ಮುರ್ಲಿಯ ಹುಡುಗಿ
ಹೆಣ್ಣು ನೋಡಲು ಹೋಗಿದ್ದೆ..
ಹೌದು ಮದುವೆ ಆಗಲಿಕ್ಕೆಯೇ..
ಅದರೊಟ್ಟಿಗೆ ಮಾಮೂಲಿಯಂತೆ ಹುಡುಗಿ ಮನೆಗೆ ಹೋದಾಗ ಚಹಾ ಕಾಫಿ ಕುಡಿದು ಶೀರ,ಬಾಳೆಕಾಯಿ ಚಿಪ್ಸ್ ತಿನ್ನುತ್ತಾ ನಡೆಸುವ ಉಭಯ ಕುಶಲೋಪರಿ ಮತ್ತು ಕೊನೆಯ ಅತೀ ಪ್ರಮುಖ ಘಟ್ಟ ನಿಮಗೆ ಬೇಕಾದದ್ದು ನೀವು ಕೇಳಿ,ನಮಗೆ ಬೇಕಾದದ್ದು ನಾವು ಕೇಳುತ್ತೇವೆ ಎನ್ನುವ ಪ್ರಶ್ನೋತ್ತರ ಕಾರ್ಯಕ್ರಮ... ಇವೆಲ್ಲವೂ ಕೂಡ ಅದರಲ್ಲಿಯೇ ಸೇರ್ಪಡೆಯಾಗಿತ್ತು.
ಆದರೆ ನನಗಾಗಿ ಹುಡುಗಿ ನೋಡ್ಲಿಕ್ಕೆ ಹೋಗಿದ್ದು ಅಲ್ಲ...
ದೊಡ್ಡಪ್ಪನ ಮಗ ಒಬ್ಬ ಇದ್ದಾನೆ. ಮುರಳೀಧರ್ ಅಂತ. ಸಿವಿಲ್ ಇಂಜಿನಿಯರ್.ನನಗೆ ಅಣ್ಣ ಆಗ್ಬೇಕು.
ಅವನ ಅಪ್ಪ ರಾತ್ರಿ ನಮ್ಮ ಮನೆಗೆ ಬಂದು ನನ್ನಪ್ಪನಿಗೆ ಬರ್ಲಿಕ್ಕೆ ಹೇಳುವಾಗ ನಾನು ಸಹ ಅಲ್ಲೇ ಇದ್ದೆ.. ಟಿವಿಯಲ್ಲಿ ಮುದ್ದು ಲಕ್ಷ್ಮಿ ಸೀರಿಯಲ್ ನೋಡ್ತಾ ಇದ್ದೆ.
Actually ನೋಡ್ತಾ ಇರ್ಲಿಲ್ಲ..ಅಪ್ಪ ಡೈಲಿ ನೋಡ್ತಾರೆ ಮತ್ತು ರಾಧಾಕೃಷ್ಣ ಸೀರಿಯಲ್ ಗಿಂತ ಮೊದಲು ಅದೇ ಅಲಾ ಬರುವುದು.. ಹಾಗಾಗಿ ಕೊನೆಯ ಐದು ನಿಮಿಷ ಆದರೂ ಗೊತ್ತಿಲ್ಲದೇ ಹಾಗೇ ನೋಡಿ ಹೋಗ್ತದೆ.
ಆ ಸೀರಿಯಲ್ ನಲ್ಲಿ ಮುದ್ದು ಲಕ್ಷ್ಮಿ ಗೆ ಯಾವಾಗಲೂ ಕಷ್ಟವೇ.ಪಾಪ ಯಾವ ಸ್ತ್ರೀಗೆ ಸಹ ಅಷ್ಟು ಕಷ್ಟ ಜೀವನದಲ್ಲಿ ಬರಬಾರದು ಅಂತ ನಾನು ದೇವರಲ್ಲಿ ಡೈಲಿ ಪ್ರಾರ್ಥಿಸುತ್ತೇನೆ.
ಮುರಳೀಧರ್ ನ ಮನೆಯಲ್ಲಿ ಯಾರೂ ಸಹ ಮಾತನಾಡುವುದರಲ್ಲಿ ಅಷ್ಟೊಂದು ಚುರುಕು ಇಲ್ಲ ಆಯ್ತಾ..
ಮನೆಯಲ್ಲಿ ನಾಲ್ಕು ಮಂದಿ ಇದ್ದಾರೆ.ಅಪ್ಪ,ಅಮ್ಮ, ಮಗ ಮತ್ತು ಮಗಳು.
ಬಹಳ ಕಡಿಮೆ ಅಳೆದು ತೂಗಿ ಮಾತಾಡುವವರು ಅವರು. May be ತಕ್ಕಡಿ ಕೂಡ ಜತೆಯಲ್ಲಿಯೇ ಹಿಡಿದುಕೊಂಡು ಓಡಾಡುತ್ತಾರೋ ಏನೋ ಅನ್ನುವ ಫೀಲ್ ಬರುತ್ತೆ ಅವರುಗಳು ಮಾತಾಡುವುದನ್ನು ನೋಡುವಾಗ.
ಮುರಳೀಧರ್,ಅವನ ಅಪ್ಪ ದರ್ಶನ್ ಮತ್ತು ಅವನ ಅಮ್ಮ ರಕ್ಷಿತಾ ಮೂವರೂ ಕೂಡ ಒಂದೇ ರೀತಿ .ಕಡಿಮೆ ಎಂದರೆ ಕಡಿಮೆ ಮಾತು.
ಇರುವವರಲ್ಲಿ ಸ್ವಲ್ಪ ಜಾಸ್ತಿ ಮಾತಾಡುವುದು ಅಂದ್ರೆ ಮುರುಳಿಯ ತಂಗಿ ಇಂಪನ. ಅವಳು ನನಗೆ ಕೂಡ ತಂಗಿಯೇ. ನನಗಿಂತ ಚಿಕ್ಕವಳು.ಇಂಪನಾಗೆ ಮುರುಳಿಗಿಂತಲೂ ನಾನಂದ್ರೆನೇ ಜಾಸ್ತಿ ಇಷ್ಟ.
ನೀಲು ಅಣ್ಣ... ನೀಲು ಅಣ್ಣ ಅಂತ ನನ್ನ ಸುತ್ತಾನೆ ತಿರುಗ್ತಾ ಇರ್ತಾಳೆ. ನಾನವಳಿಗೆ ಇಂಪು ಎಂದೇ ಕರೆಯುವುದು.
ನನಗೆ ಒಂಥರಾ ಫ್ರೆಂಡ್ ರೀತಿ ಅವಳು.ನಾನು ಅವರ ಮನೆಗೆ ಹೋದ್ರೆ ಅವಳ ಜೊತೆಯೇ ಜಾಸ್ತಿ ಕಾಲ ಕಳೆಯುವುದು. ಅವಳು ಕೂಡ ನನ್ನನ್ನೇ ಹುಡುಕಿಕೊಂಡು ಮನೆಗೆ ಆವಾಗವಾಗ ಬರ್ತಾನೆ ಇರ್ತಾಳೆ.
ಇಂಜಿನಿಯರಿಂಗ್ ಮಾಡ್ತಾ ಇದ್ದಾಳೆ ಇಲ್ಲೇ ಮಂಗಳೂರಿನಲ್ಲಿ.Electrical and Electronics Engineering. ಒಮ್ಮೊಮ್ಮೆ ನನ್ನ ಬಳಿ Subjects ಡೌಟ್ಸ್ ಎಲ್ಲಾ ಕೇಳ್ಲಿಕ್ಕೆ ಬರುವುದುಂಟು ಅವಳು.
ಆವಾಗಲೆಲ್ಲ ನನ್ನ ಅಪ್ಪ ಅವಳಿಗೆ ಹೇಳುವುದು - ನೋಡಮ್ಮ ಇಂಪನ.. ಈ ಜನದ ಹತ್ತಿರ ನೀನು ಇಂಜಿನಿಯರಿಂಗ್ ಡೌಟ್ಸ್ ಕೇಳಿ ಪಾಸ್ ಆಗ್ಲಿಕ್ಕೆ ಉಂಟಾ...ಕಲಿತು ಅವನಿಗೆಯೇ ಇನ್ನು ಸರಿಯಾದ ಕೆಲಸ ಸಿಕ್ಕಿಲ್ಲ... ಇನ್ನು ಅವನು ನಿಮಗೆ ಕಲಿಸಿ ನಿಮ್ಮನ್ನೆಲ್ಲ ಉದ್ದಾರ ಮಾಡಿದ ಹಾಗೆಯೇ.. ನನಗೆ ಅಂತು ಅವನೊಬ್ಬ ಇಂಜಿನಿಯರ್ ಅನ್ನುವುದೇ ಮರೆತು ಹೋಗಿದೆ.. ಅವನಿಗೆ ಜಸ್ಟ್ ಮನೆಯ ಮಿಕ್ಸರ್,ಫ್ಯಾನ್ ಹಾಳಾದ್ರೆ ಕೂಡ ರಿಪೇರಿ ಮಾಡ್ಲಿಕ್ಕೆ ಬರಲ್ಲ.. ಇನ್ನು ನಿನಗೆ ಸಬ್ಜೆಕ್ಟ್ ಕಲಿಸ್ತಾನೆ ಅಂತೆ.. 😏
ಆಗ ನಾನು - ಅಪ್ಪ... ಮೋಟಾರ್ ಹಾಳಾದ್ರೆ, ವೈಂಡಿಗ್ ಬರ್ನ್ ಆದ್ರೆ ನಾನೇನು ಮಾಡ್ಲಿಕ್ಕೆ ಆಗ್ತದೆ.. ಅದನ್ನು ನೀವು ರಿಪೇರಿ ಶಾಪ್ ಗೆ ತಗೊಂಡೇ ಹೋಗ್ಬೇಕಾಗ್ತದೆ.
ಹಾಗಾದರೆ ನೀನು ಇಂಜಿನಿಯರ್ ಯಾವ ಕರ್ಮಕ್ಕೆ ಮಾಡಿದ್ದು... At least ನಮ್ಮ ಮನೆಯದ್ದು ಸ ರೀಪೇರಿ ಮಾಡ್ಲಿಕ್ಕೆ ಆಗದಿದ್ರೆ...
ಇವರದ್ದು ಒಂದು ಅವಸ್ಥೆಯೇ ಮರ್ರೆ... ಇಂಜಿನಿಯರ್ ಅಂದ್ರೆ ಇವರೆಲ್ಲ ಏನಂತ ತಿಳಿದುಕೊಂಡಿದ್ದಾರೆ.. ಮನೆಯಲ್ಲಿಯೇ ರಿಪೇರಿ ಮಾಡ್ಲಿಕ್ಕೆ ಟೂಲ್ಸ್ ಬೇಡ್ವಾ.. ಮಟೀರಿಯಲ್ಸ್ ಬೇಡ್ವಾ.. 😏
ಆವಾಗಲೆಲ್ಲ ನನ್ನನ್ನು ಪ್ರೊಟೆಕ್ಟ್ ಮಾಡುವುದೇ ಇಂಪುವೇ...
ಚಿಕ್ಕಪ್ಪ... ನೀವು ಯಾಕೆ ಯಾವಾಗಲೂ ನೀಲು ಅಣ್ಣನಿಗೆ ಬೈಯುವುದು... ಅವನಿಗೆ ಬೈಯದಿದ್ದರೆ,ಅವನ ಮರ್ಯಾದೆ ತೆಗೆಯದಿದ್ದರೆ ನಿಮಗೆ ಸಮಾಧಾನವೇ ಇಲ್ಲವಾ...ಅವನಿಗೆ ಸಹ ಒಂದು ಕೆಲಸ ಸಿಗ್ತದೆ.. ಆ ಧೈರ್ಯ ನನಗಿದೆ..
ನನ್ನ ಮರ್ಯಾದೆಗಾಗಿ ಹೋರಾಟ ಮಾಡುವ ಜಗತ್ತಿನ ಏಕೈಕ ಜನ ಅಂದರೆ ಅದು ನನ್ನ ತಂಗಿ ಇಂಪುವೇ... ಕೆಲವೊಮ್ಮೆ ಅವಳೇ ನನ್ನ ಮರ್ಯಾದೆ ಸಿಕ್ಕಾಪಟ್ಟೆ ತೆಗೆದರೂ ಸಹ,ಬೇರೆಯವರು ನನ್ನ ಮರ್ಯಾದೆ ತೆಗೆದಾಗಲೆಲ್ಲ ಉಗ್ರ ಪ್ರತಿಭಟನೆ ಮಾಡುವ ಅವಳು ಅಂದರೆ ನನಗೆ ಯಾವಾಗಲೂ ಇಷ್ಟವೇ..
ಮತ್ತೆ ನನಗೊಂದು ಕೆಲಸ ಸಿಕ್ಕೇ ಸಿಗುತ್ತದೆ ಎಂದು ನನಗೆ ಧೈರ್ಯ ಇಲ್ಲದಿದ್ದರೂ ಅವಳಿಗೆ ಇರುವ ಆ ನಂಬಿಕೆ ಕಂಡು ನಾನೇ ಹಲವು ಸಲ ದಂಗಾಗಿ ಹೋಗಿದ್ದೆನೆ.
ಹೌದು ಮುರುಳಿಯವರ ಮನೆಯಲ್ಲಿ ಇಂಪು ಬಿಟ್ಟರೆ ಬಾಕಿಯವರು ಹೊರಗಡೆ ಹೋದರೆ ಮಾತಾಡುವುದು ಭಯಂಕರ ಕಡಿಮೆಯೇ.ಆದರೆ ಅವರಲ್ಲಿ ನಗುವಿಗೆ ಕೊರತೆ ಇಲ್ಲ.
ದೊಡ್ಡಪ್ಪ ದರ್ಶನ್ ಅಂತು ಸದಾ ಹಸನ್ಮುಖಿ. ಯಾವಾಗ ನೋಡಿದರೂ ನಗ್ತಾನೆ ಇರ್ತಾರೆ. ಬಹುಶಃ ನಮ್ಮ ಊರಲ್ಲಿ ಅವರಷ್ಟು ನಗು ಮುಖದ ವ್ಯಕ್ತಿಯೇ ಇಲ್ಲವೆನೋ..ಅವರದ್ದೊಂದು Default ನಗು. ಹುಟ್ಟಿನಿಂದಲೇ ಅವರೊಂದಿಗೆ ಇದೆ.
ಸುತ್ತ ಮುತ್ತ ದುಃಖದ ವಾತಾವರಣ ಇದ್ದರೂ ಸಹ ಅವರ ಮುಖದಲ್ಲಿ ಒಂದು ನಗು ಇರ್ತದೆ. ಹಾಗಾಗಿ ಕೆಲವೊಮ್ಮೆ ನಾನು ಅವರಿಗೆ ಹೇಳುವುದು ಉಂಟು.. ದರ್ಶನ್ ದೊಡ್ಡಪ್ಪ.. ನೀವು ಎಲ್ಲಿಗೆ ಬೇಕಾದರೂ ಹೋಗಿ ಆದರೆ ಯಾವತ್ತೂ ಸಾವಿನ ಮನೆಗೆ ಒಂದು ಹೋಗ್ಬೇಡಿ ಆಯ್ತಾ ಎಂದು. ಅವರು ಅದಕ್ಕೆ ಸ ನಗ್ತಾರೆ.
ಆದರೂ ಅವರೆಂದರೆ ಸಹ ನನಗಿಷ್ಟ.ಅವರಿಗೂ ನಾನೆಂದರೆ ಅಷ್ಟೇ ಪ್ರೀತಿ,ವಿಶ್ವಾಸ ಮ್ತತು ಸಲಿಗೆ.
ರಕ್ಷಿತಾ ದೊಡ್ಡಮ್ಮ ಕೂಡ ಬಹಳ ಒಳ್ಳೆಯವರು. ಅಮ್ಮನಿಲ್ಲದ್ದ ನನಗೆ ಸದ್ಯಕ್ಕೆ ಅವರೇ ಅಮ್ಮನ ತರಹ. ಅಂತಹ ತಾಯಿ ವಾತ್ಸಲ್ಯ ಮುರುಳಿಗೆ ಮಾತ್ರವಲ್ಲ ನನಗೂ ತೋರುವವರು ಅವರು.
ನಾನು ಅವರಿಬ್ಬರನ್ನು ದೊಡ್ಡಪ್ಪ, ದೊಡ್ಡಮ್ಮ ಅನ್ನುವುದಕ್ಕಿಂತಲೂ ದರ್ಶನ್, ರಕ್ಷಿತಾ ಎಂದೇ ಪ್ರೀತಿಯಿಂದ ಏಕವಚನದಲ್ಲಿಯೇ ಕರೆಯುವುದು. ಅವರಿಗೂ ಬೇಜಾರೇ ಇಲ್ಲ. ಬದಲಿಗೆ ಖುಷಿಯೇ ಆಗ್ತದೆ.
ಒಂಥರಾ ನಾನು ಕೂಡ ಆ ಮನೆಯ ಮನೆಮಗ ಇದ್ದಂತೆಯೇ ಅವರಿಗೆ. ಮನೆಯಲ್ಲಿ ಏನೇ ತಿಂಡಿ ತಿರ್ಥ ಮಾಡಿದರೂ ನನಗೆ ಕರೆದೇ ಕರೆಯುತ್ತಾರೆ.. ಜಸ್ಟ್ ಚಹಾ, ಕಾಫಿ ಮಾಡಿದ್ರೂ ಸಹ ಕರೆಯುತ್ತಾರೆ.
ದೊಡ್ಡಮ್ಮ ಟೀ ಚೆನ್ನಾಗಿ ಮಾಡ್ತಾರೆ ಮತ್ತು ನನಗೆ ಟೀ ಇಷ್ಟ ಎಂದು ಅವರಿಗೂ ಸ ಗೊತ್ತು. ಚೊಂಬು ಗಟ್ಟಲೆ ಚಹಾ ಕುಡಿಯಬಲ್ಲೆ ನಾನು.ನನಗಾಗಿಯೇ ಅವರು ಸ್ಪೆಷಲ್ ಖಡಕ್ ಟೀ ಮಾಡಿ ಎಲ್ಲಾ ಕೊಡ್ತಾ ಇರ್ತಾರೆ. ಹಾಗಾಗಿ ದಿನಕ್ಕೆರಡು ಬಾರಿ ಆದರೂ ಆ ಕಡೆ ವಿಸಿಟ್ ಕೊಡ್ತಾ ಇರ್ತೇನೆ ನಾನು.
ಮಾತ್ರವಲ್ಲ ಅವರ ಮನೆಯಲ್ಲಿ ಟೀ ಹುಡಿ ಖಾಲಿ ಆದಾಗ ದೊಡ್ಡಮ್ಮನಿಗೆ ಹುಡಿ ತಂದು ಕೊಡುವುದೇ ನಾನು. ನನಗೆ ಚಹಾ, ಚಹಾ ಹುಡಿಗಳ ಬಗ್ಗೆ ವಿಶೇಷ ಒಲವು ಮಾತ್ರವಲ್ಲ ಅವುಗಳ ಬಗ್ಗೆ ತಕ್ಕ ಮಟ್ಟಿನ ಜ್ಞಾನವು ಕೂಡ ಇದೆ. ದೊಡ್ಡಮ್ಮನಿಗೆ ಇತ್ತೀಚೆಗೆ ಲೆಮನ್ ಟೀ.. ಜಿಂಜರ್ ಟೀ.. ಮಸಾಲ ಟೀ ಇನ್ನು ಹತ್ತು ಹಲವು ವಿಶೇಷ ಟೀ ಗಳನ್ನು ಹೇಳಿ ಕೊಟ್ಟಿದ್ದೇನೆ ನಾನು.
ಅಂದ ಹಾಗೆ ನಮ್ಮ ಮನೆಯ ಪಕ್ಕದಲ್ಲಿಯೇ ದೊಡ್ಡಪ್ಪನವರ ಮನೆ. ಇಬ್ಬರಿಗೂ ಒಂದೇ ಕಾಂಪೌಂಡ್. ಹಾಗಾಗಿ ಚಹಾ.. ಕಾಫಿ..ಊಟ.. ತಿಂಡಿ ತಿರ್ಥ ಸೇವನೆಗೆ ಅವರ ಮನೆ ಕಡೆ ನನ್ನದ್ದೊಂದು ನಿತ್ಯದ ಸವಾರಿ ಇದ್ದದ್ದೇ. ಏನಾದರೂ ಮಾಡಿದರೆ ಇಂಪು ಕಾಲ್ ಮಾಡಿ ಇಲ್ಲವೇ ಮೆಸೇಜ್ ಮಾಡಿ ಹೇಳ್ತಾಳೆ ಅಣ್ಣಾ ಅಮ್ಮ ಕರೀತಾ ಇದ್ದಾರೆ.. ಬೇಗ ಬಾ ಅಂತ.
ನಮ್ಮ ಎರಡೂ ಫ್ಯಾಮಿಲಿಯಲ್ಲಿ ದರ್ಶನ್ ದೊಡ್ಡಪ್ಪ ಬಿಟ್ರೆ ಕುಟುಂಬದ ನೆಕ್ಸ್ಟ್ ಹಿರಿಯ ಅಂದರೆ ಅದು ನನ್ನ ಅಪ್ಪ ನೀಲಣ್ಣನ್ನೇ.ಹಾಗಾಗಿ ದರ್ಶನ್ ದೊಡ್ಡಪ್ಪ ನನ್ನ ಅಪ್ಪನಿಗೆ ಹೇಳಿ ಹೋಗಲು ಬಂದದ್ದು.. ನಾಳೆ ಹುಡುಗಿ ಮನೆಗೆ ಹೋಗ್ಲಿಕ್ಕೆಉಂಟು ಅಂತ.
