ಬಾಳೆ ಎಂದರೆ ಬರೀ ಎಲೆ ಅಲ್ಲ,ಬರೀ ಹಣ್ಣು ಕೂಡ ಅಲ್ಲ..
ಬಾಳೆ ಎಂಬ ದೊಡ್ಡ ಎಲೆಯ ಸಸ್ಯ,ಮನುಷ್ಯನ ಬಾಳಿನ ತುಂಬೆಲ್ಲಾ ತುಂಬಾ ದೊಡ್ಡದಾಗಿಯೇ ಆವರಿಸಿಕೊಂಡಿದೆ.ಬೇಕಿದ್ದರೆ ನೋಡಿ ಹುಟ್ಟಿನಿಂದ ಸಾವಿನವರೆಗೂ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಉಳಿದೆಲ್ಲಾ ಎಲೆಗಿಂತ ಬಾಳೆಯ ಎಲೆಯ ಬಳಕೆಯೇ ನಮ್ಮಲ್ಲಿ ಹೆಚ್ಚು.
ದೇವತಾ ಕಾರ್ಯಕ್ಕೆ ಬಾಳೆಯ ಹಣ್ಣೂ ಬೇಕು,ಬಾಳೆಯ ಎಲೆಯೂ ಬೇಕು.ಬಾಳೆಹಣ್ಣು ಇಲ್ಲದ ಹಣ್ಣುಕಾಯಿಯೇ ನಮ್ಮಲ್ಲಿ ಇಲ್ಲ.ಹಕ್ಕಿ ಪಕ್ಕಿಗಳಿಂದ ಸುಲಭವಾಗಿ ಎಂಜಲು ಆಗದ ಹಣ್ಣದು,ಎಂಜಲು ಆದ ಬೀಜದಿಂದ ಕೂಡ ಹುಟ್ಟದ ಹಣ್ಣದು(ಬಾಳೆಹಣ್ಣು ಹೊಸ ಕಂದು ಬೆಳೆದು ದೊಡ್ಡದಾಗಿ ಅದು ಗೊನೆ ಹಾಕಿದ ನಂತರವೇ ಆಗುವುದು,ಬೇರೆ ಹಣ್ಣುಗಳಂತೆ ಬೀಜದಿಂದ ಆಗುವುದಿಲ್ಲ).
ಹೇಗೆ ಮನುಷ್ಯನ ಶುಭ ಕಾರ್ಯಗಳಿಗೆ ಬಾಳೆಯೆಂಬ ತುದಿ ಎಲೆಯೇ ಬೇಕೋ ಸತ್ತ ಮೇಲೂ ಚಟ್ಟದ ಮೇಲೆ ಮಲಗುವ ಮನುಷ್ಯನ ದೇಹದಡಿಗೆ ಒಂದು ಇಡೀ ಬಾಳೆ ಎಲೆ ಇರಲೇಬೇಕು. ಅದಕ್ಕಾಗಿ ಬೇರೆ ಸಂದರ್ಭಗಳಲ್ಲಿ ಇಡೀ ಬಾಳೆ ಎಲೆಯ ಕೈಯನ್ನು ಎಂದೂ ಕಡಿಯಬಾರದೆಂಬ ನಂಬಿಕೆ ಕೂಡ ಇದೆ.ಕೇವಲ ಒಂದು ತುಂಡು ಬಾಳೆ ಎಲೆ ಕೊಯ್ದದಾಗ,ಅದರ ಜೊತೆ ಮತ್ತೊಂದು ಚಿಕ್ಕ ಬಾಳೆ ಎಲೆಯ ಸೀಳನ್ನಾದರೂ ಕೊಯ್ಯದೇ ಹಾಗೇ ಮನೆಯೊಳಗೆ ತಂದರೆ,ಅಮ್ಮ ಬೈದ ಬೈಗುಳಕ್ಕೆ ಲೆಕ್ಕವಿಲ್ಲ. ಬಾಳೆ ಎಂದರೆ ಹಾಗೇ.. ಅದು ಬರೀ ಎಲೆ ಎಲ್ಲ..ಬರೀ ಹಣ್ಣಲ್ಲ.. ಅಲ್ಲೊಂದು ನಂಬಿಕೆ ಕೂಡ ಇದೆ.
