ಮುತ್ತಿನಂತಹ ಉದ್ದಿನಬೇಳೆ
ಒಗ್ಗರಣೆಗೆ ನೀವು ಏನೇ ಹಾಕಿ..ಸಣ್ಣಗೆ ಹಚ್ಚಿದ ಕೆಂಪನೆಯ ನೀರುಳ್ಳಿ,ಸ್ವಲ್ಪ ಜೀರಿಗೆ,ಜಜ್ಜಿದ ಒಂದೆರಡು ಬೆಳ್ಳುಳ್ಳಿ,ತುಂಡು ಮಾಡಿದ ಒಂದು ಒಣಮೆಣಸು,ಸ್ವಲ್ಪವೇ ಸ್ವಲ್ಪ ಇಂಗು.. ಇವೆಲ್ಲಾ ಇದ್ದರೂ ಒಗ್ಗರಣೆ ಯ ನಿಜವಾದ ರಾಜ ರಾಣಿ ಅಂತ ಅನಿಸೋದು ಮಾತ್ರ ಚಿಟ ಪಟ ಅಂತ ಸಿಡಿಯುತ್ತಲೇ ಮಾತಾಡಿಸೋ ಸಾಸಿವೆ ಮತ್ತು ಪಚ್ಚೆ ಸೀರೆಯ ಕರಿಬೇವು.
ಸದಾ ಸಿಡಿಯೋ ಕರಿ ಮೈ ಬಣ್ಣದ ಸಾಸಿವೆ ಅರಸನಾದರೆ,ಅಡುಗೆಯ ಶೃಂಗಾರವನ್ನು ಹೆಚ್ಚಿಸೋ ಕಮ್ಮಿ ಮಾತಿನ ಬೇವುರೆ ಯೇ ರಾಣಿ. ಈ ರಾಜ ರಾಣಿಯರ ನಡುವೆ, ಒಗ್ಗರಣೆಯಲ್ಲಿಯೇ ಮತ್ತೊಬ್ಬ ಬಿಳಿಯ ಬಣ್ಣದವನೊಬ್ಬ ಇದ್ದಾನೆ, ಆತ ಹೊಂಬಣ್ಣಕ್ಕೆ ತಿರುಗಿದಾಗಲೇ ಆತನೇ ಈ ಒಗ್ಗರಣೆ ಯ ನಿಜವಾದ ರಾಜಕುಮಾರ ಅಂತ ಅನಿಸೋದು. ನನಗೆ ಅವನೆಂದರೆನೇ ಅತೀ ಇಷ್ಟ. ಅವನೇ ಉದ್ದಿನ ಬೇಳೆ 😊
ಸದ್ದು ಮಾಡೋ ಸಾಸಿವೆಗಿಂತಲೂ, ವೈಯಾರದಿಂದ ನುಲಿಯೋ ಬೇವುರೆಗಿಂತಲೂ ಒಂದೊಳ್ಳೆಯ ಒಗ್ಗರಣೆಗೆ ರಂಗು ತರಲು ಮನೆಯಗಲ ಮಾತ್ರವಲ್ಲ ಮನೆಯ ಪಕ್ಕದ ಬೇಲಿ ಬದಿಗೂ ಪರಿಮಳ ಹರಡಲು ಸಾಧ್ಯವಾಗುವುದು ಉದ್ದಿನಬೇಳೆಗೆ ಮಾತ್ರ. ಉದ್ದಿನ ಬೇಳೆ ಎಣ್ಣೆಗೆ ಬಿದ್ದ ಮೇಲೆ, ಒಗ್ಗರಣಿಯಲ್ಲಿ ಉಳಿದ ಎಲ್ಲವೂ ಸೈಲೆಂಟ್ ಆಗಲೇ ಬೇಕು. ಆದರೆ ಎಣ್ಣೆಗೆ ಬಿದ್ದ ಕೂಡಲೇ ಉದ್ದಿನ ಬೇಳೆ ತನ್ನ ಚಮತ್ಕಾರ ತೋರಿಸಲು ಹೋಗುವುದಿಲ್ಲ. ಸ್ವಲ್ಪ ಸಮಯ ತೆಗೆದುಕೊಳ್ಳುತ್ತೆ, ಆದರೆ ನಿಧಾನವಾಗಿ ಹೊಂಬಣಕ್ಕೆ ತಿರುಗಿದಾಗ ಮಾತ್ರ ಅದು ನೀಡೋ ಪರಿಮಳ ಬೇರೆ ಎಲ್ಲಾ ಪರಿಮಳನ್ನು ಹಾಗೇ dominate ಮಾಡಿ ಬಿಡುತ್ತೆ,ಮಾತ್ರವಲ್ಲ ಆ ಪರಿಮಳನ್ನು ಆಘ್ರಾಣಿಸಿ ಬಿಟ್ಟರೆ ಹೊಟ್ಟೆ ಹಸಿವು ತನ್ನಿಂತಾನೇ ಜಾಸ್ತಿ ಆಗಿಬಿಡುತ್ತದೆ. ಅದಕ್ಕೆ ಮೊದಲೇ ಹೇಳಿದ್ದು ಉದ್ದಿನಬೇಳೆಯೇ ಒಗ್ಗರಣೆಯ ನಿಜವಾದ prince ಅಂತ.
