ಅಮ್ಮನ ತಟ್ಟೆ

ನಾನು ಬಸ್ಸಿನಲ್ಲಿ ಇದ್ದೆ. ಎಂದಿನಂತೆ ಬಸ್ ಅವತ್ತು ಕೂಡ ಫುಲ್, ಬಸ್ ಸ್ಟ್ಯಾಂಡ್ ನಲ್ಲಿಯೇ ಸೀಟುಗಳೆಲ್ಲವೂ ಭರ್ತಿಯಾಗಿದ್ದವು. ಇನ್ನು ಯಾರಾದರೂ ಮುಂದಿನ ಸ್ಟಾಪ್ ನಲ್ಲಿ ಬಸ್ ಹತ್ತಿದರೆ,ಅವರೆಲ್ಲ ನಿಂತುಕೊಂಡೆ ಪ್ರಯಾಣಿಸಬೇಕಾದ ಸ್ಥಿತಿ. ಸದ್ಯಕ್ಕೆ ನಾನೊಬ್ಬನೇ ಆ  ಬಸ್ಸಿನಲ್ಲಿ ನಿಂತುಕೊಂಡಿದ್ದೆ. ನಾನೂ ಸೇರಿದಂತೆ ಆ ಬಸ್ಸಿನಲ್ಲಿದ್ದ ಹೆಚ್ಚಿನ ಎಲ್ಲರೂ ಮುಕ್ಕಾಲು ಘಂಟೆ, ಒಂದು ಘಂಟೆ ಪ್ರಯಾಣಿಸುವವರೇ ಆಗಿದ್ದರು.ಬಸ್ಸು ಬಸ್ ಸ್ಟ್ಯಾಂಡ್ ಬಿಟ್ಟು ಚಲಿಸಿತು..

ಬಸ್ average speed ನಲ್ಲಿ ಹೋಗುತ್ತಿತ್ತು. ಮುಂದೆ ಒಂದು ಸ್ಟಾಪ್ ಬಂತು. ಅವನೊಬ್ಬ ಕಾಲೇಜ್ ಸ್ಟೂಡೆಂಟ್ ತರಹ ಇದ್ದ ಹುಡುಗ. ಕಾಲೇಜು ಸ್ಟೂಡೆಂಟ್ ತರಹ ಅಲ್ಲ ಕಾಲೇಜು ಸ್ಟೂಡೆಂಟೇ ಅಂತ ಹೇಳ್ಬಹುದು. ಕಾಲೇಜು ಬ್ಯಾಗ್ ಒಂದು ಇರ್ಲಿಲ್ಲ ಅಷ್ಟೇ. ಹೆಚ್ಚು ಕಡಿಮೆ 19 ರ ಒಳಗಿನ ವಯಸ್ಸು. ಆ ಸ್ಟಾಫ್ ನಲ್ಲಿ    ಬಸ್ ನ ಮುಂಭಾಗದಲ್ಲಿ ಅವನು ನಾವಿದ್ದ ಬಸ್ ಹತ್ತಿದ. ಅವನೊಂದಿಗೆ ಅಸೌಖ್ಯದಿಂದಿರುವ ಅವನ ವೃದ್ಧ ತಾಯಿ ಕೂಡ ಇದ್ದರು. ಬಹುಶಃ ಆಸ್ಪತ್ರೆಗೆ ಹೋಗುತ್ತಿದ್ದರೋ ಏನೋ, ಗೊತ್ತಿಲ್ಲ.

ಅಮ್ಮನ ಜೊತೆ ಬಸ್ ಹತ್ತಿದ ಹುಡುಗ,ಮೊದಲಿನಿಂದ ಕೊನೆಯವರೆಗೂ ಬಸ್ ನಲ್ಲಿ ಒಮ್ಮೆ ದೃಷ್ಟಿ ಹಾಯಿಸಿ ನೋಡಿದ. ಅಲ್ಲಿ ತನ್ನ ಅಮ್ಮನಿಗಾಗಿ ಯಾವುದಾದರೂ  ಸೀಟುಗಳು ಖಾಲಿ ಇವೆಯೇ ಎಂದು. ಇಲ್ಲ ಯಾವುದೇ ಸೀಟುಗಳು ಖಾಲಿ ಇಲ್ಲ ಎಂದು ಹುಡುಗನಿಗೆ ಒಂದೇ ನೋಟದಲ್ಲಿ ಖಾತರಿ ಆಗಿ ಹೋಯಿತು .

