ಹುಟ್ಟುತ್ತಲೇ ಅನಾಥ

 

ಮಾಬಲ ಹುಟ್ಟುತ್ತಲೇ ಅನಾಥ.ಆದರೆ ಬೆಳೆಯುತ್ತಾ ಬೆಳೆಯುತ್ತಾ ಅಲ್ಲ.


ಸಂಜೀವಣ್ಣ ಮತ್ತು ಅಂಬಕ್ಕ ದಂಪತಿಗೆ ಒಬ್ಬಳೇ ಮಗಳು ರೇವತಿ.ಗಂಡು ದಿಕ್ಕಿಲ್ಲದ ಮನೆ.ಮಾಬಲನನ್ನು ಬಹಳ  ಪ್ರೀತಿಯಿಂದ ಸ್ವಂತ ಮಗನಂತೆಯೇ ಚಿಕ್ಕಂದಿನಲ್ಲಿಯೇ ಸಾಕಿ ಬೆಳೆಸಿದವರು ಅವರಿಬ್ಬರು. 


ರೇವತಿಯೊಂದಿಗೆ ಶಾಲೆಗೆ ಕಳುಹಿಸಿ ಅವನನ್ನು ಕೂಡ ವಿದ್ಯಾವಂತನನ್ನಾಗಿ ಮಾಡುವ ಆಸೆ ಅವರಿಗೂ ಇತ್ತು.ಆದರೆ ಮಾಬಲನಿಗೆ ಸಂಜೀವಣ್ಣನ ತೊಟದ ಕೆಲಸ, ಹಟ್ಟಿಯ ಹಸು,ಸದಾ ತುಂಬಿ ಹರಿಯುವ ಫಲ್ಗುಣಿ ನದಿ,ತೇಲುವ ತೆಪ್ಪ..ಮರದ ಹುಟ್ಟು.. ಅಷ್ಟೇ ಇಷ್ಟವಾಗಿತ್ತು.


ಶಾಲೆಗೆ ಹೋಗದೆ ಸಂಜೀವಣ್ಣನ ತೋಟದ ಕೆಲಸ ಮಾಡಿಕೊಂಡು ಅದರಲ್ಲೇ ಸುಖ ಕಂಡುಕೊಂಡ ಮಾಬಲ.

ಕೆಲವೊಮ್ಮೆ ಅವನೇ ಆ ತೋಟದ ಕೆಲಸಗಾರ,ಇನ್ನು ಕೆಲವೊಮ್ಮೆ ಅವನೇ ಆ ತೋಟದ ಮಾಲಿಕನ ಮಗ.


ಬೆವರು ಸುರಿಯುವಂತೆ ತೋಟದಲ್ಲಿ ದುಡಿಯುವುದು,ಆ ನಂತರ ಸಂಜೆಯ ವೇಳೆ ತೋಟದ ಬದಿಯೇ ತಣ್ಣನೆ ಹರಿಯುವ ಫಲ್ಗುಣಿಯಲ್ಲಿ ಮನಸ್ಸೋಯಿಚ್ಛೆ ಮೀನಿನಂತೆ ಈಜಾಡುವುದು ಮಾಬಲನ ನಿತ್ಯದ ದಿನಚರಿಯಾಗಿತ್ತು.


