ಒಂದೊಳ್ಳೆಯ ಹೆಸರು ಮಾಡುವುದಕ್ಕಿಂತಲೂ ಮೊದಲು..

 


ಎಲ್ಲರಿಗೂ ಜೀವನದಲ್ಲಿ ತುಂಬಾನೇ ದುಡ್ಡು ಮಾಡಬೇಕು ಎಂಬ ಆಸೆ ಇರುತ್ತದೆ. 


ಅದಕ್ಕಿಂತಲೂ ಹೆಚ್ಚಾಗಿ ಒಂದೊಳ್ಳೆಯ ಹೆಸರು ಮಾಡಬೇಕು ಎಂಬ ಆಸೆ ಇರುತ್ತದೆ.


ಯಾವುದಾದರೂ ಕ್ಷೇತ್ರದಲ್ಲಿ ಹೆಸರುವಾಸಿ ಆಗಬೇಕು ಎಂಬ ಆಕಾಂಕ್ಷೆ ಕೂಡ ಇರುತ್ತದೆ.


ಮನುಷ್ಯನಾಗಿ ಹುಟ್ಟಿದ ಮೇಲೆ ಅವಶ್ಯವಾಗಿ ಅಂತಹ ಆಸೆ ಆಕಾಂಕ್ಷೆಗಳು ಇರಬೇಕಾದದ್ದೆ.


ಆದರೆ ಯಾವ ಹೆಸರಿನಿಂದ ಹೆಸರುವಾಸಿ ಆಗಬೇಕು?


ಮತ್ತೆ ಯಾರ ಹೆಸರಿನಿಂದ... ನಾವು ನಮ್ಮದೇ ಹೆಸರಿನಿಂದ ಹೆಸರುವಾಸಿ ಆಗಬೇಕು.


ಒಳ್ಳೆಯ ಕೆಲಸಗಳ ಮೂಲಕ, ಸಾಧನೆಗಳ ಮೂಲಕ ನಾವು ಹೆಸರು ಮಾಡಬಹುದು.


ಆಗ ಜನ ನಮ್ಮ ಹೆಸರು ಹೇಳಿ ಕೊಂಡಾಡುತ್ತಾರೆ.


ಅದಕ್ಕಾಗಿ ನಮ್ಮನ್ನು ಕರೆಯಲು,ಕೂಗಲು ನಮಗೆ ಒಂದು ಹೆಸರು ಬೇಕು.


ಹೆಸರು ಹೇಗಿರಬೇಕು..?


ಈ ಕಾಲಕ್ಕೆ ತಕ್ಕಂತೆ ತುಂಬಾ ಫಾಶ್ ಆಗಿ,ಮಾಡರ್ನ್ ಆಗಿ,ಜಗತ್ತಿನಲ್ಲಿ ಒಮ್ಮೆಯೂ ಯಾರೂ ಕೂಡ ಇಟ್ಟುಕೊಳ್ಳದಂತ ಹೆಸರು ಒಂದು ಇಟ್ಟುಕೊಂಡು ಬಿಟ್ಟರೆ ನಮಗೆ ಅದೆಷ್ಟು ಖುಷಿ.. ಅದೆಷ್ಟು ಪರಮಾನಂದ ಅಲ್ಲವೇ..


ಕೆಲವೊಮ್ಮೆ ನಮಗೆ ನಾವೇ ಚಂದದ ಹೆಸರು ಇಟ್ಟುಕೊಳ್ಳುತ್ತೇವೆ ಅಂದರೆ ಬದಲಾವಣೆ ಮಾಡಿಕೊಳ್ಳುತ್ತೇವೆ. ಇಲ್ಲದಿದ್ದರೆ ನಮಗೆ ನಮ್ಮ ಹೆತ್ತವರು ತಕ್ಕ ಮಟ್ಟಿಗೆ ಒಂದೊಳ್ಳೆಯ ಹೆಸರು ಇಡಲು ಪ್ರಯತ್ನಿಸುತ್ತಾರೆ. ನಾವಂತು ನಮ್ಮ ಮಕ್ಕಳಿಗೆ ಹೆಸರು ಇಡಲು ಸಂಶೋಧನೆಗೆ ಇಳಿದು ಬಿಡುತ್ತೇವೆ.ನಮ್ಮ ಗುರಿ ಒಂದೇ... ಎಲ್ಲೂ ಇಂತಹ ಹೆಸರು ಇರಬಾರದು ಅಷ್ಟೇ.