ಅಡುಗೆ ಕೋಣೆಯಲ್ಲಿ ಇಷ್ಟ ಆಗೋ ಧಾನ್ಯಗಳಲ್ಲಿ, ಬೇಳೆಗಳಲ್ಲಿ ನನಗಂತು ಅತೀ ಇಷ್ಟ ಆಗೋದು ಉದ್ದಿನ ಬೇಳೆಯೇ. ಮೂಗು ಅರಳಿಸೋ ಒಗ್ಗರಣೆಯಲ್ಲಿ, ಪರಿಮಳದ ಸಾಂಬಾರಿನಲ್ಲಿ, ಮಲ್ಲಿಗೆಯಂತಹ ಇಡ್ಲಿಯಲ್ಲಿ, ಸಾಫ್ಟ್ ಆದ ದೋಸೆಯಲ್ಲಿ, ಘಮ್ಮೆನ್ನುವ ಚಟ್ನಿಯಲ್ಲಿ..ಹೀಗೆ ಸರ್ವವ್ಯಾಪಿ ಆಗಿರೋ ಉದ್ದು ಅಂದರೆ ಅದೆಂತಹದ್ದೋ ಅಕ್ಕರೆ ಬಂದು ಬಿಟ್ಟಿದೆ ನನಗೆ. ನನ್ನ ಅಮ್ಮನಿಗೂ ಹಾಗೆಯೇ. ಉದ್ದು ಅಂದರೆ ಅದೆಷ್ಟು ಜೋಪಾನ ಮಾಡುತ್ತಾಳೋ..
ಹಾಗೇ ನೋಡಲು ಸ್ವಲ್ಪವೂ ಪರಿಮಳವಿಲ್ಲದ ಉದ್ದಿನ ಬೇಳೆ, ಬಾಣಲೆಯ ಎಣ್ಣೆಯೊಳಗೆ ಬಿದ್ದು ಸ್ವಲ್ಪ ಹೊರಳಾಡಿ ಬಿಟ್ಟರೆ ಸಾಕು, ಆಹಾ ಅದೊಂದು ದಿವ್ಯವಾದ ಪರಿಮಳ ಮನೆಯ ತುಂಬೆಲ್ಲಾ ಆವರಿಸಿಬಿಡುತ್ತೆ ಅಲ್ಲಾ ಆ ಪರಿಮಳ ಯಾವುದೇ ಫರ್ಫ್ಯೂಮ್ ಗಿಂತ ಕಡಿಮೆ ಇಲ್ಲ.ಅದೇ ರೀತಿ ಪಲ್ಯ, ಸಾಂಬಾರು ಇನ್ನಿತರ ಪದಾರ್ಥಗಳನ್ನು ಮಾಡುವ ಮೊದಲು ಸಾಮಾನುಗಳನ್ನು ಮೊದಲೇ ಎಣ್ಣೆಯಲ್ಲಿ ಹುರಿದು ಇಡುತ್ತಾರೆ ಅಲ್ಲಾ, ಆವಾಗಲೂ ಉದ್ದಿನ ಬೇಳೆ ಯದ್ದೇ ಹವಾ. ಉದ್ದಿನ ಬೇಳೆ ಹಾಕಿದ್ದರೆ ಆ ಸಾಂಬಾರು ಆಹಾ ಅದೆಷ್ಟು ರುಚಿ.
