆ ಅವಳಷ್ಟು ಇಷ್ಟವಾಗುವ ಹುಡುಗಿ ಬೇರೆ ಯಾರೂ ಇಲ್ಲವೇನೋ!

ಯಾಕೋ ಗೊತ್ತಿಲ್ಲ ಹೆಚ್ಚಿನ ಹುಡುಗರು ಕಾಲೇಜಿನಲ್ಲಿ ಅವಳ ಸುದ್ದಿಗೆ ಕೂಡ ಹೋಗುತ್ತಿರಲಿಲ್ಲ. ಅವಳು ಕೂಡ ಅಷ್ಟೇ ಅವಳಾಯಿತು ಅವಳ ಕೆಲಸವಾಯಿತು ಅಷ್ಟೇ. ಆದರೆ ಯಾರೇ ಮಾತಾಡಿಸಿದರೂ ತುಂಬಾನೇ ನಯ ವಿನಯದಿಂದ ಮಾತಾಡಿಸುತ್ತಿದ್ದಳು. ನನಗೆ ಅವಳಲ್ಲಿ ಅವಳ ಸೌಂದರ್ಯ ಕ್ಕಿಂತ ಜಾಸ್ತಿ ಇಷ್ಟ ಆಗಿದ್ದು ಅದೇ.

ಕಾಲೇಜಿನಲ್ಲಿ ಪಾಠ ಕೇಳುವ ಆಸಕ್ತಿ ಕಡಿಮೆ ಇತ್ತು. ಲಾಸ್ಟ್ ಬೆಂಚಿನಲ್ಲಿ ಕೂತುಕೊಂಡು ಅವಳನ್ನೇ ದಿನವಿಡೀ ಗಮನಿಸುವುದು ನನ್ನ ಕೆಲಸವಾಗಿತ್ತು. ನಾನು ಅವಳನ್ನೇ ನೋಡುವಾಗ ಅವಳೇನಾದರು ಹಿಂದೆ ತಿರುಗಿ ನೋಡಿದರೆ ಹೃದಯ ಸ್ಥಬ್ಧ ವಾದಂತೆ ಆಗುತ್ತಿತ್ತು. ಅವಳು ನನ್ನನ್ನು ಗಮನಿಸಿ ಸುಮ್ಮನೆ ಹಾಗೇ ನಕ್ಕು ಬಿಡುತ್ತಿದ್ದಳು. ಆವಾಗಲೆಲ್ಲ 1000 watt ಬಲ್ಬು  ಒಮ್ಮೆಲೇ ಉರಿದಂತೆ ಭಾಸವಾಗುತ್ತಿತ್ತು. ನಾನು ಆವಾಗಲೆಲ್ಲ ನಾನಾಗುತ್ತಿರಲಿಲ್ಲ. ಎಲ್ಲೊ ತೇಲಿಕೊಂಡು ಹೋದ ಹಾಗೆ ಫೀಲ್ ಆಗ್ತಾ ಇತ್ತು. 
ಆ ದಿನಗಳು, ಆ ಕ್ಷಣಗಳು ಅದೆಷ್ಟು ಚಂದ ಇತ್ತು.

ಕಾಲೇಜು ಲೈಫ್ ಏನೋ ಚೆನ್ನಾಗಿಯೇ ಇತ್ತು. ಗೆಳೆಯರ ಬಳಗ ದೊಡ್ಡದೇ ಇತ್ತು. ನಾನು ಶಶಾಂತ್, ದಶಾಂತ್, ರಕ್ಷಿತ್ ಹೆಚ್ಚಾಗಿ ಒಟ್ಟಿಗೆಯೇ ಇರುತ್ತಿದ್ದೆವು. ಒಟ್ಟಿಗೆ ತಿರುಗುತ್ತಿದ್ದೆವು.

ಒಬ್ಬೊಬ್ಬರದ್ದು ವಿಚಿತ್ರ character. ರಕ್ಷಿತ್  ಗೆ ನಾವು ಕ್ಲಾಸ್ ನ ಲೌಡ್ ಸ್ಪೀಕರ್ ಅಂತಾನೇ ಕರೆಯುತ್ತಿದ್ದೆವು. ಅವನು ಬೊಬ್ಬೆ ಹಾಕದೇ ಮಾತಾಡುವುದೇ ಇಲ್ಲ. ಅವನಿಗೆ ಮಂಗಳೂರಿನ ಗಲ್ಲಿ ಗಲ್ಲಿಯೂ ಗೊತ್ತು. ಎಲ್ಲಾದರೂ ಪರ್ಚೆಸ್ ಮಾಡ್ಲಿಕ್ಕೆ ಇದ್ದರೆ ಚೊರೆಪಟ್ ಮಾಡಿ ಅತ್ಯಂತ ಕಡಿಮೆ ಬೆಲೆಗೆ ಹೇಗೆ ಕೊಂಡುಕೊಳ್ಳಬೇಕು ಎಂದು ಅವನಿಗೆ ಚೆನ್ನಾಗಿಯೇ ಗೊತ್ತು.

ಅವನಿಗೂ ದಶಾಂತ್ ಗೂ ಭಯಂಕರ ಸ್ನೇಹ. ಇಬ್ಬರೂ NCC ಯಲ್ಲಿ ಇದ್ದರು. ಡೈಲಿ ಜಗಳ ಆಡ್ತಾ ಇರ್ತಾರೆ. ಆದರೂ ಭಯಂಕರ ಕ್ಲೋಸ್. ಇಬ್ಬರದ್ದೂ ಒಂದೇ ತಿಂಗಳು ಬರ್ತಡೇ ಬೇರೆ, ಹಾಗಾಗಿ ಇಬ್ಬರೂ ಒಂದೇ ರೀತಿಯ ಡ್ರೆಸ್ ಪರ್ಚೆಸ್ ಮಾಡಿಕೊಂಡು, ಅದನ್ನು ಒಬ್ಬರಿಗೆ ಒಬ್ಬರು ಗಿಫ್ಟ್ ಮಾಡಿಕೊಂಡು ಅದನ್ನೇ ಕಾಲೇಜಿಗೆ ಹಾಕಿಕೊಂಡು ಬರುತ್ತಿದ್ದರು. ಕಾಲೇಜಿನಲ್ಲಿ ನೆನಪಿದ್ದ ಹಾಗೆ ಮೊದಲು ಲ್ಯಾಪ್‌ಟಾಪ್ ತೆಗೆದುಕೊಂಡಿದ್ದು ಅವನೇ ಇರಬೇಕು.ಅವನ ಲ್ಯಾಪ್ ನಲ್ಲಿಯೇ ನಾವು ದಶಾಂತ್ ನ ಹಾಸ್ಟೆಲ್ ನಲ್ಲಿ ಮೂವಿ ನೋಡುತ್ತಿದ್ದೆವು. ಹಣ ಮಾಡಬೇಕು, ದೊಡ್ಡ ಜನ ಆಗ್ಬೇಕು ಅನ್ನುವುದು ಅವನಲ್ಲಿ ಆಗಲೇ ಇತ್ತು. 
ನನ್ನ ಒಳ್ಳೆಯ ಗೆಳೆಯ ರಕ್ಷಿತ್. 

ಇನ್ನು ಶಶಾಂತ್, ತೆಲುಗು ಮೂವಿಗಳ ಭಯಂಕರ ಪ್ಯಾನ್. ದೊಡ್ಡ ಸ್ಟಾರ್ ಗಳ ಯಾವುದೇ ಹೊಸ ತೆಲುಗು ಮೂವಿ ಯನ್ನು ನೋಡದೇ ಬಿಡುತ್ತಿರಲಿಲ್ಲ . ಅದೇ ರೀತಿ ತನ್ನ ಊರಿನ ಬಗ್ಗೆ ಭಯಂಕರ ಹೆಮ್ಮೆ. ಬಿಟ್ಟು ಕೊಡುವುದೇ ಇಲ್ಲ. ತುಂಬಾನೇ ಬ್ರಿಲಿಯಂಟ್ ಸ್ಟೂಡೆಂಟ್. ಅವನಿಗೆ ಫೋಟೊಗ್ರಾಫಿ ಹುಚ್ಚು.

ನಾನೆಂದರೆ ಅವನಿಗೆ ತುಂಬಾನೇ ಇಷ್ಟ. ಅವನ ಅತ್ಯಂತ ಕ್ಲೋಸ್ ಫ್ರೆಂಡ್ ಅಂದರೆ ಅದು ನಾನೇ . ನನ್ನ ಮೇಲೆ ತುಂಬಾ ಕೇರ್ ತೋರಿಸುತ್ತಿದ್ದ. ನಾನು ಕುಡಿಯುವುದು, ಧಮ್ ಹೊಡೆಯುವುದು ಆತನಿಗೆ ಇಷ್ಟವಾಗುತ್ತಿರಲಿಲ್ಲ. ಕುಡಿದಾಗಲೆಲ್ಲ ನನ್ನ ಪೋನ್ ಗೆ  ಕಾಲ್ ಮಾಡಿ ವಿಚಾರಿಸುತ್ತಿದ್ದ. ಅವನೊಂತರ  ಹೃದಯ ಗೆದ್ದ ಗೆಳೆಯ. ನನಗೇ ಜಾಸ್ತಿ ಆಗಿ ಯಾರು ಬೈಯುತ್ತಿರಲಿಲ್ಲ ಆದರೆ ಆ ಸಲುಗೆ  ಶಶಾಂತ್ ಗೆ ಮಾತ್ರ ಇತ್ತು. He is my best friend for ever  ನನ್ನ ಬೆಸ್ಟ್ ಫ್ರೆಂಡ್ ಗಳ ಸಾಲಿನಲ್ಲಿ ಅವನು ಮಾತ್ರ ಯಾವಗಲೂ ಮೊದಲ ಸ್ಥಾನದಲ್ಲೇ ಇರುತ್ತಾನೆ, ಎಂದಿಗೂ . 

ಇನ್ನು ಉಳಿದದ್ದು ದಶಾಂತ್. ಅವನೊಂತರ ವಿಚಿತ್ರ ಅಸಾಮಿ. ಬೇಕಾದರೆ ದಿನಾಲೂ ಮನೆಗೇ ಹೋಗಿ ಬರಬಹುದು. ಆದರೆ ಅವನು ಕಾಲೇಜು ಹಾಸ್ಟೆಲ್ ನಲ್ಲಿ ತಂಗಿದ್ದ. ಅವನ ಹಾಸ್ಟೆಲೇ ನಮಗೆ ಕಾಲೇಜು ಗೆ ಬಂಕ್ ಹೊಡೆದಾಗ ರೆಸ್ಟ್ ರೂಮ್, ಗೆಸ್ಟ್ ರೂಮ್ ಎಲ್ಲಾ. 
ಅವನಿಗೆ ಕಂಡದ್ದೆಲ್ಲವೂ ತಾನು ಮಾಡಬೇಕೆನ್ನುವ ಹುಚ್ಚು. ಆದರೆ ಭಯಂಕರ ಉದಾಸೀನ ದ ಮಾರಿ, ಯಾವುದನ್ನೂ ಸರಿಯಾಗಿ ಮಾಡಲ್ಲ, ಹೋದಲ್ಲಿ ಎಲ್ಲಾ ನಾಚಿಕೆಟ್ತಾನೆ . ಎಲ್ಲರೂ ಅವನನ್ನು ದಚ್ಚು ಎಂದು ಕರೆಯುತ್ತಿದ್ದರು ಆದರೆ ನಾನು ಮಾತ್ರ ಅವನನ್ನು ಕವಿ ಎಂದೇ ಕರೆಯುತ್ತಿದ್ದೆ. ಕಾಲೇಜಿನಲ್ಲಿ ಏನೇನೋ ಕಥೆ ಕವನ ಅಂತ ಬರೆದು ಹಾಕ್ತ ಇದ್ದ ಹಾಗಾಗಿ.

ಹಾಸ್ಟೆಲ್ ನಲ್ಲಿ ಊಟ ಇದ್ದರೂ ಅವನು ನಮ್ಮ ಜೊತೆಗೆ ಕದ್ರಿ ದೇವಸ್ಥಾನ ಕ್ಕೆ ಊಟಕ್ಕೆ ಬರ್ತಾ ಇದ್ದ. ನಾನು ಸಂಜೆ ಕಾಲೇಜು ಬಿಟ್ಟಾಗಲೆಲ್ಲ ಒಮ್ಮೊಮ್ಮೆ ಅವನ ಹಾಸ್ಟೆಲ್ ನಲ್ಲಿ ಯೇ ಕಾಲಕಳೆಯುತ್ತಿದ್ದೆ. ವಾಪಸ್ ಮನೆಗೆ ಹೋಗುವಾಗ ನನ್ನೊಟ್ಟಿಗೆ  ಬಸ್ ಸ್ಟಾಫ್ ವರೆಗೆ ಅವನು ಕೂಡ ಬರ್ತಾ ಇದ್ದ. ಸತ್ಯ ಹೇಳುತ್ತೆನೆ 
ದಶಾಂತ್ ನನ್ನ ಒಂಥರಾ ಫ್ರೆಂಡ್. ಇಷ್ಟನೂ ಆಗುತ್ತಾನೆ, ಒಮ್ಮೊಮ್ಮೆ ಅಷ್ಟೇ ಕಷ್ಟ ನೂ ಆಗುತ್ತಾನೆ!

ಇನ್ನು ಉಳಿದ ಗೆಳೆಯರಲ್ಲಿ ಸುರತ್ ಒಬ್ಬ ,ಎಣ್ಣೆ ಪಾರ್ಟಿ ಇದ್ದರೆ ತಪ್ಪದೇ ನನ್ನನ್ನು ಕರೀತಿದ್ದ. ನನಗೂ ಅವನಿಗೂ ದೋಸ್ತಿ ಹೆಚ್ಚಾಗಿದ್ದೇ ಎಣ್ಣೆಯಲ್ಲಿ. ಇನ್ನು ಚರಣ್ ಊರಲ್ಲಿ ಜಾತ್ರೆ ಬಂದರೆ ಸಾಕು. ನಮ್ಮನೆಲ್ಲಾ ಎಳೆದುಕೊಂಡು ಹೋಗ್ಬಿಡುತ್ತಿದ್ದ. ಅವನು ಕೂಡ ಒಳ್ಳೆಯ ಗೆಳೆಯನೇ.

ನಾನು ಶಶಾಂತ್, ದಶಾಂತ್, ರಕ್ಷಿತ್ ಶೆಟ್ಟಿ ಹೆಚ್ಚಾಗಿ ಮೂವಿ ಗಳಿಗೆ ಒಟ್ಟಿಗೆ ಹೋಗುತ್ತಿದ್ದೆವು. ಆಗ ನೋಡಿದ ಕನ್ನಡ ಮೂವಿಗಳು ಈಗಲೂ ನೆನಪಿದೆ . ಜಾಕಿ, ಮನಸಾರೆ.. etc etc.. ದಶಾಂತ್ ಅಂತು ಮೂವಿ ಥಿಯೇಟರ್ ಗೆ ಕಾಲಿಟ್ಟದ್ದೇ ನಮ್ಮೊಡನೆ ಸೇರಿದ ಮೇಲೆ ಅಂತೆ. ಅವನಿಗೆ ತಮಿಳು ತೆಲುಗು ಬಾಷೆ ಮೂವಿ  ಅರ್ಥ ಆಗಲ್ಲ. ನಮ್ಮೊಡನೆ ಸುಮ್ಮನೆ ಬಂದು ಜಸ್ಟ್ ವಿಡಿಯೋ ನೋಡಿದಂತೆ ತಮಿಳು ತೆಲುಗು ಮೂವಿ ನೋಡಿ ಹೋಗ್ತಾ ಇದ್ದ. ಅವನಿಗೆ ಆ ಭಾಷೆಗಳ ಸಂಭಾಷಣೆ ಯೇ ಅರ್ಥ ಆಗುತ್ತಿರಲಿಲ್ಲ. 

ಅಂದ ಹಾಗೆ ನಾನು ನನ್ನ ಬಗ್ಗೆ ಇನ್ನೂ ಹೇಳಿಯೇ ಇಲ್ಲ. 
ನಾನು ಕುಶಾಲ್.
ನನಗೆ ಚಿಕ್ಕಂದಿನಿಂದಲೂ ರಜನೀಕಾಂತ್ ಅಂದರೆ ತುಂಬಾನೇ ಇಷ್ಟ. ರಜನೀಕಾಂತ್ ನ acting ಮಾತ್ರ ವಲ್ಲ, ರಜನೀಕಾಂತ್ ನ ಸಹಾಯ ಮಾಡುವ ಗುಣ, ಸರಳತೆ ಕೂಡ  ತುಂಬಾನೇ ಇಷ್ಟ. ತುಂಬಾನೇ ತಮಿಳು ಮೂವಿ ನೋಡ್ತೆನೆ.ಹಾಗಾಗಿ  ನನಗೆ ತಮಿಳು ಮಾತಾಡಲು ಕೂಡ ಬರುತ್ತೆ. ನನಗೆ ಇದ್ದದ್ದು ಒಂದೇ ಆಸೆ ಯಾವತ್ತಾದರೂ ಒಂದು ದಿನ ರಜನೀಕಾಂತ್ ಬೇಟಿ ಮಾಡಬೇಕು, ಅವರ ಜೊತೆ ಮಾತಾಡಬೇಕು ಎಂದು.

ಅದು ಬಿಟ್ಟರೆ ನಾನು ಕೂಡ ಒಬ್ಬ ಮೂವಿ ಡೈರೆಕ್ಟರ್ ಆಗಬೇಕು ಅನ್ನುವುದು ನನ್ನ ಬಾಳಿನ ಬಹು ದೊಡ್ಡ ಕನಸಾಗಿತ್ತು. ಅದು ನನ್ನ close friends ಎಲ್ಲರಿಗೂ ಕೂಡ ಗೊತ್ತಿದ್ದ ವಿಷಯವೇ. ಅವರು ಎಲ್ಲರೂ ನನ್ನ ಕನಸಿಗೆ, ಆಸೆಗೆ ಪ್ರೋತ್ಸಾಹ ಕೊಡುತ್ತಿದ್ದರು. ಕುಶಾಲ್ ನೀನು ಮೂವಿ ಮಾಡು, ಆವಾಗ ಊರು ತುಂಬಾ ನಿನ್ನ ಮೂವಿಯ ಕಟೌಟು, ಫ್ಲೆಕ್ಸ್ ಎಲ್ಲಾ ಹಾಕಿ ನಾವು ಸಂಭ್ರಮಿಸುತ್ತೆವೆ ಅಂತ ಹೇಳ್ತಾ ಇದ್ದರು. Nice friends

ನಾನು ಹೇಳುತ್ತಿರುವ ಈ ಕಥೆಯಲ್ಲಿ ನಾನೇ ನಾಯಕ ಇರಬಹುದು. ಆದರೆ ಇಡೀಯ ಕ್ಲಾಸ್ ನ ಕಥೆಗೆ ನಾನೇ ನಾಯಕ ಎಂದು ಹೇಳಲಾರೆ.ಅಥವಾ ನನ್ನ ಕಥೆಯೇ ಎಲ್ಲರಿಗಿಂತ ಬೆಸ್ಟ್ ಎಂದು ಕೂಡ ಹೇಳಲಾರೆ. ಹಲವರ ಕಥೆಗಳು ಇದ್ದವು. ಅವರವರ ಕಥೆಗಳಲ್ಲಿ ಅವರೇ ನಾಯಕ. ಚೆನ್ನಾಗಿ ಬರೆದರೆ ನನ್ನ ಕಥೆಯನ್ನು ಮೀರಿಸುವಂತ ಅದ್ಭುತ ಕಥೆಗಳು ನಮ್ಮ ಕ್ಲಾಸ್ ನಲ್ಲೇ ಇನ್ನೂ ಹಲವಾರು ಇದ್ದವು! ಸಂಬಂಧ ಪಡದ ಸುದ್ದಿ ಗೆ ನಾನು ಹೋಗಲಾರೆ. ಹಾಗಾಗಿ ನಾನು ಆ ಕಥೆ ಗಳ ಬಗ್ಗೆ ಇಲ್ಲಿ ಮಾತಾಡಲಾರೆ.

ಕಾಲೇಜಿನ ಎರಡನೇ ವರ್ಷದಲ್ಲಿ ಲ್ಯಾಟರಲ್ ಎಂಟ್ರಿ ಸ್ಟೂಡೆಂಟ್ ಗಳ ಆಗಮನ ಆಯಿತು. ಅವರಲ್ಲಿ ನನಗೆ ತುಂಬಾನೇ ಕ್ಲೋಸ್ ಆದವರು ಸೂರಜ್ ಮತ್ತೆ ಪ್ರಾಣೇಶ್.ಫೈನಲ್ ಇಯರ್ ನಲ್ಲಿ ಅವರ ಪ್ರಾಜೆಕ್ಟ್ ಟೀಮ್ ನಲ್ಲಿಯೇ ನಾನು ಕೂಡ ಸೇರಿಕೊಂಡೆ.

ಹತ್ತು ಜನ ಸೇರಿಕೊಂಡು ಮೇಗಾ ಪ್ರಾಜೆಕ್ಟ್ ಒಂದನ್ನು ಮಾಡಿದೆವು. ನಾನು ಏನು ಕೂಡ  ಮಾಡುತ್ತಿರಲಿಲ್ಲ ಸುಮ್ಮನೆ ಅವರ ಜೊತೆಗೆ ಹೋಗುತ್ತಿದ್ದೆ ಅಷ್ಟೇ. ಕೆಲವೊಮ್ಮೆ ನಮ್ಮ ಜೊತೆಗೆ ದಶಾಂತ್ ಕೂಡ ಬರುತ್ತಿದ್ದ. ಅವನು ನಮ್ಮ ಟೀಮ್ ಅಲ್ಲ. ಆದರೆ ಅವನು ಕೂಡ ನನ್ನ ಹಾಗೆಯೇ ಅವರ ಟೀಮ್ ಅಲ್ಲಿ ಏನು  ಮಾಡ್ತಾ ಇರಲಿಲ್ಲ ಹಾಗಾಗಿ ಟೈಂ ಪಾಸ್ ಮಾಡಲು ನಮ್ಮ ಜೊತೆಗೆ ಬರುತ್ತಿದ್ದ. ದಶಾಂತ್ ಶಶಾಂತ್ ಒಂದೇ ಪ್ರಾಜೆಕ್ಟ್ ಟೀಮ್ ನಲ್ಲಿ ಇದ್ದವರು.

ನನ್ನ ಸ್ನೇಹಿತರಲ್ಲಿ ರಕ್ಷಿತ್, ದಶಾಂತ್, ಶಶಾಂತ್ ಎಲ್ಲರೂ ಪ್ರೀತಿಯಲ್ಲಿ ಬಿದ್ದವರೇ. ಅದು ನನಗೂ ಗೊತ್ತಿತ್ತು. ಆದರೆ ನಾನೊಬ್ಬ ಕಾಲೇಜಿನ ಮೊದಲ ದಿನವೇ ಪ್ರೀತಿಯಲ್ಲಿ ಬಿದ್ದಿದ್ದೆ ಎಂದು ಅವರಿಗೆ ಯಾರಿಗೂ ಗೊತ್ತೇ  ಇರಲಿಲ್ಲ. ಒಬ್ಬನ ಹೊರತು. ಅವನೇ ದಶಾಂತ್!