ಬಾಳೆ ಎಲೆಯ ಊಟದ ಬಗ್ಗೆ ನಾನು ಜಾಸ್ತಿ ಹೇಳುವುದೇ ಬೇಡ.ಬಿಸಿ ಬಿಸಿ ದೇವಸ್ಥಾನದ ಅನ್ನ,ತಾಜಾ ಬಾಳೆ ಎಲೆಯ ಮೇಲೆ ಬಿದ್ದಾಗ ಹಾಗೇ ಒಂದು ಪರಿಮಳ ಮೇಲೆಳುತ್ತದೆಯಲ್ಲ ಆ ಬಾಳೆ ಎಲೆಯ ಪರಿಮಳವನ್ನು ಒಮ್ಮೆ ಆಘ್ರಾಣಿಸಿ ನೋಡಿ... ಆಹಾ..ಯಾವುದಾದರೂ ಪ್ಲಾಸ್ಟಿಕ್ ತಟ್ಟೆಯಲ್ಲಿ ಅಂತಹದ್ದೊಂದು ಅನುಭೂತಿ ಸಿಗಲು ಸಾಧ್ಯವೇ?.ಹೆಚ್ಚಿನ ಹಿರಿಯರಿಗೆ ಎಂತಹ ಬಫೆ ಊಟವಿದ್ದರೂ ಪಂಕ್ತಿ ಊಟಕ್ಕೆ ಕೂತು,ಬಾಳೆ ಎಲೆಯಲ್ಲಿಯೇ ಸುಗ್ರಾಸ ಭೋಜನ ಮಾಡಿದರೆನೇ ಸಮಾಧಾನ. ಆರೋಗ್ಯ ದೃಷ್ಟಿಯಿಂದಲೂ ಅದೇ ಒಳ್ಳೆಯದು. ದಿನ ನಿತ್ಯ ಸ್ಟೀಲ್ ಇಲ್ಲವೇ ಪ್ಲಾಸ್ಟಿಕ್ ತಟ್ಟೆಯಲ್ಲಿ ಊಟ ಮಾಡಿದರೂ ನಾವೆಲ್ಲರೂ ಹಬ್ಬ ಹರಿದಿನಗಳಲ್ಲಿ ಹಬ್ಬದೂಟ ಮಾಡಲು,ಹೋಳಿಗೆ ಪಾಯಸ ಹೊಡೆಯಲು ಬಾಳೆ ಎಲೆಯನ್ನು ಎಂದೂ ಮರೆತಿದ್ದೇ ಇಲ್ಲ.ಬಾಳೆ ಅಂದರೆ ಸಂಸ್ಕೃತಿ ಕೂಡ.
ಬಾಳೆಗಿಡದ ಕಂದು ಇಲ್ಲದೇ ನಮ್ಮಲ್ಲಿ ಸತ್ಯನಾರಾಯಣ ಪೂಜೆ ಆಗುವುದೇ ಇಲ್ಲ. ದೇವರ ಫೋಟೋದ ಆಚೆ ಈಚೆ ಎರಡು ಚಿಕ್ಕ ಬಾಳೆಯ ಕಂದುಗಳು ವೈಕುಂಠದ ಜಯ ವಿಜಯರಂತೆ ದೃಢವಾಗಿ ನಿಂತುಕೊಂಡು .. ಅದರ ಎಲೆಗಳು ಸತ್ಯನಾರಾಯಣನ ತಲೆಯ ಮೇಲೆ ಸೂರಿನಂತೆ ಬಾಗಿ ಇದ್ದರೆನೇ ನೋಡುವ ಭಕ್ತನಿಗೆ ಅದೆನೋ ಸಮಾಧಾನ. ಕಾಲೇಜಿನ ಆಯುಧ ಪೂಜೆಯಲ್ಲಿ ಲ್ಯಾಬ್ ಗಳಲ್ಲಿನ ವಿದ್ಯಾರ್ಥಿಗಳ ಕಲ್ಪನೆಯ ದೇವರ ಪೀಠಗಳು ತಲೆ ಎತ್ತುವುದೇ ಬಾಳೆಯ ದಿಂಡಿನಿಂದ ಮತ್ತು ತೆಂಗಿನ ಗರಿಗಳಿಂದ.