ಸಂಜೀವಣ್ಣನ ಮನೆಯೇ ಅವನ ಮನೆ.ಮನೆಯ ಹೊರಗೆ ಅಂಗಳಕ್ಕೆ ತಾಗಿಕೊಂಡಿರುವ ಪುಟ್ಟ ಕೋಣೆಯೇ ಅವನ ರೂಮು.ಅಂಬಕ್ಕ ಹೆತ್ತ ತಾಯಿಯಲ್ಲದಿದ್ದರೂ ರುಚಿ ರುಚಿಯಾಗಿ ಬಿಸಿ ಬಿಸಿಯಾಗಿ ಮಾಡಿ ಪ್ರೀತಿಯಿಂದ ಮಾಬಲನಿಗೆ ಬಡಿಸುತ್ತಿದ್ದರು.ನೆತ್ತಿಗೆ ಎಣ್ಣೆ ಹಾಕಿ ತಿಕ್ಕಿ ತಿಕ್ಕಿ ಅವನಿಗೆ ಸ್ನಾನ ಕೂಡ ಮಾಡಿಸುತ್ತಿದ್ದರು ಅಂಬಕ್ಕ.ಅವನ ವಯಸ್ಸಿನವಳೇ ಆದ ರೇವತಿಯಂತು ಅವನಿಗೆ ಒಳ್ಳೆಯ ಗೆಳತಿಯೇ ಆಗಿದ್ದಳು. 


ಮಾಬಲನಿಗೆ ಸಂಬಳವಿರಲಿಲ್ಲ.ಸಂಜೀವಣ್ಣ ಒತ್ತಾಯ ಮಾಡಿ  ಕೊಟ್ಟರೂ ಎಂದೂ ಒಂದು ಬಿಡಿಗಾಸು ಮಾಬಲ ತಗೊಂಡವನಲ್ಲ.. " ಅನಾಥ ಆಗಿದ್ದ ನನ್ನ ಪಾಲಿನ ದೇವರುಗಳು ನೀವು, ತಂದೆ ತಾಯಿ ಇಲ್ಲದ ನನ್ನನ್ನು ಸ್ವಂತ ಮಗನಂತೆ ನೋಡಿಕೊಂಡಿದ್ದೀರಿ. ಈ  ಕೆಲಸಕ್ಕೆ ಎಲ್ಲ ನಿಮ್ಮ ಬಳಿ ಹಣ ತೆಗೆದುಕೊಂಡರೆ ಭಗವಂತ ನನ್ನನ್ನು ಮೆಚ್ಚುತ್ತಾನಾ..." ಎಂದು ನಯವಾಗಿ ಮುಗ್ಧವಾಗಿ ಹೇಳಿ ನಿರಾಕರಿಸಿ ಬಿಡುತ್ತಿದ್ದ ಮಾಬಲ.


ಅವನ ಆ ಮುಗ್ಧತೆ, ಆ ಪ್ರೀತಿ ವಿಶ್ವಾಸವೇ ಸಂಜೀವಣ್ಣ-ಅಂಬಕ್ಕ ದಂಪತಿಗೆ ಅವನು ಹೊಟ್ಟೆಯಲ್ಲಿ ಹುಟ್ಟಿದ ತಮ್ಮ ಮಗನೇ ಆಗಿ ಬಿಟ್ಟ.ಕೊನೆಗೆ ಅವನ ಹೆಸರಿನಲ್ಲಿ ಬ್ಯಾಂಕ್ ನಲ್ಲಿ ಖಾತೆಯೊಂದನ್ನು ತೆರೆದು ತಿಂಗಳಿಗೆ ಇಂತಿಷ್ಟು ಹಣವನ್ನು ಹಾಕಿ  ಅವನಿಗೆ ಮುಂದೆ ಯಾವುದಕ್ಕಾದರೂ ಉಪಯೋಗಕ್ಕೆ ಬರಲಿ ಎಂದು ಸಂಜೀವಣ್ಣನೇ  ಉಳಿತಾಯ ಮಾಡುತ್ತಾ ಬಂದರು. 


ಫಲ್ಗುಣಿಯ ಚಿಕ್ಕ ತೆಪ್ಪವನ್ನು ಕೂಡ ಸಮಯ ಸಿಕ್ಕಿದಾಗಲೆಲ್ಲ ಮಾಬಲನೇ ಓಡಿಸುತ್ತಿದ್ದ.ಈ ಹಳ್ಳಿಯಿಂದ ಆ ಹಳ್ಳಿಗೆ ಹೋಗಬೇಕಾದರೆ,ಫಲ್ಗುಣಿ ನದಿ ದಾಟಲೇ ಬೇಕು.ಯಾವುದೇ ಸೇತುವೆ ಇರದ ಕಾರಣ ಸಂಜೀವಣ್ಣನ ತೆಪ್ಪವೇ ಊರಿನವರಿಗೆ ನದಿ ದಾಟಲು ಆಧಾರವಾಗಿತ್ತು.