ಪೈನಲ್ ಇಯರ್ ನಲ್ಲಿ ಇರುವಾಗ ಒಂದು ದಿನ ಹೇಗೋ ಅವನಿಗೆ ಗೊತ್ತಾಯಿತು ಈ ವಿಷಯ.ಅವನಿಗೆ ಡೌಟ್ ಬಂದಿತ್ತು. ಒಂದು ದಿನ ರಾತ್ರಿ ಅವನ ರೂಮ್ ನಲ್ಲಿ ರಾತ್ರಿಯಿಂದ ಬೆಳಿಗ್ಗೆ ವರೆಗೆ OT  ಕುಡಿಯುತ್ತಾ ಕೂತಿದ್ದೆ. ದಶಾಂತ್ ಕುಡಿಯಲ್ಲ. ಆದರೆ ನಾನು ಕುಡಿದಾಗ ಅವತ್ತು ರಾತ್ರಿ ನನ್ನ ಜೊತೆಗೆ  ಮಾತಾಡಲು ಸಾತ್ ಕೊಟ್ಟಿದ್ದ ಬೆಳಿಗ್ಗೆ ವರೆಗೆ . ಆಗ ನಾನೇ ಎಲ್ಲಾ ಸತ್ಯ ವಿಷಯ ಅವನಿಗೆ ಬಾಯಿಬಿಟ್ಟಿದ್ದೆ.

ನನ್ನ ಈ ವಿಷಯ ಗೊತ್ತಾದಾಗ ಎಲ್ಲರಿಗಿಂತಲೂ ಜಾಸ್ತಿ ಖುಷಿ ಪಟ್ಟದ್ದು ಅವನೇ. ಶಾಲ್ಮಲಿ ಜೊತೆಗೆ ನಾನು ಮಾತಾಡ್ಲ ಅಂದ. ಬೇಡ ಎಂದು ಹೇಳಿದೆ. ಆದರೆ ಅವನೊಬ್ಬ ಹುಚ್ಚ. ಒಂದು ಸಂಜೆ ಹಾಸ್ಟೆಲ್ ನ ಎದುರಿನ ಜಗುಲಿಯಲ್ಲಿ  ಇರುವಾಗ ನನ್ನ ಮೊಬೈಲ್ ತೆಗೆದು ಅದರಿಂದ ಶಾಲ್ಮಲಿ ಗೆ ಕಾಲ್ ಮಾಡಿ ಮೊಬೈಲ್ ನನ್ನ ಕೈಗಿತ್ತು ಈಗ ಮಾತಾಡು ಅಂದ

ಎದೆ ಢವ ಢವ ಅನ್ನುತ್ತಿತ್ತು. ಅದೇ  ಫಸ್ಟ್, ನಾನು ಅವಳೊಂದಿಗೆ ಅಷ್ಟು ಹೊತ್ತು  ಮಾತಾಡಿದ್ದು.ಜಾಸ್ತಿ ಅಂದರೆ ಒಂದು ನಿಮಿಷ ಅಷ್ಟೇ! ಏನು ಮಾತಾಡ್ಬೇಕು ಅಂತ ಗೊತ್ತಾಗ್ಲಿಲ್ಲ ಹಾಗಾಗಿ ಏನೂ  ಜಾಸ್ತಿ ಮಾತಾಡಲು ಆಗ್ಲಿಲ್ಲ. ಫಸ್ಟ್ ಟೈಂ ಅಲ್ಲ ಹಾಗಾಗಿ. ಹೀಗೆ ನನಗೆ ಶಾಲ್ಮಲಿ ಯ ನಂಬರ್ ಸಿಕ್ಕಿದ್ದು.

ಆ ನಂತರ ನಾನು ದಿನಾಲೂ ಅವಳೊಂದಿಗೆ ಚಾಟ್ ಮಾಡಲು ಶುರು ಮಾಡಿದೆ. ಅವಳು ತುಂಬಾನೇ respect ಕೊಟ್ಟು ಮಾತಾಡಿಸುತ್ತಿದ್ದಳು. 
ನಮ್ಮ conversations ಬಹಳ ಬೇಗ ಮುಗಿದು ಬಿಡುತ್ತಿತ್ತು.

ನಿಧಾನವಾಗಿ ನನ್ನ ವಿಷಯ ಶಶಾಂತ್ ಗೂ ಗೊತ್ತಾಯಿತು. ನಾನೇ ಹೇಳಿದ್ದೆ. ಎರಡು ರಾತ್ರಿ ನಾನು, ದಶಾಂತ್, ಚರಣ್ ಹೆಜಮಾಡಿ  ಬೀಚ್ ನಲ್ಲಿ ಫುಲ್ ರಾತ್ರಿ ಕಳೆದಿದ್ದೆವು. ಮೇಲೆ ಆಕಾಶ ನೋಡುತ್ತಾ ಅಲ್ಲೇ ಬೀಚ್ ನಲ್ಲೇ ಮಲಗಿ ಕೊಂಡಿದ್ದೆವು.ಎಲ್ಲರೂ ತಮ್ಮ ತಮ್ಮ ಪರ್ಸನಲ್ ಸ್ಟೋರಿ ಗಳನ್ನು ಹೇಳಿಕೊಂಡೆವು. ಆವಾಗ ನಾನು ಕೂಡ  ನನ್ನ ಎಲ್ಲಾ ಸ್ಟೋರಿ ಮತ್ತೊಮ್ಮೆ ಸವಿವರವಾಗಿ ಹೇಳಿದ್ದೆ. ಈ ರೀತಿಯಾಗಿ ಚರಣ್ ಗೂ ವಿಷಯ ಗೊತ್ತಾದದ್ದು. ದಶಾಂತ್, ಶಶಾಂತ್, ಚರಣ್ ಬಿಟ್ಟರೆ ಹೆಚ್ಚಿನವರಿಗೆ ನಾನು ಕಾಲೇಜು ಬಿಡುವ ತನಕವೂ ನನ್ನ ವಿಷಯ ಗೊತ್ತೇ ಇರಲಿಲ್ಲ. ನಮ್ಮ ಜೊತೆ ಸದಾ ಇರುತ್ತಿದ್ದ ರಕ್ಷಿತ್ ಗೂ ಕೂಡ ಕೊನೆಯವರೆಗೂ ಗೊತ್ತೆ ಇರಲಿಲ್ಲ!

ನನಗೆ ಶಾಲ್ಮಲಿ ಎಕ್ಸಾಂ ಟೈಂ ಅಲ್ಲಿ ಒಂದು ಪೆನ್ನು ಕೊಟ್ಟಿದ್ದಳು. ಅದನ್ನು ನಾನು ಅವಳಿಗೆ ಹಿಂದೆ ಕೊಡದೇ ಜಾಗ್ರತೆ ಯಾಗಿ ಹಾಗೇ ಇಟ್ಟುಕೊಂಡಿದ್ದೆ. ಅದು ಯಾವಾಗಲೂ ನನ್ನ ಜೊತೆಯೇ ಇರುತ್ತಿತ್ತು, ಆದರೆ ನಾನು ಯಾವತ್ತೂ ಅದನ್ನು ಬರೆಯಲು ಕೂಡ ಉಪಯೋಗಿಸಲಿಲ್ಲ.ಅದು ನನಗೊಂದು ಸ್ಫೂರ್ತಿ ಇದ್ದ ಹಾಗೆ, ನಾನು ಡೈರೆಕ್ಟ್ ಮಾಡುವ ಮೊದಲ ಮೂವಿ ಯ ಸ್ಕ್ರಿಪ್ಟ್ ಇದೇ ಪೆನ್ ಅಲ್ಲಿ ಬರೆಯಬೇಕೆಂದು  ಅಂದುಕೊಂಡಿದ್ದೆ.

ಅದೇ ರೀತಿ ನಾನು ಅವಳಿಗಾಗಿ ಹಾಡೊಂದು ಬರೆದಿದ್ದೆ. ದಶಾಂತ್ ಆ ಪದ್ಯ ಓದಿ ಬಹಳ ಚೆನ್ನಾಗಿದೆ ಇದನ್ನು ಶಾಲ್ಮಲಿ ಗೆ ಕೊಟ್ಟು ಬಿಡು. ಗ್ಯಾರಂಟಿ ನಿಂದು ಲವ್ ಸೆಟ್ ಆಗ್ತದೆ, ಅವಳು confirm ನಿಂಗೆ ಅಂದು ಬಿಟ್ಟ. ಅವನ ಆ ತರಹದ ಉತ್ಸಾಹವೇ ನನಗೆ ದಿಗಿಲು  ಹುಟ್ಟಿಸುತ್ತಿತ್ತು. ಯಾವಾಗಲೂ ಹೇಳ್ತಾ ಇದ್ದ ನೀನು ಓಕೆ ಅಂದ್ರೆ ನಾನು ಈಗಲೇ  ಹೋಗಿ ಶಾಲ್ಮಲಿ ಹತ್ರ ಮಾತಾಡಿ ನಿನ್ನ ಲವ್ ಓಕೆ ಮಾಡಿಸ್ತೆನೆ, ಹೇಗೆ ಹೋಗ್ಲಾ ಎಂದು ಕೇಳುತ್ತಿದ್ದೆ. ಆವಾಗಲೆಲ್ಲ ನಾನು ಅವನ ಕೈಹಿಡಿದು ದಮ್ಮಯ್ಯ ಮಾರಾಯ ಆ ತರಹದ ಕೆಲಸ ಒಂದು ಮಾಡ್ಬೇಡ ಎಂದು request ಮಾಡುತ್ತಿದ್ದೆ.

ಕೊನೆಗೂ ನಾನು ಆ ಪದ್ಯ ಅವಳಿಗೇ ಕೊಡಲೇ ಇಲ್ಲ. ಈಗಲೂ ನನ್ನ ಪರ್ಸ್ ನಲ್ಲೇ ಇದೆ ಆ ಪದ್ಯದ ಪತ್ರ. ಭದ್ರವಾಗಿ ಮಡಚಿ ಇಟ್ಟಿದ್ದೆನೆ.

ನಾನು ಅಂತೂ ಯಾವಾಗಲೂ ನನ್ನ ನೋಟು ಬುಕ್ ಗಳ ಮೇಲೆ KSL ಎಂದು ಬರೆಯುತ್ತಿದ್ದೆ. ಬೇರೆಯವರ ಪಾಲಿಗೆ ಅದು short ಆಗಿ Kushal ಆಗಿತ್ತು. ಅದರೆ ನನ್ನ ಪಾಲಿಗೆ ಮಾತ್ರ ಅದು Kushal+Shalmali+Love  ಎಂಬುದರ short form ಆಗಿತ್ತು.

ಅಂತು ಇಂತೂ  ಫೈನಲ್ ಇಯರ್ ನ ಕೊನೆಯ ದಿನಗಳೂ ಬಂತು. farewell ದಿನವೂ ಬಂತು. ಇದೊಂದು ದಿನ ಬರುತ್ತೆ ಅಂತ ಚೆನ್ನಾಗಿಯೇ ಗೊತ್ತಿತ್ತು. ಫೋನ್ ನಲ್ಲಿ ಚಾಟ್ ಮಾಡುತ್ತಿದ್ದರೂ ಕೂಡ ಎದುರು ಬದುರಾಗಿ ನಿಂತುಕೊಂಡು ನಾನು ಮತ್ತು ಶಾಲ್ಮಲಿ ಎಂದಿಗೂ ಮಾತಾಡಿದವರೇ ಅಲ್ಲ , ಅಂದ ಹಾಗೆ ಅಂದು ಕೂಡ ಮಾತಾಡಲೇ ಇಲ್ಲ!!

ಈ ರೀತಿಯಾಗಿ ಕಾಲೇಜಿನ ಮೊದಲ ದಿನದಿಂದ ಪ್ರಾರಂಭವಾದ ನನ್ನ ಮೊದಲ ಪ್ರೇಮ, ಕಾಲೇಜಿನ ಕೊನೆಯ ದಿನದಂದು ಸಹ,ಅಂತಹದ್ದು  ಏನೂ ಕೂಡ ಸಂಭವಿಸಿದೇ  ಕೊನೆಯಾಯಿತು...! 
ಆದರೆ  ನನ್ನ ಪ್ರೇಮ ಇನ್ನೂ ಕೊನೆಯುಸಿರೆಳೆದಿರಲಿಲ್ಲ.!

ಹೌದು ನನ್ನದು ಒಂದು ಸೈಡ್ ಲವ್ ಆಗಿತ್ತು. ಸರಿಯಾಗಿ ಅವಳಿಗೂ ಹೇಳಲಿಲ್ಲ.ರಾತ್ರಿ ಕುಡಿದು ಕಾಲ್ ಮಾಡಿದಾಗ  ಏನೋ ಒಂದು ಹೇಳಿದ್ದೆ ಅದು ಕೂಡ ಏನು ಎಂದು ನೆನಪಿಲ್ಲ. ಆದರೆ ನಾನು ಮಾತ್ರ ಅವಳನ್ನು ನಿಷ್ಕಲ್ಮಶವಾಗಿ ಪ್ರೀತಿಸಿದ್ದೆ. ಅದು ಮಾತ್ರ ಅವಳಿಗೆ ಗೊತ್ತಿಲ್ಲ ಅಷ್ಟೇ. ಇಲ್ಲ ಎಲ್ಲಾ ಗೊತ್ತಿದ್ದೂ ಸುಮ್ಮನಿದ್ದಳೇ ಅದೂ ಗೊತ್ತಿಲ್ಲ. 
ನಾನು  ಮೊದಲೇ ಸಂಕೋಚ ಸ್ವಭಾವದವನು. ಹುಡುಗಿಯರೊಂದಿಗೂ ಕೂಡ ಜಾಸ್ತಿ ಮಾತಾಡುತ್ತಿರಲಿಲ್ಲ.ಅದಕ್ಕೆ  ಸಂಕೋಚ ಒಂದು ಕಾರಣವಾದರೆ, ಶಾಲ್ಮಲಿ ಇನ್ನೊಂದು ಕಾರಣ. ಅವಳಿರುವಾಗ ನಾನ್ಯಾಕೆ ಬೇರೆ ಹುಡುಗಿಯರಿಗೆ ಹತ್ತಿರವಾಗಲಿ.ಅವಳ ಪಾಲಿಗೆ ಅವಳ ಕಣ್ಣಿಗೆ ನಾನು ಯಾವತ್ತೂ ಶ್ರೀ ರಾಮಚಂದ್ರ ನಂತೆಯೇ ಇರಬೇಕೆಂದು ನಾನು ಮೊದಲ ದಿನವೇ ಅಂದು ಕೊಂಡಿದ್ದೆ. ಕೊನೆಯ ದಿನದವರೆಗೂ ಹಾಗೇ ಇದ್ದೆ,ಈಗಲೂ ಹಾಗೆಯೇ ಇದ್ದೆನೆ!

ಶಶಾಂತ್ ಗೆ ಕಾಲೇಜಿನಲ್ಲಿಯೇ placement ಆಗಿ ಒಳ್ಳೆಯ ಕಂಪನಿಯಲ್ಲಿ ಜಾಬ್ ಆಯಿತು.ಬೆಂಗಳೂರಿಗೆ ಹೋದ. ದಶಾಂತ್ ಗೂ ಕಾಲೇಜಿನಲ್ಲಿಯೇ placement ಆಯಿತು. ಆದರೆ ಅವನು ಜಾಬ್ ಗೆ ಹೋಗಲಿಲ್ಲ. ಕೊನೆಯ ಕ್ಷಣದಲ್ಲಿ ತನ್ನ ನಿರ್ಧಾರವನ್ನು ಬದಲಾಯಿಸಿ engineering ಮಾಡಲು ಹೋದ. ರಕ್ಷಿತ್ ಗೆ ಬಳ್ಳಾರಿಯಲ್ಲಿ ಕೆಲಸ ಆಯಿತು. ಶಾಲ್ಮಲಿ ಗೆ ಯಾವುದೇ placement ಆಗಲಿಲ್ಲ. ಆದರೆ ಅವಳು ತನ್ನ ಅಣ್ಣ ಕೆಲಸ ಮಾಡುತ್ತಿದ್ದ ಚೆನ್ನೈ ನ ಕಂಪನಿಯಲ್ಲೇ ಕೆಲಸಕ್ಕೆ ಹೇಗೋ ಸೆರಿಕೊಂಡಳು. ಉಳಿದದ್ದು ನಾನು ಒಬ್ಬನೇ!

ಮಾಡಲು ಕೈಯಲ್ಲಿ ಕೆಲಸ ಇರ್ಲಿಲ್ಲ. ಅಣ್ಣಾ ಊರಿನಲ್ಲೇ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ. ಬಾ ಅಂದ. ಹೋಗಲು ಮನಸ್ಸು ಬರಲಿಲ್ಲ. ಈ ಕೆಲಸ ಎಲ್ಲಾ ನನಗೆ suit ಆಗಲ್ಲ, ನಾನು ಇನ್ನು ನಿರ್ದೇಶನ ದ ಕಡೆಗೆ ಜಾಸ್ತಿ ಫೋಕಸ್ ಆಗಿರಬೇಕು ಎಂದು ಮನಸ್ಸು ಹೇಳಿತು. ಆದರೆ ಅದಕ್ಕೆ ಏನು ಮಾಡಬೇಕೆಂದು ದೇವರಾಣೆ ಗೂ ನನಗೆ ಗೊತ್ತಿರಲಿಲ್ಲ. ಯಾಕೆಂದರೆ ಡೀಪಾಗಿ ಮನಸ್ಸಿನ ಆಳದಲ್ಲಿ ಇದ್ದದ್ದೂ ಒಂದೇ  ಅವಳೇ.. ಶಾಲ್ಮಲಿ!

ಕಾಲೇಜು ಮುಗಿದು ಒಂದು ವರ್ಷ ಆದರೂ ಸರಿಯಾದ ಕೆಲಸವೇ ಸಿಕ್ಕಿರಲಿಲ್ಲ. ಯಾಕೋ ಊರು ಬಿಟ್ಟು ಹೊರಗೆ ಹೋಗಲು ಕೂಡ ಮನಸ್ಸು ಆಗಲಿಲ್ಲ.ಕೈಯಲ್ಲಿ ಕಾಸಿಲ್ಲದಾಗ  ಸಿಕ್ಕಿದ ಕೆಲಸ ಮಾಡಿದೆ. ಪೈಂಟರ್, ಕ್ಯಾಟರಿಂಗ್, ಹೋಟೆಲ್ ಎಲ್ಲಾ. ಅಮ್ಮ ನ ಮುಂದೆ ಖರ್ಚಿಗೆ ದಿನಾಲೂ ಹಣ ಕೇಳಲು ಸ್ವಾಭಿಮಾನ ಅಡ್ಡ ಬರುತ್ತಿತ್ತು.

ಹಾಗೋ ಹೀಗೋ ಒಂದು ಕೆಲಸ ಸಿಕ್ಕಿತು. ತುಂಬಾ ಸಮಯ ದ ವರೆಗೆ ಅದೂ ಕೂಡ ಮಾಡಿದೆ. ನಂತರ ಅದು ಕೂಡ ಬಿಟ್ಟೆ. ಅಣ್ಣಾ ಪುನಃ ಕರೆದ ಕಂಪನಿ ಗೆ ಬಾ ನಾನು ಕೆಲಸ ಮಾಡಿಸಿಕೊಡುತ್ತೆನೆ ಎಂದು. ಮನೆಯಲ್ಲಿ ಎಲ್ಲಾ ಬೈದರು. ಅವನು ಅಷ್ಟು ಕರೆದರೂ ಹೋಗೋಕೆ ನಿನಗೇನು ರೋಗ, ಕೈಯಲ್ಲಿ ಬೇರೆ  ಏನೂ ಕೆಲಸ ಕೂಡ ಇಲ್ಲ. ಹೋಗು ಅಂದರು. ಒಲ್ಲದ ಮನಸ್ಸಿನಿಂದ ಯಾವದು ಇಷ್ಟ ಇಲ್ಲವೋ ಅದೇ ಕಂಪನಿಗೆ ಹೋದೆ.

ಜೀವನದಲ್ಲಿ ನನಗೆ ಏನು ಬೇಕು ಅಂದು ಕೊಂಡೆನೋ ಅದು ಯಾವತ್ತೂ ನನಗೆ ಸಿಗಲೇ ಇಲ್ಲ. ಪ್ರೀತಿ ,ನನ್ನ ಗುರಿ, ಕನಸ್ಸು ಎಲ್ಲವೂ.. ಇದರ ಮಧ್ಯೆ ಆಧ್ಯಾತ್ಮ ದ ಕಡೆಗೆ ಮನಸ್ಸು ವಾಲಿತು. ಪುಸ್ತಕ ಓದಲು ಶುರು ಮಾಡಿದೆ. ಲೈಬ್ರರಿ ಗೆ ಹೋದೆ.ದೊಡ್ಡ ದೊಡ್ಡ ನಿರ್ದೇಶಕ ರ ಇಂಗ್ಲಿಷ್ ಮೂವಿಗಳನ್ನು ಡೌನ್‌ಲೋಡ್ ಮಾಡಿಕೊಂಡು ನೋಡತೊಡಗಿದೆ. ನಿರ್ದೇಶನ ದ ಬಗ್ಗೆ ಸ್ವಲ್ಪ ಸ್ವಲ್ಪವೇ indirect ಆಗಿ ಅಭ್ಯಾಸಿಸಲು ಪ್ರಾರಂಭಿಸಿದೆ. ಸ್ಕ್ರಿಪ್ಟ್ ರೈಟಿಂಗ್ ಶುರುಮಾಡಿದೆ. ನಾನೇ ಕಥೆಗಳನ್ನು ಬರೆಯಲು ಶುರುಮಾಡಿದೆ.

ಗೆಳೆಯರೊಂದಿಗೆ contact ಇತ್ತು. ಇದರ ಮಧ್ಯೆ ಶಶಾಂತ್ DSLR ತಗೊಂಡ ಅದು ಅವನ dream ಆಗಿತ್ತು. ದಶಾಂತ್ ಈಗ ಅವನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಯಾವುದೇ ಕವನ ಕವಿತೆಗಳನ್ನು ಬರೀತಾ ಇಲ್ಲ. ಅವನಿಗೂ ಪೊಟೋಗ್ರಾಫ್ ಹುಚ್ಚು ಜೋರಾಗಿದೆ, ಅವನೂ  DSLR ತಗೊಂಡಿದ್ದಾನೆ. ಫೇಸ್ಬುಕ್ ಅಲ್ಲಿ ಪೇಜ್ ಮಾಡ್ಕೊಂಡು ನಿರಂತರವಾಗಿ ತಾನು ತೆಗೆದ ಫೋಟೋ ಗಳನ್ನು ಫೋಸ್ಟ್ ಮಾಡ್ತಾ ಇರ್ತಾನೆ. ರಕ್ಷಿತ್ ಕಂಪನಿಯಿಂದ ಕಂಪನಿಗೆ ಹಾರಿ ಸದ್ಯಕ್ಕೆ ಈಗ ಒಂದು ಒಳ್ಳೆಯ ಕಂಪನಿಯಲ್ಲಿ ಕೆಲಸ ಮಾಡ್ತಾ ಇದ್ದಾನೆ.