ಅಷ್ಟು ಮಾತ್ರವಲ್ಲ ಹುಡುಗಿ ಮನೆಯಲ್ಲಿ ಮಾತಾಡ್ಲಿಕ್ಕೆ ಒಂದು ಚೆನ್ನಾಗಿ ಮಾತಾಡುವ ಜನ ಬೇಕಲ್ಲ.. ಅದಕ್ಕಾಗಿ ಸಹ ಅವರಿಗೆ ಅಪ್ಪ ಬೇಕೇ ಬೇಕು. ನನ್ನ ಅಪ್ಪ ಕೂಡ ಭಯಂಕರ ಮಾತುಗಾರ ಏನಲ್ಲ.. ಆದರೆ ದೊಡ್ಡಪ್ಪನಿಗಿಂತ ಓಕೆ. ಹಾಗಾಗಿ ಕುಟುಂಬದಲ್ಲಿ ಮಾತುಕಥೆ ಏನಿದ್ದರೂ ನಮ್ಮ ಅಪ್ಪನಿಗೆನೇ ಮೊದಲಿನ ಪ್ರಾಶಸ್ತ್ಯ.
ಹಾಗಾಗಿ ದೊಡ್ಡಪ್ಪ ಮನೆಗೆ ಬಂದಾಗ ನನ್ನನ್ನು ನೋಡಿ ನೀನು ಕೂಡ ಬಾರೋ ನೀಲಮೇಘ,ರಕ್ಷಿತಾ ಕೂಡ ನಿನಗೆ ಬರ್ಲಿಕ್ಕೆ ಹೇಳಿದ್ದಾಳೆ..ಇಂಪನ ಸಹ ಹೇಳಿದ್ದಾಳೆ. ನೀನು ಬಂದ್ರೆ ನಮ್ಮ ಮುರುಳಿಗೂ ಸ್ವಲ್ಪ ಧೈರ್ಯ ಆಗ್ತದೆ.. ಅವನಿಗೆ ಸ ಇದೆಲ್ಲ experience ಇಲ್ಲ ಅಲಾ... ಎಂದು ಹೇಳಿದ್ದರು.
ಅದಕ್ಕೆ ನನ್ನ ಅಪ್ಪ.. ಬರ್ತಾನೆ, ಬರ್ತಾನೆ ಅವನಿಗೆ ಏನು ಇಲ್ಲಿ ದೊಡ್ಡ ಶಿಪ್ಪು(ಹಡಗು) ಕಟ್ಟುವ ಕೆಲಸ ಇದೆಯಾ.. ನನ್ನ ಜೊತೆ ಖಂಡಿತಾ ಬರ್ತಾನೆ.. ಮಾಡ್ಲಿಕ್ಕೆ ಏನಾದರೂ ಕೆಲಸ ಇದ್ರೆ ಅಲಾ ಆಗುವುದಿಲ್ಲ ಅಂತ ಹೇಳುವುದು.. ನೀನು ಟೆನ್ಶನ್ ಮಾಡ್ಬೇಡ ಬರದಿದ್ದರೆ ನಾನು ಅವನನ್ನು ಎಳ್ಕೊಂಡು ಆದ್ರೂ ಬರ್ತೆನೆ.. ಎಂದು ನನ್ನ ಒಪ್ಪಿಗೆ ಇಲ್ಲದೆಯೇ ದರ್ಶನ್ ದೊಡ್ಡಪ್ಪನಿಗೆ ಅನುಮತಿ ನೀಡಿದ್ದರು ಮೈ ಫಾದರ್ ನೀಲಣ್ಣ.
ಅಲಾ.. ಈ ದೊಡ್ಡಪ್ಪ ಹೇಳಿದ್ದ ಆ ಕೊನೆಯ ಸಾಲು " ನಮ್ಮ ಮುರುಳಿಗೆ ಸ ಇದೆಲ್ಲ experience ಇಲ್ಲ ಅಲಾ.." ಕೇಳಿ ನನಗೆ ಒಮ್ಮೆ ಶಾಕ್ ಆಯಿತು. ಮತ್ತೆ ನಾನು ಎಂತ ಇದರಲ್ಲಿ Phd ಮಾಡಿದ್ದೇನಾ...ಲೈಫ್ ನಲ್ಲಿ ಒಂದು ಕೆಲಸ ಅಂತವೇ ಇಲ್ಲ. ಕೆಲಸ ಹುಡುಕುವುದನ್ನೇ ಒಂದು ಕೆಲಸ ಮಾಡಿಕೊಂಡಿರುವ ನನಗೆ ಅಪ್ಪ ಅಂತು ಮೊದಲೇ ಹೇಳಿದ್ದಾರೆ.. ನಿನಗೆ ಕೆಲಸ ಸಿಗದೆ ಮದುವೆ ಸ ಮಾಡಲ್ಲ ನೀಲು ಎಂದು.. ಅಂತಹದ್ದರಲ್ಲಿ ನಾನು ಹುಡುಗಿ ನೋಡ್ಲಿಕ್ಕೆ ಹೋದದ್ದು ಯಾವಾಗ.. ನನಗೆ ಅಂತಹ ಅನುಭವಗಳು ಆದದ್ದು ಯಾವಾಗ... ಇರಲಿ.. ಇರಲಿ ಇವರಿಗೆಲ್ಲ ಸರಿಯಾಗಿ ಮಾಡ್ತೇನೆ ಅಂದುಕೊಂಡು ದೊಡ್ಡಪ್ಪನಿಗೆ ಹೇಳಿದೆ..
- ದರ್ಶನ್ .. ನೀವೇನು ಟೆನ್ಶನ್ ಮಾಡ್ಬೇಡಿ.. ನಾನಿದ್ದೇನಲ್ಲಾ.. ನಾನು ಇರುವಾಗ ನೀವು ಯಾಕೆ ಅನಗತ್ಯ worry ಆಗ್ತೀರಾ.. ಎಲ್ಲಾ ನಾನು ನೋಡ್ಕೋತೇನೆ.. ನಾನೇ ಎಲ್ಲಾ ಮಾತುಕಥೆ ಮಾಡಿಸ್ತೇನೆ.. ಬೇಕಾದರೆ ಬರ್ಕೊಳ್ಳಿ.. ನಾನು ಹೋಗಿ ಮಾತಾಡಿದೆ ಎಂದರೆ ಆ ಮದುವೆ ಫಿಕ್ಸ್ ಅಂತ ಲೆಕ್ಕವೇ .. ಎಷ್ಟು ಅಂತ ಹುಡುಗಿ ಮನೆಗೆ ಹೆಣ್ಣು ನೋಡ್ಲಿಕ್ಕೆ ಹೋಗ್ಲಿಲ್ಲ ನಾನು.. ಒಂದಾ..ಎರಡಾ... ಎಲ್ಲವೂ ಸಕ್ಸಸೇ..
ಅಪ್ಪ ನನ್ನನೇ ವಾರೆಕಣ್ಣಿನಲ್ಲಿ ನೋಡಿದರೂ... ರೈಲು ಚೆನ್ನಾಗಿ ಬಿಡ್ತೀಯಾ.. ಎನ್ನುವ ಅವರ ಮನಸ್ಸಿನ ಆಳದ ಮಾತು ಅವರ ಕಣ್ಣಿನಲ್ಲಿ ನನಗೆ ಸ್ಪಷ್ಟವಾಗಿ ಕಾಣಿಸುತ್ತಿತ್ತು.
ಅದೇ ರಾತ್ರಿ ಮುರ್ಲಿ ಕೂಡ ನನಗೆ ಕಾಲ್ ಮಾಡಿ ತಲೆ ತಿಂತಿದ್ದ. ನೀಲು ನೀನು ಬರ್ಲೇ ಬೇಕು.. ಇಲ್ಲದಿದ್ದರೆ ನಾನು ಹುಡುಗಿ ನೋಡ್ಲಿಕ್ಕೆನೇ ಹೋಗಲ್ಲ..ನನಗೆ ನೀನಿದ್ದರೆ ಧೈರ್ಯ. ನನಗೆ ಒಬ್ಬನೇ ಹೋಗ್ಲಿಕ್ಕೆ ನರ್ವಸ್ ಆಗ್ತದೆ ಮಾರಾಯ.. ಎಂದು ಅಂಗಲಾಚಿ ಬೇಡಿಕೊಂಡಿದ್ದ. ನನ್ನ ಕಾಲು ಒಂದು ಅವ ಹಿಡಿಲಿಲ್ಲ ಅಷ್ಟೇ..
ಮುರ್ಲಿ ಅಂದರೆ ಅವನೇ ಮುರಳೀಧರ್. ಹಾಗಂತ ಕಾಲೇಜು ನಲ್ಲಿ,ಕಂಪನಿಯಲ್ಲಿ ವ್ಯವಹಾರಿಕವಾಗಿ ಮಾತ್ರ ಕರೆಯುವುದು. ಅವನ ಅಪ್ಪ ದರ್ಶನ್ ಗೆ, ಅಮ್ಮ ರಕ್ಷಿತಾಗೆ ಹಾಗೂ ಊರವರಿಗೆ ಅವನು ಜಸ್ಟ್ ಮುರುಳಿ. ನಿರಂತರವಾಗಿ ಮುರುಳಿ.. ಮುರುಳಿ ಎಂದು ಹೇಳಿ ನನ್ನಂತವನ ಬಾಯಿಯಲ್ಲಿ ಅದು ಮುರ್ಲಿ ಎಂದು ಆಗಿದೆ ಅಷ್ಟೇ...
ಇಂಪು ಕೂಡ ಮೆಸೇಜ್ ಮಾಡಿದ್ಲು.. ಅಣ್ಣ ನೀನು ಬರ್ಲೇ ಬೇಕು..ನೀನಿದ್ರೆ ನಂಗೆ jolly ಆಗ್ತದೆ.. ಇಲ್ಲದಿದ್ದರೆ ಬೋರು... ಮಂಗನಂತೆ ಇನ್ನು ಎಲ್ಲೆಲ್ಲೋ ಸುತ್ತಾಡ್ಲಿಕ್ಕೆ ಹೋಗಿ ಮಿಸ್ ಮಾಡ್ಬೇಡ.
ಆಹಾ.... ನಾನೆಂದರೆ ಎಂತಹ ಬೇಡಿಕೆ ಇದೆ ಈ ವಟಾರದಲ್ಲಿ. ಆದ್ರೆ ನನ್ನ ಅಪ್ಪನಿಗೆ ಯಾಕೆ ಇದೆಲ್ಲಾ ಇನ್ನೂ ಅರ್ಥ ಆಗ್ತಾ ಇಲ್ಲ.
ನಮ್ಮ ಕಡೆಯಿಂದ ಜಾಸ್ತಿ ಜನ ಏನಿಲ್ಲ, ಮುರಳಿ, ದರ್ಶನ್ ದೊಡ್ಡಪ್ಪ,ನಾನು,ಇಂಪನ,ಮೈ ಫಾದರ್ ನೀಲಣ್ಣ.. ಹಾಗೂ ಇಬ್ಬರು ಹೆಂಗಸರು.. ಅಂದರೆ ರಕ್ಷಿತಾ ದೊಡ್ಡಮ್ಮ ಹಾಗೂ ನಮ್ಮ ಅತ್ತೆ. ಟೋಟಲ್ ಏಳು ಜನ ಅಷ್ಟೇ...
ನನ್ನನ್ನು ಕಂಡ ಕೂಡಲೇ ರಕ್ಷಿತಾ ದೊಡ್ಡಮ್ಮ... ನೀಲು ಟೀ ಕುಡಿದು ಆಯ್ತೇನೋ.. ಅಥವಾ ಮಾಡಿ ಕೊಡ್ಲ ಒಂದು ಸ್ಟ್ರಾಂಗ್ ಆಗಿ...
ನಾನು ಕೂಡ - ನಿಜ ನನಗೆ ಈಗ ಒಂದು ಸ್ಟ್ರಾಂಗ್ ಟೀ ಕುಡೀಬೇಕು ಅಂತ ಅನ್ನಿಸ್ತಾ ಉಂಟು ರಕ್ಷಿತಾ... ಅಂದೆ.
ಅದಕ್ಕೆ ನನ್ನ ಅಪ್ಪ ಹೇಳಿದ್ರು - ಅತ್ತಿಗೆ.. ಈಗ ಹೊರಡುವ ಟೈಂ ಅಲ್ಲಿ ಟೀ ಎಲ್ಲಾ ಕುಡೀತಾ ಕುಳಿತುಕೊಂಡ್ರೆ ಲೇಟ್ ಆಗಲ್ವಾ... ಅವ ಹುಡುಗಿ ಮನೆಗೆ ಹೋಗಿ ಅಲ್ಲಿ ಬೇಕಾದಷ್ಟು ಟೀ ಕುಡೀಲಿ... ಸಂಜೆ ಮತ್ತೊಮ್ಮೆ ನಿಮ್ಮ ಮನೆಗೆ ಬಂದು ಎಂದಿನಂತೆ ಚೊಂಬು ಗಟ್ಟಲೆ ಟೀ ಕುಡೀಲಿ.. ಈಗ ಹೊರಡುವ.. ಹೊತ್ತಾಯ್ತು..
ಅದಕ್ಕೆ ನಾನು - ಅಪ್ಪ... ಗಂಡಿನ ಕಡೆಯವರು ಯಾವಾಗಲೂ ಲೇಟ್ ಆಗಿಯೇ ಹೋಗ್ಬೇಕು.. ಅದೇ ಸಂಪ್ರದಾಯ..ಅದೇ ನಮಗೆ ಒಂದು ಗತ್ತು.. ಗಾಂಭೀರ್ಯ.. ಆವಾಗಲೇ ನಮಗೆ ಒಂದು ಇದು ಬರುವುದು..
ಏನು ಇದು ಬರುವುದು..? ಅಪ್ಪ ಕೇಳಿದರು.
ಅದೇ.. ಮರ್ಯಾದೆ ಬರುವುದು.. ಅಂದೆ.
ನಿನಗೆ ಈಗ ಅದು ಬಾರೀ ಉಂಟಾ.....
ಬೆಳಿಗ್ಗೆ ಬೆಳಿಗ್ಗೆಯೇ ಮಂಗಳರಾತಿ.. ಇವರಿಗೆಲ್ಲಾ ನನ್ನ ಮಾನ ಮರ್ಯಾದೆ ತೆಗೆಯದೇ ಇದ್ದರೆ ಸಮಾಧಾನವೇ ಇಲ್ಲ. ಇರಲಿ ಇರಲಿ ಸಮಯ ಬರಲಿ ಇವರಿಗೆಲ್ಲ ಸರಿಯಾಗಿ ಮಾಡ್ತೀನಿ ಅಂತ ಮನಸ್ಸಿನಲ್ಲಿಯೇ ಅಂದುಕೊಂಡೆ.
ಅವನಿಗೆ ಎಷ್ಟು ಅಂತ ಬೈಯ್ತಿ ಮಾರಾಯ.. ಅದೂ ಬೆಳಿಗ್ಗೆ ಬೆಳಿಗ್ಗೆ...ಅಂತ ಹೇಳಿದರು ದೊಡ್ಡಮ್ಮ.
ಹೌದು ಚಿಕ್ಕಪ್ಪನಿಗೆ ಅಣ್ಣನಿಗೆ ಬೈಯದಿದ್ದರೆ ಸಮಾಧಾನವೇ ಇಲ್ಲ... ಇಂಪನ ಕೂಡ ಧ್ವನಿ ಸೇರಿಸಿದಳು.
ಆಯಿತು ಹೋಗುವ ಇನ್ನು ಹಾಗಾದರೆ... ಹೊತ್ತಾಗುತ್ತಾ ಬಂತು... ದೊಡ್ಡಪ್ಪ ಹೇಳಿದ ಮೇಲೆ ಎಲ್ಲರೂ ಕಾರು ಹತ್ತಿದೆವು.
ಎರಡು ಬೇರೆ ಬೇರೆ ಕಾರಿನಲ್ಲಿ ದಿಬ್ಬಣದಂತೆ ಹೊರೆಟೆವು. ನಾನು, ಮುರ್ಲಿ,ಇಂಪನ, ಅಪ್ಪ ಒಂದು ಕಾರಿನಲ್ಲಿ. ದೊಡ್ಡಪ್ಪ, ದೊಡ್ಡಮ್ಮ,ಅತ್ತೆ ಇನ್ನೊಂದು ಕಾರಿನಲ್ಲಿ..ನಮ್ಮ ಕಾರಿನಲ್ಲಿ ಮುರ್ಲಿ ಡ್ರೈವರ್.. ಇನ್ನೊಂದು ಕಾರಿಗೆ ಡೊಡ್ಡಪ್ಪ ಡ್ರೈವರ್.
ನಮ್ಮ ಕಾರಿನಲ್ಲಿ ಅಪ್ಪ ಎದುರು ಕುಳಿತುಕೊಂಡರು. ನಾನು ಇಂಪನ ಹಿಂಬದಿಯಲ್ಲಿ ಕುಳಿತುಕೊಂಡೆವು.
ನನಗೆ ಯಾರೂ ಎಷ್ಟೇ ಬೈದರೂ ನನ್ನಲ್ಲಿ ಜೋಶ್ ಒಂದು ಚೂರು ಯಾವತ್ತೂ ಕಮ್ಮಿ ಆಗುವುದೇ ಇಲ್ಲ.. ನನ್ನ ಉತ್ಸಾಹ ನೋಡಿ ಮುರ್ಲಿ ಕಾರು ಬಿಡುತ್ತಾ ಕೇಳಿದಾ.. ಏನೋ ನೀಲು.. ನನಗಿಂತ ನೀನೇ ಜಾಸ್ತಿ ಇಂಟ್ರೆಸ್ಟ್ ಅಲ್ಲಿ ಇರುವಂತೆ ಕಾಣ್ತಾ ಇದೆ..
ಮತ್ತೆಂತ ಮುರ್ಲಿ... ನೀವೆಲ್ಲರೂ ನರ್ವಸ್ ಆಗಿ ಸಾಯ್ತಾ ಇದ್ದೀರಾ.. ನೀನು, ದೊಡ್ಡಪ್ಪ ಎಲ್ಲರೂ.. ಯಾರಾದರೂ ಖುಷಿ ಖಷಿಯಲ್ಲಿ ಇರುವುದು ಬೇಡವೇ.. ಅದಕ್ಕಾಗಿಯೇ ನಾನಿರುವುದು.. ನೀನೇನು ಟೆನ್ಶನ್ ಮಾಡ್ಬೇಡ.. ನಾನಿದ್ದಿನಿ...ಅಂದೆ.
ಇಂಪನ ಕೂಡ ಹೇಳಿದಳು- ಮುರ್ಲಿ ಅಣ್ಣಾ... ನಮ್ಮ ನೀಲು ಅಣ್ಣ ಎಲ್ಲಾ ನೋಡ್ಕೋತಾನೆ... ನೀನು ಜಾಸ್ತಿ ಟೆನ್ಶನ್ ಆಗ್ಬೇಡ.
ನೀಲು.. ನೀನು ಮಾತ್ರ ನನ್ನ ಪಕ್ಕವೇ ಅಲ್ಲಿ ಸೋಪಾದ ಮೇಲೆ ಕುಳಿತ್ಕೋ ಮಾರಾಯ.. ಅಂದ ಮುರ್ಲಿ.
ಅವನು ಮಾಡುವ ರೇಂಜ್ ನೋಡಿ ಇವನೇನು ಹುಡುಗಿ ನೋಡ್ಲಿಕ್ಕೆ ಹೋಗ್ತಾ ಇದ್ದಾನ ಅಥವಾ.. ರಾಕ್ಷಸಿಗೆ ಒಂದೊಳ್ಳೆಯ ಭೂರಿ ಭೋಜನ ಆಗ್ಲಿಕ್ಕೆ ಹೋಗ್ತಾ ಇದ್ದಾನ ಎಂದು ನನಗೆಯೇ ಒಮ್ಮೆ ಅನಿಸಿತು.
ಆಯ್ತಾ ಮುರ್ಲಿ .. ನಾನಿದ್ದೀನಿ.. ನಿನ್ನ ಪರವಾಗಿ ನಾನೇ ಎಲ್ಲಾ ಮಾತಾಡ್ತೀನಿ...ಹೇಗೋ ಒಂದು ಮೈಂಟೇನ್ ಮಾಡ್ತೀನಿ ಬಿಡು.. ನೀನು ಜಾಸ್ತಿ ಟೆನ್ಶನ್ ಮಾಡ್ಬೇಡ.. ಅಂದೆ.
ಅದನ್ನು ಕೇಳಿ ಕಾರಿನಲ್ಲಿಯೇ ಇದ್ದ ಅಪ್ಪ ಅಂದ್ರು.. ನೀನೇನೋ ಅಧಿಕಪ್ರಸಂಗ ಮಾತಾಡಿ ಸಂಬಂಧ ಹಾಳು ಮಾಡ್ಬೇಡ ಮಾರಾಯ..ಒಳ್ಳೆಯ ಪಾರ್ಟಿ ಬೇರೆ.. ದೊಡ್ಡವ ಅಂತ ನಾನು ಇದ್ದೀನಿ.. ನಾನು ಮಾತಾಡ್ತೀನಿ..ಇನ್ನು ಮನೆಯಲ್ಲಿ ಮಾತಾಡಿದಂತೆ ಅಲ್ಲಿಯೂ ಸಹ ಅಣ್ಣನನ್ನು ದರ್ಶನ್ ಎಂದು... ಅತ್ತಿಗೆಯನ್ನು ರಕ್ಷಿತಾ ಎಂದು ಏಕವಚನದಲ್ಲಿ ಕರೆದು ಎಲ್ಲರೆದುರು ಅವರ ಮಾರ್ಯಾದೆ ತೆಗಿಬೇಡ.ನಿನಗಗಂತು ಅದು ಮೊದಲೇ ಇಲ್ಲ. ಅವರದ್ದಾದರೂ ಮರ್ಯಾದೆ ಉಳಿಸು. ಜಸ್ಟ್ ಅಲ್ಲಿ ಸುಮ್ಮನೆ ಬಂದು ಕುಳಿತಿದ್ದರೆ... ಅದೇ ನೀನು ನಮಗೆಲ್ಲರಿಗೂ ಮಾಡುವ ಅತೀ ದೊಡ್ಡ ಉಪಕಾರ.. ಅಂದರು ಮೈ ಫಾದರ್ ನೀಲಣ್ಣ.
