ಎಂತದು ಮರಾಯರೇ
" #ಎಂತದು_ಮಾರಾಯರೇ... ಅಂದಾಗಲೆಲ್ಲ ಅತಿಯಾಗಿ ನೆನಪಾಗೋ ಕಡಲೂರಿನವರು.. "
ಪೇಡಾ ಅಂದರೆ ಧಾರವಾಡ, ಬೆಲ್ಲ ಅಂದರೆ ಮಂಡ್ಯ,ದಸರಾ ಅಂದರೆ ಮೈಸೂರು,ಕನ್ನಡ ಅಂದರೆ ಅದು ನಮ್ಮ ಕರ್ನಾಟಕ .. ಈ ರೀತಿಯಾಗಿ ನಮಗೆ ಹೇಗೆ ಆಯಾಯ ವಿಷಯಕ್ಕೆ ಒಂದೊಂದು ಊರುಗಳು, ಪ್ರಾಂತ್ಯಗಳು,ರಾಜ್ಯಗಳು ತಟ್ಟನೇ ನೆನಪಾಗಿ ಬಿಡುತ್ತದೋ ಹಾಗೆಯೇ ಎಲ್ಲಾದರೂ ಎಂದಾದರೂ ಯಾರಾದರೂ ಕನ್ನಡವನ್ನೇ ಮಾತನಾಡುವಾಗ "ಎಂತದು ಮರಾಯರೇ.." ಎಂಬುವುದೊಂದು ಹಾಗೇ ಅಲೆ ಅಲೆಯಾಗಿ ಬಂದು ಕಿವಿಗೆ ಅಪ್ಪಳಿಸಿ ಬಿಟ್ಟರೆ ನಮ್ಮಲ್ಲಿ ಹೆಚ್ಚಿನವರಿಗೆ ಕೂಡಲೇ ಏನು ನೆನಪಾಗುತ್ತದೆ ಹೇಳಿ...ಅದೇ ಯಕ್ಷಗಾನ ಕಲೆಯ ಊರು,ಕಂಬಳ ಪ್ರೀಯರ ಊರು,ಸದಾ ನೀರುದೋಸೆ ಮೆಲ್ಲುವವರ ಊರು,ಕಡಲೂರು ಅದುವೇ ನಮ್ಮ ಮಂಗಳೂರು.
ಮಂಗಳೂರಿನ ಬಗ್ಗೆ ಮಾತಾಡುವುದಕ್ಕಿಂತಲೂ ಇಂದು ನಮ್ಮ ಮಂಗಳೂರಿನಲ್ಲಿ ಮಾತಾಡುವ ಕನ್ನಡದ ಬಗ್ಗೆಯೇ ಸ್ವಲ್ಪ ಮಾತಾಡುವ.ಪ್ರತಿಯೊಂದು ಭಾಷೆಗೂ ಅದರದ್ದೇ ಆದ ಸೊಗಡು, ಸೊಬಗು ಅಂದ ಚಂದ ಎಲ್ಲವೂ ಇದ್ದೇ ಇರುತ್ತದೆ. ಅದರ ಜೊತೆ ಜೊತೆಗೆಯೇ ಆ ಭಾಷೆಯದ್ದೇ ಆದ ಒಂದು singnature tone ಇಲ್ಲವೇ signature slang ಗಳು ಕೂಡ ಇರುತ್ತದೆ. ಅದನ್ನು ಕೇಳಿಯೇ ಓಹ್ ಇದು ಆ ಊರಿನವರೇ ಎಂದು ಹೇಳಿಬಿಡಬಹುದು.