ಶಾಲ್ಮಲಿ ಗೆ ಮೆಸೇಜ್ ಮಾಡಲು ನನಗೆ ಭಯ. ಏನು ಮಾಡುತ್ತಿದ್ದಿಯಾ ಎಂದು ಕೇಳಿದರೆ ಏನೆಂದು ಉತ್ತರ ಕೊಡಲಿ. ಆದರೂ ಎಲ್ಲಾ ಹಬ್ಬಗಳಿಗೂ ವಿಶ್ ಮಾಡ್ತೆನೆ, ಅವಳೂ ಅಷ್ಟೇ ಎಲ್ಲದಕ್ಕೂ ರಿಪ್ಲೈ ಮಾಡ್ತಾಳೆ. ಬರ್ತಡೆ ದಿನ ನೆನಪು ಇಟ್ಟುಕೊಂಡು ವಿಶ್ ಮಾಡ್ತೆನೆ. ಅಷ್ಟೇ ಅದು ಬಿಟ್ಟು ಜಾಸ್ತಿ ಏನು ಮಾತುಕತೆ ಇಲ್ಲ.

ಕೊನೆಗೊಂದು ದಿನ ಅವಳಿಂದಲೇ ಮೆಸೇಜ್ ಬಂತು.ಅವಳಾಗಿ ಮೆಸೇಜ್ ಮಾಡುವುದು ತುಂಬಾನೇ ಕಡಿಮೆ. ಕುತೂಹಲ ತಡೆಯಲಾರದೇ  ಬೇಗ ಬೇಗ ಓಪನ್ ಮಾಡಿ ನೋಡಿದೆ. ನೋಡಿದರೆ ಅದು ಅವಳ wedding invitation ಆಗಿತ್ತು.!!
ನೀನು ಬರಲೇ ಬೇಕು ಕುಶಾಲ್ ಅಂತ ಕೊನೆಯಲ್ಲಿ ಬರೆದಿದ್ದಳು!!!

ಬಸ್ ನವನು ಬ್ರೇಕ್ ಹಾಕಿದಾಗಲೇ ನನ್ನ flashback ಗೇ ಬ್ರೇಕ್ ಬಿದ್ದದ್ದು. ಬಸ್ ನಿಂದ ಇಳಿದು ಮನೆ ಸೇರಿದೆ.ನಾನು ಇಷ್ಟ ಪಟ್ಟವಳು ಇಂದು ಬೇರೆಯವನನ್ನು ಮದುವೆ ಆಗಿದ್ದಾಳೆ. ಒಲ್ಲದ ಮದುವೆ ಗೆ ಹೋಗಿ ನಾನು ಅರ್ಧದಿಂದಲೇ ಓಡಿ ಬಂದಿದ್ದೆನೆ. ಯಾಕೋ ಮನಸ್ಸು ತುಂಬಾನೇ ಭಾರವಾಯಿತು. ಊಟವೂ ಮಾಡದೇ ಹಾಗೇ ನಿದ್ದೆಗೆ ಜಾರಿ ಬಿಟ್ಟೆ.

ಇದಾಗಿ ಒಂದೆರಡು ವರ್ಷ ಕಳೆಯಿತು. ಶಾಲ್ಮಲಿ ಗೆ ಮಗು ಕೂಡ ಆಯಿತು. ಮುದ್ದಾದ ಹೆಣ್ಣು ಮಗು. ನೈಸ್ ಬೇಬಿ ಎಂದು ಮಗುವಿನ ಫೋಟೊ ನೋಡಿ ಮೆಸೇಜ್ ಕಳುಹಿಸಿದ್ದೆ. ಆ ಸೈಡ್ ನಿಂದ ಥ್ಯಾಂಕ್ಸ್ ಕುಶಾಲ್ ಎಂದು ಮೆಸೇಜ್ ಬಂದಿತ್ತು.

ನಾನು ಆ ನಂತರ ಒಮ್ಮೆಯೂ ಅವಳಿಗೆ ಸಿಗಬಾರದು ಅಂದುಕೊಂಡಿದ್ದೆ. ಆದರೆ ಆ ನನ್ನ ಆಸೆಗೆ ಅಡ್ಡಿ ಬಂದದ್ದು ಪ್ರಮೋದಳ ಮದುವೆ!

ಪ್ರಮೋದ ಳೂ ಕೂಡ ನಮ್ಮ ಕ್ಲಾಸ್ ಮೇಟ್. ಮೇಲಾಗಿ ಶಾಲ್ಮಲಿ ಮತ್ತು ಪ್ರಮೋದ ಒಳ್ಳೆಯ ಸ್ನೇಹಿತೆಯರು. 
ಮಾತ್ರವಲ್ಲ ಫೈನಲ್ ಇಯರ್ ನಲ್ಲಿ ಪ್ರಮೋದ ಕೂಡ ನನಗೆ ಹುಡುಗಿಯರಲ್ಲಿಒಳ್ಳೆಯ ಫ್ರೆಂಡ್ ಆಗಿದ್ದವಳೇ.

ಪ್ರಮೋದ ಮೆಸೇಜ್ ಮಾಡಿ ಹೇಳಿದ್ದಳು ಮದುವೆಗೆ ನೀನು ಬರಲೇ ಬೇಕು ಕುಶಾಲ್. ಮಿಸ್ ಮಾಡ್ಬಾರ್ದು, ಬರದಿದ್ದರೆ ಮಾತಾಡಲ್ಲ ಎಂದು.

ನನಗೆ ಚೆನ್ನಾಗಿಯೇ ಗೊತ್ತಿತ್ತು ಆ ಮದುವೆಗೆ ಶಾಲ್ಮಲಿ ಬಂದೇ ಬರುತ್ತಾಳೆ ಎಂದು ! ಆದರೆ ಅವಳು ಬಂದರೆ ಅವಳನ್ನು ಎದುರಿಸಿ ನಿಲ್ಲುವ ಧೈರ್ಯ ನನಗಿಲ್ಲ! ಮದುವೆ ಗೆ ಬಂದವಳು,  ನನ್ನ ಕಣ್ಣಿಗೆ ಬೀಳದೇ ಇರುತ್ತಾಳೆಯೇ. ಕಣ್ಣಿಗೆ ಬಿದ್ದರೆ ಎದುರಿಗೆ ಬಂದು ನಿಲ್ಲದೇ ಇರುತ್ತಾಳೆಯೇ. ಆಗ ನಾನು ಏನು ಮಾಡಲಿ. ಅವಳ ಕಣ್ಣಲ್ಲಿ ಕಣ್ಣಿಟ್ಟು ಮಾತಾಡುವ ಗುಂಡಿಗೆ ನನ್ನಲಿಲ್ಲ.

ನನ್ನಂತಹ ಭಗ್ನ ಪ್ರೇಮಿ ಹುಡುಗರು ಯಾವತ್ತೂ, ತಾವು ಪ್ರೀತಿಸಿದ ಹುಡುಗಿ ತನ್ನ ಕ್ಲಾಸ್ ನವಳೇ ಆಗಿದ್ದರೆ, ತನ್ನ ಯಾವುದೇ ಕ್ಲಾಸ್ ಮೇಟ್ ಗಳ ಮದುವೆ ಗೆ ಖಂಡಿತವಾಗಿಯೂ ಹೋಗಲು ಇಷ್ಟಪಡುವುದಿಲ್ಲ. ಏಕೆಂದರೆ ಅಲ್ಲಿಗೆ ಹೋದರೆ ಅವರು ಪ್ರೀತಿಸಿದ ಹುಡುಗಿ ಬಂದೇ ಬರುತ್ತಾಳೆ. ಅವಳನ್ನು ಎದುರಿಸುವ ಧೈರ್ಯ ಅಂತೂ ಹೆಚ್ಚಾಗಿ ಯಾರಲ್ಲೂ ಇರಲ್ಲ. ಮತ್ತೆ ಅಂತಹ ಸನ್ನಿವೇಶ ಕ್ಕೆ ಒಳಗಾಗುವುದನ್ನು ಯಾರು ಕೂಡ ಬಯಸಲ್ಲ. ಅದೆಷ್ಟು ಕಷ್ಟ ಎಂದು ಅನುಭವಿಸಿದವರಿಗೆ ಮಾತ್ರ ಗೊತ್ತು.

ಹುಡುಗರು ಮಾತ್ರವಲ್ಲ ಕೆಲವೊಮ್ಮೆ ಹುಡುಗಿಯರಿಗೂ ಕೂಡ ಇದೇ ರೀತಿ ಆಗುವುದು ಉಂಟು. ತಾವು ಪ್ರೀತಿಸಿದ ಹುಡುಗನ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಅವರಿಗೂ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಹುಡುಗರು ಆಗಲಿ ಹುಡುಗಿಯರು ಆಗಲಿ ತಮ್ಮ ಕ್ಲಾಸ್ ಮೇಟ್ ನ  ಮದುವೆಗೆ ಹೋಗುವುದನ್ನು ತಪ್ಪಿಸಲು ನೋಡುತ್ತಾರೆ.ಆದರೆ ನನ್ನ ಹಣೆಬರಹ ಬೇರೆಯದ್ದೇ ಇತ್ತು.

ಪ್ರಮೋದಳ ಮದುವೆ ಯ ದಿನ ಬೆಳಿಗ್ಗೆ ಮತ್ತೊಮ್ಮೆ ಸೂರಜ್ ಮತ್ತು ಪ್ರಾಣೇಶ್ ನನ್ನ ಮನೆ ಮುಂದೆ ತಮ್ಮ ಕಾರಿನೊಂದಿಗೆ ಪ್ರತ್ಯಕ್ಷ ಆಗಿಬಿಟ್ಟಿದ್ದರು. ಪಾಪಿಗಳು ಯಾಕಾದ್ರೂ ಇಷ್ಟೊಂದು ಕರೆಕ್ಟ್ ಆಗಿ ಬರ್ತಾರೋ ಎಂದು ಅನಿಸಿತು. ಆದರೆ ಅವರ ತಪ್ಪಿಲ್ಲ ಬಿಡಿ, ಏಕೆಂದರೆ ಇವರಿಬ್ಬರಿಗೂ ನನ್ನ ಕಾಲೇಜ್ ಪ್ರೀತಿಯ ವಿಷಯ ಇನ್ನೂ ಗೊತ್ತೇ ಇಲ್ಲ!! . ನಾನು ಬರುವವರೆಗೆ ನನ್ನನ್ನು ಬಿಡ್ಲೇ ಇಲ್ಲ. ಕೊನೆಗೂ ನಾನು ಅವರೊಂದಿಗೆ ಹೊರಡಲೇ ಬೇಕಾಯಿತು. 

ಕುಂದಾಪುರ ದಲ್ಲಿ ಮದುವೆ.ಮರವಂತೆ ಎಲ್ಲಾ ತಿರುಗಾಡಿ ಕೊನೆಗೂ ಮದುವೆ ಹಾಲ್ ತಲುಪಿದೆವು. ಶಶಾಂತ್, ರಕ್ಷಿತ್ ಮದುವೆಗೆ ಬಂದಿರಲಿಲ್ಲ.ಅವರಿಗೇನೋ ಬೇರೆ ಕೆಲಸ ಇತ್ತು. ದಶಾಂತ್ ಕೂಡ ಬಂದಿರಲಿಲ್ಲ. ಆ ಪಾರ್ಟಿ ಇಲ್ಲದಿದ್ದರೂ ಬರುವುದಿಲ್ಲ. ಅವನಿಗೆ ಫಂಕ್ಷನ್ ಗಳೆಂದರೆ ಅಲರ್ಜಿ. ತನ್ನ ಹತ್ತಿರ ದ ರಿಲೇಟಿವ್ ಫಂಕ್ಷನ್ ಗಳಿಗೆ ಕೂಡ ಹೋಗುವವನಲ್ಲ  ಅವನು.

ಕಾರು ಹೊರಗೆ ನಿಲ್ಲಿಸಿ ಮದುವೆ ಹಾಲ್ ನ ಒಳಗೆ ಹೋದೆವು. ಕಣ್ಣು ಶಾಲ್ಮಲಿ ಯನ್ನೇ ಹುಡುಕುತ್ತಿತ್ತು. ಮನಸ್ಸಿನಲ್ಲಿ ಇದ್ದದ್ದು ಒಂದೇ ಪ್ರಾರ್ಥನೆ. ದೇವರೇ ಶಾಲ್ಮಲಿ ಒಂದು ಕಣ್ಣಿಗೆ ಬೀಳದೇ ಇರಲಿಯಪ್ಪಾ. 
ಇಲ್ಲ ಎಲ್ಲೂ ಅವಳ ಸುದ್ದಿ ಇಲ್ಲ.

ಮನಸ್ಸಿಗೆ ನೆಮ್ಮದಿ ಆಯಿತು. ವಧು ವರರಿಗೆ ವಿಶ್ ಮಾಡಲು ಸರತಿ ಸಾಲಿನಲ್ಲಿ ನಿಂತೆವು, ಸಾಲಿನ ಹಿಂದೆ ಮುಂದೆ ನೋಡಿದೆ. ಎಲ್ಲೂ ಅವಳ ಸುದ್ದಿ ಇಲ್ಲ.

ನಮ್ಮ ಸರದಿ ಬಂದಾಗ ಮೇಲೆ ಹೋಗಿ ಪ್ರಮೋದಳಿಗೆ ವಿಶ್ ಮಾಡಿ,ಉಡುಗೊರೆ ಕೊಟ್ಟು, ಗ್ರೂಪ್ ಫೋಟೋ ತೆಗೆಸಿಕೊಂಡೆವು. ನಾವು ಬಂದಿದ್ದು ಪ್ರಮೋದಳಿಗೆ ತುಂಬಾನೇ ಸಂತೋಷ ವಾಗಿತ್ತು. ಊಟ ಮಾಡಿ ಹೋಗಿ ಪ್ಲೀಸ್ ಅಂದಳು. ಆಯ್ತು ಎಂದು ಹೇಳಿ ಸ್ಟೇಜ್ ನಿಂದ ಕೆಳಗೆ ಇಳಿದೆವು. ಕೆಳಗೆ ಇಳಿಯುವಾಗ ಕೂಡ ಒಮ್ಮೆ ಹಾಲ್ ಪೂರ್ತಿ ನೋಡಿದೆ. ಇಲ್ಲ ಶಾಲ್ಮಲಿ ಬಂದಿಲ್ಲ. ಮನಸ್ಸಿಗೆ ಏನೋ ಸಮಾಧಾನ.

ಊಟ ದ ಹಾಲ್ ಗೆ ನಡೆದೆವು. ಕೂತುಕೊಂಡಿದ್ದು ಆಯಿತು, ಎಲೆ ಹಾಕಿ ಅದರ ಮೇಲೆ ಉಪ್ಪಿನಕಾಯಿ ಹಾಕಿದ್ದೂ ಆಯಿತು. ಆಗ ನಾನು ನೋಡಿದೆ ಅಲ್ಲಿ ಶಾಲ್ಮಲಿ ಯನ್ನು! ನನ್ನ ಎದುರಿನ ಟೇಬಲ್ ನಲ್ಲಿ ತನ್ನ ಪುಟ್ಟ ಮಗುವನ್ನು ಸಮಾಧಾನ ಪಡಿಸುತ್ತಾ ಕೂತುಕೊಂಡಿದ್ದಳು!! 
ಎದೆ ಒಮ್ಮೆಲೇ ಜಿಲ್ ಎಂದಂತಾಯಿತು.

ಅವಳು ನನ್ನನ್ನು ಗಮನಿಸಿರಲಿಲ್ಲ. ನಿಧಾನವಾಗಿ ಅವಳ ಗಮನಕ್ಕೆ ಬಾರದಂತೆ ಅಲ್ಲಿಂದ ಮೆಲ್ಲನೇ ಎದ್ದವನೇ ಒಂದೇ ಸಮನೇ ಹಾಲ್ ನ ಹೊರಗೆ ನಿಲ್ಲಿಸಿದ್ದ ಕಾರ್ ಕಡೆಗೆ ಓಡಿದೆ. ಸೂರಜ್, ಪ್ರಾಣೇಶ್ ಬೊಬ್ಬೆ ಹಾಕಿ ಕರೆಯುತ್ತಿದ್ದರು ನಿಲ್ಲು.. ನಿಲ್ಲು ಎಂದು. 

ಈ ರೀತಿಯಾಗಿ ಹೇಗೋ ಪ್ರಮೋದಳ ಮದುವೆಯಿಂದ ತಪ್ಪಿಸಿಕೊಂಡು ಓಡಿ ಬಂದಿದ್ದೆ. ಆ ನಂತರ ಸಿಕ್ಕಿದ್ದ ಸೂರಜ್ ಆಗಲಿ, ಪ್ರಾಣೇಶ್ ಆಗಲಿ.. ಈ ರೀತಿಯಾಗಿ ಎರಡು ಮದುವೆ ಯಿಂದ ಯಾಕೆ ಓಡಿ ಬಂದೆ ಎಂದು ನನ್ನ ಬಳಿ ಒಮ್ಮೆಯೂ ಕೇಳಿಯೇ ಇಲ್ಲ. ಯಾಕಂತ ನನಗೂ ಗೊತ್ತಿಲ್ಲ!

ವರ್ಷ ಗಳು ಉರುಳಿದವು. ನಾನಿದ್ದ ಕಂಪನಿಯಲ್ಲಿ ಚೆನ್ನಾಗಿ ಎಲ್ಲಾ ಕೆಲಸ ಕಲಿತುಕೊಂಡೆ. Expert ಆದೆ. ಇತರರಿಗೆ ಕೆಲಸ ಮಾಡಲು ಮಾರ್ಗದರ್ಶನ ನೀಡುವಷ್ಟರ ಮಟ್ಟಿಗೆ ಬೆಳೆದೆ.

ಆದರೆ ಯಾಕೋ ಬದುಕು ತುಂಬಾನೇ discontinue ಆಗಿತ್ತು. ನಾನು ನನ್ನ ಕನಸನ್ನು ಚೇಸ್ ಮಾಡುವಲ್ಲಿ ವಿಫಲ ಆಗಿದ್ದೆ. ಶಾಲ್ಮಲಿ ಇಲ್ಲದ ಬಾಳಿನಲ್ಲಿ ಯಾವ ಕನಸು  ಇಟ್ಟರೆಷ್ಟು ಬಿಟ್ಟರೆಷ್ಟು. ನನಗೆ ಆಸಕ್ತಿ ಯೇ ಹೊರಟು ಹೋಗಿತ್ತು. ಏನೇ ಮಾಡಿದರೂ ಯಾಂತ್ರಿಕ ವಾಗಿ ಮಾಡುತ್ತಿದ್ದೆ. ಯಾವುದನ್ನೂ ಮನಸಿಟ್ಟು ಮಾಡುತ್ತಿರಲಿಲ್ಲ.

ಆದರೂ ಈಗ ನಾನು ತುಂಬಾನೇ ಮೆಡಿಟೇಷನ್ ಮಾಡುತ್ತೆನೆ.ಅವಳನ್ನು ಮರೆಯುವ ಸಲುವಾಗಿ, ಅದೂ ನನ್ನಿಂದ ಸಾಧ್ಯವಿಲ್ಲ ಎಂದು ಗೊತ್ತು ಆದರೂ ಮಾಡುತ್ತೆನೆ. ಕುಡಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೆನೆ, ಸಿಗರೇಟು ಕೂಡ ತ್ಯಜಿಸಿದ್ದೆನೆ. ಅದು ಕೂಡ ಅವಳಿಗಾಗಿಯೇ. ಅಷ್ಟು ಮಾತ್ರವಲ್ಲ ನಾನೀಗ ಸಂಪೂರ್ಣ ಸಸ್ಯಾಹಾರಿ ಕೂಡ ಹೌದು.

ಮನಸ್ಸು ಶಾಂತವಾಗಿದೆ. ಶಾಲ್ಮಲಿ ಯ ನೆನಪು ಅಷ್ಟಾಗಿ ಕಾಡುತ್ತಿಲ್ಲ. 
ಹಾಗಂತ ನಾನು ಅಂದುಕೊಂಡಿದ್ದೆ . ಆದರೆ ನಮ್ಮಿಬ್ಬರನ್ನು ಬೇಟಿ ಮಾಡಿಸಲು ಇನ್ನೊಂದು ಮದುವೆ ಕಾದಿತ್ತು.ಎಂದಿನಂತೆ ಈ ಬಾರಿಯೂ ಕೂಡ ನಾನು ತಪ್ಪಿಸಿಕೊಳ್ಳುವಂತಿರಲಿಲ್ಲ , ಕಾರಣ ಈ ಬಾರಿ ಯ ಮದುವೆ ಇದ್ದದ್ದು ಪ್ರಾಣ ಸ್ನೇಹಿತ ಶಶಾಂತ್ ನದ್ದು!!

ಮದುವೆ ಬಂಟ್ವಾಳ ದಲ್ಲಿ,ಶಶಾಂತ್ ಮೊದಲೇ ಹೇಳಿದ್ದ ನೀನು ಬರದಿದ್ದರೆ ನಾನು  ತಾಳಿ ಕೂಡ ಕಟ್ಟಲಾರೆ ಎಂದು. ಹೋಗದಿರಲು ನನ್ನಲ್ಲಿ ಉಪಾಯಗಳೇ ಇರಲಿಲ್ಲ. 
ಯಾಕಾದರೂ ನಾನು ಕ್ಲಾಸ್ ಮೇಟ್ ಅನ್ನು one sided ಆಗಿ ಪ್ರೀತಿಸಿ ಬಿಟ್ಟೆನೋ, ಯಾಕಾಗಿ ಈ ಕ್ಲಾಸ್ ಮೇಟ್ ಗಳು ಇಷ್ಟು ಬೇಗ ಮದುವೆ ಯಾಗುತ್ತಾರೋ,ನಾನು ಬರಲೇಬೇಕು ಎಂದು ಸಾಯುತ್ತಾರೋ. ನನ್ನ ರೋಧನೆ ಯಾರಿಗೆ ಹೇಳಲಿ. ಒಂಥರಾ ಸಿಟ್ಟು ಬಂತು.