ಅಲ್ಲಿಗೆ ಕಾರಿನೊಳಗಿನ ಎಲ್ಲಾ ಸಂಭಾಷಣೆಗೆ official ಆಗಿ ತೆರೆ ಎಳೆಯಲಾಯಿತು.
ಮಂಗಳೂರು- ಉಡುಪಿ NH ರೋಡ್ ನಲ್ಲಿ ಸುರತ್ಕಲ್ ನಿಂದ ಸ್ವಲ್ಪ ಮುಂದೆ ಹೋಗಿ,ಹಳೆಯಂಗಡಿ ಎಂಬಲ್ಲಿ ಒಳಗೆ ಹೋದರೆ ಪಕ್ಷಿಕೆರೆ ಅಂತ ಒಂದು ಊರಿದೆ. ಅದೇ ನಮ್ಮ destination point, ಅಂದರೆ ಹುಡುಗಿ ಮನೆ.
ಕೊನೆಗೂ ಹುಡುಗಿ ಮನೆ ತಲುಪಿದೆವು..
ನಾವು ಹೋದಂತಹ ಜಾಗ ಸ್ವಲ್ಪ ಹಳ್ಳಿ ಪ್ರದೇಶ ಆದರೂ.. ಒಳ್ಳೆಯ ಜಾಗ.. ಚಂದದ ಮನೆ.. ಎದುರಿನಲ್ಲಿಯೇ ದೊಡ್ಡ ಅಡಿಕೆಯ ತೋಟ,ಬಾಳೆ ಮತ್ತು ತೆಂಗಿನ ತೋಟ,ವಿಶಾಲವಾದ ಗದ್ದೆ ಎಲ್ಲವೂ ಇತ್ತು.
ಮನೆಯ ಎದುರಿನಲ್ಲಿಯೇ ನಮ್ಮ ಶುಭ ಆಗಮನವನ್ನು ಎದುರು ನೋಡುತ್ತಾ ಬಕ ಪಕ್ಷಿಯಂತೆ ಕಾದು ನಿಂತಿದ್ದರು ಹುಡುಗಿ ಮನೆಯವರು.
ನಾನು ಮುರ್ಲಿ ಗೆ ಮೊದಲೇ ಹೇಳಿದ್ದೆ.. ನೋಡು ಮುರ್ಲಿ ನಾವು ಗಂಡು ಕಡೆಯವರು..ನಾವು ಅಲ್ಲಿಗೆ ಹೋದಾಗ ಸ್ವಲ್ಪ attitude ನಲ್ಲಿಯೇ ಇರ್ಬೇಕು .. ಅದರಲ್ಲೂ ನೀನು ಮುಂದೆ ಈ ಸಂಬಂಧ ಫಿಕ್ಸ್ ಆದರೆ ಮದುವೆ ಗಂಡು ಆಗಬೇಕಾದವನು.. ಆದ್ದರಿಂದ ನೀನಂತು too much attitude ಅಲ್ಲಿ ಇರ್ಬೇಕು.. ಅಲ್ಲಿ ಇಟ್ಟಿರುವ ಶೀರ,ಚಿಪ್ಸ್ ಎಲ್ಲಾ ಒಟ್ರಾಸಿ ತಿನ್ನುವುದಲ್ಲ.. ಸ್ವಲ್ಪವೇ ನಗ್ಬೇಕು.. ನಿನ್ನ ಅಪ್ಪ ದರ್ಶನ್ ನಂತೆ ಒಟ್ರಾಸಿ ನಗುವುದಲ್ಲ.. ಕಡಿಮೆ ಮಾತಾಡ್ಬೇಕು.. ಮಾತಾಡ್ಲಿಕ್ಕೆ ನಾವೆಲ್ಲ ಇದ್ದೇವೆ.. ಅಂದರೆ ನಾನಲ್ಲ.. ಹಿರಿಯರು.. ಅಪ್ಪ, ದೊಡ್ಡಪ್ಪ ಎಲ್ಲಾ ಇದ್ದಾರೆ.. ನೀನು ಜಸ್ಟ್ ಹುಡುಗಿಯನ್ನು ಸರಿಯಾಗಿ ನೋಡು.. ಪೋಟೋದಲ್ಲಿ ನೋಡಿದಂತೆ ಅಲ್ಲ ಮರ್ರೆ.. ರಿಯಲ್ ಅಲ್ಲಿ ಸರಿಯಾಗಿ ನೋಡು...ನೀನು ಓಕೆ ಅಂತ ಹೇಳಿದ್ರೆ ಮದುವೆ ಫಿಕ್ಸೇ.. ಮುಂದಿನದ್ದು ನಾನು ಮಾತಾಡ್ತೇನೆ...ಅಂದ್ರೆ ದೊಡ್ಡಪ್ಪನಲ್ಲಿ ಹೇಳ್ತೇನೆ ನಮ್ಮ ಮುರ್ಲಿ ಗೆ ಹೆಣ್ಣು ಓಕೆ ಅಂತ... ಅರ್ಥ ಆಯ್ತು ಅಲಾ... ಇನ್ನು ಅಲ್ಲಿ ಮಂಗನ ಹಾಗೆ ಮಾಡ್ಬೇಡ.. ಅಂದೆ.
ಆ ರೀತಿ ಹೇಳಿದಾಗ ಮುರ್ಲಿ ನನ್ನನ್ನೇ ನೋಡಿದ... ಲೋ ನೀಲು ನಿಂಗೆ ಇದೆಲ್ಲಾ ಹೇಗೋ ಗೊತ್ತು...ಸರಿಯಾಗಿ ಒಂದು ಗರ್ಲ್ ಫ್ರೆಂಡ್ ಸ ಇಲ್ಲ ನಿಂಗೆ.. ಆದ್ರೂ ಈ ಹುಡುಗಿ ಮನೆಗೆ ಹೆಣ್ಣು ನೋಡ್ಲಿಕ್ಕೆ ಹೋಗುವ ವಿಚಾರಗಳ ಬಗ್ಗೆ ಎಲ್ಲಿ ಕಲಿತೆ..
ಓ ಅಣ್ಣಾ.. ಅದೆಲ್ಲ ನನಗೆ ಗೊತ್ತುಂಟಾ . ಎಷ್ಟು ಅಂತ ಹಳೆಯ ಫಿಲ್ಮ್ ನಾನು ನೋಡ್ಲಿಲ್ಲ ಹೇಳು.ಅನಂತ್ ನಾಗ್ ಗೊತ್ತಲ್ಲ..ಓಲ್ಡ್ ಮೂವಿಯಲ್ಲಿ ನಾನು ಅವರದ್ದೇ ಜಾಸ್ತಿ ನೋಡುವುದು.. ಅವರ ಫಿಲ್ಮ್ ನೋಡಿದ್ರೆ ನಿಂಗೂ ಸಹ ಸ್ವಲ್ಪ ಟ್ರೈನಿಂಗ್ ಎಲ್ಲಾ ಆಗಿರೋದು ಈಗಾಗಲೇ.. ಅಂದೆ.
ಮನೆಯ ಎದುರಿನಲ್ಲಿ ಇದ್ದವರು ಎಲ್ಲಾ ಹಲ್ಲುಗಳನ್ನು ತೋರಿಸುತ್ತಾ ಬಹಳ ಚೆನ್ನಾಗಿ ನಕ್ಕರು..ಇವರೇನು ಟೂತ್ ಪೇಸ್ಟ್ ಕಂಪನಿಗಳ ಜಾಹೀರಾತು ನಲ್ಲಿ ಇರುವವರ ಅಂತ ಒಮ್ಮೆ ನನಗೆ ಅನಿಸಿತು.. ಹಾಗೆಯೇ ನಿಮ್ಮ ಟೂತ್ ಪೇಸ್ಟ್ ನಲ್ಲಿ ಉಪ್ಪು ಇದೆಯೇ.. ಇದ್ದಿಲು ಇದೆಯೇ.. ಕಲಿದ್ದಲು ಇದೆಯೇ..ಗರಂ ಮಸಾಲ ಇದೆಯೇ ಎಂದು ಕೇಳಬೇಕೆಂದು ಮನಸ್ಸಿಗೆ ಅನ್ನಿಸಿತ್ತಾದರೂ ಪಕ್ಕದಲ್ಲಿ ಇದ್ದ ನನ್ನ ಅಪ್ಪ ನನ್ನನೇ ದುರುಗುಟ್ಟಿ ನೋಡುತ್ತಿದ್ದುದ್ದನ್ನು ನೋಡಿ... ಹಾಗೆ ಏನೂ ಮಾತಾಡದೇ ಎಲ್ಲರೊಂದಿಗೆ ನಾನು ಸಹ ಅವರಿಗೆಲ್ಲ ಟೂತ್ ಪೇಸ್ಟ್ ಸ್ಮೈಲ್ ನೀಡಿ.. ಶೂ ಕಳಚಿ,ಕಾಲು ತೊಳೆದು ಎಲ್ಲರೂ ಬಲಗಾಲಿಟ್ಟು ಮನೆಯ ಒಳಗೆ ಹೋದೆವು.
ಮೊದಲಿನ ಯೋಜನೆಯಂತೆಯೇ ನಾನು ಮುರ್ಲಿಯ ಬಳಿಯೇ ಕುಳಿತುಕೊಂಡೇ.. ನನ್ನ ಮತ್ತೊಂದು ಸೈಡಿನಲ್ಲಿ ಮೈ ಫಾದರ್ ನೀಲಣ್ಣ.
ನಾವು ಏಳು ಜನ ಈ ಸೈಡ್ ಸೋಪಾದಲ್ಲಿ ಇದ್ದರೆ.. ಹೆಚ್ಚು ಕಡಿಮೆ ಹತ್ತು ಇಪ್ಪತ್ತು ಜನ ಆ ಸೈಡ್ ಕುಳಿತುಕೊಂಡು ಕೆಲವರು ನಿಂತುಕೊಂಡು ನಮ್ಮನ್ನೇ ಮತ್ತೆ ನಗು ನಗುತ್ತಾ ನೋಡುತ್ತಿದ್ದರು..
ನಾನು ನನ್ನ ಮತ್ತೊಂದು ಸೈಡಿನಲ್ಲಿ ಇದ್ದ ಅಪ್ಪನ ಕಿವಿಯಲ್ಲಿ ಮೆಲ್ಲಗೆ ಹೇಳಿದೆ.. ನೋಡಿ ಅಪ್ಪ ನೀವು ಇಷ್ಟೇ ಜನ ಸಾಕು ಅಂದ್ರಿ... ಅವರು ನೋಡಿದ್ರೆ ಹತ್ತಿಪ್ಪತ್ತು ಜನ ಸೇರಿದ್ದಾರೆ...ನಮ್ಮ ಸೈಡಿಗಿಂತ ಆ ಸೈಡಲ್ಲಿ ಜನ ಜಾಸ್ತಿ ಇದೆ. ಇದು unfair, ನಾವು ಕೂಡ ಟೆಂಪೋ ವೋ.. ಬಸ್ಸೋ ಮಾಡ್ಕೊಂಡು ಒಂದು ಇಪ್ಪತ್ತು ಮೂವತ್ತು ಜನರನ್ನು ಆದ್ರೂ ಸೇರಿಸ್ಬಹುದಿತ್ತು...
ನಾವು ಇಲ್ಲಿ ಮ್ಯಾಚ್ ಆಡ್ಲಿಕ್ಕೆ ಬರ್ಲಿಲ್ಲ.. ಹೆಣ್ಣು ನೋಡ್ಲಿಕ್ಕೆ ಬಂದ್ದಿದು... ಅಂದರು ಅಪ್ಪ ಉಡಾಫೆಯಿಂದ ನನ್ನನ್ನು ನೋಡುತ್ತಾ....
ಎದುರಿಗಿದ್ದ ಅವರೆಲ್ಲರೂ ಇನ್ನೂ ಸ ನಗ್ತಾನೆ ಇದ್ರು.
ನಮ್ಮ ಸೈಡ್ ನವರು ಕೂಡ ನಾವೇನು ಕಡಿಮೆ ಅಂತ ನಗ್ತಾನೇ ಇದ್ರೂ... ಬಹುಶಃ ಇಬ್ಬರೂ ಟೂತ್ ಪೇಸ್ಟ್ ಜಾಹೀರಾತು ಅನ್ನು ಬಹಳ ಸೀರಿಯಸ್ ಆಗಿ ತಗೊಂಡಂತೆ ಭಾಸವಾಯಿತು.. ಅದರಲ್ಲೂ ನಮ್ಮ ದರ್ಶನ್ ದೊಡ್ಡಪ್ಪ ಕೇಳಬೇಕೇ.. ಕೀ ಕೊಟ್ಟ ಗೊಂಬೆಯಂತೆ ನಗುತ್ತಲೇ ಇದ್ದರು. ಮುರ್ಲಿ ಸ ಅವರ ಅಪ್ಪನಂತೆಯೇ ನಗುತ್ತಿದ್ದ.
ನಾನು ಮೆಲ್ಲಗೆ ಪಕ್ಕದಲ್ಲಿದ್ದ ಮುರ್ಲಿ ಗೆ ಒಂದು ಕುಟ್ಟಿ ಕೊಟ್ಟು ... ಒಹ್... ಅಣ್ಣಾ... ಸುಮ್ಮನೆ ಬಾಯಿ ಬಿಡುತ್ತಾ ಜಾಸ್ತಿ ನಗ್ಬೇಡ.. ಇಲ್ಲದಿದ್ದರೆ ಹುಡುಗ ಸ್ವಲ್ಪ ಲೂಸು.. ಏನೋ ಮರ್ಲನಂತೆ(ಹುಚ್ಚ) ಕಾಣ್ತಾ ಇದ್ದಾನಲ್ಲ.. ಅಂತ ಅವರು ತಿಳ್ಕೋಬಹುದು ಅಂದೆ. .
ತುಂಬಾ ಸಮಯದ ನಗುವಿನ ಪರಸ್ಪರ ವಿನಿಮಯದ ನಂತರ ಅವರ ಸೈಡಿನಲ್ಲಿ ಯಾರೋ ಭಯಂಕರ ಹಿರಿಯರೊಬ್ಬರು...ಮೊದಲ ಪ್ರಶ್ನೆ ಕೇಳಿದರು...
ಆ ಸೈಡಿನಿಂದ ಬಂದ ಮೊದಲ ಎಸೆತ...
ಮತ್ತೆ ಹುಡುಗನ ಹೆಸರು ಏನು... ಏನು ಕೆಲಸ ಮಾಡ್ತಾ ಇದ್ದಾನೆ....ತಂದೆಗೆ ಏನು ಬ್ಯುಸಿನೆಸ್....
ಒಂದೇ ಮಾತಿನಲ್ಲಿ ಒಟ್ಟಿಗೆ ಮೂರು ಪ್ರಶ್ನೆಗಳಿದ್ದರು ಆ ಹಿರಿಯ ತಾತ.
ಇದೆಂತ.. ಥಟ್ ಅಂತ ಹೇಳಿ ಪ್ರೋಗ್ರಾಂ ನಲ್ಲಿ ಸ ಇಷ್ಟೊಂದು ಪ್ರಶ್ನೆ ಒಟ್ಟಿಗೆ ಕೇಳುವುದಿಲ್ಲ ಅಂತ ಅನ್ಕೊಂಡೆ.
ಈ ಸೈಡಿನಲ್ಲಿ ಯಾರದ್ದೂ ಸಹ ಪ್ರತಿಕ್ರಿಯೆ ಇಲ್ಲ... ಮುರ್ಲಿ ಅಂತು ಬಾಯಿ ಬಿಡುವವನಲ್ಲ ಎಂದು ನನಗೆ ಗೊತ್ತಿತ್ತು.. ದೊಡ್ಡಪ್ಪ ಹಾಗೂ ಅಪ್ಪನನ್ನು ಸೈಡಿನಲ್ಲಿ ನೋಡಿದೆ.. ಅವರು ಇನ್ನೂ ನಗುತ್ತಲೇ ಇದ್ದರು. ಯಾರು ಮರ್ರೆ ಇವರೆಲ್ಲ... ಆ ಸೈಡಿನವರು ನಗು ನಿಲ್ಲಿಸಿ.. ಅದಾಗಲೇ ಮಾತುಕತೆಗೆ ಇಳಿದಿದ್ದಾರೆ.. ಇವರು ಮಾತ್ರ ಇನ್ನೂ ಬಾಯಿ ಬಿಟ್ಟುಕೊಂಡು ಕೂತಿದ್ದಾರೆ.. ಒಬ್ಬರಿಗೆ ಸ ಸ್ವಲ್ಪವೂ ಶಿಸ್ತೇ ಇಲ್ಲ.. ಆದರೆ ಎಲ್ಲರೂ ನನಗೆ ಶಿಸ್ತು ಇಲ್ಲ.. ಜವಾಬ್ದಾರಿ ಇಲ್ಲ ಅಂತ ಹೇಳ್ತಾರೆ.. ಇಲ್ಲಿ ನೋಡಿದ್ರೆ.. ಬಂದ ಕೆಲಸ ಮರೆತು ನಗ್ತಾ ಇದ್ದಾರೆ.
ಸಾಯ್ಲಿ... ನಾನೇ ಜವಾಬ್ದಾರಿ ಹೊತ್ತುಕೊಂಡು.. ರಣರಂಗಕ್ಕೆ ಧುಮುಕಿ ಬಿಡುವೆ ಎಂದು ಮನಸ್ಸಿನಲ್ಲಿಯೇ ದೃಢ ನಿರ್ಧಾರ, ದೃಢ ಸಂಕಲ್ಪ ಮಾಡಿಕೊಂಡು....
- ತಾತ... ಹುಡುಗನ ಹೆಸರು ಮುರ್ಲಿ ಅಂತ... ಸಿವಿಲ್ ಇಂಜಿನಿಯರಿಂಗ್ ಮಾಡಿದ್ದಾನೆ. ಬೆಂಗಳೂರಲ್ಲಿ ಕೆಲಸ.. ಇದು ಹುಡುಗನ ತಂದೆ ದರ್ಶನ್ ಅಂತ...ಅದು ಹುಡುಗನ ಅಮ್ಮ ರಕ್ಷಿತಾ.. ಇವಳು ತಂಗಿ ಇಂಪನ.. ಎಂದು ಒಂದೇ ಉಸಿರಿನಲ್ಲಿ ಎಲ್ಲವನ್ನೂ ಹೇಳಿಬಿಟ್ಟೆ.
ನಾನು ಅಷ್ಟು ಹೇಳಿದ್ದೇ ತಡ... ಆ ಸೈಡಿನಲ್ಲಿ ಒಬ್ಬರು ಆಂಟಿಯ ಮನಸ್ಸಿನಲ್ಲಿ ಒಂದು ಪ್ರಶ್ನೆ ಉಧ್ಭವವಾಯಿತು.. ಅದನ್ನು ಅವರು ತಡಮಾಡದೇ ಕೇಳಿಯೇ ಬಿಟ್ಟರು..
- ಅಲಾ.. ಹುಡುಗನ ಹೆಸರು ಮುರ್ಲಿ ಅಂತ ಹೇಳ್ತಿಯಾ... ಆದರೆ ಅಪ್ಪನ ಹೆಸರು ದರ್ಶನ್ ಅಂತ ಹೇಳ್ತಿಯಾ...ಅದು ಹೇಗೆ ತಂದೆಯ ಹೆಸರು ಅಷ್ಟು modern,ಆದರೆ ಮಗನ ಹೆಸರು ಅಷ್ಟು ಓಲ್ಡು...🙄🤔
ನನ್ನ ತಂದೆ ನನ್ನನ್ನೇ ನೋಡಿ ಕಣ್ಣಲ್ಲೇ ಹೇಳಿದರು...... ನಿನಗಿದು ಬೇಕಿತ್ತಾ... ಯಾಕೆ ಮೊದಲು ಬಾಯಿ ಹಾಕ್ಲಿಕ್ಕೆ ಹೋಗಿದ್ದು.. ಈಗ ನೀನೇ ಏನಾದರೊಂದು ಹೇಳಿ manage ಮಾಡು. 😡😡
ಅವರ ಕಣ್ಣ ಬಾಷೆ ನನಗೆ ಅರ್ಥ ಆಗ್ತದೆ.
ನನಗೆ ಆ ಕ್ಷಣ ನಮ್ಮ ಹುಚ್ಚ ವೆಂಕಟ್ ಅವರ ಈ ಸಾಂಗ್ ನೆನಪಾಯಿತು.. "ನಿಂಗಿದು ಬೇಕಿತ್ತಾ ಮಗನೇ.. ವಾಪಸ್ಸು ಹೊಂಟೊಂಗು ಶಿವನೇ.."
ಅಪ್ಪನಿಗೆ ಸ ಕಣ್ಣಲ್ಲಿಯೇ ಹಲ್ಲು ಕಡಿಯುತ್ತಾ ಉತ್ತರ ಕೊಟ್ಟೆ.. ಮತ್ತೆ ನೀವು ಈ ಲೋಕದ ಪರಿವೆಯೇ ಇಲ್ಲದೆ ನಗ್ತಾ ಇದ್ದೀರಿ.. ಅವರು ಪ್ರಶ್ನೆ ಕೇಳಿ ಎಷ್ಟು ಹೊತ್ತಾಗಿತ್ತು... ಯಾರಾದರೂ ಉತ್ತರಿಸಿದಿದ್ದರೆ ನಮ್ಮ ಕುಲದ ಘನತೆ ಗಾಂಭೀರ್ಯದ ಪ್ರಶ್ನೆ ಏನಾಗ್ಬೇಕು.. ಅದಕ್ಕೆ ನಾನು ಉತ್ತರಿಸಿದೆ..ಆದ್ರೆ ನೀವು ಯಾರೂ dont worry.. ನಾನು ಇದನ್ನು ಕೆಟ್ಟಿಸುವುದಿಲ್ಲ..ನೋಡಿ ಮುಂದೆ ನಾನು ಹೇಗೆ ಮ್ಯಾನೇಜ್ ಮಾಡ್ತೇನೆ ಅಂತ... ಅಪ್ಪನಿಗೆ ಸಹ ಕಣ್ಣಲ್ಲಿಯೇ ಉತ್ತರಿಸಿದೆ. ಅವರಿಗೆ ಸ ನನ್ನ ಕಣ್ಣ ಬಾಷೆ ಈಗೀಗ ಅರ್ಥ ಆಗ್ತದೆ.
