ದೇವರು ಕೊಟ್ಟ ಅಣ್ಣ


ಕೈಗೆ ಒಂದು ನೈಫ್ ಕೊಟ್ಟು ನೀನು ಇದರಲ್ಲಿ ಏನು ಮಾಡುತ್ತೀಯಾ... ಎಂದು ಯಾರಾದರೂ ಕೇಳಿದರೆ,


ಕೆಲವರು ತರಕಾರಿ ಕಟ್ ಮಾಡುತ್ತೇನೆ,ಇನ್ನು ಕೆಲವರು ಕೊತ್ತಂಬರಿ ಸೊಪ್ಪು ಕಟ್ ಮಾಡುತ್ತೇನೆ ಎಂದು ಹೇಳಬಹುದು, ನಾನಾದರೆ ಸೇಬು ಕಟ್ ಮಾಡಿ ಕೊಳ್ಳುತ್ತೇನೆ ಎಂದು ಹೇಳಬಲ್ಲೆ..


ಆದರೆ ಅವನು..?


ಕುತ್ತಿಗೆ ಕೊಯ್ಯುತ್ತೇನೆ.. ಎಂದೇ ಹೇಳುತ್ತಿದ್ದ!!!


ಅವನು ಹಾಗೇ ಮಾಡುವವನೇ,perfect murder ಒಂದನ್ನು ಬಿಟ್ಟು ಎಲ್ಲವನ್ನೂ ಮಾಡಿದ್ದ ಆತ! 


ಹೆಸರು ಅರ್ಜುನ್!

ನನ್ನ ಅಪ್ಪನ ಎರಡನೇ ಹೆಂಡತಿಯ ಮಗ!!


ಸಂಬಂಧ ಅಂತ ಬಂದಾಗ ಅವನು ನನಗೆ ಅಣ್ಣನೇ ಆಗುತ್ತಾನೆ. ಆದರೆ ನಾನೆಂದೂ ಅವನನ್ನು ಅಣ್ಣ ಎಂದು ಒಪ್ಪಲಾರೆ,ಸ್ವೀಕರಿಸಲಾರೆ! 


ಮಹಾಭಾರತದಲ್ಲಿ ಒಬ್ಬ ಅರ್ಜುನ ಇದ್ದ. ಅವ ಧರ್ಮದ ಪರವಾಗಿ ಇದ್ದ.


ಆದರೆ ಈ ಅರ್ಜುನ್ ಧರ್ಮ ಒಂದನ್ನು ಬಿಟ್ಟು ಬಾಕಿ ಎಲ್ಲದರ ಪರವಾಗಿ ಇದ್ದ. ಬರೀ ಇರಲಿಲ್ಲ,ಊರಲ್ಲಿ ಕೆಟ್ಟ ಕೆಲಸ ಅಂತ ಯಾವುದೇ ಬಂದರೆ ಅದರಲ್ಲಿ ಮೊದಲು ಇರುತ್ತಿದ್ದುದು ಇವನೇ.


ಕಳ್ಳತನ,ಕಿಡ್ನಾಪ್,ಅತ್ಯಾಚಾರ,ಸುಲಿಗೆ,ಗಾಂಜಾ,ಡ್ರಗ್ಸ್,ದರೋಡೆ... ಹೀಗೆ ಕೊಲೆ ಒಂದನ್ನು ಬಿಟ್ಟು ಎಲ್ಲಾ ಮಾಡಿದ್ದ.ಜೈಲಿಗೂ ಕೂಡ  ಹೋಗಿದ್ದ.


ಆದರೆ ನಾನು ಎಂದಿಗೂ ಜೈಲಿಗೂ ಹೋದವನಲ್ಲ.ಯಾವುದೇ  ಕೊಲೆಯನ್ನೂ ಮಾಡಿದವನಲ್ಲ. ಆದರೆ ಸಾವು?


ನನ್ನಿಂದ ಕೊಲೆ ಆಗಿರಲಿಲ್ಲ ನಿಜ,ಆದರೆ ನನ್ನಿಂದಾಗಿಯೇ ಸಾವು ಸಂಭವಿಸಿತ್ತು!


ಒಂದಲ್ಲ, ಎರಡು!! ನನ್ನ ಕಾರಣದಿಂದಾಗಿ ಇಬ್ಬರು ಇಹಲೋಕ ಸೇರಿದ್ದರು. ಒಂದು ನನ್ನ ಅಪ್ಪ ಮತ್ತೊಂದು ನನ್ನ ಅಮ್ಮ!


ಆದರೆ ನಾನು ಕೊಲೆಗಾರ ಅಲ್ಲ,ಎಲ್ಲವೂ ವಿಧಿಯ ಲೀಲೆ.ನಾನು ಗೊತ್ತಿಲ್ಲದೆ ಮಾಡಿದ ಸಣ್ಣ ತಪ್ಪಿನಿಂದಾಗಿ ಆಕಸ್ಮಿಕವಾಗಿ ಜಾರಿ ಬಿದ್ದ ಅಮ್ಮ ಅಪ್ಪ ಇಬ್ಬರೂ ತಲೆ ಹೊಡೆದುಕೊಂಡು ಸತ್ತು ಹೋಗಿದ್ದರು! ನಾನಾಗ ತುಂಬಾ ಚಿಕ್ಕವ. ಏಳನೇ ತರಗತಿಯ ಹುಡುಗ. ಹೆಚ್ಚು ಕಡಿಮೆ ಹನ್ನೆರಡು ವರ್ಷ.


ಅರ್ಜುನ್ ಗೆ ಹೆಚ್ಚೆಂದರೆ ವಯಸ್ಸು 30 ಆಗಿರಬಹುದು. ನನಗಿಂತ ತುಂಬಾ ದೊಡ್ಡವ. ಆದರೆ ಅವನನ್ನು ನಾನು ಅಣ್ಣ ಎಂದು ಎಂದಿಗೂ ಬಾಯಿಬಿಟ್ಟು ಕೂಡ ಕರೆದೇ ಇಲ್ಲ. ಅವ ನನ್ನ ಒಡ ಹುಟ್ಟಿದವ ಅಲ್ಲ. ಅವನಾಗಲಿ ಅವನ ತಾಯಿ ಆಗಲಿ ನಮ್ಮೊಂದಿಗೆ ಇದ್ದವರಲ್ಲ.


ನಮ್ಮಿಬ್ಬರನ್ನು ಹುಟ್ಟಿಸಿದ ಅಪ್ಪ ಕೂಡ ಹೆಚ್ಚಾಗಿ ಅವರ ಮನೆಯಲ್ಲಿಯೇ ದಿನ ಕಳೆದಿದ್ದ,ಕೊನೆಗೊಮ್ಮೆ ಸಾಯುವವರೆಗೂ.


ಅಪ್ಪ ಮನೆಗೆ ಅಂತ ಬರುತ್ತಿದ್ದದ್ದು ಅಮ್ಮನ ಬಳಿಯಿಂದ ಕುಡಿಯುವುದಕ್ಕಾಗಿ ಹಣ ಕೇಳಲು, sorry.. ಹಣ ಕಸಿದು ಕೊಳ್ಳಲು ಮಾತ್ರ! ಅಪ್ಪ ಬಂದಾಗಲೆಲ್ಲ ಅಮ್ಮನಿಗೆ ಸುಮ್ಮನೆ ಹೊಡೆಯುತ್ತಿದ್ದ. ಅಂತಹ ಅಪ್ಪನ ಇನ್ನೊಬ್ಬಳು ಹೆಂಡತಿಯ ಮಗನೇ ಈ ಅರ್ಜುನ್. 


ಅಪ್ಪ ಅಮ್ಮನನ್ನು ಕಳೆದುಕೊಂಡ ನಾನು ಹೇಗೆ ಒಬ್ಬ ಅನಾಥನೋ ಹಾಗೇ ಅವನು ಕೂಡ ಎಲ್ಲರನ್ನೂ ಕಳೆದು ಕೊಂಡ ಒಬ್ಬ ಅನಾಥನೇ.


ಇಬ್ಬರ ತಂದೆ ಒಬ್ಬರೇ ಆದುದರಿಂದ, ತಂದೆ ತೀರಿಕೊಂಡಾಗ ಅವನು ಅನಾಥ ಆಗಿರಲಿಲ್ಲ. ಮುಂದೆ ನಾನು ಹೇಗೆ ನನ್ನ ತಾಯಿಯನ್ನು ಕಳೆದುಕೊಂಡೆನೋ ಹಾಗೇ ಅವನು ಕೂಡ ಅವನ ತಾಯಿಯನ್ನು ಕಳೆದುಕೊಂಡಾಗ ನನ್ನಂತೆಯೇ ಸಂಪೂರ್ಣವಾಗಿ ಅನಾಥನೇ ಆಗಿ ಹೋಗಿದ್ದ.


ಆದರೂ ನಾವಿಬ್ಬರು ಎಂದಿಗೂ ಒಟ್ಟಿಗೆ ಆದವರಲ್ಲ. 


ಅರ್ಜುನ್ ಸಿಕ್ಕಿದಾಗಲೆಲ್ಲ ಹೇಳುತ್ತಿದ್ದ ನೀನು ನನ್ನ ಜೊತೆ ಸೇರು, ನಿನಗೆ ಕೂಡ ಯಾರಿಲ್ಲ,ಆರಾಮಾಗಿ ದುಡ್ಡು ಮಾಡಬಹುದು,ಸುಖವಾಗಿ ಇರಬಹುದು,ನನಗೆ ಸುಲಭವಾಗಿ ಹಣ ಮಾಡುವ ಹಲವು ದಾರಿಗಳು ಗೊತ್ತಿವೆ.. ಎಂದು.


ನಾನು ಅನಾಥನೇ ಇರಬಹುದು ಆದರೆ ನನಗೆ ಅರ್ಜುನ್ ನ ದಾರಿ ಒಗ್ಗುವುದಿಲ್ಲ.ಕಷ್ಟ ಆದರೂ ಪರವಾಗಿಲ್ಲ ನನಗೆ ಒಂದು ಹೊತ್ತು ದುಡಿದೇ ತಿನ್ನುವ ನೆಮ್ಮದಿಯ ಬಾಳು ಒಂದು ಬೇಕಿತ್ತು. 


ವರ್ಷಗಳು ಉರುಳಿದವು.ನನಗೆ  ವಯಸ್ಸು ಇಪ್ಪತ್ತೈದು ಆಯಿತು. ಅಲ್ಲಿ ತನಕ ಅಲ್ಲಿ ಇಲ್ಲಿ ಅಂತ ಸಣ್ಣಪುಟ್ಟ ಕೆಲಸ ಮಾಡಿ ಹೊಟ್ಟೆ ತುಂಬಿಸಿಕೊಂಡು ಹೇಗೋ ಬದುಕಿ ಬಿಟ್ಟೆ. 


ಹಿಂದೆ ಮುಂದೆ ಯಾರು ಇರಲಿಲ್ಲ. ಗೊತ್ತು ಗುರಿ ಕೂಡ ಯಾವುದೂ ಗೊತ್ತಿಲ್ಲ. ಯಾವುದರಲ್ಲಿಯೂ ಸ್ಪಷ್ಟತೆ ಇರಲಿಲ್ಲ. 


ಹಸಿವು ಆದಾಗ ಊಟ ಮಾಡ್ಬೇಕು.ಕನಸು ಬೀಳಲು ನಿದ್ದೆ ಮಾಡಬೇಕು ಎಂಬುದಷ್ಟೇ ನನಗೆ ಗೊತ್ತಿತ್ತು.


ಅಪ್ಪ ತೀರಿ ಹೋದಾಗ ಅದೆಂತಹದ್ದೋ ಒಂದು ನೆಮ್ಮದಿ ಆವರಿಸಿತ್ತು.ನನಗಿಂತಲೂ ನನ್ನ ಅಮ್ಮನಿಗೆ ಇನ್ನು ಮುಂದೆ ಅಪ್ಪನಿಂದ ಆಗುವ ತೊಂದರೆ, ಕಿರಿ ಕಿರಿ ತಪ್ಪಿ ಹೋಯಿತಲ್ಲ ಎಂಬ ನೆಮ್ಮದಿ.


ಆದರೆ ಕೊನೆಯಲ್ಲಿ ಅಮ್ಮ ಕೂಡ ತೀರಿ ಹೋದಾಗ ಬಾಳು ನಿಜವಾಗಿಯೂ ಒಂಟಿಯಾಗಿತ್ತು,ನರಕವಾಗಿತ್ತು. ಒಡ ಹುಟ್ಟಿದವರು ಅಂತ ಯಾರಾದರೂ ಇದ್ದಿದ್ದರೆ ನಾನು ತೀರಾ ಒಬ್ಬಂಟಿ ಆಗುತ್ತಿರಲಿಲ್ಲವೆನೋ.. 