ಕೆಲವೊಮ್ಮೆ ಹೊಳೆ ದಾಟ ಬೇಕಾದವರೇ ತೆಪ್ಪದಲ್ಲಿ ಹೊಳೆ ದಾಟಿ ಹೋಗುವ ಮೊದಲು  ಸಂಜೀವಣ್ಣನಿಗೆ  ಇಂತಿಷ್ಟು ಹಣ ಅಂತ ಕೊಟ್ಟು ತಾವೇ ತೆಪ್ಪದಲ್ಲಿ ಹೊಳೆ ದಾಟಿ ಹೋಗುತ್ತಿದ್ದರು. ಇನ್ನು ಕೆಲವೊಮ್ಮೆ ಆ ಬದಿಯಿಂದ ಬರುವವರು ಹೊಳೆ ದಾಟಿ ಈ ಬದಿಗೆ ಬಂದ ಮೇಲೆ ಸಂಜೀವಣ್ಣನಿಗೆ ಹಣ ಕೊಟ್ಟು ಹೋಗುತ್ತಿದ್ದರು.


ಸಂಜೀವಣ್ಣ ಎಂದೂ ಇದಕ್ಕಾಗಿ ಯಾರಿಂದಲೂ ಹಣ ಕೇಳಿದವರೇ ಅಲ್ಲ. ಆದರೆ ಜನರೇ ಪ್ರೀತಿ ವಿಶ್ವಾಸದಿಂದ ಅವರಿಗೆ ಹಣ ಕೊಟ್ಟು ಹೋಗುತ್ತಿದ್ದರು.ಕೆಲವೊಮ್ಮೆ ಯಾರಿಗಾದರೂ ವೃದ್ಧರಿಗೆ ಇಲ್ಲ ಚಿಕ್ಕ ಮಕ್ಕಳಿಗೆ ಹೊಳೆ ದಾಟಲು ಕಷ್ಟ ಆದಾಗ ಮಾಬಲನೇ ಹುಟ್ಟು ಹಾಕುತ್ತಾ ಈ ಬದಿಯವರನ್ನು ಆ ಬದಿಗೆ,ಆ ಬದಿಯವರನ್ನು ಈ ಬದಿಗೆ ಕರೆದುಕೊಂಡು ಬರುತ್ತಿದ್ದ.


ಮಳೆಗಾಲದಲ್ಲಿ ಫಲ್ಗುಣಿ ಸೊಕ್ಕಿನಿಂದ ಹರಿಯುತ್ತಿದ್ದಳು.ಮೇಲಿನ ಮಲೆ ಹಾಗೂ ಘಟ್ಟ ಪ್ರದೇಶದಲ್ಲಿ ಸ್ವಲ್ಪ ಮಳೆ ಬಂದರೂ ಸಾಕು  ಇಲ್ಲಿ ಒಮ್ಮೆಯೇ ನೀರಿನ ಹರಿವು ಹೆಚ್ಚಾಗುತ್ತಿತ್ತು.ಅದರ ಸುಳಿವೇ ಸಿಗುತ್ತಿರಲಿಲ್ಲ. ಕೆಲವೊಮ್ಮೆ ತೆಪ್ಪವೇ ಅಡಿಮೇಲು ಆದದ್ದೂ ಇದೆ. ಆದರೆ ಮಾಬಲನಿಗೆ ಫಲ್ಗುಣಿಯ ನಾಡಿಬಡಿತ ಎಲ್ಲವೂ ಸರಿಯಾಗಿಯೇ ಗೊತ್ತಿದೆ.ತುಂಬಾ ಜಾಗರೂಕತೆಯಿಂದ ನದಿಯ ಹರಿವು ನೋಡಿಕೊಂಡು ಜನರನ್ನು ಆಚೀಚೆ ನದಿ ದಾಟಿಸುತ್ತಾನೆ ಅವನು.ಹಾಗಾಗಿ ಜನರು ಕೂಡ ಮಾಬಲ ಫಲ್ಗುಣಿಯ ದಂಡೆಯಲ್ಲಿ ಇರುವಾಗಲೇ ಧೈರ್ಯವಾಗಿ ತೆಪ್ಪ ಏರುತ್ತಾರೆ.


