ಲೈಫ್ ಅಲ್ಲಿ ಒಮ್ಮೆ ಸೆಟಲ್ ಆಗುವುದು ಎಂದರೆ..

 

ದಿನನಿತ್ಯದ ಬಳಕೆಯಲ್ಲಿ ನಾವು ಒಂದು ಪದ ಪ್ರಯೋಗ ಸಾಮಾನ್ಯವಾಗಿ ಮಾಡುತ್ತವೆ, ಅಥವಾ ಇತರರು ಮಾಡುವುದನ್ನು ಕಾಣುತ್ತವೆ ಅದುವೇ #Settled ಅಥವಾ #Well_settled.

ಈ well settled life ಅನ್ನುವುದು ಎಲ್ಲರಿಗೂ ಬೇಕು, ನಮ್ಮೆಲ್ಲರ ದಿನ ನಿತ್ಯದ ಧಾವಂತ ಅದೇ, ಲೈಫ್ ಅಲ್ಲಿ ಒಮ್ಮೆ ಆದಷ್ಟು ಬೇಗ ಸೆಟಲ್ ಆಗಿ ನೆಮ್ಮದಿಯಾಗಿ ಇದ್ದು ಬಿಡಬೇಕು ಎಂದು.ಅದಕ್ಕಾಗಿ ನಮ್ಮದು ಮುಗಿಯದ ಕಸರತ್ತು. ಆದರೆ ಲೈಪಿನಲ್ಲಿ, ಈ ಸೆಟಲ್ ಲೈಫ್ ಅನ್ನುವುದು ಎಲ್ಲರಿಗೂ ಪ್ರಾಪ್ತಿ ಯೇ? ಒಂದು ವೇಳೆ ಹೇಗೋ ಭಗವಂತನ ಅನುಗ್ರಹದಿಂದ ನಮ್ಮ ಶ್ರಮದಿಂದ ನಾವು ಬಯಸಿದ settled life ನಮಗೆ ದೊರಕಿತು ಎಂದು ಇಟ್ಟುಕೊಳ್ಳಿ,ಅಲ್ಲಿಂದ ನಮ್ಮ ನೋವು, ಕಷ್ಟ ಎಲ್ಲವೂ ತೀರಿತು ಎಂದೇ ಲೆಕ್ಕವೇ...?? ನಂತರ ಬರೀ ಸಂತೋಷ, ನೆಮ್ಮದಿ, ಸಂಭ್ರಮ ದ ಹೊಳೆ ನಿಜವಾಗಿಯೂ ಹರಿಯುತ್ತಾ!

ನಾವು ಚಿಕ್ಕಂದಿನಲ್ಲಿ ಬ್ಯಾಗ್ ಏರಿಸಿ ಸ್ಕೂಲ್ ಗೆ ಹೋಗುತ್ತೇವೆ . ಅಲ್ಲಿ ನಮ್ಮ ಮುಂದೆ ಇರುವುದು ಒಂದೇ ಗೋಲು, ಚೆನ್ನಾಗಿ ಕಲಿಯಬೇಕು, SSLC ಗೆ ಬರುವಾಗ ಅಲ್ಲಿ ಒಳ್ಳೆಯ ಸ್ಕೋರ್ ಮಾಡಬೇಕು. ಅದು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು. ಆ ವಯಸ್ಸಿನಲ್ಲಿ ಅದು ನಮಗಿಂತ ಹೆಚ್ಚಾಗಿ ಹೆತ್ತವರ ಆಶಯ ಎಂದರೆ ತಪ್ಪಾಗಲಿಕ್ಕಿಲ್ಲ. ಒಟ್ಟಿನಲ್ಲಿ ನಮಗೆ ಒಳ್ಳೆಯದಾಗಬೇಕು ಎಂಬುದು ಉದ್ದೇಶ. ಕೆಲವರಿಗೆ ಸ್ಕೂಲ್ ಬಿಟ್ಟ ಕೂಡಲೇ ಟ್ಯೂಷನ್, ಟ್ಯೂಷನ್ ಬಿಟ್ಟ ಕೂಡಲೇ ಮನೆಯಲ್ಲಿ ಆ ದಿನದ ಶಾಲಾ home work. ಮತ್ತೆ ಮರುದಿನ ಸ್ಕೂಲ್... ಹೀಗೆ ನಾವು ನೀವು ಓಡುತ್ತಲೇ ಇರುತ್ತವೆ . ಕೆಲವೊಮ್ಮೆ ಇವುಗಳ ನಡುವೆ ಚಿನ್ನದಂತಹ, ಮರಳಿಪಡೆಯಲಾಗದ ನಮ್ಮ ಬಾಲ್ಯವೊಂದು ಸದ್ದಿಲ್ಲದೇ ಹಾಗೇ ತೆರೆಯ ಮೇರೆಗೆ ಸರಿದು ಹೋಗುವುದು ಕೂಡ ನಮಗೆ ಗೊತ್ತೇ ಆಗುವುದಿಲ್ಲ.

ಹೇಗೋ ಒಂದು ದಿನ SSLC ಮುಗಿಯುತ್ತದೆ.ಕಷ್ಟ ಪಟ್ಟು ಓದಿದ ಕಾರಣದಿಂದಲೋ ಏನೋ ಒಳ್ಳೆಯ ಮಾರ್ಕ್ಸ್ ಬರುತ್ತೆ. ಓಕೆ,ಪೈನ್.. ಮುಂದೆ?
ನಿಮಗೆ ಇಷ್ಟ ಇದೆಯೋ ಇಲ್ಲವೋ ಗೊತ್ತಿಲ್ಲ, ಹೆತ್ತವರು ನಿಮ್ಮನ್ನು PUC ಯಲ್ಲಿ ಸೈನ್ಸ್ ಗೆ ಹಾಕಿ ಬಿಡುತ್ತಾರೆ. ಒಂದೋ ನೀವು ಇಂಜಿನಿಯರ್ ಆಗ್ಬೇಕು, ಇಲ್ಲವೇ ಡಾಕ್ಟರ್. ಅದು ಮನೆಯವರ ಆಸೆ. ತಪ್ಪಲ್ಲ ಬಿಡಿ ಎಲ್ಲವೂ ನಿಮ್ಮ ಒಳ್ಳೆಯದಕ್ಕೆ!