ನಾನು Lab ಎಕ್ಸಾಂ ನ Viva ಪ್ರಶ್ನೆಗೆ ಉತ್ತರಿಸುವಂತೆ ಅವರಿಗೆ ಉತ್ತರಿಸಲು ಶುರು ಮಾಡಿದೆ..
ನೋಡಿ ಆಂಟಿ... ಹುಡುಗನ ಪೂರ್ತಿ ಹೆಸರು ಮುರಳಿಧರ್ ಅಂತ. ನಾವೆಲ್ಲ ಅವನನ್ನು ಪ್ರೀತಿಯಿಂದ ಮುರುಳಿ ಮುರುಳಿ ಎಂದು ಕರೆಯುತ್ತೇವೆ.. ಹಾಗೆ ಪ್ರೀತಿ ಜಾಸ್ತಿ ಆಗಿ ಆಗಿ ಕೊನೆಗೆ ಮುರುಳಿ ಹೋಗಿ ಮುರ್ಲಿ ಅಂತ ಆಯಿತು ಅಷ್ಟೇ... ಎಂದು ನಾನು ಕೂಡ ನಗು ನಗುತ್ತಾ ಹೇಳಿದೆ.
ಮತ್ತೊಬ್ಬರು ಆಂಟಿ ಕೇಳಿದರು.. ಆದರೂ ಹುಡುಗನ ಅಪ್ಪ ಹೆಸರು ದರ್ಶನ್ ಅಂತ ಇದೆ.. ಅಷ್ಟು ಮಾಡರ್ನ್...ಅದು ಹೇಗೆ..
ಈ ಹೆಂಗಸರೇ ಹೀಗೆ ಮರ್ರೆ... ಇವರಿಗೆ ಬೇಕಾದದ್ದು ಹುಡುಗನಾ.. ಅಥವಾ ಹುಡುಗನ ಅಪ್ಪವಾ..ಹುಡುಗನ ಅಪ್ಪನ ಹೆಸರು ಕಟ್ಟಿಕೊಂಡು ಇವರಿಗೇನು ಮಾಡ್ಲಿಕ್ಕೆ ಉಂಟು..
ಆದರೂ ಏನನ್ನೂ ತೋರಿಸಿಕೊಳ್ಳದೇ ಪುನಃ ನಗು ನಗುತ್ತಾ ಅವರಿಗೆ ಹೇಳಿದೆ..
ಅದು ಹಾಗಲ್ಲ ಆಂಟಿ... ನೀವು ಯಾಕೆ ದರ್ಶನ್ ಅಂದ ಕೂಡಲೇ ಚ್ಯಾಲೆಂಜಿಗ್ ಸ್ಟಾರ್ ದರ್ಶನ್ ಅವರನ್ನೇ imagination ಮಾಡ್ಕೋತೀರಾ..ನಮ್ಮ ಮುರ್ಲಿಯ ಅಪ್ಪ ಸಿನಿಮಾದ ಆ ದರ್ಶನ್ ಅಲ್ಲ... ಇವರ ಹೆಸರು ಹರಿದರ್ಶನ ಕುಮಾರ್ ಅಂತ. ಹಳೆಯ ಕಾಲದ ಹೆಸರೇ.. ಆದರೆ ನಾವೆಲ್ಲ ಅವರ ಹೆಸರಿನ ಹರಿ ಮತ್ತು ಕುಮಾರ್ ಅನ್ನು ಕಿತ್ತು ಬಿಸಾಕಿ ದರ್ಶನ್.. ದರ್ಶನ್ ಅಂತ ಕರೆದು ನಮ್ಮ ಊರಲ್ಲಿ ಈಗ Smiling Star ದರ್ಶನ್ ಅಂದರೆ ಇವರೇ ಆಗಿದ್ದಾರೆ... ನೋಡಿ ಈಗಲೂ ಎಷ್ಟು ಚೆನ್ನಾಗಿ ಹಲ್ಲು ಬಿಟ್ಟು ಕೊಂಡು ನಗ್ತಾ ಇದ್ದಾರೆ ನೋಡಿ... ಅಂದೆ.
ಓಹ್.. ಹಾಗೇಯಾ.. ಇವರು Smiling Star ದರ್ಶನಾ... ಚ್ಯಾಲೆಂಜಿಗ್ ಸ್ಟಾರ್ ದರ್ಶನ್ ಅಲ್ಲವಾ... ಬಹಳ ಚೆನ್ನಾಗಿದೆ ಹುಡುಗನ ಅಪ್ಪನ ಹೆಸರು .. ಎಂದು ಆಂಟಿ ನಕ್ಕರು..
ಅವರ ಪಾರ್ಟಿಯಲ್ಲಿದ್ದ ಇಪ್ಪತ್ತು ಮಂದಿಯೂ.. ಹಹ್ಹಾ..ಹಿಹ್ಹಿ.. ಹೋಹ್ಹೋ.. ಎಂದು ಬಿದ್ದು ಬಿದ್ದು ನಕ್ಕರು.. ನನ್ನ ದೊಡ್ಡಪ್ಪನನ್ನು ನೋಡಿ.
ನನಗೊಮ್ಮೆ ಫೀಲ್ ಆಯಿತು... ಅಲಾ.. ನಾನು ಈಗ ದೊಡ್ಡಪ್ಪನವರ ಮರ್ಯಾದೆ ಉಳಿಸಿದ್ದಾ.. ಅಥವಾ ಅಲಕ್ಕಾ(ಕಂಪ್ಲೀಟ್)ತೆಗೆದದ್ದಾ.. ಎಂದು..
ಆದರೆ ದೊಡ್ಡಪ್ಪ Smiling star ದರ್ಶನ್.. ಇದರ ಯಾವುದೇ ಪರಿವೆಯೇ ಇಲ್ಲದೇ ಎದುರು ಪಾರ್ಟಿಯವರೊಂದಿಗೆ ಸೇರಿ ಅವರು ಸಹ ಜೋರಾಗಿ ನಗುತ್ತಿದ್ದರು.. ಅವರು ಬಿಡಿ ಸಾವಿನ ಮನೆಯಲ್ಲಿ ಸಹ ನಗುವವರು.
ಅಪ್ಪ ಮಾತ್ರ ನನ್ನನೇ ದುರುಗುಟ್ಟಿ ನೋಡುತ್ತಿದ್ದ...!
ಅಲಾ..ಈ ಹುಡುಗಿ ಮನೆಯವರಿಗೆ ಏನಾಗಿದೆ... ಹುಡುಗನ ಬಗ್ಗೆ concentrate ಮಾಡುವ ಬದಲು ಹುಡುಗನ ಅಪ್ಪನ ಬಗ್ಗೆ ಜಾಸ್ತಿ ಫೋಕಸ್ ಮಾಡ್ತಾ ಇದ್ದಾರಲ್ಲಾ... ಇಲ್ಲಿ ಯಾರಿಗೆ ಹುಡುಗಿ ನೋಡ್ಲಿಕ್ಕೆ ಬಂದದ್ದು ಎಂದು ನಾನೇ ಒಮ್ಮೆ confuse ಆಗಿ ಬಿಟ್ಟೆ....
ಆ ಕಡೆ ಪಾರ್ಟಿಯ ಮತ್ತೊಂದು ಆಂಟಿಗೆ ಇನ್ನೊಂದು ಏನೋ ಫ್ಲ್ಯಾಶ್ ಆಯಿತು.. ಅವರು ಸ ತಡ ಮಾಡದೇ ಕೇಳಿಯೇ ಬಿಟ್ಟರು..
- ಹುಡುಗನ ಅಮ್ಮನ ಹೆಸರು ರಕ್ಷಿತಾ ಅಂತ ಹೇಳಿದ್ದು ಅಲ್ವಾ ನೀವು... ಹಾಗಾದರೆ ಅವರ ಹೆಸರಿನ ಹಿಂದೆ ಮುಂದೆ ಏನು ಕಟ್ ಮಾಡಿದ್ದೀರಿ...?
ಈ ಹಳೆಯ ಹೆಂಗಸರೇ ಇಷ್ಟು... ಅವರಿಗೆ ಗುಲಾಬಿ, ಸರಳ,ವನಜ ಅಂತ ಹಿಂದಿನ ಕಾಲದ ಹೆಸರು ಇದೇ ಅಂತ ಅವರ ಸಮಕಾಲೀನರಿಗೆ ಒಂದೊಳ್ಳೆಯ ಹೆಸರು ಇರ್ಲೇ ಬಾರ್ದ ಮರ್ರೆ..
ನಾನು ಹೇಳಿದೆ - ಯಾವ ಕಟ್ ಸಹ ಇಲ್ಲ. ಅವರ ಹೆಸರೇ ಜಸ್ಟ್ ರಕ್ಷಿತಾ ಅಂತ .ಹಿಂದೆ ಮುಂದೆ ಏನೂ ಇಲ್ಲ.
ನೋಡಿ ಆಂಟಿ...ಹಿಂದಿನ ಕಾಲದ ಸಿನಿಮಾದಲ್ಲಿ ವಿಷ್ಣುವರ್ಧನ್ ಅಂತ ಮುದ್ದಾದ ಹೆಸರು ಕೂಡ ಇತ್ತು.ಈಗೀನ ನಟರಿಗೆ ಕೂಡ ಅಷ್ಟೊಂದು ಚಂದದ ಹೆಸರಿಲ್ಲ.. ಹೆಸರಿಗೆ ಕಾಲ ಎಲ್ಲಾ ಮುಖ್ಯ ಆಗಲ್ಲ..ಯಾರಾದರೂ ಒಬ್ಬರು ಸ್ವಲ್ಪ ಯೋಚನೆ ಮಾಡಿ ಒಳ್ಳೆಯ ಹೆಸರಿಟ್ರೆ ಅದೇ ಆ ಕಾಲದವರ ಪುಣ್ಯ. ನಮ್ಮ ದೊಡ್ಡಮ್ಮನಿಗೂ ಹಾಗೆಯೇ ಯಾರೋ ಪುಣ್ಯಾತ್ಮರು ರಕ್ಷಿತಾ ಅಂತ ಹೊಸ ಕಾಲದ ಹೆಸರೇ ಇಟ್ಟಿದ್ದಾರೆ...
ಅಂದ ಹಾಗೆ ಆಂಟಿ... ನಿಮ್ಮ ಹೆಸರು ಏನು ಗುಲಾಬಿ ಯಾ? ಎಂದು ಕೇಳಿದೆ.
ಅಲ್ಲ..ಸನ್ ಪ್ಲವರ್.. 😏 ಎಂದು ಹೇಳಿ ಮುಖ ತಿರುಗಿಸಿ ಬಿಟ್ಟರು ಆ ಆಂಟಿ.
ಬಹುಶಃ ನಾನು ಹೇಳಿದ್ದು ಅವರಿಗೆ ಸಿಟ್ಟು ತರಿಸಿತು ಎಂದು ಕಾಣುತ್ತೆ. ಆ ನಂತರ ಅವರು ಯಾವುದೇ ಪ್ರಶ್ನೆ ಕೇಳ್ಲಿಲ್ಲ..
ಇಂಪನ ನನ್ನನ್ನು ನೋಡಿ ನಗುತ್ತಿದ್ದಳು... ಅವಳ ಮುಖಭಾವವೇ ಹೇಳುತ್ತಿತ್ತು.. ಏನು ಅಣ್ಣ.. ನೀನೊಂದು ಅಂತ...
ನಾನೇ ಪುನಃ ಮಾತುಕತೆಗೆ ಇಳಿದು ಬಿಟ್ಟೆ.
ಬಂದು ತುಂಬಾ ಹೊತ್ತಾಯಿತು...ಈಗ ಹುಡುಗಿ ನಿಧಾನಕ್ಕೆ ತಲೆ ತಗ್ಗಿಸಿಕೊಂಡು.. ಒಂದು ತಟ್ಟೆಯಲ್ಲಿ ಜ್ಯೂಸೋ.. ಟೀ ಯೋ.. ತಗೊಂಡು ಬರುವುದು.. ಮತ್ತು ನಮ್ಮ ಹುಡುಗ ನಾಚುತ್ತಾ ಅದನ್ನು ತೆಗೆದುಕೊಳ್ಳುವುದು... ಹುಡುಗಿಯ ಹಿಂದೆಯೇ ಅವಳ ತಂಗಿಯೋ ಅಕ್ಕವೋ ಶೀರ,ಚಿಪ್ಸ್ ಎಲ್ಲಾ ತಂದು ಮುಂದಿರುವ ಈ ದೊಡ್ಡ ಟೇಬಲ್ ಮೇಲೆ ಇಡುವುದು...... ಆ ಕಾರ್ಯ ನಾವು ಯಾಕೆ ಈಗ ಶುರು ಮಾಡ್ಬಾರ್ದು.. ಅಂದೆ.
ನನಗೂ ಅರ್ಜೆಂಟಾಗಿ ಒಂದು ಟೀ ಕುಡೀಬೇಕಿತ್ತು ಅದಕ್ಕಾಗಿ ಆ ಅವಸರ.
ಹುಡುಗಿಯ ತಂದೆ ಅಂತ ಕಾಣುತ್ತೇ.. ಓಹ್.. ಮರೆತೇ ಹೋಯಿತು ನೋಡಿ...ಎಂದು ಹೇಳಿದವರೇ ಮನೆಯ ಹಾಲ್ ನಿಂದ ಒಳಗಿನ ಕೋಣೆಯ ಕಡೆಗೆ ತಿರುಗಿ.. " ನೋಡೇ.ನಿರ್ಮಲ.. ಗಂಡಿನ ಕಡೆಯವರಿಗೆ ಟೀ ಕಾಫಿ ತಾರೇ...." ಎಂದರು.
ನಾನು ಮುರ್ಲಿಗೆ ಮೆಲ್ಲನೆ ಹೇಳಿದೆ ನೋಡೋ ಮುರ್ಲಿ ನಿನ್ನ ಹುಡುಗಿ ಹೆಸರು ನಿರ್ಮಲ ಅಂತೆ..
ಅವನು ನಾಚಿ ನಕ್ಕು ನೀರಾದ...
ನಾನು ಹುಡುಗಿ ತಂದೆಗೆ ಹೇಳಿದೆ..
ನಿರ್ಮಲ... ಆಹಾ... ಬಹಳ ಚೆನ್ನಾಗಿದೆ ನಿಮ್ಮ ಮಗಳ ಹೆಸರು... ನಿರ್ಮಲ ಎಂದರೆ Clean...Clean ಅಂದರೆ ಶುಭ್ರ.. ಸ್ವಚ್ಛ.. ಸ್ವಚ್ಛ ಭಾರತ.. ಅಂದೆ.
ಅದಕ್ಕೆ ಹುಡುಗಿಯ ತಂದೆ - ಅಲ್ಲ.. ಅಲ್ಲ.. ಹುಡುಗಿಯ ಹೆಸರು ನಿರ್ಮಲ ಅಲ್ಲ.. ನಿರ್ಮಲ ನನ್ನ ಹೆಂಡತಿಯ ಹೆಸರು.. ಅಂದರೆ ಹುಡುಗಿಯ ಅಮ್ಮನ ಹೆಸರು...!
ಮುರ್ಲಿ ನನ್ನನ್ನೇ ಗುರಾಯಿಸಿ ನೋಡ್ತಾ ಇದ್ದ.... ಅವನ ನೋಟ ಹೇಗಿತ್ತು ಎಂದರೆ.. ಇಲ್ಲಿ ನೀನು ಮಾತ್ರ ಕೆಟ್ಟುವುದು ಅಲ್ಲ ನಮ್ಮೆಲ್ಲರನ್ನೂ ಸಹ ಹೋಲ್ ಸೇಲ್ ಆಗಿ ನಿನ್ನೊಟ್ಟಿಗೆ ಅಲಕ್ಕಾ ಕೆಟ್ಟಿಸ್ತೀಯಾ (ಮಾರ್ಯಾದೆ ತೆಗೆತೀಯಾ) ಮಾರಾಯ ಅನ್ನುವಂತಹ ಲುಕ್ಕು ಅವನದ್ದು ... ನನಗೆ ಆ ನೋಟದ ಈ ಒಳಾರ್ಥ ಅರ್ಥವಾಯಿತು ಬಿಡಿ..
ಇಂಪನ ಮಾತ್ರ ಅವಳಷ್ಟಕ್ಕೆ ಎಂಜಾಯ್ ಮಾಡುತ್ತಾ ಬಾಯಿಗೆ ಕೈ ಹಿಡಿದು ನಗುತ್ತಿದ್ದಳು.
ಸೀರೆ ಉಟ್ಟ ಹುಡುಗಿ ಟೀ ಟ್ರೇ ಹಿಡಿದುಕೊಂಡು ನಿಧಾನವಾಗಿ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ತಲೆ ತಗ್ಗಿಸಿಕೊಂಡು ಬಂದಳು...
ಆಹಾ.. ಎಷ್ಟು ಚಂದದ ಹುಡುಗಿ..
ನಮ್ಮ ಈ ಪೆಕ್ರ ಮುರ್ಲಿ ಅಣ್ಣನಿಗೆ ಯಾವ angle ನಿಂದ ಕೂಡ ಸೂಟ್ ಆಗಲ್ಲ ಇವಳು .... ಸುರ ಸುಂದರಿ ಹುಡುಗಿ.
ನಮ್ಮ ದೊಡ್ಡಮ್ಮ ಹಾಗೂ ಅತ್ತೆ ಬಾಯಿ ಬಿಟ್ಟು ಮೆಲ್ಲಗೆ ಹೇಳಿಯೇ ಬಿಟ್ಟರು... ಹುಡುಗಿ ಸಾಕ್ಷಾತ್ ಲಕ್ಷ್ಮೀ ತರಾನೇ ಇದ್ದಾಳೆ ಎಂದು..
ಇಂಪನಳಿಗೆ ಹುಬ್ಬೇರಿಸಿ ಕಣ್ಣಲ್ಲೇ ಕೇಳಿದೆ - ಇಂಪು... ಅತ್ತಿಗೆ ಹೇಗೆ ಆಗ್ಬಹುದಾ...
ಅವಳು ಕೂಡ ಕೈ ಸನ್ನೆಯಲ್ಲಿ ಅತ್ತಿಗೆ ಸೂಪರ್ ಅಣ್ಣ.. 👌 ಅಂದಳು.
ಅವಳ ಹಿಂದೆಯೇ ಅವಳ ಅಮ್ಮ ನಿರ್ಮಲ ಕಾಫಿ ಹಿಡಿದುಕೊಂಡು ಬಂದರು..
ಅವರ ಹಿಂದೆ ಮತ್ತೊಬ್ಬಳು ಚಂದದ ಹುಡುಗಿ ಶೀರ, ಮಿಕ್ಸರ್, ಬಾಳೆಹಣ್ಣುಗಳ ಟ್ರೇ ಹಿಡಿದುಕೊಂಡು ಬಂದಳು.. ಬಹುಶಃ ಹುಡುಗಿ ತಂಗಿ ಇರಬೇಕು ಅಂತ ಅನ್ನಿಸುತ್ತೆ. ನೋಡಳು ಕೂಡ ಹೆಚ್ಚು ಕಡಿಮೆ ಹಾಗೇ ಇದ್ದಳು.
ಕೆಲವರು ಕಾಫಿ ತಗೊಂಡರು.. ನಾನು, ಮುರ್ಲಿ, ಇಂಪನ ಟೀ ತಗೊಂಡ್ವಿ.
ಟೀ ಕೊಡುವಾಗ ಆ ಹುಡುಗಿಯು ಸಹ ಇವನ ಮುಖ ನೋಡಲಿಲ್ಲ.. ಇವ ಮಂಗನೂ ಸಹ ಅವಳ ಮುಖ ನೋಡಲಿಲ್ಲ..... ಇಬ್ಬರೂ ನೆಲ ನೋಡಿಕೊಂಡು ಅವರಷ್ಟಕ್ಕೇ ನಗುತ್ತಿದ್ದರು.
ನಾನು ಈ ಮುರ್ಲಿಗೆ ಎಷ್ಟೊಂದು ಟ್ರೈನಿಂಗ್ ಕೊಟ್ಟದ್ದೆ... ಆದ್ರೆ ಈಗ ಎಲ್ಲಾ ವೇಸ್ಟ್ ಆಗಿ ಹೋಯಿತು.. ಮುರ್ಲಿ ಮೇಲೆಯೇ ನನಗೆ ವಿಪರೀತ ಸಿಟ್ಟು ಬಂತು.
ಅದೇ ರೀತಿ ಅವರಲ್ಲಿ ಸಹ ಹುಡುಗಿಗೆ ಅಷ್ಟೊಂದು ಒಳ್ಳೆಯ ಟ್ರೈನಿಂಗ್ ಯಾರೂ ಸಹ ಕೊಡ್ಲಿಲ್ಲ ಎಂದು ಮೇಲ್ನೋಟಕ್ಕೆ ನನಗೆ ಗೊತ್ತಾಗಿ ಬಿಟ್ಟಿತು.
ನಿಜವಾದ ಕ್ರಮ ಏನೆಂದರೆ... ತಲೆ ತಗ್ಗಿಸುತ್ತಾ ಟೀ ಸರ್ವ್ ಮಾಡುವ ಹುಡುಗಿ.. ಹುಡುಗನ ಬಳಿ ಬಂದಾಗ slow motion ನಲ್ಲಿ ಸ್ವಲವೇ ತಲೆ ಎತ್ತಿ ಹುಡುಗನನ್ನು ನೋಡಿ ನಾಚುತ್ತಾ ನಗಬೇಕು.. ಹುಡುಗ ಕೂಡ ಅಷ್ಟೇ ಟೀ ಕಪ್ ಅನ್ನು ಹುಡುಗಿ ಬಳಿಯಿಂದ ತೆಗೆದುಕೊಳ್ಳುವಾಗ.. ಹುಡುಗಿಯನ್ನು ಜಸ್ಟ್ ಒಮ್ಮೆ ವಾರೆ ನೋಟದಲ್ಲಿ ನೋಡಿ ಹಾಗೇ ಮೋಹಕವಾಗಿ ನಗಬೇಕು.ರಸಿಕನಂತೆ,ಕಾಮುಕನಂತೆ ಎಲ್ಲಾ ನಗ್ಲಿಕ್ಕಿಲ್ಲ.