ಸವಿಗನ್ನಡ ಮಾತನಾಡುವಾಗ ಕೇವಲ ಒಂದು ಸಾಲಿನಿಂದ ಬೇರೆ ಜಿಲ್ಲೆಗಳನ್ನು ಅಷ್ಟೊಂದು ಸುಲಭವಾಗಿ ಕರಾರುವಕ್ಕಾಗಿ ಗುರುತಿಸಲು ಎಷ್ಟು ಸಾಧ್ಯ ಆಗುತ್ತೋ ಇಲ್ಲವೋ ನನಗದು ಗೊತ್ತಿಲ್ಲ ಆದರೆ ಬಹುಶಃ ಕನ್ನಡದಲ್ಲಿ ಯಾವುದಾದರೂ ಒಂದು ಸಾಲು ಹೇಳಿ,ಅದು ಯಾವ ಊರಿನವರು ಎಂದು ಖಚಿತವಾಗಿಯೇ ಹೇಳಬಹುದಾದರೆ ಅದು ಖಂಡಿತವಾಗಿಯೂ ಎಲ್ಲರಿಗೂ ಚಿರಪರಿಚಿತವಾಗಿರುವ ಸಾಲು "ಎಂತದು ಮರಾಯರೇ" ಎಂಬುವುದೇ ಆಗಿರುತ್ತದೆ ಮತ್ತು ಅದಕ್ಕೆ ಸಂಬಂಧ ಪಟ್ಟ ಊರು ಯಾವುದು ಎಂದು ಇಡೀಯ ಕರ್ನಾಟಕಕ್ಕೆ ಗೊತ್ತು.. ಅದುವೇ ನಮ್ಮ ಮಂಗಳೂರು.
ಗಮ್ಮತ್ ಎಂತ ಗೊತ್ತುಂಟಾ "ಈ ಎಂತದು ಮರಾಯರೇ.. " ಎನ್ನುವುದು ಮಂಗಳೂರಿನದ್ದೇ ಆದರೂ ಈ ಚಲನಚಿತ್ರಗಳಲ್ಲಿ ರಾಗವಾಗಿ ಎಳೆದು ಎಳೆದು ಹೇಳುವಷ್ಟು ಸ್ವತಃ ನಮ್ಮ ಮಂಗಳೂರಿಗರೇ ಮಾತಾಡುವುದು ಇಲ್ಲ.ನಾವು ಆ ರೇಂಜಿಗೆ ಚ್ಯೂಯಿಂಗ್ ಗಮ್ ಎಳೆದಂತೆ ಮಾತನಾಡುವುದು ಸ್ವಲ್ಪ ಕಮ್ಮಿಯೇ.ಮೊನ್ನೆ ಒಂದು ಚಲನಚಿತ್ರ ನೋಡುತ್ತಿದ್ದೆ. ಆ ಸೀನಿನಲ್ಲಿ ಒಂದು ಪಾತ್ರ ನಮ್ಮ ದಕ್ಷಿಣ ಕನ್ನಡ ಸೈಡಿನವರು. ಅವರ ಎದುರಿನಲ್ಲಿರುವ ಪಾತ್ರಕ್ಕೆ ಈ ಜನ ನಮ್ಮ ದಕ್ಷಿಣ ಕನ್ನಡದವರು ಅಂತ ಗೊತ್ತಾಗ್ತದೆ,ಆಗ ಅಲ್ಲಿಯವರೆಗೆ ಮಾಮಾಲಿ ಅವರ ಕನ್ನಡದಲ್ಲಿ ಸರಿಯಾಗಿಯೇ ಮಾತಾಡುತ್ತಿದ್ದ ಆ ಮತ್ತೊಬ್ಬರು ನಮ್ಮ ದ.ಕನ್ನಡ ಜಿಲ್ಲೆಯವರೊಂದಿಗೆ ಮಾತನಾಡುವುದನ್ನು ಈ ರೀತಿಯಾಗಿ ತೋರಿಸಲಾಗಿತ್ತು..." ಓಹ್ ಎಂತಹದು ಮಹಾರಾಯರೇ... ನೀವು ಮಂಗಳೂರಿನವರೋ.. ನಿಮ್ಮ ಮಂಗಳೂರಿನಲ್ಲಿ ದೊಡ್ಡ ದೊಡ್ಡ ಕಡಲು ಉಂಟೋ.. ಕಡಲಿನಲ್ಲಿ ದೊಡ್ಡ ದೊಡ್ದ ಬಂಗ್ಡಾ ಉಂಟೋ..".