ತಪ್ಪಲ್ಲ...


ಸಾಧನೆಯೇ ಮಾಡದೇ ವಿಭಿನ್ನ ಹೆಸರಿನಿಂದ ಕೂಡ ಗುರುತಿಸಿಕೊಳ್ಳುವವರು ಸಹ ಇದ್ದಾರೆ. ಅವರ ಸಾಧನೆ ಬರೀ ಅದೇ... ಡಿಫರೆಂಟ್ ಆಗಿರುವ ಹೆಸರು!


ಒಮ್ಮೆ ಅವರುಗಳ ಬಳಿ ಅವರ ಹೆಸರಿನ ಅರ್ಥ ಕೇಳಿ ಅಂತೆ. ಕನಿಷ್ಟ ಪಕ್ಷ ಅವರ ಹೆಸರಿನ ಒಂದು ಅರ್ಥ ಹೇಳಲು ಕೂಡ ಅವರು ಅಸಮರ್ಥರಿರುತ್ತಾರೆ..


ಹೆಸರಿಗೂ ಒಂದು ಅರ್ಥವಿರಬೇಕು... ಹೇಗೆ ನಮ್ಮ ನಮ್ಮ ಊರುಗಳ ಹೆಸರಿಗೊಂದು ಅಂದದ ಅರ್ಥವಿದೆಯೋ, ಚಂದದ ಕಥೆ ಇದೆಯೋ ಹಾಗೆ. 


ಒಂದೇ ಹೆಸರಿಗೆ ಹತ್ತಾರು ಅರ್ಥಗಳು ದೇವರ ನಾಮಗಳಿಗೆ ಇದೆ. 


ಇತ್ತೀಚೆಗೆ ಒಂದು ಕಡೆ ಕೇಳಿದ್ದೆ,ಮಕ್ಕಳಿಗೆ ಹೆಸರು ಇಡುವಾಗ ಯಾವತ್ತಿಗೂ ದೇವರ ನಾಮವನ್ನೇ ಇಡಬೇಕಂತೆ.ಆ ರೀತಿಯಿಂದ ಆದರೂ ದಿನ ನಿತ್ಯ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ದೇವರ ನಾಮವನ್ನು ಅನುದಿನವೂ ಸ್ಮರಣೆ ಮಾಡುವ ಭಾಗ್ಯ,ಪುಣ್ಯಕಾರ್ಯ ನಮಗೆ ಅನಾಯಾಸವಾಗಿ ದೊರೆಯುವುದಂತೆ.


ಅದು ಬೇಕಿದ್ದರೆ ನಿಮ್ಮ ಮಗುವನ್ನು ಹೊಗಳುವುದಿರಲಿ.. ಇಲ್ಲವೇ ಬೈಯುವುದೇ ಇರಲಿ..ಮಕ್ಕಳ ಹೆಸರು ದೇವರದ್ದಾದರೆ ನಿಮ್ಮ ನಾಲಗೆ ತುದಿಯಲ್ಲಿ ಅಂತು ದೇವರನಾಮವೇ ಸದಾ ನಲಿದಾಡುತ್ತಿರುತ್ತದೆ.


ಇದಕ್ಕೊಂದು ಉತ್ತಮ ಉದಾಹರಣೆ ಎಂದರೆ ಅಜಮಿಳನ ಕಥೆ.ಭಾಗವತದಲ್ಲಿ ಬರುವ ಅತೀ ಸುಂದರ ಕಥೆ ಇದು. ಕೆಲವರಿಗೆ ಗೊತ್ತಿರಬಹುದು. ಗೊತ್ತಿಲ್ಲದವರಿಗಾಗಿ ಸಂಕ್ಷಿಪ್ತವಾಗಿ ಈ ಕಥೆ ಹೇಳುವ ಪ್ರಯತ್ನ ಮಾಡುತ್ತೇನೆ. 