ಎಷ್ಟೊಂದು ಫಿಲಂ ಗಳಲ್ಲಿ ನಾನು ನೋಡ್ಲಿಲ್ಲ... ಇದೇ ಕ್ರಮ ಮಾಡೋದು ಹುಡುಗಿ ಹುಡುಗನಿಗೆ ಟೀ ಕೊಡುವಾಗ. ಅನಂತ್ ನಾಗ್ ಎಲ್ಲಾ ಇಂತಹ ದೃಶ್ಯಗಳನ್ನು ಬಾರೀ ಚಂದ ಮಾಡ್ತಿದ್ದರು.. ಆದರೆ ಈ ಇವರಿಬ್ಬರಿಗೆ ಇದೆಲ್ಲ ಏನು ಅಂದ್ರೆ ಏನೂ ಗೊತ್ತಿಲ್ಲ... ಟೇಸ್ಟ್ ಲೆಸ್ ಪೀಪಲ್ ಎಲ್ಲಾ.. ಜೀವನದ ಎಂತಹ ರಸಘಳಿಗೆ ಮಿಸ್ ಮಾಡ್ಕೊಂಡು ಬಿಟ್ರು ಅಂತ ನನ್ನಲ್ಲೇ ಅಂದುಕೊಂಡೆ.
ನಂತರ Snacks ತಿಂಡಿಗಳ ಸರದಿ... ಶೀರ,ಬಾಳೆಹಣ್ಣು, ಮಿಕ್ಸರ್ ತಂದ ಆ ಮತ್ತೊಂದು ಹುಡುಗಿಗೆ ಯಾವ ನಾಚಿಕೆಯೂ ಇರಲಿಲ್ಲ...
ನನ್ನೆದುರು ಬಂದಾಗ ನನ್ನ ಮುಖವನ್ನು ಸರಿಯಾಗಿ ನೋಡಿಯೇ ನಕ್ಕಳು.. ನಾನು ಸಹ ಅವಳನ್ನು ನೋಡಿ ನಕ್ಕೆ..
ಎಲ್ಲರೂ ಟೀ ಕುಡೀಲಿಕ್ಕೆ.. ತಿಂಡಿ ತಿನ್ಲಿಕ್ಕೆ ಶುರು ಮಾಡಿದರು...
ನಾನು ಮುರ್ಲಿಗೆ ಮತ್ತೆ ಕೈಯಲ್ಲಿ ಕುಟ್ಟಿ ಹೇಳಿದೆ.. ನೋಡು ಎಲ್ಲರಿಗಿಂತ ಕಡಿಮೆ ನೀನೇ ತಿನ್ಬೇಕು.. ಬಕಾಸುರನ ಹಾಗೇ ತಿಂದ್ರೆ ನಮ್ಮ ಫ್ಯಾಮಿಲಿ ಮರ್ಯಾದೆ ಹೋಗ್ತದೆ.. ಇವರು ತಿಂಡಿ ತಿನ್ನದೇ ಅದೆಷ್ಟು ದಿನ ಆಯ್ತೋ ಎಂದು ಎಲ್ಲರೂ ಅಂದುಕೊಳ್ಳುವ ಎಲ್ಲಾ ಸಂಭವ ಅಧಿಕವಾಗಿರುತ್ತದೆ. ಆದ್ದರಿಂದ ನೀನು ಶೀರ ಎಷ್ಟೇ ರುಚಿ ಇದ್ರೂ ಸ ಕೇವಲ ಕಾಲು ಭಾಗ ಮಾತ್ರ ತಿನ್ನು ಎಂದು ಹೇಳಿದೆ..
ಅವನಿಗೆ ಅಷ್ಟು ಹೇಳಿ ನಾನು ಶೀರವನ್ನು ಗಬಗಬ ಎಂದು ತಿನ್ನಲು ಶುರು ಮಾಡಿದೆ..
ಶೀರ ನಿಜವಾಗಿಯೂ ಬಹಳ ಚೆನ್ನಾಗಿತ್ತು...
ಆಹಾ.. ಅಧ್ಭುತವಾದ ಶೀರ... ಇಂತಹ ಶೀರ ನಾನು ನನ್ನ ಜನ್ಮದಲ್ಲಿಯೇ ತಿನ್ಲಿಲ್ಲ.... ಯಾರು ನೀವು ಮಾಡಿದ್ದ ಎಂದು ಡೈರೆಕ್ಟ್ ಆಗಿ ಹುಡುಗಿಯನ್ನೇ ಕೇಳಿದೆ... ಸುಮ್ಮನೆ ಒಮ್ಮೆ ಹುಡುಗಿಯನ್ನು ಹಾಗೇ ಮಾತಾಡಿಸಿಯೇ ಬಿಡುವ ಎಂಬ ಉದ್ದೇಶದಿಂದ ನಾನು ಕೇಳಿದ್ದು.
ನಮ್ಮ ಕಡೆಯವರು ಎಲ್ಲರೂ ಆಶ್ಚರ್ಯದಿಂದ ನನ್ನನ್ನೇ ನೋಡಲು ಶುರು ಮಾಡಿದರು.. ಮುರ್ಲಿ ಯೇ ಹುಡುಗಿ ಬಳಿ ಇನ್ನೂ ಮಾತಾಡಿಲ್ಲ... ನೀನು ಯಾಕೋ ಮಾತಾಡಿ ಸಾಯ್ತಾ ಇದ್ದೀಯಾ.. ಎನ್ನುವ ಅವರ ಬೆದರಿಕೆ ಮಿಶ್ರಿತ ಕೋರಿಕೆ ನನಗೆ ಅವರ ಮುಖ ಭಾವ ನೋಡಿಯೇ ಅರ್ಥ ಆಯಿತು.
ಹುಡುಗಿ ಏನೂ ಹೇಳಲಿಲ್ಲ... ತಲೆ ತಗ್ಗಿಸಿಯೇ ಕುಳಿತಿದ್ದಳು.. ಆಹಾ... ಬಹಳ ಸಂಸ್ಕಾರದ ಹುಡುಗಿ... ಪರ ಪುರುಷರಲ್ಲಿ ಮಾತನಾಡುವುದಿಲ್ಲ ಎಂದು ದೀಕ್ಷೆ ತೆಗೆದುಕೊಂಡವಳಂತೆ ಕಂಡಳು.. ಆದರ್ಶ ನಾರಿ.. ನಮ್ಮ ರಕ್ಷಿತಾಗೆ ತಕ್ಕ ಸೊಸೆ.
ಹುಡುಗಿ ಪಕ್ಕವೇ ಅವಳ ತಂಗಿಯಂತಿದ್ದ ಮತ್ತೊಬ್ಬಳು ಹುಡುಗಿ ತಟ್ಟನೆ ಅಂದಳು... ಅಕ್ಕ ಎಲ್ಲಿ ಇದನ್ನೆಲ್ಲ ಮಾಡ್ತಾಳೆ.. ಇದ್ದೆಲ್ಲಾ ನಾನೇ ಮಾಡಿದ್ದು... ಶೀರ ಮಾಡುವುದರಲ್ಲಿ ನಾನೇ ಎಕ್ಸಪರ್ಟ್ ಈ ಮನೆಯಲ್ಲಿ..
ನಮ್ಮ ಸೈಡಿನ ನಾಲ್ಕು ಮಂದಿ(ನನ್ನನ್ನು, ಇಂಪನ,ಮುರ್ಲಿಯನ್ನು ಬಿಟ್ಟು) ... ರಪ್ಪ ರಪ್ಪನೇ ಒಬ್ಬರ ಮುಖ ಒಬ್ಬರು ನೋಡಿಕೊಂಡರು... ಈ ಸೀರಿಯಲ್ ನಲ್ಲಿ ದಿಢೀರ್ ಅಂತ ಶಾಕ್ ಗೆ ಒಳಪಡುವ ಸೀನ್ ಬಂದಾಗ ಮುಖವನ್ನು close up ನಲ್ಲಿ zoom in, zoom out ಮಾಡಿ ರಪ್ಟ ರಪ್ಪ ಅಂತ ತೋರಿಸ್ತಾರೆ ಅಲಾ.. ಹಾಗಿತ್ತು ನಮ್ಮವರ expressions. ಅವರೆಲ್ಲರ face reading ಮಾಡಲು ಶುರು ಮಾಡಿದೆ..
ಎಲ್ಲರ ಮುಖದಲ್ಲಿ ಇದ್ದದ್ದು ಒಂದೇ ಪ್ರಶ್ನೆ... ಏನು ಹುಡುಗಿಗೆ ಅಡುಗೆ ಮಾಡ್ಲಿಕ್ಕೆ ಬರಲ್ವಾ...? ಶೀರ ಮಾಡ್ಲಿಕ್ಕೆ ಕೂಡ ಬರಲ್ವಾ..?
ಪುಣ್ಯಕ್ಕೆ ಯಾರೂ ಅದನ್ನು ಅಲ್ಲಿ ಬಾಯಿ ಬಿಟ್ಟು ಕೇಳ್ಲಿಲ್ಲ... ಮಾತು ಬಂದರೆ ಅಲ್ಲವೇ ಅವರಿಗೆಲ್ಲಾ...😏
ಅಡುಗೆ ಬರದಿದ್ದರೆ ಏನಾಯಿತು.. Next ಬಂದು ಕಲಿತಾರೆ.. ಅದು ಬೇರೆ ಬೇಕಾದಷ್ಟು YouTube ಅಡುಗೆ ಚಾನೆಲ್ ಗಳು ಸಹ ಈಗ ಇವೆ..ಇವರೆಲ್ಲ ಇನ್ನೂ ಯಾವ ಕಾಲದಲ್ಲಿ ಇದ್ದಾರೆ ಮರ್ರೆ ಅಂತ ನನಗೆ ನಾನೇ ಅಂದುಕೊಂಡೆ.
ಓಹ್.. ನೀವಾ.. ಶೀರ ಮಾಡಿದ್ದು.. ಬಹಳ ಚೆನ್ನಾಗಿ ಮಾಡಿದ್ದೀರಿ..ನೀವು ಹುಡುಗಿ ತಂಗಿಯಾ..? ಹೀಗೇ ಕುತೂಹಲಕ್ಕೆ ಕೇಳಿ ಬಿಟ್ಟೆ.
ಹೌದು.. ಅಂದಳು ಅವಳು ನಗುತ್ತಾ..
ಇನ್ನೊಬ್ಬ ತಾತ ಕೇಳಿದ್ರು - ನಿಮ್ಮ ಹುಡುಗ ಏನು ಕೆಲಸ ಮಾಡ್ತಾನೆ..
ಮುರ್ಲಿ ಏನು ಹೇಳಲ್ಲ ಅಂತ ಗೊತ್ತಿತ್ತು ಹಾಗಾಗಿ ಅದನ್ನು ಸಹ ನಾನೇ ಹೇಳಿದೆ - ತಾತ ನಮ್ಮ ಮುರ್ಲಿ ದೊಡ್ಡ ದೊಡ್ದ ಬಿಲ್ಡಿಂಗ್ ಎಲ್ಲಾ ಕಟ್ತಾ ಇರ್ತಾನೆ.. ಅದೇ ಅವನಿಗೆ ಕೆಲಸ.. ಸಿವಿಲ್ ಇಂಜಿನಿಯರ್ ಅಲ್ವಾ..
ಅದೇ ತಾತ ಪುನಃ ಕೇಳಿದರು - ದೊಡ್ಡದು ಅಂದ್ರೆ ಎಷ್ಟು ದೊಡ್ಡದು... ಅಂತಹದ್ದು ದೊಡ್ಡದು ಏನು ಕಟ್ಟಿದ್ದಾನೆ ನಿಮ್ಮ ಮುರ್ಲಿ .
ಈ ಅಜ್ಜನಿಗೆ ಯಾಕೆ ಮರ್ರೆ ಇಷ್ಟು ಕುತೂಹಲ ಅನಿಸಿತು.
ತಾತ ಅವನು.. ಕುತುಬ್ ಮಿನಾರ್.. ತಾಜ್ ಮಹಲ್ ಎಲ್ಲಾ ಕಟ್ಟಿದ್ದಾನೆ ಅಂದೆ ಶೀರ ತಿನ್ನುತ್ತಾ.
ಅಲ್ಲಿದ್ದ ಎಲ್ಲರೂ ಒಮ್ಮೆ ನನ್ನನ್ನೇ ನುಂಗುವಂತೆ ನೋಡಿದರು..!
ಹಹ್ಹಾ.. ಹಹ್ಹಾ.. ತಮಾಷೆಗೆ ಅಂದೆ ತಾತ... ಅವ ಬೆಂಗಳೂರಲ್ಲಿ ಒಂದು infrastructure ಕಂಪೆನಿಯಲ್ಲಿ ಕೆಲಸ ಮಾಡ್ತಾನೆ ಅಂದೆ.
ಆಮೇಲೆ ಆ ತಾತ ಜಾಸ್ತಿ ಪ್ರಶ್ನೆ ಕೇಳ್ಲಿಲ್ಲ..
ಅಲ್ಲೇ ಇದ್ದ ಹುಡುಗಿ ತಂದೆ ಕೇಳಿದರು..
- ಆದ್ರೆ ಆಗದಿಂದ ನೀವು ಯಾರು ಅಂತ ನಮಗೆ ಗೊತ್ತೇ ಆಗ್ಲಿಲಲ್ಲ...
ಆ ಸೈಡಿನವರ ಎಲ್ಲರ ಮುಖ ಒಮ್ಮೆ ಎಡದಿಂದ ಬಲಕ್ಕೆ ಹಾಗೇ ನೋಡಿದೆ. ಹೆಚ್ಚು ಕಡಿಮೆ ಎಲ್ಲರ ಮುಖದಲ್ಲಿ ಇದೇ ಪ್ರಶ್ನೆ ಇತ್ತು... ಆವಾಗದಿಂದ ಒಬ್ಬನೇ ಬಾರೀ ಮಾತಾಡ್ತಾ ಇದ್ದಾನೆ.. ಯಾರಿರಬಹುದು ಈ ಬಡ್ಡಿಮಗ.. ಅಂತ ಅವರ ಎಲ್ಲರ ಮುಖದಲ್ಲಿದ್ದ ಪ್ರಶ್ನೆಯನ್ನು ಸಹ ನಾನು ಸ ಸರಿಯಾಗಿ ಗುರುತಿಸಿದೆ.
ನಾನು ಹುಡುಗನ ತಮ್ಮ.. ಅಂದ್ರೆ ಮುರ್ಲಿಯ ಚಿಕ್ಕಪ್ಪನ ಮಗ.. ಹೆಸರು ನೀಲಮೇಘ ಅಂತ ಎಲ್ಲರೂ ನೀಲು..ನೀಲು ಅಂತಾರೆ ಅಂದೆ.. ಇವರು ನಮ್ಮ ಅಪ್ಪ ನೀಲಣ್ಣ.
ಅದಕ್ಕೆ ಹುಡುಗಿಯ ತಂದೆ - ಓಹ್.. ಹೌದಾ.. ಬಹಳ ಸಂತೋಷ.. ಬಹಳ ಸಂತೋಷ... ಅಂದರು.
ನೀವು ಡಾ.ರಾಜ್ ಕುಮಾರ್ ಅವರ ಫ್ಯಾನಾ? ಕೇಳಿದೆ.
ಹೌದು ಕರೆಕ್ಟ್.. .ನಿಮಗೆ ಹೇಗೆ ಗೊತ್ತಾಯಿತು ಅವರಂದರು..
ಅಂದುಕೊಂಡೆ. ನೀವು.. ಬಹಳ ಸಂತೋಷ.. ಬಹಳ ಸಂತೋಷ ಅಂದಾಗಲೇ ಅಂದುಕೊಂಡೆ ... ಅಂದ ಹಾಗೆ ನಾನು ಅನಂತ್ ನಾಗ್ ಪ್ಯಾನ್.. ಕೊಡಿ ಕೈ.... ಅನ್ನುತ್ತಾ ಹ್ಯಾಂಡ್ ಶೇಕ್ ಮಾಡಲು ಕೈ ಚಾಚಿದೆ.
ಅವರು ಸಹ ನಗು ನಗುತ್ತಾ ನನತ್ತ ಕೈ ಚಾಚಿ ಹ್ಯಾಂಡ್ ಶೇಕ್ ಮಾಡಿದರು..
ನನ್ನ ಅಪ್ಪ ನನ್ನನ್ನೇ ಉಗ್ರ ಉಗ್ರವಾಗಿ ನೋಡುತ್ತಿದ್ದರು. .
ಅಲ್ಲೇ ಇದ್ದ ದಪ್ಪ ಮೀಸೆಯ ಅಂಕಲ್ ಒಬ್ಬರು ಕೇಳಿದರು..
ಅಂದ ಹಾಗೆ ನೀವು ಏನು ಮಾಡ್ಕೊಂಡಿದ್ದೀರಾ.. ಕೆಲಸ ಎಲ್ಲಾ..?
ಅಪ್ಪ ನನ್ನನ್ನೇ ನೋಡುತ್ತಿದ್ದರು... ಸಿಕ್ಕಿ ಹಾಕಿಕೊಂಡ ಮಗ್ಗ...ಈಗ ಇವನು ಏನು ಹೇಳ್ಬಹುದು ಎಂದು ಅವರು ಸಹ ಭಯಂಕರ ಕುತೂಹಲದಲ್ಲಿ ಇರುವಂತೆ ಕಂಡಿತು.
ನಾನು ಹೇಳಿದೆ - ನಂದು ಬಿಡಿ ಅಂಕಲ್.. ನನಗೆ ಬ್ಯುಸಿನೆಸ್ ಎಲ್ಲಾ ಇದೆ.. ಹೇಗೋ ನಡೀತಾ ಇದೆ ಜೀವನ,ಲೈಪು..ಅಂದೆ.
ಅದನ್ನು ಕೇಳಿ ಅಪ್ಪ ಜೋರಾಗಿ ಕೆಮ್ಮು ಬಂದಂತೆ ನಟಿಸಿದರು..
ಅವರಿಗೆ ಗೊತ್ತು ಈ ಮೂರುಕಾಸಿನವನ ಕೈಯಲ್ಲಿ ಹೇಳ್ಲಿಕ್ಕೆ ಅಂತ ಒಂದೂ ಕೆಲಸ ಇಲ್ಲ.. ಅದ್ರೂ ಬಿಲ್ಡ್ ಅಪ್ ಗೆ ಏನೂ ಕಮ್ಮಿ ಇಲ್ಲ ಅಂತ.
ಆದರೆ ಇ ಮೀಸೆ ಅಂಕಲ್ ನನ್ನನ್ನು ಬಿಡುವಂತೆ ಕಾಣಲಿಲ್ಲ..
ಬ್ಯುಸಿನೆಸ್ ಅಂದ್ರೆ ಯಾವ ತರಹದ ಬ್ಯುಸಿನೆಸ್...?
ಈ ಜನ ಒಬ್ಬರು ಯಾರು ಮರ್ರೆ.. ನನ್ನ ಮರ್ಯಾದೆ ತೆಗಿಲಿಕ್ಕೆಯೇ ಇಲ್ಲಿಗೆ ಬಂದದ್ದಾ ಎಂದು ಅನಿಸಿತು...
ಅಪ್ಪ ಕೂಡ ಅವರಿಗೆ ಸಾಥ್ ಕೊಟ್ಟರು.. ಹಾನ್ ಕೇಳ್ತಾ ಇದ್ದಾರೆ ಅಲಾ... ಯಾವ ಬ್ಯುಸಿನೆಸ್ ಎಂದು.. ಅವರಿಗೆ ಸಹ ಒಮ್ಮೆ ಹೇಳಿ ಬಿಡು..
ನಾನು ಏನಾದರೊಂದು ಈಗ ಹೇಳ್ಲೇ ಬೇಕಿತ್ತು..
ಇರಲಿ ಇರಲಿ ಈ ಮೀಸೆ ಅಂಕಲ್ ಗೆ ಸರಿಯಾಗಿಯೇ ಮಾಡ್ತೇನೆ ಎಂದು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾ....
ಅಂಕಲ್ ಅದು ನಾನು ಒಂದು Startup ಮಾಡ್ತಾ ಇದ್ದೇನೆ ಎಂದೆ.
ಆದರೂ ಆ ಜನಕ್ಕೆ ನೆಮ್ಮದಿಯೇ ಇಲ್ಲ...
ಪುನಃ ಕೇಳಿದರು...
Startup ಅಂದ್ರೆ ಯಾವ ತರಹದ್ದು Startup..?
ಅಪ್ಪ ತಲೆ ಕೆಳಗೆ ಹಾಕಿ ನಗುತ್ತಿದ್ದ...
ಬಹುಶಃ ಈಗ ಅವರು ನಿಜವಾಗಿಯೂ "ನಿನಗಿದು ಬೇಕಿತ್ತಾ ಮಗನೇ..." ಸಾಂಗ್ ಹಾಡ್ತಾ ಇದ್ದರೋ ಏನೋ ಎಂದು ಅನಿಸಿತು..
ಇರಲಿ ಇರಲಿ ಇವರಿಗೆಲ್ಲಾ ಮಾಡ್ತೇನೆ ತಡಿ ಎಂದು..
- ಅಂಕಲ್ ಅದು ನಾನು ಗ್ರೀನ್ ಪಟಾಕಿ concept ಅಡಿಯಲ್ಲಿ.. Sound less ಅಟಂ ಬಾಂಬು ಪಟಾಕಿ ಎಲ್ಲಾ ಮಾಡ್ತಾ ಇದ್ದೇನೆ...
ಎಲ್ಲರೂ ನನ್ನನ್ನೇ ಹಾಗೇ ನೋಡ ತೊಡಗಿದರು..!