ಕಾಯಿ ಚಟ್ನಿ ಕಡೆಯುವಾಗ ಕೂಡ ಸ್ವಲ್ಪ ಹುರಿದ ಉದ್ದಿನಬೇಳೆ ಹಾಕಿ ಬಿಟ್ಟು ಚಟ್ನಿ ಮಾಡಿದರೆ ಅದರ ರುಚಿ ಯೇ ಬೇರೆ. ನಮ್ಮ ಮಂಗಳೂರಿನಲ್ಲಿ ಅಂತು ಬರೀ ಉದ್ದಿನ ಬೇಳೆಯದ್ದೇ ಚಟ್ನಿಯನ್ನು ಕೂಡ ಮಾಡುತ್ತಾರೆ. ಹಿಂದೆ ಕಡೆಯೋ ಕಲ್ಲಿನಲ್ಲಿ ಅದರ ಚಟ್ನಿ ಮಾಡಿ ನಂತರ ಕಲ್ಲು ತೊಳೆಯಲು ನೀರು ಹಾಕುತ್ತೇವೆ ಅಲ್ಲಾ.. ಆ ನೀರಿಗೂ ಅದೆಂತಹಾ ಪರಿಮಳ. ಗಂಜಿ ಜೊತೆ ಆ ನೀರನ್ನೇ ಹಾಕಿ ಊಟ ಮಾಡಿದವರು ಅದೆಷ್ಟೋ.
ಉಡುಪಿ, ಮಂಗಳೂರಿನಲ್ಲಿ ಉದ್ದು ಹಾಕಿಯೇ ಮಾಡುವ ಗುಂಡ(ಹಲಸಿನ ಎಲೆಯಿಂದ ಮಾಡುವುದು), ಮೂಡೆ(ಒಂದು ಜಾತಿಯ ಕೇದಗೆಯ ಎಲೆ) ಗಳು ಇಲ್ಲದಿದ್ದರೆ ಚೌತಿ, ಅಷ್ಟಮಿಗೆ ಕಳೆಯೇ ಬರುವುದಿಲ್ಲ. ಗುಂಡ, ಮೂಡೆ ಇದ್ದರೆನೇ ಆ ಹಬ್ಬಕ್ಕೊಂದು ಗತ್ತು. ಅಷ್ಟು ಮಾತ್ರವಲ್ಲ ನವರಾತ್ರಿ ಯಲ್ಲೂ ಕೂಡ ಈ ಗುಂಡ ಮೂಡೆ ಮತ್ತೊಮ್ಮೆ ಕಾಣಿಸಿಕೊಂಡು ಹೋಗುತ್ತವೆ. ಅಷ್ಟು ಮಾತ್ರವೇ ಇನ್ನು ದೀಪಾವಳಿಗೆ ಬನ್ನಿ. ದೀಪಾವಳಿ ಬಂದಾಗ ಕನಿಷ್ಠ ಪಕ್ಷ ಒಂದೆರಡು ದಿನ ಆದರೂ ಉದ್ದಿನ ದೋಸೆ ಖಾಯಂ. ಹಿಂದೆ ಎಲ್ಲಾ ದೀಪಾವಳಿಗೆ ದಿನಾಲೂ ಉದ್ದಿನ ದೋಸೆಯೇ ಮಾಡುತ್ತಿದ್ದರಂತೆ. ಅಮ್ಮನಿಗೆ ಒಮ್ಮೆ ಕೇಳಿದ್ದೆ, ಯಾಕಮ್ಮ ಈ ದೀಪಾವಳಿ ಗೆ, ಹಬ್ಬಕ್ಕೆ ಎಲ್ಲಾ ಉದ್ದಿನ ಅಡ್ಡೆಗಳನ್ನೇ(ತಿಂಡಿ) ಜಾಸ್ತಿ ಮಾಡ್ತಾರೆ ಅಂತ. ಅದಕ್ಕವಳು " ಉದ್ದು ಜಡ ಅಲ್ವಾ, ಜಾಸ್ತಿ ತಿಂದ್ರೆ ಹಾಗೇ ಜಡ ಆವರಿಸಿಕೊಳ್ಳುತ್ತೆ,ಈ ರೀತಿ ಆದರೂ ಹಬ್ಬದ ದಿನಗಳಲ್ಲಿ ಉದ್ದಿನ ಅಡ್ಡೆ ತಿಂದು ನೀವು ಮಕ್ಕಳುಮರಿಗಳು