ಕಡಲು ದೊಡ್ಡದೇ ಇರುವುದು ಅದಕ್ಕಾಗಿಯೇ ಅದನ್ನು ವಿಶಾಲವಾಗಿರುವುದಕ್ಕೆ ಉಪಮೇಯವಾಗಿ ಬಳಸುವುದು.ಚಿಕ್ಕ ಚಿಕ್ಕ ಕಡಲು, ಸಣ್ಣಪುಟ್ಟ ಕಡಲು ಎಂಬುದಾಗಿ ಇಲ್ಲ. ಚಿಕ್ಕ ಏನಿದ್ದರೂ ಕೆರೆ ತೊರೆ ಹಳ್ಳ ತೋಡು ಅಷ್ಟೇ. ಮತ್ತೊಂದು ಅದು" ಬಂಗ್ಡಾ" ಉಂಟಲ್ಲಾ ಅದು ಕೇಳುವಾಗ ನನಗಂತು ಪಂಜಾಬಿನವರು ಇಷ್ಟ ಪಟ್ಟು ಓಯ್.. ಭಲ್ಲೆ ಭಲ್ಲೆ ಎಂದು ಹೇಳುತ್ತಾ ಮಾಡುವ ನೃತ್ಯ ಪ್ರಕಾರ ಬಾಂಗ್ರಾ/ಬಾಂಗ್ಡ ವೇ ನೆನಪಾಗುವುದೇ ಹೊರತು ನಮ್ಮ ಮಂಗಳೂರಿನ ಬೆಳ್ಳಿ ಬಣ್ಣದ ಒಮ್ಮೆಗೆ ಸುಮಾರು ಹೆಚ್ಚು ಕಡಿಮೆ ಐದು ಲಕ್ಷದಷ್ಟು ಮೊಟ್ಟೆಗಳನ್ನು ಇಡಬಲ್ಲ ಸುಂದರವಾದ ಹಾಗೂ ಅಷ್ಟೇ ರುಚಿಯಾದ ಬಂಗುಡೆ(Macrel) ಮೀನು ನೆನಪು ಆಗುವುದೇ ಇಲ್ಲ.ಬಂಗುಡೆ, ಬೂತಾಯಿ(sardine)ಮೀನುಗಳು ಕಡಲಿನ ರಾಜ ರಾಣಿ ಇದ್ದ ಹಾಗೆ ಆದರೆ ಅಂಜಲ್(king fish), ಮಾಂಜಿ (pomfret)ಮೀನುಗಳು ಕಡಲಿಗೆ ಚಕ್ರವರ್ತಿ ಹಾಗೂ ಸಾಮ್ರಾಜ್ಞಿ ಇದ್ದ ಹಾಗೆ. ಹಾಗಾದರೆ ದೊಡ್ಡ ಮೀನು ತಿಮಿಂಗಿಲ ಉಂಟಲ್ಲವೋ..ಅದು ಏನು..ಎಂದೆಲ್ಲ ಕೇಳಬೇಡಿ.ನಾನು ಸಾಮಾನ್ಯವಾಗಿ ತಿನ್ನುವ ಮೀನುಗಳ ಕುರಿತಾಗಿ ಹಾಗೂ ಅವುಗಳ ಬೆಲೆಗಳಿಗೆ ಅನುಗುಣವಾಗಿ ಈ ರೀತಿಯಾಗಿ ವರ್ಗೀಕರಿಸಿದ್ದು ಆಯ್ತಾ.