ಹಸಿವು ಜಾಸ್ತಿ ಆದಾಗ ತುತ್ತು ಅನ್ನಕ್ಕಾಗಿ,ದಿನ ನಿತ್ಯವೂ ಮಾಡಲು ಕೆಲಸ ಒಂದು ಹಿಡಿಯಲೇಬೇಕಿತ್ತು ನಾನು.ಅದಕ್ಕಾಗಿ ಹುಡುಕಾಡಿದೆ.


ಎಲ್ಲಾ ಗುರುಗಳಿಗಿಂತಲೂ ಸುಂದರವಾದ ಪಾಠವನ್ನು ಬದುಕು ಕಲಿಸುತ್ತೆ. ಮತ್ತು ಬದುಕು ಕಲಿಸುವ ಪಾಠವನ್ನು ಯಾರೂ ಬಾಯಿಪಾಠ ಮಾಡಿಕೊಳ್ಳಬೇಕಾಗಿಲ್ಲ.ಅದು ಉಸಿರು ನಿಲ್ಲುವವರೆಗೂ ಮರೆತು ಹೋಗುವಂತಹದ್ದಲ್ಲ.


ಶಾಲೆಯನ್ನು ಪ್ರೈಮರಿಗೆ ಮೊಟಕುಗೊಳಿಸಿದ್ದೆ. ಜೀವನ ಪಾಠ ವನ್ನು ತಕ್ಕ ಮಟ್ಟಿಗೆ ಅಮ್ಮ ಕಲಿಸಿದ್ದಳು,ಇನ್ನು ಸ್ವಲ್ಪ ಬಡತನ,ಹಸಿವುಗಳು ಕಲಿಸಿಕೊಟ್ಟಿತು, ಬಾಕಿ ಉಳಿದ ಎಲ್ಲವನ್ನೂ ಈ ಬದುಕೇ ಕಲಿಸಿ ಕೊಟ್ಟಿತು.


ನಾನು ಬದುಕೆಂಬ ಶಾಲೆಯ ಶಿಸ್ತಿನ ವಿದ್ಯಾರ್ಥಿ. ಅದು ಕಲಿಸಿದ್ದನ್ನು ಬೆರಗು ಕಣ್ಣಿನಿಂದ ನೋಡಿದೆ.ಹಾಗೇ ಕಲಿತು ಬಿಟ್ಟೆ.

ಕಲಿಯಲು ಮನಸ್ಸಿಲ್ಲದಿದ್ದರೂ ಕಲಿಯಲೇ ಬೇಕಿತ್ತು, ಅನಿವಾರ್ಯ ಅದು! 


ಸಾಲು ಸಾಲು ನೋವು,ಸಾವು,ಹತಾಶೆ ನಿರಾಶೆ ಇದ್ದರೂ ನನಗೆ ಈ ಬದುಕಿನ ಮೇಲೆ ಯಾವುದೇ ಕಂಪ್ಲೈಂಟ್ ಗಳು ಇರಲಿಲ್ಲ.


ಅಮ್ಮ ಬದುಕಿದ್ದಾಗ ಹೇಳುತ್ತಿದ್ದಳು " ಪುರು, ಜೀವನದಲ್ಲಿ ಯಾರೂ ಶಾಶ್ವತವಲ್ಲ.. ಯಾವುದೂ  ಶಾಶ್ವತವಲ್ಲ.. ಎಲ್ಲವೂ ಭಗವಂತನ ಇಚ್ಛೆ. ಅವನ ಇಚ್ಛೆಯನ್ನು ಇಲ್ಲಿ ಯಾರೂ ಮೀರಲು ಸಾಧ್ಯವೇ ಇಲ್ಲ.."


ಆದರೂ ಸುಖ ಎಂಬುದು ನನಗೆ ಯಾವತ್ತೂ ಸಿಕ್ಕಿಯೇ ಇಲ್ಲ. ಅದರ ಹಿಂದೆ ಬಿದ್ದು ಹೋದವ ಕೂಡ ನಾನಲ್ಲ.

ಅಮ್ಮ ಹೇಳಿದ್ದ- ಜೀವನದಲ್ಲಿ ಯಾವುದೂ ಶಾಶ್ವತವಲ್ಲ.. ಎಂಬುದನ್ನು ನಾನು ಬಲವಾಗಿ ನಂಬಿದ್ದೆ. ಹಾಗಾಗಿ ನೋವು ಕೂಡ ಶಾಶ್ವತ ಅಲ್ಲ ಎನ್ನುವುದು ನನ್ನ ಅಚಲವಾದ ನಂಬಿಕೆ. 


ನನ್ನ ಬಳಿ ಇದ್ದದ್ದು ಇಷ್ಟೇ ಅಮ್ಮನ ನೆನಪು, ಅವಳು ಹಾಡಿದ ನಾಲ್ಕು ಸಾಲಿನ ಆ ಹಾಡು,ಅವಳು ಪ್ರೀತಿಯಿಂದ ನನ್ನ ಕೈಯ ಮೇಲೆ ಜಾತ್ರೆಯಲ್ಲಿ ಹಾಕಿಸಿದ್ದ ನನ್ನ ಹೆಸರಿನದ್ದೆ ಹಚ್ಚೆ,ಮತ್ತು ಅವಳು ಕಲಿಸಿದ ಎಂದೂ ಮರೆಯಲಾಗದ ಜೀವನ ಪಾಠ.


ಊರಿನ ದೊಡ್ಡ ಧಣಿ ಭುಜಂಗಯ್ಯ.ದೇವರಂತಹ ಮನುಷ್ಯ.ಅವರ ಬಳಿಗೆ ಹೋದೆ. ಏನಾದರೂ ಕೆಲಸ ಇದ್ದರೆ ಕೊಡಿ  ಧಣಿ ಅಂದೆ.


ನಿನಗೆ ಏನಾದರೂ ಕೆಲಸ ಬರುತ್ತದೆಯಾ.. ಕೇಳಿದರು.ನನಗೆ ಯಾವುದೇ ಕೆಲಸ ಗೊತ್ತಿಲ್ಲ. ಆದರೆ ಯಾವುದೇ ಕೆಲಸ ಕೊಟ್ಟರೂ ನಿಷ್ಟೆಯಿಂದ ಮಾಡುತ್ತೇನೆ ಅಂದೆ.


ಅವರಿಗೆ ನನ್ನನ್ನು ನೋಡಿ ಏನು ಅನಿಸಿತೋ ಏನೋ... 


ಸರಿ ಹಾಗಾದರೆ,ಮುಂದಿನ ತಿಂಗಳಿನಿಂದ ನಮ್ಮ ಕಾರ್ ಡ್ರೈವರ್ ಕೆಲಸಕ್ಕೆ ಬರುವುದಿಲ್ಲ.ಅಲ್ಲಿಯವರೆಗೆ ಅವನೊಂದಿಗೆ ಸೇರಿ ಡ್ರೈವಿಂಗ್ ಕಲಿತುಕೋ, ಮುಂದಿನ ತಿಂಗಳಿನಿಂದ ನೀನೇ ನಮ್ಮ ಮನೆಯ ಕಾರ್ ಡ್ರೈವರ್ ಅಂದರು.ಅವರ ಮನೆಯಲ್ಲಿ ಎರಡು ಕಾರುಗಳಿದ್ದವು. 


ಅವರ ಮನೆಯ ಕಾರ್ ಡ್ರೈವರ್ ಕಲಿಸಿ ಕೊಟ್ಟಂತೆ,ಹೇಳಿ ಕೊಟ್ಟಂತೆ,ತುಂಬಾ ಶ್ರದ್ಧೆಯಿಂದ ಕಾರ್ ಬಿಡುವುದನ್ನು ಕಲಿತೆ. ಡ್ರೈವಿಂಗ್ ತುಂಬಾ ಸುಲಭವಾಗಿ ನನಗೆ ಒಗ್ಗಿಕೊಂಡಿತು.


ಧಣಿ, ಹಾಗೂ ಧಣಿ ಯ ಹೆಂಡತಿ  ಪ್ರೇಮಕ್ಕ ಇಬ್ಬರೂ ತುಂಬಾ ಒಳ್ಳೆಯವರು. ಅವರಿಗೆ ಒಬ್ಬಳೇ ಒಬ್ಬಳು ಮುದ್ದಾದ ಮಗಳು.ಹೆಸರು ವತ್ಸಲ. 


ವತ್ಸಲ ವಯಸ್ಸಿನಲ್ಲಿ ನನಗಿಂತ ಚಿಕ್ಕವಳು.ವತ್ಸಲಳನ್ನು ಬೆಳಿಗ್ಗೆ ಕಾರಿನಲ್ಲಿ ಕಾಲೇಜಿಗೆ ಡ್ರಾಪ್ ಮಾಡುವುದು,ಸಂಜೆ ಕಾಲೇಜ್ ಬಿಟ್ಟ ನಂತರ ಪಿಕ್ ಮಾಡುವುದು ನನ್ನ ಕೆಲಸವಾಗಿತ್ತು.


ಅದು ನನ್ನ ಕೆಲಸದ ಮೊದಲ ದಿನ. 

ದೇವರಂತಹ ಧಣಿಗೆ ದೇವತೆಯಂತಹ  ಮಗಳು ವತ್ಸಲ. ವಾತ್ಸಲ್ಯ ದ ಮೂರ್ತಿ ಎಂದೇ ಹೇಳಬಹುದು. ಮೊದಲ ದಿನವೇ ನನಗೆ ತುಂಬಾನೇ ಹೊಂದಿಕೊಂಡು ಬಿಟ್ಟಳು. 


ಕಾಲೇಜಿಗೆ ಅವಳನ್ನು ಬಿಡಲು ಹೋದ ಕೆಲಸದ ಆ ಮೊದಲೇ ದಿನವೇ, ಕಾರಿನ ಹಿಂದಿನ ಸೀಟಿನಲ್ಲಿ ಬಂದು ಕುಳಿತುಕೊಂಡ ವತ್ಸಲ ನನ್ನೊಂದಿಗೆ ಮಾತಿಗೆ ಇಳಿದು ಬಿಟ್ಟಳು -


ನಿಮ್ಮ ಹೆಸರು ಚೆನ್ನಾಗಿದೆ


ನನ್ನ ಹೆಸರು ನಿಮಗೆ ಹೇಗೆ ಗೊತ್ತು ಮೇಡಂ.. 


ಕೈಯ ಮೇಲೆ ಹಚ್ಚೆ ಹಾಕಿ ಕೊಂಡಿದ್ದೀರಿ ಅಲ್ಲವೇ.. #ಪುಷ್ಯರಾಗ  ಅಂತ. ಕಾರಿನೊಳಗೆ ಬರುವಾಗಲೇ ನೋಡಿದೆ ಅದನ್ನು. ಆಹಾ ಎಷ್ಟು ಸುಂದರವಾದ ಹೆಸರು, ನಮ್ಮ ಕಾಲೇಜಿನ ಹುಡುಗರಿಗೂ ಈ ರೀತಿಯ ಹೆಸರಿಲ್ಲ.ನಾನೆಲ್ಲೂ ಇಂತಹ ಹೆಸರು ಕೇಳಿಯೇ ಇಲ್ಲ. Unique Name ☺️


ಅಮ್ಮ ಇಟ್ಟ ಹೆಸರು ಮೇಡಂ.. ಅಂದೆ ಕಾರು start ಮಾಡುತ್ತಲೇ.


ಕಾರು ಮನೆಬಿಟ್ಟು ರಸ್ತೆಗೆ ಇಳಿಯಿತು.. 


ಇದರಿಂದಲೇ ಗೊತ್ತಾಗುತ್ತದೆ ನಿಮ್ಮ ಅಮ್ಮನದ್ದು ಎಷ್ಟು ಒಳ್ಳೆಯ ಅಭಿರುಚಿ ಎಂದು... ವತ್ಸಲ ಹೇಳಿದಳು. 


ಸುಮ್ಮನೆ ನಕ್ಕು ಹೌದು ಮೇಡಂ.. ಆದರೆ ಅಮ್ಮ ನನ್ನನ್ನು ಹೆಚ್ಚಾಗಿ ಪ್ರೀತಿಯಿಂದ, ಒಮ್ಮೊಮ್ಮೆ "ಪುರು" ಎಂದು ಇಲ್ಲವೇ "ರಾಗು" ಎಂದೇ ಕರೆಯುತ್ತಿದ್ದಳು.ಅವಳಿಗೆ ಪುಷ್ಯರಾಗ ಎಂದು ಹೇಳಲು ಕಷ್ಟವಾಗುತ್ತಿತ್ತು ಹಾಗಾಗಿ...