ಹೇಗೋ PUC ಸೇರ್ತಿರಾ, ಅಲ್ಲಿರುವ ನಿಮ್ಮ next ಗೋಲು ಒಂದೇ ಚೆನ್ನಾಗಿ ಸ್ಕೋರ್ ಮಾಡ್ಬೇಕು, ಅದು ನಮ್ಮ ಮುಂದಿನ ಹಂತದ ವಿದ್ಯಾಭ್ಯಾಸವನ್ನು ನಿರ್ಧರಿಸುತ್ತದೆ. ಓಕೆ ಒಟ ಶುರು.. ಎರಡು ವರ್ಷಗಳ ನಿರಂತರ ಓಟ.no holidays, ಇದ್ದರೂ ಅದರಲ್ಲಿ ಹೆಚ್ಚು special ಕ್ಲಾಸ್ ಗಳು. ಸರಿ, ಹಾಗೂ ಹೀಗೂ PUC ಮುಗಿಯಿತು. ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಓದಿದಕ್ಕಾಗಿ ಒಳ್ಳೆಯ ಸ್ಕೋರ್ ಕೂಡ ಬಂತು. ಇದರ ಮಧ್ಯೆ ಸುಂದರ ಟೀನೇಜ್ ಒಂದು ಮೊಳಕೆಯೊಡೆದಿರುವುದು ಕೂಡ ಎಷ್ಟೋ ಸಲ ನಮ್ಮ ಅರಿವಿಗೆ ಕೂಡ ಬಂದಿರುವುದಿಲ್ಲ. ಹೇಗೆ ಬರುತ್ತೆ, ನಾವು success ಎಂಬ ಮಂತ್ರ ಹಾಗೂ ಮುಂದೆ ಲೈಫ್ ನಲ್ಲಿ ಸೆಟಲ್ ಆಗಬೇಕು ಎಂಬ ರೇಸಿನಲ್ಲಿ ಓಡುತ್ತಿರುವವರು ಅಲ್ಲವೇ, ಯೌವನಕ್ಕೊಂದು ಶುಭ್ರವಾದ welcom ಹೇಳುವಷ್ಟು ಸಮಯ ಕೂಡ ನಮಗಿರುವುದಿಲ್ಲ. ಇರಲಿ ಅದು ನಮ್ಮ ತಪ್ಪಲ್ಲ. ಓಕೆ puc ಮುಗಿಯಿತು, ಮುಂದೆ?

ಮುಂದೆ ಬರುವುದೇ entrance exam.   CET, JEE ಮುಂತಾದವುಗಳು. ನಿಮ್ಮ ಮನೆಯಲ್ಲಿ ನೀವು ಜಸ್ಟ್ ಇಂಜಿನಿಯರಿಂಗ್ ಮಾಡಿದರೂ ಅವರಿಗೆ ಸಮಾಧಾನವಿಲ್ಲ, ಇಂಜಿನಿಯರಿಂಗ್ ಮಾಡಿದರೆ ಅದು IIT ಯಲ್ಲೋ ಇಲ್ಲವೇ IISc ಯಲ್ಲೇ ಮಾಡಬೇಕು. ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ತಮ್ಮ ಮಕ್ಕಳು ಕಲಿಯುವುದು, ಅವರಿಗೆ ಅದೊಂದು ಪ್ರತಿಷ್ಠೆ ಹಾಗೂ ಗೌರವದ ವಿಷಯ. ಮಾತ್ರವಲ್ಲ ಮುಂದೆ ದೊಡ್ಡ ದೊಡ್ಡ ಕಂಪನಿಯಲ್ಲಿ ಒಳ್ಳೆಯ ಸಂಬಳ ದ ಕೆಲಸ ಸಿಕ್ಕು ಬದುಕು ಹಸನಾಗುತ್ತದೆ ಎಂಬುದು ಅವರ ಆಶಯ. ಎಲ್ಲವೂ ನಮ್ಮ ಒಳ್ಳೆಯದಕ್ಕೆ.. ಇದಕ್ಕಾಗಿ ಕೆಲವರ preparation, puc ಆರಂಭದಿಂದಲೇ ಶುರು ಆಗಿರುತ್ತದೆ, ಇನ್ನು ಕೆಲವರು puc ಮುಗಿದು ಮತ್ತೆ ಒಂದು ವರ್ಷವನ್ನು ಬರೀ IIT ಯ entrance exam ಪಾಸ್ ಮಾಡಲೆಂದೇ ತೆಗೆದಿಡುತ್ತಾರೆ. ಕೆಲವರು ಅದನ್ನು ಒಂದು ವರ್ಷ ವೇಸ್ಟ್ ಮಾಡುವುದು ಅಂತ ಹೇಳಿದರೆ , ಇನ್ನು ಕೆಲವರು ಇಲ್ಲ ಅದು ಭವಿಷ್ಯದ investment ಅಂತ ಹೇಳ್ತಾರೆ.

ಹೇಗೋ entrance exam ಬರೀತೆವೆ, ನಮಗೆ ಬೇಕಾದ IIT ಯಲ್ಲೇ ಇಂಜಿನಿಯರಿಂಗ್ ಸೀಟು ಸಿಗದೇ ಇದ್ದರೂ, ಒಂದೊಳ್ಳೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಸಿಗುತ್ತದೆ. ಅಲ್ಲಿಂದ ಶುರು ನಾಲ್ಕು ವರ್ಷಗಳ ಮತ್ತೊಂದು ದೊಡ್ಡ ರೇಸು. ಅದಕ್ಕಾಗಿ ಜೀವ ಜೀವನ, ಪಣಕ್ಕಿಟ್ಟು ಓದುತ್ತವೆ. ಕೊನೆಗೂ ಇಂಜಿನಿಯರಿಂಗ್ ಮುಗಿಯುತ್ತೆ. ಕೆಲವರು ಹೈಯರ್ ಸ್ಟಡಿಸ್ ಅಂತ MTech, MS ಎಲ್ಲಾ ಮಾಡಲು ಹೋಗಿ ಬಿಡ್ತಾರೆ. ಇದು ಇಂಜಿನಿಯರಿಂಗ್ ಮಕ್ಕಳ ಕಥೆ.