ಅಜಮಿಳ ತನ್ನ ಜೀವಿತಾವಧಿಯಲ್ಲಿ ಹಲವು ಪಾಪ ಕೃತ್ಯಗಳನ್ನು ಮಾಡಿದ್ದ.ಮಾಡಬಾರದ್ದನ್ನು ಹುಡುಕಿ ಹುಡುಕಿ ಮಾಡಿದ್ದ.ಅವನ ಜೋಳಿಗೆಯ ತುಂಬಿಲ್ಲಾ ಬರೀ ಪಾಪದ ಭಾರವೇ ತುಂಬಿತ್ತು. ತನ್ನ ಕುಟುಂಬವನ್ನು ತೊರೆದ, ತನ್ನ ಪತ್ನಿಯನ್ನು ಸಹ ತೊರೆದ, ಬೇರೆಯೇ  ಒಂದು ಮದುವೆ ಆದ.ಅವಳಿಂದಾಗಿ ಹತ್ತು ಜನ ಮಕ್ಕಳನ್ನು ಕೂಡ ಪಡೆದ!


ಆ ಹತ್ತು ಜನ ಮಕ್ಕಳಿಗೂ ಎಲ್ಲರಿಗೂ ಒಂದೊಂದು ಹೆಸರಿಟ್ಟಿದ್ದ ಅಜಮಿಳ.ಕೊನೆಯವನಿಗೆ ಮಾತ್ರ ನಾರಾಯಣ ಎಂದು ಹೆಸರಿಟ್ಟದ್ದ. ವಿಶೇಷ ಏನೆಂದರೆ ಅವನೀಗೆ ಅವನ ಆ ಕೊನೆಯ ಮಗನೆಂದರೆ ಅತೀ ಪ್ರೀತಿ. ಸದಾ ಅವನನ್ನೇ ಪ್ರತಿಯೊಂದಕ್ಕೂ ಕರೆಯುತ್ತಿದ್ದ.. ಕೂಗುತ್ತಿದ್ದ. 


ಒಂದು ದಿನ ಅಜಮಿಳನ ಎದುರು ಸಾವು ಪ್ರತ್ಯಕ್ಷವಾಯಿತು. ಅದರ ಅರಿವು ಅವನಿಗೂ ಆಯಿತು. ಇನ್ನೇನು ಜೀವ ಹೋಗಿಬಿಡಬೇಕು ಅನ್ನುವಷ್ಟರಲ್ಲಿ ಅಜಮಿಳ ಬಾರಿ ಬಾರಿ ತನ್ನ ಮಗನನ್ನು ಕರೆದ.. ಅಂದರೆ ನಾರಾಯಣನನ್ನು ಕರೆದ. ಆದರೆ ಈ ಬಾರಿ ಅವನ ಮಗ ನಾರಾಯಣ ಬರುವುದಕ್ಕಿಂತಲೂ ಮೊದಲೇ ಭಗವಾನ್ ಶ್ರೀಮನ್ನಾರಾಯಣನೇ ಅಜಮಿಳ ಎದುರು ಪ್ರಕಟನಾದ ಮತ್ತು ಭಗವಂತ ಯಮದೂತರನ್ನು ತಡೆದು ನಿಲ್ಲಿಸಿದ..!! 


ಯಮ ದೂತರು ಭಗವಂತನಲ್ಲಿ ಕೇಳಿದರು ಭಗವಂತ ಏತಕ್ಕಾಗಿ ಈ ಪಾಪಿಗಾಗಿ ನೀನು ಪ್ರಕಟನಾದೆ ಮತ್ತು ನಮ್ಮನ್ನು ತಡೆಯುತ್ತಿದ್ದಿ ಎಂದು. ಅದಕ್ಕೆ ಮಹಾವಿಷ್ಣು ಯಮದೂತರಿಗೆ ಹೇಳುತ್ತಾನೆ. ನನ್ನ ಒಂದು ಬಾರಿ ನಾಮ ಸ್ಮರಣೆಯಿಂದಲೇ ಅದೆಷ್ಟೋ ಪಾಪಗಳು ನಶಿಸಿ ಹೋಗುತ್ತದೆ. ಆದರೆ ಈ ಅಜಮಿಳ ಅನುದಿನವೂ ತನ್ನ ಮಗನನ್ನು ಕರೆಯುವ ನೆಪದಲ್ಲಿ ನನ್ನ ಸ್ಮರಣೆಯನ್ನೇ ಸದಾ ಮಾಡಿದ್ದಾನೆ. ಆದ್ದರಿಂದ ಅವನ ಪಾಪವೆಲ್ಲವೂ ಕಳೆದು ಹೋಗಿದೆ. ಆದ್ದರಿಂದ ನೀವು ಅವನನ್ನು ಬಿಟ್ಟು ನಿಮ್ಮ ಲೋಕಕ್ಕೆ ತೆರಳಿ ಎಂದು ಮಹಾವಿಷ್ಣು ಯಮದೂತರಿಗೆ ಆದೇಶಿಸುತ್ತಾನೆ.