ಹೌದಾ.. "ಪುರು" ಹೆಸರು ಕೂಡ ಚೆನ್ನಾಗಿದೆ.


ಹೌದಾ ಮೇಡಂ.. ಥ್ಯಾಂಕ್ಸ್. 


ಮೇಡಂ ಅಲ್ಲ ನನ್ನ ಹೆಸರು ವತ್ಸಲ. 


ಚೆನ್ನಾಗಿದೆ ನಿಮ್ಮ ಹೆಸರು.


ನಿಮ್ಮ ಅಷ್ಟು ಇಲ್ಲ ಬಿಡಿ.


ಕಾರು ಹಾಗೇ ಮುಂದೆ ಸಾಗುತ್ತಿತ್ತು.


ಹಿಂದೆ ಕುಳಿತುಕೊಂಡಿದ್ದ ವತ್ಸಲ ಮತ್ತೆ ಕೇಳಿದಳು.. 


ಮತ್ತೆ ನಿಮ್ಮ ಮನೆ ಎಲ್ಲಾ ಎಲ್ಲಿ, ಅಮ್ಮ ಅಪ್ಪ ಹೇಗಿದ್ದಾರೆ,ಬೇರೆ ಯಾರೆಲ್ಲ ಇದ್ದಾರೆ ಮನೆಯಲ್ಲಿ, ಅಕ್ಕ, ತಂಗಿ, ಅಣ್ಣ, ತಮ್ಮ..


ನನಗೆ ಒಡಹುಟ್ಟಿದವರು ಅಂತ ಯಾರೂ ಇಲ್ಲ, ನಾನು ಒಬ್ಬಂಟಿ.


ಮತ್ತೆ ಅಮ್ಮ ಅಪ್ಪ.. 


ಅಮ್ಮ ಅಪ್ಪ ಹಿಂದೆ  ಇದ್ದರು..ಈಗಿಲ್ಲ,ತೀರಿಕೊಂಡು ಬಿಟ್ಟಿದ್ದಾರೆ! ಸದ್ಯಕ್ಕೆ ನಾನೊಬ್ಬ ಅನಾಥ !


Sorry..!


ಪರವಾಗಿಲ್ಲ ಬಿಡಿ. 


ತುಂಬಾ ಹೊತ್ತು ಮೌನವಾಗಿಯೇ ಇದ್ದಳು ವತ್ಸಲ.


ಅವಳಿಗೂ ಬೇಜಾರು ಆಯಿತೋ ಏನೋ.. 


ನಂತರ ಅವಳೇ ಸಾವರಿಸಿಕೊಂಡು, ವಾತಾವರಣ ಸ್ವಲ ತಿಳಿಗೊಳಿಸಲು ಮಾತು ಮುಂದುವರಿಸಿದಳು..


ನಿಮಗೆ ಪತ್ರೋಡೆ ಅಂದರೆ ಇಷ್ಟವಾ...


ಹಿಂದೆ ಅಮ್ಮ ಮಾಡಿ ಕೊಡುತ್ತಿದ್ದಳು.ತಿನ್ನದೇ ಎಷ್ಟೋ ಸಮಯ ಆಗಿದೆ ಮೇಡಂ ಅಂದೆ.


ಹಾಗಾದರೆ ತಗೊಳ್ಳಿ.. ಅಂತ ವತ್ಸಲ ಅವಳ ಕಾಲೇಜ್ ಬ್ಯಾಗ್ ನಲ್ಲಿ ಇದ್ದ  ಲಂಚ್ ಬಾಕ್ಸ್ ಅನ್ನು ನನ್ನ ಕಡೆ ಚಾಚಿದಳು.


ಬೇಡ ಮೇಡಂ.. ನಿಮ್ಮ ಅಮ್ಮ ತುಂಬಾ ಪ್ರೀತಿಯಿಂದ ನಿಮಗೆಂದು ಮಾಡಿ ಕೊಟ್ಟಿದ್ದಾರೆ.ನಾನು ತಿಂದರೆ ಅದು ಸರಿ ಆಗುವುದಿಲ್ಲ. ಅದು ಬೇರೆ ನಾನು ನಿಮ್ಮ ಮನೆಯ ಕೆಲಸದವ.. ಬೇಡ ಬಿಡಿ ಅಂದೆ. 


ನನಗೆ ಇದೆ ಆಗಲ್ಲ,ಇದನ್ನು ನೀವು ತೆಗೆದುಕೊಳ್ಳಲೇ ಬೇಕು. ಅಂತ ಹಿಂದಿನ ಸೀಟಿನಿಂದ ಮುಂದಕ್ಕೆ ಬಾಗಿ ನನ್ನ ಪಕ್ಕದ ಮುಂದಿನ ಸೀಟಿನಲ್ಲಿ ಪತ್ರೋಡೆ ತುಂಬಿದ ಲಂಚ್ ಬಾಕ್ಸ್ ಅನ್ನು ಇಟ್ಟಳು ವತ್ಸಲ.


ನನ್ನನ್ನು ಡ್ರಾಪ್ ಮಾಡಿ ಆದ ಮೇಲೆ ಇದನ್ನು ನೀವು ತಿನ್ಬೇಕು. ಹಾನ್.. ನೀವು ಒಬ್ಬರೇ ತಿನ್ಬೇಕು.


ಬಹುಶಃ ಅಮ್ಮನ ನಂತರ ಲೈಫ್ ನಲ್ಲಿ ಇಷ್ಟೊಂದು ಪ್ರೀತಿ ವಿಶ್ವಾಸ ಸ್ನೇಹ.. ಬೇರೆ ಯಾರೂ ನನಗೆ ತೋರಿಸಿಯೇ ಇಲ್ಲ.


ಥ್ಯಾಂಕ್ಸ್ ಮೇಡಂ.. ಅಂದೆ. 


ನೀವು ನನ್ನನ್ನು ಮೇಡಂ ಮೇಡಂ ಎಂದು ಕರೆಯಬೇಡಿ.


ಮತ್ತೆ..?! 


ಹೆಸರು ಹಿಡಿದೇ ಕರಿಯಿರಿ.


ಅದು ಹೇಗೆ ಸಾಧ್ಯ ನೀವು ನಮ್ಮ ಧಣಿಯ ಮಗಳು.


ಇರಬಹುದು ಆದರೆ ನೀವು ನನಗಿಂತ ದೊಡ್ಡವರು. ನಾನು ನಿಮ್ಮನ್ನು ಅಣ್ಣಾ ಎಂದು ಕರೆಯಲೇ..ಹೇಳಿ ಪುರು ಅಣ್ಣಾ... 


ನನಗೆ ಯಾರಿಂದಲೂ ಅಣ್ಣಾ ಎಂದು ಕರೆಸಿಕೊಂಡು ಗೊತ್ತೇ ಇಲ್ಲ. ಆ ಸಂಬಂಧದ ಅನುಭವ ಆಗಲಿ, ಅದರ ಅನುಭಾವ ಆಗಲಿ ಎಂದಿಗೂ ನನಗೆ ಆಗಿಯೇ ಇಲ್ಲ. ಮೊದಲ ಬಾರಿಗೆ "ಅಣ್ಣಾ .." ಎಂಬ ಕರೆ ಕೇಳಿ ಹೃದಯ ತುಂಬಿ ಬಂತು, ಕಣ್ಣಂಚು ಗೊತ್ತಿಲ್ಲದೇ ಒದ್ದೆ ಆಯಿತು.


ಆಯ್ತು ತಂಗಿ ಅಂದೆ....


ಕೊನೆಗೂ ಅವಳನ್ನು ಕಾಲೇಜಿಗೆ ಡ್ರಾಪ್ ಮಾಡಿದೆ. ಬಾಯ್ ಪುರು ಅಣ್ಣಾ.. ಎಂದು ನಗು ನಗುತ್ತಲೇ ಟಾಟಾ ಮಾಡಿ ಕಾಲೇಜಿಗೆ ಹೋದಳು ವತ್ಸಲ.


ಅವಳು ನೀಡಿದ ಅಷ್ಟೂ ಪತ್ರೋಡೆಯನ್ನು ಹಾಗೇ ಕಾರಿನಲ್ಲಿ ಕುಳಿತುಕೊಂಡೇ ಒಬ್ಬನೇ ತನ್ಮಯತೆಯಿಂದ ತಿಂದೆ. ನಿಜವಾಗಿಯೂ ರುಚಿಯಾಗಿತ್ತು. ರುಚಿಗಿಂತಲೂ ತಂಗಿ ಎನ್ನುವವಳು ನೀಡಿದ ಪ್ರೀತಿ, ವತ್ಸಳ ಲ ವಾತ್ಸಲ್ಯವೇ ಅದರಲ್ಲಿ ಯಥೇಚ್ಛವಾಗಿತ್ತು. 


ಕೆಲಸದ ಆ ಮೊದಲ ದಿನ ನನಗೆ ಬರೀ ಕೆಲಸವೊಂದು ಸಿಕ್ಕಿರಲಿಲ್ಲ. ನನಗೆ ತಂಗಿಯೊಬ್ಬಳು ಕೂಡ ಸಿಕ್ಕಿದ್ದಳು.


ಈ  ಬದುಕಿಗೆ, ವಿಧಿ ಗೆ ಅದೆಷ್ಟು ಥ್ಯಾಂಕ್ಸ್ ಹೇಳಿದರೂ ನಾನು ಕಡಿಮೆಯೇ. ಈ ಬದುಕು ಕೆಲವೊಮ್ಮೆ ಎಲ್ಲವನ್ನೂ ನಮ್ಮಿಂದ ಕಿತ್ತುಕೊಂಡು ಬಿಡುತ್ತದೆ. ಕೆಲವೊಮ್ಮೆ ಏನೂ ಇಲ್ಲದೇ ಇದ್ದಾಗ, ಅದೇ ಕರೆದು ಮೊಗೆ ಮೊಗೆದು ಎಲ್ಲವನ್ನೂ ಕೊಟ್ಟು ಬಿಡುತ್ತದೆ.ನಾವು ಊಹಿಸಿದ್ದಕ್ಕಿಂತಲೂ ಜಾಸ್ತಿಯೇ ಕೊಡುತ್ತದೆ.


ನನಗೇನು ಈ ಬದುಕು ಮೊಗೆ ಮೊಗೆದು ವಜ್ರ ವೈಢೂರ್ಯ ಗಳನ್ನು ಕೊಡದೇ ಇದ್ದರೂ ಒಬ್ಬಳು ಅಪ್ಪಟ ಬಂಗಾರದಂತಹ, ಶುದ್ಧ ಬೆಳ್ಳಿ ಮನಸ್ಸಿನ ತಂಗಿಯನ್ನು ದಯಪಾಲಿಸಿತ್ತು. 


ಆ ಸಂಬಂಧ ತುಂಬಾ ಮಧುರವಾಗಿತ್ತು. ವತ್ಸಲಳಿಗೆ ನಾನೆಂದರೆ ತುಂಬಾ ಇಷ್ಟ. ಭುಜಂಗಯ್ಯ ಹಾಗೂ ಅವರ ಮಡದಿ ಪ್ರೇಮಕ್ಕನಿಗೂ  ನಾನು ವತ್ಸಲ ಜೊತೆ ಇದ್ದರೆ ಏನೋ ಒಂದು ನಂಬಿಕೆ. ನನ್ನ ಮೇಲೆ ಅವರು ಎಲ್ಲರೂ ಅಷ್ಟೊಂದು ನಂಬಿಕೆ ಇಟ್ಟಿದ್ದರು.ಎಂದಿಗೂ ಆ ನಂಬಿಕೆಯನ್ನು ನಾನು ಕಳೆದುಕೊಳ್ಳಬಾರದು ಎಂದು ನಾನು ನಿರ್ಧರಿಸಿ ಬಿಟ್ಟಿದ್ದೆ!!


ಸರಿಯಾದ ಮನೆ ಕೂಡ ಇಲ್ಲದ ನನಗೆ ವತ್ಸಲಳೇ ಭುಜಂಗಯ್ಯನವರಿಗೆ ಹೇಳಿ ತುಂಬಾ ಒತ್ತಾಯ ಮಾಡಿಸಿ ಅವರ ತೋಟದ ಮನೆಯಲ್ಲಿ ನನಗೆ ಒಂದು ರೂಮ್ ಸಿಗುವಂತೆ ಮಾಡಿದ್ದಳು. 