ಆ ದಿನವು ಕೂಡ ಜೋರು ಮಳೆ,ಸಂಜೀವಣ್ಣ ದಂಪತಿಗೆ ಬೆಳಿಗ್ಗೆಯೇ ಪಕ್ಕದ ಊರಿಗೆ ತುರ್ತಾಗಿ ಹೋಗಬೇಕಾಗಿತ್ತು. ಸಂಬಂಧಿಕರು ಯಾರೋ ಅನಾರೋಗ್ಯ ಬಿದ್ದಿದ್ದರು. ಹಾಗಾಗಿ ಗಂಡ ಹೆಂಡತಿ ಮಗಳು ಮೂರೂ ಜನ ಒಟ್ಟಿಗೆ ಹೊರಟಿದ್ದರು.

ಮಾಬಲನೇ ಅವರನ್ನು ತೆಪ್ಪದಲ್ಲಿ ಕುಳ್ಳಿರಿಸಿ ನದಿ ದಾಟಿಸಿದ. 


ಸಂಜೆಯ ವೇಳೆಗೆ ವಾಪಸ್ ಬರುತ್ತೇವೆ, ತೋಟ ಮನೆ ಎಲ್ಲಾ ಜಾಗ್ರತೆ ಮಾಬಲ.. ಅಡುಗೆ ಮಾಡಿ ಇಟ್ಟಿದ್ದೆನೆ, ಬಡಿಸಿಕೊಂಡು ಊಟ ಮಾಡು,ಮತ್ತು ಸಂಜೆಯ ಹೊತ್ತಿಗೆ ತೆಪ್ಪದ ಬಳಿಗೆ ತಪ್ಪದೇ ಬಾ..ನದಿ ದಾಟಲು ನೀನು ಇದ್ದರೆನೇ  ಧೈರ್ಯ ಮಾಬಲ.. ಎಂದು ಹೇಳಿದ ಅಂಬಕ್ಕ ಪಕ್ಕದ ಊರಿಗೆ ತಮ್ಮ ಗಂಡ ಹಾಗೂ  ಮಗಳೊಂದಿಗೆ  ಹೋಗಿಯೇ ಬಿಟ್ಟರು. 


ಮಾಬಲ ದಿನ ಪೂರ್ತಿ ತೋಟದ ಕೆಲಸ ನೋಡಿಕೊಂಡ, ಮಧ್ಯಾಹ್ನ ಅಂಬಕ್ಕ ಮಾಡಿ ಇಟ್ಟಿದ್ದ ಅಡುಗೆಯನ್ನು ಬಿಸಿ ಮಾಡಿಕೊಂಡು ಊಟ ಸಹ ಮಾಡಿದ. ಸಂಜೆಯ ವೇಳೆಗೆ ಹಸುಗಳನ್ನೆಲ್ಲಾ ಹಟ್ಟಿಯಲ್ಲಿ ಕಟ್ಟಿ ಹಾಕಿ..ಆ ನಂತರ  ಸಂಜೀವಣ್ಣ ದಂಪತಿಗಳಿಗಾಗಿ ಕಾಯುತ್ತಾ ತೆಪ್ಪದೊಂದಿಗೆ ನದಿ ಪಕ್ಕವೇ ನಿಂತುಕೊಂಡ.. 