ಆ ಕ್ಷಣದಲ್ಲಿ ಅಜಮಿಳನಿಗೆ ಜ್ಞಾನೋದಯವಾಯಿತು. ತಾನು ಜೀವನ ಪೂರ್ತಿ ಮಾಡಿದ ಪಾಪಗಳ ಅರಿವಾಯಿತು. ಆ ನಂತರ ಅವನು ಜೀವನದಲ್ಲಿ ಇನ್ನಷ್ಟು ಪುಣ್ಯ ಸಂಪಾದನೆಯ ಕೆಲಸಗಳನ್ನು ಮಾಡಿದ.. ಮಹಾವಿಷ್ಣುವಿನಿಂದ ಅವನಿಗೆ ದೊರೆತ ಜೀವದಾನ,ಜೀವನ ದಾನದಿಂದಾಗಿ ಮುಂದೆ ಉತ್ತಮನಾಗಿಯೇ ಜೀವನ ಸಾಗಿಸಿದ.. ಕೊನೆಗೊಮ್ಮೆ ಈ ಲೋಕದ ಕರ್ತವ್ಯ ಮುಗಿಸಿ ಸ್ವರ್ಗ ಸೇರಿದ.. ಮುಕ್ತಿ ಹೊಂದಿದ ಎಂಬುವುದು ಅಜಮಿಳನ ಕಥೆ.


ಮಕ್ಕಳಿಗೆ ಹೆಸರಿಡುವಾಗ ಅಜಮಿಳನ ಈ ಕಥೆ ನೆನಪಾದರೆ ಅದಕ್ಕಿಂತ ಉತ್ತಮ ಮತ್ತೆ ಯಾವುದೂ ಇಲ್ಲ.ನಾವುಗಳು  ಅಂತು ಈ ನವಕಾಲ ಘಟ್ಟದಲ್ಲಿ ದೇವರ ಹೆಸರುಗಳು ಹಳೆಯ ಕಾಲದ ಹೆಸರುಗಳು ಎಂದು ಇಟ್ಟುಕೊಳ್ಳಲೇ ಇಲ್ಲ. ಅದರಲ್ಲಿ ನಮ್ಮ ತಪ್ಪು ಏನಿಲ್ಲ ಬಿಡಿ.ನಮ್ಮ ಹಿರಿಯರು,ಹೆತ್ತವರು ಕೂಡ ತಮ್ಮ ಮಕ್ಕಳಿಗೂ ಸಹ ಚಂದದ ಹೆಸರಿರಲಿ ಎಂದು ಅವರಿವರ ಬಳಿ ಕೇಳಿ ಒಂದಕ್ಕೊಂದು ಭಿನ್ನ ವಿಭಿನ್ನ ಹೆಸರುಗಳನ್ನು ಇಡುವ ಪ್ರಯತ್ನ ಮಾಡಿ ಬಿಟ್ಟರು. ಈ ಕಾಲದ ಹೊಸ ಹೊಸ ಹೆಸರುಗಳ ಉತ್ಖನನದಲ್ಲಿ ಹೆಚ್ಚಿನ ಹೆತ್ತವರಿಗೆ ಅನಾಯಾಸವಾಗಿ ಅಜಮಿಳನಿಗೆ ಸಿಗಬಹುದಂತಹ ಆ ಪರಮ ಸೌಭಾಗ್ಯ ಸಿಗಲೇ ಇಲ್ಲ. ಸಿಕ್ಕಿದವರು ಪುಣ್ಯವಂತರು ಬಿಡಿ. 