ನಾನು ಯಾವತ್ತೂ ಸಿನಿಮಾ ನೋಡಿದವನಲ್ಲ. ವತ್ಸಲ ಒತ್ತಾಯ ಮಾಡಿ "ಬಾ ಪುರು ಅಣ್ಣಾ.. ಮೂವಿಗೆ ಹೋಗೋಣ .." ಎಂದು ಕರೆದು ಕೊಂಡು ಹೋಗುತ್ತಿದ್ದಳು.


ಜಾತ್ರೆಗೆ ಹೋಗುವಾಗ ಕೂಡ ಅವಳ ಜೊತೆಯಲ್ಲಿ ನಾನು ಹೋದರೆ ಭುಜಂಗಯ್ಯ, ಪ್ರೇಮಕ್ಕನಿಗೆ ಏನೋ ಒಂದು ಸಮಾಧಾನ.


ವತ್ಸಲ ನಿಜವಾಗಿಯೂ ಸುಂದರವಾದ ಹುಡುಗಿ. ಅವಳ ಜೊತೆ ಹೋಗುವಾಗ ನಾನು ಅವಳ ಬಾಡಿಗಾರ್ಡ್ ತರವೇ ಇರುತ್ತಿದ್ದೆ. ನಾನು ಇರುವಾಗ ಯಾವ ಹುಡುಗನ ಕೆಟ್ಟ ದೃಷ್ಟಿಯೂ ಅವಳ ಮೇಲೆ ಬೀಳಲೂ ಸಾಧ್ಯವೇ ಇರಲಿಲ್ಲ. ನಾನು ಕೂಡ ನೋಡಲು ಅಜಾನುಬಾಹು ತರವೇ ಇದ್ದು,ಅವಳ ಬಾಡಿಗಾರ್ಡ್ ತರವೇ ಕಾಣುತ್ತಿದ್ದೆ. 


ವತ್ಸಲ ಹೋದಲ್ಲಿ ಎಲ್ಲ ಅವಳಿಗೆ ಅವಳೊಂದಿಗೆ ನಾನೇ ಬೇಕಾಗಿತ್ತು. ಏನೇ ಮಾಡುವುದಿದ್ದರೂ ನನ್ನನ್ನು ಕೇಳಿಯೇ ಅವಳು ಮಾಡುತ್ತಿದ್ದಳು. ಪುರು ಅಣ್ಣ ಹಾಗೇ ಮಾಡಿದರೆ ಹೇಗೆ.. ಹೀಗೆ ಮಾಡಿದರೆ ಹೇಗೆ.. ಎಂದು ನನ್ನಲ್ಲೇ ಎಲ್ಲವನ್ನೂ ಕೇಳುತ್ತಿದ್ದಳು.


ಅವಳ ನೋವು ಖುಷಿ, ಸಂತೋಷ, ಕಾಲೇಜಿನಲ್ಲಿ ಆದಂತಹ ಪ್ರತಿಯೊಂದನ್ನೂ ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದಳು.

ನಾನು ಕೂಡ ನನ್ನೆಲ್ಲಾ ನೋವಿನ ಕಥೆ ಹೇಳಿದ್ದೆ ಅವಳಿಗೆ, ಹೌದು ನನ್ನ ಲೈಫ್ ನಲ್ಲಿ ನನ್ನ ಕಥೆಯನ್ನು ನಾನು ಹೇಳಿದ್ದು ಅವಳಿಗೆ ಮಾತ್ರ. 


ಅವರ ಮನೆಯಲ್ಲಿ ಏನೇ ಸ್ಪೆಷಲ್ ತಿಂಡಿ, ಊಟ ಮಾಡಿದರೂ ಅದನ್ನು ಹಿಡಿದುಕೊಂಡು ಓಡೋಡಿ ನನ್ನ ರೂಮಿಗೆ ಬರುತ್ತಿದ್ದಳು. ಅವಳು ಕೂಡ ರೂಮಿನಲ್ಲಿ ನನ್ನೊಂದಿಗೆನೇ ಊಟ ಮಾಡಿ ಹೋಗುತ್ತಿದ್ದಳು.ನಿಜ ಅರ್ಥದಲ್ಲಿ ನಾವು ಅಣ್ಣ ತಂಗಿಯರ ತರವೇ ಇದ್ದೆವು. 


ಅವಳೊಂದಿಗೆ ಹೊರಗಡೆ ತಿರುಗಾಗಲು ಅಂತ  ಹೋದಾಗ ನನಗಾಗಿ ಹೊಸ ಬಟ್ಟೆ ತೆಗೆಸಿಕೊಡುತ್ತಿದ್ದಳು ವತ್ಸಲ.ಸಿರಿವಂತಳೇ ಇರಬಹುದು ಆದರೆ ಅವಳು ಮಾತೃ ಹೃದಯದ ಹುಡುಗಿ,ಅವಳ ಹೃದಯ ಶ್ರೀಮಂತಿಕೆಯೇ ನನಗೆ ಇಷ್ಟವಾಗಿದ್ದು. 


ಅವಳೊಂದಿಗೆ ಸೇರಿ ನಾನೂ ಎಂದಿಗೂ ತಿನ್ನದ ನೋಡದ ರುಚಿ ರುಚಿಯಾದ ತಿಂಡಿ ತಿನಿಸುಗಳನ್ನು ಕೂಡ ಸವಿದು ಬಿಟ್ಟೆ.


ವತ್ಸಲ ಪದೇ ಪದೇ ಹೇಳುತ್ತಿದ್ದಳು. ಪುರು ಅಣ್ಣ... ನೀವು ಯಾಕೆ ಇಷ್ಟು ಕಮ್ಮಿ ಮಾತಾಡುವುದು,ಗುಮ್ಮನ ಹಾಗೆ ಇರಬೇಡಿ ಯಾವತ್ತೂ, ಸ್ವಲ್ಪ ನಗು ನಗುತ್ತಾ ಮಾತಾಡಿ ನನ್ನಂತೆಯೇ.ಹೃದಯವನ್ನು ಯಾವತ್ತೂ ಕಲ್ಲು ಮಾಡಿಕೊಳ್ಳಬಾರದು ಪುರು ಅಣ್ಣ, ಯಾವತ್ತೂ ಮನಸು ಬಿಚ್ಚಿ ಮಾತಾಡಬೇಕು.. ಹೃದಯದಿಂದ ನಗಬೇಕು.


ಆಹಾ.. ಚಿಕ್ಕ ವಯಸ್ಸಿಗೆ ಅದೆಂತಹ ತಿಳುವಳಿಕೆ. ನನ್ನಂತಹ ಕಲ್ಲು ಹೃದಯದವನಿಗೆ ಇದೆಲ್ಲ ಸೂಕ್ಷ್ಮತೆ ಎಲ್ಲಿ ಅರ್ಥ ಆಗಬೇಕು. 


ನಾನು ಯಾವತ್ತೂ ಬರ್ತ್ ಡೇ ಆಚರಿಸಿಕೊಂಡವನಲ್ಲ. Surprise ಆಗಿ ಅದನ್ನು ಕೂಡ ಮಾಡಿಸಿ ಬಿಟ್ಟಳು ತಂಗಿ ವತ್ಸಲ.ಅವತ್ತು ತೋಟದ ಮನೆಯ ಆ ನನ್ನ ರೂಮಿನಲ್ಲಿ ಅದೆಂತಹ ಸಂಭ್ರಮ.


ದೊಡ್ಡ ಕೇಕ್ ಅನ್ನು ನನ್ನಿಂದ ಕತ್ತರಿಸಿದ್ದು ಮಾತ್ರವಲ್ಲ ಒಂದು ಒಳ್ಳೆಯ ವಾಚ್ ಅನ್ನು ಕೂಡ ನನಗೂ ಗಿಫ್ಟ್ ಆಗಿ ಕೊಟ್ಟಿದ್ದಳು ವತ್ಸಲ.ನಾವಿಬ್ಬರು ಅಣ್ಣಾ ತಂಗಿಯರಂತೆ ಇದ್ದಿದ್ದು ಭುಜಂಗಯ್ಯನವರಿಗೆ, ಪ್ರೇಮಕ್ಕನವರಿಗೆ ತುಂಬಾನೇ ಸಂತೋಷವಾಗಿತ್ತು.


ಪ್ರೇಮಕ್ಕ  ಹೇಳುತ್ತಿದ್ದರು ಕೂಡ, ಪುರು.. ನೀನು ಯಾವ ತಾಯಿ ಹೆತ್ತ ಮಗನೋ ಎಂದು ನಮಗೆ ಗೊತ್ತಿಲ್ಲಪ್ಪ. ಆದರೆ ನಮ್ಮ ಪಾಲಿಗೆ ಅಂತು ನೀನು,ಯಾವತ್ತಿಗೂ ನಮ್ಮ ಮನೆ ಮಗನೇ ಎಂದು.


ಬಾಳಿನಲ್ಲಿ ಇದಕ್ಕಿಂತ ದೊಡ್ಡ ಗಿಫ್ಟ್ ಏನೂ ಸಿಗಲು ಸಾಧ್ಯ.ಅದೇ ನಂಬಿಕೆ. ಕೇವಲ ನಾಯಿ ಎಂಬ ಪ್ರಾಣಿ ಸುಲಭವಾಗಿ ಗಳಿಸಬಲ್ಲದು ಅದನ್ನು. ಅದು ಅದರ ರಕ್ತದಲ್ಲೇ ಇದೆ.


ಅಂತಹ ಒಂದು ನಂಬಿಕೆಯನ್ನು ನಾನು ಇಲ್ಲಿ ಸಂಪಾದಿಸಿದ್ದೆ. ಅದೇ ನನ್ನ ದೊಡ್ಡ ಆಸ್ತಿಯಾಗಿತ್ತು. ಅದನ್ನು ನಾನು ಎಂದಿಗೂ ಕಳೆದು ಕೊಳ್ಳಲು ಇಷ್ಟಪಡುತ್ತಿರಲಿಲ್ಲ!! 


ಇದರ ನಡುವೆ ವತ್ಸಲಳಿಗೆ ಭುಜಂಗಯ್ಯ ಒಂದು ಸ್ಕೂಟಿ ಕೊಡಿಸಿದರು.ನಂತರ ಕಾಲೇಜಿಗೆ ಹೋಗಿ ಬರಲು ಅವಳು ಅದನ್ನೇ ಬಳಸುತ್ತಿದ್ದಳು. ಆದರೂ ಎಲ್ಲಾದರೂ ಹೋಗಿ ಬರಲು ಇದ್ದರೆ ಅವಳಿಗೇ ಸದಾ ನಾನೇ ಬೇಕಿತ್ತು.ಪ್ರತಿಯೊಂದನ್ನು ನನ್ನ ಸಲಹೆ ಕೇಳಿಯೇ ಮಾಡುತ್ತಿದ್ದಳು.


ಕಾಲೇಜಿನಲ್ಲಿ ನೀಡುವ  ಹೋಮ್ ವರ್ಕ್ ಮಾಡಲು ಇದ್ದಾಗ ತೋಟದ ಮನೆಯಲ್ಲಿ ಇರೋ ನನ್ನ ರೂಮಿಗೆನೇ  ಓಡಿ ಬರುತ್ತಿದ್ದಳು ವತ್ಸಲ. ಅಲ್ಲೇ ಓದುವುದು ಬರೆಯುವುದು ಎಲ್ಲಾ ಇಷ್ಟ ಅವಳಿಗೆ.


ಅವಳಿಗೆ ಫಿಲ್ಟರ್ ಕಾಫಿ ಎಂದರೆ ಇಷ್ಟ. ಅವಳು ಬಂದಾಗಲೆಲ್ಲ ನೊರೆ ನೊರೆ ಬಿಸಿ ಫಿಲ್ಟರ್ ಕಾಫಿ ಮಾಡಿ ಕೊಡುತ್ತಿದ್ದೆ. ಅದನ್ನು ಒಂದು ಮಗ್ ನಲ್ಲಿ ಸುರ್ ಪುರ್ ಅಂತ ಹೀರಿ... ಪುರು ಅಣ್ಣಾ ಕಾಫಿ ಸೂಪರ್.. ಅಂತ ಹೇಳುತ್ತಿದ್ದಳು ವತ್ಸಲ.


ಅವಳ ನಗುವೋ ಅದೆಷ್ಟೋ ಚಂದ. ರೂಮಿನ ಸೂರು ಕಿತ್ತು ಹೋಗುವ ಹಾಗೆ ಮನಸ್ಸು ಬಿಚ್ಚಿ, ಹೃದಯ ತುಂಬಿ ನಗುತ್ತಿದ್ದಳು ವತ್ಸಲ. ಒಂಚೂರು ಕಪಟವಿಲ್ಲದ ಹುಡುಗಿ.