ಸುಮಾರು ಆರು ಗಂಟೆಯ ಸುಮಾರಿಗೆ ಸಂಜೀವಣ್ಣ- ಅಂಬಕ್ಕ ದಂಪತಿಗಳು ನದಿಯ ಆ ಬದಿಯ ದಂಡೆಗೆ ಬಂದರು. 


ಈ ಬದಿ ಇದ್ದ ಮಾಬಲ ತನ್ನ ತೆಪ್ಪಕ್ಕೆ ಹುಟ್ಟು ಹಾಕುತ್ತಾ ಅವರಿದ್ದ ಬದಿಗೆ ಹೋದ. 


ಎಲ್ಲರನ್ನೂ ತೆಪ್ಪದಲ್ಲಿ ಕುಳ್ಳಿರಿಸಿ ಮತ್ತೆ ಈ ಬದಿಗೆ ಬರಲು ಹುಟ್ಟು ಹಾಕತೊಡಗಿದ. 


ಆಗಲೇ ಒಮ್ಮೆಯೇ ನದಿಯ ಹರಿವು ಹೆಚ್ಚಾಗಿದ್ದು...!! 


ನದಿಯಲ್ಲಿ ಬಂದ ಜೋರಾದ ಪ್ರವಾಹದ ರಭಸಕ್ಕೆ ಅವರಿದ್ದ  ತೆಪ್ಪವೇ ಅಡಿಮೇಲಾಗಿ ಬಿಟ್ಟಿತ್ತು...!! 


ಮಾಬಲ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನದಿಯ ಒಂದು ಬದಿಯಲ್ಲಿ ಹೇಗೋ ಮರದ ಬೇರೊಂದನ್ನು  ಕಷ್ಟ ಪಟ್ಟು ಗಟ್ಟಿಯಾಗಿ ಒಂದೇ  ಕೈಯಲ್ಲಿ ಹಿಡಿದುಕೊಂಡ..!


ಸಂಜೀವಣ್ಣನವರು ಕೂಡಲೇ ತೆಪ್ಪವನ್ನು ಹಿಡಿದುಕೊಂಡು ಅದರಲ್ಲಿದ್ದ ಹಗ್ಗದ ಸಹಾಯದಿಂದ ಅಲ್ಲೇ ಪಕ್ಕದಲ್ಲಿದ್ದ  ಇದ್ದ ಮರದ ಗೆಲ್ಲಿಗೆ ಆ ತೆಪ್ಪವನ್ನು ಕಟ್ಟಿ,ಆ ನಂತರ  ನೀರಿನಲ್ಲಿ ಮುಳುಗುತ್ತಿದ್ದ ಅಂಬಕ್ಕ ಹಾಗೂ ರೇವತಿಯನ್ನು ಸುರಕ್ಷಿತವಾಗಿ ತೆಪ್ಪದಲ್ಲಿ ಕುಳ್ಳಿರಿಸಿದರು.


ಆ ನಂತರ ಮಾಬಲನಿಗಾಗಿ ಸಂಜೀವಣ್ಣ ಹುಡುಕಾಡಿದರು. ದೂರದಲ್ಲಿ ಮರದ ಬೇರೊಂದನ್ನು ಒಂದು ಕೈಯಲ್ಲಿ ಹಿಡಿದುಕೊಂಡು ಕಷ್ಟ ಪಡುತ್ತಿರುವ ಮಾಬಲನ ಕಡೆಗೆ ನದಿಯ ಬದಿಯಲ್ಲಿಯೇ ಸಿಕ್ಕಿದ್ದನ್ನು ಹಿಡಿದುಕೊಂಡು ಸಾಗಿದರು ಸಂಜೀವಣ್ಣ.


