ಸೀತಾಳೆ ಎಂಬ ಮರದ ಮಲ್ಲಿಗೆ
ಮಳೆಗಾಲ ಬಂತೆಂದರೆ ಸಾಕು ವಸುಂಧರೆಗೆ ತನ್ನನ್ನು ತಾನೇ ಶೃಂಗರಿಸಿಕೊಳ್ಳುವುದು ಎಂದರೆ ಅದೇನೋ ಆನಂದ.ಅವಳಾಗ ಸಡಗರಿಂದ ಓಡಾಡಿಕೊಂಡಿರೋ ಮಲೆಗಳಲ್ಲಿ ಮದುಮಗಳಂತಾಗಿ ಬಿಡುತ್ತಾಳೆ 💚
ಒಂದೆರಡು ಮಳೆ ಹನಿ, ಪನ್ನೀರಿನಂತೆ ಸಿಂಚನವಾದರೂ ಸಾಕು ಪ್ರಕೃತಿ ನಿಧಾನವಾಗಿ ಭೂರಮೆಯನ್ನು ಸದ್ದಿಲ್ಲದೆ ತನ್ನ ಪುಷ್ಪ, ಪತ್ರೆ,ಜರೀಗಿಡ,ಬಳ್ಳಿಗಳಿಂದ ಹಾಗೇ ಅಲಂಕರಿಸಲು ಶುರು ಮಾಡಿಬಿಡುತ್ತದೆ.ಆಹಾ.. ಅದನ್ನು ನೋಡಿ ಸವಿಯಲು ಎರಡೂ ಕಣ್ಣು ಸಾಲುವುದಿಲ್ಲ.
ನೀವು ಬೇಕಾದರೆ ನಿಮಗೆ ಅವರು ಚಂದ,ಇವರು ಚಂದ ಅಂತ.. ತುಂಬಾ ಜನ ಅಂದ ಚಂದದವರನ್ನು ಚಂದ ಎಂದು ಹೇಳಬಹುದು. ಆದರೆ ನನ್ನನ್ನು ಕೇಳಿದರೆ ನನಗೆ ಎಂದಿಗೂ ಭೂಮಿತಾಯಿಯಷ್ಟು ಸುಂದರವಾಗಿ ಇಲ್ಲಿ ಯಾರೂ ಇರಲು ಸಾಧ್ಯವೇ ಇಲ್ಲ ಅಂತ ಅನ್ನಿಸುತ್ತದೆ.
ಯಾವುದು ಕಚ್ಛಾ ರೂಪದಲ್ಲಿ ಇರುತ್ತದೋ ಅದು ಯಾವತ್ತಿಗೂ ಚಂದವೇ. ಅದಕ್ಕೆ ಸುಂದರವಾದ ಉದಾಹರಣೆಯೇ ಈ ಭೂಮಿ ತಾಯಿ..
ಮಳೆಗಾಲಕ್ಕೆ ನೀವು ಎಲ್ಲಿಯೂ ಬೇಟಿ ಕೊಡದಿದ್ದರೂ,ಒಮ್ಮೆ ಅಂತು ನೀವು ನಮ್ಮ ಪಶ್ಚಿಮಘಟ್ಟಕ್ಕೆ ಬೇಟಿ ಕೊಡಲೇ ಬೇಕು. ಅದೊಂದು ತರಹ ಸ್ವರ್ಗ ಇದ್ದ ಹಾಗೆ.ಮತ್ತು ಭೂದೇವಿ ತನ್ನನ್ನು ಅಲಂಕರಿಸಿಕೊಂಡು ಸ್ವಚ್ಛಂದವಾಗಿ ವಿಹರಿಸುವ ತಾಣವದು.
ಈ ಪಚ್ಚೆ ಘಟ್ಟ ದ ಸೊಬಗು ಹೆಚ್ಚಾಗಿ ನಿಮಗೆ ಮಲೆನಾಡು ಹಾಗೂ ಪಶ್ಚಿಮಘಟ್ಟಕ್ಕೆ ತಾಗಿಕೊಂಡಿರುವ ಕರಾವಳಿಯ ಕೆಲವು ಪ್ರದೇಶದಲ್ಲಿ ಕಾಣಸಿಗುತ್ತದೆ.
ಪಶ್ಚಿಮಘಟ್ಟ ಹೆಚ್ಚು ಕಡಿಮೆ ಕರ್ನಾಟಕ, ಗೋವ, ತಮಿಳುನಾಡು ಹಾಗೂ ಕೇರಳಭಾಗದಲ್ಲಿ ಹಾದು ಹೋಗುವ ಒಂದು ಅಪೂರ್ವ ವನ್ಯ ಸಂಪತ್ತು.