ಬಡವರ ಕಷ್ಟ ಸುಖಗಳನ್ನು ಕೂಡ ಚೆನ್ನಾಗಿಯೇ ಅರಿತಿದ್ದಳು. ಅದೆಲ್ಲವೂ ತಾಯಿ ಪ್ರೇಮಕ್ಕನಿಂದ  ಅವಳಿಗೆ ಬಂದದ್ದು. ಅವಳು ನನಗೆ  ಹೇಳಿದ ಹಾಗೆಯೇ ಅವಳು ಮನಸ್ಸು ಬಿಚ್ಚಿ ಮಾತಾಡುತ್ತಿದ್ದಳು.. ಹೃದಯದಿಂದ ನಗುತ್ತಿದ್ದಳು. 


ದೇವರಲ್ಲಿ ಯಾವತ್ತೂ ಪ್ರಾರ್ಥಿಸಿದವನಲ್ಲ, ಆದರೂ ನನ್ನದೊಂದು ಏಕ ಮಾತ್ರ ಪ್ರಾರ್ಥನೆ ಇತ್ತು ಭಗವಂತನಲ್ಲಿ. ಹೇಯ್ ಭಗವಂತ ಈ ಹುಡುಗಿ ಬಾಳು ಸದಾ ಸುಖವಾಗಿರಲಿ. ಆ ನಗು ಎಂದು ಮಾಸದೇ ಇರಲಿ ಎಂದು.


ನಾವು ನಮಗಾಗಿ ಪ್ರಾರ್ಥಿಸಿದರೆ ಭಗವಂತ ಅದನ್ನು ಈಡೇರಿಸುವುದಿಲ್ಲ ಅಂತೆ. ಆದರೆ ಬೇರೆಯವರು ನಮಗಾಗಿ ಪ್ರಾರ್ಥಿಸಿದರೆ,ಇಲ್ಲ ನಾವು ಬೇರೆಯವರಿಗಾಗಿ ಪ್ರಾರ್ಥಿಸಿದರೆ ಆ ಭಗವಂತ ಅದನ್ನು ಖಂಡಿತವಾಗಿಯೂ ಈಡೇರಿಸುತ್ತಾನೆ ಅಂತೆ. ನನ್ನ ಅಮ್ಮ ಹೇಳಿಕೊಟ್ಟಿದ್ದಳು ಇದನ್ನು. 


ಹೀಗೆ ಇರುವಾಗ ಒಂದು ದಿನ ರಕ್ಷಾ ಬಂಧನ ಹಬ್ಬ ಬಂತು. ಅದರ ಹಿಂದಿನ ದಿನ ವತ್ಸಲ ನನ್ನ ರೂಮಿಗೆ ಬಂದವಳೇ ಹೀಗೆ   ಹೇಳಿಯೇ ಬಿಟ್ಟಳು.


ಪುರು ಅಣ್ಣಾ..ನನ್ನ ಬರ್ತಡೆ ಇನ್ನೂ ತುಂಬಾ ಲೇಟ್ ಉಂಟು, ನನಗೆ ಏನಾದರೂ ಗಿಫ್ಟ್ ಅಂತ ಕೊಡುವುದಿದ್ದರೆ ನಾಳೆ ನಿಮಗೆ ನಾನು ರಾಖಿ ಕಟ್ಟುವಾಗಲೇ ಕೊಡಬೇಕು ನೀವು, ಅದು ಬೇರೆ ಈ ಅಣ್ಣ ತಂಗಿ ನಡುವೆ ಇದೇ ಮೊದಲಿನ  ರಕ್ಷಾಬಂಧನ  ಹಬ್ಬ ಇದು.. ಅಂದಳು. 


ನಿನಗೆ ಏನು ಗಿಫ್ಟ್ ಬೇಕು ಕೇಳಿದೆ.


ಏನಾದರೂ ನಿಮಗೆ ಇಷ್ಟ ಆಗುವಂತಹದ್ದು.


ಗಿಫ್ಟ್ ಯಾವಾಗಲೂ ಯಾರು ತಗೊಳ್ಳುತ್ತಾರೋ ಅವರಿಗೆ  ಇಷ್ಟ ಆಗುವಂತಹದ್ದನ್ನು  ಕೊಡಬೇಕು ಅಲ್ಲವೇ.


ಹಾಗಾದರೆ ನೀವೇ ನನಗೆ ಏನು ಇಷ್ಟ ಆಗಬಹುದು ಎಂದು ಆಲೋಚಿಸಿ ಒಂದು ಗಿಫ್ಟ್ ತನ್ನಿ ಅಲಾ.. ಅಂದಳು.


ನಾನು ಅವಳ ಹೊಸ ಸ್ಕೂಟಿಯ ಕೀ ಬಂಚ್ ಗೆ ಅವಳು ತೂಗಿ ಹಾಕಿ ಕೊಂಡಿದ್ದ ಪುಟ್ಟ ಕರಡಿ ಗೊಂಬೆಯನ್ನು  ನೋಡಿದ್ದೆ.


ನಿನಗೆ ಒಂದು ಕರಡಿ ಗೊಂಬೆ ತಂದುಕೊಟ್ಟರೆ ಖುಷಿ ಆಗುವುದೇ ಕೇಳಿದೆ.


ಓಹ್ ಪುರು ಅಣ್ಣಾ... ಅದರ ಹೆಸರು ಟೆಡ್ಡಿಬೇರ್ ಅಂತ, ಕರಡಿ ಗೊಂಬೆ ಅಲ್ಲ ಅದು. ಹೌದು ಖಂಡಿತವಾಗಿಯೂ ತುಂಬಾ ಇಷ್ಟ ನನಗೆ ಅದು. ನೋಡಿ ನಿಮಗೆ ನನ್ನ ಇಷ್ಟ ಏನು ಎಂದು ಎಷ್ಟು ಸುಲಭವಾಗಿ ಗೊತ್ತಾಯಿತು ನೋಡಿ.


ಒಮ್ಮೊಮ್ಮೆ ಅಪ್ಪ ಅಮ್ಮನಿಗೂ ಗೊತ್ತಾಗುವುದಿಲ್ಲ ಇದೆಲ್ಲ. ಅದಕ್ಕೆ ಹೇಳುವುದು ಬಾಳಿನಲ್ಲಿ ಯಾವತ್ತೂ ಒಬ್ಬ  ಸಹೋದರ ಇಲ್ಲವೇ ಒಬ್ಬಳು ಸಹೋದರಿ ಇರಬೇಕು ಎಂದು.


ನೀವು ಅಂತು ನನಗೆ ದೇವರೇ ಕೊಟ್ಟ ಅಣ್ಣ.. ನೀವು ಬರುವ ಮೊದಲು ನಾನು ಇಷ್ಟು ಖುಷಿಯಲ್ಲಿ ಇರಲೇ ಇಲ್ಲ. ಬಹು ಕಾಲ ಹೀಗೆ ನಾವಿಬ್ಬರೂ ಖುಷಿ ಖುಷಿ ಆಗಿ ಇರಬೇಕು ಪುರು ಅಣ್ಣ ..

ನೀವು  ಕೂಡ ಅಷ್ಟೇ ಯಾವತ್ತೂ ಸೀರಿಯಸ್ ಆಗಿ ಇರ್ಬಾರ್ದು,ಅದರಲ್ಲೂ ಟೆಡ್ಡಿಬೇರ್ ಕರಡಿ, Sorry sorry.. ನಿಮ್ಮ ಕರಡಿ ಗೊಂಬೆ ತರಹ ಗುಮ್ಮನ ಹಾಗೇ ಇರಲೇ ಬಾರದು ನೀವು. ನನ್ನನ್ನು ನೋಡಿ ಯಾವಾಗಲೂ ನಗುತ್ತಲೇ ಇರುತ್ತೇನೆ. ನೀವು ಕೂಡ ಸದಾ ನಗುತ್ತಲೇ ಇರಬೇಕು,ಹೃದಯವನ್ನು ಯಾವತ್ತೂ ಕಲ್ಲು ಮಾಡಿಕೊಳ್ಳಬಾರದು ಪುರು ಅಣ್ಣ,ನಾನು ಹೇಳಿದ್ದು ನೆನಪಿಲ್ಲವೇ  ಯಾವತ್ತೂ ಮನಸು ಬಿಚ್ಚಿ ಮಾತಾಡಬೇಕು..ಹೃದಯದಿಂದ ನಗಬೇಕು... 


ಹಾನ್ ಮತ್ತೆ, ತುಂಬಾ ದೊಡ್ಡದೇ ಟೆಡ್ಡಿಬೇರ್ ತನ್ನಿ ಆಯ್ತಾ. ಕ್ರೀಂ ಕಲರ್ ನ ದೊಡ್ಡ ಟೆಡ್ಡಿಬೇರ್ ತನ್ನಿ. ಸಂಜೆ  ಕಾಲೇಜಿನಿಂದ  ಬರುವಾಗ ಮನೆಯಲ್ಲಿ ದೊಡ್ಡ ಟೆಡ್ಡಿ ಬೇರ್ ಇರಬೇಕು ಅಷ್ಟೇ ಎಂದು ನಗುತ್ತಲೇ ತಲೆಗೆ ಮೊಟಕಿ ಹೋದಳು ವತ್ಸಲ. 


ರಕ್ಷಾಬಂಧನದ ದಿನವೇ ಒಂದು ದೊಡ್ಡ ಆಟಿಕೆಗಳ ಶಾಪ್ ಗೆ  ಹೋದೆ. ಹಿಂದೆ ಯಾವಾಗಲೋ ಒಮ್ಮೆ ವತ್ಸಲಳ ಜೊತೆ ಪೇಟೆಗೆ ತಿರುಗಾಡಲು ಬಂದಿದ್ದಾಗ ನೋಡಿದ್ದ ಅದೇ ಗೊಂಬೆಗಳ ಒಂದು ಶಾಪ್ ಗೆ ಹೋಗಿ ಇದ್ದುದರಲ್ಲಿಯೇ ದೊಡ್ಡದಾದ ಒಂದು ಕ್ರಿಂ ಕಲರ್  ಟೆಡ್ಡಿಬೇರ್ ಖರೀದಿಸಿದೆ.


ಕ್ರೀಂ ಕಲರ್ ನ ಮೈಯ ನುಣುಪು ರೋಮದಲ್ಲಿ, ಅದರ ಕಪ್ಪು ಕಣ್ಣು, ಕಪ್ಪು ಮೂಗು... ಎಲ್ಲವೂ ನೋಡಲು ಮುದ್ದು ಮುದ್ದಾಗಿತ್ತು. 


ಟೆಡ್ಡಿ ಬೇರ್ ಅನ್ನು ತೋಟದ ಮನೆಯ ರೂಮಿಗೆ ತಂದವನೇ ಅದನ್ನು ಒಂದು ಕುರ್ಚಿ ಯ ಮೇಲೆ ಕುಳ್ಳಿರಿಸಿ,ಸಂಜೆ  ತಂಗಿ ವತ್ಸಲ ಬರುವುದನ್ನೇ ಎದುರು ನೋಡುತ್ತಿದ್ದೆ.


ಎಷ್ಟು ಹೊತ್ತಾದರೂ ವತ್ಸಲಳ ಸುಳಿವಿಲ್ಲ. ಅವಳು ಮಾಮೂಲಿ ಆಗಿ ಬರುವ ಸಮಯವೂ ಕೂಡ ದಾಟಿ ಹೋಯಿತು.


ಭುಜಂಗಯ್ಯ ಹೇಳಿದರು ಹೋಗು ಪುರು, ಕಾರು ತೆಗೆದುಕೊಂಡು ಕಾಲೇಜ್ ಕಡೆಗೆ ಒಮ್ಮೆ ಹೋಗಿ ನೋಡು. ಯಾವತ್ತೂ ಇಷ್ಟು ಲೇಟ್ ಮಾಡುತ್ತಿರಲಿಲ್ಲ ಅವಳು.


ಕಾರ್ ತಗೊಂಡು ವೇಗವಾಗಿ ಹೋದೆ.