ಮಲ್ಲಿಗೆ ಎಲ್ಲರಿಗೂ ಗೊತ್ತು. ಆದರೆ ಬಾಳೆಯ ನೂಲಿನಲ್ಲಿ ಕಟ್ಟಿದ ಮಲ್ಲಿಗೆಗೆ ಮಾತ್ರ ನಮ್ಮಲ್ಲಿ ರಾಜ ಮರ್ಯಾದೆ.ಹಾಗಾಗಿ ಅಂತಹ ಮಲ್ಲಿಗೆಗೆ ಬೆಲೆಯೂ ಹೆಚ್ಚು.ಈ ರೀತಿ ಬಾಳೆ,ಮಲ್ಲಿಗೆ ಕೃಷಿಕನನ್ನೂ ಕೂಡ ಪೊರೆಯುತ್ತದೆ.ಮಾಮೂಲಿ ನೂಲಿನಲ್ಲಿ ಕಟ್ಟಿದ ಮಲ್ಲಿಗೆಗಿಂತ ಬಾಳೆ ನೂಲಿನಲ್ಲಿ ಕಟ್ಟಿದ ಮಲ್ಲಿಗೆಯ ಬೆಲೆ ಅಧಿಕವಾಗಿದ್ದರೂ,ದೇವರಿಗೆ ಇದನ್ನೇ ಸಮರ್ಪಿಸಿ ಧನ್ಯರಾಗುವ ಭಕ್ತರು ಅನೇಕರು. ಎಷ್ಟೇ ದುಬಾರಿ ಇದ್ದರೂ " ಅಣ್ಣ.. ಬಾರೆದ ನೂಲುದ ಮಲ್ಲಿಗೆ ಇಜ್ಜೆ.." (ಅಣ್ಣ.. ಬಾಳೆ ನೂಲಿನಲ್ಲಿ ಕಟ್ಟಿದ ಮಲ್ಲಿಗೆ ಇಲ್ಲವೇ?) ಎಂದು ಮಲ್ಲಿಗೆ ಮಾರುವವರಲ್ಲಿ ಕೇಳಲು ನಮ್ಮವರು ಮರೆಯುವುದಿಲ್ಲ.
ಕಲ್ಲು ಬಾಳೆ.. ಬೂದು ಬಾಳೆ.. ಆಯುರ್ವೇದದಲ್ಲಿಯೂ ಸ್ಥಾನ ಸಂಪಾದಿಸಿದೆ. ಬಾಳೆಯ ದಿಂಡಿನ ಖಾದ್ಯಗಳು ಮೂತ್ರಕೋಶದಲ್ಲಿರುವ ಕಲ್ಲು ನಿವಾರಣೆಗೆ ಒಳ್ಳೆಯದಂತೆ.ಮಲ ಬದ್ಧತೆಯ ಸಮಸ್ಯೆ ನಿವಾರಣೆಗೂ ಬಾಳೆಹಣ್ಣು ತುಂಬಾ ಒಳ್ಳೆಯದು.