ಕೊನೆಗೂ ಮಾಬಲ ಸಂಜೀವಣ್ಣನ ಕೈ ಹಿಡಿದು,ನಂತರ ತನ್ನ ಎರಡೂ ಕೈಗಳಿಂದ ಆ ಮರದ ಬೇರನ್ನು ಗಟ್ಟಿಯಾಗಿ ಹಿಡಿದುಕೊಂಡು,ಆ ನಂತರ ನಿಧಾನವಾಗಿ ನದಿಯ ಬದಿಯಲ್ಲಿಯೇ ಇದ್ದ ಒಂದೊಂದೇ ಇತರ ಮರಗಳ ಬೇರು ಹಾಗೂ ಗೆಲ್ಲುಗಳನ್ನು ಹಿಡಿದುಕೊಂಡೇ ಸಂಜೀವಣ್ಣನೊಡನೆ ತೆಪ್ಪದತ್ತ ಸಾಗಿದನು.


ತೆಪ್ಪದ ಬಳಿ ತಲುಪಿದ ಮಾಬಲ ಸಂಜೀವಣ್ಣನಿಗೆ ಮೊದಲು  ತೆಪ್ಪದಲ್ಲಿ ಕೂರಲು ಹೇಳಿದರೂ,ಸಂಜೀವಣ್ಣನೇ ಮಾಬಲನನ್ನು ತೆಪ್ಪದಲ್ಲಿ ಕೂರಲು ಹೇಳಿ,ಅವನು ತೆಪ್ಪದಲ್ಲಿ ಕುಳಿತುಕೊಂಡ  ನಂತರವೇ ತಾವು ಮಾಬಲನ ಕೈ ಹಿಡಿದು ತೆಪ್ಪ ಏರಲು ಶುರು ಮಾಡಿದರು..


ಅಷ್ಟೇ..!


ಸಂಜೀವಣ್ಣ ತೆಪ್ಪ ಏರುವುದರೊಳಗೆಯೇ  ನದಿಯಲ್ಲಿ ಮತ್ತೊಂದು ದೊಡ್ಡ ಪ್ರವಾಹ ಬಂದು... ತೆಪ್ಪ ಇನ್ನೊಮ್ಮೆ ಅಡಿಮೇಲಾಗಿ ಬಿಟ್ಟಿತು!!


ಎಷ್ಟೋ ಹೊತ್ತು ನೀರಿನಡಿಯಲ್ಲಿಯೇ ಇದ್ದ ಮಾಬಲ ಈ ಬಾರಿ ಗಟ್ಟಿಯಾಗಿ ತೆಪ್ಪವನ್ನು ಹಿಡಿದುಕೊಂಡಿದ್ದ..ಅದನ್ನು ಕೈ ಬಿಟ್ಟಿರಲೇ ಇಲ್ಲ.


ತೆಪ್ಪವನ್ನು ಸಂಜೀವಣ್ಣ ಈ ಮೊದಲೇ ಮರದ ಗೆಲ್ಲಿಗೆ ಗಟ್ಟಿಯಾಗಿ ಕಟ್ಟಿ ಹಾಕಿದುದರಿಂದ ಅದು ಉಲ್ಟಾ ಪಲ್ಟಾ ಆಗಿದ್ದರೂ ಸಹ  ಅಲ್ಲೆಯೇ ಇತ್ತು..


ಕೊನೆಗೂ ಹೇಗೋ ಕಷ್ಟಪಟ್ಟು  ತೆಪ್ಪವನ್ನು ಸರಿಮಾಡಿಕೊಂಡು ತೆಪ್ಪದ ಮೇಲೆ ಹತ್ತಿ ಕುಳಿತ  ಮಾಬಲ..!


ಮಾಬಲ ನೋಡುತ್ತಾನೆ...


ತೆಪ್ಪದಲ್ಲಿ ಆಗಲಿ,ನದಿಯ ಯಾವ ಮೂಲೆಯಲ್ಲಾಗಲಿ ....