ಇನ್ನಾದರೂ ಈ ಮನುಷ್ಯ questions ಕೇಳುವುದನ್ನು ನಿಲ್ಲಿಸಲಿ ಎಂದು ಹಾಗೇ ಹೇಳಿದ್ದೆ ನಾನು.
ಆದರೆ ಅವರು ಪುನಃ ಪ್ರಶ್ನೆ ಕೇಳತೊಡಗಿದರು...
ಹಾಗಾದರೆ ನಿಮ್ಮ ಪಟಾಕಿ ಫ್ಯಾಕ್ಟರಿ ಎಲ್ಲಿ ಇರುವುದು..?
ಎಷ್ಟು ಜನ ಕೆಲಸಕ್ಕೆ ಇದ್ದಾರೆ ಈಗ..? ಎಂದು ಕೇಳಿದರು ಮೀಸೆ ಅಂಕಲ್.
ಅಲ್ಲಿ ಯಾರೂ ಸ ಇರದಿದ್ದರೆ ಆ ಜನವನ್ನು ನಾನು confirm ಚಿಂದಿ ಚಿತ್ರಾನ್ನ.. ಬೂಂದಿ ಮೊಸರನ್ನ ಮಾಡ್ತ ಇದ್ದೆ.. ನಿಜವಾಗಿಯೂ ಅಷ್ಟು ಕೋಪ ಬಂದಿತ್ತು ಅವರ ಮೇಲೆ.
ಫ್ಯಾಕ್ಟರಿ ಮನೆ ಹತ್ರನೇ ಇದೆ.. ಕೆಲಸಕ್ಕೆ ಸಹ ಜನರು ಬೇಕಾದಷ್ಟು ಇದ್ದಾರೆ.. ಯಾಕೆ ಅಂಕಲ್ ಯಾರಿಗಾದರೂ ಕೆಲಸ ಬೇಕಿತ್ತಾ.. ಆದ್ರೆ ಈಗ ಎಲ್ಲಾ ಫುಲ್ ಆಗಿದೆ ಅಂಕಲ್.. ನೆಕ್ಸ್ಟ್ ದೀಪಾವಳಿ ಬರುವಾಗ ಜನ ಬೇಕಾಗಬಹುದು.. ಆಗ ಹೇಳ್ತೇನೆ.. ಅಂದೆ.
ಆ ಜನ ಮುಖ ತಿರುಗಿಸಿತು..
ನಾನು ಕೆಲಸ ಕೊಡಿಸ್ತೇನೆ ಎನ್ನುವುದು ಕೇಳಿ ಅಪ್ಪ ತಲೆ ತಗ್ಗಿಸಿ ಮನಸ್ಸಿನ ಒಳಗೆಯೇ ಜೋರಾಗಿ ನಗುತ್ತಿದ್ದರು.. ಬಹುಶಃ ಅವರು ಹೀಗೆ ಅಂದುಕೊಂಡಿರಬಹುದು ಕೆಲಸವೇ ಇರದವನು ಇತರರಿಗೆ ಕೆಲಸ ಕೊಡ್ತಾನೆ ಅಂತೆ...
ಇಂಪನ ಎಂದಿನಂತೆ ಬಾಯಿಗೆ ಕೈ ಹಿಡಿದು ನಗುತ್ತಿದ್ದಳು.
ಆ ಪಕ್ಷದವರು ಸಹ ನನ್ನನ್ನೇ ವಿಚಿತ್ರವಾಗಿ ನೋಡ ತೊಡಗಿದರು... ಹೆಚ್ಚು ಕಡಿಮೆ ಎಲ್ಲರೂ.
ನಿಮಗೆ ಶೀರ ಇಷ್ಟ ಆಗಿದ್ರೆ ನಿಮಗೆ ಇನ್ನೊಂದು ಪ್ಲೇಟ್ ಶೀರ ತರುವುದಾ.. ಹುಡುಗಿಯ ತಂಗಿ ಕೇಳಿದಳು..
ಅವಳಿಗೊಂದು ನಾನು ಅವಳು ಮಾಡಿದ ಶೀರ ದ ಬಗ್ಗೆ ಹೊಗಳಿದ್ದು... ಯಾವುದೋ ದೊಡ್ಡ ಕುಕರಿ ಶೋ ದ ಬಹುಮಾನ ಸಿಕ್ಕಷ್ಟೇ ಖುಷಿ ಆಗಿತ್ತು. ಅದಕ್ಕೆ ಶೀರ ತರುವುದಾ ಅಂತ ಬಾರೀ ಇಂಟ್ರೆಸ್ಟ್ ಅಲ್ಲಿ ಕೇಳ್ತಾ ಇದ್ದಾಳೆ.
ಅಪ್ಪ ನನ್ನನ್ನೇ ನೋಡಿ ಕಣ್ಣು ದೊಡ್ಡದು ಮಾಡಿ... ಬೇಡ ಅಂತ ಹೇಳು... ನಮ್ಮ ಮರ್ಯಾದೆಯ ಪ್ರಶ್ನೆ... ಅಂತ ಆ ದೊಡ್ಡದು ಮಾಡಿದ ಕಣ್ಣಲ್ಲಿಯೇ ಎಲ್ಲವನ್ನೂ ಹೇಳಿ ಬಿಟ್ಟರು.
ಆ ಮೀಸೆ ಅಂಕಲ್ ಬಳಿ ನೀವು ನನ್ನ ಮರ್ಯಾದೆ ಹೋಗ್ಲಿ ಅಂತಾನೇ ಕಾದಿದ್ದು ಅಲಾ... ಮಾಡ್ತೀನಿ ಇವಾಗ ನಿಮ್ಮ ಮರ್ಯಾದೆಗೆ ಅಂತ ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾ...
- ಓಹ್.. Of course.. ನನಗೆ ಶೀರ ಅಂದ್ರೆ ಬಾರೀ ಇಷ್ಟ.ತಿನ್ನುವುದಕ್ಕೆ ಎಲ್ಲಾ ನಾಚಿಕೆ ಪಡ್ಬಾರ್ದು ಅಲಾ..ಅದು ಬೇರೆ ನೀವು ಅಷ್ಟು ಚೆನ್ನಾಗಿ ಮಾಡಿದ್ದೀರಿ.. ದಯವಿಟ್ಟು ಒಳಗೆ ಹೋಗಿ.. ಇನ್ನೂ ಶೀರ ಉಳಿದಿದ್ರೆ ಬೇಗ ತನ್ನಿ.. ಅಂದೆ.
ಹುಡುಗಿಯ ತಂಗಿ ಶೀರ ತರಲು ಒಳಗೆ ಹೋದಳು.
ಮುರ್ಲಿ ನನ್ನನ್ನೇ ಕುಟ್ಟಿ... ಓ ಮಾರಿ.. ನನಗೆ ತಿನ್ಬೇಡ.. ತಿನ್ಬೇಡ.. ಅಂತ ಹೇಳಿ ಇಲ್ಲಿ ನೀನೇನು ಮಾಡ್ತಿದ್ದಿ ಅಂತ ನನಗಷ್ಟೇ ಕೇಳುವಂತೆ ಹೇಳಿದ.
ಶೀರ ಕೂಡ ಬಂತು.. ಶ್ರದ್ದೆಯಿಂದ ತಿನ್ನಲು ಶುರು ಮಾಡಿದೆ...
ಒಮ್ಮೆಲೇ ಏನೋ ನೆನಪಾಯಿತು.. ಸುಮ್ಮನೆ ತಲೆ ಎತ್ತಿ ನೋಡಿದೆ..ಎರಡೂ ಪಾರ್ಟಿಯವರು ನನ್ನನ್ನೊಬ್ಬನ್ನೇ ಏಕಾಗ್ರಚಿತ್ತದಿಂದ ದುರುಗುಟ್ಟಿ ನಾನು ಶೀರ ತಿನ್ನುವುದನ್ನೇ ನೋಡುತ್ತಿದ್ದರು..
ಇವರೆಲ್ಲ ಯಾಕೋ ನನ್ನನ್ನು ಭಿಕ್ಷುಕನ ರೇಂಜಿಗೆ ನೋಡ್ತಾ ಇದ್ದಾರೆ ಅಲಾ ಅಂತ ಅನ್ನಿಸಿ ಬಿಟ್ಟಿತು.
ಕೂಡಲೇ ಶೀರ ಪ್ಲೇಟ್ ಸೈಡಿಗೆ ಇಟ್ಟು ಟೀ ಕುಡಿಯಲು ಶುರು ಮಾಡಿದೆ..
ಆಹಾ...ಅಧ್ಭುತವಾದ ಟೀ... ಇಂತಹ ಟೀ ನಮ್ಮ ದೊಡ್ಡಮ್ಮ ಕೂಡ ಮಾಡ್ತಾರೆ... ಅದು ಬಿಟ್ರೆ ಬೇರೆ ಎಲ್ಲೂ ಕುಡಿದೇ ಇಲ್ಲ ನೋಡಿ... ಖಡಕ್ ಆಗಿ ಅಧ್ಭುತವಾಗಿದೆ... ಯಾರೂ ಹುಡುಗಿಯೇ ಟೀ ಮಾಡಿದ್ದಾ... ಎಂದು ಕೇಳಿದೆ.
ಹುಡುಗಿ ಆಗಲೂ ಏನೂ ಮಾತಾಡ್ಲಿಲ್ಲ...
ಅವಳ ತಂಗಿ ರಪ್ಪನೇ ಹೇಳಿದ್ಲು.. ಅಕ್ಕನಿಗೆ ಟೀ ಮಾಡ್ಲಿಕ್ಕೆ ಎಲ್ಲಿ ಬರ್ತದೆ...ಟೀ ಸ ನಾನೇ ಮಾಡಿದ್ದು...
ಕೂಡಲೇ ನಮ್ಮ ಪಾಳಯದಲ್ಲಿದ್ದ ನಾಲ್ಕು ಜನ.. ಶಾಕ್ ಗೆ ಒಳಗಾದಂತೆ ಒಬ್ಬರ ಮುಖ ಮತ್ತೊಬ್ಬರು ಮತ್ತೊಮ್ಮೆ ಆಶ್ಚರ್ಯದಿಂದ ನೋಡಿಕೊಂಡರು..
ಅವರ ಮುಖದಲ್ಲಿ ಇದ್ದ ಪ್ರಶ್ನೆ ಅದೇ.. ಏನು ಹುಡುಗಿಗೆ ಟೀ ಕೂಡ ಮಾಡ್ಲಿಕ್ಕೆ ಬರಲ್ವಾ..?!. ಹಾಗಾದರೆ ಅನ್ನ ಕೂಡ ಮಾಡ್ಲಿಕ್ಕೆ ಬರ್ಲಿಕ್ಕಿಲ್ಲ... ಸಾಂಬಾರ್ ಕೂಡ ಮಾಡ್ಲಿಕ್ಕೆ ಬರ್ಲಿಕ್ಕಿಲ್ಲ....ನೀರುದೋಸೆ... ಪತ್ರೋಡೆ.. ಪುಂಡಿ ಎಲ್ಲ ಬಹುದೂರದ ಮಾತು.
ನಾನು ನಮ್ಮವರ Expression ಗಳ ಬಗ್ಗೆ ಜಾಸ್ತಿ ಗಮನ ಕೊಡದೇ ಟೀ ಕುಡಿಯುತ್ತಾ ಮಾತು ಮುಂದುವರಿಸಿದೆ...ನೋಡಿ ಇವರೇ ಟೀ ಬಹಳ ಚೆನ್ನಾಗಿದೆ.. Actually ಇದು ಯಾವ ಹುಡಿ i mean ಕಣ್ಣನ್ ದೇವನ್ ಚಹಾ ಹುಡಿಯಾ...
ಅದಕ್ಕೆ ಹುಡುಗಿ ತಂಗಿ - ಅಲ್ಲ ಇದು ದೇವಗಿರಿ ಅಂತ.. ಒಳ್ಳೆ ಆಗ್ತದೆ ನಮ್ಮ ಮನೆಯಲ್ಲಿ ಇದೇ ಮಾಡುವುದು..
ಹೌದಾ...ಹಾಗಾದರೆ ಇನ್ನು ನಮ್ಮ ಮನೆದ್ದು, ದೊಡ್ಡಮ್ಮನ ಮನೆದ್ದು ಟೀ ಹುಡಿ ಸ ಚೇಂಚ್ ಮಾಡ್ಬೇಕು.. ಇನ್ನು ಮುಂದೆ ನಾವು ಸ ದೇವಗಿರಿ ಟೀ ಕುಡೀಬೇಕು ಅಂತ ಅನ್ನಿಸ್ತಾ ಉಂಟು .. ಬಾರೀ ಇಷ್ಟ ಆಯಿತು..ಭಯಂಕರ ಕಿಕ್ ಇದೆ ಈ ಚಹಾದಲ್ಲಿ ಅಂದೆ.
ಟೀ ಕುಡಿದ ಕೂಡಲೇ ನಾನು ಅಲ್ಲೇ ಟೇಬಲ್ ಮೇಲೆ ಇದ್ದ ಮಿಕ್ಷರ್ ಅನ್ನು ಗಮನಿಸಿದೆ.. ಅದನ್ನು ನಾನು ಇನ್ನೂ ಸಹ ಟಚ್ ಮಾಡಿರ್ಲಿಲ್ಲ...
ಏನೋ ಒಂದು Important ರಪ್ಪನೆ ನೆನಪಾಯಿತು.. ಅದನ್ನೂ ಹೇಳಿಯೇ ಬಿಟ್ಟೆ..
- ಅಲಾ.. ಹೆಚ್ಚಿನ ಕಡೆಗಳಲ್ಲಿ ಶೀರ ಜೊತೆಗೆ ಬಾಳೆಕಾಯಿ ಚಿಪ್ಸ್ ಕೊಡ್ತಾರೆ.. ದಕ್ಷಿಣ ಕನ್ನಡದಲ್ಲಿ ಅದೇ ಅಲ್ವಾ ಹೆಚ್ಚಾಗಿ ಸಂಪ್ರದಾಯ.. ನೀವೇನು ಬಾಳೆಕಾಯಿ ಚಿಪ್ಸ್ ಬದಲು.. ಈ ಮಿಕ್ಷರ್ ಇಟ್ಟಿದ್ದೀರಿ..?
ಅವರಲ್ಲಿ ಹಿಂದೆ ಸೈಡಿನಲ್ಲಿ ಕೆಲವರು ಮಾತಾಡಲು ಶುರು ಮಾಡಿಕೊಂಡರು.. "ಯಾನ್ ಎಕಡೇ ಪಂಡೆ ನಿಕ್ಲೆಗ್.. ಬಾರೆದ ಚಿಪ್ಸೇ ಇಪ್ಪಡ್ ಪಂದ್...ನಿಕ್ಲೆಗ್ ಓಲು ಅರ್ಥ ಆಪುಂಡು.. ಮಿಕ್ಷರ್ ಏರ್ಲಾ ದೀಪೆರಾ,ತುಲೆ ಇತ್ತೆ."(ನಾನು ಈ ಮೊದಲೇ ಹೇಳಿದ್ದೆ ಬಾಳೆ ಚಿಪ್ಸೇ ಇರ್ಲಿ ಮಿಕ್ಷರ್ ಬೇಡ ಅಂತ.. ಆದ್ರೆ ನೀವು ಎಲ್ಲಿ ಕೇಳ್ತಿರಾ. ಈಗ ನೋಡಿ)..
ಬಹುಶಃ ಅವರಲ್ಲಿ ತಿಂಡಿಯನ್ನು ಸೆಲೆಕ್ಟ್ ಮಾಡುವ ವಿಷಯದಲ್ಲಿ ಮಚ್ ಮಚ್ (ಭಿನ್ನಾಭಿಪ್ರಾಯ) ಇರುವಂತೆ ನನಗೆ ಕಂಡಿತು..ಇನ್ನು ನನ್ನಿಂದ ಬಾಳೆಕಾಯಿ ಚಿಪ್ಸ್ ವಿಷಯದಲ್ಲಿ ಅವರ ನಡುವೆ ಕುರುಕ್ಷೇತ್ರ ಉಂಟಾಗುವುದು ಬೇಡ ಅಂತ ರಪ್ಪನೇ ಮಾತು ಚೇಂಜ್ ಮಾಡಿದೆ...
ಹಾನ್... ಈ ಮಿಕ್ಷರ್ ಕೂಡ ಬಹಳನೇ ಚೆನ್ನಾಗಿದೆ..
ಈ ತರಹ ಮಿಕ್ಷರ್ ನಾನು ಎಲ್ಲಿಯೂ ತಿಂದೇ ಇಲ್ಲ..
ಇದನ್ನು ಸಹ ನೀವೇ ಮಾಡಿದ್ದ... ಈ ಬಾರಿ ಎಂದಿನಂತೆ ಹುಡುಗಿಗೆ ಕೇಳುವ ಬದಲು ಹುಡುಗಿ ತಂಗಿಗೆನೇ ಕೇಳಿದ್ದೆ. ಏಕೆಂದರೆ ಬಾಯಿ ಬಿಡುವುದು ಕೊನೆಗೆ ತಂಗಿಯೇ ಅಲಾ..
ಹುಡುಗಿ ತಂಗಿ ನಗುತ್ತಾ.. ಇಲ್ಲ ಇಲ್ಲ ಮಿಕ್ಷರ್ ಎಲ್ಲಾ ಯಾರಾದ್ರೂ ಮನೆಯಲ್ಲಿ ಮಾಡ್ತಾರಾ... ಬೇಕರಿಯಿಂದ ತಂದದ್ದು... ಆದ್ರೆ ತಂದದ್ದು ಮಾತ್ರ ನಾನೇ..
ನೀವು ಬಿಡಿ... ನಿಮ್ಮ ಸೆಲೆಕ್ಷನ್ ಅಂದ್ರೆ ಸೂಪರೇ ಇರ್ತದೆ... ಅಂದ ಹಾಗೆ ಯಾವ ಬೇಕರಿಯಿಂದ ಈ ಮಿಕ್ಷರ್ ತಂದದ್ದು.. ಅಯ್ಯಂಗಾರ್ ಬೇಕರಿಯ.. ನ್ಯೂ ಅಯ್ಯಂಗಾರ್ ಬೇಕರಿಯ ಅಥವಾ.. ಬೆಂಗಳೂರು ಅಯ್ಯಂಗಾರ್ ಬೇಕರಿಯಾ.. ಅಂದೆ...
ಇಲ್ಲ.. ಇಲ್ಲ.. ಇದು ನಾನು ಮಂಗಳೂರಿನಿಂದ ತಂದದ್ದು.. ಅದು ಬಂಟ್ಸ್ ಹಾಸ್ಟೆಲ್ ಸರ್ಕಲ್ ಉಂಟು ನೋಡಿ.. ಅಲ್ಲಿ ಒಂದು ಬೇಕರಿ ಅಲ್ಲಿ ಸಿಗ್ತದೆ.
ಯಾಕೆ.. ಹಳೆಯಂಗಡಿಯಲ್ಲಿ,ಪಕ್ಷಿಕೆರೆಯಲ್ಲಿ ಬೇಕರಿ ಇಲ್ವಾ.. ಜಸ್ಟ್ ಮಿಕ್ಷರ್ ಗೆ ಮಂಗಳೂರಿಗೆ ಹೋಗ್ಬೇಕಾ....
ನಾನು ಮಂಗಳೂರಿನಲ್ಲಿ ಕಾಲೇಜ್ ಗೆ ಹೋಗುವುದು ಅಲಾ.. ಹಾಗಾಗಿ ಅಲ್ಲೇ ತಗೊಂಡದ್ದು... ಅಲ್ಲಿಯ ಮಿಕ್ಷರ್ ಚೆನ್ನಾಗಿರ್ತದೆ.
ಹೌದು.. ಮಿಕ್ಷರ್ ಚೆನ್ನಾಗಿದೆ.. ಆದ್ರೆ ಇದರಲ್ಲಿ ನೆಲಕಡಲೆ ಕಡಿಮೆ ಇದೆ ನೋಡಿ.. ಏನೇ ಹೇಳಿ ಮಿಕ್ಷರ್ ಅಂದ್ರೆ ಕಡ್ಲೆ ಎಲ್ಲಾ ಜಾಸ್ತಿ ಇರ್ಬೇಕು ಅಲಾ ಅಂದೆ..
ಇಲ್ಲ.. ಕಡ್ಲೆ ಇತ್ತು... ಬಹುಶಃ ನಿಮಗೆ ಕಡಿಮೆ ಬಿದ್ದಿರಬೇಕು... ಬೇಕಾದ್ರೆ ಒಳಗೆ ಹೋಗಿ ಪ್ಯಾಕೇಟ್ ನಿಂದ ನೆಲಕಡಲೆ ಹೆಕ್ಕಿ ಹೆಕ್ಕಿ ತರಲಾ... ಎಂದು ಕೇಳಿದಳು ಹುಡುಗಿಯ ತಂಗಿ.
ಈಗ ಅಲ್ಲಿರುವ ಎರಡೂ ಪಾರ್ಟಿಯ ಜನರು ನಮ್ಮಿಬ್ಬರನ್ನು ಅದರಲ್ಲೂ ನನ್ನನ್ನು ಮುಕ್ಕಿ ತಿನ್ನುವಂತೆ ನೋಡ ತೊಡಗಿಗದರು...
ಅದರಲ್ಲೂ ಇಂಪನ ನಮ್ಮಿಬ್ಬರ ಸಂಭಾಷಣೆಗಳನ್ನೇ ಬಹಳ ಆಸಕ್ತಿಯಿಂದ ಕೇಳಿಸಿಕೊಂಡು ಮುಸಿ ಮುಸಿ ನಗುತ್ತಿದ್ದಳು.
ಓಹ್.. ಇವಳ ಜೊತೆ ಇನ್ನು ಜಾಸ್ತಿ ಮಾತಾಡಿದ್ರೆ ಅಪಾರ್ಥ ಆಗುವ ಸಂಭವ ಜಾಸ್ತಿ ಇದೆ ಅಂತ ನನಗೆಯೇ ಫೀಲ್ ಆಯಿತು..