ಬಸ್ ನ ಮುಂಭಾಗದಲ್ಲಿ ಆ ಅನಾರೋಗ್ಯ ಪೀಡಿತ ವೃದ್ಧ ತಾಯಿಗಿಂತ ಕಡಿಮೆ ವಯಸ್ಸಿನ ಹೆಂಗಸರು, ಕಾಲೇಜು ವಿದ್ಯಾರ್ಥಿನಿಯರು ಎಲ್ಲರೂ ಇದ್ದರು. ಹೌದು ಎಲ್ಲರೂ ಕುಳಿತೇ ಇದ್ದರು. ಹೆಂಗಸರು ತಮಗೇನು ಸಂಬಂಧ ವಿಲ್ಲದಂತೆ ಇದ್ದರೆ,ಕಾಲೇಜು ವಿದ್ಯಾರ್ಥಿನಿಯರು ತಮ್ಮ ತಮ್ಮ ಮೊಬೈಲ್ ನಲ್ಲಿ ತುಂಬಾನೇ ಆಳದಲ್ಲಿ ಮುಳುಗಿದ್ದರು !

ಹುಡುಗನಿಗೆ ಗೊತ್ತಾಯಿತು ಇಲ್ಲ ಇಲ್ಲಾರು ತಮಗೆ ಸೀಟು ಬಿಟ್ಟುಕೊಡುವವರಿಲ್ಲ ಎಂದು. ಹುಡುಗ ನಿಧಾನವಾಗಿ ಮಾತನಾಡಲು ಶುರು ಮಾಡಿದ. " ನೋಡಿ ನಮ್ಮ ಅಮ್ಮನಿಗೆ ಸ್ವಲ್ಪ ಹುಶಾರ್ ಇಲ್ಲ, ನಿಂತು ಕೊಂಡು ಪ್ರಯಾಣಿಸಲು ಕಷ್ಟವಾಗುತ್ತದೆ, ಯಾರಾದರೂ....." ಅವನ ಮಾತು ಮುಗಿಯುವುದರೊಳಗೆ ಬಸ್ ನ ಮಧ್ಯಭಾಗದಲ್ಲಿ ಕುಳಿತಿದ್ದ ಒಬ್ಬ ಕಾಲೇಜು ಹುಡುಗ ಕುಳಿತಲ್ಲಿಂದ ಎದ್ದು ನಿಂತು "ಬನ್ನಿ ನೀವು ಕುಳಿತುಕೊಳ್ಳಿ..." ಎಂದು ಅವನ ತಾಯಿಗೆ ಸೀಟು ಬಿಟ್ಟು ಕೊಟ್ಟು ಅಲ್ಲೇ ಸೀಟು ಪಕ್ಕ ನಿಂತುಕೊಂಡ. ತನ್ನ ತಾಯಿಯನ್ನು ಕುಳಿತುಕೊಳ್ಳಿಸಿ ಆ ಹುಡುಗ ಕೂಡ ಅಲ್ಲೇ ನಿಂತುಕೊಂಡ. ಈಗ ಆ ಬಸ್ಸಿನಲ್ಲಿ ನನ್ನನ್ನು ಸೇರಿಸಿ ನಿಂತುಕೊಂಡವರು ಮೂರು ಜನ. ಬಸ್ ಮುಂದಕ್ಕ ಚಲಿಸಿತು.