ಇನ್ನು ನಾವು, ಇಂಜಿನಿಯರಿಂಗ್ ನಮ್ಮ cup of tea ಅಲ್ಲ, ಅದು ನಮಗೆ ಬೇಡ, ನಾಲ್ಕು ವರ್ಷ ಓದಕ್ಕೆ ಜಾಸ್ತಿ ಆಗುತ್ತೆ.ಆದ್ದರಿಂದ puc ಯಲ್ಲಿ arts, commerce ತೆಗಿತೇವೆ. ನಂತರ ಡಿಗ್ರಿ ಇಲ್ಲವೇ ಡಿಪ್ಲೊಮಾ ಮಾಡಿ ಬಿಡ್ತೇವೆ. ಇಲ್ಲೂ ಒಂದು ರೇಸ್ ಇದೆ. Internal, ಸೆಮಿಸ್ಟರ್ ಗಳ ಮಧ್ಯೆ ಮೂರು ವರ್ಷಗಳು ಮುಗಿಯುವುದೇ ಗೊತ್ತಾಗುವುದಿಲ್ಲ. ಎಂಜಿನಿಯರಿಂಗ್ ಆಗಲಿ ಡಿಗ್ರಿ ಆಗಲಿ.. ಇವೆಲ್ಲದರ ನಡುವಿನ ರೇಸಿನಲ್ಲಿ ಗರಿಗೆದರಿದ ನಮ್ಮ ಯೌವನಕ್ಕೊಂದು ಚಿಯರ್ ಅಪ್ ಹೇಳಲು ಕೂಡ ನಮಗೆ ಸಮಯವಿರುವುದಿಲ್ಲ.
ಎಲ್ಲರ ಕಟ್ಟಕಡೆಯ ಗೋಲ್ ಪೋಸ್ಟ್ ಒಂದೇ ಅದುವೇ ಕಾಲೇಜಿನ placement drive.

ಮನೆಯವರ ಆಸೆ ಆಕಾಂಕ್ಷೆ ಏನೇ ಇರಲಿ, ಅಂತು ಇಂತೂ ಎಷ್ಟೇ interview face ಮಾಡಿದರೂ ನಮ್ಗೆ ಜಾಬ್ ಅಂತು ಸಿಕ್ಕಿರಲ್ಲ. ಕಾಲೇಜು ಮುಗಿದ ಕೂಡಲೇ ಮನೆಯಲ್ಲಿ ಬಂದು ಕುಳಿತುಕೊಳ್ತೇವೆ. ಪಕ್ಕದ ಮನೆ ಆಂಟಿ ಡೈಲಿ ಕೇಳ್ತಾರೆ, ಏನಾದರೂ ಕೆಲಸ ಆಗುವ ಲಕ್ಷಣ ಇದೆಯಾ.. Try ಮಾಡ್ತಾ ಇದ್ದೀಯಾ ಅಂತ. ಈ ವಿಷಯದಲ್ಲಿ ನಮಗಿಂತ, ನಮ್ಮ ಮನೆಯವರಿಗಿಂತ ಅವರಿಗೇ ಜಾಸ್ತಿ tension.

ನಂತರ ಜಾಬ್ ಗಾಗಿ ನಿರಂತರ ಅಲೆದಾಟ, ಹುಡುಕಾಟ, ಪರದಾಟ. ಹುಟ್ಟಿಸಿದ ದೇವರು ಹುಲ್ಲು ಮೇಯಿಸಲ್ಲ ಅನ್ನುವ ಹಾಗೆ ಜಾಬ್ ಸಿಕ್ಕೆ ಸಿಗುತ್ತೆ ಅಂತ ನಮ್ಮ ಅಚಲವಾದ ನಂಬಿಕೆ. ನಡುವಿನಲ್ಲಿ ದೇವರಿಗೆ ಒಂದಿಷ್ಟು ಹೋಮ, ಹವನ ಹಾಗೂ ಹರಕೆ. ಅಂತು ಇಂತು ಒಂದು ಜಾಬ್ ಸಿಗುತ್ತೆ.

ಜಾಬ್ ಸಿಕ್ಕ ಮರುದಿನವೇ ಸಂಬಂಧಿಕರು ಕೇಳಲು ಶುರುಮಾಡ್ತಾರೆ.. ಇನ್ನು ಮದುವೆ ಯಾವಾಗ... ನೀವು ಮದುವೆ ಆಗುವವರೆಗೂ ಅವರು ಕೇಳುತ್ತಲೇ ಇರುತ್ತಾರೆ.

ನೀವು ನೋಡಲು ಹೇಗೇ ಇದ್ದರೂ.. ನೀನೇ ಬಾಳಿನ ಬೆಳಕು,ಮನೆಯ ಟ್ಯೂಬ್ ಲೈಟ್, ಕರೆಂಟ್ ಹೋದಾಗ ನೀನೇ ಕ್ಯಾಂಡಲ್ ಅಂತ.. ಹಲವು ಹುಡುಗಿಯರನ್ನು ರಿಜೆಕ್ಟ್ ಮಾಡಿ, ನಿಮಗೆ ಲೈಕ್ ಆಗುವ ಒಂದು ಹುಡುಗಿಯನ್ನು ಸೆಲೆಕ್ಟ್ ಮಾಡ್ತೀರ. ಅವಳು ಕೂಡ ಅಷ್ಟೇ ನೀನೇ ಬಾಳಿನ ದೇವರು, ನಿನ್ನಲ್ಲೇ ಭಕ್ತಿ, ನೀನೇ ನನ್ನ ಶಕ್ತಿ, ಇನ್ನು ಮುಂದೆ ನೀನೇ ನನ್ನ ಉಸಿರು ಎಂದು ಹಲವಾರು ಹುಡುಗರನ್ನು ರಿಜೆಕ್ಟ್ ಮಾಡಿ ಕೊನೆಯಲ್ಲಿ ನಿಮ್ಮನ್ನು ಸೆಲೆಕ್ಟ್ ಮಾಡಿ ಇರ್ತಾಳೆ. ಕೊನೆಗೂ ಹೇಗೋ ಜನ್ಮಜನ್ಮಾಂತರ ಬಂಧ ದಿಂದ ಒಂದು ಸಂಬಂಧ ಕುದುರಿ ನೀವು ಒಂದು ಮದುವೆ ಅಂತ ಆಗ್ತೀರಾ. ಅದು ನಿಮ್ಮ, ನಿಮ್ಮ ಹೆತ್ತವರ, ಮಾತ್ರವಲ್ಲ ಪಕ್ಕದ ಮನೆಯ ಆಂಟಿಯ ಹಾಗೂ ಸಂಬಂಧಿಕರ ಕನಸು ಕೂಡ ಹೌದು.