ಮಾವು ರಾಜನೇ ಡೌಟೇ ಬೇಡ.. ಆದರೂ ಮಾವಿನಹಣ್ಣೋ ಅಥವಾ ಇನ್ನಾವುದೇ ಹಣ್ಣಿನ ಎಂತೆಂತದೋ ರಸಾಯನ ಇದ್ದರೂ ಕೂಡ.. ಬಾಳೆಹಣ್ಣು ಇಲ್ಲದ ರಸಾಯನ ಅದೂ ಒಂದು ರಸಾಯನವೇ.ನಾವು ಸತ್ತರೂ ನಮ್ಮ ವೈಕುಂಠ ಸಮಾರಾಧನೆಯ ಮೈನ್ ಮೆನುವಿನಲ್ಲಿ ಕೂಡ, ಕುಂಬಳಕಾಯಿಯ ಜೊತೆ ಜೊತೆಗೆ ,ಬಾಳೆಕಾಯಿಯ ಪಲ್ಯವೂ ಕಂಪಲ್ಸರಿ ಆಗಿ ಇರಲೇ ಬೇಕು.
ಗಂಜಿ ಊಟಕ್ಕೆ ಬಾಳೆ ಹೂವಿನ(ಪೂಂಬೆ ಯ) ಚಟ್ನಿ,ಪಲ್ಯ ಬಲು ರುಚಿ. ಬಾಳೆ ಎಲೆಯ ತೆಳು ಗಟ್ಟಿ(ಕಡುಬು) ಮತ್ಸಾಹಾರಿಗಳ ಪಾಲಿನ ಕೋರಿರೊಟ್ಟಿ ಇದ್ದಂತೆ. ಮೂಡೆ,ಗುಂಡ ಗಳು(ತುಳುನಾಡಿನ ಡಿಶ್)ಇಲ್ಲದೇ ಹೋದಾಗ, ಸುಲಭವಾಗಿ ಮಾಡಬಹುದಾದ ಬಾಳೆಎಲೆಯ ಕೊಟ್ಟಿಗೆಯೇ ಹಬ್ಬಗಳಲ್ಲಿ ನಮ್ಮ ಕೈ ಹಿಡಿಯುವುದು.ಕೇರಳದ ಬಾಳೆಕಾಯಿ ಚಿಪ್ಸ್ ಪೊಟಾಟೋ ಚಿಪ್ಸ್ ಗಿಂತಲೂ ಬಹಳನೇ ಫೇಮಸ್ ಬಿಡಿ,ಹಾಗೇ ದುಬಾರಿ ಕೂಡ ಹೌದು. ಬಾಳೆಹಣ್ಣಿನ ಪೋಡಿ ಕೂಡ ಮಂಗಳೂರಿನಲ್ಲಿ, ಕೇರಳದಲ್ಲಿ ಇದೆ.ಬಾಳೆಎಲೆ ಫಿಶ್ ಪ್ರೈ ಒಂಥರಾ ಬೇರೆಯೇ ಪ್ಲೇವರ್.ಇಡ್ಲಿ ವಡೆಗಳ ಅಡಿಯಲ್ಲೂ,ಸಿಹಿ ಸಿಹಿ ಶೀರಾದ ಬುಡದಲ್ಲೂ ಒಂದು ತುಂಡು ಬಾಳೆಎಲೆ ಇದ್ದರೆ ನೋಡಲೂ ಕೂಡ ಚಂದವೇ.
ಬಾಳೆಯಲ್ಲಿ ಹಲವಾರು ವಿಧಗಳಿವೆ. ಕೆಂಪು,ಕಪ್ಪು,ಪಿಂಕ್, ನೀಲಿ,ಹಸಿರು, ಹಳದಿ ಹೀಗೆ ಹಲವಾರು ಬಣ್ಣಗಳಲ್ಲಿಯೂ ಬಾಳೆಹಣ್ಣು ಇದೆ.ಕೆಲವೊಂದು ಮಾತ್ರ ನಮಗೆಲ್ಲ ಪರಿಚಯ.ಮನೆಗೆ ತಂದದ್ದು ಒಂದೋ ಎರಡೋ ಜಾತಿ ಬಾಳೆ ಹಣ್ಣು ಅಷ್ಟೇ. ಹೊರಗಡೆ ಅಲ್ಲಲ್ಲಿ ಹೋಗಿ ತಿಂದದ್ದು ನಾಲ್ಕೈದು ಇರಬಹುದು.ಊಟ ಆದ ನಂತರ ಬಿಸಿ ಹಾಲಿನ ಜೊತೆ ಅಮ್ಮ ಕೊಡುತ್ತಿದ್ದ ಬಾಳೆಹಣ್ಣಿನ ರುಚಿ ಈಗಲೂ ನೆನಪಿದೆ.ದೇವರ ಪಂಚಕಜ್ಜಾಯದಲ್ಲಿ,ಅದರಲ್ಲೂ ಗಣಪತಿ ದೇವರ ಮಹಾಗಣಪತಿ ಪ್ರಸಾದದಲ್ಲಿ ನನ್ನ ಕೈಗಳು ಕಬ್ಬು ಮತ್ತು ಬಾಳೆಹಣ್ಣಿನ ತುಂಡಿಗಾಗಿ ತಡಕಾಡಿದ್ದೇ ಜಾಸ್ತಿ.
ತಲೆ ಎತ್ತಿ ಮೇಲೆ ನೋಡಬೇಕಾದ ಅಡಿಕೆ,ತೆಂಗಿನ ತೋಟಕ್ಕಿಂತಲೂ,ಹೋದಾಗಲೆಲ್ಲ ಹಾಗೇ ನೆತ್ತಿ ಸವರುವ ಪಚ್ಚನೆಯ ಬಾಳೆಯ ತೋಟವೇ ನನಗಂತು ಯಾವಾಗಲೂ ಹಿತವೆನೆಸುವುದು.ಈಗಲೂ ಬಾಳೆಯ ಬುಡಕ್ಕೆ ಎಲೆ ತರಲು ಹೋದಾಗ,ಬಾಳೆ ಹೂವಿನಲ್ಲಿರುವ ಒಂದೆರಡು ಹನಿ ಸಿಹಿಯನ್ನು ಚಿಟ್ಟೆಯಂತೆ ಹೀರಲು,ಆ ಎಸಳುಗಳನ್ನು ಚೀಪದೇ ಹಾಗೇ ಹಿಂದಿರುಗಿ ಬರಲು ಮನಸ್ಸಾಗುವುದಿಲ್ಲ..
ಬಾಳೆ ಎಂದರೆ ಬರೀ ಎಲೆಯಲ್ಲ.. ಬರೀ ಹಣ್ಣೂ ಕೂಡ ಅಲ್ಲ.
ಬಾಳೆ ಎಂದರೆ ಎಷ್ಟೋ ಮರೆಯಲಾಗದ ಬಾಲ್ಯದ ನೆನಪುಗಳು,ಹಾಗೆಯೇ ಇನ್ನು ಮುಂದೆಯು ಕೂಡ ಅದರ ಜೊತೆ ಜೊತೆಯಾಗಿ ಬಾಳಿ ಬದುಕ ಬೇಕಾದ ಅದೆಷ್ಟೋ ಒಳ್ಳೆಯ ದಿನಗಳು.
.....................................................................................
#ಏನೋ_ಒಂದು
ab pacchu
moodubidire
ಬಾಳೆ ಎಲೆ ಊಟ ನನಗೆ ಇ ಸ್ಟ್
ReplyDelete😊😍🙏🙏
Deleteಮಸ್ತ್👌👌👌
ReplyDeleteಥ್ಯಾಂಕ್ಸ್ 😍😊🙏
Deleteನಮಸ್ತೆ ಪಚ್ಚು,ನಿಮ್ಮ ಬರಹವನ್ನು ಓದುತ್ತಿರಬೇಕಾದರೆ, ಅದೆಲ್ಲವೂ ನನ್ನೊಳಗಿನ ಭಾವವೇ ಆಗಿರುವುದು ಒಂದು ವಿಸ್ಮಯ ಅಂತ ಅನಿಸುತ್ತಿದೆ.ಆದರೆ ಆ ಭಾವಗಳನ್ನು ನಿಮ್ಮ ಹಾಗೆ ಅಕ್ಷರಕ್ಕಿಳಿಸುವುದು ನನ್ನಿಂದಂತೂ ಸಾಧ್ಯವೇ ಇಲ್ಲ....
ReplyDelete