ಏನೇ ಇರಲಿ ಖುಷಿ ಎಂತ ಗೊತ್ತುಂಟಾ,ಯಾರಾದರೂ ನಾವು ಮಂಗಳೂರಿನವರು ಅಂತ ಗೊತ್ತಾದ ಕೂಡಲೇ ಸಾಧ್ಯ ಆದಷ್ಟು ನಮ್ಮ ಭಾಷೆಗೆ ಇಳಿದು ನಮ್ಮೊಂದಿಗೆ ಮಾತನಾಡಲು ಶುರು ಮಾಡಿ ಬಿಡುವುದು. ಅವರು ಮಾತನಾಡುವಾಗ ಸಹಜ ಮಂಗಳೂರಿನ ಕನ್ನಡ ಅಂತ ಅನ್ನಿಸದಿದ್ದರೂ ಅವರ ಪ್ರಯತ್ನ ಖುಷಿ ಕೊಡುತ್ತದೆ. ಅದರಲ್ಲೂ ಆ "ಎಂತದು ಮಹಾರಾಯರೇ" ಇದರಲ್ಲಿರುವ ಮಹಾರಾಯರೇ ಎಂಬುವುದು ನಿಧಾನವಾಗಿ ಬದಲಾವಣೆ ಗೊಂಡು "ಮರಾಯ.." ಎಂಬುವುದು ಆಗಿ ಈಗ ಮಂಗಳೂರಿನ ಯುವಜನತೆಯ ಬಾಯಲ್ಲಿ "ಮರ್ರೆ.." ಎಂಬುವುದು ಆಗಿ ಬಿಟ್ಟಿದೆ. ಹಾಗಾಗಿ ಚಲನಚಿತ್ರದಲ್ಲಿ ಬರುವ ಟಿಪಿಕಲ್ ಮಂಗಳೂರಿನ ಕನ್ನಡ ಬಹುಶಃ ಚಲನಚಿತ್ರದಲ್ಲಿಯೇ ಜಾಸ್ತಿ ಆಗಿ ಉಳಿದು ಬಿಟ್ಟಿದೆ ಎಂದು ಕಾಣುತ್ತಿದೆ. ಆದರೂ ಮನೆಯಲ್ಲಿ ಹಿರಿಯರು,ತಾಯಂದಿರು ಎಲ್ಲಾದರೂ ಕನ್ನಡ ಮಾತನಾಡಲು ಇಳಿದು ಬಿಟ್ಟರೆ ಖಂಡಿತವಾಗಿಯೂ ಈಗಲೂ ಅಪ್ಪಟ ಮಂಗಳೂರು ಕನ್ನಡವನ್ನೇ ಮಾತಾಡುತ್ತಾರೆ.ಮನೆಯಲ್ಲಿ ತುಳು ಭಾಷೆಯೇ ಪ್ರಧಾನ ಭಾಷೆ ಆಗಿದ್ದರಂತು ನಮ್ಮ ತಾಯಂದಿರು ಮಾತನಾಡುವ ಕನ್ನಡ ಆಹಾ. ಕಿವಿಗೆ ಇಂಪು.