ಮದುವೆ ಆದ ಮರುದಿವಸವೇ ಪಕ್ಕದ ಮನೆ ಆಂಟಿ ಬಂದು ಕೇಳಲು ಶುರು ಮಾಡ್ತಾರೆ, ಹನಿಮೂನ್ ಗೆ ಎಲ್ಲಿ ಹೋಗ್ತಾ ಇದ್ದೀರಾ...

ನೀವು ಹನಿಮೂನ್ ಗೆ ಹೋಗುವ ವರೆಗೂ ಅವರು ಕೇಳ್ತಾನೇ ಇರ್ತಾರೆ. ಅವರ ಉಪಟಳ ತಾಳಲಾರದೇ ನೀವು ಒಂದು ಹನಿಮೂನ್ ಗೆ ಕೂಡ ಹೋಗಿ ಬರ್ತೀರಾ. ಅವರ ಖುಷಿ ಗಾಗಿ.

ಹನಿಮೂನ್ ಗೆ ಹೋಗಿಬಂದ  ಮರುದಿವಸವೇ ಆಂಟಿ ಮತ್ತೆ ಮನೆಗೆ ಬರ್ತಾರೆ, ಬಂದು ಹೇಳ್ತಾರೆ,ವರ್ಷ ಮುಗಿಯುವುದರೊಳಗೆ  ಮಗುವಿನ ಸದ್ದು ಕೇಳುವಂತೆ ಮಾಡಬೇಕು.

ಮಗು ಆಗುವವರೆಗೂ ಅವರು ಕೇಳ್ತಾನೆ ಇರ್ತಾರೆ, ಏನಾದರೂ ಗುಡ್ ನ್ಯೂಸ್ ಉಂಟಾ.. ಗುಡ್ ನ್ಯೂಸ್ ಉಂಟಾ ಅಂತ...

ಅವರ ಕೋರಿಕೆಗೋ, ನಿಮ್ಮ ಪರಿಶ್ರಮಕ್ಕೋ ವರ್ಷ ಕಳೆಯುವುದರೊಳಗೆ ಮನೆಗೆ ಒಂದು ಗಂಡು ಮಗು ಬರುತ್ತೆ. ನಂತರ ಜವಾಬ್ದಾರಿ ಗಳು ಜಾಸ್ತಿ. ಇದರ ಮಧ್ಯೆ ನಿಮ್ಮ ಕೆಲಸದ ಏರು ಪೇರುಗಳು, ಒತ್ತಡಗಳು ಇದ್ದದ್ದೇ. ಎಲ್ಲರ ಉದ್ದೇಶ ಒಂದೇ ಸೆಟಲ್ ಆಗಬೇಕು ಎಂದು. ಅದಕ್ಕಾಗಿ ನಿರಂತರ ಓಟ. ಅದರೇ ಈ  ರೇಸು ಅಷ್ಟು ಸುಲಭವಾಗಿ ನಿಲ್ಲುವಂತಹದ್ದಲ್ಲ.

ಮಗು ಹುಟ್ಟಿದ ಕೂಡಲೇ ಮಗುವಿಗೊಂದು ಚಂದದ ಲೈಫ್ ಕಟ್ಟಿಕೊಳ್ಳಲು ನೀವು ಪುನಃ ಇನ್ನೊಂದು ರೇಸು ಶುರುಮಾಡುತ್ತೀರಾ ಎಲ್ಲಿಯವರೆಗೆ ಅಂದರೆ ಆ ಮಗು ತನ್ನ ಕಾಲ ಮೇಲೆ ನಿಲ್ಲುವವರೆಗೆ. ಆ ಮಗು ಹುಟ್ಟಿದ ಮೇಲೆ ಅದರದ್ದೂ ಒಂದು ರೇಸ್ ಇದೆ. ಅದು ಯಾವುದು ಗೊತ್ತಾ, ನೀವು ಹುಟ್ಟಿದ ನಂತರ ನೀವೆನು ಅಲ್ಲಿಯತನಕ ಏನು ಮಾಡಿದ್ದಿರೋ ಅದೇ.. ನಿಮ್ಮ ಮಗು ತಾನು ಕೂಡ ರೇಸಿನಲ್ಲಿ ಜಿದ್ದಿಗೆ ಬಿದ್ದವರಂತೆ ಓಡಲು ಶುರುಮಾಡುತ್ತದೆ. ನೀವು ಈ ರೇಸಿನಲ್ಲಿ ಹಳೆಯ ಕಿಲಾಡಿ ಅಲ್ಲವೇ, ನೀವು ಹೀಗೆ ಮಾಡು, ಹಾಗೆ ಮಾಡು ಎಂದು ನಿಮ್ಮ ಅನುಭವವನ್ನು ಧಾರೆ ಎರೆದು ನಿಮ್ಮ ಮಗು ಲೈಫ್ ಅಲ್ಲಿ ಒಮ್ಮೆ ಸೆಟಲ್ ಆಗಲಿ ಎಂದು ಪ್ರಯತ್ನ ಪಡ್ತಾನೆ ಇರ್ತಿರಾ... ಇದರ ಮಧ್ಯೆ ನೀವು ಸೆಟಲ್ ಆಗುವುದು ಯಾವಾಗ?