ಮಾತು ಬದಲಾಯಿಸಲು ಮಿಕ್ಷರ್ ತಿನ್ನುತ್ತಾ ನಾನೇ ಬೇರೆ ಟಾಪಿಕ್ ತೆಗೆದೆ..
ಆಯಿತು ಹಾಗಾದರೆ.. ಈಗ ಹುಡುಗಿ ಒಂದು ಹಾಡು ಹಾಡಲಿ..
ಅದನ್ನು ಕೇಳಿ ನನ್ನ ಅಪ್ಪ.... ಬೇಡ ಬೇಡ... ಸಾಂಗ್ ಹಾಡುವುದು ಏನು ಬೇಡ.. ಬೇಕಾದರೆ ಹುಡುಗ ಹುಡುಗಿ ಒಮ್ಮೆ ಮಾತಾಡಿ ಕೊಳ್ಳಲಿ ಅಷ್ಟೇ ಸಾಕು ಅಂದರು..
ದೊಡ್ಡಪ್ಪ ದರ್ಶನ್ ಕೂಡ... ಹೌದಾ ನೀಲು.. ಸಾಂಗ್ ಎಲ್ಲಾ ಯಾಕ.. ಅದೆಲ್ಲ ಹಳೆ ಸಂಪ್ರದಾಯ.. ಅಂದರು.
ಮುರ್ಲಿ ಮೆಲ್ಲ ಹೇಳಿದ..ಮದುವೆ ಆಗುವುದು ನಾನು ನನಗೆಯೇ ಸಾಂಗ್ ಬೇಡ.. ನಿನಗೆ ಯಾಕೆ ಮಾರಾಯ ಈ ಸಾಂಗ್ ಎಲ್ಲಾ..
ಹುಡುಗಿ ತಂಗಿ ಹೇಳಿದ್ಲು.. ಇಲ್ಲ ನನ್ನ ಅಕ್ಕ ಒಳ್ಳೆಯ ಸಿಂಗರ್... ಅವಳು ಹಾಡ್ತಾಳೆ..
ನೋಡ ಮುರ್ಲಿ ಹುಡುಗಿ ಸಿಂಗರ್ ಅಂತೆ.. ಹಾಗಾದರೆ ಹಾಡ್ಲಿ ಅಲಾ.. ನಮಗೂ ಒಮ್ಮೆ ಸಂಗೀತ ಕೇಳಿದಂತೆ ಆಗ್ತದೆ ಅಂದೆ.. ಎಲ್ಲರಿಗೆ ಕೇಳುವಂತೆ ಜೋರಾಗಿ.
ಅವನು ಮೆಲ್ಲಗೆ.. ಆಯಿತು ಮಾರಾಯ ಏನಾದರೂ ಒಂದು ಮಾಡಿ ಸಾಯಿ.. ಅಂದ.
ನಾನು ಹೇಳಿದೆ - ಹಾನ್.. ಮುರ್ಲಿ ಹೇಳಿದ... ಸಾಂಗ್ ಹಾಡ್ಬೇಕಂತೆ..
ಆದರೆ ನನ್ನದೊಂದು ಕೋರಿಕೆ ಇದೆ...ನಿಮ್ಮ ಅಕ್ಕ ಹಾಡುವುದಾರೆ ದಯವಿಟ್ಟು Genda Phool ಹಾಡ್ಲಿ.. ಕೇಳ್ಲಿಕ್ಕೆ jolly ಆಗ್ತದೆ ಅದು.. ನಿಮ್ಮ ಅಕ್ಕನಿಗೆ ಹೇಳಿ ಪ್ಲೀಸ್.. ಅಂದೆ.
ಅವಳು ಅಕ್ಕನೊಡನೆ ಮಾತಾಡಿ ಹೇಳಿದಳು.. - ಅಂತಹ ಮರ್ಲ್ ಸಾಂಗ್ ಅಕ್ಕ ಹಾಡೋದಿಲ್ಲ ಅಂತೆ.. ಅವಳು Trained classical ಸಿಂಗರ್.. ಒಟ್ರಾಸಿ ಅಲ್ಲ ಅಂದಳು ಹುಡುಗಿ ತಂಗಿ.
ಅಪ್ಪ ನನ್ನನ್ನೇ ಮೇಲಿಂದ ಕೆಳಗೆ ನೋಡಿದರು.. ಮುಖದಲ್ಲಿ ಅದೇ expression..ಅವರ ಭಾವನೆಗಳಲ್ಲಿ ಅದೇ ಸಾಂಗ್.. "ನಿಂಗಿದು ಬೇಕಿತ್ತಾ ಮಗನೇ.. ವಾಪಸ್ಸು ಹೋಟೊಂಗು ಶಿವನೇ.."
ಇಂಪನ ಮತ್ತೆ ಅವಳಷ್ಟಕ್ಕೆ ನಗುತ್ತಿದ್ದಳು..
ಆಯಿತು ಮತ್ತೆ ಯಾವ ಹಾಡು ಹಾಡ್ತಾರೆ ಅಂತೆ ನಿಮ್ಮ ಅಕ್ಕ..
ಹುಡುಗಿ ತಂಗಿ ಹೇಳಿದಳು " ಒಂದು ಮುಂಜಾನೆ ಸೋನೆ ಮಳೆ..." ಭಾವಗೀತೆ ಹಾಡ್ತಾಳೆ ಅಕ್ಕ.
ದೊಡ್ಡಮ್ಮ ಹೇಳಿದರು.. ಆಯ್ತಮ್ಮ.. ಅದೇ ಹಾಡನ್ನು ಹಾಡು...
ಹುಡುಗಿ ಸುಶ್ರಾವ್ಯವಾಗಿ ಚೆನ್ನವೀರ ಕಣವಿಯವರ ಭಾವಗೀತೆ ಹಾಡಲು ಶುರು ಮಾಡಿದಳು..
" ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ..
ಸೋ..ಎಂದು ಶೃತಿ ಹಿಡಿದು ಸುರಿಯುತಿತ್ತು
ಅದಕೇ ಹಿಮ್ಮೇಳವನೆ ಸೂಸಿಪಹ ಸುಳಿಗಾಳಿ
ತೆಂಗು ಗರಿಗಳ ನಡುವೆ ನುಸುಳುತಿತ್ತು... "
ನಮ್ಮ ಸೈಡಿನ ನಾಲ್ಕೂ ಜನ.. ವಾವ್.. ಬಹಳ ಚೆನ್ನಾಗಿದೆಯಮ್ಮಾ.. ಬಹಳ ಚೆನ್ನಾಗಿದೆ..ಹೇಳಿದರು.ದೊಡ್ಡಮ್ಮ..ಅತ್ತೆ ಕೂಡ.. ನಿಜವಾಗಿಯೂ ಸರಸ್ವತಿಯೇ ಹಾಡಿದಂತಿತ್ತು.. ಅಂದರು. ಹಿಂದೆ ಅವರೇ ಹುಡುಗಿಯನ್ನು ಲಕ್ಷ್ಮೀ ತರಹ ಇದ್ದಾರೆ ಎಂದು ಹೇಳಿದ್ದರು. ಒಟ್ಟಿನಲ್ಲಿ ಅವರಿಗೆ ಹುಡುಗಿ ಹಿಡಿಸಿದೆ ಎಂದು ಗೊತ್ತಾಗ್ತ ಇತ್ತು.
ನಿಜವಾಗಿಯೂ ಹುಡುಗಿ ಬಹಳ ಮಾಧುರ್ಯವಾಗಿಯೇ ಹಾಡಿದ್ದಳು..
ಇಂಪನ ಕೂಡ ಕಣ್ಣಲ್ಲೇ ಹೇಳಿದಳು... ಅಣ್ಣಾ ಸೂಪರ್ ಅಲಾ.. ಎಂದು.
ನಾನು ಸಹ ಹುಡುಗಿಯ ಹಾಡಿಗೆ ನನ್ನದೂ ಒಂದು ಕಾಮೆಂಟ್ ಕೊಟ್ಟೆ.. ಹಾಡು ಬಹಳ ಚೆನ್ನಾಗಿತ್ತು.. ಆದ್ರೆ ಹಾಡಿನ ನಡುವೆ " ಶೃತಿ ಹಿಡಿದು ಸುರಿಯುತಿತ್ತು... "ಅಂತ ಒಂದು ಲೈನು ಬರುತ್ತೆ ನೋಡಿ.. ಅಲ್ಲಿ ಮಾತ್ರ ಲೈಟ್ ಆಗಿ ನಿಮ್ಮ ಶ್ರುತಿ ತಪ್ಪಿದ್ದು ನಾನು ಗಮನಿಸಿದೆ.. ಬಾಕಿ ಎಲ್ಲಾ ಓಕೆ.... ಅಂದೆ.
ಅಲ್ಲಿಯವರೆಗೆ ತಲೆ ತಗ್ಗಿಸಿಯೇ ಕುಳಿತಿದ್ದ... ತಲೆ ತಗ್ಗಿಸಿಯೇ ಹಾಡಿದ್ದ ಆ Trained ಸಿಂಗರ್ ಹುಡುಗಿ.. ಯಾರಿದು ಮರ್ರೆ ಅಂತಹ ಮಹಾನ್ ಸಂಗೀತ ವಿದ್ವಾನ್ ಎಂದು ತಲೆ ಎತ್ತಿ ಕೋಪದಿಂದ ನನ್ನನ್ನೇ ದುರುಗುಟ್ಟಿ ನೋಡಿದಳು...
ಓಹ್... ನಾನು ಏನೋ ತಪ್ಪು ಹೇಳಿರ್ಬೇಕು ಅಂತ ನನಗೆಯೇ Confirm ಆಯಿತು..
ನಾನು ರಪ್ಪನೇ ಟ್ರಾಕ್ ಚೇಂಜ್ ಮಾಡಿ... ಅಲ್ಲಾ ನನಗೆ ಹಾಗೇ ಅನಿಸಿತು... ಮತ್ತೆ ನಂಗೆ ಸ ಡೀಪಾಗಿ ಅಷ್ಟೇನು ಗೊತ್ತಿಲ್ಲ...ಟಿವಿಯಲ್ಲಿ ಜಡ್ಜ್ ಗಳು ಕಾಮನ್ ಆಗಿ ಇದೇ ಹೇಳ್ತಾರೆ ಅಲಾ.. ಹಾಗೇ ನಾನು ಸ ನನ್ನದೊಂದು ಇರ್ಲಿ ಅಂತ ಒಂದು ಕಾಮೆಂಟ್ ಕೊಟ್ಟದ್ದು... ಆದ್ರೂ ಸ ನೀವು ಭಯಂಕರ ಬಿಡಿ.. ನೀವು ಸರಿಗಮಪ.. ಇಂಡಿಯನ್ ಐಡಲ್ ಗೆ ಎಲ್ಲಾ ಹಾಡಬಹುದಾದ ಪ್ರತಿಭೆಯೇ ಹೌದು ಅಂದೆ...
ನನ್ನ ಮಾತಿಗೆ ಅಲ್ಲಿ ಯಾರದ್ದೂ ಸ ಲಕ್ಷ್ಯವೇ ಇಲ್ಲ..
ಮತ್ತೆ ಎಂತ ಒಬ್ಬ Trained ಸಿಂಗರ್ ಗೆ ನಾನೊಬ್ಬ ಬಾತ್ ರೂಮ್ ಸಿಂಗರ್ ಶ್ರುತಿ ಸರಿ ಇಲ್ಲ ಅಂತ ಬಾಯಿಗೆ ಬಂದ ಹಾಗೆ ಹೇಳಿದ್ರೆ ಸಿಟ್ಟು ಬರದೇ ಇರ್ತದ..
ಕೊನೆಗೆ ನಮ್ಮ ಅತ್ತೆ ಹೇಳಿದಳು... ಒಮ್ಮೆ ಹುಡುಗ ಹುಡುಗಿ ಪರಸ್ಪರ ಪರ್ಸನಲ್ ಮಾತಾಡಿ ಬಿಟ್ರೆ ಒಳ್ಳೆಯದು.. ಅವರಿಗೆ ಸ ಯಾವುದೇ ಡೌಟು ಇರ್ಬಾರ್ದು ಅಲಾ.. ಅಂದರು..
ಅದಕ್ಕೆ ಹುಡುಗಿಯ ತಾಯಿ ನಿರ್ಮಲ ಸ.. ಹೌದು ಹುಡುಗ ಹುಡುಗಿ ಒಮ್ಮೆ ಮಾತಾಡಿ ಬಿಟ್ರೆ ಒಳ್ಳೆಯದು ಕಣ್ರೀ.. ಅಂತ ಅವರ ಗಂಡನಿಗೆ ಅಂದರೆ ಹುಡುಗಿಯ ತಂದೆಗೆ ಹೇಳಿದರು..
ಹುಡುಗಿ ತಂದೆ ಕೂಡ ಆಯಿತು ಒಮ್ಮೆ ಮಾತಾಡಿ ಬಿಡಲಿ ಇಬ್ಬರೂ ಅಂದರು...
ಹುಡುಗಿಯ ತಂಗಿ ಅವಳ ಅಪ್ಪನಲ್ಲಿ ಹೇಳಿದ್ಲು.. ಅಕ್ಕನಿಗೆ ನರ್ವಸ್ ಆಗ್ತದೆ,ಮಾತಾಡುವಾಗ ಅವಳ ಜೊತೆ,ಅವಳಿಗೆ ಧೈರ್ಯಕ್ಕೆ ನಾನು ಸ ಇರ್ಲ ಅಪ್ಪ....
ಅದಕ್ಕೆ ನಾನು ನನ್ನ ಅಪ್ಪನ ಬಳಿ ಅಂದೆ - ಹಾಗೇ ನೋಡಿದ್ರೆ ನಮ್ಮ ಮುರ್ಲಿ ಸಹ ಅಂತಹ ಭಯಂಕರ ಧೈರ್ಯಶಾಲಿ ಏನಲ್ಲ.. ಅವನು ಸ ಒಟ್ರಾಸಿ ನರ್ವಸ್ ಆಗ್ತಾನೆ.. ನಾನು ಸ ಇರ್ಲಾ ಅವನೊಂದಿಗೆ .. ಅವನು ಮೊದಲೇ ಹೇಳಿದ್ದಾನೆ.. ನಾನು ಇದ್ರೆ ಅವನಿಗೆ ಧೈರ್ಯ ಅಂತ..
ಅದಕ್ಕೆ ಅಪ್ಪ ಅಂದ್ರು.. ಈಗ ನೀವು ಇರ್ತೀರಾ... ನೆಕ್ಸ್ಟ್ ಸಂಸಾರ ಮಾಡುವಾಗ..?!
ಒಮ್ಮೆಲೆ ಏನು ಹೇಳ್ಬೇಕು ಅಂತ ಗೊತ್ತಾಗ್ಲಿಲ್ಲ... ಏಕೆಂದರೆ ಅವರ ಮಾತಿನಲ್ಲಿ ಲಾಜಿಕ್ ಇತ್ತು..
ನಾನೇ ಮುರ್ಲಿಯ ಬಳಿ ಹೇಳಿದೆ..ಹೋಗು ಮುರ್ಲಿ... ಏನಾಗಲ್ಲ ಮಾತಾಡಿ ಬಾ... ಅವನಿಗೆ ಹುರಿದುಂಬಿಸಿದೆ.
ಆ ಸೈಡಲ್ಲಿ ತಂಗಿ ಅವಳ ಅಕ್ಕನಿಗೆ ಹುರಿದುಂಬಿಸುತ್ತಿದ್ದಳು..
ಕೊನೆಗೆ ಇಬ್ಬರೂ ಕುಳಿತಲ್ಲಿಂದ ಎದ್ದು ತಲೆತಗ್ಗಿಸುತ್ತಲೇ ಟೆರೇಸ್ ಮೇಲೆ ಮಾತಾಡಲು ಹೋದರು..
ಅವರಿಬ್ಬರು ಟೆರೇಸ್ ಮೇಲೆ ತಲೆ ತಗ್ಗಿಸಿಕೊಂಡು ಹೋಗುವುದನ್ನು ನೋಡಿದಾಗ.. ಇವರಿಬ್ಬರು ಏನು ಅಂತಹದ್ದು ಮಾತಾಡಬಹುದು ಎಂದು ಒಮ್ಮೆ ಅನ್ನಿಸಿತ್ತು...ಅಷ್ಟು ಮಾತ್ರವಲ್ಲ ನನಗೆ ಇದಕ್ಕೊಂದು ಮುರ್ಲಿಗೆ ಟ್ರೈನಿಂಗ್ ಕೊಡ್ಲಿಕ್ಕೆ ನೆನಪೇ ಆಗಿರ್ಲಿಲ್ಲ... ಇದನ್ನೊಂದು ನಾನು ಮರೆತೇ ಬಿಟ್ಟಿದ್ದೆ.
ಹುಡುಗ ಹುಡುಗಿ ಟೆರೇಸ್ ಮೇಲೆ ಮಾತಾಡ್ಲಿಕ್ಕೆ ಹೋದ ಮೇಲೆ.. ನಮ್ಮ ಪಾಳಯದವರು ಕೆಲವರು ಮನೆ ನೋಡ್ಲಿಕ್ಕೆ.. ತೋಟ ನೋಡ್ಲಿಕ್ಕೆ... ಅವರ ಗದ್ದೆ ನೋಡ್ಲಿಕ್ಕೆ.. ಹಟ್ಟಿಯಲ್ಲಿ ಎಷ್ಟು ದನ ಇದೆ..ಎಲ್ಲಾ ನೋಡ್ಲಿಕ್ಕೆ ಹೋದರು... ದೊಡ್ಡಮ್ಮ,ಅತ್ತೆ ಆ ಪಕ್ಷದ ಕೆಲವು ಹೆಂಗಸರೊಂದಿಗೆ ಸೇರಿಕೊಂಡು ಏನೇನೋ ಹರಟೆ ಮಾತಾಡಲು ಶುರು ಮಾಡಿದರು..
ನಾನು ಮತ್ತು ಇಂಪನ ಮನೆಯ ಹೊರಗೆ ಬಂದೆವು..
ಏನೇ ಇಂಪು... ಅತ್ತಿಗೆ ನಿನಗೆ ಓಕೆ ನಾ..
ನನಗೆ 200% ಓಕೆ ಅಣ್ಣ... ಅಂದಳು.
ಮತ್ತೆ ನಿಮ್ಮ ಆ ಪೆಕ್ರ ಅಣ್ಣನಿಗೆ ಸ ಓಕೆ ಆಗ್ಬಹುದಾ...ಕೇಳಿದೆ.
ಮುರ್ಲಿ ಅಣ್ಣ ಏನೋ ಓಕೆ ಹೇಳ್ಬಹುದು... ಆದರೆ ಹುಡುಗಿ ಓಕೆ ಹೇಳ್ಬಹುದಾ... ಅಷ್ಟು ಚಂದ ಇದ್ದಾರೆ.. ಅಷ್ಟು ಒಳ್ಳೆ ಸಿಂಗ್ ಮಾಡ್ತಾರೆ..ಅಂದಳು
ನಂಗೂ ಅದೇ ಡೌಟು... ಆದ್ರೆ ಒಳ್ಳೆಯ ಕೆಲಸ.. ದೊಡ್ಡ ಸಂಬಳ ಎಲ್ಲಾ ಉಂಟಲ್ಲಾ.. ಹಾಗಾಗಿ ಏನೋ ಒಂದು ಆಗುತ್ತೆ ಬಿಡು ಅಂದೆ.
ಅಣ್ಣ... ಆ ಹುಡುಗಿ ತಂಗಿ ಸ ಚೆನ್ನಾಗಿಯೇ ಇದ್ಳು ಅಲಾ... ಮತ್ತೆ ಅವಳು ನಿನ್ನತ್ರ ಬಾರೀ ನೈಸ್ ಆಗಿ ಮಾತಾಡ್ತಾ ಇದ್ದದ್ದನ್ನು ನಾನು ಸಹ ನೋಡಿದೆ.. ಎಂದು ಹೇಳಿ ಪುಳುಕ್ಕನ್ನೇ ನಕ್ಕಳು..
ಹೇಯ್... ಹೋಗು ಮರ್ರೆ ನೀನೊಂದು.. ಅಂತಹದ್ದೇನು ಇಲ್ಲ... ಎಂದು ಅವಳ ಮಾತಿನತ್ತ ದಿವ್ಯ ನಿರ್ಲಕ್ಷ್ಯ ತೋರಿದೆ.
ನಂತರ ಇಂಪನಳ ಮೊಬೈಲ್ ಗೆ ಒಂದು ಕಾಲ್ ಬಂತು.ಅವಳು ಮಾತಾಡುತ್ತಾ ಅಲ್ಲಿಯೇ ಸೈಡಿಗೆ ಹೋದಳು..
ನಾನು ಅಲ್ಲೇ ಇದ್ದ ಅವರ ಮನೆಯ ಬಾವಿಯನ್ನೇ ನೋಡುತ್ತಾ ನಿಂತೆ..
ಬಹಳ ದೊಡ್ಡದಾದ ಬಾವಿ ಅದು.
ಅದನ್ನೇ ನೋಡುತ್ತಿದ್ದೆ.. ಎಷ್ಟು ಆಳ ಇರಬಹುದು ಎಂದು.
ಒಂದೆರಡು ತೆಂಗಿನಕಾಯಿ ನೀರಿನಲ್ಲಿ ಬಿದ್ದು ಅಲ್ಲೇ ತೇಲುತ್ತಿತ್ತು..
ಹಿಂದಿನಿಂದ ಯಾರೋ ಹಾಯ್... ಎಂದು ಹೇಳಿದ ಹಾಗೆ ಆಯಿತು.
ನೋಡಿದರೆ ಅವಳೇ.. ಹುಡುಗಿಯ ತಂಗಿ..
ನಾನು ಸಹ ಹಾಯ್.. ಅಂದೆ.
ಮತ್ತೆ ಏನು ವಿಶೇಷ... ಅಂದಳು.
ಏನಿಲ್ಲ...ಈ ಬಾವಿಗೆ ಹಾರಿದ್ರೆ Confirm ಪ್ರಾಣ ಹೋಗ್ಬಹುದಾ ಕೇಳಿದೆ.