ಮಂಗಳೂರು ಕನ್ನಡದ ಸ್ವಾದ ಮಂಗಳೂರಿನಲ್ಲಿ ಇರುವಾಗ ಸ್ವತಃ ನಮಗೂ ಗೊತ್ತೇ ಆಗುವುದು ಇಲ್ಲ. ಆದರೆ ಯಾವಾಗಲಾದರೂ ಉದ್ಯೋಗದ ನಿಮಿತ್ತ ಮಂಗಳೂರು ಬಿಟ್ಟು ಬೇರೆ ರಾಜ್ಯ ಇಲ್ಲವೇ ಹೊರ ದೇಶಗಳಲ್ಲಿ ವರ್ಷಗಳ ಕಾಲ ಇರಬೇಕಾದ ಸಂಧರ್ಭಗಳು ಬಂದಾಗ ಅಲ್ಲೆಲಾದರೂ ಹೀಗೆ ನಡೆದುಕೊಂಡು ಹೋಗುವಾಗ ಒಂದೋ ತುಳು ಭಾಷೆ ಇಲ್ಲವೇ ಈ ಮಂಗಳೂರು ಕನ್ನಡ ಕಿವಿಗೆ ಬಿದ್ದಾಗ ಹಾಲು ಕುಡಿದಷ್ಟು ಖುಷಿ ಆಗುವುದು ಮಾತ್ರ ನೂರಕ್ಕೆ ನೂರು ಸತ್ಯವೇ. ಓಹ್ ಈ ಜನ ನಮ್ಮವರೇ.. ಖಂಡಿತವಾಗಿಯೂ ನಮ್ಮ ಮಂಗಳೂರಿನವರೇ ಎಂದು ಸುಲಭವಾಗಿ ಗೊತ್ತಾಗಿ ಬಿಡುತ್ತದೆ. ನಂತರ ಅವರುಗಳ ಸ್ನೇಹ ಸಂಪಾದನೆ ಬಲು ಸುಲಭ.
ಸುರತ್ಕಲ್,ತಲಪಾಡಿ,ಉಡುಪಿ,ಕಾರ್ಕಳ,ಪರ್ಕಳ,ಪುತ್ತೂರು,ಬೆಳ್ತಂಗಡಿ, ಸುಳ್ಯ ಹೀಗೆ ಎಲ್ಲಿಯವರೇ ನಾವು ಆಗಿದ್ದರೂ ಒಮ್ಮೆ ನಾವು ದಕ್ಷಿಣ ಕನ್ನಡ,ಇಲ್ಲ ಉಡುಪಿ ಬಿಟ್ಟು ಹೊರಗೆ ಕಾಲಿಟ್ಟರೇ ಹೊರಗಿನವರಿಗೆ ನಾವು ಎಂದೆಂದಿಗೂ ಮಂಗಳೂರಿನವರೇ ಆಗಿರುತ್ತೆವೆ.ದಕ್ಷಿಣ ಕನ್ನಡ, ಉಡುಪಿಗಿಂತಲೂ ಅಲ್ಲೆಲ್ಲಾ ಮಂಗಳೂರು ಎಂಬುವುದೊಂದೇ ನಮ್ಮ ಐಡೆಂಟಿಟಿ. ಆದರೂ ಖುಷಿ ಇದೆ ಏಕೆಂದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು, ದಕ್ಷಿಣ ಕನ್ನಡ ಹಾಗೂ ಉಡುಪಿ ಎಂದು ವಿಭಾಜಿಸದೇ ಇಂದಿಗೂ ಹೊರಗಿನ ಜನ ಒಂದೇ ಭಾವದಿಂದ ಮಂಗಳೂರಿಗರು ಎಂದೇ ಗುರುತಿಸುವುದು. ನಮ್ಮಲ್ಲೂ ಕೂಡ ನಾವುಗಳು ಬೇರೆ ಬೇರೆ ಎಂಬ ಭಾವವಾಗಲಿ, ಬೇಧವಾಗಲಿ ಇನ್ನೂ ಇಲ್ಲ. ಕೇವಲ ಗಡಿಗಳು ಮಾತ್ರ ನಮ್ಮನ್ನು ಬೇರೆ ಬೇರೆ ಮಾಡಿದ್ದಾವೆಯೇ ಹೊರತು ಭಾವನೆಗಳನ್ನಾಗಲಿ ಮನಸ್ಥಿತಿಯನ್ನಾಗಲಿ ಅಲ್ಲವೇ ಅಲ್ಲ.