ನಿಮಗೆ ಜಾಬ್ ಸಿಕ್ಕಿದ ಮೇಲೂ ನೀವು ಸೆಟಲ್ ಆಗಲಿಲ್ಲ. ನಿಮ್ಮ ಆಸೆ ಆಶೋತ್ತರ, ಕನಸುಗಳನ್ನು ಈ ಜಾಬ್ ಪೂರೈಸಲು ಸಾಧ್ಯವಿಲ್ಲ ಎಂದು ಅರಿವಾದಾಗ ನೀವು ಮೊದಲು ಮಾಡುವ ಕೆಲಸ ನಿಮ್ಮ ಮಗುವನ್ನು ಲೈಫ್ ನಲ್ಲಿ ಸೆಟಲ್ ಮಾಡಿಸಿ ಆ ಮುಖಾಂತರ ನೀವು ಸೆಟಲ್ ಆಗಿ ಬಿಡುವ ಎಂಬ ನಿರ್ಧಾರಕ್ಕೆ.

ಓಕೆ, ಪೈನ್ ಮಗು ಕೂಡ ಎದ್ದು ಬಿದ್ದು ನಿಮ್ಮ ಹಾಗೆಯೇ ಅದಕ್ಕೆ ಕೆಲಸ ಸಿಗುವ ತನಕ ಓಡುತ್ತಲೇ ಇರುತ್ತದೆ. ಕೊನೆಗೆ ಅದಕ್ಕೂ ಕೆಲಸ ಸಿಕ್ಕಿತು. ಕೈತುಂಬಾ ಸಂಬಳ ಬರುವ, ನಿಮ್ಮ ಆಶೋತ್ತರ ಗಳನ್ನು ಪೂರೈಸಬಲ್ಲ ಕೆಲಸವೇ ಸಿಕ್ಕಿತು, ನಿಮಗೆ ಅತೀವ ಆನಂದ ಕೊನೆಗೂ ಈ ರೇಸು ನಿಂತಿತಲ್ಲ ಎಂದು. ಆದರೆ ಮಗನಿಗೆ ಕೆಲಸ ಸಿಕ್ಕಿದ್ದು ಊರಿನಲ್ಲಿ ಅಲ್ಲ!

ಮನೆಯ ಮಗ ಈಗ ದುಡಿಯುತ್ತಿದ್ದಾನೆ, So ನೀವು ಈಗ ಕೆಲಸ ಬಿಟ್ಟು ಮನೆಯಲ್ಲೇ ಇದ್ದೀರಾ. ಆದರೆ ನಿಮ್ಮ ಬಳಿ ಮಗ ಇಲ್ಲ. ದೂರದ ಊರಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಮನೆಯಲ್ಲಿ ನೀವು ಇಬ್ಬರೇ, ನೀವು ಮತ್ತು ನಿಮ್ಮ ಬಾಳಿನ ಬೆಳಕು, ಮನೆಯ ಟ್ಯೂಬ್ ಲೈಟ್, ಕರೆಂಟ್ ಹೋದಾಗಿನ ಕರೆಂಟು ಆದಂತಹ ನಿಮ್ಮ ವೈಪು. ಮನೆ ಪೂರ ಖಾಲಿ, ನಿಮಗೆ ಆ ಏಕಾಂತವನ್ನು ಬರಿಸಲು ಸಾಧವಿಲ್ಲ. ಎಲ್ಲಾ ಇದೆ, ಆದರೂ ಏನೂ ಇಲ್ಲ ಅನ್ನುವ ಭಾವನೆ, ಮನಸ್ಸಿಗೆ ನೆಮ್ಮದಿ ಇಲ್ಲ... ಎಲ್ಲವೂ ಇದ್ದು ನೆಮ್ಮದಿ ಇಲ್ಲದ ಈ ಸ್ಥಿತಿಗೆ well settled ಅನ್ನಬಹುದೇ?

ನಿಮ್ಮ ಪಕ್ಕದ ಮನೆಯ ಆಂಟಿ ಇನ್ನೂ ಬದುಕಿದ್ದರೆ, ಅಜ್ಜಿಯಾಗಿ ಉಳಿದಿದ್ದರೆ ಆವಾಗಲೂ ಬಂದು ನಿಮ್ಮ ಮಗನಿಗೊಂದು ಮದುವೆ ಮಾಡಿ ಆಗ ನಿಮ್ಮ ಏಕಾಂಗಿತನ ನಿವಾರಣೆ ಆಗುತ್ತೆ ಅಂತ ಹೇಳ್ತಾರೆ. ಫಸ್ಟ್ ಟೈಮ್ ಆಂಟಿ ಇಷ್ಟ ಆಗುವುದು ನಿಮಗೆ ಆವಾಗಲೇ.
ಕೊನೆಗೆ ಮಗನನ್ನು ಒಪ್ಪಿಸಿ ಮಗನಿಗೆ ಒಂದೊಳ್ಳೆಯ ಹುಡುಗಿ ನೋಡಿ ಮದುವೆ ಮಾಡಿದ್ದೂ ಆಯಿತು.
ಆದರೆ ಆಗಲೂ ನಿಮ್ಮ ಸೊಸೆ ಕೂಡ ಮನೆಯಲ್ಲಿ ಇಲ್ಲ!

ಕಲಿತ ಹುಡುಗಿ, ಮಾಡರ್ನ್ ಹುಡುಗಿ ಹೇಗೆ ತಾನೇ ಮೂರು ಹೊತ್ತು ಮನೆಯಲ್ಲೇ ಕುಳಿತುಕೊಳ್ಳಬಲ್ಲಳು. ಅವಳಿಗೂ ಮಗ ಕೆಲಸ ಮಾಡುವ ಊರಿನಲ್ಲೇ ಕೆಲಸ ಸಿಕ್ಕಿದೆ,ಹೊಸ ಗಂಡ ಹೆಂಡತಿ ಬೇರೆ, ಒಟ್ಟಿಗೆ ಇರಲೇ ಬೇಕಲ್ಲವೇ. ಅವಳು ಕೂಡ ಮನೆ ಬಿಟ್ಟು ನಿಮ್ಮ ಮಗನ ಜೊತೆ ಹೋಗುತ್ತಾಳೆ.