ಯಾಕೆ... ನಿಮ್ಗೆ ಅರ್ಜೆಂಟಾಗಿ ಹಾರ್ಲಿಕ್ಕೆ ಇತ್ತಾ ... ಕೇಳಿದಳು.
ಅಲ್ಲ ಸುಮ್ನೆ ಕೇಳಿದ್ದು... ತುಂಬಾ ಡೀಪ್ ಉಂಟಲ್ಲಾ..
ಹೌದು ಡೀಪ್ ಇದೆ... ವರ್ಷ ಪೂರ್ತಿ ನೀರು ಇರ್ತದೆ ಅಂದಳು.
ಅಲಾ.. ಅಂದ ಹಾಗೇ ನನಗೆ ನಿಮ್ಮ ಅಕ್ಕನ ಹೆಸರೇ ಗೊತ್ತಾಗ್ಲಿಲ್ಲ ನೋಡಿ... ಏನು ಅವರ ಹೆಸರು ಅಂದೆ.
ಅವಳ ಹೆಸರು ಚಂಚಲ...
ಅಮ್ಮನ ಹೆಸರು ನಿರ್ಮಲ.. ಅಕ್ಕನ ಹೆಸರು ಚಂಚಲ.. ಹಾಗಾದರೆ ನಿಮ್ಮ ಹೆಸರು confirm ಕಮಲ,ಅಮಲ ಇಲ್ಲ ಸುಫಲ ಅಲ್ವಾ ..? ಅಂದೆ
ಅಲ್ಲ...ನಾನು ವಿಮಲ.. ಅಂದಳು.
ಓಹ್.. ಕಣ ಕಣವೂ ಕೇಸರಿ.... ಅಂದೆ.
ಹಾಗಂದ್ರೆ..
ಏನಿಲ್ಲ.. ವಿಮಲ್ ಪಾನ್ ಮಸಾಲ ಜಾಹೀರಾತು ನೆನಪಾಯಿತು ನೋಡಿ ಅಂದೆ.
ಅವಳು ನಕ್ಕಳು...
ಮತ್ತೆ ನೀವು ಏನು ಓದ್ತಾ ಇದ್ದೀರಾ..ಕೇಳಿದೆ.
Msc final year ಅಂದಳು.
ಮತ್ತೆ ಕಾಲೇಜ್, studies ಬಿಟ್ರೆ ಇನ್ನೇನು ಮಾಡ್ತೀರಾ..i mean Hobbies ಏನು?
Hobbies ಅಂತ ಏನಿಲ್ಲ...ಡೈಲಿ ಧಾರಾವಾಹಿ ನೋಡ್ತೇನೆ ಅಷ್ಟೇ..
ಧಾರಾವಾಹಿ ನೋಡುವುದು ಸ ಒಂದು hobby ಯ ಮರ್ರೆ?..ನನಗೆ ನಾನೇ ಕೇಳಿಕೊಂಡೆ.
ಯಾವುದು ಅದು ಸ್ನೇಕ್ ಗಳು ಇರುವ ಧಾರವಾಹಿಯಾ.. ಕೇಳಿದೆ.
ಸ್ನೇಕ್..? ಅದು animal planet ಅಲ್ವಾ..
ಅದು ಅಲ್ಲಾ... ಸ್ನೇಕ್ ಮನುಷ್ಯ ಮಿಕ್ಸ್ ಆಗಿ ಒಂದು ಧಾರಾವಾಹಿಯೇ ಬರ್ತದೆ ಅಲಾ... ಅದರಲ್ಲಿ ಪೈಟಿಂಗ್ ಸ ಇರ್ತದೆ... ಡ್ಯಾನ್ಸ್ ಕೂಡ ಇರ್ತದೆ.. ಅದು ಹೇಳಿದ್ದು ನಾನು.
ಒಹ್ ಅದಾ.. Naagin 1,2,3,4..ಅಂದಳು
ಅದರಲ್ಲಿ ಸ ನಾಲ್ಕು ಸೀಸನ್ ಉಂಟಾ ಮರ್ರೆ...ಅಂದೆ.
ಹೌದು ಮತ್ತೆ.....ಅದರಲ್ಲಿ ಹಾವುಗಳೇ ಹೀರೋ..ಹಾವುಗಳೇ ಹೀರೊಯಿನ್...ಅವುಗಳು ಸತ್ರೆ ಸ ಮತ್ತೆ ಮತ್ತೆ ಹುಟ್ಟಿ ಬರ್ತಾನೆ ಇರ್ತದೆ..ಅಂದಳು..
ಇದಕ್ಕೊಂದು ಕೊನೆ ಅನ್ನೊದೇ ಇಲ್ವಾ... ಅಂದೆ..
ಯಾವುದಕ್ಕೆ ಹಾವು ಸೀರಿಯಲ್ ಗಾ?.. ಮತ್ತೆ ಮತ್ತೆ ಹುಟ್ಟಿ ಬಂದ್ರೆ ಮತ್ತೆ ಮತ್ತೆ ಸೀರಿಯಲ್ ಮಾಡ್ತಾನೆ ಇರ್ಬಹುದು ಅಲಾ.. ಅಂದಳು...
ಓಹ್ ಆ ತರಹ ಎಲ್ಲಾ ಲಾಜಿಕ್ ಅಲಾ.. ಮತ್ತೆ ನೀವು ಹಿಂದಿ ಸೀರಿಯಲ್ ಮಾತ್ರವ ನೋಡುವುದು.. ನಮ್ಮ ಮುದ್ದು ಲಕ್ಷ್ಮಿ ಎಲ್ಲಾ ನೋಡುವುದಿಲ್ಲವಾ... ಕೇಳಿದೆ.
ಮುದ್ದು ಲಕ್ಷ್ಮಿ ಸಹ ಡೈಲಿ ನೋಡ್ತೇವೆ,ನಮ್ಮ ಮನೆಯಲ್ಲಿ ಎಲ್ಲರೂ ನೋಡ್ತಾರೆ.... ಆ ಡಾಕ್ಟರ್ ಒಂದು ಎಂತಹ ಜನ ಮರ್ರೆ.. ಅವಳಿಗೆ ಹಾಗೇ ಮಾಡ್ಬಾರ್ದಿತ್ತು... ಪಾಪ ಮುದ್ದು ಲಕ್ಷ್ಮಿ..ಅಂದಳು.
ಅವಳನ್ನು ನೋಡುವಾಗ ಮುದ್ದು ಲಕ್ಷ್ಮಿ ಅವಳ ಪಕ್ಕದ ಮನೆಯವಳೋ.. ಅಥವಾ ಅವಳ ಯಾರೋ ಸಂಬಂಧಿಕಳೋ.. ಪ್ರೆಂಡೋ ಅನ್ನೋ ತರಹ ಫೀಲ್ ಆಯಿತು ಒಮ್ಮೆ ನನಗೆ...
ಹೌದು.. ಹೌದು.. ಪಾಪ ಮುದ್ದು ಲಕ್ಷ್ಮಿಗೆ ಕಷ್ಟವೇ... ಅಂದೆ.
ನೀವು ಸ ಆ ಸೀರಿಯಲ್ ನೋಡ್ತೀರಾ ಕೇಳಿದಳು.
ನೋಡ್ಬೇಕು ಅಂತ ನೋಡುವುದಿಲ್ಲ.. ಆದರೆ ಮನೆಯವರು ನೋಡುವಾಗ ಹಾಗೇ ನೋಡಿ ಹೋಗ್ತದೆ ಅಂದೆ..
ಹೌದಾ.. ಅದ್ರೆ ಸ ನಂಗೆ ಮುದ್ದು ಲಕ್ಷ್ಮಿ ಕಷ್ಟ ನೋಡುವಾಗ ಮಾತ್ರ ಬಾರೀ ಬೇಜಾರ್ ಆಗ್ತದೆ ಆಯ್ತಾ.. ಪಾಪ ಅವಳು.. ಒಬ್ಬಳೇ ಅಂತ ಎಷ್ಟು ಕಷ್ಟ ಪಡುವುದು ಅಲಾ.. ಅಂದಳು.
ನೋಡಿ... ಹಾಗೆ ಹೇಳ್ಬೇಡಿ.. ಮುದ್ದು ಲಕ್ಷ್ಮಿಯಿಂದ ನಮಗೆ ಒಂದು ಒಳ್ಳೆಯ ಜೀವನ ಪಾಠ ಇದೆ.. ಅಂದೆ
ಹೌದಾ.. ಏನದು? ಕೇಳಿದಳು.
ನೋಡಿ... ನಮಗೆ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಮುದ್ದು ಲಕ್ಷ್ಮಿಯ ಕಷ್ಟದ ಮುಂದೆ ನಮ್ಮ ಕಷ್ಟ ಏನೂ ಅಲ್ಲ ಅಂತ ನಾವು ತಿಳ್ಕೊಂಡ್ರೆ.. ಆವಾಗ ನಮಗೆ ಜೀವನದಲ್ಲಿ ಯಾವುದೂ ಸಹ ಕಷ್ಟ ಅಂತ ಅನ್ನಿಸುವುದೇ ಇಲ್ಲ... ಅಂದೆ.
ಅವಳು ನಕ್ಕಳು..
ನಾನು ಕೇಳಿದೆ... ಅಲಾ ಈಗ ಮಾತು ಬಾರದ ಆ ಇಬ್ಬರು ಮಾತಾಡ್ಲಿಕ್ಕೆ ಅಂತ ಟೆರೇಸ್ ಮೇಲೆ ಹೋಗಿದ್ದಾರೆ ಅಲಾ.. ನಿಮ್ಮ ಅಕ್ಕ ಹಾಗೂ ನನ್ನ ಅಣ್ಣ... ಅವರು ಈಗ ಎಂತ ಮಾತಾಡ್ತಾ ಇರ್ಬಹುದು .... ಅಂದೆ.
ಮತ್ತೆ ಎಂತ ಮಾತಾಡ್ತಾರೆ... ಅದೇ ಚಾ ಆಯಿತಾ.. ಕಾಫಿ ಆಯಿತಾ.. ಅಷ್ಟೇ.. ಅಂದಳು.
ಇಬ್ಬರ ಚಾ.. ಕಾಫಿ ಕೆಳಗೆ ಆಗಿದ್ದು ಅವರಿಗೆಯೇ ಗೊತ್ತಿದೆ ಅಲ್ವಾ ... ಮತ್ತೆ ಎಂತ ಪುನಃ ಮೇಲೆ ಹೋಗಿ ಅವರು ಅದನ್ನೇ ಕೇಳುವುದು... ನನಗೆ ಅನಿಸುತ್ತೆ ಬಹುಶಃ ಅವರು ಇಬ್ಬರೂ ನೆಲ ನೋಡುತ್ತಾ.. ಕಾಲ್ಬೆರಳಲ್ಲಿ.. ಟೆರೇಸ್ ಮೇಲೆ ಈಗ ರಂಗೋಲಿ ಬಿಡಿಸ್ತಾ ಇರ್ಬಹುದು... ಇಲ್ಲ ಕೆರೆದು ಕೆರೆದು ನಿಮ್ಮ ಮನೆ ಟೆರೇಸ್ ಒಟ್ಟೆ ಮಾಡಿ ಹಾಕ್ಬಹುದು ಕೊನೆಗೆ ಅಷ್ಟೇ.. ಅಂದೆ.
ಅದಕ್ಕವಳು.. ಖಂಡಿತಾ... ಅವರು ಹಾಗೇ ಮಾಡಿ ಟೈಂ ವೇಸ್ಟ್ ಮಾಡಿ ಬಿಡುವುದರಲ್ಲಿ ಡೌಟೇ ಇಲ್ಲ ಅಂದಳು ಜೋರಾಗಿ ನಗುತ್ತಾ..
ನಂತರ ನಾವಿಬ್ಬರು ಬಾವಿ ಕಟ್ಟೆಯಿಂದ ಮನೆಯೊಳಗೆ ತಲುಪಿದೆವು.
ಚಂಚಲ ಮತ್ತು ಮುರ್ಲಿದ್ದು ಏನೋ ಒಂದು ಮಾತುಕತೆ ಸ ಆಗಿ ಹೋಯಿತು.
ನನ್ನ ಅಪ್ಪ ಮತ್ತು ದರ್ಶನ್ ದೊಡ್ಡಪ್ಪ ಹೆಣ್ಣು ಕಡೆಯವರಿಗೆ ಹೇಳಿದರು... ನಮಗೆ ಹೆಣ್ಣು ಓಕೆ.. ನಿಮ್ಮ ಅಭಿಪ್ರಾಯ ಏನೆಂದು ಆದಷ್ಟು ಬೇಗ ತಿಳಿಸಿ ಬಿಡಿ...
ಆ ನಂತರ ನಾವು ಕಾರ್ ಹಿಡಿದು.. ಮನೆ ಸೇರಿಕೊಂಡೆವು..
ರಾತ್ರಿ ಮನೆಯಲ್ಲಿಯೇ ಇದ್ದೆ.
ಅಪ್ಪನಿಗೆ ದರ್ಶನ್ ದೊಡ್ಡಪ್ಪನ ಕಾಲ್ ಬಂತು.
ಅಪ್ಪ ಜೋರು ಧ್ವನಿಯಲ್ಲಿ ದೊಡ್ಡಪ್ಪನೊಂದಿಗೆ ಮಾತಾಡುತ್ತಿದ್ದದ್ದು ನನಗೆ ಸ ಕೇಳುತ್ತಿತ್ತು...
ಅಪ್ಪ ಹೇಳುತ್ತಿದ್ದರು....
" - ಏನು ಗುಡ್ ನ್ಯೂಸಾ..?
ಹೌದಾ.. ಹುಡುಗಿ ಕಡೆಯವರು ಒಪ್ಪಿ ಬಿಟ್ರಾ..
ಒಳ್ಳೆಯದು ಆಯ್ತು ಮರಾಯ.. ಒಳ್ಳೆ ಹುಡುಗಿ... ಒಳ್ಳೆಯ ಮನೆತನ..
.. ಏನು ಇನ್ನೊಂದು ಗುಡ್ ನ್ಯೂಸಾ..
ಏನು..?
ನೀಲುವಿಗೆ ಅವರ ಚಿಕ್ಕ ಮಗಳನ್ನು ಕೊಡ್ಲಿಕ್ಕೆ ಇಂಟ್ರೆಸ್ಟ್ ತೋರಿಸ್ತಾ ಇದ್ದರಾ..?
ಬೇಡ.. ಬೇಡ... ಸುಮ್ಮನೆ ಲೈಫ್ ಹಾಳು ಮಾಡುವುದು ಬೇಡಾ ಮರಾಯ...
ನಾನು ಹೇಳಿದ್ದು ನೀಲು ಲೈಫು ಅಲ್ಲಾ..
ಇವನಿಗೆ ಆ ಹುಡುಗಿಯನ್ನು ಮದುವೆ ಮಾಡಿಸಿ ಅನ್ಯಾಯವಾಗಿ ಆ ಹುಡುಗಿ ಲೈಫ್ ನಾವು ನಮ್ಮ ಕೈಯಾರೆ ಹಾಳು ಮಾಡುವುದು ಬೇಡ ಅಂತ ನಾನು ಹೇಳಿದ್ದು.
ಇಲ್ಲ... ಇಲ್ಲ... ಅವನಿಗೆ ಕೆಲಸ ಸಿಗುವವರೆಗೆ ಅವನಿಗೆ ಮದುವೆಯ ಪ್ರಶ್ನೆಯೇ ಇಲ್ಲ.... ನನಗಂತು ಅವನಿಗೆ ಸದ್ಯಕ್ಕೆ ಕೆಲಸ ಸಿಗುವ ಯಾವುದೇ ಲಕ್ಷಣಗಳು ಗಾಢವಾಗಿ ಗೋಚರಿಸುತ್ತಿಲ್ಲ.. ಆದ್ದರಿಂದ ಅವನ ಮದುವೆ ಬಗ್ಗೆ ಅವರತ್ರ ಎಲ್ಲ ಮಾತಾಡ್ಲಿಕ್ಕೆ ಹೋಗ್ಬೇಡ... ಅನ್ಯಾಯವಾಗಿ ನಾವು ಒಬ್ಬಳು ಹೆಣ್ಣು ಮಗಳ ಬಾಳು ಹಾಳು ಮಾಡುವುದು ಬೇಡ..
ಫೋನ್ ಕಟ್ ಮಾಡಿದ ಅಪ್ಪ ನನ್ನತ್ತ ಒಮ್ಮೆ ವ್ಯಂಗ್ಯವಾಗಿ ನೋಡಿ ಬಾತ್ ರೂಮ್ ಕಡೆಗೆ ಹೋದರು. .
ಅಪ್ಪ ಹೇಳಿದ್ದು ಯಾವುದೂ ಸಹ ಅಷ್ಟೂ ಬೆಚ್ಚ (ಕೋಪ) ತರಿಸ್ಲಿಲ್ಲ.. ಆದ್ರೆ ನನ್ನಿಂದಾಗಿ ಆ ಹುಡುಗಿ ಲೈಫು ಹಾಳಾಗುವುದು ಬೇಡ... ಅದರಲ್ಲೂ ಅನ್ಯಾಯವಾಗಿ ಹಾಳಾಗುವುದು ಬೇಡ ಎಂದು ಒತ್ತಿ ಒತ್ತಿ ಹೇಳಿದ ಸಾಲು ವಿಪರೀತ ಸಿಟ್ಟು ತರಿಸಿತು.. ನಾನೇನು ಮದುವೆ ಆಗ್ತೇನೆ ಎಂದು ಹೇಳಿದ್ನಾ... ನನಗಂತು ಅದರಲ್ಲಿ ಇಂಟ್ರೆಸ್ಟೇ ಇಲ್ಲ.. ಸುಮ್ಮನೆ ಇವರು ನನ್ನ ಮರ್ಯಾದೆ ತೆಗೆಯುವುದು...ಅಂತ ಕೋಪ ಬಂತು..
ಅದೇ ಬೆಚ್ಚದಲ್ಲಿ ಟಿವಿ ಹಾಕಿದೆ..
ಟಿವಿಯಲ್ಲಿ ಪಾಪ ಮುದ್ದು ಲಕ್ಷ್ಮಿ ಆಳ್ತಾ ಇದ್ಳು..
ಶೇ.. ಇವಳ ಕಷ್ಟದ ಮುಂದೆ ನಮ್ಮದೆಲ್ಲ ಅವಮಾನ- ಅಪಮಾನ ಏನು ಅಲ್ಲ.. ಅಂತ ನನ್ನ ಮನಸ್ಸಿಗೆ ನಾನೇ ತಕ್ಕ ಮಟ್ಟಿಗೆ ಧೈರ್ಯ ತಂದುಕೊಂಡೆ.
ಮೊಬೈಲ್ ಗೆ ಒಂದು ಮೆಸೇಜ್ ಬಂತು.
ಓಪನ್ ಮಾಡಿ ನೋಡಿದೆ.. ಅದು ಮುರ್ಲಿಯ ಮೆಸೇಜ್.
ಮೆಸೇಜ್ ಓದಿದೆ - ಮನೆಗೆ ಬಾರಾ ನೀಲು.. ಮನೆಯಲ್ಲಿ ಟೀ ಮಾಡಿದ್ದಾರೆ.. ಅಮ್ಮ ಕರೀತಾ ಇದ್ದಾರೆ ನಿನ್ನನ್ನು .. ಟೀ ಕುಡೀಲಿಕ್ಕೆ ಬರ್ಬೇಕಂತೆ.. ಆದ್ರೆ ವಿಷಯ ಎಂತ ಗೊತ್ತುಂಟಾ.. ವಿಮಲ ಮಾಡಿದ ದೇವಗಿರಿ ಚಾಹ ಹುಡಿದ್ದು ಟೀ ಅಲ್ಲಾ ಆಯ್ತಾ ಇದು.. ಮಾಮಾಲಿ ಕಣ್ಣನ್ ದೇವನ್ ಚಾಹ ಹುಡಿದ್ದು...ಅಲ್ಲಿಯ ಚಹಾದಂತೆ ಭಯಂಕರ ಕಿಕ್ ಎಲ್ಲಾ ಇಲ್ಲ.. ಆಗ್ಬಹುದು ಅಲಾ .. 😜🤭
ಮಾರಿ.. ಕಿಂಡಲ್ ಮಾಡ್ತಾ ಇದ್ದಾನೆ.. ಅವನಿಗೆ ಅಲ್ಲಿ ಹುಡುಗಿ ಮನೆಯಲ್ಲಿ ಮಾತಾಡ್ಲಿಕ್ಕೆ ಬಾಯಿ ಬರ್ಲಿಲ್ಲ... ಇಲ್ಲಿ ಈಗ ಮೆಸೇಜ್ ಮಾಡಿ ಇಷ್ಟುದ್ದ ಮಾತಾಡ್ತಾನೆ.. ಮೆಸೇಜ್ ಕೊನೆಯಲ್ಲಿ ಮಕ್ಕರ್ ಮಾಡುವ ಇಮೋಜಿ ಬೇರೆ ಕೇಡು..
ಸಾಯ್ಲಿ.. ಕಣ್ಣನ್ ದೇವನ್ ಟೀ ಆದ್ರೂ ಕುಡಿದು ಬರುವ ಅಂತ ನಮ್ಮ ಮನೆಯ ಕಾಂಪೌಂಡ್ ಗೇಟು ತೆಗೆದು ದರ್ಶನ್ ದೊಡ್ಡಪ್ಪನವರ ಮನೆಗೆ ನಡೆಯುತ್ತಾ ಹೋದೆ....
ನಡೆಯುವಾಗ ನನಗೆ ಗೊತ್ತಿಲ್ಲದೆಯೇ ಈ ಹಾಡೊಂದೇ ಅತಿಯಾಗಿ ನೆನಪಾಗಿತ್ತು...
" ನಿಂಗಿದು ಬೇಕಿತ್ತಾ ಮಗನೆ..
ವಾಪಸ್ಸು ಹೊಂಟೋಗು ಶಿವನೇ "
.....................................................................................
#ನೀಲಮೇಘ 💙
Ab Pacchu
moodubidire

Comments
Post a Comment