ನನ್ನಂತವನ ವೇದನೆ, ನೋವು ಕೇವಲ ನನ್ನಂತವನಿಗೆ ಮಾತ್ರ ಗೊತ್ತಾಗಲು ಸಾಧ್ಯ. ಆದರೆ ಇಡೀ ನನ್ನ ಗೆಳೆಯರಲ್ಲಿ ಈ ರೀತಿ ಯ ಭಾವ ಜೀವಿ ಗಳು, ಸೂಕ್ಷ್ಮ ಹೃದಯದವರು ಯಾರೂ ಇಲ್ಲ. 
ಅವರಿಗೆ ನನ್ನ ಸಂಕಟಗಳು ಅರ್ಥ ಆಗುವುದೇ ಇಲ್ಲ. ಆ ಭಗವಂತನಿಗೂ! 
ಕ್ಲಾಸ್ ಮೇಟ್ ನ ಪ್ರತೀ ಮದುವೆ ಬಂದಾಗಲೂ ನನಗೆ ಬರಸಿಡಿಲು ಬಡಿದಂತೆಯೇ ಆಗುವುದು. ತಪ್ಪಿಸಿಕೊಳ್ಳಲು ತುಂಬಾನೇ ಪ್ರಯತ್ನ ಪಡುತ್ತೆನೆ. ಆದರೆ ವಿಧಿ ನನ್ನನ್ನು ದರ ದರ ಎಂದು ಎಳೆದುಕೊಂಡು ಬಂದು ನನ್ನನು ಮದುವೆ ಮನೆಯಲ್ಲಿ ನಿಲ್ಲಿಸುತ್ತದೆ ಮತ್ತು ಎಷ್ಟೇ ಬೇಡವೆಂದರೂ ಶಾಲ್ಮಲಿ ಯನ್ನು ಮುಖಾಮುಖಿ ಮಾಡಿಸುತ್ತದೆ. ಆವಾಗಲೆಲ್ಲ ನಾನು ಅಸಹಾಯಕ. ಸುಮ್ಮನೆ ಓಡುತ್ತೇನೆ. ನನಗೆ ಅದು ಬಿಟ್ಟರೆ ಬೇರೆ ದಾರಿ ಗೊತ್ತಿಲ್ಲ!

ಮದುವೆ ಯ ದಿನ ಎಂದಿನಂತೆ ಜಯ ವಿಜಯ ರಂತೆ ಸೂರಜ್, ಪ್ರಾಣೇಶ್  ಪ್ರತ್ಯಕ್ಷ ಆಗಿದ್ದರು.ಜೊತೆಗೆ  ಈ ಬಾರಿ ರಕ್ಷಿತ್ ಕೂಡ ಇದ್ದ. ರಕ್ಷಿತ್  ಹೊಸ ಕಾರು ಕೊಂಡು ಕೊಂಡಿದ್ದ.ಅವನದೇ ಕಾರಿನಲ್ಲಿ ಮೂವರೂ ಬಂದಿದ್ದರು. 
ಮನಸ್ಸು ಹೇಳುತ್ತಿತ್ತು ಎರಡು ಬಾರಿ ತಪ್ಪಿಸಿಕೊಂಡು ಓಡಿ ಬಂದಿದ್ದೆನೆ ಆದರೆ ಈ ಬಾರಿ ಮಾತ್ರ  ಶಾಲ್ಮಲಿ ಗೂ ನನಗೂ ಖಂಡಿತವಾಗಿಯೂ ಮುಖಾಮುಖಿ ಆಗಿಯೇ ಆಗುತ್ತದೆ. 

ಡ್ರೆಸ್ ಹಾಕಿ ರೆಡಿ ಆದೆ. ಕ್ಲಾಸ್ ಮೇಟ್ ಮದುವೆಗಳು ನನಗೆ ಪ್ರಾಣಸಂಕಟ ಇದ್ದ ಹಾಗೆ. ಹೋಗಲು ಮನಸ್ಸಿಲ್ಲ ಹೋಗದೇ ಉಪಾಯವಿಲ್ಲ. ರಕ್ಷಿತ್ ನ ಕಾರು ಬಂಟ್ವಾಳ ಕ್ಕೆ ಹೊರಟಿತು.

ಹಾಲ್ ತಲುಪಿದೆವು. ಕ್ಲಾಸ್ ನ  ಹೆಚ್ಚಿನ ಎಲ್ಲರೂ ಅಲ್ಲಿದ್ದರು. ರಕ್ಷಿತ್, ಚರಣ್, ಸುರತ್,ಪ್ರವಿತ್,ಸಂದೀಪ್,ದ್ಯಾನೇಶ್,ಮುಕೇಶ್, ಶಮಿತಾ,ರಕ್ಷಿತಾ, ವರ್ಷಿತಾ.. ಪ್ರಮೋದಳು ಕೂಡ ಬಂದಿದ್ದಳು. ಆದರೆ ಎಂದಿನಂತೆ  ದಶಾಂತ್ ಇಲ್ಲೂ ಇಲ್ಲ. ಎಲ್ಲಿ ಸಾಯ್ಲಿಕ್ಕೆ ಹೋಗ್ತಾನೋ ಬಡ್ಡಿ ಮಗ, ಕಾರಣವಿದ್ದೇ ತಪ್ಪಿಸಿಕೊಳ್ಳುತ್ತಾನೋ ಅಥವಾ ಬರಬಾರದೆಂದೇ ಪ್ರತೀ ಸಲ  ತಪ್ಪಿಸಿಕೊಳ್ಳುತ್ತಾನೋ ಆ ದೇವರಿಗೇ ಗೊತ್ತು. ಅವನೊಂತರ ಚಿದಂಬ ರಹಸ್ಯ ಇದ್ದ ಹಾಗೆ. ಅವನ ಹೆಚ್ಚಿನ ಕಥೆಗಳು ಯಾರಿಗೂ ಗೊತ್ತಿಲ್ಲ, ನನಗೂ ಗೊತ್ತಿಲ್ಲ! ಕೆಲವೊಮ್ಮೆ ಅವನು ತೆರೆದಿಟ್ಟ ಪುಸ್ತಕ ಇನ್ನು ಕೆಲವೊಮ್ಮೆ ಅವನು ಬಿಡಿಸಲಾರದ ಒಗಟು. 
ಅವನದ್ದು ಬೇರೆಯದೇ ಕಥೆ!

ಎಲ್ಲರನ್ನು ಮಾತಾಡಿಸಿಕೊಂಡು  ಹಾಲ್ ನೊಳಗೆ ಹೋದೆವು. ಶಾಲ್ಮಲಿ ಎಲ್ಲಾದರೂ ಇದ್ದಾಳೋ ಎಂದು ಕಣ್ಣುಗಳು scanning ಮಾಡಲು ಶುರುಮಾಡಿದವು. ಇಲ್ಲ ಎಲ್ಲೂ ಕಾಣ್ತಾ ಇಲ್ಲ.

ಸಮಯ ಸರಿಯಿತು. ವಧು ವರರಿಗೆ ವಿಶ್ ಮಾಡುವ ಸಮಯ ಬಂತು. ಶಾಲ್ಮಲಿ ಯ 
ಸುಳಿವೇ ಇಲ್ಲ. ಹೋಗಿ ವಿಶ್ ಮಾಡಿದ್ದೂ ಆಯಿತು,ಗಿಫ್ಟ್ ಕೊಟ್ಟಿದ್ದೂ ಆಯಿತು, ಪೋಟೋ ತೆಗೆಸಿಕೊಂಡಿದ್ದೂ ಆಯಿತು.ಲಿಪ್ಟ್ ನಲ್ಲಿ ಹೋಗಿ ಮೇಲಿನ ಐದನೇ ಫ್ಲೋರ್ ನಲ್ಲಿದ್ದ ಹಾಲ್ ನಲ್ಲಿ ಊಟ ಮಾಡಿದ್ದು  ಕೂಡ  ಆಯಿತು.

ಎಲ್ಲರಿಗಿಂತ ಬೇಗ ನಾನೇ ಊಟ  ಮುಗಿಸಿ ಎದ್ದೆ. ನನಗೆ ಆದಷ್ಟು ಬೇಗ ಶಾಲ್ಮಲಿ ಕೈಗೆ ಸಿಕ್ಕಿ ಬೀಳದೇ,ಅವಳಿಗೆ  ಮುಖಾಮುಖಿ ಆಗದೇ ಅಲ್ಲಿಂದ ಎದ್ದು ಬರಬೇಕಾಗಿತ್ತು. ಊಟ ಮುಗಿಸಿದವನೇ ಯಾರಿಗೂ ಕಾಯದೇ ಹಾಲ್ ನಿಂದ ಹೊರಗೆ ಬರಲು ನಿರ್ಧರಿಸಿದೆ.

ಅರೇ ಶಾಲ್ಮಲಿ ನಿಜವಾಗಿಯೂ ಬರಲಿಲ್ಲವಾ ಎಂದುಕೊಳ್ಳುತ್ತಾ  ಐದನೇ ಫ್ಲೋರ್ ನ ಊಟದ ಹಾಲಿನಿಂದ ಕೆಳಗೆ ಬರಲು ಲಿಪ್ಟ್ ಹತ್ತಿದೆ.ಲಿಪ್ಟ್ ಬಾಗಿಲು ಕ್ಲೋಸ್ ಆಯಿತು. ಹಾಗೇ ನಿಧಾನವಾಗಿ ಸಾಂಗ್ ಹಾಡುತ್ತಾ ಲಿಫ್ಟ್ ನೊಳಗೆ ಬೇರೆ ಯಾರು ಇದ್ದಾರ ಎಂದು ತಿರುಗಿ ನೋಡಿದೆ. ಅಲ್ಲಿ ನಿಂತಿದ್ದಳು ನನ್ನ ಶಾರದೆ.. ಶಾಲ್ಮಲಿ!

ಮಗು ಹಿಡಿದು ನಿಂತುಕೊಂಡಿದ್ದಳು. ಆ ಕ್ಷಣಕ್ಕೆ ಆ ಲಿಫ್ಟ್ ನಲ್ಲಿ ಇದ್ದಿದ್ದು ಅವಳು ಮತ್ತು ನಾನು ಮತ್ತು ಏನೂ ಅರಿಯದ ಅವಳ ಮಗು.  ಸುಮಾರು ಆರು ವರ್ಷಗಳ ನಂತರ ನಮ್ಮಿಬ್ಬರನ್ನು ಹೀಗೆ ಮುಖಾಮುಖಿ ಮಾಡಿ ನಿಲ್ಲಿಸಿತ್ತು ಲಿಪ್ಟ್ ನ ಆ ನಾಲ್ಕು ಗೋಡೆಗಳು.

ಈ ಲಿಫ್ಟ್ ಎನ್ನುವುದು ಮನುಷ್ಯ ನ ವಿಚಿತ್ರವಾದ ಅನ್ವೇಷಣೆ. 
ಏಕೆಂದರೆ ಮಾತು ಮರೆತು ಹೋದ ಇಬ್ಬರನ್ನು ಪರಸ್ಪರ ಎದುರು ಬದುರು ನಿಲ್ಲಿಸುವ ಏಕೈಕ  ತಾಕತ್ತು ಇರುವುದು ಈ  ಜಗತ್ತಿನಲ್ಲಿ ಲಿಪ್ಟ್ ಗೆ ಮಾತ್ರ  ಎಂದು ಅನಿಸುತ್ತದೆ . ನಿಮಗೆ ಇಷ್ಟ ಇದೆಯೋ ಇಲ್ಲವೋ ಅದು ಅದಕ್ಕೆ ಬೇಕಾಗಿಲ್ಲ.ಅದು ಬೇಕಾದರೆ ಆಕಸ್ಮಿಕವೂ ಆಗಿರಬಹುದು. ಆದರೆ ಲಿಪ್ಟ್ ನಿಮ್ಮ ಒಪ್ಪಿಗೆ ಕೇಳಲ್ಲ. ಲಿಫ್ಟ್ ನ ಒಳಗೆ ಹೋಗುವುದು ಮಾತ್ರ ನಿಮ್ಮ ಇಷ್ಟ. ಒಳಗೆ ಹೋಗಿ ಬಾಗಿಲು ಮುಚ್ಚಿದ ಮೇಲೆ ಅಲ್ಲಿ ನಿಮ್ಮಂತೆ ಒಳಗಡೆ  ಇರುವವರನ್ನು ನೀವು ಇನ್ನೊಮ್ಮೆ ಲಿಫ್ಟ್ ಬಾಗಿಲು ಓಪನ್ ಆಗುವವರೆಗೆ ಸಹಿಸಿಕೊಳ್ಳಲೇ ಬೇಕು!

ಶಾಲ್ಮಲಿ ನನ್ನನೇ ನೋಡುತ್ತಿದ್ದಳು. ನಾನು ತಲೆತಗ್ಗಿಸಿ ನಿಂತಿದ್ದೆ ನನಗೆ ಅವಳ ಕಣ್ಣುಗಳನ್ನು ಎದುರಿಸುವ ತಾಕತ್ತು ಇರಲಿಲ್ಲ. ಅವಳೂ ಮಾತಾಡಲಿಲ್ಲ. ನಾನೂ ಮಾತಾಡಲಿಲ್ಲ. ಮದುವೆಯ ಹಾಲ್ ಒಂದನೇ ಫ್ಲೋರ್ ನಲ್ಲಿ ಇತ್ತು. ತಲೆತಗ್ಗಿಸಿಯೇ ಲಿಫ್ಟ್ ನಲ್ಲಿ ಒಂದು ನಂಬರ್ ನ ಬಟನ್ ಪ್ರೆಸ್ ಮಾಡಬೇಕೆಂದು ಕೈ ಎತ್ತಿದೆ.ನಾನು ಒತ್ತುವ ಮೊದಲೇ ಶಾಲ್ಮಲಿ ಒಂದನೇ ಬಟನ್ ಪ್ರೆಸ್ ಮಾಡಿ  ಆಗಿತ್ತು .ನಿಧಾನವಾಗಿ ನನ್ನ ಕೈ ಹಿಂತೆಗೆದೆ. ಲಿಫ್ಟ್ ಚಾಲು ಆಗಿ ಕೆಳಗಿಯಳು ಶುರುವಾಯಿತು.

ನಾನು ಅವಳ ಕಾಲು ನೋಡಿದೆ, ತಲೆತಗ್ಗಿಸಿಯೇ ಲಿಫ್ಟ್ ನ ಆಚೆ ಇಚೆಯ ಗೋಡೆಗಳನ್ನು ನೋಡಿದೆ. ಆದರೆ ತಲೆಎತ್ತಿ ಅವಳನ್ನು ನೋಡುವ ಸಾಹಸ ಮಾತ್ರ ಮಾಡಲಿಲ್ಲ. ಆದರೆ ಅವಳು ಮಾತ್ರ ನೇರವಾಗಿ ನನ್ನನ್ನೇ  ನೋಡುತ್ತಿದ್ದಳು.

ದೇವರೇ ಭೂಮಿ ಬಾಯಿ ತೆರೆದು ಹಾಗೇ ನನ್ನನ್ನೊಮ್ಮೆ ಇಲ್ಲಿಯೇ  ನುಂಗಬಾರದೇ ಅನಿಸಿತ್ತು. ಯಾಕಾಗಿ ಆದರೂ ಆ ಭಗವಂತ ನಾನು ಇಡೀ ಜೀವನದಲ್ಲಿ ಯಾವ ಘಟನೆ ನಡೆಯ ಬಾರದೋ ಎಂದು ಅಂದುಕೊಂಡಿದ್ದೆನೋ ಅದನ್ನೇ  ಹುಡುಕಿ ಹುಡುಕಿ play ಮಾಡಿಸುತ್ತಿದ್ದಾನೋ ಎಂದು ಅನಿಸಿತ್ತು.

ಲಿಪ್ಟ್ ಚಾಲು ಆಗಿ  4.....3....2...1 ಎಂದು ಕೊನೆಗೂ ಮದುವೆ ಹಾಲ್ ಇದ್ದ ಒಂದನೇ ಫ್ಲೋರ್ ಗೆ ಬಂತು. ಮಾತಿಲ್ಲ, ಕಥೆಯಿಲ್ಲ! ನಿಧಾನವಾಗಿ ಲಿಫ್ಟ್ ಓಪನ್ ಆಯಿತು. ಶಾಲ್ಮಲಿ ಇನ್ನೂ ಅಲ್ಲೇ ನಿಂತೆ ಇದ್ದಳು. ಬಹುಶಃ ಅವಳು ನಾನೇನಾದರು ಕೊನೆಗೂ ಒಂದೆರಡು ಮಾತು ಆಡಬಹುದು, at least ಹಾಯ್ ಎಂದು ಹೇಳಬಹುದು ಎಂಬ ನಿರೀಕ್ಷೆಯಲ್ಲಿ ಇದ್ದಳು ಅಂತ ಕಾಣುತ್ತೆ. ಯಾಕೆಂದರೆ ಶಾಲ್ಮಲಿ ಇದ್ದದ್ದೇ ಹಾಗೆ, ಅವಳಾಗಿಯೇ ಎಂದೂ ನನ್ನಲ್ಲಿ ಮಾತಾಡಿದವಳೇ ಅಲ್ಲ. ಅವಳು  ನನ್ನ ಮಾತುಗಳಿಗೆ ಕಾಯುತ್ತಿದ್ದಳೋ ಏನೋ ಗೊತ್ತಿಲ್ಲ. ಆದರೆ ಲಿಫ್ಟ್ ಬಾಗಿಲು ಓಪನ್ ಆದಾಗ ನಾನು ಒಂದು ಕ್ಷಣವೂ ಅಲ್ಲಿರಲಿಲ್ಲ. ಹಾಲ್ ಹೊರಗಡೆ ಗೆ ಒಂದೇ ಸಮನೆ ಏದುಸಿರು ಬಿಡುತ್ತಾ ಓಡಿದ್ದೆ!! 

ಹೊರಗಡೆಗೆ ಬಂದವನಿಗೆ ಒಂದು ನಿಮಿಷವೂ ಅಲ್ಲಿ ನಿಲ್ಲಲ್ಲು ಮನಸ್ಸಾಗಲಿಲ್ಲ. ಆಟೋ ಹತ್ತಿ bc road ಕಡೆಗೆ ಹೋಗಲು ಮುಂದಾದೆ. Bc Road ಗೂ ಕೂಡ ಹೋಗುವ ಮನಸ್ಸಾಗಲಿಲ್ಲ. ನನಗೀಗ ದಿವ್ಯ ಏಕಾಂತವೊಂದು ಬೇಕಾಗಿತ್ತು. ಡ್ರೈವರ್ ಗೆ ಆಟೋವನ್ನು ಸರ್ಕಲ್ ನಲ್ಲಿ ಯೇ ಪಾಣಿಮಂಗಳೂರು ಸೇತುವೆ ಕಡೆಗೆ ತಿರುಗಿಸಲು ಹೇಳಿದೆ. ಸೇತುವೆ ಬಳಿಯೇ ಡ್ರೈವರ್  ಆಟೋ ನಿಲ್ಲಿಸಿದ.

ಸೇತುವೆ ಯ ಮಧ್ಯ ಭಾಗಕ್ಕೆ ಬಂದೆ. ಅಲ್ಲಿ ನೀರವ ಮೌನ ಇತ್ತು. ನನಗೆ ನನ್ನ ಸ್ಥಿತಿ ಕಂಡು ಬೇಜಾರಾಗಿ  ಅಳುವೇ ಬಂದಿತ್ತು. ಶಾಲ್ಮಲಿ ಯ ಬಗ್ಗೆ ನನಗೆ ಇಷ್ಟೊಂದು ಭಯ,ಹೆದರಿಕೆ ಕೊಟ್ಟ ಆ ಭಗವಂತನನ್ನು ಮನಸಾರೆ ಶಪಿಸಿದೆ. ಜೋರಾಗಿ ಬಿಕ್ಕಿ ಬಿಕ್ಕಿ ಅತ್ತೆ.ಭಗವಂತ ನೀನೆಷ್ಟು ಕ್ರೂರಿ ಅನ್ನುತ್ತಾ ಮತ್ತಷ್ಟು ಹೊತ್ತು ಅತ್ತೆ. ಅದೇ ರೀತಿ ತುಂಬಾ ಹೊತ್ತು ನಾನು ಅದೇ ಸ್ಥಿತಿಯಲ್ಲಿ ಇದ್ದೆ.

ಆಗ ನನಗೆ  ನೆನಪಾಗಿದ್ದು ನನ್ನ ಬಳಿ ಸದಾ ಇರುತ್ತಿದ್ದ ಅವಳ ಪೆನ್ನು ಮತ್ತು ನಾನು ಅವಳಿಗಾಗಿ ಬರೆದು ಈಗಲೂ ನನ್ನ ಪರ್ಸಿನಲ್ಲಿಯೇ  ಇಟ್ಟಿದ್ದ ಆ ಪದ್ಯದ ಲೆಟರ್.

ಸಿಟ್ಟಿನಿಂದ ಎರಡನ್ನೂ ಹೊರ ತೆಗೆದೆ. ಆ ಪೆನ್ನನ್ನು ಸೇತುವೆಯ ಮೇಲೆ ನಿಂತುಕೊಂಡೇ ಕೆಳಗೆ ಹರಿಯುವ ನೀರಿಗೆ ಜೋರಾಗಿ ಮೇಲಿನಿಂದ ಎಸೆದೆ. ಅಷ್ಟು ದೂರ ಹೋಗಿ ಬಿತ್ತು ಪೆನ್ನು. 
ಅವಳ ನೆನಪಿನ ಕಾಣಿಕೆ ಯೊಂದು ನೀರಲ್ಲಿ ಹಾಗೇ ಮುಳುಗಿ ಹೋಯಿತು. ಅದನ್ನೇ ನೋಡುತ್ತಾ ನಿಂತೆ.

ಆ ಪದ್ಯದ ಲೆಟರ್ ತೆಗೆದು ಚೂರು ಚೂರು ಮಾಡಿ ಅದನ್ನೂ ನೀರಿಗೆ ಎಸೆದು ಬಿಟ್ಟೆ. 
ಅದೂ ನೀರಿನಲ್ಲಿ ತೇಲುತ್ತಾ ತೇಲುತ್ತಾ ಮುಂದೆ ಹೋಯಿತು. ಅದು ಕೂಡ ಮರೆಯಾಗಿ ಹೋಗುವವರೆಗೆ ಅಲ್ಲೇ ನಿಂತು ನೋಡುತ್ತಿದ್ದೆ.

ಅಷ್ಟರಲ್ಲಿ ಯಾವುದೋ ಕಾರು ಹಾರ್ನ್ ಹೊಡೆದು ಕೊಂಡು ಸೇತುವೆ ಯ ಮೇಲೆ ಬರುತ್ತಿರುವುದು ಕಂಡಿತು, ತಿರುಗಿ ನೋಡಿದೆ. ಕಾರ್ ನ ಗ್ಲಾಸ್ ಇಳಿಸಿತ್ತು. ಪುನಃ ಸರಿಯಾಗಿ ನೋಡಿದೆ. ಹೌದು ಅದು ಶಾಲ್ಮಲಿ!