ಆದರೆ ಒಮ್ಮೆ ನಮ್ಮ ಹಿಂದಿನವರ  ಹೆಸರುಗಳನ್ನು ಅವಲೋಕಿಸಿ ನೋಡಿ ಅಂತೆ,ಅಂದರೆ ನಿಮ್ಮ ತಂದೆ-ತಾಯಿ, ಅಜ್ಜ-ಅಜ್ಜಿ,ಮುತ್ತಜ್ಜ-ಮುತ್ತಜ್ಜಿ ಎಲ್ಲಾ..

ಅಲ್ಲಿ ಹುಡುಕಿದರೂ ನಿಮಗೆ ಸಿಗುವುದು ಶಂಕರ, ವಿಠ್ಠಲ,ರಾಮಣ್ಣ, ಸೀತಕ್ಕ, ಗಿರಿಜಾ,ಗಣೇಶ,ಲಕ್ಷೀ, ಗೋಪಾಲ,ವಾಮನ.. ಎಂಬ ಪರಿಶುದ್ಧವಾದ ದೇವರ ನಾಮಗಳೇ. ಒಂದೋ ಆ ಹೆಸರುಗಳು ಎಲ್ಲರಿಗೂ ಅರ್ಥವಾಗುವ ದೇವರ ಹೆಸರುಗಳು ಆಗಿದ್ದವು, ಇಲ್ಲವೇ ಸ್ವಲ್ಪ ಆಳಕ್ಕೆ ಇಳಿದು ನೋಡಿದರೂ ಸಹ ಅದು ಇನ್ನೊಂದು ಅರ್ಥದಲ್ಲಿ ದೇವರ ನಾಮವೇ ಆಗಿರುತ್ತಿತ್ತು.


ಇಂದು ಅಂತಹ ಹೆಸರಿಟ್ಟರೆ ನಾವುಗಳೇ ಮೂಗು ಮುರಿಯುತ್ತೇವೆ ಹಳೆಯ ಕಾಲದವರು ಎಂದು, ಅರ್ಥವೇ ಗೊತ್ತಿಲ್ಲದ ಹೆಸರು ಇಡುವುದು ಯಾವುದು ಯಾವುದೋ ಲಿಂಗಕ್ಕೆ ಪುಲ್ಲಿಂಗ, ಸ್ತ್ರೀ ಲಿಂಗ, ನಪುಂಸಕಲಿಂಗದಂತಹ ಹೆಸರು ಗೊತ್ತಿಲ್ಲದೆ ಇಡುವುದು ಆಧುನಿಕತೆಯ ಭಾಗವಾಗಿ ಬಿಟ್ಟಿದೆ.. ಅದಕ್ಕಾಗಿ ಜಿದ್ದಿಗೆ ಬಿದ್ದು ಬಿಟ್ಟಿದ್ದೆವೆ ನಾವು. ಸುಲಭವಾಗಿ ದೇವರ ನಾಮವನ್ನು ಸ್ಮರಣೆ ಮಾಡುವ ಅವಕಾಶವೊಂದನ್ನು ತಪ್ಪಿಸಿಕೊಂಡು ದೇವಸ್ಥಾನಗಳಲ್ಲಿ ಹಣ ತೆತ್ತು ಪುಣ್ಯವನ್ನು ಖರೀದಿ ಮಾಡಲು ಕ್ಯೂ ನಿಲ್ಲುತ್ತೇವೆ.. ಎಷ್ಟೊಂದು ವಿಪರ್ಯಾಸ ಅಲ್ಲವೇ.ಆದರಿದು ಸತ್ಯ! 