ಕಾಲೇಜಿಗೆ ಹೋಗುವ ದಾರಿಯಲ್ಲಿ ರೋಡ್ ಪಕ್ಕವೇ ಇದ್ದ ಒಂದು ಚಿಕ್ಕ ಗುಡ್ಡದ ಬಳಿ ವತ್ಸಲಳ ಸ್ಕೂಟಿ ಬಿದ್ದಿರುವುದನ್ನು ದೂರದಿಂದಲೇ ನೋಡಿದೆ! ಅದು ಅವಳದ್ದೇ ಸ್ಕೂಟಿ ಎಂದು ನನಗೆ ನೋಡುವಾಗಲೇ ಗೊತ್ತಾಯಿತು !! ಕೀ ಬಂಚ್ ನಲ್ಲಿ ಅವಳ ಇಷ್ಟದ ಚಿಕ್ಕ ಕರಡಿ ಗೊಂಬೆ ನೇತಾಡುತ್ತಿತ್ತು.


ದೇವರೇ ವತ್ಸಲಳಿಗೆ ಏನೂ ಆಗದಿರಲಿ ಎಂದು ಮನಸ್ಸಿನಲ್ಲಿಯೇ ಪ್ರಾರ್ಥಿಸಿದೆ.


ಕಾರ್ ನಿಲ್ಲಿಸಿ ಸ್ಕೂಟಿ ಬಳಿ ಓಡಿ ಬಂದರೆ ಅಲ್ಲಿ ವತ್ಸಲಳ ಸುಳಿವಿಲ್ಲ.


ಗುಡ್ಡದ ಮೇಲೆ ಎಲ್ಲಾದರೂ ಹೋಗಿರಬಹುದೇ ಎಂದು ಅಲ್ಲೇ ಇದ್ದ ಗುಡ್ಡಕ್ಕೆ ಓಡಿದೆ. ಹೃದಯದ  ಬಡಿತವೂ ಕೂಡ  ಜೋರಾಗಿ ಬಡಿದು ಕೊಳ್ಳುತ್ತಿತ್ತು.ಅದೂ ಸಹ ಅದನ್ನೇ ಹೇಳುತ್ತಿತ್ತು ವತ್ಸಲಗೆ ಏನೂ ಆಗದಿರಲಿ ಎಂದು..


ಆದರೆ ಅಲ್ಲಿ ಹೋದಾಗ ಮಾತ್ರ ಹೃದಯವೇ ನಿಂತಂತಾಯಿತು! 


ಗುಡ್ಡದ ಮೇಲಿನ ಭಾಗಕ್ಕೆ ಹೋಗಿ ನೋಡಿದಾಗ... ಅಲ್ಲಿ ವತ್ಸಲ ಏನೋ  ಇದ್ದಳು! ಹೌದು ಜೀವಂತವಾಗಿಯೇ ಇದ್ದಳು!!


ಆದರೆ ಹಿಂದಿನಂತೆ ಅಲ್ಲ! 


ವತ್ಸಲಳ ಬಟ್ಟೆ ಹರಿದಿತ್ತು,ಬಟ್ಟೆಯ ತುಂಬಾ ರಕ್ತ ಇತ್ತು, ಮುಖದ ತುಂಬಾ ಗಾಯ ಆಗಿತ್ತು!!


ಹಾಗೇ ಸುಮ್ಮನೆ ಅಲ್ಲೇ  ಕುಳಿತಿದ್ದಳು ವತ್ಸಲ ! ಆದರೆ ಕೈಯಲ್ಲೊಂದು ಕಬ್ಬಿಣದ ಸಲಾಕೆ ಇತ್ತು. ಅದು ರಕ್ತದಲ್ಲಿ ತೊಯ್ದಿತ್ತು!!


ಅಲ್ಲೇ ಸ್ವಲ್ಪ ದೂರದಲ್ಲಿ ಒಬ್ಬ ರಕ್ತದ ಮಡುವಲ್ಲಿ ಬಿದ್ದಿದ್ದ!! ಅವ ಮಾತ್ರ ಅರೆ ಜೀವವಾಗಿದ್ದ!!


ಅಲ್ಲಿ ಏನು ಆಗಿದೆ ಎಂದು,ನೋಡಿದ ಯಾರಿಗೇ ಆಗಲಿ ಅರ್ಥ ಆಗದೇ ಇರದು! 


ಕೆಳಗೆ ಬಿದ್ದಿದ್ದವ ಯಾರೆಂದು ಹತ್ತಿರ ಹೋಗಿ ನೋಡಿದೆ.ಅದು ಅವನೇ ಆಗಿದ್ದ.. ಕಾಮುಕ, ಕಿರಾತಕ, ಮನೆಹಾಳ, ಊರಿನ ಗೂಂಡ... ನಾನು ಅಣ್ಣ ಎಂದು ಹೇಳಿಕೊಳ್ಳಲು ಇಷ್ಟ ಪಡದ ಅಣ್ಣ... ಅರ್ಜುನ್!! 


ವತ್ಸಲ.. ನೀನು ಇಲ್ಲಿಂದ ಮೊದಲು ಹೋಗು ತಾಯಿ, ಇದನ್ನೆಲ್ಲಾ ನಾನು ನೋಡಿಕೊಳ್ಳುತ್ತೇನೆ ಅಂದೆ.


ಅವಳು ಮಾತಾಡಲಿಲ್ಲ. ಹಾಗೇ ಕುಳಿತುಕೊಂಡಿದ್ದಳು.


ಹೋಗು ತಂಗಿ ಇಲ್ಲಿಂದ ಹೋಗು ಮೊದಲು ಎಂದು ಕಾಲಿಗೆ ಬಿದ್ದೆ.


ಅಣ್ಣಾ... ಅಂದಳು.


ಹೇಳು ತಂಗಿ ಅಂದೆ.


ಪುರು ಅಣ್ಣಾ.. ನನ್ನ ಶೀಲ ಕಳೆದುಕೊಂಡೆ ಪುರು ಅ.. ಣ್ಣಾ.. ಎಂದು ಜೋರಾಗಿ ಬಿಕ್ಕಿ ಬಿಕ್ಕಿ ಅತ್ತಳು.


ನಾನು ಅಮ್ಮ ಸತ್ತಾಗಲೂ ಅತ್ತವನಲ್ಲ. ನನಗರಿವಿರದೇ ಕಣ್ಣಿರ ಕೋಡಿ ಒಂದು ಹಾಗೇ ಹರಿಯಲು ಶುರುವಾಯಿತು. ಜೀವನದಲ್ಲಿ ಮೊದಲ ಬಾರಿ ಅತ್ತಿದ್ದೆ. ಹಾಗಾಗಿ ಕಣ್ಣೀರಿನ ಹೊಳೆಗೆ ಅಣೆಕಟ್ಟು ಕಟ್ಟುವುದು ಹೇಗೆಂದು ನನಗೆ ಗೊತ್ತಿರಲಿಲ್ಲ. ಕಣ್ಣೀರು ಮತ್ತಷ್ಟು ಧಾರಕಾರ! 


ಗುಡ್ಡದ ಕೆಳಗೆ ಓಡಿ ಬಂದವನೇ ಹತ್ತಿರದ ಟೆಲಿಫೋನ್ ಬೂತ್ ನಿಂದ ಧಣಿ ಭುಜಂಗಯ್ಯ ನವರಿಗೆ ಕಾಲ್ ಮಾಡಿ  ವಿಷಯ ತಿಳಿಸಿದೆ.ಅವರಿಗೆ ಅವರ ಪ್ರಾಣವೇ ಹೋದಂತೆ ಆಯಿತು. ಇನ್ನೊಂದು ಕಾರು ಹಿಡಿದುಕೊಂಡು ಬಂದರು. ಅದರಲ್ಲಿ ವತ್ಸಳನ್ನು ಕರೆದುಕೊಂಡು ಮನೆಗೆ ಹೋದರು. ಗುಡ್ಡದ ಕೆಳ ಭಾಗದವರೆಗೂ ನಾನೇ ಅವಳನ್ನು ಹೊತ್ತು ಕೊಂಡು ಬಂದಿದ್ದೆ.


ಗುಡ್ಡದ ಮೇಲೆ ಅರ್ಜುನ್ ಇನ್ನೂ ಸತ್ತಿರಲಿಲ್ಲ, ಅವ ಸತ್ತರೆ ಇನ್ನೊಂದು ಸಮಸ್ಯೆ ಏನಾದರೂ ಆಗಬಹುದು ಎಂದುಕೊಂಡು,ಒಮ್ಮೆ ನೋಡಿಕೊಂಡು ಬರುವ ಅಂತ ಗುಡ್ಡದ  ಕೆಳಗೆ ಇದ್ದವನು ಪುನಃ ಗುಡ್ಡದ ಮೇಲಕ್ಕೆ ಓಡಿದೆ.


ಸತ್ತಿದ್ದಾನೋ ಬದುಕಿದ್ದಾನೋ ಎಂದು ನೆಲದಲ್ಲಿ ಬಿದ್ದಿದವನನ್ನು ತಿರುಗಿಸಿ ನೋಡಿದೆ. ಆದರೆ ನನ್ನ ದುರಾದೃಷ್ಟ ನೋಡಿ ಅಲ್ಲಿಯವರೆಗೂ ಬದುಕಿದ್ದವನ ಉಸಿರು, ನಾನು ಪಕ್ಕಕ್ಕೆ ತಿರುಗಿಸಿದ ಅದೇ ಹೊತ್ತಿಗೆ ಕರೆಕ್ಟ್ ಆಗಿ ನಿಂತು ಹೋಯಿತು..!!


ಅವ ಸತ್ತಿದ್ದು ನನ್ನ ದುರಾದೃಷ್ಟವಲ್ಲ. ಆ ಪಾಪಿ ಬದುಕಿ ಯಾರಿಗೆ ಲಾಭ ಆಗಬೇಕಿತ್ತು.ಸಾವಿಗಿಂತ ಅವನಿಗೆ ಬೇರೆ ಶಿಕ್ಷೆಯೇ ಇರಲಿಲ್ಲ. ಆದರೆ ನಾನಲ್ಲಿ ಇರುವಾಗ ಸತ್ತ ನೋಡಿ ಅದುವೇ ನನ್ನ ದುರಾದೃಷ್ಟ.!


ನಮ್ಮಲ್ಲಿ ಕೆಟ್ಟ ಕೆಲಸ ನಡೆಯುವಾಗ ತಡೆಯಲು  ಜನರು ಬರುವುದೇ ಇಲ್ಲ. ಆದರೆ ಅದು ಮುಗಿದ ನಂತರ ಜನ ಬಂದೇ  ಬರುತ್ತಾರೆ. ಅಲ್ಲೂ ಹಾಗೇ ಆಯಿತು. ಅಲ್ಲೇ ಸುತ್ತ ಮುತ್ತ ಹಲವು ಕ್ರಿಕೇಟ್ ಆಟ ಆಡುವ ಹುಡುಗರು ಅಲ್ಲಿಗೆ ಅದೇ ಸಮಯಕ್ಕೆ ಸರಿಯಾಗಿ ಬಂದಿದ್ದರು.


ನನ್ನನ್ನು ಸತ್ತ ಅರ್ಜುನ್ ನೊಂದಿಗೆ ನೋಡಿ, ಅಲ್ಲೇ ಬಿದ್ದಿದ್ದ ಕಬ್ಬಿಣದ ಸಲಾಕೆ, ಹಾಗೂ ಹಾಕಿದ್ದ ಮೈಯ ಬಟ್ಟೆ ಎಲ್ಲಾ ರಕ್ತಸಿಕ್ತ ವಾಗಿದ್ದ ನನ್ನನ್ನು ಗಮನಿಸಿ,ಸತ್ತವನನ್ನು ನಾನೇ ಕೊಂದಿರಬೇಕೆಂದು ತಿಳಿದು ಎಲ್ಲಾ ಸೇರಿ ನನ್ನ ಹಿಡಿದರು!


ಸ್ವಲ್ಪ ಹೊತ್ತಾದ ಮೇಲೆ ಪೋಲಿಸ್ ಜೀಪ್ ಕೂಡ ಬಂತು! 


ನನ್ನನ್ನು ಕರೆದುಕೊಂಡು ಹೋದರು, ಕೆಲವು ಹೊತ್ತಿನಲ್ಲೇ ನಾನು ಕಂಬಿಗಳ ಹಿಂದೆ ನಿಂತಿದ್ದೆ!


ಜೀವನದಲ್ಲಿ ನಾನು ಯಾವತ್ತೂ ಕೊಲೆ ಮಾಡಿದವನೇ ಅಲ್ಲ! ಆದರೂ ನನ್ನ ಸುತ್ತ ಮುತ್ತ ಸಂಭವಿಸಿದ ಸಾವುಗಳಲ್ಲಿ ಯಾವತ್ತೂ ನಾನೇ ಇದ್ದೆ.. ಅದೇ ನನ್ನ ದುರಂತ! 