ಪಶ್ಚಿಮಘಟ್ಟ ಹಲವು ವಿಸ್ಮಯಗಳ ಆಗರ. ಇಲ್ಲಿ ವಿಶೇಷವಾದ ಜೀವ ಸಂಕುಲಗಳಿವೆ. ಅಪರೂಪದ ಪುನುಗು ಬೆಕ್ಕು,ಕಾಟಿ,ಸೀಂಗಳಿಕಗಳು,ವಿಶಿಷ್ಟವಾದ ಚಿಟ್ಟೆ, ಕಪ್ಪೆಗಳು, ಅಳಿಲುಗಳು ಇನ್ನೂ ಹಲವಾರು ಉಭಯವಾಸಿಗಳು, ಸಸ್ತನಿಗಳು ಇಲ್ಲಿವೆ.
12 ವರ್ಷಗಳಿಗೊಮ್ಮೆ ಅರಳುವ ಸುಂದರ ನೀಲಿ ಬಣ್ಣದ ಕುರುಂಜಿ ಹೂವುಗಳು,ಇಲ್ಲಿ ನೆಲದ ಮೇಲೆಯೇ ನೀಲಿ ಆಕಾಶವನ್ನು ಹಾಸಿಬಿಡುತ್ತದೆ.ಅದನ್ನು ನೋಡಿಯೇ ಕಣ್ಣು ನೀಲಿ ಮಾಡಿಕೊಳ್ಳಬೇಕು.
ಹಾವುಗಳಲ್ಲಿಯೇ Beautiful & ಅಷ್ಟೇ Deadly ಅನಿಸೋ ಕಾಳಿಂಗ ಸರ್ಪಗಳ ಮನೆ ಈ ಪಶ್ಚಿಮ ಘಟ್ಟ. ಭಾರತದ ಹೆಮ್ಮೆ ಈ ಹಾವು.
ನನಗೆ ಕಾಡು ಮಲ್ಲಿಗೆ, ಕಾಡು ಹೂಗಳು ಅಂದರೆ ಚಿಕ್ಕವನಿಂದಲೂ ಅದೇನೋ ಪ್ರೀತಿ.ಅದೇ ರೀತಿ ನಮ್ಮ ಪಶ್ಚಿಮ ಘಟ್ಟದಲ್ಲಿಯೇ ಅರಳೋ ಮತ್ತೊಂದು ಜಾತಿಯ ಹೂವು ಕಂಡರೂ ನನಗೆ ಅಷ್ಟೇ ಪ್ರೀತಿ ಇದೆ. ಅದುವೇ ಸೀತಾಳೆ ಹೂವು.ಅದೊಂದು ಮುಗಿಯದ ಆಕರ್ಷಣೆ, ನಿಲ್ಲದ ಸೆಳೆತ.
ಹೇಗೆ ಮರಕೆಸುವಿನ ಪತ್ರೋಡೆ ತಿನ್ನಲು ಮಳೆಗಾಲಕ್ಕೆನೇ ಕಾಯಬೇಕೋ, ಹಾಗೆಯೇ ಸೀತಾಳೆಯ ಅಂದ ಚಂದವನ್ನು ಕಣ್ತುಂಬಿಸಿಕೊಳ್ಳಲು ಮಳೆಗಾಲದವರೆಗೂ ನಾವು ಕಾಯಲೇ ಬೇಕು.
ಉದ್ದಕ್ಕೆ ಬೆಳೆಯುವ ಮರ ಎಂಬ ನೀಲವೇಣಿಗೆ.. ಸುಂದರವಾದ ಮಲ್ಲಿಗೆಯ ದಂಡೆ ಇಟ್ಟಂತೆ ಈ ನಮ್ಮ ಸೀತಾಳೆ.
ಇದನ್ನು ದ್ರೌಪದಿ ಹೂವು ಎಂದೂ ಕರೆಯುವುದು ಇದೆ.
ಮಳೆಗಾಲದಲ್ಲಿ ಬಸ್ಸಿನಲ್ಲಿ ಬೆಟ್ಟ ಗುಡ್ಡಗಳಲ್ಲಿ ಹೋಗುವಾಗ ನನ್ನ ಕಣ್ಣು ಮರದ ಮೇಲೆ ಎಲ್ಲಾದರೂ ಮರಕೆಸು ಇದೆಯೋ ಇಲ್ಲವೋ ಎಂದು ಹೇಗೆ ತಡಕಾಡುತ್ತದೆಯೋ, ಹಾಗೆಯೇ ಈ ಸೀತಾಳೆ ಮರದ ಯಾವ ಕೊಂಬೆಯಲ್ಲಿ ಅರಳಿ ನಿಂತಿದ್ದಾಳೆ ಎಂದೇ ಹುಡುಕಾಡುತ್ತಿರುತ್ತದೆ. ಸೀತಾಳೆಯ ದಂಡೆ ಕಣ್ಣಿಗೆ ಬಿದ್ದಾಗಲೆಲ್ಲ ನಾನು ಅರಳಿದ ಸೂರ್ಯಕಾಂತಿ.