ಈಗಲೂ ಮನೆಯಲ್ಲಿ ಇಬ್ಬರೇ.. ಏಕಾಂಗಿತನ ಮತ್ತಷ್ಟು ಹೆಚ್ಚು.. ಈಗಲೂ  ಇದನ್ನು well settled ಅಂತ ಹೇಳಬಹುದೇ?

ನಂತರ ಮಗನಿಗೆ ಮಗು ಆಗುತ್ತೆ, ನೀವು ಈಗ ಅಜ್ಜ ಅಜ್ಜಿ.. ನಿಮಗೆ ಖುಷಿ, ಈಗಲಾದರೂ ಮೊಮ್ಮಗ ಮನೆಗೆ ಬರುತ್ತಾನೆ, ಸಂತಸ ತರುತ್ತಾನೆ ಅವನೊಂದಿಗೆ ಆಟವಾಡುತ್ತಾ ಹೇಗೋ ಕಾಲ ಕಳೆದು ಬಿಡಬಹುದು ಎಂದು.
ಸ್ವಲ್ಪ ಸಮಯದ ತನಕ ಸೊಸೆ, ಮೊಮ್ಮಗ ಇಬ್ಬರೂ ಮನೆಯಲ್ಲೇ ಇರುತ್ತಾರೆ ಕೂಡ, ನಂತರ ಒಂದು ದಿನ ಅವರು ಕೂಡ ಹೊರಡುತ್ತಾರೆ.ನಮಗೆ ಬೋರ್ ಆಗುತ್ತದೆ, ಸೊಸೆಯ ಬಳಿ ಮೊಮ್ಮಗ ನನ್ನು ಇಲ್ಲೇ ಬಿಟ್ಟು ಹೋಗು ಎಂದು ಹೇಳಲು ಆಗುತ್ತದೆಯೇ..ನಿಮ್ಮ ಖುಷಿಗಾಗಿ ತಾಯಿ ಮಗುವನ್ನು ಬೇರ್ಪಡಿಸಲು ಮನಸ್ಸು ಬಾರದು. So, ಅವರು ಮತ್ತೊಮ್ಮೆ ಅವರ ಕೆಲಸಕ್ಕಾಗಿ, ಬದುಕಿಗಾಗಿ ಪುನಃ ಪಟ್ಟಣ ಸೇರುತ್ತಾರೆ..

ಈಗ ನೀವು ಇಬ್ಬರೇ...ನಿಮಗೂ ನಿಧಾನವಾಗಿ ವಯಸ್ಸಾಗುತ್ತದೆ. ಒಂದು ದಿನ ನಿಮ್ಮ ಬಾಳಿನ ಬೆಳಕು ಕೂಡ ನಿಮ್ಮನ್ನು ಬಿಟ್ಟು ದೇವರಪಾದ ಸೇರಿಕೊಳ್ಳುತ್ತಾರೆ. ಈಗ ನೀವೊಬ್ಬರೇ!

ಮನೆಯಲ್ಲಿ ಈಗಲೂ ಬೇಕು ಬೇಕಾದ ಎಲ್ಲಾ ಸೌಕರ್ಯ ವ್ಯವಸ್ಥೆಗಳಿವೆ, ಮಗ ಮಾಡಿಕೊಟ್ಟಿದ್ದಾನೆ, ತಿಂಗಳಿಗೆ ಲೆಕ್ಕಕ್ಕಿಂತ ಜಾಸ್ತಿಯೇ ಹಣ ಕಳುಹಿಸುತ್ತಾನೆ. ಆದರೆ ನಿಮಗೆ ಇದ್ಯಾವುದೂ ಬೇಡ ಅನಿಸಲು ಶುರುವಾಗುತ್ತದೆ, ಯಾರೂ ಇಲ್ಲದೇ ತೀರಾ ಒಬ್ಬಂಟಿ ಅಂತ ಫೀಲ್ ಆಗುತ್ತೆ. ಹೇಳಿ ಇದಕ್ಕೆ well settled ಸ್ಥಿತಿ ಅಂತ ಹೇಳಬಹುದಾ?

ಒಬ್ಬರೇ ಕುಳಿತುಕೊಂಡು ಕಳೆದ ದಿನಗಳನ್ನು ಮೆಲುಕು ಹಾಕುತ್ತೀರಾ... ಶಾಲಾ ದಿನಗಳಲ್ಲಿ ನೀವು ಇತರ ಮಕ್ಕಳಂತೆ ಬಾಲ್ಯವನ್ನು enjoy ಮಾಡಿ ಕಳೆಯಲೇ ಇಲ್ಲ. ಕಾಲೇಜಿನಲ್ಲಿ ಟೀನೇಜ್ ಎಂಬ ಹಕ್ಕಿಗೆ ಗರಿ ಬಿಚ್ಚಿ ಹಾರಲು ಬಿಡಲಿಲ್ಲ, ಡಿಗ್ರಿಯಲ್ಲಿ ಯೌವನದ ಕುದುರೆ ಗೆ ಓಡಲು ಬಿಡಲಿಲ್ಲ. ಬರೀ ನೀವು ಮಾತ್ರ ಲೈಪಿನಲ್ಲಿ ಒಮ್ಮೆ ಸೆಟಲ್ ಆಗಿ ಬಿಡಬೇಕೆಂದು ಓಡುತ್ತಿದ್ದಿರಿ. ನಂತರ ಕೆಲಸ, ಮನೆ, ಮದುವೆ,ಮಕ್ಕಳು, ಮಕ್ಕಳಿಗೆ ಮದುವೆ, ಅವರಿಗೆ ಮಕ್ಕಳು...ಇದರ ಮಧ್ಯೆ ನೀವು ಬದುಕಿದ್ದು ಎಲ್ಲಿ?