ನನಗೆ ನನ್ನ ಪರಿಸ್ಥಿತಿಯ ಬಗ್ಗೆ ದುಃಖವಿರಲಿಲ್ಲ.ಆದರೆ ವತ್ಸಲಳ ಮೇಲೆ ಆದ ದೌರ್ಜನ್ಯ ನನ್ನನ್ನು ಅತೀವ ಘಾತಿಗೊಳಿಸಿತ್ತು! 


ಭುಜಂಗಯ್ಯನವರು ಒಳ್ಳೆಯವರು. ನನಗೆ ಬೇಲ್ ಸಿಗಲು ತುಂಬಾನೇ ಕಷ್ಟ ಪಟ್ಟರು.ಆವಾಗವಾಗ ನೋಡಲು ಬರುತ್ತಿದ್ದರು, ಧೈರ್ಯ ಹೇಳುತ್ತಿದ್ದರು.ನಾನು ಕೇಳುತ್ತಿದ್ದೆ ತಂಗಿ ವತ್ಸಳ  ಹೇಗಿದ್ದಾಳೆ ಎಂದು.ಇದ್ದಾಳಪ್ಪ.. ಆದರೆ ಸುಖವಾಗಿ ಇಲ್ಲ ಎಂದು ಅವರು ಕೂಡ ಕಣ್ಣೀರ ಹೊಳೆ ಹರಿಸುತ್ತಿದ್ದರು. 


ಒಂದು ದಿನ ಹೇಗೋ ಬೇಲ್ ಸಿಕ್ಕಿತ್ತು.


ಸೀದಾ ಮನೆಗೆ ಬಂದೆ. ಬಂದವನೇ ಭುಜಂಗಯ್ಯನವರ ಬಳಿ ಕೇಳಿದೆ.


ಎಲ್ಲಿ ತಂಗಿ ವತ್ಸಲ ಎಂದು.


ಅವರು ಏನು ಹೇಳಲಿಲ್ಲ. ಬದಲಾಗಿ ಪ್ರೇಮಕ್ಕ ಬಂದು ಒಂದು ಲಕೋಟೆ ಕೊಟ್ಟರು.


ಇದನ್ನು  ನೀನು ಬಂದಾಗ ನಿನಗೆ ಕೊಡ ಬೇಕು ಎಂದು ವತ್ಸಲ ಹೇಳಿ ಹೋಗಿದ್ದಾಳೆ  ಪುರು.. ಎಂದು ಪ್ರೇಮಕ್ಕ ಹೇಳಿದರು.


ಲಕೋಟೆ ಮೇಲೆ ನನ್ನದೇ ಹೆಸರು ಇತ್ತು "ಪುರು ಅಣ್ಣ.. " ಎಂದು. ಲಕೋಟೆ ಓಪನ್ ಮಾಡಿದೆ. ಅದರಲ್ಲಿ ಒಂದು ಪತ್ರ ಹಾಗೂ ಒಂದು ರಕ್ಷಾ ಬಂಧನದ ರಾಖಿ  ಇತ್ತು!


ರಪ ರಪನೆ ಪತ್ರ ತೆಗೆದು ಓದಿದೆ..


ಅದರಲ್ಲಿ ಹೀಗಿತ್ತು..


" ಪುರು ಅಣ್ಣಾ.. ನನಗೆ ಅಣ್ಣಾ ಅಂತ ಯಾರೂ ಇರಲೇ ಇಲ್ಲ. ಬೇರೆ ಹುಡುಗಿಯರ ಅಣ್ಣಂದಿರನ್ನು ನೋಡುವಾಗ, ಅವರು ಬಾಯಿ ತುಂಬಾ ಅಣ್ಣಾ.. ಎಂದು ಕರೆಯುವಾಗ ನನಗೂ ಒಬ್ಬ ಅಣ್ಣ ಅಂತ ಒಬ್ಬ ಇದ್ದರೆ ಎಷ್ಟು ಚಂದ ಅಲಾ ಅನ್ನಿಸುತ್ತಿತ್ತು.

ಆವಾಗ ಸಿಕ್ಕಿದವರು ನೀವು ಅಣ್ಣಾ.


ನೀವು ಬಂದ ಮೇಲೆ ಈ ಜಗತ್ತು ನನಗೆ ಎಂದಿಗಿಂತ ಹೊಸತಾಯಿತು ಸುಂದರವಾಗಿ ಬದಲಾಯಿತು. ಪ್ರತೀ ಸಲ ಅನ್ನಿಸುತ್ತಿತ್ತು ಪುರು ಅಣ್ಣಾ ನೀವು ಯಾಕೆ ನನಗೆ ಮೊದಲೇ ಸಿಗಲಿಲ್ಲ ಎಂದು.


ನಾನು ಯಾವ ಅಣ್ಣನಿಗೂ ರಾಖಿ ಕಟ್ಟಿದವಳೇ ಅಲ್ಲ. ಆದರೆ ವರ್ಷ ವರ್ಷವೂ ರಕ್ಷಾ ಬಂಧನ ಹಬ್ಬ ಬರುತ್ತಲೇ ಇತ್ತು. ಆವಾಗಲೆಲ್ಲ ನನಗೂ  ಒಬ್ಬ ಸ್ವಂತ ಅಣ್ಣ ಇರಬೇಕು,ಅವನಿಗೆ ರಾಖಿ ಕಟ್ಟಬೇಕು, ಚಾಕೊಲೇಟ್, ಹಣ, ಗಿಫ್ಟ್ ಅದು ಇದು  ಅಂತ ಕಾಡಿ ಬೇಡಿ  ಸ್ವೀಕರಿಸಬೇಕು ಅಂತ ಅನ್ನಿಸುತ್ತಿತ್ತು. ಒಂದು ದಿನ ನೀವು ಬಂದೀರಿ ನೋಡಿ. ನನಗೆ ಅಣ್ಣಾ ಇಲ್ಲ ಎನ್ನುವ ಕೊರಗೇ  ಹೋಯಿತು ಪುರು ಅಣ್ಣ.. 


ನೀವು ಅದೆಷ್ಟು ಸೌಮ್ಯ. ನಾನೆಂದರೆ ಅದೆಷ್ಟು ಕಾಳಜಿ, ಜಾಗ್ರತೆ,ಮಾತು ಕಡಿಮೆ ಆಡಿದರೂ ಅದೆಷ್ಟು ಬೆಟ್ಟದಂತಹ ಪ್ರೀತಿ. 


ಎಲ್ಲಾ ತಂಗಿಯಂದಿರು ಕಾಯುವಂತೆ ನಾನು ನೀವು ಸಿಕ್ಕಕೂಡಲೇ ರಕ್ಷಾಬಂಧನ ಎಂಬ ಅಣ್ಣ ತಂಗಿಯರ ದಿನಕ್ಕಾಗಿ ಕಾದೆ. ನಿಮಗೆ ರಕ್ಷೆ ಕಟ್ಟಿ ಯಾವುದಾದರೂ ಗಿಫ್ಟ್ ಪಡೆದುಕೊಳ್ಳಬೇಕು ಎಂದು ಆಸೆ ಪಟ್ಟೆ. ಅದಕ್ಕಾಗಿ ರಕ್ಷಾ ಬಂಧನ ದಿನ, ರಕ್ಷೆಯನ್ನು ಕೂಡ ಖರಿದಿಸಿದೆ ಪುರು ಅಣ್ಣಾ..


ಆದರೆ ವಿಧಿ ನೋಡಿ! ನಾನು ಮಾಡದ ತಪ್ಪಿಗೆ ಯಾವುದೋ ಪಾಪಿಯಿಂದಾಗಿ ನನ್ನ ಬಾಳು ಹಾಳಾಯಿತು ಪುರು ಅ.. ಣ್ಣಾ!!


ನೀವು ಮಾಡದ ತಪ್ಪಿಗೆ ನೀವು ಕೂಡ ಜೈಲಿಗೂ ಹೋದಿರಿ. ಅದೆಷ್ಟು ಬೇಸರವಾಯಿತು ಗೊತ್ತೇ. ಸಮಾಧಾನ ಪಡಿಸಲು ನನ್ನ ಬಳಿ ನೀವು ಇರಬೇಕು ಎಂದು ಅನ್ನಿಸಿತು. ನಿಮಗೆ ಅಲ್ಲಿ ಸಮಾಧಾನ ಪಡಿಸಲು ಅಲ್ಲಿ ಯಾರು ಇದ್ದರೋ ನನಗದು ಗೊತ್ತಿಲ್ಲ ಪುರು ಅಣ್ಣ... ನಿಮ್ಮ ಬಗ್ಗೆಯೂ ಯೋಚಿಸಿ ಯೋಚಿಸಿ ಇಲ್ಲಿ ಕಣ್ಣೀರಾಗುತ್ತಿದ್ದೆ. 


ನೀವು ಚಿಂತೆ ಮಾಡಬೇಡಿ ಪುರು ಅಣ್ಣಾ ,ಅಪ್ಪ ನಿಮ್ಮನ್ನು ಹೇಗಾದರೂ  ಬಿಡಿಸಿಯೇ ಬಿಡಿಸುತ್ತಾರೆ. ಆ ನಂಬಿಕೆ ನನಗೂ ಇದೆ. ಅದೂ ಅಲ್ಲದೇ ನೀವು ಯಾವುದೇ ತಪ್ಪು ಮಾಡಿಲ್ಲ. ಆದರೆ ಅಣ್ಣಾ.. ನನಗೆ ಯಾಕೋ ಇಲ್ಲಿರಲು ಮನಸ್ಸಾಗುತ್ತಿಲ್ಲ.ಇಲ್ಲಿಂದ ತುಂಬಾ ದೂರ ಎಲ್ಲಿಯಾದರೂ ಹೋಗಿ ಬಿಡುವ  ಎಂದು ಅನ್ನಿಸುತ್ತಿದೆ, ಅದಕ್ಕಾಗಿ ಅಣ್ಣ ನಾನು ದೂರ ಹೋಗುತ್ತಿದ್ದೆನೆ!


ನೀವು ನನ್ನ ಒಡಹುಟ್ಟಿದ ಅಣ್ಣಾ ಆಗಿರಲಿಲ್ಲ ನಿಜ. ಆದರೆ ನೀವು ಅದಕ್ಕಿಂತಲೂ ಹೆಚ್ಚಿನ ಅಣ್ಣಾ ಆಗಿದ್ದಿರಿ ಪುರು ಅಣ್ಣಾ . ಮುಂದೊಂದು ಜನ್ಮ ಅಂತ ಇದ್ದರೆ ನಿಮ್ಮ ಒಡಹುಟ್ಟಿದ ತಂಗಿಯಾಗಿಯೇ ಹುಟ್ಟಬೇಕೆಂದು ನನ್ನ ಏಕಮಾತ್ರ ಆಸೆ..ಒಂದೋ ನೀವು ನನ್ನಮ್ಮ ನ ಹೊಟ್ಟೆಯಲ್ಲಿ ಹುಟ್ಟಿ, ಇಲ್ಲವೇ ನಾನೇ ನಿಮ್ಮಮ್ಮ ನ ಹೊಟ್ಟೆಯಲ್ಲಿ ಹುಟ್ಟಿ ಬರುತ್ತೇನೆ. 


ಪುರು ಅಣ್ಣಾ... ನಿಮ್ಮ ಕಥೆ ಎಲ್ಲಾ ನನಗೆ ಗೊತ್ತು. ನಿಮಗೆ ಬಾಳಿನಲ್ಲಿ ಸುಖವೇ ಸಿಗಲಿಲ್ಲ ಅಲ್ಲವೇ ಅಣ್ಣ. ಆ ಭಗವಂತ ಯಾವತ್ತೂ ನಿಮ್ಮನ್ನು ಸುಖವಾಗಿಡಲಿ.


ನನಗಾಗಿ ಕರಡಿ ಗೊಂಬೆ ತಂದಿದ್ದಿರೋ ಇಲ್ಲವೋ... ಆದರೆ ಈ ನಿಮ್ಮ ಪ್ರೀತಿಯ ತಂಗಿಗಾಗಿ ಖಂಡಿತವಾಗಿಯೂ ತಂದೇ ತಂದಿರುತ್ತೀರಿ ಎಂದು ನನಗೆ ಗೊತ್ತಿದೆ ಅಣ್ಣ. ಆದರೆ ನಿಮ್ಮ ಕೈಯಿಂದ ಪಡೆದು ಕೊಳ್ಳಲು ನಾನಿಲ್ಲಿ ಇಲ್ಲ ಅಷ್ಟೇ. ನನ್ನ ಧೌರ್ಭಾಗ್ಯ ಅಂದರೆ ಅದು. 