ವನವಾಸದಲ್ಲಿ ಇದ್ದ ಭಗವಂತ ಪ್ರಭು ಶ್ರೀರಾಮಚಂದ್ರನ ಪತ್ನಿ ಮಾತೆ ಸೀತಾದೇವಿ ಇದನ್ನು ಮುಡಿದಿದ್ದಳಂತೆ ಹಾಗಾಗಿ ಇದಕ್ಕೆ ಸೀತಾಳೆ ಎಂಬ ಹೆಸರು ಬಂತು ಎಂಬ ಜಾನಪದ ಕಥೆಗಳು ಕೂಡ ಇದೆ.
ಸೀತಾಳೆ ಒಂದು parasite ಜಾತಿಯ ಗಿಡ. ಅಂದರೆ ಪರಾವಲಂಬಿ. ದೊಡ್ಡ ದೊಡ್ಡ ಮರಗಳ ರೆಂಬೆಯಲ್ಲಿ, ಪೊಟರೆಯಲ್ಲಿ ಈ ಗಿಡ ತನ್ನ ನೆಲೆ ಕಂಡುಕೊಳ್ಳುತ್ತದೆ.
ಮಳೆಗಾಲ ಬಿಟ್ಟು ಇನ್ನಿತರ ಕಾಲದಲ್ಲಿ ಮರಗಂಟಿಕೊಂಡು ಒಣಗಿಯೇ ಇದ್ದರೂ, ಮಳೆಗಾಲ ಬಂದರೆ ಇದು ಹಾಗೇ ತನ್ನಲ್ಲಿ ಹೂವು ಒಂದನ್ನು ಅರಳಿಸಿ ಬಿಡುತ್ತದೆ. ಮತ್ತು ಇದು ವರ್ಷಕ್ಕೆ ಒಂದು ಬಾರಿ ಮಾತ್ರ ಹೂವು ನೀಡುವುದು.
Wild Orchid ಗುಂಪಿಗೆ ಸೇರಿದ ಈ ಸೀತಾಳೆಯನ್ನು ಕೆಲವರು ಮುಡಿಯುತ್ತಾರೆ. ಅಸ್ಸಾಮಿನ ಪ್ರಸಿದ್ಧಿ ಬಿಹು ನೃತ್ಯದ ಸಂದರ್ಭದಲ್ಲಿ ಇದನ್ನು ಮುಡಿದುಕೊಳ್ಳುವ ಕ್ರಮ ಇದೆ. ಆದರೆ ಕೆಲವರು ಇದನ್ನು ಮುಡಿಯಲು ಹಿಂಜರಿಯುವುದು ಕೂಡ ಇದೆ.
ಕಾರಣ ಇಷ್ಟೇ ಇದನ್ನು ಮುಡಿದುಕೊಂಡ ಮಾತೆ ಸೀತೆಗೆ ವನವಾಸದಂತಹ ಕಷ್ಟಗಳು ಬಂದೊದಗಿದವು, ನಮಗೆ ಹಾಗೆ ಆಗದಿರಲಿ ಎಂಬ ನಂಬಿಕೆಯ ಕಾರಣಕ್ಕೆ ಕೆಲವರು ಮುಡಿಯುವುದಿಲ್ಲ.
ಭಾರತ ಸೇರಿದಂತೆ ಶ್ರೀಲಂಕಾ, ಬರ್ಮಾ, ಬಾಂಗ್ಲಾ, ಕಾಂಬೋಡಿಯಾ, ಚೈನಾ, ಇಂಡೋನೇಷ್ಯಾ, ನೇಪಾಳ, ಫಿಲಿಪ್ಪೀನ್ಸ್, ಸಿಂಗಾಪುರ, ಥಾಯ್ಲೆಂಡ್ ಗಳಲ್ಲಿ ಕೂಡ ವಿವಿಧ ರೀತಿಯ ಆರ್ಕಿಡ್ ಸಸ್ಯಗಳು ನಮಗೆ ಕಾಣಸಿಗುತ್ತದೆ. ಚೀನಾ, ಸಿಂಗಾಪುರದಂತಹ ರಾಷ್ಟ್ರಗಳಲ್ಲಿ ಕೆಲವೊಂದು ಜಾತಿಯ ಆರ್ಕಿಡ್ ಗಳು ರಾಷ್ಟ್ರ ಪುಷ್ಪವಾಗಿಯೂ ಗುರುತಿಸಿಕೊಂಡಿದೆ.