ಎಲ್ಲಾ ಮನೆಯಲ್ಲಿಯೇ ಇರಿ ಎಂದು ಹಬ್ಬದಲ್ಲಿ ಹೆಚ್ಚಾಗಿ ದಿನಾಲೂ ಉದ್ದಿನಿಂದ ಮಾಡಿದ ಅಡ್ಡೆ ಗಳನ್ನೇ ಮಾಡುತ್ತಾರೆ" ಎಂದು ಹೇಳಿದ್ದಳು. ಆಹಾ ಅವಳು ಸೈಂಟಿಸ್ಟ್ ಅಲ್ಲ, ಆದರೂ ಅವಳ ಮಾತಿನಲ್ಲಿ ಲಾಜಿಕ್ ಇದ್ದದ್ದು ಸತ್ಯ. ಉದ್ದಿನಿಂದ ಮಾಡಿದ ತಿಂಡಿ ತಿಂದ ದಿನ, ಜಡ ದಿಂದ ಉದಾಸೀನ ಜಾಸ್ತಿ ಆಗಿ, ಮನೆಯಿಂದ ಹೊರಗೆ ಹೋಗ್ಲಿಕ್ಕೆ ಕೂಡ ಉದಾಸೀನ ಆದದ್ದು ಸತ್ಯವೇ.
ನೀವು ತಿನ್ನುವ ಗರಿಗರಿಯಾದ ಚಕ್ಕುಲಿಯಲ್ಲೂ ಉದ್ದು ಇದೆ, ಮಸಾಲೆ ದೋಸೆಯಿಂದ ಹಿಡಿದು ಹೆಚ್ಚಿನ ಎಲ್ಲಾ ದೋಸೆಗಳು ಉದ್ದು ಇಲ್ಲದೇ ಪೂರ್ಣ ಆಗುವುದೇ ಇಲ್ಲ. ಇಡ್ಲಿ ಜೊತೆಗೆ ಉದ್ದಿನ ವಡೆ ಇದ್ದರೆನೇ ಚಂದ. ಇಡ್ಲಿ ವಡೆ ಜೋಡಿ ಇತರ ಎಲ್ಲಾ ತಿಂಡಿಗಳ ಜೋಡಿಗಿಂತಲೂ ತುಂಬಾನೇ ಸುಂದರವಾದದ್ದು, ಅನನ್ಯವಾದುದು ಎಂದು ನಿಮಗು ಕೂಡ ಗೊತ್ತಿದೆ. ಇಡ್ಲಿಯಾಗಲಿ, ಗುಂಡವಾಗಲಿ, ಮೂಡೆಯಾಗಲಿ ಅದರಲ್ಲಿ ಉದ್ದು ಹಾಕುವ ಪ್ರಮಾಣ ಹೆಚ್ಚಾದಷ್ಟು ಹುದುಗುವಿಕೆ ಉಂಟಾಗಿ ತಿಂಡಿ ಮೆದುವಾಗುತ್ತೆ. ಹೆಚ್ಚಾಗಿ ಉದ್ದಿನ ಯಾವುದೇ ತಿಂಡಿಯಲ್ಲಿ ಮುಕ್ಕಾಲು ಭಾಗ ಅಕ್ಕಿ ಆವರಿಸಿಕೊಂಡು ಬಿಟ್ಟರೆ ಕಾಲು ಭಾಗ ಉದ್ದು ಸೇರಿಕೊಂಡು ಬಿಡುತ್ತದೆ. ಇನ್ನು ಕೆಲವರು ಅರ್ಧ ಭಾಗ ಅಕ್ಕಿ.. ಅರ್ಧ ಭಾಗ ಉದ್ದು ಕೂಡ ಹಾಕುವವರು ಇದ್ದಾರೆ. ಅವರಿಗೆ ತಿಂಡಿ ಜಾಸ್ತಿ ಮೆದುವಾದಷ್ಟು ಇಷ್ಟ. ಅವರವರ ಭಾವಕ್ಕೆ ಅವರ ಇಷ್ಟಕ್ಕೆ ತಕ್ಕ ಹಾಗೇ ಉದ್ದು ಅಂತು ನಿರಂತರವಾಗಿ ಅಕ್ಕಿಯ ಹಾಗೆಯೇ ದಿನಬಳಕೆಯಲ್ಲಿ ಬಳಕೆಯಾಗುತ್ತಲೇ ಇರುತ್ತದೆ.
