ಫಲ್ಗುಣಿ ಎಂಬ ಮಾತೆ

                      

ಫಲ್ಗುಣಿಗೇನು.. ಅವಳು ದಿನ ನಿತ್ಯ ಊರ ಅಂಚಲ್ಲಿ ತಣ್ಣಗೆ ಅವಳಷ್ಟಕ್ಕೆ ಹರಿಯುತ್ತಾಳೆ.


ಅವಳ ಭೇಟಿಗೆ  ಮನಸ್ಸು ನಾವು ಮಾಡಬೇಕು ಅಷ್ಟೇ.ಅವಳ ಭೇಟಿಗೆ ಹೊರಡುವುದೆಂದರೆ ಅದೊಂದು ಪ್ರೀಯತಮೆಯ ನೋಡುವ ಆತುರ ಖಂಡಿತವಾಗಿಯೂ ಅಲ್ಲ,ಅವಳ ಪ್ರತೀ ಭೇಟಿಯು,ಅವಳೊಡಲೊಳಗೆ ಇಳಿದು ಮಾಡುವ ಪ್ರತೀ ಜಳಕವೂ ಮಕ್ಕಳು ಮತ್ತು ಮಾತೆಯ ಆಲಿಂಗನಕ್ಕೆ ಸಮಾನ.


ಪಡುವಣಗಡಲಿನ ಅರಬ್ಬಿಯ ಉಪ್ಪು ನೀರೀನ ಸ್ನಾನ  ಆವಾಗವಾಗ ಇದ್ದದ್ದೇ.ಅದರ ಅಲೆಗಳಲ್ಲಿ ಭೋರ್ಗರೆತದ ಮೊರೆತವೇ ಹೆಚ್ಚು.ಅದೂ ಬೇರೆ ತರಹದ ಸುಖ.


ಆದರೆ ಫಲ್ಗುಣಿ ಆಗಲ್ಲ,ಅವಳಲ್ಲಿ ಸದಾ ಜುಳು ಜುಳು ನಿನಾದ ಅಷ್ಟೇ. ಅದರಲ್ಲೂ ಬೇರೆ ಕಡೆ ಸರಳರೇಖೆಯಲ್ಲಿ ಇಲ್ಲವೇ ತುಸು ವಕ್ರವಾಗಿ ಹರಿಯುವ ಫಲ್ಗುಣಿ "ಹನ್ನೆರಡು ಕವಲಿನ" ಕಲ್ಲಿನ ಕೊರಕಲಿನಲ್ಲಿ ಹನ್ನೆರಡು ಕವಲುಗಳಾಗಿ ಒಡೆದು,ನಿಧಾನವಾಗಿ ಹರಿದು ಹೋಗುವ ಮೊದಲು ಅವಳು ಅಲ್ಲೊಂದು ದಿನ ನಿತ್ಯವೂ ನಡೆಸಿ ಕೊಡುವ ಸಂಗೀತ ಕಛೇರಿ ನಿಜವಾಗಿಯೂ ಮಧುರವಾದದ್ದೇ. ಆಹಾ.. ಕೇಳಲು ಅದೆಷ್ಟು ಹಿತ.ಆದರೆ ಅವಳ ಸಂಗೀತ ಗೋಷ್ಠಿ ಆಲಿಸಲು ಜನರು ಅಲ್ಲಿಗೆ ತಂಡೋಪ ತಂಡವಾಗಿ ಹೋಗುವುದು ಮಾತ್ರ ಈ ಎಳ್ಳಮವಾಸ್ಯೆ ದಿನವೇ.ಅಕ್ಕ ನೇತ್ರಾವತಿಗಿಂತ ಕಿರಿಯವಳು ಅಂತ ಅನಿಸಿದರೂ ನಮ್ಮ ಜಿಲ್ಲೆಯವರ ಪಾಲಿಗೆ ಫಲ್ಗುಣಿ ಕೂಡ ಎಂದಿಗೂ ಜೀವನದಿಯೇ ಮತ್ತು ನನ್ನಂತವರ ಪಾಲಿಗೆ ಆಕೆ  ಬಾಲ್ಯದಿಂದ ಒಡನಾಡಿ,ಮಾತೆ ಎಲ್ಲವೂ. 


ಎಳ್ಳಮವಾಸ್ಯೆಗೆ ಕಡಲಿನಲ್ಲಿ ಮಿಂದೇಳುವುದೇ ಶ್ರೇಷ್ಠ, ಅದೇ ರೀತಿ ನಮ್ಮಲ್ಲಿ ಅಲ್ಲಲ್ಲಿ ಇರುವ ಪುಷ್ಕರಣಿ ಹಾಗೂ ನದಿಗಳ ಸಿಹಿ ನೀರಿನ ತೀರ್ಥಸ್ಥಾನವೂ ಕೂಡ ಅಷ್ಟೇ ಶ್ರೇಷ್ಠವಾದದ್ದು.ನನಗಂತು ಎಳ್ಳಮವಾಸ್ಯೆಗೆ ಅರಬ್ಬಿಗಿಂತಲೂ ಫಲ್ಗುಣಿಯೇ ಇಷ್ಟ.


ಮನೆ ಪಕ್ಕದಲ್ಲಿಯೇ ಅವಳು ಹರಿದರೂ ಈ ದಿನ ಹನ್ನೆರಡು ಕವಲಿನಲ್ಲಿರು ಪಂಚಲಿಂಗೇಶ್ವರ ಸನ್ನಿಧಾನಕ್ಕೆಯೇ ಹೋಗಿ ಅವಳ ತಣ್ಣನೆಯ ನೀರಲ್ಲಿ ಕಾಲು ಅದ್ದಿ, ಮನಸ್ಸೋಯಿಚ್ಛೆ ಈಜಾಡಿ ಕೈಯಲ್ಲಿರುವ ಮೆಡಿಮಿಕ್ಸ್ ಸೋಪು ಅರ್ಧ ಖಾಲಿ ಮಾಡಿ,ಅವಳ ನಡುವಲ್ಲಿರುವ ಈಶ್ವರನಿಗೆ ಭಕ್ತಿಯಿಂದ ಕೈ ಮುಗಿದರೆನೇ ಅದೆನೋ ಒಂದು ನೆಮ್ಮದಿ.. ಆಸ್ತಿಕರ ಸುಖಗಳು ಇಂತವೇ.


ಹನ್ನೆರಡು ಕವಲಿನ ಫಲ್ಗುಣಿ ನದಿಯಲ್ಲಿ ನನ್ನದೊಂದು ಎಳ್ಳಮವಾಸ್ಯೆಯ ತೀರ್ಥ ಸ್ಥಾನ ಈ ಬಾರಿಯೂ ಎಂದಿನಂತೆ  ಸಂಪನ್ನವಾಯಿತು😊🙏🏻


.....................................................................................


#ಏನೋ_ಒಂದು


ab pacchu

moodubidire

(ಪಚ್ಚುಪಟಗಳು)

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