ಒಮ್ಮೆಗೆ ಅರಳಿದರೆ ಪಕ್ಕಕ್ಕೆ ಇದು ಬಾಡುವುದಿಲ್ಲ ಹೆಚ್ಚು ಕಡಿಮೆ ಹತ್ತು ಹದಿನೈದು ದಿನ ಇದು ಹಾಗೇ ತಾಜವಾಗಿಯೇ ಇರಬಲ್ಲದು. ಇದೊಂದು ಸಣ್ಣ ಸಣ್ಣ ಹೂಗಳ ಗೊಂಚಲು. ಒಂದು ದಂಡೆಯಲ್ಲಿ ಹೆಚ್ಚು ಕಡಿಮೆ 50 ರಿಂದ 60 ಸಣ್ಣ ಹೂವುಗಳು ಕೆಲವೊಮ್ಮೆ ಅದಕ್ಕೂ ಹೆಚ್ಚು ಹೂವುಗಳು ಇರುತ್ತದೆ.
ನೋಡಲು ನರಿ ಬಾಲದಂತೆ ಕಾಣುವುದರಿಂದಲೋ ಏನೋ ಇದನ್ನು ಇಂಗ್ಲಿಷ್ ನಲ್ಲಿ Foxtail Orchid ಎಂದು ಹೇಳುತ್ತಾರೆ.
ತುಳುವಿನಲ್ಲಿ ಇದನ್ನು ಓಪೊತ್ತಿ ಮಾಲೆ,ಓಪತಿ ಮಲ್ಲಿಗೆ, ಒರ್ಲ ಬಾರ ಪೂ ಎಂಬ ಹೆಸರುಗಳಿಂದ ಕರೆಯುವುದು ಕೂಡ ಇದೆ.
ಈ ಬಾರಿಯ ಆಟಿ ಅಮಾವಾಸ್ಯೆ(ತುಳುನಾಡಿನ ಆಚರಣೆ) ಹಬ್ಬಕ್ಕೆ ಪಾಲೆ(ಹಾಲೆ ಮರ) ಮರದ ಕೆತ್ತೆ ತೆಗೆಯಲು ಬೆಳಿಗ್ಗೆ ನಾಲ್ಕು ಘಂಟೆಗೆ ಎದ್ದು ಹೋದಾಗ,ಕೆತ್ತೆ ತೆಗೆಯುವಾಗ ಮರದ ಕೊಂಬೆಯಲ್ಲಿ ನೋಡಿದೆ,ಆ ಮರದಲ್ಲಿಯೇ ಕೈಗೆ ಎಟಕುವಷ್ಟು ಹತ್ತಿರದಲ್ಲಿ ಇತ್ತು ಸೀತಾಳೆ. ಅತೀವ ಖುಷಿ ಆಯಿತು, ಹಾಗಾಗಿ ಪುನಃ ಬೆಳಕು ಹರಿದ ಮೇಲೆ ಮರದ ಬುಡಕ್ಕೆ ಓಡಿ ಮೊಬೈಲ್ ನಲ್ಲಿ ಪೋಟೋ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ಅದೊಂತರಹದ ಖುಷಿ.. ಅಪರೂಪದ ಮಿತ್ರ ಸಿಕ್ಕ ಹಾಗೆ.
ನಿಜವಾಗಿಯೂ ಸೀತಾಳೆ ಎಂಬುವುದು ಕಾನನದ ಒಂದು ದೃಶ್ಯ ಕಾವ್ಯ. ಕಣ್ಣಿಗೆ ಬಿದ್ದಾಗ ನೋಡಿ ಅದರ ಅಂದ ಚಂದವನ್ನು ಅಸ್ವಾದಿಸಲು ಮರೆಯಬೇಡಿ.
ಎಲ್ಲಕ್ಕಿಂತ ಹೆಚ್ಚಾಗಿ ಇಂತಹ ಸೀತಾಳೆ ಹಾಗೂ ಇನ್ನಿತರ ಕಾಡು ಹೂವುಗಳನ್ನು ಮುಂದೆಯೂ ನೋಡಬೇಕೆಂದಿದ್ದರೆ ದಟ್ಟ ಕಾನನಗಳು,ಪಚ್ಚೆ ಘಟ್ಟಗಳು ನಮ್ಮಲ್ಲಿ ಇನ್ನಷ್ಟು ಉಳಿಯಬೇಕು ಹಾಗೂ ರಕ್ಷಣೆಯಾಗಬೇಕು. ಅದರ ಜವಾಬ್ದಾರಿ ನಮ್ಮ ಎಲ್ಲರ ಮೇಲೂ ಇದೆ 😊🙏🏻
.....................................................................................
#ಏನೋ_ಒಂದು
Ab Pacchu
Moodubidire




Comments
Post a Comment