ಆದರೆ ಸಂತೋಷ ಏನೆಂದರೆ ಇತ್ತೀಚಿನ ದಿನಗಳಲ್ಲಿ ವಿಶಿಷ್ಟವಾಗಿರುವ ದೇವರಿಗೆ ಸಂಬಂಧಿಸಿದ ಸಂಸ್ಕೃತದ ಹೆಸರು ಇಡುವುದು,ಪುರಾಣದ ಪಾತ್ರಗಳ ಹೆಸರು ಇಡುವುದು,ಲಲಿತ ಸಹಸ್ರನಾಮ, ಲಕ್ಷ್ಮೀ ಸಹಸ್ರ ನಾಮ, ಶಿವ ಸಹಸ್ರನಾಮ, ವಿಷ್ಣು ಸಹಸ್ರನಾಮ ಗಳಲ್ಲಿರುವ ಅತೀ ಸುಂದರ ಹೆಸರುಗಳನ್ನು ಹುಡುಕಿ ಹುಡುಕಿ ತಮ್ಮ ಮಕ್ಕಳಿಗೆ ಇಟ್ಟುಕೊಳ್ಳುವ ಪರಿಪಾಠ ಜನರು ಬೆಳೆಸಿಕೊಳ್ಳುತ್ತಿದ್ದಾರೆ.ಎಲ್ಲರ ಬಳಿ ಕೇಳುವಂತೆ ಕೆಲವರು

ನನ್ನ ಬಳಿಯೂ ಒಂದೊಳ್ಳೆಯ ಹೆಸರು ಸೂಚಿಸಿ ಎಂದು ಕೆಲವೊಮ್ಮೆ ಕೇಳುವುದು ಉಂಟು,ಯಾರಾದರೂ ನಮ್ಮ ಮಗುವಿಗೊಂದು ಸುಂದರವಾದ ಹೆಸರು ಸೂಚಿಸಿ ಎಂದರೆ ನಾನಂತು ಈ ಮೂಲಗಳಿಗೆಯೇ ಹೊರಟುಬಿಡುತ್ತೇನೆ.ಹಲವರಿಗೆ ಸೂಚಿಸಿದ್ದೇನೆ ಕೂಡ.ಎಷ್ಟು ಜನ ಇಟ್ಟುಕೊಂಡಿದ್ದಾರೋ ಇಲ್ಲವೋ ನನಗದು ಗೊತ್ತಿಲ್ಲ.ಆದರೆ ನನಗಂತು ಸಂತೋಷವಿದೆ ಈ ಮೂಲಕವಾದರೂ ನನಗೊಂದು ಗೊತ್ತಿಲ್ಲದ ದೇವರ ನಾಮದ ಉತ್ಖನನ ಮಾಡುವ ಭಾಗ್ಯ ಹಾಗೂ ಆ ಮೂಲಕ ಅದರ ಅರ್ಥ ತಿಳಿಯುವ ಅವಕಾಶ ದೊರೆಯುತ್ತದೆಯಲ್ಲವೇ ಎಂದು. 


ಈಗ ಒಮ್ಮೆ ನೀವು ಹಿಂದಿನ ಕಾಲದಲ್ಲಿ ತಮ್ಮ ಮಕ್ಕಳಿಗೆ ದೇವರ ನಾಮಗಳನ್ನು ಇಟ್ಟುಕೊಂಡ ಹೆತ್ತವರ ಭಾಗ್ಯ ನೋಡಿ ಬಿಡಿ. 

ನಮಗೆ ಈಗ  ರಾಮಣ್ಣ ಎನ್ನುವುದು ಏನೋ ಓಬಿರಾಯನ ಕಾಲದ ಹೆಸರಂತೆ ಕಾಣಬಹುದು... ಆದರೆ ನೀವೇ ಹೇಳಿ ರಾಮ ನಾಮಕ್ಕಿಂತ ಸರಳವಾದದ್ದು,ಸಿಹಿಯಾದದ್ದು, ಶ್ರೇಷ್ಟವಾದದ್ದು ಈ ಜಗತ್ತಿನಲ್ಲಿ ಬೇರೆ ಏನು ಇರಲು ಸಾಧ್ಯ...


