ಎಲ್ಲರ ಮನೆ ದೋಸೆ
ಪುಸ್ತಕದ ಹೆಸರು #ಎಲ್ಲರ_ಮನೆ_ದೋಸೆ. ಡಾ|| ವಿರೂಪಾಕ್ಷ ದೇವರ ಮನೆ ಅವರು ಬರೆದಿದ್ದು.
ಪುಸ್ತಕದ ಕವರ್ ಪೇಜ್ ನಲ್ಲಿರುವ ತೂತು ತೂತಾದ ದೋಸೆಯೇ ಸೂಚಿಸುವಂತೆ ಇದೊಂದು ' ಎಲ್ಲರ ಮನೆ ದೋಸೆಯೂ ತೂತೇ ' ಎನ್ನುವಂತಹ ಕಥೆಗಳ ಸಂಗ್ರಹ ಖಂಡಿತವಾಗಿಯೂ ಹೌದು. ಎಲ್ಲಕ್ಕಿಂತ ಹೆಚ್ಚಾಗಿ ಇದು ನಮ್ಮ ನಿಮ್ಮೆಲ್ಲರ ಮನೆ ಮನದ ಕಥೆ.
ಚಿಕ್ಕ ಚಿಕ್ಕ ಕಥೆಗಳು, ಬೇರೆ ಬೇರೆ ಕಥೆಗಳು.. ಹೆಚ್ಚೆಂದರೆ ಒಂದೊಂದು ಕಥೆಯೂ ಒಂದು ಪೇಜು, ಎರಡು ಪೇಜು ಅಷ್ಟೇ. ಈ ರೀತಿ ಪುಸ್ತಕ ಪೂರ್ತಿ ಕಥೆಗಳಿವೆ.ಕಥೆಗಳಿಗಿಂತ ಹೆಚ್ಚಾಗಿ ನಿಜ ಜೀವನದ ಘಟನೆಗಳಿವೆ.ಲೇಖಕರು ಅವುಗಳಿಗೆ ಕಥೆಯ ರೂಪ ಕೊಟ್ಟಿದ್ದಾರೆ.
ಒಂದೇ ಗುಕ್ಕಿನಲ್ಲಿ ಓದಿ ಮುಗಿಸಬೇಕಾದ ಅವಸರ ಇದು ಬೇಡುವುದಿಲ್ಲ.ಕಥಾ ಸಂಕಲನಗಳ ಲಾಭ ಇದೇ.ಬೇಕೆನಿಸಿದಾಗ ತೆಗೆದು ಸ್ವಲ್ಪ ಸ್ವಲ್ಪವೇ ಓದಬಹುದು.ದಿನಕ್ಕೊಂದು ವಿಭಿನ್ನ ರೀತಿಯ ದೋಸೆ ಮೆಲ್ಲುವಂತೆ..ಮಸಾಲೆ ದೋಸೆ, ನೀರುದೋಸೆ, ನೀರುಳ್ಳಿ ದೋಸೆಯಂತೆ ದಿನಕ್ಕೆ ಒಂದೊಂದೇ ವಿರೂಪಾಕ್ಷ ಅವರ ಪುಸ್ತಕದಲ್ಲಿರುವ ದೋಸೆಯಂತಹ ಕಥೆಗಳ ರುಚಿಯನ್ನು ಸವಿಯುತ್ತಾ ಪುಟ ತಿರುಗಿಸುತ್ತಾ ಹೋಗಬಹುದು.
ಕಥೆಗಳೆಲ್ಲವೂ ಸರಳ. ಹೆಚ್ಚಾಗಿ ಸಂಬಂಧಗಳ ಬಗ್ಗೆಯೂ ಇರುವುದು.ಮಾತಿನ ಬಗ್ಗೆ, ಕೋಪದ ಬಗ್ಗೆ, ಮೌನದ ಬಗ್ಗೆ,ವಿರಹದ ಬಗ್ಗೆ,ತಾಳ್ಮೆ,ಅಹಂಕಾರ,ಈಗೋ.. etc etc ಗಳ ಬಗ್ಗೆ ಕಥೆ ಇಲ್ಲಿದೆ.
ನಮಗೆ ಜೀವನದಲ್ಲಿ ಅದೆಷ್ಟೋ Complaints ಗಳು. ಎಂದಿಗೂ ಮುಗಿಯದ Complaints ಗಳೇ ಅಧಿಕ.ನಮಗೆ ಯಾರೂ ಸರಿ ಇರುವುದೇ ಇಲ್ಲ, ನಮ್ಮ ಹೊರತು.ಲೇಖಕರು ಹೇಗೆ ಮನಮುಟ್ಟುವಂತೆ ತಿಳಿಸುತ್ತಾರೆ ಎಂದರೆ ಉಳಿದವರ Complaints ಹೇಳುವ ನಾವೇ ಸ್ವತಃ ಹೆಚ್ಚಿನ Complaints ಗಳ ಮತ್ತು ಸಮಸ್ಯೆಗಳ ಮೂಲ ಆಗಿರುತ್ತೇವೆ ಎಂದು ನಮಗೇ ಅರಿವಾಗುವಂತೆ ತಿಳಿಸುತ್ತಾರೆ. ಪರಿವರ್ತನೆ ಎನ್ನುವುದು ನಮ್ಮಲ್ಲೇ ಆದರೆ ಇತರರ ಬಗ್ಗೆ ನಮಗಿರುವ ದೂರುಗಳು,ಸಮಸ್ಯೆಗಳು ನಿಧಾನವಾಗಿ ಕಡಿಮೆ ಆಗುತ್ತಾ ಹೋಗುತ್ತದೆ ಎಂದು ತಮ್ಮ ಕಥೆಗಳ ಮೂಲಕವೇ ಲೇಖಕರು ಇಲ್ಲಿ ಬಹಳ ಸರಳವಾಗಿ ತಿಳಿಸುತ್ತಾರೆ.