ಮುಂದೆ ಮೂರ್ನಾಲ್ಕು ಸ್ಟಾಪ್ ಗಳ ನಂತರ ಒಂದು ಸ್ಟಾಪ್ ನಲ್ಲಿ ಹುಡುಗನ ತಾಯಿಯ ಪಕ್ಕದ ಸೀಟನಲ್ಲಿ ಕೂತಿದ್ದವರು ಒಬ್ಬರು, ತಮ್ಮ ಆ ಸ್ಟಾಪ್ ನಲ್ಲಿ ಇಳಿದುಬಿಟ್ಟರು. ಈಗ ಅಲ್ಲಿ ಒಂದು ಖಾಲಿ ಸೀಟು ಇದೆ, ಆ ತಾಯಿಯ ಪಕ್ಕ. ಒಬ್ಬರಿಗೆ ಕುಳಿತುಕೊಳ್ಳಬಹುದು. ನಾನು ಬಸ್ಸಿನೊಳಗೆ ತುಂಬಾನೇ ಹಿಂದೆ ನಿಂತಿದ್ದೆ. ಆ ಅನಾರೋಗ್ಯ ಪೀಡಿತ ತಾಯಿಯ ಮಗ ಹಾಗೂ ಸೀಟು ಬಿಟ್ಟು ಕೊಟ್ಟ ಕಾಲೇಜು ಹುಡುಗ ಇಬ್ಬರೇ ಆ ಖಾಲಿಯಾದ ಸೀಟಿಗೆ ಸಮೀಪದಲ್ಲಿ ಇದ್ದವರು. ನಾನು ಅವರಿಬ್ಬರನ್ನೇ ಹಿಂದಿನಿಂದ ನೋಡುತ್ತಿದ್ದೆ. ನನಗಂತೂ ಅಲ್ಲಿ ಖಾಲಿಯಾಗಿರುವ ಸೀಟನಲ್ಲಿ ಹೋಗಿ ಕುಳಿತುಕೊಳ್ಳುವ ಇರಾದೆ ಇರಲಿಲ್ಲ ಮತ್ತು ನಾನು ತುಂಬಾನೇ ದೂರ ಕೂಡ ಇದ್ದೆ. ಅಲ್ಲದೇ ಆ ಸೀಟನಲ್ಲಿ ನ್ಯಾಯವಾಗಿ ಯಾರು ಕುಳಿತುಕೊಳ್ಳಬೇಕೆಂದು ನನಗೆ ಮಾತ್ರವಲ್ಲ  ಅಲ್ಲಿದ್ದ ಹೆಚ್ಚಿನವರಿಗೆ  ಗೊತ್ತಿತ್ತು, ಹಾಗೆಯೇ ಮೊದಲಿನಿಂದ ಈ  ಕಥೆ ಓದುತ್ತಿರುವ ನಿಮಗೂ ಕೂಡ ಗೊತ್ತಿರುತ್ತೆ ಬಿಡಿ.

ನಾನು ಅವರಿಬ್ಬರನ್ನೇ ನೋಡಿದೆ. ಸೀಟು ಬಿಟ್ಟು ಕೊಟ್ಟ ಆ ಕಾಲೇಜು ಹುಡುಗ ಖಾಲಿಯಾದ ಆ ಸೀಟನಲ್ಲಿ ಕುಳಿತುಕೊಳ್ಳಬೇಕೆಂಬ ಧಾವಂತವನ್ನಾಗಲಿ, ಆತುರತೆಯನ್ನಾಗಲಿ ತೋರಿಸಲಿಲ್ಲ. ಆದರೆ ಅವನಂತೆಯೇ ಗಟ್ಟಿ ಮುಟ್ಟಾಗಿದ್ದ ಆ ವೃದ್ಧ ತಾಯಿಯ ಮಗ ಮಾತ್ರ ಒಂದು ಕ್ಷಣ ಏನೂ ಯೋಚಿಸದೇ ಸೀದಾ ಹೋಗಿ ಆ ಖಾಲಿಯಾದ ಸೀಟನಲ್ಲಿ ಕುಳಿತುಕೊಂಡು ತನ್ನ ಕಿವಿಗೆ ಇಯರ್ ಫೋನ್ ಅನ್ನು ತುರುಕಿ, ಮೊಬೈಲ್ ನಲ್ಲಿ ಹಾಡು ಪ್ಲೇ ಮಾಡಿ, ಹಾಡಿಗೆ ತಕ್ಕ ಹಾಗೆ ತನ್ನ ಭುಜ ಹಾಗೂ ತನ್ನ ತಲೆಯನ್ನು ಕುಣಿಸಲು ಆರಂಭಿಸಿದ ..ಮಗನ ಪಕ್ಕದಲ್ಲಿದ್ದ ಆ ತಾಯಿಯೂ ಕೂಡ ಏನೂ ಪ್ರತಿಕ್ರಿಯಿಸಲಿಲ್ಲ!!.
ಬಸ್ಸು ಮುಂದೆ ಚಲಿಸಿತು!!

#Some_ಸಂಸ್ಕಾರ

.....................................................................................

#ಏನೋ_ಒಂದು
ab pacchu
moodubidire



Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