ಬಹುಶಃ ಮದುವೆ ಮುಗಿಸಿಕೊಂಡು ವಾಪಸ್ ಹೋಗುತ್ತಿರಬೇಕು. ಅವಳ ದೃಷ್ಟಿ ಸೇತುವೆ ಯ ಬದಿಯಲ್ಲಿದ್ದ ನನ್ನ ಮೇಲೆ ಇರಲಿಲ್ಲ. ಕೇವಲ ರೋಡ್ ಮೇಲೆ ಇತ್ತು, ನನ್ನನ್ನು ಅವಳು ಗಮನಿಸಿರಲಿಲ್ಲ. ಕಾರು ಮುಂದೆ ಮುಂದೆ ಹೋಗುತ್ತಿತ್ತು., ಶಾಲ್ಮಲಿ ಯ ಪಕ್ಕದಲ್ಲಿದ್ದ ಅವಳ ಮಗು ನನ್ನನ್ನು ನೋಡಿತು. ಬಹುಶಃ ಅದಕ್ಕೆ ನನ್ನನ್ನು ಲಿಫ್ಟ್ ನಲ್ಲಿ ನೋಡಿದ ನೆನಪು ಬಂತೋ ಏನೋ.. ಹಾಗೆಯೇ ಮೆಲುವಾಗಿ ನಕ್ಕು, ಕಾರಿನಿಂದ ಹೊರಕ್ಕೆ ಗಾಳಿಯಲ್ಲಿ ಕೈ ಬೀಸಿ  ನನಗೆ ಹಾಯ್ ಎಂದು ಹೇಳುವ ಪ್ರಯತ್ನ ಮಾಡಿತ್ತು.

ಕಾರ್ ಆದಾಗಲೇ ತುಂಬಾನೇ ಮುಂದೆ ಹೋಗಿ ಆಗಿತ್ತು. ಸೇತುವೆ ಯ ಮತ್ತೊಂದು ತುದಿಯಲ್ಲಿ ಇತ್ತು ಕಾರು. ನಾನು ಸೇತುವೆ ಯ ಮಧ್ಯ ಭಾಗದಲ್ಲಿ ಇದ್ದೆ.ಕಾರು ಹೆಚ್ಚು ಕಡಿಮೆ ಮರೆಯಾಗಿತ್ತು! ನಾನು ಕೈ ಎತ್ತಿ ಹಾಯ್ ಎಂದೆ. ನನ್ನ ಹಾಯ್ ರಿಸೀವ್ ಮಾಡಲು ಅಲ್ಲಿ ಯಾರೂ ಇರಲಿಲ್ಲ.ಮನಸ್ಸು ಈಗಲೂ  ಹೇಳುತ್ತಿತ್ತು ಬೇಕಾದರೆ ಈ ನನ್ನ ಮುಗಿಯದ ವೇದನೆ ಹೀಗೆ ಇರಲಿ, ಆದರೆ ಶಾಲ್ಮಲಿ ಎಲ್ಲಿದ್ದರೂ ಹೇಗಿದ್ದರೂ  ಖುಷಿಯಾಗಿರಲಿ..ಕುಶಲವಾಗಿರಲಿ.. ಕ್ಷೇಮವಾಗಿರಲಿ.ದೇವರಲ್ಲಿ ಅನುದಿನವೂ ನನ್ನದು ಇದೊಂದೇ ಪ್ರಾರ್ಥನೆ. 
ಕಾರು ಈಗ ಸಂಪೂರ್ಣ ಕಣ್ಣಿಂದ ಕಣ್ಮರೆ ಯಾಯಿತು. ಕಾರು ಹೋದ ದಿಕ್ಕನೇ  ನೋಡುತ್ತಾ ಹಾಗೇ ನಿಂತು ಬಿಟ್ಟೆ! 

                   ಶುಭಂ! 
.   .   .   .   .   .   .  .  .   .  .   .  .


ನಾನು ಕಥೆ ಬರೆದಾಗಿತ್ತು. ಆದರೆ ಕಥೆ ಯಾರಿಗೆ ಕೊಡಲಿ? ಕೊಡಲು ಯಾರಾದರೂ ಇದ್ದರೇ ತಾನೇ!!

ನಾನು ಯಾರಿಗೂ ಕಥೆ  ಬರೆದು ಕೊಡಲು ಹೋಗುವುದಿಲ್ಲ. ಆದರೆ ಅವಳ ಕಥೆ, ಅವನ ಕಥೆ ಎಂದು ಸುಮ್ಮನೆ ಕಥೆಗಳಲ್ಲಿ ಹೇಳುತ್ತಾ ಹೋಗುತ್ತೆನೆ  ಅಷ್ಟೇ!

ಹಿಂದೊಮ್ಮೆ ಪಲ್ಲವಿ ಮೇಡಂ ಬಂದಿದ್ದರು. ಕಥೆ ಹೇಳಿದರು. ಅವರಿಗೊಂದು ಚಂದದ ಕಥೆ ಬರೆದು ಕೊಟ್ಟೆ. ಅದರ ಹೆಸರು "ಪ್ರೇಮ ಪಲ್ಲವಿ". ಹಾಗಾದರೆ ಅವರಿಗೆ ಕಥೆ ಬರೆದು ಕೊಟ್ಟಿದ್ದು ನಿಜವೇ, ಸುಳ್ಳೇ.. ಆ ಕಥೆಯೂ ಕೂಡ  ಬರೀ ಕಾಲ್ಪನಿಕವೇ?!

ನಾನು ಹೆಚ್ಚಾಗಿ ನನಗಾಗಿ ಕಥೆ ಬರೆಯುತ್ತೇನೆ. ನಿಜ ಜೀವನದಲ್ಲಿ ನನ್ನ ಸುತ್ತ ಮುತ್ತ ಇರುವ ಪಾತ್ರಗಳನ್ನು ಎತ್ತಿ ಕೊಳ್ಳುತ್ತೆನೆ. ಅದಕ್ಕೆ ನನಗೆ ಬೇಕಾದ ಹಾಗೆ ಬಣ್ಣ ಹೊಡೆಯುತ್ತೆನೆ, ಓದುಗನ ಎದುರು ಇಡುತ್ತೆನೆ. ನನಗೆ ಇಷ್ಟವಿದ್ದರೆ ಆ ಪಾತ್ರಗಳನ್ನು ನಗಿಸುತ್ತೆನೆ. ಇಷ್ಟವಿಲ್ಲದಿದ್ಧರೆ ಅಳಿಸುತ್ತೆನೆ! ನಾನೊಬ್ಬ ಪಕ್ಕಾ  ಕಥೆಗಳ ವ್ಯಾಪಾರಿ. ನನ್ನ ಪಾತ್ರ ಗಳು ಕಥೆಯಲ್ಲಿ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಆದರೆ ವೈಯಕ್ತಿಕವಾಗಿ ನನ್ನ ಪಾತ್ರಗಳ ಮೇಲೆ ನನಗೆ ಯಾವುದೇ ಭಾವನೆಗಳಿಲ್ಲ! ಕಥೆಯಲ್ಲಿ ನನ್ನ ಪಾತ್ರ ಗಳನ್ನು ನನಗೆ ಹೇಗೆ ಬೇಕೋ ಹಾಗೆ ಕುಣಿಸುತ್ತೇನೆ, ದಂಡಿಸುತ್ತೆನೆ, ದುಡಿಸುತ್ತೆನೆ, ಆದರೆ ಅವುಗಳಿಗೆ ಸಂಬಳ ಮಾತ್ರ ಕೊಡುವುದಿಲ್ಲ. ಯಾಕೆಂದರೆ ನನಗೂ ಯಾರೂ ಸಂಬಳ ಕೊಡುವುದಿಲ್ಲ, ನನ್ನ ಕಥೆಗಳು ಮಾರುಕಟ್ಟೆ ಯಲ್ಲಿ ಬಿಕರಿಯಾಗುವುದಿಲ್ಲ!

ಹಣಕ್ಕಾಗಿ ನಾನು ಬರೆಯುವುದೂ ಇಲ್ಲ. ನನಗೂ ಗೊತ್ತು ನಾನೊಬ್ಬ ವೃತ್ತಿಪರ ಬರಹಗಾರನಲ್ಲ. ಹಣ ತಂದು ಕೊಡಬಲ್ಲ ಶ್ರೇಷ್ಠ ಕಥೆಗಳಾವು ನನ್ನಲಿಲ್ಲ. ಆ ಲೆವೆಲಿಗೆ ಇನ್ನೂ ನಾನು ಹೋಗಿಲ್ಲ. ನಾನು ಕೇವಲ  ನನ್ನ ಹುಚ್ಚು ಕಲ್ಪನೆಗಳಿಗೆ ರೂಪ ಕೊಡುತ್ತೆನೆ ಅಷ್ಟೇ.

ಯಾಕೇ ನೀನು ನಿನ್ನ ಸುತ್ತಮುತ್ತಲಿನ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಅದಕ್ಕೊಂದು ನಿನ್ನದೇ ಕಥೆ ಕಟ್ಟಿ ನಿನ್ನ ಕಥೆಯ ಪಾತ್ರವನ್ನಾಗಿ ಮಾಡಿಕೊಳ್ಳುತ್ತಿಯಾ? ಹೆಚ್ಚಾಗಿ ನಿನ್ನ ಕಥೆಗಳನ್ನು ಕಾಲ್ಪನಿಕ ಎಂದೇ ಹೇಳಿಕೊಂಡು ಹೋಗುತ್ತಿಯಾ.. ಮತ್ತೇಕೆ ನಿನ್ನ ಕಥೆಯ ಪಾತ್ರಗಳನ್ನು ಕೂಡ ಕಾಲ್ಪನಿಕವಾಗಿಯೇ ಸೃಷ್ಟಿಸಿಕೊಳ್ಳಬಹುದು ಅಲ್ಲವೇ?ಅದೇನು ನಿನಗೆ ಅಂತಹ ಕಷ್ಟ ಕೂಡ ಅಲ್ಲ... ಎಂದು ನೀವೇನಾದರೂ  ಕೇಳಿದರೆ.. 
ನಿಜ ನೀವು ಹೇಳುವುದೇನೋ ಕರೆಕ್ಟ್, ಹಾಗೆಯೇ ಮಾಡಬಹುದು ಆದರೆ ನನ್ನ ಸುತ್ತ ಮುತ್ತಲಿನ ನಿಜ ಜೀವನದ ಪಾತ್ರಗಳೂ ಕೂಡ ಒಮ್ಮೊಮ್ಮೆ ಅದು ನಿಜವಾಗಿಯೂ ನಾನೇ ಇರಬಹುದಾ? ಇಲ್ಲ ನನ್ನಂತಿರುವ ಜಸ್ಟ್ ಒಂದು ಪಾತ್ರ ಇರಬಹುದಾ..? ಎಂಬ ಗೊಂದಲಕ್ಕೆ ಬೀಳಿಸುವುದರಲ್ಲಿ ನನಗೆ  ಇನ್ನಿಲ್ಲದ ಆಸಕ್ತಿ ಇದೆ.. ಎಂದು ಅಷ್ಟೇ ನಾನು ಹೇಳಬಲ್ಲೆ !!!

ಹಾಗಂತ ನಾನು ನನ್ನ ಕಥೆಗಳಲ್ಲಿ ಬರೀ ಸುಳ್ಳೇ ಹೇಳುವುದೇ? ಸತ್ಯ ಹೇಳುವುದಿಲ್ಲವೇ ಎಂದು ಕೇಳಿದರೆ ಅದಕ್ಕೆ ನಾನು ಕೊಡುವ ಉತ್ತರ, ನಾನು ನನ್ನ ಕಥೆಗಳಲ್ಲಿ ಸತ್ಯ ಸುಳ್ಳು ಹೇಳುವುದಕ್ಕಿಂತ ಜಾಸ್ತಿ ಆಗಿ ನಾನು ಜಸ್ಟ್ ಕಥೆ ಹೇಳುತ್ತೆನೆ!

ನೀವು ಕೇಳಬಹುದು ಹಾಗಾದರೆ ನೀನು ಸತ್ಯ ಕಥೆಗಳನ್ನು ಬರೆಯುವುದೇ ಇಲ್ಲವೇ?
ಖಂಡಿತವಾಗಿಯೂ ಬರೆಯುತ್ತೇನೆ. ಆದರೆ ನಾನು ಬರೆದಿದ್ದು ಸತ್ಯ ಎಂದು ಹೆಚ್ಚಾಗಿ ನಾನು  ಎಲ್ಲೂ ಹೇಳುವುದಿಲ್ಲ, ಬಾಯಿ ಬಿಡುವುದಿಲ್ಲ !!! 
ಯಾವುದು ಸತ್ಯ ಯಾವುದು ಸುಳ್ಳು ಎಂದು ನನಗೆ ಮಾತ್ರ ಗೊತ್ತಿರುತ್ತದೆ!! ಈ ಕಥೆಯೂ ಕೂಡ ಒಂದು ರೀತಿ  ಹಾಗೆಯೇ !

ಹಾಗಾದರೆ ನಾನು ಬರೆದ ಕಥೆಗಳಲ್ಲಿ ಕಥೆಗಾರನೆಂಬ ನಾನೇ ನಾಯಕನಾಗಿ ಇರುತ್ತೇನಾ ? ಇಲ್ಲ ಕಥೆಯೇ ನಾಯಕನಾ? 
ನಿಜವಾಗಿಯೂ ಎಲ್ಲಾ ಕಥೆಗಳಲ್ಲಿ ನಾನೆಂಬ ಅವನನ್ನು ಯಾರಿಗೂ ಗೊತ್ತಾಗದಂತೆ ನಾನೇ  ಕಥೆಯೊಳಗೆ ಬೆರೆಸಿ ಬಿಟ್ಟಿದ್ದೆನಾ ?!

ಇದೇ ಕಥೆಗೆ ಬಂದರೆ ನಿಜವಾದ ಕಥಾನಾಯಕ ಯಾರು.? ಕಥೆ ಹೇಳಿದ ಕುಶಾಲ್? ಇಲ್ಲವೇ ಕಥೆ ಬರೆದ ನಾನು?.. ಅಲ್ಲ ಈ ಕಥೆಯೇ ಕಥಾನಾಯಕ ನಾ?

ಅಷ್ಟು ಮಾತ್ರವಲ್ಲ, ಯಾಕೆ ನಾನು ಈ ಕಥೆಯ ನಡುವಿನಲ್ಲಿ ಕಥೆಗಾರ ನ  ಬಗ್ಗೆಯೇ ಇಷ್ಟೊಂದು ಹೇಳುತ್ತಿದ್ದೆನೆ?!! 
ಹಾಗಾದರೆ ಇದು ಕಥೆಗಾರನದ್ದೇ ನಿಜ ಕಥೆಯಾ? 
ಕುಶಾಲ್ ಕೇವಲ ಒಂದು ನೆಪ ಮಾತ್ರವಾ?

ಕಥೆ ಇನ್ನೂ ಮುಗಿದಿಲ್ಲ!
ಮುಂದೆ ಓದಿ, ಅರ್ಥ ಆದರೂ ಆಗಬಹುದು! 

ಕೈಯಲ್ಲಿ  ಈಗಷ್ಟೇ ಸಂಪೂರ್ಣವಾದ ಕಥೆ ಇತ್ತು. ನನ್ನ ಕಲ್ಪನೆ ಗಳಿಗೆ ರೆಕ್ಕೆ ಪುಕ್ಕ ಎಲ್ಲಾ ಕಟ್ಟಿ ನನಗೆ ಬೇಕಾದ ಹಾಗೆಯೇ ಒಂದು ರೂಪ ಕೊಟ್ಟು ನಿಲ್ಲಿಸಿದ್ದೆ. ಇನ್ನು ಈ ಕಲ್ಪನೆ ಯ ಹಕ್ಕಿ ಹಾರುವುದು ಒಂದೇ ಬಾಕಿ. ಹಕ್ಕಿ ಹಾರಿದರನೇ ಚಂದ. ನಡೆದಾಡಿದರೆ, ಓಡಾಡಿದರೆ ಅಲ್ಲ. ಆದರೆ ಈ ನನ್ನ ಕಲ್ಪನೆ ಯ ಹಕ್ಕಿಯನ್ನು ಎಲ್ಲಿ ಹಾರಿಸಲಿ. ಆದರೆ ಯಾಕೋ ಫೇಸ್ಬುಕ್ ನಲ್ಲಿ ಈ ಕಥೆ  ಹಾಕಲು ಮನಸ್ಸು ಬರಲಿಲ್ಲ.

ನನಗೆ  ಲಾಜಿಕ್ ಇಲ್ಲದ ಮರ್ಲು ಕಥೆಗಳು,  ಲಘು ಹಾಸ್ಯ ದ ಬರಹಗಳು, ಸ್ವಲ್ಪ ಕಾಮೆಡಿ, ಒಂದೊಳ್ಳೆಯ ಸಂಭಾಷಣೆ.. ಅಂದರೆ ಇಷ್ಟ.ಆದರೆ ಇದು ನೂರು ಪರ್ಸೆಂಟ್ ಬರೀಯ  ಭಾವನೆಗಳಿಂದಲೇ ತುಂಬಿದೆ. ಅದೂ ಅಲ್ಲದೇ ಬರೆದು ಬರೆದು ಇಷ್ಟು ಉದ್ದ ಆಗಿದೆ. ಯಾಕೋ ಸದ್ಯ ಕ್ಕೆ ಫೇಸ್ಬುಕ್ ಗೆ ಹಾಕುವುದು ಬೇಡ,  ಮುಂದೆ ಒಂದು ದಿನ ಬೇಕಾದರೆ ಹಾಕುವ ಅಂತ ಎನಿಸಿತು.

ಆದರೂ ಪ್ರತೀ ಕಥೆಗಾರ ನಿಗೂ ಅದೊಂದು ಇರುತ್ತೆ, ಪ್ರತೀ ಕಥೆಯೂ ಅವನಿಗೆ ಅವನ ಮಗು ಇದ್ದಂತೆ. ಯಾರಾದರೂ ಅದನ್ನು ಮುದ್ದಾಡಿ ಹೇಳಬೇಕು ಹೇಗಿದೆ ಎಂದು.ಇಲ್ಲದಿದ್ಧರೆ ಅವನಿಗೂ ಸಮಾಧಾನ ಇರುವುದಿಲ್ಲ ಅದೇ ರೀತಿ ಬರೆದಿಟ್ಟ ಕಥೆಗೆ ನ್ಯಾಯ ವೂ ಸಿಗುವುದಿಲ್ಲ. 
ನನಗೆ ಫ್ರೆಂಡ್ ಒಬ್ಬ ಳು ಇದ್ದಾಳೆ. ನನ್ನೆಲ್ಲಾ ಕಥೆಗಳನ್ನು ಓದುತ್ತಾಳೆ. ಯಾವುದೇ ಕಥೆ ಬರೆಯಲಿ,ಅವಳಿಗೆ ಮೊದಲು ವಾಟ್ಸಾಪ್ ಮಾಡಿ ಓದಿ ಹೇಗಿದೆ ಅಂತ ಹೇಳು ಅಂತ ಹೇಳ್ತೆನೆ. ಹೂಂ ಸದ್ಯಕ್ಕೆ ಇವಳಿಗೆ ಮಾತ್ರ ಕಳುಹಿಸಿ ಬಿಡ್ತೆನೆ ಅಂದು ಕೊಂಡು, ಅವಳಿಗೆ ಕಥೆಯನ್ನು forward ಮಾಡಿ, ನನ್ನ ಮನಸ್ಸಿನ ಭಾರವನ್ನು ಇಳಿಸಿಕೊಂಡು ಹಾಗೇ ಮಂಚದ ಮೇಲೆ ಬಿದ್ದುಕೊಂಡು, ನಿದ್ದೆಗೆ ಜಾರಿದೆ. 


ಇದಾಗಿ ಹೆಚ್ಚು ಕಡಿಮೆ ಆರು ಏಳು ತಿಂಗಳುಗಳಾಗಿತ್ತು. ನನಗೂ ಹೆಚ್ಚು ಕಡಿಮೆ ಈ ಕಥೆಯೇ ಮನಸ್ಸಿಂದ ಮರೆಯಾಗಿ ಹೋಗಿತ್ತು . ಆದರೆ ಈ ಕಥೆ  ಒಂದು ದಿನ ಇನ್ನೊಂದು ರೂಪ ಪಡೆದು,ಕಥೆ ಬರೆದ ನಾನು ಕೂಡ ಕಥೆಯ  ಪ್ರಮುಖ ಭಾಗವಾಗಿ, ಹಳೆ ಕಥೆ ಹೊಸ ಕಥೆ ಆಗಿ ಪುನಃ ನನ್ನ ಎದುರೇ ಬಂದು ದುತ್ತೆಂದು ನಿಂತುಕೊಳ್ಳುತ್ತೆ  ಎಂದು ನಾನು ಕನಸು ಮನಸ್ಸಲ್ಲೂ ಎಣಿಸಿರಲೇ ಇಲ್ಲ !! 
ಕಥೆ ಇನ್ನೂ ಮುಗಿದಿಲ್ಲ! 

2019  ! 
ಆ ದಿನ ನನಗೆ ಒಂದು ಮದುವೆ ಫಂಕ್ಷನ್ ಇತ್ತು. TMA Pai ಹಾಲ್ ನಲ್ಲಿ. KPT  circle ನಲ್ಲಿ ಬಸ್ಸಿಗಾಗಿ ನಿಂತಿದ್ದೆ.

"ಹಾಯ್ ಪಚ್ಚು... " ಹೆಣ್ಣು ದ್ವನಿಯೊಂದು ಕರೆದಂತಾಯಿತು. ತಿರುಗಿ ನೋಡಿದೆ. 

ಯಾರು ಎಂದು ಗೊತ್ತಾಗಲಿಲ್ಲ. ನೋಡಿದ ನೆನಪಿಲ್ಲ.ನೋಡಿದರೆ ಮದುವೆ ಆದವರ ತರಹ ಕಂಡರು. ಕುತ್ತಿಗೆಯಲ್ಲಿ ತಾಳಿ ಇತ್ತು.

" ಹಾಯ್ ... ಯಾರು ಅಂತ ಗೊತ್ತಾಗ್ಲಿಲ್ಲ " ಅಂದೆ.

" ಆದರೆ ನನಗೆ ನೀವು ತುಂಬಾ ಚೆನ್ನಾಗಿಯೇ ಗೊತ್ತು, ನಾನೂ ನಿಮ್ಮ ಫೇಸ್ಬುಕ್ ಫ್ರೆಂಡ್ " ಅಂದರು.

" ಒಹ್, ಹೌದಾ ಏನು ನಿಮ್ಮ ಹೆಸರು ... " ಅಂದೆ.

" ಕೃತಿ.... " ಅಂದರು.

ಪುನಃ ಮಾತು ಮುಂದುವರಿಸಿದರು " ನನಗೆ ನಿಮ್ಮ ಬಳಿ ಒಂದು ವಿಷಯ ಹೇಳಬೇಕಾಗಿತ್ತು.. " ಅಂದರು.

" ಧಾರಾಳವಾಗಿ.. ಹೇಳಿ" ಅಂದೆ.

"ನೀವು ಬರೆದಿದ್ದು ನನ್ನದೇ ಕಥೆ!! " ಅಂದರು

" ಯಾವ ಕಥೆ..? " ಕೇಳಿದೆ

" ಶಾಲ್ಮಲಿ ಕಥೆ...!!! " ಅಂದರು.