ಅಚ್ಚ ಕನ್ನಡದ ಮಂಗಳೂರು ಎಂಬುವುದು ಹೋಗಿ ಮ್ಯಾಂಗಲೋರ್, ಮಂಗ್ಳೂರು ಆಗಿರುವ ಈ ಸಂದರ್ಭದಲ್ಲಿ ಕಡೇ ಪಕ್ಷ ಸಿನಿಮಾದಲ್ಲಿ " ಓಹ್ ಎಂತದು ಮಾರಾಯರೇ ನೀವು ಮಂಗಳೂರಿನವರಾ.." ಎಂದು ಹೇಳುವಾಗಲೆಲ್ಲ ಸರಿಯಾಗಿಯೇ ಮಂಗಳೂರು ಎಂದು ಹೇಳುವುದು ಖುಷಿ ಕೊಡುತ್ತದೆ. ಮಂಗಳೂರಿನ ಕನ್ನಡದ ಭಾಷೆಯ ಸೊಬಗೇ ಹಾಗೇ.ಬೇರೆಯವರಿಗೂ ಕೂಡ ಒಂದಷ್ಟು ಹೊತ್ತು ನಮ್ಮೊಂದಿಗೆ ಮಾತನಾಡಿ ಬಿಡುವ ಎಂದು ಮಾಡಿಸಿ ಬಿಡುತ್ತದೆ.
ಬೇರೆ ಕಡೆ ಹೋದಾಗ Interview ಗಳಲ್ಲಿ ಸಂದರ್ಶನಾಧಿಕಾರಿ, ಆಟೋಗಳಲ್ಲಿ ಕುಳಿತುಕೊಂಡಾಗ ಡ್ರೈವರ್ ಗಳು ಸಹ ನಾವು ಮಂಗಳೂರಿಗರು ಎಂದು ಗೊತ್ತಾದಾಗ ಉತ್ಸಾಹದಲ್ಲಿ ನಮ್ಮ ಸೊಗಡಿನಲ್ಲಿ ಮಂಗಳೂರು ಕನ್ನಡ ಮಾತಾಡಲು ಶುರು ಮಾಡಿಯೇ ಬಿಡುತ್ತಾರೆ. ಆವಾಗಲೆಲ್ಲ ಬಹಳ ಖುಷಿ ಆಗುವುದು.
ನಮ್ಮಲ್ಲಿ ತುಳು ಭಾಷೆ ಹೆಚ್ಚಿನವರು ಮಾತಾಡುವ ಭಾಷೆ ಆಗಿದೆ. ಹೆಚ್ಚಾಗಿ ಮನೆಯಲ್ಲಿ ಮಾತಾಡುವ ಭಾಷೆ ಕೂಡ ಅದೇ.ಆದರೆ ಮಂಗಳೂರು ಕನ್ನಡ ಅದೊಂದು ಸದಾ ನಮ್ಮ ಜೊತೆಗೆಯೇ ಹುಟ್ಟಿನಿಂದಲೇ ಹಾಗೇ ಇನ್ನೂ ನಮ್ಮೊಳಗೆಯೇ ಇದೇ. ತುಳು - ಕನ್ನಡ ಬೇಧಭಾವ ನಮ್ಮಲ್ಲಂತು ಇಲ್ಲವೇ ಇಲ್ಲ. ಪುರಂದರ ದಾಸರು " ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ, ವಿಠ್ಠಲ ನಾಮ ತುಪ್ಪವ ಸೇರಿಸಿ ಬಾಯಿ ಚಪ್ಪರಿಸಿರೋ..." ಎಂದು ಹೇಳುವಂತೆ ತುಳು- ಕನ್ನಡ ಎರಡೂ ನಮ್ಮಲ್ಲಿ ಪಾಯಸ ಹಾಗೂ ಸಕ್ಕರೆಯಂತೆಯೇ ಇದೆ. ಮನೆಯಲ್ಲಿ ಕನ್ನಡವೇ ಪ್ರಧಾನ ಭಾಷೆ ಆಗಿದ್ದರೆ ಆಗ ತುಳು ಭಾಷೆ ಇಲ್ಲಿ ಸಕ್ಕರೆಯಾಗಿ ಬಿಡುತ್ತದೆ.. ಅದೇ ರೀತಿ ತುಳುವೇ ಪಾಯಸದಂತೆ ಪ್ರಧಾನವಾಗಿರುವ ಮನೆಗಳಲ್ಲಿ ಕನ್ನಡ ಸಕ್ಕರೆಯಂತೆ ಸಿಹಿ ನೀಡುತ್ತದೆ..