ನಾನು ನಿಮಗೆಂದು ತಂದ ರಕ್ಷಾ ಬಂಧನದ ರಾಖಿ ಇದರಲ್ಲೇ ಈ ಲಕೋಟೆಯಲ್ಲೇ ಇದೆ. ಅದು ನಿಮಗಾಗಿಯೇ...


ನಿಮಗೆ ಒಳ್ಳೆಯದಾಗಲಿ ಪುರು  ಅಣ್ಣಾ....ಸದಾ ಖುಷಿ ಖುಷಿ ಆಗಿ ಇರಿ 


ನಿಮ್ಮ ತಂಗಿ- ವತ್ಸಲ  "


ಓದಿ ಒಂದು ಕ್ಷಣ ಸ್ತಬ್ಧ ಆದೆ. ನನಗಾಗಿ ಇಷ್ಟೊಂದು ಹಂಬಲಿಸುವವರು ಕೂಡ ಈ ಜಗತ್ತಿನಲ್ಲಿ ಇದ್ದಾರೆ ಎಂದು ಗೊತ್ತಾಗಿದ್ದು ಆ ದಿನ!


ಆದರೆ ಏನು ಮಾಡಲಿ ನನ್ನನ್ನು ಹಂಬಲಿಸುವವರು ಎಲ್ಲರೂ ನನ್ನಿಂದ ದೂರವೇ ಹೋಗಿದ್ದಾರೆ!! 


ವತ್ಸಲ ಎಲ್ಲೇ ಇದ್ದರೂ ಹೋಗಿ ಅವಳನ್ನು ಕರೆ ತರಲೇಬೇಕು ಎಂದು ದೃಢ ನಿರ್ಧಾರ ಮಾಡಿದೆ. 


ಪ್ರೇಮಕ್ಕನ  ಬಳಿ ಕೇಳಿದೆ. ವತ್ಸಲ ಎಲ್ಲಿಗೆ ಹೋಗಿದ್ದಾಳೆ ಎಂದು.


ನನ್ನ ಕೈ ಹಿಡಿದು ಕೊಂಡು ಮನೆಯ ಹಿಂಬದಿಗೆ ಕರೆದುಕೊಂಡು ಹೋದರು ಪ್ರೇಮಕ್ಕ. 


ಮನೆಯ ಹಿಂದೆ ಅಲ್ಲೇ ದೂರದಲ್ಲಿ ಒಂದು ಹೊಸ ಗೋರಿ ನಿರ್ಮಿಸಿದ್ದರು. ಅದನ್ನು  ತೋರಿಸಿ... ಅಲ್ಲಿ!. ಎಂದು ಹೇಳಿದರು! 


ಜೀವ ಇರುವವನಿಗೆ, ಕಣ್ಣು ಇರುವವನಿಗೆ  ಕಣ್ಣೀರು ಬರದೇ ಇರಲು ಹೇಗೆ ಸಾಧ್ಯ!


ಪ್ರೇಮಕ್ಕನ ಕಣ್ಣುಗಳಲ್ಲಿ ಗಂಗೆ ಕಾವೇರಿಯರು ಅದಾಗಲೇ ರಭಸವಾಗಿ ಹರಿಯಲು ಶುರು ಮಾಡಿದ್ದರು. ಆದರೆ ನಾನು ಅಳಲಿಲ್ಲ. ಸ್ತಬ್ಧನಾಗಿದ್ದೆ!!  ತುಂಬಾ ಹೊತ್ತು ಹಾಗೇ ಇದ್ದೆ! 


ಒಮ್ಮೆಲೇ ವತ್ಸಲ ಕೇಳಿದ್ದ ಟೆಡ್ಡಿಬೇರ್ ನ ನೆನಪಾಯಿತು. ಸೀದಾ ತೋಟದ ಮನೆಯ ನಮ್ಮ ರೂಮಿನ ಕಡೆಗೆ  ಓಡಿದೆ. ಟೆಡ್ಡಿಬೇರ್ ಅಲ್ಲೇ ಕುರ್ಚಿ ಮೇಲೆ ಆರಾಮವಾಗಿ ಕುಳಿತಿತ್ತು.ಅದನ್ನು  ಹಿಡಿದುಕೊಂಡೇ ಪುನಃ ವತ್ಸಲ ಳ ಗೋರಿಯ ಕಡೆಗೆ ಓಡಿದೆ.


ಸ್ವಲ್ಪ ಹೊತ್ತಿನಲ್ಲಿಯೇ ನಾನು ವತ್ಸಲ ಳ ಗೋರಿಯ ಎದುರು ನಿಂತಿದ್ದೆ!! 


ನಿಧಾನವಾಗಿ ನಡೆದು ಗೋರಿಯ ಮೇಲೆ ಆ ದೊಡ್ಡ ಟೆಡ್ಡಿಬೇರ್ ಇಟ್ಟೆ. ಹಾಗೇ ವತ್ಸಲಳ ಗೋರಿಯನ್ನೇ ನೋಡಿದೆ. ಕಣ್ಣಲ್ಲಿ ನೀರು ಏನು  ಬರಲಿಲ್ಲ.ಅಮ್ಮ ಹೇಳಿದ್ದು ನೆನಪಾಯಿತು. ಯಾರಾದರೂ ಸತ್ತು ಹೋದಾಗ ಅವರ ನೆನಪುಗಳು ಬೇಕು ಎಂದು ಇದ್ದರೆ ಗಳ ಗಳ ಎಂದು ಅತ್ತು ಬಿಡಬಾರದು ಪುರು, ಅತ್ತರೆ ನೆನಪುಗಳು ಕೂಡ  ಕಣ್ಣೀರಾಗಿ ಹರಿದು ಹೋಗುತ್ತದೆ.. ಎಂದು ಅಮ್ಮ ಹೇಳಿದ್ದಳು. ನನಗೆ ತಂಗಿ ವತ್ಸಲ ಳ ನೆನಪೊಂದು  ಜೀವನ ಪೂರ್ತಿ ಬೇಕಿತ್ತು. ಅದಕ್ಕಾಗಿ ಅಳಲಿಲ್ಲ! 


ತಂಗಿ ವತ್ಸಲ ವಯಸ್ಸಿನಲ್ಲಿ ಚಿಕ್ಕವಳಾದರೂ ಅದೆಂತಹ ತಾಯಿ ಪ್ರೀತಿ ತೋರಿಸಿಬಿಟ್ಟಿದ್ದಳು. ವಾತ್ಸಲ್ಯ ಮೂರ್ತಿ ಅವಳು. ಅವಳಿಗೆ ಭಗವಂತ ನಿಜವಾಗಿಯೂ ಮೋಸ ಮಾಡಿದ್ದ ಎಂದು ಅನಿಸಿತು! 


ತಂಗಿ ನೀನು ಸಾಯುವ ಮೂಲಕ  ತಪ್ಪು ನಿರ್ಧಾರ ಮಾಡಿದೆ...ಪ್ರತಿಯೊಂದಕ್ಕೂ ಬೇಕಿದ್ದ ಈ ಪುರು ಅಣ್ಣ.. ಈ ನಿರ್ಧಾರ ತೆಗೆದು ಕೊಳ್ಳುವಾಗ ನೆನಪು ಆಗಲೇ ಇಲ್ಲವೇ!

ಎಲ್ಲರೂ ನನ್ನನ್ನು ಬಿಟ್ಟು ಹೋದರು, ಕೊನೆಗೂ ನೀನೂ ಬಿಟ್ಟು ಹೋದೆ ಅಲ್ಲವೇ ತಂಗಿ.... ಮನಸ್ಸು ಪದೇ ಪದೇ ಇದನ್ನೇ ಅಲ್ಲಿ  ಹೇಳುತಿತ್ತು. 


ಒಮ್ಮೆಯೇ ವತ್ಸಲ ಹೇಳುತ್ತಿದ್ದ ಆ ಮಾತುಗಳು ಕೂಡ ಹಾಗೇ  ನೆನಪಾಯಿತು...


" ನೀವು ಅಂತು ನನಗೆ ದೇವರೇ ಕೊಟ್ಟ ಅಣ್ಣ.. ನೀವು ಬರುವ ಮೊದಲು ನಾನು ಇಷ್ಟು ಖುಷಿಯಲ್ಲಿ ಇರಲೇ ಇಲ್ಲ. ಬಹು ಕಾಲ ಹೀಗೆ ನಾವಿಬ್ಬರೂ ಖುಷಿ ಖುಷಿ ಆಗಿ ಇರಬೇಕು ಪುರು ಅಣ್ಣ ..

ನೀವು  ಕೂಡ ಅಷ್ಟೇ ಯಾವತ್ತೂ ಸೀರಿಯಸ್ ಆಗಿ ಇರ್ಬಾರ್ದು,ಅದರಲ್ಲೂ ಟೆಡ್ಡಿಬೇರ್ ಕರಡಿ, Sorry sorry.. ನಿಮ್ಮ ಕರಡಿ ಗೊಂಬೆ ತರಹ ಗುಮ್ಮನ ಹಾಗೇ ಇರಲೇ ಬಾರದು ನೀವು. ನನ್ನನ್ನು ನೋಡಿ ಯಾವಾಗಲೂ ನಗುತ್ತಲೇ ಇರುತ್ತೇನೆ. ನೀವು ಕೂಡ ಸದಾ ನಗುತ್ತಲೇ ಇರಬೇಕು,ಹೃದಯವನ್ನು ಯಾವತ್ತೂ ಕಲ್ಲು ಮಾಡಿಕೊಳ್ಳಬಾರದು ಪುರು ಅಣ್ಣ,ನಾನು ಹೇಳಿದ್ದು ನೆನಪಿಲ್ಲವೇ, ಯಾವತ್ತೂ ಮನಸು ಬಿಚ್ಚಿ ಮಾತಾಡಬೇಕು..ಹೃದಯದಿಂದ ನಗಬೇಕು...  


ಹಾಗೇ ಜೋರಾಗಿ ನಕ್ಕು ಬಿಟ್ಟೆ...ಮತ್ತಷ್ಟು ನಕ್ಕೆ... ಆದರೆ ಅದರಲ್ಲಿ ಯಾವುದೇ ಖುಷಿ ಇರಲಿಲ್ಲ,ಕೇವಲ ಸುಮ್ಮನೆ ನಗುತ್ತಿದ್ದೆ ಅಷ್ಟೇ !! 


ಜೋರು ಮಳೆ ಸುರಿಯಿತು.ಟೆಡ್ಡಿಬೇರ್ ಒದ್ದೆಯಾಯಿತು.ಅದರ ಕಣ್ಣ ತುಂಬಾ ಮಳೆನೀರೇ ಹರಿಯುತ್ತಿತ್ತು.ಅದುವೇ ನಿಜವಾಗಿಯೂ ಅಳುತ್ತಿತ್ತು ಏನೋ..ನೋಡುವಾಗ ಹಾಗೇ  ಕಂಡಿತು ನನಗೆ. ನಾನು ಅಳುವುದಿಲ್ಲ ನೋಡಿ ಅದಕ್ಕೆ ಬಹುಶಃ  ಗುಮ್ಮ ಕರಡಿಗೊಂಬೆ ಅಳುತ್ತಿತ್ತೋ ಏನೋ...! 


ಕೈಯಲ್ಲಿ ಇದ್ದ ವತ್ಸಲ ಳ ರಾಖಿ ಕರಡಿ ಗೊಂಬೆಯ ಕೈಗೆನೇ ಕಟ್ಟಿದೆ. ಅದರ ತಲೆಯನ್ನು ಹಾಗೇ ಕೈಯಲ್ಲಿ ಸವರಿದೆ. 


ಅವತ್ತೂ ಕೂಡ ಗೋರಿಯ ಕಲ್ಲುಗಳಂತೆ ನನ್ನೆದೆಯೂ ಕಲ್ಲಾಗಿ ಹೋಗಿತ್ತು!! ನನ್ನೆದೆಯಲ್ಲಿ ಇರುವ ಕಲ್ಲುಗಳ ಲೆಕ್ಕ ನಾನು ಯಾವತ್ತೂ ಇಟ್ಟದ್ದೇ ಇಲ್ಲ!!! 


ಮಳೆ ಮತ್ತಷ್ಟು ಜೋರಾಯಿತು.ಗೋರಿಯ ಮೇಲೆ ಕೂತಿದ್ದ ಕರಡಿ ಗೊಂಬೆ ಅಡ್ಡ ಬಿತ್ತು!!!


.....................................................................................


#ಪುಷ್ಯರಾಗ 🧡


Ab Pacchu

Moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