" ಇಲ್ಲ, ಅದು ಹೇಗೆ ಆಗಲು ಸಾಧ್ಯ . ನಾನಿನ್ನೂ ಅದನ್ನು ಫೇಸ್ಬುಕ್ ಗೆ ಹಾಕಿಯೇ ಇಲ್ಲ "

" ನೀವು ಹಾಕಿಲ್ಲ, ಆದು ನನಗೂ ಗೊತ್ತು. ನಾನೂ ಕೂಡ ನಿಮ್ಮ  ಫೇಸ್ಬುಕ್ ಅಲ್ಲಿ ಆ ಕಥೆ ಓದಿಲ್ಲ. 
ನಾನು ಓದಿದ್ದು ವಾಟ್ಸಾಪ್ ನಲ್ಲಿ. ಎಲ್ಲಾ ಕಡೆ forward ಆಗಿ ಕೊನೆಗೆ ನನ್ನ ಬಳಿಯೂ ಬಂದಿತ್ತು ಆ ಕಥೆ!.. " ಅಂದರು.

Confusion ಅಲ್ಲಿ ಬಿದ್ದೆ. ಇದು ಹೇಗೆ ಆಗಲು ಸಾಧ್ಯ. ನಾನು ಜಸ್ಟ್ ನನ್ನ ಫ್ರೆಂಡ್ ಗೆ ಒಬ್ಬಳಿಗೆ ಮಾತ್ರ ಕಳಿಸಿದ್ದು ಅಲ್ವಾ. May be ಅವಳು ಯಾರಿಗಾದರೂ ಓದಲು forward ಮಾಡಿರಬಹುದು. ಹೀಗೆ ಒಬ್ಬರಿಂದ ಒಬ್ಬರಿಗೆ forward ಆಗಿ ಆಗಿ ಕೊನೆಯಲ್ಲಿ ಇವರಿಗೂ ಬಂದು ಮುಟ್ಟಿರಲಿಕ್ಕೂ ಸಾಕು ಅಂತ ಅಂದುಕೊಂಡೆ. 
ಹೆಚ್ಚಾಗಿ ಸಾಮಾಜಿಕ ಜಾಲತಾಣ ಗಳಲ್ಲಿ ಎಲ್ಲವೂ ಆಗುವುದು ಇದೇ ರೀತಿ ಅಲ್ಲವೇ. ಒಮ್ಮೆ ಒಬ್ಬರಿಗೆ ತಲುಪಿದರೆ ಸಾಕು, ಕ್ಷಣ ಮಾತ್ರದಲ್ಲಿ ಜಗತ್ತಿಗೆ spread ಆಗಿ ಬಿಡುತ್ತದೆ.

ಅವರೇ ಮುಂದುವರೆಸಿದರು " ಆ ನಿಮ್ಮ ಕಥೆಯ  ಶಾಲ್ಮಲಿ ನಾನೇ!! .." ಅಂದು ಬಿಟ್ಟರು.

"ಹೇಗೆ ಸಾಧ್ಯ, ಈಗಲೇ ನೀವು ಹೇಳಿದ್ದೀರಿ ನೀವು ಕೃತಿ ಎಂದು.. ನೀವು ಶಾಲ್ಮಲಿ ಆಗಲು ಹೇಗೆ ಸಾಧ್ಯ? "

" ನೀವು ಕಥೆಯಲ್ಲಿ ನನ್ನ ಹೆಸರನ್ನು ಬದಲಾಯಿಸಿದ್ದಿರಿ !! "

" ನೋಡಿ ಕೃತಿ. ನೀವು ಸಂಪೂರ್ಣ ಕಥೆ ಓದಿದ್ದೀರಿ ಅಂತ ಅಂದುಕೊಳ್ಳುತ್ತೆನೆ. ನಾನು ಅದರಲ್ಲಿ ಮೊದಲೇ ಬರೆದು ಹಾಕಿದ್ದೆನೆ ಅಲ್ಲವೇ ಇದು ಕೇವಲ ಕಾಲ್ಪನಿಕ ಕಥೆ ಎಂದು.. " ಅಂದೆ.

" ನೋಡಿ ನಾನು ಫೇಸ್ಬುಕ್ ನಲ್ಲಿ ನಿಮ್ಮೆಲ್ಲಾ ಕಥೆಗಳನ್ನು ಬರಹಗಳನ್ನು ಓದಿದ್ದೆನೆ. ನೀವು ಬರೆಯುವ ಮರ್ಲು ಕಥೆಗಳಿಗೇನೇ ನೀವು ಕಾಲ್ಪನಿಕ ಎಂದು ಹಾಕಿ ಕೊಳ್ಳುವುದಿಲ್ಲ, ಹಾಗೇ ಇರುವಾಗ ನೀವು ಬೇಕೆಂದೆ "ಇದು ಕೇವಲ ಕಾಲ್ಪನಿಕ, ಎಲ್ಲಾದರೂ ಹೊಂದಾಣಿಕೆ ಕಂಡು ಬಂದರೆ ನಾನು ಜವಾಬ್ದಾರನಲ್ಲ.." ಅಂತೆಲ್ಲಾ ಬೇಕಂದೇ  ಹಾಕಿಕೊಂಡರೆ, ಓದುಗನಿಗೆ ಕೂಡ ಗೊತ್ತಾಗಿ ಬಿಡುತ್ತೆ, ಇದರಲ್ಲೇನು ಸುಳ್ಳಿದೆ ಎಂದು. 
ಓದುಗರು ಮುಟ್ಟಾಳರಲ್ಲ!!" ಅಂದರು

ಕೊನೆಯ ಸಾಲು ಹೇಳುವಾಗ ಅವರ ಧ್ವನಿ ಬಿರುಸಾಗಿತ್ತು!

ಎಲಾ ಗ್ರಹಚಾರ ವೇ, ಇ ತರಹದ ಪಜೀತಿಯಲ್ಲಿ ನಾನು ಸಿಕ್ಕಿ ಬೀಳುತ್ತೆನೆ ಎಂದು ಅಂದುಕೊಂಡಿರಲೇ ಇಲ್ಲ.

"ನೋಡಿ ಕೃತಿ ಅವರೇ, ಕಥೆಯನ್ನು ಕೇವಲ ಕಥೆಯಾಗಿಯೇ ನೋಡಿ.. ಯಾಕೆ ಸುಮ್ಮನೆ ಇಷ್ಟೊಂದು ಸಿರಿಯಸ್ ಆಗ್ತಾ ಇದ್ದೀರಾ .ಆ ಕಥೆಯ ಕಥೆಗಾರನಾಗಿ ನಾನೇ ಹೇಳ್ತಾ ಇದ್ದೆನೆ ಅದು ಕೇವಲ ಕಾಲ್ಪನಿಕ ಕಥೆ , ಬೇರೇನೂ ಇಲ್ಲ . " ಅಂದೆ.

" ಕಾರಣ ಇದೆ. ಕೇವಲ ನನ್ನ ಪಾತ್ರ ಒಂದಕ್ಕೆ ಹೋಲಿಕೆ ಕಂಡುಬಂದಲ್ಲಿ, ಕಾಕತಾಳೀಯ ಎಂದು ಹೇಳಬಹುದಿತ್ತು. ಆದರೆ ಇಲ್ಲಿ ನನಗೆ ಸಂಭಂದಿಸಿದ ಎಲ್ಲಾ     ಘಟನೆಗಳು ಮಾತ್ರವಲ್ಲ, ಗೆಳೆಯರು, ಸ್ಥಳ, ಸಮಯ ಸಂಧರ್ಭ ಎಲ್ಲವೂ ನನ್ನ ನಿಜ ಜೀವನದಲ್ಲೇ ನಡೆದಿದೆ. ಅದಕ್ಕೆ ನಾನೇ ಸಾಕ್ಷಿ. ನನ್ನ ಹೆಸರು ಮಾತ್ರವಲ್ಲ ನೀವು ಎಲ್ಲರ  ಹೆಸರನ್ನು ಬಹಳ ನಾಜೂಕಾಗಿ ಬದಲಾವಣೆ ಮಾಡಿಕೊಂಡಿದ್ದೀರಾ. ಎಷ್ಟಾದರೂ ಕಥೆಗಾರರಲ್ಲವೇ.. " ಅಂದರು.

ಅವರ ಧ್ವನಿ ಇನ್ನೂ ಗಡುಸಾಗಿತ್ತು. 
ನನಗೆ ಏನು ಹೇಳಬೇಕು ಅಂತ ತೋಚಲಿಲ್ಲ. ಸುಮ್ಮನಿದ್ದೆ

ಅವರೇ ಮುಂದುವರೆಸಿದರು "  ನೀವೆಲ್ಲಾ ಕಥೆಗಾರರು, ಬರಹಗಾರರು ಫೇಸ್ಬುಕ್ ನಲ್ಲಿ ಒಂದೆರಡು ಅಸಂಬದ್ಧ  ಕಥೆ ಗಳನ್ನು ಗೀಚಿದ ಕೂಡಲೇ ನಿಮಗೆ ನೀವೇ ರನ್ನ, ಪಂಪ ಇಲ್ಲವೇ ಕುವೆಂಪು, ಬೈರಪ್ಪ ಅಂತ ತಿಳಿದು ಕೊಂಡು ಬಿಡ್ಡುತ್ತಿರಾ. ನಿಮಗೆ ಎಲ್ಲಾ ಲೈಕ್ಸ್, ಕಾಮೆಂಟ್ಸ್ ಗಳ ಹುಚ್ಚು..
ನಿಮ್ಮ ಕಥೆಗೆ ಇಷ್ಟ ಬಂದ ಘಟನೆಗಳನ್ನು ತುರುಕಿಕೊಂಡು ಏನೋ ಒಂದು ಕಲ್ಪನೆ ಮಾಡಿ ಕಥೆ ಬರೆದು ಬಿಡುತ್ತೀರಾ.ನಿಮ್ಮಂತಹ ಕಥೆಗಾರ ರ ಚಟವೇ ಇಷ್ಟು.. " ಅಂದು ಬಿಟ್ಟರು.

ನನಗಂತೂ ಈಗ ನಿಜವಾಗಿಯೂ ನೋವಾಗಿತ್ತು. ಕೆಲವೊಮ್ಮೆ ಜನ ಅದೆಷ್ಟು ಚೀಫ್ ಆಗಿ ಮಾತಾಡಿ ಹರ್ಟ್ ಮಾಡಿ ಬಿಡ್ತಾರಪ್ಪ ಅಂತ ಅನಿಸಿತು. ಅವರು ಹೇಳಿದ ಆ ಮಾತು" ಎಷ್ಟಾದರೂ ನೀವು ಕಥೆಗಾರರು ಅಲ್ಲವೇ.. " ನನ್ನನು ಬಲವಾಗಿ ಚುಚ್ಚಿ ಬಿಟ್ಟಿತು.

ಕೆಲವೊಮ್ಮೆ ಈ ತರಹದ ಕೆಲವು ಜನರು ಕಥೆಗಾರರು ಅಂದರೆ ನಿಜ ಜೀವನದಲ್ಲೂ ಸುಳ್ಳು ಹೇಳುವವರು, ಬರೀ ಬಂಡಲ್  ಹೇಳುವವರು ಅಂತ ತಿಳಿದುಕೊಂಡುಬಿಡುತ್ತಾರೆ. ಸತ್ಯ ಹೇಳಿದರೂ  ನಂಬಲ್ಲ. ಕೆಲವೊಮ್ಮೆ ಅವರಿಗೆ ಸತ್ಯ ಹೇಳುವ ಹಕ್ಕೇ ಇಲ್ಲವೇನೋ ಅನ್ನಿಸಿಬಿಡುತ್ತದೆ. ತನ್ನ ದೇ ಸ್ವಂತ ಕಥೆ ಹೇಳಿದರೂ ಕೂಡ ಏನೋ ಕಥೆ ಕಟ್ಟುತ್ತಿದ್ದಾನೆ ಅಂತ ಹೇಳಿ ಬಿಡುತ್ತದೆ ಸಮಾಜ. ಆದರೆ ನಿಜವಾಗಿ ಕಥೆ ಯ ಆಚೆಯೂ ಕಥೆಗಾರ ನಿಗೆ ಒಂದು ಬದುಕಿದೆ. ಅವನಿಗೂ ಭಾವನೆಗಳಿವೆ ಎಂದು ಹೆಚ್ಚಿನವರು ಅರ್ಥ ಮಾಡಿಕೊಳ್ಳುವುದೇ ಇಲ್ಲ.
ಕಥೆಗಾರ ಎಲ್ಲರ ಕಥೆ ಬರೆಯುತ್ತಾನೆ ಆದರೆ ಕೆಲವೊಮ್ಮೆ ಆ ಕಥೆಗಾರನ ಕಥೆ ಬರೆಯುವವರು ಯಾರೂ ಇರುವುದಿಲ್ಲ!! 

ಕೆಲವೊಮ್ಮೆ ಕಥೆಗಾರ ತನ್ನ ಕಥೆಗಳಲ್ಲಿ ತಾನೇ ಕುಡುಕ, ಕಾಮುಕ, ರಸಿಕ, ಹೆಣ್ಣುಬಾಕ ಹೀಗೆ ಏನೇನೋ ಹೇಳಿಕೊಂಡು ಹೋಗುತ್ತಾನೆ. ಅದು ಆತನ ಕಲ್ಪನೆ ಅಷ್ಟೇ. ಆದರೆ ನಿಜ ಜೀವನದಲ್ಲಿ ಅವನು ಅದೇ ಆಗಿರುವುದಿಲ್ಲ. ತುಂಬಾನೇ ಸಂಬಾವಿತ ಕೂಡ ಆಗಿರಬಹುದು. ಆದರೆ ಜನಕ್ಕೆ ಅದನ್ನು ತಿಳಿಯುವ ಆಸಕ್ತಿ ಯೂ ಇಲ್ಲ ಧಾವಂತ ವೂ ಇಲ್ಲ. ಕಥೆಯ ಪಾತ್ರದಂತೆಯೇ ಕಥೆಗಾರ ಎಂದು ನಿರ್ದರಿಸಿಯಾಗಿರುತ್ತದೆ.

ಯಾಕೋ ಗೊತ್ತಿಲ್ಲ "ಎಷ್ಟಾದರೂ ನೀವು ಕಥೆಗಾರರು ಅಲ್ಲವೇ.." ಎಂಬ ಸಾಲು ನನ್ನನು ತುಂಬಾನೇ ನೋಯಿಸಿಬಿಟ್ಟಿತು. ಬೇಜಾರಾಗಿ 
ತಲೆತಗ್ಗಿಸಿ ನಿಂತು ಬಿಟ್ಟೆ.

ಅವರಿಗೆ ಏನು ಅನಿಸಿತೋ ಏನೋ, ಮಾತು ಶುರು ಮಾಡಿದರು "ನೋಡಿ ಪಚ್ಚು ನನ್ನ ಮಾತುಗಳಿಂದ ನಿಮಗೆ ಬೇಜಾರು ಆಗಿದೆ ಎಂದು ನನಗೆ ಗೊತ್ತು. ಕೋಪದ ಬರದಲ್ಲಿ ಏನೇನೋ ಹೇಳಿಬಿಟ್ಟೆ, sory.."

ತಲೆತಗ್ಗಿಸಿಯೇ "ಆಯ್ತು ಪರವಾಗಿಲ್ಲ ಬಿಡಿ.. Its ok" ಅಂದೆ.

"ನೋಡಿ ನೀವು ಏನೇ ಹೇಳಿದರೂ ಅದು ಕಾಲ್ಪನಿಕ  ಎಂದು  ನಂಬಲು ನಾನು ಈಗಲೂ ತಯಾರಿಲ್ಲ. ಆದೆ ರೀತಿ  ನೀವು ನನ್ನ ಕಥೆಯನ್ನು ಬಳಸಿಕೊಂಡದಕ್ಕೂ ಕೂಡ ನನಗೇನೂ  ಬೇಜಾರೂ ಇಲ್ಲ. ಫೇಸ್ಬುಕ್ ನಲ್ಲಿ ನೀವು ಕೂಡ ನನ್ನ ಫೇವರೆಟ್ ಕಥೆಗಾರರೇ.ಚೆನ್ನಾಗಿ ಬರೀತೀರಾ. ನೀವು ನನ್ನ ಕಥೆಯನ್ನು ನಿಮ್ಮ ಕಥೆಗೆ ಬಳಸಿಕೊಂಡಿದ್ದೀರಿ ಎಂದು ಗೊತ್ತಾದಾಗ ತುಂಬಾನೇ ಖುಷಿಯಾಗಿತ್ತು. ಆದರೆ  ಪಚ್ಚು ನೀವು ಕಥೆಯಲ್ಲಿ ನನ್ನ ಪಾತ್ರ ಅಂದರೆ ಶಾಲ್ಮಲಿ ಯನ್ನು ಬಳಸಿಕೊಂಡ ರೀತಿಗೆ, ದುಡಿಸಿಕೊಂಡ ರೀತಿಗೆ ಮಾತ್ರ ನನಗೆ ನಿಜವಾಗಿಯೂ ಬೇಜಾರು ಇದೆ.. ಅದಕ್ಕಾಗಿ ಯೇ ನಾನು ಕೋಪದಲ್ಲಿ ನಿಮಗೆ ಇಷ್ಟೊಂದು ಬೈಬೇಕಾಗಿ ಬಂತು..Im really sorry " ಅಂದರು.

ಅವರು ಇನ್ನು ಏನೇನೋ ಬೈಯುತ್ತಾರೆ ಎಂದು ಕೊಂಡಿದ್ದ ನಾನು ಅವರ ಅನಿರೀಕ್ಷಿತ ಬದಲಾದ  ಮಾತಿನ ಧಾಟಿಯಿಂದ, ಕೊನೆಯಲ್ಲಿ ಅವರು  ಆಡಿದ ಅವರ ಆ  ಸೌಮ್ಯ ಮಾತುಗಳಿಗೆ, ಅಲ್ಲಿಯವರೆಗೆ ತಲೆತಗ್ಗಿಸಿಯೇ ಇದ್ದವನು,  ಈ story  ಬೇರೆ ಎಲ್ಲೋ ಹೋಗ್ತಾ ಇರುವ ಹಾಗೆ ಉಂಟಲ್ಲಾ ಅಂದು ತಲೆ ಎತ್ತಿದೆ.

ನಾನು ಏನೋ ಆಗಬಹುದು ಅಂದು ಕೊಂಡಿದ್ದೆ. ಆದರೆ ಇಲ್ಲಿ ಬೇರೆ ಏನೋ ಡ್ರಾಮ ಆಗುವಂತಿದೆ. ಇರಲಿ ಇರಲಿ ಏನು ಎಂದು ಕಾದು ನೋಡುವ. ಹಾಗೆ ಸ್ವಲ್ಪ ಉತ್ಸಾಹ ನೂ  ಬಂತು.ಅದೇ ಜೋಶ್ ನಲ್ಲಿ ಕೇಳಿದೆ.

"ಕೃತಿ ಅವರೇ ಯಾಕೆ ನಿಮಗೆ ನನ್ನ ಕಥೆಯಲ್ಲಿ ಶಾಲ್ಮಲಿ ಯ ಪಾತ್ರ ಇಷ್ಟ ಆಗಲಿಲ್ಲವೇ? "

"  ಪಚ್ಚು. ನೀವು ಇಡೀ ಕಥೆಯಲ್ಲಿ ಕುಶಾಲ್ ಏನು ಹೇಳುತ್ತಾನೆ, ಕುಶಾಲ್ ಅಂದರೆ ಏನು ಅಂತ ಹೇಳುತ್ತಾ ಹೋದಿರಿ, ಆದರೆ ನೀವು ಯಾಕೆ ಒಮ್ಮೆಯೂ ನಿಮ್ಮ ಕಥೆಯಲ್ಲಿ ಶಾಲ್ಮಲಿ ಯನ್ನು ಮಾತಾಡಿಸಲೇ ಇಲ್ಲ!! ಯಾಕೆ ಶಾಲ್ಮಲಿ ಗೆ ಮಾತಾಡಲು ಏನೂ ಇರಲೇ ಇಲ್ಲವೇ.?

ಕಥೆ ಎಲ್ಲವೂ ಕುಶಾಲ್ ನ perspective ನಲ್ಲೇ ಸಾಗಿತ್ತು, ಓದುವವನಿಗೆ ಶಾಲ್ಮಲಿ ಯ perspective ಏನು ಎಂದು ಗೊತ್ತಾಗುವುದು ಬೇಡವೇ. ಈ ರೀತಿ ಆದರೆ ನೀವು ಆ ಪಾತ್ರಕ್ಕೆ ಯಾವ ರೀತಿಯ ನ್ಯಾಯ ಒದಿಗಿಸಿದಂತೆ ಆಗುತ್ತದೆ ಪಚ್ಚು, ನೀವೇ ಹೇಳಿ.. ಶಾಲ್ಮಲಿ ಗೂ ಹೇಳಿಕೊಳ್ಳಲು ತುಂಬಾ ಇರಬಹುದು ಅಲ್ಲ! " ಅಂದರು.

ನಾನು ಬೆಚ್ಚಿ ಬಿದ್ದೆ. ನಾನು ಬರೆದ ಕಾಲ್ಪನಿಕ ಕಥೆಯ ಪಾತ್ರವೊಂದು ಜೀವಂತವಾಗಿ ಈ ರೀತಿಯಾಗಿ ನಡು ರಸ್ತೆಯಲ್ಲಿ ನಿಲ್ಲಿಸಿಕೊಂಡು ನನ್ನ ಕೊರಳಪಟ್ಟಿ ಹಿಡಿದು, ನೀನು ನನ್ನ ಪಾತ್ರಕ್ಕೆ ನ್ಯಾಯ ದೊರಕಿಸಿ ಕೊಟ್ಟಿಲ್ಲ,ನನ್ನ ಮಾತುಗಳನ್ನು ಕೇಳಿಸಿಕೊಂಡಿಲ್ಲ. ಇದು ನ್ಯಾಯವೇ, ಉತ್ತರ ಹೇಳು ಎಂದು  ಕೇಳಿದರೆ.. ನಾನು ಹೇಗೆ ಉತ್ತರ ಕೊಡಲಿ!

ಅದೊಂದು ಕಥೆ, ಕಥೆಯನ್ನು ಹೇಗೆ ಬೇಕಾದರೂ ನಡೆಸಿ ಕೊಂಡು ಹೋಗುವುದು ಅದು ಬರಹಗಾರನಿಗೆ ಬಿಟ್ಟದ್ದು. ಅದು ಅವನ ಸ್ವಾತಂತ್ರ್ಯ. ಕಥೆ ಹೀಗೆ ಇರಬೇಕಿತ್ತು, ಹಾಗೆ ಇರಬೇಕಿತ್ತು ಎಂದು ಬೇರೆ ಯಾರಿಗೂ ಹೇಳಲು ಬರುವುದಿಲ್ಲ .ಏಕೆಂದರೆ ಅದು ಅವನ ಮಗು, ಇಷ್ಟ ಬಂದಲ್ಲಿಗೆ ಕರೆದುಕೊಂಡು ಹೋಗುತ್ತಾನೆ. ಯಾಕೆಂದರೆ ಆ ಮಗುವಿಗೆ ಕಥೆಗಾರನೇ ತಂದೆ.