ಅಮ್ಮನ ಬಳಿ ನಂಗೆ ಉದ್ದು ಇಷ್ಟ ಅಂತ ಹೇಳಿದರೆ ಬೈಯ್ತಾ ಇದ್ದಳು. ಹಾಗೆ ಎಲ್ಲ ಉದ್ದು ಇಷ್ಟ ಅಂತ ಹೇಳ್ಬಾರ್ದು ಮಾರಾಯ, ಅದು ಸತ್ತವರಿಗೆ ಇಷ್ಟವಾಗುವಂತಹದ್ದು ಎಂದು ಹೇಳಿದ್ದಳು. ಹಬ್ಬ ಹರಿದಿನ ಗಳಲ್ಲಿ ಕಾಣಿಸಿ ಕೊಳ್ಳೋ ಉದ್ದು ಶ್ರಾಧ್ಧದಲ್ಲೂ compulsory ಆಗಿ ಕಾಣಿಸಿಕೊಳ್ಳುತ್ತೆ.
ಕಾಗೆಗೆ ಇಡೋ ಅನ್ನ,ದನಕ್ಕೆ ಇಡೋ ಗೋಗ್ರಾಸ ಮತ್ತು ಪಿಂಡ ಮಾಡುವಾಗಲೂ ಬೂದುಕುಂಬಳ, ಬಾಳೆಕಾಯಿ,ಬೆಲ್ಲ, ಹೆಸರು ಕಾಳಿನೊಂದಿಗೆ.. ಇಡೀ ಕಪ್ಪು ಉದ್ದಿನ ಬಳಕೆ ಕೂಡ ಇದೆ.
ಒಂದು ಸಲ ಮನೆಯಲ್ಲಿ ಶ್ರಾದ್ಧ ಇತ್ತು. ಅಜ್ಜನದ್ದೋ, ಅಜ್ಜಿಯದ್ದೋ ನೆನಪಿಲ್ಲ. ಶ್ರಾದ್ಧ ಮುಗಿಸಿದ ಪುರೋಹಿತರು ಕೊನೆಯಲ್ಲಿ ಪಾರ್ಥನೆ ಮಾಡುವ ಮೊದಲು ಶ್ರಾದ್ಧ ಕ್ಕೆ ಸಂಬಂಧಿಸಿದಂತೆ ಏನಾದರೂ ಕೇಳಲಿಕ್ಕೆ ಇದ್ದರೆ ಕೇಳಿ ಎಂದು ಎಂದಿನಂತೆ ಕೇಳಿಬಿಟ್ಟರು. ಅಪ್ಪ ಏನೂ ಕೇಳಲಿಲ್ಲ. ಆದರೆ ನನಗೆ ಕೇಳಲಿಕ್ಕೆ ಒಂದು ಇತ್ತು. ನನ್ನದೊಂದು ಪ್ರಶ್ನೆ ಇದೆ ಎಂದೆ. ಪುರೋಹಿತರು "ಏನು..." ಅಂದರು." ಅಲ್ಲಾ ಈ ಶ್ರಾದ್ಧ ಕ್ಕೆ ಪಾಯಸದೊಂದಿಗೆ ಉದ್ದಿನಿಂದ ಮಾಡಿದ ವಡೆ ಮೂಡೆ ಗಳನ್ನೇ ಯಾಕೆ ಮಾಡಬೇಕು.." ಎಂದು ಕೇಳಿದೆ. ಅದಕ್ಕವರು "ವಡೆ ಮೂಡೆಯೇ ಮಾಡಬೇಕೆಂದು ಏನೂ ಇಲ್ಲ,ಪಿತೃ ದೇವತೆಗಳಿಗೆ ಉದ್ದು ಅಂದರೆ ಇಷ್ಟ ಹಾಗಾಗಿ ಉದ್ದಿನ ತಿಂಡಿ ಮಾಡಿ ಅರ್ಪಿಸುವುದು ಪದ್ದತಿ, ನಮ್ಮ ದಕ್ಷಿಣ ಕನ್ನಡದ ಕಡೆಗೆ ಉದ್ದಿನಿಂದ ಮಾಡುವುದು ವಡೆ ಮೂಡೆಯೇ ಜಾಸ್ತಿ ಅಲ್ಲ ಹಾಗಾಗಿ ಶ್ರಾದ್ಧ ಕ್ಕೂ ಅದನ್ನೇ ಮಾಡುತ್ತಾರೆ ಮತ್ತು ನಾವು ಕೂಡ ಮನೆಯವರಿಗೆ ಅದನ್ನೇ ಮಾಡಲು ಹೇಳುತ್ತೇವೆ .. " ಅಂದು ಬಿಟ್ಟರು. ಅವರು ಹೇಳಿದ್ದೇನೋ ಸರಿ ಆಗಿತ್ತು ಆದರೆ ನನಗೆ ಸಮಾಧಾನ ತರಲಿಲ್ಲ." ಅಲ್ಲಾ, ಈ ಪಿತೃದೇವತೆಗಳಿಗೆ ಉದ್ದೇ ಯಾಕೆ ಇಷ್ಟ...? " ಅಂತ ಕೇಳಿದೆ. ಆಗ ಅಲ್ಲಿ ಹಿರಿಯವರು ಅಂತ ಇದ್ದವರೊಬ್ಬರಿಗೆ ಪಿತ್ತ ನೆತ್ತಿಗೆ ಏರಿತು " ಎಂತ ಮರ್ರೆ ನಿನ್ನದೆಲ್ಲಾ ಪ್ರಶ್ನೆ .. ಇದೆಂತಹ ಶಾಲೆಯಾ.. ಅವನ ಪ್ರಶ್ನೆಗಳ ಕಡೆಗೆ ಜಾಸ್ತಿ ಗಮನ ಕೋಡಬೇಡಿ ನೀವು ಪ್ರಾರ್ಥನೆ ಶುರು ಮಾಡಿ ಪುರೋಹಿತರೇ " ಎಂದು ಹೇಳಿಬಿಟ್ಟರು.
ಅವರೆಲ್ಲಾ ಹಾಗೆಯೇ ನಮ್ಮ ಕುತೂಹಲಗಳಿಗೆ ತಣ್ಣೀರು ಎರಚಿ ಬಿಡುವುದು.ಇರ್ಲಿ ಬಿಡಿ ಎಷ್ಟಾದರೂ ಹಿರಿಯರು ಅಲ್ಲಾ, ಗೌರವಿಸಲೇಬೇಕು. 😌
ಅನಾದಿಕಾಲದಿಂದಲೂ ಉದ್ದಿನ ಬಳಕೆ ನಮ್ಮ ದೇಶದಲ್ಲಿ ಇದೆ. ನವಗ್ರಹಗಳಿಗೂ ಕೂಡ ಒಂದೊಂದು ಧಾನ್ಯ ವನ್ನು ನಮ್ಮವರು ಸೂಚಿಸಿದ್ದಾರೆ .ಅದಕ್ಕಾಗಿ ನವಧಾನ್ಯಗಳು ಅಂತಾನೇ ಇದ್ದಾವೆ. ಸೂರ್ಯ ನಿಗೆ ಗೋಧಿ,ಚಂದ್ರನಿಗೆ ಅಕ್ಕಿ, ಕುಜ ನಿಗೆ ತೊಗರಿ ಬೇಳೆ, ಬುಧ ನಿಗೆ ಹೆಸರುಕಾಳು, ಗುರುವಿಗೆ ಕಡ್ಲೆ, ಶುಕ್ರ ನಿಗೆ ಅವರೆಕಾಳು, ಶನಿ ಗೆ ಕಪ್ಪು ಎಳ್ಳು, ಕೇತುವಿಗೆ ಹುರುಳಿಕಾಳು.ಅದೇ ರೀತಿ ಅದರಲ್ಲಿ ರಾಹು ಗ್ರಹಕ್ಕೆ ಸಂಬಂಧಿಸಿದಂತೆ ಉದ್ದು ಅನ್ನು ಸೂಚಿಸಲಾಗಿದೆ. ರಾಹು ದೋಷ ಇರುವವರು ಉದ್ದನ್ನು ಶನಿವಾರ ದಾನ ಮಾಡಿದರೆ ಒಳ್ಳೆಯದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖ ಇದೆ.
ದ್ವಿದಳ ಧಾನ್ಯ ಆಗಿರೋ ಉದ್ದನ್ನೇ ಬೇಸಾಯವಾಗಿ ಮಾಡುವುದು ನಮ್ಮ ಜಿಲ್ಲೆಯಲ್ಲಿ ಸ್ವಲ್ಪ ಕಡಿಮೆಯೇ. ಮಳೆ ಎಲ್ಲಾ ಮುಗಿದು ಬತ್ತ ಕಟಾವು ಆದ ನಂತರ ಆ ಬತ್ತದ ಗದ್ದೆಯಲ್ಲಿಯೇ ಉದ್ದು ಬಿತ್ತುವುದು ನಮ್ಮಲ್ಲಿ ವಾಡಿಕೆ. ಇಡೀ ಉದ್ದಿನ ಬಳಕೆ ಕಡಿಮೆ ಇದ್ದರೂ.. ಮಿಲ್ಲಿಗೆ ಹೋಗಿ ಬಂದ ನಂತರದ ಉದ್ದಿನ ಬೇಳೆಯ value ಬೇರೆಯೇ ಲೆವೆಲ್ ಗೆ ಹೋಗಿ ಬಿಡುತ್ತದೆ. ಪ್ರತಿಯೊಂದಕ್ಕೂ ಅದೇ ಬೇಕು. ಗದ್ದೆಗಳೇ ಕಡಿಮೆ ಆಗುತ್ತಿರೋ ಈ ಕಾಲದಲ್ಲಿ ಉದ್ದು ಬಿತ್ತುವುದು ಕೂಡ ಕಡಿಮೆ ಆಗಿದೆ.
ಕೈಯಲ್ಲಿ ಒಂದು ಹಿಡಿ ಮುತ್ತಿನಂತ ಉದ್ದು ತೆಗೆದುಕೊಂಡಾಗ ಅನಿಸೋದು, ಉದ್ದು ಅದೆಷ್ಟೇ ಚಿಕ್ಕದಿದ್ದರೂ ಅದೆಷ್ಟು ದೊಡ್ಡದಾಗಿ ನಮ್ಮ ನಡುವೆ ವ್ಯಾಪಿಸಿಕೊಂಡು ಬಿಟ್ಟಿದೆಯಲ್ಲಾ ಎಂದು. ಅಮ್ಮ ಕೂಡ ಅಕ್ಕಿಗಿಂತಲೂ ಉದ್ದನ್ನೇ ಜಾಸ್ತಿ ಜಾಗ್ರತೆಯಾಗಿ ಇಡುತ್ತಾಳೆ, ಹೌದು ಅವಳ ಪಾಲಿಗೆ ಅದು ಯಾವತ್ತೂ ಡಬ್ಬದಲ್ಲಿರೋ ಮುತ್ತೇ ಆಗಿದೆ..😌🙏🏻
.....................................................................................
#ಏನೋ_ಒಂದು..
AB Pacchu
Moodubidire

Comments
Post a Comment