ಒಂದು ದಿನ ನೀವೂ ಸತ್ತು ಬಿಡುತ್ತೀರಿ, ಹೌದು , ಮನುಷ್ಯ ಕೊನೆಗೂ ಸಂಪೂರ್ಣವಾಗಿ ಸೆಟಲ್ ಆಗುವುದು ಮಾತ್ರ ಆವಾಗಲೇ ! ಆಮೇಲೆ ಯಾವುದೇ ರೇಸ್ ಕೂಡ ಇಲ್ಲ!

ಒಂದು ಹೇಳ್ಲಾ, ಲೈಫ್ ಅಲ್ಲಿ ಸೆಟಲ್ ಆಗಬೇಕು ಅನ್ನುವುದು ಒಂದು ಮರೀಚಿಕೆ ಇದ್ದ ಹಾಗೆ, ನಾವು ಸಾಯುವ ತನಕವೂ ಯಾರೂ ಕೂಡ ಸೆಟಲ್ ಆಗಲು ಸಾಧ್ಯವೇ ಇಲ್ಲ. ಆತ ಬೇಕಿದ್ದರೆ ಕಡು ಬಡವನೇ ಇರಲಿ, ಅಥವಾ ಅಗರ್ಭ ಶ್ರೀಮಂತನೇ ಇರಲಿ,ಎಲ್ಲರಿಗೂ ಅವರದ್ದೆ ಆದ ಚಿಂತೆ ಇದ್ದೆ ಇರುತ್ತದೆ. ಒಂದಾದ ನಂತರ ಒಂದು ಅಡೆತಡೆ ನಮ್ಮ ಎದುರು ಬಂದು ನಿಂತುಕೊಳ್ಳುತ್ತೆ. ಒಂದು ಮುಗಿದಾಗ ಮತ್ತೊಂದು.

ನೀವು ಹೇಳಬಹುದು ಒಳ್ಳೆಯ ಕಾಸು ಮಾಡಿದರೆ ಲೈಫ್ ಅಲ್ಲಿ ಸೆಟಲ್ ಆಗಿ ಬಿಡಬಹುದು ಎಂದು. ಅದು ಶುದ್ಧ ಸುಳ್ಳು. ಯಾಕೆ ಗೊತ್ತಾ, ಒಮ್ಮೆ ಹೋಗಿ ತುಂಬಾ ದುಡ್ಡು ಮಾಡಿದವನನ್ನು ಕಂಡು ಬನ್ನಿ ಆಮೇಲೆ ಹೇಳಿ ಆತ ಎಷ್ಟು ನೆಮ್ಮದಿಯಾಗಿ ಇದ್ದಾನೆ ಎಂದು. bussiness tension, ಸಾಲ,ಕೋರ್ಟ್, ಕೇಸು, ಫ್ಯಾಮಿಲಿ ಕಲಹ.. Etc Etc.

ಎಷ್ಟೇ ಹಣವಿದ್ದರೂ ಒಂದು ನೆಮ್ಮದಿಯಾದ ಬದುಕು ಇರದಿದ್ದರೆ ಅಂತಹ settled ಲೈಫ್ ಇದ್ದು ಏನು ಪ್ರಯೋಜನ. ಹಣದಿಂದ ಖುಷಿ, ಸಂತೋಷ, ನೆಮ್ಮದಿ ಗಳನ್ನು purchase ಮಾಡಲು ಎಂದಿಗೂ ಸಾಧ್ಯವಿಲ್ಲ.

ಹಾಗಾದರೆ ನೆಮ್ಮದಿಯಿಂದ ಖುಷಿಯಿಂದ ಇರಲು ಏನು ಮಾಡಬೇಕು. ನನಗನಿಸಿದ ಮಟ್ಟಿಗೆ ಹೇಳಬೇಕಾದರೆ ಒಮ್ಮೆ ಸೆಟಲ್ ಆಗಿ ಬಿಡಬೇಕು ಎಂಬ ರೇಸನ್ನು ಓಡುವ ಭರದಲ್ಲಿ ಅದರ ನಡುವೆ ಅನುಭವಿಸಬೇಕಾದ ಬದುಕನ್ನು ಬದುಕಲು ಮರೆಯಬೇಡಿ. ನೀವು ಸೆಟಲ್ ಆಗಬೇಕು ಎಂದು ಹೊರಡುವುದರಲ್ಲಿ ಖಂಡಿತವಾಗಿಯೂ ತಪ್ಪಿಲ್ಲ, ಅದು ಎಲ್ಲರೂ ಮಾಡುವಂತಹದ್ದೇ, ಮಾಡಬೇಕಾದದ್ದೇ.
ಆದರೆ ಜೀವನದ ಖುಷಿ ಇರುವುದು ಇವುಗಳೆಲ್ಲದರ ನಡುವೆ ಇರುವ, ಚಿಕ್ಕ ಚಿಕ್ಕ ವಿಷಯಗಳಲ್ಲೇ, ಅದನ್ನು ಅನುಭವಿಸಿ. ಜೀವನ ಬೋರ್ ಹೊಡಿಸುವುದಿಲ್ಲ, ಮುಂದೆ ಜತೆಯಲ್ಲಿ ಯಾರು ಇರದಿದ್ದರೂ ಏಕಾಂಗಿ ಎಂದು ಅನಿಸುವುದಿಲ್ಲ.

ನಿಮ್ಗೆ ಗೊತ್ತಾ, ಗುಡಿಸಲಿನಲ್ಲಿ ಒಂದು ಹೊತ್ತು ಊಟ ಮಾಡಿ ಬಾಕಿ ಎರಡು ಹೊತ್ತು ನೀರು ಕುಡಿದು ಬದುಕುವ ಕಡು ಬಡವ ಕೂಡ , ಶ್ರೀಮಂತನಿಗಿಂತಲೂ ಅತೀ ಹೆಚ್ಚು ಖುಷಿಯಲ್ಲಿ ಇರಬಲ್ಲ, ಮಾತ್ರವಲ್ಲ ನೆಮ್ಮದಿಯಾಗಿ ರಾತ್ರಿ ಪೂರ್ತಿ ನಿದ್ದೆ ಕೂಡ ಮಾಡಬಲ್ಲ..ಯಾವತ್ತೂ ಖುಷಿ, ಸಂತೋಷ ದ ಹಿಂದೆ ಹೋದರೆ ನೆಮ್ಮದಿ ತಂತಾನೇ ಬರುತ್ತದೆ..