ಆದರೆ ಈ ಎಲ್ಲಾ ಸೂಕ್ಷ್ಮತೆ ಇವರಿಗೆ ಹೇಗೆ ಹೇಳಲಿ. ಅವರು ಅರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಅವರು ಅದು ಅವರದ್ದೇ ಕಥೆ ಆ ಶಾಲ್ಮಲಿ ಅವರೇ ಎಂದು ಡಿಸೈಡ್ ಮಾಡಿ ಆಗಿದೆ.ಅವರನ್ನು ಹೇಗೆ ಒಪ್ಪಿಸುವುದು ಎಂದು ನನಗೆ ಗೊತ್ತಾಗಲಿಲ್ಲ.

ಆದರೆ ಯಾಕೋ ನಿಧಾನವಾಗಿ ಯೋಚಿಸಿದಾಗ ನನಗೆ ಅವರು ಹೇಳಿದುದರಲ್ಲಿ ತಪ್ಪೆನು ಕಂಡುಬರಲಿಲ್ಲ. ನಿಜವಾಗಿಯೂ ನಾನು ನನ್ನ ಕಥೆಯಲ್ಲಿ ಶಾಲ್ಮಲಿ ಯನ್ನು ಮಾತಾಡಿಸಿಯೇ ಇಲ್ಲ .ಜಸ್ಟ್ ನನಗೆ ಬೇಕಾದ ಹಾಗೆ ದುಡಿಸಿಕೊಂಡಿದ್ದೆನೆ. ಆ ಪಾತ್ರ ಹಾಗೇ ಬರಬೇಕು ಅಂದು ಕೊಂಡಿದ್ದೆ ಅದಕ್ಕಾಗಿ ಅಷ್ಟಾಗಿ ಮಾತಾಡಿಸಿರಲಿಲ್ಲ. ಆದರೆ ಇವರು ಹೇಳುವ ಹಾಗೆ ಆ ನಿಮ್ಮ ಕಥೆಯ ಶಾಲ್ಮಲಿ ನಾನೇ, ನನಗೂ ಕಥೆಯಲ್ಲಿ  ಮಾತನಾಡಬೇಕಿತ್ತು, ನನ್ನ ಮಾತನ್ನು ಕೂಡ ಸ್ವಲ್ಪ ಕೇಳಿಸಿಕೊಳ್ಳಿ ಎಂದು ಪರಿ ಪರಿಯಾಗಿ  ಕೇಳಿಕೊಂಡರೆ ಜಸ್ಟ್ ಕೇಳಿಸಿಕೊಂಡು ಹೋಗಲು ನನಗೇನು ಕಷ್ಟ.

"ಆಯ್ತು ಕೃತಿ ಅವರೇ.. ನಿಮಗೆ ಏನು ಹೇಳಬೇಕು ಅಂತ ಇತ್ತೊ ಅದನ್ನು ಹೇಳಿ" ಅಂದೆ.

"ನೋಡಿ ಪಚ್ಚು, ನೀವು ನಿಮ್ಮ ಕಥೆಯನ್ನು ಬದಲಾಯಿಸಿ ಕೊಳ್ಳಿ ಎಂದು ನಾನು ಹೇಳಲಾರೆ. ಆದರೆ ನಾನು ಒಂದಿಷ್ಟು ಮಾತುಗಳನ್ನು ನನ್ನ perspective ನಲ್ಲಿ ಹೇಳಬೇಕು. ನಿಮಗೆ ಅಲ್ಲ ಕುಶಾಲ್ ಗೆ! ನನಗೆ ಗೊತ್ತು ಅವನು ನಿಮಗೆ contact ನಲ್ಲಿ ಇದ್ದಾನೆ ಎಂದು. ದಯಮಾಡಿ ನನ್ನ ಮಾತುಗಳನ್ನು ಅವನಿಗೆ ತಲುಪಿಸಿಬಿಡಿ, ಪ್ಲೀಸ್" ಅಂದರು

ನಾನು ಏನು ಹೇಳಲಿ. ಹೇಗೆ ಇವರ ಈ ಮಾತುಗಳನ್ನು ನನ್ನ ಕಾಲ್ಪನಿಕ ಕುಶಾಲ್ ಗೆ ಮುಟ್ಟಿಸಲಿ,ಹೋಗಿ ಯಾವ ಸಮಾದಿ ಆಗೆದು ತೆಗೆಯಲಿ ಈ ನಿಜ ಜೀವನದಲ್ಲೇ ಇಲ್ಲದ ನನ್ನ ಪಾತ್ರ ಕುಶಾಲ್ ನನ್ನು!!

ಏನೇ ಇರಲಿ ಅವರಿಗೆ ವಿರುದ್ಧವಾಗಿ ಮಾತಾಡಬಾರದು   ಎಂದು ನಿರ್ಧರಿಸಿದೆ.

"ಆಯ್ತು  ಕೃತಿ ಅವರೇ ನಿಮ್ಮ ಅನಿಸಿಕೆ ಹೇಳಿ, ತಲುಪಿಸುವ ಪ್ರಯತ್ನ ಮಾಡುತ್ತೇನೆ.   ಕಥೆಯಲ್ಲಿ ಅಂತು ನಿಮ್ಮಿಬ್ಬರನ್ನು ಪರಸ್ಪರ ಎದುರು ಬದುರು  ನಿಲ್ಲಿಸಿ   ಮಾತಾಡಿಸಿಲ್ಲ. ಕನಿಷ್ಠ ಪಕ್ಷ ಈ ರೀತಿಯಾದರೂ ನೀವು ಒಮ್ಮೆ ಮಾತಾಡಿ ಬಿಡಿ.ನನ್ನ ಕಥೆಯಲ್ಲಿ  ನನ್ನ ಕತೆಯ ಪಾತ್ರ  ಕುಶಾಲ್ ಕಥೆ ಹೇಳಿದ್ದ, sorry.. ಕಥೆ ಹೇಳಿಸಿದ್ದೆ. ನನ್ನ ಕತೆಯ ಮತ್ತೊಂದು ಪಾತ್ರ ಶಾಲ್ಮಲಿ, ನಿಮ್ಮ ಮೂಲಕ ಆಕೆ ಅವಳ ಕಥೆ ಹೇಳುತ್ತಾಳೆ ಎಂದು ಬಂದರೆ ನಾನೇಕೆ ತಡೆಯಲಿ" ಅಂದೆ.

ನಾನಂತೂ ಮೊದಲೇ ಡಿಸೈಡ್ ಮಾಡಿದ್ದೆನೆ ನಾನು ಕಥೆ ಹೇಳಲ್ಲಾ ಎಂದು.ಆದರೆ ಯಾವುದಾದರೂ ನನ್ನ ಕಥೆಯ ಪಾತ್ರ ನನ್ನ ಕಥೆ ಹೇಳುತ್ತೆನೆ ಎಂದು ಬಂದರೆ ನಾನಂತೂ ತಡೆಯಲ್ಲ..

ಮಾತು ಮುಂದುವರೆಸಿದೆ "ಇಲ್ಲೇ ನನ್ನ ಪಕ್ಕದಲ್ಲಿಯೇ ಆ ನಿಮ್ಮ ಕುಶಾಲ್ ನಿಂತುಕೊಂಡು ಇದ್ದಾನೆ ಎಂದು imagination ಮಾಡಿಕೊಂಡು ಎಲ್ಲವನ್ನೂ ಅವನಿಗೇ ಡೈರೆಕ್ಟ್ ಆಗಿ ಹೇಳಿದಂತೆ ಫೀಲ್ ಮಾಡಿಕೊಂಡು  ಹೇಳಿಬಿಡಿ..

.. ಶಾಲ್ಮಲಿ ಯ ಮನಸ್ಸಿನಲ್ಲಿದ್ದದ್ದೂ ಕೂಡ  ಎಲ್ಲವೂ ಹೊರ ಬರಲಿ. ಎಲ್ಲವನ್ನೂ ಕೇಳಿಸಿಕೊಂಡು ಯಾರಿಗೆ ತಲುಪಿಸಬೇಕೋ ಅವರಿಗೆ  ತಲುಪಿಸುವ ಪ್ರಯತ್ನ ಮಾಡುತ್ತೇನೆ.. ನಿಮ್ಮ ಸಮಧಾನಕ್ಕಾಗಿ " ಅಂದೆ.

ಯಾಕೋ ಗೊತ್ತಿಲ್ಲ ಅವರು ಸ್ವಲ್ಪ ಗಂಭೀರವಾದರು. ನನ್ನ ಪಕ್ಕದಲ್ಲಿಯೇ ನೋಡಿಕೊಂಡು..

" ಕುಶಾಲ್....... " ಎಂದು ಕರೆದರು.

ನನಗೆ ಯಾಕೋ  ನನ್ನ ಪಕ್ಕದಲ್ಲಿಯೇ ಕೈ ಕಟ್ಟಿ ಕೊಂಡು, ತಲೆ ತಗ್ಗಿಸಿಕೊಂಡು ನನ್ನ ಕಥೆಯ ನಾಯಕ imaginary ಕುಶಾಲ್ ನಿಜವಾಗಿಯೂ ಅಲ್ಲಿ  ತನ್ನ ಪ್ರೀತಿಯ ಶಾಲ್ಮಲಿ ಯ ಮಾತುಗಳನ್ನು ಕೇಳಿಸಿಕೊಳ್ಳಲು ನಿಂತಿದ್ದಾನೆ ಎಂದು ಒಮ್ಮೆ ಭಾಸವಾದಂತಾಯಿತು.

ಹೂಂ, ಇರಲಿ ನೋಡ್ತೆನೆ ಈ ಕೃತಿ ಒಳಗಿನ ಶಾಲ್ಮಲಿ ಏನು ಕಥೆ ಹೇಳುತ್ತಾಳೆ ಅಂತ..ನನ್ನ ಕಥೆಯಲ್ಲಿ ನಾನು ಹೇಳದ ಇನ್ನೊಂದು ಕಥೆ ನಾನೇ ಕೇಳಲು ರೆಡಿ ಆದೆ. 
ಇಲ್ಲ ಇದನ್ನು ಕೂಡ ನಾನೇ ಸೃಷ್ಟಿಸಿಕೊಂಡಿದ್ದ!! ಈ ರೀತಿಯ ಕೃತಿಯ ಪಾತ್ರವೊಂದನ್ನು ಸೃಷ್ಟಿಸಿ ನಾನು ಕುಶಾಲ್ ನ ಕಥೆಯಲ್ಲಿ ಹೇಳಲು ಸಾಧ್ಯವಾಗದೇ ಇರುವ ಕಥೆಯನ್ನು ಇಲ್ಲಿ ಹೇಳಿಸುತ್ತಿದ್ದೇನಾ? 
ಹಾಗಾದರೆ ಕೃತಿ ಕೂಡ ನನ್ನದೇ ಕಾಲ್ಪನಿಕ ಪಾತ್ರವೇ?! 

ನನ್ನ ಪಕ್ಕದಲ್ಲಿಯೇ ಕುಶಾಲ್ ಇದ್ದಾನೆ ಎಂದು ನಿಜವಾಗಿಯೂ  ಕಲ್ಪಿಸಿಕೊಂಡು, ನನ್ನ ಪಕ್ಕವೇ  ನೋಡಿಕೊಂಡು ಅವರು imaginary ಕುಶಾಲ್ ನೊಂದಿಗೆ ಮಾತುಕತೆ ಮುಂದುವರಿಸಿದರು.

" ಗೆಳೆಯ ಕುಶಾಲ್.. 
ಹೇಗಿದ್ದಿ, ಕುಶಲವೇ.. ಕ್ಷೇಮವೇ.. ಎಂದು ನಾನು ಕೇಳಲಾರೆ. ನೀನು ಪಚ್ಚು ಬಳಿ ಹೇಳಿಕೊಂಡ ಕಥೆಯಲ್ಲಿ  ಇಷ್ಟು ವರ್ಷವೂ ಖುಷಿಯಲ್ಲಿ ಇದ್ದದ್ದು ನನಗೆ ಎದ್ದು ಕಾಣಲಿಲ್ಲ.! ನಿನಗೆ ಅದು ಯಾರೂ ಕುಶಾಲ್ ಎಂದು ಹೆಸರಿಟ್ಟರೋ, ಹೆಸರಿಗೆ ತಕ್ಕಂತೆ ಆದರೂ ಕುಶಲವಾಗಿರಬೇಕಿತ್ತಲ್ಲವೇ ಕುಶಾಲ್..

ನೀನೆನೋ ನಿನ್ನ ಕಥೆಯನ್ನು ಹೇಳಿಕೊಂಡು ಬಿಟ್ಟೆ. ಮನಸ್ಸು ಹಗುರ ಮಾಡಿಕೊಂಡು ಬಿಟ್ಟೆ. ಆದರೆ ಕುಶಾಲ್ ನನ್ನಲ್ಲಿಯೂ ಹೇಳಲೇಬೇಕಾದ  ಅದೆಷ್ಟು ಮಾತುಗಳು ಉಳಿದು ಹೋಗಿದೆ. ಆದರೆ ಯಾರಲ್ಲಿ ಹೇಳಲಿ.. ಹೇಗೆ ಹೇಳಲಿ.. ಹೇಳದೇ ಹೋದರೆ ತಪ್ಪಾದೀತು. ಹೇಳದೇ ಅದೆಲ್ಲವೂ ನನ್ನಲ್ಲೇ ಉಳಿದರೆ  ಈ ಜಗತ್ತು ನನ್ನನ್ನು ತಪ್ಪಾಗಿ ಅರ್ಥ ಮಾಡಿಕೊಂಡು ಬಿಡುತ್ತದೆ ಕುಶಾಲ್.!

ನೀನು ಪೈನಲ್ ಇಯರ್ ನಲ್ಲಿ ಇರುವಾಗ ಕುಡಿದು ಒಮ್ಮೆ ಕಾಲ್ ಮಾಡಿದ್ದೆ. ನೆನಪಿದೆಯಾ ಕುಶಾಲ್. ನೀನು ಕಥೆಯಲ್ಲಿ ಹೇಳಿದೆ ಕುಡಿದು  ನೀನು ಏನು ಹೇಳಿದೆ ಎಂದು ನಿನಗೇ ನೆನಪಿಲ್ಲವೆಂದು. ಆದರೆ ಅವತ್ತು ನೀನಾಡಿದ ಅಷ್ಟೂ ಮಾತುಗಳನ್ನು ನಾನಿಲ್ಲಿ ಬೇಕಾದರೆ ರಿಪೀಟ್ ಮಾಡಬಲ್ಲೆ ಕುಶಾಲ್. ಅವತ್ತು ನೀನು ಹೇಳುತ್ತಾ ಹೋಗಿದ್ದೆ, ನಾನು ಕೇಳುತ್ತಾ ಕೂತಿದ್ದೆ.

ನೀನು ಅವತ್ತು ಪೋನು ಮಾಡಿ  ಹೇಳಿಕೊಂಡದ್ದು ಅದೇ, ನನ್ನಡೆಗೆ ಇದ್ದ ನಿನ್ನ ಅಪರಿಮಿತ ಪ್ರೀತಿ. ಬಹುಶಃ ಕುಡಿಯದಿದ್ದರೆ ನೀನು ಅಂತಹ ವಿಷಯವನ್ನೇ  ನನ್ನ ಬಳಿ ಮಾತಾಡುತ್ತಿರಲಿಲ್ಲವೇನೋ.. ಹೇಗೆ ಮಾತಾಡುತ್ತಿ ನನ್ನನ್ನು ಕಾಲೇಜು ಕಾರಿಡಾರಿನಲ್ಲಿ ಕಂಡರೂ ಹೆದರಿ ಓಡಿ  ಹೋಗುವವನು ನೀನು, ಒಮ್ಮೆಯೂ ತಲೆ ಎತ್ತಿ ಮಾತಾಡಿಸಿದವನಲ್ಲ.. ನೀನು ಇದೆಲ್ಲಾ ಹೇಗೆ ಹೇಳಬಲ್ಲೆ ಅಲ್ಲವೇ.

ಆದರೆ ಕುಶಾಲ್ ಪ್ರತಿಯೊಂದು ಹುಡುಗಿಗೂ ತನ್ನನ್ನು ಒಬ್ಬ ಹುಡುಗ ಪ್ರೀತಿಸುತ್ತಿದ್ದಾನೆ ಎಂದು ಅವನು ಹೇಳದೇ ಇದ್ದರೂ ಕೂಡ, ಅವನು ಪ್ರೀತಿಸುವ ಕ್ಷಣದಿಂದಲೇ ಅದು  ಅವಳ ಅರಿವಿಗೆ ಬಂದಿರುತ್ತದೆ.

ನೀನು ನನ್ನನ್ನು ಪ್ರೀತಿಸುತ್ತಿದ್ದಿ ಎಂದು ಅರಿವಾಗಲೂ ನನಗೇ ಫೈನಲ್ ಇಯರ್ ತನಕ ಬರಬೇಕಾಗಿ ಇರಲಿಲ್ಲ.. ನೀನು ಕುಡಿದು ಕಾಲ್ ಮಾಡಿ ಹೇಳಬೇಕಾಗಿರಲಿಲ್ಲ.. ನೀನು ನನ್ನನ್ನು ಪ್ರೀತಿಸುತ್ತಿ, ನನ್ನನ್ನು ಎಲ್ಲರಿಗಿಂತಲೂ ಜಾಸ್ತಿ ಗೌರವಿಸುತ್ತಿ, ಮಾತ್ರವಲ್ಲ ನಾನು ಎದುರಿಗೆ ಬಂದು ನಿಂತರ ನಿನ್ನ ಹೃದಯದ ಬಡಿತ ಏರುಪೇರಾಗುತ್ತದೆ ಎಂದು ನನಗೆ ಫಸ್ಟ್ ಇಯರ್ ನಲ್ಲಿ ಗೊತ್ತಾಗಿತ್ತು ಕುಶಾಲ್!!

ಹಾಗಾದರೆ ನೀನು ಒಂದು ಪ್ರಶ್ನೆ ಕೇಳಬಹುದು, ಶಾಲ್ಮಲಿ ಕಾಲೇಜಿನ ಆ ದಿನಗಳಲ್ಲಿ ನಾನು ನಿನ್ನನ್ನು ಪ್ರೀತಿಸುತ್ತಿದ್ದೆನೆ ಎಂದೂ ಗೊತ್ತಾದ ಮೇಲೆ, ನೀನು ಕೂಡ  ನನ್ನನ್ನು ಪ್ರೀತಿಸಿದ್ದೆಯಾ?

ಈ ಪ್ರಶ್ನೆಗೆ ನಾನು ಉತ್ತರ ಹೇಳಲಾರೆ.ಉತ್ತರ ಪಡೆದು ಕೊಂಡು ಈಗ ಏನೂ ಕೂಡ ಆಗಬೇಕಾಗಿಲ್ಲ. ಅದರ ಅವಶ್ಯಕತೆ ಯೇ ಇಲ್ಲ. ಅದೂ ಅಲ್ಲದೆ ನಾನು ಏನೋ ಹೇಳಲು ಹೋಗಿ ನಿನ್ನ ಬಾಳನ್ನು ಪುನಃ ಅಲ್ಲೋಲ ಕಲ್ಲೋಲ ಮಾಡಲಾರೆ.ಈ ಪ್ರಶ್ನೆ ಗೆ ಉತ್ತರ ಕೊನೆಯವರೆಗೂ ನನ್ನಲ್ಲೇ ಉಳಿದುಬಿಡಲಿ ಕುಶಾಲ್ !!

ಇನ್ನೂ ಒಂದು ಪ್ರಶ್ನೆ ಕೇಳು ಕುಶಾಲ್... ಶಾಲ್ಮಲಿ,  ಈಗಲೂ ನನ್ನ ಮೇಲೆ ಅಲ್ಪ ಸ್ವಲ್ಪ ಪ್ರೀತಿ ಉಳಿದಿಲ್ಲವೇ  ?

ಖಂಡಿತವಾಗಿಯೂ ಉತ್ತರ ಎಂದಿಗೂ ಇಲ್ಲವೆಂದೇ ಇರುತ್ತದೆ. ನಾನೀಗ ವಿವಾಹಿತೆ. ನನಗೊಂದು ಮಗು ಇದೆ. ಮುದ್ದಾದ ಸಂಸಾರ ಇದೆ. ಎಲ್ಲರೂ ಒಳ್ಳೆಯವರೇ. ಎಲ್ಲರೂ ಖುಷಿಯಲ್ಲಿ ಇದ್ದೆವೆ. ಆದರೆ ಒಂದೇ ಒಂದು ಬೇಜಾರು ನನ್ನ ಗೆಳೆಯ,ನನ್ನ ಕ್ಲಾಸ್ ಮೇಟ್ ಕುಶಾಲ್ ಖುಷಿಯಲ್ಲಿ ಇಲ್ಲ ಅಷ್ಟೇ.

ಕುಶಾಲ್ ನೀನು ಯಾವತ್ತೂ ನನ್ನ ಗೆಳೆಯ ನಾಗಿದ್ದೆ, ನಾನು ಯಾವತ್ತೂ ನೀನು ಫೀಲ್ ಮಾಡಿಕೊಳ್ಳುವ ರೀತಿಯಲ್ಲಿ ವರ್ತಿಸಿಯೇ ಇಲ್ಲ. ಅಂತಹ ಸನ್ನಿವೇಶ ವನ್ನು ಕೂಡ ಉಂಟುಮಾಡಿಕೊಡಲಿಲ್ಲ. ನೀನು ನನ್ನ ಫ್ರೆಂಡ್ ಆಗಿದ್ದೆ, ಮಾತ್ರವಲ್ಲ ಇಂದಿಗೂ ಹುಡುಗರಲ್ಲಿ ನನಗೆ ಯಾರಾದರೂ ಒಳ್ಳೆಯ ಗೆಳೆಯರಿದ್ದರೆ ಅದರಲ್ಲಿ ಮೊದಲನೆಯವ ನೀನೇ ಆಗಿರುತ್ತಿಯಾ ಕುಶಾಲ್.

ನೀನು ಎಲ್ಲರೊಂದಿಗೂ ತುಂಬಾನೇ ಮಾತಾಡುತ್ತಿದ್ದೆ ಆದರೆ ನನ್ನ ಮುಂದೆ ಬಂದರೆ ಮಾತು ಮರೆಯುತ್ತಿದ್ದೆ. ನಾನಂತೂ ಮೊದಲೇ ಕಡಿಮೆ ಮಾತಾಡುವವಳು,ಅದು ಹುಡುಗರಾಗಿರಲಿ, ಹುಡುಗಿಯೇ ಇರಲಿ. ಈ ರೀತಿ ಇಬ್ಬರು ಮಾತು ಬರದ ಮೂಗರು ಎದುರು ನಿಂತುಕೊಂಡು ಪರಸ್ಪರ ಏನು ಮಾತಾಡಬಹುದು ಅಲ್ಲವೇ. 
ಎದುರು ಸಿಕ್ಕಾಗ ಮಾತನಾಡಿದುದಕ್ಕಿಂತಲೂ ಫೋನ್ ಚಾಟ್ ನಲ್ಲಿ ಮಾತಾಡಿದ್ದೆ ಜಾಸ್ತಿ ನಾವು. 