ಸಂಜೀವಣ್ಣನದ್ದಾಗಲಿ, ಅಂಬಕ್ಕನದ್ದಾಗಲಿ,ರೇವತಿಯ ಸುಳಿವೇ ಇಲ್ಲ..!!! 


ಮಾಬಲ ಸಂಜೀವಣ್ಣನ ಹಾಗೂ ಅಂಬಕ್ಕನ ಹೆಸರು ಹಿಡಿದು ಕೂಗಿ ಕೂಗಿ ಕರೆದ.... 


ಆದರೆ ಫಲ್ಗುಣಿಯ ಅಬ್ಬರದ ಪ್ರವಾಹದ ಸದ್ದಿನ ವಿನಹ ಅಲ್ಲಿ ಬೇರೆ ಯಾರದ್ದೂ ಸಣ್ಣ ಒಂದು ಕೂಗು ಕೂಡ ಅವನ ಕಿವಿಗೆ ಬೀಳಲೇ ಇಲ್ಲ..!! 


ಸಂಜೆ ಕಳೆದು ರಾತ್ರಿ ಆಯಿತು.. 


ಮಾಬಲ ಮರಕ್ಕೆ ಕಟ್ಟಿ ಹಾಕಿದ ತೆಪ್ಪದಲ್ಲಿಯೇ ನಿಂತುಕೊಂಡು ಫಲ್ಗುಣಿಯನ್ನೇ ಹಾಗೇ ನಿರ್ಲಿಪ್ತತನಾಗಿ ದಿಟ್ಟಿಸಿ ನೋಡುತ್ತಿದ್ದ..!! 


ಮಾಬಲ ಹುಟ್ಟುತ್ತಲೇ ಅನಾಥನಾಗಿದ್ದ ನಿಜ.ಆದರೆ ಬೆಳೆಯುತ್ತಾ ಬೆಳೆಯುತ್ತಾ ಅವನು ಅನಾಥನಾಗಿರಲಿಲ್ಲ..


ಆದರೆ ಇಂದು ಹುಟ್ಟವಾಗ ಎಷ್ಟೊಂದು ಅನಾಥನಾಗಿದ್ದನೋ.. ಮತ್ತೇ ಅಷ್ಟೇ ಅನಾಥನಾಗಿಬಿಟ್ಟ ಮಾಬಲ!! 


ಆ ಕಡುಗತ್ತಲಿನ ರಾತ್ರಿಯಲ್ಲಿ ಕೊನೆಗೂ ಫಲ್ಗುಣಿ ಶಾಂತವಾದಳು.. ನಿಧಾನಕ್ಕೆ ಹರಿದಳು. 


ಆದರೆ ತೆಪ್ಪದಲ್ಲಿ ನಿಂತಿದ್ದ ಮಾಬಲ ಮಾತ್ರ ಬಿಕ್ಕಿ ಬಿಕ್ಕಿ ಅಳುತ್ತಲೇ ಇದ್ದ! 


ಅವನ ಕಣ್ಣೀರಿಗೆ ಫಲ್ಗುಣಿಯ ಪ್ರವಾಹ ಮತ್ತಷ್ಟು ಹೆಚ್ಚಾಯಿತು!!!


ಮರಕ್ಕೆ ಕಟ್ಟಿದ್ದ ತೆಪ್ಪದ  ಹಗ್ಗವನ್ನು ಮಾಬಲ ಬಿಚ್ಚಿ ಬಿಟ್ಟ!!!


.....................................................................................


#ಇಷ್ಟೇ.. 


ab pacchu 

moodubidire

(photo-internet)

Comments

Popular posts from this blog

ಗಗನದ ಸೂರ್ಯ

The Priest.!

ನವಿಲು ಕೊಂದ ಹುಡುಗ | ಸಚಿನ್ ತೀರ್ಥಹಳ್ಳಿ