Stressful ಆಗಿ ಬುದುಕುವುದಕ್ಕಿಂತ.. Joyful ಆಗಿ ಬದುಕಿಬಿಡಿ, ಲೈಫ್ ಅಲ್ಲಿ ಸೆಟಲ್ ಆಗುತ್ತೆವೆಯೋ ಇಲ್ಲ ಎನ್ನುವುದರ ಬಗ್ಗೆ ಚಿಂತೆ ಬೇಡ, ಜಸ್ಟ್ ಪ್ರಾಮಾಣಿಕ ಪ್ರಯತ್ನ ಪಡಿ.ಬದುಕು ನಡೆಸಿಕೊಂಡು ಹೋಗುತ್ತದೆ....

ಬದುಕಿನ ನಡುವಲ್ಲಿ ಜಂಜಡಗಳು ಅತಿಯಾದಾಗ, ಲೈಪು ತೀರಾ ನೀರಸ ಅನ್ನಿಸಿದಾಗ, ಸ್ವಲ್ಪ ರಿಲ್ಯಾಕ್ಸ್ ಆಗಲು ಹಾಗೇ ಎದ್ದು ಎಲ್ಲಿಗಾದರೂ ಹೋಗಿ ಬನ್ನಿ, ಇಲ್ಲವೇ ನೋಡಬೇಕು ಅಂತ ಅನ್ನಿಸಿದರೆ ಒಂದೊಳ್ಳೆಯ  ಸಿನೆಮಾ,ಬಿಡುವಾದಾಗ ಪುಸ್ತಕ, ಹಾಗೇ ಕಾರಿನಲ್ಲಿ ಒಂದು ಲಾಂಗ್ ಡ್ರೈವ್, ಕೇಳಲು ಒಳ್ಳೆಯ ಹಾಡುಗಳ ಸಂಗ್ರಹ, ಪ್ರಕೃತಿ ಕೈಬೀಸಿ ಕರೆದಾಗಲೆಲ್ಲ ಬೆಟ್ಟ ಗುಡ್ಡ ಹತ್ತುತ್ತಾ ಒಂದು ಚಾರಣ,ಮನೆಯ ಹಿತ್ತಿಲಲ್ಲಿ ನಮ್ಮದೇ ಬೆಂಡೆಕಾಯಿ ಯೋ, ಅಲಸಂಡೆಯದ್ದೋ ಒಂದು ಪುಟ್ಟ ಕೃಷಿ, ನಾವೇ ತವಾ ದಲ್ಲಿ ಮಾಡಿಕೊಳ್ಳುವ ಫಿಶ್ ಫ್ರೈ, ಗದ್ದೆಯ ಬದುವಲ್ಲಿ ಸಂಜೆಯ ವಾಕ್, ಕುಡಿಯಬೇಕು ಅಂತ ಅನ್ನಿಸಿದರೆ ಬೊಗಸೆ ತುಂಬುವ ಶುದ್ಧ ನದಿ ನೀರು, ಮೀನು ಹಿಡಿಯಲು ಹೋಗುವುದು, ಕೆರೆಯಲ್ಲಿ ಈಜಾಟ, ಹುಡುಕಿಕೊಂಡು ಹೋಗಿ ತಿನ್ನುವ ರುಚಿಯಾದ ತಿಂಡಿ ತಿನಿಸುಗಳು, ದೇವರ ಜಾತ್ರೆ, ತೇರು,ಅನ್ನಸಂತರ್ಪಣೆ, ಬಾಲ್ಯದ ಗೆಳೆಯರು,ಕಡಲಿನ ಮೌನ, ಮರಳಿನ ನುಣುಪು, ಅಪರೂಪಕ್ಕೆ ಒಮ್ಮೆ ನೊರೆಯೇಳುವ ಬಿಯರ್,ಅತೀ ಅಪರೂಪಕ್ಕೆ ಒಮ್ಮೆ ಶ್ವಾಸಕೋಶಗಳನ್ನು ಬೆಚ್ಚಗಿಡುವ ಒಂದು ಧಮ್, ಬಿಸಿ ಕಾಫಿ, ಹಾನೆಸ್ಟ್ ನಾಯಿ, ಹಳೆ ಹುಡುಗಿ ನೆನಪು,old ಪೋಟೋಗಳು,ಪ್ರತಿಯೊಂದರಲ್ಲಿಯೂ ಖುಷಿ...ಹೀಗೆ ಇನ್ನೂ ಹಲವು...

ಯಾವುದರ ನಿರೀಕ್ಷೆಯೂ ಇಲ್ಲ, ಯಾವುದೇ ಬೇಡಿಕೆಗಳಿಲ್ಲ.. ಹಾಗೇ ಬದುಕಿ ಬಿಡಿ ನಿಮ್ಮಿಷ್ಟದಂತೆ. ಲೈಫ್ ಅಲ್ಲಿ ಸೆಟಲ್ ಆಗುತ್ತಿರೋ ಇಲ್ಲವೋ ಗೊತ್ತಿಲ್ಲ, ಆದರೆ ಶುಭ್ರವಾದ ನೆಮ್ಮದಿಯೊಂದು ನಿಮ್ಮ ಮನೆಯ ಅಂಗಳದಲ್ಲಿ ಸದಾ  ಸುಳಿದಾಡುತ್ತಿರುತ್ತೆ.ಯಾರಿದ್ದರೂ, ಯಾರೂ ಇಲ್ಲದೇ ಇದ್ದರೂ..ಏನಿದ್ದರೂ, ಏನು ಇಲ್ಲದೇ ಇದ್ದರೂ... 😌🙏🏻

Ab Pacchu



Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