ಇದನ್ನೆಲ್ಲಾ ಸವಿಯಲು ಮಂಗಳೂರಿಗೆಯೇ ಬರಬೇಕು ನೀವು. ಮಂಗಳೂರಿನ ಹಿರಿಯ ಕವಿಗಳು,ಸಾಹಿತಿ, ಲೇಖಕರೂ ಕೂಡ ನಮ್ಮ ಕನ್ನಡ ಸಾಹಿತ್ಯವನ್ನು ಸಮೃದ್ಧಿಗೊಳಿಸುವಲ್ಲಿ ತುಂಬಾ ಮಹತ್ತರವಾದ ಪಾತ್ರವನ್ನು ವಹಿಸಿದ್ದಾರೆ ಹಾಗೂ ತಮ್ಮ ಅಪಾರವಾದ ಕೊಡುಗೆಗಳನ್ನು ನೀಡಿದ್ದಾರೆ ಎನ್ನುವುದು ಕೂಡ ಅಷ್ಟೇ ಸತ್ಯ.
ಮತ್ತೆ ವಿಷಯ ಎಂತ ಸ ಇಲ್ಲ..ನಿನ್ನೆ ಒಟ್ರಾಸಿ ಬಿಸಿಲು ಇತ್ತು,ಈಗ ನೋಡಿದರೆ ಕಂಡಾಬಟ್ಟೆ ಮಳೆ ಬರ್ತಾ ಉಂಟು. ಇವತ್ತು ಸಂಡೆ ಬೇರೆ. ಸಂಡೆಗೆ ಬೇಗ ಏಳುವುದೆಂದರೆ ನಿಜವಾಗಿಯೂ ಅದೊಂದು ಮಂಡೆ ಬೆಚ್ಚವೇ. ಒಳಗೆ ಅಡುಗೆ ಮನೆಯೊಳಗಿಂದ,ಬಿಸಿ ಕಾವಲಿಯಿಂದ ಬರುತ್ತಿರುವ ಚುಂಯ್.. ಚುಂಯ್.. ಎಂಬ ಅಮ್ಮ ನೀರುದೋಸೆ ಹೊಯ್ಯುವ ಸದ್ದೇ ಸದ್ಯದ ಅಲರಾಂ ನನಗೆ.. ಹೊಟ್ಟೆ ತಾಳ ಹಾಕುತ್ತಿದೆ,ಎದ್ದು ಒಂದೆರಡು ನೀರುದೋಸೆಯನ್ನು ಹಾಗೇ ಮೆದ್ದು ಬರುವೆನು. ನವರಾತ್ರಿ ಅಲ್ವಾ ಹಾಗಾಗಿ ನೀರು ದೋಸೆಗೆ ಸದ್ಯಕ್ಕೆ ಬೆಲ್ಲಕಾಯಿ ಯೇ ಸವಿಯಾದ ಜೋಡಿ ಇಂದು ನಮ್ಮಲ್ಲಿ. ಆಯ್ತು ಮಾರಾಯರೇ.. ಇನ್ನೇನೂ ಇಲ್ಲ,ಏನಾದರೂ ಇದ್ದರೆ ಹೀಗೆಯೇ "ಏನೋ ಒಂದು" ಮಾತಾಡುತ್ತಾ ಮತ್ತೊಮ್ಮೆ ಸಿಗುವಾ ಆಯ್ತಾ.ಹಾಗಾದರೆ ಬರುವುದಾ ಇನ್ನು ...
.....................................................................................
Ab Pacchu
moodubidire

Comments
Post a Comment