ಸೋಷಿಯಲ್ ಮೀಡಿಯಾ ದಲ್ಲಿ ಉದ್ದಕ್ಕೆ ಗೀಚುತ್ತೇವೆ, ಕಾಮೆಂಟ್ ಹಾಕುತ್ತೇವೆ, ಅಪರಿಚಿತರೊಡನೆ ಗಂಟೆ ಗಟ್ಟಲೆ Chat ಮಾಡುತ್ತಾ ಹರಟೆ ಹೊಡೆಯುತ್ತೇವೆ... ಆದರೆ ನಮ್ಮದೇ ಮನೆಯಲ್ಲಿರುವ ಅಪ್ಪನೋ, ಅಮ್ಮನೋ, ಹೆಂಡತಿಯೋ, ಗಂಡನೋ, ಮಗನೋ, ಮಗಳೋ, ಅತ್ತೆಯೋ, ಮಾವನೋ...ಅವರೆಲ್ಲರ ಜೊತೆಗೆ ನಮಗೆ ಸರಿಯಾಗಿ ಮಾತಾಡಲು ಪುರುಸೊತ್ತೇ ಇರುವುದಿಲ್ಲ. ಏಕೆಂದರೆ ನಮಗೆ ಅಷ್ಟಾಗಿ ಅವರ ಅಗತ್ಯ ಇರುವುದಿಲ್ಲ. ಆದರೆ ನಮ್ಮ ಜೊತೆ ಮಾತಾಡಲು ನಮ್ಮ ಮನೆಯಲ್ಲಿರುವ ಜೀವಗಳೇ ಎಷ್ಟು ಹಂಬಲಿಸುತ್ತಿರುತ್ತವೆ ಎಂಬ ಸಣ್ಣ ಕಲ್ಪನೆಯೂ ಕೂಡ ನಮಗೆ ಇರುವುದೇ ಇಲ್ಲ.ಅಂತಹ ಕಥೆಗಳು ಇಲ್ಲಿವೆ.
ಹೌದು ಲೋಕದ ಸಮಸ್ಯೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾಷಣ ಬಿಗಿಯುವ ನಾವೆಲ್ಲರೂ ಮನೆ ಸೇರಿಕೊಂಡ ಮೇಲೆ ಮಾತು ಮರೆಯುತ್ತೇವೆ. ಲೇಖಕರು ಅದನ್ನೇ ಸುಂದರವಾಗಿ ಹೇಳುತ್ತಾರೆ " ಮಾತಿಲ್ಲದಿದ್ದರೆ ಮೌನ ಹೆಪ್ಪು ಗಟ್ಟುತ್ತದೆ, ಸಂಬಂಧಗಳು ಜಿಡ್ಡು ಗಟ್ಟುತ್ತದೆ". ಎಷ್ಟೊಂದು ಸರಿಯಾದದ್ದು ಅಲಾ..
ನಮಗೆ ಮಾತಾಡಲು ಯಾರೂ ಸಿಗುವುದಿಲ್ಲ ಅಂತ ನಮ್ಮದ್ದೊಂದು ದೂರೂ ಇದ್ದದ್ದೇ.ಮಾತಿಗಾಗಿ ದೂರ ಯಾಕೆ ಹೋಗಬೇಕು,ಗುರುತು ಪರಿಚಯವೇ ಇಲ್ಲದವರ Messenger ಗೆ ಯಾಕೆ ಇಳಿಯಬೇಕು..ಒಮ್ಮೆ ನಮ್ಮ ಸುತ್ತ ಮುತ್ತಲಿನ ಜನರನ್ನೇ ಮಾತಾಡಿಸಿ ನೋಡಿ, ಅವರ ಕಥೆ ಕೇಳಿ. ಹೌದು ಸುಮ್ಮನೆ ಕೇಳಿ, ಹಾಲು ಹಾಕುವವರು, ಮೀನು ಮಾರುವವರು, ಪೇಪರ್ ಹಾಕುವವನು, ಮನೆಕೆಲಸದವಳು, ತೋಟದ ಕೆಲಸದವರು, ತರಕಾರಿ ತರುವವರು... ಎಲ್ಲರೂ ಮಾತಾಡಲು ನಿಂತು ಬಿಟ್ಟರೆ ಎಷ್ಟು ಸೊಗಸಾಗಿ ಮಾತಾಡುತ್ತಾರೆ ಗೊತ್ತೇ. ಮಾತಾಡೋಕೆ ಮನಸ್ಸಿರಬೇಕು, ಕೇಳೋಕೆ ಹೃದಯವಿರಬೇಕು... ಬಾಯಿ, ಕಿವಿ ಹೆಸರಿಗೆ ಮಾತ್ರ.. ಏನಂತೀರಾ..
ನಿಜವಾಗಿಯೂ ಚೆನ್ನಾಗಿದೆ.ದೋಸೆಯಂತೆ ರುಚಿಯಾಗಿದೆ.. ಇನ್ನೂ ಸವಿಯದಿದ್ದರೆ,ಒಮ್ಮೆ ಮೆಲ್ಲುವ ಮನಸ್ಸು ಮಾಡಿ... ಮನಸ್ಸು ಎಷ್ಟೋ ಹಗುರ ಆಗಿ ಬಿಡುತ್ತದೆ.
ಪಚ್ಚುಪುಸ್ತಕ_Review
ab pacchu

Comments
Post a Comment