ಕನಿಷ್ಟ ಪಕ್ಷ ಮನೆಯ ಹಸುವಿಗಾದರೂ ಗೌರಿ, ಲಕ್ಷೀ ಎನ್ನುವ ಹೆಸರುಗಳು ಇಡುವ ಕ್ರಮ ನಮ್ಮಲ್ಲಿ ಇನ್ನೂ ಇದೆ.ಏಕೆಂದರೆ ಅವುಗಳಿಗೆ ಫಾಶ್ ಆದ ಹೆಸರು ಯಾರೂ ಇಡುವುದಿಲ್ಲ. ಬೇಕಿದ್ದರೆ ನಾಯಿಗೆ, ಬೆಕ್ಕಿಗೆ ಇಡುವವರು ಇದ್ದಾರೆ.ದೇವರ ಕೋಣೆ ಹೋಗುವುದು,ದೇವರ ನಾಮ ಸ್ಮರಣೆ ಮಾಡುವುದು ಕೂಡ ಕಷ್ಟ ಕಷ್ಟ ಎಂದು ಅನ್ನಿಸಿಬಿಟ್ಟರೆ ಕನಿಷ್ಟ ಪಕ್ಷ ದನದ ಹಟ್ಟಿಗೆ ಇಲ್ಲವೇ ಗದ್ದೆ ಬಯಲಿಗೆ ಒಮ್ಮೆ ಹೋಗಿ ನಿಮ್ಮ ಮನೆಯ ಹಸುವನ್ನೋ ಅಥವಾ ಇನ್ನಾರದ್ದೋ ಮನೆಯ ಹಸು ಆಗಿದ್ದರೂ ಪರವಾಗಿಲ್ಲ... ಒಮ್ಮೆ ಗೌರಿ,ಲಕ್ಷೀ ಎಂದು ಹಾಗೇ ಬಾಯಿ ತುಂಬಾ ಕರೆದು ಬಿಡಿ.ನಿಮ್ಮ ಜೋಳಿಗೆಗೆ ಒಂದಷ್ಟು ಪುಣ್ಯವನ್ನು ಈ ಕಾಲದ ಹಸುಗಳು ಕೂಡ ಖಂಡಿತವಾಗಿಯೂ ಸುರಿಯಬಲ್ಲವು...ಜೋಳಿಗೆ ತೆರೆದು ಅವುಗಳ ಮುಂದೆ ನಿಲ್ಲುವ ಮನಸ್ಸು ನಾವು ಮಾಡಬೇಕು ಅಷ್ಟೇ. 


ಜೀವನದಲ್ಲಿ ಒಂದೊಳ್ಳೆಯ ಹೆಸರು ಮಾಡುವುದಕ್ಕಿಂತಲೂ ಮೊದಲು,ಯಾವುದಾದರೂ ಕ್ಷೇತ್ರದಲ್ಲಿ ಹೆಸರುವಾಸಿಯಾಗುವುದಕ್ಕಿಂತಲೂ ಮೊದಲು...ನಮ್ಮ ಹೆಸರೇ ಅರ್ಥಪೂರ್ಣ ಆಗಿದ್ದರೆ,ಅದರಿಂದ ತಕ್ಕ ಮಟ್ಟಿಗೆ ಪುಣ್ಯ ಪ್ರಾಪ್ತಿಯೂ ಆಗುವಂತಿದ್ದರೆ ಎಷ್ಟೊಂದು ಚಂದ ಅಲ್ಲವೇ... 


ವ್ಯವಹಾರಕ್ಕೆ ಇರುವ, ಗುರುತು ಪರಿಚಯಕ್ಕಾಗಿ ಇರುವ ಹೆಸರಲ್ಲೇನಿದೆ ಎಂದು ಹೇಳಬೇಡಿ.ಎಲ್ಲವೂ ಹೆಸರಿನಲ್ಲಿಯೇ ಇದೆ. ಪುರಂದರದಾಸರು ಕೂಡ ಸುಮ್ಮನೆ ಹೇಳಿದ್ದಲ್ಲ ನೋಡಿ...


ಅವರೇ ಹೇಳಿದಂತೆ ಸಾಧ್ಯ ಆದಷ್ಟು... 


"ರಾಮನಾಮ ಪಾಯಸಕ್ಕೆ

ಕೃಷ್ಣನಾಮ ಸಕ್ಕರೆ... 

ವಿಟ್ಠಲನಾಮ ತುಪ್ಪವ ಕಲಸಿ

ಬಾಯಿ ಚಪ್ಪರಿಸಿರೊ... "


.....................................................................................


#ಏನೋ_ಒಂದು.. 


ab pacchu 

moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