ಕುಶಾಲ್ ನಾನು ನಿನ್ನ ಒಳ್ಳೆಯ ಗೆಳತಿ ಮಾತ್ರವಲ್ಲ, ನಿನ್ನ ಬಾಳಿನ ಹಿತೈಷಿ ಆಗಿದ್ದೆ. ನಿನಗೆ ಒಳ್ಳೆಯದಾಗಲಿ ಎಂದು ಸದಾ ಬಯಸುತ್ತಿದ್ದೆ. ಕೇರ್ ಮಾಡುತ್ತಿದ್ದೆ.

ನೀನು ನನಗೆ ಡೈರೆಕ್ಟರ್ ಆಗಬೇಕು ಎಂದು ಆಸೆ ಅಂತ ಹೇಳಿಕೊಂಡಾಗ. ತುಂಬಾನೇ ಖುಷಿ ಪಟ್ಟಿದ್ದೆ. ನೀನು ಒಂದಲ್ಲಾ ಒಂದು ದಿನ ನಿನ್ನ ಕನಸನ್ನು ನನಸು ಮಾಡಿಕೊಳ್ಳುತ್ತಿಯಾ ದೊಡ್ಡ ಡೈರೆಕ್ಟರ್ ಆಗುತ್ತಿಯಾ ಅಂತ  ಅಂದು ಕೊಂಡಿದ್ದೆ. ಆದರೆ ಕುಶಾಲ್ ನಿನ್ನ ಈಗಿನ ಕಥೆ ಕೇಳಿದ ಮೇಲೆ ಗೊತ್ತಾಯಿತು ಇಲ್ಲ ಈಗಿರುವ ಈ ಕುಶಾಲ್ ನಿಂದ ಅದು ಸಾಧ್ಯವಿಲ್ಲ. ಈ ಕುಶಾಲ್ ಗೇ ಕನಸ್ಸುಗಳೇ ಇಲ್ಲ.. ಕನಸ್ಸುಗಳನ್ನು ನನಸು ಮಾಡಿಕೊಳ್ಳಬೇಕು ಎಂಬ ಚಲವೂ ಇಲ್ಲ. ಯಾಕೆಂದರೆ ನಾನು ನೋಡಿದ ಆಗಿನ ಕುಶಾಲ್ ನಲ್ಲಿದ್ದ, ಏನಾದರೂ ಸಾದಿಸಿಯೇ ತೀರುತ್ತೆನೆ ನನ್ನ ಕನಸು ನನಸು ಮಾಡಿಕೊಳ್ಳುತ್ತೆನೆ ಎಂಬ ಉತ್ಸಾಹ ಈಗಿನ ಕುಶಾಲ್ ನಲ್ಲಿ ಇಲ್ಲ. ಅದು ಸತ್ತು ಹೋಗಿದೆ. ಕೇವಲ ಅರ್ಥವೇ ಇಲ್ಲದ  one sided ಭಗ್ನ ಪ್ರೇಮಿಯೊಬ್ಬ ಜೀವಂತವಾಗಿದ್ದಾನೆ ಅಷ್ಟೇ.!

ಕುಶಾಲ್ ಒಂದು ಮಾತು ಹೇಳಲಾ.. ಕಾಲೇಜಿನಲ್ಲಿ ಎಲ್ಲರೂ ಸಾಮಾನ್ಯವಾಗಿ ಪ್ರೀತಿಯಲ್ಲಿ ಬಿದ್ದೇ ಬೀಳುತ್ತಾರೆ. ಆ ವಯಸ್ಸೇ ಅಂತಹದ್ದು. ಆದರೆ ನೀನೇ ಹೇಳು ಎಷ್ಟು ಪರ್ಸೆಂಟ್ ಲವ್ ಸ್ಟೋರಿ ಗಳು ಮದುವೆ ಆಗಿ ಸುಖಾಂತ್ಯ ಕಂಡಿವೆ.ಹೆಚ್ಚಾಗಿ 99 % ಲವ್ ಸ್ಟೋರಿ ಗಳು ಪ್ಲಾಪ್ ಅಲ್ಲವೇ. ಎಲ್ಲೋ ಒಂದೋ ಎರಡೋ ಸಕ್ಸೆಸ್ ಆಗಿರಬಹುದು ಆದರೆ ಉಳಿದ ಎಲ್ಲವೂ ವಯೋ ಸಹಜ ಆಕರ್ಷಣೆ ಅಷ್ಟೇ.

ಕಾಲೇಜು ಪ್ರೀತಿಗಾಗಿ ಯಾರಾದರೂ ತಮ್ಮ ಬಾಳನ್ನೇ ಕೊರಗಿ ಕೊರಗಿ ಅದೂ ಇಷ್ಟು ವರ್ಷ ಮಾನಸಿಕ ನೆಮ್ಮದಿ ಇಲ್ಲದೇ ಹಾಳುಮಾಡಿ ಕೊಳ್ಳುತ್ತಾರೆಯಾ ಕುಶಾಲ್, ಅದೂ ಕೂಡ one side ಲವ್ ಗಾಗಿ! 
ಬೇಕಾದರೆ ನಿನ್ನ ಗೆಳೆಯರನ್ನೇ ನೋಡು ರಕ್ಷಿತ್, ಶಶಾಂತ್, ದಶಾಂತ್ ಎಲ್ಲರೂ ಪ್ರೀತಿಯ ಬಲೆಗೆ ಬಿದ್ದವರೇ.. ಆದರೇ ಕೊನೆಗೆ ಏನಾಯಿತು. ಅವರ ಪ್ರೀತಿ ಸಕ್ಸೆಸ್ ಆಯಿತಾ.ಇಲ್ಲ ತಾನೇ, ಅವರೇನು  ಕೊರಗಿ  ಕೊರಗಿ ತಮ್ಮ ಬಾಳನ್ನು ಹಾಳು ಮಾಡಿಕೊಳ್ಳಲಿಲ್ಲ. ಬದುಕು ಕಟ್ಟಿಕೊಂಡರು..

ಸರಿಯಾದ ಕೆಲಸವಿಲ್ಲದೇ ಕಷ್ಟ ಪಟ್ಟೇ ಎಂದು ಹೇಳಿದೆ. ಆದರೆ ಕುಶಾಲ್ ಎಲ್ಲೋ ಕೇಳಿದ ಒಂದು ಸುಂದರ  ಮಾತು ಹೇಳಲಾ.. 'ಬದುಕಿನಲ್ಲಿ ಕಷ್ಟದ ಕಥೆಯೇ  ಇಲ್ಲದಿದ್ದರೆ..ಏನಾದರೂ ಸಾಧಿಸಿದಾಗ, ಆ ಬದುಕಿನ ಕಥೆ ಹೇಳಲು ಅಷ್ಟೇನು ಸೊಗಸಾಗಿರುವುದಿಲ್ಲವಂತೆ'!!

ಅವತ್ತು ಒಂದು ದಿನ ಈ  ಮಾತು  ಹೇಳಿದ್ದೆ,ನೆನಪಿದೆಯಾ.. ' ನೀನು ಬೇಕಾದರೆ ಮುಂದೆ ಯಾರನ್ನೇ ಮದುವೆ ಆಗಿರು. ನನಗೆ ಬೇಜಾರಿಲ್ಲ. ಒಂದಲ್ಲ ಒಂದು ದಿನ ಲೈಫ್ ನಲ್ಲಿ ಏನಾದರೂ ದೊಡ್ಡದನ್ನು ನಾನು  ಸಾದಿಸಿಯೇ ಸಾದಿಸುತ್ತೆನೆ . ಸಾಧಿಸಿ ನಿನ್ನ ಮುಂದೆ ಬಂದು ನಿಲ್ಲುತ್ತೆನೆ.. ಆಗ ನನಗೆ ನಿನ್ನ ಕಣ್ಣಲ್ಲಿ  ಖುಷಿಯ ಹೊಳಪು ನೋಡಬೇಕೆಂಬ ಆಸೆ .ಅದು ಈಡೇರಿದರೆ ಈ ಬಾಳಿಗೆ ಅಷ್ಟು ಸಾಕು'!

ಎಲ್ಲಿ ಹೋಯಿತು ಕುಶಾಲ್ ಈ ಉತ್ಸಾಹ. ನೀನು ಯಾವತ್ತೂ ನನ್ನ ಕಣ್ಣಲ್ಲಿ ಚಿಕ್ಕವನಾಗಲು ಬಯಸಲಿಲ್ಲ. ನಾನು ಕೂಡ ನೀನು ಏನಾದರೂ ದೊಡ್ಡದನ್ನು ಸಾಧಿಸಿ ನನ್ನ ಮುಂದೆ ಬಂದು ನಿಂತುಕೊಳ್ಳುತ್ತಿಯಾ ಎಂದುಕೊಂಡಿದ್ದೆ. ಆದರೆ ನೀನು ಈಗ ಮಾಡುತ್ತಿರುವುದೇನೋ??

ನನ್ನ ಮದುವೆ ಮಾತ್ರ ಅಲ್ಲ ಪ್ರಮೋದಳ ಮದುವೆ ಗೆ ಕೂಡ  ನೀನು ಬಂದಿದ್ದು, ನನ್ನನ್ನು ನೋಡಿ ಎದುರಿಸಲಾಗದೇ ಓಡಿ ಹೋಗಿದ್ದು ಎಲ್ಲವನ್ನೂ ನಾನು  ಗಮನಿಸಿಲ್ಲ ಎಂದು ಅಂದುಕೊಡೆಯಾ ಕುಶಾಲ್.!!

ಕುಶಾಲ್ ಕನಸ್ಸನ್ನು ಬಲಿ ಕೊಡಬೇಡ . ಇನ್ನೂ ಕಷ್ಟ ಪಡು. ಪರಿಶ್ರಮ ಪಡು. ಒಂದಲ್ಲಾ ಒಂದು ದಿನ ನೀನು, ನೀನೇ ಇಷ್ಟ ಪಟ್ಟಂತೆ ಡೈರೆಕ್ಟರ್ ಆಗಿಯೇ ಆಗುತ್ತಿಯಾ. ಆಗ ನೋಡು ನಿನ್ನ ಸಿನಿಮಾ ನೋಡಲು ನಾನು, ನನ್ನ ಯಜಮಾನರು, ಮಗು ಎಲ್ಲರೂ ಬಂದು ಥಿಯೇಟರ್ ನ ಮೊದಲ ಸಾಲಿನಲ್ಲಿ ಯೇ ಕುಳಿತುಕೊಳ್ಳುತ್ತೆವೆ. ಮತ್ತು ನಾನು ಅಲ್ಲಿದ್ದ ಎಲ್ಲರಿಗೂ ಕೇಳುವಂತೆ ಬೊಬ್ಬೆ ಹಾಕಿ ಜೋರಾಗಿ ಹೇಳುತ್ತೆನೆ 'ಇದು ನನ್ನ ಗೆಳೆಯ, ನನ್ನ ಕ್ಲಾಸ್ ಮೇಟ್ ಕುಶಾಲ್ ನ ಸಿನಿಮಾ, he is my best friend...'

ಸರಿಯಾಗಿ ಕೇಳಿಸಿಕೋ ಕುಶಾಲ್. ಅದುವೇ ನಿನ್ನ ಪರವಾಗಿ ನನ್ನ ಏಕೈಕ  ಆಸೆ.ನೆರವೇರಿಸಿ ಕೊಡಬಲ್ಲೆಯಾ ಗೆಳೆಯಾ?? .

ನೀನೇ ಹೇಳಿದ್ದೆ ನಾನೇ ನಿನ್ನ ಬಾಳಿನ  ಸ್ಪೂರ್ತಿ ಎಂದು. ನಾನು ಸ್ಪೂರ್ತಿ ಯಾಗಿಯೇ ಇರಲು ಇಷ್ಟಪಡುತ್ತೆನೆಯೇ ಹೊರತು ನಿನ್ನ ಬಾಳನ್ನು ಈಗಿನಂತೆ ದಿನನಿತ್ಯ ದಹಿಸಿ ಬಿಡುವ ಕೊಳ್ಳಿ ಆಗಲಾರೆ ಕುಶಾಲ್.

ನನ್ನ ಹೆಸರು ಹಿಡಿದು ಕರೆದ ಹುಡುಗನಲ್ಲಾ ನೀನು. ಮಾತನಾಡುವಾಗಲೆಲ್ಲ 'ದೇವರೇ.. 'ಎಂದೇ ಸಂಭೋದಿಸುತ್ತಿದ್ದೆ. ಹಾಗಾದರೆ ದೇವರ ಮಾತಗೆ ಬೆಲೆ ಇಲ್ಲವೇ..?

ಒಂದಲ್ಲ ಒಂದು ದಿನ ನನ್ನ ಗೆಳೆಯ ಕುಶಾಲ್ ಈ ಫ್ರೆಂಡ್ ನ ಕನಸನ್ನು ನನಸು ಮಾಡುತ್ತಾನೆ ಎಂದು ಅಂದು ಕೊಳ್ಳುತ್ತೆನೆ.., ಯಾವಗಲೂ ಹೆಸರಿಗೆ ತಕ್ಕಂತೆ ಕುಶಲವಾಗಿರು..ಕ್ಷೇಮವಾಗಿರು..ಬರ್ತಿನಿ ಕುಶಾಲ್.. Byee.... "

Byeee.. ಹೇಳಿದ ಕೃತಿ ಒಂದು ಕ್ಷಣ ವೂಅಲ್ಲಿ ನಿಲ್ಲಲಿಲ್ಲ. ನನಗೂ ಬಾಯ್ ಹೇಳದೇ ದರ ದರ ಎಂದು ಹೋಗಿಯೇ  ಬಿಟ್ಟರು. ನನ್ನ ಪಕ್ಕದಲ್ಲಿಯೇ ಇದ್ದ imaginary ಕುಶಾಲ್ ಏನು ಮಾಡುತ್ತಿದ್ದಾನೆ ಎಂದು ಒಂದು ಕ್ಷಣ ನನ್ನ ಪಕ್ಕಕ್ಕೆ  ತಿರುಗಿ ನೋಡಿದೆ. ಕುಶಾಲ್ ತಲೆತಗ್ಗಿಸಿ ಅಳುತ್ತಿರುವಂತೆ ಫೀಲ್ ಆಯಿತು.ಕಣ್ಣೀರು ಧಾರಕಾರ. ಪಾಪ ಹೇಗೆ ತಡೆದುಕೊಳ್ಳಬಲ್ಲ ಅಲ್ಲವೇ. ಒಮ್ಮೆಲೇ ಆ imaginary ಕುಶಾಲ್ ಕೂಡ ಅಲ್ಲಿಂದ ಮಾಯವಾದಂತೆ ಭಾಸವಾಯಿತು.

ಈಗ KPT  ಸರ್ಕಲ್ ನಲ್ಲಿ ಯಾರೂ ಇಲ್ಲ. ನಾನು ಒಬ್ಬನೇ ಇದ್ದೆ. ಕೃತಿ ತನ್ನ perspective ಎಲ್ಲವನ್ನೂ ಹೇಳಿ ನಡೆದುಬಿಟ್ಟಿದ್ದಳು. Imaginary ಕುಶಾಲ್ ಎಲ್ಲವನ್ನೂ ಕೇಳಿಸಿಕೊಂಡು  ಮಾಯವಾಗಿದ್ದ. ತುಂಬಾ ಹೊತ್ತು ನಾನು ಅಲ್ಲೇ ಇದ್ದೆ.

ಮರ್ಲು ಸ್ಟೋರಿ ಬರೆಯುವ ನನಗೆ ಕೆಲವೊಮ್ಮೆ ಈ ಪ್ರೀತಿ, ಪ್ರೇಮಿಗಳು, ಅವರ ತುಡಿತ, ಕಾತರತೆ, ಆ ಉತ್ಕಟತೆ ಯಾವುದೂ ಅರ್ಥವೇ ಆಗುವುದಿಲ್ಲ.ಯಾಕಾಗಿ ಅವರೆಲ್ಲಾ ಅಷ್ಟೊಂದು ಹುಚ್ಚರಾಗುತ್ತಾರೋ.. ಬಹುಶಃ ಲೈಫ್ ನಲ್ಲಿ ಯಾರನ್ನಾದರು ಪ್ರೀತಿ ಮಾಡಿದ್ದರೆ, ಇಲ್ಲವೇ ಕುಶಾಲ್ ರೇಂಜಿಗೆ ಯಾರಿಂದಾದರೂ ಪ್ರೀತಿಸಿಕೊಂಡಿದ್ದರೆ ನನಗೆ ಈ ಪ್ರೀತಿಯ ತುಮುಲಗಳು ಪರಾಕಾಷ್ಠೆ ಗಳು ಅರ್ಥವಾಗುತ್ತಿದ್ದವು!

ಬಸ್ ಬಂತು. ಬಸ್ ಹತ್ತಿದೆ. TMA pai ಹಾಲ್ ಬಳಿ ಇಳಿದೆ. ಹಾಲ್ ಒಳಗೆ ಹೋಗಿ 
ವಧು ವರರಿಗೆ ವಿಶ್ ಮಾಡಲು ಸರತಿ ಸಾಲಿನಲ್ಲಿ ನಿಂತೆ. ದೂರದಿಂದಲೇ ಮದುವೆ ಮಂಟಪಕ್ಕೆ ಒಮ್ಮೆ ಕಣ್ಣು ಹಾಯಿಸಿದೆ. 
ಯಾಕೋ ಮದುವೆ ಹೆಣ್ಣನ್ನು ನೋಡುವಾಗ ನನಗೆ ಒಮ್ಮೆ ಶಾಲ್ಮಲಿ ಯೇ ನೆನಪಾಯಿತು. ಎಲ್ಲಾದರೂ ಕುಶಾಲ್ ಇದ್ದಾನೆಯೇ ಎಂದು ಹಿಂದೆ ಮುಂದೆ ಸರತಿ ಸಾಲಿನಲ್ಲಿ ನೋಡಿದೆ. ಹಾಲ್ ತುಂಬಾ ನೋಡಿದೆ. ಇಲ್ಲ ಕುಶಾಲ್ ಇರಲಿಲ್ಲ.

ಹೇಗೆ ಇರಲು ಸಾಧ್ಯ. ಅವನು ನಾನು ಸೃಷ್ಟಿಸಿದ ಪಾತ್ರ ವಲ್ಲವೇ. ಒಂದು ವೇಳೆ ನಾನು ಸೃಷ್ಟಿಸಿದ ಪಾತ್ರ ದ ತರಹದ ಕುಶಾಲ್ ನಂತವನು ನಿಜವಾಗಿಯೂ ನಿಜ ಜೀವನದಲ್ಲಿ ಇದ್ದರೆ ?!!
ಇರಲೂ ಬಹುದು. ಇಲ್ಲದಿದ್ದರೆ ಕೃತಿ ಅಷ್ಟೊಂದು ಫೀಲ್ ಮಾಡಿಕೊಂಡು ಬುದ್ಧಿ ಮಾತು ಹೇಳಿ ಹೋಗುತ್ತಿದ್ದಳೇ!??  
ನನಗೆ ಗೊತ್ತಿಲ್ಲ!  ನಿಜವಾಗಿಯೂ ಈ ಪ್ರಶ್ನೆಗೆ ನನ್ನ ಬಳಿ ಉತ್ತರವಿದೆಯೇ? 
ಉತ್ತರ ಗೊತ್ತಿದ್ದೂ ನಾನು ಹೇಳುತ್ತಿಲ್ಲವೇ..?!! 
ಇಲ್ಲ ಈ ಕುಶಾಲ್, ನಿಜವಾಗಿಯೂ ನಾನೇನಾ?!!

ಸತ್ಯ - ಕಾಲ್ಪನಿಕ  ಗಳ ಮಧ್ಯೆ ನಿಜಜೀವನದ  ಕಥೆಗಳನ್ನೇ ಯಾರಿಗೂ ಡೌಟು ಬರದಂತೆ ಮಿಕ್ಸ್ ಮಾಡಿ, ನನ್ನದೊಂದು ಕಥೆ ಹೇಳಲು,ಕುಶಾಲ್ ನ ಕಥೆ  ಕಟ್ಟುತ್ತಿದ್ದೆನಾ? !! 

ನನ್ನ ಕಥೆಯಲ್ಲಿ ಅಂತು ಕುಶಾಲ್ ಕ್ಷೇಮವಾಗಿ ಇರಲಿಲ್ಲ. ಒಂದು ವೇಳೆ ಕಾಕತಾಳೀಯ ಎಂಬಂತೆ ನಿಜವಾಗಿಯೂ ಕಥೆಯಲ್ಲಿ ಬರುವ ಕುಶಾಲ್ ನಂತವನು ನಿಜಜೀವನದಲ್ಲೂ  ಇದ್ದರೆ... ಹೇಯ್ ಕುಶಾಲ್ , ಎಲ್ಲೇ ಇದ್ದರೂ ಹೇಗೆ ಇದ್ದರೂ ಇನ್ನಾದರೂ ಕೃತಿ ಹೇಳಿದಂತೆಯೇ, ಕೃತಿ ಒಳಗಿನ ನನ್ನ ಕಥೆಯ ಪಾತ್ರ ಶಾಲ್ಮಲಿ ಹೇಳಿದಂತೆ .. ಕುಶಲವಾಗಿ.. ಕ್ಷೇಮವಾಗಿ ಇರು ಕುಶಾಲ್.. ಎಂದು ಮನಸ್ಸಲ್ಲೇ  ಅಂದು ಕೊಂಡೆ.

ವಧು ವರರಿಗೆ ವಿಶ್ ಮಾಡಿದೆ, ಪೋಟೊ ತೆಗೆಸಿಕೊಂಡೆ, ಊಟ ಮಾಡಿದೆ.. ಹಾಲ್ ನಲ್ಲಿ ಆತ್ಮೀಯ  ಹಿರಿಯರೊಬ್ಬರು ಸಿಕ್ಕಾಗ.. ಎಂದಿನಂತೆ ಕುಶಲವೇ.. ಕ್ಷೇಮವೇ ಎಂದು ಕೇಳಿದರು. ಯಾಕೋ ಗೊತ್ತಿಲ್ಲ ಒಂದು ಕ್ಷಣ ಕುಶಾಲ್, ಶಾಲ್ಮಲಿ  ಕಣ್ಣ ಮುಂದೆ ರಪ್ಪ ಅಂತ ಪಾಸ್ ಆದಂತೆ ಆಯಿತು...!

ಆವಾಗಲೇ ಮದುವೆ ಮನೆಯಲ್ಲಿ ಯಾರೋ ಒಬ್ಬರು ಜೋರಾಗಿ ಕುಶಾಲ್.. ಕುಶಾಲ್ ಎಂದು ಕರೆದಂತೆ ಕೇಳಿಸಿತು..! 
ಯಾರು ಯಾರನ್ನು ಕರೆದದ್ದು ಎಂದು ಗೊತ್ತಾಗಲಿಲ್ಲ! ಮದುವೆ ಮನೆಯಿಂದ ಹೊರನಡೆದೆ!! 

          " ಕುಶಲವೇ_ಕ್ಷೇಮವೇ " 
  
............................................

story by - AB Pacchu,
                 Moodbidri
                 Mangalore(D.K)
                ( Pratilipi - AB Pacchu)



Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